ಶಾಂತಚಿತ್ತರಾಗಿ ಸಮಸ್ಯೆಗಳನ್ನು ಬಗೆಹರಿಸುವ ವಿಧ
ಮಾನವನ ಹಿಂಸಾಚಾರವು ಮನುಕುಲದಷ್ಟೇ ಪುರಾತನವಾದದ್ದಾಗಿದೆ. ಹಿಂಸಾಚಾರವು, ಹೇಬೆಲನ ಅಣ್ಣನೂ ಪ್ರಥಮ ಮಾನವ ದಂಪತಿಗಳ ಹಿರಿಯ ಮಗನೂ ಆದ ಕಾಯಿನನಿಂದ ಆರಂಭವಾಯಿತೆಂದು ಬೈಬಲ್ ಹೇಳುತ್ತದೆ. ದೇವರು ತನ್ನ ಯಜ್ಞಕ್ಕಿಂತ ಹೆಚ್ಚಾಗಿ ಹೇಬೆಲನ ಯಜ್ಞವನ್ನು ಮೆಚ್ಚಿದಾಗ, ಕಾಯಿನನು “ಬಹು ಕೋಪಗೊಂಡನು.” ಅವನು ಆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಿದನು? “ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.” ತದನಂತರ, ಅವನು ದೇವರೊಂದಿಗೆ ಒಂದು ದೊಡ್ಡ ಸಮಸ್ಯೆಯಲ್ಲಿ ಸಿಕ್ಕಿಕೊಂಡನು. (ಆದಿಕಾಂಡ 4:5, 8-12) ಕಾಯಿನನಿಗೆ ಸೃಷ್ಟಿಕರ್ತನ ಮುಂದಿದ್ದ ಕೆಟ್ಟ ನಿಲುವಿನ ಸಮಸ್ಯೆಯು, ಅವನ ಹಿಂಸಾಚಾರದ ಕೃತ್ಯದಿಂದ ಬಗೆಹರಿಯಲಿಲ್ಲ.
ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ದೈಹಿಕ ಬಲಪ್ರಯೋಗವನ್ನು ಮಾಡುವ ಕಾಯಿನನ ಮಾರ್ಗಕ್ರಮದಿಂದ ನಾವು ಹೇಗೆ ದೂರವಿರಸಾಧ್ಯವಿದೆ?
ಹಿಂಸಾಚಾರದಿಂದ ಸಹಿಷ್ಣುತೆಗೆ
ಪ್ರಥಮ ಕ್ರೈಸ್ತ ಹುತಾತ್ಮನಾದ ಸ್ತೆಫನನ ಕೊಲೆಯನ್ನು ಬೆಂಬಲಿಸುತ್ತಾ ನಿಂತು ನೋಡುತ್ತಿದ್ದ ಒಬ್ಬ ಮನುಷ್ಯನನ್ನು ಪರಿಗಣಿಸಿರಿ. (ಅ. ಕೃತ್ಯಗಳು 7:58; 8:1) ಆ ಮನುಷ್ಯನು ತಾರ್ಸದ ಸೌಲನಾಗಿದ್ದನು. ಅವನು ಸ್ತೆಫನನ ಧಾರ್ಮಿಕ ನಿಲುವನ್ನು ಸಮ್ಮತಿಸಲಿಲ್ಲ ಮತ್ತು ಸ್ತೆಫನನ ಚಟುವಟಿಕೆಗಳನ್ನು ನಿಲ್ಲಿಸಲು ಈ ರೀತಿಯಲ್ಲಿ ಭೀಕರವಾಗಿ ಕೊಲ್ಲುವುದೇ ನ್ಯಾಯಯುತ ಮಾರ್ಗವೆಂದು ಅದನ್ನು ಬೆಂಬಲಿಸಿದನು. ಸೌಲನು ತನ್ನ ಜೀವನದಲ್ಲಿ ಯಾವಾಗಲೂ ಹಿಂಸಾತ್ಮಕನಾಗಿದ್ದಿರಲಿಕ್ಕಿಲ್ಲ ಎಂಬುದು ಒಪ್ಪತಕ್ಕ ವಿಷಯವೇ. ಆದರೂ, ಹಿಂಸಾಚಾರವೇ ಸಮಸ್ಯೆಗಳನ್ನು ಬಗೆಹರಿಸುವ ಒಂದು ಮಾರ್ಗವಾಗಿದೆ ಎಂಬುದನ್ನು ಅಂಗೀಕರಿಸಲು ಅವನು ಸಿದ್ಧನಿದ್ದನು. ಸ್ತೆಫನನ ಮರಣದ ನಂತರ, ಸೌಲನು “[ಕ್ರೈಸ್ತ] ಸಭೆಯೊಂದಿಗೆ ದೌರ್ಜನ್ಯದಿಂದ ವ್ಯವಹರಿಸಲು ಆರಂಭಿಸಿದನು. ಒಂದರ ನಂತರ ಇನ್ನೊಂದು ಮನೆಯನ್ನು ಆಕ್ರಮಿಸುತ್ತಾ, ಅವನು ಸ್ತ್ರೀಪುರುಷರನ್ನು ಹೊರಗೆಳೆದು, ಅವರನ್ನು ಸೆರೆಮನೆಗೆ ಒಪ್ಪಿಸುತ್ತಿದ್ದನು.”—ಅ. ಕೃತ್ಯಗಳು 8:3.
