ಗೊಂದಲದ ಮಧ್ಯೆಯೂ—ಕ್ರಿಯಾಶೀಲವಾದ ಕ್ರೈಸ್ತತ್ವ
ಎಲ್ಲವೂ ಏಪ್ರಿಲ್ 1994ರಲ್ಲಿ ಒಂದು ದಿನ ಥಟ್ಟನೆ ಆರಂಭಗೊಂಡಿತು. ಒಂದು ವಿಮಾನ ಅಪಘಾತವು ಬುರುಂಡಿ ಮತ್ತು ರುಆಂಡದ ಅಧ್ಯಕ್ಷರನ್ನು ಕೊಂದಿತು. ಕೆಲವೇ ತಾಸುಗಳೊಳಗೆ ಭಯಂಕರ ಪ್ರಮಾಣದ ಹಿಂಸಾಚಾರವು ರುಆಂಡವನ್ನು ಆವರಿಸಿತು. ಮೂರು ತಿಂಗಳುಗಳಿಗಿಂತ ತುಸು ಹೆಚ್ಚು ಸಮಯದೊಳಗೆ, ಸ್ತ್ರೀಪುರುಷರು ಮತ್ತು ಮಕ್ಕಳನ್ನೊಳಗೊಂಡ 5,00,000ಕ್ಕೂ ಹೆಚ್ಚು ರುಆಂಡದ ಜನರು ಸತ್ತರು. ಕೆಲವರು ಈ ಸಮಯವನ್ನು “ಜನಾಂಗಹತ್ಯೆ”ಯೆಂದು ಸೂಚಿಸಿ ಕರೆಯುತ್ತಾರೆ.
ರುಆಂಡದ 75 ಲಕ್ಷ ನಿವಾಸಿಗಳಲ್ಲಿ ಅರ್ಧಾಂಶ ನಿವಾಸಿಗಳು ಓಡಿಹೋಗಬೇಕಾಯಿತು. ಇದರಲ್ಲಿ ನೆರೆಹೊರೆಯ ದೇಶಗಳಲ್ಲಿ ಆಶ್ರಯವನ್ನು ಹುಡುಕಿದ 24 ಲಕ್ಷ ಮಂದಿಯಿದ್ದರು. ಆಧುನಿಕ ಇತಿಹಾಸದಲ್ಲಿಯೇ ಇದು ನಿರಾಶ್ರಿತರ ಅತಿ ದೊಡ್ಡ ಮತ್ತು ಅತಿ ವೇಗದ ಸಾಮೂಹಿಕ ನಿರ್ಗಮನವಾಗಿತ್ತು. ಸಾಯಿರ್ (ಈಗ ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊ), ಟಾನ್ಸೇನಿಯ ಮತ್ತು ಬುರುಂಡಿಯಲ್ಲಿ ನಿರಾಶ್ರಿತ ಶಿಬಿರಗಳನ್ನು ಬೇಗನೆ ಸ್ಥಾಪಿಸಲಾಯಿತು. ಈ ಶಿಬಿರಗಳಲ್ಲಿ ಕೆಲವು—ಜಗತ್ತಿನಲ್ಲಿಯೇ ಅತಿ ದೊಡ್ಡವು—2,00,000 ಜನರಿಗೆ ಆಶ್ರಯಕೊಟ್ಟವು.
ನಿರಾಶ್ರಿತರ ಮಧ್ಯೆ, ಶಾಂತಿಪ್ರಿಯರೂ, ತಮ್ಮ ಜೀವಿತಗಳಲ್ಲಿ ಬೈಬಲ್ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವವರೂ ಆದ ಅನೇಕ ಮಂದಿ ಯೆಹೋವನ ಸಾಕ್ಷಿಗಳಿದ್ದರು. ಅವರು ಯಾವುದೇ ದೇಶದಲ್ಲಿ ಜೀವಿಸಲಿ, ಅವರು ಕಟ್ಟುನಿಟ್ಟಾದ ತಾಟಸ್ಥ್ಯವನ್ನು ಕಾಪಾಡಿಕೊಂಡು, ಯೆಶಾಯ 2:4ರ ಈ ಮಾತುಗಳಲ್ಲಿ ಅಡಕವಾಗಿರುವ ಮೂಲತತ್ವವನ್ನು ಅನ್ವಯಿಸಿಕೊಳ್ಳುತ್ತಾರೆ: “ಅವರೋ ತಮ್ಮ [ಆಯುಧಗಳನ್ನು] ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” ರುಆಂಡದ ಜನಾಂಗಹತ್ಯೆಯಲ್ಲಿ ಭಾಗವಹಿಸದಿದ್ದ ಧಾರ್ಮಿಕ ಗುಂಪೆಂದು ಯೆಹೋವನ ಸಾಕ್ಷಿಗಳನ್ನು ವ್ಯಾಪಕವಾಗಿ ಗುರುತಿಸಲಾಗುತ್ತಿದೆ.
ತನ್ನ ಹಿಂಬಾಲಕರು “ಲೋಕದ ಭಾಗವಾಗಿಲ್ಲ” (NW) ಎಂದು ಯೇಸು ಹೇಳಿದನು. ಆದರೆ ಅವರು “ಲೋಕದಲ್ಲಿ” ಇರುವುದರಿಂದ, ಜನಾಂಗಗಳ ಗೊಂದಲಗಳಿಂದ ಅವರು ಯಾವಾಗಲೂ ತಪ್ಪಿಸಿಕೊಳ್ಳಲಾರರು. (ಯೋಹಾನ 17:11, 14) ರುಆಂಡದ ಜನಾಂಗಹತ್ಯೆಯ ಸಮಯದಲ್ಲಿ, ಸುಮಾರು 400 ಮಂದಿ ಸಾಕ್ಷಿಗಳು ಪ್ರಾಣನಷ್ಟಪಟ್ಟರು. ಸುಮಾರು 2,000 ಮಂದಿ ಸಾಕ್ಷಿಗಳೂ ರಾಜ್ಯವಾರ್ತಾಸಕ್ತರೂ ನಿರಾಶ್ರಿತರಾದರು.
