ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w22 ಏಪ್ರಿಲ್‌ ಪು. 16-21
  • ಅಮ್ಮಂದಿರೇ, ಯೂನಿಕೆಯಿಂದ ಕಲಿಯಿರಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಮ್ಮಂದಿರೇ, ಯೂನಿಕೆಯಿಂದ ಕಲಿಯಿರಿ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ನಿಮ್ಮ ಮಾತಿಂದ ಮಕ್ಕಳಿಗೆ ಕಲಿಸಿ
  • ನಿಮ್ಮ ನಡತೆಯಿಂದ ಮಕ್ಕಳಿಗೆ ಕಲಿಸಿ
  • ಯೆಹೋವ ಸಹಾಯ ಮಾಡ್ತಾನೆ ಅಂತ ನಂಬಿ
  • ಯೂನೀಕೆ ಮತ್ತು ಲೋವಿ—ಆದರ್ಶಪ್ರಾಯ ಶಿಕ್ಷಕಿಯರು
    ಕಾವಲಿನಬುರುಜು—1998
  • ತಾಯ್ತನದಲ್ಲಿ ತೃಪ್ತಿಯನ್ನು ಕಂಡುಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ನಿಮ್ಮ ಕುಟುಂಬಕ್ಕಾಗಿ ಒಂದು ಚಿರಸ್ಥಾಯಿಯಾದ ಭವಿಷ್ಯತ್ತನ್ನು ದೊರಕಿಸಿಕೊಳ್ಳಿರಿ
    ಕುಟುಂಬ ಸಂತೋಷದ ರಹಸ್ಯ
  • ಯುವಜನರೇ, ದೇವರಿಗೆ ಗೌರವತರುವಂಥ ಗುರಿಗಳನ್ನು ಬೆನ್ನಟ್ಟಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
w22 ಏಪ್ರಿಲ್‌ ಪು. 16-21

ಅಧ್ಯಯನ ಲೇಖನ 17

ಅಮ್ಮಂದಿರೇ, ಯೂನಿಕೆಯಿಂದ ಕಲಿಯಿರಿ

“ಅಮ್ಮ ಕಲಿಸುವಾಗ ಕೇಳಿಸ್ಕೊ. ಅವ್ರ ಮಾತು ನಿನ್ನ ತಲೆಗೆ ಸುಂದರವಾದ ಹೂವಿನ ಕಿರೀಟ. ನಿನ್ನ ಕೊರಳಿಗೆ ಅಂದವಾದ ಆಭರಣ.”—ಜ್ಞಾನೋ. 1:8, 9.

ಗೀತೆ 86 ನಂಬಿಗಸ್ತೆಯರು, ಕ್ರೈಸ್ತ ಸೋದರಿಯರು

ಕಿರುನೋಟa

ತಿಮೊತಿ ದೀಕ್ಷಾಸ್ನಾನ ಪಡೆದುಕೊಳ್ಳುತ್ತಿರೋದನ್ನ ನೋಡಿ ಅವನ ಅಮ್ಮ ಯೂನಿಕೆ ಮತ್ತು ಅಜ್ಜಿ ಲೋವಿ ಖುಷಿ ಪಡ್ತಿದ್ದಾರೆ, ಅವನ ಬಗ್ಗೆ ಹೆಮ್ಮೆ ಪಡ್ತಿದ್ದಾರೆ (ಪ್ಯಾರ 1 ನೋಡಿ)

1-2. (ಎ) ಯೂನಿಕೆ ಯಾರು ಮತ್ತು ಅವಳಿಗೆ ಮಗನನ್ನ ಕ್ರೈಸ್ತನಾಗಿ ಬೆಳೆಸೋಕೆ ಯಾಕೆ ಕಷ್ಟ ಆಯ್ತು? (ಬಿ) ಮುಖಪುಟ ಚಿತ್ರ ವಿವರಿಸಿ.

ತಿಮೊತಿ ದೀಕ್ಷಾಸ್ನಾನವನ್ನ ಎಲ್ಲಿ ಮತ್ತು ಹೇಗೆ ಪಡೆದುಕೊಂಡ ಅಂತ ಬೈಬಲಲ್ಲಿ ಹೇಳಿಲ್ಲ. ಆದ್ರೆ ಆ ಸಮಯದಲ್ಲಿ ಅವನ ಅಮ್ಮಗೆ ಎಷ್ಟು ಹೆಮ್ಮೆಯಾಗಿರುತ್ತೆ ಅಲ್ವಾ! (ಜ್ಞಾನೋ. 23:25) ತಿಮೊತಿ ದೀಕ್ಷಾಸ್ನಾನ ತಗೊಳ್ಳೋದನ್ನ ಸ್ವಲ್ಪ ಕಲ್ಪಿಸಿಕೊಳ್ಳಿ. ತಿಮೊತಿ ನೀರಿಗೆ ಇಳಿತಾ ಇದ್ದಾನೆ. ಅವನ ಅಮ್ಮ ಕಣ್ಣು ಮಿಟುಕಿಸದೇ ಅವನನ್ನೇ ನೋಡುತ್ತಿದ್ದಾಳೆ. ಅವನು ನೀರಲ್ಲಿ ಮುಳುಗ್ತಾ ಇದ್ದ ಹಾಗೆ ತನ್ನ ಪಕ್ಕದಲ್ಲಿ ನಿಂತಿದ್ದ ಲೋವಿಯ ಕೈಯನ್ನ ಗಟ್ಟಿಯಾಗಿ ಹಿಡಿದುಕೊಳ್ತಿದ್ದಾಳೆ. ಅವನು ನೀರಿಂದ ಮೇಲೆ ಬರುತ್ತಿದ್ದ ಹಾಗೆ ಅವಳು ಖುಷಿಯಲ್ಲಿ ತೇಲಾಡುತ್ತಿದ್ದಾಳೆ. ಆ ಕಣ್ಣಿಂದ ಆನಂದಬಾಷ್ಪ ಹರಿತಾ ಇದೆ. ತಿಮೊತಿ ನೀರಿಂದ ಮೇಲೆ ಬಂದ ತಕ್ಷಣ ‘ನಾನೇನೋ ದೊಡ್ಡ ಸಾಧನೆ ಮಾಡಿದ್ದೀನಿ’ ಅನ್ನೋ ಖುಷಿ ಅವಳ ಕಣ್ಣಲ್ಲಿ ಕಾಣಿಸ್ತಿದೆ. ತುಂಬ ಕಷ್ಟಗಳಿದ್ರೂ ಯೆಹೋವನನ್ನು ಮತ್ತು ಆತನ ಮಗ ಯೇಸು ಕ್ರಿಸ್ತನನ್ನು ಪ್ರೀತಿಸೋಕೆ ಅವಳು ತಿಮೊತಿಗೆ ಕಲಿಸಿಕೊಟ್ಟಳು. ಕೊನೆಗೂ ಅವಳು ಪಟ್ಟ ಕಷ್ಟ ಸಾರ್ಥಕ ಆಯ್ತು ಅಂತ ಅವಳಿಗೆ ಅನಿಸಿರುತ್ತೆ. ಅವಳು ಏನೆಲ್ಲಾ ಕಷ್ಟ ಅನುಭವಿಸಿದಳು ಅಂತ ಈಗ ನೋಡೋಣ.

