‘ಯೆಹೋವನ ದಿನ’ವನ್ನು ಪಾರಾಗುವುದು
“ಯೆಹೋವನ ದಿನವು ಮಹತ್ತರವೂ ಅತಿಭಯಂಕರವೂ [“ಭಯಪ್ರೇರಕವೂ,” NW] ಆಗಿದೆ; ಅದನ್ನು ತಾಳಿಕೊಳ್ಳುವವರು ಯಾರು?”—ಯೋವೇಲ 2:11.
1. ‘ಯೆಹೋವನ ಭಯಪ್ರೇರಕ ದಿನ’ವು, ಆನಂದಕ್ಕಾಗಿ ಒಂದು ಸಂದರ್ಭವಾಗಿರಬೇಕು ಏಕೆ?
“ಭಯಪ್ರೇರಕ”! ದೇವರ ಪ್ರವಾದಿಯಾದ ಯೋವೇಲನು “ಯೆಹೋವನ ದಿನ”ವನ್ನು ವರ್ಣಿಸುವುದು ಈ ರೀತಿಯಲ್ಲಿಯೇ. ಆದಾಗಲೂ, ಯೆಹೋವನನ್ನು ಪ್ರೀತಿಸುವ ಮತ್ತು ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ಆತನಿಗೆ ಸಮರ್ಪಿಸಿಕೊಂಡಿರುವ ನಾವು, ಯೆಹೋವನ ದಿನವು ಸಮೀಪಿಸಿದಂತೆ ಭಯದಿಂದ ಮುದುರಿಕೊಳ್ಳುವ ಅಗತ್ಯವಿಲ್ಲ. ಅದು ಖಂಡಿತವಾಗಿಯೂ ಭಯಭಕ್ತಿ ಹುಟ್ಟಿಸುವ ಒಂದು ದಿನವಾಗಿರುವುದಾದರೂ, ಅದು ಭವ್ಯ ರಕ್ಷಣೆಯ ಒಂದು ದಿನ, ಸಾವಿರಾರು ವರ್ಷಗಳಿಂದ ಮಾನವಕುಲವನ್ನು ಬಾಧಿಸಿರುವ ದುಷ್ಟ ವಿಷಯಗಳ ವ್ಯವಸ್ಥೆಯಿಂದ ಬಿಡುಗಡೆಯ ದಿನವಾಗಿರುವುದು. ಆ ದಿನದ ಪ್ರತೀಕ್ಷೆಯಲ್ಲಿ, ಯೋವೇಲನು ದೇವರ ಜನರಿಗೆ ಈ ಕರೆಯನ್ನು ನೀಡುತ್ತಾನೆ: “ಹರ್ಷಿಸು, ಉಲ್ಲಾಸಿಸು; ಯೆಹೋವನು ಮಹತ್ಕಾರ್ಯಗಳನ್ನು ಮಾಡುವನು,” ಮತ್ತು ಅವನು ಈ ಆಶ್ವಾಸನೆಯನ್ನು ಕೂಡಿಸುತ್ತಾನೆ: “ಯೆಹೋವನ ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗುವದು.” ತದನಂತರ ದೇವರ ರಾಜ್ಯ ಏರ್ಪಾಡಿನಲ್ಲಿ, “ಅನೇಕರು ಉಳಿದಿರುವರು; ಯೆಹೋವನು ಕರೆಯುವ ಜನಶೇಷದಲ್ಲಿ ಅವರು ಸೇರಿದವರಾಗಿರುವರು.”—ಯೋವೇಲ 2:11, 21, 22, 32.
2. ದೇವರ ಉದ್ದೇಶಗಳ ಪೂರ್ಣಗೊಳ್ಳುವಿಕೆಯಲ್ಲಿ, (ಎ) “ಕರ್ತನ ದಿನ”ದಲ್ಲಿ (ಬಿ) “ಯೆಹೋವನ ದಿನ”ದಲ್ಲಿ ಏನು ನಡೆಯುತ್ತದೆ?
2 ಯೆಹೋವನ ಭಯಪ್ರೇರಕ ದಿನವನ್ನು, ಪ್ರಕಟನೆ 1:10ರ “ಕರ್ತನ ದಿನ”ದೊಂದಿಗೆ ಗಲಿಬಿಲಿಗೊಳಿಸಬಾರದು. ಈ ಕರ್ತನ ದಿನದಲ್ಲಿ, ಪ್ರಕಟನೆ ಪುಸ್ತಕದ 1ರಿಂದ 22ನೆಯ ಅಧ್ಯಾಯಗಳಲ್ಲಿ ವರ್ಣಿಸಲ್ಪಟ್ಟಿರುವ 16 ದರ್ಶನಗಳ ನೆರವೇರಿಕೆಯು ಸೇರಿದೆ. “ಇವು ಯಾವಾಗ ಆಗುವುವು, ನಿನ್ನ ಸಾನ್ನಿಧ್ಯಕ್ಕೂ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೂ ಸೂಚನೆ ಏನು?” (NW) ಎಂಬ ತನ್ನ ಶಿಷ್ಯರ ಪ್ರಶ್ನೆಗೆ ಉತ್ತರದಲ್ಲಿ ಯೇಸು ಮುಂತಿಳಿಸಿದಂತಹ ಎಲ್ಲ ಘಟನೆಗಳ ನೆರವೇರಿಕೆಯ ಸಮಯವನ್ನು ಅದು ಒಳಗೂಡಿಸುತ್ತದೆ. ಯೇಸುವಿನ ಸ್ವರ್ಗೀಯ ಸಾನ್ನಿಧ್ಯವು ಭೂಮಿಯ ಮೇಲೆ ಭೀತಿಕಾರಕ ‘ಯುದ್ಧಗಳು, ಬರಗಳು, ದ್ವೇಷಗಳು, ಉಪದ್ರವಗಳು ಮತ್ತು ಅಧರ್ಮ’ದಿಂದ ಗುರುತಿಸಲ್ಪಟ್ಟಿದೆ. ಈ ಸಂಕಟಗಳು ಹೆಚ್ಚಾದಂತೆ, “ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ” ಸಾರಲ್ಪಡುವಂತೆ ತನ್ನ ಆಧುನಿಕ ದಿನದ ಶಿಷ್ಯರನ್ನು ಕಳುಹಿಸುವ ಮೂಲಕ ಯೇಸು ದೇವಭಯವುಳ್ಳ ಮನುಷ್ಯರಿಗೆ ಸಾಂತ್ವನವನ್ನು ಒದಗಿಸಿದ್ದಾನೆ. ಅನಂತರ, ಕರ್ತನ ದಿನದ ಪರಾಕಾಷ್ಠೆಯೋಪಾದಿ, ಸದ್ಯದ ವಿಷಯಗಳ ವ್ಯವಸ್ಥೆಯ “ಅಂತ್ಯ”ವಾಗಿರುವ ಯೆಹೋವನ ಭಯಪ್ರೇರಕ ದಿನವು ಸ್ಫೋಟಿಸುವುದು. (ಮತ್ತಾಯ 24:3-14; ಲೂಕ 21:11) ಸೈತಾನನ ಭ್ರಷ್ಟ ಲೋಕದ ಮೇಲೆ ಕ್ಷಿಪ್ರವಾದ ನ್ಯಾಯದಂಡನೆಯನ್ನು ಜಾರಿಗೊಳಿಸಲು ಅದು ಯೆಹೋವನ ದಿನವಾಗಿರುವುದು. “ಭೂಮ್ಯಾಕಾಶಗಳು ನಡುಗುತ್ತವೆ. ಆದರೆ ಯೆಹೋವನು ತನ್ನ ಜನರಿಗೆ ಆಶ್ರಯವೂ . . . ಆಗುವನು.”—ಯೋವೇಲ 3:16.
