ಯೆಹೋವನು ಸಹಾನುಭೂತಿಯಿಂದ ಆಳುತ್ತಾನೆ
ಇತಿಹಾಸದಾದ್ಯಂತ ಅನೇಕ ಮಾನವ ಶಾಸಕರು, ತಮ್ಮ ಪ್ರಜೆಗಳ ಕಷ್ಟಾನುಭವಕ್ಕೆ ನಿರ್ದಯವಾಗಿ ಅಧಿಕಾರವನ್ನು ಪ್ರಯೋಗಿಸಿದ್ದಾರೆ. ಆದರೆ, ಇಸ್ರಾಯೇಲ್ ಜನಾಂಗವನ್ನು ಆರಿಸಿಕೊಂಡು, ಸಹಾನುಭೂತಿಯಿಂದ ಅದರ ಮೇಲೆ ಆಳಿಕೆ ನಡೆಸುವ ಮೂಲಕ ಯೆಹೋವನು ಒಂದು ವೈದೃಶ್ಯವನ್ನು ಒದಗಿಸಿದನು.
ಪ್ರಾಚೀನ ಐಗುಪ್ತದಲ್ಲಿ ಇಸ್ರಾಯೇಲ್ಯರು ಇನ್ನೂ ದಾಸರಾಗಿದ್ದಾಗ, ಸಹಾಯಕ್ಕಾಗಿ ಅವರು ಮೊರೆಯಿಟ್ಟಾಗ ಯೆಹೋವನು ಆಲಿಸಿದನು. “ಅವರು ಶ್ರಮೆಪಡುತ್ತಿರುವಾಗೆಲ್ಲಾ ಆತನೂ ಶ್ರಮೆಪಟ್ಟನು; . . . ತನ್ನಲ್ಲಿನ ಮಮತೆಯಿಂದಲೂ ತಾಳ್ಮೆಯಿಂದಲೂ ಅವರನ್ನು ವಿಮೋಚಿಸಿ”ದನು. (ಯೆಶಾಯ 63:9) ಯೆಹೋವನು ಇಸ್ರಾಯೇಲನ್ನು ರಕ್ಷಿಸಿ, ಅದ್ಭುತಕರವಾಗಿ ಅವರಿಗೆ ಆಹಾರವನ್ನು ಒದಗಿಸಿ, ಅವರ ಸ್ವದೇಶಕ್ಕೆ ಅವರನ್ನು ವಿಮೋಚಿಸಿದನು.
ಯೆಹೋವನ ಸಹಾನುಭೂತಿಯ ಗುಣವು ಇನ್ನೂ ಹೆಚ್ಚಾಗಿ, ಆತನು ಈ ಜನಾಂಗಕ್ಕೆ ಕೊಟ್ಟ ನಿಯಮಗಳಲ್ಲಿಯೂ ತೋರಿಬಂತು. ಅನಾಥರು, ವಿಧವೆಯರು, ಮತ್ತು ಅನ್ಯರೊಂದಿಗೆ ಸಹಾನುಭೂತಿಯಿಂದ ವ್ಯವಹರಿಸುವಂತೆ ಆತನು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು. ದುರ್ಬಲರನ್ನು ಅವರು ಅನುಚಿತವಾಗಿ ಸ್ವಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳಬಾರದಿತ್ತು.
