ಎಂಬತ್ತರ ಪ್ರಾಯದಲ್ಲಿ ನೇಮಕದ ಬದಲಾವಣೆ
ಗ್ವೆಂಡಲನ್ ಮ್ಯಾತ್ಯೂಸ್ ಅವರು ಹೇಳಿದಂತೆ
ಎಂಬತ್ತರ ಪ್ರಾಯವನ್ನು ನಾನು ಮುಟ್ಟಿದಾಗ, ನನ್ನ ಗಂಡ ಮತ್ತು ನಾನು ನಮ್ಮೆಲ್ಲ ಸ್ವತ್ತುಗಳನ್ನು ಒಂದು ಬಾಡಿಗೆಯ ಟ್ರಕ್ಕಿನಲ್ಲಿ ತುಂಬಿಸಿ, ಇಂಗ್ಲೆಂಡ್ನಿಂದ ಸ್ಪೆಯ್ನ್ಗೆ ಸ್ಥಳಾಂತರಿಸಲು ನಿರ್ಧರಿಸಿದೆವು. ನಾವು ಸ್ಪ್ಯಾನಿಷ್ ಭಾಷೆಯನ್ನು ಮಾತಾಡಲಿಲ್ಲ, ಮತ್ತು ನಾವು ಇಂಗ್ಲಿಷ್ ಭಾಷೆಯನ್ನಾಡುವ ಪ್ರವಾಸಿಗರ ಸಂಚಾರ ಸ್ಥಳಗಳಿಂದ ದೂರವಿರುವ ನೈರುತ್ಯ ಸ್ಪೆಯ್ನ್ಗೆ ಹೋಗುತ್ತಿದ್ದೆವು. ನಾವು ವ್ಯವಹಾರಜ್ಞಾನವಿಲ್ಲದವರೆಂದು ನಮ್ಮ ಮಿತ್ರರಲ್ಲಿ ಹೆಚ್ಚಿನವರು ಭಾವಿಸಿದರು, ಆದರೆ ಅಬ್ರಹಾಮನು ಉರ್ ಪಟ್ಟಣವನ್ನು ಬಿಟ್ಟಾಗ 75 ವರ್ಷದವನಾಗಿದ್ದನೆಂದು ನಾನು ಹರ್ಷಚಿತ್ತಳಾಗಿ ಸ್ವತಃ ಜ್ಞಾಪಿಸಿಕೊಂಡೆ.
ಫಲಸ್ವರೂಪವಾಗಿ, ನಾವು ಸ್ಪೆಯ್ನ್ಗೆ ಏಪ್ರಿಲ್ 1992ರಲ್ಲಿ ಬಂದಾಗಿನಿಂದ ನಮ್ಮ ವರ್ಷಗಳು, ನಮ್ಮ ಜೀವಿತಗಳಲ್ಲೇ ಅತ್ಯಂತ ಪ್ರತಿಫಲದಾಯಕವಾದ ವರ್ಷಗಳಲ್ಲಿ ಕೆಲವಾಗಿವೆ. ನಾವು ಏಕೆ ಸ್ಥಳಾಂತರಿಸಿದೆವು ಎಂಬುದನ್ನು ನಾನು ವಿವರಿಸುವ ಮೊದಲು, ಯೆಹೋವನ ಸೇವೆಯಲ್ಲಿ ವ್ಯಯಿಸಿದ ನಮ್ಮ ಜೀವಮಾನವು ಇಂತಹ ಒಂದು ದೊಡ್ಡ ನಿರ್ಣಯವನ್ನು ಮಾಡುವಂತೆ ನಮ್ಮನ್ನು ಹೇಗೆ ನಡೆಸಿತು ಎಂಬುದನ್ನು ನಿಮಗೆ ಹೇಳುತ್ತೇನೆ.
ಬೈಬಲ್ ಸತ್ಯವು ನಮ್ಮ ಜೀವಿತಗಳನ್ನು ಬದಲಾಯಿಸುತ್ತದೆ
ನಾನು ಇಂಗ್ಲೆಂಡ್ನ ನೈರುತ್ಯ ಲಂಡನ್ನಲ್ಲಿನ ಒಂದು ಧಾರ್ಮಿಕ ಕುಟುಂಬದಲ್ಲಿ ದೊಡ್ಡವನಾದೆ. ತಾಯಿಯವರು ಆತ್ಮಿಕ ಸಂತೃಪ್ತಿಗಾಗಿ ಹುಡುಕುತ್ತಾ ಇದ್ದಂತೆ, ನನ್ನ ತಂಗಿಯನ್ನು ಮತ್ತು ನನ್ನನ್ನು ಆರಾಧನೆಯ ವಿಭಿನ್ನ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಬಹು ಕಾಲದಿಂದ ಕ್ಷಯರೋಗ ಪೀಡಿತರಾಗಿದ್ದ ನನ್ನ ತಂದೆಯವರು ನಮ್ಮೊಂದಿಗೆ ಬರಲಿಲ್ಲ. ಆದರೆ ಅವರು ಬೈಬಲಿನ ಅತ್ಯಾಸಕ್ತಿಯುಳ್ಳ ವಾಚಕರಾಗಿದ್ದು, ಜ್ಞಾನೋದಯ ಉಂಟುಮಾಡಿದ ವಾಕ್ಯವೃಂದವನ್ನು ಕಂಡುಕೊಂಡಾಗಲೆಲ್ಲ ಅದಕ್ಕೆ ಅಡಿಗೆರೆ ಹಾಕಿದರು. ನನ್ನ ಅತ್ಯಮೂಲ್ಯವಾದ ಸ್ವತ್ತುಗಳಲ್ಲಿ ಒಂದು, ಅವರು ಬಹಳಷ್ಟು ಅಮೂಲ್ಯವೆಂದೆಣಿಸಿದ ಆ ಹಳತಾದ ಬೈಬಲ್ ಆಗಿದೆ.