2 ತಿಮೊತಿಯ ಅಪ್ಪ-ಅಮ್ಮ ಬೇರೆಬೇರೆ ಧರ್ಮದವರಾಗಿದ್ದರು. ಅವನ ಅಪ್ಪ ಗ್ರೀಕನಾಗಿದ್ದ. ಅಮ್ಮ ಮತ್ತು ಅಜ್ಜಿ ಯೆಹೂದ್ಯರಾಗಿದ್ದರು. (ಅ. ಕಾ. 16:1) ಅವನು ಹದಿವಯಸ್ಸಲ್ಲಿ ಇದ್ದಾಗ ಅವನ ಅಮ್ಮ ಮತ್ತು ಅಜ್ಜಿ ಕ್ರೈಸ್ತರಾದರು. ಆದ್ರೆ ಅವನ ಅಪ್ಪ ಕ್ರೈಸ್ತನಾಗಲಿಲ್ಲ. ಈಗ ತಿಮೊತಿ ಏನು ಮಾಡ್ತಾನೆ? ಅವನು ತನ್ನ ಅಪ್ಪನ ತರ ಆಗ್ತಾನಾ? ಚಿಕ್ಕವಯಸ್ಸಿಂದ ಅವನ ಅಮ್ಮ ಹೇಳಿಕೊಟ್ಟ ಯೆಹೂದ್ಯರ ಪದ್ಧತಿಗಳನ್ನ ಪಾಲಿಸ್ತಾನಾ? ಅಥವಾ ಯೇಸುವಿನ ಶಿಷ್ಯನಾಗ್ತಾನಾ? ಇದನ್ನ ಅವನೇ ತೀರ್ಮಾನ ಮಾಡಬೇಕಿತ್ತು.

3. ಮಕ್ಕಳನ್ನ ಯೆಹೋವನ ಆರಾಧಕರಾಗಿ ಬೆಳೆಸೋಕೆ ಅಮ್ಮಂದಿರು ಮಾಡ್ತಿರೋ ಪ್ರಯತ್ನವನ್ನ ನೋಡುವಾಗ ಯೆಹೋವನಿಗೆ ಹೇಗನಿಸುತ್ತೆ? (ಜ್ಞಾನೋಕ್ತಿ 1:8, 9)

3 ಇವತ್ತೂ ಕೂಡ ನಮ್ಮ ಪ್ರೀತಿಯ ಸಹೋದರಿಯರು ತಮ್ಮ ಮಕ್ಕಳನ್ನ ಯೆಹೋವನ ಆರಾಧಕರಾಗಿ ಬೆಳೆಸೋಕೆ ತುಂಬ ಪ್ರಯತ್ನ ಮಾಡ್ತಿದ್ದಾರೆ. ಯೆಹೋವನ ಜೊತೆ ಒಳ್ಳೇ ಸಂಬಂಧ ಬೆಳೆಸಿಕೊಳ್ಳೋಕೆ ಅವರಿಗೆ ಸಹಾಯ ಮಾಡ್ತಿದ್ದಾರೆ. ಅವರ ಪ್ರಯತ್ನಗಳನ್ನ ಯೆಹೋವ ಖಂಡಿತ ಮೆಚ್ಚಿಕೊಳ್ತಾನೆ. (ಜ್ಞಾನೋಕ್ತಿ 1:8, 9 ಓದಿ.) ಅಷ್ಟೇ ಅಲ್ಲ, ಆತನು ಈಗಾಗಲೇ ಇಂಥ ತಾಯಂದಿರಿಗೆ ಮಕ್ಕಳನ್ನ ಹೇಗೆ ಬೆಳೆಸಬೇಕು ಅನ್ನೋದರ ಬಗ್ಗೆ ನಿರ್ದೇಶನ ಕೊಟ್ಟು ಸಹಾಯ ಮಾಡಿದ್ದಾನೆ.

4. ಅಮ್ಮಂದಿರಿಗೆ ಯಾವೆಲ್ಲಾ ಕಷ್ಟಗಳಿವೆ?

4 ಮಕ್ಕಳು ತಿಮೊತಿ ತರ ಆಗಬೇಕು ಅಂತ ಅಮ್ಮಂದಿರು ಆಸೆ ಪಡ್ತಾರೆ. ಈ ಸೈತಾನನ ಲೋಕದಲ್ಲಿ ಮಕ್ಕಳಿಗೆ ಏನೆಲ್ಲಾ ಕಷ್ಟ ಬರುತ್ತೆ ಅಂತ ಅವರಿಗೆ ಗೊತ್ತು. (1 ಪೇತ್ರ 5:8) ಕೆಲವು ಸಹೋದರಿಯರ ಗಂಡಂದಿರು ಯೆಹೋವನನ್ನು ಆರಾಧಿಸುತ್ತಿರಲ್ಲ, ಅಥವಾ ಅವರು ಒಂಟಿ ಹೆತ್ತವರಾಗಿರುತ್ತಾರೆ. ಹಾಗಾಗಿ ಅವರಿಗೆ ಮಕ್ಕಳನ್ನ ಸತ್ಯದಲ್ಲಿ ಬೆಳೆಸೋಕೆ ಕಷ್ಟ ಆಗಬಹುದು. ಸಹೋದರಿ ಕ್ರಿಸ್ಟಿನ್‌b ಇದರ ಬಗ್ಗೆ ಏನು ಹೇಳ್ತಾರೆ ಅಂದ್ರೆ, “ನನ್ನ ಗಂಡ ತುಂಬ ಒಳ್ಳೆಯವರು, ನಮ್ಮನ್ನೆಲ್ಲ ಚೆನ್ನಾಗಿ ನೋಡಿಕೊಳ್ತಾರೆ, ಆದ್ರೆ ಮಕ್ಕಳು ಬೈಬಲ್‌ ಕಲಿತು ಯೆಹೋವನ ಸಾಕ್ಷಿಗಳಾಗೋದು ಅವರಿಗೆ ಇಷ್ಟ ಇಲ್ಲ. ಹಾಗಾಗಿ ಮನೆಯಲ್ಲಿ ಬೈಬಲ್‌ ವಿಷಯ ಮಾತಾಡಿದ್ರೆ ಕೋಪ ಮಾಡಿಕೊಳ್ತಾರೆ, ತುಂಬ ಕಿರಿಚಾಡ್ತಾರೆ. ಈ ತರ ಆದಾಗ ನನ್ನ ಮಕ್ಕಳು ಯೆಹೋವನ ಬಗ್ಗೆ ಕಲಿಯೋಕೇ ಆಗಲ್ವಾ? ಆತನನ್ನ ಆರಾಧಿಸೋಕೇ ಆಗಲ್ವಾ? ಅಂತ ಯೋಚನೆ ಮಾಡ್ತಾ ತುಂಬ ಸಲ ಅತ್ತಿದ್ದೀನಿ.”

5. ಈ ಲೇಖನದಲ್ಲಿ ನಾವೇನು ಕಲಿತೀವಿ?

5 ಸಹೋದರಿಯರೇ, ಯೂನಿಕೆ ತರ ನೀವೂ ನಿಮ್ಮ ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ಆಗುತ್ತೆ. ಹಾಗಾಗಿ ಯೂನಿಕೆಯಿಂದ ನೀವೇನು ಕಲಿಯಬಹುದು? ಮಕ್ಕಳಿಗೆ ನಿಮ್ಮ ಮಾತಿಂದ ಕಲಿಸೋದು ಹೇಗೆ? ನಿಮ್ಮ ನಡತೆಯಿಂದ ಕಲಿಸೋದು ಹೇಗೆ? ಮತ್ತು ಯೆಹೋವ ನಿಮಗೆ ಹೇಗೆಲ್ಲಾ ಸಹಾಯ ಮಾಡ್ತಾನೆ? ಅಂತ ಈ ಲೇಖನದಲ್ಲಿ ನೋಡೋಣ.

ನಿಮ್ಮ ಮಾತಿಂದ ಮಕ್ಕಳಿಗೆ ಕಲಿಸಿ

6. ತಿಮೊತಿ ಹೇಗೆ ಕ್ರೈಸ್ತನಾದ ಅಂತ 2 ತಿಮೊತಿ 3:14, 15 ಹೇಳುತ್ತೆ?

