“ನಿನ್ನ ಪ್ರೀತಿಪೂರ್ವಕದಯೆಯು ಜೀವಕ್ಕಿಂತಲೂ ಶ್ರೇಷ್ಠವಾಗಿದೆ”
ಕ್ಯಾಲ್ವೆನ್ ಎಚ್. ಹೋಮ್ಸ್ ಹೇಳಿರುವಂತೆ
ಇಸವಿ 1930ರ ಡಿಸೆಂಬರ್ ತಿಂಗಳು. ನಾನು ಹಸುಗಳ ಹಾಲನ್ನು ಕರೆದು ಮುಗಿಸಿದ್ದೆನಷ್ಟೆ. ಅಷ್ಟರಲ್ಲಿ, ಹತ್ತಿರದಲ್ಲಿದ್ದ ನೆರೆಯವನೊಬ್ಬನನ್ನು ಸಂದರ್ಶಿಸಿ ಅಪ್ಪ ಮನೆಗೆ ಹಿಂದಿರುಗಿದರು. ತಮ್ಮ ಕಿಸೆಯಿಂದ ಒಂದು ನೀಲಿ ಬಣ್ಣದ ಪ್ರಕಾಶನವನ್ನು ತೆಗೆಯುತ್ತಿದ್ದಂತೆ, “ವೈಮನ್ರು ನನಗೆ ಈ ಪುಸ್ತಕವನ್ನು ಎರವಲು ಕೊಟ್ಟಿದ್ದಾರೆ” ಎಂದು ಅವರು ಹೇಳಿದರು. ಅದರ ಶಿರೋನಾಮವು, ವಿಮೋಚನೆ (ಇಂಗ್ಲಿಷ್) ಎಂದಾಗಿತ್ತು. ಅದು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿತ್ತು. ಯಾವುದೇ ವಿಷಯವನ್ನು ವಿರಳವಾಗಿ ಓದುತ್ತಿದ್ದ ಅಪ್ಪ, ಆ ಪುಸ್ತಕವನ್ನು ರಾತ್ರಿ ತುಂಬ ಹೊತ್ತಿನ ವರೆಗೆ ಓದಿದರು.
ತದನಂತರ ಅಪ್ಪ, ಅದೇ ಪ್ರಕಾಶಕರಿಂದ ಮುದ್ರಿಸಲ್ಪಟ್ಟ ಬೆಳಕು ಮತ್ತು ಸಂತೈಸಿಕೆ (ಇಂಗ್ಲಿಷ್) ಎಂಬ ಶೀರ್ಷಿಕೆಗಳಿದ್ದ ಇತರ ಪುಸ್ತಕಗಳನ್ನು ಎರವಲಾಗಿ ತೆಗೆದುಕೊಂಡರು. ಅವರು ತಾಯಿಯ ಹಳೆಯ ಬೈಬಲನ್ನು ಕಂಡುಕೊಂಡು, ರಾತ್ರಿ ತುಂಬ ಹೊತ್ತಿನ ವರೆಗೆ ಸೀಮೆಎಣ್ಣೆಯ ದೀಪದ ಬೆಳಕಿನಲ್ಲಿ ಓದುತ್ತಾ ಎಚ್ಚರವಿರುತ್ತಿದ್ದರು. ತಂದೆಯವರಲ್ಲಿ ಒಂದು ದೊಡ್ಡ ಬದಲಾವಣೆ ತೋರಿಬಂತು. ಆ ಚಳಿಗಾಲದ ಸಮಯದಲ್ಲಿ ನಾವು—ನನ್ನ ತಾಯಿ, ನನ್ನ ಮೂವರು ತಂಗಿಯರು ಮತ್ತು ನಾನು—ನಮ್ಮ ಹಳೆಯ ಸೌದೆಸುಡುವ ಸ್ಟವ್ನ ಸುತ್ತಲೂ ಮುದುರಿಕೊಂಡು ಕುಳಿತುಕೊಂಡಾಗ, ಅವರು ನಮ್ಮೊಂದಿಗೆ ಅನೇಕ ತಾಸುಗಳ ವರೆಗೆ ಮಾತಾಡಿದರು.
ಈ ಪುಸ್ತಕಗಳನ್ನು ಪ್ರಕಾಶಿಸುತ್ತಿದ್ದ ಜನರು, ಬೈಬಲ್ ವಿದ್ಯಾರ್ಥಿಗಳೆಂದು ಕರೆಯಲ್ಪಡುತ್ತಿದ್ದರು ಮತ್ತು ಅವರಿಗನುಸಾರ ನಾವು “ಕಡೇ ದಿವಸಗಳಲ್ಲಿ” ಜೀವಿಸುತ್ತಿದ್ದೇವೆಂದು ಅಪ್ಪ ಹೇಳಿದರು. (2 ತಿಮೊಥೆಯ 3:1-5) ಲೋಕದ ಅಂತ್ಯದ ಸಮಯದಲ್ಲಿ ಭೂಮಿಯು ನಾಶಮಾಡಲ್ಪಡುವುದಿಲ್ಲ, ಬದಲಾಗಿ ದೇವರ ರಾಜ್ಯದ ಕೆಳಗೆ ಅದು ಒಂದು ಪ್ರಮೋದವನವಾಗಿ ಪರಿವರ್ತಿಸಲ್ಪಡುವುದೆಂದು ಅವರು ವಿವರಿಸಿದರು. (2 ಪೇತ್ರ 3:5-7, 13; ಪ್ರಕಟನೆ 21:3, 4) ಅದು ನನಗೆ ನಿಜವಾಗಿಯೂ ಆಸಕ್ತಿದಾಯಕವಾದ ವಿಷಯವಾಗಿ ಧ್ವನಿಸಿತು.
ನಾವು ಜೊತೆಯಾಗಿ ಕೆಲಸಮಾಡುತ್ತಿದ್ದಂತೆಯೇ ಅಪ್ಪ ನನ್ನೊಂದಿಗೆ ಮಾತಾಡಲಾರಂಭಿಸಿದರು. ನಾವು ಜೋಳದ ಸಿಪ್ಪೆಯನ್ನು ಸುಲಿಯುತ್ತಿದ್ದಾಗ ಅವರು ದೇವರ ಹೆಸರು ಯೆಹೋವ ಎಂದು ವಿವರಿಸಿದ್ದು ನನಗೆ ನೆನಪಿದೆ. (ಕೀರ್ತನೆ 83:18) ಹೀಗೆ, 1931ರ ವಸಂತಕಾಲದಲ್ಲಿ, ಕೇವಲ 14 ವಯಸ್ಸಿನವನಾಗಿದ್ದಾಗ, ನಾನು ಯೆಹೋವ ಮತ್ತು ಆತನ ರಾಜ್ಯದ ಪರವಾಗಿ ನನ್ನ ನಿಲುವನ್ನು ತೆಗೆದುಕೊಂಡೆ. ಮನೆಯ ಹಿಂಬದಿಯಲ್ಲಿದ್ದ ಹಳೆಯ ಸೇಬುಹಣ್ಣಿನ ತೋಟದಲ್ಲಿ ನಾನು ಯೆಹೋವನಿಗೆ ಪ್ರಾರ್ಥಿಸಿ, ಆತನನ್ನು ಸದಾಕಾಲ ಸೇವಿಸುವೆನೆಂದು ಗಂಭೀರವಾಗಿ ಪ್ರತಿಜ್ಞೆಮಾಡಿದೆ. ನಮ್ಮ ಅದ್ಭುತಕರ ದೇವರ ಪ್ರೀತಿಪೂರ್ವಕದಯೆಯಿಂದ ನನ್ನ ಹೃದಯವು ಆಗಲೇ ಪ್ರಚೋದಿಸಲ್ಪಟ್ಟಿತ್ತು.—ಕೀರ್ತನೆ 63:3.