ಬೈಬಲ್ ವಿದ್ವಾಂಸ ಆ್ಯಲ್ಬರ್ಟ್ ಬಾರ್ನ್ಸ್ರವರಿಗನುಸಾರ, ‘ದೌರ್ಜನ್ಯದಿಂದ ವ್ಯವಹರಿಸು’ ಎಂದು ಇಲ್ಲಿ ಭಾಷಾಂತರಿಸಲ್ಪಟ್ಟಿರುವ ಗ್ರೀಕ್ ಪದವು, ಸಿಂಹಗಳು ಮತ್ತು ನರಿಗಳು ಉಂಟುಮಾಡಬಲ್ಲ ವಿನಾಶವನ್ನು ಚಿತ್ರಿಸುತ್ತದೆ. “ಸೌಲನು ಒಂದು ಕಾಡು ಮೃಗದೋಪಾದಿ ಚರ್ಚಿನ ವಿರುದ್ಧವಾಗಿ ವ್ಯಗ್ರನಾಗಿ ಕ್ರಿಯೆಗೈದನು. ಇದೊಂದು ಬಲವಾದ ವಾಕ್ಸರಣಿಯಾಗಿದ್ದು, ಅವನು ಹಿಂಸಿಸುವುದರಲ್ಲಿ ತೋರಿಸಿದ ಹುರುಪು ಮತ್ತು ಕೋಪಾವೇಶವನ್ನು ಸೂಚಿಸುತ್ತದೆ.” ಕ್ರಿಸ್ತನ ಉಳಿದ ಹಿಂಬಾಲಕರನ್ನು ಹಿಡಿಯಲು ಸೌಲನು ದಮಸ್ಕಕ್ಕೆ ಹೋಗುತ್ತಿದ್ದಾಗ, ಅವನು ಆಗಲೂ “ಕರ್ತನ [ಕ್ರಿಸ್ತನ] ಶಿಷ್ಯರ ಮೇಲೆ ರೌದ್ರನಾಗಿದ್ದು ಬೆದರಿಕೆಯ ಮಾತುಗಳನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಆಶೆಪಡುತ್ತಾ” ಇದ್ದನು. ದಾರಿಯಲ್ಲಿ, ಪುನರುತ್ಥಿತ ಯೇಸು ಅವನೊಂದಿಗೆ ಮಾತಾಡಿದನು, ಮತ್ತು ಇದು ಸೌಲನು ಕ್ರೈಸ್ತತ್ವಕ್ಕೆ ಪರಿವರ್ತನೆಗೊಳ್ಳುವುದರಲ್ಲಿ ಫಲಿಸಿತು.—ಅ. ಕೃತ್ಯಗಳು 9:1-19.
ಸೌಲನು ಪರಿವರ್ತನೆಯಾದ ನಂತರ, ಇತರರೊಂದಿಗೆ ವ್ಯವಹರಿಸುವಂತಹ ಅವನ ರೀತಿಯಲ್ಲಿ ತುಂಬ ಬದಲಾವಣೆಯಾಯಿತು. ಸುಮಾರು 16 ವರ್ಷಗಳ ಬಳಿಕ ನಡೆದಂತಹ ಒಂದು ಘಟನೆಯು, ಆ ಬದಲಾವಣೆಯನ್ನು ತೋರಿಸಿತು. ಅಂತಿಯೋಕ್ಯದಲ್ಲಿನ ಅವನ ಸಭೆಗೆ ಜನರ ಒಂದು ಗುಂಪು ಬಂದು, ಅಲ್ಲಿದ್ದ ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರಕ್ಕೆ ಅನುಗುಣವಾಗಿ ನಡೆಯುವಂತೆ ಉತ್ತೇಜಿಸಿತು. ಅಲ್ಲಿ ‘ಮಹಾ ವಿವಾದವು’ ಉಂಟಾಯಿತು. ಇಷ್ಟರೊಳಗೆ ಪೌಲನೆಂದು ಜ್ಞಾತನಾಗಿದ್ದ ಸೌಲನು, ಆ ವಾಗ್ವಾದದಲ್ಲಿ ಪಕ್ಷ ವಹಿಸಿದನು. ಬಿಸಿ ಚರ್ಚೆ ನಡೆಯಿತೆಂಬುದು ಸುವ್ಯಕ್ತ. ಆದರೆ ಪೌಲನು ಹಿಂಸಾಚಾರಕ್ಕೆ ಇಳಿಯಲಿಲ್ಲ. ಇದಕ್ಕೆ ಬದಲಾಗಿ, ಯೆರೂಸಲೇಮಿನ ಸಭೆಯ ಅಪೊಸ್ತಲರಿಗೆ ಮತ್ತು ಹಿರಿಯರಿಗೆ ಈ ವಿಷಯವನ್ನು ತಿಳಿಸಲು ತನ್ನ ಸಭೆಯು ಮಾಡಿದ ನಿರ್ಣಯವನ್ನು ಅವನು ಒಪ್ಪಿಕೊಂಡನು.—ಅ. ಕೃತ್ಯಗಳು 15:1, 2.