ಅಗತ್ಯದಲ್ಲಿರುವವರಿಗೆ ಸಹಾನುಭೂತಿಯನ್ನು ತೋರಿಸುವಂತೆ ಧರ್ಮಶಾಸ್ತ್ರವು ಕೇಳಿಕೊಂಡಿತು. ಕೊಯ್ಲಿನ ತರುವಾಯ ಬಡ ಜನರು ಉಳಿದದ್ದನ್ನು ಸಂಗ್ರಹಿಸಬಹುದಿತ್ತು. ಸಾಲಗಳು ಸಬ್ಬತ್ (ಏಳನೆಯ) ವರ್ಷದಲ್ಲಿ ರದ್ದುಮಾಡಲ್ಪಟ್ಟವು. ಮಾರಲ್ಪಟ್ಟಿದ್ದ ಎಲ್ಲ ಪಿತ್ರಾರ್ಜಿತ ಜಮೀನು, ಜೂಬಿಲಿ (50ನೆಯ) ವರ್ಷದಲ್ಲಿ ಹಿಂದಿರುಗಿಸಲ್ಪಡಬೇಕಾಗಿತ್ತು. ಪ್ರಾಚೀನ ಇಸ್ರಾಯೇಲ್—ಅದರ ಜೀವನ ಮತ್ತು ಸಂಸ್ಥೆಗಳು (ಇಂಗ್ಲಿಷ್) ಎಂಬ ಪುಸ್ತಕವು ವರದಿಸುವುದು: “ಇಸ್ರಾಯೇಲಿನಲ್ಲಿ, ಆಧುನಿಕ ಅರ್ಥದಲ್ಲಿ ಸಾಮಾಜಿಕ ವರ್ಗಗಳು ನಿಜವಾಗಿಯೂ ಅಸ್ತಿತ್ವದಲ್ಲೇ ಇರಲಿಲ್ಲ.” “ನೆಲಸುನಾಡಿನ ಆರಂಭದ ದಿನಗಳಲ್ಲಿ, ಎಲ್ಲ ಇಸ್ರಾಯೇಲ್ಯರು ಹೆಚ್ಚುಕಡಿಮೆ ಒಂದೇ ರೀತಿಯ ಜೀವನ ಮಟ್ಟವನ್ನು ಅನುಭವಿಸಿದರು.”—ಯಾಜಕಕಾಂಡ 25:10; ಧರ್ಮೋಪದೇಶಕಾಂಡ 15:12-14; 24:17-22; 27:18.
ಯೆಹೋವನ ಸಹಾನುಭೂತಿಯನ್ನು ಅನುಕರಿಸುವುದು
ದೇವರ ಸೇವಕರು ಆತನ ಸಹಾನುಭೂತಿಯಿಂದ ಪ್ರೇರಿಸಲ್ಪಟ್ಟಿದ್ದಾರೆ. ಉದಾಹರಣೆಗೆ, ಇತಿಹಾಸದಾದ್ಯಂತ, ಹೊಸ ರಾಜರಲ್ಲಿ ಕೆಲವರು ಹಿಂದಿನ ರಾಜಯೋಗ್ಯ ಮನೆತನದಲ್ಲಿ ಬದುಕಿ ಉಳಿದಿರುವ ಸದಸ್ಯರನ್ನು ಕೊಂದಿದ್ದಾರೆ. ಆದರೆ ಯೆಹೋವನ ಸೇವಕನಾದ ದಾವೀದನು ಹಾಗೆ ಮಾಡಲಿಲ್ಲ. ರಾಜ ಸೌಲನ ಮರಣದ ತರುವಾಯ, ಬದುಕಿ ಉಳಿದಿರುವ ಸೌಲನ ಮೊಮ್ಮಗ ಮತ್ತು ವಾರಸುದಾರನಾದ ಮೆಫೀಬೋಶೆತನನ್ನು ದಾವೀದನು ರಕ್ಷಿಸಿದನು. “ದಾವೀದನು . . . ಸೌಲನ ಮೊಮ್ಮಗನೂ ಯೋನಾತಾನನ ಮಗನೂ ಆದ ಮೆಫೀಬೋಶೆತನನ್ನು ಉಳಿಸಿದನು.”—2 ಸಮುವೇಲ 21:7.
