ವಾಚಕರಿಂದ ಪ್ರಶ್ನೆಗಳು
ಯೆಹೋವನ ಸಾಕ್ಷಿಗಳಲ್ಲಿ ಅನೇಕರು ತಮ್ಮ ವಿವಾಹದ ವಾರ್ಷಿಕೋತ್ಸವವನ್ನು ಆಚರಿಸುತ್ತಾರೆ. ಜನ್ಮದಿನವು, ನೀವು ಹುಟ್ಟಿದ ಸಮಯದ ಒಂದು ವಾರ್ಷಿಕೋತ್ಸವವಾಗಿದೆ. ಆದುದರಿಂದ ವಿವಾಹದ ವಾರ್ಷಿಕೋತ್ಸವಗಳನ್ನು ಆಚರಿಸಬಹುದಾದರೆ, ಜನ್ಮದಿನಗಳನ್ನು ಏಕೆ ಆಚರಿಸಬಾರದು?
ನೇರವಾಗಿ ಹೇಳುವುದಾದರೆ, ಒಬ್ಬ ಕ್ರೈಸ್ತನಿಗೆ ಎರಡನ್ನೂ ಆಚರಿಸುವ ಅಗತ್ಯವಿಲ್ಲ. ಆದರೂ, ಅವು ಅರ್ಥದಲ್ಲಿ ಸಮಾನವಾಗಿವೆ ಎಂದೂ, ಇಲ್ಲವೆ ಕ್ರೈಸ್ತರು ಜನ್ಮದಿನಗಳನ್ನು ವಿವಾಹದ ವಾರ್ಷಿಕೋತ್ಸವಗಳಂತೆಯೇ ವೀಕ್ಷಿಸಬೇಕೆಂಬುದನ್ನೂ ಅದು ಅರ್ಥೈಸುವುದಿಲ್ಲ.
ಎರಡೂ ವಾರ್ಷಿಕೋತ್ಸವಗಳಾಗಿವೆ ಎಂದು ಹೇಳಸಾಧ್ಯವಿದೆ, ಏಕೆಂದರೆ ಒಂದು “ವಾರ್ಷಿಕೋತ್ಸವ”ವು ‘ಯಾವುದೊ ಘಟನೆಯನ್ನು ಗುರುತಿಸುವ ಒಂದು ತಾರೀಖಿನ ವಾರ್ಷಿಕ ಪುನರಾವರ್ತನೆ’ ಆಗಿದೆ. ಅದು ಯಾವುದೇ ಘಟನೆಯ—ನಿಮಗೊಂದು ವಾಹನ ಅಪಘಾತವಾದ ದಿನ, ಚಂದ್ರಗ್ರಹಣವನ್ನು ನೋಡಿದ ದಿನ, ನಿಮ್ಮ ಕುಟುಂಬದೊಂದಿಗೆ ಈಜಾಡಲು ಹೋದ ದಿನ ಮತ್ತು ಇತ್ಯಾದಿಯ—ವಾರ್ಷಿಕೋತ್ಸವ ಆಗಿರಸಾಧ್ಯವಿದೆ. ಕ್ರೈಸ್ತರು ಪ್ರತಿಯೊಂದು “ವಾರ್ಷಿಕೋತ್ಸವ”ವನ್ನು ಒಂದು ವಿಶೇಷ ದಿನವನ್ನಾಗಿ ವೀಕ್ಷಿಸುವುದಿಲ್ಲ ಇಲ್ಲವೆ ಅದನ್ನು ಆಚರಿಸಲಿಕ್ಕಾಗಿ ಪಾರ್ಟಿಯನ್ನು ಏರ್ಪಡಿಸುವುದಿಲ್ಲವೆಂಬುದು ಸ್ಪಷ್ಟ. ಒಂದು ಸಂದರ್ಭದ ಅಂಶಗಳನ್ನು ಪರಿಗಣಿಸಿ, ಯಾವುದು ತಕ್ಕದ್ದಾಗಿದೆ ಎಂಬುದನ್ನು ಒಬ್ಬನು ನಿರ್ಧರಿಸಬೇಕು.
