ಅವರು ಯೆಹೋವನ ಚಿತ್ತವನ್ನು ಮಾಡಿದರು
ಸಮಾರ್ಯದವನೊಬ್ಬನು ಒಳ್ಳೆಯ ನೆರೆಯವನಾಗುತ್ತಾ
ಯೇಸುವಿನ ದಿನದಲ್ಲಿ, ಯೆಹೂದ್ಯರ ಮತ್ತು ಅನ್ಯಜಾತಿಯವರ ನಡುವೆ ಗಮನಾರ್ಹವಾದ ವೈರತ್ವವು ಇತ್ತು. ಇಸ್ರಾಯೇಲ್ಯ ಸ್ತ್ರೀಯರು ಯೆಹೂದ್ಯರಲ್ಲದ ಸ್ತ್ರೀಯರಿಗೆ ಹೆರಿಗೆಯ ಸಮಯದಲ್ಲಿ ನೆರವು ನೀಡುವುದನ್ನು ನಿಷೇಧಿಸಿದ ಒಂದು ನಿಯಮವನ್ನೂ ಯೆಹೂದಿ ಮಿಷ್ನವು ಸಮಯಾನಂತರ ಸೇರಿಸಿತು. ಯಾಕೆಂದರೆ ಇದನ್ನು ಮಾಡುವುದು ಇನ್ನೊಬ್ಬ ಅನ್ಯಜಾತಿಯವನನ್ನು ಜಗತ್ತಿಗೆ ತರುವುದಕ್ಕೆ ಸಮಾನವಾಗಿತ್ತು.—ಅಬೋಡಾ ಸಾರಾ 2:1.
ಅನ್ಯಜಾತಿಯವರಿಗಿಂತಲೂ, ಸಮಾರ್ಯದವರು ಯೆಹೂದ್ಯರಿಗೆ ಧಾರ್ಮಿಕ ರೀತಿಯಲ್ಲೂ ಜಾತೀಯ ರೀತಿಯಲ್ಲೂ ಹೆಚ್ಚು ಆಪ್ತ ಸಂಬಂಧಿಕರಾಗಿದ್ದರು. ಆದರೂ ಅವರನ್ನು ಬಹಿಷ್ಕೃತ ವ್ಯಕ್ತಿಗಳಂತೆ ವೀಕ್ಷಿಸಲಾಗುತ್ತಿತ್ತು. “ಯೆಹೂದ್ಯರಿಗೂ ಸಮಾರ್ಯರಿಗೂ ಬಳಿಕೆಯಿಲ್ಲ” ಎಂದು ಅಪೊಸ್ತಲ ಯೋಹಾನನು ಬರೆದನು. (ಯೋಹಾನ 4:9) ವಾಸ್ತವದಲ್ಲಿ, “ಒಬ್ಬ ಸಮಾರ್ಯದವನಿಂದ ಕೊಡಲ್ಪಡುವ ರೊಟ್ಟಿಯ ತುಂಡು, ಹಂದಿಯ ಮಾಂಸಕ್ಕಿಂತಲೂ ಹೆಚ್ಚು ಅಶುದ್ಧವಾಗಿದೆ” ಎಂದು ಟಾಲ್ಮೂಡ್ ಕಲಿಸಿತು. ಕೆಲವು ಯೆಹೂದ್ಯರು “ಸಮಾರ್ಯ” ಎಂಬ ಪದವನ್ನು, ತೆಗಳಿಕೆ ಮತ್ತು ಖಂಡನೆಯ ವಾಕ್ಸರಣಿಯಾಗಿಯೂ ಉಪಯೋಗಿಸಿದರು.—ಯೋಹಾನ 8:48.
