ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w98 9/1 ಪು. 22-23
  • ಶುಭಾಶುಭಗಳ ಒಂದು ಊರು—ಬೇತೇಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಶುಭಾಶುಭಗಳ ಒಂದು ಊರು—ಬೇತೇಲ್‌
  • ಕಾವಲಿನಬುರುಜು—1998
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬೇತೇಲ್‌ ಧರ್ಮಭ್ರಷ್ಟತೆಯ ಒಂದು ಕೇಂದ್ರವಾಗುತ್ತದೆ
  • ಬೆತೆಲ್‌ ಸೇವೆ—ಹೆಚ್ಚು ಸ್ವಯಂಸೇವಕರ ಅಗತ್ಯವಿದೆ
    1995 ನಮ್ಮ ರಾಜ್ಯದ ಸೇವೆ
  • ಇದು ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • “ದೇವರ ಗೃಹ” ವನ್ನು ಗಣ್ಯತೆಯಿಂದ ಕಾಣುವುದು
    ಕಾವಲಿನಬುರುಜು—1994
  • ನೀವು ನಿಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿದೆಯೋ?
    2003 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು—1998
w98 9/1 ಪು. 22-23

ಶುಭಾಶುಭಗಳ ಒಂದು ಊರು—ಬೇತೇಲ್‌

ಕೆಲವು ಊರುಗಳು, ಅವುಗಳಲ್ಲಿ ನಡೆಯುವ ಘಟನೆಗಳ ಕಾರಣ, ಪ್ರಸಿದ್ಧ ಅಥವಾ ಕುಪ್ರಸಿದ್ಧವಾಗುತ್ತವೆ. ಆದರೆ, ಬೇತೇಲ್‌ ಒಂದು ಅಸಾಮಾನ್ಯವಾದ ಊರಾಗಿದೆ, ಏಕೆಂದರೆ ಅದು ಶುಭಾಶುಭಗಳಿಗಾಗಿ ಜ್ಞಾತವಾಯಿತು. ಪೂರ್ವಜನಾದ ಯಾಕೋಬನು ಆ ಊರಿಗೆ, ಬೇತೇಲ್‌ ಎಂದು ಹೆಸರಿಟ್ಟನು. ಅದರ ಅರ್ಥ “ದೇವರ ಮನೆ.” ಆದರೆ ಒಂದು ಸಾವಿರ ವರ್ಷಗಳ ತರುವಾಯ, ಪ್ರವಾದಿಯಾದ ಹೋಶೇಯನು ಆ ಊರನ್ನು, “ಕೆಡುಕನ ಮನೆ” ಎಂದು ಕರೆದನು. ಈ ಊರು ಒಳ್ಳೆಯದ್ದರಿಂದ ಕೆಟ್ಟದ್ದಕ್ಕೆ ಹೇಗೆ ತಿರುಗಿತು? ಮತ್ತು ಅದರ ಇತಿಹಾಸದಿಂದ ನಾವೇನು ಕಲಿತುಕೊಳ್ಳಸಾಧ್ಯವಿದೆ?