ಲೋಕದ ಭಾಗವಾಗಿಲ್ಲದಿರುವ ಕಾರಣ, ವಿಪತ್ತು ಬರುವಾಗ ಯೆಹೋವನ ಸಾಕ್ಷಿಗಳು ಸುಮ್ಮನಿರುತ್ತಾರೆಂಬುದು ಇದರ ಅರ್ಥವೊ? ಇಲ್ಲ. ದೇವರ ವಾಕ್ಯವು ಹೇಳುವುದು: “ಒಬ್ಬ ಸಹೋದರನಿಗೆ ಇಲ್ಲವೆ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದೆ ಇರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದದ್ದನ್ನು ಕೊಡದೆ—ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆತುಂಬಿಸಿಕೊಳ್ಳಿ ಎಂದು ಬರೀ ಮಾತು ಹೇಳಿದರೆ ಪ್ರಯೋಜನವೇನು? ಹಾಗೆಯೇ ಕ್ರಿಯೆಗಳಿಲ್ಲದಿದ್ದರೆ ನಂಬಿಕೆಯು ತನ್ನಲ್ಲಿ ಜೀವವಿಲ್ಲದ್ದು.” (ಯಾಕೋಬ 2:15-17) ನೆರೆಯವರ ಮೇಲಿನ ಪ್ರೀತಿಯು, ತಮ್ಮ ಧಾರ್ಮಿಕ ವೀಕ್ಷಣಗಳಲ್ಲಿ ಪಾಲಿಗರಾಗಿರದವರಿಗೂ ಸಹಾಯಮಾಡಲು ಸಾಕ್ಷಿಗಳನ್ನು ಪ್ರೇರಿಸುತ್ತದೆ.—ಮತ್ತಾಯ 22:37-40.
ರುಆಂಡದಲ್ಲಿ ವಿಪತ್ಕಾರಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ತಮ್ಮ ಜೊತೆ ವಿಶ್ವಾಸಿಗಳಿಗೆ ಸಹಾಯಮಾಡಲು ಲೋಕವ್ಯಾಪಕವಾಗಿ ಇರುವ ಯೆಹೋವನ ಸಾಕ್ಷಿಗಳು ಹಂಬಲಿಸಿದರೂ, ಪರಿಹಾರ ಕಾರ್ಯಕ್ರಮವನ್ನು ಸಂಯೋಜಿಸುವ ಕೆಲಸವನ್ನು ಪಶ್ಚಿಮ ಯೂರೋಪಿಗೆ ನೇಮಿಸಲಾಯಿತು. 1994ರ ಬೇಸಗೆಯಲ್ಲಿ, ಯೂರೋಪಿನಿಂದ ಸಾಕ್ಷಿ ಸ್ವಯಂಸೇವಕರ ಒಂದು ತಂಡವು ಆಫ್ರಿಕದಲ್ಲಿದ್ದ ತಮ್ಮ ಸೋದರಸೋದರಿಯರ ಸಹಾಯಕ್ಕೆ ಧಾವಿಸಿ ಬಂತು. ರುಆಂಡದ ನಿರಾಶ್ರಿತರಿಗಾಗಿ ಸುವ್ಯವಸ್ಥಿತ ಶಿಬಿರಗಳು ಮತ್ತು ಹಂಗಾಮಿ ಆಸ್ಪತ್ರೆಗಳನ್ನು ಸ್ಥಾಪಿಸಲಾಯಿತು. ಬಟ್ಟೆ, ಕಂಬಳಿಗಳು, ಆಹಾರ ಮತ್ತು ಬೈಬಲ್ ಸಾಹಿತ್ಯಗಳನ್ನು ವಿಮಾನ ಮಾರ್ಗವಾಗಿಯೊ ಇತರ ಮಾರ್ಗವಾಗಿಯೊ ಕಳುಹಿಸಲಾಯಿತು. ಬಾಧಿತರಲ್ಲಿ 7,000ಕ್ಕೂ ಹೆಚ್ಚು ಜನರು—ಆಗ ರುಆಂಡದಲ್ಲಿದ್ದ ಯೆಹೋವನ ಸಾಕ್ಷಿಗಳ ಸಂಖ್ಯೆಗಿಂತ ಹೆಚ್ಚುಕಡಮೆ ಮುಮ್ಮಡಿ—ಈ ಪರಿಹಾರ ಕಾರ್ಯಕ್ರಮದಿಂದ ಪ್ರಯೋಜನಪಟ್ಟರು. ಆ ವರ್ಷದ ಡಿಸೆಂಬರ್ ತಿಂಗಳಿನೊಳಗೆ, ಯೆಹೋವನ ಸಾಕ್ಷಿಗಳಾಗಿದ್ದ ಹೆಚ್ಚಿನವರನ್ನು ಒಳಗೊಂಡಿದ್ದ ಸಾವಿರಾರು ಮಂದಿ ನಿರಾಶ್ರಿತರು, ತಮ್ಮ ಜೀವನಗಳನ್ನು ಪುನಸ್ಸ್ಥಾಪಿಸಲಿಕ್ಕಾಗಿ ರುಆಂಡಕ್ಕೆ ಹಿಂದಿರುಗಿದರು.
ಕಾಂಗೊದಲ್ಲಿ ಯುದ್ಧ
1996ರಲ್ಲಿ ಯುದ್ಧವು ಡೆಮೊಕ್ರ್ಯಾಟಿಕ್ ರಿಪಬ್ಲಿಕ್ ಆಫ್ ಕಾಂಗೊದ ಪೂರ್ವಪ್ರದೇಶದಲ್ಲಿ ಆರಂಭಗೊಂಡಿತು. ಈ ಪ್ರದೇಶ ರುಆಂಡ ಮತ್ತು ಬುರುಂಡಿಯ ಮೇರೆಯಲ್ಲಿದೆ. ಇಲ್ಲಿ ಪುನಃ ಅತ್ಯಾಚಾರ ಮತ್ತು ಕೊಲೆ ನಡೆಯಿತು. ರೊಯ್ಗುಟ್ಟುತ್ತಿದ್ದ ಗುಂಡುಗಳು ಮತ್ತು ಸುಡುತ್ತಿದ್ದ ಹಳ್ಳಿಗಳ ನಡುವಿನಿಂದ ಜನರು ತಮ್ಮ ಜೀವವನ್ನುಳಿಸಿಕೊಳ್ಳಲಿಕ್ಕಾಗಿ ಪಲಾಯನಗೈದರು. ಈ ಗೊಂದಲದ ಮಧ್ಯೆ ಯೆಹೋವನ ಸಾಕ್ಷಿಗಳು ಸಿಕ್ಕಿಬಿದ್ದು, ಸುಮಾರು 50 ಮಂದಿ ಸತ್ತರು. ಕೆಲವರು ದಿಕ್ಕುತಪ್ಪಿ ಬಂದ ಗುಂಡುಗಳಿಂದ ಕೊಲ್ಲಲ್ಪಟ್ಟರು. ಒಂದು ಪ್ರತ್ಯೇಕ ಕುಲಕ್ಕೆ ಸೇರಿದವರಾಗಿದ್ದುದರಿಂದ ಅಥವಾ ವೈರಿಗಳೆಂದು ತಪ್ಪುತಿಳಿದುದರಿಂದ ಇತರರನ್ನು ಕೊಲ್ಲಲಾಯಿತು. 150 ಮಂದಿ ಸಾಕ್ಷಿಗಳು ಜೀವಿಸುತ್ತಿದ್ದ ಒಂದು ಹಳ್ಳಿಯನ್ನು ಬೆಂಕಿಹಚ್ಚಿ ನಾಶಗೊಳಿಸಲಾಯಿತು. ಬೇರೆ ಹಳ್ಳಿಗಳಲ್ಲಿ ಹತ್ತಾರು ಮನೆಗಳನ್ನು ಮತ್ತು ಕೆಲವು ರಾಜ್ಯ ಸಭಾಗೃಹಗಳನ್ನು ಸುಟ್ಟುಹಾಕಲಾಯಿತು. ಮನೆಗಳು, ಸ್ವತ್ತುಗಳು ನಷ್ಟಗೊಂಡವರಾಗಿ, ಸಾಕ್ಷಿಗಳು ಬೇರೆ ಪ್ರದೇಶಗಳಿಗೆ ಓಡಿಹೋದಾಗ, ಅಲ್ಲಿನ ಜೊತೆ ಆರಾಧಕರು ಅವರಿಗೆ ಸಹಾಯಮಾಡಿದರು.