ಇಸವಿ 1925ರಲ್ಲಿ ನಾನು 14 ವರ್ಷದವಳಾಗಿದ್ದಾಗ, ವೆಸ್ಟ್ ಹ್ಯಾಮ್ ಟೌನ್ ಹಾಲ್ನಲ್ಲಿ ನಡೆಯಲಿದ್ದ ಒಂದು ಬಹಿರಂಗ ಭಾಷಣಕ್ಕೆ ನಮ್ಮನ್ನು ಆಮಂತ್ರಿಸಿದ ಒಂದು ಕರಪತ್ರವು ನಮ್ಮ ಬಾಗಿಲಿನ ಅಡಿಯಲ್ಲಿ ಹಾಕಲ್ಪಟ್ಟಿತ್ತು. ನನ್ನ ತಾಯಿ ಮತ್ತು ನೆರೆಯವರೊಬ್ಬರು ಆ ಭಾಷಣಕ್ಕೆ ಹಾಜರಾಗಲು ನಿರ್ಧರಿಸಿದರು, ಮತ್ತು ನನ್ನ ತಂಗಿ ಮತ್ತು ನಾನು ಅವರೊಂದಿಗೆ ಹೋದೆವು. “ಈಗ ಜೀವಿಸುತ್ತಿರುವ ಲಕ್ಷಾಂತರ ಜನರು ಎಂದಿಗೂ ಸಾಯಲಾರರು” ಎಂಬ ಆ ಭಾಷಣವು, ತಾಯಿಯವರ ಹೃದಯಲ್ಲಿ ಬೈಬಲ್ ಸತ್ಯದ ಬೀಜಗಳನ್ನು ಬಿತ್ತಿತು.
ಕೆಲವು ತಿಂಗಳುಗಳ ತರುವಾಯ, 38ರ ಪ್ರಾಯದಲ್ಲಿ ತಂದೆಯವರು ತೀರಿಹೋದರು. ಅವರ ಮರಣವು ನಮ್ಮನ್ನು ಮನಮುರಿದವರಾಗಿಯೂ ನಿರ್ಗತಿಕರಾಗಿಯೂ ಬಿಟ್ಟ ಕಾರಣ, ಅದೊಂದು ಭಯಂಕರವಾದ ಏಟಾಗಿತ್ತು. ಲೋಕಲ್ ಚರ್ಚ್ ಆಫ್ ಇಂಗ್ಲೆಂಡ್ನಲ್ಲಿ ನಡೆಸಲ್ಪಟ್ಟ ಶವಸಂಸ್ಕಾರದ ಸಮಯದಲ್ಲಿ, ತಂದೆಯವರ ಪ್ರಾಣವು ಸ್ವರ್ಗದಲ್ಲಿತ್ತೆಂಬ ಪಾದ್ರಿಯ ಪ್ರತಿಪಾದನೆಯನ್ನು ಕೇಳಿ ತಾಯಿಯವರು ತಲ್ಲಣಗೊಂಡರು. ಮೃತರು ಸಮಾಧಿಯಲ್ಲಿ ನಿದ್ರಿಸುತ್ತಿದ್ದಾರೆಂದು ಅವರಿಗೆ ಬೈಬಲಿನಿಂದ ತಿಳಿದಿತ್ತು, ಮತ್ತು ಯಾವುದಾದರೊಂದು ದಿನ ತಂದೆಯವರು ಭೂಮಿಯ ಮೇಲೆ ನಿತ್ಯಜೀವಕ್ಕೆ ಪುನರುತ್ಥಾನಗೊಳಿಸಲ್ಪಡುವರೆಂದು ಅವರು ದೃಢವಾಗಿ ನಂಬಿದರು. (ಕೀರ್ತನೆ 37:9-11, 29; 146:3, 4; ಪ್ರಸಂಗಿ 9:5; ಅ. ಕೃತ್ಯಗಳು 24:15; ಪ್ರಕಟನೆ 21:3, 4) ದೇವರ ವಾಕ್ಯವನ್ನು ಕಲಿಸಿದ ಜನರೊಂದಿಗೆ ಸಹವಸಿಸಬೇಕೆಂಬ ನಿರ್ಧಾರವನ್ನು ಮಾಡಿದ ಅವರು, ಅಂತಾರಾಷ್ಟ್ರೀಯ ಬೈಬಲ್ ವಿದ್ಯಾರ್ಥಿ—ಹಾಗೆಂದು ಯೆಹೋವನ ಸಾಕ್ಷಿಗಳು ಆಗ ಕರೆಯಲ್ಪಟ್ಟರು—ಗಳೊಂದಿಗೆ ಪರಿಚಯವನ್ನು ವಿಕಸಿಸಿಕೊಳ್ಳಲು ನಿರ್ಧರಿಸಿದರು.
ವಾಹನದಲ್ಲಿ ಓಡಾಡಲು ನಮ್ಮಲ್ಲಿ ಹಣವಿಲ್ಲದಿದ್ದ ಕಾರಣ, ನಮ್ಮ ಮನೆಯಿಂದ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲು ಪ್ರತಿ ವಾರ ಎರಡು ತಾಸುಗಳ ವರೆಗೆ ನಾವು ನಡೆದೆವು. ತದನಂತರ, ಮತ್ತೆರಡು ತಾಸು ಕಷ್ಟಪಟ್ಟುಕೊಂಡು ಹೆಜ್ಜೆಹಾಕುತ್ತಾ ಮನೆ ಸೇರಿದೆವು. ಆದರೆ ಆ ಕೂಟಗಳನ್ನು ನಾವು ಅತ್ಯಂತ ಮಹತ್ವವುಳ್ಳದ್ದಾಗಿ ಭಾವಿಸಿದೆವು ಮತ್ತು ಒಂದು ಕೂಟವನ್ನೂ—ಆ ನಗರವನ್ನು ಭಯಂಕರವಾದ ಲಂಡನ್ ಮಂಜು ಆವರಿಸಿದ್ದಾಗಲೂ—ನಾವು ತಪ್ಪಿಸಿಕೊಳ್ಳಲಿಲ್ಲ. ತಮ್ಮ ಜೀವನವನ್ನು ಯೆಹೋವನಿಗೆ ಸಮರ್ಪಿಸಿ, ದೀಕ್ಷಾಸ್ನಾನಪಡೆದುಕೊಳ್ಳಲು ತಾಯಿಯವರು ಬೇಗನೆ ನಿರ್ಧರಿಸಿದರು, ಮತ್ತು 1927ರಲ್ಲಿ ನಾನು ಸಹ ದೀಕ್ಷಾಸ್ನಾನಪಡೆದುಕೊಂಡೆ.