ಅಮೆರಿಕದ, ಮಿಸುರಿಯ ಸೆಂಟ್ ಜೋಸೆಫ್ನಿಂದ ಸುಮಾರು 30 ಕಿಲೊಮೀಟರುಗಳ ದೂರದಲ್ಲಿದ್ದ ಮತ್ತು ಕ್ಯಾನ್ಸಸ್ ನಗರದಿಂದ 65 ಕಿಲೊಮೀಟರುಗಳಿಗಿಂತ ಕಡಿಮೆ ದೂರದಲ್ಲಿದ್ದ ಒಂದು ಫಾರ್ಮ್ನಲ್ಲಿ ನಾವು ವಾಸಿಸುತ್ತಿದ್ದೆವು. 19ನೆಯ ಶತಮಾನದ ಆದಿ ಭಾಗದಲ್ಲಿ ನನ್ನ ಮುತ್ತಜ್ಜನು ಫಾರ್ಮ್ನಲ್ಲಿ ದಿಮ್ಮಿಗಳಿಂದ ಕಟ್ಟಿದ ಒಂದು ಚಿಕ್ಕ ಮನೆಯಲ್ಲಿ ಅಪ್ಪ ಹುಟ್ಟಿದರು.
ಶುಶ್ರೂಷೆಗಾಗಿ ತರಬೇತಿ
1931ರ ಬೇಸಗೆಕಾಲದಲ್ಲಿ, ನಮ್ಮ ಕುಟುಂಬವು ಒಹಾಯೋದ ಕೊಲಂಬಸ್ನಲ್ಲಿ ನಡೆದ ಒಂದು ಅಧಿವೇಶನದಲ್ಲಿ, ವಾಚ್ಟವರ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಜೋಸೆಫ್ ರದರ್ಫರ್ಡ್ರು ಕೊಟ್ಟಂತಹ “ಲೋಕದ ನಿರೀಕ್ಷೆಯಾದ ರಾಜ್ಯ” ಎಂಬ ಬಹಿರಂಗ ಭಾಷಣವನ್ನು ರೇಡಿಯೊದಲ್ಲಿ ಕೇಳಿಸಿಕೊಂಡೆವು. ಅದು ನನ್ನ ಹೃದಯವನ್ನು ಕಲಕಿತು, ಮತ್ತು ಈ ಪ್ರಮುಖ ಬಹಿರಂಗ ಭಾಷಣವನ್ನು ಒಳಗೊಂಡಿದ್ದ ಪುಸ್ತಿಕೆಯನ್ನು ನಮ್ಮ ಪರಿಚಯಸ್ಥರ ನಡುವೆ ಹಂಚುವುದರಲ್ಲಿ ತಂದೆಯೊಂದಿಗೆ ಜೊತೆಗೂಡಲು ನಾನು ಸಂತೋಷಪಟ್ಟೆ.
1932ರ ವಸಂತಕಾಲದಲ್ಲಿ, ನಾನು ಯೆಹೋವನ ಸಾಕ್ಷಿಗಳ ಕೂಟಗಳಿಗೆ ಪ್ರಥಮ ಬಾರಿ ಹಾಜರಾದೆ. ನಮ್ಮ ನೆರೆಯವನು, ಯೆಹೋವನ ಸಾಕ್ಷಿಗಳ ಒಬ್ಬ ಸಂಚರಣ ಮೇಲ್ವಿಚಾರಕರಾದ ಜಾರ್ಜ್ ಡ್ರೇಪರ್ರವರು ಸೆಂಟ್ ಜೋಸೆಫ್ನಲ್ಲಿ ಕೊಡಲಿದ್ದ ಒಂದು ಭಾಷಣವನ್ನು ಆಲಿಸಲಿಕ್ಕಾಗಿ ಅಪ್ಪ ಮತ್ತು ನನ್ನನ್ನು ಆಮಂತ್ರಿಸಿದನು. ನಾವು ಅಲ್ಲಿ ಹೋದಾಗ, ಕೂಟವು ಅರ್ಧ ಮುಗಿದುಹೋಗಿತ್ತು, ಮತ್ತು ನನಗೆ ಜೆ. ಡಿ. ಡ್ರಯರ್ರವರ ಗಟ್ಟಿಮುಟ್ಟಾದ, ವಿಶಾಲವಾದ ಬೆನ್ನಿನ ಹಿಂಬದಿಯಲ್ಲಿ ಕುಳಿತುಕೊಳ್ಳಲು ಒಂದು ಸ್ಥಳ ಸಿಕ್ಕಿತು. ಅವರು ನನ್ನ ಜೀವನದಲ್ಲಿ ಒಂದು ಮುಖ್ಯ ಪಾತ್ರವನ್ನು ವಹಿಸಲಿದ್ದರು.
1933ರ ಸೆಪ್ಟೆಂಬರ್ ತಿಂಗಳಿನಲ್ಲಿ, ನಾನು ಅಪ್ಪನೊಂದಿಗೆ ಕ್ಯಾನ್ಸಸ್ ನಗರದಲ್ಲಿನ ಒಂದು ಸಮ್ಮೇಳನಕ್ಕೆ ಹಾಜರಾದೆ. ಅಲ್ಲಿ ನಾನು ಪ್ರಥಮ ಬಾರಿ ಸಾರ್ವಜನಿಕ ಸಾರುವಿಕೆಯಲ್ಲಿ ಭಾಗವಹಿಸಿದೆ. ಅಪ್ಪ ನನಗೆ ಮೂರು ಪುಸ್ತಿಕೆಗಳನ್ನು ಕೊಟ್ಟು, ನಾನು ಹೀಗೆ ಹೇಳುವಂತೆ ಉಪದೇಶಿಸಿದರು: “ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದು, ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಿದ್ದೇನೆ. ನಿಸ್ಸಂದೇಹವಾಗಿ ನೀವು ರೇಡಿಯೊದಲ್ಲಿ ಜಡ್ಜ್ ರದರ್ಫರ್ಡ್ರವರಿಗೆ ಕಿವಿಗೊಟ್ಟಿದ್ದೀರಿ. ಅವರ ಭಾಷಣಗಳು ಪ್ರತಿ ವಾರ 300ಕ್ಕಿಂತಲೂ ಹೆಚ್ಚು ಕೇಂದ್ರಗಳಿಂದ ಪ್ರಸಾರವಾಗುತ್ತವೆ.” ಅನಂತರ ನಾನು ಪುಸ್ತಿಕೆಯನ್ನು ನೀಡುತ್ತಿದ್ದೆ. ಆ ಸಾಯಂಕಾಲ, ನಾನು ಫಾರ್ಮ್ನಲ್ಲಿ ಹಸುಗಳ ಹಾಲನ್ನು ಕರೆಯುತ್ತಿದ್ದಾಗ, ಇದು ನನ್ನ ಜೀವನದಲ್ಲಿ ಅತಿ ಸ್ಮರಣೀಯವಾದ ದಿನವಾಗಿದೆಯೆಂದು ನಾನು ನೆನಸಿದೆ.
ಬೇಗನೆ, ನಾವು ಚಳಿಗಾಲದ ಹವಾಮಾನವನ್ನು ಅನುಭವಿಸಲಾರಂಭಿಸಿದೆವು ಮತ್ತು ನಮಗೆ ಪ್ರಯಾಣವು ಸೀಮಿತವಾಗಿತ್ತು. ಆದರೆ ಆಗ ಸಹೋದರ ಡ್ರಯರ್ ಮತ್ತು ಅವರ ಪತ್ನಿಯು ಭೇಟಿಮಾಡಿ, ನಾನು ಅವರ ಮನೆಗೆ ಶನಿವಾರ ಸಂಜೆ ಬಂದು, ರಾತ್ರಿ ಅಲ್ಲಿ ತಂಗಲು ಇಷ್ಟಪಡುವೆನೊ ಎಂದು ಕೇಳಿದರು. ಡ್ರಯರ್ ಮನೆಗೆ ಹೋಗಲು ನಾವು ಹತ್ತು ಕಿಲೊಮೀಟರ್ ನಡೆಯಬೇಕಾಯಿತು. ಇದು ಸಾರ್ಥಕವಾಗಿತ್ತು, ಏಕೆಂದರೆ ಮರುದಿನ ನಾನು ಅವರೊಂದಿಗೆ ಶುಶ್ರೂಷೆಯಲ್ಲಿ ಜೊತೆಗೂಡಲು ಮತ್ತು ಸೆಂಟ್ ಜೋಸೆಫ್ನಲ್ಲಿ ಕಾವಲಿನಬುರುಜು ಅಭ್ಯಾಸಕ್ಕೆ ಹಾಜರಾಗಲು ಶಕ್ತನಾಗಿದ್ದೆ. ಅಂದಿನಿಂದ, ನಾನು ಆದಿತ್ಯವಾರಗಳಂದು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಿದ್ದೇ ವಿರಳ. ಸಹೋದರ ಡ್ರಯರ್ರವರ ತರಬೇತಿ ಮತ್ತು ಸಲಹೆಯು ಅಮೂಲ್ಯವಾದದ್ದಾಗಿ ಪರಿಣಮಿಸಿತು.