ಯುದ್ಧದಲ್ಲಿ ಬೆಳೆಗಳು ಧ್ವಂಸಗೊಂಡು, ಆಹಾರ ದಾಸ್ತಾನುಗಳು ಸೂರೆಮಾಡಲ್ಪಟ್ಟು, ಸರಬರಾಜು ಹಾದಿಗಳು ಕಡಿಯಲ್ಪಡುವುದರಿಂದ, ಯುದ್ಧದ ಹಿಂದೆಯೇ ಹಸಿವು ಅನುಸರಿಸಿ ಬರುತ್ತದೆ. ಲಭ್ಯವಿರುವ ಆಹಾರ ದುಬಾರಿಯಾಗಿರುತ್ತದೆ. ಕೀಸಂಗಾನೀಯಲ್ಲಿ, 1997ರ ಮೇ ತಿಂಗಳ ಮೊದಲಲ್ಲಿ, ಒಂದು ಕಿಲೊಗ್ರಾಮ್ ಆಲೂಗಡ್ಡೆಯ ಕ್ರಯ ಸುಮಾರು ನೂರು ರೂಪಾಯಿ ಆಗಿತ್ತು. ಹೆಚ್ಚಿನ ಜನರ ಕೊಳ್ಳುವ ಸಾಮರ್ಥ್ಯಕ್ಕೆ ಇದು ತೀರ ಮೀರಿದ್ದಾಗಿತ್ತು. ಬಹುಸಂಖ್ಯಾಕರಿಗೆ ದಿನಕ್ಕೆ ಕೇವಲ ಒಂದು ಊಟವನ್ನು ಕೊಳ್ಳುವ ಸಾಮರ್ಥ್ಯವಿತ್ತು. ಆಹಾರದ ಅಭಾವಗಳನ್ನು ಅನುಸರಿಸಿ ರೋಗ ಬರುವುದು ನಿಶ್ಚಯ. ಮಲೇರಿಯ, ಭೇದಿ ರೋಗಗಳು ಮತ್ತು ಜಠರ ಸಂಬಂಧದ ಸಮಸ್ಯೆಗಳನ್ನು ನಿರೋಧಿಸುವ ದೇಹದ ಸಾಮರ್ಥ್ಯವನ್ನು ನ್ಯೂನಪೋಷಣೆಯು ಬಲಗುಂದಿಸುತ್ತದೆ. ವಿಶೇಷವಾಗಿ ಮಕ್ಕಳು ಬಾಧೆಪಟ್ಟು ಸಾಯುತ್ತಾರೆ.
ಆವಶ್ಯಕತೆಯನ್ನು ಗೊತ್ತುಮಾಡುವುದು
ಯೂರೋಪಿನ ಯೆಹೋವನ ಸಾಕ್ಷಿಗಳು ಈ ಆವಶ್ಯಕತೆಗೆ ಪುನಃ ತ್ವರಿತಗತಿಯಿಂದ ಪ್ರತಿಕ್ರಿಯಿಸಿದರು. ಏಪ್ರಿಲ್ 1997ರೊಳಗೆ, ಇಬ್ಬರು ವೈದ್ಯರಿದ್ದ ಸಾಕ್ಷಿಗಳ ಒಂದು ಪರಿಹಾರ ತಂಡವು ಔಷಧ ಮತ್ತು ಹಣದೊಂದಿಗೆ ವಿಮಾನಮಾರ್ಗವಾಗಿ ಬಂದಿತ್ತು. ಗೋಮದಲ್ಲಿ ಸ್ಥಳಿಕ ಸಾಕ್ಷಿಗಳು, ಸ್ಥಿತಿಗತಿಯನ್ನು ಗೊತ್ತುಪಡಿಸಿ, ಶೀಘ್ರ ಸಹಾಯವು ಕೊಡಲ್ಪಡುವಂತೆ ಪರಿಹಾರ ಕಮಿಟಿಗಳನ್ನು ಆಗಲೇ ವ್ಯವಸ್ಥಾಪಿಸಿದ್ದರು. ಆ ತಂಡವು ನಗರವನ್ನೂ ಆಸುಪಾಸಿನ ಪ್ರದೇಶವನ್ನೂ ಅನ್ವೇಷಿಸಿತು. ಹೆಚ್ಚು ದೂರದ ಪ್ರದೇಶಗಳಿಂದ ವರದಿಗಳನ್ನು ಪಡೆಯಲಿಕ್ಕಾಗಿ ದೂತರನ್ನು ಕಳುಹಿಸಲಾಯಿತು. ಗೋಮದ ಪಶ್ಚಿಮಕ್ಕೆ 1,000ಕ್ಕೂ ಹೆಚ್ಚು ಕಿಲೊಮೀಟರುಗಳಷ್ಟು ದೂರದಲ್ಲಿರುವ ಕೀಸಂಗಾನೀಯಿಂದಲೂ ಮಾಹಿತಿಯನ್ನು ಪಡೆಯಲಾಯಿತು. ಸುಮಾರು 700 ಮಂದಿ ಸಾಕ್ಷಿಗಳು ಜೀವಿಸುತ್ತಿರುವ ಗೋಮದಲ್ಲಿ, ಪರಿಹಾರ ಕಾರ್ಯಕ್ರಮವನ್ನು ಸಂಘಟಿಸಲು ಸ್ಥಳಿಕ ಸಹೋದರರು ಸಹಾಯಮಾಡಿದರು.