ನೋಹನ ದಿವಸಗಳಲ್ಲಿ ಯೆಹೋವನು ಕ್ರಿಯೆಗೈಯುತ್ತಾನೆ
3. ಇಂದಿನ ಪರಿಸ್ಥಿತಿಗಳು, ನೋಹನ ದಿನದ ಪರಿಸ್ಥಿತಿಗಳಿಗೆ ಸಮಾಂತರವಾಗುವುದು ಹೇಗೆ?
3 ಇಂದು ಲೋಕದ ಪರಿಸ್ಥಿತಿಗಳು, ಸುಮಾರು 4,000ಕ್ಕೂ ಹೆಚ್ಚು ವರ್ಷಗಳ ಹಿಂದೆ “ನೋಹನ ದಿವಸಗಳಲ್ಲಿ”ನ ಪರಿಸ್ಥಿತಿಗಳಿಗೆ ಸಮಾಂತರವಾಗಿವೆ. (ಲೂಕ 17:26, 27) ಆದಿಕಾಂಡ 6:5ರಲ್ಲಿ ನಾವು ಓದುವುದು: “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ ಯೆಹೋವನು ನೋಡಿ”ದನು. ಇಂದಿನ ಲೋಕಕ್ಕೆ ಎಷ್ಟು ಸಾದೃಶ್ಯ! ದುಷ್ಟತನ, ಲೋಭ, ಮತ್ತು ಪ್ರೀತಿರಹಿತ ಮನೋಭಾವವು ಎಲ್ಲೆಡೆಯೂ ತುಂಬಿ ತುಳುಕುತ್ತಿದೆ. ಮಾನವಕುಲದ ನೀತಿಭ್ರಷ್ಟತೆಯು ತೀರ ಕೀಳ್ಮಟ್ಟವನ್ನು ತಲಪಿದೆಯೆಂದು ನಾವು ಕೆಲವೊಮ್ಮೆ ನೆನಸಬಹುದು. ಆದರೆ “ಕಡೇ ದಿವಸಗಳ” ಕುರಿತಾದ ಅಪೊಸ್ತಲ ಪೌಲನ ಪ್ರವಾದನೆಯು ನೆರವೇರುತ್ತಾ ಮುಂದುವರಿಯುತ್ತಿದೆ: “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗುವರು.”—2 ತಿಮೊಥೆಯ 3:1, 13.
4. ಆದಿ ಸಮಯಗಳಲ್ಲಿ ಸುಳ್ಳಾರಾಧನೆಯು ಯಾವ ಪರಿಣಾಮವನ್ನು ಬೀರಿತು?
4 ನೋಹನ ಸಮಯದಲ್ಲಿ ಧರ್ಮವು ಮಾನವಕುಲಕ್ಕೆ ಪರಿಹಾರವನ್ನು ತರಸಾಧ್ಯವಿತ್ತೊ? ವ್ಯತಿರಿಕ್ತವಾಗಿ, ಆಗ ಅಸ್ತಿತ್ವದಲ್ಲಿದ್ದಂತಹ ಮತಭ್ರಷ್ಟ ಧರ್ಮವು, ಆ ಹಾನಿಕಾರಕ ಪರಿಸ್ಥಿತಿಗಳಿಗೆ ಮಹತ್ತರವಾಗಿ ನೆರವನ್ನು ನೀಡುತ್ತಿದ್ದಿರಬಹುದು. ನಮ್ಮ ಪ್ರಥಮ ಹೆತ್ತವರು, “ಪಿಶಾಚನೆಂತಲೂ ಸೈತಾನನೆಂತಲೂ ಹೆಸರುಳ್ಳ ಪುರಾತನ ಸರ್ಪ”ದ ಸುಳ್ಳು ಬೋಧನೆಗೆ ಬಲಿಬಿದ್ದಿದ್ದರು. ಆದಾಮನಿಂದ ಆರಂಭಿಸಿ ಎರಡನೆಯ ಸಂತತಿಯವರ ಸಮಯದಲ್ಲಿ, ಪ್ರಾಯಶಃ ದೇವನಿಂದಕ ವಿಧದಲ್ಲಿ, ‘ಯೆಹೋವ ಎಂಬ ಹೆಸರನ್ನು ಹೇಳಿಕೊಂಡು ಆರಾಧಿಸುವುದು ಪ್ರಾರಂಭವಾಯಿತು.’ (ಪ್ರಕಟನೆ 12:9; ಆದಿಕಾಂಡ 3:3-6; 4:26) ತದನಂತರ, ದೇವರಿಗೆ ಸಂಪೂರ್ಣ ಭಕ್ತಿಯನ್ನು ಕೊಡುವುದನ್ನು ತೊರೆದುಬಿಟ್ಟ ದಂಗೆಕೋರ ದೇವದೂತರು, ಮನುಷ್ಯರ ಸುಂದರ ಪುತ್ರಿಯರೊಂದಿಗೆ ನಿಷಿದ್ಧ ಲೈಂಗಿಕ ಸಂಬಂಧಗಳನ್ನು ಹೊಂದಲಿಕ್ಕಾಗಿ ಮಾನವ ಶರೀರಗಳನ್ನು ಧರಿಸಿದರು. ಈ ಸ್ತ್ರೀಯರು, ಮಾನವಕುಲದ ಮೇಲೆ ದಬ್ಬಾಳಿಕೆ ನಡೆಸಿ ಪೀಡಿಸಿದ ನೆಫೀಲಿಯರು ಎಂದು ಕರೆಯಲ್ಪಟ್ಟ ಮಿಶ್ರತಳಿಯ ದೈತ್ಯರಿಗೆ ಜನ್ಮನೀಡಿದರು. ಈ ದೆವ್ವಸಂಬಂಧಿತ ಪ್ರಭಾವದ ಕೆಳಗೆ, “ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.”—ಆದಿಕಾಂಡ 6:1-12.
5. ನೋಹನ ದಿನದಲ್ಲಿನ ಘಟನೆಗಳಿಗೆ ಸೂಚಿಸುತ್ತಾ, ಯೇಸು ನಮಗೆ ಯಾವ ಎಚ್ಚರಿಕೆಯ ಬುದ್ಧಿವಾದವನ್ನು ಕೊಡುತ್ತಾನೆ?
5 ಒಂದು ಕುಟುಂಬವಾದರೋ, ಯೆಹೋವನ ಕಡೆಗೆ ಸಮಗ್ರತೆಯನ್ನು ಕಾಪಾಡಿಕೊಂಡಿತು. ಹೀಗಿರುವುದರಿಂದ, ದೇವರು “ಭಕ್ತಿಹೀನರಾದ ಪುರಾತನರ ಲೋಕವನ್ನು ಸುಮ್ಮನೆ ಬಿಡದೆ ಅವರ ಮೇಲೆ ಜಲಪ್ರಲಯವನ್ನು ಬರಮಾಡಿದನು; ಆದರೆ ಸುನೀತಿಯನ್ನು ಸಾರುವವನಾಗಿದ್ದ ನೋಹನನ್ನೂ ಅವನೊಂದಿಗೆ ಬೇರೆ ಏಳು ಮಂದಿಯನ್ನೂ ಉಳಿಸಿದನು.” (2 ಪೇತ್ರ 2:5) ಆ ಜಲಪ್ರಳಯವು, ಈ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಮತ್ತು ಯಾವುದರ ಕುರಿತಾಗಿ ಯೇಸು ಪ್ರವಾದಿಸಿದನೊ ಅದನ್ನು ಗುರುತಿಸುವ ಯೆಹೋವನ ಭಯಪ್ರೇರಕ ದಿನವನ್ನು ಮುಂಚಿತ್ರಿಸಿತು: “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು. ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೇ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.” (ಮತ್ತಾಯ 24:36-39) ನಾವು ಇಂದು ತದ್ರೀತಿಯ ಒಂದು ಸನ್ನಿವೇಶದಲ್ಲಿದ್ದೇವೆ, ಆದುದರಿಂದ ಯೇಸು ನಮಗೆ ‘ನಮ್ಮ ವಿಷಯದಲ್ಲಿ ಜಾಗರೂಕರಾಗಿರುವಂತೆ, ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆಮಾಡಿಕೊಳ್ಳುತ್ತಾ ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಎಚ್ಚರವಾಗಿರುವಂತೆ’ ಬುದ್ಧಿಹೇಳುತ್ತಾನೆ.—ಲೂಕ 21:34-36.
