“ಅಲ್ಪ”ನಿಂದ “ಬಲವಾದ ಜನಾಂಗ” ಆಗುವುದನ್ನು ನಾನು ಕಂಡೆ
ವಿಲ್ಯಮ್ ಡಿಂಗ್ಮನ್ ಹೇಳಿರುವಂತೆ
ವರುಷ 1936; ಸ್ಥಳ, ಸೇಲಮ್, ಆರೆಗನ್, ಅಮೆರಿಕ. ನಾನು ಯೆಹೋವನ ಸಾಕ್ಷಿಗಳ ಕೂಟವೊಂದರಲ್ಲಿ ಹಾಜರಿದ್ದೆ. ‘ಮಹಾ ಸಮುದಾಯವು ಎಲ್ಲಿದೆ?’ ಎಂಬ ಪ್ರಶ್ನೆಯನ್ನು ಕೇಳಲಾಯಿತು. (ಪ್ರಕಟನೆ 7:9, ಕಿಂಗ್ ಜೇಮ್ಸ್ ವರ್ಷನ್) ಸಭೆಯಲ್ಲಿ ಹೊಸಬನು ನಾನೊಬ್ಬನೇ ಆಗಿದ್ದುದರಿಂದ, ಅವರೆಲ್ಲರೂ ನನ್ನನ್ನು ತೋರಿಸಿ ಹೇಳಿದ್ದು, “ಇಗೋ, ಅಲ್ಲಿ!”
ಮಧ್ಯ 1930ಗಳಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಪ್ರಮೋದವನ ಭೂಮಿಯ ಮೇಲೆ ನಿತ್ಯವಾಗಿ ಜೀವಿಸುವ ಬೈಬಲ್ ನಿರೀಕ್ಷೆಯಿದ್ದವರು ಸಾಪೇಕ್ಷವಾಗಿ ಕೆಲವರೇ ಆಗಿದ್ದರು. (ಕೀರ್ತನೆ 37:29; ಲೂಕ 23:43) ಅಂದಿನಿಂದ ವಿಷಯಗಳು ಮನಮುಟ್ಟುವ ರೀತಿಯಲ್ಲಿ ವಿಪರೀತ ಬದಲಾಗಿವೆ. ಆದರೆ ಮೊದಲಾಗಿ, ಆ ಆರೆಗನ್ನ ಸೇಲಮ್ನ ಕೂಟದಲ್ಲಿ ನಾನು ಹಾಜರಾಗುವಂತೆ ಮಾಡಿದ ಸಂಭವಗಳನ್ನು ನಾನು ಹೇಳುತ್ತೇನೆ.
ನನ್ನ ತಂದೆಯವರು ಎಚ್ಚರ! ಪತ್ರಿಕೆಯ ಆದಿ ಹೆಸರಾದ ದ ಗೋಲ್ಡನ್ ಏಜ್ ಪತ್ರಿಕೆಗೆ ಚಂದಾದಾರರಾಗಿದ್ದರು. ನಾನು ಹದಿಪ್ರಾಯದವನಾಗಿದ್ದಾಗ ಅದನ್ನು ಓದಿ ಆನಂದಿಸುತ್ತಿದ್ದೆ, ಮತ್ತು ಅದರಲ್ಲಿ ಮಹತ್ವದ ಬೈಬಲ್ ಸತ್ಯವಿದೆಯೆಂಬುದನ್ನು ನಾನು ಮನಗಂಡೆ. ಆದುದರಿಂದ ಒಂದು ದಿನ, ಗೋಲ್ಡನ್ ಏಜ್ನ ಹಿಂಬದಿಯಲ್ಲಿ ಕಂಡುಬಂದ ಒಂದು ಕೂಪನನ್ನು ತುಂಬಿಸಿ ಕಳುಹಿಸಿದೆ. ಅದು ಓದುಗನಿಗೆ, 20 ಪುಸ್ತಿಕೆಗಳು, ಒಂದು ಪುಸ್ತಕ ಮತ್ತು ಯೆಹೋವನ ಸಾಕ್ಷಿಗಳ ಅತಿ ಹತ್ತಿರದ ಸಭೆಯ ವಿಳಾಸವನ್ನು ನೀಡಿತು. ಆ ಸಾಹಿತ್ಯವನ್ನು ಪಡೆದುಕೊಂಡಾಗ, ನಾನು ಮನೆಯಿಂದ ಮನೆಗೆ ಹೋಗಿ ಎಲ್ಲ ಪುಸ್ತಿಕೆಗಳನ್ನೂ ಪುಸ್ತಕವನ್ನೂ ಹಂಚಿದೆ.
ಆ ಸಮಯದಲ್ಲಿ ನನ್ನೊಂದಿಗೆ ಯಾರೂ ಬೈಬಲನ್ನು ಅಭ್ಯಸಿಸಿರಲಿಲ್ಲ. ವಾಸ್ತವವೇನಂದರೆ, ನಾನು ಯೆಹೋವನ ಸಾಕ್ಷಿಗಳಲ್ಲಿ ಯಾರೊಡನೆಯೂ ಮಾತಾಡಿರಲಿಲ್ಲ. ಆದರೆ ಈಗ, ಅತಿ ಹತ್ತಿರದ ರಾಜ್ಯ ಸಭಾಗೃಹದ ವಿಳಾಸವು ಕೈಯಲ್ಲಿದ್ದುದರಿಂದ, ನಾನು ಕೂಟಕ್ಕೆ ಹಾಜರಾಗಲು ಆರೆಗನ್ನ ಸೇಲಮ್ಗೆ ವಾಹನ ನಡೆಸಿಕೊಂಡು 40 ಕಿಲೊಮೀಟರ್ಗಳಷ್ಟು ದೂರ ಹೋದೆ. ನಾನಿನ್ನೂ 18 ವರ್ಷ ಪ್ರಾಯದವನಾಗಿದ್ದಾಗ, ನನ್ನನ್ನು ಪ್ರತ್ಯೇಕವಾಗಿ “ಮಹಾ ಸಮುದಾಯ”ವೆಂದು ಕರೆಯಲಾದದ್ದು ಅಲ್ಲಿಯೇ.
