ಇದು ಶ್ಲಾಘನೆಯೋ ಮುಖಸ್ತುತಿಯೋ?
ಯಾರೋ ಒಬ್ಬರು ನಿಮಗೆ “ನಿನ್ನ ಹೊಸ ಕೇಶಶೈಲಿಯು ತುಂಬ ಚೆನ್ನಾಗಿ ಕಾಣಿಸುತ್ತದೆ!” ಎಂದು ಹೇಳುತ್ತಾರೆ. ಇದು ಶ್ಲಾಘನೆಯೋ ಮುಖಸ್ತುತಿಯೋ? “ಆ ಸೂಟು ನಿಮಗೆ ಚೆನ್ನಾಗಿ ಒಪ್ಪುತ್ತದೆ!” ಶ್ಲಾಘನೆಯೋ ಮುಖಸ್ತುತಿಯೋ? “ಇಷ್ಟು ಸ್ವಾದಿಷ್ಟಕರವಾದ ಊಟವನ್ನು ನಾನು ಇಷ್ಟರ ತನಕ ತಿಂದೇ ಇರಲಿಲ್ಲ!” ಇದು ಶ್ಲಾಘನೆಯೋ ಮುಖಸ್ತುತಿಯೋ? ನಾವು ಇಂಥ ಅಭಿನಂದನೆಗಳನ್ನು ಪಡೆದುಕೊಳ್ಳುವಾಗ, ಅವು ನಿಜವಾಗಿಯೂ ನಿಷ್ಕಪಟವೂ ಸತ್ಯಪೂರ್ಣವೂ ಆಗಿವೆಯೋ ಇಲ್ಲವೇ ನಮ್ಮನ್ನು ಪ್ರಸನ್ನಗೊಳಿಸಲಿಕ್ಕಾಗಿ ಸುಮ್ಮನೆ ಹೇಳಲ್ಪಟ್ಟಿವೆಯೋ ಎಂದು ನಾವು ಸೋಜಿಗಪಡಬಹುದು.
ಒಬ್ಬ ವ್ಯಕ್ತಿಯು ನಮಗೆ ಹೇಳುವಂಥದ್ದು ಶ್ಲಾಘನೆಯೋ ಮುಖಸ್ತುತಿಯೋ ಎಂಬುದು ನಮಗೆ ಹೇಗೆ ಗೊತ್ತಾಗಸಾಧ್ಯವಿದೆ? ಅದು ಚಿಂತೆಮಾಡಬೇಕಾದ ವಿಷಯವೋ? ಹೇಳಿದ ವಿಷಯದ ಸೂಚಿತಾರ್ಥವನ್ನು ನಾವು ಸುಮ್ಮನೆ ಸ್ವೀಕರಿಸಿ, ಅದು ಕೊಡುವ ಸುಖಾನುಭವದಲ್ಲಿ ಆನಂದಿಸಸಾಧ್ಯವಿಲ್ಲವೋ? ನಾವು ಇತರರನ್ನು ಶ್ಲಾಘಿಸುವ ಕುರಿತೇನು? ನಮ್ಮ ಹೇತುಗಳನ್ನು ನಾವು ಎಂದಾದರೂ ಪರೀಕ್ಷಿಸಿದ್ದೇವೋ? ಈ ಪ್ರಶ್ನೆಗಳ ಬಗ್ಗೆ ಆಲೋಚಿಸುವುದು, ವಿವೇಚನೆಯುಳ್ಳವರಾಗಿರಲು ಹಾಗೂ ಯೆಹೋವ ದೇವರಿಗೆ ಸ್ತುತಿಯನ್ನು ತರುವ ಒಂದು ವಿಧದಲ್ಲಿ ನಮ್ಮ ನಾಲಿಗೆಯನ್ನು ಉಪಯೋಗಿಸಲು ನಮಗೆ ಸಹಾಯಮಾಡಬಲ್ಲದು.
ಶ್ಲಾಘನೆ ಹಾಗೂ ಮುಖಸ್ತುತಿ ಅರ್ಥನಿರೂಪಿಸಲ್ಪಟ್ಟಿದೆ
ವೆಬ್‌ಸ್ಟರ್ ಡಿಕ್ಷನೆರಿಯು ಶ್ಲಾಘನೆಯನ್ನು, ಮೆಚ್ಚುಗೆ ಅಥವಾ ಪ್ರಶಂಸೆಯ ಅಭಿವ್ಯಕ್ತಿಯಾಗಿ ಅರ್ಥನಿರೂಪಿಸುತ್ತದೆ ಮತ್ತು ಈ ಪದವು ಆರಾಧನೆ ಅಥವಾ ಮಹಿಮೆಯನ್ನು ಕೊಡುವುದನ್ನು ಸಹ ಅರ್ಥೈಸಬಲ್ಲದು. ಸ್ಫುಟವಾಗಿ ಕೊನೆಯ ಎರಡು ಅರ್ಥಗಳು ಯೆಹೋವ ದೇವರ ಕಡೆಗೆ ನಿರ್ದೇಶಿಸಲ್ಪಟ್ಟ ಶ್ಲಾಘನೆಗೆ ಮಾತ್ರ ಅನ್ವಯಿಸುತ್ತವೆ. ಪ್ರೇರಿತ ಕೀರ್ತನೆಗಾರನು ಪ್ರೋತ್ಸಾಹಿಸುವಂತೆ, ಇದು ಸತ್ಯ ಆರಾಧನೆಯ ಸಮಗ್ರ ಭಾಗವಾಗಿದೆ: “ಸ್ತುತಿಸುವದು ಒಳ್ಳೇದೂ ಸಂತೋಷಕರವೂ ಆಗಿದೆ. . . . ಕೀರ್ತಿಸುವುದು ಯುಕ್ತವಾಗಿದೆ.” “ಶ್ವಾಸವಿರುವದೆಲ್ಲವೂ ಯೆಹೋವನನ್ನು ಸ್ತುತಿಸಲಿ.”—ಕೀರ್ತನೆ 147:1; 150:6.