6 ತಿಮೊತಿ ಚಿಕ್ಕವನಾಗಿದ್ದಾಗ ಅವನ ಅಮ್ಮ, ಒಬ್ಬ ಯೆಹೂದ್ಯಳಾಗಿ ತನಗೆ ಏನು ಗೊತ್ತಿತ್ತೋ ಅದನ್ನ ‘ಪವಿತ್ರ ಪುಸ್ತಕದಿಂದ’ ಕಲಿಸಿಕೊಟ್ಟಳು. ಅವಳಿಗೆ ಯೇಸು ಕ್ರಿಸ್ತನ ಬಗ್ಗೆ ಏನೂ ಗೊತ್ತಿರಲಿಲ್ಲ. ಆದ್ರೆ ಅವಳು ಏನು ಹೇಳಿಕೊಟ್ಟಳೋ ಅದು ತಿಮೊತಿಗೆ ಕ್ರೈಸ್ತನಾಗೋಕೆ ಮುಂದೆ ಸಹಾಯ ಮಾಡಿತು. ಈಗ ಅವನು ಯುವಕನಾಗಿದ್ದಾನೆ. ತಾನು ಕ್ರೈಸ್ತನಾಗಬೇಕಾ? ಬೇಡವಾ? ಅಂತ ಅವನೇ ತೀರ್ಮಾನ ಮಾಡಬೇಕಿತ್ತು. ಅವನ ಅಮ್ಮ ಪಟ್ಟ ಪ್ರಯತ್ನದಿಂದ ತಿಮೊತಿಗೆ ಯೇಸು ಮೇಲೆ ಸ್ವಲ್ಪ ಮಟ್ಟಿಗಾದರೂ ‘ನಂಬಿಕೆ’ ಇಡೋಕೆ ಆಯ್ತು. (2 ತಿಮೊತಿ 3:14, 15 ಓದಿ.) ಯೂನಿಕೆಯ ಹೆಸರಿನ ಅರ್ಥ “ಗೆಲುವು.” ಅವಳಿಗೆ ಕಷ್ಟ ಇದ್ರೂ ಯೆಹೋವನ ಬಗ್ಗೆ ತಿಮೊತಿಗೆ ಕಲಿಸಿದಳು. ಹೀಗೆ ಅವಳು ತನ್ನ ಹೆಸರಿಗೆ ತಕ್ಕ ಹಾಗೆ ನಡೆದುಕೊಂಡಳು!

7. ದೀಕ್ಷಾಸ್ನಾನ ಆದಮೇಲೂ ಯೂನಿಕೆ ತನ್ನ ಮಗನಿಗೆ ಹೇಗೆ ಸಹಾಯ ಮಾಡಬಹುದಿತ್ತು?

7 ತಿಮೊತಿಗೆ ದೀಕ್ಷಾಸ್ನಾನ ಆಯ್ತು. ಆದ್ರೆ ದೀಕ್ಷಾಸ್ನಾನ ಆದಮೇಲೂ ಯೂನಿಕೆ ಅವನ ಬಗ್ಗೆ ಚಿಂತೆ ಮಾಡ್ತಿದ್ದಳು. ಅವನು ಮುಂದೆ ಏನು ಮಾಡ್ತಾನೆ? ಕೆಟ್ಟವರ ಸಂಘ ಸೇರುತ್ತಾನಾ? ವಿದ್ಯಾಭ್ಯಾಸಕ್ಕೆ ಅಂತ ಅಥೆನ್ಸ್‌ಗೆ ಹೋಗಿ ಲೋಕದ ಜ್ಞಾನವನ್ನ ನಂಬಿಕೊಂಡು ಯೆಹೋವನ ಮೇಲಿರೋ ನಂಬಿಕೆಯನ್ನ ಕಳೆದುಕೊಂಡುಬಿಡ್ತಾನಾ? ಹಣ-ಆಸ್ತಿ ಮಾಡೋಕೆ ಹೋಗಿ ತನ್ನ ಸಮಯ, ಶಕ್ತಿ ಮತ್ತು ಯೌವನವನ್ನ ಅದಕ್ಕೇ ಸುರಿದುಬಿಡ್ತಾನಾ? ಅಂತೆಲ್ಲಾ ಅವಳು ಯೋಚನೆ ಮಾಡಿರಬಹುದು. ತಿಮೊತಿಗೋಸ್ಕರ ಅವಳು ತೀರ್ಮಾನ ಮಾಡೋಕಾಗಲ್ಲ. ಆದ್ರೆ ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಳ್ಳೋಕೆ ಮತ್ತು ಆತನಿಗೆ ಋಣಿಯಾಗಿರೋಕೆ ಅವಳು ಅವನಿಗೆ ಸಹಾಯ ಮಾಡಬಹುದಿತ್ತು. ಮಕ್ಕಳನ್ನ ಯೆಹೋವನ ಆರಾಧಕರಾಗಿ ಬೆಳೆಸುತ್ತಿರೋ ಹೆತ್ತವರಿಗೆ ಅವರ ಸಂಗಾತಿ ಯೆಹೋವನ ಸಾಕ್ಷಿಯಾಗಿರಲಿ, ಇಲ್ಲದೆ ಇರಲಿ ಈ ತರದ ಚಿಂತೆಗಳು ಇದ್ದೇ ಇರುತ್ತೆ. ಹಾಗಾದ್ರೆ ಯೂನಿಕೆಯಿಂದ ಅಪ್ಪ-ಅಮ್ಮಂದಿರು ಏನು ಕಲಿಯಬಹುದು?

8. ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸೋಕೆ ಹೆಂಡತಿ, ತನ್ನ ಗಂಡನಿಗೆ ಹೇಗೆ ಸಹಾಯ ಮಾಡಬಹುದು?

8 ಮಕ್ಕಳ ಜೊತೆ ಬೈಬಲ್‌ ಸ್ಟಡಿ ಮಾಡಿ. ಕುಟುಂಬದಲ್ಲಿ ಗಂಡ-ಹೆಂಡತಿ ಇಬ್ಬರೂ ಯೆಹೋವನ ಸಾಕ್ಷಿಗಳಾಗಿದ್ರೆ ಮಕ್ಕಳಿಗೆ ಯೆಹೋವನ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಸಹಾಯ ಮಾಡಬೇಕಾದ ಜವಾಬ್ದಾರಿ ಗಂಡನಿಗೆ ಇರುತ್ತೆ. ಆದ್ರೆ ಹೆಂಡತಿನೂ ಗಂಡನಿಗೆ ಸಹಾಯ ಮಾಡಬೇಕು ಅಂತ ಯೆಹೋವ ಬಯಸ್ತಾನೆ. ಉದಾಹರಣೆಗೆ, ಕುಟುಂಬ ಆರಾಧನೆಗೆ ಹೆಂಡತಿ ಸಹಕಾರ ಕೊಡಬೇಕು. ಈ ಏರ್ಪಾಡಿಂದ ಎಷ್ಟು ಒಳ್ಳೇದಾಗುತ್ತೆ ಅಂತ ಮಕ್ಕಳ ಹತ್ರ ಮಾತಾಡಬೇಕು. ಕುಟುಂಬ ಆರಾಧನೆ ಬೋರ್‌ ಆಗದ ಹಾಗೆ ನೋಡಿಕೊಳ್ಳಬೇಕು. ಯಾವ ಬೈಬಲ್‌ ಪ್ರಾಜೆಕ್ಟ್‌ ಮಾಡಬಹುದು ಅಂತ ನಿಮ್ಮ ಗಂಡನ ಜೊತೆ ಪ್ಲ್ಯಾನ್‌ ಮಾಡಬಹುದು. ಅಷ್ಟೇ ಅಲ್ಲ, ನಿಮ್ಮ ಮಕ್ಕಳು ಸ್ವಲ್ಪ ದೊಡ್ಡವರಾಗಿದ್ರೆ ಎಂದೆಂದೂ ಖುಷಿಯಾಗಿ ಬಾಳೋಣ! ಅನ್ನೋ ಪುಸ್ತಕದಿಂದ ಬೈಬಲ್‌ ಸ್ಟಡಿ ಶುರು ಮಾಡಬಹುದು. ಸ್ಟಡಿ ಮಾಡುವಾಗ ನಿಮ್ಮ ಗಂಡನಿಗೆ ನಿಮ್ಮಿಂದ ಆಗೋ ಎಲ್ಲಾ ಸಹಾಯ ಮಾಡಿ.