ಗೋಮದ ಒಬ್ಬ ಕ್ರೈಸ್ತ ಹಿರಿಯನು ಹೇಳಿದ್ದು: “ನಮಗೆ ಸಹಾಯಮಾಡಲು ಅಷ್ಟು ದೂರದಿಂದ ಬಂದಿದ್ದ ಸಹೋದರರನ್ನು ನೋಡಿ ನಾವು ಬಹಳವಾಗಿ ಪ್ರಚೋದಿಸಲ್ಪಟ್ಟೆವು. ಅವರು ಬರುವುದಕ್ಕೆ ಮೊದಲು, ನಾವು ಪರಸ್ಪರವಾಗಿ ಸಹಾಯಮಾಡಿದೆವು. ಸಹೋದರರು ಹಳ್ಳಿಪ್ರದೇಶಗಳಿಂದ ಗೋಮಕ್ಕೆ ಪಲಾಯನಮಾಡಬೇಕಾಗಿತ್ತು. ಕೆಲವರಿಗೆ ಮನೆಗಳು ನಷ್ಟವಾಗಿದ್ದವು ಮತ್ತು ಅವರು ತಮ್ಮ ಗದ್ದೆಗಳನ್ನು ಬಿಟ್ಟು ಹೋಗಬೇಕಾಗಿತ್ತು. ನಾವು ಅವರನ್ನು ನಮ್ಮ ಮನೆಗಳಿಗೆ ಸ್ವಾಗತಿಸಿ, ನಮ್ಮ ಬಟ್ಟೆಬರೆಗಳಲ್ಲಿ ಮತ್ತು ನಮ್ಮಲ್ಲಿದ್ದ ಕೊಂಚ ಆಹಾರದಲ್ಲಿ ಪಾಲಿಗರಾದೆವು. ಸ್ಥಳಿಕವಾಗಿ ನಮಗೆ ಮಾಡಸಾಧ್ಯವಿದ್ದದ್ದು ಕೊಂಚವೇ ಆಗಿತ್ತು. ನಮ್ಮಲ್ಲಿ ಕೆಲವರು ನ್ಯೂನಪೋಷಣೆಯಿಂದ ಬಳಲುತ್ತಿದ್ದೆವು.
“ಆದರೆ ಯೂರೋಪಿನ ಸಹೋದರರು ಹಣ ತಂದಿದ್ದರಿಂದ, ನಮಗೆ ವಿರಳವಾಗಿದ್ದ ಮತ್ತು ತೀರ ದುಬಾರಿಯಾಗಿದ್ದ ಆಹಾರವನ್ನು ಕೊಳ್ಳಲು ಸಾಧ್ಯವಾಯಿತು. ಅನೇಕರಿಗೆ ತಿನ್ನಲು ಮನೆಯಲ್ಲಿ ಏನೂ ಇಲ್ಲದಿದ್ದುದರಿಂದ, ಆಹಾರವು ತಕ್ಕ ಸಮಯದಲ್ಲಿ ಬಂತು. ನಾವು ಆಹಾರವನ್ನು ಸಾಕ್ಷಿಗಳಿಗೂ ಸಾಕ್ಷ್ಯೇತರರಿಗೂ ಹಂಚಿದೆವು. ತಕ್ಕ ಸಮಯದಲ್ಲಿ ಆಹಾರವು ಬರದೆ ಇರುತ್ತಿದ್ದರೆ, ಇನ್ನೂ ಅನೇಕರು—ವಿಶೇಷವಾಗಿ ಮಕ್ಕಳು—ಸಾಯುತ್ತಿದ್ದರು. ಯೆಹೋವನು ತನ್ನ ಜನರನ್ನು ರಕ್ಷಿಸಿದನು. ಸಾಕ್ಷ್ಯೇತರರು ಮನಮುಟ್ಟಿದವರಾದರು. ಅನೇಕರು ನಮ್ಮ ಐಕ್ಯ ಮತ್ತು ಪ್ರೀತಿಯ ಕುರಿತು ಮಾತಾಡಿದರು. ನಮ್ಮದೇ ಸತ್ಯ ಧರ್ಮವೆಂದು ಕೆಲವರು ಒಪ್ಪಿಕೊಂಡರು.”
ಆಹಾರವನ್ನು ಸ್ಥಳಿಕವಾಗಿ ಖರೀದಿಸಿ, ಔಷಧವನ್ನು ಕೊಡಲಾಯಿತಾದರೂ, ಇನ್ನೂ ಹೆಚ್ಚಿನ ವಿಷಯಗಳು ಅಗತ್ಯವಿದ್ದವು. ಬಟ್ಟೆಬರೆಗಳು ಮತ್ತು ಕಂಬಳಿಗಳು ಹಾಗೂ ಹೆಚ್ಚು ಆಹಾರ ಮತ್ತು ಔಷಧದ ಆವಶ್ಯಕತೆಯಿತ್ತು. ನಾಶವಾಗಿದ್ದ ಮನೆಗಳನ್ನು ಪುನರ್ನಿರ್ಮಿಸಲಿಕ್ಕಾಗಿ ಸಹಾಯದ ಆವಶ್ಯಕತೆಯೂ ಇತ್ತು.
ಜನರು ಉದಾರಭಾವದಿಂದ ಕೊಡುತ್ತಾರೆ
ಯೂರೋಪಿನ ಸಹೋದರರು ಪುನಃ ಸಹಾಯಮಾಡಲು ತವಕಪಟ್ಟರು. ಫ್ರಾನ್ಸ್ನ ಲೂವಿಯೆಯಲ್ಲಿರುವ ಯೆಹೋವನ ಸಾಕ್ಷಿಗಳ ಆಫೀಸು, ರೋನ್ ಕಣಿವೆಯ ಹಾಗೂ ನಾರ್ಮಂಡಿಯ ಮತ್ತು ಪ್ಯಾರಿಸ್ ವಲಯದ ಒಂದು ಭಾಗದ ಸಭೆಗಳಿಗೆ ಕರೆಯನ್ನು ಕಳುಹಿಸಿತು. ಇಲ್ಲಿ ಇನ್ನೊಂದು ಶಾಸ್ತ್ರೀಯ ಮೂಲತತ್ವ ಕಾರ್ಯಾಚರಣೆಗೆ ಬಂತು: “ಸ್ವಲ್ಪವಾಗಿ ಬಿತ್ತುವವನು ಪೈರನ್ನು ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂದು ತಿಳುಕೊಳ್ಳಿರಿ. ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.”—2 ಕೊರಿಂಥ 9:6, 7.