ಈ ಸನ್ನಿವೇಶದ ನೋಟದಲ್ಲಿ, ಯೆಹೂದಿ ಧರ್ಮಶಾಸ್ತ್ರದಲ್ಲಿ ನಿಪುಣನಾಗಿದ್ದ ಒಬ್ಬ ಪುರುಷನಿಗೆ ಯೇಸು ನುಡಿದ ಮಾತುಗಳು ತುಂಬ ಬೋಧಪ್ರದವಾಗಿದ್ದವು. ಆ ವ್ಯಕ್ತಿಯು ಯೇಸುವಿನ ಬಳಿ ಬಂದು ಕೇಳಿದ್ದು: “ಬೋಧಕನೇ, ನಾನು ನಿತ್ಯಜೀವಕ್ಕೆ ಬಾಧ್ಯನಾಗುವಂತೆ ಏನು ಮಾಡಬೇಕು”? ಉತ್ತರ ಕೊಡುವಾಗ, ಯೇಸು ಅವನ ಗಮನವನ್ನು ಮೋಶೆಯ ಧರ್ಮಶಾಸ್ತ್ರದ ಕಡೆಗೆ ಸೆಳೆದನು. ಅದು, ‘ಯೆಹೋವನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂದು ಆಜ್ಞಾಪಿಸುತ್ತದೆ. ಆ ವಕೀಲನು ಅನಂತರ ಯೇಸುವನ್ನು ಕೇಳಿದ್ದು: “ನನ್ನ ನೆರೆಯವನು ಯಾರು”? (ಲೂಕ 10:25-29; ಯಾಜಕಕಾಂಡ 19:18; ಧರ್ಮೋಪದೇಶಕಾಂಡ 6:5) ಫರಿಸಾಯರಿಗನುಸಾರ, “ನೆರೆಯವನು” ಎಂಬ ಪದವು ಕೇವಲ ಯೆಹೂದಿ ಸಂಪ್ರದಾಯಗಳನ್ನು ಪಾಲಿಸಿದವರಿಗೆ ಅನ್ವಯಿಸಿತು. ಆದರೆ ನಿಶ್ಚಯವಾಗಿಯೂ ಅನ್ಯಜಾತಿಯವರಿಗೆ ಅಥವಾ ಸಮಾರ್ಯದವರಿಗಲ್ಲ. ಯೇಸು ಆ ದೃಷ್ಟಿಕೋನವನ್ನು ಬೆಂಬಲಿಸುವನೆಂದು ಈ ಕುತೂಹಲವುಳ್ಳ ವಕೀಲನು ನೆನಸಿದ್ದಿರುವುದಾದರೆ, ಅವನಿಗೆ ಬೇಗನೆ ಆಶ್ಚರ್ಯವಾಗಲಿತ್ತು.
ಒಬ್ಬ ಕರುಣಾಮಯಿ ಸಮಾರ್ಯನು
ಒಂದು ಸಾಮ್ಯವನ್ನು ತಿಳಿಸುವ ಮೂಲಕ ಯೇಸು ಆ ವ್ಯಕ್ತಿಯ ಪ್ರಶ್ನೆಯನ್ನು ಉತ್ತರಿಸಿದನು.a “ಒಬ್ಬಾನೊಬ್ಬ ಮನುಷ್ಯನು ಯೆರೂಸಲೇಮಿನಿಂದ ಘಟ್ಟಾ ಇಳಿದು ಯೆರಿಕೋವಿಗೆ ಹೋಗುತ್ತಿ”ದ್ದನು. ಯೆರೂಸಲೇಮ್ ಮತ್ತು ಯೆರಿಕೋವಿನ ನಡುವಿನ ಅಂತರವು 23 ಕಿಲೊಮೀಟರ್ ಆಗಿದೆ. ಈ ಎರಡು ನಗರಗಳನ್ನು ಒಂದುಗೂಡಿಸುತ್ತಿದ್ದ ಈ ರಸ್ತೆಯಲ್ಲಿ, ಕಳ್ಳರಿಗೆ ಅಡಗಿಕೊಳ್ಳಲು, ಆಕ್ರಮಣಮಾಡಲು ಮತ್ತು ತಪ್ಪಿಸಿಕೊಳ್ಳಲು ಸುಲಭವನ್ನಾಗಿ ಮಾಡುವ, ಕಡಿದಾದ ತಿರುವುಗಳು ಮತ್ತು ಬಂಡೆಗಳಿದ್ದವು. ಯೇಸುವಿನ ಸಾಮ್ಯದಲ್ಲಿನ ಪ್ರಯಾಣಿಕನು “ಕಳ್ಳರ ಕೈಗೆ ಸಿಕ್ಕಿದನು. ಅವರು ಅವನನ್ನು ಸುಲಿಗೆ ಮಾಡಿಕೊಂಡು ಗಾಯವಾಗುವಷ್ಟು ಹೊಡೆದು ಅವನನ್ನು ಅರೆಜೀವಮಾಡಿ ಬಿಟ್ಟುಹೋದರು.”—ಲೂಕ 10:30.