9. ಗಂಡ ಯೆಹೋವನ ಸಾಕ್ಷಿಯಲ್ಲದಿದ್ದರೆ ಅಮ್ಮಂದಿರು ಯಾರ ಹತ್ರ ಸಹಾಯ ಕೇಳಬಹುದು?

9 ಒಂಟಿ ಹೆತ್ತವರಾಗಿರೋದ್ರಿಂದ ಅಥವಾ ಗಂಡ ಯೆಹೋವನನ್ನು ಆರಾಧಿಸದೆ ಇರೋದ್ರಿಂದ ಕೆಲವು ಅಮ್ಮಂದಿರು ಮಕ್ಕಳಿಗೆ ಬೈಬಲ್‌ ಸ್ಟಡಿ ಮಾಡ್ತಿದ್ದಾರೆ. ನೀವೂ ಅಂಥ ಪರಿಸ್ಥಿತಿಯಲ್ಲಿ ಇದ್ರೆ ಚಿಂತೆ ಮಾಡಬೇಡಿ. ಯೆಹೋವ ನಿಮಗೆ ಸಹಾಯ ಮಾಡ್ತಾನೆ. ನಿಮ್ಮ ಮಕ್ಕಳಿಗೆ ಕಲಿಸೋಕೆ ಆತನ ಸಂಘಟನೆ ಎಷ್ಟೋ ಬೋಧನಾ ಸಾಧನಗಳನ್ನ ಕೊಟ್ಟಿದೆ. ನಿಮ್ಮ ಸಭೆಯಲ್ಲಿರೋ ಬೇರೆ ಹೆತ್ತವರು ತಮ್ಮ ಕುಟುಂಬ ಆರಾಧನೆಯಲ್ಲಿ ಈ ಸಾಧನಗಳನ್ನ ಹೇಗೆ ಉಪಯೋಗಿಸುತ್ತಿದ್ದಾರೆ ಅಂತ ಕೇಳಿ ತಿಳಿದುಕೊಳ್ಳಿ.c (ಜ್ಞಾನೋ. 11:14) ನಿಮ್ಮ ಮಕ್ಕಳ ಹತ್ರ ಮಾತಾಡುವಾಗ ಅವರ ಮನಸ್ಸಲ್ಲಿ ಏನಿದೆ ಅಂತ ಅರ್ಥ ಮಾಡಿಕೊಳ್ಳೋಕೆ ಸಹಾಯ ಮಾಡಪ್ಪಾ ಅಂತ ಯೆಹೋವನ ಹತ್ರ ಬೇಡಿಕೊಳ್ಳಿ. (ಜ್ಞಾನೋ. 20:5) ‘ಇವತ್ತು ಸ್ಕೂಲ್‌ ಹೇಗಿತ್ತು?’ ಅಂತ ಕೇಳುತ್ತಾ ಮಕ್ಕಳ ಹತ್ರ ಮಾತಾಡೋಕೆ ಶುರು ಮಾಡಬಹುದು.

10. ಯೆಹೋವನ ಬಗ್ಗೆ ಕಲಿಸೋಕೆ ನೀವು ಇನ್ನೂ ಏನೆಲ್ಲಾ ಮಾಡಬಹುದು?

10 ಮಕ್ಕಳಿಗೆ ಯೆಹೋವನ ಬಗ್ಗೆ ಕಲಿಸೋಕೆ ಅವಕಾಶಗಳನ್ನ ಹುಡುಕಿ. ಯೆಹೋವನು ನಿಮಗೋಸ್ಕರ ಏನೆಲ್ಲಾ ಮಾಡಿದ್ದಾನೆ ಅನ್ನೋದರ ಬಗ್ಗೆ ನಿಮ್ಮ ಮಕ್ಕಳ ಹತ್ರ ಆಗಾಗ ಮಾತಾಡ್ತಾ ಇರಿ. (ಧರ್ಮೋ. 6:6, 7; ಯೆಶಾ. 63:7) ನಿಮ್ಮ ಮಕ್ಕಳಿಗೆ ಮನೆಯಲ್ಲಿ ಬೈಬಲ್‌ ಸ್ಟಡಿ ಮಾಡೋಕೆ ಆಗ್ತಿಲ್ಲ ಅಂದ್ರೆ ಬೇರೆ ಅವಕಾಶಗಳನ್ನ ಹುಡುಕಿ. ಇದರ ಬಗ್ಗೆ ಸಹೋದರಿ ಕ್ರಿಸ್ಟಿನ್‌ ಏನು ಹೇಳ್ತಾರೆ ನೋಡಿ, “ಮನೆಯಲ್ಲಿ ಮಕ್ಕಳಿಗೆ ಬೈಬಲ್‌ ಸ್ಟಡಿ ಮಾಡೋಕೆ ಆಗದೆ ಇರೋದ್ರಿಂದ ಅವಕಾಶ ಸಿಕ್ಕಿದಾಗೆಲ್ಲ ಅವರ ಹತ್ರ ಯೆಹೋವನ ಬಗ್ಗೆ ಮಾತಾಡ್ತಿದ್ದೆ. ನಾವು ಎಲ್ಲಾದ್ರೂ ಹೊರಗಡೆ ತಿರುಗಾಡೋಕೆ ಹೋದಾಗ ಅಥವಾ ದೋಣಿಯಲ್ಲಿ ಹೋಗುವಾಗ ಯೆಹೋವನ ಸೃಷ್ಟಿ ಬಗ್ಗೆ ಮತ್ತು ಇನ್ನೂ ಬೇರೆಬೇರೆ ವಿಷಯಗಳ ಬಗ್ಗೆ ಮಾತಾಡ್ತಿದ್ದೆ. ಮಕ್ಕಳು ಸ್ವಲ್ಪ ದೊಡ್ಡವರಾದಮೇಲೆ ಬೈಬಲ್‌ ಅಧ್ಯಯನ ಮಾಡೋಕೆ ಅವರಿಗೆ ಪ್ರೋತ್ಸಾಹಿಸಿದೆ.” ಯೆಹೋವನ ಸಂಘಟನೆ ಬಗ್ಗೆ ಮತ್ತು ಸಹೋದರ ಸಹೋದರಿಯರ ಬಗ್ಗೆ ನಿಮ್ಮ ಮಕ್ಕಳ ಹತ್ರ ಯಾವಾಗಲೂ ಒಳ್ಳೇದನ್ನೇ ಮಾತಾಡಿ. ಹಿರಿಯರ ಬಗ್ಗೆ ತಪ್ಪಾಗಿ ಮಾತಾಡಬೇಡಿ. ಯಾಕಂದ್ರೆ ಈಗ ನೀವು ಹಾಗೆ ಮಾಡಿದ್ರೆ ಮುಂದೆ ನಿಮ್ಮ ಮಕ್ಕಳಿಗೆ ಸಹಾಯ ಬೇಕಾದಾಗ ಅವರು ಹಿರಿಯರ ಹತ್ರ ಹೋಗೋಕೆ ಹಿಂದೆಮುಂದೆ ನೋಡ್ತಾರೆ.

11. ಮನೆಯಲ್ಲಿ ನಾವು ಶಾಂತಿ ಸಮಾಧಾನದಿಂದ ಇರಬೇಕು ಅಂತ ಯಾಕೋಬ 3:18 ಯಾಕೆ ಹೇಳುತ್ತೆ?