ನಮ್ಮ ಆರ್ಥಿಕ ತೊಂದರೆಗಳ ಎದುರಿನಲ್ಲೂ, ಆತ್ಮಿಕ ಆದ್ಯತೆಗಳ ಪ್ರಮುಖತೆಯನ್ನು ತಾಯಿಯವರು ಯಾವಾಗಲೂ ನನಗೆ ಕಲಿಸಿದರು. ಮತ್ತಾಯ 6:33 ಅವರ ಅಚ್ಚುಮಚ್ಚಿನ ವಚನಗಳಲ್ಲಿ ಒಂದಾಗಿತ್ತು, ಮತ್ತು ನಿಜವಾಗಿಯೂ ಅವರು ‘ರಾಜ್ಯವನ್ನು ಪ್ರಥಮವಾಗಿ ಹುಡುಕಿದರು.’ ಅವರು ಅಕಾಲಿಕವಾಗಿ 1935ರಲ್ಲಿ ಕ್ಯಾನ್ಸರಿಗೆ ತುತ್ತಾಗಿ ಮೃತಪಟ್ಟಾಗ, ಸೇವೆಸಲ್ಲಿಸಲು ಫ್ರಾನ್ಸಿಗೆ ಸ್ಥಳಾಂತರಿಸಸಾಧ್ಯವಿದ್ದ ಪೂರ್ಣ ಸಮಯದ ಶುಶ್ರೂಷಕರಿಗಾಗಿದ್ದ ಕರೆಗೆ ಒಪ್ಪಿಕೊಳ್ಳಲು ಯೋಜನೆಗಳನ್ನು ಮಾಡುತ್ತಿದ್ದರು.
ನಮ್ಮನ್ನು ಬಲಪಡಿಸಿದ ಮಾದರಿಗಳು
ಆ ಆರಂಭಿಕ ವರ್ಷಗಳಲ್ಲಿ, ಲಂಡನಿನಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಹಾಜರಾಗುತ್ತಿದ್ದವರಲ್ಲಿ ಕೆಲವರು ತಮ್ಮ ಸ್ವಂತ ವಿಚಾರಗಳನ್ನು ಪ್ರತಿಪಾದಿಸಲು ಬಯಸಿದರು, ಮತ್ತು ಈ ಜನರು ಜಗಳಗಳನ್ನು ಮತ್ತು ಒರಟಾದ ಉದ್ರೇಕಗಳನ್ನು ಉಂಟುಮಾಡಿದರು. ಆದರೂ ಯೆಹೋವನ ಸಂಸ್ಥೆಯನ್ನು—ಅದರಿಂದ ಇಷ್ಟೆಲ್ಲವನ್ನು ಕಲಿತ ನಂತರವೂ—ತ್ಯಜಿಸುವುದು, ನಿಷ್ಠಾರಾಹಿತ್ಯವಾಗಿರುವುದೆಂದು ತಾಯಿಯವರು ಯಾವಾಗಲೂ ಹೇಳಿದರು. ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯ ಆಗಿನ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರದರ್ಫರ್ಡ್ ಅವರ ಭೇಟಿಗಳು, ನಿಷ್ಠೆಯಿಂದ ಸೇವೆಮಾಡುತ್ತಾ ಇರುವಂತೆ ನಮ್ಮನ್ನು ಪ್ರಚೋದಿಸಿದವು.
ಸಹೋದರ ರದರ್ಫರ್ಡ್ ಅವರನ್ನು ನಾನು ಒಬ್ಬ ದಯಾಪರ, ಸ್ನೇಹಶೀಲ ವ್ಯಕ್ತಿಯಾಗಿ ಜ್ಞಾಪಿಸಿಕೊಳ್ಳುತ್ತೇನೆ. ನಾನು ಇನ್ನೂ ಒಬ್ಬ ಹದಿವಯಸ್ಕಳಾಗಿದ್ದಾಗ, ಲಂಡನ್ ಸಭೆಯು ಪಿಕ್ನಿಕ್ಗೆ ಹೋದ ಸಂದರ್ಭದಲ್ಲಿ ಅವರೂ ಉಪಸ್ಥಿತರಿದ್ದರು. ಒಂದಿಷ್ಟು ಸಂಕೋಚ ಪ್ರವೃತ್ತಿಯುಳ್ಳ ಹದಿವಯಸ್ಕಳಾದ ನಾನು, ಒಂದು ಕ್ಯಾಮರವನ್ನು ಹಿಡಿದುಕೊಂಡಿರುವುದನ್ನು ಅವರು ನೋಡಿದಾಗ, ತಮ್ಮ ಚಿತ್ರವೊಂದನ್ನು ತೆಗೆಯಲು ನಾನು ಬಯಸುವೆನೊ ಎಂದು ಅವರು ಕೇಳಿದರು. ಆ ಛಾಯಾಚಿತ್ರವು ನೆನಪಿನ ಕಾಣಿಕೆಯಾಯಿತು.
ತದನಂತರ, ಕ್ರೈಸ್ತ ಸಭೆಯಲ್ಲಿ ನಾಯಕತ್ವವನ್ನು ವಹಿಸುತ್ತಿರುವವರು ಮತ್ತು ಲೋಕದ ಪ್ರಖ್ಯಾತ ಪುರುಷರ ನಡುವಿನ ವೈದೃಶ್ಯವನ್ನು ಒಂದು ಅನುಭವವು ನನಗೆ ತೋರಿಸಿಕೊಟ್ಟಿತು. ನಾನು ಪರಿಚಾರಿಕೆಯಾಗಿ ಕೆಲಸಮಾಡುತ್ತಿದ್ದ, ಲಂಡನಿನ ಒಂದು ದೊಡ್ಡ ಹೋಟೆಲಿಗೆ, ಹಿಟ್ಲರನ ಗುಪ್ತದೂತರಲ್ಲಿ ಒಬ್ಬನಾದ ಫ್ರಾಂಟ್ಸ್ ವಾನ್ ಪಾಪನ್ ಮಧ್ಯಾಹ್ನದ ಊಟಕ್ಕಾಗಿ ಆಮಂತ್ರಿಸಲ್ಪಟ್ಟಿದ್ದನು. ಊಟಮಾಡುವಾಗ ಸಮವಸ್ತ್ರದಿಂದ ಕತ್ತಿಯನ್ನು ತೆಗೆದು ಬದಿಗಿಡಲು ಅವನು ನಿರಾಕರಿಸಿದನು, ಮತ್ತು ನಾನು ಅದರ ಮೇಲೆ ಮುಗ್ಗರಿಸಿ, ನನ್ನ ಕೈಯಲ್ಲಿದ್ದ ಸೂಪನ್ನು ಚೆಲ್ಲಿದೆ. ಜರ್ಮನಿಯಲ್ಲಿ ಇಂತಹ ಅಜಾಗರೂಕತೆಯು, ಗುಂಡಿಕ್ಕಿ ಕೊಲ್ಲಲ್ಪಡುವುದಕ್ಕೆ ನಡೆಸುತ್ತಿತ್ತೆಂದು ಅವನು ಕೋಪದಿಂದ ಹೇಳಿದನು. ಊಟದ ಉಳಿದ ಹೊತ್ತು, ನಾನು ಅವನಿಂದ ದೂರ ಉಳಿದೆ!