ಸೊದೋಮ್ ಗೊಮೋರಗಳ ಯೆಹೋವನ ನಿರ್ಣಯಾತ್ಮಕ ದಂಡನೆ
6, 7. (ಎ) ಲೋಟನ ಸಮಯದಲ್ಲಿನ ಘಟನೆಗಳಿಂದ ಏನು ಮುನ್‌ಚಿತ್ರಿಸಲ್ಪಟ್ಟಿದೆ? (ಬಿ) ಇದು ನಮಗೆ ಯಾವ ಸ್ಪಷ್ಟವಾದ ಎಚ್ಚರಿಕೆಯನ್ನು ಒದಗಿಸುತ್ತದೆ?
6 ಜಲಪ್ರಳಯದ ಕೆಲವು ನೂರಾರು ವರ್ಷಗಳ ಬಳಿಕ, ನೋಹನ ಸಂತತಿಯವರು ಭೂಮಿಯಲ್ಲಿ ವೃದ್ಧಿಯಾದಾಗ, ನಂಬಿಗಸ್ತ ಅಬ್ರಹಾಮ ಮತ್ತು ಅವನ ಸೋದರಮಗನಾದ ಲೋಟನು, ಯೆಹೋವನ ಇನ್ನೊಂದು ಭಯಪ್ರೇರಕ ದಿನಕ್ಕೆ ಪ್ರತ್ಯಕ್ಷಸಾಕ್ಷಿಗಳಾಗಿದ್ದರು. ಲೋಟನೂ ಅವನ ಕುಟುಂಬವೂ ಸೊದೋಮ್ ಊರಿನಲ್ಲಿ ವಾಸಿಸುತ್ತಿತ್ತು. ನೆರೆಹೊರೆಯ ಗೊಮೋರದೊಂದಿಗೆ, ಈ ಊರು ಅಸಹ್ಯಕರವಾದ ಲೈಂಗಿಕ ಅನೈತಿಕತೆಯಲ್ಲಿ ಮುಳುಗಿತ್ತು. ಪ್ರಾಪಂಚಿಕತೆಯು ಕೂಡ ಒಂದು ಪ್ರಧಾನ ಆಸಕ್ತಿಯಾಗಿತ್ತು. ಅದು ಕೊನೆಗೆ ಲೋಟನ ಹೆಂಡತಿಯನ್ನೂ ಬಾಧಿಸಿತು. ಯೆಹೋವನು ಅಬ್ರಹಾಮನಿಗೆ ಹೀಗಂದಿದ್ದನು: “ಸೊದೋಮ್ ಗೊಮೋರಗಳ ವಿಷಯವಾಗಿ ಎಷ್ಟೋ ದೊಡ್ಡ ಮೊರೆ ನನಗೆ ಮುಟ್ಟಿತು; ಆ ಊರಿನವರ ಮೇಲೆ ಹೊರಿಸಿರುವ ಪಾಪವು ಎಷ್ಟೋ ಘೋರವಾದದ್ದು.” (ಆದಿಕಾಂಡ 18:20) ಆ ಊರುಗಳಲ್ಲಿದ್ದ ನೀತಿವಂತರಿಗೋಸ್ಕರ ಯೆಹೋವನು ಅವುಗಳನ್ನು ಉಳಿಸುವಂತೆ ಅಬ್ರಹಾಮನು ಯೆಹೋವನ ಬಳಿ ಭಿನ್ನಹಿಸಿಕೊಂಡನು, ಆದರೆ ಅಲ್ಲಿ ತಾನು ಹತ್ತು ಮಂದಿ ನೀತಿವಂತ ಪುರುಷರನ್ನು ಸಹ ಕಂಡುಕೊಳ್ಳಲು ಸಾಧ್ಯವಾಗಲಿಲ್ಲವೆಂದು ಯೆಹೋವನು ಪ್ರಕಟಿಸಿದನು. ದೇವರಿಂದ ಕಳುಹಿಸಲ್ಪಟ್ಟ ದೇವದೂತರು, ಲೋಟನು ಮತ್ತು ಅವನ ಇಬ್ಬರು ಪುತ್ರಿಯರು ಹತ್ತಿರದಲ್ಲಿದ್ದ ಚೋಗರ್ ಊರಿಗೆ ಪಲಾಯನಗೈಯ್ಯುವಂತೆ ಸಹಾಯಮಾಡಿದರು.
7 ಮುಂದೇನಾಯಿತು? ನಮ್ಮ “ಕಡೇ ದಿವಸ”ಗಳನ್ನು ಲೋಟನ ದಿವಸಗಳಿಗೆ ಹೋಲಿಸುತ್ತಾ, ಲೂಕ 17:28-30 ವರದಿಸುವುದು: “ಲೋಟನ ದಿವಸಗಳಲ್ಲಿ ನಡೆದ ಪ್ರಕಾರ ನಡೆಯುವದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು, ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟುಹೋದ ದಿವಸದಲ್ಲಿ ಆಕಾಶದಿಂದ ಬೆಂಕಿಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು. ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವದು.” ಯೆಹೋವನ ಆ ಭಯಪ್ರೇರಕ ದಿನದಂದು ಸೊದೋಮ್ ಮತ್ತು ಗೊಮೋರಕ್ಕಾದ ಗತಿಯು, ಯೇಸುವಿನ ಸಾನ್ನಿಧ್ಯದ ಈ ಸಮಯದಲ್ಲಿರುವ ನಮಗೆ ಒಂದು ಸ್ಪಷ್ಟವಾದ ಎಚ್ಚರಿಕೆಯನ್ನು ಕೊಡುತ್ತದೆ. ಮಾನವಕುಲದ ಆಧುನಿಕ ಸಂತತಿಯು ಕೂಡ, “ತಮ್ಮನ್ನು ಜಾರತ್ವಕ್ಕೆ ಒಪ್ಪಿಸಿಬಿಟ್ಟು ಸ್ವಭಾವವಿರುದ್ಧವಾದ ಭೋಗವನ್ನು” ನಡೆಸಿದೆ. (ಯೂದ 7) ಇನ್ನೂ ಹೆಚ್ಚಾಗಿ, ನಮ್ಮ ಸಮಯಗಳ ಅನೈತಿಕ ಲೈಂಗಿಕ ಮನೋಭಾವಗಳು, ಈ ದಿನಕ್ಕಾಗಿ ಯೇಸು ಮುಂತಿಳಿಸಿದ “ಉಪದ್ರವ”ಗಳಲ್ಲಿ ಹೆಚ್ಚಿನವುಗಳಿಗೆ ಹೊಣೆಹೊತ್ತುಕೊಳ್ಳುತ್ತವೆ.—ಲೂಕ 21:11.
ಇಸ್ರಾಯೇಲ್ “ಬಿರುಗಾಳಿಯನ್ನು” ಕೊಯ್ದುಕೊಳ್ಳುತ್ತದೆ
8. ಯೆಹೋವನೊಂದಿಗಿನ ಒಡಂಬಡಿಕೆಯನ್ನು ಇಸ್ರಾಯೇಲ್ ಎಷ್ಟರ ಮಟ್ಟಿಗೆ ಪಾಲಿಸಿತು?