1935ರ ಸೆಪ್ಟೆಂಬರ್ 2ರಂದು, ಕ್ಯಾನ್ಸಸ್ ನಗರದಲ್ಲಿ ನಡೆದ ಒಂದು ಸಮ್ಮೇಳನದಲ್ಲಿ ಕಟ್ಟಕಡೆಗೆ, ನಾನು ಯೆಹೋವನಿಗೆ ಮಾಡಿದಂತಹ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಿಕೊಳ್ಳಲು ಶಕ್ತನಾದೆ.
ಜೀವನುದ್ದದ ವೃತ್ತಿಯ ಆರಂಭ
1936ರ ಆದಿಭಾಗದಲ್ಲಿ, ನಾನು ಒಬ್ಬ ಪಯನೀಯರ್ ಅಥವಾ ಪೂರ್ಣ ಸಮಯದ ಶುಶ್ರೂಷಕನಾಗಿ ಸೇವೆಸಲ್ಲಿಸಲು ಅರ್ಜಿಸಲ್ಲಿಸಿದೆ ಮತ್ತು ಒಬ್ಬ ಪಯನೀಯರ್ ಜೊತೆಗಾಗಿ ಹುಡುಕುತ್ತಿರುವವರ ಪಟ್ಟಿಯಲ್ಲಿ ನನ್ನನ್ನು ಸೇರಿಸಲಾಯಿತು. ತದನಂತರ ಸ್ವಲ್ಪ ಸಮಯದಲ್ಲೇ, ನಾನು ವೈಯೋಮಿಂಗ್ ಆರ್ವ್ಯಾಡದ ಎಡ್ವರ್ಡ್ ಸ್ಟೆಡ್ರವರಿಂದ ಒಂದು ಪತ್ರವನ್ನು ಪಡೆದುಕೊಂಡೆ. ತಾನು ಒಂದು ಗಾಲಿಕುರ್ಚಿಗೆ ನಿರ್ಬಂಧಿಸಲ್ಪಟ್ಟಿದ್ದೇನೆ ಮತ್ತು ಪಯನೀಯರ್ ಸೇವೆ ಮಾಡಲು ಸಹಾಯದ ಅಗತ್ಯವುಳ್ಳವನಾಗಿದ್ದೇನೆಂದು ಅವರು ವಿವರಿಸಿದರು. ನಾನು ತತ್ಕ್ಷಣವೇ ಅವರ ನೀಡಿಕೆಯನ್ನು ಸ್ವೀಕರಿಸಿದೆ ಮತ್ತು 1936ರ ಏಪ್ರಿಲ್ 18ರಂದು ಪಯನೀಯರನಾಗಿ ನೇಮಿಸಲ್ಪಟ್ಟೆ.
ಸಹೋದರ ಸ್ಟೆಡ್ರನ್ನು ನಾನು ಜೊತೆಗೂಡಲು ಹೋಗುವ ಮುಂಚೆ, ನನ್ನ ತಾಯಿ ನನ್ನೊಂದಿಗೆ ಖಾಸಗಿಯಾಗಿ ಮಾತಾಡಿದರು. “ಮಗನೇ, ನೀನು ಮಾಡಲು ಬಯಸುವಂತಹದ್ದು ಇದೇ ಎಂದು ನಿನಗೆ ಖಾತ್ರಿಯಿದೆಯೊ?” ಎಂದು ಅವರು ಕೇಳಿದರು.
“ಹೀಗೆ ಮಾಡದಿರುವಲ್ಲಿ ಜೀವನವು ಸಾರ್ಥಕವಾಗಿರಲಿಕ್ಕಿಲ್ಲ” ಎಂದು ನಾನು ಉತ್ತರಿಸಿದೆ. ಬೇರೆ ಯಾವುದೇ ವಿಷಯಕ್ಕಿಂತಲೂ ಯೆಹೋವನ ಪ್ರೀತಿಪೂರ್ವಕದಯೆಯು ಹೆಚ್ಚು ಪ್ರಾಮುಖ್ಯವೆಂಬುದನ್ನು ನಾನು ಗ್ರಹಿಸಿದ್ದೆ.
ಟೆಡ್—ಸಹೋದರ ಸ್ಟೆಡ್ರನ್ನು ನಾವು ಹೀಗೆ ಕರೆಯುತ್ತಿದ್ದೆವು—ರೊಂದಿಗೆ ಪಯನೀಯರ್ ಸೇವೆ ಮಾಡುವುದು, ಅತ್ಯುತ್ಕೃಷ್ಟವಾದ ತರಬೇತಿಯಾಗಿತ್ತು. ಅವರು ಹುರುಪುಳ್ಳವರಾಗಿದ್ದರು ಮತ್ತು ರಾಜ್ಯ ಸಂದೇಶವನ್ನು ತುಂಬ ಆಕರ್ಷಕ ವಿಧದಲ್ಲಿ ಪ್ರಸ್ತುತಪಡಿಸುತ್ತಿದ್ದರು. ಆದರೆ ಟೆಡ್ ಕೇವಲ ಬರೆಯಲು ಮತ್ತು ಮಾತಾಡಲು ಶಕ್ತರಾಗಿದ್ದರು; ಅವರ ಎಲ್ಲ ಅಸ್ಥಿಸಂಧಿಗಳು ಸಂಧಿವಾತದಿಂದ ಮುದುರಿಕೊಂಡಿದ್ದವು. ನಾನು ಬೆಳಗ್ಗೆ ಬೇಗನೆ ಎದ್ದು, ಅವರನ್ನು ತೊಳೆದು ಕ್ಷೌರಮಾಡಿಸಿ, ಬೆಳಗ್ಗಿನ ಉಪಾಹಾರವನ್ನು ತಯಾರಿಸಿ, ಅವರಿಗೆ ಉಣಿಸುತ್ತಿದ್ದೆ. ಅನಂತರ ನಾನು ಅವರಿಗೆ ಬಟ್ಟೆ ತೊಡಿಸಿ, ಸೇವೆಗಾಗಿ ಸಿದ್ಧಗೊಳಿಸುತ್ತಿದ್ದೆ. ಆ ಬೇಸಗೆಕಾಲದಲ್ಲಿ ನಾವು ರಾತ್ರಿ ಹೊತ್ತಿನಲ್ಲಿ ಹೊರಗೆ ಬೀಡು ಬಿಡುತ್ತಾ, ವೈಯೋಮಿಂಗ್ ಮತ್ತು ಮೊಂಟ್ಯಾನದಲ್ಲಿ ಪಯನೀಯರ್ ಸೇವೆಯನ್ನು ಮಾಡಿದೆವು. ಟೆಡ್ ತಮ್ಮ ಪಿಕ್ಅಪ್ ಟ್ರಕ್ನಲ್ಲಿ ಕಟ್ಟಲ್ಪಟ್ಟಿದ್ದ ವಿಶೇಷ ಬಂಡಿಯಲ್ಲಿ ಮಲಗುತ್ತಿದ್ದರು ಮತ್ತು ನಾನು ನೆಲದ ಮೇಲೆ ಮಲಗುತ್ತಿದ್ದೆ. ಆ ವರ್ಷದ ಶರತ್ಕಾಲದಲ್ಲಿ ನಾನು ದಕ್ಷಿಣಕ್ಕೆ ಟೆನೆಸೀ, ಆರ್ಕನ್ಸಾಸ್ ಮತ್ತು ಮಿಸಿಸಿಪಿಯಲ್ಲಿ ಪಯನೀಯರ್ ಸೇವೆ ಮಾಡಲು ಸ್ಥಳಾಂತರಿಸಿದೆ.