ಸಾವಿರಾರು ಮಂದಿ ಈ ಕೊಡುವ ಸುಯೋಗವನ್ನು ಹರ್ಷದಿಂದ ಸ್ವೀಕರಿಸಿದರು. ಬಟ್ಟೆ, ಪಾದರಕ್ಷೆಗಳು ಮತ್ತು ಬೇರೆ ವಸ್ತುಗಳು ತುಂಬಿದ ಬಾಕ್ಸ್ಗಳು ಹಾಗೂ ಚೀಲಗಳು, ರಾಜ್ಯ ಸಭಾಗೃಹಗಳಿಗೆ ಧಾರಾಕಾರವಾಗಿ ಬರತೊಡಗಿ, ಬಳಿಕ ಫ್ರಾನ್ಸ್ನ ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸಿಗೆ ರವಾನಿಸಲ್ಪಟ್ಟವು. ಅಲ್ಲಿ, “ಸಾಯಿರ್ ಸಹಾಯ” ಕಾರ್ಯಾಚರಣೆಯ ಮುಂದಿನ ಹಂತದಲ್ಲಿ ಭಾಗವಹಿಸಲು 400 ಮಂದಿ ಸ್ವಯಂಸೇವಕರು ಸಿದ್ಧರಾಗಿದ್ದರು. ದಾನವಾಗಿ ಕೊಡಲ್ಪಟ್ಟ ವಸ್ತುಗಳು ಬಂದುಮುಟ್ಟಿದಾಗ, ಈ ಸ್ವಯಂಸೇವಕರು ಬಟ್ಟೆಗಳನ್ನು ವರ್ಗೀಕರಿಸಿ, ಮಡಿಸಿ, ಬಾಕ್ಸ್ಗಳಲ್ಲಿ ತುಂಬಿಸಿ, ಅಟ್ಟಣೆಗೆ 30ರಂತೆ ಹೇರಿದರು. ಮಕ್ಕಳು ಆಫ್ರಿಕದ ತಮ್ಮ ಎಳೆಯ ಸೋದರ ಸೋದರಿಯರ ಕುರಿತು ಯೋಚಿಸಿ, ಆಟಿಕೆ—ಹೊಳೆಯುವ ಟೈ ಕಾರುಗಳು, ಬುಗರಿಗಳು, ಗೊಂಬೆಗಳು ಮತ್ತು ಟೆಡಿ ಬೆಅರ್ಗಳು—ಗಳನ್ನು ಕಳುಹಿಸಿದ್ದರು. ಇವನ್ನು ಜೀವನಾವಶ್ಯಕತೆಗಳೊಂದಿಗೆ ಹಾಕಿ ಮೂಟೆಗಳಾಗಿ ಮಾಡಲಾಯಿತು. ಒಟ್ಟಿಗೆ, 12 ಮೀಟರುಗಳ ಒಂಬತ್ತು ಕಂಟೇನರ್ಗಳನ್ನು ತುಂಬಿಸಿ ಕಾಂಗೋಗೆ ರವಾನಿಸಲಾಯಿತು.
ಬೆಲ್ಜಿಯಮ್, ಫ್ರಾನ್ಸ್ ಮತ್ತು ಸ್ವಿಟ್ಸರ್ಲೆಂಡ್ನ ಸಾವಿರಾರು ಮಂದಿ ಸಾಕ್ಷಿಗಳ ಸಹಾಯದಿಂದ ಸೆಂಟ್ರಲ್ ಆಫ್ರಿಕಕ್ಕೆ ಎಷ್ಟು ಸಹಾಯವು ಕಳುಹಿಸಲ್ಪಟ್ಟಿತು? ಜೂನ್ 1997ರೊಳಗೆ ಮೊತ್ತದಲ್ಲಿ 500 ಕಿಲೊಗ್ರಾಮ್ ಔಷಧ, 10 ಟನ್ ಹೈ-ಪ್ರೋಟೀನ್ ಬಿಸ್ಕಿಟು, 20 ಟನ್ ಬೇರೆ ಆಹಾರಗಳು, 90 ಟನ್ ಬಟ್ಟೆಬರೆ, 18,500 ಜೊತೆ ಪಾದರಕ್ಷೆಗಳು ಮತ್ತು 1,000 ಕಂಬಳಿಗಳು ಕಳುಹಿಸಲ್ಪಟ್ಟಿದ್ದವು. ಬೈಬಲ್ ಸಾಹಿತ್ಯವೂ ವಾಯುಮಾರ್ಗವಾಗಿ ಕಳುಹಿಸಲ್ಪಟ್ಟಿತು. ಇದೆಲ್ಲವೂ ಅತಿ ಕೃತಜ್ಞತೆಯಿಂದ ಸ್ವೀಕರಿಸಲ್ಪಟ್ಟು, ತಮ್ಮ ಪರೀಕ್ಷೆಗಳನ್ನು ತಾಳಿಕೊಳ್ಳುವಂತೆ ನಿರಾಶ್ರಿತರಿಗೆ ಆದರಣೆಯನ್ನೂ ಸಹಾಯವನ್ನೂ ಕೊಟ್ಟಿತು. ಈ ಸರಬರಾಯಿಯ ಒಟ್ಟು ವೆಚ್ಚವು, ಸುಮಾರು 10,00,000 ಅಮೆರಿಕನ್ ಡಾಲರ್ಗಳಾಗಿತ್ತು. ಈ ಕಾಣಿಕೆಗಳು, ಯೆಹೋವನನ್ನು ಸೇವಿಸುವವರ ಮಧ್ಯೆ ಇರುವ ಸಹೋದರತ್ವ ಮತ್ತು ಪ್ರೀತಿಯ ರುಜುವಾತಾಗಿದ್ದವು.