ಉದಾಹರಣೆಗೆ, ತನ್ನ ದೇವದೂತನು ಐಗುಪ್ತದಲ್ಲಿರುವ ಇಸ್ರಾಯೇಲ್ಯರ ಮನೆಗಳನ್ನು ಹಾದುಹೋದದ್ದನ್ನು ಮತ್ತು ತರುವಾಯ ಸಾ.ಶ.ಪೂ. 1513ರಲ್ಲಿ ಇಸ್ರಾಯೇಲ್ಯರು ಐಗುಪ್ತವನ್ನು ಬಿಟ್ಟುಹೋದದ್ದನ್ನು ಆಚರಿಸುವಂತೆ, ದೇವರು ಅವರಿಗೆ ವಿಶೇಷವಾದ ಆಜ್ಞೆಯನ್ನು ಕೊಟ್ಟನು. (ವಿಮೋಚನಕಾಂಡ 12:14) ಯೇಸುವನ್ನು ಸೇರಿಸಿ, ಯೆಹೂದ್ಯರು ತದನಂತರ ವಾರ್ಷಿಕವಾಗಿ ಆ ಘಟನೆಯನ್ನು ಆಚರಿಸುತ್ತಿದ್ದಾಗ, ಅವರದನ್ನು ದೇವರ ನಿರ್ದೇಶನಕ್ಕೆ ವಿಧೇಯತೆಯಲ್ಲಿ ಮಾಡುತ್ತಿದ್ದರು. ಅವರು ಅದನ್ನು ಒಂದು ಪಾರ್ಟಿ ಇಲ್ಲವೆ ಕೊಡುಗೆಗಳನ್ನು ಕೊಡುವ ಮೂಲಕ ಆಚರಿಸಲಿಲ್ಲ. ಯೆಹೂದ್ಯರು, ದೇವಾಲಯದ ಪುನರ್ಪ್ರತಿಷ್ಠಾಪನೆಯನ್ನೂ ಒಂದು ವಿಶೇಷ ವಾರ್ಷಿಕೋತ್ಸವವಾಗಿ ಪರಿಗಣಿಸಿದರು. ಈ ಐತಿಹಾಸಿಕ ಘಟನೆಯ ಕುರಿತು ಬೈಬಲಿನಲ್ಲಿ ಆಜ್ಞಾಪಿಸಲ್ಪಟ್ಟಿರದಿದ್ದರೂ, ಯೇಸು ಅದನ್ನು ಟೀಕಿಸಲಿಲ್ಲವೆಂದು ಯೋಹಾನ 10:22, 23 ಸೂಚಿಸುತ್ತದೆ. ಕೊನೆಯಲ್ಲಿ, ಕ್ರೈಸ್ತರಿಗೆ ಯೇಸುವಿನ ಮರಣದ ವಾರ್ಷಿಕೋತ್ಸವದಂದು ಒಂದು ವಿಶೇಷ ಕೂಟವಿದೆ. ಅದನ್ನು ಅವರು, ದೇವರ ವಾಕ್ಯದಲ್ಲಿರುವ ಒಂದು ಸ್ಪಷ್ಟವಾದ ಆಜ್ಞೆಗೆ ವಿಧೇಯತೆಯಲ್ಲಿ ಮಾಡುತ್ತಾರೆ.—ಲೂಕ 22:19, 20.
ವಿವಾಹ ವಾರ್ಷಿಕೋತ್ಸವಗಳ ಕುರಿತೇನು? ಕೆಲವು ದೇಶಗಳಲ್ಲಿ ಗಂಡಹೆಂಡಿರು, ದೇವರು ಆರಂಭಿಸಿದಂತಹ ಒಂದು ಏರ್ಪಾಡಾದ ವಿವಾಹದ ಸ್ಥಿತಿಯನ್ನು ಪ್ರವೇಶಿಸಿದಂತಹ ಸಂದರ್ಭದ ವಾರ್ಷಿಕೋತ್ಸವವನ್ನು ಆಚರಿಸುವುದು ಒಂದು ಸಾಮಾನ್ಯ ವಿಷಯವಾಗಿದೆ. (ಆದಿಕಾಂಡ 2:18-24; ಮತ್ತಾಯ 19:4-6) ನಿಶ್ಚಯವಾಗಿಯೂ, ಬೈಬಲು ವಿವಾಹದ ಕುರಿತು ನಕಾರಾತ್ಮಕವಾಗಿ ಮಾತಾಡುವುದಿಲ್ಲ. ಯೇಸು ಕೂಡ ಒಂದು ವಿವಾಹದ ಆಚರಣೆಗೆ ಹಾಜರಾಗಿ ಆ ಸಂದರ್ಭದ ಆನಂದವನ್ನು ಹೆಚ್ಚಿಸಿದನು.—ಯೋಹಾನ 2:1-11.