ಯೆಹೋವನ ಸಹಾನುಭೂತಿಯನ್ನು ಯೇಸು ಅನುಕರಿಸಿದಂತೆ ಬೇರೆ ಯಾವ ಮಾನವನೂ ಅನುಕರಿಸಿರುವುದಿಲ್ಲ. ಅವನ ಅದ್ಭುತಕಾರ್ಯಗಳಲ್ಲಿ ಅನೇಕ ಅದ್ಭುತಗಳು, ದೈವಿಕ ಸಹಾನುಭೂತಿಯಿಂದ ಪ್ರಚೋದಿಸಲ್ಪಟ್ಟವು. ಒಂದು ಸಂದರ್ಭದಲ್ಲಿ ಕುಷ್ಠರೋಗಿಯೊಬ್ಬನು ಅವನಲ್ಲಿ ಬೇಡಿಕೊಂಡದ್ದು: “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ.” ಯೇಸು ಕನಿಕರಪಟ್ಟು, ಹೀಗೆ ಹೇಳುತ್ತಾ ಅವನನ್ನು ಸ್ಪರ್ಶಿಸಿದನು: “ನನಗೆ ಮನಸ್ಸುಂಟು; ಶುದ್ಧವಾಗು.” (ಮಾರ್ಕ 1:40-42) ಮತ್ತೊಂದು ಸಲ ದೊಡ್ಡ ಸಮೂಹಗಳು ಯೇಸುವನ್ನು ಹಿಂಬಾಲಿಸಿದವು. ಅಷ್ಟೊಂದು ಕೋಲಾಹಲದ ಮಧ್ಯೆಯೂ, ಹೀಗೆ ಕೂಗಿಕೊಂಡ ಇಬ್ಬರು ಕುರುಡರ ಕಡೆಗೆ ಯೇಸು ಗಮನಹರಿಸಿದನು: “ಸ್ವಾಮೀ, ದಾವೀದನ ಕುಮಾರನೇ, ನಮ್ಮನ್ನು ಕರುಣಿಸು . . . ಯೇಸು ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದನು. ಕೂಡಲೆ ಅವರಿಗೆ ಕಣ್ಣು ಬಂದವು.”—ಮತ್ತಾಯ 20:29-34.
ಇತರರಿಗಾಗಿ ಯೇಸುವಿನಲ್ಲಿದ್ದ ಅನಿಸಿಕೆಗಳನ್ನು ದೊಡ್ಡ ಸಮೂಹಗಳು ಜಡಗೊಳಿಸಲಿಲ್ಲ. ಅವರು ಸ್ವಲ್ಪ ಸಮಯದ ವರೆಗೆ ತಿನ್ನದೆ ಇದ್ದ ಕಾರಣ, “ಈ ಜನರನ್ನು ನೋಡಿ ಕನಿಕರಪಡುತ್ತೇನೆ” ಎಂಬುದಾಗಿ ಅವನು ಒಂದು ಸಂದರ್ಭದಲ್ಲಿ ಹೇಳಿದನು. ಆದುದರಿಂದ ಅವನು ಅದ್ಭುತಕರವಾಗಿ ಅವರನ್ನು ಉಣಿಸಿದನು. (ಮಾರ್ಕ 8:1-8) ಯೇಸು ಸಂಚಾರ ಮಾಡಿದಾಗ, ಅವನು ಜನಸಮೂಹಗಳಿಗೆ ಕಲಿಸಿದನು ಮಾತ್ರವಲ್ಲ, ಅವರ ಅಗತ್ಯಗಳ ಕಡೆಗೆ ಲಕ್ಷ್ಯಕೊಡುವವನೂ ಆಗಿದ್ದನು. (ಮತ್ತಾಯ 9:35, 36) ಅಂತಹ ಒಂದು ಪ್ರಯಾಣದ ಬಳಿಕ, ಯೇಸು ಮತ್ತು ಅವನ ಶಿಷ್ಯರಿಗೆ ಊಟಮಾಡಲೂ ಬಿಡುವಿರಲಿಲ್ಲ. ಬೈಬಲಿನ ವೃತ್ತಾಂತವು ನಮಗೆ ಹೇಳುವುದು: “ಆಗ ಅವರು ದೋಣಿಯಲ್ಲಿ ಹೊರಟು ವಿಂಗಡವಾಗಿ ಅಡವಿಗೆ ಹೋದರು. ಅವರು ಹೋಗುವದನ್ನು ಬಹು ಜನರು ಕಂಡು ಅವರ ಗುರುತನ್ನು ಹಿಡಿದು ಎಲ್ಲಾ ಊರುಗಳಿಂದ ಕಾಲುನಡಿಗೆಯಾಗಿ ಓಡಿ ಅವರಿಗಿಂತ ಮುಂಚೆ ಅಲ್ಲಿ ಸೇರಿದರು. ಆತನು ಹೊರಗೆ ಬಂದು ಬಹುಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶಮಾಡುತ್ತಿದ್ದನು.”—ಮಾರ್ಕ 6:31-34.
