ಕುಷ್ಠ ರೋಗಿಯೋಪಾದಿ ನನ್ನ ಜೀವನ—ಆನಂದಭರಿತ ಮತ್ತು ಆತ್ಮಿಕವಾಗಿ ಆಶೀರ್ವದಿತ
ಐಸಾಅ ಆಡಾಗ್ಬೋನರವರು ಹೇಳಿದಂತೆ
ನಾನು ನೈಜೀರಿಯದ ಅಕ್ಯೂರ್ನಲ್ಲಿ ಬೆಳೆದೆ. ನನ್ನ ಕುಟುಂಬವು ಯ್ಯಾಮ್ (ಗೆಡ್ಡೆಗೆಣಸು)ಗಳು, ಬಾಳೆಹಣ್ಣುಗಳು, ಮರಗೆಣಸು, ಮತ್ತು ಕೋಕೋಗಳ ವ್ಯವಸಾಯ ಮಾಡುತ್ತಿತ್ತು. ನಾನು ಶಾಲೆಗೆ ಹೋಗುವುದನ್ನು ನನ್ನ ತಂದೆ ಇಷ್ಟಪಡಲಿಲ್ಲ. ಅವರು ನನಗೆ ಹೇಳಿದ್ದು: “ನೀನು ಒಬ್ಬ ರೈತ. ಗೆಡ್ಡೆಗೆಣಸುಗಳನ್ನು ಓದಿಹೇಳುವಂತೆ ಯಾರೂ ನಿನ್ನನ್ನು ಕೇಳುವುದಿಲ್ಲ.”
ಆದರೂ, ನಾನು ಓದುವುದನ್ನು ಕಲಿಯಲು ಬಯಸಿದೆ. ಸಾಯಂಕಾಲಗಳಲ್ಲಿ, ಕೆಲವು ಮಕ್ಕಳಿಗೆ ಒಬ್ಬ ಖಾಸಗಿ ಶಿಕ್ಷಕನಿಂದ ಕಲಿಸಲಾಗುತ್ತಿದ್ದ ಮನೆಯೊಂದರ ಕಿಟಕಿಯ ಬಳಿ ನಾನು ನಿಂತುಕೊಂಡು, ಕೇಳಿಸಿಕೊಳ್ಳುತ್ತಿದ್ದೆ. ಅದು 1940ರಲ್ಲಿ ನಾನು ಸುಮಾರು 12 ವರ್ಷ ಪ್ರಾಯದವನಾಗಿದ್ದಾಗ ಆಗಿತ್ತು. ಆ ಮಕ್ಕಳ ತಂದೆಯವರು ನನ್ನನ್ನು ನೋಡಿದಾಗ, ಅವರು ನನ್ನನ್ನು ಬೈದು, ಅಲ್ಲಿಂದ ಓಡಿಸಿಬಿಡುತ್ತಿದ್ದರು. ಆದರೆ ನಾನು ಪುನಃ ಪುನಃ ಹಿಂದಿರುಗಿ ಹೋಗುತ್ತಿದ್ದೆ. ಕೆಲವೊಮ್ಮೆ ಶಿಕ್ಷಕರು ಬರದಿದ್ದಾಗ, ನಾನು ಒಳಗೆ ನುಸುಳಿ, ಮಕ್ಕಳೊಂದಿಗೆ ಸೇರಿ ಅವರ ಪುಸ್ತಕಗಳನ್ನು ನೋಡುತ್ತಿದ್ದೆ. ಕೆಲವೊಮ್ಮೆ ಅವರು ನನಗೆ ತಮ್ಮ ಪುಸ್ತಕಗಳನ್ನು ತೆಗೆದುಕೊಂಡುಹೋಗಲು ಅನುಮತಿ ನೀಡಿದರು. ನಾನು ಓದಲು ಕಲಿತದ್ದೇ ಹಾಗೆ.
ನಾನು ದೇವಜನರ ಜೊತೆಗೂಡಿದ್ದು
ಸಕಾಲದಲ್ಲಿ ನಾನು ಒಂದು ಬೈಬಲನ್ನು ಪಡೆದುಕೊಂಡು, ಮಲಗುವ ಮೊದಲು ಕ್ರಮವಾಗಿ ಓದುತ್ತಿದ್ದೆ. ಒಂದು ಸಾಯಂಕಾಲ ನಾನು ಮತ್ತಾಯ 10ನೆಯ ಅಧ್ಯಾಯವನ್ನು ಓದಿದೆ. ಯೇಸುವಿನ ಶಿಷ್ಯರು ದ್ವೇಷಿಸಲ್ಪಡುವರು ಮತ್ತು ಮನುಷ್ಯರಿಂದ ಹಿಂಸಿಸಲ್ಪಡುವರು ಎಂದು ಅದು ತೋರಿಸುತ್ತದೆ.
ಯೆಹೋವನ ಸಾಕ್ಷಿಗಳು ನನ್ನ ಮನೆಗೆ ಬಂದಿದ್ದರು ಮತ್ತು ಅವರನ್ನು ಹೀನವಾಗಿ ಉಪಚರಿಸಲಾಯಿತೆಂಬುದನ್ನು ನಾನು ಜ್ಞಾಪಿಸಿಕೊಂಡೆ. ಯೇಸು ಯಾರ ಕುರಿತಾಗಿ ಮಾತಾಡಿದ್ದನೋ ಆ ಜನರು ಇವರಾಗಿರಬಹುದೆಂದು ನನಗನಿಸಿತು. ಮುಂದಿನ ಬಾರಿ ಸಾಕ್ಷಿಗಳು ಭೇಟಿ ನೀಡಿದಾಗ, ನಾನು ಅವರಿಂದ ಪತ್ರಿಕೆಯೊಂದನ್ನು ಪಡೆದುಕೊಂಡೆ. ನಾನು ಅವರೊಂದಿಗೆ ಜೊತೆಗೂಡಲಾರಂಭಿಸಿದಾಗ, ನಾನು ಅಪಹಾಸ್ಯಕ್ಕೆ ಗುರಿಯಾದೆ. ಆದರೆ, ಜನರು ಎಷ್ಟು ಹೆಚ್ಚು ನನ್ನನ್ನು ನಿರುತ್ಸಾಹಗೊಳಿಸಲು ಪ್ರಯತ್ನಿಸಿದರೂ, ನಾನು ಸತ್ಯ ಧರ್ಮವನ್ನು ಕಂಡುಕೊಂಡಿದ್ದರಿಂದ ಅಷ್ಟೇ ಹೆಚ್ಚು ಮನವೊಪ್ಪಿಸಲ್ಪಟ್ಟವನೂ ಆನಂದಭರಿತನೂ ಆದೆ.
ಸಾಕ್ಷಿಗಳ ಕುರಿತು ನಿಜವಾಗಿಯೂ ನನ್ನನ್ನು ಪ್ರಭಾವಿಸಿದ ವಿಷಯವು ಯಾವುದಾಗಿತ್ತೆಂದರೆ, ನನ್ನ ಕ್ಷೇತ್ರದಲ್ಲಿದ್ದ ಇತರ ಧಾರ್ಮಿಕ ಗುಂಪುಗಳಿಗೆ ಅಸದೃಶವಾಗಿ, ಸ್ಥಳಿಕ ವಿಧರ್ಮಿ ಧರ್ಮದ ಪದ್ಧತಿಗಳು ಮತ್ತು ಸಂಪ್ರದಾಯಗಳೊಂದಿಗೆ ಅವರು ತಮ್ಮ ಆರಾಧನೆಯನ್ನು ಮಿಶ್ರಗೊಳಿಸಲಿಲ್ಲ. ಉದಾಹರಣೆಗಾಗಿ, ನನ್ನ ಕುಟುಂಬವು ಆ್ಯಂಗ್ಲಿಕನ್ ಚರ್ಚಿಗೆ ಹೋಯಿತಾದರೂ, ನನ್ನ ತಂದೆಯವರು ಯೊರಬ ದೇವನಾದ ಓಗೂನ್ಗೆ ಒಂದು ದೇವಸ್ಥಾನವನ್ನು ಇರಿಸಿದ್ದರು.
ನನ್ನ ತಂದೆಯವರು ಮೃತಪಟ್ಟ ಬಳಿಕ, ನಾನು ಆ ದೇವಸ್ಥಾನವನ್ನು ಬಾಧ್ಯತೆಯಾಗಿ ಪಡೆಯಬೇಕಿತ್ತು. ಅದು ನನಗೆ ಬೇಕಾಗಿರಲಿಲ್ಲ, ಏಕೆಂದರೆ ಬೈಬಲು ವಿಗ್ರಹಾರಾಧನೆಯನ್ನು ಖಂಡಿಸುತ್ತದೆಂಬುದು ನನಗೆ ತಿಳಿದಿತ್ತು. ಯೆಹೋವನ ಸಹಾಯದಿಂದ ನಾನು ಆತ್ಮಿಕವಾಗಿ ಪ್ರಗತಿಮಾಡಿದೆ, ಮತ್ತು 1954ರ ಡಿಸೆಂಬರ್ ತಿಂಗಳಿನಲ್ಲಿ ನಾನು ದೀಕ್ಷಾಸ್ನಾನವನ್ನು ಪಡೆದುಕೊಂಡೆ.
