ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w25 ಜುಲೈ ಪು. 26-30
  • ‘ಯುದ್ಧ ಯೆಹೋವನದ್ದು!’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಯುದ್ಧ ಯೆಹೋವನದ್ದು!’
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಮಿಷನೆರಿಯ ಹುರುಪು ತುಂಬಿದ್ರು
  • ಅಮೆರಿಕ ಬೆತೆಲ್‌ನಲ್ಲಿ ಸೇವೆ
  • ಕಾನೂನು ಹೋರಾಟಕ್ಕೆ ಕಾಲಿಟ್ಟಿದ್ದು
  • ಸಿಹಿಸುದ್ದಿಗಾಗಿ ಕಾನೂನು ಹೋರಾಟ
  • ಯೆಹೋವನಿಗೆ ಋಣಿ!
  • ಕಾನೂನುಬದ್ಧವಾಗಿ ಸುವಾರ್ತೆಯನ್ನು ಸಂರಕ್ಷಿಸುವುದು
    ಕಾವಲಿನಬುರುಜು—1998
  • ಸಿಹಿಸುದ್ದಿಯ ಪ್ರಚಾರಕರು ಕೋರ್ಟಿನ ಮೆಟ್ಟಿಲೇರಿದರು
    ದೇವರ ಸರ್ಕಾರ ಆಳ್ವಿಕೆ ಮಾಡ್ತಿದೆ!
  • ನಾನು ಮಾಡಬೇಕಾಗಿದ್ದುದನ್ನೇ ಮಾಡಿದ್ದೇನೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2025
w25 ಜುಲೈ ಪು. 26-30
ಫಿಲಿಪ್‌ ಬ್ರಮ್ಲಿ.

ಜೀವನ ಕಥೆ

‘ಯುದ್ಧ ಯೆಹೋವನದ್ದು!’

ಫಿಲಿಪ್‌ ಬ್ರಮ್ಲಿ ಅವ್ರ ಮಾತಿನಲ್ಲಿ

ಅವತ್ತು ಜನವರಿ 28, 2010. ನಾನು ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ ಅನ್ನೋ ಸಿಟಿಯಲ್ಲಿ ಇದ್ದೆ. ಆದ್ರೆ ನಾನು ಅಲ್ಲಿ ಸುತ್ತಾಡೋಕೆ ಹೋಗಿರಲಿಲ್ಲ. ಯೆಹೋವನ ಸಾಕ್ಷಿಗಳ ಹಕ್ಕುಗಳ ಪರವಾಗಿ ಮಾತಾಡೋಕೆ, ಮಾನವ ಹಕ್ಕುಗಳ ಯುರೋಪಿಯನ್‌ ನ್ಯಾಯಾಲಯಕ್ಕೆ ನನ್ನನ್ನ ಮತ್ತು ಒಂದು ಲೀಗಲ್‌ ತಂಡವನ್ನ ಸಂಘಟನೆ ಕಳಿಸಿತ್ತು. ಯೆಹೋವನ ಸಾಕ್ಷಿಗಳು ಸುಮಾರು 400 ಕೋಟಿ ರೂಪಾಯಿ (89 ಮಿಲಿಯನ್‌ U.S. ಡಾಲರ್ಸ್‌) ತೆರಿಗೆ ಕಟ್ಟಬೇಕು ಅಂತ ಫ್ರಾನ್ಸ್‌ ಸರ್ಕಾರ ಆರೋಪ ಹಾಕಿರೋದು ಸರಿನಾ ಅನ್ನೋದ್ರ ಬಗ್ಗೆ ಕೇಸ್‌ ನಡೀತಿತ್ತು. ಇದ್ರ ಬಗ್ಗೆ ಕೋರ್ಟ್‌ ಕೊಡೋ ತೀರ್ಪು ಬರೀ ಹಣದ ಬಗ್ಗೆ ಮಾತ್ರ ಅಲ್ಲ ಯೆಹೋವನ ಹೆಸರು, ಯೆಹೋವನ ಜನ್ರಿಗೆ ಸಮಾಜದಲ್ಲಿರೋ ಗೌರವ ಮತ್ತು ಅವ್ರಿಗಿರೋ ಆರಾಧನೆ ಮಾಡೋ ಸ್ವತಂತ್ರದ ಮೇಲೆ ಪ್ರಭಾವ ಬೀರುತ್ತಿತ್ತು. ಆವತ್ತು ಕೋರ್ಟ್‌ನಲ್ಲಿ ಆದ ವಿಷ್ಯನ ನೋಡಿದ್ರೆ, ‘ಯುದ್ಧ ಯೆಹೋವನದ್ದು’ ಅಂತ ಗೊತ್ತಾಗುತ್ತೆ. (1 ಸಮು. 17:47) ಅಲ್ಲಿ ಏನಾಯ್ತು ಅಂತ ಹೇಳ್ತೀನಿ ಬನ್ನಿ.

