ಕಾನೂನುಬದ್ಧವಾಗಿ ಸುವಾರ್ತೆಯನ್ನು ಸಂರಕ್ಷಿಸುವುದು
ಮನುಷ್ಯನು ಎಷ್ಟು ದೀರ್ಘ ಸಮಯದಿಂದ ನಗರಗಳನ್ನು ನಿರ್ಮಿಸುತ್ತಾ ಬಂದಿದ್ದಾನೊ, ಅಲ್ಲಿಯ ವರೆಗೆ ಗೋಡೆಗಳನ್ನೂ ಕಟ್ಟುತ್ತಾ ಬಂದಿದ್ದಾನೆ. ವಿಶೇಷವಾಗಿ ಗತಕಾಲದಲ್ಲಿ ಈ ಗೋಡೆಗಳು ಒಂದು ರಕ್ಷಣೆಯೋಪಾದಿ ಕಾರ್ಯಮಾಡಿದವು. ಹೇಗೆಂದರೆ, ವೈರಿಗಳು ಆ ಗೋಡೆಗಳನ್ನು ಛಿದ್ರಮಾಡದಂತೆ ಇಲ್ಲವೆ ಶಿಥಿಲಗೊಳಿಸದಂತೆ ಸೈನಿಕರು ಆ ಗೋಡೆಯ ಮೇಲೆ ನಿಂತು ಹೋರಾಡಸಾಧ್ಯವಿತ್ತು. ಆ ನಗರದ ನಿವಾಸಿಗಳು ಮಾತ್ರ ಸಂರಕ್ಷಣೆಯನ್ನು ಪಡೆದುಕೊಳ್ಳಲಿಲ್ಲ, ಬದಲಿಗೆ ಸುತ್ತಮುತ್ತಲಿನ ಪಟ್ಟಣಗಳಲ್ಲೂ ವಾಸಿಸುತ್ತಿದ್ದ ಜನರು ಆ ಗೋಡೆಗಳೊಳಗೆ ಆಶ್ರಯವನ್ನು ಪಡೆದುಕೊಂಡರು.—2 ಸಮುವೇಲ 11:20-24; ಯೆಶಾಯ 25:12.
ತದ್ರೀತಿಯಲ್ಲಿ, ಯೆಹೋವನ ಸಾಕ್ಷಿಗಳು ತಮ್ಮ ಸುತ್ತಲೂ ಸಂರಕ್ಷಣೆಯ ಒಂದು ಗೋಡೆಯನ್ನು, ಅಂದರೆ ಒಂದು ಕಾನೂನುಬದ್ಧ ಗೋಡೆಯನ್ನು ನಿರ್ಮಿಸಿಕೊಂಡಿದ್ದಾರೆ. ಸಾಕ್ಷಿಗಳನ್ನು ಸಮಾಜದಿಂದ ಪ್ರತ್ಯೇಕಿಸುವ ಉದ್ದೇಶದಿಂದ ಈ ಗೋಡೆಯನ್ನು ಕಟ್ಟಲಾಗಿಲ್ಲ, ಏಕೆಂದರೆ ಸಾಕ್ಷಿಗಳು ಸಹವಾಸ ಪ್ರಿಯರೂ, ಸ್ನೇಹಪರರೂ ಎಂಬ ಖ್ಯಾತಿಯುಳ್ಳವರಾಗಿದ್ದಾರೆ. ಬದಲಿಗೆ, ಅದು ಸಕಲ ಜನರಿಗಾಗಿರುವ ಮೂಲಭೂತ ಹಕ್ಕುಗಳ ಕಾನೂನುಬದ್ಧ ಆಶ್ವಾಸನೆಗಳನ್ನೂ ದೃಢಪಡಿಸುತ್ತದೆ. ಅದೇ ಸಮಯದಲ್ಲಿ, ಅವರು ತಮ್ಮ ಆರಾಧನೆಯನ್ನು ಸ್ವತಂತ್ರವಾಗಿ ಮುಂದುವರಿಸುವಂತೆ, ಈ ಗೋಡೆಯು ಸಾಕ್ಷಿಗಳ ಕಾನೂನುಬದ್ಧ ಹಕ್ಕುಗಳನ್ನು ರಕ್ಷಿಸುತ್ತದೆ. (ಹೋಲಿಸಿ ಮತ್ತಾಯ 5:14-16.) ಈ ಗೋಡೆಯು ಅವರ ಆರಾಧನಾ ರೀತಿಯನ್ನು ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ಸಾರಲಿಕ್ಕಾಗಿರುವ ಅವರ ಹಕ್ಕನ್ನು ಬೆಂಬಲಿಸುತ್ತದೆ. ಈ ಗೋಡೆಯು ಏನಾಗಿದೆ, ಮತ್ತು ಇದನ್ನು ಹೇಗೆ ಕಟ್ಟಲಾಗಿದೆ?
ಸಂರಕ್ಷಣೆಯ ಒಂದು ಕಾನೂನುಬದ್ಧ ಗೋಡೆಯನ್ನು ಕಟ್ಟುವುದು
ಯೆಹೋವನ ಸಾಕ್ಷಿಗಳು ಹೆಚ್ಚಿನ ದೇಶಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯವನ್ನು ಅನುಭವಿಸುತ್ತಾರಾದರೂ, ಕೆಲವು ದೇಶಗಳಲ್ಲಿ ಅವರು ಅನ್ಯಾಯವಾಗಿ ಆಕ್ರಮಣಕ್ಕೆ ಒಳಗಾಗಿದ್ದಾರೆ. ಒಟ್ಟಾಗಿ ಸೇರಿ ಆರಾಧಿಸುವ ಇಲ್ಲವೆ ಮನೆಯಿಂದ ಮನೆಗೆ ಸಾರುವ ಅವರ ಹಕ್ಕು ಆಕ್ರಮಣಕ್ಕೆ ಒಳಗಾದಾಗ, ಅವರು ಕಾನೂನಿನ ಮೊರೆಹೊಕ್ಕಿದ್ದಾರೆ. ಭೂವ್ಯಾಪಕವಾಗಿ ಸಾಕ್ಷಿಗಳನ್ನು ಒಳಗೊಂಡ ಮೊಕದ್ದಮೆಗಳು ಅತ್ಯಧಿಕ ಸಂಖ್ಯೆಯಲ್ಲಿವೆ.a ಆದರೆ ಎಲ್ಲ ಮೊಕದ್ದಮೆಗಳಲ್ಲೂ ಅವರು ಜಯಹೊಂದಿರುವುದಿಲ್ಲ. ಕೆಳದರ್ಜೆಯ ನ್ಯಾಯಾಲಯಗಳು ಅವರ ವಿರುದ್ಧ ತೀರ್ಪನ್ನು ವಿಧಿಸಿದಾಗ, ಅವರು ಅನೇಕ ಬಾರಿ ಉಚ್ಚ ನ್ಯಾಯಾಲಯಗಳಿಗೆ ಮನವಿಸಲ್ಲಿಸಿದ್ದಾರೆ. ಫಲಿತಾಂಶವು ಏನಾಗಿದೆ?