ಕುಷ್ಠ ರೋಗ ತಗಲುತ್ತದೆ
ಆ ವರ್ಷದಾರಂಭದಲ್ಲಿ, ನನ್ನ ಪಾದಗಳಲ್ಲಿ ಊತವನ್ನೂ ಸ್ಪರ್ಶದ ನಷ್ಟವನ್ನೂ ನಾನು ಗಮನಿಸಿದೆ. ನಾನು ಸುಡುವ ಇದ್ದಲುಗಳ ಮೇಲೆ ಹೆಜ್ಜೆಯಿಟ್ಟಿದ್ದರೂ ನನಗೆ ನೋವು ಇರಲಿಲ್ಲ. ಸ್ವಲ್ಪ ಸಮಯದ ಬಳಿಕ, ನನ್ನ ಹಣೆ ಹಾಗೂ ತುಟಿಗಳ ಮೇಲೆ ಕೆಂಪುಕೆಂಪಾದ ಹುಣ್ಣುಗಳು ಕಂಡುಬಂದವು. ಏನಾಗುತ್ತಿದೆ ಎಂಬುದು ನನಗಾಗಲಿ ನನ್ನ ಕುಟುಂಬಕ್ಕಾಗಲಿ ತಿಳಿಯಲಿಲ್ಲ; ಅದು ಚರ್ಮರೋಗವಾಗಿತ್ತೆಂದು ನಾವು ಆಲೋಚಿಸಿದೆವು. ವಾಸಿಯಾಗುವುದಕ್ಕಾಗಿ ಎದುರುನೋಡುತ್ತಾ ನಾನು 12 ಮಂದಿ ಔಷಧ ಶಾಸ್ತ್ರಜ್ಞರ ಬಳಿಗೆ ಹೋದೆ. ಕೊನೆಯದಾಗಿ, ನನಗೆ ಕುಷ್ಠ ರೋಗವಿತ್ತೆಂದು ಅವರಲ್ಲಿ ಒಬ್ಬನು ನಮಗೆ ಹೇಳಿದನು.
ಅದು ಎಂತಹ ಒಂದು ಆಘಾತವಾಗಿತ್ತು! ನಾನು ಕ್ಷೋಭೆಗೊಂಡಿದ್ದೆ ಮತ್ತು ಸರಿಯಾಗಿ ನಿದ್ರಿಸಲಿಲ್ಲ. ನನಗೆ ಘೋರ ಸ್ವಪ್ನಗಳು ಬಿದ್ದವು. ಆದರೆ ಬೈಬಲ್ ಸತ್ಯತೆಯ ಕುರಿತಾದ ನನ್ನ ಜ್ಞಾನ ಹಾಗೂ ಯೆಹೋವನ ಮೇಲಿನ ಆತುಕೊಳ್ಳುವಿಕೆಯು, ದೃಢಭರವಸೆಯಿಂದ ಭವಿಷ್ಯತ್ತಿನ ಕಡೆಗೆ ನೋಡುವಂತೆ ನನಗೆ ಸಹಾಯ ಮಾಡಿತು.
ನಾನು ದಿವ್ಯವಾಣಿ ಭವಿಷ್ಯವಾದಿಯೊಬ್ಬನ ಬಳಿ ಅರ್ಪಣೆಗಳನ್ನು ಮಾಡಲು ಹೋಗುವುದಾದರೆ, ನನಗೆ ಸ್ವಲ್ಪ ಗುಣವಾಗಬಹುದೆಂದು ಜನರು ನನ್ನ ತಾಯಿಗೆ ಹೇಳಿದರು. ಅಂತಹ ಕೃತ್ಯವು ಯೆಹೋವನನ್ನು ಅಪ್ರಸನ್ನಗೊಳಿಸುತ್ತದೆಂದು ತಿಳಿದವನಾಗಿದ್ದು, ನಾನು ಹೋಗಲು ನಿರಾಕರಿಸಿದೆ. ಈ ವಿಷಯದಲ್ಲಿ ನಾನು ದೃಢನಿಶ್ಚಯವನ್ನು ಮಾಡಿದ್ದೇನೆಂಬುದನ್ನು ಗ್ರಹಿಸಿ, ಒಂದು ಕೋಲದ ಕರಟಕಾಯಿಯನ್ನು ತೆಗೆದುಕೊಂಡು, ಅದರಿಂದ ನನ್ನ ಹಣೆಯನ್ನು ಸ್ಪರ್ಶಿಸುವಂತೆ ನನ್ನ ತಾಯಿಯ ಸ್ನೇಹಿತೆಯರು ಸೂಚಿಸಿದರು. ತದನಂತರ ನನ್ನ ಪರವಾಗಿ ಅರ್ಪಣೆಗಳಲ್ಲಿ ಉಪಯೋಗಿಸಲಿಕ್ಕಾಗಿ ಆ ಕೋಲದ ಕರಟಕಾಯಿಯನ್ನು ದಿವ್ಯವಾಣಿ ಭವಿಷ್ಯವಾದಿಗೆ ಅವರು ಕೊಡಸಾಧ್ಯವಿತ್ತು. ನಾನು ಅದರಲ್ಲಿ ಭಾಗವಹಿಸಲು ಬಯಸಲಿಲ್ಲ, ಮತ್ತು ಅದನ್ನೇ ನಾನು ತಾಯಿಯವರಿಗೆ ಹೇಳಿದೆ. ಕೊನೆಯದಾಗಿ, ವಿಧರ್ಮಿ ಧರ್ಮದಲ್ಲಿ ನನ್ನನ್ನು ಒಳಗೂಡಿಸುವ ತಮ್ಮ ಪ್ರಯತ್ನಗಳನ್ನು ಅವರು ಬಿಟ್ಟುಬಿಟ್ಟರು.
ನಾನು ಆಸ್ಪತ್ರೆಗೆ ಹೋಗುವ ಸಮಯದಷ್ಟಕ್ಕೆ, ಕುಷ್ಠ ರೋಗವು ಈಗಾಗಲೇ ತೀರ ಮುಂದುವರಿದ ಸ್ಥಿತಿಯಲ್ಲಿತ್ತು. ನನ್ನ ದೇಹದ ಮೇಲೆಲ್ಲ ಹುಣ್ಣುಗಳಿದ್ದವು. ಆಸ್ಪತ್ರೆಯಲ್ಲಿ, ಅವರು ನನಗೆ ಔಷಧಗಳನ್ನು ಕೊಟ್ಟರು, ಮತ್ತು ಕಾಲಕ್ರಮೇಣ ನನ್ನ ಚರ್ಮವು ಸಹಜ ಸ್ಥಿತಿಗೆ ಹಿಂದಿರುಗಿತು.
ನಾನು ಸತ್ತುಹೋಗಿದ್ದೆನೆಂದು ಅವರು ನೆನಸಿದರು
ಆದರೆ ನನ್ನ ಸಮಸ್ಯೆಗಳು ಇನ್ನೂ ಕೊನೆಗೊಂಡಿರಲಿಲ್ಲ. ನನ್ನ ಬಲಗಾಲು ತೀರ ಹೆಚ್ಚು ಬಾಧಿತವಾಯಿತು, ಮತ್ತು 1962ರಲ್ಲಿ ಅದನ್ನು ಕತ್ತರಿಸಿ ತೆಗೆಯಬೇಕಾಯಿತು. ಶಸ್ತ್ರಚಿಕಿತ್ಸೆಯ ಬಳಿಕ, ವೈದ್ಯಕೀಯ ತೊಡಕುಗಳು ಇದ್ದವು. ನಾನು ಬದುಕುತ್ತೇನೆಂದು ವೈದ್ಯರು ನಿರೀಕ್ಷಿಸಲಿಲ್ಲ. ಒಬ್ಬ ಬಿಳಿಯ ಮಿಷನೆರಿ ಪಾದ್ರಿಯು ಅಂತ್ಯ ಸಂಸ್ಕಾರಗಳನ್ನು ಮಾಡಲು ಬಂದನು. ನಾನು ಮಾತಾಡಲು ತೀರ ದುರ್ಬಲನಾಗಿದ್ದೆ, ಆದರೆ ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂದು ನರ್ಸೊಬ್ಬಳು ಅವನಿಗೆ ಹೇಳಿದಳು.
ಆ ಪಾದ್ರಿಯು ನನಗೆ ಹೇಳಿದ್ದು: “ನೀನು ಸ್ವರ್ಗಕ್ಕೆ ಹೋಗಸಾಧ್ಯವಾಗುವಂತೆ, ಬದಲಾವಣೆಯನ್ನು ಮಾಡಿ, ಒಬ್ಬ ಕ್ಯಾಥೊಲಿಕನಾಗಲು ಬಯಸುತ್ತೀಯೊ?” ಅದು ನನ್ನನ್ನು ಒಳಗೊಳಗೇ ನಗುವಂತೆ ಮಾಡಿತು. ಉತ್ತರಕೊಡಲಿಕ್ಕಾಗಿ ಬಲವನ್ನು ಒದಗಿಸುವಂತೆ ನಾನು ಯೆಹೋವನಿಗೆ ಪ್ರಾರ್ಥಿಸಿದೆ. ಬಹಳ ಕಷ್ಟದಿಂದ, “ಇಲ್ಲ!” ಎಂದು ಹೇಳುವಷ್ಟು ನಾನು ಸಾವರಿಸಿಕೊಂಡೆ. ಆ ಪಾದ್ರಿಯು ಹಿಂದಿರುಗಿ ಅಲ್ಲಿಂದ ಹೊರಟುಹೋದನು.