ಆದರೆ, ಮಾನವರಿಗೆ ಶ್ಲಾಘನೆಯನ್ನು ನೀಡಸಾಧ್ಯವಿಲ್ಲವೆಂಬುದನ್ನು ಇದು ಅರ್ಥೈಸುವುದಿಲ್ಲ. ಇದನ್ನು ಪ್ರಶಂಸೆ, ಸಮ್ಮತಿ, ಅಥವಾ ಸಾಧಕ ತೀರ್ಪಿನ ಅರ್ಥದಲ್ಲಿ ಕೊಡಸಾಧ್ಯವಿದೆ. ಯೇಸುವಿನಿಂದ ಕೊಡಲ್ಪಟ್ಟ ಸಾಮ್ಯದಲ್ಲಿ, ಒಬ್ಬ ಧಣಿಯು ತನ್ನ ಸೇವಕನಿಗೆ ಹೀಗೆ ಹೇಳುತ್ತಾನೆ: “ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು.”—ಮತ್ತಾಯ 25:21.
ಇನ್ನೊಂದು ಕಡೆಯಲ್ಲಿ, ಮುಖಸ್ತುತಿಯು ತಪ್ಪಾದ, ಕಪಟ ಅಥವಾ ಮಿತಿಮೀರಿದ ಶ್ಲಾಘನೆಯಾಗಿ ಅರ್ಥನಿರೂಪಿಸಲ್ಪಡುತ್ತದೆ. ಮುಖಸ್ತುತಿಮಾಡುವವನು ಸಾಮಾನ್ಯವಾಗಿ ಸ್ವಆಸಕ್ತಿಯ ಹೇತುಗಳುಳ್ಳವನಾಗಿರುತ್ತಾನೆ. ಇತರರಿಂದ ಒಲವನ್ನು ಗಿಟ್ಟಿಸಿಕೊಳ್ಳಲು ಅಥವಾ ಭೌತಿಕ ಲಾಭಗಳನ್ನು ಪಡೆದುಕೊಳ್ಳಲು ಇಲ್ಲವೇ ಮುಖಸ್ತುತಿಮಾಡುವವನ ಕಡೆಗೆ ಋಣದ ಭಾವವನ್ನು ಮೂಡಿಸಲು ಕೃತ್ರಿಮ ಶ್ಲಾಘನೆ ಅಥವಾ ಅತಿಸ್ತುತಿಯು ನೀಡಲಾಗುತ್ತದೆ. ಹೀಗೆ ಮುಖಸ್ತುತಿಮಾಡುವವರು ಸ್ವಾರ್ಥತೆಯಿಂದ ಪ್ರೇರಿಸಲ್ಪಡುತ್ತಾರೆ. ಯೂದ 16ಕ್ಕನುಸಾರವಾಗಿ, ಅವರು “ಸ್ವಪ್ರಯೋಜನಕ್ಕಾಗಿ ಮುಖಸ್ತುತಿ ಮಾಡುತ್ತಾರೆ.”
ಶಾಸ್ತ್ರೀಯ ದೃಷ್ಟಿಕೋನ
ಜೊತೆಮಾನವರನ್ನು ಶ್ಲಾಘಿಸುವುದರ ವಿಷಯದಲ್ಲಿ ಶಾಸ್ತ್ರೀಯ ದೃಷ್ಟಿಕೋನವೇನಾಗಿದೆ? ಈ ಸಂಬಂಧದಲ್ಲಿ ಅನುಸರಿಸಲಿಕ್ಕಾಗಿ ಯೆಹೋವನು ನಮಗಾಗಿ ಒಂದು ನಮೂನೆಯನ್ನು ಇಡುತ್ತಾನೆ. ನಾವು ಯೆಹೋವನ ಚಿತ್ತವನ್ನು ಮಾಡುವಲ್ಲಿ ಶ್ಲಾಘಿಸಲ್ಪಡುವೆವು ಎಂಬುದಾಗಿ ಬೈಬಲಿನಲ್ಲಿ ಹೇಳಲಾಗಿದೆ. “ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವದು” ಎಂದು ಅಪೊಸ್ತಲ ಪೌಲನು ಹೇಳುತ್ತಾನೆ. ನಮ್ಮ ನಂಬಿಕೆಯ ಪರೀಕ್ಷಿಸಲ್ಪಟ್ಟ ಗುಣಮಟ್ಟವು “ಶ್ಲಾಘನೆಗೆ ಒಂದು ಕಾರಣವಾಗಿರಬಹುದು” (NW) ಎಂದು ಪೇತ್ರನು ನಮಗೆ ಹೇಳುತ್ತಾನೆ. ಆದುದರಿಂದ ಯೆಹೋವನು ಮಾನವರನ್ನು ಶ್ಲಾಘಿಸುವನು ಎಂಬ ನಿಜಾಂಶವು, ಯಥಾರ್ಥವಾದ ಶ್ಲಾಘನೆಯನ್ನು ನೀಡುವುದು, ದಯಾಪರವೂ, ಪ್ರೀತಿಪರವೂ ಪ್ರಯೋಜನಕಾರಿಯೂ ಆದ ಕ್ರಿಯೆಯಾಗಿದೆ ಮತ್ತು ಉಪೇಕ್ಷಿಸಲ್ಪಡಬಾರದಾದ ಒಂದು ವಿಷಯವಾಗಿದೆ ಎಂಬುದನ್ನು ತೋರಿಸುತ್ತದೆ.—1 ಕೊರಿಂಥ 4:5; 1 ಪೇತ್ರ 1:7.