8 ಸಕಾಲದಲ್ಲಿ, ಯೆಹೋವನು ಇಸ್ರಾಯೇಲನ್ನು ತನ್ನ ‘ಸ್ವಕೀಯಜನ . . . ಯಾಜಕರಾಜ್ಯವೂ ಪರಿಶುದ್ಧಜನವೂ ಆಗಿರು’ವಂತೆ ಆರಿಸಿಕೊಂಡನು. ಆದರೆ ಇದು ಅವರು ‘ಆತನ ಮಾತನ್ನು ಶ್ರದ್ಧೆಯಿಂದ ಕೇಳಿ ಆತನು ಮಾಡುವ ನಿಬಂಧನೆಯನ್ನು ಅನುಸರಿಸಿ ನಡೆಯುವುದರ’ ಮೇಲೆ ಅವಲಂಬಿಸಿತ್ತು. (ವಿಮೋಚನಕಾಂಡ 19:5, 6) ಈ ಭವ್ಯ ಸುಯೋಗವನ್ನು ಅವರು ಸನ್ಮಾನಿಸಿದರೊ? ನಿಶ್ಚಯವಾಗಿಯೂ ಇಲ್ಲ! ಆ ಜನಾಂಗದ ನಂಬಿಗಸ್ತ ವ್ಯಕ್ತಿಗಳು ಆತನನ್ನು ನಿಷ್ಠೆಯಿಂದ ಸೇವಿಸಿದರೆಂಬುದು ನಿಜ—ಮೋಶೆ, ಸಮುವೇಲ, ದಾವೀದ, ಯೆಹೋಷಾಫಾಟ್, ಹಿಜ್ಕೀಯ, ಯೋಷೀಯ ಹಾಗೂ ಸಮರ್ಪಿತ ಪ್ರವಾದಿಗಳು ಮತ್ತು ಪ್ರವಾದಿನಿಯರು. ಆದರೂ, ಇಡೀಯಾಗಿ ಆ ಜನಾಂಗವು ಅಪನಂಬಿಗಸ್ತವಾಗಿತ್ತು. ಸಮಯಾನಂತರ, ಆ ರಾಜ್ಯವು ಎರಡು ಭಾಗಗಳಾಗಿ—ಇಸ್ರಾಯೇಲ್ ಮತ್ತು ಯೆಹೂದವಾಗಿ ವಿಭಾಗವಾಯಿತು. ಒಟ್ಟಿನಲ್ಲಿ, ಎರಡೂ ಜನಾಂಗಗಳು ವಿಧರ್ಮಿ ಆರಾಧನೆ ಮತ್ತು ನೆರೆಹೊರೆಯ ರಾಷ್ಟ್ರಗಳ ಇತರ ದೇವನಿಂದಕ ಪದ್ಧತಿಗಳಲ್ಲಿ ಸಿಲುಕಿಕೊಂಡವು.—ಯೆಹೆಜ್ಕೇಲ 23:49.
9. ಯೆಹೋವನು ಹತ್ತು-ಕುಲದ ರಾಜ್ಯಕ್ಕೆ ಹೇಗೆ ನ್ಯಾಯತೀರ್ಪು ವಿಧಿಸಿದನು?
9 ಯೆಹೋವನು ಸಂಗತಿಗಳನ್ನು ಹೇಗೆ ತೀರ್ಪುಮಾಡಿದನು? ಎಂದಿನಂತೆ, ಆಮೋಸನಿಂದ ತಿಳಿಸಲ್ಪಟ್ಟಿರುವ ಮೂಲತತ್ತ್ವಕ್ಕೆ ಹೊಂದಿಕೆಯಲ್ಲಿ ಆತನು ಒಂದು ಎಚ್ಚರಿಕೆಯನ್ನು ಧ್ವನಿಸಿದನು: “ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.” ಇಸ್ರಾಯೇಲಿನ ಉತ್ತರ ರಾಜ್ಯಕ್ಕೆ ಸ್ವತಃ ಆಮೋಸನೇ ದುರ್ಗತಿಯನ್ನು ಘೋಷಿಸಿದನು: “ಯೆಹೋವನ ದಿನವು ನಿಮಗೇಕೆ? ಅದು ಬೆಳಕಲ್ಲ, ಕತ್ತಲೆಯೇ.” (ಆಮೋಸ 3:7; 5:18) ಇನ್ನೂ ಹೆಚ್ಚಾಗಿ, ಆಮೋಸನ ಜೊತೆ ಪ್ರವಾದಿಯಾದ ಹೋಶೇಯನು ಪ್ರಕಟಿಸಿದ್ದು: “ಅವರು ಗಾಳಿಯನ್ನು ಬಿತ್ತುತ್ತಾರೆ, ಬಿರುಗಾಳಿಯನ್ನು ಕೊಯ್ದುಕೊಳ್ಳುವರು.” (ಹೋಶೇಯ 8:7) ಸಾ.ಶ.ಪೂ. 740ರಲ್ಲಿ, ಯೆಹೋವನು ಇಸ್ರಾಯೇಲಿನ ಉತ್ತರ ರಾಜ್ಯವನ್ನು ಒಮ್ಮೆಲೆ ಮತ್ತು ಸದಾಕಾಲಕ್ಕೂ ಧ್ವಂಸಗೊಳಿಸಲಿಕ್ಕಾಗಿ ಅಶ್ಶೂರ್ಯದ ಸೈನ್ಯವನ್ನು ಉಪಯೋಗಿಸಿದನು.
ಧರ್ಮಭ್ರಷ್ಟ ಯೆಹೂದದೊಂದಿಗೆ ಯೆಹೋವನ ಲೆಕ್ಕತೀರಿಸುವಿಕೆ
10, 11. (ಎ) ಯೆಹೋವನು ಯೆಹೂದವನ್ನು ಕ್ಷಮಿಸಲು ಸಮ್ಮತಿಸಲಿಲ್ಲವೇಕೆ? (ಬಿ) ಯಾವ ಅಸಹ್ಯ ಕೃತ್ಯಗಳು ಜನಾಂಗವನ್ನು ಭ್ರಷ್ಟಗೊಳಿಸಿದ್ದವು?
10 ಯೆಹೋವನು ತನ್ನ ಪ್ರವಾದಿಗಳನ್ನು ಯೆಹೂದದ ದಕ್ಷಿಣ ರಾಜ್ಯಕ್ಕೂ ಕಳುಹಿಸಿದನು. ಆದರೂ, ಮನಸ್ಸೆ ಮತ್ತು ಅವನ ಉತ್ತರಾಧಿಕಾರಿ ಆಮೋನನಂತಹ ಯೆಹೂದದ ರಾಜರು, ‘ನಿರಪರಾಧಿರಕ್ತವನ್ನು ಸುರಿಸಿ, ವಿಗ್ರಹಗಳನ್ನು ಪೂಜಿಸಿ ಅವುಗಳಿಗೆ ಅಡ್ಡಬಿದ್ದು’ ಆತನ ದೃಷ್ಟಿಯಲ್ಲಿ ಕೆಟ್ಟದ್ದಾಗಿರುವಂತಹದ್ದನ್ನು ಮಾಡುವುದನ್ನು ಮುಂದುವರಿಸಿದರು. ಆಮೋನನ ಪುತ್ರನಾದ ಯೋಷೀಯನು ಯೆಹೋವನ ದೃಷ್ಟಿಯಲ್ಲಿ ಸರಿಯಾಗಿರುವಂತಹದ್ದನ್ನು ಮಾಡಿದ್ದರೂ, ಅವನನ್ನು ಹಿಂಬಾಲಿಸಿ ಬಂದ ರಾಜರು ಹಾಗೂ ಜನರು ಪುನಃ ಒಮ್ಮೆ ದುಷ್ಟತನದಲ್ಲಿ ಮುಳುಗಿದವರಾದರು. ಆದುದರಿಂದ “ಯೆಹೋವನು ಕ್ಷಮಿಸದೆ ಹೋದನು.”—2 ಅರಸುಗಳು 21:16-21; 24:3, 4.
11 ಯೆಹೋವನು ತನ್ನ ಪ್ರವಾದಿಯಾದ ಯೆರೆಮೀಯನ ಮೂಲಕ ಪ್ರಕಟಿಸಿದ್ದು: “ಭೀಕರವೂ ಅಸಹ್ಯವೂ ಆದ ಸಂಗತಿಯು ದೇಶದಲ್ಲಿ ನಡೆದುಬಂದಿದೆ; ಪ್ರವಾದಿಗಳು ಸುಳ್ಳಾಗಿ ಪ್ರವಾದಿಸುತ್ತಾರೆ, ಯಾಜಕರು ಅವರಿಂದ ಅಧಿಕಾರಹೊಂದಿ ದೊರೆತನ ಮಾಡುತ್ತಾರೆ, ನನ್ನ ಜನರು ಇದನ್ನೇ ಪ್ರೀತಿಸುತ್ತಾರೆ; ಕಟ್ಟಕಡೆಗೆ ನೀವು ಏನು ಮಾಡುವಿರಿ?” ಯೆಹೂದ ಜನಾಂಗವು ತೀರ ವಿಪರೀತದ ವರೆಗೆ ರಕ್ತದೋಷಿಯಾಗಿತ್ತು ಮತ್ತು ಅದರ ಜನರು ಕದಿಯುವಿಕೆ, ಕೊಲೆಮಾಡುವಿಕೆ, ಹಾದರಗೈಯ್ಯುವಿಕೆ, ಸುಳ್ಳಾಣೆಯಿಡುವುದು, ಅನ್ಯದೇವತೆಗಳ ಪೂಜೆ ಮತ್ತು ಇತರ ಹೇಯ ವಿಷಯಗಳನ್ನು ಮಾಡುವುದರ ಮೂಲಕ ಭ್ರಷ್ಟರಾಗಿದ್ದರು. ದೇವರ ಆಲಯವು “ಕಳ್ಳರ ಗವಿ”ಯಾಗಿ ಪರಿಣಮಿಸಿತ್ತು.—ಯೆರೆಮೀಯ 2:34; 5:30, 31; 7:8-12.
12. ಸ್ವಧರ್ಮ ಪರಿತ್ಯಾಗಿ ಯೆರೂಸಲೇಮನ್ನು ಯೆಹೋವನು ಶಿಕ್ಷಿಸಿದ್ದು ಹೇಗೆ?
12 ಯೆಹೋವನು ಪ್ರಕಟಿಸಿದ್ದು: “ನಾನು ಬಡಗಲಿಂದ [ಕಸ್ದೀಯ] ವಿಪತ್ತನ್ನೂ ಘೋರನಾಶನವನ್ನೂ ಬರಮಾಡುವೆನು.” (ಯೆರೆಮೀಯ 4:6) ಹೀಗೆ ಆತನು, ಸ್ವಧರ್ಮ ಪರಿತ್ಯಾಗಿ ಯೆರೂಸಲೇಮ್ ಮತ್ತು ಅದರ ದೇವಾಲಯವನ್ನು ಜಜ್ಜಲಿಕ್ಕಾಗಿ, ಆ ಸಮಯದಲ್ಲಿ “ಲೋಕವನ್ನೆಲ್ಲಾ ಹೊಡೆದ ಚಮಟಿಗೆ”ಯಾಗಿದ್ದ ಬಾಬೆಲಿನ ಲೋಕ ಶಕ್ತಿಯನ್ನು ಒಳತಂದನು. (ಯೆರೆಮೀಯ 50:23) ಸಾ.ಶ.ಪೂ. 607ರಲ್ಲಿ ಒಂದು ತೀವ್ರವಾದ ಮುತ್ತಿಗೆಯ ಅನಂತರ, ಆ ಪಟ್ಟಣವು ನೆಬೂಕದ್ನೆಚ್ಚರನ ಬಲಶಾಲಿ ಸೈನ್ಯದ ಮುಂದೆ ಪತನಗೊಂಡಿತು. “ಬಾಬೆಲಿನ ಅರಸನು ಅಲ್ಲಿ [ರಾಜ] ಚಿದ್ಕೀಯನಿಗೆ ಶಿಕ್ಷೆಯನ್ನು ವಿಧಿಸಿ ಅವನ ಮಕ್ಕಳನ್ನು ಅಲ್ಲೇ ಅವನ ಕಣ್ಣೆದುರಿಗೆ ವಧಿಸಿ ಯೆಹೂದದ ಸಮಸ್ತ ಶ್ರೀಮಂತರನ್ನೂ ಕೊಲ್ಲಿಸಿದನು; ಇದಲ್ಲದೆ ಚಿದ್ಕೀಯನ ಕಣ್ಣುಗಳನ್ನು ಕೀಳಿಸಿ ಅವನನ್ನು ಬಾಬೆಲಿಗೆ ಸಾಗಿಸಬೇಕೆಂದು ಬೇಡಿಹಾಕಿಸಿದನು. ಮತ್ತು ಕಸ್ದೀಯರು ಅರಮನೆಯನ್ನೂ ಪ್ರಜೆಗಳ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಯೆರೂಸಲೇಮಿನ ಸುತ್ತಣ ಗೋಡೆಗಳನ್ನು ಕೆಡವಿದರು. ಆಗ ಕಾವಲು ದಂಡಿನ ಅಧಿಪತಿಯಾದ ನೆಬೂಜರದಾನನು ಪಟ್ಟಣದಲ್ಲಿ ಉಳಿದವರನ್ನೂ ಮೊದಲೇ ತನ್ನನ್ನು ಮರೆಹೊಕ್ಕವರನ್ನೂ ಇತರ ಸಮಸ್ತ ಜನರನ್ನೂ ಬಾಬೆಲಿಗೆ ಸೆರೆಯೊಯ್ದನು.”—ಯೆರೆಮೀಯ 39:5-9.
13. ಸಾ.ಶ.ಪೂ. 607ರ ಯೆಹೋವನ ದಿನದಲ್ಲಿ ಯಾರು ರಕ್ಷಿಸಲ್ಪಟ್ಟರು, ಮತ್ತು ಏಕೆ?