ಯೆರೂಸಲೇಮಿನಲ್ಲಿ, ಹಿರಿಯರ ಕೂಟದಲ್ಲಿ ಪುನಃ “ಬಹು ವಿವಾದವು” ನಡೆಯಿತು. ‘ಗುಂಪುಕೂಡಿದವರೆಲ್ಲರೂ ಮೌನ’ರಾಗುವ ವರೆಗೆ ಪೌಲನು ಸುಮ್ಮನಿದ್ದು, ಅನಂತರ, ಸುನ್ನತಿಯಾಗದ ವಿಶ್ವಾಸಿಗಳ ನಡುವೆ ದೇವರ ಆತ್ಮದ ಅದ್ಭುತಕರ ಕೆಲಸದ ಕುರಿತು ವರದಿಯನ್ನು ಒಪ್ಪಿಸಿದನು. ಒಂದು ಶಾಸ್ತ್ರೀಯ ಚರ್ಚೆಯ ನಂತರ, ಅಪೊಸ್ತಲರು ಮತ್ತು ಯೆರೂಸಲೇಮಿನ ಹಿರಿಯರು ‘ಏಕಮನಸ್ಸಾಗಿ ತೀರ್ಮಾನಮಾಡಿದರು.’ ಅದೇನೆಂದರೆ, ಸುನ್ನತಿಯಾಗದ ವಿಶ್ವಾಸಿಗಳ ಮೇಲೆ ಅನಾವಶ್ಯಕವಾದ ಭಾರವನ್ನು ಹಾಕದೆ, “ವಿಗ್ರಹಕ್ಕೆ ನೈವೇದ್ಯಮಾಡಿದ್ದನ್ನೂ ರಕ್ತವನ್ನೂ ಕುತ್ತಿಗೆಹಿಸುಕಿ ಕೊಂದದ್ದನ್ನೂ ಹಾದರವನ್ನೂ ವಿಸರ್ಜಿ”ಸುವಂತೆ ಅವರಿಗೆ ಬುದ್ಧಿವಾದನೀಡುವುದಾಗಿತ್ತು. (ಅ. ಕೃತ್ಯಗಳು 15:3-29) ಖಂಡಿತವಾಗಿಯೂ ಪೌಲನು ಪರಿವರ್ತನೆಗೊಂಡಿದ್ದನು. ವಿವಾದಗಳನ್ನು ಹಿಂಸಾಚಾರವಿಲ್ಲದೆ ಬಗೆಹರಿಸಲು ಅವನು ಕಲಿತಿದ್ದನು.
ಹಿಂಸಾತ್ಮಕ ಪ್ರವೃತ್ತಿಗಳನ್ನು ನಿಭಾಯಿಸುವುದು
“ಕರ್ತನ ದಾಸನು ಜಗಳವಾಡದೆ ಎಲ್ಲರ ವಿಷಯದಲ್ಲಿ ಸಾಧುವೂ ಬೋಧಿಸುವುದರಲ್ಲಿ ಪ್ರವೀಣನೂ ಕೇಡನ್ನು ಸಹಿಸಿಕೊಳ್ಳುವವನೂ ಎದುರಿಸುವವರನ್ನು ನಿಧಾನದಿಂದ ತಿದ್ದುವವನೂ ಆಗಿರಬೇಕು” ಎಂದು ಪೌಲನು ಅನಂತರ ಬುದ್ಧಿವಾದ ನೀಡಿದನು. (2 ತಿಮೊಥೆಯ 2:24, 25) ಪೌಲನು ಒಬ್ಬ ಯುವ ಮೇಲ್ವಿಚಾರಕನಾಗಿದ್ದ ತಿಮೊಥೆಯನಿಗೆ, ಕಷ್ಟಕರ ಸನ್ನಿವೇಶಗಳನ್ನು ಶಾಂತಚಿತ್ತನಾಗಿ ನಿರ್ವಹಿಸುವಂತೆ ಉತ್ತೇಜಿಸಿದನು. ಪೌಲನು ವಾಸ್ತವಿಕವಾಗಿ ಯೋಚಿಸುತ್ತಿದ್ದನು. ಕ್ರೈಸ್ತರ ನಡುವೆಯೂ ಭಾವನೆಗಳು ಕೆರಳಬಲ್ಲವೆಂಬುದು ಅವನಿಗೆ ತಿಳಿದಿತ್ತು. (ಅ. ಕೃತ್ಯಗಳು 15:37-41) ಸಕಾರಣದೊಂದಿಗೆ ಅವನು ಸಲಹೆಯಿತ್ತದ್ದು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” (ಎಫೆಸ 4:26) ಅಂತಹ ಭಾವನೆಗಳೊಂದಿಗೆ ವ್ಯವಹರಿಸುವ ಸರಿಯಾದ ಮಾರ್ಗವು, ಅನಿಯಂತ್ರಿತ ರೋಷದಿಂದ ಕೆರಳದೆ, ಕೋಪವನ್ನು ನಿಯಂತ್ರಿಸಿಕೊಳ್ಳುವುದೇ ಆಗಿದೆ. ಆದರೆ ಇದನ್ನು ಹೇಗೆ ಮಾಡಸಾಧ್ಯವಿದೆ?