ಆಸ್ಪತ್ರೆಯ ಸಿಬ್ಬಂದಿಯು, ನಾನು ಸತ್ತುಹೋಗಿದ್ದೆನೆಂದು ನೆನಸುವಷ್ಟರ ಮಟ್ಟಿಗೆ ನನ್ನ ಸ್ಥಿತಿಯು ವಿಪರೀತ ಕೆಟ್ಟುಹೋಯಿತು. ನನ್ನ ಮುಖವನ್ನು ಅವರು ಒಂದು ಹೊದಿಕೆಯಿಂದ ಮುಚ್ಚಿದರು. ಆದರೂ, ಅವರು ನನ್ನನ್ನು ಶವಗಾರಕ್ಕೆ ತೆಗೆದುಕೊಂಡು ಹೋಗಲಿಲ್ಲ. ಏಕೆಂದರೆ ನಾನು ಸತ್ತುಹೋಗಿದ್ದೆನೆಂಬುದಕ್ಕೆ ಒಬ್ಬ ವೈದ್ಯರು ಅಥವಾ ಒಬ್ಬ ನರ್ಸ್ ಮೊದಲಾಗಿ ಪ್ರಮಾಣಪತ್ರವನ್ನು ಕೊಡಬೇಕಿತ್ತು. ಆಗ ಅಲ್ಲಿ ಯಾವ ವೈದ್ಯರೂ ಡ್ಯೂಟಿಯಲ್ಲಿರಲಿಲ್ಲ, ಮತ್ತು ಎಲ್ಲ ನರ್ಸ್ಗಳು ಒಂದು ಪಾರ್ಟಿಗೆ ಹೋಗಿದ್ದರು. ಆದುದರಿಂದ ಆ ರಾತ್ರಿ ಅವರು ನನ್ನನ್ನು ವಾರ್ಡಿನಲ್ಲಿಯೇ ಬಿಟ್ಟರು. ಮರುದಿನ ಬೆಳಗ್ಗೆ ವೈದ್ಯರು ಬಂದು ರೋಗಿಗಳನ್ನು ಸಂದರ್ಶಿಸಿದಾಗ, ನಾನು ಇನ್ನೂ ಮುಚ್ಚಿಡಲ್ಪಟ್ಟಿದ್ದರಿಂದ ಹಾಗೂ ಸತ್ತುಹೋಗಿದ್ದೆನೆಂದು ಊಹಿಸಲ್ಪಟ್ಟಿದ್ದರಿಂದ, ನನ್ನ ಹಾಸಿಗೆಯ ಬಳಿಗೆ ಯಾರೂ ಬರಲಿಲ್ಲ. ಕಟ್ಟಕಡೆಗೆ, ಆ ಹೊದಿಕೆಯ ಕೆಳಗಿದ್ದ “ಹೆಣ”ವು ಅಲುಗಾಡುತ್ತಿತ್ತೆಂಬುದನ್ನು ಯಾರೊ ಒಬ್ಬರು ಗಮನಿಸಿದರು!
ನಾನು ಗುಣಮುಖನಾದೆ, ಮತ್ತು 1963ರಲ್ಲಿ ಅವರು ನನ್ನನ್ನು, ನೈರುತ್ಯ ನೈಜೀರಿಯದ ಅಬೀಓಕಟ ಕುಷ್ಠ ರೋಗದ ಆಸ್ಪತ್ರೆಯ ವಸಾಹತಿಗೆ ಸ್ಥಳಾಂತರಿಸಿದರು. ಅಂದಿನಿಂದ ನಾನು ಅಲ್ಲಿಯೇ ವಾಸಿಸುತ್ತಿದ್ದೇನೆ.
ನನ್ನ ಸಾರುವಿಕೆಗೆ ವಿರೋಧ
ಆ ವಸಾಹತಿಗೆ ನಾನು ಬಂದಾಗ, ಅಲ್ಲಿ ಸುಮಾರು 400 ಕುಷ್ಠ ರೋಗಿಗಳಿದ್ದರು, ಮತ್ತು ನಾನು ಏಕಮಾತ್ರ ಸಾಕ್ಷಿಯಾಗಿದ್ದೆ. ನಾನು ಸೊಸೈಟಿಗೆ ಪತ್ರ ಬರೆದೆ, ಮತ್ತು ಆಕೋಮೋಜೀ ಸಭೆಯು ನನ್ನನ್ನು ಸಂಪರ್ಕಿಸುವಂತೆ ನಿರ್ದೇಶಿಸುತ್ತಾ ಅವರು ನನಗೆ ಒಡನೆಯೇ ಪ್ರತಿಕ್ರಿಯಿಸಿದರು. ಆದುದರಿಂದ ನಾನು ಯಾವಾಗಲೂ ಸಹೋದರರೊಂದಿಗೆ ಸಂಪರ್ಕವನ್ನಿಟ್ಟುಕೊಂಡಿದ್ದೆ.
ನಾನು ವಸಾಹತಿಗೆ ಬಂದು ನೆಲೆಸಿದ ಕೂಡಲೆ, ಸಾರಲು ಆರಂಭಿಸಿದೆ. ಸ್ಥಳಿಕ ಪಾಸ್ಟರನು ಅದರ ಕುರಿತು ಸಂತೋಷಿತನಾಗಿರಲಿಲ್ಲ, ಮತ್ತು ನನ್ನ ಕುರಿತಾಗಿ ಆ ಶಿಬಿರದ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ ಕ್ಷೇಮಾಭಿವೃದ್ಧಿ ಅಧಿಕಾರಿಯ ಬಳಿ ವರದಿಮಾಡಿದನು. ಆ ಕ್ಷೇಮಾಭಿವೃದ್ಧಿ ಅಧಿಕಾರಿಯು ವೃದ್ಧರಾಗಿದ್ದು, ಜರ್ಮನಿಯಿಂದ ಬಂದವರಾಗಿದ್ದರು. ನನಗೆ ಬೈಬಲನ್ನು ಬೋಧಿಸುವ ಹಕ್ಕಿಲ್ಲವೆಂದು ಅವರು ನನಗೆ ಹೇಳಿದರು. ಏಕೆಂದರೆ ಹಾಗೆ ಮಾಡಲು ನನಗೆ ಶಾಲಾಶಿಕ್ಷಣವಿರಲಿಲ್ಲ ಅಥವಾ ಸರ್ಟಿಫಿಕೆಟ್ ಇರಲಿಲ್ಲ; ನಾನು ಅನರ್ಹನಾಗಿದ್ದರಿಂದ, ನಾನು ಜನರಿಗೆ ತಪ್ಪಾಗಿ ಬೋಧಿಸುವೆನೆಂದು ಅವರು ಅಭಿಪ್ರಯಿಸಿದ್ದರು. ಒಂದುವೇಳೆ ನಾನು ಪಟ್ಟುಹಿಡಿಯುತ್ತಿದ್ದಲ್ಲಿ, ನನ್ನನ್ನು ಆ ವಸಾಹತಿನಿಂದ ತೆಗೆದುಹಾಕಸಾಧ್ಯವಿತ್ತು ಮತ್ತು ವೈದ್ಯಕೀಯ ಚಿಕಿತ್ಸೆಯು ನನಗೆ ದೊರಕುತ್ತಿರಲಿಲ್ಲ. ಅದಕ್ಕೆ ಪ್ರತ್ಯುತ್ತರವಾಗಿ ಏನನ್ನೂ ಹೇಳುವಂತೆ ಅವರು ನನ್ನನ್ನು ಅನುಮತಿಸಲಿಲ್ಲ.
ತದನಂತರ ಯಾರೊಬ್ಬರೂ ನನ್ನೊಂದಿಗೆ ಬೈಬಲನ್ನು ಅಭ್ಯಾಸಿಸಬಾರದೆಂಬ ಆದೇಶವನ್ನು ಅವರು ಹೊರಡಿಸಿದರು. ಫಲಿತಾಂಶವಾಗಿ, ಯಾರು ಆಸಕ್ತಿಯನ್ನು ತೋರಿಸಿದ್ದರೋ ಅವರು ನನ್ನ ಬಳಿಗೆ ಬರುವುದನ್ನು ನಿಲ್ಲಿಸಿಬಿಟ್ಟರು.