13 ಒಂದು ಭಯಪ್ರೇರಕ ದಿನವೇ ಸರಿ! ಆದರೆ, ಆ ಉರಿಯುವ ನ್ಯಾಯತೀರ್ಪಿನಿಂದ ರಕ್ಷಿಸಲ್ಪಟ್ಟವರ ನಡುವೆ ಯೆಹೋವನಿಗೆ ವಿಧೇಯರಾದ ಕೆಲವರಿದ್ದರು. ಇವರಲ್ಲಿ, ಯೂದಾಯದವರಿಗೆ ತದ್ವಿರುದ್ಧವಾಗಿ ಒಂದು ನಮ್ರ ಮತ್ತು ವಿಧೇಯ ಮನೋವೃತ್ತಿಯನ್ನು ಪ್ರದರ್ಶಿಸಿದ ಇಸ್ರಾಯೇಲ್ಯೇತರ ರೆಕಾಬ್ಯರು ಸೇರಿದ್ದರು. ಕೆಸರು ತುಂಬಿದ ಹಳ್ಳವೊಂದರಲ್ಲಿ ಸಾಯುವುದರಿಂದ ಯೆರೆಮೀಯನನ್ನು ರಕ್ಷಿಸಿದ ನಂಬಿಗಸ್ತ ಕಂಚುಕಿ ಎಬೆದ್‌ಮೆಲೆಕ್ ಮತ್ತು ಯೆರೆಮೀಯನ ನಿಷ್ಠಾವಂತ ಲಿಪಿಕಾರ ಬಾರೂಕನು ಕೂಡ ರಕ್ಷಿಸಲ್ಪಟ್ಟನು. (ಯೆರೆಮೀಯ 35:18, 19; 38:7-13; 39:15-18; 45:1-5) ಅಂತಹವರಿಗೇ ಯೆಹೋವನು ಹೀಗೆ ಪ್ರಕಟಿಸಿದನು: “ಇವರಿಗೆ ಗತಿಯಾಗಲಿ, ನಿರೀಕ್ಷೆಯಿರಲಿ ಎಂದು ನಾನು ನಿಮ್ಮ ವಿಷಯದಲ್ಲಿ ಮಾಡಿಕೊಳ್ಳುತ್ತಿರುವ ಆಲೋಚನೆಗಳನ್ನು ನಾನೇ ಬಲ್ಲೆನು; ಅವು ಅಹಿತದ ಯೋಚನೆಗಳಲ್ಲ, ಹಿತದ [“ಶಾಂತಿಯ,” NW] ಯೋಚನೆಗಳೇ.” ಆ ವಾಗ್ದಾನವು ಸಾ.ಶ.ಪೂ. 539ರಲ್ಲಿ ಒಂದು ಸೂಕ್ಷ್ಮಪ್ರಮಾಣದ ನೆರವೇರಿಕೆಯನ್ನು ಪಡೆದಿತ್ತು. ಆಗ ದೇವಭಯವುಳ್ಳ ಯೆಹೂದ್ಯರು, ಬಬಿಲೋನಿನ ವಿಜೇತನಾದ ರಾಜ ಕೋರೇಷನಿಂದ ಬಿಡುಗಡೆಮಾಡಲ್ಪಟ್ಟು, ಯೆರೂಸಲೇಮಿನ ಪಟ್ಟಣ ಮತ್ತು ದೇವಾಲಯವನ್ನು ಪುನರ್ನಿರ್ಮಿಸಲು ಹಿಂದಿರುಗಿದರು. ಯಾರು ಇಂದು ಬಾಬೆಲ್‌ಸಂಬಂಧಿತ ಧರ್ಮದಿಂದ ಹೊರಗೆ ಬಂದು ಯೆಹೋವನ ಶುದ್ಧಾರಾಧನೆಗೆ ಪುನಸ್ಸ್ಥಾಪಿಸಲ್ಪಡುವರೊ ಅವರು, ತದ್ರೀತಿಯಲ್ಲಿ, ಯೆಹೋವನ ಪುನಸ್ಸ್ಥಾಪಿತ ಪ್ರಮೋದವನದಲ್ಲಿ ನಿತ್ಯ ಶಾಂತಿಯ ಒಂದು ಮಹಿಮಾಭರಿತ ಭವಿಷ್ಯತ್ತಿನ ಕಡೆಗೆ ಎದುರುನೋಡಸಾಧ್ಯವಿದೆ.—ಯೆರೆಮೀಯ 29:11; ಕೀರ್ತನೆ 37:34; ಪ್ರಕಟನೆ 18:2, 4.
ಪ್ರಥಮ ಶತಮಾನದ “ಮಹಾ ಸಂಕಟ”
14. ಯೆಹೋವನು ಇಸ್ರಾಯೇಲನ್ನು ಶಾಶ್ವತವಾಗಿ ತ್ಯಜಿಸಿದ್ದೇಕೆ?
14 ನಾವೀಗ ಸಾ.ಶ. ಒಂದನೆಯ ಶತಮಾನಕ್ಕೆ ಮುಂದುವರಿಯೋಣ. ಆ ಸಮಯದಷ್ಟಕ್ಕೆ, ಪುನಸ್ಸ್ಥಾಪಿತ ಯೆಹೂದ್ಯರು ಪುನಃ ಧರ್ಮಭ್ರಷ್ಟತೆಗೆ ಬಲಿಬಿದ್ದಿದ್ದರು. ಯೆಹೋವನು ತನ್ನ ಒಬ್ಬನೇ ಮಗನನ್ನು, ತನ್ನ ಅಭಿಷಿಕ್ತನು, ಅಥವಾ ಮೆಸ್ಸೀಯನಾಗಿರಲು ಈ ಭೂಮಿಗೆ ಕಳುಹಿಸಿದನು. ಸಾ.ಶ. 29ರಿಂದ 33ರ ವರೆಗಿನ ವರ್ಷಗಳಲ್ಲಿ, ಯೇಸು ಇಸ್ರಾಯೇಲ್ ದೇಶದಾದ್ಯಂತ ಹೀಗನ್ನುತ್ತಾ ಸಾರಿದನು: “ಪರಲೋಕರಾಜ್ಯವು ಸಮೀಪಿಸಿತು; ದೇವರ ಕಡೆಗೆ ತಿರುಗಿಕೊಳ್ಳಿರಿ.” (ಮತ್ತಾಯ 4:17) ಇನ್ನೂ ಹೆಚ್ಚಾಗಿ, ರಾಜ್ಯದ ಸುವಾರ್ತೆಯನ್ನು ಘೋಷಿಸುವುದರಲ್ಲಿ ಅವನೊಂದಿಗೆ ಪಾಲಿಗರಾಗಲು ಅವನು ಶಿಷ್ಯರನ್ನು ಒಟ್ಟುಗೂಡಿಸಿದನು ಮತ್ತು ತರಬೇತಿಗೊಳಿಸಿದನು. ಯೆಹೂದ್ಯರ ಅಧಿಪತಿಗಳು ಹೇಗೆ ಪ್ರತಿಕ್ರಿಯಿಸಿದರು? ಅವರು ಯೇಸುವನ್ನು ಹೀನೈಸಿದರು ಮತ್ತು ಕೊನೆಯಲ್ಲಿ ಅವನನ್ನು ಒಂದು ಯಾತನಾ ಕಂಬದ ಮೇಲೆ ಒಂದು ಸಂಕಟಕರ ಮರಣಕ್ಕೆ ಒಪ್ಪಿಸುವ ಹೇಯಕರ ಪಾತಕವನ್ನು ನಡಿಸಿದರು. ತನ್ನ ಜನರೋಪಾದಿ ಇದ್ದ ಯೆಹೂದ್ಯರನ್ನು ಯೆಹೋವನು ತೊರೆದುಬಿಟ್ಟನು. ಈಗ ಆ ಜನಾಂಗದ ತ್ಯಜಿಸುವಿಕೆಯು ಶಾಶ್ವತವಾಗಿತ್ತು.
15. ಪಶ್ಚಾತ್ತಾಪಿ ಯೆಹೂದ್ಯರು ಏನನ್ನು ಸಾಧಿಸಲು ಸುಯೋಗವುಳ್ಳವರಾಗಿದ್ದರು?