ಕಾಂಗೋವಿನಲ್ಲಿ ವಿತರಣೆ
ಈ ವಸ್ತುಗಳು ಕಾಂಗೋವಿಗೆ ತಲಪತೊಡಗಿದಾಗ, ಸ್ಥಳಿಕ ಪರಿಹಾರ ಕಮಿಟಿಗಳೊಂದಿಗೆ ಕೆಲಸಮಾಡಲಿಕ್ಕಾಗಿ ಫ್ರಾನ್ಸ್ನಿಂದ ಇಬ್ಬರು ಸಹೋದರರು ಮತ್ತು ಒಬ್ಬಾಕೆ ಸಹೋದರಿ ಬಂದರು. ಕಾಂಗೋವಿನ ಸಾಕ್ಷಿಗಳು ತೋರಿಸಿದ ಕೃತಜ್ಞತೆಯ ಕುರಿತು ಸಹೋದರಿ ಜಾಸ್ಲಿನ್ ಹೇಳಿದ್ದು: “ನಮಗೆ ಕೃತಜ್ಞತೆಯ ಅನೇಕ ಪತ್ರಗಳು ಬಂದವು. ಒಬ್ಬ ಬಡ ಸಹೋದರಿ ನನಗೆ ಒಂದು ಮ್ಯಾಲಕೈಟ್ ಆಭರಣವನ್ನು ಕೊಟ್ಟಳು. ಇತರರು ತಮ್ಮ ಫೋಟೋಗಳನ್ನು ಕೊಟ್ಟರು. ನಾವು ಬೀಳ್ಕೊಡುವಾಗ ಸಹೋದರಿಯರು ನನಗೆ ಮುತ್ತುಕೊಟ್ಟು, ಅಪ್ಪಿಕೊಂಡು, ಅತ್ತರು. ನಾನೂ ಅತ್ತೆ. ಅನೇಕರು, ‘ಯೆಹೋವನು ಒಳ್ಳೆಯವನು, ಯೆಹೋವನು ನಮ್ಮ ಕುರಿತು ಚಿಂತಿಸುತ್ತಾನೆ’ ಎಂಬಂತಹ ಮಾತುಗಳನ್ನಾಡಿದರು. ಹೀಗೆ ಈ ದಾನಕ್ಕೆ ಪ್ರಶಸ್ತಿಯು ಯೆಹೋವನಿಗೆ ಸೇರಿತ್ತೆಂಬುದನ್ನು ಅವರು ಗ್ರಹಿಸಿದರು. ನಾವು ಆಹಾರವನ್ನು ಹಂಚುತ್ತಿದ್ದಾಗ, ಸಹೋದರ ಸಹೋದರಿಯರು ರಾಜ್ಯ ಗೀತೆಗಳೊಂದಿಗೆ ಯೆಹೋವನನ್ನು ಸ್ತುತಿಸಿದರು. ಅದು ತುಂಬ ಮನಮುಟ್ಟುವಂತಹದ್ದಾಗಿತ್ತು.”
ಲೋಈಕ್ ಎಂಬ ವೈದ್ಯ ಆ ತಂಡದ ಒಬ್ಬ ಸದಸ್ಯನಾಗಿದ್ದ. ಅವನ ಸಹಾಯ ಪಡೆಯಲು ಅನೇಕರು ರಾಜ್ಯ ಸಭಾಗೃಹದಲ್ಲಿ ತುಂಬಿಬಂದು ತಮ್ಮ ಸರದಿಗಾಗಿ ತಾಳ್ಮೆಯಿಂದ ಕಾದರು. ತಾನೂ ಸಹಾಯಮಾಡಬೇಕೆಂಬ ಇಚ್ಛೆಯಿಂದ, ಕಾಂಗೋವಿನ ಒಬ್ಬಾಕೆ ಸಹೋದರಿ, ವೈದ್ಯರಿಗಾಗಿ ಕಾಯುತ್ತಿದ್ದವರಿಗೆ ಸುಮಾರು 40 ಡೋನಟ್ (ಸಿಹಿ ವಡೆ)ಗಳನ್ನು ಕಾಣಿಕೆಯಾಗಿ ಕೊಟ್ಟಳು. ಸುಮಾರು 80 ಮಂದಿ ಕಾಯುತ್ತಿದ್ದುದರಿಂದ ಒಬ್ಬೊಬ್ಬರಿಗೆ ಅರ್ಧರ್ಧ ಡೋನಟ್ ಸಿಕ್ಕಿತು.
ಸಾಕ್ಷ್ಯೇತರರಿಗೆ ಸಹಾಯ
ಈ ಮಾನವೀಯ ಸಹಾಯವು ಯೆಹೋವನ ಸಾಕ್ಷಿಗಳಿಗೆ ಮಾತ್ರ ಕೊಡಲ್ಪಡಲಿಲ್ಲ. 1994ರಲ್ಲಿ ಅನೇಕರು ಪಡೆದಂತೆ, ಬೇರೆಯವರೂ ಪ್ರಯೋಜನಪಡೆದರು. ಇದು ಗಲಾತ್ಯ 6:10ರಲ್ಲಿ ಹೇಳಿರುವ ವಿಷಯಕ್ಕೆ ಹೊಂದಿಕೆಯಲ್ಲಿದೆ: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಓರೆಅಕ್ಷರಗಳು ನಮ್ಮವು.)
ಸಾಕ್ಷಿಗಳು ಗೋಮದ ಬಳಿಯಿದ್ದ ಹಲವು ಪ್ರಾಥಮಿಕ ಶಾಲೆಗಳಿಗೆ ಮತ್ತು ಒಂದು ಅನಾಥಾಶ್ರಮಕ್ಕೆ ಔಷಧ ಮತ್ತು ಬಟ್ಟೆಬರೆಗಳನ್ನು ಹಂಚಿದರು. ಆ ಅನಾಥಾಶ್ರಮವು 85 ಮಕ್ಕಳಿಗೆ ವಸತಿಯಾಗಿದೆ. ಪರಿಸ್ಥಿತಿಯನ್ನು ನಿರ್ಧರಿಸಲು ಮೊದಲೊಮ್ಮೆ ಮಾಡಿದ ಪ್ರಯಾಣದಲ್ಲಿ, ಪರಿಹಾರ ತಂಡವು ಈ ಅನಾಥಾಶ್ರಮವನ್ನು ಸಂದರ್ಶಿಸಿ, ಅವರಿಗೆ 50 ಬಾಕ್ಸ್ ಹೈ-ಪ್ರೋಟೀನ್ ಬಿಸ್ಕಿಟ್, ಬಟ್ಟೆಬರೆಗಳು, 100 ಕಂಬಳಿಗಳು, ಔಷಧ ಮತ್ತು ಆಟದ ಸಾಮಾನುಗಳ ಬಾಕ್ಸ್ಗಳನ್ನು ಕೊಡುವೆವೆಂದು ಮಾತುಕೊಟ್ಟಿತ್ತು. ಮಕ್ಕಳು ಅಂಗಳದಲ್ಲಿ ಸಾಲಾಗಿ ನಿಂತು ಭೇಟಿಕಾರರಿಗಾಗಿ ಹಾಡಿದರು. ಬಳಿಕ ಅವರೊಂದು ವಿಶೇಷ ವಿಜ್ಞಾಪನೆಯನ್ನು ಮಾಡಿದರು—ತಾವು ಫುಟ್ಬಾಲ್ ಆಟವನ್ನು ಆಡಸಾಧ್ಯವಾಗುವಂತೆ ತಮಗೊಂದು ಫುಟ್ಬಾಲ್ ಸಿಕ್ಕೀತೊ?