ಬೈಬಲಿಗನುಸಾರ, ನಮಗೆ ಶ್ಲಾಘನೆಯು ಬರಸಾಧ್ಯವಿರುವ ಮತ್ತೊಂದು ಮೂಲವು, ನಮ್ಮ ಒಳ್ಳೆಯ ನಡವಳಿಕೆಯನ್ನು ಗಮನಿಸಿ, ನಮ್ಮನ್ನು ನಿಷ್ಕಪಟವಾಗಿ ಶ್ಲಾಘಿಸುವ ಸರಕಾರೀ ಅಧಿಕಾರಿಗಳಾಗಿದ್ದಾರೆ. “ಒಳ್ಳೇದನ್ನು ಮಾಡು; ಆಗ ಆ ಅಧಿಕಾರಿಯಿಂದಲೇ ನಿನಗೆ ಹೊಗಳಿಕೆಯುಂಟಾಗುವದು” ಎಂದು ನಮಗೆ ಹೇಳಲಾಗಿದೆ. (ರೋಮಾಪುರ 13:3) ನಿಷ್ಕಪಟವಾಗಿ ಮಾತಾಡುವ ಹಾಗೂ ನಮ್ಮನ್ನು ಶ್ಲಾಘಿಸುವುದರಲ್ಲಿ ಯಾವುದೇ ಗುಪ್ತ ಹೇತುವಿಲ್ಲದ ಜನರಿಂದ ಸಹ ನಾವು ಶ್ಲಾಘನೆಯನ್ನು ಪಡೆದುಕೊಳ್ಳಬಹುದು. ಪ್ರೇರಿತ ಶಾಸ್ತ್ರಗಳು ಜ್ಞಾನೋಕ್ತಿ 27:2ರಲ್ಲಿ ಹೇಳುವುದು: “ನಿನ್ನನ್ನು ನೀನೇ ಹೊಗಳಿಕೊಳ್ಳಬೇಡ, ಮತ್ತೊಬ್ಬನು ಹೊಗಳಿದರೆ ಹೊಗಳಲಿ.” ಇದು ಮಾನವರಿಂದ ಶ್ಲಾಘನೆಯನ್ನು ಸ್ವೀಕರಿಸುವುದು ಯೋಗ್ಯವಾದದ್ದಾಗಿದೆ ಎಂಬುದನ್ನು ಸೂಚಿಸುತ್ತದೆ.
ಮುಖಸ್ತುತಿಯನ್ನು ಕೊಡುವುದು ಅಥವಾ ಪಡೆದುಕೊಳ್ಳುವ ಸಂಬಂಧದಲ್ಲಿ ವಿಷಯವು ಹಾಗಿರುವುದಿಲ್ಲ. ಮುಖಸ್ತುತಿಯ ಮಾತುಗಳು ಯೆಹೋವನಿಗೆ ಏಕೆ ಅಷ್ಟೊಂದು ಅಪ್ರಸನ್ನಕರವಾದದ್ದಾಗಿವೆ? ಒಂದು ವಿಷಯವೇನೆಂದರೆ, ಅದು ಕಪಟತನವಾಗಿದೆ ಹಾಗೂ ಕಪಟತನವನ್ನು ಯೆಹೋವನು ಖಂಡಿಸುತ್ತಾನೆ. (ಜ್ಞಾನೋಕ್ತಿ 23:6, 7ನ್ನು ಹೋಲಿಸಿರಿ.) ಅಷ್ಟು ಮಾತ್ರವಲ್ಲದೆ, ಅದು ಪ್ರಾಮಾಣಿಕವಾಗಿರುವುದಿಲ್ಲ. ದೇವರ ಅಸಮ್ಮತಿಯ ಖಾತ್ರಿಯುಳ್ಳ ಜನರನ್ನು ವರ್ಣಿಸುತ್ತಾ, ಕೀರ್ತನೆಗಾರನು ಹೀಗೆ ಹೇಳುತ್ತಾನೆ: “ಪ್ರತಿಯೊಬ್ಬರು ನೆರೆಯವರೊಡನೆ ಹುಸಿಯನ್ನಾಡುತ್ತಾರೆ, ಅವರು ವಂಚನೆಯ [“ಮುಖಸ್ತುತಿಮಾಡುವ,” JB] ತುಟಿಗಳಿಂದ ಹೊರಗೊಂದು ಒಳಗೊಂದು ಮಾತಾಡುತ್ತಾರೆ. ಯೆಹೋವನು ವಂಚನೆಯ [“ಮುಖಸ್ತುತಿಮಾಡುವ,” JB] ತುಟಿಗಳನ್ನೂ ಬಡಾಯಿ ನಾಲಿಗೆಯನ್ನೂ ಕಡಿದುಬಿಡಲಿ.”—ಕೀರ್ತನೆ 12:2, 3.