ಅನೇಕ ದೇಶಗಳಲ್ಲಿ, ಈ 20ನೆಯ ಶತಮಾನದಾದ್ಯಂತ ಸಾಧಿಸಲ್ಪಟ್ಟ ಕಾನೂನುಬದ್ಧ ಗೆಲುವುಗಳು ವಿಶ್ವಾಸನೀಯ ಪೂರ್ವನಿದರ್ಶನಗಳನ್ನು ಸ್ಥಾಪಿಸಿವೆ. ಇವುಗಳನ್ನು ಸಾಕ್ಷಿಗಳು ತರುವಾಯದ ಮೊಕದ್ದಮೆಗಳಲ್ಲಿ ಉಪಯೋಗಿಸಿಕೊಂಡಿದ್ದಾರೆ. ಗೋಡೆಯನ್ನು ರಚಿಸುವ ಇಟ್ಟಿಗೆ ಇಲ್ಲವೆ ಕಲ್ಲುಗಳಂತೆ, ಈ ಅನುಕೂಲಕರವಾದ ತೀರ್ಪುಗಳು ಸಂರಕ್ಷಣೆಯ ಒಂದು ಕಾನೂನುಬದ್ಧ ಗೋಡೆಯನ್ನು ರಚಿಸುತ್ತವೆ. ಈ ಪೂರ್ವನಿದರ್ಶನಗಳ ಗೋಡೆಯಿಂದ, ತಮ್ಮ ಆರಾಧನೆಯನ್ನು ಮುಂದುವರಿಸಿಕೊಂಡು ಹೋಗಲು ಬೇಕಾದ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಸಾಕ್ಷಿಗಳು ಹೋರಾಡುತ್ತಾ ಇದ್ದಾರೆ.
ಉದಾಹರಣೆಗೆ, ಕಾಮನ್ವೆಲ್ತ್ ಆಫ್ ಪೆನ್ಸಿಲ್ವೇನಿಯದ ಪ್ರತಿ ಮಾರ್ಡಕ್ ಅವರ ಮೊಕದ್ದಮೆಯನ್ನು ತೆಗೆದುಕೊಳ್ಳಿ. ಇದನ್ನು ಅಮೆರಿಕದ ಸರ್ವೋಚ್ಚ ನ್ಯಾಯಾಲಯವು ಮೇ 3, 1943ರಂದು ತೀರ್ಮಾನಿಸಿತು. ಈ ಮೊಕದ್ದಮೆಯಲ್ಲಿ ಎಬ್ಬಿಸಲ್ಪಟ್ಟ ಒಂದು ಪ್ರಶ್ನೆಯು ಇದಾಗಿತ್ತು: ತಮ್ಮ ಧಾರ್ಮಿಕ ಸಾಹಿತ್ಯವನ್ನು ವಿತರಿಸಲಿಕ್ಕಾಗಿ, ಯೆಹೋವನ ಸಾಕ್ಷಿಗಳು ವ್ಯಾಪಾರದ ಲೈಸೆನ್ಸ್ ಅನ್ನು ಪಡೆದುಕೊಳ್ಳಬೇಕೊ? ಅಂತಹ ಲೈಸೆನ್ಸ್ ಅನ್ನು ಪಡೆದುಕೊಳ್ಳುವ ಅಗತ್ಯವಿಲ್ಲವೆಂದು ಯೆಹೋವನ ಸಾಕ್ಷಿಗಳು ವಾದಿಸಿದರು. ಏಕೆಂದರೆ ಅವರ ಸಾರುವ ಕೆಲಸವು, ಹಿಂದೆಯೂ ಒಂದು ವ್ಯಾಪಾರವಾಗಿರಲಿಲ್ಲ ಈಗಲೂ ಒಂದು ವ್ಯಾಪಾರವಾಗಿರುವುದಿಲ್ಲ. ಅವರ ಉದ್ದೇಶವು ಹಣ ಮಾಡುವುದಲ್ಲ, ಸುವಾರ್ತೆಯನ್ನು ಸಾರುವುದಾಗಿದೆ. (ಮತ್ತಾಯ 10:8; 2 ಕೊರಿಂಥ 2:17) ಮಾರ್ಡಕ್ ತೀರ್ಪಿನಲ್ಲಿ, ನ್ಯಾಯಾಲಯವು ಸಾಕ್ಷಿಗಳೊಂದಿಗೆ ಸಮ್ಮತಿಸಿತು. ಧಾರ್ಮಿಕ ಸಾಹಿತ್ಯವನ್ನು ವಿತರಿಸಲಿಕ್ಕಾಗಿ ತೆರಿಗೆಯನ್ನು ಸಲ್ಲಿಸುವುದು ಕಾನೂನುಬಾಹಿರವೆಂದು ಅದು ತೀರ್ಪು ನೀಡಿತು.b ಈ ತೀರ್ಪು ಪ್ರಮುಖವಾದ ಪೂರ್ವನಿದರ್ಶನವನ್ನು ಸ್ಥಾಪಿಸಿತು. ಆ ಸಮಯದಂದಿನಿಂದ ಸಾಕ್ಷಿಗಳು ಈ ಪೂರ್ವನಿದರ್ಶನವನ್ನು ಇತರ ಅನೇಕ ಮೊಕದ್ದಮೆಗಳಲ್ಲಿ ಉಪಯೋಗಿಸಿ ಜಯಸಾಧಿಸಿದ್ದಾರೆ. ಈ ಮಾರ್ಡಕ್ ತೀರ್ಪು, ಸಂರಕ್ಷಣೆಯ ಕಾನೂನುಬದ್ಧ ಗೋಡೆಯಲ್ಲಿ ಒಂದು ಬಲವಾದ ಇಟ್ಟಿಗೆಯಾಗಿ ಪರಿಣಮಿಸಿದೆ.
