ಭರವಸೆಯಿಡಸಾಧ್ಯವಿಲ್ಲ ಏಕೆ?
‘ಈಗಿನ ಕಾಲದಲ್ಲಿ ನೀವು ನಿಜವಾಗಿಯೂ ಯಾರನ್ನಾದರೂ ನಂಬಸಾಧ್ಯವಿದೆಯೋ?’ ಈ ಪ್ರಶ್ನೆಯನ್ನು ಕೆಲವು ಹತಾಶ ವ್ಯಕ್ತಿಗಳು ಕೇಳುವುದನ್ನು ನೀವು ಕೇಳಿಸಿಕೊಂಡಿರಬಹುದು. ಅಥವಾ ನಿಮ್ಮ ಜೀವಿತದಲ್ಲಿ ಏನೋ ಒಂದು ಘಟನೆ ಸಂಭವಿಸಿದ್ದು, ಅದರಿಂದ ಭಾವನಾತ್ಮಕವಾಗಿ ಕ್ಷೋಭೆಗೊಂಡಿರುವಾಗ, ನಿಮ್ಮನ್ನೇ ನೀವು ಹೀಗೆ ಪ್ರಶ್ನಿಸಿಕೊಂಡಿದ್ದಿರಬಹುದು.
ನಿಸ್ಸಂದೇಹವಾಗಿ, ಸಂಘಸಂಸ್ಥೆಗಳ ಮೇಲೆ ಮತ್ತು ಇತರ ಜನರ ಮೇಲೆ ಲೋಕವ್ಯಾಪಕವಾಗಿ ಭರವಸೆಯ ಕೊರತೆಯಿದೆ. ಅನೇಕ ವೇಳೆ, ಈ ಭರವಸೆಯ ಕೊರತೆಯು ನ್ಯಾಯವೆಂದು ಸಮರ್ಥಿಸಲ್ಪಡುತ್ತದೆ. ಹೆಚ್ಚಿನ ರಾಜಕಾರಿಣಿಗಳು ಮಾಡುವ ಚುನಾವಣೆಪೂರ್ವ ಭರವಸೆಗಳೆಲ್ಲವೂ ಪೂರೈಸಲ್ಪಡುತ್ತವೆಂದು ಯಾರಾದರೊಬ್ಬರು ನಿಜವಾಗಿಯೂ ನಿರೀಕ್ಷಿಸುತ್ತಾರೋ? ಜರ್ಮನಿಯಲ್ಲಿ 1,000 ವಿದ್ಯಾರ್ಥಿಗಳ 1990ರ ಸಮೀಕ್ಷೆಯು ಸೂಚಿಸಿತೇನೆಂದರೆ, ಅವರಲ್ಲಿ ಶೇಕಡ 16.5ರಷ್ಟು ಜನರು, ರಾಜಕಾರಿಣಿಗಳು ಲೋಕದ ಸಮಸ್ಯೆಗಳನ್ನು ಪರಿಹರಿಸಬಲ್ಲರೆಂಬ ಭರವಸೆಯುಳ್ಳವರಾಗಿದ್ದರು, ಅವರಲ್ಲಿ ಇಮ್ಮಡಿಯಷ್ಟು ವಿದ್ಯಾರ್ಥಿಗಳು ಬಲವಾದ ಸಂದೇಹಗಳನ್ನು ವ್ಯಕ್ತಪಡಿಸಿದರು. ಮತ್ತು ಅವರಲ್ಲಿ ಅಧಿಕಾಂಶ ವಿದ್ಯಾರ್ಥಿಗಳು, ಸಮಸ್ಯೆಗಳನ್ನು ಪರಿಹರಿಸುವುದರಲ್ಲಿರುವ ರಾಜಕಾರಿಣಿಗಳ ಸಾಮರ್ಥ್ಯ ಮತ್ತು ಹಾಗೆ ಮಾಡುವುದರಲ್ಲಿ ಅವರಿಗಿರುವ ಸಿದ್ಧಮನಸ್ಸಿನಲ್ಲಿ ಭರವಸೆಯಿಲ್ಲವೆಂದು ಹೇಳಿದರು.