ಎಲ್ಲಕ್ಕಿಂತಲೂ ಮಿಗಿಲಾಗಿ, ಮುಖಸ್ತುತಿಯು ಅಪ್ರೀತಿಕರವಾಗಿದೆ. ಅದು ಸ್ವಾರ್ಥತೆಯಿಂದ ಪ್ರಚೋದಿಸಲ್ಪಡುತ್ತದೆ. ಮುಖಸ್ತುತಿಮಾಡುವವರ ಬಗ್ಗೆ ಮಾತಾಡಿದ ಬಳಿಕ ಕೀರ್ತನೆಗಾರನಾದ ದಾವೀದನು ಅವರು ಹೀಗೆ ಹೇಳುತ್ತಿರುವುದನ್ನು ಉದ್ಧರಿಸಿಹೇಳುತ್ತಾನೆ: “ನಮ್ಮ ಮಾತುಗಳಿಗೆ ತಡೆಯಿಲ್ಲವಲ್ಲಾ; ನಮ್ಮ ತುಟಿಗಳು ನಮ್ಮವೇ; ನಮಗೆ ಒಡೆಯನು ಯಾವನು.” ಯೆಹೋವನು ಅಂಥ ಸ್ವಾರ್ಥಿಗಳನ್ನು ‘ಬಾಧಿತರ ಲೂಟಿಗಾರರು’ ಎಂಬುದಾಗಿ ವರ್ಣಿಸುತ್ತಾನೆ. ಅವರು ತಮ್ಮ ನಾಲಿಗೆಗಳನ್ನು ಇತರರನ್ನು ಬಲಪಡಿಸಲು ಅಲ್ಲ ಬದಲಾಗಿ ಅವರನ್ನು ಲೂಟಿಮಾಡಿ, ಬಾಧಿಸಲಿಕ್ಕಾಗಿ ಉಪಯೋಗಿಸುತ್ತಾರೆ.—ಕೀರ್ತನೆ 12:4, 5.
ಮುಖಸ್ತುತಿ—ಒಂದು ಪಾಶ
“ನೆರೆಯವನೊಂದಿಗೆ ವಂಚಿಸುವ ಸವಿನುಡಿಗಳನ್ನಾಡುವವನು [“ಮುಖಸ್ತುತಿಮಾಡುವವನು,” NW] ಅವನ ಹೆಜ್ಜೆಗೆ ಬಲೆಯನ್ನೊಡ್ಡುವನು.” ಹೀಗೆಂದು ವಿವೇಕಿ ರಾಜ ಸೊಲೊಮೋನನು ಹೇಳುತ್ತಾನೆ ಮತ್ತು ಅದು ಎಷ್ಟು ಸತ್ಯ! (ಜ್ಞಾನೋಕ್ತಿ 29:5) ಫರಿಸಾಯರು ಮುಖಸ್ತುತಿಮಾಡುವ ಮೂಲಕ ಯೇಸುವಿಗೆ ಪಾಶವನ್ನು ಹರವಲು ಪ್ರಯತ್ನಿಸಿದರು. “ಗುರುವೇ, ನೀನು ಸತ್ಯವಂತನು, ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನು, ಯಾರಿಗೂ ಹೆದರದವನು; ನೀನು ಜನರ ಮುಖದಿಚ್ಛೆಗೆ ಮಾತಾಡುವವನಲ್ಲ” ಎಂದು ಅವರು ಹೇಳಿದರು. ಅದು ಎಷ್ಟು ನಿರಪಾಯಕಾರಿಯಾದ ಮಾತಾಗಿ ಧ್ವನಿಸಿತು! ಆದರೆ ಅವರ ನಯವಾದ ನುಡಿಗಳಿಂದ ಯೇಸು ಮೋಸಹೋಗಲಿಲ್ಲ. ಅವರು ತನ್ನ ಸತ್ಯಪೂರ್ಣ ಕಲಿಸುವಿಕೆಯನ್ನು ನಂಬಲಿಲ್ಲ, ಬದಲಿಗೆ ಕೈಸರನಿಗೆ ತೆರಿಗೆಯನ್ನು ಕೊಡುವುದರ ವಿಷಯದ ಕುರಿತ ತನ್ನ ಮಾತಿನಲ್ಲಿ ತನ್ನನ್ನು ಸಿಕ್ಕಿಸಲು ಪ್ರಯತ್ನಿಸುತ್ತಿದ್ದರಷ್ಟೇ ಎಂದು ಅವನು ಅರಿತಿದ್ದನು.—ಮತ್ತಾಯ 22:15-22.