ಸೆಪ್ಟೆಂಬರ್ 1937ರಲ್ಲಿ, ನಾನು ಒಹಾಯೋದ ಕೊಲೊಂಬಸ್ನಲ್ಲಿ, ನನ್ನ ಪ್ರಥಮ ದೊಡ್ಡ ಅಧಿವೇಶನಕ್ಕೆ ಹಾಜರಾದೆ. ಫೋನೊಗ್ರಾಫ್ನ ಬಳಕೆಯೊಂದಿಗೆ ಸಾರುವ ಕಾರ್ಯವನ್ನು ಮುಂದೂಡಲಿಕ್ಕಾಗಿ ಅಲ್ಲಿ ಏಪಾರ್ಡುಗಳನ್ನು ಮಾಡಲಾಯಿತು. ನಾವು ಫೋನೊಗ್ರಾಫನ್ನು ಉಪಯೋಗಿಸಿದಾಗಲೆಲ್ಲ, ಅದನ್ನು ಒಂದು ಸೆಟ್ಅಪ್ ಎಂದು ಕರೆಯುತ್ತಿದ್ದೆವು. ಒಂದು ತಿಂಗಳಲ್ಲಿ ನಾನು 500ಕ್ಕಿಂತಲೂ ಹೆಚ್ಚು ಸೆಟ್ಅಪ್ಗಳನ್ನು ಮಾಡಿದೆ, ಮತ್ತು 800ಕ್ಕಿಂತಲೂ ಹೆಚ್ಚು ಮಂದಿ ಕಿವಿಗೊಟ್ಟರು. ಪೂರ್ವ ಟೆನಸ್ಸಿ, ವರ್ಜಿನಿಯ, ಪಶ್ಚಿಮ ವರ್ಜಿನಿಯದ ಅನೇಕ ಪಟ್ಟಣಗಳಲ್ಲಿ ಸಾಕ್ಷಿಕೊಟ್ಟ ಬಳಿಕ ನಾನು, ಸೋನ್ ಸೇವಕರು—ಆಗ ಸಂಚರಣ ಮೇಲ್ವಿಚಾರಕರನ್ನು ಹಾಗೆ ಕರೆಯಲಾಗುತ್ತಿತ್ತು—ಹೋದಲ್ಲೆಲ್ಲಾ ಕೆಲಸಮಾಡುತ್ತಾ, ಒಂದು ಹೊಸ ಸ್ಥಾನದಲ್ಲಿ ಒಬ್ಬ ವಿಶೇಷ ಪಯನೀಯರನಾಗಿ ಸೇವೆ ಸಲ್ಲಿಸುವಂತೆ ಆಮಂತ್ರಿಸಲಾಯಿತು.
ನಾನು ಪಶ್ಚಿಮ ವರ್ಜಿನಿಯದಲ್ಲಿನ ಸಭೆಗಳು ಮತ್ತು ದೂರದ ಗುಂಪುಗಳನ್ನು ಭೇಟಿಮಾಡಿ, ಪ್ರತಿಯೊಂದು ಗುಂಪಿನೊಂದಿಗೆ ಎರಡರಿಂದ ನಾಲ್ಕು ವಾರಗಳನ್ನು ಕಳೆಯುತ್ತಿದ್ದೆ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಮುಂದಾಳತ್ವವನ್ನು ವಹಿಸಿದೆ. ಅನಂತರ ಜನವರಿ 1941ರಲ್ಲಿ, ನನ್ನನ್ನು ಸೋನ್ ಸೇವಕನನ್ನಾಗಿ ನೇಮಿಸಲಾಯಿತು. ಅಷ್ಟರೊಳಗೆ ನನ್ನ ತಾಯಿ ಮತ್ತು ನನ್ನ ಮೂವರು ತಂಗಿಯರು—ಕ್ಲಾರ, ಲೊಯಿಸ್, ಮತ್ತು ರೂತ್—ರಾಜ್ಯದ ಪರವಾಗಿ ತಮ್ಮ ನಿಲುವನ್ನು ತೆಗೆದುಕೊಂಡಿದ್ದರು. ಆದುದರಿಂದ ನಮ್ಮ ಇಡೀ ಕುಟುಂಬವು ಆ ಬೇಸಗೆಕಾಲದಲ್ಲಿ ಸೆಂಟ್ ಲೂಯಿಸ್ನಲ್ಲಿ ನಡೆದ ದೊಡ್ಡ ಅಧಿವೇಶನಕ್ಕೆ ಜೊತೆಯಾಗಿ ಹಾಜರಾಯಿತು.
ಆ ಅಧಿವೇಶನದ ಸ್ವಲ್ಪ ಸಮಯದ ನಂತರ, ನವೆಂಬರ್ 1941ರ ಅಂತ್ಯದಲ್ಲಿ ಸೋನ್ ಕೆಲಸವು ಕೊನೆಗೊಳ್ಳುವುದೆಂದು ಸೋನ್ ಸೇವಕರಿಗೆ ತಿಳಿಸಲಾಯಿತು. ಮುಂದಿನ ತಿಂಗಳು, ಅಮೆರಿಕವು IIನೆಯ ವಿಶ್ವ ಯುದ್ಧವನ್ನು ಪ್ರವೇಶಿಸಿತು. ಶುಶ್ರೂಷೆಯಲ್ಲಿ ಪ್ರತಿ ತಿಂಗಳು 175 ತಾಸುಗಳನ್ನು ವ್ಯಯಿಸುವುದನ್ನು ಕೇಳಿಕೊಂಡ, ವಿಶೇಷ ಪಯನೀಯರ್ ಸೇವೆಗೆ ನನ್ನನ್ನು ನೇಮಿಸಲಾಯಿತು.
ಸೇವೆಯ ವಿಶೇಷ ಸುಯೋಗಗಳು
ಜುಲೈ 1942ರಲ್ಲಿ, ವಿದೇಶದಲ್ಲಿ ಸೇವೆಸಲ್ಲಿಸಲು ಸಿದ್ಧನಿರುವೆನೊ ಎಂದು ಕೇಳಿದಂತಹ ಒಂದು ಪತ್ರವನ್ನು ನಾನು ಪಡೆದುಕೊಂಡೆ. ಹೌದೆಂದು ಉತ್ತರಿಸಿದ ಬಳಿಕ, ನನ್ನನ್ನು ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯವಾದ ಬೆತೆಲಿಗೆ ಆಮಂತ್ರಿಸಲಾಯಿತು. ಸುಮಾರು 20 ಅವಿವಾಹಿತ ಸಹೋದರರನ್ನು ಅದೇ ಸಮಯದಲ್ಲಿ ವಿಶೇಷ ತರಬೇತಿಗಾಗಿ ಕರೆಯಲಾಯಿತು.
ಸಾರುವ ಚಟುವಟಿಕೆಯು ಕಡಿಮೆಗೊಂಡಿತ್ತು ಮತ್ತು ಸಭೆಗಳನ್ನು ಆತ್ಮಿಕವಾಗಿ ಬಲಪಡಿಸಲಿಕ್ಕಾಗಿ ತರಬೇತಿ ನೀಡಲಾಗುವುದೆಂದು, ಆಗ ವಾಚ್ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ನೇತನ್ ಎಚ್. ನಾರ್ರವರು ವಿವರಿಸಿದರು. “ಸಭೆಯಲ್ಲಿ ಏನು ಸಮಸ್ಯೆಯಿದೆಯೆಂಬುದನ್ನು ಮಾತ್ರ ನಾವು ತಿಳಿದುಕೊಳ್ಳಲು ಬಯಸುವುದಿಲ್ಲ, ನೀವು ಅದರ ಕುರಿತಾಗಿ ಏನು ಮಾಡಿದ್ದೀರೆಂಬುದನ್ನು ನಾವು ತಿಳಿದುಕೊಳ್ಳಲು ಬಯಸುತ್ತೇವೆ,” ಎಂದು ಅವರು ಹೇಳಿದರು.