ಶ್ಟುಟ್ಗಾರ್ಟೆ ನಾಕ್ರಿಕ್ಟನ್ ವಾರ್ತಾಪತ್ರಿಕೆಯು ದೂರಿದ್ದು: “ಅನೇಕ ರಾಜಕಾರಿಣಿಗಳು ಮೊದಲು ತಮ್ಮ ಹಿತವನ್ನು ನೋಡಿಕೊಳ್ಳುತ್ತಾರೆ, ಅನಂತರ ಒಂದುವೇಳೆ ಮತದಾರರ ಹಿತವನ್ನು ನೋಡಬಹುದು.” ಇದಕ್ಕೆ ಬೇರೆ ದೇಶಗಳಲ್ಲಿರುವ ಜನರು ಸಹ ಒಪ್ಪಿಕೊಳ್ಳುತ್ತಾರೆ. ದೇಶವೊಂದರ ಬಗ್ಗೆ, ದ ಯೂರೋಪಿಯನ್ ವಾರ್ತಾಪತ್ರಿಕೆಯು ಹೇಳಿದ್ದು: “ರಾಜಕಾರಿಣಿಗಳ ಕಡೆಗಿರುವ ಯೌವನಸ್ಥರ ಸಿನಿಕತನವು, ತಳವೂರಿದೆ ಮತ್ತು ವೃದ್ಧರು ಸಹ ಅವರ ಪಕ್ಷಕ್ಕೆ ಸೇರುತ್ತಾರೆ.” ‘ಚುನಾಯಿಸುವ ಸಮಾಜವು ಕ್ರಮವಾಗಿ ರಾಜಕೀಯ ಪಕ್ಷಗಳನ್ನು ಗದ್ದುಗೆಯಿಂದ ಹೊರಹಾಕುತ್ತದೆ’ ಎಂಬುದನ್ನು ಅದು ಗಮನಿಸಿತು. ಆ ವಾರ್ತಾಪತ್ರಿಕೆಯು ಮುಂದುವರಿಸಿ ಹೇಳಿದ್ದು: “[ಅಲ್ಲಿ] ಯುವ ಜನರ ಮಧ್ಯೆ ಸಮಯವನ್ನು ಕಳೆಯುತ್ತಿರುವ ಯಾರೇ ಆದರೂ ಅವರ ಭರವಸೆಯ ಕೊರತೆ ಮತ್ತು ಅವ್ಯವಸ್ಥಿತ ಮನೋಭಾವವನ್ನು ತಕ್ಷಣವೇ ಗುರುತಿಸುತ್ತಾರೆ.” ಆದರೂ, ಸಾರ್ವಜನಿಕ ಭರವಸೆಯಿಲ್ಲದೆ, ಪ್ರಜಾಪ್ರಭುತ್ವ ಸರಕಾರವು ಏನನ್ನೂ ಸಾಧಿಸಸಾಧ್ಯವಿಲ್ಲ. ಅಮೆರಿಕದ ಮಾಜಿ ರಾಷ್ಟ್ರಾಧ್ಯಕ್ಷರಾದ ಜಾನ್ ಎಫ್. ಕೆನಡಿ ಒಮ್ಮೆ ಹೇಳಿದ್ದು: “ಫಲಕಾರಿ ಸರಕಾರದ ಆಧಾರವು ಸಾರ್ವಜನಿಕ ಭರವಸೆಯೇ ಆಗಿದೆ.”