ಪ್ರಥಮ ಶತಮಾನದ ರಾಜ ಹೆರೋದನು ಯೇಸುವಿಗೆ ತದ್ವಿರುದ್ಧವಾಗಿದ್ದನು. ಕೈಸರೈಯ ಪಟ್ಟಣದಲ್ಲಿ ಅವನು ಒಂದು ಸಾರ್ವಜನಿಕ ಭಾಷಣಕೊಟ್ಟಾಗ, ಜನರು ಪ್ರತಿಕ್ರಿಯಿಸಿದ್ದು: “ಇದು ಮನುಷ್ಯನ ನುಡಿಯಲ್ಲ, ದೇವರ ನುಡಿಯೇ.” ಅಂಥ ಗದ್ದಲಭರಿತ, ತಪ್ಪಾದ ಶ್ಲಾಘನೆಗಾಗಿ ಆ ಜನರನ್ನು ಗದರಿಸುವ ಬದಲಾಗಿ, ಹೆರೋದನು ಆ ಮುಖಸ್ತುತಿಯನ್ನು ಸ್ವೀಕರಿಸಿದನು. ಯೆಹೋವನ ದೂತನು ತತ್‌ಕ್ಷಣವೇ ಮುಯ್ಯಿತೀರಿಸಿದನು. ಹೀಗೆ ಹೆರೋದನು ಹುಳುಬಿದ್ದು ಸತ್ತನು.—ಅ. ಕೃತ್ಯಗಳು 12:21-23.
ಮುಖಸ್ತುತಿಯೋ ಇಲ್ಲವೋ ಎಂಬುದನ್ನು ಗ್ರಹಿಸಲು ಒಬ್ಬ ಪ್ರೌಢ ಕ್ರೈಸ್ತನು ಜಾಗರೂಕನಾಗಿರುತ್ತಾನೆ. ನ್ಯಾಯನಿರ್ಣಾಯಕ ವಿಷಯದಲ್ಲಿ ಒಳಗೂಡಿರುವ ವ್ಯಕ್ತಿಯೊಬ್ಬನು ಶ್ಲಾಘನೆಯ ಮಹಾಪೂರವನ್ನೇ ಹರಿಸುತ್ತಾ, ಪ್ರಾಯಶಃ ಮತ್ತೊಬ್ಬ ಹಿರಿಯನಿಗಿಂತ ಈ ಹಿರಿಯನು ಬಹಳ ದಯಾಭಾವವುಳ್ಳವನೂ ಸಹಾನುಭೂತಿಯುಳ್ಳವನೂ ಆಗಿದ್ದಾನೆಂದು ಹೇಳುವಷ್ಟರ ಮಟ್ಟಿಗೂ ಹೋಗಬಹುದು, ಆಗ ಸಭೆಯ ಹಿರಿಯರು ವಿಶೇಷವಾಗಿ ಜಾಗರೂಕರಾಗಿರಬೇಕು.
ಮುಖಸ್ತುತಿಯು ಒಡ್ಡಬಲ್ಲ ಮತ್ತೊಂದು ಪಾಶವನ್ನು ಬೈಬಲು ಸ್ಫುಟವಾಗಿ ತೋರಿಸುತ್ತದೆ. ಒಬ್ಬ ಜಾರಳಿಂದ ಯುವ ವ್ಯಕ್ತಿಯೊಬ್ಬನು ಹೇಗೆ ಅನೈತಿಕತೆಗೆ ಸೆಳೆಯಲ್ಪಡುತ್ತಾನೆ ಎಂಬುದನ್ನು ಅದು ವರ್ಣಿಸುತ್ತದೆ. (ಜ್ಞಾನೋಕ್ತಿ 7:5, 21) ಈ ಎಚ್ಚರಿಕೆಯು ಇಂದಿನ ಪರಿಸ್ಥಿತಿಗೆ ಸಮಂಜಸವಾಗಿದೆ. ಪ್ರತಿ ವರ್ಷ ಕ್ರೈಸ್ತ ಸಭೆಯಿಂದ ಬಹಿಷ್ಕೃತರಾಗುವವರಲ್ಲಿ, ಅನೇಕರು ಅನೈತಿಕ ನಡವಳಿಕೆಗಾಗಿ ತೆಗೆದುಹಾಕಲ್ಪಟ್ಟಿದ್ದಾರೆ. ಅಂಥ ಗಂಭೀರತರದ ಪಾಪಕ್ಕೆ ಈಡಾದದ್ದು, ಮುಖಸ್ತುತಿಯಿಂದ ಪ್ರಾರಂಭವಾಗಿರಸಾಧ್ಯವೋ? ಮನುಷ್ಯರು ಅಭಿನಂದನೆಗಳಿಗಾಗಿ ಹಾಗೂ ಪ್ರಶಂಸೆಗಳಿಗಾಗಿ ಬಹಳ ಮಹಾಕಾಂಕ್ಷೆಯುಳ್ಳವರಾಗಿರುವ ಕಾರಣ, ಮುಖಸ್ತುತಿಮಾಡುವವರ ತುಟಿಗಳಿಂದ ಬರುವ ನಯನುಡಿಗಳು ಅಯೋಗ್ಯ ನಡತೆಯ ಕಡೆಗಿರುವ ಒಬ್ಬ ಕ್ರೈಸ್ತನ ನಿರೋಧಶಕ್ತಿಯನ್ನು ಕಡಮೆಮಾಡಬಲ್ಲದು. ಅಂಥ ಮಾತುಗಳ ವಿರುದ್ಧ ಎಚ್ಚರಿಕೆಯಿಂದಿರದಿರುವಾಗ, ಅವು ಗಂಭೀರತರವಾದ ಪರಿಣಾಮಗಳಿಗೆ ನಡೆಸಸಾಧ್ಯವಿದೆ.