11 ಮನೆಯಲ್ಲಿ ಶಾಂತಿ-ಸಮಾಧಾನದಿಂದ ಇರಿ. ನಿಮ್ಮ ಗಂಡನನ್ನ ಮತ್ತು ಮಕ್ಕಳನ್ನ ಪ್ರೀತಿಸ್ತೀರ ಅಂತ ಆಗಾಗ ಹೇಳ್ತಾ ಇರಿ. ನಿಮ್ಮ ಗಂಡನ ಹತ್ರ ಗೌರವದಿಂದ ಮಾತಾಡಿ. ಅದನ್ನೇ ಮಕ್ಕಳಿಗೂ ಕಲಿಸಿ. ಇದ್ರಿಂದ ಮನೆಯಲ್ಲಿ ಎಲ್ರೂ ನೆಮ್ಮದಿಯಾಗಿ ಇರುತ್ತೀರ. ನಿಮ್ಮ ಮಕ್ಕಳಿಗೂ ಯೆಹೋವನ ಬಗ್ಗೆ ಕಲಿಯೋಕೆ ಸಹಾಯ ಆಗುತ್ತೆ. (ಯಾಕೋಬ 3:18 ಓದಿ.) ರೊಮೇನಿಯಾದಲ್ಲಿ ವಿಶೇಷ ಪಯನೀಯರ್‌ ಆಗಿರೋ ಸಹೋದರ ಯೋಸೆಫ್‌ನ ಅನುಭವ ನೋಡಿ. ಅವರು ಚಿಕ್ಕವರಾಗಿದ್ದಾಗ ಅವನ ಅಮ್ಮ ಮತ್ತು ಅಕ್ಕ-ತಮ್ಮಂದಿರು ಯೆಹೋವನನ್ನು ಆರಾಧಿಸೋಕೆ ಶುರುಮಾಡಿದ್ರು. ಇದು ಅವರ ಅಪ್ಪಾಗೆ ಇಷ್ಟ ಇರಲಿಲ್ಲ. “ನಮ್ಮಪ್ಪ ಎಷ್ಟು ಕೋಪಿಷ್ಠರಾಗಿದ್ದರೋ ನಮ್ಮ ಅಮ್ಮ ಅಷ್ಟೇ ಪ್ರೀತಿಯಿಂದ ನಡೆದುಕೊಳ್ತಿದ್ರು. ನಾವು ನಮ್ಮ ಅಪ್ಪನ ಮಾತನ್ನ ಕೇಳ್ತಿರಲಿಲ್ಲ. ಆಗೆಲ್ಲಾ ಅಮ್ಮ ನಮಗೆ ಎಫೆಸ 6:1-3ರಲ್ಲಿ ಇರೋದನ್ನ ಹೇಳ್ತಿದ್ರು. ಅಪ್ಪ ಎಷ್ಟು ಒಳ್ಳೆಯವರು ಮತ್ತು ನಾವು ಯಾಕೆ ಅವರ ಮಾತು ಕೇಳಬೇಕು ಅಂತ ನಮಗೆ ಅರ್ಥ ಮಾಡಿಸ್ತಿದ್ರು. ಹೀಗೆ ನಮ್ಮಮ್ಮ ಮನೆಯಲ್ಲಿ ಜಗಳ ಆಗದೇ ಇರೋ ತರ, ಎಲ್ಲರೂ ನೆಮ್ಮದಿಯಾಗಿ ಇರೋ ತರ ನೋಡಿಕೊಂಡಿದ್ದಾರೆ.” ಅಂತ ಯೋಸೆಫ್‌ ಹೇಳ್ತಾರೆ.

ನಿಮ್ಮ ನಡತೆಯಿಂದ ಮಕ್ಕಳಿಗೆ ಕಲಿಸಿ

12. ಎರಡನೇ ತಿಮೊತಿ 1:5 ರಲ್ಲಿ ಹೇಳೋ ತರ ಯೂನಿಕೆಯ ಒಳ್ಳೇ ಮಾದರಿಯಿಂದ ತಿಮೊತಿಗೆ ಯಾವ ಪ್ರಯೋಜನ ಆಯ್ತು?

12 ಎರಡನೇ ತಿಮೊತಿ 1:5 ಓದಿ. ತಿಮೊತಿಗೆ ಅವನ ತಾಯಿ ಯೂನಿಕೆ ಒಳ್ಳೇ ಮಾದರಿಯಾಗಿದ್ದಳು. ನಂಬಿಕೆ ಇಡೋದು ಅಂದ್ರೆ ಬರೀ ಹೇಳೋದಲ್ಲ, ಜೀವನದಲ್ಲಿ ಅದೇ ತರ ನಡೆದುಕೊಳ್ಳೋದು ಅಂತ ಅವನು ತನ್ನ ಅಮ್ಮನಿಂದಾನೇ ಕಲಿತಿರಬೇಕು. (ಯಾಕೋ. 2:26) ಯೂನಿಕೆಗೆ ಯೆಹೋವನ ಮೇಲೆ ಎಷ್ಟು ಪ್ರೀತಿಯಿದೆ ಅಂತ ಅವನು ನೋಡಿದ್ದ. ಅಷ್ಟೇ ಅಲ್ಲ, ಇದರಿಂದ ಯೆಹೋವ ಅವಳನ್ನ ಎಷ್ಟು ಆಶೀರ್ವಾದ ಮಾಡಿದ್ದಾನೆ ಅಂತನೂ ತಿಮೊತಿಗೆ ಗೊತ್ತಿತ್ತು. ಇದರಿಂದ ಅವನು ತನ್ನ ತಾಯಿ ತರಾನೇ ನಂಬಿಕೆಯನ್ನ ಬೆಳೆಸಿಕೊಂಡ. ಅದೇ ತರಾನೇ ಇವತ್ತು ಎಷ್ಟೋ ತಾಯಂದಿರು “ಒಂದು ಮಾತೂ ಆಡದೆ” ತಮ್ಮ ಮನೆಯವರ ಮನಸ್ಸನ್ನ ಗೆದ್ದಿದ್ದಾರೆ. (1 ಪೇತ್ರ 3:1, 2) ಆದ್ರೆ ನೀವು ಅವರ ತರ ಹೇಗೆ ನಡೆದುಕೊಳ್ಳಬಹುದು?

13. ಅಮ್ಮಂದಿರಿಗೆ ಯೆಹೋವನ ಜೊತೆ ತಮಗಿರುವ ಸಂಬಂಧನೇ ಯಾಕೆ ಮುಖ್ಯವಾಗಿರಬೇಕು?

13 ಯೆಹೋವನ ಜೊತೆಗಿರೋ ನಿಮ್ಮ ಸಂಬಂಧನೇ ನಿಮಗೆ ಮುಖ್ಯವಾಗಿರಲಿ. (ಧರ್ಮೋ. 6:5, 6) ತಾಯಂದಿರು ಮಾಡೋ ತ್ಯಾಗಕ್ಕೆ ಎಲ್ಲೆನೇ ಇಲ್ಲ. ಅವರು ತಮ್ಮ ಮಕ್ಕಳನ್ನ ಚೆನ್ನಾಗಿ ಬೆಳೆಸೋಕೆ ಸಮಯ, ದುಡ್ಡು, ನಿದ್ದೆ ಎಲ್ಲಾನೂ ತ್ಯಾಗ ಮಾಡ್ತಾರೆ. ಆದ್ರೆ ಅಮ್ಮಂದಿರು ಕುಟುಂಬನ ನೋಡಿಕೊಳ್ಳೋದರಲ್ಲೇ ಮುಳುಗಿಹೋಗಿ ಯೆಹೋವನ ಜೊತೆ ತಮಗಿರೋ ಸಂಬಂಧನ ತ್ಯಾಗ ಮಾಡಿಬಿಡಬಾರದು. ಪ್ರಾರ್ಥನೆ ಮಾಡೋಕೆ, ಬೈಬಲ್‌ ಅಧ್ಯಯನ ಮಾಡೋಕೆ, ಕೂಟಗಳಿಗೆ ಹೋಗೋಕೆ ಸಮಯ ಮಾಡಿಕೊಳ್ಳಬೇಕು. ಇದರಿಂದ ಯೆಹೋವನ ಜೊತೆ ನಿಮಗಿರೋ ಸ್ನೇಹ ಗಟ್ಟಿಯಾಗುತ್ತೆ. ಅಷ್ಟೇ ಅಲ್ಲ, ನಿಮ್ಮ ಕುಟುಂಬದವರಿಗೆ ಮತ್ತು ಬೇರೆಯವರಿಗೂ ನೀವು ಮಾದರಿಯಾಗಿ ಇರ್ತೀರ.