ಶುಶ್ರೂಷೆಗಾಗಿ ನನಗೆ ಕಾರ್ಯತಃ ಯಾವುದೇ ತಯಾರಿ ಇಲ್ಲದಿದ್ದರೂ, ನಾನು ಸೇಲಮ್ ಸಭೆಯೊಂದಿಗೆ ಸಾರತೊಡಗಿದೆ. ನನ್ನ ಸಾಕ್ಷಿಕಾರ್ಯದಲ್ಲಿ ಮೂರು ಮೂಲಭೂತ ವಿಷಯಗಳನ್ನು ಸೇರಿಸುವಂತೆ ನಾನು ಪ್ರೋತ್ಸಾಹಿಸಲ್ಪಟ್ಟೆ. ಒಂದನೆಯದಾಗಿ, ಯೆಹೋವನು ದೇವರೆಂಬುದನ್ನು; ಎರಡನೆಯದಾಗಿ, ಯೇಸು ಕ್ರಿಸ್ತನು ಆತನ ನೇಮಿತ ರಾಜನೆಂಬುದನ್ನು; ಮತ್ತು ಮೂರನೆಯದಾಗಿ, ರಾಜ್ಯವು ಲೋಕಕ್ಕಿರುವ ಏಕಮಾತ್ರ ನಿರೀಕ್ಷೆಯೆಂಬುದನ್ನು. ಆ ಸಂದೇಶವನ್ನು ನಾನು ಪ್ರತಿಯೊಂದು ಬಾಗಿಲಲ್ಲಿ ಹಂಚಿಕೊಳ್ಳಲು ಪ್ರಯತ್ನಿಸಿದೆ.
ಯೆಹೋವನ ಸಾಕ್ಷಿಗಳೊಂದಿಗೆ ಸೇಲಮ್ನಲ್ಲಿ ಎರಡು ವರ್ಷಕಾಲ ಜೊತೆಗೊಂಡ ಬಳಿಕ, 1938ರ ಎಪ್ರಿಲ್ 3ರಂದು ನಾನು ದೀಕ್ಷಾಸ್ನಾನಹೊಂದಿದೆ. “ಮಹಾ ಸಮುದಾಯ”ವಾದ ನಮ್ಮಲ್ಲಿ ಅನೇಕರು ದೀಕ್ಷಾಸ್ನಾನಹೊಂದುವುದನ್ನು ನೋಡಿ, ಸೇಲಮ್ನಲ್ಲಿದ್ದ ಸ್ನೇಹಿತರು ಸಂತೋಷಪಟ್ಟರು. ಫೆಬ್ರವರಿ 1939ರಲ್ಲಿ ನಾನು ಪಯನೀಯರ್ ಅಥವಾ ಪೂರ್ಣ ಸಮಯದ ಶುಶ್ರೂಷಕನಾದೆ. ಆ ವರ್ಷದ ಡಿಸೆಂಬರ್ ತಿಂಗಳಿನಲ್ಲಿ, ಆ್ಯರಿಸೋನಕ್ಕೆ ಸ್ಥಳಾಂತರಿಸುವ ಆಮಂತ್ರಣಕ್ಕೆ ನಾನು ಒಪ್ಪಿಕೊಂಡೆ. ಅಲ್ಲಿ ರಾಜ್ಯ ಘೋಷಕರ ಹೆಚ್ಚಿನ ಆವಶ್ಯಕತೆಯಿತ್ತು.
ಆ್ಯರಿಸೋನದಲ್ಲಿ ಪಯನೀಯರ್ ಸೇವೆ
ಯೆಹೋವನ ಸಾಕ್ಷಿಗಳ ಕಾರ್ಯವು ಆ್ಯರಿಸೋನದಲ್ಲಿ ಹೊಸದಾಗಿತ್ತು ಮತ್ತು ಅಲ್ಲಿ ನಮ್ಮ ಕುರಿತು ಅನೇಕ ದುರಭಿಪ್ರಾಯಗಳಿದ್ದವು. ಆದಕಾರಣ, ಅಮೆರಿಕ IIನೆಯ ಲೋಕ ಯುದ್ಧವನ್ನು ಪ್ರವೇಶಿಸಿದಾಗ, ನಾವು ತುಂಬ ಹಿಂಸೆಯನ್ನು ಅನುಭವಿಸಿದೆವು. ಉದಾಹರಣೆಗೆ, 1942ರಲ್ಲಿ ನಾನು ಆ್ಯರಿಸೋನದ ಸ್ಟಾಫರ್ಡ್ನಲ್ಲಿ ಸೇವೆಮಾಡುತ್ತಿದ್ದಾಗ, ಮಾರ್ಮನರ ಒಂದು ಗುಂಪು ನಮ್ಮ ಮೇಲೆ ದೊಂಬಿ ಗಲಭೆಯನ್ನುಂಟುಮಾಡಲಿಕ್ಕಿದೆ ಎಂಬ ಸುದ್ದಿಯಿತ್ತು. ನನ್ನ ಪಯನೀಯರ್ ಜೊತೆಗಾರರೂ ನಾನೂ ಮಾರ್ಮನ್ ಬಿಷಪರ ಮನೆಯ ಹತ್ತಿರ ವಾಸಿಸುತ್ತಿದ್ದೆವು. ಅವರು ನಮ್ಮನ್ನು ಗೌರವದಿಂದ ಕಂಡು, ಹೇಳಿದ್ದು: “ಮಾರ್ಮನ್ ಮಿಷನೆರಿಗಳು ಸಾಕ್ಷಿಗಳಷ್ಟು ಕ್ರಿಯಾಶೀಲರಾಗಿರುತ್ತಿದ್ದಲ್ಲಿ, ಮಾರ್ಮನ್ ಚರ್ಚು ಎಷ್ಟೋ ವೃದ್ಧಿಯಾಗುತ್ತಿತ್ತು.” ಆದುದರಿಂದ ಅವರು ಚರ್ಚಿನಲ್ಲಿ ಧೈರ್ಯದಿಂದ ಹೇಳಿದ್ದು: “ಸಾಕ್ಷಿ ಹುಡುಗರ ವಿರುದ್ಧ ದೊಂಬಿ ಗಲಭೆಯನ್ನುಂಟುಮಾಡುವ ಸುದ್ದಿಯನ್ನು ನಾನು ಕೇಳಿಸಿಕೊಂಡಿದ್ದೇನೆ. ನೋಡಿ, ನಾನು ಆ ಹುಡುಗರಿಗೆ ಸಮೀಪದಲ್ಲಿ ವಾಸಿಸುತ್ತೇನೆ. ಮತ್ತು ದೊಂಬಿ ಗಲಭೆಯುಂಟಾಗುವಲ್ಲಿ, ನನ್ನ ಬಂದೂಕು ಬೇಲಿಯ ಮೇಲಿಂದ ಆ ಕಡೆ ಗುರಿಯಿಟ್ಟಿರುವುದು. ಆದರೆ ಸಾಕ್ಷಿಗಳ ಮೇಲಲ್ಲ, ದೊಂಬಿಗಾರರ ಮೇಲೆ ನಾನು ಆ ಬಂದೂಕನ್ನು ಉಪಯೋಗಿಸುತ್ತೇನೆ. ಆದುದರಿಂದ, ದೊಂಬಿಯೇಳುವ ಮನಸ್ಸು ನಿಮಗಿರುವಲ್ಲಿ, ಏನನ್ನು ನಿರೀಕ್ಷಿಸಬೇಕೆಂಬುದು ನಿಮಗೆ ಗೊತ್ತು.” ದೊಂಬಿಗಾರರು ಬರಲೇ ಇಲ್ಲ.