ಯೇಸುವಿನ ಮನ ಕರಗಿಸಿದ ವಿಷಯವು, ಕೇವಲ ಜನರ ಅನಾರೋಗ್ಯ ಹಾಗೂ ಬಡತನವಾಗಿರಲಿಲ್ಲ, ಅವರ ಆತ್ಮಿಕ ಸ್ಥಿತಿಯಾಗಿತ್ತು. ಅವರ ಮುಖ್ಯಸ್ಥರು ಅವರನ್ನು ದುರುಪಯೋಗಿಸಿಕೊಳ್ಳುತ್ತಿದ್ದರು, ಆದುದರಿಂದ ಯೇಸು ಅವರಿಗಾಗಿ “ಕನಿಕರಪಟ್ಟ”ನು. ‘ಕನಿಕರಪಡು’ ಎಂಬ ಪದಕ್ಕಿರುವ ಗ್ರೀಕ್ ಶಬ್ದವು, “ಕರುಳು ಹಾತೊರೆಯುವ ಅನಿಸಿಕೆಯಾಗುವುದು” ಎಂಬ ಅರ್ಥವುಳ್ಳದ್ದಾಗಿದೆ. ನಿಶ್ಚಯವಾಗಿಯೂ ಯೇಸು ಒಬ್ಬ ಸಹಾನುಭೂತಿಯುಳ್ಳ ಮನುಷ್ಯನಾಗಿದ್ದನು!
ಒಂದು ಕ್ರೂರ ಲೋಕದಲ್ಲಿ ಸಹಾನುಭೂತಿ
ಯೇಸು ಕ್ರಿಸ್ತನು ಈಗ ಯೆಹೋವನ ಸ್ವರ್ಗೀಯ ರಾಜ್ಯದ ಅರಸನಾಗಿದ್ದಾನೆ. ದೇವರು ಪ್ರಾಚೀನ ಇಸ್ರಾಯೇಲ್ನಲ್ಲಿ ಮಾಡಿದಂತೆ, ಇಂದು ತನ್ನ ಜನರನ್ನು ಸಹಾನುಭೂತಿಯಿಂದ ಆಳುತ್ತಾನೆ. “ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ನಾನು ಕಾರ್ಯಸಾಧಿಸುವ ದಿನದಲ್ಲಿ ಅವರು ನನಗೆ ಸ್ವಕೀಯ ಜನರಾಗಿರುವರು; . . . ನಾನು ಅವರನ್ನು ಕರುಣಿಸುವೆನು.”—ಮಲಾಕಿಯ 3:17.
ಯೆಹೋವನ ಸಹಾನುಭೂತಿಯನ್ನು ಪಡೆದುಕೊಳ್ಳಲು ಬಯಸುವವರು, ಆತನ ಮಾರ್ಗಗಳನ್ನು ಅನುಕರಿಸಬೇಕು. ಅಗತ್ಯದಲ್ಲಿರುವವರಿಗೆ ಸಹಾಯ ಮಾಡುವುದಕ್ಕಿಂತಲೂ, ಜನರು ತಮ್ಮ ಜೀವನ ಶೈಲಿಯನ್ನು ಕಾಪಾಡಿಕೊಳ್ಳುವುದರಲ್ಲಿ ಹೆಚ್ಚು ಆಸಕ್ತರಾಗಿರುವ ಒಂದು ಲೋಕದಲ್ಲಿ ನಾವು ಜೀವಿಸುತ್ತೇವೆ ನಿಜ. ಅಧಿಕಾರದಲ್ಲಿರುವ ಪುರುಷರು, ಕಾರ್ಮಿಕರ ಹಾಗೂ ಗ್ರಾಹಕರ ಸುರಕ್ಷತೆಯ ನಷ್ಟದಲ್ಲಿ ಲಾಭವನ್ನು ಪಡೆದುಕೊಳ್ಳಲು ಅನೇಕ ವೇಳೆ ಪ್ರಯತ್ನಿಸುತ್ತಾರೆ. ಅನೇಕರ ಹೃದಯಗಳಲ್ಲಿನ ಸಹಾನುಭೂತಿಯನ್ನು ತೊಡೆದುಹಾಕಿರುವ ನಮ್ಮ ಸಮಯದ ನೈತಿಕ ಪರಿಸ್ಥಿತಿಯನ್ನು, ಬೈಬಲು 2 ತಿಮೊಥೆಯ 3:1-4ರಲ್ಲಿ ನಿಷ್ಕೃಷ್ಟವಾಗಿ ವರ್ಣಿಸುತ್ತದೆ.