1993ರಿಂದ 1996ರಲ್ಲಿ ನಾವು ಪಡೆದ ಎಲ್ಲಾ ಕಾಣಿಕೆಗೆ ನಮ್ಮ ಫ್ರಾನ್ಸ್‌ ಬ್ರಾಂಚ್‌ ದೊಡ್ಡ ಮೊತ್ತದ ತೆರಿಗೆ ಕಟ್ಟಬೇಕು ಅಂತ ಫ್ರಾನ್ಸ್‌ ಸರ್ಕಾರ ಆರೋಪ ಹಾಕ್ತು. ನ್ಯಾಯಕ್ಕಾಗಿ ನಾವು ಫ್ರಾನ್ಸ್‌ನಲ್ಲಿ ಕೋರ್ಟ್‌ ಮೆಟ್ಟಿಲೇರಿದ್ವಿ. ಆದ್ರೆ ಆ ಕೋರ್ಟಲ್ಲಿ ನಮಗೆ ನ್ಯಾಯ ಸಿಗ್ಲಿಲ್ಲ. ಆಗ ಸರ್ಕಾರ ನಮ್ಮ ಬ್ರಾಂಚ್‌ ಬ್ಯಾಂಕ್‌ ಅಕೌಂಟಲ್ಲಿದ್ದ ಸುಮಾರು 28 ಕೋಟಿ ರೂಪಾಯಿ (6.3 ಮಿಲಿಯನ್‌ U.S. ಡಾಲರ್ಸ್‌) ಕಾಣಿಕೆಯ ಹಣವನ್ನ ಮುಟ್ಟುಗೋಲು ಹಾಕೊಂಡು ಬಿಡ್ತು. ಆ ಕಾಣಿಕೆನೆಲ್ಲಾ ವಾಪಸ್‌ ಪಡೆಯೋಕೆ ನಮಗಿದ್ದ ಒಂದೇ ದಾರಿ ಮಾನವ ಹಕ್ಕುಗಳ ಯುರೋಪಿಯನ್‌ ನ್ಯಾಯಾಲಯ! ಆದ್ರೆ ಅಲ್ಲಿ ಹೋಗಿ ಮಾತಾಡೋದಕ್ಕಿಂತ ಮುಂಚೆ ಮೊದಲು ಅದ್ರ ಪ್ರತಿನಿಧಿ ಮತ್ತು ಫ್ರಾನ್ಸ್‌ ಸರ್ಕಾರದ ವಕೀಲರ ಜೊತೇಲಿ ಆ ವಿಷ್ಯನ ಚರ್ಚೆ ಮಾಡಬೇಕು ಅಂತ ಯುರೋಪಿಯನ್‌ ನ್ಯಾಯಾಲಯ ಹೇಳ್ತು.