ನಾನು ಆ್ಯರಿಸೋನದಲ್ಲಿ ಕಳೆದ ಆ ಮೂರು ವರ್ಷಗಳಲ್ಲಿ, ನಮ್ಮನ್ನು ಅನೇಕಾವರ್ತಿ ದಸ್ತಗಿರಿಮಾಡಿ, ಸೆರೆಮನೆಯಲ್ಲಿ ಹಾಕಲಾಯಿತು. ಒಂದು ಬಾರಿ ನಾನು 30 ದಿನಗಳ ವರೆಗೆ ಸೆರೆಮನೆಯಲ್ಲಿದ್ದೆ. ನಮ್ಮ ಶುಶ್ರೂಷೆಯಲ್ಲಿ ಪೊಲೀಸರ ಉಪದ್ರವವನ್ನು ಎದುರಿಸಲು, ನಾವು ಫ್ಲೈಯಿಂಗ್ ಸ್ಕ್ವಾಡ್ (ಹಾರುಪಡೆ) ಎಂದು ಕರೆದ ಒಂದು ಪಡೆಯನ್ನು ರಚಿಸಿದೆವು. ಜವಾಬ್ದಾರಿ ವಹಿಸುತ್ತಿದ್ದ ಸಾಕ್ಷಿಯು ನಮಗೆ ಹೇಳಿದ್ದು: “ನಮ್ಮ ಹೆಸರಿನಂತೆಯೇ ನಾವಿದ್ದೇವೆ. ನಾವು ಬೆಳಗ್ಗೆ ಐದು ಅಥವಾ ಆರಕ್ಕೆ ಆರಂಭಿಸಿ, ಪ್ರತಿಯೊಂದು ಬಾಗಿಲಲ್ಲಿ ಒಂದು ಟ್ರ್ಯಾಕ್ಟನ್ನೊ ಪುಸ್ತಿಕೆಯನ್ನೊ ಇಟ್ಟು, ಬಳಿಕ ಹಾರಿಬಿಡುತ್ತೇವೆ.” ನಮ್ಮ “ಹಾರುಪಡೆ”ಯು ಆ್ಯರಿಸೋನ ರಾಜ್ಯದ ಹೆಚ್ಚಿನ ಭಾಗವನ್ನು ಆವರಿಸಿತು. ಆದರೂ, ಕೊನೆಗೆ ಅದನ್ನು ರದ್ದುಮಾಡಲಾಯಿತು, ಏಕೆಂದರೆ ಆ ರೀತಿಯ ಸಾರುವಿಕೆಯು, ಆಸಕ್ತರಿಗಾಗಿ ನಾವು ಸಹಾಯವನ್ನು ಒದಗಿಸುವುದನ್ನು ಅನುಮತಿಸಲಿಲ್ಲ.
ಗಿಲ್ಯಡ್ ಶಾಲೆ ಮತ್ತು ವಿಶೇಷ ಸೇವೆ
ಡಿಸೆಂಬರ್ 1942ರಲ್ಲಿ, ಯೆಹೋವನ ಸಾಕ್ಷಿಗಳಿಂದ ಸ್ಥಾಪಿಸಲಾಗುತ್ತಿದ್ದ ಒಂದು ಹೊಸ ಮಿಷನೆರಿ ಶಾಲೆಗೆ ಆಮಂತ್ರಣ ಪತ್ರವನ್ನು ಪಡೆದ ಆ್ಯರಿಸೋನದ ಅನೇಕ ಪಯನೀಯರರಲ್ಲಿ ನಾನೊಬ್ಬನಾಗಿದ್ದೆ. ಈ ಶಾಲೆಯನ್ನು ಆರಂಭದಲ್ಲಿ ವಾಚ್ಟವರ್ ಬೈಬಲ್ ಕಾಲೆಜ್ ಆಫ್ ಗಿಲ್ಯಡ್ ಎಂದು ಕರೆಯಲಾಯಿತು. ಆ ಬಳಿಕ ಆ ಹೆಸರನ್ನು ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ಗೆ ಬದಲಾಯಿಸಲಾಯಿತು. ಈ ವಿದ್ಯಾಕ್ಷೇತ್ರ (ಕ್ಯಾಂಪಸ್)ವು ಸುಮಾರು 4,800 ಕಿಲೊಮೀಟರ್ಗಳಷ್ಟು ದೂರದಲ್ಲಿ, ಉತ್ತರ ನ್ಯೂ ಯಾರ್ಕ್ ರಾಜ್ಯದ ಇಥಾಕ ನಗರದ ಸಮೀಪವಿತ್ತು.