ಅಬ್ರಹಾಮನು ಇನ್ನೂ ಜೀವಂತವಾಗಿರುವಾಗ, ಸಾ.ಶ.ಪೂ. 1943ರಲ್ಲಿ ದೇವರ ಜನರೊಂದಿಗೆ ಬೇತೇಲಿನ ಸಂಬಂಧವು ಪ್ರಾರಂಭವಾಯಿತು. ಆ ಸಮಯದಲ್ಲಿ, ಆ ಊರಿಗೆ, ಲೂಜ್‌ ಎಂಬ ಹೆಸರಿತ್ತು. ಇದು ಅದರ ಮೂಲ ಕಾನಾನ್ಯ ಹೆಸರು. ಅದು ಯೆರೂಸಲೇಮಿನಿಂದ ಸುಮಾರು 17 ಕಿಲೊಮೀಟರುಗಳಷ್ಟು ದೂರದಲ್ಲಿರುವ ಪರ್ವತ ಪ್ರದೇಶದಲ್ಲಿತ್ತು. ಅಬ್ರಹಾಮನೂ ಅವನ ಸೋದರಳಿಯನಾದ ಲೋಟನೂ, ಬೇತೇಲಿನ ಸುತ್ತಮುತ್ತಲಿದ್ದ ಬೆಟ್ಟಗಳ ಮೇಲೆ ಎತ್ತರವಾದ ಸ್ಥಳದಿಂದ, ಯೊರ್ದನ್‌ ಕಣಿವೆಯ ಫಲವತ್ತಾದ ಬಯಲುಗಳನ್ನು ನೋಡುತ್ತಾ ಇರುವುದನ್ನು ಚಿತ್ರಿಸಿಕೊಳ್ಳಿ. ಜಾಣತನದಿಂದ, ಅಬ್ರಹಾಮನು ತಮ್ಮ ದೊಡ್ಡ ಕುರಿಮಂದೆಗಳ ಹಿಂಡುಗಳನ್ನು ಮೇಯಿಸಲು, ಸ್ಥಳಗಳನ್ನು ನೇಮಿಸುವುದರ ಕಷ್ಟದ ಕುರಿತಾಗಿ ಹೀಗೆ ಹೇಳುತ್ತಾ, ಲೋಟನ ಗಮನಕ್ಕೆ ತರುತ್ತಾನೆ: “ನನಗೂ ನಿನಗೂ, ನನ್ನ ದನಕಾಯುವವರಿಗೂ ನಿನ್ನ ದನಕಾಯುವವರಿಗೂ ಜಗಳವಿರಬಾರದು; ನಾವು ಸಹೋದರರಲ್ಲವೇ. ದೇಶವೆಲ್ಲಾ ನಿನ್ನೆದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು.”—ಆದಿಕಾಂಡ 13:3-11.

ಅಬ್ರಹಾಮನು ತನಗೆ ಮೊದಲು ಆರಿಸಿಕೊಳ್ಳಲು ಹಕ್ಕಿದೆ ಎಂದು ಸಾಧಿಸಲಿಲ್ಲ. ಅದಕ್ಕೆ ಬದಲಾಗಿ, ತನಗಿಂತ ಚಿಕ್ಕವನು ಅತ್ಯುತ್ತಮವಾದ ಭಾಗವನ್ನು ತೆಗೆದುಕೊಳ್ಳುವಂತೆ ಅವನು ಬಿಟ್ಟನು. ಅಬ್ರಹಾಮನ ಉತ್ತಮ ಮನೋಭಾವವನ್ನು ನಾವು ಅನುಕರಿಸಸಾಧ್ಯವಿದೆ. ಶಾಂತ ರೀತಿಯಲ್ಲಿ ಮಾತಾಡುವುದರಲ್ಲಿ ಮತ್ತು ನಿಸ್ವಾರ್ಥರಾಗಿ ನಡೆದುಕೊಳ್ಳುವುದರಲ್ಲಿ, ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳುವ ಮೂಲಕ ನಾವು ಜಗಳವನ್ನು ನಿಲ್ಲಿಸಸಾಧ್ಯವಿದೆ.—ರೋಮಾಪುರ 12:18.

