ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಮಲಾವಿಯಲ್ಲಿ ತಾಳ್ಮೆಯು ದೇವರ ಆಶೀರ್ವಾದಕ್ಕೆ ನಡೆಸುತ್ತದೆ
ಯೋಸೇಫನು ಯೆಹೋವನ ಒಬ್ಬ ನಂಬಿಗಸ್ತ ಸೇವಕನಾಗಿದ್ದನು. (ಇಬ್ರಿಯ 11:22) ಅವನು ಗಮನಾರ್ಹ ತಾಳ್ಮೆಯನ್ನು ತೋರಿಸಿದ ಒಬ್ಬ ವ್ಯಕ್ತಿಯೂ ಆಗಿದ್ದನು. ಯೋಸೇಫನು ತನ್ನ ಸ್ವಂತ ಸಹೋದರರಿಂದ ದ್ರೋಹಕ್ಕೊಳಗಾಗಿ, ಎರಡು ಬಾರಿ ದಾಸ್ವತಕ್ಕೆ ಮಾರಲ್ಪಟ್ಟು, ನಂತರ ಸುಳ್ಳಾರೋಪಗಳ ಆಧಾರದ ಮೇಲೆ ಸೆರೆಮನೆಗೆ ಹಾಕಲ್ಪಟ್ಟರೂ ಅವನು ಎದೆಗುಂದಲಿಲ್ಲ. ಅದಕ್ಕೆ ಬದಲಾಗಿ, ಯೆಹೋವನ ಆಶೀರ್ವಾದಕ್ಕಾಗಿ ನಮ್ರತೆಯಿಂದ ಕಾಯುತ್ತಾ, ಅವನು ವರ್ಷಾನುಗಟ್ಟಲೆಯ ಸಂಕಟವನ್ನು ತಾಳ್ಮೆಯಿಂದ ಸಹಿಸಿಕೊಂಡನು.—ಆದಿಕಾಂಡ 37:23-28, 36; 39:11-20.
ಇಂದು ತದ್ರೀತಿಯಲ್ಲಿ, ಮಲಾವಿಯಲ್ಲಿರುವ ಯೆಹೋವನ ಸಾಕ್ಷಿಗಳು ದೇವರ ಆಶೀರ್ವಾದಕ್ಕಾಗಿ ತಾಳ್ಮೆಯಿಂದ ಕಾದಿದ್ದಾರೆ. 26 ವರ್ಷಗಳ ತನಕ, ಈ ಕ್ರೈಸ್ತ ಸಾಕ್ಷಿಗಳು ಸರಕಾರೀ ನಿಷೇಧಗಳನ್ನು, ತೀವ್ರ ಹಿಂಸೆಯನ್ನು, ಹಾಗೂ ಅನೇಕ ದುಷ್ಕೃತ್ಯಗಳನ್ನು ತಾಳಿಕೊಂಡರು. ಆದರೆ ಅವರ ತಾಳ್ಮೆಗೆ ಪ್ರತಿಫಲ ಸಿಕ್ಕಿದೆ!
ಮಲಾವಿಯಲ್ಲಿ 1967ರ ಅಂತ್ಯಭಾಗದಲ್ಲಿ ಹಿಂಸೆಯು ತಲೆದೋರಿದಾಗ, ಸುಮಾರು 18,000 ರಾಜ್ಯ ಪ್ರಚಾರಕರಿದ್ದರು. 38,393 ಪ್ರಚಾರಕರ ಹೊಸ ಉಚ್ಚಾಂಕದೊಂದಿಗೆ 1997ರ ಸೇವಾ ವರ್ಷವು ಪ್ರಾರಂಭವಾಯಿತೆಂಬುದು ಸಾಕ್ಷಿಗಳಿಗೆ ಗೊತ್ತಾದಾಗ ಅವರಿಗಾದ ಹರ್ಷವನ್ನು ಊಹಿಸಿಕೊಳ್ಳಿರಿ—ನಿಷೇಧದ ಆರಂಭದಲ್ಲಿದ್ದ ಸಂಖ್ಯೆಗೆ ಹೋಲಿಸುವಾಗ ಎರಡಕ್ಕಿಂತಲೂ ಹೆಚ್ಚು ಪಟ್ಟು! ಅಷ್ಟುಮಾತ್ರವಲ್ಲದೆ, ಮಲಾವಿಯಲ್ಲಿ ನಡೆಸಲ್ಪಟ್ಟ “ದೈವಿಕ ಶಾಂತಿಯ ಸಂದೇಶವಾಹಕರು” ಎಂಬ 13 ಜಿಲ್ಲಾ ಅಧಿವೇಶನಗಳಲ್ಲಿನ ಹಾಜರಿ ಸಂಖ್ಯೆಯು 1,17,000ಕ್ಕಿಂತಲೂ ಹೆಚ್ಚಾಯಿತು. ನಿಜವಾಗಿಯೂ, ಯೆಹೋವನು ಅವರ ನಂಬಿಕೆ ಹಾಗೂ ತಾಳ್ಮೆಯನ್ನು ಆಶೀರ್ವದಿಸಿದ್ದಾನೆ.