14-15. ಲೀನ, ಮರಿಯ ಮತ್ತು ಜೋ ಅವರಿಂದ ನೀವೇನು ಕಲಿತ್ರಿ?

14 ಅಮ್ಮನನ್ನ ನೋಡಿ ಯೆಹೋವನ ಮೇಲೆ ಪ್ರೀತಿ ಬೆಳೆಸಿಕೊಂಡ ಮಕ್ಕಳ ಉದಾಹರಣೆ ನೋಡೋಣ. ಸಹೋದರಿ ಕ್ರಿಸ್ಟಿನ್‌ ಅವರ ಮಗಳು ಲೀನ ಏನು ಹೇಳ್ತಾರೆ ಅಂದ್ರೆ, “ನಮ್ಮಪ್ಪ ಮನೆಯಲ್ಲಿದ್ದಾಗ ಯೆಹೋವನ ಬಗ್ಗೆ ಕಲಿಯೋಕೆ ಆಗುತ್ತಿರಲಿಲ್ಲ. ಆದ್ರೂ ಅಮ್ಮ ಯಾವತ್ತೂ ಮೀಟಿಂಗ್‌ ತಪ್ಪಿಸುತ್ತಿರಲಿಲ್ಲ. ನಮಗೆ ಬೈಬಲ್‌ ಬಗ್ಗೆ ಅಷ್ಟೊಂದು ಗೊತ್ತಿಲ್ಲ ಅಂದ್ರೂ ಇದೇ ಸತ್ಯ ಅಂತ ನಮ್ಮ ಅಮ್ಮನನ್ನು ನೋಡಿ ಕಲಿತುಕೊಂಡ್ವಿ. ನಾನು ಮೀಟಿಂಗ್‌ಗೆ ಹೋಗೋಕೆ ಶುರುಮಾಡುವಷ್ಟರಲ್ಲಿ ಇದೇ ಸತ್ಯ ಅಂತ ನನಗೆ ಅರ್ಥ ಆಗಿತ್ತು.”

15 ಸಹೋದರಿ ಮರಿಯಾ ಅವರ ಉದಾಹರಣೆ ನೋಡಿ. ಅವರು ಮತ್ತು ಅವರ ಅಮ್ಮ ಮೀಟಿಂಗ್‌ಗೆ ಹೋದಾಗೆಲ್ಲಾ ಅವರ ಅಪ್ಪ ಅವರನ್ನ ಹೊಡೆಯುತ್ತಿದ್ದರು ಮತ್ತು ಬೈಯುತ್ತಿದ್ದರು. “ನನ್ನ ಅಮ್ಮನಿಗೆ ಇರುವಷ್ಟು ಧೈರ್ಯನ ನಾನು ಯಾರಲ್ಲೂ ನೋಡಿಲ್ಲ, ನಾನು ಚಿಕ್ಕವಳಾಗಿದ್ದಾಗ ಕೆಲವೊಮ್ಮೆ ಬೇರೆಯವರು ಏನಂದುಕೊಳ್ಳುತ್ತಾರೋ ಅನ್ನೋ ಭಯದಿಂದ ಬೈಬಲ್‌ ನಿಯಮನ ಪಾಲಿಸ್ತಿರಲಿಲ್ಲ. ಆದ್ರೆ ನಮ್ಮಮ್ಮ ಯಾವಾಗಲೂ ಯೆಹೋವನಿಗೆ ಇಷ್ಟ ಆಗೋ ತರಾನೇ ನಡೆದುಕೊಳ್ತಿದ್ರು. ಮನುಷ್ಯನಿಗೆ ಹೆದರಿಕೊಂಡು ಯೆಹೋವನ ಮನಸ್ಸನ್ನು ನೋಯಿಸಬಾರದು ಅನ್ನೋದನ್ನ ನಾನು ಅವರಿಂದ ಕಲಿತೆ” ಅಂತ ಮರಿಯಾ ಹೇಳ್ತಾರೆ. ಜೋ ಅನ್ನೋ ಸಹೋದರನ ತಂದೆ ಅವರ ಮನೆಯಲ್ಲಿ ಬೈಬಲ್‌ ಬಗ್ಗೆ ಮಾತೇ ಎತ್ತಬಾರದು ಅಂತ ಹೇಳುತ್ತಿದ್ದರು. “ಅಪ್ಪ ಹೇಳೋದನ್ನ ನಮ್ಮಮ್ಮ ಯಾವಾಗಲೂ ಕೇಳ್ತಿದ್ರು, ಆದ್ರೆ ಆರಾಧನೆ ವಿಷಯಕ್ಕೆ ಬಂದಾಗ ಅವರು ಏನು ಬೇಕಾದ್ರೂ ತ್ಯಾಗ ಮಾಡ್ತಿದ್ರು. ಇದನ್ನ ನನ್ನ ಜೀವನದಲ್ಲೇ ಮರೆಯೋಕಾಗಲ್ಲ.”

16. ಅಮ್ಮಂದಿರು ಹೇಗೆ ಬೇರೆಯವರಿಗೂ ಸ್ಫೂರ್ತಿಯಾಗಿರಬಹುದು?

16 ಅಮ್ಮಂದಿರೇ, ನೀವು ಬೇರೆಯವರಿಗೂ ಒಳ್ಳೇ ಮಾದರಿಯಾಗಿದ್ದೀರ. ಯೂನಿಕೆಯ ನಂಬಿಕೆಯನ್ನು ಅಪೊಸ್ತಲ ಪೌಲ ತುಂಬ ಮೆಚ್ಚಿಕೊಂಡ. ತಿಮೊತಿಯ ಪ್ರಾಮಾಣಿಕ ನಂಬಿಕೆ “ಯೂನಿಕೆಯಲ್ಲಿ ಇತ್ತು” ಅಂತ ಅವನು ಹೇಳಿದ. (2 ತಿಮೊ. 1:5) ಅವನು ಒಂದನೇ ಮಿಷನರಿ ಪ್ರಯಾಣ ಮಾಡ್ತಾ ಲುಸ್ತ್ರಕ್ಕೆ ಬಂದಾಗ ಈ ನಂಬಿಕೆಯನ್ನ ಯೂನಿಕೆ ಮತ್ತು ಲೋವಿಯಲ್ಲಿ ಗಮನಿಸಿರಬೇಕು. ಅವರಿಬ್ಬರೂ ಕ್ರೈಸ್ತರಾಗೋಕೆ ಅವನೇ ಸಹಾಯ ಮಾಡಿರಬೇಕು. (ಅ. ಕಾ. 14:4-18) ಇದೆಲ್ಲಾ ಆಗಿ 15 ವರ್ಷ ಆದ್ಮೇಲೆ ಯೂನಿಕೆಯ ನಂಬಿಕೆ ಮತ್ತು ಅವಳ ಒಳ್ಳೇ ಮಾದರಿಯ ಬಗ್ಗೆ ಪೌಲ ತಿಮೊತಿಗೆ ಬರೆದ. ಇದರಿಂದ ಅವಳಿಟ್ಟ ಮಾದರಿ ಅಪೊಸ್ತಲ ಪೌಲನಿಗೆ ಮಾತ್ರವಲ್ಲ, ಒಂದನೇ ಶತಮಾನದಲ್ಲಿದ್ದ ಬೇರೆ ಕ್ರೈಸ್ತರಿಗೂ ಪ್ರೋತ್ಸಾಹ ಕೊಡ್ತು ಅಂತ ಗೊತ್ತಾಗುತ್ತೆ. ಹಾಗಾಗಿ ಸಹೋದರಿಯರೇ, ನೀವು ಒಂಟಿ ಹೆತ್ತವರಾಗಿದ್ದರೂ ಅಥವಾ ನಿಮ್ಮ ಗಂಡ ಯೆಹೋವನನ್ನ ಆರಾಧಿಸದೇ ಇದ್ರೂ ಒಳ್ಳೇ ಮಾದರಿಯಾಗಿರಿ. ಇದು ನಿಮ್ಮನ್ನು ನೋಡುವವರಿಗೂ ಸ್ಫೂರ್ತಿ ತುಂಬುತ್ತೆ.