ಹಣಕಾಸಿನ ಲೋಕದಲ್ಲಿನ ಭರವಸೆಯ ಸಂಬಂಧದಲ್ಲಿ, ಅನಿರೀಕ್ಷಿತ ಆರ್ಥಿಕ ವಿಪರ್ಯಸ್ತಗಳು ಮತ್ತು ಶೀಘ್ರ-ಧನಿಕರಾಗುವ ಯೋಜನೆಗಳಲ್ಲಿನ ವಿಫಲತೆಯು ಅನೇಕರನ್ನು ಶಂಕಿಸುವಂತೆ ಮಾಡಿದೆ. ಅಕ್ಟೋಬರ್ 1997ರಲ್ಲಿ ವಿಶ್ವ ಸ್ಟಾಕ್ ಮಾರುಕಟ್ಟೆಗಳು ಅನಿಯಂತ್ರಿತವಾಗಿ ಡೋಲಾಯಮಾನಗೊಂಡಾಗ, ಒಂದು ವಾರ್ತಾಪತ್ರಿಕೆಯು, “ಪ್ರಬಲವಾದ ಮತ್ತು ಕೆಲವೊಮ್ಮೆ ಅರ್ಥವಿಲ್ಲದ ಭರವಸೆಯ ಕೊರತೆ” ಹಾಗೂ “ಭರವಸೆರಾಹಿತ್ಯ ಅಂಟುಜಾಡ್ಯ”ದ ಕುರಿತಾಗಿ ಮಾತಾಡಿತು. “ಭರವಸೆಯು ಎಷ್ಟು ಇಂಗಿಹೋಗಿದೆ ಎಂದರೆ, [ಒಂದು ಏಷ್ಯಾದ ದೇಶದಲ್ಲಿ] ಅಧಿಕಾರದಲ್ಲಿರುವ ಸರಕಾರದ ಅಸ್ತಿತ್ವವೇ . . . ಬೆದರಿಕೆಗೊಳಗಾದಂತೆ ತೋರುತ್ತದೆ” ಎಂದು ಸಹ ಹೇಳಿತು. ಸಾರಾಂಶದಲ್ಲಿ, ಅದು ಈ ವಾಸ್ತವಾಂಶವನ್ನು ಹೇಳಿತು: “ಆರ್ಥಿಕತೆಯು ಭರವಸೆಯ ಮೇಲೆ ಆತುಕೊಳ್ಳುತ್ತದೆ.”
ಧರ್ಮವು ಸಹ ಭರವಸೆಯನ್ನು ಪ್ರೇರಿಸಲು ವಿಫಲಗೊಳ್ಳುತ್ತಿದೆ. ಕ್ರಿಸ್ಟ್ ಇನ್ ಡೇ ಗೇಜೆನ್ವಾರ್ಟ್ ಎಂಬ ಜರ್ಮನಿಯ ಧಾರ್ಮಿಕ ಪತ್ರಿಕೆಯು ವಿಷಾದನೀಯವಾಗಿ ಹೇಳಿಕೆ ನೀಡುವುದು: “ಜನಸಾಮಾನ್ಯರು ಚರ್ಚಿನ ಮೇಲೆ ಇಟ್ಟಿರುವ ಭರವಸೆಯ ಮಟ್ಟವು ಒಂದೇ ಸಮನೆ ಇಳಿಯುತ್ತಿದೆ.” 1986 ಮತ್ತು 1992ರ ನಡುವೆ, ಜರ್ಮನರು ಚರ್ಚಿನಲ್ಲಿ ಹೆಚ್ಚಾಗಿ ಅಥವಾ ಸ್ವಲ್ಪ ಮಟ್ಟಿಗೆ ಇಟ್ಟಿದ್ದ ಭರವಸೆಯು ಶೇಕಡ 40ರಿಂದ 33ಕ್ಕೆ ಇಳಿಯಿತು. ವಾಸ್ತವದಲ್ಲಿ, ಹಿಂದಿನ ಪೂರ್ವ ಜರ್ಮನಿಯಲ್ಲಿ, ಅದು ಶೇಕಡ 20ಕ್ಕೆ ಇಳಿಯಿತು. ಇದಕ್ಕೆ ವ್ಯತಿರಿಕ್ತವಾಗಿ, ಚರ್ಚಿನಲ್ಲಿ ಅಲ್ಪಸ್ವಲ್ಪ ಭರವಸೆಯಿದ್ದ ಅಥವಾ ಭರವಸೆಯೇ ಇಲ್ಲದಿದ್ದ ಜನರ ಸಂಖ್ಯೆಯು, ಹಿಂದೆ ಪಶ್ಚಿಮ ಜರ್ಮನಿಯಾಗಿದ್ದ ಪ್ರದೇಶದಲ್ಲಿ ಶೇಕಡ 56ರಿಂದ 66ಕ್ಕೆ ಮತ್ತು ಹಿಂದೆ ಪೂರ್ವ ಜರ್ಮನಿಯಾಗಿದ್ದ ಪ್ರದೇಶದಲ್ಲಿ ಶೇಕಡ 71ಕ್ಕೆ ಏರಿತು.