ನಾನು ಆ ವಿಷಯವನ್ನು ಪ್ರಾರ್ಥನೆಯಲ್ಲಿ ಯೆಹೋವನ ಬಳಿ ನಿವೇದಿಸಿದೆ, ಮತ್ತು ವಿವೇಕ ಹಾಗೂ ಮಾರ್ಗದರ್ಶನಕ್ಕಾಗಿ ಆತನಲ್ಲಿ ಕೇಳಿಕೊಂಡೆ. ಮುಂದಿನ ಆದಿತ್ಯವಾರ, ವಸಾಹತಿನಲ್ಲಿದ್ದ ಬ್ಯಾಪ್ಟಿಸ್ಟ್ ಚರ್ಚಿಗೆ ನಾನು ಹೋದೆ. ಆದರೆ ಧಾರ್ಮಿಕ ಸಂಸ್ಕಾರಗಳಲ್ಲಿ ನಾನು ಭಾಗವಹಿಸಲಿಲ್ಲ. ಆ ಸಂಸ್ಕಾರದ ಸಮಯದಲ್ಲಿ, ಅಲ್ಲಿ ಉಪಸ್ಥಿತರಿದ್ದವರು ಪ್ರಶ್ನೆಗಳನ್ನು ಕೇಳಸಾಧ್ಯವಿದ್ದ ಒಂದು ಕಾಲಾವಧಿಯಿತ್ತು. ನಾನು ನನ್ನ ಕೈಯನ್ನು ಮೇಲೆತ್ತಿ ಹೀಗೆ ಕೇಳಿದೆ: “ಒಳ್ಳೆಯ ಜನರೆಲ್ಲರೂ ಸ್ವರ್ಗಕ್ಕೆ, ಮತ್ತು ಕೆಟ್ಟ ಜನರೆಲ್ಲರೂ ಬೇರಾವುದೋ ಸ್ಥಳಕ್ಕೆ ಹೋಗುತ್ತಾರಾದರೆ, ದೇವರು ಭೂಮಿಯನ್ನು ಜನನಿವಾಸಕ್ಕಾಗಿ ರಚಿಸಿದನೆಂದು ಯೆಶಾಯ 45:18 ಏಕೆ ಹೇಳುತ್ತದೆ?”
ಆ ಸಭೆಯಲ್ಲಿ ಭಾರಿ ಗುಣುಗುಟ್ಟುವಿಕೆಯು ಕೇಳಿಬಂತು. ಕೊನೆಯದಾಗಿ, ನಮಗೆ ದೇವರ ಮಾರ್ಗಗಳನ್ನು ಕಂಡುಹಿಡಿಯಲು ಸಾಧ್ಯವಿಲ್ಲವೆಂದು ಆ ಮಿಷನೆರಿ ಪಾಸ್ಟರ್ ಹೇಳಿದನು. ಒಡನೆಯೆ, 1,44,000 ಮಂದಿ ಸ್ವರ್ಗಕ್ಕೆ ಹೋಗುವರು, ಮತ್ತು ದುಷ್ಟ ಜನರು ನಾಶವಾಗುವರು, ಹಾಗೂ ನೀತಿವಂತರು ಭೂಮಿಯ ಮೇಲೆ ಸದಾಕಾಲ ಜೀವಿಸುವರು ಎಂಬುದನ್ನು ತೋರಿಸುವ ಶಾಸ್ತ್ರವಚನಗಳನ್ನು ಓದುವ ಮೂಲಕ, ನನ್ನ ಪ್ರಶ್ನೆಗೆ ನಾನೇ ಉತ್ತರ ಕೊಟ್ಟೆ.—ಕೀರ್ತನೆ 37:10, 11; ಪ್ರಕಟನೆ 14:1, 4.
ಉತ್ತರಕ್ಕೆ ಗಣ್ಯತೆಯನ್ನು ಸೂಚಿಸುತ್ತಾ ಪ್ರತಿಯೊಬ್ಬರೂ ಚಪ್ಪಾಳೆ ತಟ್ಟಿದರು. ಆಗ ಆ ಪಾಸ್ಟರನು ಹೇಳಿದ್ದು: “ಎರಡನೆಯ ಸಾರಿ ಚಪ್ಪಾಳೆ ತಟ್ಟಿರಿ, ಏಕೆಂದರೆ ಈ ವ್ಯಕ್ತಿಯು ನಿಜವಾಗಿಯೂ ಬೈಬಲನ್ನು ತಿಳಿದುಕೊಂಡಿದ್ದಾನೆ.” ಸಂಸ್ಕಾರದ ಬಳಿಕ, ಕೆಲವರು ನನ್ನ ಬಳಿಗೆ ಬಂದು ಹೇಳಿದ್ದು: “ಪಾಸ್ಟರನಿಗೆ ತಿಳಿದಿರುವುದಕ್ಕಿಂತಲೂ ಹೆಚ್ಚು ವಿಷಯಗಳು ನಿನಗೆ ತಿಳಿದಿವೆ!”
ನನ್ನನ್ನು ಹೊರಹಾಕುವ ಒತ್ತಡವು ಮುಂದುವರಿಯುತ್ತದೆ
ಅದು ಆ ಹಿಂಸೆಯ ಪ್ರಮುಖ ಭಾಗವನ್ನು ನಿಲ್ಲಿಸಿಬಿಟ್ಟಿತು, ಮತ್ತು ಬೈಬಲನ್ನು ಅಭ್ಯಾಸಿಸಲಿಕ್ಕಾಗಿ ಜನರು ಪುನಃ ನನ್ನೊಂದಿಗೆ ಜೊತೆಗೂಡಿದರು. ಹಾಗಿದ್ದರೂ, ನನ್ನನ್ನು ತೊಲಗಿಸಿಬಿಡುವಂತೆ ಕ್ಷೇಮಾಭಿವೃದ್ಧಿ ಅಧಿಕಾರಿಯ ಮೇಲೆ ಒತ್ತಡ ಹೇರುವ ವಿರೋಧಿಗಳು ಇನ್ನೂ ಇದ್ದರು. ಆ ಚರ್ಚ್ ಸಂಸ್ಕಾರವಾಗಿ ಸುಮಾರು ಒಂದು ತಿಂಗಳಿನ ಬಳಿಕ, ಆ ಅಧಿಕಾರಿಯು ನನ್ನನ್ನು ಕರೆದು ಹೇಳಿದ್ದು: “ನೀನು ಸಾರುತ್ತಾ ಇರುವುದೇಕೆ? ನನ್ನ ದೇಶದಲ್ಲಿ ಜನರು ಯೆಹೋವನ ಸಾಕ್ಷಿಗಳನ್ನು ಇಷ್ಟಪಡುವುದಿಲ್ಲ, ಮತ್ತು ಇಲ್ಲಿ ಕೂಡ ಪರಿಸ್ಥಿತಿ ಹಾಗೇ ಇದೆ. ನೀನೇಕೆ ನನಗೆ ತೊಂದರೆಯನ್ನುಂಟುಮಾಡುತ್ತೀ? ನಾನು ನಿನ್ನನ್ನು ಇಲ್ಲಿಂದ ಹೊರಹಾಕಬಲ್ಲೆನೆಂಬುದು ನಿನಗೆ ಗೊತ್ತಿಲ್ಲವೊ?”
ನಾನು ಪ್ರತ್ಯುತ್ತರಿಸಿದ್ದು: “ಸ್ವಾಮಿ, ನಾನು ಮೂರು ಕಾರಣಗಳಿಗಾಗಿ ನಿಮ್ಮನ್ನು ಗೌರವಿಸುತ್ತೇನೆ. ಮೊತ್ತಮೊದಲ ಕಾರಣವೇನೆಂದರೆ, ನೀವು ನನಗಿಂತಲೂ ಹಿರಿಯರು, ಮತ್ತು ನಾವು ನರೆಗೂದಲಿಗೆ ಗೌರವಕೊಡಬೇಕೆಂದು ಬೈಬಲು ಹೇಳುತ್ತದೆ. ನಾನು ನಿಮ್ಮನ್ನು ಗೌರವಿಸುವ ಎರಡನೆಯ ಕಾರಣವು ಯಾವುದೆಂದರೆ, ಇಲ್ಲಿ ನಮಗೆ ಸಹಾಯ ಮಾಡಲಿಕ್ಕಾಗಿ ನೀವು ನಿಮ್ಮ ದೇಶವನ್ನು ಬಿಟ್ಟುಬಂದಿದ್ದೀರಿ. ಮೂರನೆಯ ಕಾರಣವೇನೆಂದರೆ, ನೀವು ದಯಾಪರರೂ, ಉದಾರಿಗಳೂ, ಹಾಗೂ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡುವವರೂ ಆಗಿದ್ದೀರಿ. ಆದರೆ ಯಾವ ಹಕ್ಕಿನ ಮೇಲೆ ನೀವು ನನ್ನನ್ನು ಇಲ್ಲಿಂದ ಹೊರಹಾಕಸಾಧ್ಯವಿದೆಯೆಂದು ನೀವು ನೆನಸುತ್ತೀರಿ? ಈ ದೇಶದ ರಾಷ್ಟ್ರಾಧ್ಯಕ್ಷನು ಯೆಹೋವನ ಸಾಕ್ಷಿಗಳನ್ನು ಹೊರಹಾಕುವುದಿಲ್ಲ. ಈ ಪ್ರಾಂತದ ಸಾಂಪ್ರದಾಯಿಕ ಅಧಿಕಾರಿಯು ನಮ್ಮನ್ನು ಹೊರಹಾಕುವುದಿಲ್ಲ. ನೀವು ನನ್ನನ್ನು ಈ ಶಿಬಿರದಿಂದ ಹೊರಗೆ ಓಡಿಸುವುದಾದರೂ, ಖಂಡಿತವಾಗಿಯೂ ಯೆಹೋವನು ಇನ್ನೂ ನನ್ನ ಪರಾಮರಿಕೆಯನ್ನು ಮಾಡುವನು.”