ವರ್ಷಗಳಾನಂತರ, ಅಬ್ರಹಾಮನ ಮೊಮ್ಮಗನಾದ ಯಾಕೋಬನು ಲೂಜ್‌ನಲ್ಲಿ ಬಿಡಾರಹೂಡಿದಾಗ, ಅವನಿಗೆ ಒಂದು ಅಸಾಧಾರಣವಾದ ಕನಸು ಬಿತ್ತು. “ಒಂದು ನಿಚ್ಚಣಿಗೆ ನೆಲದ ಮೇಲೆ ನಿಂತಿತ್ತು; ಅದರ ತುದಿ ಆಕಾಶವನ್ನು ಮುಟ್ಟಿತ್ತು; ಅದರ ಮೇಲೆ ದೇವದೂತರು ಹತ್ತುತ್ತಾ ಇಳಿಯುತ್ತಾ ಇದ್ದರು. ಇದಲ್ಲದೆ ಯೆಹೋವನು ಅವನ ಬಳಿಯಲ್ಲಿ” ಇದ್ದುದ್ದನ್ನು ಅವನು ನೋಡಿದನು. (ಆದಿಕಾಂಡ 28:11-19; ಹೋಲಿಸಿ ಯೋಹಾನ 1:51.) ಆ ಕನಸಿಗೆ ಒಂದು ಪ್ರಾಮುಖ್ಯವಾದ ಅರ್ಥವಿತ್ತು. ಯಾಕೋಬನು ನೋಡಿದ ದೇವದೂತರು, ಅವನ ಸಂತಾನದ ಸಂಬಂಧದಲ್ಲಿ, ದೇವರು ಅವನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವುದರಲ್ಲಿ ಸಹಾಯಮಾಡಲಿದ್ದರು. ಆ ನಿಚ್ಚಣಿಗೆ ಮೇಲಿನ ಯೆಹೋವನ ಉನ್ನತಕ್ಕೇರಿಸಲ್ಪಟ್ಟ ಸ್ಥಾನವು, ಆತನು ಈ ಕಾರ್ಯದಲ್ಲಿ ದೇವದೂತರನ್ನು ಮಾರ್ಗದರ್ಶಿಸಲಿಕ್ಕಿದ್ದನು ಎಂಬುದನ್ನು ತೋರಿಸಿತು.

ಈ ದೈವಿಕ ಬೆಂಬಲದ ಆಶ್ವಾಸನೆಯು, ಯಾಕೋಬನನ್ನು ಬಹಳವಾಗಿ ಮನತಾಕಿತು. ಕನಸಿನಿಂದ ಎಚ್ಚರಗೊಂಡಾಗ, ಆ ಸ್ಥಳವನ್ನು ಅವನು ಬೇತೇಲ್‌ ಎಂದು ಕರೆದನು, ಅದರ ಅರ್ಥ “ದೇವರ ಮನೆ.” ಅಲ್ಲಿ ಅವನು ಬಲಿಯನ್ನರ್ಪಿಸಿ, ಯೆಹೋವನಿಗೆ ಪ್ರತಿಜ್ಞೆಮಾಡಿದ್ದು: “ನಿನ್ನಿಂದ ನನಗೆ ಬರುವ ಎಲ್ಲಾ ಆಸ್ತಿಯಲ್ಲಿ ಹತ್ತರಲ್ಲೊಂದು ಪಾಲನ್ನು ನಿನಗೆ ಸಮರ್ಪಿಸುವೆ.”a (ಆದಿಕಾಂಡ 28:20-22) ತನ್ನಲ್ಲಿದ್ದ ಎಲ್ಲವೂ ದೇವರಿಂದ ಬಂದದ್ದು ಎಂಬುದನ್ನು ಗ್ರಹಿಸುತ್ತಾ, ಅವನು ತನ್ನ ಕೃತಜ್ಞತೆಯ ಕಾಣಿಕೆಯಾಗಿ, ಉದಾರವಾದ ಒಂದು ಭಾಗವನ್ನು ಹಿಂದಿರುಗಿಸಿ ಕೊಡಲು ಇಷ್ಟಪಟ್ಟನು.