ಆ ಯುರೋಪಿಯನ್‌ ಕೋರ್ಟ್‌ನ ಪ್ರತಿನಿಧಿ ನಮಗೆ, ‘ಆ ತೆರಿಗೆ ಮೊತ್ತದಲ್ಲಿ ಸ್ವಲ್ಪ ಸರ್ಕಾರಕ್ಕೆ ಕೊಟ್ಟುಬಿಡಿ’ ಅಂತ ಹೇಳ್ತಾರೆ ಅನ್ನೋ ಟೆನ್ಷನ್‌ ಇತ್ತು. ಇವ್ರ ಹತ್ರ ಒಪ್ಪಂದ ಮಾಡ್ಕೊಳ್ಳೋಕೆ ನಾವು ಒಂದು ರೂಪಾಯಿ ಕೊಟ್ರೂ ಬೈಬಲ್‌ ತತ್ವನ ಮುರಿದಂಗೆ ಅಂತ ನಮಗೆ ಗೊತ್ತಿತ್ತು. ಆ ಹಣ, ನಮ್ಮ ಪ್ರೀತಿಯ ಸಹೋದರರು ದೇವರ ಆಳ್ವಿಕೆಯ ಕೆಲಸನ ಹೆಚ್ಚಿಸೋಕೆ ಕೊಟ್ಟ ಕಾಣಿಕೆ. ಅದ್ರ ಮೇಲೆ ಸರ್ಕಾರಕ್ಕೆ ಯಾವುದೇ ಹಕ್ಕು ಇರ್ಲಿಲ್ಲ. (ಮತ್ತಾ. 22:21) ಆದ್ರೂ ಕೋರ್ಟ್‌ ಒಂದ್ಸಲ ನೀವು ಕೂತು ಚರ್ಚೆ ಮಾಡಿ ಅಂತ ಹೇಳಿದ್ರಿಂದ ಅವ್ರಿಗೆ ಗೌರವ ಕೊಟ್ಟು ನಾವು ಆ ಮೀಟಿಂಗ್‌ಗೆ ಹೋದ್ವಿ.

ಯುರೋಪಿಯನ್‌ ನ್ಯಾಯಾಲಯದ ಮುಂದೆ ನಮ್ಮ ಲೀಗಲ್‌ ಟೀಮ್‌, 2010

ಆ ಮೀಟಿಂಗ್‌ಗೆ ನಾವು ಕೋರ್ಟ್‌ನ ಒಂದು ಕಾನ್ಫರೆನ್ಸ್‌ ರೂಮ್‌ನಲ್ಲಿ ಸೇರಿ ಬಂದ್ವಿ. ನಾವು ಭಯ ಬಿದ್ದಂತೆ ಆ ಮೀಟಿಂಗ್‌ನ ಶುರುವಲ್ಲೇ ಆ ಪ್ರತಿನಿಧಿ, ‘ನೀವು ಫ್ರಾನ್ಸ್‌ ಸರ್ಕಾರಕ್ಕೆ ಸ್ವಲ್ಪ ತೆರಿಗೆ ಕೊಡಲೇಬೇಕು’ ಅಂತ ಹೇಳಿಬಿಟ್ರು. ಆಗ ತಕ್ಷಣ ನಾವು, ‘ಈ ಸರ್ಕಾರ ಈಗಾಗಲೇ ನಮ್ಮ ಬ್ಯಾಂಕ್‌ ಅಕೌಂಟ್‌ನಿಂದ ಸುಮಾರು 28 ಕೋಟಿ ರೂಪಾಯಿಗಳನ್ನ ಮುಟ್ಟುಗೋಲು ಹಾಕ್ಕೊಂಡಿದ್ದಾರೆ ಅಂತ ನಿಮಗೆ ಗೊತ್ತಾ’ ಅಂತ ಕೇಳಿದ್ವಿ. ಈ ಪ್ರಶ್ನೆ ಕೇಳೋಕೆ ಪವಿತ್ರಶಕ್ತಿನೇ ನಮ್ಮನ್ನ ಪ್ರಚೋದಿಸ್ತು.

ನಾವು ಹೇಳಿದ್ದನ್ನ ಕೇಳಿ ಆ ಪ್ರತಿನಿಧಿಗೆ ಶಾಕ್‌ ಆಯ್ತು. ಸರ್ಕಾರದ ಲೀಗಲ್‌ ಟೀಮ್‌ ‘ಹೌದು, ನಾವು ಇವ್ರ ಹಣನ ಮುಟ್ಟಗೋಲು ಹಾಕೊಂಡಿದ್ದೀವಿ’ ಅಂದಾಗ, ಆಕೆಗೆ ನಮ್ಮ ಕೇಸ್‌ ಕಡೆ ಇದ್ದ ಯೋಚ್ನೆನೇ ಬದಲಾಗಿ ಬಿಡ್ತು. ಆಕೆ ಅವ್ರನ್ನ ಬೈದು ಆ ಮೀಟಿಂಗ್‌ನ ಅಲ್ಲೇ ನಿಲ್ಲಿಸಿ ಬಿಟ್ಟಳು. ಆಗ ಯೆಹೋವ ನಾವು ಅಂದ್ಕೊಂಡಿದ್ದಕ್ಕಿಂತ ಚೆನ್ನಾಗಿ ಆ ಕೇಸ್‌ನ ದಿಕ್ಕನ್ನೇ ಬದಲಾಯಿಸಿದನು ಅಂತ ನಮಗೆ ಅರ್ಥ ಆಯ್ತು. ಆ ಮೀಟಿಂಗ್‌ನಲ್ಲಿ ಆಗಿದ್ದನ್ನೆಲ್ಲ ನಮಗೆ ನಂಬೋಕೆ ಆಗ್ಲಿಲ್ಲ. ನಾವು ಖುಷಿಖುಷಿಯಾಗಿ ಆ ಮೀಟಿಂಗ್‌ನಿಂದ ಹೊರ ಬಂದ್ವಿ.