ಇಂತಹ ಮೊಕದ್ದಮೆಗಳು, ಎಲ್ಲ ಜನರಿಗಾಗಿರುವ ಧಾರ್ಮಿಕ ಸ್ವಾತಂತ್ರ್ಯವನ್ನು ರಕ್ಷಿಸಲು ಬಹಳ ಸಹಾಯ ಮಾಡಿವೆ. ಅಮೆರಿಕದಲ್ಲಿರುವ ಪೌರ ಹಕ್ಕುಗಳ ರಕ್ಷಣೆಗೆ ಸಾಕ್ಷಿಗಳು ನೀಡಿರುವ ನೆರವಿನ ಸಂಬಂಧದಲ್ಲಿ, ಯುನಿವರ್ಸಿಟಿ ಆಫ್ ಸಿನ್ಸಿನ್ನಾಟಿ ಲಾ ರಿವ್ಯೂ ಹೇಳಿದ್ದು: “ಸಂವಿಧಾನದ ವಿಕಸನೆಯಲ್ಲಿ, ವಿಶೇಷವಾಗಿ ವಾಕ್ಸ್ವಾತಂತ್ರ್ಯ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳ ಇತಿಮಿತಿಗಳನ್ನು ವಿಸ್ತರಿಸುವ ಮೂಲಕ, ಯೆಹೋವನ ಸಾಕ್ಷಿಗಳು ಮಹತ್ತರವಾದ ಪ್ರಭಾವವನ್ನು ಬೀರಿದ್ದಾರೆ.”
ಗೋಡೆಯನ್ನು ಬಲಪಡಿಸುವುದು
ಪ್ರತಿಯೊಂದು ಕಾನೂನಿನ ಗೆಲುವಿನೊಂದಿಗೆ ಆ ಕಾನೂನುಬದ್ಧ ಗೋಡೆಯು ಬಲಗೊಳ್ಳುತ್ತದೆ. ಯೆಹೋವನ ಸಾಕ್ಷಿಗಳಿಗೆ ಹಾಗೂ ಲೋಕದ ಸಕಲ ಸ್ವಾತಂತ್ರ ಪ್ರಿಯರಿಗೆ ಪ್ರಯೋಜನವನ್ನು ತಂದಿರುವ, 1990ಗಳ ಕೆಲವು ತೀರ್ಪುಗಳನ್ನು ಪರಿಗಣಿಸಿರಿ.
ಗ್ರೀಸ್. 1993, ಮೇ 25ರಂದು ಮಾನವ ಹಕ್ಕುಗಳ ಯೂರೋಪಿಯನ್ ನ್ಯಾಯಾಲಯವು, ಒಬ್ಬ ಗ್ರೀಕ್ ಪ್ರಜೆಗೆ ತನ್ನ ಧಾರ್ಮಿಕ ನಂಬಿಕೆಗಳನ್ನು ಇತರರಿಗೆ ಕಲಿಸುವ ಹಕ್ಕಿದೆ ಎಂಬ ತೀರ್ಪನ್ನು ಸಮರ್ಥಿಸಿತು. ಆ ಮೊಕದ್ದಮೆಯು, 84 ವರ್ಷ ಪ್ರಾಯದ ಮೀನೋಸ್ ಕೋಕಿನಾಕಿಸ್ ಅವರನ್ನು ಒಳಗೊಂಡಿತ್ತು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದ ಕೋಕಿನಾಕಿಸ್, 1938ರಂದಿನಿಂದ 60ಕ್ಕಿಂತಲೂ ಹೆಚ್ಚು ಬಾರಿ ಬಂಧಿಸಲ್ಪಟ್ಟಿದ್ದರು. ಮತ್ತು 18 ಬಾರಿ ಗ್ರೀಕ್ ನ್ಯಾಯಾಲಯಗಳಲ್ಲಿ ಹಾಜರುಮಾಡಲ್ಪಟ್ಟರು ಹಾಗೂ ಆರು ವರ್ಷಗಳಿಗಿಂತಲೂ ಹೆಚ್ಚಿನ ಸಮಯವನ್ನು ಸೆರೆಯಲ್ಲಿ ಕಳೆದಿದ್ದರು. ಮತಪ್ರಚಾರವನ್ನು ನಿಷೇಧಿಸುವ 1930ಗಳ ಒಂದು ಗ್ರೀಕ್ ಕಟ್ಟಳೆಯ ಕಾರಣ ಅವರನ್ನು ಬಂಧಿಸಲಾಗಿತ್ತು. 1938ರಿಂದ 1992ರ ವರೆಗೆ ಆ ಕಟ್ಟಳೆಯು ಯೆಹೋವನ ಸಾಕ್ಷಿಗಳ 20,000ಕ್ಕಿಂತಲೂ ಹೆಚ್ಚಿನ ದಸ್ತಗಿರಿಗಳಿಗೆ ಕಾರಣವಾಗಿತ್ತು. ಗ್ರೀಕ್ ಸರಕಾರವು ಕೋಕಿನಾಕಿಸ್ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಿತ್ತೆಂದು ಯೂರೋಪಿಯನ್ ನ್ಯಾಯಾಲಯವು ತೀರ್ಪು ವಿಧಿಸಿ, 14,000 ಡಾಲರುಗಳಷ್ಟು ಹಣವನ್ನು ಅವರಿಗೆ ಪರಿಹಾರವಾಗಿ ನೀಡಿತು. ಯೆಹೋವನ ಸಾಕ್ಷಿಗಳು ನಿಶ್ಚಯವಾಗಿಯೂ ಒಂದು “ಜ್ಞಾತ ಧರ್ಮ”ವಾಗಿದ್ದಾರೆಂದು ಆ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿತು.—ಸೆಪ್ಟೆಂಬರ್ 1, 1993ರ ಕಾವಲಿನಬುರುಜು ಪತ್ರಿಕೆಯ, 27-31ನೆಯ ಪುಟಗಳನ್ನು ನೋಡಿರಿ.