ಮುಖಸ್ತುತಿಯ ವಿರುದ್ಧ ರಕ್ಷಣೋಪಾಯಗಳು
ಮುಖಸ್ತುತಿಯು, ಮುಖಸ್ತುತಿಮಾಡಲ್ಪಟ್ಟವನ ಸ್ವಪ್ರೀತಿ ಅಥವಾ ಒಣಹೆಮ್ಮೆಯನ್ನು ತಣಿಸುತ್ತದೆ. ಒಬ್ಬ ವ್ಯಕ್ತಿಯು, ತಾನು ಒಂದಲ್ಲ ಒಂದು ವಿಧದಲ್ಲಿ ಇತರರಿಗಿಂತ ಶ್ರೇಷ್ಠನು ಎಂಬುದಾಗಿ ಭಾವಿಸುವಂತೆ ಮಾಡುತ್ತಾ, ತನ್ನ ಸ್ವಂತ ಯೋಗ್ಯತೆಯ ಬಗ್ಗೆ ಅತಿಯಾಗಿ ನೆನಸುವಂತೆ ಅದು ಮಾಡುತ್ತದೆ. ತತ್ತ್ವಜ್ಞಾನಿ ಫ್ರಾನ್ಸ್‌ವ ಲಾ ರೋಷ್‌ಫೂಕೋ ಮುಖಸ್ತುತಿಯನ್ನು ಖೋಟಾ ನೋಟಿಗೆ ಹೋಲಿಸಿದನು. “ಜಂಬದ ಕಾರಣವೇ ಅದು ಚಲಾವಣೆಯಾಗುತ್ತದೆ.” ಹೀಗೆ ಒಬ್ಬನು ತನ್ನನ್ನು ಕಾಪಾಡಿಕೊಳ್ಳಬೇಕಾದರೆ, ಅಪೊಸ್ತಲ ಪೌಲನ ಪ್ರಾಯೋಗಿಕ ಬುದ್ಧಿವಾದವನ್ನು ಗಮನಕ್ಕೆ ತೆಗೆದುಕೊಳ್ಳಬೇಕು: “ನಿಮ್ಮಲ್ಲಿ ಒಬ್ಬೊಬ್ಬನಿಗೂ ಹೇಳುವದೇನಂದರೆ ಯಾರೂ ತನ್ನ ಯೋಗ್ಯತೆಗೆ ಮೀರಿ ತನ್ನನ್ನು ಭಾವಿಸಿಕೊಳ್ಳದೆ ದೇವರು ಒಬ್ಬೊಬ್ಬನಿಗೆ ಎಂಥೆಂಥ ವಿಶ್ವಾಸ ಬಲವನ್ನು ಕೊಟ್ಟನೋ ಅದಕ್ಕೆ ತಕ್ಕ ಹಾಗೆ ನ್ಯಾಯವಾದ ಅಭಿಪ್ರಾಯದಿಂದ ತನ್ನನ್ನು ಭಾವಿಸಿಕೊಳ್ಳಬೇಕು.”—ರೋಮಾಪುರ 12:3.
ನಮ್ಮ ಕಿವಿಗಳಿಗೆ ಹಿತಕರವಾಗಿರುವ ವಿಷಯಗಳನ್ನು ಕೇಳಿಸಿಕೊಳ್ಳಲು ಇಷ್ಟಪಡುವುದು ನಮ್ಮ ಸಹಜ ಪ್ರವೃತ್ತಿಯಾಗಿರುವುದಾದರೂ, ಹೆಚ್ಚಿನ ಸಮಯ ನಮಗೆ ನಿಜವಾಗಿಯೂ ಬೇಕಾಗಿರುವುದೇನೆಂದರೆ, ಬೈಬಲಾಧಾರಿತ ಸಲಹೆ ಹಾಗೂ ಶಿಸ್ತು. (ಜ್ಞಾನೋಕ್ತಿ 16:25) ರಾಜ ಅಹಾಬನು ತನಗೆ ಹಿತಕರವಾದದ್ದನ್ನೇ ಕೇಳಿಸಿಕೊಳ್ಳಲು ಇಷ್ಟಪಟ್ಟನು. ಅವನ ಸೇವಕರು “ಎಲ್ಲಾ ಪ್ರವಾದಿಗಳೂ [ಅಹಾಬನ ಮುಖಸ್ತುತಿಮಾಡುವ ಪ್ರವಾದಿಗಳು] ಏಕಮನಸ್ಸಿನಿಂದ ಅರಸನಿಗೆ ಶುಭವನ್ನೇ ಮುಂತಿಳಿಸುತ್ತಾರೆ; ದಯವಿಟ್ಟು ನೀನೂ ಅವರಂತೆ ಶುಭವನ್ನೇ ಮುಂತಿಳಿಸು” ಎಂದು ಪ್ರವಾದಿಯಾದ ಮೀಕಾಯೆಹುವನ್ನು ಕೇಳಿಕೊಂಡರು ಸಹ. (1 ಅರಸುಗಳು 22:13) ಅಹಾಬನು ಮುಚ್ಚುಮರೆಯಿಲ್ಲದ ನುಡಿಗಳಿಗೆ ಕಿವಿಗೊಟ್ಟು, ತನ್ನ ದಂಗೆಕೋರ ಮಾರ್ಗಗಳನ್ನು ಬದಲಾಯಿಸಿಕೊಂಡಿದ್ದರೆ, ಇಸ್ರಾಯೇಲಿನ ಭೀಕರ ಯುದ್ಧ ನಷ್ಟಗಳನ್ನು ಹಾಗೂ ತನ್ನ ಸ್ವಂತ ಮೃತ್ಯುವನ್ನು ತಡೆಗಟ್ಟಸಾಧ್ಯವಿತ್ತು. ಮುಖಸ್ತುತಿ ಮಾತುಗಳಿಂದ ನಮ್ಮ ಕಿವಿಗಳಿಗೆ ಖುಷಿಕೊಡುತ್ತಾ, ನಾವು ಎಷ್ಟು ಒಳ್ಳೆಯವರಾಗಿದ್ದೇವೆಂದು ಹೇಳುತ್ತಾ ಇರುವ ಜನರನ್ನು ಹುಡುಕುವ ಬದಲಿಗೆ, ನಾವು ಸತ್ಯದ ಸರಿಯಾದ ಹಾದಿಯಲ್ಲಿರುವಂತೆ ನಮಗೆ ಸಹಾಯ ಮಾಡಲು ಬಯಸುವ, ನಿಯುಕ್ತ ಕ್ರೈಸ್ತ ಹಿರಿಯರ ದೃಢವಾದ, ಆದರೂ ಪ್ರೀತಿಪರ ಸಲಹೆಗೆ ಪ್ರತಿಕ್ರಿಯಿಸಲು ನಾವು ಶೀಘ್ರರಾಗಿರಬೇಕು! ಇದು ನಮ್ಮ ಸ್ವಂತ ಆತ್ಮಿಕ ಹಿತಕ್ಕಾಗಿದೆ.—2 ತಿಮೊಥೆಯ 4:3ನ್ನು ಹೋಲಿಸಿರಿ.
ಯಾವುದೇ ಕಾರಣಕ್ಕಾಗಿ, ಕ್ರೈಸ್ತರು ಮುಖಸ್ತುತಿಮಾಡಲು ಬಯಸಬಾರದು. ನಂಬಿಗಸ್ತ ಎಲೀಹುವಿನಂತೆ, ಅವರು ದೃಢಸಂಕಲ್ಪದಿಂದ ಪ್ರಾರ್ಥಿಸುವುದು: “ನಾನು ಯಾರಿಗೂ ಮುಖದಾಕ್ಷಿಣ್ಯವನ್ನು ತೋರಿಸಬಾರದು, ಯಾವ ಮನುಷ್ಯನಿಗಾದರೂ ಮುಖಸ್ತುತಿಯನ್ನು ಮಾಡಕೂಡದು. ಮುಖಸುತ್ತಿಯನ್ನು ಮಾಡುವದಕ್ಕೆ ನನ್ನಿಂದಾಗುವದಿಲ್ಲ; ಮಾಡಿದರೆ ನನ್ನ ಸೃಷ್ಟಿಕರ್ತನು ನನ್ನನ್ನು ಬೇಗ ಹೊತ್ತುಕೊಂಡು ಹೋದಾನು.” ಆಗ ಅವರು ಪೌಲನಂತೆ ಹೀಗೆ ಹೇಳಶಕ್ತರಾಗುವರು: “ನಿಮಗೆ ತಿಳಿದಿರುವ ಪ್ರಕಾರ ನಾವು ಎಂದಿಗೂ ಮುಖಸ್ತುತಿಯನ್ನು ಮಾಡುವವರಾಗಿ ಕಾಣಬಂದಿಲ್ಲ, ಮತ್ತು ದ್ರವ್ಯಾಶೆಯನ್ನು ಮರೆಮಾಡುವದಕ್ಕಾಗಿ ವೇಷವನ್ನು ಹಾಕಿಕೊಂಡವರಾಗಿಲ್ಲ.”—ಯೋಬ 32:21, 22; 1 ಥೆಸಲೊನೀಕ 2:5, 6.