ಎಲ್ಲಿ ಸಹೋದರ ರದರ್ಫರ್ಡ್ ಮಾತಾಡಿದುದನ್ನು ನಾನು ಕೇಳಿದೆನೊ ಆ ಬಹುಮುಖ್ಯವಾದ ಅಧಿವೇಶನವು, 1931ರಲ್ಲಿ ಆ್ಯಲೆಕ್ಸಾಂಡ್ರ ಪ್ಯಾಲಸ್ನಲ್ಲಿ ಜರುಗಿತು. ಅಲ್ಲಿ ನಾವು ಅತ್ಯುತ್ಸಾಹದಿಂದ ಯೆಹೋವನ ಸಾಕ್ಷಿಗಳು ಎಂಬ ನಮ್ಮ ಹೊಸ ನಾಮವನ್ನು ಸ್ವೀಕರಿಸಿಕೊಂಡೆವು. (ಯೆಶಾಯ 43:10, 12) ಎರಡು ವರ್ಷಗಳ ತರುವಾಯ, 1933ರಲ್ಲಿ, ನಾನು ಪಯನೀಯರ್ ಸೇವೆಯನ್ನು—ಪೂರ್ಣ ಸಮಯದ ಶುಶ್ರೂಷೆಯು ಹಾಗೆಂದು ಕರೆಯಲ್ಪಡುತ್ತದೆ—ಪ್ರವೇಶಿಸಿದೆ. ಆ ವರ್ಷಗಳಲ್ಲಿ ನಾನು ಪಡೆದ ಮತ್ತೊಂದು ಆಶೀರ್ವಾದವು, ಉತ್ತಮ ಯುವ ಪುರುಷರೊಂದಿಗೆ ಸಹವಸಿಸಲು ಶಕ್ತಳಾದ ಸಂಗತಿಯೇ. ತದನಂತರ ಇವರು, ಭೂಮಿಯ ಬಹು ದೂರ ಹರಡಿರುವ ಭಾಗಗಳಲ್ಲಿ ಮಿಷನೆರಿಗಳಾದರು. ಇವರಲ್ಲಿ ಕ್ಲಾಡ್ ಗುಡ್ಮನ್, ಹ್ಯಾರಲ್ಡ್ ಕಿಂಗ್, ಜಾನ್ ಕುಕ್, ಮತ್ತು ಎಡ್ವಿನ್ ಸ್ಕಿನರ್ ಸೇರಿದ್ದರು. ಇಂತಹ ನಂಬಿಗಸ್ತ ಮಾದರಿಗಳು, ವಿದೇಶಿ ಕ್ಷೇತ್ರದಲ್ಲಿ ಸೇವೆಸಲ್ಲಿಸುವ ಬಯಕೆಯನ್ನು ನನ್ನಲ್ಲಿ ಮೂಡಿಸಿದವು.
ಪೂರ್ವ ಆಂಗ್ಲೀಯದಲ್ಲಿ ಪಯನೀಯರ್ ಸೇವೆಮಾಡುವುದು
ನನ್ನ ಪಯನೀಯರ್ ನೇಮಕವು ಪೂರ್ವ ಆಂಗ್ಲೀಯ (ಪೂರ್ವ ಇಂಗ್ಲೆಂಡ್)ದಲ್ಲಿತ್ತು, ಮತ್ತು ಅಲ್ಲಿ ಸಾರುವುದು ಉತ್ಸಾಹ ಹಾಗೂ ಹುರುಪನ್ನು ಅಗತ್ಯಪಡಿಸಿತು. ನಮ್ಮ ದೊಡ್ಡ ಟೆರಿಟೊರಿಯನ್ನು ಆವರಿಸಲು ನಾವು ಪಟ್ಟಣದಿಂದ ಪಟ್ಟಣಕ್ಕೆ ಹಾಗೂ ಹಳ್ಳಿಯಿಂದ ಹಳ್ಳಿಗೆ ಸೈಕಲ್ನ ಮೇಲೆ ಸಂಚರಿಸಿ, ಬಾಡಿಗೆಯ ಕೋಣೆಗಳಲ್ಲಿ ತಂಗಿದೆವು. ಆ ಕ್ಷೇತ್ರದಲ್ಲಿ ಸಭೆಗಳೇ ಇರಲಿಲ್ಲ, ಆದುದರಿಂದ ನನ್ನ ಸಂಗಾತಿ ಮತ್ತು ನಾನು ನಮ್ಮೊಳಗೇ ವಾರದ ಕೂಟಗಳಿಗಾಗಿದ್ದ ಎಲ್ಲ ಭಾಗಗಳನ್ನು ಚರ್ಚಿಸಿದೆವು. ನಮ್ಮ ಶುಶ್ರೂಷೆಯಲ್ಲಿ ನಾವು, ದೇವರ ಉದ್ದೇಶಗಳನ್ನು ವಿವರಿಸಿದ ನೂರಾರು ಪುಸ್ತಕಗಳು ಹಾಗೂ ಪುಸ್ತಿಕೆಗಳನ್ನು ನೀಡಿದೆವು.
ಒಂದು ಸ್ಮರಣಯೋಗ್ಯ ಭೇಟಿಯು, ಎಲ್ಲಿ ನಾವು ಚರ್ಚ್ ಆಫ್ ಇಂಗ್ಲೆಂಡ್ನ ಸ್ಥಳಿಕ ಪಾದ್ರಿಯೊಂದಿಗೆ ಮಾತಾಡಿದೆವೊ ಆ ಪಾದ್ರಿಯ ಮನೆಗೆ ನೀಡಿದ ಭೇಟಿಯಾಗಿತ್ತು. ಹೆಚ್ಚಿನ ಕ್ಷೇತ್ರಗಳಲ್ಲಿ, ನಾವು ಆಂಗ್ಲಿಕನ್ ಪಾದ್ರಿಯನ್ನು ಕೊನೆಗೆ ಭೇಟಿಮಾಡುತ್ತಿದ್ದೆವು, ಏಕೆಂದರೆ ನಾವು ಆ ಕ್ಷೇತ್ರದಲ್ಲಿ ಸುವಾರ್ತೆಯನ್ನು ಸಾರುತ್ತಿದ್ದೇವೆಂದು ಅವನಿಗೆ ಗೊತ್ತಾದಾಗ ಅವನು ಅನೇಕ ವೇಳೆ ನಮಗೆ ತೊಂದರೆಗಳನ್ನು ಉಂಟುಮಾಡಿದನು. ಆದರೆ ಈ ಹಳ್ಳಿಯಲ್ಲಿ ಪಾದ್ರಿಯ ಕುರಿತು ಎಲ್ಲರು ಒಳ್ಳೆಯ ಅಭಿಪ್ರಾಯವನ್ನೇ ಕೊಟ್ಟರು. ಅವನು ರೋಗಪೀಡಿತರನ್ನು ಸಂದರ್ಶಿಸಿದನು, ಓದುವುದರಲ್ಲಿ ಆನಂದವನ್ನು ಕಂಡುಕೊಳ್ಳುವವರಿಗೆ ಪುಸ್ತಕಗಳನ್ನು ಎರವಲಾಗಿ ನೀಡಿದನು, ಮತ್ತು ಬೈಬಲನ್ನು ತನ್ನ ಪ್ರಾಂತದ ಜನರಿಗೆ ವಿವರಿಸಲು ಅವರ ಮನೆಗಳಿಗೂ ಭೇಟಿಯಿತ್ತನು.