ಆದರೆ ಇಂದು, ಕೋಪವನ್ನು ನಿಯಂತ್ರಣದಲ್ಲಿಡುವುದು ಸುಲಭವಲ್ಲ. “ನೀಚನಾಗಿರುವುದು ಜನಪ್ರಿಯವಾಗಿದೆ” ಎಂದು ಸಾರ್ವಜನಿಕ ಆರೋಗ್ಯದ ಹಾವರ್ಡ್ ಶಾಲೆಯಲ್ಲಿ ಸಹಾಯಕ ಮುಖ್ಯಾಧಿಕಾರಿಣಿಯಾಗಿರುವ ಡಾ. ಡೆಬೊರಾ ಪ್ರಾತ್ರೊ-ಸ್ಟಿತ್ ಹೇಳಿದರು. “ವಾಸ್ತವದಲ್ಲಿ, ಹೊಂದಿಕೊಂಡು ಹೋಗಲಿಕ್ಕಾಗಿರುವ ಕೌಶಲಗಳು—ಸಂಧಾನಮಾಡಿಕೊಳ್ಳುವಿಕೆ, ರಾಜಿಮಾಡಿಕೊಳ್ಳುವಿಕೆ, ಅನುಭೂತಿ, ಕ್ಷಮೆ—ಸಾಮಾನ್ಯವಾಗಿ ಪುಕ್ಕಲು ಸ್ವಭಾವದ ಜನರಿಗೆಂದು ಹೇಳಲಾಗುತ್ತದೆ.” ಆದರೆ ಅವು ಪುರುಷಯೋಗ್ಯ ಗುಣಗಳಾಗಿವೆ, ಮತ್ತು ನಮ್ಮೊಳಗಿನಿಂದ ಹೊರಬರುವ ಹಿಂಸಾತ್ಮಕ ಪ್ರವೃತ್ತಿಗಳನ್ನು ನಿಯಂತ್ರಿಸುವುದರ ಕೀಲಿಕೈಯಾಗಿವೆ.
ಪೌಲನು ಒಬ್ಬ ಕ್ರೈಸ್ತನಾಗಿ ಪರಿಣಮಿಸಿದಾಗ, ಭಿನ್ನಾಭಿಪ್ರಾಯಗಳೊಂದಿಗೆ ವ್ಯವಹರಿಸಲು ಒಂದು ಉತ್ತಮ ವಿಧವನ್ನು ಕಲಿತುಕೊಂಡನು. ಅದು ಬೈಬಲಿನ ಬೋಧನೆಗಳ ಮೇಲೆ ಆಧಾರಿಸಲ್ಪಟ್ಟಿತು. ಯೆಹೂದ್ಯಮತದ ಒಬ್ಬ ಶಿಕ್ಷಿತ ವಿದ್ವಾಂಸನೋಪಾದಿ, ಪೌಲನು ಇಬ್ರಿಯ ಶಾಸ್ತ್ರಗಳೊಂದಿಗೆ ಪರಿಚಿತನಾಗಿದ್ದನು. ಅವನಿಗೆ ಈ ರೀತಿಯ ವಚನಗಳು ಗೊತ್ತಿದ್ದಿರಬಹುದು: “ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ.” “ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ; ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.” “ಆತ್ಮವನ್ನು ಸ್ವಾಧೀನಮಾಡಿಕೊಳ್ಳದವನು ಗೋಡೆ ಬಿದ್ದ ಹಾಳೂರಿಗೆ ಸಮಾನ.” (ಜ್ಞಾನೋಕ್ತಿ 3:31; 16:32; 25:28) ಆದರೂ ಈ ಜ್ಞಾನವು, ಪೌಲನು ಮತಾಂತರಗೊಳ್ಳುವ ಮುಂಚೆ, ಕ್ರೈಸ್ತರ ವಿರುದ್ಧ ಬಲಪ್ರಯೋಗವನ್ನು ಮಾಡುವುದರಿಂದ ಅವನನ್ನು ತಡೆಯಲಿಲ್ಲ. (ಗಲಾತ್ಯ 1:13, 14) ಆದರೆ ಪೌಲನು ಒಬ್ಬ ಕ್ರೈಸ್ತನಾದಾಗ, ಅವನು ವಾದಾಂಶಗಳನ್ನು ಬಲಪ್ರಯೋಗವಿಲ್ಲದೆ, ತರ್ಕವನ್ನು ಉಪಯೋಗಿಸುವುದರ ಮತ್ತು ಮನವೊಲಿಸುವುದರ ಮೂಲಕ ಬಗೆಹರಿಸುವಂತೆ ಮಾಡಿದಂತಹದ್ದು ಯಾವುದು?