ಮಾನವ ಸಮಾಜದ ಮೂರು ಆಧಾರಸ್ತಂಭಗಳಾದ ರಾಜಕೀಯ, ಆರ್ಥಿಕ, ಮತ್ತು ಧರ್ಮವಲ್ಲದೆ ಇತರ ಕ್ಷೇತ್ರಗಳಲ್ಲೂ ಭರವಸೆಯಲ್ಲಿನ ಇಳಿತವು ಸುವ್ಯಕ್ತವಾಗಿವೆ. ಮತ್ತೊಂದು ಉದಾಹರಣೆಯು ಕಾನೂನನ್ನು ಜಾರಿಗೆ ತರುವಂತಹದ್ದಾಗಿದೆ. ಅಪರಾಧ ಸಂಹಿತೆಗಳಲ್ಲಿನ ತಪ್ಪುಗಳು, ನ್ಯಾಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವುದರಲ್ಲಿ ಕಷ್ಟಗಳು ಮತ್ತು ನ್ಯಾಯಾಲಯದ ಸಂದೇಹಾಸ್ಪದ ನಿರ್ಣಯಗಳು, ಜನರ ಭರವಸೆಯನ್ನು ಗಂಭೀರವಾದ ರೀತಿಯಲ್ಲಿ ಅಲುಗಾಡಿಸಿವೆ. ಟೈಮ್ ಪತ್ರಿಕೆಗನುಸಾರ, “ನಾಗರಿಕರ ಮತ್ತು ಪೊಲೀಸರ ಹತಾಶೆಗಳು ಯಾವ ಹಂತಕ್ಕೆ ತಲಪಿವೆಯೆಂದರೆ, ಅಪಾಯಕಾರಿ ಘಾತುಕರನ್ನು ಎಷ್ಟೋ ಸಮಯ, ಸ್ವಲ್ಪವೇ ಕಾಲಾವಧಿಯಲ್ಲಿ ಪುನಃ ಬಿಡುಗಡೆಗೊಳಿಸುವ ಒಂದು ವ್ಯವಸ್ಥೆಯಲ್ಲಿ ಅವರಿಗೆ ಭರವಸೆಯೇ ಇಲ್ಲದೆ ಹೋಗಿದೆ.” ಪೊಲೀಸರ ಭ್ರಷ್ಟಾಚಾರ ಮತ್ತು ಕ್ರೂರವರ್ತನೆಯಿಂದ, ಪೊಲೀಸರ ಮೇಲಿನ ಭರವಸೆಯು ಕೂಡ ಹೊಸಕಿಹಾಕಲ್ಪಟ್ಟಿದೆ.
ಅಂತಾರಾಷ್ಟ್ರೀಯ ರಾಜಕೀಯಗಳ ಸಂಬಂಧದಲ್ಲಿ ನೋಡುವುದಾದರೆ, ಕೈಗೂಡದ ಶಾಂತಿ ಮಾತುಕತೆಗಳು ಮತ್ತು ಕದನವಿರಾಮಗಳ ಉಲ್ಲಂಘನೆಯು ಭರವಸೆಯ ಕೊರತೆಯನ್ನು ಉಂಟುಮಾಡುತ್ತದೆ. ವಿಶ್ವ ಸಂಸ್ಥೆಗೆ ಅಮೆರಿಕದ ರಾಯಭಾರಿಯಾಗಿರುವ ಬಿಲ್ ರಿಚರ್ಡ್ಸನ್ ಅವರು, “ಭರವಸೆಯ ಕೊರತೆಯಿದೆ” ಎಂದು ಸರಳವಾಗಿ ಹೇಳುವ ಮೂಲಕ, ಮಧ್ಯಪೂರ್ವದಲ್ಲಿ ಶಾಂತಿಯನ್ನು ತರುವ ವಿಷಯದಲ್ಲಿ ಮುಖ್ಯ ಅಡೆತಡೆಯನ್ನು ಸೂಚಿಸಿದರು.