ನಿರೀಕ್ಷಿಸಿದಂತೆಯೇ, ನಾವು ಅವನನ್ನು ಸಂಧಿಸಿದಾಗ, ಅವನು ಅತ್ಯಂತ ಸ್ನೇಹಶೀಲನಾಗಿದ್ದನು ಮತ್ತು ಅನೇಕ ಪುಸ್ತಕಗಳನ್ನು ಸ್ವೀಕರಿಸಿದನು. ಹಳ್ಳಿಯಲ್ಲಿ ಯಾರಿಗಾದರೂ ನಮ್ಮ ಪುಸ್ತಕಗಳಲ್ಲಿ ಕೆಲವು ಬೇಕಾಗಿದ್ದರೂ ಅವುಗಳಿಗೆ ಹಣಕೊಡಲು ಅವರಿಗೆ ಸಾಧ್ಯವಿರದಿದ್ದಲ್ಲಿ, ತಾನು ಅವರಿಗಾಗಿ ಹಣಕೊಡುವೆನೆಂದೂ ನಮಗೆ ಆಶ್ವಾಸನೆ ನೀಡಿದನು. ಒಂದನೆಯ ಜಾಗತಿಕ ಯುದ್ಧದಲ್ಲಿ ಅವನಿಗಾದ ಭಯಂಕರವಾದ ಅನುಭವಗಳು, ತನ್ನ ಪ್ಯಾರಿಷ್ನಲ್ಲಿ ಶಾಂತಿ ಮತ್ತು ಸದ್ಭಾವನೆಯನ್ನು ಪ್ರವರ್ಧಿಸುವ ದೃಢನಿರ್ಧಾರವನ್ನು ಅವನು ಮಾಡುವಂತೆ ಪ್ರಚೋದಿಸಿತೆಂದು ನಾವು ತಿಳಿದುಕೊಂಡೆವು. ನಾವು ಅಲ್ಲಿಂದ ಬರುವ ಮುಂಚೆ, ಅವನು ನಮ್ಮನ್ನು ಆಶೀರ್ವದಿಸಿದನು ಮತ್ತು ನಮ್ಮ ಒಳ್ಳೆಯ ಕೆಲಸವನ್ನು ನಾವು ಮುಂದುವರಿಸುವಂತೆ ನಮ್ಮನ್ನು ಉತ್ತೇಜಿಸಿದನು. ಬೀಳ್ಕೊಟ್ಟಾಗ ಅವನು ನುಡಿದ ಮಾತುಗಳು ಅರಣ್ಯಕಾಂಡ 6:24ರ ಮಾತುಗಳಾಗಿದ್ದವು: “ಕರ್ತನು ನಿಮ್ಮನ್ನು ಆಶೀರ್ವದಿಸಿ, ನಿಮ್ಮನ್ನು ರಕ್ಷಿಸಲಿ.”—ಕಿಂಗ್ ಜೇಮ್ಸ್ ವರ್ಷನ್.
ನಾನು ಪಯನೀಯರ್ ಸೇವೆಯನ್ನು ಆರಂಭಿಸಿ ಎರಡು ವರ್ಷಗಳು ಕಳೆದ ಮೇಲೆ ತಾಯಿಯವರು ತೀರಿಹೋದರು, ಮತ್ತು ನಾನು ಲಂಡನಿಗೆ ಹಣ ಇಲ್ಲವೆ ಕುಟುಂಬವಿಲ್ಲದೆ ಹಿಂದಿರುಗಿದೆ. ಸ್ಕಾಟ್ಲೆಂಡ್ನ ಒಬ್ಬ ಪ್ರಿಯ ಸಾಕ್ಷಿಯು ತನ್ನ ಆಶ್ರಯಕ್ಕೆ ನನ್ನನ್ನು ತೆಗೆದುಕೊಂಡು, ತಾಯಿಯವರ ಮರಣವನ್ನು ನಿಭಾಯಿಸಲು ನನಗೆ ಸಹಾಯಮಾಡಿದರು, ಮತ್ತು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಮುಂದುವರಿಯುವಂತೆ ನನಗೆ ಉತ್ತೇಜನ ನೀಡಿದರು. ಆದುದರಿಂದ ಒಬ್ಬ ಹೊಸ ಪಯನೀಯರ್ ಸಂಗಾತಿಯಾದ ಜೂಲ್ಯ ಫೇರ್ಫ್ಯಾಕ್ಸ್ಳೊಂದಿಗೆ ನಾನು ಪೂರ್ವ ಆಂಗ್ಲೀಯಕ್ಕೆ ಹಿಂದಿರುಗಿದೆ. ಅರೆಚಲಿಸುವ ಮನೆಯಂತೆ ಕಾರ್ಯನಡಿಸಲು ನಾವೊಂದು ಹಳೆಯ ಚಾವಣಿಯ ಬಂಡಿಯನ್ನು ದುರಸ್ತುಗೊಳಿಸಿ, ಅದನ್ನು ಒಂದು ಸ್ಥಳದಿಂದ ಮತ್ತೊಂದಕ್ಕೆ ಸಾಗಿಸಲು ಒಂದು ಟ್ರ್ಯಾಕ್ಟರ್ ಇಲ್ಲವೆ ಟ್ರಕ್ಕನ್ನು ಉಪಯೋಗಿಸಿದೆವು. ಒಂದು ಸಣ್ಣ ಬಂಡಿಯಿದ್ದ ಆಲ್ಬರ್ಟ್ ಮತ್ತು ಎಥಲ್ ಆ್ಯಬಟ್ ಎಂಬ ವೃದ್ಧ ದಂಪತಿಗಳೊಂದಿಗೆ ಜೊತೆಸೇರಿ, ನಾವು ಸಾರುವುದನ್ನು ಮುಂದುವರಿಸಿದೆವು. ಆಲ್ಬರ್ಟ್ ಮತ್ತು ಎಥಲ್ ನನಗೆ ಹೆತ್ತವರಂತಾದರು.