ನಾವು ಬೆತೆಲಿನಲ್ಲಿದ್ದಾಗ, 1977ರಲ್ಲಿ ಸಹೋದರ ನಾರ್ರ ಅನಂತರ ಅಧ್ಯಕ್ಷರಾದ ಫ್ರೆಡ್ ಫ್ರಾನ್ಸ್ರವರು, ಒಂದು ಭಾಷಣವನ್ನು ಕೊಟ್ಟರು. ಅದರಲ್ಲಿ ಅವರು ಹೇಳಿದ್ದು: “IIನೆಯ ವಿಶ್ವ ಯುದ್ಧವು ಅಂತ್ಯಗೊಳ್ಳುವುದು, ಮತ್ತು ಒಂದು ಮಹಾನ್ ಸಾರುವ ಕಾರ್ಯವು ತೆರೆಯುವುದು. ನಿಸ್ಸಂದೇಹವಾಗಿ ಲಕ್ಷಾಂತರ ಮಂದಿ ಇನ್ನೂ ಯೆಹೋವನ ಸಂಸ್ಥೆಗೆ ಒಟ್ಟುಗೂಡಿಸಲ್ಪಡುವರು!” ಆ ಭಾಷಣವು ನನ್ನ ಹೊರನೋಟವನ್ನು ಸಂಪೂರ್ಣವಾಗಿ ಬದಲಾಯಿಸಿತು. ನೇಮಕಗಳು ಕೊಡಲ್ಪಟ್ಟಾಗ, ನಾನು ಟೆನೆಸಿ ಮತ್ತು ಕೆಂಟಕಿಯ ರಾಜ್ಯಗಳಲ್ಲಿರುವ ಎಲ್ಲ ಸಭೆಗಳನ್ನು ಭೇಟಿಮಾಡಬೇಕಿತ್ತೆಂದು ನನಗೆ ತಿಳಿದುಬಂತು. ನಮ್ಮನ್ನು ಸಹೋದರರ ಸೇವಕರು ಎಂದು ಕರೆಯಲಾಗುತ್ತಿತ್ತು. ಆ ಪದವು ಈಗ ಸರ್ಕಿಟ್ ಮೇಲ್ವಿಚಾರಕನು ಆಗಿ ಬದಲಾಯಿಸಲ್ಪಟ್ಟಿದೆ.
ನಾನು ಇನ್ನೂ ಕೇವಲ 25 ವಯಸ್ಸಿನವನಾಗಿದ್ದಾಗಲೇ, 1942ರ ಅಕ್ಟೋಬರ್ 1ರಂದು ಸಭೆಗಳಲ್ಲಿ ಸೇವೆಸಲ್ಲಿಸಲಾರಂಭಿಸಿದೆ. ಆ ಸಮಯದಲ್ಲಿ ಕೆಲವು ಸಭೆಗಳನ್ನು ತಲಪುವ ಏಕಮಾತ್ರ ಮಾರ್ಗ, ನಡಿಗೆಯ ಮೂಲಕ ಅಥವಾ ಕುದುರೆಸವಾರಿಯ ಮೂಲಕವಾಗಿತ್ತು. ಕೆಲವೊಮ್ಮೆ ನಾನು ಯಾವ ಕುಟುಂಬದೊಂದಿಗೆ ತಂಗುತ್ತಿದ್ದೆನೋ ಆ ಕುಟುಂಬದೊಂದಿಗೆ ಒಂದೇ ಕೋಣೆಯಲ್ಲಿ ಮಲಗುತ್ತಿದ್ದೆ.
ಜುಲೈ 1943ರಲ್ಲಿ ಟೆನೆಸಿಯಲ್ಲಿದ್ದ ಗ್ರೀನ್ವಿಲ್ ಸಭೆಯಲ್ಲಿ ನಾನು ಸೇವೆಸಲ್ಲಿಸುತ್ತಿದ್ದಾಗ, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ ಎರಡನೆಯ ತರಗತಿಗೆ ಹಾಜರಾಗುವ ಒಂದು ಆಮಂತ್ರಣವನ್ನು ನಾನು ಪಡೆದುಕೊಂಡೆ. ಗಿಲ್ಯಡ್ನಲ್ಲಿ, ‘ಕೇಳಿದ ಸಂಗತಿಗಳಿಗೆ ಹೆಚ್ಚಾಗಿ ಲಕ್ಷ್ಯಕೊಡುವವರಾಗಿರು’ವುದು (NW) ಮತ್ತು ‘ಕರ್ತನ ಕೆಲಸದಲ್ಲಿ ಮಾಡಲು ಬಹಳಷ್ಟು’ ಇರುವುದು ನಿಜವಾಗಿಯೂ ಏನನ್ನು ಅರ್ಥೈಸುತ್ತದೆಂಬುದನ್ನು ನಾನು ಕಲಿತೆ. (ಇಬ್ರಿಯ 2:1; 1 ಕೊರಿಂಥ 15:58) ಶಾಲಾ ಪಾಠಕ್ರಮದ ಐದು ತಿಂಗಳುಗಳು ಬೇಗನೆ ಹಾರಿಹೋದವು, ಮತ್ತು 1944ರ ಜನವರಿ 31ರಂದು ಪದವಿಪ್ರಾಪ್ತಿ ದಿನವು ಬಂತು.
ಕೆನಡ ಮತ್ತು ಮುಂದೆ ಬೆಲ್ಜಿಯಮ್ಗೆ
ನಮ್ಮಲ್ಲಿ ಅನೇಕರು ಕೆನಡಕ್ಕೆ ನೇಮಿಸಲ್ಪಟ್ಟೆವು. ಅಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಯ ಮೇಲೆ ಇದ್ದ ನಿಷೇಧವನ್ನು ಆಗತಾನೇ ಎತ್ತಲಾಗಿತ್ತು. ನನ್ನನ್ನು ಸಂಚರಣ ಕೆಲಸಕ್ಕೆ ನೇಮಿಸಲಾಯಿತು. ಇದು ಕೆಲವು ಸಭೆಗಳ ನಡುವೆ ತುಂಬ ಅಂತರಗಳನ್ನು ಆವರಿಸುವುದನ್ನು ಅವಶ್ಯಪಡಿಸಿತು. ನಾನು ಪ್ರಯಾಣಿಸಿದಂತೆ, ಕೆನಡದಲ್ಲಿ ನಿಷೇಧದ ಸಮಯದಲ್ಲಿ ನಮ್ಮ ಸಾರುವ ಕಾರ್ಯವು ಹೇಗೆ ನಡೆಸಲ್ಪಡುತ್ತಿತ್ತೆಂಬುದರ ಅನುಭವಗಳನ್ನು ಕೇಳಿಸಿಕೊಳ್ಳುವುದು ಆನಂದಕರವಾಗಿತ್ತು. (ಅ. ಕೃತ್ಯಗಳು 5:29) ಯಾವುದನ್ನು ಮಿಂಚು ದಾಳಿಯೆಂದು ಕರೆಯಲಾಯಿತೊ ಅದರ ಕುರಿತಾಗಿ ಅನೇಕರು ಹೇಳಿದರು. ಆಗ ಒಂದೇ ರಾತ್ರಿಯಲ್ಲಿ, ಕೆನಡದ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ಕಾರ್ಯತಃ ಪ್ರತಿಯೊಂದು ಮನೆಯಲ್ಲಿ ಒಂದು ಪುಸ್ತಿಕೆಯನ್ನು ಇಡಲಾಯಿತು. ಮೇ 1945ರಲ್ಲಿ ಯೂರೋಪ್ನಲ್ಲಿನ ಯುದ್ಧವು ಕೊನೆಗೊಂಡಿತ್ತೆಂಬುದನ್ನು ತಿಳಿಯುವುದು ಎಂತಹ ಒಂದು ಶುಭ ವಾರ್ತೆಯಾಗಿತ್ತು!