ಆರೆಗನ್ಗೆ ಅಲ್ಪಕಾಲದ ಭೇಟಿಕೊಟ್ಟ ಮೇಲೆ, ಜನವರಿ 1943ರಲ್ಲಿ, ನಾವು ಅನೇಕ ಮಂದಿ ಪಯನೀಯರರು, ಗ್ರೇಹೌಂಡ್ ಬಸ್ಸೊಂದರಲ್ಲಿ, ಆ್ಯರಿಸೋನ ಮರುಭೂಮಿಯ ಕಾವನ್ನು ಹಿಂದೆ ಬಿಟ್ಟು ಹೊರಟೆವು. ಕೆಲವು ದಿನಗಳ ಬಳಿಕ ನಾವು ನಮ್ಮ ಗಮ್ಯಸ್ಥಾನಕ್ಕೆ ಬಂದು ಮುಟ್ಟಿ, ಉತ್ತರ ನ್ಯೂ ಯಾರ್ಕಿನ ಚಳಿಗಾಲದ ಹಿಮವನ್ನು ನೋಡಿದೆವು. ಫೆಬ್ರವರಿ 1, 1943ರಂದು ಶಾಲೆಯು ಆರಂಭಗೊಂಡಿತು. ಆಗ ಅದರ ಅಧ್ಯಕ್ಷರಾಗಿದ್ದ ನೇಥನ್ ಏಚ್. ನಾರ್, ತಮ್ಮ ಉದ್ಘಾಟನಾ ಭಾಷಣದಲ್ಲಿ ಆ ನೂರು ಮಂದಿ ವಿದ್ಯಾರ್ಥಿಗಳಿಗೆ ಹೇಳಿದ್ದು: “ನಿಮ್ಮನ್ನು ದೀಕ್ಷಿತ ಶುಶ್ರೂಷಕರನ್ನಾಗಿ ಸಜ್ಜುಗೊಳಿಸುವುದು ಈ ಕಾಲೇಜಿನ ಉದ್ದೇಶ ಅಲ್ಲ. ನೀವು ಈಗಾಗಲೇ ಶುಶ್ರೂಷಕರಾಗಿದ್ದು, ಅನೇಕ ವರ್ಷಗಳಿಂದ ಶುಶ್ರೂಷೆಯಲ್ಲಿ ಕ್ರಿಯಾಶೀಲರಾಗಿದ್ದೀರಿ. . . . ಕಾಲೇಜಿನ ಪಾಠಕ್ರಮವು, ನೀವು ಹೋಗುವ ಟೆರಿಟೊರಿಗಳಲ್ಲಿ ನೀವು ಹೆಚ್ಚು ಅರ್ಹರಾದ ಶುಶ್ರೂಷಕರಾಗಿರುವಂತೆ ನಿಮ್ಮನ್ನು ತಯಾರಿಸುವ ಏಕಮಾತ್ರ ಉದ್ದೇಶಕ್ಕಾಗಿದೆ.”
ನನ್ನ ಐಹಿಕ ವಿದ್ಯಾಭ್ಯಾಸ ಮಿತವಾಗಿದ್ದುದರಿಂದ, ಮೊದಮೊದಲು ನಾನು ಗಿಲ್ಯಡ್ನಲ್ಲಿ ಕಳವಳಗೊಂಡೆ. ಆದರೆ ಶಿಕ್ಷಕರು ನನಗೆ ತುಂಬ ಸಹಾನುಭೂತಿ ತೋರಿಸಿದರು, ಮತ್ತು ನನ್ನ ಪಾಠಗಳಲ್ಲಿ ನಾನು ತುಂಬ ಸಂತೋಷಪಟ್ಟೆ. ಐದು ತಿಂಗಳುಗಳ ತೀವ್ರ ತರಬೇತಿಯ ಬಳಿಕ ನಮ್ಮ ಕ್ಲಾಸಿಗೆ ಪದವಿದೊರಕಿತು. ಆ ಬಳಿಕ, ನಮ್ಮಲ್ಲಿ ಕೆಲವರನ್ನು ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ, ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯಕ್ಕೆ ಕಳುಹಿಸಲಾಯಿತು. ಅಲ್ಲಿ ನಮಗೆ, ಸಂಚಾರ ಕೆಲಸದಲ್ಲಿ ಸರ್ಕಿಟ್ ಮೇಲ್ವಿಚಾರಕರಾಗಿ ಸೇವೆಮಾಡಲು ನಮ್ಮನ್ನು ಸಿದ್ಧಗೊಳಿಸಲಿಕ್ಕಾಗಿ, ಇನ್ನೂ ಹೆಚ್ಚಿನ ತರಬೇತು ದೊರೆಯಿತು. ನನ್ನ ಪ್ರಥಮ ನೇಮಕಾತಿಯು ಉತ್ತರ ಮತ್ತು ದಕ್ಷಿಣ ಕ್ಯಾರೊಲೈನ್ನಲ್ಲಾಗಿತ್ತು.
ಆ ಆರಂಭದ ದಿನಗಳಲ್ಲಿ, ಸರ್ಕಿಟ್ ಮೇಲ್ವಿಚಾರಕನು ಹೆಚ್ಚುಕಡಮೆ ಸದಾ ಸಂಚರಿಸುತ್ತಿದ್ದನು. ಒಂದು ಚಿಕ್ಕ ಸಭೆಯೊಂದಿಗೆ ನಾವು ಒಂದು ದಿನ, ದೊಡ್ಡದಾಗಿದ್ದರೆ ಎರಡು ದಿನ ಉಳಿಯುತ್ತಿದ್ದೆವು. ಆ ಸಮಯದಲ್ಲಿ ಹೆಚ್ಚಿನ ಸಭೆಗಳು ಚಿಕ್ಕದಾಗಿದ್ದವು. ಆದುದರಿಂದ, ಇಡೀ ದಿನ ಕಳೆದಾದ ಮೇಲೆ, ಭೇಟಿಮಾಡುತ್ತ ಮತ್ತು ಪ್ರಶ್ನೆಗಳಿಗೆ ಉತ್ತರಕೊಡುತ್ತ ಅನೇಕ ವೇಳೆ ಸುಮಾರು ಮಧ್ಯರಾತ್ರಿಯ ತನಕ ಎಚ್ಚರದಿಂದಿದ್ದ ಮೇಲೆ, ಮರು ಮುಂಜಾನೆ, ಮುಂದಿನ ಸಭೆಗೆ ಹೊರಡಲು ಸುಮಾರು ಐದು ಗಂಟೆಗೆ ಏಳುತ್ತಿದ್ದೆ. ಸುಮಾರು ಒಂದು ವರ್ಷವನ್ನು ನಾನು ಸರ್ಕಿಟ್ ಕೆಲಸದಲ್ಲಿ ಕಳೆದೆ, ಮತ್ತು ಆ ಬಳಿಕ ನಾನು ಟೆನೆಸಿ ಮತ್ತು ನ್ಯೂ ಯಾರ್ಕ್ನಲ್ಲಿ ಸ್ವಲ್ಪಕಾಲ ಪಯನೀಯರ್ ಸೇವೆ ಮಾಡಿದೆ.