ಈ ಆಶೀರ್ವಾದದ ಒಂದು ಉದಾಹರಣೆಯು, ಮಾಚಾಕಾ ಎಂಬ ಹೆಸರಿನ ಒಬ್ಬ ಯುವಕನ ಅನುಭವವಾಗಿದೆ. ಮಾಚಾಕಾ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಒಪ್ಪಿಕೊಂಡಾಗ, ಅವನ ಹೆತ್ತವರು ತುಂಬ ಕ್ಷೋಭೆಗೊಂಡರು. ಅವರು ಹೇಳಿದ್ದು: “ನೀನೊಬ್ಬ ಸಾಕ್ಷಿಯಾಗಲು ಇಷ್ಟಪಡುವುದಾದರೆ, ಮನೆಯನ್ನು ಬಿಟ್ಟು ಹೋಗಬೇಕು.” ಆದರೆ ಈ ಬೆದರಿಕೆಯು, ತನ್ನ ಅಭ್ಯಾಸವನ್ನು ಮುಂದುವರಿಸುವುದರಿಂದ ಅವನನ್ನು ನಿರುತ್ತೇಜಿಸಲಿಲ್ಲ. ಇದರ ಪರಿಣಾಮವಾಗಿ, ಮಾಚಾಕಾನ ಹೆತ್ತವರು ಅವನ ಬಟ್ಟೆಬರೆಗಳನ್ನೆಲ್ಲ ಕಿತ್ತುಕೊಂಡರು. ಆದರೆ ಅವನಿಗಾಗಿ ಇನ್ನೂ ಹೆಚ್ಚಿನ ಬಟ್ಟೆಗಳನ್ನು ಖರೀದಿಸುವ ಮೂಲಕ ಸಹೋದರರು ಪ್ರತಿಕ್ರಿಯೆ ತೋರಿಸಿದರು. ಇದರ ಬಗ್ಗೆ ಮಾಚಾಕಾನ ಹೆತ್ತವರಿಗೆ ತಿಳಿದುಬಂದಾಗ, ಅವರು ಅವನಿಗೆ ಹೇಳಿದ್ದು: “ನಿನಗೆ ಸಾಕ್ಷಿಗಳು ಬೆಂಬಲಿಸುತ್ತಾರಾದರೆ, ನೀನು ಮನೆಬಿಟ್ಟು ಅವರೊಂದಿಗೆ ಹೋಗಿ ವಾಸಿಸು.” ವಿಷಯವನ್ನು ಜಾಗರೂಕವಾಗಿ ಪರಿಶೀಲಿಸಿದ ಮೇಲೆ, ಮಾಚಾಕಾ ಮನೆಯನ್ನು ಬಿಟ್ಟುಬಿಟ್ಟನು ಹಾಗೂ ಸ್ಥಳಿಕ ಸಭೆಯಲ್ಲಿನ ಒಬ್ಬ ಸಾಕ್ಷಿ ಕುಟುಂಬವು ಅವನನ್ನು ತಮ್ಮ ಮನೆಯಲ್ಲಿ ಸೇರಿಸಿಕೊಂಡಿತು.