ಆದಕಾರಣ, ದಂಪತಿಗಳು ತಮ್ಮ ವಿವಾಹದ ವಾರ್ಷಿಕೋತ್ಸವದಂದು, ಆ ಸಂದರ್ಭದ ಹರ್ಷದ ಕುರಿತು ಪುನರಾಲೋಚಿಸಲಿಕ್ಕಾಗಿ ಮತ್ತು ದಂಪತಿಗಳೋಪಾದಿ ಯಶಸ್ಸಿಗಾಗಿ ಕೆಲಸಮಾಡುವ ತಮ್ಮ ನಿರ್ಧಾರವನ್ನು ಬಲಗೊಳಿಸಲಿಕ್ಕಾಗಿ ಸಮಯವನ್ನು ತೆಗೆದುಕೊಳ್ಳುವುದು ಒಂದು ವಿಚಿತ್ರವಾದ ಸಂಗತಿಯಲ್ಲ. ಅವರು ಈ ಸಂತೋಷದ ಸಂದರ್ಭವನ್ನು ಖಾಸಗಿಯಾಗಿ, ಕೇವಲ ಇಬ್ಬರೇ ಇಲ್ಲವೆ ಕೆಲವು ಸಂಬಂಧಿಕರು ಅಥವಾ ಆಪ್ತ ಮಿತ್ರರೊಂದಿಗೆ ಆಚರಿಸುವರೊ ಎಂಬುದನ್ನು ಅವರೇ ನಿರ್ಣಯಿಸುವರು. ಆ ಸಂದರ್ಭವು, ಒಂದು ದೊಡ್ಡ, ಅನಿಯಂತ್ರಿತ ಸಾಮಾಜಿಕ ಗೋಷ್ಠಿಗೆ ನೆವವಾಗಬಾರದು. ಆ ಸಂದರ್ಭದಂದು ಕ್ರೈಸ್ತರು, ತಮ್ಮ ದೈನಂದಿನ ಜೀವಿತದಲ್ಲಿ ಅನ್ವಯವಾಗುವಂತಹ ಮೂಲತತ್ವಗಳಿಂದ ಮಾರ್ಗದರ್ಶಿಸಲ್ಪಡಬೇಕು. ಆದುದರಿಂದ, ಒಬ್ಬನು ಒಂದು ವಿವಾಹದ ವಾರ್ಷಿಕೋತ್ಸವವನ್ನು ಆಚರಿಸುವನೊ ಇಲ್ಲವೊ ಎಂಬುದು ಒಂದು ವೈಯಕ್ತಿಕ ವಿಷಯವಾಗಿದೆ.—ರೋಮಾಪುರ 13:13, 14.
ಆದರೆ, ಜನ್ಮದಿನಕ್ಕೆ ವಿಶೇಷ ಗಮನಸಲ್ಲಿಸುವುದರ ಕುರಿತೇನು? ಅಂತಹ ಒಂದು ವಾರ್ಷಿಕೋತ್ಸವದ ಬಗ್ಗೆ ಬೈಬಲು ಏನನ್ನಾದರೂ ತಿಳಿಸುತ್ತದೋ?