ಚಿತ್ರಗಳು: ಮರದ ಬೆಳವಣಿಗೆಯನ್ನ ಮಕ್ಕಳು ಯೆಹೋವನ ಜೊತೆ ಬೆಳೆಸಿಕೊಳ್ಳೋ ಸ್ನೇಹಕ್ಕೆ ಹೋಲಿಸಲಾಗಿದೆ. 1. ಯಾರೋ ಒಬ್ರು ಬೀಜ ಬಿತ್ತುತ್ತಿದ್ದಾರೆ. ಅದರ ಕೆಳಗೆ ಒಂದು ಚಿತ್ರ ಇದೆ. ಅದರಲ್ಲಿ ಒಬ್ಬ ತಾಯಿ ಮಗುವಿಗೆ “ಬೈಬಲ್‌ ನಮಗೆ ಕಲಿಸುವ ಪಾಠಗಳು” ಅನ್ನೋ ಪುಸ್ತಕದಿಂದ ಕಲಿಸುತ್ತಿದ್ದಾರೆ. 2. ಯಾರೋ ಒಬ್ರು ಗಿಡಕ್ಕೆ ನೀರು ಹಾಕ್ತಿದ್ದಾರೆ. ಅದರ ಕೆಳಗೆ ಒಂದು ಚಿತ್ರ ಇದೆ. ಅದರಲ್ಲಿ ಆ ಮಗು ಬೆಳೆದು ಸ್ವಲ್ಪ ದೊಡ್ಡವನಾಗಿದ್ದಾನೆ. ಅವರ ಅಮ್ಮ ಅವನನ್ನ ಸ್ಟಡಿಗೆ ಕರಿತಾ ಇದ್ರೆ ಅವನು ಬಾಲ್‌ ಹಿಡ್ಕೊಂಡು ನಿಂತಿದ್ದಾನೆ. 3. ಯಾರೋ ಒಬ್ರು ಮರದಲ್ಲಿ ಬಿಟ್ಟಿರೋ ಹಣ್ಣನ್ನ ಕೀಳ್ತಿದ್ದಾರೆ. ಅದರ ಕೆಳಗೆ ಒಂದು ಚಿತ್ರ ಇದೆ. ಅದರಲ್ಲಿ ಆ ಹುಡುಗ ಹದಿವಯಸ್ಸಲ್ಲಿ ದೀಕ್ಷಾಸ್ನಾನ ಪಡೆದುಕೊಳ್ತಿದ್ದಾನೆ. ಅದನ್ನ ನೋಡಿ ಅವನ ಅಮ್ಮ ಖುಷಿಪಡ್ತಿದ್ದಾರೆ.

ಯೆಹೋವನನ್ನು ಪ್ರೀತಿಸೋಕೆ ಮಕ್ಕಳಿಗೆ ಸ್ವಲ್ಪ ಸಮಯ ಹಿಡಿಯುತ್ತೆ. ಸೋತುಹೋಗಬೇಡಿ, ಪ್ರಯತ್ನ ಮಾಡ್ತಾ ಇರಿ! (ಪ್ಯಾರ 17 ನೋಡಿ)

17. ನೀವು ಎಷ್ಟೇ ಪ್ರಯತ್ನ ಮಾಡಿದ್ರೂ ನಿಮ್ಮ ಮಕ್ಕಳು ಯೆಹೋವನ ಸೇವೆ ಮಾಡೋಕೆ ಆಸಕ್ತಿ ತೋರಿಸ್ತಿಲ್ಲ ಅಂತ ಅನಿಸಿದಾಗ ನೀವೇನು ಮಾಡಬೇಕು?

17 ನೀವು ಎಷ್ಟೇ ಪ್ರಯತ್ನ ಮಾಡಿದ್ರೂ ನಿಮ್ಮ ಮಕ್ಕಳು ಬೈಬಲ್‌ ಕಲಿಯೋಕೆ ಆಸಕ್ತಿ ತೋರಿಸ್ತಿಲ್ಲ ಅಂತ ಅನಿಸ್ತಿದೆಯಾ? ಮಕ್ಕಳಿಗೆ ಕಲಿಸೋಕೆ ಸಮಯ ಹಿಡಿಯುತ್ತೆ ಅನ್ನೋದನ್ನ ಯಾವತ್ತೂ ಮರೆಯಬೇಡಿ. ಈ ಚಿತ್ರದಲ್ಲಿರೋ ಹಾಗೆ ಒಂದು ಗಿಡ ಬೆಳೆಸೋಕೆ ನೀವು ಬೀಜ ಹಾಕುತ್ತೀರ ಅಂದುಕೊಳ್ಳಿ. ಕೆಲವೊಮ್ಮೆ ಅದು ಬೆಳೆಯುತ್ತಾ ಇಲ್ವಾ ಅನ್ನೋ ಸಂಶಯ ನಿಮಗೆ ಬರಬಹುದು. ಅದು ನಿಮ್ಮ ಕೈಯಲ್ಲಿ ಇಲ್ಲ. ಆದ್ರೆ ಅದಕ್ಕೆ ನೀವು ನೀರು ಹಾಕಬಹುದು. (ಮಾರ್ಕ 4:26-29) ಅದೇ ತರ ಮಕ್ಕಳು ಯೆಹೋವನ ಸೇವೆ ಮಾಡ್ತಾರಾ ಇಲ್ವಾ ಅನ್ನೋದು ನಿಮ್ಮ ಕೈಯಲ್ಲಿ ಇಲ್ಲ. ಆದ್ರೆ ಅವರಿಗೆ ಕಲಿಸೋಕೆ ನಿಮ್ಮಿಂದಾಗೋ ಪ್ರಯತ್ನವನ್ನ ಮಾಡಿದ್ರೆ, ಅವರು ಯೆಹೋವನ ಜೊತೆ ಸ್ನೇಹ ಬೆಳಸಿಕೊಳ್ಳೋಕೆ ಸಹಾಯ ಆಗಬಹುದು.—ಜ್ಞಾನೋ. 22:6.

ಯೆಹೋವ ಸಹಾಯ ಮಾಡ್ತಾನೆ ಅಂತ ನಂಬಿ

18. ತನ್ನ ಸ್ನೇಹಿತರಾಗೋಕೆ ನಿಮ್ಮ ಮಕ್ಕಳಿಗೆ ಯೆಹೋವ ಹೇಗೆ ಸಹಾಯ ಮಾಡ್ತಾನೆ?