ಹಲವು ವಾರಗಳಾನಂತರ, ಪರಿಹಾರ ತಂಡವು ಸರಬರಾಯಿಗಳನ್ನು ತರುವ ತನ್ನ ವಚನವನ್ನು ಪೂರೈಸಿತು. ತೋರಿಸಲ್ಪಟ್ಟ ಉದಾರಭಾವ ಮತ್ತು ತನಗೆ ಕೊಡಲ್ಪಟ್ಟಿದ್ದ ಬೈಬಲ್ ಸಾಹಿತ್ಯದಲ್ಲಿ ತಾನು ಓದಿದ ವಿಷಯದಿಂದ ಪ್ರಭಾವಿತನಾಗಿ, ಅನಾಥಾಶ್ರಮದ ಡೈರೆಕ್ಟರ್, ತಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಲಿದ್ದೇನೆಂದು ಹೇಳಿದನು. ಮತ್ತು ಮಕ್ಕಳಿಗೆ ಒಂದು ಫುಟ್ಬಾಲ್ ಕೊಡಲ್ಪಟ್ಟಿತೊ? “ಇಲ್ಲ” ಎಂದನು, ಫ್ರಾನ್ಸ್ನ ಪರಿಹಾರ ತಂಡದ ವ್ಯವಸ್ಥಾಪಕನಾದ ಕ್ಲಾಡ್. “ನಾವು ಅವರಿಗೆ ಎರಡು ಫುಟ್ಬಾಲ್ಗಳನ್ನು ಕೊಟ್ಟೆವು.”
ನಿರಾಶ್ರಿತರ ಶಿಬಿರಗಳು
ಸಹಾಯವು ಕಾಂಗೋವಿಗೆ ಸೀಮಿತವಾಗಿರಲಿಲ್ಲ. ಸಾವಿರಾರು ಮಂದಿ ನಿರಾಶ್ರಿತರು ಯುದ್ಧ ವಲಯದಿಂದ, ಅವಸರದಿಂದ ಸ್ಥಾಪಿಸಲ್ಪಟ್ಟಿದ್ದ ಮೂರು ನಿರಾಶ್ರಿತ ಶಿಬಿರಗಳಿದ್ದ ನೆರೆಹೊರೆಯ ದೇಶವೊಂದಕ್ಕೆ ಪಲಾಯನಗೈದಿದ್ದರು. ಅಲ್ಲಿ ಏನು ಮಾಡಸಾಧ್ಯವಿದೆಯೆಂದು ನೋಡಲು ಸಾಕ್ಷಿಗಳು ಅಲ್ಲಿಗೂ ಪ್ರಯಾಣಿಸಿದರು. ಈ ವರದಿಯು ತಯಾರಿಸಲ್ಪಟ್ಟಾಗ, ಆ ಶಿಬಿರಗಳಲ್ಲಿ 2,11,000 ನಿರಾಶ್ರಿತರು—ಬಹ್ವಂಶ ಕಾಂಗೋವಿನವರು—ಇದ್ದರು. ಸಾಕ್ಷಿಗಳೂ ಅವರ ಮಕ್ಕಳೂ ರಾಜ್ಯ ಸುವಾರ್ತೆಯಲ್ಲಿ ಆಸಕ್ತರೂ ಆಗಿದ್ದ ಸುಮಾರು 800 ಜನರು ಅಲ್ಲಿದ್ದರು. ಆಹಾರದ ಕೊರತೆಯು ಶಿಬಿರಗಳಲ್ಲಿದ್ದ ಪ್ರಥಮ ಸಮಸ್ಯೆಯಾಗಿತ್ತು. ಒಂದು ಶಿಬಿರದಲ್ಲಿ, ಮೂರು ದಿನಗಳಿಗೆ ಸಾಕಾಗುವಷ್ಟೇ ಆಹಾರವಿತ್ತು ಮತ್ತು ಆ ಆಹಾರದಲ್ಲಿ ಮೂರು ವರ್ಷಗಳಷ್ಟು ಹಳೆಯ ಅವರೆಕಾಯಿ ಸೇರಿತ್ತು.
ಹಾಗಿದ್ದರೂ ಸಾಕ್ಷಿಗಳು ಉಲ್ಲಾಸದಿಂದಿದ್ದರು. ಅವರಲ್ಲಿದ್ದ ಬೈಬಲ್ ಸಾಹಿತ್ಯ ಕೊಂಚವಾಗಿದ್ದರೂ, ತಮ್ಮನ್ನು ಆತ್ಮಿಕವಾಗಿ ಬಲಪಡಿಸಿಕೊಳ್ಳಲು ಅವರು ಕ್ರಮವಾಗಿ ಹೊರಗೆ ಕೂಟಗಳನ್ನು ನಡೆಸುತ್ತಿದ್ದರು. ಅವರು, ಶಿಬಿರಗಳಲ್ಲಿದ್ದ ಇತರರಿಗೆ ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿಯೂ ಕಾರ್ಯಮಗ್ನರಾಗಿದ್ದರು.—ಮತ್ತಾಯ 24:14; ಇಬ್ರಿಯ 10:24, 25.
ಸಾಕ್ಷಿಗಳ ತನಿಖಾ ತಂಡದಲ್ಲಿ ಒಬ್ಬ ವೈದ್ಯರಿದ್ದರು. ಪ್ರತಿ ಶಿಬಿರದಲ್ಲಿ ಕೆಲವೇ ದಿನಗಳನ್ನು ಕಳೆಯುವಂತೆ ಅಧಿಕಾರಿಗಳು ಅನುಮತಿಸಿದರೂ, ಅವರು ವೈದ್ಯಕೀಯ ಸಲಹಾ ಸಂದರ್ಶನಗಳನ್ನು ನಡೆಸಿದರು. ಅವರು ಕ್ರೈಸ್ತ ಹಿರಿಯರೊಂದಿಗೆ ಔಷಧ ಮತ್ತು ಹಣವನ್ನು ಬಿಟ್ಟುಹೋದರು. ಹೀಗೆ, ಸಹೋದರರು ಬದುಕಿ ಉಳಿಯಲು ಶಕ್ತರಾದರು. ಶಿಬಿರಗಳಲ್ಲಿದ್ದ ಸಾಕ್ಷಿಗಳು ಬೇಗನೆ ತಮ್ಮ ಸ್ವದೇಶಕ್ಕೆ ಹಿಂದಿರುಗುವರೆಂದೂ ಅವರು ನಿರೀಕ್ಷಿಸಿದರು.