ಕ್ಯೂಬಕ್ಕೆ ಮತ್ತು ಪೋರ್ಟ ರೀಕೊಗೆ
ಮೇ 1945ರಲ್ಲಿ, ನನ್ನನ್ನು ಇತರ ಅನೇಕರೊಂದಿಗೆ ನನ್ನ ಪ್ರಥಮ ವಿದೇಶಿ ಮಿಷನೆರಿ ನೇಮಕ ಸ್ಥಳವಾದ ಕ್ಯೂಬಕ್ಕೆ ಕಳುಹಿಸಲಾಯಿತು! ನಾವು ಕ್ಯೂಬದ ರಾಜಧಾನಿಯಾದ ಹವಾನವನ್ನು ತಲಪಿದ ರಾತ್ರಿಯೇ ಪತ್ರಿಕಾ ಸೇವೆಗೆ ಹೋದೆವು. ಸಾಂಟಾ ಕ್ಲಾರಾದಲ್ಲಿ ಒಂದು ಮನೆಯನ್ನು ಕಂಡುಕೊಳ್ಳಶಕ್ತರಾಗುವ ವರೆಗೆ ನಾವು ಹವಾನದಲ್ಲಿ ಉಳಿದೆವು. ನಮ್ಮ ತಿಂಗಳ ಭತ್ಯವು, ಆಹಾರ ಮತ್ತು ಬಾಡಿಗೆ ಸೇರಿ, ಸರ್ವ ಆವಶ್ಯಕತೆಗಳಿಗೆ ಪ್ರತಿಯೊಬ್ಬನಿಗೆ ಕೇವಲ 25 ಡಾಲರುಗಳಾಗಿದ್ದವು. ದೊರೆಯುತ್ತಿದ್ದ ಸಾಮಗ್ರಿಗಳಿಂದ ನಾವು ಮಂಚಗಳನ್ನೂ ಪೀಠೋಪಕರಣಗಳನ್ನೂ ಮಾಡಿಕೊಂಡು, ನಮ್ಮ ಡ್ರಾವರ್ಗಳಾಗಿ ಆ್ಯಪ್ಲ್ ಬಾಕ್ಸ್ಗಳನ್ನು ಉಪಯೋಗಿಸಿದೆವು.
ಮುಂದಿನ ವರ್ಷ, ನನ್ನನ್ನು ಸರ್ಕಿಟ್ ಕೆಲಸಕ್ಕೆ ನೇಮಿಸಲಾಯಿತು. ಆ ಸಮಯದಲ್ಲಿ ಇಡೀ ಕ್ಯೂಬ ಒಂದು ಸರ್ಕಿಟಾಗಿತ್ತು. ನನಗಿಂತ ಮುಂಚೆ ಹೋಗಿದ್ದ ಸರ್ಕಿಟ್ ಮೇಲ್ವಿಚಾರಕನಿಗೆ ಉದ್ದವಾದ ಕಾಲುಗಳಿದ್ದು, ಅವನು ನಡೆಯಲು ಇಷ್ಟಪಟ್ಟದ್ದರಿಂದ, ಸೋದರ ಸೋದರಿಯರು ಅವನೊಂದಿಗೆ ನಡೆಯುವಾಗ ಅಕ್ಷರಾರ್ಥವಾಗಿ ಓಡಿ ನಡೆಯಬೇಕಾಗುತ್ತಿತ್ತು. ನಾನೂ ಹಾಗೆಯೇ ಇರಬಹುದೆಂದು ಅವರು ನೆನಸಿದ್ದಿರಬೇಕು. ಆದುದರಿಂದ ಅವರು ನನ್ನ ಭೇಟಿಗಾಗಿ ಸಕಲ ವಿಷಯಗಳ ವ್ಯವಸ್ಥೆಯನ್ನು ಮಾಡಿದ್ದರು. ಅವರೆಲ್ಲರೂ ಒಂದೇ ದಿನ ಶುಶ್ರೂಷೆಯಲ್ಲಿ ಹೋಗದೆ, ಗುಂಪುಗಳಾಗಿ ವಿಂಗಡಿಸಿಕೊಂಡು, ಸರದಿಯಾಗಿ ನನ್ನೊಂದಿಗೆ ಸೇವೆಮಾಡಿದರು. ಮೊದಲನೆಯ ದಿನ, ಒಂದು ಗುಂಪು ದೂರದ ಟೆರಿಟೊರಿಗೆ ನನ್ನನ್ನು ಕರೆದೊಯ್ಯಿತು; ಮರುದಿನ ಇನ್ನೊಂದು ಗುಂಪು ಅಂತಹ ಇನ್ನೊಂದು ಟೆರಿಟೊರಿಗೆ ಕರೆದೊಯ್ಯಿತು, ಇತ್ಯಾದಿ. ಆ ಸಂದರ್ಶನಾಂತ್ಯದಲ್ಲಿ ನಾನು ದಣಿದು ಹೋಗಿದ್ದರೂ, ಅದರಲ್ಲಿ ಆನಂದಿಸಿದ್ದೆ. ಆ ಸಭೆಯ ಅಚ್ಚುಮೆಚ್ಚಿನ ಸ್ಮರಣೆಗಳು ನನಗಿವೆ.