18 ಹಿಂದಿನ ಕಾಲದಿಂದಾನೂ ಯೆಹೋವ ದೇವರು ಎಷ್ಟೋ ಯುವ ಜನರಿಗೆ ತನ್ನ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಸಹಾಯ ಮಾಡಿದ್ದಾನೆ. (ಕೀರ್ತ. 22:9, 10) ನಿಮ್ಮ ಮಕ್ಕಳಿಗೆ ಆತನ ಮೇಲೆ ಪ್ರೀತಿಯಿದ್ದರೆ ತನ್ನ ಜೊತೆ ಸ್ನೇಹ ಬೆಳೆಸಿಕೊಳ್ಳೋಕೆ ಅವರಿಗೂ ಖಂಡಿತ ಸಹಾಯ ಮಾಡ್ತಾನೆ. (1 ಕೊರಿಂ. 3:6, 7) ನಿಮ್ಮ ಮಕ್ಕಳು ಯೆಹೋವನನ್ನು ಬಿಟ್ಟು ಹೋಗ್ತಿದ್ರೂ, ಆತನು ಅವರನ್ನ ಮರೆಯಲ್ಲ, ಅವರ ಕೈಬಿಡಲ್ಲ, ಅವರನ್ನ ಪ್ರೀತಿಸುತ್ತಾನೆ. (ಕೀರ್ತ. 11:4) ಅವರ ಹೃದಯದಲ್ಲಿ ಎಲ್ಲೋ ಒಂದು ಕಡೆ ತನ್ನ ಮೇಲೆ ಪ್ರೀತಿಯಿದೆ, ‘ಒಳ್ಳೇ ಮನಸ್ಸಿದೆ’ ಅಂತ ಗೊತ್ತಾದ್ರೆ ಯೆಹೋವ ಅವರಿಗೆ ಸಹಾಯ ಮಾಡೋಕೆ ತನ್ನ ಕೈ ಚಾಚುತ್ತಾನೆ. (ಅ. ಕಾ. 13:48; 2 ಪೂರ್ವ. 16:9) ನಿಮ್ಮ ಮಕ್ಕಳಿಗೆ ಸಹಾಯ ಬೇಕಾದಾಗ ನೀವು ಏನು ಹೇಳಬೇಕು ಹೇಗೆ ಹೇಳಬೇಕು ಅಂತ ಆತನು ನಿಮಗೆ ಸಹಾಯ ಮಾಡ್ತಾನೆ. (ಜ್ಞಾನೋ. 15:23) ಅಥವಾ ಸಭೆಯಲ್ಲಿರೋ ಸಹೋದರ ಸಹೋದರಿಯರಲ್ಲಿ ಯಾರಾದ್ರೂ ನಿಮ್ಮ ಮಕ್ಕಳಿಗೆ ಪ್ರೀತಿ ತೋರಿಸೋ ತರ ಮಾಡ್ತಾನೆ. ನಿಮ್ಮ ಮಕ್ಕಳು ದೊಡ್ಡವರಾಗಿದ್ರೆ ಅವರಿಗೆ ಚಿಕ್ಕವಯಸ್ಸಲ್ಲಿ ನೀವು ಕಲಿಸಿದ ವಿಷಯವನ್ನ ನೆನಪಿಗೆ ಬರೋ ತರ ಮಾಡ್ತಾನೆ. (ಯೋಹಾ. 14:26) ನೀವು ನಿಮ್ಮ ಮಾತಿಂದ ಮತ್ತು ನಡತೆಯಿಂದ ಕಲಿಸ್ತಿದ್ರೆ ಯೆಹೋವ ನಿಮ್ಮ ಪ್ರಯತ್ನವನ್ನ ಆಶೀರ್ವದಿಸುತ್ತಾನೆ.

19. ಯೆಹೋವ ನಿಮ್ಮನ್ನು ಮೆಚ್ಚಿಕೊಳ್ತಾನೆ ಅಂತ ನೀವು ಯಾಕೆ ನಂಬಬಹುದು?

19 ಸಹೋದರಿಯರೇ, ನಿಮ್ಮ ಮಕ್ಕಳು ತನ್ನ ಸೇವೆ ಮಾಡಿದ್ರೇನೇ ಯೆಹೋವ ನಿಮ್ಮನ್ನು ಪ್ರೀತಿಸೋದು ಅಂದುಕೊಳ್ಳಬೇಡಿ. ನೀವು ಆತನನ್ನು ಪ್ರೀತಿಸೋದ್ರಿಂದ ಆತನು ನಿಮ್ಮನ್ನ ಪ್ರೀತಿಸುತ್ತಿದ್ದಾನೆ. ನೀವು ಒಂಟಿ ಹೆತ್ತವರಾಗಿದ್ದರೆ ಆತನು ನಿಮ್ಮ ಮಕ್ಕಳಿಗೆ ಅಪ್ಪ ಆಗಿ ಅವರನ್ನ ಕಾಪಾಡುತ್ತಾನೆ ಅಂತ ಮಾತು ಕೊಟ್ಟಿದ್ದಾನೆ. (ಕೀರ್ತ. 68:5) ನಿಮ್ಮ ಮಕ್ಕಳು ಯೆಹೋವನನ್ನು ಆರಾಧಿಸ್ತಾರಾ ಇಲ್ವಾ ಅನ್ನೋದು ನಿಮ್ಮ ಕೈಯಲ್ಲಿ ಇಲ್ಲ. ಆದ್ರೆ ಯೆಹೋವ ಸಹಾಯ ಮಾಡ್ತಾನೆ ಅಂತ ನೀವು ನಂಬಿ ನಿಮ್ಮ ಕೈಲಾಗಿದ್ದನ್ನ ಮಾಡಿದ್ರೆ ಆತನು ನಿಮ್ಮನ್ನ ಮೆಚ್ಚಿಕೊಳ್ತಾನೆ.

ಅಮ್ಮಂದಿರು . . .

  • ತಮ್ಮ ಮಕ್ಕಳಿಗೆ ಮಾತಿಂದ ಹೇಗೆ ಕಲಿಸಬಹುದು?

  • ತಮ್ಮ ಮಕ್ಕಳಿಗೆ ನಡತೆಯಿಂದ ಹೇಗೆ ಕಲಿಸಬಹುದು?

  • ಯೆಹೋವ ಸಹಾಯ ಮಾಡ್ತಾನೆ ಅಂತ ಯಾಕೆ ನಂಬಬೇಕು?

ಗೀತೆ 88 ಮಕ್ಕಳು—ದೇವರು ಕೊಡುವ ಹೊಣೆಗಾರಿಕೆ

a ಯೆಹೋವನ ಬಗ್ಗೆ ಕಲಿತು ಆತನ ಸೇವೆ ಮಾಡೋ ತರ ಅಮ್ಮಂದಿರು ಮಕ್ಕಳನ್ನ ಚೆನ್ನಾಗಿ ಬೆಳೆಸಬೇಕು. ಅದನ್ನ ಮಾಡೋದು ಹೇಗಂತ ತಿಮೊತಿಯ ಅಮ್ಮ ಯೂನಿಕೆಯಿಂದ ಅವರು ಕಲಿಯಬಹುದು. ಅದನ್ನ ಈ ಲೇಖನದಲ್ಲಿ ನೋಡೋಣ.

b ಕೆಲವರ ಹೆಸರು ಬದಲಾಗಿವೆ.

c ಎಂದೆಂದೂ ಖುಷಿಯಾಗಿ ಬಾಳೋಣ! ಪುಸ್ತಕದ ಪಾಠ 50 ಮತ್ತು ಆಗಸ್ಟ್‌ 15, 2011ರ ಕಾವಲಿನಬುರುಜುವಿನ ಪುಟ 6-7ರಲ್ಲಿರೋ “ಕುಟುಂಬ ಆರಾಧನೆ ಮತ್ತು ವೈಯಕ್ತಿಕ ಅಧ್ಯಯನಕ್ಕೆ ಕೆಲವು ಸಲಹೆಗಳು . . . ” ಅನ್ನೋ ಲೇಖನ ನೋಡಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