ಈ ಶತಮಾನದ ಆದಿಭಾಗದಲ್ಲಿ, ನಮ್ಮ ಆತ್ಮಿಕ ಸಹೋದರ ಸಹೋದರಿಯರು, ಜನ್ಮದಿನಗಳನ್ನು ಆಚರಿಸುತ್ತಿದ್ದರು. ಅವರಲ್ಲಿ ಅನೇಕರು, ಪ್ರತಿನಿತ್ಯವೂ ಸ್ವರ್ಗೀಯ ಮನ್ನ (ಇಂಗ್ಲಿಷ್) ಎಂಬುದಾಗಿ ಕರೆಯಲ್ಪಟ್ಟ ಚಿಕ್ಕ ಪುಸ್ತಕಗಳನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಿದ್ದರು. ಇವುಗಳಲ್ಲಿ ಪ್ರತಿದಿನಕ್ಕಾಗಿ ಒಂದು ಬೈಬಲ್ ವಚನವಿರುತ್ತಿತ್ತು ಮತ್ತು ಅನೇಕ ಕ್ರೈಸ್ತರು, ಜೊತೆ ಬೈಬಲ್ ವಿದ್ಯಾರ್ಥಿಗಳ ಜನ್ಮದಿನಗಳನ್ನು ಗುರುತಿಸುತ್ತಾ, ಅವರ ಪುಟ್ಟ ಛಾಯಾಚಿತ್ರಗಳನ್ನು ಆ ಪುಟಗಳಲ್ಲಿ ಇಡುತ್ತಿದ್ದರು. ಅಲ್ಲದೆ, 1909, ಫೆಬ್ರವರಿ 15ರ ವಾಚ್ಟವರ್ ಪತ್ರಿಕೆಯು ತಿಳಿಸಿದ್ದೇನೆಂದರೆ, ಫ್ಲಾರಿಡದ ಜ್ಯಾಕ್ಸನ್ವಿಲ್ಲ್ನಲ್ಲಿ ನಡೆದ ಒಂದು ಅಧಿವೇಶನದಲ್ಲಿ, ಸಹೋದರ ರಸ್ಸಲ್ರನ್ನು ವೇದಿಕೆಯ ಮೇಲೆ ಬರಮಾಡಲಾಯಿತು. ಏಕೆ? ಜನ್ಮದಿನದ ಸರ್ಪ್ರೈಸ್ ಕೊಡುಗೆಯಾಗಿ ಅವರಿಗೆ, ಗ್ರೇಪ್ಫ್ರೂಟ್ಸ್, ಅನಾನಾಸು ಮತ್ತು ಕಿತ್ತಳೆ ಹಣ್ಣುಗಳ ಕೆಲವು ಪೆಟ್ಟಿಗೆಗಳನ್ನು ಕೊಡಲಾಯಿತು. ಇದು ನಮಗೆ ಹಿಂದಿನ ರೂಢಿಗಳ ಒಂದು ನಸುನೋಟವನ್ನು ಕೊಡುತ್ತದೆ. ಆ ಸಮಯಾವಧಿಯಲ್ಲಿ, ಬೈಬಲ್ ವಿದ್ಯಾರ್ಥಿಗಳು ಡಿಸೆಂಬರ್ 25ನ್ನು ಯೇಸುವಿನ ಜನನದ ವಾರ್ಷಿಕೋತ್ಸವವಾಗಿ ಇಲ್ಲವೆ ಅವನ ಜನ್ಮದಿನವಾಗಿ ಆಚರಿಸುತ್ತಿದ್ದರೆಂಬುದನ್ನು ಜ್ಞಾಪಿಸಿಕೊಳ್ಳಿರಿ. ಬ್ರೂಕ್ಲಿನ್ ಮುಖ್ಯಕಾರ್ಯಾಲಯದಲ್ಲಿ ಕ್ರಿಸ್ಮಸ್ ಭೋಜನವನ್ನೂ ಏರ್ಪಡಿಸುವುದು ರೂಢಿಯಾಗಿತ್ತು.