ಆ ಬೇಸಗೆಕಾಲದಲ್ಲಿ, ಸಸ್ಕ್ಯಾಚಿವಾನ್ನ ಓಸೇಜ್ ಎಂಬ ಚಿಕ್ಕ ಪಟ್ಟಣದಲ್ಲಿನ ಒಂದು ಸಭೆಯಲ್ಲಿ ಸೇವೆಸಲ್ಲಿಸುತ್ತಿದ್ದಾಗ, ಸಹೋದರ ನಾರ್ರಿಂದ ನಾನು ಒಂದು ಪತ್ರವನ್ನು ಪಡೆದುಕೊಂಡೆ. ಅದು ಹೀಗೆ ಹೇಳಿತು: “ನಾನು ನಿನಗೆ ಬೆಲ್ಜಿಯಮ್ಗೆ ಹೋಗುವ ಸುಯೋಗವನ್ನು ನೀಡುತ್ತಿದ್ದೇನೆ. . . . ಆ ದೇಶದಲ್ಲಿ ಮಾಡಲು ಬಹಳಷ್ಟು ಕೆಲಸವಿದೆ. ಅದು ಒಂದು ಯುದ್ಧಛಿದ್ರ ದೇಶವಾಗಿದೆ. ಮತ್ತು ನಮ್ಮ ಸಹೋದರರಿಗೆ ಸಹಾಯದ ಅಗತ್ಯವಿದೆ, ಮತ್ತು ಅವರಿಗೆ ಅಗತ್ಯವಿರುವ ಯೋಗ್ಯ ನೆರವು ಹಾಗೂ ಸಾಂತ್ವನವನ್ನು ಕೊಡಲು ಅಮೆರಿಕದಿಂದ ಒಬ್ಬರನ್ನು ಕಳುಹಿಸುವುದು ಸೂಕ್ತವೆಂದು ತೋರುತ್ತದೆ.” ಆ ನೇಮಕವನ್ನು ಸ್ವೀಕರಿಸುತ್ತಾ, ನಾನು ತತ್ಕ್ಷಣವೇ ಉತ್ತರಿಸಿದೆ.
1945ರ ನವೆಂಬರ್ ತಿಂಗಳಿನಲ್ಲಿ, ನಾನು ಆಲ್ಸೇಷಿಯದ ಒಬ್ಬ ವೃದ್ಧ ಸಹೋದರನಾದ, ಚಾರ್ಲ್ಸ್ ಐಕರ್ರೊಂದಿಗೆ ಫ್ರೆಂಚ್ ಭಾಷೆಯನ್ನು ಅಭ್ಯಾಸಿಸುತ್ತಾ ಬ್ರೂಕ್ಲಿನ್ ಬೆತೆಲ್ನಲ್ಲಿದ್ದೆ. ಬ್ರಾಂಚ್ ಕಾರ್ಯವಿಧಾನದಲ್ಲೂ ನಾನು ಒಂದಿಷ್ಟು ಕ್ಷಿಪ್ರವಾದ ತರಬೇತಿಯನ್ನು ಪಡೆದುಕೊಂಡೆ. ಯೂರೋಪ್ಗೆ ಹೊರಡುವ ಮುನ್ನ, ಮಿಸುರಿಯ ಸೆಂಟ್ ಜೋಸೆಫ್ನಲ್ಲಿದ್ದ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಒಂದು ಸಂಕ್ಷಿಪ್ತ ಭೇಟಿಯನ್ನಿತ್ತೆ.
ಡಿಸೆಂಬರ್ 11ರಂದು, ನಾನು ಕ್ವೀನ್ ಎಲೀಸಬೆತ್ ಎಂಬ ಹಡಗಿನಲ್ಲಿ ನ್ಯೂ ಯಾರ್ಕ್ನಿಂದ ಹೊರಟು, ನಾಲ್ಕು ದಿನಗಳ ಬಳಿಕ ಇಂಗ್ಲೆಂಡಿನ ಸೌತ್ಯಾಂಪ್ಟನ್ಗೆ ತಲಪಿದೆ. ಬ್ರಿಟನಿನ ಬ್ರಾಂಚ್ನಲ್ಲಿ, ನಾನು ಹೆಚ್ಚಿನ ತರಬೇತಿಯನ್ನು ಪಡೆದುಕೊಳ್ಳುತ್ತಾ, ಅಲ್ಲಿ ಒಂದು ತಿಂಗಳು ತಂಗಿದೆ. ಅದರ ನಂತರ, 1946ರ ಜನವರಿ 15ರಂದು, ನಾನು ಇಂಗ್ಲಿಷ್ ಕಾಲುವೆಯನ್ನು ದಾಟಿ ಬೆಲ್ಜಿಯಮ್ನ ಆಸ್ಟೆಂಡ್ನಲ್ಲಿ ಇಳಿದೆ. ಅಲ್ಲಿಂದ ನಾನು ರೈಲುಗಾಡಿಯ ಮೂಲಕ ಬ್ರಸೆಲ್ಸ್ಗೆ ಹೋದೆ. ಅಲ್ಲಿ ಇಡೀ ಬೆತೆಲ್ ಕುಟುಂಬವು ನನ್ನನ್ನು ರೈಲ್ವೇ ನಿಲ್ದಾಣದಲ್ಲಿ ಬರಮಾಡಿಕೊಂಡಿತು.
ಯುದ್ಧಾನಂತರದ ಚುರುಕುಗೊಂಡ ಚಟುವಟಿಕೆ
ಬೆಲ್ಜಿಯಮ್ನಲ್ಲಿನ ರಾಜ್ಯ ಕಾರ್ಯದ ಮೇಲ್ವಿಚಾರಣೆ ಮಾಡುವುದು ನನ್ನ ನೇಮಕವಾಗಿದ್ದರೂ, ನನಗೆ ಆ ಭಾಷೆಯನ್ನು ಮಾತಾಡಲಿಕ್ಕೆ ಸಹ ಬರುತ್ತಿರಲಿಲ್ಲ. ಸುಮಾರು ಆರು ತಿಂಗಳಲ್ಲಿ, ದಿನನಿತ್ಯದ ಮಾತುಕತೆಗೆ ಬೇಕಾಗುವಷ್ಟು ಫ್ರೆಂಚ್ ಭಾಷೆಯನ್ನು ನಾನು ಕಲಿತೆ. ನಾಸಿ ರಾಜ್ಯದ ಸ್ವಾಧೀನತೆಯ ಐದು ವರ್ಷಗಳ ಸಮಯದಲ್ಲಿ ಸಾರುವ ಕೆಲಸವನ್ನು ಮುಂದುವರಿಸಲಿಕ್ಕಾಗಿ ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಿದವರೊಂದಿಗೆ ಕೆಲಸ ಮಾಡುವುದು ಒಂದು ಸುಯೋಗವಾಗಿತ್ತು. ಅವರಲ್ಲಿ ಕೆಲವರು ಆಗತಾನೇ ಕೂಟ ಶಿಬಿರಗಳಿಂದ ಬಿಡುಗಡೆಗೊಳಿಸಲ್ಪಟ್ಟಿದ್ದರು.
ಕೆಲಸವನ್ನು ವ್ಯವಸ್ಥಾಪಿಸಿ, ಬೈಬಲ್ ಸತ್ಯಕ್ಕಾಗಿ ಹಸಿದವರನ್ನು ಉಣಿಸಲಿಕ್ಕಾಗಿ ಸಹೋದರರು ಕಾತುರರಾಗಿದ್ದರು. ಆದುದರಿಂದ ಸಮ್ಮೇಳನಗಳನ್ನು ನಡೆಸಲಿಕ್ಕಾಗಿ ಮತ್ತು ಸಂಚರಣ ಮೇಲ್ವಿಚಾರಕರು ಸಭೆಗಳನ್ನು ಭೇಟಿಮಾಡಲಿಕ್ಕಾಗಿ ಏರ್ಪಾಡುಗಳು ಮಾಡಲ್ಪಟ್ಟವು. ಬ್ರೂಕ್ಲಿನ್ ಮುಖ್ಯಕಾರ್ಯಾಲಯದಿಂದ ಬಂದ ಪ್ರತಿನಿಧಿಗಳಾದ ನೇತನ್ ನಾರ್, ಮಿಲ್ಟನ್ ಹೆನ್ಶಲ್, ಫ್ರೆಡ್ ಫ್ರಾನ್ಸ್, ಗ್ರಾಂಟ್ ಸೂಟರ್, ಮತ್ತು ಜಾನ್ ಬೂತ್ರಿಂದಲೂ ನಾವು ಉತ್ತೇಜನದಾಯಕ ಸಂದರ್ಶನಗಳನ್ನು ಹೊಂದಿದೆವು. ಆ ಆರಂಭದ ದಿನಗಳಲ್ಲಿ ನಾನು ಸರ್ಕಿಟ್ ಮೇಲ್ವಿಚಾರಕನು, ಜಿಲ್ಲಾ ಮೇಲ್ವಿಚಾರಕನು ಮತ್ತು ಬ್ರಾಂಚ್ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸಿದೆ. 1952ರ ಡಿಸೆಂಬರ್ 6ರಂದು, ಬೆಲ್ಜಿಯಮ್ನಲ್ಲಿ ಸುಮಾರು ಏಳು ವರ್ಷಗಳ ಸೇವೆಯ ನಂತರ, ನಾನು ಈಮೀಲೀಯಾ ವಾನಾಪ್ಸ್ಲಾವುಕ್ಳನ್ನು ವಿವಾಹವಾದೆ. ಅವಳು ಕೂಡ ಬೆಲ್ಜಿಯಮ್ ಬ್ರಾಂಚ್ನಲ್ಲಿ ಕೆಲಸಮಾಡುತ್ತಿದ್ದಳು.