ಉಚಿತವಾಗಿರುವಾಗ ಶ್ಲಾಘಿಸಿರಿ
ಶ್ಲಾಘನೆಯು ಒರೆಗಲ್ಲಿನಂತೆ ಕಾರ್ಯಮಾಡಬಲ್ಲದು ಎಂಬುದನ್ನು ಪ್ರೇರಿತ ಜ್ಞಾನೋಕ್ತಿಯು ಹೀಗೆ ಹೇಳುತ್ತಾ ತೋರಿಸುತ್ತದೆ: “ಬೆಳ್ಳಿಗಾಗಿ ಲೋಹಕರಗಿಸುವ ಮಣ್ಣಿನ ಪಾತ್ರೆಯೂ ಚಿನ್ನಕ್ಕಾಗಿ ಅಗ್ನಿಪರೀಕ್ಷೆಯೂ ಇರುವಂತೆ, ಶ್ಲಾಘನೆಯು ಗುಣಲಕ್ಷಣದ ಪರೀಕ್ಷೆಯಾಗಿದೆ.” (ಜ್ಞಾನೋಕ್ತಿ 27:21, ದ ನ್ಯೂ ಇಂಗ್ಲಿಷ್ ಬೈಬಲ್) ಹೌದು, ಶ್ಲಾಘನೆಯು ಒಬ್ಬ ವ್ಯಕ್ತಿಯ ವಿನಾಶಕ್ಕೆ ನಡೆಸುತ್ತಾ, ಶ್ರೇಷ್ಠತೆ ಅಥವಾ ದುರಭಿಮಾನದ ಭಾವನೆಗಳನ್ನು ಪೋಷಿಸಬಹುದು. ಇನ್ನೊಂದು ಕಡೆಯಲ್ಲಿ, ತಾನು ಮಾಡಿದ ಯಾವುದೇ ವಿಷಯಕ್ಕಾಗಿ ತನಗೆ ದಕ್ಕಿದಂಥ ಶ್ಲಾಘನೆಯು ಯೆಹೋವನಿಗೆ ಸೇರತಕ್ಕದ್ದೆಂಬುದನ್ನು ಅವನು ಒಪ್ಪಿಕೊಳ್ಳುವುದಾದರೆ, ಅದು ಅವನ ವಿನಯಶೀಲತೆ ಹಾಗೂ ನಮ್ರತೆಯನ್ನು ಹೊರಗೆಡಹಬಲ್ಲದು.
ಯೋಗ್ಯ ನಡವಳಿಕೆ ಅಥವಾ ಸಾಧನೆಗಳಿಗಾಗಿ ಸಿಗುವ ನಿಷ್ಕಪಟ ಶ್ಲಾಘನೆಯು, ಅದನ್ನು ಕೊಡುವವನಿಗೂ ಪಡೆದುಕೊಳ್ಳುವವನಿಗೂ ಸಹಾಯ ಮಾಡುತ್ತದೆ. ಇದು ಪರಸ್ಪರರಿಗೆ ಹೃತ್ಪೂರ್ವಕವೂ ಹಿತಕರವೂ ಆದ ಗಣ್ಯತೆಗೆ ನೆರವನ್ನೀಡುತ್ತದೆ. ಇದು ಶ್ಲಾಘನಾರ್ಹ ಗುರಿಗಳಿಗಾಗಿ ಪ್ರಯತ್ನಿಸುವಂತೆ ಉತ್ತೇಜಿಸುತ್ತದೆ. ಎಳೆಯರಿಗೆ ಕೊಡಲ್ಪಟ್ಟ ಯೋಗ್ಯವಾದ ಶ್ಲಾಘನೆಯು ಇನ್ನೂ ಕಷ್ಟಪಟ್ಟು ಕೆಲಸಮಾಡಲು ಬಯಸುವಂತೆ ಅವರನ್ನು ಮಾಡಬಹುದು. ಅವರಿಂದ ನಿರೀಕ್ಷಿಸಲ್ಪಡುವ ಮಟ್ಟಗಳಿಗನುಸಾರ ಜೀವಿಸಲಿಕ್ಕೆ ಅವರು ಗುರಿಯಿಟ್ಟಂತೆ, ಅದು ಅವರ ನಡತೆಯನ್ನು ರೂಪಿಸಲು ಸಹಾಯಮಾಡಬಹುದು.
ಆದುದರಿಂದ, ನಾವು ಮುಖಸ್ತುತಿಯಿಂದ—ಅದನ್ನು ಕೊಡುವುದಾಗಿರಲಿ ಅಥವಾ ತೆಗೆದುಕೊಳ್ಳುವುದಾಗಿರಲಿ—ದೂರವಿರೋಣ. ಶ್ಲಾಘನೆಯನ್ನು ಸ್ವೀಕರಿಸುವಾಗ ನಾವು ನಮ್ರಭಾವದವರಾಗಿರೋಣ. ಮತ್ತು ನಮ್ಮ ಆರಾಧನೆಯಲ್ಲಿ ಯೆಹೋವನಿಗೆ ಕ್ರಮವಾಗಿ ಸ್ತುತಿಸುವ ಮೂಲಕ ಹಾಗೂ “ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ” ಎಂಬುದನ್ನು ಜ್ಞಾಪಿಸಿಕೊಳ್ಳುತ್ತಾ, ಇತರರಿಗೆ, ಹಿತಕರವಾದ ಪ್ರಶಂಸೆ ಮತ್ತು ಮೆಚ್ಚುಗೆಯ ವಿಧದಲ್ಲಿ ನಿಷ್ಕಪಟವಾಗಿ ಶ್ಲಾಘನೆಯನ್ನು ನೀಡುವುದರಲ್ಲಿ ನಾವು ಉದಾರಭಾವದವರೂ ಹೃತ್ಪೂರ್ವಕರೂ ಆಗಿರೋಣ!—ಜ್ಞಾನೋಕ್ತಿ 15:23.