ಕೇಂಬ್ರಿಡ್ಜ್ಶೈಅರ್ನಲ್ಲಿ ಪಯನೀಯರ್ ಸೇವೆಮಾಡುತ್ತಿದ್ದಾಗ ನಾನು ಜಾನ್ ಮ್ಯಾತ್ಯೂಸ್ ಅನ್ನು ಭೇಟಿಯಾದೆ. ಇವರು ಕಷ್ಟಕರ ಸಂದರ್ಭಗಳಲ್ಲಿ ಯೆಹೋವನಿಗೆ ಈಗಾಗಲೇ ತಮ್ಮ ಸಮಗ್ರತೆಯನ್ನು ರುಜುಪಡಿಸಿದ್ದ ಒಬ್ಬ ಒಳ್ಳೆಯ ಕ್ರೈಸ್ತ ಸಹೋದರರಾಗಿದ್ದರು. ನಾವು 1940ರಲ್ಲಿ ಎರಡನೆಯ ಜಾಗತಿಕ ಯುದ್ಧವು ಆರಂಭಗೊಂಡ ಸ್ವಲ್ಪದರಲ್ಲೇ ವಿವಾಹವಾದೆವು.
ಯುದ್ಧದ ಸಮಯ ಮತ್ತು ಒಂದು ಕುಟುಂಬ
ನಾವು ಹೊಸದಾಗಿ ವಿವಾಹವಾದ ದಂಪತಿಗಳಾಗಿದ್ದಾಗ, ನಮ್ಮ ಮನೆಯು ಒಂದು ಚಿಕ್ಕ ಅಡಿಗೆಮನೆಯ ಗಾತ್ರದ ಪುಟ್ಟ ಬಂಡಿಯಾಗಿತ್ತು. ಮತ್ತು ನಾವು ಶುಶ್ರೂಷೆಗೆ, ವಿಶ್ವಾಸಾರ್ಹವಾಗಿದ್ದ ಮೋಟರ್ಬೈಕ್ನ ಮೇಲೆ ಹೋದೆವು. ನಾವು ವಿವಾಹವಾಗಿ ಒಂದು ವರ್ಷ ಕಳೆದ ಬಳಿಕ, ಜಾನ್ ತಮ್ಮ ಬೈಬಲಾಧಾರಿತ ನಂಬಿಕೆಗಳ ಕಾರಣ ಮಿಲಿಟರಿ ಸೇವೆಯನ್ನು ಮಾಡಲು ನಿರಾಕರಿಸಿದಾಗ, ಹೊಲದಲ್ಲಿ ದುಡಿಯುವ ಶಿಕ್ಷೆ ಅವರಿಗೆ ವಿಧಿಸಲಾಯಿತು. (ಯೆಶಾಯ 2:4) ಇದು ನಮ್ಮ ಪಯನೀಯರ್ ಸೇವೆಯ ಅಂತ್ಯವನ್ನು ಸೂಚಿಸಿತಾದರೂ, ಜಾನ್ ಅವರ ಶಿಕ್ಷೆಯು ದೈವಿಕವಾಗಿ ಪರಿಣಮಿಸಿತು ಏಕೆಂದರೆ, ನಾನು ಗರ್ಭವತಿಯಾಗಿದ್ದೆ ಮತ್ತು ಅವರು ನಮ್ಮನ್ನು ಆರ್ಥಿಕವಾಗಿ ಬೆಂಬಲಿಸಲು ಶಕ್ತರಾಗಿರಲಿದ್ದರು.
ಯುದ್ಧದ ವರ್ಷಗಳಲ್ಲಿ, ತೊಂದರೆಗಳ ಎದುರಿನಲ್ಲೂ ನಡೆಸಲ್ಪಡುತ್ತಿದ್ದ ಆ ವಿಶೇಷ ಕೂಟಗಳಲ್ಲಿ ನಾವು ಆನಂದಿಸಿದೆವು. 1941ರಲ್ಲಿ, 300 ಕಿಲೊಮೀಟರುಗಳಷ್ಟು ದೂರದಲ್ಲಿದ್ದ ಮ್ಯಾನ್ಚೆಸ್ಟರ್ಗೆ, ನಮ್ಮ ಮೋಟರ್ಬೈಕ್ನಲ್ಲಿ ಜಾನ್ ಮತ್ತು ನಮ್ಮ ಪ್ರಥಮ ಮಗುವಿನಿಂದ ಗರ್ಭವತಿಯಾಗಿದ್ದ ನಾನು ಪ್ರಯಾಣಿಸಿದೆವು. ದಾರಿಯಲ್ಲಿ, ಬಾಂಬಿನಿಂದ ಧ್ವಂಸಗೊಳಿಸಲ್ಪಟ್ಟಿದ್ದ ಅನೇಕ ಪಟ್ಟಣಗಳನ್ನು ನಾವು ದಾಟಿಹೋದೆವು, ಮತ್ತು ಇಂತಹ ಪರಿಸ್ಥಿತಿಗಳಡಿಯಲ್ಲಿ ಕೂಟವನ್ನು ನಡೆಸಸಾಧ್ಯವೊ ಎಂದು ನಾವು ಆಲೋಚಿಸಿದೆವು. ಕೂಟವನ್ನು ನಡೆಸಸಾಧ್ಯವಿತ್ತು. ಮ್ಯಾನ್ಚೆಸ್ಟರ್ನ ಮಧ್ಯದಲ್ಲಿದ್ದ ಫ್ರೀ ಟ್ರೇಡ್ ಹಾಲ್, ಇಂಗ್ಲೆಂಡ್ನ ಅನೇಕ ಭಾಗಗಳಿಂದ ಬಂದಿದ್ದ ಸಾಕ್ಷಿಗಳಿಂದ ತುಂಬಿಹೋಗಿತ್ತು, ಮತ್ತು ಇಡೀ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.