ಮೆಕ್ಸಿಕೊ. ಜುಲೈ 16, 1992ರಂದು, ಧಾರ್ಮಿಕ ಸ್ವಾತಂತ್ರ್ಯದ ರಕ್ಷಣೆಯಲ್ಲಿ ಒಂದು ಪ್ರಮುಖ ಹೆಜ್ಜೆಯು ಮೆಕ್ಸಿಕೊದಲ್ಲಿ ತೆಗೆದುಕೊಳ್ಳಲಾಯಿತು. ಆ ದಿನಾಂಕದಂದು, ಧಾರ್ಮಿಕ ಒಕ್ಕೂಟಗಳ ಮತ್ತು ಸಾರ್ವಜನಿಕ ಆರಾಧನೆಯ ನಿಯಮವನ್ನು ಜಾರಿಗೊಳಿಸಲಾಯಿತು. ಈ ನಿಯಮದ ಮೂಲಕ, ಅಗತ್ಯಪಡಿಸಲಾದ ರಿಜಿಸ್ಟ್ರೇಷನ್ ಅನ್ನು ಮಾಡುವುದರಿಂದ ಒಂದು ಧಾರ್ಮಿಕ ಗುಂಪಿಗೆ ಕಾನೂನುಬದ್ಧ ಸ್ಥಾನಮಾನ ದೊರಕಿ, ಅದೊಂದು ಧಾರ್ಮಿಕ ಸಂಸ್ಥೆಯೋಪಾದಿ ಎಣಿಸಲ್ಪಡಸಾಧ್ಯವಿತ್ತು. ಈ ಹಿಂದೆ, ಆ ದೇಶದಲ್ಲಿದ್ದ ಇತರ ಧರ್ಮಗಳಂತೆ ಯೆಹೋವನ ಸಾಕ್ಷಿಗಳ ಧರ್ಮವು ಅಸ್ತಿತ್ವದಲ್ಲಿದ್ದರೂ, ಕಾನೂನುಬದ್ಧ ಸ್ಥಾನಮಾನವು ಅದಕ್ಕಿರಲಿಲ್ಲ. ಏಪ್ರಿಲ್ 13, 1993ರಂದು ಸಾಕ್ಷಿಗಳು ರಿಜೆಸ್ಟ್ರೇಷನ್ಗೆ ಅರ್ಜಿಹಾಕಿದರು. ಸಂತೋಷಕರವಾಗಿ, ಅವರು ಮೇ 7, 1993ರಂದು ಕಾನೂನುಬದ್ಧವಾಗಿ ಲಾ ಟೋರ್ರೀ ಡಲ್ ವಿಕೀಆ, ಏ. ಆರ್., ಮತ್ತು ಲಾಸ್ ಟೆಸ್ಟೀಗೋಸ್ ಡ ಹೇವೊವಾ ಎನ್ ಮೆಹೀಕೊ, ಏ. ಆರ್., ಎಂಬ ಮನ್ನಣೆಯನ್ನು ಪಡೆದುಕೊಂಡರು. ಇವೆರಡೂ ಧಾರ್ಮಿಕ ಒಕ್ಕೂಟಗಳಾಗಿವೆ.—ಜುಲೈ 22, 1994ರ ಅವೇಕ್! ಪತ್ರಿಕೆಯ, 12-14ನೆಯ ಪುಟಗಳನ್ನು ನೋಡಿರಿ.
ಬ್ರೆಸಿಲ್. ನವೆಂಬರ್ 1990ರಲ್ಲಿ, ಬ್ರೆಸಿಲಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೆಕ್ಯೂರಿಟಿ (ಐಎನ್ಎಸ್ಎಸ್), ವಾಚ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿಗೆ ಹೀಗೆಂದು ನೋಟಿಸ್ ಕಳುಹಿಸಿತು. ಅದು ಹೇಳಿದ್ದೇನೆಂದರೆ, ಬೆತೆಲ್ನಲ್ಲಿ (ಯೆಹೋವನ ಸಾಕ್ಷಿಗಳ ಬ್ರಾಂಚ್ ಸೌಕರ್ಯಗಳ ಹೆಸರು)ರುವ ಸ್ವಯಂಸೇವಕರು ಇನ್ನು ಮುಂದೆ ಧಾರ್ಮಿಕ ಶುಶ್ರೂಷಕರೋಪಾದಿ ಎಣಿಸಲ್ಪಡದಿರುವುದರಿಂದ, ಅವರು ಬ್ರೆಸಿಲಿನ ಕಾರ್ಮಿಕರ ಕಟ್ಟಳೆಗಳಿಗೆ ಒಳಗಾಗುವರು. ಈ ತೀರ್ಪಿನ ವಿರುದ್ಧ ಸಾಕ್ಷಿಗಳು ಮನವಿಮಾಡಿದರು. ಜೂನ್ 7, 1996ರಂದು, ಬ್ರೆಸಿಲಿಯದಲ್ಲಿರುವ ಅಟೋರ್ನಿ ಜನರಲ್ ಅವರ ಆಫೀಸಿನ ಕಾನೂನುಬದ್ಧ ಸಲಹಾ ಮಂಡಲಿಯು ಒಂದು ತೀರ್ಪನ್ನು ವಿಧಿಸಿತು. ಅದು ಬೆತೆಲ್ನಲ್ಲಿರುವ ಶುಶ್ರೂಷಕರ ಸ್ಥಾನವನ್ನು, ಐಹಿಕ ಉದ್ಯೋಗಸ್ಥರಂತಲ್ಲ ಬದಲಿಗೆ ನ್ಯಾಯಬದ್ಧವಾದ ಧಾರ್ಮಿಕ ಗುಂಪಿನ ಸದಸ್ಯರಂತೆ ಎತ್ತಿಹಿಡಿಯಿತು.