ನಿಶ್ಚಯವಾಗಿಯೂ, ಆ ಸಮಯದಂದಿನಿಂದ ದೇವರ ಜನರು ಅನೇಕ ವಿಧಗಳಲ್ಲಿ ಆತ್ಮಿಕವಾಗಿ ಬೆಳೆದಿದ್ದಾರೆ. 1920ಗಳಲ್ಲಿ, ಸತ್ಯದ ಹೆಚ್ಚಿನ ಬೆಳಕು, ಈ ಮುಂದಿನ ವಿಷಯಗಳನ್ನು ಅವರು ಕಾಣುವಂತೆ ಶಕ್ತಗೊಳಿಸಿತು:
ಯೇಸು, ವಿಧರ್ಮಿ ಮತಕ್ಕೆ ಸಂಬಂಧಿಸಲ್ಪಟ್ಟಿರುವ ಒಂದು ದಿನಾಂಕವಾದ, ಡಿಸೆಂಬರ್ 25ರಂದು ಜನಿಸಲಿಲ್ಲ. ಬೈಬಲು, ಯೇಸುವಿನ ಇಲ್ಲವೆ ಬೇರೆ ಯಾವುದೇ ವ್ಯಕ್ತಿಯ ಜನನದ ವಾರ್ಷಿಕೋತ್ಸವವನ್ನಲ್ಲ, ಬದಲಾಗಿ ಕೇವಲ ಯೇಸುವಿನ ಮರಣದ ದಿನಾಂಕವನ್ನು ಆಚರಿಸುವಂತೆ ನಮ್ಮನ್ನು ನಿರ್ದೇಶಿಸುತ್ತದೆ. ಹಾಗೆ ಮಾಡುವುದು, ಪ್ರಸಂಗಿ 7:1ರಲ್ಲಿರುವ ವಿಷಯದೊಂದಿಗೆ ಹೊಂದಿಕೆಯಲ್ಲಿದೆ. ಅಲ್ಲದೆ, ಒಬ್ಬ ನಂಬಿಗಸ್ತ ವ್ಯಕ್ತಿಯ ಜನನದ ದಿನಕ್ಕಿಂತಲೂ ಅವನ ಜೀವಿತವು ಕೊನೆಗೆ ಹೇಗೆ ಪರಿಣಮಿಸುತ್ತದೆಂಬುದು ಹೆಚ್ಚು ಪ್ರಾಮುಖ್ಯವಾಗಿದೆ ಎಂಬ ನಿಜತ್ವಕ್ಕೂ ಅನುಗುಣವಾಗಿದೆ. ಯಾವನೇ ನಂಬಿಗಸ್ತ ಸೇವಕನು ತನ್ನ ಜನ್ಮದಿನವನ್ನು ಆಚರಿಸಿದನೆಂಬ ಯಾವುದೇ ದಾಖಲೆ ಬೈಬಲಿನಲ್ಲಿಲ್ಲ. ಅದು ವಿಧರ್ಮಿಗಳ ಜನ್ಮದಿನಾಚರಣೆಗಳನ್ನು ಮಾತ್ರ ವರದಿಸುತ್ತಾ, ಅವುಗಳನ್ನು ಕ್ರೂರವಾದ ಕೃತ್ಯಗಳೊಂದಿಗೆ ಜೋಡಿಸುತ್ತದೆ. ಆ ಜನ್ಮದಿನ ವಾರ್ಷಿಕೋತ್ಸವಗಳ ಹಿನ್ನಲೆಯನ್ನು ನಾವು ಪರೀಕ್ಷಿಸೋಣ.