ಭವಿಷ್ಯತ್ತಿನ ಕುರಿತೇನು? ನಮ್ಮ ದಿನವು ಮಹಾ ಗೊಂದಲದ ಸಮಯವಾಗಿರುವುದೆಂದು, ಯುದ್ಧ ಮತ್ತು ಆಹಾರದ ಅಭಾವದ ಸಮಯವಾಗಿರುವುದೆಂದು ಯೇಸು ಕ್ರಿಸ್ತನು ಮುಂತಿಳಿಸಿದನು. (ಮತ್ತಾಯ 24:7) ಭೂಮಿಯ ಮೇಲೆ ಈಗ ಇರುವ ಕಷ್ಟಾನುಭವವನ್ನು ದೇವರ ರಾಜ್ಯವು ಮಾತ್ರ ಅಂತ್ಯಗೊಳಿಸುವುದೆಂದು ಯೆಹೋವನ ಸಾಕ್ಷಿಗಳು ತಿಳಿದಿದ್ದಾರೆ. ಅದರ ಆಳಿಕೆಯ ಕೆಳಗೆ, ನಮ್ಮ ಭೂಗೃಹವು ವಿಧೇಯ ಮಾನವಕುಲಕ್ಕೆ ಶಾಂತಿ, ಸಮೃದ್ಧಿ ಮತ್ತು ನಿತ್ಯ ಸಂತೋಷದ ಪ್ರಮೋದವನವಾಗಿ ಪರಿಣಮಿಸುವುದು. (ಕೀರ್ತನೆ 72:1, 3, 16) ಈಮಧ್ಯೆ, ಸಾಕ್ಷಿಗಳು ಆ ಸ್ವರ್ಗೀಯ ರಾಜ್ಯದ ಸುವಾರ್ತೆಯನ್ನು ಘೋಷಿಸಿ, ಅಗತ್ಯದ ಸಮಯಗಳಲ್ಲಿ ಜೊತೆ ಆರಾಧಕರಿಗೂ ಇತರರಿಗೂ ಸಹಾಯವನ್ನು ನೀಡುತ್ತ ಮುಂದುವರಿಯುವರು.
[ಪುಟ 4 ರಲ್ಲಿರುವ ಚಿತ್ರ]
ಯೂರೋಪೊಂದರಲ್ಲಿಯೇ ಯೆಹೋವನ ಸಾಕ್ಷಿಗಳು, 1994ರಿಂದೀಚೆಗೆ, 190 ಟನ್ಗಳಿಗಿಂತಲೂ ಹೆಚ್ಚು ಆಹಾರ, ಬಟ್ಟೆ, ಔಷಧ ಮತ್ತು ಇತರ ಪರಿಹಾರ ಸರಬರಾಯಿಗಳನ್ನು ಆಫ್ರಿಕದ ಗ್ರೇಟ್ ಲೇಕ್ಸ್ ಪ್ರದೇಶಕ್ಕೆ ಕಳುಹಿಸಿದ್ದಾರೆ
[ಪುಟ 6 ರಲ್ಲಿರುವ ಚೌಕ]
ಕಾರ್ಯರೂಪಕ್ಕೆ ಹಾಕಲ್ಪಡುತ್ತಿರುವ ಕ್ರೈಸ್ತ ಪ್ರೀತಿ
ಫ್ರಾನ್ಸ್ನ “ಸಾಯಿರ್ ಸಹಾಯ” ಯೋಜನೆಯಲ್ಲಿ ತವಕದಿಂದ ಭಾಗವಹಿಸಿದವರಲ್ಲಿ ರೂಟ್ ಡಾನೇ ಒಬ್ಬಾಕೆಯಾಗಿದ್ದಳು. ಎಳೆಯ ಪ್ರಾಯದಲ್ಲಿ ಆಕೆಯ ಕ್ರೈಸ್ತ ನಂಬಿಕೆಗಾಗಿ ಆಕೆ ನಾಸಿ ಕೂಟ ಶಿಬಿರಗಳಲ್ಲಿ ಬಂದಿಯಾಗಿದ್ದಳು. ಆಕೆ ಹೇಳಿದ್ದು: “ಆಫ್ರಿಕದಲ್ಲಿದ್ದ ನಮ್ಮ ಸೋದರ ಸೋದರಿಯರಿಗಾಗಿ ಸಹಾಯಮಾಡಲು ನಾವೆಷ್ಟು ಸಂತೋಷವುಳ್ಳವರಾಗಿದ್ದೆವು! ಆದರೆ ನನ್ನನ್ನು ಇಮ್ಮಡಿಯಾಗಿ ಸಂತೋಷಕ್ಕೊಳಪಡಿಸಿದ ವಿಷಯವೊಂದಿತ್ತು. 1945ರಲ್ಲಿ, ನಾವು ಜರ್ಮನಿಯಿಂದ ಮನೆಗೆ ತೆರಳಿದಾಗ, ನಮ್ಮಲ್ಲಿ ಏನೂ ಇದ್ದಿರಲಿಲ್ಲ. ನಾವು ಧರಿಸಿದ ಬಟ್ಟೆಯೂ ಮತ್ತೊಬ್ಬರದ್ದಾಗಿತ್ತು. ಆದರೆ ಬೇಗನೆ, ಅಮೆರಿಕದ ಆತ್ಮಿಕ ಸೋದರರಿಂದ ನಾವು ಲೌಕಿಕ ಸಹಾಯವನ್ನು ಪಡೆದೆವು. ಆದುದರಿಂದ ಈ ಪರಿಹಾರ ಕಾರ್ಯಕ್ರಮವು, ಬಹಳ ಸಮಯದ ಹಿಂದೆ ನಮಗೆ ತೋರಿಸಲ್ಪಟ್ಟ ದಯೆಯನ್ನು ಹಿಂದಕ್ಕೆ ಕೊಡುವಂತೆ ನನ್ನನ್ನು ಅನುಮತಿಸಿತು. ಕ್ರೈಸ್ತ ಪ್ರೀತಿಯನ್ನು ಕಾರ್ಯರೂಪಕ್ಕೆ ಹಾಕುವ ಸಹೋದರರ ಅಷ್ಟೊಂದು ದೊಡ್ಡ ಕುಟುಂಬದ ಭಾಗವಾಗಿರುವುದು ಎಂತಹ ಒಂದು ಸುಯೋಗ!”—ಯೋಹಾನ 13:34, 35.
[ಪುಟ 7 ರಲ್ಲಿರುವ ಚಿತ್ರ]
ಬೇಗನೆ—ಸಕಲರಿಗೆ ಬೇಕಾದಷ್ಟನ್ನು ಒದಗಿಸುವ ಭೂಪ್ರಮೋದವನ