ಜಪಾನ್. ಮಾರ್ಚ್ 8, 1996ರಂದು, ಜಪಾನಿನ ಸರ್ವೋಚ್ಚ ನ್ಯಾಯಾಲಯವು, ಆ ದೇಶದಲ್ಲಿರುವ ಪ್ರತಿಯೊಬ್ಬರಿಗೂ ಪ್ರಯೋಜನವಾಗುವಂತೆ, ಶೈಕ್ಷಣಿಕ ಹಾಗೂ ಧಾರ್ಮಿಕ ಸ್ವಾತಂತ್ರ್ಯದ ವಿವಾದಾಂಶದ ಮೇಲೆ ತನ್ನ ತೀರ್ಪನ್ನು ನೀಡಿತು. ಕುನಿಹೀಟೊ ಕೊಬಾಯಾಶಿ ಎಂಬ ಯೆಹೋವನ ಸಾಕ್ಷಿಯು ಯುದ್ಧೋಚಿತ ತರಬೇತಿಯಲ್ಲಿ ಭಾಗವಹಿಸಲು ನಿರಾಕರಿಸಿದಾಗ, ಅವನನ್ನು ಕಾಲೇಜಿನಿಂದ ಬಹಿಷ್ಕರಿಸಿದ ಕಾರಣ, ಕೋಬೆ ಮುನಿಸಿಪಲ್ ಇಂಡಸ್ಟ್ರೀಯಲ್ ಟೆಕ್ನಿಕಲ್ ಕಾಲೇಜ್ ನಿಯಮದ ಉಲ್ಲಂಘನೆಯನ್ನು ಮಾಡಿತೆಂದು ಆ ನ್ಯಾಯಾಲಯವು ಒಮ್ಮತದಿಂದ ತೀರ್ಪು ನೀಡಿತು. ಇದು ಜಪಾನಿನ ಸಂವಿಧಾನದ ಮೂಲಕ ಒದಗಿಸಲ್ಪಟ್ಟ ಧಾರ್ಮಿಕ ಸ್ವಾತಂತ್ರ್ಯದ ಮೇಲಾಧಾರಿತವಾದ ಪ್ರಪ್ರಥಮ ತೀರ್ಪಾಗಿದ್ದು, ಸರ್ವೋಚ್ಚ ನ್ಯಾಯಾಲಯವು ಅದನ್ನು ನೀಡಿತು. ತನ್ನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಗೆ ಕಿವಿಗೊಟ್ಟ ಈ ಯುವ ಸಾಕ್ಷಿಗೆ, ಇಂತಹ ವ್ಯಾಯಾಮಗಳು ಬೈಬಲ್ ಸಿದ್ಧಾಂತಗಳಿಗೆ ಅಸಂಗತವಾಗಿವೆ ಎಂದು ಅನಿಸಿತು. ಅಂತಹ ಒಂದು ಸಿದ್ಧಾಂತವು ಯೆಶಾಯ 2:4ರಲ್ಲಿದೆ. ಅದು ಹೇಳುವುದು: “ಅವರೋ ತಮ್ಮ ಆಯುಧಗಳನ್ನು ಕುಲುಮೆಗೆ ಹಾಕಿ ಕತ್ತಿಗಳನ್ನು ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.” ಈ ನ್ಯಾಯಾಲಯದ ತೀರ್ಪು ಮುಂದಿನ ಮೊಕದ್ದಮೆಗಳಿಗೆ ಒಂದು ಪೂರ್ವನಿದರ್ಶನವಾಗಿತ್ತು.—ನವೆಂಬರ್ 1, 1996ರ ಕಾವಲಿನಬುರುಜು ಪತ್ರಿಕೆಯ, 19-21ನೆಯ ಪುಟಗಳನ್ನು ನೋಡಿರಿ.
ಫೆಬ್ರವರಿ 9, 1998ರಂದು, ಟೋಕಿಯೊ ಉಚ್ಚ ನ್ಯಾಯಾಲಯವು ಮತ್ತೊಂದು ಪ್ರಮುಖ ತೀರ್ಪನ್ನು ನೀಡಿತು. ‘ರಕ್ತವನ್ನು ವಿಸರ್ಜಿಸಿರಿ’ ಎಂಬ ಬೈಬಲಿನ ಆಜ್ಞೆಗೆ ಸುಸಂಗತವಾಗಿರದ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸಿದ ಮೀಸಾ ಟಾಕೆಡಾ ಎಂಬ ಸಾಕ್ಷಿಯ ಹಕ್ಕನ್ನು ಅದು ಸಮರ್ಥಿಸಿತು. (ಅ. ಕೃತ್ಯಗಳು 15:28, 29) ಈ ಮೊಕದ್ದಮೆಯನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಅಪೀಲುಮಾಡಲಾಗಿದೆ. ಉಚ್ಚ ನ್ಯಾಯಾಲಯವು ನೀಡಿದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಸಮರ್ಥಿಸುವುದೊ ಎಂಬುದನ್ನು ಕಾದು ನೋಡಬೇಕಾಗಿದೆ.
ಫಿಲಿಪ್ಪೀನ್ಸ್. ಮಾರ್ಚ್ 1, 1993ರಂದು ನೀಡಲ್ಪಟ್ಟ ತೀರ್ಪಿನಲ್ಲಿ, ಫಿಲಿಪ್ಪೀನ್ಸ್ ಸರ್ವೋಚ್ಚ ನ್ಯಾಯಾಲಯವು ಯೆಹೋವನ ಸಾಕ್ಷಿಗಳ ಪರವಾಗಿ ಒಮ್ಮತದಿಂದ ನ್ಯಾಯವಿಧಿಸಿತು. ಇದು, ಧ್ವಜವಂದನೆ ಮಾಡಲು ಗೌರವಪೂರ್ಣವಾಗಿ ನಿರಾಕರಿಸಿದ ಕಾರಣ, ಶಾಲೆಯಿಂದ ಹೊರಹಾಕಲ್ಪಟ್ಟ ಯುವ ಸಾಕ್ಷಿಗಳನ್ನು ಒಳಗೊಂಡ ಮೊಕದ್ದಮೆಯಾಗಿತ್ತು.