ಮಾಚಾಕಾನ ಹೆತ್ತವರು ಎಷ್ಟು ಕೋಪಗೊಂಡರೆಂದರೆ, ಸಾಕ್ಷಿಗಳೊಂದಿಗಿನ ಎಲ್ಲ ಸಂಪರ್ಕದಿಂದ ದೂರವಿರಲಿಕ್ಕಾಗಿ ಆ ಸ್ಥಳದಿಂದಲೇ ದೂರಹೋಗಲು ನಿರ್ಣಯಿಸಿದರು. ಆದರೆ ಮಾಚಾಕಾ ಈ ವಿಷಯದಿಂದ ತುಂಬ ದುಃಖಗೊಂಡನಾದರೂ, ಸಹೋದರರು ಅವನೊಂದಿಗೆ ಕೀರ್ತನೆ 27:10ನ್ನು ಚರ್ಚಿಸಿದಾಗ ಬಹಳ ಸಾಂತ್ವನವನ್ನು ಕಂಡುಕೊಂಡನು. ಅದು ಹೇಳುವುದು: “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು.”
ಸಕಾಲದಲ್ಲಿ, ಮಾಚಾಕಾನ ಹೆತ್ತವರು ಮಣಿದರು ಮತ್ತು ಅವನು ಮನೆಗೆ ಹಿಂದಿರುಗಿಹೋಗಲು ನಿರ್ಣಯಿಸಿದನು. ಯೆಹೋವನಿಗೆ ಸೇವೆ ಸಲ್ಲಿಸುವ ತಮ್ಮ ಮಗನ ದೃಢನಿರ್ಧಾರವು ಅವರ ಮೇಲೆ ಬಲವಾದ ಪ್ರಭಾವವನ್ನು ಬೀರಿತೆಂದು ತೋರುತ್ತದೆ ಏಕೆಂದರೆ ಅವರು ಸಹ ಯೆಹೋವನ ಸಾಕ್ಷಿಗಳೊಂದಿಗೆ ಒಂದು ಬೈಬಲ್ ಅಭ್ಯಾಸವನ್ನು ಮಾಡಲು ಬಯಸಿದರು! ಅವರು “ದೈವಿಕ ಶಾಂತಿಯ ಸಂದೇಶವಾಹಕರು” ಎಂಬ ಮೂರು ದಿನಗಳ ಜಿಲ್ಲಾ ಅಧಿವೇಶನವನ್ನು ಸಹ ಹಾಜರಾದರು. ಅನಂತರ ಅವರು ಹೀಗೆ ಪ್ರಕಟಿಸುವಂತೆ ಪ್ರಚೋದಿಸಲ್ಪಟ್ಟರು: “ನಿಜವಾಗಿಯೂ, ಇದೇ ದೇವರ ಸಂಸ್ಥೆಯಾಗಿದೆ.”
ಹೌದು, ವಿರೋಧವು ಪರೀಕ್ಷಾತ್ಮಕವಾಗಿರಬಹುದಾದರೂ, ದೇವರ ನಿಷ್ಠಾವಂತ ಸಂದೇಶವಾಹಕರು ಬಿಟ್ಟುಕೊಡುವುದಿಲ್ಲ. “ಉಪದ್ರವದಿಂದ ತಾಳ್ಮೆ ಹುಟ್ಟುತ್ತದೆ, ತಾಳ್ಮೆಯಿಂದ ಅನುಭವಸಿದ್ಧಿ ಹುಟ್ಟುತ್ತದೆ” ಎಂಬುದನ್ನು ತಿಳಿದುಕೊಳ್ಳುತ್ತಾ, ಅವರು ಧೈರ್ಯದಿಂದ ಮುಂದೆ ಸಾಗುತ್ತಾರೆ. (ರೋಮಾಪುರ 5:3, 4) ತಾಳ್ಮೆಯು ದೇವರ ಆಶೀರ್ವಾದಕ್ಕೆ ನಡೆಸುತ್ತದೆ ಎಂಬುದನ್ನು ಮಲಾವಿಯಲ್ಲಿರುವ ಯೆಹೋವನ ಸಾಕ್ಷಿಗಳು ಯುಕ್ತವಾಗಿ ದೃಢೀಕರಿಸಬಲ್ಲರು.