ಒಂದು ವಾಯುದಾಳಿಯು ನಿರೀಕ್ಷಿಸಲ್ಪಟ್ಟಿದ್ದ ಕಾರಣ ತಾವು ಸಭಾಂಗಣದ ಆವರಣಗಳನ್ನು ಕೂಡಲೇ ಖಾಲಿಮಾಡಬೇಕೆಂದು, ಅಧಿವೇಶನದ ಕೊನೆಯ ಭಾಷಣಕರ್ತನು ತನ್ನ ಭಾಷಣದ ಸಮಾಪ್ತಿಯಲ್ಲಿ ಸಭಿಕರಿಗೆ ಹೇಳಿದನು. ಆ ಎಚ್ಚರಿಕೆಯು ಸಮಯೋಚಿತವಾದ ಎಚ್ಚರಿಕೆಯಾಗಿತ್ತು. ಸೈರನ್ಗಳು ಮತ್ತು ವಿಮಾನ ನಾಶಕ ಬಂದೂಕುಗಳ ಶಬ್ದವನ್ನು ನಾವು ಕೇಳಿಸಿಕೊಂಡಾಗ, ನಾವು ಸಭಾಂಗಣದಿಂದ ಬಹಳ ದೂರವಿರಲಿಲ್ಲ. ಹಿಂದಿರುಗಿ ನೋಡಿದಾಗ, ಅನೇಕ ವಿಮಾನಗಳು ನಗರದ ಮಧ್ಯದಲ್ಲಿ ಬಾಂಬುಗಳನ್ನು ಹಾಕುವುದನ್ನು ನಮಗೆ ನೋಡಸಾಧ್ಯವಿತ್ತು. ದೂರದಲ್ಲಿ, ಬೆಂಕಿ ಹಾಗೂ ಹೊಗೆಯ ನಡುವೆ, ಈಗ ತಾನೇ ಕುಳಿತುಕೊಂಡಿದ್ದ ಸಭಾಂಗಣವನ್ನು ನಾವು ನೋಡಸಾಧ್ಯವಿತ್ತು; ಅದು ಸಂಪೂರ್ಣವಾಗಿ ನಾಶವಾಗಿತ್ತು! ಸಂತೋಷಕರವಾಗಿ, ನಮ್ಮ ಕ್ರೈಸ್ತ ಸಹೋದರ ಸಹೋದರಿಯರಲ್ಲಿ ಒಬ್ಬರೂ ಕೊಲ್ಲಲ್ಪಟ್ಟಿರಲಿಲ್ಲ.
ನಾವು ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದಾಗ ಪಯನೀಯರ್ ಸೇವೆಮಾಡಲು ಶಕ್ತರಾಗಿರಲಿಲ್ಲ. ಆದರೂ, ವಸತಿ ಸೌಕರ್ಯವಿರದಿದ್ದ ಸಂಚರಣ ಮೇಲ್ವಿಚಾರಕರಿಗೆ ಹಾಗೂ ಪಯನೀಯರರಿಗೆ ನಮ್ಮ ಮನೆಯಲ್ಲಿ ತಂಗಲು ನಾವು ಅವಕಾಶ ಕಲ್ಪಿಸಿಕೊಟ್ಟೆವು. ಒಂದು ಸಮಯದಲ್ಲಿ ಕೆಲವು ತಿಂಗಳುಗಳ ಕಾಲ ಆರು ಪಯನೀಯರರು ನಮ್ಮ ಮನೆಯಲ್ಲಿ ತಂಗಿದರು. ಇಂತಹವರೊಂದಿಗಿನ ಸಹವಾಸವು, ನಮ್ಮ ಮಗಳಾದ ಯೂನಿಸ್ ಕೇವಲ 15 ವರ್ಷ ಪ್ರಾಯದವಳಾಗಿದ್ದಾಗ 1961ರಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸಲು ಆರಿಸಿಕೊಂಡದ್ದಕ್ಕೆ ಒಂದು ಕಾರಣವಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. ದುಃಖಕರವಾಗಿ ನಮ್ಮ ಮಗನಾದ ಡೇವಿಡ್ ದೊಡ್ಡವನಾದಾಗ ಯೆಹೋವನಿಗೆ ಸೇವೆಸಲ್ಲಿಸುವುದನ್ನು ಮುಂದುವರಿಸಲಿಲ್ಲ, ಮತ್ತು ಲಿಂಡ ಎಂಬ ನಮ್ಮ ಇನ್ನೊಬ್ಬ ಮಗಳು, ಯುದ್ಧದ ಸಮಯದಲ್ಲಿ ದುರಂತಮಯ ಪರಿಸ್ಥಿತಿಗಳಲ್ಲಿ ತೀರಿಕೊಂಡಳು.
ಸ್ಪೆಯ್ನ್ಗೆ ಸ್ಥಳಾಂತರಿಸುವ ನಮ್ಮ ನಿರ್ಧಾರ
ತಾಯಿಯವರ ಮಾದರಿ ಮತ್ತು ಉತ್ತೇಜನವು ನನ್ನಲ್ಲಿ ಮಿಷನೆರಿಯಾಗುವ ಬಯಕೆಯನ್ನು ಕೆರಳಿಸಿದ್ದವು, ಮತ್ತು ಆ ಗುರಿಯನ್ನು ನಾನೆಂದಿಗೂ ಮರೆತಿರಲಿಲ್ಲ. ಆದುದರಿಂದ 1973ರಲ್ಲಿ ಯೂನಿಸ್ ಇಂಗ್ಲೆಂಡನ್ನು ಬಿಟ್ಟು, ರಾಜ್ಯದ ಘೋಷಕರಿಗಾಗಿ ಎಲ್ಲಿ ಅಗತ್ಯವು ಹೆಚ್ಚಾಗಿತ್ತೊ ಆ ಸ್ಪೆಯ್ನ್ಗೆ ಹೋದಾಗ ನಾವು ಹರ್ಷಿಸಿದೆವು. ಅವಳು ಬಿಟ್ಟುಹೋಗುವುದನ್ನು ನೋಡಿ ನಾವು ದುಃಖಿಸಿದೆವಾದರೂ, ಅವಳು ವಿದೇಶದಲ್ಲಿ ಸೇವೆಸಲ್ಲಿಸಲು ಬಯಸಿದುದಕ್ಕಾಗಿ ನಾವು ನಿಶ್ಚಯವಾಗಿಯೂ ಹೆಮ್ಮೆಪಟ್ಟುಕೊಂಡೆವು.