ಹೀಗೆ ಹೇಳಿದಾಗ, ಪೌಲನು ನಮಗೆ ಅದರ ಗುಟ್ಟನ್ನು ತಿಳಿಸಿದನು: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.” (1 ಕೊರಿಂಥ 11:1) ಯೇಸು ಕ್ರಿಸ್ತನು ಅವನಿಗಾಗಿ ಮಾಡಿದಂತಹದ್ದೆಲ್ಲವನ್ನೂ ಪೌಲನು ಹೃದಯಪೂರ್ವಕವಾಗಿ ಗಣ್ಯಮಾಡಿದನು. (1 ತಿಮೊಥೆಯ 1:13, 14) ಕ್ರಿಸ್ತನು ಅವನ ಆದರ್ಶವ್ಯಕ್ತಿಯಾದನು. ಪಾಪಪೂರ್ಣ ಮಾನವಕುಲಕ್ಕೋಸ್ಕರ ಯೇಸು ಕಷ್ಟಾನುಭವಿಸಿದ್ದ ರೀತಿ ಅವನಿಗೆ ತಿಳಿದಿತ್ತು. (ಇಬ್ರಿಯ 2:18; 5:8-10) ಮೆಸ್ಸೀಯನ ಕುರಿತಾದ ಯೆಶಾಯನ ಈ ಪ್ರವಾದನೆಯು, ಯೇಸುವಿನಲ್ಲಿ ನೆರವೇರಿತ್ತೆಂದು ಪೌಲನು ದೃಢಪಡಿಸಸಾಧ್ಯವಿತ್ತು: “ಅವನು ಬಾಧೆಗೆ ಒಳಗಾಗಿ ತನ್ನನ್ನು ತಗ್ಗಿಸಿಕೊಂಡನು, ಬಾಯಿ ತೆರೆಯಲಿಲ್ಲ; ವಧ್ಯಸ್ಥಾನಕ್ಕೆ ಒಯ್ಯಲ್ಪಡುವ ಕುರಿಯಂತೆಯೂ ಉಣ್ಣೆ ಕತ್ತರಿಸುವವರ ಮುಂದೆ ಮೌನವಾಗಿರುವ ಕುರಿಯ ಹಾಗೂ ಇದ್ದನು, ಬಾಯಿ ತೆರೆಯಲೇ ಇಲ್ಲ.” (ಯೆಶಾಯ 53:7) ಅಪೊಸ್ತಲ ಪೇತ್ರನು ಬರೆದುದು: “ಬೈಯುವವರನ್ನು ಆತನು ಪ್ರತಿಯಾಗಿ ಬೈಯಲಿಲ್ಲ; ಆತನು ಬಾಧೆಯನ್ನನುಭವಿಸಿದಾಗ ಯಾರನ್ನೂ ಬೆದರಿಸದೆ ನ್ಯಾಯವಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಪ್ಪಿಸಿದನು.”—1 ಪೇತ್ರ 2:23, 24.
ಉದ್ರಿಕ್ತ ಸನ್ನಿವೇಶಗಳನ್ನು ಯೇಸು ಕ್ರಿಸ್ತನು ನಿಭಾಯಿಸಿದ ರೀತಿಗಾಗಿ ಪೌಲನಿಗಿದ್ದ ಗಣ್ಯತೆಯು, ಅವನನ್ನು ಬದಲಾಗುವಂತೆ ಪ್ರಚೋದಿಸಿತು. ತನ್ನ ಜೊತೆ ವಿಶ್ವಾಸಿಗಳಿಗೆ ಅವನು ಹೀಗೆ ಬುದ್ಧಿವಾದವನ್ನು ನೀಡಸಾಧ್ಯವಿತ್ತು: “ಮತ್ತೊಬ್ಬನ ಮೇಲೆ ತಪ್ಪು ಹೊರಿಸುವದಕ್ಕೆ ಕಾರಣವಿದ್ದರೂ ತಪ್ಪು ಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು ನಿಮ್ಮನ್ನು ಕ್ಷಮಿಸಿದಂತೆ ನೀವೂ ಕ್ಷಮಿಸಿರಿ.” (ಕೊಲೊಸ್ಸೆ 3:13) ಹಿಂಸಾತ್ಮಕರಾಗಿರದೆ ಇರುವ ಅಗತ್ಯವನ್ನು ಅಂಗೀಕರಿಸುವುದಷ್ಟೇ ಸಾಲದು. ಯೆಹೋವ ಮತ್ತು ಯೇಸು ಕ್ರಿಸ್ತನು ನಮಗಾಗಿ ಮಾಡಿರುವಂತಹ ಸಂಗತಿಗಳಿಗಾಗಿ ಗಣ್ಯತೆಯನ್ನು ಹೊಂದಿರುವುದು, ಹಿಂಸಾತ್ಮಕ ಪ್ರವೃತ್ತಿಗಳನ್ನು ಜಯಿಸಲಿಕ್ಕಾಗಿ ಬೇಕಾಗಿರುವ ಪ್ರಚೋದನೆಯನ್ನು ಒದಗಿಸುತ್ತದೆ.