ಅದೇ ಸಮಯದಲ್ಲಿ, ಹೆಚ್ಚು ವೈಯಕ್ತಿಕ ಮಟ್ಟದಲ್ಲಿ ನೋಡುವುದಾದರೆ, ಮನುಷ್ಯರು ತಮಗೆ ಸಮಸ್ಯೆಗಳಿರುವಾಗ ಸಾಮಾನ್ಯವಾಗಿ ತಮ್ಮನ್ನು ಅರ್ಥಮಾಡಿಕೊಂಡು, ಸಾಂತ್ವನ ನೀಡುವರು ಎಂದು ಯಾರ ಬಳಿಗೆ ಮೊರೆಹೋಗುತ್ತಾರೋ, ಆ ಸ್ವಂತ ನಿಕಟ ಸಂಬಂಧಿಕರು, ಮಿತ್ರರಲ್ಲಿ ಕೂಡ ಅನೇಕ ಜನರಿಗೆ ಭರವಸೆಯಿರುವುದಿಲ್ಲ. ಇಬ್ರಿಯ ಪ್ರವಾದಿಯಾದ ಮೀಕನು ವರ್ಣಿಸಿದಂಥ ಸನ್ನಿವೇಶಕ್ಕೆ ಇದು ತುಂಬ ಹೋಲುತ್ತದೆ: “ಮಿತ್ರನನ್ನು ನಂಬಬೇಡ; ಆಪ್ತನಲ್ಲಿ ಭರವಸವಿಡದಿರು; ನಿನ್ನ ಎದೆಯ ಮೇಲೆ ಒರಗುವವಳಿಗೂ ನಿನ್ನ ಬಾಯಬಾಗಲನ್ನು ಭದ್ರವಾಗಿಟ್ಟುಕೋ.”—ಮೀಕ 7:5.
ಕಾಲಗಳ ಒಂದು ಸೂಚನೆ
ಜರ್ಮನ್ ಮನಶಾಸ್ತ್ರಜ್ಞರಾದ ಆರ್ಥರ್ ಫಿಶರ್ ಇತ್ತೀಚೆಗೆ ಹೀಗೆ ಹೇಳಿದ್ದಾಗಿ ಉಲ್ಲೇಖಿಸಲ್ಪಟ್ಟರು: “ಸಮಾಜದ ಅಭಿವೃದ್ಧಿಯಲ್ಲಿ ಮತ್ತು ಒಬ್ಬನ ವೈಯಕ್ತಿಕ ಭವಿಷ್ಯದಲ್ಲಿನ ಭರವಸೆಯು, ಎಲ್ಲ ಕ್ಷೇತ್ರಗಳಲ್ಲಿಯೂ ನಿಜವಾಗಿಯೂ ಹೇಳುವುದಾದರೆ ಹಠಾತ್ತನೇ ಕುಸಿದುಬಿದ್ದಿದೆ. ಸಮಾಜದ ಸಂಘಟನೆಗಳು ತಮಗೆ ಸಹಾಯಮಾಡುತ್ತವೆ ಎಂಬ ವಿಚಾರದಲ್ಲಿ ಯುವ ಜನರು ಸಂದೇಹ ವ್ಯಕ್ತಪಡಿಸುತ್ತಾರೆ. ಅವರ ಭರವಸೆಯು ಎಷ್ಟರ ಮಟ್ಟಿಗಿದೆ ಎಂದರೆ, ಅದು ರಾಜಕೀಯವಾಗಿರಲಿ, ಧರ್ಮವಾಗಿರಲಿ ಇಲ್ಲವೇ ಯಾವುದೇ ಬೇರೆ ಸಂಸ್ಥಾಪನೆಯಾಗಿರಲಿ ಅದರಲ್ಲಿ ಅವರಿಗೆ ನಂಬಿಕೆಯೇ ಇಲ್ಲವಾಗಿದೆ.” ದೀರ್ಘ ಸಮಯದಿಂದಿರುವ ಅಧಿಕಾರಿಗಳು, ಸಂಘಟನೆಗಳು ಮತ್ತು ಪರಿಣತರ ಕಡೆಗೆ “ಸಂದೇಹದ ಸಂಸ್ಕೃತಿ”ಯ ಕುರಿತು ಸಮಾಜ ಶಾಸ್ತ್ರಜ್ಞರಾದ ಉಲ್ರಿಕ್ ಬೆಕ್ ಮಾತಾಡುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಅಂಥ ಒಂದು