ಮೊದಲನೆಯದ್ದು, ಯೋಸೇಫನ ದಿನದಲ್ಲಿ ಫರೋಹನ ಜನ್ಮದಿನವಾಗಿತ್ತು. (ಆದಿಕಾಂಡ 40:20-23) ಈ ಸಂಬಂಧದಲ್ಲಿ, ಹೇಸ್ಟಿಂಗ್ಸ್ರ ಧರ್ಮ ಮತ್ತು ನೀತಿತತ್ವಗಳ ವಿಶ್ವಕೋಶ (ಇಂಗ್ಲಿಷ್) ಪುಸ್ತಕದಲ್ಲಿ ಜನ್ಮದಿನಗಳ ಕುರಿತಾದ ಲೇಖನವು ಹೀಗೆ ಆರಂಭಿಸುತ್ತದೆ: “ಜನ್ಮದಿನವನ್ನು ಆಚರಿಸುವ ಪದ್ಧತಿಯು, ಸಮಯವನ್ನು ಲೆಕ್ಕಮಾಡುವುದರೊಂದಿಗೆ ಮತ್ತು ಅದರ ತಾತ್ಪರ್ಯವು, ನಿರ್ದಿಷ್ಟ ಹಳೆಕಾಲದ ಧಾರ್ಮಿಕ ಮೂಲತತ್ವಗಳೊಂದಿಗೆ ಸಂಬಂಧಿಸಿದೆ.” ತದನಂತರ ಆ ವಿಶ್ವಕೋಶವು, ಹೀಗೆ ಬರೆದ ಈಜಿಪ್ಟ್ ಶಾಸ್ತ್ರಜ್ಞರಾದ ಶ್ರೀಮಾನ್ ಜೆ. ಗಾರ್ಡ್ನ್ರ್ ವಿಲ್ಕಿನ್ಸನ್ರನ್ನು ಉಲ್ಲೇಖಿಸುತ್ತದೆ: “ಈಜಿಪ್ಟ್ನ ಪ್ರತಿಯೊಬ್ಬ ವ್ಯಕ್ತಿಯು ಆ ದಿನಕ್ಕೆ, ಮತ್ತು ತನ್ನ ಜನನದ ಗಳಿಗೆಗೂ ತುಂಬ ಮಹತ್ವವನ್ನು ಕೊಟ್ಟನು; ಮತ್ತು ಪರ್ಷಿಯದಲ್ಲಿದ್ದಂತೆ, ಪ್ರತಿಯೊಬ್ಬ ವ್ಯಕ್ತಿಯು, ತನ್ನ ಜನ್ಮದಿನವನ್ನು ಭಾರಿ ಸಂತೋಷದೊಂದಿಗೆ, ಸಮಾಜದ ಎಲ್ಲ ವಿಧದ ಮನೋರಂಜನೆಯೊಂದಿಗೆ ತನ್ನ ಸ್ನೇಹಿತರನ್ನು ಸ್ವಾಗತಿಸುತ್ತಾ, ವಿಶೇಷವಾದ ರಸಭಕ್ಷ್ಯಗಳೊಂದಿಗೆ ಆಚರಿಸುತ್ತಿದ್ದನೆಂಬುದು ಸಂಭಾವ್ಯ.”
ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಇನ್ನೊಂದು ಜನ್ಮದಿನದ ಆಚರಣೆಯು, ಹೆರೋದನದ್ದು. ಆ ಸಂದರ್ಭದಲ್ಲಿ ಸ್ನಾನಿಕನಾದ ಯೋಹಾನನ ಶಿರಚ್ಛೇದನ ಮಾಡಲಾಯಿತು. (ಮತ್ತಾಯ 14:6-10) ದ ಇಂಟರ್ನ್ಯಾಷನಲ್ ಸ್ಟ್ಯಾಂಡರ್ಡ್ ಬೈಬಲ್ ಎನ್ಸೈಕ್ಲೊಪೀಡಿಯ (1979ರ ಆವೃತ್ತಿ) ಈ ಒಳನೋಟವನ್ನು ಕೊಡುತ್ತದೆ: “ಗ್ರೀಕೀಕರಣದ ಮುಂಚೆ ಗ್ರೀಕರು, ದೇವರುಗಳು ಮತ್ತು ಪ್ರತಿಷ್ಠಿತ ವ್ಯಕ್ತಿಗಳ ಜನ್ಮದಿನಗಳನ್ನು ಆಚರಿಸಿದರು. ಗ್ರೀಕ್ ಜೆನೆತ್ಲಿಯಾ ಈ ಆಚರಣೆಗಳನ್ನು ಸೂಚಿಸಿತು. ಜೆನೆಸ್ಯಾದ ಅರ್ಥವು, ಮೃತನಾಗಿರುವ ಪ್ರಮುಖ ವ್ಯಕ್ತಿಯೊಬ್ಬನ ಜನ್ಮದಿನದ ಸ್ಮರಣೆಯಲ್ಲಿ ಒಂದು ಆಚರಣೆ ಎಂದಾಗಿತ್ತು. 