ಈ ಹಿಂದೆ ನಾನೆಂದೂ ಅವರೊಂದಿಗೆ ಇಷ್ಟು ನೇರವಾದ ರೀತಿಯಲ್ಲಿ ಮಾತಾಡಿರಲಿಲ್ಲ, ಮತ್ತು ಅದು ಅವರ ಮೇಲೆ ಪ್ರಭಾವ ಬೀರಿತೆಂಬುದನ್ನು ನಾನು ನೋಡಸಾಧ್ಯವಿತ್ತು. ಒಂದು ಮಾತನ್ನೂ ಆಡದೆ ಅವರು ಅಲ್ಲಿಂದ ಹೊರಟುಹೋದರು. ತದನಂತರ, ಯಾರೋ ಒಬ್ಬರು ಅವರ ಬಳಿ ನನ್ನ ಬಗ್ಗೆ ದೂರಿದಾಗ, ಅವರು ಆಶಾಭಂಗಗೊಂಡು ಉತ್ತರಿಸಿದ್ದು: “ಇನ್ನು ಮೇಲೆ ನಾನು ಈ ಸಮಸ್ಯೆಯಲ್ಲಿ ತಲೆಹಾಕುವುದಿಲ್ಲ. ಅವನ ಸಾರುವಿಕೆಯ ವಿಷಯದಲ್ಲಿ ನಿಮಗೆ ಸಮಸ್ಯೆಯಿರುವಲ್ಲಿ, ಅದನ್ನು ಅವನೊಂದಿಗೇ ಚರ್ಚಿಸಿರಿ!”
ಸಾಕ್ಷರತೆಯ ತರಗತಿ
ಶಿಬಿರದಲ್ಲಿದ್ದ ಬ್ಯಾಪ್ಟಿಸ್ಟ್ ಚರ್ಚಿಗೆ ಹಾಜರಾಗುತ್ತಿದ್ದವರಿಂದ ನನ್ನ ಸಾರುವಿಕೆಯ ಕೆಲಸಕ್ಕಾಗಿದ್ದ ವಿರೋಧವು ಮುಂದುವರಿಯಿತು. ಆಗ ನನಗೆ ಒಂದು ಉಪಾಯವು ಹೊಳೆಯಿತು. ನಾನು ಕ್ಷೇಮಾಭಿವೃದ್ಧಿ ಅಧಿಕಾರಿಯ ಬಳಿಗೆ ಹೋಗಿ, ನಾನೊಂದು ಸಾಕ್ಷರತೆಯ ತರಗತಿಯನ್ನು ಆರಂಭಿಸಬಹುದೋ ಎಂದು ಕೇಳಿದೆ. ಅದಕ್ಕಾಗಿ ನನಗೆ ಎಷ್ಟು ಹಣ ತೆರಬೇಕೆಂದು ಅವರು ಕೇಳಿದಾಗ, ನಾನು ಉಚಿತವಾಗಿ ಕಲಿಸುತ್ತೇನೆಂದು ಹೇಳಿದೆ.
ಅವರು ಒಂದು ಕ್ಲಾಸ್ರೂಮ್, ಕರಿಹಲಗೆ, ಮತ್ತು ಸೀಮೆಸುಣ್ಣ (ಚಾಕ್)ವನ್ನು ಒದಗಿಸಿದರು, ಹೀಗೆ ನಾನು ಕೆಲವು ಸಹನಿವಾಸಿಗಳಿಗೆ ಓದುವುದನ್ನು ಕಲಿಸಲಾರಂಭಿಸಿದೆ. ನಾವು ಪ್ರತಿ ದಿನ ತರಗತಿಗಳನ್ನು ನಡಿಸಿದೆವು. ಮೊದಲ 30 ನಿಮಿಷಗಳ ವರೆಗೆ, ನಾನು ಓದುವುದನ್ನು ಕಲಿಸುತ್ತಿದ್ದೆ, ತದನಂತರ ನಾನು ಬೈಬಲಿನಿಂದ ತೆಗೆಯಲ್ಪಟ್ಟ ಒಂದು ಕಥೆಯನ್ನು ಹೇಳಿ, ವಿವರಿಸುತ್ತಿದ್ದೆ. ಆ ಮೇಲೆ ನಾವು ಆ ವೃತ್ತಾಂತವನ್ನು ಬೈಬಲಿನಿಂದ ಓದುತ್ತಿದ್ದೆವು.
ನೀಮೋಟ ಎಂಬ ಹೆಸರಿನ ಸ್ತ್ರೀಯು ಒಬ್ಬ ವಿದ್ಯಾರ್ಥಿನಿಯಾಗಿದ್ದಳು. ಆತ್ಮಿಕ ವಿಷಯಗಳಲ್ಲಿ ಅವಳಿಗೆ ಬಹಳಷ್ಟು ಆಸಕ್ತಿಯಿತ್ತು ಮತ್ತು ಚರ್ಚಿನಲ್ಲಿ ಹಾಗೂ ಮಸೀದಿಯಲ್ಲಿ—ಎರಡೂ ಕಡೆಗಳಲ್ಲಿ—ಅವಳು ಧಾರ್ಮಿಕ ಪ್ರಶ್ನೆಗಳನ್ನು ಕೇಳುತ್ತಿದ್ದಳು. ಅಲ್ಲಿ ಅವಳ ಪ್ರಶ್ನೆಗಳಿಗೆ ಉತ್ತರಗಳು ದೊರಕಲಿಲ್ಲ, ಆದುದರಿಂದ ಅವುಗಳನ್ನು ಕೇಳಲು ಅವಳು ನನ್ನ ಬಳಿಗೆ ಬಂದಳು. ಕಾಲಕ್ರಮೇಣ, ಅವಳು ತನ್ನ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿದಳು ಮತ್ತು ದೀಕ್ಷಾಸ್ನಾನವನ್ನು ಪಡೆದುಕೊಂಡಳು. 1966ರಲ್ಲಿ ನಾವು ವಿವಾಹವಾದೆವು.
ಇಂದು ನಮ್ಮ ಸಭೆಯಲ್ಲಿರುವ ಅಧಿಕಾಂಶ ಮಂದಿ, ಆ ಸಾಕ್ಷರತೆಯ ತರಗತಿಯಲ್ಲೇ ಓದಲು ಹಾಗೂ ಬರೆಯಲು ಕಲಿತುಕೊಂಡರು. ಆ ತರಗತಿಯನ್ನು ನಡೆಸುವಂತೆ ಸೂಚಿಸುವ ವಿವೇಕವು ನನ್ನಲ್ಲಿರಲಿಲ್ಲ. ನಿಶ್ಚಯವಾಗಿಯೂ ಯೆಹೋವನ ಆಶೀರ್ವಾದವು ಸುವ್ಯಕ್ತವಾಗಿತ್ತು. ಅಂದಿನಿಂದ ಸಾರುವುದರಿಂದ ನನ್ನನ್ನು ತಡೆಯಲು ಯಾರೂ ಪ್ರಯತ್ನಿಸಿಲ್ಲ.
ಶಿಬಿರದಲ್ಲಿ ಒಂದು ರಾಜ್ಯ ಸಭಾಗೃಹ
ನೀಮೋಟ ಹಾಗೂ ನಾನು ವಿವಾಹವಾದ ಸಮಯದಷ್ಟಕ್ಕೆ, ನಮ್ಮಲ್ಲಿ ನಾಲ್ಕು ಮಂದಿ ಕಾವಲಿನಬುರುಜು ಪತ್ರಿಕೆಯ ಅಭ್ಯಾಸಕ್ಕೆ ಕ್ರಮವಾಗಿ ಕೂಡಿಬರುತ್ತಿದ್ದೆವು. ಸುಮಾರು ಒಂದು ವರ್ಷದ ವರೆಗೆ, ಕುಷ್ಠ ರೋಗದ ಗಾಯಗಳು ತೊಳೆಯಲ್ಪಡುತ್ತಿದ್ದ ಕೋಣೆಯಲ್ಲಿ ನಾವು ಕೂಡಿಬಂದೆವು. ಆಗ, ಅಷ್ಟರೊಳಗಾಗಿ ನನ್ನ ಸ್ನೇಹಿತರಾಗಿ ಪರಿಣಮಿಸಿದ್ದ ಕ್ಷೇಮಾಭಿವೃದ್ಧಿ ಅಧಿಕಾರಿಯು ನನಗೆ ಹೇಳಿದ್ದು: “ನೀವು ನಿಮ್ಮ ದೇವರನ್ನು ಚಿಕಿತ್ಸಾ ಕೋಣೆಯಲ್ಲಿ ಆರಾಧಿಸುವುದು ಒಳ್ಳೆಯದಲ್ಲ.”
ನಾವು ಖಾಲಿಯಿರುವ ಬಡಗಿಯ ಕೆಲಸದ ಸ್ಥಳದಲ್ಲಿ ಒಟ್ಟುಗೂಡಸಾಧ್ಯವಿದೆಯೆಂದು ಅವರು ಹೇಳಿದರು. ಸಕಾಲದಲ್ಲಿ, ಆ ಸ್ಥಳವು ಒಂದು ರಾಜ್ಯ ಸಭಾಗೃಹವಾಗಿ ರೂಪಾಂತರಿಸಲ್ಪಟ್ಟಿತು. 1992ರಲ್ಲಿ, ಪಟ್ಟಣದಲ್ಲಿದ್ದ ಸಹೋದರರ ಸಹಾಯದಿಂದ ನಾವು ಆ ಕಾರ್ಯವನ್ನು ಪೂರ್ಣಗೊಳಿಸಿದೆವು. ನೀವು 24ನೆಯ ಪುಟದಲ್ಲಿರುವ ಚಿತ್ರದಲ್ಲಿ ನೋಡಸಾಧ್ಯವಿರುವಂತೆ, ನಮ್ಮ ಸಭಾಗೃಹವು ಸುಸ್ಥಿತಿಯಲ್ಲಿರುವ—ಗಾರೆ ಗಿಲಾವು ಮಾಡಿ, ಬಣ್ಣ ಬಳಿದಿದ್ದು, ಕಾಂಕ್ರಿಟ್ ನೆಲ ಹಾಗೂ ಘನವಾದ ಛವಾಣಿಯನ್ನು ಹೊಂದಿರುವ—ಕಟ್ಟಡವಾಗಿದೆ.