ಅದು ಸಾಧ್ಯವೊ?
ಜಪಾನಿನಲ್ಲಿರುವ ಒಬ್ಬ ಪುರುಷನಿಗೆ ಅಂತಹದ್ದೇ ಬಲವಾದ ಪ್ರಚೋದನೆಯ ಅಗತ್ಯವಿತ್ತು. ಅವನ ತಂದೆಯು ತುಂಬ ಬೇಗ ಕೋಪಗೊಳ್ಳುತ್ತಿದ್ದ ಒಬ್ಬ ವ್ಯಕ್ತಿಯಾಗಿದ್ದನು ಮತ್ತು ತನ್ನ ಕುಟುಂಬದ ಮೇಲೆ ಹಿಂಸಾಚಾರದಿಂದ ಅಧಿಕಾರ ಚಲಾಯಿಸುತ್ತಿದ್ದನು. ಹಿಂಸಾಚಾರದ ಒಬ್ಬ ಬಲಿಪಶುವಾಗಿದ್ದು, ತನ್ನ ತಾಯಿಯು ಸಹ ತನ್ನಂತೆಯೇ ಕಷ್ಟ ಅನುಭವಿಸುತ್ತಿರುವುದನ್ನು ನೋಡುತ್ತಾ, ಈ ಪುರುಷನು ಕೂಡ ಒಬ್ಬ ಹಿಂಸಾತ್ಮಕ ವ್ಯಕ್ತಿಯಾದನು. ಎರಡು ಬೇರೆ ಬೇರೆ ಉದ್ದದ ಸಾಮುರೈ ಕತ್ತಿಗಳನ್ನು ಅವನು ತನ್ನೊಂದಿಗೆ ಒಯ್ಯುತ್ತಿದ್ದನು. ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಜನರನ್ನು ಬೆದರಿಸಲಿಕ್ಕಾಗಿ ಅವನು ಅವುಗಳನ್ನು ಉಪಯೋಗಿಸುತ್ತಿದ್ದನು.
ಅವನ ಹೆಂಡತಿಯು ಬೈಬಲನ್ನು ಅಭ್ಯಾಸಿಸಲು ಆರಂಭಿಸಿದಾಗ, ಅವನು ಅಭ್ಯಾಸಕ್ಕಾಗಿ ಕುಳಿತುಕೊಂಡನಾದರೂ, ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ, ರಾಜ್ಯದ ಈ ಸುವಾರ್ತೆa ಎಂಬ ಶೀರ್ಷಿಕೆಯ ಪುಸ್ತಿಕೆಯನ್ನು ಓದಿದ ಬಳಿಕ, ಅವನು ಬದಲಾದನು. ಏಕೆ? “‘ಕ್ರಿಸ್ತ ಯೇಸು’ ಮತ್ತು ‘ಪ್ರಾಯಶ್ಚಿತ್ತ’ ಎಂಬ ಉಪಶೀರ್ಷಿಕೆಗಳ ಕೆಳಗಿರುವ ವಿಷಯವನ್ನು ನಾನು ಓದಿದಾಗ, ನನಗೆ ನಾಚಿಕೆಯಾಯಿತು,” ಎಂದು ಅವನು ವಿವರಿಸುತ್ತಾನೆ. “ಒಂದು ಕೆಟ್ಟ ರೀತಿಯ ಜೀವನವನ್ನು ನಾನು ನಡಿಸುತ್ತಿದ್ದರೂ, ನಾನು ಹೊಂದಿಕೊಂಡು ಹೋಗಸಾಧ್ಯವಿದ್ದ ಜನರಿಗೆ ದಯೆಯನ್ನು ತೋರಿಸಲು ಇಷ್ಟಪಡುತ್ತಿದ್ದೆ. ನಾನು ನನ್ನ ಸ್ನೇಹಿತರನ್ನು ಸಂತೋಷಪಡಿಸುವುದರಲ್ಲಿ ಆನಂದಿಸುತ್ತಿದ್ದೆ. ಆದರೆ ಅದು ನನ್ನ ಸ್ವಂತ ಜೀವನಕ್ಕೆ ಅಡ್ಡಬರದಿರುವಷ್ಟರ ಮಟ್ಟಿಗೆ ಮಾತ್ರ. ಆದರೆ ದೇವರ ಪುತ್ರನಾದ ಯೇಸು, ನನ್ನಂತಹ ವ್ಯಕ್ತಿಗಳನ್ನೂ ಸೇರಿಸಿ ಮಾನವಕುಲಕ್ಕಾಗಿ ತನ್ನ ಜೀವವನ್ನೇ ಕೊಡಲು ಸಿದ್ಧನಿದ್ದನು. ಯಾರೋ ನನ್ನ ತಲೆ ಮೇಲೆ ಸುತ್ತಿಗೆಯಿಂದ ಹೊಡೆದಂತೆ, ನಾನು ದಂಗುಬಡಿದವನಾದೆ.”