ಕೆಲವು ತಿಂಗಳುಗಳ ಬಳಿಕ 1953ರ ಎಪ್ರಿಲ್ 11ರಂದು, ನನ್ನನ್ನು ಸ್ಥಳಿಕ ಪೊಲೀಸ್ ಠಾಣೆಗೆ ಕರೆಯಲಾಯಿತು ಮತ್ತು ನನ್ನ ಉಪಸ್ಥಿತಿಯು ಬೆಲ್ಜಿಯಮ್ನ ಭದ್ರತೆಗೆ ಅಪಾಯಕಾರಿಯಾಗಿದೆಯೆಂದು ತಿಳಿಸಲಾಯಿತು. ರಾಜ್ಯ ಮಂಡಳಿಗೆ ನನ್ನ ಮೊಕದ್ದಮೆಯು ಅಪೀಲ್ ಮಾಡಲ್ಪಡುತ್ತಿದ್ದಾಗ, ಅದಕ್ಕಾಗಿ ಕಾಯಲು ನಾನು ಲಕ್ಸಂಬರ್ಗ್ಗೆ ಹೋದೆ.
1954ರ ಫೆಬ್ರವರಿಯಲ್ಲಿ ಬೆಲ್ಜಿಯಮ್ನ ರಾಜ್ಯ ಮಂಡಳಿಯು, ನನ್ನ ಉಪಸ್ಥಿತಿಯು ದೇಶಕ್ಕೆ ಅಪಾಯಕರವಾಗಿದೆಯೆಂಬ ತೀರ್ಮಾನವನ್ನು ಎತ್ತಿಹಿಡಿಯಿತು. ಒದಗಿಸಲ್ಪಟ್ಟ ಸಾಕ್ಷ್ಯವು ಇದಾಗಿತ್ತು: ಬೆಲ್ಜಿಯಮ್ನಲ್ಲಿ ನಾನು ಆಗಮಿಸಿದಂದಿನಿಂದ, ಆ ದೇಶದಲ್ಲಿನ ಸಾಕ್ಷಿಗಳ ಸಂಖ್ಯೆಯು ಗಮನಾರ್ಹವಾಗಿ ವೃದ್ಧಿಗೊಂಡಿತು—1946ರಲ್ಲಿ 804ರಿಂದ 1953ರಲ್ಲಿ 3,304ಕ್ಕೆ—ಮತ್ತು ಫಲಸ್ವರೂಪವಾಗಿ, ಅನೇಕ ಯುವ ಸಾಕ್ಷಿಗಳು ಕ್ರೈಸ್ತ ತಾಟಸ್ಥ್ಯಕ್ಕಾಗಿ ಒಂದು ದೃಢ ನಿಲುವನ್ನು ತೆಗೆದುಕೊಳ್ಳುತ್ತಿದ್ದದರಿಂದ ಬೆಲ್ಜಿಯಮ್ನ ಭದ್ರತೆಯು ಅಪಾಯಕ್ಕೊಡ್ಡಲ್ಪಟ್ಟಿತ್ತು. ಹೀಗಿರುವುದರಿಂದ, ಈಮೀಲೀಯಾ ಮತ್ತು ನಾನು ಸ್ವಿಟ್ಸರ್ಲೆಂಡ್ಗೆ ನೇಮಿಸಲ್ಪಟ್ಟೆವು. ಅಲ್ಲಿ ನಾವು ಫ್ರೆಂಚ್ ಭಾಷೆಯನ್ನಾಡುವ ವಿಭಾಗದಲ್ಲಿ ಸರ್ಕಿಟ್ ಕೆಲಸದಲ್ಲಿ ಸೇವೆ ಮಾಡಲಾರಂಭಿಸಿದೆವು.
ಕ್ರೈಸ್ತ ಹಿರಿಯರಿಗಾಗಿ ಹೆಚ್ಚಿನ ತರಬೇತಿಯನ್ನು ಕೊಡಲಿಕ್ಕಾಗಿರುವ ಒಂದು ಶಾಲೆಯಾದ, ರಾಜ್ಯ ಶುಶ್ರೂಷಾ ಶಾಲೆಯು ನ್ಯೂ ಯಾರ್ಕ್ನ ಸೌತ್ ಲ್ಯಾನ್ಸಿಂಗ್ನಲ್ಲಿ 1959ರಲ್ಲಿ ಸ್ಥಾಪಿಸಲ್ಪಟ್ಟಿತು. ಯೂರೋಪ್ನಲ್ಲಿ ಈ ಶಾಲೆಯ ತರಗತಿಗಳಿಗೆ ಕಲಿಸಲು ತರಬೇತಿಯನ್ನು ಪಡೆಯಲಿಕ್ಕಾಗಿ ನನ್ನನ್ನು ಅಲ್ಲಿಗೆ ಆಮಂತ್ರಿಸಲಾಯಿತು. ನಾನು ಅಮೆರಿಕದಲ್ಲಿದ್ದಾಗ, ಮಿಸುರಿಯ ಸೆಂಟ್ ಜೋಸೆಫ್ನಲ್ಲಿದ್ದ ನನ್ನ ಕುಟುಂಬವನ್ನು ಭೇಟಿಯಾದೆ. ಅಲ್ಲಿ ನಾನು ನನ್ನ ಪ್ರಿಯ ಅಮ್ಮನನ್ನು ಕೊನೆಯ ಬಾರಿಗೆ ನೋಡಿದೆ. ಅವರು ಜನವರಿ 1962ರಲ್ಲಿ ಮೃತರಾದರು; ತಂದೆಯವರು ಜೂನ್ 1955ರಲ್ಲೇ ನಿಧನಹೊಂದಿದ್ದರು.
ರಾಜ್ಯ ಶುಶ್ರೂಷಾ ಶಾಲೆಯು, 1961ರ ಮಾರ್ಚ್ ತಿಂಗಳಿನಲ್ಲಿ ಫ್ರಾನ್ಸ್ನ ಪ್ಯಾರಿಸ್ನಲ್ಲಿ ಆರಂಭವಾಯಿತು ಮತ್ತು ಈಮೀಲೀಯಾ ನನ್ನನ್ನು ಜೊತೆಗೂಡಿದಳು. ಫ್ರಾನ್ಸ್, ಬೆಲ್ಜಿಯಮ್, ಮತ್ತು ಸ್ವಿಟ್ಸರ್ಲೆಂಡ್ನಿಂದ ಜಿಲ್ಲಾ ಮೇಲ್ವಿಚಾರಕರು, ಸರ್ಕಿಟ್ ಮೇಲ್ವಿಚಾರಕರು, ಸಭಾ ಮೇಲ್ವಿಚಾರಕರು ಮತ್ತು ವಿಶೇಷ ಪಯನೀಯರರು ಆ ಶಾಲೆಗೆ ಬಂದರು. ಮುಂದಿನ 14 ತಿಂಗಳುಗಳಲ್ಲಿ, ಈ ನಾಲ್ಕು ವಾರಗಳ ಪಾಠಕ್ರಮದ 12 ತರಗತಿಗಳನ್ನು ನಾನು ನಡೆಸಿದೆ. ತದನಂತರ, ಏಪ್ರಿಲ್ 1962ರಲ್ಲಿ ಈಮೀಲೀಯಾ ಗರ್ಭಿಣಿಯಾಗಿದ್ದಳೆಂದು ನಮಗೆ ತಿಳಿದುಬಂತು.
ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವುದು
ನಮಗೆ ಕಾಯಂ ನಿವಾಸಿ ಪರ್ಮಿಟ್ಗಳು ಇದ್ದಂತಹ ಸ್ವಿಟ್ಸರ್ಲೆಂಡ್ನ ಜಿನಿವಾಗೆ ನಾವು ಹಿಂದಿರುಗಿದೆವು. ಆದರೆ ತೀವ್ರವಾದ ವಸತಿಯ ಕೊರತೆಯಿದ್ದದ್ದರಿಂದ, ವಾಸಿಸಲಿಕ್ಕಾಗಿ ಸ್ಥಳವನ್ನು ಕಂಡುಕೊಳ್ಳುವುದು ಸುಲಭವಾಗಿರಲಿಲ್ಲ. ಉದ್ಯೋಗವನ್ನು ಕಂಡುಕೊಳ್ಳುವುದು ಸಹ ಸುಲಭವಾಗಿರಲಿಲ್ಲ. ಕೊನೆಗೆ, ಜಿನಿವಾದ ಮಧ್ಯ ಭಾಗದಲ್ಲಿ ಒಂದು ದೊಡ್ಡ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ನನಗೆ ಒಂದು ಉದ್ಯೋಗ ಸಿಕ್ಕಿತು.
ಪೂರ್ಣ ಸಮಯದ ಶುಶ್ರೂಷೆಯಲ್ಲಿ ನಾನು 26 ವರ್ಷಗಳನ್ನು ಕಳೆದಿದ್ದೆ. ಆದುದರಿಂದ ಬದಲಾದ ನಮ್ಮ ಪರಿಸ್ಥಿತಿಗಳು ತುಂಬ ಹೊಂದಾಣಿಕೆಯನ್ನು ಅವಶ್ಯಪಡಿಸಿದವು. ಆ ಡಿಪಾರ್ಟ್ಮೆಂಟ್ ಸ್ಟೋರ್ನಲ್ಲಿ ನಾನು ಕೆಲಸ ಮಾಡಿ, ಲೋವಿಸ್ ಹಾಗೂ ಯೂನಿಸ್ ಎಂಬ ನಮ್ಮ ಇಬ್ಬರು ಪುತ್ರಿಯರನ್ನು ಪೋಷಿಸಲು ನಾನು ಸಹಾಯ ಮಾಡಿದ 22 ವರ್ಷಗಳ ಸಮಯದಲ್ಲಿ, ನಮ್ಮ ಕುಟುಂಬವು ಯಾವಾಗಲೂ ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಟ್ಟಿತು. (ಮತ್ತಾಯ 6:33) 1985ರಲ್ಲಿ ಐಹಿಕ ಕೆಲಸದಿಂದ ನಾನು ನಿವೃತ್ತಿಗೊಂಡ ಬಳಿಕ, ನಾನು ಒಬ್ಬ ಬದಲಿ (ಸಬ್ಸ್ಟಿಟ್ಯೂಟ್) ಸರ್ಕಿಟ್ ಮೇಲ್ವಿಚಾರಕನಾಗಿ ಸೇವೆಸಲ್ಲಿಸಲಾರಂಭಿಸಿದೆ.
ಈಮೀಲೀಯಾಳ ಆರೋಗ್ಯವು ತುಂಬ ಕೆಟ್ಟುಹೋಗಿರುವುದಾದರೂ, ಅವಳು ಶುಶ್ರೂಷೆಯಲ್ಲಿ ಅವಳ ಕೈಲಾದಷ್ಟನ್ನು ಮಾಡುತ್ತಾಳೆ. ಲೋವಿಸ್ ಸುಮಾರು ಹತ್ತು ವರ್ಷಗಳ ವರೆಗೆ ಒಬ್ಬ ಪಯನೀಯರಳಾಗಿ ಸೇವೆಸಲ್ಲಿಸಿದಳು. 1993ರ ಬೇಸಗೆಕಾಲದಲ್ಲಿ, ಮಾಸ್ಕೊದಲ್ಲಿ ಆ ಅತ್ಯಂತ ಅದ್ಭುತಕರವಾದ ಅಂತಾರಾಷ್ಟ್ರೀಯ ಅಧಿವೇಶನದಲ್ಲಿ ಆನಂದಿಸಲು ಶಕ್ತರಾದ್ದದ್ದು ಒಂದು ಸ್ಮರಣೀಯ ಆತ್ಮಿಕ ಘಟನೆಯಾಗಿತ್ತು! ತದನಂತರ ಸ್ವಲ್ಪ ಸಮಯದೊಳಗೆ, ಆಫ್ರಿಕದ ಸೆನಿಗಲ್ನಲ್ಲಿ ಒಂದು ರಜಾ ಪ್ರವಾಸದ ಸಮಯದಲ್ಲಿ, ಸಾಗರದಲ್ಲಿ ಈಜಾಡುತ್ತಿದ್ದಾಗ ಲೋವಿಸ್ ತನ್ನ ಜೀವವನ್ನು ಕಳೆದುಕೊಂಡಳು. ಶವಸಂಸ್ಕಾರವನ್ನು ನಡೆಸಲಿಕ್ಕಾಗಿ ನಾನು ಸೆನಿಗಲ್ಗೆ ಪ್ರಯಾಣಿಸಿದಾಗ ಆಫ್ರಿಕದ ನಮ್ಮ ಸಹೋದರರ ಮತ್ತು ಮಿಷನೆರಿಗಳು ತೋರಿಸಿದ ಪ್ರೀತಿ ಹಾಗೂ ದಯೆಯು ತುಂಬ ಸಾಂತ್ವನದಾಯಕವಾಗಿತ್ತು. ಲೋವಿಸ್ಳನ್ನು ಪುನರುತ್ಥಾನದಲ್ಲಿ ನೋಡಲು ನಾನೆಷ್ಟು ಹಾತೊರೆಯುತ್ತೇನೆ!—ಯೋಹಾನ 5:28, 29.
ನಾಲ್ಕು ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಒಬ್ಬ ಪ್ರೀತಿಯ ಸಂಗಾತಿಯ ನಿಷ್ಠಾವಂತ ಬೆಂಬಲದಲ್ಲಿ ಆನಂದಿಸಿರುವುದಕ್ಕಾಗಿ ನಾನು ಆಭಾರಿಯಾಗಿದ್ದೇನೆ. ನನ್ನ ಮನೋವ್ಯಥೆಗಳು ಮತ್ತು ತೊಂದರೆಗಳ ಎದುರಿನಲ್ಲೂ, ಯೆಹೋವನ ಪ್ರೀತಿಪೂರ್ವಕದಯೆಯು ಹಿತಕರವಾದದ್ದಾಗಿರುತ್ತದೆ ಮತ್ತು ಜೀವನವನ್ನು ಸಾರ್ಥಕಗೊಳಿಸಿದೆಯೆಂಬುದು ಖಂಡಿತ. ಕೀರ್ತನೆಗಾರನ ಮಾತುಗಳಲ್ಲಿ, ನಮ್ಮ ದೇವರಾದ ಯೆಹೋವನ ಕುರಿತಾಗಿ ಹೀಗೆ ಘೋಷಿಸುವಂತೆ ನನ್ನ ಹೃದಯವು ಪ್ರಚೋದಿಸಲ್ಪಟ್ಟಿದೆ: “ನಿನ್ನ ಪ್ರೇಮಾನುಭವವು [“ಪ್ರೀತಿಪೂರ್ವಕದಯೆಯು,” NW] ಜೀವಕ್ಕಿಂತಲೂ ಶ್ರೇಷ್ಠ; ನನ್ನ ಬಾಯಿ ನಿನ್ನನ್ನು ಕೀರ್ತಿಸುವದು.”—ಕೀರ್ತನೆ 63:3.
[ಪುಟ 26 ರಲ್ಲಿರುವ ಚಿತ್ರ]
ಫೋನೊಗ್ರಾಫ್ನೊಂದಿಗೆ ನಾವು ಸಾರುವಿಕೆಯ ಕಾರ್ಯವನ್ನು ಮುಂದೊತ್ತಿದೆವು
[ಪುಟ 26 ರಲ್ಲಿರುವ ಚಿತ್ರ]
1936ರಲ್ಲಿ ನನ್ನ ಹೆತ್ತವರು
[ಪುಟ 26 ರಲ್ಲಿರುವ ಚಿತ್ರ]
1948ರಲ್ಲಿ ಬೆಲ್ಜಿಯಮ್ನಲ್ಲಿ ಬೀದಿ ಸಾಕ್ಷಿಕಾರ್ಯ ಮಾಡುತ್ತಿರುವುದು