ಕ್ಯೂಬದಲ್ಲಿ, 1950ರೊಳಗೆ, ಮೆಕ್ಸಿಕೊದಲ್ಲಿದ್ದಷ್ಟು, ಅಂದರೆ ಸುಮಾರು 7,000 ಮಂದಿ ರಾಜ್ಯ ಪ್ರಚಾರಕರಿದ್ದರು. ಆ ವರ್ಷದ ಜುಲೈ ತಿಂಗಳಿನಲ್ಲಿ, ನಾನು ನ್ಯೂ ಯಾರ್ಕ್ ನಗರದ ಯಾಂಕೀ ಕ್ರೀಡಾಂಗಣದಲ್ಲಿ ನಡೆದ ದೇವಪ್ರಭುತ್ವದ ವೃದ್ಧಿ ಅಂತಾರಾಷ್ಟ್ರೀಯ ಅಧಿವೇಶನಕ್ಕೆ ಹಾಜರಾದೆ. ಆ ಬಳಿಕ, ನನಗೆ ಹೊಸ ಮಿಷನೆರಿ ನೇಮಕ ಸ್ಥಳವಾಗಿ ಪೋರ್ಟ ರೀಕೊ ದೊರೆಯಿತು. ಗಿಲ್ಯಡ್ನ 12ನೆಯ ಕ್ಲಾಸಿನ ಹೊಸ ಮಿಷನೆರಿಗಳಲ್ಲಿ ಎಸ್ಟೆಲ್ ಮತ್ತು ಥೆಲ್ಮ ವೀಕ್ಲೀ ಎಂಬವರಿದ್ದರು. ಅವರು ನನ್ನ ಜೊತೆಯಲ್ಲಿ ಪೋರ್ಟ ರೀಕೊಗೆ ವಿಮಾನಯಾನ ಮಾಡಿದರು.
ಎಂಟು ವರ್ಷಗಳ ಬಳಿಕ, ಪೋರ್ಟ ರೀಕೊದ ಬೈಅಮೋನ್ನಲ್ಲಿ, ಒಂದು ನಿರಾಡಂಬರದ ಸಮಾರಂಭದಲ್ಲಿ ಎಸ್ಟೆಲ್ ಮತ್ತು ನನ್ನ ವಿವಾಹವು ನಡೆಯಿತು. ನಮ್ಮ ಸರ್ಕಿಟ್ ಸಮ್ಮೇಳನದ ವಿರಾಮಾವಧಿಯಲ್ಲಿ ವೇದಿಕೆಯ ಮೇಲೆ ಅದು ನಡೆಯಿತು. ನನ್ನ ಮದುವೆಗೆ ಮೊದಲೂ ತದನಂತರವೂ, ನಾನು ಸರ್ಕಿಟ್ ಕೆಲಸದಲ್ಲಿ ಕಾರ್ಯನಡಿಸಿದೆ. ನಾವು ಪೋರ್ಟ ರೀಕೊದಲ್ಲಿ ಕಳೆದ ಹತ್ತಕ್ಕಿಂತಲೂ ಹೆಚ್ಚು ವರ್ಷಗಳಲ್ಲಿ, ಎಸ್ಟೆಲ್ ಮತ್ತು ನಾನು ಮಹಾ ಉನ್ನತ ಅಭಿವೃದ್ಧಿಗಳನ್ನು—500ಕ್ಕಿಂತಲೂ ಕಡಮೆ ಪ್ರಚಾರಕರಿಂದ 2,000ಕ್ಕೂ ಹೆಚ್ಚು ಪ್ರಚಾರಕರು—ನೋಡಿದೆವು. ಅನೇಕರನ್ನು ಸಮರ್ಪಣೆ ಮತ್ತು ದೀಕ್ಷಾಸ್ನಾನದ ಹಂತದ ತನಕ ಬರುವಂತೆ ಸಹಾಯಮಾಡಲು ನಾವು ಶಕ್ತರಾಗಿದ್ದೆವು ಮತ್ತು ಅನೇಕ ಹೊಸ ಸಭೆಗಳನ್ನು ಸ್ಥಾಪಿಸುವುದರಲ್ಲಿ ನಾವು ಭಾಗವಹಿಸಿದೆವು.
ಡಿಸೆಂಬರ್ 1960ರಲ್ಲಿ, ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದಿಂದ ಮಿಲ್ಟನ್ ಹೆನ್ಶೆಲ್, ಪೋರ್ಟ ರೀಕೊಗೆ ಭೇಟಿಕೊಟ್ಟು ಮಿಷನೆರಿಗಳೊಂದಿಗೆ ಮಾತನಾಡಿದರು. ಬೇರೆ ನೇಮಕ ಸ್ಥಳಕ್ಕೆ ಹೋಗಲು ಯಾರಾದರೂ ತಮ್ಮನ್ನು ಲಭ್ಯವಾಗಿಸಿಕೊಳ್ಳುವರೊ ಎಂದು ಅವರು ಕೇಳಿದರು. ಇದಕ್ಕೆ ತಾವಾಗಿ ಮುಂದೆ ಬಂದವರಲ್ಲಿ ಎಸ್ಟೆಲ್ ಮತ್ತು ನಾನು ಇದ್ದೆವು.
ಡೊಮಿನಿಕನ್ ರಿಪಬ್ಲಿಕ್ನಲ್ಲಿ ನಮ್ಮ ಮನೆ
ನಮ್ಮ ಹೊಸ ನೇಮಕ ಸ್ಥಳ ಡೊಮಿನಿಕನ್ ರಿಪಬ್ಲಿಕ್ ಆಗಿತ್ತು, ಮತ್ತು ಜೂನ್ 1, 1961ನ್ನು ನಾವು ನಮ್ಮ ವರ್ಗವಾಗಿ ಹೋಗುವ ದಿನವಾಗಿ ನಿಗದಿಪಡಿಸಿದೆವು. ಮೇ 30ರಂದು, ಡೊಮಿನಿಕನ್ ಸರ್ವಾಧಿಕಾರಿ, ರಾಫಾಯೆಲ್ ಟ್ರುಹೀಯೊ ಹತಿಸಲ್ಪಟ್ಟನು, ಮತ್ತು ಆ ದೇಶಕ್ಕೆ ಹೋಗುವ ವಿಮಾನಸಂಚಾರವು ರದ್ದುಗೊಳಿಸಲ್ಪಟ್ಟಿತು. ಆದರೆ ಬೇಗನೆ ವಿಮಾನಸಂಚಾರಗಳು ಮತ್ತೆ ಆರಂಭಗೊಂಡದ್ದರಿಂದ, ನಾವು ಯೋಜಿಸಿದ್ದಂತೆ, ಜೂನ್ 1ರಂದು ಡೊಮಿನಿಕನ್ ರಿಪಬ್ಲಿಕ್ಗೆ ವಿಮಾನದಲ್ಲಿ ಹೋಗಲು ಶಕ್ತರಾಗಿದ್ದೆವು.