15 ಸಾ.ಶ. 33ರ ಪಂಚಾಶತ್ತಮದ ದಿನದಂದು, ಪುನರುತ್ಥಿತ ಯೇಸು ಪವಿತ್ರಾತ್ಮವನ್ನು ಸುರಿಸಿದನು, ಮತ್ತು ಇದು ಅವನ ಶಿಷ್ಯರಿಗೆ, ಬೇಗನೆ ಕೂಡಿಬಂದಿದ್ದ ಯೆಹೂದ್ಯರು ಮತ್ತು ಮತಾಂತರಿಗಳೊಂದಿಗೆ ಬೇರೆ ಬೇರೆ ಭಾಷೆಗಳಲ್ಲಿ ಮಾತಾಡುವಂತೆ ಶಕ್ತರನ್ನಾಗಿ ಮಾಡಿತು. ಗುಂಪನ್ನು ಸಂಬೋಧಿಸುತ್ತಾ, ಅಪೊಸ್ತಲ ಪೇತ್ರನು ಪ್ರಕಟಿಸಿದ್ದು: “ಈ ಯೇಸುವನ್ನೇ ದೇವರು ಎಬ್ಬಿಸಿದನು; ಇದಕ್ಕೆ ನಾವೆಲ್ಲರೂ ಸಾಕ್ಷಿಗಳಾಗಿದ್ದೇವೆ. . . . ಆದದರಿಂದ ನೀವು ಶಿಲುಬೆಗೆ ಹಾಕಿಸಿದ ಈ ಯೇಸುವನ್ನೇ ದೇವರು ಒಡೆಯನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂಬದು ಇಸ್ರಾಯೇಲ್ ಕುಲದವರಿಗೆಲ್ಲಾ ನಿಸ್ಸಂದೇಹವಾಗಿ ತಿಳಿದಿರಲಿ.” ಪ್ರಾಮಾಣಿಕ ಯೆಹೂದ್ಯರು ಹೇಗೆ ಪ್ರತಿಕ್ರಿಯಿಸಿದರು? ‘ಅವರಿಗೆ ಹೃದಯದಲ್ಲಿ ಅಲಗು ನೆಟ್ಟಂತಾಗಿ,’ ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟು, ದೀಕ್ಷಾಸ್ನಾನ ಪಡೆದುಕೊಂಡರು. (ಅ. ಕೃತ್ಯಗಳು 2:32-41) ರಾಜ್ಯ ಸಾರುವಿಕೆಯು ಹೆಚ್ಚುತ್ತಾ ಹೋಯಿತು, ಮತ್ತು 30 ವರ್ಷಗಳೊಳಗೆ ಅದು ‘ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ ಸಾರಲ್ಪಟ್ಟಿತು.’—ಕೊಲೊಸ್ಸೆ 1:23.
16. ಹುಟ್ಟು ಇಸ್ರಾಯೇಲಿನ ಮೇಲೆ ನ್ಯಾಯತೀರ್ಪಿನ ಜಾರಿಗೊಳಿಸುವಿಕೆಗೆ ನಡಿಸಿದ ಘಟನೆಗಳನ್ನು ಯೆಹೋವನು ಹೇಗೆ ಕೌಶಲದಿಂದ ನಿರ್ವಹಿಸಿದನು?
16 ತನ್ನ ತಿರಸ್ಕೃತ ಜನರಾದ ಹುಟ್ಟು ಇಸ್ರಾಯೇಲಿನ ಮೇಲೆ ಯೆಹೋವನು ನ್ಯಾಯತೀರ್ಪನ್ನು ಜಾರಿಗೊಳಿಸಲು ಈಗ ಸಮಯವು ತಕ್ಕದ್ದಾಗಿತ್ತು. ಆಗ ಜ್ಞಾತವಾಗಿದ್ದ ಲೋಕದಾದ್ಯಂತದ ರಾಷ್ಟ್ರಗಳಿಂದ ಹೊರಬಂದ ಅನೇಕ ಸಾವಿರಾರು ಮಂದಿ, ಕ್ರೈಸ್ತ ಸಭೆಗೆ ಹಿಂಡಾಗಿ ಬಂದಿದ್ದರು ಮತ್ತು ಆತ್ಮಿಕ “ದೇವರ ಇಸ್ರಾಯೇಲ್ಯ”ರಾಗಿ ಅಭಿಷೇಕಿಸಲ್ಪಟ್ಟಿದ್ದರು. (ಗಲಾತ್ಯ 6:16) ಆ ಸಮಯದಲ್ಲಿ ಯೆಹೂದ್ಯ ಸಮುದಾಯವಾದರೊ, ದ್ವೇಷ ಮತ್ತು ಪಂಥಾಭಿಮಾನದ ಹಿಂಸಾಚಾರದ ಮಾರ್ಗಕ್ರಮದಲ್ಲಿ ಮುಳುಗಿಹೋಗಿತ್ತು. ‘ಮೇಲಿರುವ ಅಧಿಕಾರಿಗಳಿಗೆ ಅಧೀನರಾಗಿರು’ವುದರ ಕುರಿತಾಗಿ ಪೌಲನು ಏನನ್ನು ಬರೆದಿದ್ದನೊ ಅದಕ್ಕೆ ವಿರುದ್ಧವಾಗಿ, ಅವರು ತಮ್ಮ ಮೇಲೆ ಆಳುತ್ತಿದ್ದ ರೋಮನ್ ಶಕ್ತಿಯ ವಿರುದ್ಧವಾಗಿ ಬಹಿರಂಗವಾಗಿ ದಂಗೆಯೆದ್ದರು. (ರೋಮಾಪುರ 13:1) ಅನಂತರ ಹಿಂಬಾಲಿಸಿದಂತಹ ಘಟನೆಗಳನ್ನು ಯೆಹೋವನು ಕೌಶಲದಿಂದ ನಿರ್ವಹಿಸಿದನೆಂಬುದು ಸುವ್ಯಕ್ತ. ಸಾ.ಶ. 66ನೆಯ ವರ್ಷದಲ್ಲಿ, ಜನರಲ್ ಗ್ಯಾಲಸ್‌ನ ಕೈಕೆಳಗೆ ರೋಮನ್ ಸೈನ್ಯಗಳು ಯೆರೂಸಲೇಮಿಗೆ ಮುತ್ತಿಗೆ ಹಾಕಲು ಮುಂದುವರಿದವು. ಆಕ್ರಮಿಸುತ್ತಿದ್ದ ರೋಮನರು, ದೇವಾಲಯದ ಗೋಡೆಯಲ್ಲಿ ಸುರಂಗ ತೋಡುವಷ್ಟರ ಮಟ್ಟಿಗೆ ಪಟ್ಟಣವನ್ನು ಛೇದಿಸಿದರು. ಜೊಸೀಫಸನ ಐತಿಹಾಸಿಕ ದಾಖಲೆಗಳು ತೋರಿಸುವಂತೆ, ಆ ಪಟ್ಟಣ ಮತ್ತು ಆ ಜನರ ಮೇಲೆ ನಿಜವಾಗಿಯೂ ಸಂಕಟವೊದಗಿಬಂದಿತ್ತು.a ಆದರೆ ಆಕ್ರಮಣಮಾಡುತ್ತಿದ್ದ ಸೈನಿಕರು ಇದ್ದಕ್ಕಿದ್ದಹಾಗೆ ಓಡಿಹೋದರು. ಮತ್ತಾಯ 24:15, 16ರಲ್ಲಿ ದಾಖಲಿಸಲ್ಪಟ್ಟಿರುವ ತನ್ನ ಪ್ರವಾದನೆಯಲ್ಲಿ ಬುದ್ಧಿಹೇಳಲಾಗಿರುವಂತೆ, ಇದು ಯೇಸುವಿನ ಶಿಷ್ಯರಿಗೆ ‘ಬೆಟ್ಟಗಳಿಗೆ ಓಡಿಹೋಗಲು’ ಅವಕಾಶವನ್ನೊದಗಿಸಿತು.
17, 18. (ಎ) ಯಾವ ಸಂಕಟದ ಮೂಲಕ ಯೆಹೋವನು ಯೆಹೂದ್ಯ ಸಮುದಾಯಕ್ಕೆ ನ್ಯಾಯವನ್ನು ತೀರಿಸಿದನು? (ಬಿ) ಯಾವ ನರಪ್ರಾಣಿಯು ‘ಪಾರಾಗಿ ಉಳಿಯಿತು,’ ಮತ್ತು ಇದು ಯಾವುದರ ಛಾಯೆಯಾಗಿತ್ತು?