ಇಂದು ಕ್ರೈಸ್ತರಿಗೂ ತಮ್ಮ ಪರವಾಗಿ ಸೇವೆಸಲ್ಲಿಸಲು ದೇವದೂತರಿದ್ದಾರೆ. (ಕೀರ್ತನೆ 91:11; ಇಬ್ರಿಯ 1:14) ಅವರು ಸಹ ತಾವು ಪಡೆದುಕೊಳ್ಳುವ ಎಲ್ಲ ಆಶೀರ್ವಾದಗಳಿಗಾಗಿ ತಮ್ಮ ಗಣ್ಯತೆಯನ್ನು ತೋರಿಸಸಾಧ್ಯವಿದೆ. ಅದನ್ನು “ದೇವರಿಗೆ ಉದಾರವಾಗಿ ಸ್ತುತಿಸುವ” ಮೂಲಕವಾಗಿ ಮಾಡಸಾಧ್ಯವಿದೆ.—2 ಕೊರಿಂಥ 9:11, 12, NW.

ಸಕಾಲದಲ್ಲಿ, ಯಾಕೋಬನ ಸಂತತಿಯು ಒಂದು ಜನಾಂಗವಾಯಿತು. ಅವರ ನಾಯಕನಾದ ಯೆಹೋಶುವನು, ಕಾನಾನ್‌ ದೇಶವನ್ನು ಜಯಿಸುವ ಆರಂಭದಲ್ಲೇ ಬೇತೇಲಿನ ವಿಧರ್ಮಿ ರಾಜನನ್ನು ಸೋಲಿಸಿಬಿಟ್ಟನು. (ಯೆಹೋಶುವ 12:16) ನ್ಯಾಯಸ್ಥಾಪಕರ ಕಾಲದಲ್ಲಿ, ಪ್ರವಾದಿನಿಯಾದ ದೆಬೋರಳು ಬೇತೇಲಿನ ಹತ್ತಿರ ವಾಸಿಸುತ್ತಿದ್ದು, ಯೆಹೋವನ ವಾಕ್ಯವನ್ನು ಜನರಿಗೆ ಹೇಳುತ್ತಿದ್ದಳು. ಇಸ್ರಾಯೇಲಿನ ಜನಾಂಗಕ್ಕೆ ನ್ಯಾಯತೀರಿಸುವಾಗ, ಸಮುವೇಲನು ಬೇತೇಲಿಗೆ ಕ್ರಮವಾಗಿ ಭೇಟಿಕೊಡುತ್ತಿದ್ದನು.—ನ್ಯಾಯಸ್ಥಾಪಕರು 4:4, 5; 1 ಸಮುವೇಲ 7:15, 16.

ಬೇತೇಲ್‌ ಧರ್ಮಭ್ರಷ್ಟತೆಯ ಒಂದು ಕೇಂದ್ರವಾಗುತ್ತದೆ

ಆದರೆ ಸಾ.ಶ.ಪೂ. 997ರಲ್ಲಿ ರಾಜ್ಯವು ಇಬ್ಭಾಗವಾಗಿ ಹೋದ ಮೇಲೆ, ಶುದ್ಧಾರಾಧನೆಯೊಂದಿಗೆ ಬೇತೇಲಿನ ಸಂಬಂಧವು ಕಡಿದುಹೋಯಿತು. ರಾಜ ಯಾರೊಬ್ಬಾಮನು, ಬೇತೇಲನ್ನು, ಬಸವನ ಆರಾಧನೆಗಾಗಿ ಒಂದು ಕೇಂದ್ರವಾಗಿ ಮಾಡಿದನು. ಆ ಬಸವನು ಯೆಹೋವನನ್ನು ಪ್ರತಿನಿಧಿಸುತ್ತಿತ್ತು ಎಂದು ಹೇಳಲಾಗುತ್ತದೆ. (1 ಅರಸು 12:25-29) ಆದುದರಿಂದಲೇ, ಬೇತೇಲಿನ ನಾಶನವನ್ನು ಪ್ರವಾದಿಸುತ್ತಿದ್ದಾಗ ಹೋಶೇಯನು, ಅದನ್ನು ‘ಬೇತಾವೆನ್‌’ ಎಂದು ಉಲ್ಲೇಖಿಸಿದನು, ಅದರ ಅರ್ಥ “ಕೆಡುಕನ ಮನೆ.”—ಹೋಶೇಯ 10:5, 8.