ಕುಷ್ಠ ರೋಗವಿರುವವರಿಗೆ ಸಾರುವುದು
ಸುಮಾರು 33 ವರ್ಷಗಳಿಂದ, ಕುಷ್ಠ ರೋಗಿಗಳ ವಸಾಹತು ನನ್ನ ಟೆರಿಟೊರಿಯಾಗಿದೆ. ಕುಷ್ಠ ರೋಗಿಗಳಿಗೆ ಸಾರುವ ಕೆಲಸವು ಹೇಗಿದೆ? ಇಲ್ಲಿ ಆಫ್ರಿಕದಲ್ಲಿ ಅಧಿಕಾಂಶ ಜನರು, ಸರ್ವವೂ ದೇವರಿಂದ ಬರುತ್ತದೆಂದು ನಂಬುತ್ತಾರೆ. ಆದುದರಿಂದ ಅವರು ಕುಷ್ಠ ರೋಗದಿಂದ ಬಾಧಿಸಲ್ಪಡುವಾಗ, ಹೇಗೂ ದೇವರೇ ಇದಕ್ಕೆ ಕಾರಣನೆಂದು ಅವರು ನಂಬುತ್ತಾರೆ. ಕೆಲವರು ತಮ್ಮ ಸ್ಥಿತಿಯ ಕುರಿತು ಬಹಳವಾಗಿ ಖಿನ್ನರಾಗಿದ್ದಾರೆ. ಇನ್ನಿತರರು ಕೋಪಗೊಂಡವರಾಗಿದ್ದು, ಹೀಗೆ ಹೇಳುತ್ತಾರೆ: “ಪ್ರೀತಿಪೂರ್ಣನೂ ದಯಾಳುವೂ ಆಗಿರುವ ದೇವರ ಕುರಿತು ನಮ್ಮ ಬಳಿ ಮಾತಾಡಬೇಡಿ. ಅದು ಸತ್ಯವಾಗಿರುತ್ತಿದ್ದಲ್ಲಿ, ಈ ರೋಗವು ಇಲ್ಲವಾಗುತ್ತಿತ್ತು!” ಆಗ ನಾವು ಯಾಕೋಬ 1:13ನ್ನು (NW) ಓದಿ, ತರ್ಕಿಸುತ್ತೇವೆ. ಆ ವಚನವು ಹೇಳುವುದು: ‘ಕೆಟ್ಟದ್ದರಿಂದ ದೇವರು ಯಾರನ್ನೂ ಪರೀಕ್ಷಿಸುವುದಿಲ್ಲ.’ ಅನಂತರ, ರೋಗವು ಜನರನ್ನು ಬಾಧಿಸುವಂತೆ ಯೆಹೋವನು ಏಕೆ ಅನುಮತಿಸುತ್ತಾನೆ ಎಂಬುದನ್ನು ನಾವು ವಿವರಿಸುತ್ತೇವೆ, ಮತ್ತು ಎಲ್ಲಿ ಯಾರೊಬ್ಬರೂ ಅಸ್ವಸ್ಥರಾಗಿರುವುದಿಲ್ಲವೋ ಆ ಪ್ರಮೋದವನ ಭೂಮಿಯ ಕುರಿತಾದ ಆತನ ವಾಗ್ದಾನದ ಕುರಿತು ನಾವು ಹೇಳುತ್ತೇವೆ.—ಯೆಶಾಯ 33:24.
ಸುವಾರ್ತೆಗೆ ಅನೇಕರು ಅನುಕೂಲಕರವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಈ ಶಿಬಿರಕ್ಕೆ ಬಂದಂದಿನಿಂದ, 30ಕ್ಕಿಂತಲೂ ಹೆಚ್ಚು ವ್ಯಕ್ತಿಗಳು—ಎಲ್ಲರೂ ಕುಷ್ಠ ರೋಗಿಗಳು—ತಮ್ಮನ್ನು ಸಮರ್ಪಿಸಿಕೊಂಡು, ದೀಕ್ಷಾಸ್ನಾನವನ್ನು ಪಡೆದುಕೊಳ್ಳುವಂತೆ ಸಹಾಯ ಮಾಡಲಿಕ್ಕಾಗಿ ಯೆಹೋವನು ನನ್ನನ್ನು ಉಪಯೋಗಿಸಿದ್ದಾನೆ. ಅನೇಕರು ಗುಣಹೊಂದಿದ ಬಳಿಕ ತಮ್ಮ ಮನೆಗಳಿಗೆ ಹಿಂದಿರುಗಿದ್ದಾರೆ, ಮತ್ತು ಕೆಲವರು ಮೃತಪಟ್ಟಿದ್ದಾರೆ. ಈಗ ನಮ್ಮಲ್ಲಿ 18 ರಾಜ್ಯ ಪ್ರಚಾರಕರಿದ್ದಾರೆ, ಮತ್ತು ಸುಮಾರು 25 ಜನರು ಕ್ರಮವಾಗಿ ಕೂಟಗಳಿಗೆ ಹಾಜರಾಗುತ್ತಾರೆ. ನಮ್ಮಲ್ಲಿ ಇಬ್ಬರು ಹಿರಿಯರಾಗಿ ಸೇವೆಮಾಡುತ್ತೇವೆ, ಮತ್ತು ಒಬ್ಬ ಶುಶ್ರೂಷಾ ಸೇವಕರು ಹಾಗೂ ಒಬ್ಬ ಕ್ರಮದ ಪಯನೀಯರನಿದ್ದಾನೆ. ಈ ಶಿಬಿರದಲ್ಲಿ ಈಗ ಇಷ್ಟು ಮಂದಿ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿರುವುದನ್ನು ನೋಡಲು ನಾನೆಷ್ಟು ಆನಂದಿಸುತ್ತೇನೆ! ನಾನು ಇಲ್ಲಿಗೆ ಬಂದಾಗ, ನಾನು ಒಂಟಿಯಾಗಿಯೇ ಇರುವೆನೋ ಏನೋ ಎಂದು ನಾನು ಭಯಪಟ್ಟಿದ್ದೆ, ಆದರೆ ಅದ್ಭುತಕರವಾದ ಒಂದು ವಿಧದಲ್ಲಿ ಯೆಹೋವನು ನನ್ನನ್ನು ಆಶೀರ್ವದಿಸಿದ್ದಾನೆ.
ನನ್ನ ಸಹೋದರರಿಗಾಗಿ ಸೇವೆಮಾಡುವುದರ ಆನಂದ
ನಾನು 1960ರಿಂದ ಸುಮಾರು ಐದು ವರ್ಷಗಳ ಹಿಂದಿನ ವರೆಗೆ ಕುಷ್ಠ ರೋಗಕ್ಕಾಗಿ ಔಷಧಗಳನ್ನು ತೆಗೆದುಕೊಂಡೆ. ಸಭೆಯಲ್ಲಿರುವ ಇತರರಂತೆ ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಕುಷ್ಠ ರೋಗವು ತನ್ನ ಗುರುತನ್ನು ಬಿಟ್ಟುಹೋಗಿದೆ—ನಾನು ನನ್ನ ಮೊಣಕಾಲನ್ನು ಕಳೆದುಕೊಂಡೆ, ಮತ್ತು ನನ್ನ ಕೈಗಳನ್ನು ನೇರವಾಗಿ ಚಾಚಲು ಆಗುವುದಿಲ್ಲ—ಆದರೆ ರೋಗವು ವಾಸಿಯಾಗಿದೆ.
ನಾನು ಗುಣಮುಖನಾಗಿರುವುದರಿಂದ, ನಾನು ಶಿಬಿರವನ್ನು ಬಿಟ್ಟು, ಮನೆಗೆ ಏಕೆ ಹಿಂದಿರುಗುವುದಿಲ್ಲವೆಂದು ಕೆಲವರು ನನ್ನನ್ನು ಕೇಳಿದ್ದಾರೆ. ನಾನು ಏಕೆ ಉಳಿದಿದ್ದೇನೆಂಬುದಕ್ಕೆ ಅನೇಕ ಕಾರಣಗಳಿವೆ. ಆದರೆ ಪ್ರಮುಖವಾದ ಕಾರಣವು ಯಾವುದೆಂದರೆ, ಇಲ್ಲಿರುವ ನನ್ನ ಸಹೋದರರಿಗೆ ಸಹಾಯ ಮಾಡುತ್ತಾ ಮುಂದುವರಿಯಲು ನಾನು ಬಯಸುತ್ತೇನೆ. ಯೆಹೋವನ ಕುರಿಗಳನ್ನು ನೋಡಿಕೊಳ್ಳುವುದರ ಆನಂದವು, ನಾನು ನನ್ನ ಕುಟುಂಬದ ಬಳಿಗೆ ಹಿಂದಿರುಗುತ್ತಿದ್ದಲ್ಲಿ ಅವರು ನನಗೆ ಕೊಡಬಹುದಾಗಿದ್ದ ಯಾವುದೇ ಆನಂದಕ್ಕಿಂತ ಮಿಗಿಲಾಗಿದೆ.