ಪ್ರತಿಯೊಂದು ಅನುಕೂಲಕರವಾದ ತೀರ್ಪು, ಆ ಕಾನೂನುಬದ್ಧ ಗೋಡೆಯನ್ನು ಬಲಪಡಿಸುವ ಕಲ್ಲಿನಂತೆ ಇಲ್ಲವೆ ಇಟ್ಟಿಗೆಯಂತಿದ್ದು, ಅದು ಕೇವಲ ಯೆಹೋವನ ಸಾಕ್ಷಿಗಳ ಹಕ್ಕುಗಳನ್ನು ಮಾತ್ರವಲ್ಲ, ಎಲ್ಲ ಜನರ ಹಕ್ಕುಗಳನ್ನೂ ರಕ್ಷಿಸುತ್ತದೆ.
ಗೋಡೆಯನ್ನು ಸಂರಕ್ಷಿಸುವುದು
ಯೆಹೋವನ ಸಾಕ್ಷಿಗಳು ಕಾನೂನುಬದ್ಧವಾಗಿ 153 ದೇಶಗಳಲ್ಲಿ ರಿಜಿಸ್ಟರ್ ಆಗಿದ್ದು, ಮನ್ನಣೆ ಪಡೆದ ಇತರ ಅನೇಕ ಧರ್ಮಗಳಂತೆ ಬಹಳಷ್ಟು ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಪೂರ್ವ ಯೂರೋಪ್ ಮತ್ತು ಹಿಂದಿನ ಸೋವಿಯಟ್ ಒಕ್ಕೂಟದಲ್ಲಿನ ಅನೇಕ ದಶಕಗಳ ವರೆಗಿನ ಹಿಂಸೆ ಹಾಗೂ ನಿಷೇಧದ ಬಳಿಕ, ಯೆಹೋವನ ಸಾಕ್ಷಿಗಳು ಅಲ್ಬೇನಿಯ, ಕಸಕ್ಸ್ತಾನ್, ಕಿರ್ಗಿಸ್ತಾನ್, ಚೆಕ್ ರಿಪಬ್ಲಿಕ್, ಜಾರ್ಜಿಯ, ಬೆಲಾರಸ್, ರೋಮಾನಿಯ, ಸ್ಲೋವಾಕಿಯ ಮತ್ತು ಹಂಗೇರಿಯಂತಹ ದೇಶಗಳಲ್ಲಿ ಈಗ ಕಾನೂನುಬದ್ಧವಾಗಿ ಮನ್ನಣೆ ಪಡೆದುಕೊಂಡಿದ್ದಾರೆ. ಆದರೆ ಇಂದು ಕೆಲವು ದೇಶಗಳಲ್ಲಿ, ದೀರ್ಘ ಸಮಯದಿಂದ ಸುಸ್ಥಾಪಿತ ನ್ಯಾಯಸಂಬಂಧಿತ ವ್ಯವಸ್ಥೆಗಳಿರುವ ಕೆಲವು ಪಶ್ಚಿಮ ಯೂರೋಪಿಯನ್ ದೇಶಗಳನ್ನು ಸೇರಿಸಿ, ಯೆಹೋವನ ಸಾಕ್ಷಿಗಳ ಹಕ್ಕುಗಳು ಗುರುತರವಾಗಿ ಪಂಥಾಹ್ವಾನಿಸಲ್ಪಡುತ್ತಿವೆ ಇಲ್ಲವೆ ನಿರಾಕರಿಸಲ್ಪಡುತ್ತಿವೆ. ವಿರೋಧಿಗಳು ಸಾಕ್ಷಿಗಳ ವಿರುದ್ಧ ‘ಕಾನೂನಿನ ಮೂಲಕ ತೊಂದರೆ ತರಲು’ ಸಕ್ರಿಯವಾಗಿ ಪ್ರಯತ್ನಿಸುತ್ತಿದ್ದಾರೆ. (ಕೀರ್ತನೆ 94:20) ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ?c
ಯೆಹೋವನ ಸಾಕ್ಷಿಗಳು ಎಲ್ಲ ಸರಕಾರಗಳೊಂದಿಗೆ ಸಹಕರಿಸಲು ಬಯಸುತ್ತಾರಾದರೂ, ತಮ್ಮ ಆರಾಧನೆಯನ್ನು ಮುಂದುವರಿಸಿಕೊಂಡು ಹೋಗಲು ಬೇಕಾದ ಕಾನೂನುಬದ್ಧ ಸ್ವಾತಂತ್ರ್ಯವನ್ನೂ ಅವರು ಬಯಸುತ್ತಾರೆ. ಸುವಾರ್ತೆಯನ್ನು ಸಾರುವ ಆಜ್ಞೆಯನ್ನು ಸೇರಿಸಿ, ದೇವರ ಕಟ್ಟಳೆಗಳಿಗೆ ಅವಿಧೇಯರಾಗುವಂತೆ ಮಾಡುವ ಯಾವುದೇ ಸರಕಾರಿ ನಿಯಮಗಳು ಇಲ್ಲವೆ ನ್ಯಾಯಾಲಯದ ತೀರ್ಪುಗಳು ನಿರರ್ಥಕವಾಗಿವೆ ಎಂಬುದು ಅವರ ದೃಢವಾದ ನಂಬಿಕೆಯಾಗಿದೆ. (ಮಾರ್ಕ 13:10) ಸ್ನೇಹಭಾವದ ಒಪ್ಪಂದಗಳನ್ನು ಮಾಡಲು ಸಾಧ್ಯವಾಗದಿದ್ದಲ್ಲಿ, ಅವರು ಆರಾಧಿಸಲಿಕ್ಕಾಗಿ ತಮಗಿರುವ ದೇವದತ್ತ ಹಕ್ಕಿಗೆ ಕಾನೂನಿನ ಸಂರಕ್ಷಣೆಯನ್ನು ಗಳಿಸಲು ಅಗತ್ಯವಾದ ಮೇಲ್ಮನವಿಗಳನ್ನು ಸಲ್ಲಿಸಿ, ಕಾನೂನಿನ ಕ್ಷೇತ್ರದಲ್ಲಿ ಹೋರಾಡಲು ಸಿದ್ಧರಾಗಿದ್ದಾರೆ. “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು” ಎಂಬ ದೇವರ ಈ ವಾಗ್ದಾನದಲ್ಲಿ ಯೆಹೋವನ ಸಾಕ್ಷಿಗಳಿಗೆ ಸಂಪೂರ್ಣ ಭರವಸೆಯಿದೆ.—ಯೆಶಾಯ 54:17.