“ಆಗ ಹೇಗೋ ಒಬ್ಬ ಯಾಜಕನು ಆ ದಾರಿಯಲ್ಲಿ ಇಳಿದುಬರುತ್ತಾ ಅವನನ್ನು ಕಂಡು ವಾರೆಯಾಗಿ ಹೋದನು. ಅದೇ ರೀತಿಯಲ್ಲಿ ಒಬ್ಬ ಲೇವಿಯನೂ ಆ ಸ್ಥಳಕ್ಕೆ ಬಂದು ಅವನನ್ನು ಕಂಡು ವಾರೆಯಾಗಿ ಹೋದನು” ಎಂದು ಯೇಸು ಮುಂದುವರಿಸಿದನು. (ಲೂಕ 10:31, 32) ಯಾಜಕರು ಮತ್ತು ಲೇವಿಯರು ಧರ್ಮಶಾಸ್ತ್ರದ—ನೆರೆಹೊರೆಯವರ ಪ್ರೀತಿಯ ನಿಯಮವನ್ನೂ ಸೇರಿಸಿ—ಬೋಧಕರಾಗಿದ್ದರು. (ಯಾಜಕಕಾಂಡ 10:8-11; ಧರ್ಮೋಪದೇಶಕಾಂಡ 33:1, 10) ನಿಶ್ಚಯವಾಗಿಯೂ, ಎಲ್ಲರಿಗಿಂತಲೂ ಹೆಚ್ಚಾಗಿ ಅವರು, ಆ ಗಾಯಳಿಸಲ್ಪಟ್ಟ ಪ್ರಯಾಣಿಕನಿಗೆ ಸಹಾಯಮಾಡುವಂತೆ ನಿರ್ಬಂಧಿಸಲ್ಪಟ್ಟಿರಬೇಕಿತ್ತು.
ಯೇಸು ಮುಂದುವರಿಸಿದ್ದು: “ಒಬ್ಬ ಸಮಾರ್ಯದವನು ಪ್ರಯಾಣಮಾಡುತ್ತಾ ಅವನಿದ್ದಲ್ಲಿಗೆ ಬಂದ”ನು. ಒಬ್ಬ ಸಮಾರ್ಯದವನ ಉಲ್ಲೇಖವು, ಆ ವಕೀಲನ ಕುತೂಹಲವನ್ನು ನಿಸ್ಸಂದೇಹವಾಗಿ ಹೆಚ್ಚಿಸಿರಬೇಕು. ಈ ಜಾತಿಯ ಕುರಿತಾದ ನಕಾರಾತ್ಮಕ ದೃಷ್ಟಿಕೋನವನ್ನು ಯೇಸು ಸಮ್ಮತಿಸಲಿದ್ದನೊ? ವ್ಯತಿರಿಕ್ತವಾಗಿ, ಆ ನತದೃಷ್ಟ ಪ್ರಯಾಣಿಕನನ್ನು ನೋಡಿದಾಗ, ಆ ಸಮಾರ್ಯದವನು “ಕನಿಕರ” ತೋರಿಸಿದನು. ಯೇಸು ಹೇಳಿದ್ದು: “ಅವನ ಹತ್ತಿರಕ್ಕೆ ಹೋಗಿ ಅವನ ಗಾಯಗಳಲ್ಲಿ ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಹೊಯ್ದು ಕಟ್ಟಿ ತನ್ನ ಸ್ವಂತ ವಾಹನದ ಮೇಲೆ ಹತ್ತಿಸಿಕೊಂಡು ಚತ್ರಕ್ಕೆ [“ಪ್ರವಾಸಿಮಂದಿರಕ್ಕೆ,” NW] ಕರಕೊಂಡು ಹೋಗಿ ಅವನನ್ನು ಆರೈಕೆಮಾಡಿದನು.b ಮರುದಿನ ಅವನು ಎರಡು ಹಣಗಳನ್ನು ತೆಗೆದು ಚತ್ರದವನಿಗೆ ಕೊಟ್ಟು—ಇವನನ್ನು ಆರೈಕೆಮಾಡು; ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು ಅಂದನು.”—ಲೂಕ 10:33-35.