17 ಆದಾಗಲೂ, ಸಂಕಟದ ಪರಮಾವಧಿಯಲ್ಲಿ ಯೆಹೋವನ ನ್ಯಾಯತೀರ್ಪಿನ ಪೂರ್ಣ ಜಾರಿಗೊಳಿಸುವಿಕೆಯು ಇನ್ನೂ ಬರಲಿತ್ತು. ಸಾ.ಶ. 70ರಲ್ಲಿ, ಈಗ ಜನರಲ್ ಟೈಟಸ್‌ನ ಕೈಕೆಳಗೆ ರೋಮನ್ ಸೈನಿಕರು, ಆಕ್ರಮಿಸಲಿಕ್ಕಾಗಿ ಹಿಂದಿರುಗಿದರು. ಈ ಬಾರಿ ಹೋರಾಟವು ನಿರ್ಣಾಯಕವಾಗಿತ್ತು! ತಮ್ಮೊಳಗೇ ಯುದ್ಧ ಮಾಡುತ್ತಿದ್ದ ಯೆಹೂದ್ಯರು, ರೋಮನರಿಗೆ ಸರಿಸಾಟಿಯಾಗಿರಲಿಲ್ಲ. ಆ ಪಟ್ಟಣವೂ ಅದರ ದೇವಾಲಯವೂ ನೆಲಸಮಮಾಡಲ್ಪಟ್ಟಿತು. ಕೃಶರಾಗಿದ್ದ ಹತ್ತುಲಕ್ಷಕ್ಕಿಂತಲೂ ಹೆಚ್ಚು ಯೆಹೂದ್ಯರು ನರಳಿ ಸತ್ತರು. ಸುಮಾರು 6,00,000 ಶವಗಳು ಪಟ್ಟಣದ ದ್ವಾರಗಳ ಹೊರಗೆ ಎಸೆಯಲ್ಪಟ್ಟವು. ಪಟ್ಟಣವು ಪತನಗೊಂಡ ಅನಂತರ, 97,000 ಯೆಹೂದ್ಯರು ಬಂಧಿಗಳಾಗಿ ಒಯ್ಯಲ್ಪಟ್ಟರು. ಅನೇಕರು ತದನಂತರ ಕತ್ತಿಮಲ್ಲರ ಪ್ರದರ್ಶನಗಳಲ್ಲಿ ಸತ್ತರು. ನಿಜವಾಗಿಯೂ, ಆ ಸಂಕಟದ ವರ್ಷಗಳಲ್ಲಿ ರಕ್ಷಿಸಲ್ಪಟ್ಟ ನರಪ್ರಾಣಿಯು, ಯೊರ್ದನಿನಾಚೆ ಇದ್ದ ಗುಡ್ಡಗಳಿಗೆ ಓಡಿಹೋಗಿದ್ದ ವಿಧೇಯ ಕ್ರೈಸ್ತರು ಮಾತ್ರ ಆಗಿದ್ದರು.—ಮತ್ತಾಯ 24:21, 22; ಲೂಕ 21:20-22.
18 ಈ ರೀತಿಯಲ್ಲಿ, “ವಿಷಯಗಳ ವ್ಯವಸ್ಥೆಯ ಸಮಾಪ್ತಿಯ” (NW) ಕುರಿತಾದ ಯೇಸುವಿನ ಮಹಾನ್ ಪ್ರವಾದನೆಯು, ಅದರ ಪ್ರಥಮ ನೆರವೇರಿಕೆಯನ್ನು ಪಡೆಯಿತು. ಅದು, ಸಾ.ಶ. 66-70ರಲ್ಲಿ ದಂಗೆಕೋರ ಯೆಹೂದಿ ಜನಾಂಗದ ಮೇಲೆ ನ್ಯಾಯವನ್ನು ತೀರಿಸುವ ಯೆಹೋವನ ದಿನದಲ್ಲಿ ಅಂತ್ಯಗೊಂಡಿತು. (ಮತ್ತಾಯ 24:3-22) ಆದರೂ, ಅದು ಬಲು ಬೇಗನೆ ಇಡೀ ಲೋಕವನ್ನು ಸುತ್ತುವರಿಯಲಿರುವ ಕೊನೆಯ ಸಂಕಟದ, “ಯೆಹೋವನ ಆಗಮನದ ಭಯಂಕರವಾದ ಮಹಾದಿನ”ದ ಛಾಯೆಯಾಗಿತ್ತಷ್ಟೇ. (ಯೋವೇಲ 2:30) ನೀವು ಹೇಗೆ ‘ಸುರಕ್ಷಿತವಾಗಿ ಪಾರಾಗಬಹುದು?’ ಮುಂದಿನ ಲೇಖನವು ತಿಳಿಸುವುದು.
[ಅಧ್ಯಯನ ಪ್ರಶ್ನೆಗಳು]
a ಆಕ್ರಮಿಸುತ್ತಿದ್ದ ರೋಮನರು ಪಟ್ಟಣವನ್ನು ಸುತ್ತುವರಿದು, ಗೋಡೆಯಲ್ಲಿ ಸುರಂಗವನ್ನು ತೋಡಿ, ಯೆಹೋವನ ದೇವಾಲಯದ ದ್ವಾರಕ್ಕೆ ಇನ್ನೇನು ಬೆಂಕಿಯನ್ನಿಡಲಿದ್ದರು ಎಂದು ಜೊಸೀಫಸನು ತಿಳಿಸುತ್ತಾನೆ. ಇದು ಒಳಗೆ ಸಿಕ್ಕಿಬಿದ್ದಿದ್ದ ಅನೇಕ ಯೆಹೂದ್ಯರ ನಡುವೆ ಭಾರಿ ಭಯವನ್ನುಂಟುಮಾಡಿತು, ಯಾಕಂದರೆ ಮರಣವು ಸನ್ನಿಹಿತವಾಗುತ್ತಿರುವುದನ್ನು ಅವರು ನೋಡಸಾಧ್ಯವಿತ್ತು.—ಯೆಹೂದ್ಯರ ಯುದ್ಧಗಳು, (ಇಂಗ್ಲಿಷ್) ಪುಸ್ತಕ II, ಅಧ್ಯಾಯ 19.
ಪುನರ್ವಿಮರ್ಶೆಗಾಗಿ ಪ್ರಶ್ನೆಗಳು
◻ “ಕರ್ತನ ದಿನ”ವು “ಯೆಹೋವನ ದಿನ”ದೊಂದಿಗೆ ಹೇಗೆ ಸಂಬಂಧಿಸಿದೆ?
◻ ನೋಹನ ದಿನವನ್ನು ಪುನರ್ವಿಮರ್ಶಿಸುತ್ತಾ, ನಾವು ಯಾವ ಎಚ್ಚರಿಕೆಯನ್ನು ಪಾಲಿಸತಕ್ಕದ್ದು?
◻ ಸೊದೋಮ್ ಗೊಮೋರಗಳು ಒಂದು ಬಲವಾದ ಪಾಠವನ್ನು ಹೇಗೆ ಒದಗಿಸುತ್ತವೆ?
◻ ಪ್ರಥಮ ಶತಮಾನದ “ಮಹಾ ಸಂಕಟ”ದಲ್ಲಿ ಯಾರು ರಕ್ಷಿಸಲ್ಪಟ್ಟರು?
[ಪುಟ 15 ರಲ್ಲಿರುವ ಚಿತ್ರ]
ನೋಹ ಮತ್ತು ಲೋಟನ ಕುಟುಂಬಗಳಿಗೆ, ಹಾಗೂ ಸಾ.ಶ.ಪೂ. 607ರಲ್ಲಿ ಮತ್ತು ಸಾ.ಶ. 70ರಲ್ಲಿ ಯೆಹೋವನು ರಕ್ಷಣೆಯನ್ನು ಒದಗಿಸಿದನು