2 ಮೆಕಬ್ಬೀಸ್ 6:7ರಲ್ಲಿ, ಅಂತಿಯೋಕ IVರ ಮಾಸಿಕ ಜೆನೆತ್ಲಿಯ ಕುರಿತಾಗಿ ಒಂದು ಉಲ್ಲೇಖವಿದೆ. ಆ ಸಂದರ್ಭದಲ್ಲಿ ಯೆಹೂದ್ಯರು ‘ಬಲಿಗಳಲ್ಲಿ ಪಾಲ್ಗೊಳ್ಳುವಂತೆ’ ಒತ್ತಾಯಿಸಲ್ಪಡುತ್ತಿದ್ದರು. . . . ಹೆರೋದನು ತನ್ನ ಜನ್ಮದಿನವನ್ನು ಆಚರಿಸುತ್ತಿದ್ದಾಗ, ಅವನು ಅದನ್ನು ಗ್ರೀಕ್ ಸಂಸ್ಕೃತಿಯ ಪದ್ಧತಿಗನುಸಾರ ಮಾಡುತ್ತಿದ್ದನು; ಗ್ರೀಕೀಕರಣದ ಮುಂಚಿನ ಸಮಯಗಳಲ್ಲಿ, ಇಸ್ರಾಯೇಲಿನಲ್ಲಿ ಜನ್ಮದಿನಗಳ ಆಚರಣೆಯ ಕುರಿತು ಯಾವುದೇ ರುಜುವಾತು ಇಲ್ಲ.”
ನಿಜ ಕ್ರೈಸ್ತರು ಇಂದು, ಪ್ರತಿಯೊಂದು ಆಚರಣೆ ಅಥವಾ ಪದ್ಧತಿಯ ಮೂಲಗಳು ಮತ್ತು ಸಂಭಾವ್ಯ ಪ್ರಾಚೀನ ಧಾರ್ಮಿಕ ಸಂಬಂಧಗಳ ಕುರಿತು ಹೆಚ್ಚು ಚಿಂತಿತರಾಗಿರುವುದಿಲ್ಲ. ಆದರೆ ದೇವರ ವಾಕ್ಯದಲ್ಲಿರುವಂತಹ ಸ್ಪಷ್ಟವಾದ ನಿರ್ದೇಶನಗಳನ್ನು ಅಲಕ್ಷಿಸುವ ಪ್ರವೃತ್ತಿಯೂ ಅವರಿಗಿಲ್ಲ. ಬೈಬಲ್ ದಾಖಲೆಯಲ್ಲಿ ತಿಳಿಸಲ್ಪಟ್ಟಿರುವ ಜನ್ಮದಿನದ ಆಚರಣೆಗಳು ವಿಧರ್ಮಿಗಳದ್ದಾಗಿವೆ ಮತ್ತು ಅವು ಕ್ರೂರ ಕೃತ್ಯಗಳಿಗೆ ಸಂಬಂಧಿಸಲ್ಪಟ್ಟಿದ್ದವುಗಳಾಗಿವೆ. ಹೀಗಿರುವುದರಿಂದ, ಶಾಸ್ತ್ರಗಳು ಜನ್ಮದಿನದ ಆಚರಣೆಗಳ ಕುರಿತು ನಕಾರಾತ್ಮಕವಾಗಿ ಮಾತಾಡುತ್ತವೆ. ಇದು ಪ್ರಾಮಾಣಿಕ ಕ್ರೈಸ್ತರು ಕಡೆಗಣಿಸಲಾರದ ವಾಸ್ತವಾಂಶವಾಗಿದೆ.
ಆದುದರಿಂದ, ಕ್ರೈಸ್ತರು ತಮ್ಮ ವಿವಾಹದ ವಾರ್ಷಿಕೋತ್ಸವಕ್ಕೆ ವಿಶೇಷ ಗಮನಸಲ್ಲಿಸಲು ಆರಿಸಿಕೊಳ್ಳುವುದು, ಸಂಪೂರ್ಣವಾಗಿ ಒಂದು ವೈಯಕ್ತಿಕ ವಿಷಯವಾಗಿದೆ. ಆದಾಗಲೂ, ಪ್ರೌಢ ಕ್ರೈಸ್ತರು ಜನ್ಮದಿನಾಚರಣೆಗಳನ್ನು ಆಚರಿಸದಿರಲು ಸಕಾರಣಗಳಿವೆ.