ಆದರೂ, ಸಹಾನುಭೂತಿಯನ್ನು ತೋರಿಸುವ ಅವಕಾಶಗಳನ್ನು ನಾವು ಬಹುಶಃ ಕಂಡುಕೊಳ್ಳಬಲ್ಲೆವು. ನಾವು ನಮ್ಮ ನೆರೆಯವರಿಗೆ ಅಗತ್ಯವಿರುವ ಒಂದಿಷ್ಟು ನೆರವನ್ನು ನೀಡಸಾಧ್ಯವಿದೆಯೊ? ನಾವು ಭೇಟಿಮಾಡಸಾಧ್ಯವಿರುವ ಅಸ್ವಸ್ಥರು ಯಾರಾದರು ಇದ್ದಾರೊ? “ಮನಗುಂದಿದವರನ್ನು ಧೈರ್ಯಪಡಿಸಿರಿ [“ಸಂತೈಸಿರಿ,” NW], ಬಲಹೀನರಿಗೆ ಆಧಾರವಾಗಿರಿ” ಎಂಬ ಬುದ್ಧಿವಾದಕ್ಕನುಗುಣವಾಗಿ, ಮನಗುಂದಿದವರನ್ನು ನಾವು ಹುರಿದುಂಬಿಸಸಾಧ್ಯವಿದೆಯೊ?—1 ಥೆಸಲೊನೀಕ 5:14.
ಇತರರು ತಪ್ಪುಮಾಡುವಾಗ ಕಠೋರವಾಗಿ ಪ್ರತಿವರ್ತಿಸುವುದರಿಂದ ದೂರವಿರಲು ಸಹ ಸಹಾನುಭೂತಿಯು ನಮಗೆ ಸಹಾಯ ಮಾಡುವುದು. ನಾವು ಹೀಗೆ ಹೇಳಲ್ಪಟ್ಟಿದ್ದೇವೆ: “ಎಲ್ಲಾ ದ್ವೇಷ ಕೋಪ ಕ್ರೋಧ ಕಲಹ ದೂಷಣೆ ಇವುಗಳನ್ನೂ ಸಕಲ ವಿಧವಾದ ದುಷ್ಟತನವನ್ನೂ ನಿಮ್ಮಿಂದ ದೂರ ಮಾಡಿರಿ. ಒಬ್ಬರಿಗೊಬ್ಬರು ಉಪಕಾರಿಗಳಾಗಿಯೂ ಕರುಣೆಯುಳ್ಳವರಾಗಿಯೂ ಕ್ಷಮಿಸುವವರಾಗಿಯೂ ಇರ್ರಿ. ದೇವರು ನಿಮಗೆ ಕ್ರಿಸ್ತನಲ್ಲಿ ಕ್ಷಮಿಸಿದನಲ್ಲಾ.”—ಎಫೆಸ 4:31, 32.
ಅಧಿಕಾರವನ್ನು ಅಪಪ್ರಯೋಗಿಸುವ ಪ್ರವೃತ್ತಿಯಿಂದ ದೂರವಿರುವಂತೆ ಸಹಾನುಭೂತಿಯು ನಮಗೆ ಸಹಾಯ ಮಾಡುವುದು. ಬೈಬಲು ಹೇಳುವುದು: “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.” (ಕೊಲೊಸ್ಸೆ 3:12) ದೀನಭಾವವು, ನಮ್ಮ ಮೇಲ್ವಿಚಾರಣೆಯ ಕೆಳಗಿರುವವರ ಸ್ಥಾನದಲ್ಲಿ ನಮ್ಮನ್ನೇ ನಾವು ಇರಿಸಿಕೊಳ್ಳುವಂತೆ ಶಕ್ತಗೊಳಿಸುತ್ತದೆ. ಸಹಾನುಭೂತಿಯುಳ್ಳವರಾಗಿರುವುದು, ಮೆಚ್ಚಿಸಲು ಕಠಿನರಾಗಿರುವುದಕ್ಕಿಂತಲೂ ನಮ್ರರೂ ವಿವೇಚನೆಯುಳ್ಳವರೂ ಆಗಿರುವುದನ್ನು ಒಳಗೊಳ್ಳುತ್ತದೆ. ಜನರನ್ನು ಒಂದು ಯಂತ್ರದ ಬರಿಯ ಭಾಗಗಳಾಗಿ ಉಪಚರಿಸುವುದಕ್ಕೆ, ಕಾರ್ಯ ಸಮರ್ಥತೆಯು ಒಂದು ಕಾರಣವಾಗಿರಬಾರದು. ಮತ್ತು ಕುಟುಂಬದಲ್ಲಿಯೂ, ತಮ್ಮ ಹೆಂಡತಿಯರು ನಿರ್ಬಲರಾಗಿದ್ದಾರೆಂದು ಸಹಾನುಭೂತಿಯುಳ್ಳ ಗಂಡಂದಿರು ಜ್ಞಾಪಕದಲ್ಲಿಟ್ಟುಕೊಳ್ಳುತ್ತಾರೆ. (1 ಪೇತ್ರ 3:7) ಯೇಸುವಿನ ಸಹಾನುಭೂತಿಯುಳ್ಳ ಮಾದರಿಯ ಬಗ್ಗೆ ಚಿಂತನೆಮಾಡುವುದು, ಇವೆಲ್ಲವುಗಳಲ್ಲಿ ನಮಗೆ ಸಹಾಯ ಮಾಡಬಲ್ಲದು.