ಜೂನ್‌ 30, 2011ರಲ್ಲಿ, ಮಾನವ ಹಕ್ಕುಗಳ ಯುರೋಪಿಯನ್‌ ನ್ಯಾಯಾಲಯ ನಮ್ಮ ಪರವಾಗಿ ತೀರ್ಪು ಕೊಡ್ತು! ನಮ್ಮ ಮೇಲೆ ಸರ್ಕಾರ ತೆರಿಗೆ ಹಾಕಿದ್ದು ತಪ್ಪು. ಹಾಗಾಗಿ ‘ಮುಟ್ಟುಗೋಲು ಹಾಕೊಂಡಿರೋ ಹಣನೆಲ್ಲಾ ಬಡ್ಡಿ ಸಮೇತ ವಾಪಸ್‌ ಕೊಡಬೇಕು’ ಅಂತ ಆರ್ಡರ್‌ ಮಾಡ್ತು. ಅವತ್ತು ಕೊಟ್ಟ ತೀರ್ಪು ಇವತ್ತಿನವರೆಗೂ ಫ್ರಾನ್ಸ್‌ನಲ್ಲಿ ಸತ್ಯಾರಾಧನೆಯನ್ನ ಖುಷಿಯಿಂದ ಮಾಡೋಕೆ ಸ್ವಾತಂತ್ರ್ಯ ಕೊಟ್ಟಿದೆ. ನಾವು ತಯಾರಿ ಮಾಡ್ವಾಗ ಆ ಪ್ರಶ್ನೆ ಕೇಳಬೇಕು ಅಂತ ಅಂದ್ಕೊಂಡೆ ಇರಲಿಲ್ಲ. ಆದ್ರೆ ಪಟ್ಟಂತ ಕೇಳಿದ ಆ ಒಂದು ಪ್ರಶ್ನೆ ಗೊಲ್ಯಾತನ ತಲೆಗೆ ಹೊಡೆದ ಒಂದು ಕಲ್ಲಿನ ತರ ಇತ್ತು. ಅದು ಆ ಕೇಸ್‌ನ ದಿಕ್ಕನ್ನೇ ಬದಲಾಯಿಸಿ ನಮಗೆ ಗೆಲುವು ಕೊಡ್ತು. ಇಷ್ಟಕ್ಕೂ ನಾವು ಗೆಲ್ಲೋಕೆ ಕಾರಣ ಯಾರು? ದಾವೀದ ಗೊಲ್ಯಾತನಿಗೆ ಹೇಳಿದ ಮಾತು ನಿಮಗೆ ನೆನಪಿದ್ಯಾ? ‘ಯುದ್ಧ ಯೆಹೋವನದ್ದು.’—1 ಸಮು. 17:45-47.