ಬೇತೇಲ್‌ ಆತ್ಮಿಕ ಕೆಡುಕಿನ ಒಂದು ಕೇಂದ್ರವಾದಾಗಲೂ, ಅದರೊಂದಿಗೆ ಸಂಬಂಧಿಸಿದ ಘಟನೆಗಳು ಪ್ರಾಮುಖ್ಯವಾದ ಪಾಠಗಳನ್ನು ಒದಗಿಸುತ್ತಾ ಮುಂದುವರಿಯಿತು. (ರೋಮಾಪುರ 15:4) ಅಂಥ ಒಂದು ಪಾಠವು, ಒಬ್ಬ ಅನಾಮಿಕ ಪ್ರವಾದಿಯದ್ದಾಗಿದೆ. ಬೇತೇಲಿನ ಯಜ್ಞವೇದಿಗಳ ಮತ್ತು ಯಾಜಕರ ನಾಶನವನ್ನು ಮುಂತಿಳಿಸಲಿಕ್ಕಾಗಿ, ಅವನನ್ನು ಯೂದಾಯದಿಂದ ಬೇತೇಲಿಗೆ ಕಳುಹಿಸಲಾಯಿತು. ಏನನ್ನೂ ತಿನ್ನದೇ ಕುಡಿಯದೇ—ಕೆಲವೊಂದು ಕಿಲೊಮೀಟರುಗಳಷ್ಟು ಅಂತರದಲ್ಲಿರುವ ದಕ್ಷಿಣಕ್ಕೆ—ಯೂದಾಯಕ್ಕೆ ಹಿಂತಿರುಗುವಂತೆ ಸಹ ಯೆಹೋವನು ಅವನಿಗೆ ಹೇಳಿದ್ದನು. ಈ ಪ್ರವಾದಿಯು ಬೇತೇಲಿನ ವೇದಿಯ ಮೇಲೆ ಬರಲಿರುವ ಕೇಡನ್ನು ಧೈರ್ಯದಿಂದ ಪ್ರವಾದಿಸುತ್ತಾ, ಇಸ್ರಾಯೇಲಿನ ರಾಜನಾದ ಯಾರೊಬ್ಬಾಮನ ಮುಂದೆ ಹೇಳಿದನು. ಆದರೆ ಅನಂತರ ಬೇತೇಲಿನಲ್ಲಿದ್ದ ಒಬ್ಬ ವೃದ್ಧ ಪ್ರವಾದಿಯ ಮನೆಯಲ್ಲಿ ಊಟಮಾಡುವ ಮೂಲಕ ದೇವರಿಗೆ ಅವಿಧೇಯತೆಯನ್ನು ತೋರಿಸಿದನು. ಏಕೆ? ಜೊತೆ ಪ್ರವಾದಿಗೆ ಆತಿಥ್ಯವನ್ನು ತೋರಿಸಲು ಯೆಹೋವನ ಒಬ್ಬ ದೇವದೂತನು ತನಗೆ ಆಜ್ಞಾಪಿಸಿದ್ದಾನೆ ಎಂದು ಆ ವೃದ್ಧ ಪ್ರವಾದಿಯು ಸುಳ್ಳಾಗಿ ಪ್ರತಿಪಾದಿಸಿದನು. ಯೂದಾಯದ ಪ್ರವಾದಿಯ ಅವಿಧೇಯತೆಯು, ಅವನ ಅಕಾಲಿಕ ಮೃತ್ಯುವಿಗೆ ಕಾರಣವಾಯಿತು.—1 ಅರಸು 13:1-25.