ಈ ಎಲ್ಲ ವರ್ಷಗಳಲ್ಲಿ ನಾವು ಯೂನಿಸಳನ್ನು ಭೇಟಿಮಾಡಿದೆವು ಮತ್ತು ನಮಗೆ ಸ್ಪೆಯ್ನ್ನ ಬಗ್ಗೆ ಚೆನ್ನಾಗಿ ತಿಳಿಯುವಂತಾಯಿತು. ವಾಸ್ತವದಲ್ಲಿ ಜಾನ್ ಮತ್ತು ನಾನು, ಅವಳ ನಾಲ್ಕು ವಿಭಿನ್ನ ನೇಮಕಗಳಲ್ಲಿ ಅವಳನ್ನು ಭೇಟಿಯಾದೆವು. ತರುವಾಯ ವರ್ಷಗಳು ದಾಟಿಹೋದಂತೆ, ನಮ್ಮ ಬಲವು ಕ್ಷೀಣಿಸತೊಡಗಿತು. ಜಾನ್ ಒಮ್ಮೆ ಬಿದ್ದಾಗ ಅದು ಅವರ ಆರೋಗ್ಯವನ್ನು ಗಂಭೀರವಾಗಿ ಬಾಧಿಸಿತು, ಮತ್ತು ನನಗೆ ಹೃದಯ ಹಾಗೂ ಥೈರಾಯ್ಡ್ ಗ್ರಂಥಿಯ ಸಮಸ್ಯೆಗಳಿದ್ದವು. ಅದಲ್ಲದೆ, ನಾವಿಬ್ಬರೂ ವಾತರೋಗದಿಂದ ಕಷ್ಟಾನುಭವಿಸಿದೆವು. ನಮಗೆ ಯೂನಿಸಳ ಸಹಾಯ ನಿಜವಾಗಿಯೂ ಬೇಕಾಗಿತ್ತಾದರೂ, ನಮ್ಮ ಸಲುವಾಗಿ ಅವಳು ತನ್ನ ನೇಮಕವನ್ನು ಬಿಟ್ಟುಬರುವುದು ನಮಗೆ ಇಷ್ಟವಿರಲಿಲ್ಲ.
ನಮ್ಮ ಆಯ್ಕೆಗಳನ್ನು ನಾವು ಯೂನಿಸಳೊಂದಿಗೆ ಚರ್ಚಿಸಿ, ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿದೆವು. ನಮಗೆ ಸಹಾಯ ಮಾಡಲಿಕ್ಕಾಗಿ ಮನೆಗೆ ಹಿಂದಿರುಗಲು ಅವಳು ಸಿದ್ಧಮನಸ್ಕಳಾಗಿದ್ದಳು. ಆದರೆ ಅವಳೊಂದಿಗೆ ಸ್ಪೆಯ್ನ್ನಲ್ಲಿ ವಾಸಿಸುವುದು ಜಾನ್ಗೂ ನನಗೂ ಅತ್ಯುತ್ತಮವಾದ ಪರಿಹಾರವಾಗಿರುವುದೆಂದು ನಾವು ನಿರ್ಧರಿಸಿದೆವು. ಸ್ವತಃ ನನಗೆ ಒಬ್ಬ ಮಿಷನೆರಿಯಾಗಿರಲು ಸಾಧ್ಯವಾಗಿರದಿದ್ದರೂ, ಕಡಿಮೆಪಕ್ಷ ಪೂರ್ಣ ಸಮಯದ ಸೇವೆಯಲ್ಲಿ ನನ್ನ ಮಗಳು ಮತ್ತು ಅವಳ ಇಬ್ಬರು ಪಯನೀಯರ್ ಸಂಗಾತಿಗಳಿಗೆ ನಾನು ಬೆಂಬಲನೀಡಸಾಧ್ಯವಿತ್ತು. ಅಷ್ಟರೊಳಗೆ, ಸುಮಾರು 15 ವರ್ಷಗಳಿಂದ ಯೂನಿಸಳ ಪಯನೀಯರ್ ಸಂಗಾತಿಗಳಾಗಿದ್ದ ನೂರ್ಯಾ ಹಾಗೂ ಆನಾಳನ್ನು ಜಾನ್ ಮತ್ತು ನಾನು, ನಮ್ಮ ಸ್ವಂತ ಪುತ್ರಿಯರಂತೆ ಪರಿಗಣಿಸಿದೆವು. ಮತ್ತು ಅವರು ಯಾವುದೇ ಸ್ಥಳಕ್ಕೆ ನೇಮಿಸಲ್ಪಟ್ಟರೂ, ನಾವು ಅವರೊಂದಿಗೆ ವಾಸಿಸುವ ಸಂಗತಿಯಲ್ಲಿ ಅವರು ಸಂತೋಷಿಸಿದರು.
ಆ ನಿರ್ಧಾರವನ್ನು ಮಾಡಿದಂದಿನಿಂದ ಆರು ವರ್ಷಗಳಿಗಿಂತಲೂ ಹೆಚ್ಚು ಸಮಯ ಸಂದುಹೋಗಿದೆ. ನಮ್ಮ ಆರೋಗ್ಯವು ಇದ್ದ ಹಾಗೆಯೇ ಇದೆ, ಮತ್ತು ನಮ್ಮ ಜೀವಿತಗಳು ಖಂಡಿತವಾಗಿಯೂ ಹೆಚ್ಚು ಆಸಕ್ತಿಕರವಾಗಿ ಪರಿಣಮಿಸಿವೆ. ನನಗೆ ಈಗಲೂ ಸ್ಪ್ಯಾನಿಷ್ ಭಾಷೆಯನ್ನು ಅಷ್ಟಾಗಿ ಮಾತಾಡಲು ಸಾಧ್ಯವಿಲ್ಲ, ಆದರೆ ಅದು ನನ್ನನ್ನು ಸಾರುವುದರಿಂದ ತಡೆಯುವುದಿಲ್ಲ. ನೈರುತ್ಯ ಸ್ಪೆಯ್ನ್ನ ಎಕ್ಸ್ಟ್ರೆಮಾಡೂರಾದಲ್ಲಿನ ನಮ್ಮ ಚಿಕ್ಕ ಸಭೆಯಲ್ಲಿ ಜಾನ್ ಮತ್ತು ನಾನು ಹಾಯಾಗಿದ್ದೇವೆ.
ಸ್ಪೆಯ್ನ್ನಲ್ಲಿನ ಜೀವನವು, ನಮ್ಮ ರಾಜ್ಯ ಸಾರುವಿಕೆಯ ಕೆಲಸದ ಅಂತಾರಾಷ್ಟ್ರೀಯ ಸ್ವರೂಪದ ಕುರಿತು ನನಗೆ ಹೆಚ್ಚಿನದ್ದನ್ನು ಕಲಿಸಿದೆ, ಮತ್ತು ಯೇಸು ಕ್ರಿಸ್ತನು ಹೇಳಿದಂತೆ, “ಹೊಲವೆಂದರೆ ಈ ಲೋಕ” ಎಂಬುದನ್ನು ಹೆಚ್ಚು ಸ್ಪಷ್ಟವಾಗಿ ನಾನು ಈಗ ಅರ್ಥಮಾಡಿಕೊಳ್ಳುತ್ತೇನೆ.—ಮತ್ತಾಯ 13:38.
[ಪುಟ 28 ರಲ್ಲಿರುವ ಚಿತ್ರ]
1930ಗಳಲ್ಲಿ ಪಯನೀಯರ್ ಸೇವೆಮಾಡುತ್ತಿರುವುದು