ತನ್ನ ಭೂಶುಶ್ರೂಷೆಯ ಸಮಯದಲ್ಲಿ ಯೇಸುವಿಗೆ ಜನರ ಪರವಾಗಿ ಅಷ್ಟೊಂದು ಅಗಾಧವಾದ ಅನಿಸಿಕೆಯಾದ ಕಾರಣ, ಅವನು ಈಗಲೂ ಭವಿಷ್ಯತ್ತಿನಲ್ಲಿಯೂ ಒಬ್ಬ ಸಹಾನುಭೂತಿಯುಳ್ಳ ಶಾಸಕನಾಗಿ ಮುಂದುವರಿಯುವನೆಂಬ ವಿಷಯದಲ್ಲಿ ನಾವು ಖಚಿತರಾಗಿರಬಲ್ಲೆವು. ಕೀರ್ತನೆ 72 ಅವನ ವಿಷಯದಲ್ಲಿ ಪ್ರವಾದನಾತ್ಮಕವಾಗಿ ಹೇಳುವುದು: “ಅವನು ಬಡವರ ನ್ಯಾಯವನ್ನು ಸ್ಥಾಪಿಸಲಿ; ದೀನರ ಮಕ್ಕಳನ್ನು ಉದ್ಧರಿಸಲಿ; ಪ್ರಜಾಹಿಂಸಕರನ್ನು ಖಂಡಿಸಿಬಿಡಲಿ. ಅವನು ಸಮುದ್ರದಿಂದ ಸಮುದ್ರದ ವರೆಗೂ [ಯೂಫ್ರೇಟೀಸ್] ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಆಳಲಿ. ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.”—ಕೀರ್ತನೆ 72:4, 8, 13.
ದೇವರ ವಾಕ್ಯವು ಮುಂತಿಳಿಸುವುದು: ಅವನು “ನ್ಯಾಯವಾಗಿ ತೀರ್ಪುಮಾಡುವನು, ಲೋಕದ ದೀನರಿಗೋಸ್ಕರ ಧರ್ಮವಾಗಿ ನಿರ್ಣಯಿಸುವನು; . . . ದುಷ್ಟರನ್ನು . . . ಕೊಲ್ಲುವನು.” ಕೆಲವು ಕ್ರೂರ, ಮೃಗದಂತಹ ಜನರು ಸಹ ತಮ್ಮ ಮಾರ್ಗಗಳನ್ನು ಬದಲಾಯಿಸಿಕೊಳ್ಳುವರೆಂಬುದನ್ನು ವರ್ಣಿಸುತ್ತಾ, ಆ ಪ್ರವಾದನೆಯು ಮುಂದುವರಿಸುವುದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” (ಯೆಶಾಯ 11:4-9) ಈ ಪ್ರವಾದನೆಯು ವಾಸ್ತವವಾಗಿ, ಯೆಹೋವನನ್ನು ಅರಿತುಕೊಂಡಿರುವ ಮತ್ತು ಆತನ ಸಹಾನುಭೂತಿಯುಳ್ಳ ಮಾರ್ಗಗಳನ್ನು ಅನುಕರಿಸುವ ಜನರ ಭೂವ್ಯಾಪಕ ಸಮಾಜವನ್ನು ವಾಗ್ದಾನಿಸುತ್ತದೆ!