ನಾವು ಹೋಗಿ ಮುಟ್ಟಿದಾಗ, ಆ ದೇಶವು ಉತ್ಪ್ಲವನದ ಸ್ಥಿತಿಯಲ್ಲಿತ್ತು. ಮತ್ತು ಬಹಳ ಮಿಲಿಟರಿ ಚಟುವಟಿಕೆಯೂ ಇತ್ತು. ಒಂದು ಕ್ರಾಂತಿಯಾಗುವ ಭಯವಿದ್ದುದರಿಂದ, ಸೈನಿಕರು ಹೆದ್ದಾರಿಯಲ್ಲಿ ಪ್ರತಿಯೊಬ್ಬರನ್ನೂ ಝಡತಿ ಮಾಡುತ್ತಿದ್ದರು. ಅನೇಕ ತನಿಖೆಕಟ್ಟೆಗಳಲ್ಲಿ ನಮ್ಮನ್ನು ತಡೆದು ನಿಲ್ಲಿಸಿ, ಪ್ರತಿಯೊಂದು ಸ್ಥಳದಲ್ಲಿ ನಮ್ಮ ಲಗೇಜುಗಳನ್ನು ಹುಡುಕಲಾಯಿತು. ನಮ್ಮ ಸೂಟ್ಕೇಸುಗಳಿಂದ ಎಲ್ಲವನ್ನು, ಚಿಕ್ಕ ವಸ್ತುಗಳನ್ನೂ ಹೊರತೆಗೆಯಲಾಯಿತು. ಡೊಮಿನಿಕನ್ ರಿಪಬ್ಲಿಕ್ನೊಳಗೆ ನಮ್ಮ ಪ್ರವೇಶ ಹಾಗಾಯಿತು.
ನಾವು ನಮ್ಮ ಪ್ರಥಮ ನೇಮಕ ಸ್ಥಳವಾದ ಲಾ ರೋಮಾನಕ್ಕೆ ಹೋಗುವ ಮೊದಲು, ರಾಜಧಾನಿಯಾದ ಸಾಂಟೊ ಡಮಿಂಗೋದಲ್ಲಿ ಹಲವಾರು ವಾರಗಳನ್ನು ಕಳೆದೆವು. ಟ್ರುಹೀಯೊ ಸರ್ವಾಧಿಕಾರದ ಸಮಯದಲ್ಲಿ, ಯೆಹೋವನ ಸಾಕ್ಷಿಗಳು ಕಮ್ಯೂನಿಸ್ಟರೆಂದೂ ಅತಿ ಕೆಟ್ಟ ಜನರೆಂದೂ ಸಾರ್ವಜನಿಕರಿಗೆ ಹೇಳಲಾಗಿತ್ತು. ಇದರ ಪರಿಣಾಮವಾಗಿ, ಸಾಕ್ಷಿಗಳನ್ನು ಕಠಿಣವಾಗಿ ಹಿಂಸಿಸಲಾಗಿತ್ತು. ಆದರೆ ಸ್ವಲ್ಪಸ್ವಲ್ಪವಾಗಿ, ಈ ದುರಭಿಪ್ರಾಯವನ್ನು ತೆಗೆದುಹಾಕಲು ನಾವು ಶಕ್ತರಾದೆವು.
ಲಾ ರೋಮಾನದಲ್ಲಿ ಕೊಂಚಕಾಲ ಸೇವೆಮಾಡಿದ ಬಳಿಕ, ನಾವು ಪುನಃ ಸರ್ಕಿಟ್ ಕೆಲಸದಲ್ಲಿ ಸೇವೆಮಾಡತೊಡಗಿದೆವು. ಬಳಿಕ 1964ರಲ್ಲಿ, ನಮ್ಮನ್ನು ಸಾಂಟೀಆಗೊ ನಗರದಲ್ಲಿ ಮಿಷನೆರಿಗಳಾಗಿ ನೇಮಿಸಲಾಯಿತು. ಮುಂದಿನ ವರ್ಷ, ಡೊಮಿನಿಕನ್ ರಿಪಬ್ಲಿಕ್ನಲ್ಲಿ ಕ್ರಾಂತಿಯುಂಟಾಗಿ, ದೇಶವು ಇನ್ನೊಮ್ಮೆ ಸಂಕ್ಷೋಭೆಯ ಸ್ಥಿತಿಗೆ ಬಂತು. ಆ ಹೋರಾಟದ ಸಮಯದಲ್ಲಿ ನಾವು, ರಾಜಕೀಯ ತೀವ್ರವಾದಕ್ಕೆ ಹೆಸರಾಂತ ನಗರವಾದ ಸಾನ್ ಫ್ರಾನ್ಸಿಸ್ಕೊ ಡೆ ಮಾಕೋರೀಸ್ಗೆ ವರ್ಗಾಯಿಸಲ್ಪಟ್ಟೆವು. ಆದರೂ, ಯಾವ ಹಸ್ತಕ್ಷೇಪವೂ ಇಲ್ಲದೆ, ನಾವು ಮುಕ್ತವಾಗಿ ಸಾರಿದೆವು. ರಾಜಕೀಯ ಕ್ಷೋಭೆಯ ಎದುರಿನಲ್ಲೂ ನಾವು ಒಂದು ಹೊಸ ಸಭೆಯನ್ನು ಸಹ ರಚಿಸಿದೆವು. ಮುಂದಿನ ವರ್ಷಗಳಲ್ಲಿ, ಸಾಂಟಿಆಗೊದ ಈಗಿನ ಮನೆಗೆ ಪುನರ್ನೇಮಿಸಲ್ಪಡುವ ಮೊದಲು, ನಾವು ಇನ್ನೂ ಹೆಚ್ಚಿನ ನೇಮಕ ಸ್ಥಳ ಬದಲಾವಣೆಗಳನ್ನು ಅನುಭವಿಸಿದೆವು.