ನನಗೆ ಕುಷ್ಠ ರೋಗವಿತ್ತೆಂಬುದು ನನಗೆ ಗೊತ್ತಾಗುವುದಕ್ಕೆ ಮುಂಚೆಯೇ ನಾನು ಯೆಹೋವನನ್ನು ತಿಳಿದುಕೊಂಡಿದ್ದಕ್ಕಾಗಿ ನಾನು ತುಂಬ ಕೃತಜ್ಞನು. ಇಲ್ಲದಿದ್ದಲ್ಲಿ, ನಾನು ನನ್ನನ್ನು ಕೊಂದುಕೊಳ್ಳುತ್ತಿದ್ದಿರಬಹುದು. ಗತ ವರ್ಷಗಳಿಂದ ಅನೇಕ ಕಷ್ಟಗಳು ಹಾಗೂ ಸಮಸ್ಯೆಗಳು ಎದುರಾಗಿವೆಯಾದರೂ, ನನ್ನನ್ನು ಸಂರಕ್ಷಿಸಿದ್ದು ಔಷಧವಲ್ಲ—ಯೆಹೋವನೇ. ಗತ ಸಮಯದ ಕುರಿತು ನಾನು ಪರ್ಯಾಲೋಚಿಸುವಾಗ, ನಾನು ಆನಂದಭರಿತನಾಗಿದ್ದೇನೆ; ಮತ್ತು ದೇವರ ರಾಜ್ಯದ ಕೆಳಗಿನ ಭವಿಷ್ಯತ್ತಿನ ಕುರಿತು ನಾನು ಯೋಚಿಸುವಾಗ, ನಾನು ಇನ್ನೂ ಹೆಚ್ಚು ಆನಂದಭರಿತನು.
[ಪುಟ 25 ರಲ್ಲಿರುವ ಚೌಕ]
ಕುಷ್ಠ ರೋಗದ ಕುರಿತಾದ ಪ್ರಮುಖ ಮಾಹಿತಿ
ಅದು ಏನಾಗಿದೆ?
ಆಧುನಿಕ ದಿನದ ಕುಷ್ಠ ರೋಗವು, ಆರ್ಮವರ್ ಹ್ಯಾನ್ಸನ್ರಿಂದ 1873ರಲ್ಲಿ ಗುರುತಿಸಲ್ಪಟ್ಟ ಬಸಿಲಸ್ (ದಂಡಾಣುಜೀವಿ) ಅಣುಜೀವಿಯಿಂದ ಉಂಟಾಗುವ ಒಂದು ರೋಗವಾಗಿದೆ. ಅವನು ಮಾಡಿದ ಕೆಲಸಕ್ಕೆ ಮನ್ನಣೆಯಾಗಿ, ವೈದ್ಯರು ಈ ಕುಷ್ಠ ರೋಗವನ್ನು ಹ್ಯಾನ್ಸನ್ ರೋಗವೆಂದು ಸಹ ಸಂಬೋಧಿಸುತ್ತಾರೆ.
ಬಸಿಲಸ್ ಅಣುಜೀವಿಯು, ನರಗಳು, ಸ್ನಾಯುಗಳು, ಕಣ್ಣುಗಳು ಹಾಗೂ ಕೆಲವು ಅವಯವಗಳನ್ನು ಹಾಳುಮಾಡುತ್ತದೆ. ಅನೇಕವೇಳೆ ಕೈಕಾಲುಗಳಲ್ಲಿನ ಸಂವೇದನೆಯು ಇಲ್ಲವಾಗುತ್ತದೆ. ಪರೀಕ್ಷಿಸಿ ಚಿಕಿತ್ಸೆ ನೀಡದೆ ಬಿಡುವಲ್ಲಿ, ಈ ರೋಗವು ಮುಖದ ಹಾಗೂ ಕೈಕಾಲುಗಳ ಗುರುತರವಾದ ಅಂಗಹೀನತೆಯನ್ನು ಉಂಟುಮಾಡಸಾಧ್ಯವಿದೆ. ಕೆಲವೊಮ್ಮೆ ಅದು ಕೊಲ್ಲುತ್ತದೆ.
ಇದಕ್ಕೆ ಔಷಧವಿದೆಯೊ?
ಕಡಿಮೆ ಹಾನಿಕರವಾದ ಕುಷ್ಠ ರೋಗವಿರುವ ಜನರು, ಯಾವುದೇ ರೀತಿಯ ಚಿಕಿತ್ಸೆಯಿಲ್ಲದೆ ಗುಣಹೊಂದುತ್ತಾರೆ. ಹೆಚ್ಚು ಗಂಭೀರವಾದ ರೋಗಿಗಳು ಔಷಧಗಳಿಂದ ಗುಣವಾಗಸಾಧ್ಯವಿದೆ.
1950ಗಳಲ್ಲಿ ಪರಿಚಯಿಸಲ್ಪಟ್ಟ ಪ್ರಪ್ರಥಮ ಕುಷ್ಠ ರೋಗ ನಿರೋಧಕ ಔಷಧವು, ನಿಧಾನವಾಗಿ ಕಾರ್ಯನಡಿಸಿ, ತೀರ ಪರಿಣಾಮರಹಿತವಾಗಿ ಪರಿಣಮಿಸಿತು, ಏಕೆಂದರೆ ಕುಷ್ಠ ರೋಗದ ಬಸಿಲಸ್ ಅಣುಜೀವಿಯು ಆ ಔಷಧಕ್ಕೆ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಂಡಿತು. ಹೊಸ ಔಷಧಗಳು ವಿಕಸಿಸಲ್ಪಟ್ಟವು, ಮತ್ತು 1980ಗಳ ಆರಂಭದಿಂದ, ಮಲ್ಟಿ-ಡ್ರಗ್ ಥೆರಪಿ (ಎಮ್ಡಿಟಿ)ಯು ಲೋಕವ್ಯಾಪಕವಾಗಿ ಅತ್ಯುತ್ತಮ ಚಿಕಿತ್ಸೆಯಾಗಿ ಪರಿಣಮಿಸಿತು. ಈ ಚಿಕಿತ್ಸೆಯಲ್ಲಿ ಮೂರು ಔಷಧಗಳು ಜೊತೆಗೂಡಿವೆ—ಡ್ಯಾಪ್ಸೋನ್, ರಿಭ್ಯಾಂಟಿಸೊನ್, ಮತ್ತು ಕ್ಲೊಫಾಸಿಮಿನ್. ಎಮ್ಡಿಟಿಯು, ಬಸಿಲಸ್ ಅಣುಜೀವಿಯನ್ನು ಕೊಲ್ಲುತ್ತದೆ, ಆದರೆ ಈಗಾಗಲೇ ಆಗಿರುವ ಹಾನಿಯನ್ನು ಸರಿಮಾಡುವುದಿಲ್ಲ.
ರೋಗವನ್ನು ಗುಣಪಡಿಸುವುದರಲ್ಲಿ ಎಮ್ಡಿಟಿ ತುಂಬ ಪರಿಣಾಮಕಾರಿಯಾಗಿದೆ. ಇದರ ಪರಿಣಾಮವಾಗಿ, ಕುಷ್ಠ ರೋಗವಿರುವ ಜನರ ಸಂಖ್ಯೆಯು, 1985ರಲ್ಲಿ 1.2 ಕೋಟಿಯಿಂದ 1996ರ ಮಧ್ಯಭಾಗದ ವರೆಗೆ ಸುಮಾರು 13 ಲಕ್ಷಕ್ಕೆ ತೀವ್ರಗತಿಯಲ್ಲಿ ಇಳಿದಿದೆ.
ಅದು ಎಷ್ಟರ ಮಟ್ಟಿಗೆ ಸಾಂಕ್ರಾಮಿಕವಾಗಿದೆ?
ಕುಷ್ಠ ರೋಗವು ತೀರ ಸಾಂಕ್ರಾಮಿಕವಾದ ರೋಗವಾಗಿಲ್ಲ; ಅದನ್ನು ಎದುರಿಸಲು ಬೇಕಾಗುವಷ್ಟು ಬಲವಾದ ಸೋಂಕುರಕ್ಷಾ ವ್ಯವಸ್ಥೆಗಳು ಅಧಿಕಾಂಶ ಜನರಲ್ಲಿವೆ. ಸಾಂಕ್ರಾಮಿಕವಾಗಿ ಆ ರೋಗವು ಬರುವಲ್ಲಿ, ಸಾಮಾನ್ಯವಾಗಿ ಆ ರೋಗದಿಂದ ಸೋಂಕಿತರಾಗಿರುವವರೊಂದಿಗೆ ದೀರ್ಘ ಸಮಯದ ವರೆಗೆ ನಿಕಟ ಸಂಪರ್ಕವನ್ನಿಡುತ್ತಾ ವಾಸಿಸುವ ಜನರಿಗೆ ಅದು ಬರುತ್ತದೆ.