ತನ್ನ ಹಿಂದಿನ ಸ್ನೇಹಿತರೊಂದಿಗೆ ಸಹವಾಸಿಸುವುದನ್ನು ಅವನು ನಿಲ್ಲಿಸಿದನು ಮತ್ತು ಯೆಹೋವನ ಸಾಕ್ಷಿಗಳ ಸಭೆಯೊಂದರಲ್ಲಿ ದೇವಪ್ರಭುತ್ವ ಶುಶ್ರೂಷಾ ಶಾಲೆಗೆ ಸೇರಿಕೊಂಡನು. ಈ ಶಾಲೆಯು, ಇತರರಿಗೆ ಬೈಬಲನ್ನು ಕಲಿಸುವುದರಲ್ಲಿ ಕೌಶಲಭರಿತರಾಗುವಂತೆ ಸಹಾಯಮಾಡುತ್ತದೆ. ಅಂಥ ಪಾಠಕ್ರಮವು ಈ ಮನುಷ್ಯನಿಗೆ ಹೆಚ್ಚಿನ ಪ್ರಯೋಜನವನ್ನು ತಂದಿತು. ಅವನು ಜ್ಞಾಪಿಸಿಕೊಳ್ಳುವುದು: “ನಾನು ಯೌವನಸ್ಥನಾಗಿದ್ದಾಗ, ಇತರರಲ್ಲಿ ನನ್ನ ಭಾವನೆಗಳನ್ನು ಹೇಳಿಕೊಳ್ಳಲಾಗದ ಕಾರಣದಿಂದ ನಾನು ಬೆದರಿಕೆಗಳನ್ನು ಉಪಯೋಗಿಸಿ, ಹಿಂಸಾಚಾರಕ್ಕೆ ಇಳಿಯುತ್ತಿದ್ದೆ. ನನ್ನ ಮನಸ್ಸಿನ ಭಾವನೆಗಳನ್ನು ಬೇರೆಯವರಿಗೆ ತಿಳಿಸುವ ವಿಧವನ್ನು ನಾನು ಕಲಿತಂತೆ, ನಾನು ಹಿಂಸಾಚಾರಕ್ಕೆ ಇಳಿಯುವ ಬದಲಿಗೆ ಅವರೊಂದಿಗೆ, ವಿಷಯವೇನು ಎಂಬುದನ್ನು ಮೊದಲಾಗಿ ಚರ್ಚಿಸಲು ಆರಂಭಿಸಿದೆ.”
ಪೌಲನಂತೆ, ಈ ಮನುಷ್ಯನು ಕ್ರಿಸ್ತನ ಜೀವನ ಕ್ರಮವನ್ನು ಅನುಸರಿಸಿದನೊ? ಸ್ವಂತ ಅಣ್ಣತಮ್ಮಂದಿರಂತಿದ್ದ ಒಬ್ಬ ಮಾಜಿ ಸ್ನೇಹಿತನು, ಅವನನ್ನು ಒಬ್ಬ ಕ್ರೈಸ್ತನಾಗುವುದರಿಂದ ತಡೆಯಲು ಪ್ರಯತ್ನಿಸಿದಾಗ, ಅವನ ನಂಬಿಕೆಯು ಪರೀಕ್ಷೆಗೊಳಗಾಯಿತು. ಅವನ “ಸ್ನೇಹಿತನು” ಅವನನ್ನು ಹೊಡೆದು, ದೇವರಾದ ಯೆಹೋವನ ಬಗ್ಗೆ ಹೀನಾಯವಾಗಿ ಮಾತಾಡಿದನು. ಹಿಂದೆ ಹಿಂಸಾತ್ಮಕನಾಗಿದ್ದ ಈ ವ್ಯಕ್ತಿಯು ತನ್ನನ್ನೇ ನಿಯಂತ್ರಿಸಿಕೊಂಡು, ಆ ಸಂಬಂಧವನ್ನು ಮುಂದುವರಿಸಲು ಶಕ್ತನಾಗಿರದೇ ಇದ್ದದ್ದಕ್ಕಾಗಿ ಕ್ಷಮೆಯಾಚಿಸಿದನು. ನಿರಾಶೆಗೊಂಡು, ಅವನ “ಸಹೋದರನು” ಅವನನ್ನು ಬಿಟ್ಟು ಹೋದನು.