ಯೇಸು ಈಗ ತನ್ನನ್ನು ಪ್ರಶ್ನಿಸಿದವನಿಗೆ ಕೇಳಿದ್ದು: “ಈ ಮೂವರಲ್ಲಿ ಯಾವನು ಕಳ್ಳರ ಕೈಗೆ ಸಿಕ್ಕಿದವನಿಗೆ ನೆರೆಯವನಾದನೆಂದು ನಿನಗೆ ತೋರುತ್ತದೆ ಹೇಳು.” ಆ ವಕೀಲನಿಗೆ ಉತ್ತರವೇನೆಂಬುದು ತಿಳಿದಿತ್ತು, ಆದರೂ ಅವನು “ಸಮಾರ್ಯದವನು” ಎಂದು ಹೇಳಲು ಅವನಿಗೆ ಮನಸ್ಸಿರಲಿಲ್ಲವೆಂದು ತೋರುತ್ತದೆ. ಬದಲಾಗಿ ಅವನು ಉತ್ತರಿಸಿದ್ದು: “ಅವನಿಗೆ ದಯತೋರಿಸಿದವನೇ.” ಅನಂತರ ಯೇಸು ಅಂದದ್ದು: “ಹೋಗು, ನೀನೂ ಅದರಂತೆ ಮಾಡು.”—ಲೂಕ 10:36, 37.
ನಮಗಾಗಿ ಪಾಠ
ಯೇಸುವನ್ನು ಪ್ರಶ್ನಿಸಿದ ಮನುಷ್ಯನು, ತಾನು “ನೀತಿವಂತನೆಂದು ತೋರಿಸಿಕೊಳ್ಳುವ” ಪ್ರಯತ್ನದಲ್ಲಿ ಹಾಗೆ ಮಾಡಿದನು. (ಲೂಕ 10:29) ಮೋಶೆಯ ಧರ್ಮಶಾಸ್ತ್ರವನ್ನು ತಾನು ಜಾಗರೂಕತೆಯಿಂದ ಪಾಲಿಸುತ್ತಿರುವುದನ್ನು ಯೇಸು ಹೊಗಳುವನೆಂದು ಅವನು ನೆನಸಿದ್ದಿರಬಹುದು. ಆದರೆ ಈ ಅಹಂಭಾವಿ ವ್ಯಕ್ತಿಯು, ಈ ಬೈಬಲ್ ಜ್ಞಾನೋಕ್ತಿಯ ಸತ್ಯವನ್ನು ಕಲಿತುಕೊಳ್ಳುವ ಅಗತ್ಯವನ್ನು ಕಲಿಯಬೇಕಾಗಿತ್ತು: “ನರನ ನಡತೆಯು ಸ್ವಂತ ದೃಷ್ಟಿಗೆ ನೆಟ್ಟಗೆ; ಯೆಹೋವನು ಹೃದಯಗಳನ್ನೇ ಪರೀಕ್ಷಿಸುವನು.”—ಜ್ಞಾನೋಕ್ತಿ 21:2.
ನಿಜವಾಗಿಯೂ, ಯಥಾರ್ಥವಾಗಿರುವ ವ್ಯಕ್ತಿಯು ದೇವರ ನಿಯಮಗಳಿಗೆ ವಿಧೇಯನಾಗುತ್ತಾನೆ ಮಾತ್ರವಲ್ಲ, ಆತನ ಗುಣಗಳನ್ನೂ ಅನುಕರಿಸುತ್ತಾನೆಂಬುದನ್ನು ಯೇಸುವಿನ ಸಾಮ್ಯವು ತೋರಿಸುತ್ತದೆ. (ಎಫೆಸ 5:1) ಉದಾಹರಣೆಗಾಗಿ, “ದೇವರು ಪಕ್ಷಪಾತಿಯಲ್ಲ” ಎಂದು ಬೈಬಲ್ ನಮಗೆ ಹೇಳುತ್ತದೆ. (ಅ. ಕೃತ್ಯಗಳು 10:34) ಈ ವಿಷಯದಲ್ಲಿ ನಾವು ದೇವರನ್ನು ಅನುಕರಿಸುತ್ತೇವೊ? ಯೇಸುವಿನ ಪ್ರಚೋದಕ ಸಾಮ್ಯವು ತೋರಿಸುತ್ತದೇನೆಂದರೆ, ನಮ್ಮ ನೆರೆಹೊರೆಭಾವವು, ರಾಷ್ಟ್ರೀಯ, ಸಾಂಸ್ಕೃತಿಕ, ಮತ್ತು ಧಾರ್ಮಿಕ ಗಡಿಗಳನ್ನು ಮೀರುವಂತಹದ್ದಾಗಿರಬೇಕು. ನಿಜವಾಗಿಯೂ, ಕ್ರೈಸ್ತರು ಕೇವಲ ಒಂದೇ ಸಾಮಾಜಿಕ ವರ್ಗ, ಜಾತಿ, ಅಥವಾ ರಾಷ್ಟ್ರ ಮತ್ತು ಕೇವಲ ಜೊತೆ ವಿಶ್ವಾಸಿಗಳಿಗಾಗಿ ಮಾತ್ರವಲ್ಲ, ‘ಎಲ್ಲರಿಗೆ ಒಳ್ಳೇದನ್ನು ಮಾಡು’ವಂತೆ ಆಜ್ಞಾಪಿಸಲ್ಪಟ್ಟಿದ್ದಾರೆ.—ಗಲಾತ್ಯ 6:10.