ಬಸಿಲಸ್ ಅಣುಜೀವಿಯು ಹೇಗೆ ಮಾನವ ಶರೀರವನ್ನು ಪ್ರವೇಶಿಸುತ್ತದೆ ಎಂಬುದು ವೈದ್ಯರಿಗೆ ಖಚಿತವಾಗಿ ತಿಳಿದಿಲ್ಲವಾದರೂ, ಅದು ಚರ್ಮ ಅಥವಾ ಮೂಗಿನ ಮೂಲಕ ಒಳಗೆ ಪ್ರವೇಶಿಸುತ್ತದೆಂದು ಅವರು ಸಂದೇಹ ಪಡುತ್ತಾರೆ.
ಭವಿಷ್ಯತ್ತಿನ ಪ್ರತೀಕ್ಷೆಗಳು
ಇಸವಿ 2000ದಷ್ಟರೊಳಗೆ ಕುಷ್ಠ ರೋಗವನ್ನು “ಒಂದು ಸಾರ್ವಜನಿಕ ಆರೋಗ್ಯ ಸಮಸ್ಯೆಯೋಪಾದಿ ನಿರ್ಮೂಲಮಾಡುವ” ಗುರಿಯನ್ನಿಡಲಾಗಿದೆ. ಇದರ ಅರ್ಥ, ಯಾವುದೇ ಸಮುದಾಯದಲ್ಲಿ ಕುಷ್ಠ ರೋಗಿಗಳ ಸಂಖ್ಯೆಯು 10,000 ಜನರಲ್ಲಿ 1ಕ್ಕಿಂತ ಹೆಚ್ಚಾಗಿರಬಾರದು. ದೇವರ ರಾಜ್ಯದ ಕೆಳಗೆ ಅದು ಸಂಪೂರ್ಣವಾಗಿ ತೆಗೆದುಹಾಕಲ್ಪಡುವುದು.—ಯೆಶಾಯ 33:24.
ಮೂಲಗಳು: ಲೋಕಾರೋಗ್ಯ ಸಂಸ್ಥೆ; ಕುಷ್ಠ ರೋಗ ನಿರೋಧಕ ಸಂಘಗಳ ಅಂತಾರಾಷ್ಟ್ರೀಯ ಫೆಡರೇಷನ್; ಮತ್ತು ಮ್ಯಾನ್ಸನ್ಸ್ ಟ್ರಾಪಿಕಲ್ ಡಿಸೀಸಸ್, 1996ರ ಮುದ್ರಣ.
[ಪುಟ 27 ರಲ್ಲಿರುವ ಚೌಕ]
ಇಂದಿನ ಕುಷ್ಠ ರೋಗವು ಬೈಬಲ್ ಸಮಯಗಳಲ್ಲಿದ್ದ ಕುಷ್ಠ ರೋಗಕ್ಕೆ ಸಮನಾಗಿದೆಯೊ?
ಇಂದಿನ ವೈದ್ಯಕೀಯ ಪಠ್ಯಪುಸ್ತಕಗಳು, ಕುಷ್ಠ ರೋಗವನ್ನು ನಿಕರವಾದ ಶಬ್ದಗಳಲ್ಲಿ ಅರ್ಥನಿರೂಪಿಸುತ್ತವೆ; ಇದರಲ್ಲಿ ಒಳಗೂಡಿರುವ ಸೂಕ್ಷ್ಮದರ್ಶಕೀಯ ಜೀವಿಗಾಗಿರುವ ವೈಜ್ಞಾನಿಕ ಹೆಸರು ಮೈಕೊಬ್ಯಾಕ್ಟೀರಿಯಂ ಲೆಪ್ರೆ ಆಗಿದೆ. ನಿಶ್ಚಯವಾಗಿಯೂ ಬೈಬಲು ಒಂದು ವೈದ್ಯಕೀಯ ಪಠ್ಯಪುಸ್ತಕವಲ್ಲ. ಅನೇಕ ಬೈಬಲ್ ಭಾಷಾಂತರಗಳಲ್ಲಿ “ಕುಷ್ಠ ರೋಗ” ಎಂಬುದಾಗಿ ಭಾಷಾಂತರಿಸಲ್ಪಟ್ಟಿರುವ ಹೀಬ್ರು ಮತ್ತು ಗ್ರೀಕ್ ಶಬ್ದಗಳು, ಹೆಚ್ಚು ವಿಶಾಲಾರ್ಥವನ್ನು ಪಡೆದಿವೆ. ಉದಾಹರಣೆಗಾಗಿ, ಬೈಬಲಿನ ಕುಷ್ಠ ರೋಗವು, ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ವಸ್ತ್ರಗಳು ಹಾಗೂ ಮನೆಗಳಲ್ಲಿ ಸಹ ಗಮನಾರ್ಹವಾದ ರೋಗಲಕ್ಷಣಗಳನ್ನು ಉತ್ಪಾದಿಸಿತು. ಇದು ಬಸಿಲಸ್ ಅಣುಜೀವಿಯು ಮಾಡದಿರುವಂತಹ ಒಂದು ವಿಷಯವಾಗಿದೆ.—ಯಾಜಕಕಾಂಡ 13:2, 47; 14:34.
ಇದಲ್ಲದೆ, ಇಂದು ಮಾನವರಲ್ಲಿ ಕುಷ್ಠ ರೋಗವನ್ನು ಗುರುತಿಸುವ ರೋಗಲಕ್ಷಣಗಳು, ಬೈಬಲ್ ಸಮಯಗಳಲ್ಲಿನ ಕುಷ್ಟರೋಗದ ವರ್ಣನೆಗೆ ಸೂಕ್ತವಾಗಿ ಹೊಂದಿಕೊಳ್ಳುವುದಿಲ್ಲ. ಸಮಯವು ಗತಿಸಿಹೋದಂತೆ ರೋಗಗಳ ಪ್ರಕೃತಿಯೂ ಬದಲಾಗುತ್ತದೆ ಎಂಬ ವಾಸ್ತವಾಂಶದಲ್ಲಿ ಇದರ ವಿವರಣೆಯು ಒಳಗೂಡಿರಬಹುದೆಂದು ಕೆಲವರು ಸೂಚಿಸುತ್ತಾರೆ. ಬೈಬಲಿನಲ್ಲಿ ಸೂಚಿಸಲ್ಪಟ್ಟಿರುವ ಕುಷ್ಠ ರೋಗವು, ರೋಗಗಳ ಶ್ರೇಣಿಯನ್ನೇ ವರ್ಣಿಸುತ್ತದೆ, ಇದು ಎಮ್. ಲೆಪ್ರೆಯಿಂದ ಉಂಟುಮಾಡಲ್ಪಟ್ಟ ರೋಗವನ್ನು ಒಳಗೂಡಿರಬಹುದು ಅಥವಾ ಒಳಗೂಡದೆಯೂ ಇರಬಹುದು ಎಂದು ಇತರರು ನಂಬುತ್ತಾರೆ.
ಥಿಯೊಲಾಜಿಕಲ್ ಡಿಕ್ಷನೆರಿ ಆಫ್ ದ ನ್ಯೂ ಟೆಸ್ಟಮೆಂಟ್ ಹೇಳುವುದೇನೆಂದರೆ, ಸಾಮಾನ್ಯವಾಗಿ ಕುಷ್ಠ ರೋಗವೆಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಹಾಗೂ ಗ್ರೀಕ್—ಎರಡೂ—ಶಬ್ದವು, “ಒಂದೇ ರೀತಿಯ ವ್ಯಾಧಿಯನ್ನು ಅಥವಾ ವ್ಯಾಧಿಗಳ ಒಂದು ಗುಂಪನ್ನು ಸೂಚಿಸುತ್ತದೆ . . . ಇದೇ ಅನಾರೋಗ್ಯವನ್ನು ಈಗ ನಾವು ಕುಷ್ಠ ರೋಗವೆಂದು ಕರೆಯುತ್ತೇವೋ ಎಂಬುದು ಪ್ರಶ್ನಾರ್ಹವಾಗಿರಬಹುದು. ಆದರೆ ಈ ರೋಗದ ನಿಕರವಾದ ವೈದ್ಯಕೀಯ ಗುರುತಿಸುವಿಕೆಯು, [ಯೇಸುವಿನಿಂದ ಹಾಗೂ ಅವನ ಶಿಷ್ಯರಿಂದ ಕುಷ್ಠ ರೋಗಿಗಳ] ವಾಸಿಮಾಡುವಿಕೆಯ ವೃತ್ತಾಂತಗಳ ಕುರಿತಾದ ನಮ್ಮ ಗಣ್ಯತೆಯ ಮೇಲೆ ಪರಿಣಾಮವನ್ನು ಬೀರುವುದಿಲ್ಲ.”
[ಪುಟ 24 ರಲ್ಲಿರುವ ಚಿತ್ರ]
ಕುಷ್ಠ ರೋಗಿಗಳ ಶಿಬಿರದಲ್ಲಿರುವ ರಾಜ್ಯ ಸಭಾಗೃಹದ ಹೊರಗೆ ಸಭೆ
[ಪುಟ 26 ರಲ್ಲಿರುವ ಚಿತ್ರ]
ಐಸಾಅ ಆಡಾಗ್ಬೋನ ಹಾಗೂ ಅವರ ಹೆಂಡತಿಯಾದ ನೀಮೋಟ