ನಾವು ಇಲ್ಲಿ, ಡೊಮಿನಿಕನ್ ರಿಪಬ್ಲಿಕ್ನಲ್ಲಿ, ಕೆಲಸದ ಮೇಲೆ ಯೆಹೋವನ ಆಶೀರ್ವಾದವನ್ನು ನಿಶ್ಚಯವಾಗಿಯೂ ನೋಡಿದ್ದೇವೆ. ನಾವು 1961ರಲ್ಲಿ ಬಂದಾಗ, ಸುಮಾರು 600 ಮಂದಿ ಸಾಕ್ಷಿಗಳೂ 20 ಸಭೆಗಳೂ ಇದ್ದವು. ಈಗ 300ಕ್ಕೂ ಹೆಚ್ಚು ಸಭೆಗಳಲ್ಲಿ ಬಹುಮಟ್ಟಿಗೆ 20,000 ಪ್ರಚಾರಕರು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದಾರೆ. ಇನ್ನೂ ಹೆಚ್ಚಿನ ಬೆಳವಣಿಗೆಯ ಪ್ರತೀಕ್ಷೆಗಳೊ ಮಹತ್ತರವಾಗಿವೆಯೆಂದು 1996ರ ಕ್ರಿಸ್ತನ ಮರಣದ ಜ್ಞಾಪಕಾಚರಣೆಗೆ ಹಾಜರಾದ 69,908 ಮಂದಿಯಿಂದ ರುಜುವಾಗುತ್ತದೆ. ಅದು ಪ್ರಚಾರಕರ ಸಂಖ್ಯೆಗಿಂತ ಸುಮಾರು ಮೂರೂವರೆ ಪಟ್ಟು ಹೆಚ್ಚು!
ಈಗ ಒಂದು ಬಲವಾದ ಜನಾಂಗ
ಲೋಕದ ದೃಶ್ಯವು ಬದಲಾವಣೆಹೊಂದುತ್ತಿದೆಯಾದರೂ, ಯೆಹೋವನ ಸಾಕ್ಷಿಗಳು ಸಾರುವ ಬೈಬಲ್ ಸಂದೇಶವು ಬದಲಾವಣೆಯಾಗದೆ ಉಳಿದಿದೆ. (1 ಕೊರಿಂಥ 7:31) ಯೆಹೋವನು ಇನ್ನೂ ದೇವರಾಗಿದ್ದಾನೆ, ಕ್ರಿಸ್ತನು ಇನ್ನೂ ಅರಸನಾಗಿದ್ದಾನೆ ಮತ್ತು ರಾಜ್ಯವು ಲೋಕದ ಏಕಮಾತ್ರ ನಿರೀಕ್ಷೆಯಾಗಿರುವುದು ಎಂದಿಗಿಂತಲೂ ಇನ್ನೂ ಹೆಚ್ಚು ವ್ಯಕ್ತವಾಗಿದೆ.
ಅದೇ ಸಮಯದಲ್ಲಿ, ನಾನು ಸುಮಾರು 60 ವರ್ಷಗಳ ಹಿಂದೆ, ಆರೆಗಾನ್ನ ಸೇಲಮ್ನಲ್ಲಿ ಆ ಕೂಟಕ್ಕೆ ಹಾಜರಾದಂದಿನಿಂದ, ಯೆಹೋವನ ಜನರ ಮಧ್ಯೆ ಒಂದು ಆಶ್ಚರ್ಯಕರವಾದ ಪರಿವರ್ತನೆಯು ಸಂಭವಿಸಿದೆ. ಮಹಾ ಸಮುದಾಯ ಅಥವಾ ಮಹಾ ಸಮೂಹವು ಮಹಾನ್ ಆಗಿ, ಸಂಖ್ಯೆಯಲ್ಲಿ 50 ಲಕ್ಷಗಳಿಗೂ ಹೆಚ್ಚಾಗಿ ಪರಿಣಮಿಸಿದೆ. ಇದು ಯೆಹೋವನು ತನ್ನ ಜನರ ಕುರಿತು ಮುಂತಿಳಿಸಿದಂತೆಯೇ ಇದೆ: “ಚಿಕ್ಕವನಿಂದ ಒಂದು ಕುಲವಾಗುವದು, ಅಲ್ಪನಿಂದ ಬಲವಾದ ಜನಾಂಗವಾಗುವದು; ಯೆಹೋವನೆಂಬ ನಾನು ಕ್ಲುಪ್ತಕಾಲದಲ್ಲಿ ಇದನ್ನು ಬಲುಬೇಗನೆ ಉಂಟುಮಾಡುವೆನು.”—ಯೆಶಾಯ 60:22.
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸುಮಾರು 60 ವರ್ಷಗಳನ್ನು ಕಳೆದ ಬಳಿಕ, ನನ್ನ ಮಿಷನೆರಿ ನೇಮಕದಲ್ಲಿ ಸಾರುತ್ತ, ಕಲಿಸುತ್ತ ಮುಂದುವರಿಯುವ ಆನಂದವು ನನಗಿರುವುದರಲ್ಲಿ ನಾನು ಸಂತೋಷಪಡುತ್ತೇನೆ. ಆ ಕೆಲಸದಲ್ಲಿ ಭಾಗವಿರುವಂತಹದ್ದು ಮತ್ತು “ಅಲ್ಪನು” “ಬಲವಾದ ಜನಾಂಗ” ಆಗುವುದನ್ನು ನೋಡಿರುವುದು ಎಂತಹ ಮಹಾ ಸುಯೋಗವಾಗಿದೆ!
[ಪುಟ 21 ರಲ್ಲಿರುವ ಚಿತ್ರ]
ಡೊಮಿನಿಕನ್ ರಿಪಬ್ಲಿಕ್ನಲ್ಲಿ ನನ್ನ ಹೆಂಡತಿಯೊಂದಿಗೆ