ಯೆಹೋವನ ಸಾಕ್ಷಿಗಳು ಈ ಶಾಸ್ತ್ರೀಯ ಬುದ್ಧಿವಾದವನ್ನು ಅನುಸರಿಸಲು ಪ್ರಯತ್ನಿಸುತ್ತಾರೆ. ಉದಾಹರಣೆಗಾಗಿ ನೈಸರ್ಗಿಕ ವಿಪತ್ತುಗಳು ಬಂದೆರಗುವಾಗ, ಅವರು ಜೊತೆ ವಿಶ್ವಾಸಿಗಳಿಗೆ ಹಾಗೂ ಸಾಕ್ಷಿಗಳಲ್ಲದವರಿಗೂ ಮಾನವೀಯ ನೆರವನ್ನು ಕೊಡುತ್ತಾರೆ.c ಇದಕ್ಕೆ ಕೂಡಿಸಿ, ಬೈಬಲಿನ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಲು ಜನರಿಗೆ ಸಹಾಯಮಾಡುವುದರಲ್ಲಿ ಅವರು ಸಾಮೂಹಿಕವಾಗಿ ನೂರು ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸುತ್ತಾರೆ. “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ದೇವರ ಚಿತ್ತವಾಗಿರುವುದರಿಂದ, ಎಲ್ಲರಿಗೂ ರಾಜ್ಯ ಸಂದೇಶವನ್ನು ತಲಪಿಸಲಿಕ್ಕಾಗಿ ಅವರು ಪ್ರಯಾಸಪಡುತ್ತಾರೆ.—1 ತಿಮೊಥೆಯ 2:4; ಅ. ಕೃತ್ಯಗಳು 10:35.
[ಅಧ್ಯಯನ ಪ್ರಶ್ನೆಗಳು]
a ಸಾಮಾನ್ಯವಾಗಿ ಒಂದು ಸಾಮ್ಯವು, ಒಂದು ನೈತಿಕ ಅಥವಾ ಆತ್ಮಿಕ ಸತ್ಯವನ್ನು ಪಡೆಯಬಹುದಾದ ಊಹಾತ್ಮಕ ಕಥನವಾಗಿದೆ.
b ಯೇಸುವಿನ ದಿನಗಳಲ್ಲಿದ್ದ ಕೆಲವೊಂದು ಪ್ರವಾಸಿಮಂದಿರಗಳು, ಕೇವಲ ಆಶ್ರಯವನ್ನಲ್ಲ, ಬದಲಾಗಿ ಆಹಾರ ಮತ್ತು ಇತರ ಸೌಲಭ್ಯಗಳನ್ನೂ ಒದಗಿಸಿದವೆಂಬುದು ಸುವ್ಯಕ್ತ. ಯೇಸುವಿನ ಮನಸ್ಸಿನಲ್ಲಿ ಈ ರೀತಿಯ ಪ್ರವಾಸಿಗೃಹಗಳಿದ್ದಿರಬಹುದು. ಯಾಕೆಂದರೆ ಇಲ್ಲಿ ಉಪಯೋಗಿಸಲ್ಪಟ್ಟಿರುವ ಗ್ರೀಕ್ ಶಬ್ದವು, ಲೂಕ 2:7ರಲ್ಲಿ “ಚತ್ರ” ಎಂದು ಭಾಷಾಂತರಿಸಲ್ಪಟ್ಟಿರುವ ಶಬ್ದಕ್ಕಿಂತ ಭಿನ್ನವಾದದ್ದಾಗಿದೆ.
c ಉದಾಹರಣೆಗಳಿಗಾಗಿ, ಕಾವಲಿನಬುರುಜು ಪತ್ರಿಕೆಯ, ಡಿಸೆಂಬರ್ 1, 1996ರ 3-8ನೆಯ ಪುಟಗಳು ಮತ್ತು ಜನವರಿ 15, 1998ರ 3-7ನೆಯ ಪುಟಗಳನ್ನು ನೋಡಿರಿ.