ಪ್ರಶ್ನಾತ್ಮಕವಾದದ್ದೆಂದು ತೋರುವ ಯಾವುದನ್ನಾದರೂ ಮಾಡುವಂತೆ, ಒಬ್ಬ ಜೊತೆ ವಿಶ್ವಾಸಿಯು ನಮಗೆ ಹೇಳುವುದಾದರೆ, ಆಗ ನಾವು ಹೇಗೆ ಪ್ರತಿಕ್ರಿಯಿಸಬೇಕು? ಸುಸಂಕಲ್ಪಿತ ಸಲಹೆಯು ಸಹ, ತಪ್ಪಾಗಿರುವಲ್ಲಿ ಹಾನಿಕಾರಕವಾಗಿರಲು ಸಾಧ್ಯವಿದೆ ಎಂಬುದನ್ನು ಜ್ಞಾಪಕದಲ್ಲಿಡಿರಿ. (ಮತ್ತಾಯ 16:21-23ನ್ನು ಹೋಲಿಸಿರಿ.) ಪ್ರಾರ್ಥನೆಯ ಮತ್ತು ಯೆಹೋವನ ವಾಕ್ಯದ ಮುಖಾಂತರ, ಆತನ ಮಾರ್ಗದರ್ಶನವನ್ನು ಕೋರುವ ಮೂಲಕ, ಆ ಅನಾಮಿಕ ಪ್ರವಾದಿಯ ದುರಂತಮಯ ತಪ್ಪಿಂದ ನಾವು ದೂರವಿರುವೆವು.—ಜ್ಞಾನೋಕ್ತಿ 19:21; 1 ಯೋಹಾನ 4:1.

150 ವರ್ಷಗಳ ಅನಂತರ, ಬೇತೇಲಿನ ವಿರುದ್ಧ ಪ್ರವಾದಿಸಲು ಪ್ರವಾದಿಯಾದ ಆಮೋಸನು ಸಹ ಉತ್ತರಕ್ಕೆ ಪ್ರಯಾಣಿಸಿದನು. ಆಮೋಸನಿಗೆ “ಯೆಹೂದದೇಶಕ್ಕೆ ಓಡಿಹೋಗು”ವಂತೆ ಅಹಂಕಾರದಿಂದ ಹೇಳಿದ ಯಾಜಕ ಅಮಚ್ಯನನ್ನು ಸೇರಿಸಿ, ವಿರೋಧಿ ಸಭಿಕರನ್ನು ಆಮೋಸನು ಬಲವಾಗಿ ಖಂಡಿಸಿದನು. ಆದರೆ ಆ ಯಾಜಕನ ಸ್ವಂತ ಮನೆವಾರ್ತೆಯ ಮೇಲೆ ಬರಲಿರುವ ವಿಪತ್ತುಗಳ ಕುರಿತಾಗಿ ಆಮೋಸನು ನಿರ್ಭಯವಾಗಿ ಅಮಚ್ಯನಿಗೆ ಹೇಳಿದನು. (ಆಮೋಸ 5:4-6; 7:10-17) ಯೆಹೋವನು, ತನ್ನ ನಮ್ರಭಾವದ ಶುಶ್ರೂಷಕರನ್ನು ಸಾಹಸಿಗಳನ್ನಾಗಿ ಮಾಡಬಲ್ಲನೆಂಬುದನ್ನು, ಅವನ ಈ ಉದಾಹರಣೆಯು ನಮಗೆ ಮರುಜ್ಞಾಪಿಸುತ್ತದೆ.—1 ಕೊರಿಂಥ 1:26, 27.