[ಅಧ್ಯಯನ ಪ್ರಶ್ನೆಗಳು]
a ಯೆಹೋವನ ಸಾಕ್ಷಿಗಳ ಕಾನೂನುಬದ್ಧ ದಾಖಲೆಯ ಒಂದು ವಿಸ್ತೃತ ಚರ್ಚೆಗಾಗಿ, ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು (ಇಂಗ್ಲಿಷ್) ಎಂಬ ಪುಸ್ತಕದ 30ನೆಯ ಅಧ್ಯಾಯವನ್ನು ದಯವಿಟ್ಟು ನೋಡಿರಿ.
b ಮಾರ್ಡಕ್ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ಓಪೆಲಿಕಾ ನಗರದ ಪ್ರತಿ ಜೋನ್ಸ್ ಅವರ ಮೊಕದ್ದಮೆಯಲ್ಲಿ ನೀಡಿದ್ದ ತನ್ನ ತೀರ್ಪನ್ನು ಬದಲಾಯಿಸಿತು. 1942ರಲ್ಲಿ ನಡೆದ ಜೋನ್ಸ್ ಮೊಕದ್ದಮೆಯಲ್ಲಿ, ಕೆಳದರ್ಜೆಯ ನ್ಯಾಯಾಲಯವು ನೀಡಿದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಎತ್ತಿಹಿಡಿಯಿತು. ಆ ನ್ಯಾಯಾಲಯವು, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಿದ್ದ ರಾಸ್ಕೊ ಜೋನ್ಸ್ ಅವರನ್ನು, ಆಲಬಾಮದಲ್ಲಿರುವ ಓಪಲಿಕಾ ನಗರದ ಬೀದಿಗಳಲ್ಲಿ ತೆರಿಗೆ ಸಲ್ಲಿಸದೆ ಸಾಹಿತ್ಯದ ವಿತರಣೆಯಲ್ಲಿ ತೊಡಗಿದ್ದಕ್ಕಾಗಿ ತಪ್ಪಿತಸ್ಥರೆಂದು ನಿರ್ಣಯಿಸಿತು.
c ಇದೇ ಸಂಚಿಕೆಯ ಪುಟಗಳು 8-18ರಲ್ಲಿರುವ “ತಮ್ಮ ನಂಬಿಕೆಗಾಗಿ ದ್ವೇಷಿಸಲ್ಪಟ್ಟವರು” ಮತ್ತು “ನಮ್ಮ ನಂಬಿಕೆಯನ್ನು ಸಮರ್ಥಿಸುವುದು” ಎಂಬ ಲೇಖನಗಳನ್ನು ನೋಡಿರಿ.
[ಪುಟ 21 ರಲ್ಲಿರುವ ಚೌಕ]
ಯೆಹೋವನ ಸಾಕ್ಷಿಗಳ ಹಕ್ಕುಗಳನ್ನು ಸಮರ್ಥಿಸುವುದು
ಯೆಹೋವನ ಸಾಕ್ಷಿಗಳ ಮೇಲೆ ಬರಮಾಡಲ್ಪಟ್ಟಿರುವ ಹಿಂಸೆಯು, ಭೂವ್ಯಾಪಕವಾಗಿ ಅವರು ನ್ಯಾಯಾಧೀಶರು ಹಾಗೂ ಸರಕಾರಿ ಅಧಿಕಾರಿಗಳ ಮುಂದೆ ನಿಲ್ಲುವಂತೆ ಮಾಡಿದೆ. (ಲೂಕ 21:12, 13) ತಮ್ಮ ಹಕ್ಕುಗಳನ್ನು ಕಾನೂನುಬದ್ಧವಾಗಿ ರಕ್ಷಿಸಿಕೊಳ್ಳುವ ವಿಷಯದಲ್ಲಿ ಯೆಹೋವನ ಸಾಕ್ಷಿಗಳು ಬಹಳ ಶ್ರದ್ಧಾಪೂರ್ವಕವಾಗಿ ಕೆಲಸಮಾಡಿದ್ದಾರೆ. ಹೀಗೆ, ಅನೇಕ ದೇಶಗಳಲ್ಲಾದ ನ್ಯಾಯಾಲಯದ ಗೆಲುವುಗಳು, ಯೆಹೋವನ ಸಾಕ್ಷಿಗಳ ಹಕ್ಕುಗಳನ್ನು ಸೇರಿಸಿ, ಅವರ ಕಾನೂನುಬದ್ಧ ಸ್ವಾತಂತ್ರ್ಯವನ್ನು ರಕ್ಷಿಸಲು ಸಹಾಯ ಮಾಡಿವೆ:
◻ ವ್ಯಾಪಾರಿಗಳ ಮೇಲೆ ಹೊರಿಸಲ್ಪಡುವ ನಿರ್ಬಂಧನೆಗಳಿಂದ ಬಂಧಿತರಾಗದೆ, ಮನೆಯಿಂದ ಮನೆಗೆ ಸಾರುವ ಹಕ್ಕು—ಕಾಮನ್ವೆಲ್ತ್ ಆಫ್ ಪೆನ್ಸಿಲ್ವೇನಿಯದ ಪ್ರತಿ ಮಾರ್ಡಕ್, ಅಮೆರಿಕದ ಸರ್ವೋಚ್ಚ ನ್ಯಾಯಾಲಯ (1943); ಗ್ರೀಸ್ನ ಪ್ರತಿ ಕೋಕಿನಾಕಿಸ್, ಯೂರೋಪಿಯನ್ ಕೋರ್ಟ್ ಆಫ್ ಹ್ಯೂಮನ್ ರೈಟ್ಸ್ (ಈಸಿಏಚ್ಆರ್) (1993).
◻ ಆರಾಧನೆಗಾಗಿ ಸ್ವತಂತ್ರವಾಗಿ ಒಟ್ಟುಸೇರುವ ಹಕ್ಕು—ಗ್ರೀಸ್ನ ಪ್ರತಿ ಮಾನೂಸಾಕೀಸ್ ಮತ್ತು ಇತರರು, ಈಸಿಏಚ್ಆರ್ (1996).