ತನ್ನ ಹಿಂಸಾತ್ಮಕ ಪ್ರವೃತ್ತಿಗಳನ್ನು ಜಯಿಸುವ ಮೂಲಕ, ಈ ಹಿಂದೆ ಕೋಪಿಷ್ಠನಾಗಿದ್ದ ಈ ಮನುಷ್ಯನು, ದೇವರಿಗಾಗಿ ಮತ್ತು ನೆರೆಯವರಿಗಾಗಿ ಪ್ರೀತಿಯಿಂದ ಐಕ್ಯರಾಗಿರುವ ಅನೇಕ ಆತ್ಮಿಕ ಸಹೋದರ ಸಹೋದರಿಯರನ್ನು ಪಡೆದುಕೊಂಡಿದ್ದಾನೆ. (ಕೊಲೊಸ್ಸೆ 3:14) ವಾಸ್ತವದಲ್ಲಿ, ಒಬ್ಬ ಸಮರ್ಪಿತ ಕ್ರೈಸ್ತನಾಗಿ, 20ಕ್ಕಿಂತಲೂ ಹೆಚ್ಚು ವರ್ಷಗಳನ್ನು ಕಳೆದ ಬಳಿಕ, ಅವನು ಈಗ ಯೆಹೋವನ ಸಾಕ್ಷಿಗಳ ಒಬ್ಬ ಸಂಚರಣ ಮೇಲ್ವಿಚಾರಕನೋಪಾದಿ ಸೇವೆಸಲ್ಲಿಸುತ್ತಿದ್ದಾನೆ. ಪಶುಪ್ರಾಯ ಮನೋವೃತ್ತಿಗಳುಳ್ಳ ಪುರುಷರು, ಹಿಂಸಾಚಾರವಿಲ್ಲದೆ ಮನಸ್ತಾಪಗಳನ್ನು ಬಗೆಹರಿಸಲು ತನ್ನಂತೆಯೇ ಕಲಿಯಸಾಧ್ಯವಿದೆ ಎಂಬುದನ್ನು ಬೈಬಲಿನಿಂದ ತೋರಿಸುವುದು ಅವನಿಗೆಷ್ಟು ಆನಂದದಾಯಕವಾದ ವಿಷಯವಾಗಿದೆ! “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು” ಎಂಬ ಈ ಪ್ರವಾದನಾ ಮಾತುಗಳ ಭವ್ಯ ನೆರವೇರಿಕೆಯನ್ನು ತೋರಿಸಲು ಶಕ್ತನಾಗಿರುವುದು ಅವನಿಗೆ ಎಂತಹ ಒಂದು ಸುಯೋಗವಾಗಿದೆ.—ಯೆಶಾಯ 11:9.
ಅಪೊಸ್ತಲ ಪೌಲನು ಮತ್ತು ಹಿಂದೆ ಹಿಂಸಾತ್ಮಕನಾಗಿದ್ದ ಈ ಪುರುಷನಂತೆ, ನೀವು ಕೂಡ, ಕೋಪವನ್ನು ಎಬ್ಬಿಸುವಂತಹ ಸನ್ನಿವೇಶಗಳನ್ನು ನಿರ್ವಹಿಸಲು, ಸಮಸ್ಯೆಗಳನ್ನು ಶಾಂತರಾಗಿ ಬಗೆಹರಿಸಲು ಕಲಿಯಬಲ್ಲಿರಿ. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡಲು ಸಂತೋಷಿಸುವರು.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿತ.
[ಪುಟ 5 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಪೌಲನು ವಾಸ್ತವಿಕವಾದ ರೀತಿಯಲ್ಲಿ ಯೋಚಿಸುತ್ತಿದ್ದನು. ಕ್ರೈಸ್ತರ ನಡುವೆಯೂ ಭಾವನೆಗಳು ಕೆರಳಬಲ್ಲವೆಂಬುದು ಅವನಿಗೆ ತಿಳಿದಿತ್ತು.
[ಪುಟ 7 ರಲ್ಲಿರುವ ಚಿತ್ರ]
ದೇವರು ನಮಗಾಗಿ ಮಾಡಿರುವ ವಿಷಯಗಳಿಗಾಗಿ ಗಣ್ಯತೆಯು, ಶಾಂತಿಪೂರ್ಣ ಸಂಬಂಧಗಳಿಗೆ ಎಡೆಮಾಡಿಕೊಡುತ್ತದೆ