ಸಂಸ್ಕೃತಿಯಲ್ಲಿ, ಜನರು ಹಿಮ್ಮೆಟ್ಟಲು, ಅಧಿಕಾರದಲ್ಲಿರುವವರನ್ನು ತಿರಸ್ಕರಿಸಲು ಮತ್ತು ಇತರರ ಬುದ್ಧಿವಾದವನ್ನು ಅಥವಾ ಮಾರ್ಗದರ್ಶನವನ್ನು ಪಡೆದುಕೊಳ್ಳದೆ ಸ್ವತಂತ್ರರಾಗಿ ನಿರ್ಣಯಗಳನ್ನು ಮಾಡಿಕೊಳ್ಳುತ್ತಾ, ತಮಗೆ ಇಷ್ಟವಾದ ವಿಧದಲ್ಲಿ ಜೀವಿಸಲು ಪ್ರಾರಂಭಿಸುತ್ತಾರೆ. ಕೆಲವರು ತುಂಬ ಸಂದೇಹ ಸ್ವಭಾವಿಗಳಾಗುತ್ತಾರೆ, ಪ್ರಾಯಶಃ ತಾವು ಇನ್ನುಮುಂದೆ ಭರವಸೆಯಿಡಸಾಧ್ಯವಿಲ್ಲ ಎಂದು ನೆನಸುವವರೊಡನೆ, ದಯಾದಾಕ್ಷಿಣ್ಯವಿಲ್ಲದೇ ನಡೆದುಕೊಳ್ಳುವ ಮಟ್ಟಿಗೂ ಹೋಗುತ್ತಾರೆ. ಈ ಮನೋಭಾವವು, ಬೈಬಲಿನಲ್ಲಿ ವರ್ಣಿಸಿರುವಂಥ ಒಂದು ಹಾನಿಕಾರಕ ವಾತಾವರಣವನ್ನು ಪ್ರವರ್ಧಿಸುತ್ತದೆ: “ಆದರೆ ಕಡೇ ದಿವಸಗಳಲ್ಲಿ ಕಠಿನಕಾಲಗಳು ಬರುವವೆಂಬದನ್ನು ತಿಳಿದುಕೋ. ಮನುಷ್ಯರು ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರು ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವರು.” (2 ತಿಮೊಥೆಯ 3:1-5; ಜ್ಞಾನೋಕ್ತಿ 18:1) ನಿಜವಾಗಿಯೂ ಇಂದಿನ ಭರವಸೆಯಿಲ್ಲದ ಸಮಯವು, ಕಾಲಗಳ ಒಂದು ಸೂಚನೆ ಅಂದರೆ, “ಕಡೇ ದಿವಸಗಳ” ಒಂದು ಚಿಹ್ನೆಯಾಗಿದೆ.
ಭರವಸೆಯೇ ಇಲ್ಲದಿರುವಂಥ ಒಂದು ಸ್ಥಿತಿಯಲ್ಲಿ ನರಳುತ್ತಿರುವ ಮತ್ತು ಮೇಲೆ ವರ್ಣಿಸಲ್ಪಟ್ಟಿರುವಂಥ ಜನರಿಂದ ತುಂಬಿತುಳುಕುತ್ತಿರುವ ಒಂದು ಲೋಕದಲ್ಲಿ, ನಿಜವಾಗಿಯೂ ಜೀವಿತವನ್ನು ಪೂರ್ಣವಾಗಿ ಸವಿಯಸಾಧ್ಯವಿಲ್ಲ. ಆದರೆ ಈ ವಿಷಯಗಳು ಬದಲಾಗುವುದು ಎಂದು ನೆನಸುವುದು ವಾಸ್ತವಿಕವಾಗಿದೆಯೋ? ಇಂದಿನ ಭರವಸೆಯ ವಿಷಮಸ್ಥಿತಿಯು ಸರಿಯಾಗಸಾಧ್ಯವೋ? ಸಾಧ್ಯವಿರುವುದಾದರೆ, ಅದು ಹೇಗೆ ಮತ್ತು ಯಾವಾಗ?