◻ ರಾಷ್ಟ್ರದ ಧ್ವಜ ಇಲ್ಲವೆ ಲಾಂಛನಕ್ಕೆ ತಮ್ಮ ಮನಸ್ಸಾಕ್ಷಿಗನುಸಾರ ಗೌರವವನ್ನು ತೋರಿಸುವುದು ಹೇಗೆಂಬುದನ್ನು ನಿರ್ಧರಿಸುವ ಹಕ್ಕು—ಬಾರ್ನಟ್ನ ಪ್ರತಿ ವೆಸ್ಟ್ ವರ್ಜೀನಿಯ ಸ್ಟೇಟ್ ಬೋರ್ಡ್ ಆಫ್ ಎಜುಕೇಷನ್, ಅಮೆರಿಕದ ಸರ್ವೋಚ್ಚ ನ್ಯಾಯಾಲಯ (1943); ಫಿಲಿಪ್ಪೀನ್ಸ್ನ ಸವೋಚ್ಚ ನ್ಯಾಯಾಲಯ (1993); ಭಾರತದ ಸವೋಚ್ಚ ನ್ಯಾಯಾಲಯ (1986).
◻ ತಮ್ಮ ಕ್ರೈಸ್ತ ಮನಸ್ಸಾಕ್ಷಿಗೆ ವಿರುದ್ಧವಾಗಿರುವ ಮಿಲಿಟರಿ ಸೇವೆಯನ್ನು ನಿರಾಕರಿಸುವ ಹಕ್ಕು—ಗ್ರೀಸ್ನ ಪ್ರತಿ ಯೇವೊರ್ಯಾಥೀಸ್, ಈಸಿಏಚ್ಆರ್ (1997).
◻ ತಮ್ಮ ಮನಸ್ಸಾಕ್ಷಿಗೆ ವಿರುದ್ಧವಾಗಿರದ ಚಿಕಿತ್ಸೆ ಹಾಗೂ ಔಷಧಗಳನ್ನು ಆರಿಸಿಕೊಳ್ಳುವ ಹಕ್ಕು—ಶೂಲ್ಮನ್ ಪ್ರತಿ ಮ್ಯಾಲಟ್, ಆಂಟೇರಿಯೊ, ಕೆನಡ, ಅಪೀಲ್ ನ್ಯಾಯಾಲಯ (1990); ಈ.ಎಲ್.ಏ. ಪ್ರತಿ ವಾಚ್ ಟವರ್, ಸರ್ವೋಚ್ಚ ನ್ಯಾಯಾಲಯ, ಸಾನ್ ಜೂಅನ್, ಪೋರ್ಟೊ ರಿಕೊ (1995); ನಿಕೊಲೌ ಪ್ರತಿ ಫಾಸ್ಮೈರ್, ನ್ಯೂ ಯಾರ್ಕ್, ಅಮೆರಿಕ, ಕೋರ್ಟ್ ಆಫ್ ಅಪೀಲ್ಸ್ (1990).
◻ ಮಕ್ಕಳ ಪಾಲನೆಯ ಸಂಬಂಧದಲ್ಲಾಗುವ ಕಲಹಗಳಲ್ಲಿ ತಮ್ಮ ಬೈಬಲ್ ಆಧಾರಿತ ನಂಬಿಕೆಗಳು ಪಂಥಾಹ್ವಾನಿಸಲ್ಪಟ್ಟಾಗಲೂ, ತಮ್ಮ ಮಕ್ಕಳನ್ನು ಆ ನಂಬಿಕೆಗಳಿಗನುಸಾರ ಬೆಳೆಸುವ ಹಕ್ಕು—ಸೂಸೀ ಪ್ರತಿ ಸಾನ್ ಲಾರೇನ್, ಕೆನಡದ ಸರ್ವೋಚ್ಚ ನ್ಯಾಯಾಲಯ (1997); ಆಸ್ಟ್ರಿಯ ಪ್ರತಿ ಹಾಫ್ಮನ್, ಈಸಿಏಚ್ಆರ್ (1993).
◻ ಮನ್ನಣೆ ಪಡೆದಿರುವ ಇತರ ಧರ್ಮಗಳಂತೆಯೇ, ಕಾನೂನುಬದ್ಧ ನಿಯೋಗಗಳನ್ನು ನಡೆಸುವ ಮತ್ತು ತೆರಿಗೆಯಿಂದ ವಿನಾಯತಿಗಳನ್ನು ಪಡೆದುಕೊಳ್ಳುವ ಹಕ್ಕು—ಹರಿಂಗ್ ಪ್ರತಿ ಜನರು, ನ್ಯೂ ಯಾರ್ಕ್, ಅಮೆರಿಕ, ಕೋರ್ಟ್ ಆಫ್ ಅಪೀಲ್ಸ್ (1960).
◻ ಇತರ ಧರ್ಮಗಳ ಪೂರ್ಣ ಸಮಯದ ಧಾರ್ಮಿಕ ಕೆಲಸಗಾರರಿಗೆ ನೀಡಲ್ಪಟ್ಟಂತಹದ್ದೇ ರೀತಿಯ ಸಮರೂಪ ತೆರಿಗೆಯ ನಿಯಮಗಳು, ವಿಶೇಷವಾದ ಪೂರ್ಣ ಸಮಯದ ಸೇವೆಯಲ್ಲಿರುವವರಿಗೆ ನೀಡುವ ಹಕ್ಕು—ಸಾಮಾಜಿಕ ಭದ್ರತೆಯ ಬ್ರೆಸಿಲಿನ ರಾಷ್ಟ್ರೀಯ ಸಂಸ್ಥೆ, ಬ್ರೆಸಿಲಿಯ, (1996).
[ಪುಟ 20 ರಲ್ಲಿರುವ ಚಿತ್ರ]
ಮೀನೋಸ್ ಕೋಕಿನಾಕಿಸ್ ತಮ್ಮ ಪತ್ನಿಯೊಂದಿಗೆ
[ಪುಟ 20 ರಲ್ಲಿರುವ ಚಿತ್ರ]
ಕುನಿಹೀಟೊ ಕೋಬಯಾಶಿ
[ಪುಟ 19 ರಲ್ಲಿರುವ ಚಿತ್ರ ಕೃಪೆ]
The Complete Encyclopedia of Illustration/J. G. Heck