ಕಟ್ಟಕಡೆಗೆ, ಯೂದಾಯದ ನಂಬಿಗಸ್ತ ರಾಜನಾದ ಯೋಶೀಯನು “ಬೇತೇಲಿನಲ್ಲಿ ಏರ್ಪಡಿಸಿದ ಪೂಜಾಸ್ಥಳವನ್ನೂ ಅದರಲ್ಲಿದ್ದ ಯಜ್ಞವೇದಿಯನ್ನೂ ಕೆಡವಿಬಿಟ್ಟನು. ಪೂಜಾಸ್ಥಳವನ್ನೂ ಅದರಲ್ಲಿದ ಅಶೇರವಿಗ್ರಹಸ್ತಂಭವನ್ನೂ ಸುಟ್ಟು ಬೂದಿ ಮಾಡಿದನು.” (2 ಅರಸು 23:15, 16) ದೇವರ ಮಾರ್ಗದರ್ಶನಗಳ ಕಾರ್ಯಗತಿಯಲ್ಲಿ ಉತ್ಸಾಹದಿಂದ ಮುಂದುವರಿಯುವ ಮೂಲಕ ಮತ್ತು ಸಭೆಯನ್ನು ಶುದ್ಧವಾಗಿಡುವುದರಲ್ಲಿ ನಾಯಕತ್ವವನ್ನು ತೆಗೆದುಕೊಳ್ಳುವ ಮೂಲಕ, ಇಂದು ಹಿರಿಯರು ಅವನ ಉತ್ತಮ ಮಾದರಿಯನ್ನು ಅನುಕರಿಸಸಾಧ್ಯವಿದೆ.

ಬೇತೇಲಿನಲ್ಲಿ ನಡೆದ ಈ ಘಟನೆಗಳು, ನೀತಿಯಿಂದಾಗುವ ಮತ್ತು ದುಷ್ಟತನದಿಂದಾಗುವ ಪರಿಣಾಮಗಳನ್ನು, ಯೆಹೋವನಿಗೆ ವಿಧೇಯರಾಗುವುದರಿಂದ ಮತ್ತು ಅವಿಧೇಯರಾಗುವುದರಿಂದ ಆಗುವ ಪರಿಣಾಮಗಳನ್ನು ತೀರ ಸ್ಪಷ್ಟವಾಗಿ ಚಿತ್ರಿಸುತ್ತದೆ. ಅನೇಕ ವರ್ಷಗಳ ಹಿಂದೆ, ಮೋಶೆಯು ಇಸ್ರಾಯೇಲ್‌ ಜನಾಂಗದ ಮುಂದೆ ಈ ಆಯ್ಕೆಯನ್ನು ಇಟ್ಟಿದ್ದನು: “ನಾನು ಜೀವಶುಭಗಳನ್ನೂ ಮರಣಾಶುಭಗಳನ್ನೂ ಈಗ ನಿಮ್ಮ ಮುಂದೆ ಇಟ್ಟಿದ್ದೇನೆ.” (ಧರ್ಮೋಪದೇಶಕಾಂಡ 30:15, 16) ಬೇತೇಲಿನ ಇತಿಹಾಸದ ಕುರಿತು ಮನನ ಮಾಡುವುದು, ನಾವು “ಕೆಡುಕನ ಮನೆ”ಯಲ್ಲಿರುವ ಬದಲು, ಸತ್ಯಾರಾಧನೆಯ ಒಂದು ಸ್ಥಳವಾದ “ದೇವರ ಮನೆ”ಯಲ್ಲಿ ಆಶ್ರಯವನ್ನು ಪಡೆದುಕೊಳ್ಳುವುದಕ್ಕೆ ಉತ್ತೇಜನ ನೀಡುವುದು.

[ಪಾದಟಿಪ್ಪಣಿ]

a ಯಾಕೋಬ ಮತ್ತು ಅಬ್ರಹಾಮನು ಸಿದ್ಧಮನಸ್ಸಿನಿಂದ ದಶಮಾಂಶವನ್ನು ಕೊಟ್ಟರು.

[ಪುಟ 23 ರಲ್ಲಿರುವ ಚಿತ್ರ]

ಬೇತೇಲಿನ ಸ್ಥಳದ ಅವಶೇಷಗಳು—ಇಲ್ಲಿಯೇ ಯಾರೊಬ್ಬಾಮನು ಬಸವನ ಆರಾಧನೆಗಾಗಿ ಕೇಂದ್ರವೊಂದನ್ನು ಸ್ಥಾಪಿಸಿದನು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