ಯೆಹೋವನ ಸಾಕ್ಷಿಗಳಿಗೆ ಕೋರ್ಟ್‌ನಲ್ಲಿ ಜಯ ಸಿಕ್ಕಿರೋದು ಇದೊಂದೇ ಸಲ ಅಲ್ಲ. ಇವತ್ತಿನವರೆಗೂ ದೊಡ್ಡದೊಡ್ಡ ರಾಜಕೀಯ ಮತ್ತು ಧಾರ್ಮಿಕ ವಿರೋಧಗಳ ಮಧ್ಯ ಕೂಡ ಎಷ್ಟೊಂದು ಕೇಸ್‌ಗಳನ್ನ ನಾವು ಗೆದ್ದಿದ್ದೀವಿ. 70 ದೇಶಗಳ ಸರ್ವೋಚ್ಛ ನ್ಯಾಯಾಲಯಗಳಲ್ಲಿ ಮತ್ತು ಹಲವಾರು ಅಂತರಾಷ್ಟ್ರೀಯ ಕೋರ್ಟ್‌ಗಳಲ್ಲಿ ಸುಮಾರು 1,225 ತೀರ್ಪುಗಳು ಯೆಹೋವನ ಸಾಕ್ಷಿಗಳ ಪರವಾಗಿ ಬಂದಿದೆ. ಈ ಎಲ್ಲಾ ತೀರ್ಪುಗಳಿಂದಾಗಿ ನಮಗೆ ಹಲವಾರು ಮೂಲಭೂತ ಹಕ್ಕುಗಳು ಸಿಕ್ಕಿದೆ. ಉದಾಹರಣೆಗೆ, ಯೆಹೋವನ ಸಾಕ್ಷಿಗಳು ಒಂದು ಸ್ವತಂತ್ರ ಧರ್ಮ ಅನ್ನೋ ಗೌರವ ಸಿಕ್ಕಿದೆ. ನಾವು ಸಾರ್ವಜನಿಕ ಸೇವೆ ಮಾಡೋ ಹಕ್ಕು ಸಿಕ್ಕಿದೆ. ನಾವು ರಾಷ್ಟ್ರೀಯ ಆಚರಣೆಗಳಲ್ಲಿ ಸೇರದೇ ಇರೋದು, ರಕ್ತವನ್ನ ತಿರಸ್ಕರಿಸೋದು ನಮ್ಮ ಹಕ್ಕು ಅಂತ ರುಜುವಾಗಿದೆ.

ನಾನು ಅಮೆರಿಕದ ನ್ಯೂಯಾರ್ಕ್‌ನಲ್ಲಿರೋ ಯೆಹೋವನ ಸಾಕ್ಷಿಗಳ ಮುಖ್ಯ ಕಾರ್ಯಾಲಯದಲ್ಲಿ ಸೇವೆ ಮಾಡ್ತಿದ್ದೀನಿ. ಹಾಗಾದ್ರೆ ಯೂರೋಪ್‌ಗೆ ಬಂದು ಈ ಕೋರ್ಟ್‌ ಕೇಸ್‌ನಲ್ಲಿ ನಾನು ಯಾಕೆ ಹೋರಾಡಿದೆ?

ಮಿಷನೆರಿಯ ಹುರುಪು ತುಂಬಿದ್ರು

ನನ್ನ ಅಪ್ಪ ಜಾರ್ಜ್‌, ಅಮ್ಮ ಲುಜಿಲ್‌ ಗಿಲ್ಯಡ್‌ನ 12ನೇ ತರಗತಿಗೆ ಹೋಗಿದ್ರು. ಆಮೇಲೆ ಅವರು ಇಥಿಯೋಪಿಯಾಗೆ ಬಂದು ಸೇವೆ ಮಾಡ್ತಿದ್ರು. ನಾನು 1956ರಲ್ಲಿ ಹುಟ್ಟಿದೆ. ಒಂದನೇ ಶತಮಾನದಲ್ಲಿ ಸಿಹಿಸುದ್ದಿ ಸಾರುವವನಾಗಿದ್ದ ಫಿಲಿಪ್ಪನ ಹೆಸರನ್ನೇ ನನಗೂ ಇಟ್ರು. (ಅ. ಕಾ. 21:8) ಮುಂದಿನ ವರ್ಷ ಆ ದೇಶದಲ್ಲಿ ಸರ್ಕಾರ ನಮ್ಮ ಆರಾಧನೆ ಮೇಲೆ ನಿಷೇಧ ಹಾಕ್ತು. ಆಗ ನಾನಿನ್ನೂ ಚಿಕ್ಕ ಮಗು. ಆದ್ರೆ ನಮ್ಮ ಕುಟುಂಬ ಯೆಹೋವನನ್ನ ರಹಸ್ಯವಾಗಿ ಆರಾಧನೆ ಮಾಡ್ತಾ ಇದಿದ್ದು ನನಗೆ ನೆನಪಿದೆ. ಆಗ ಅದನ್ನೆಲ್ಲಾ ನೋಡೋಕೆ ಖುಷಿ ಆಗ್ತಿತ್ತು. ಆದ್ರೆ 1960ರಲ್ಲಿ ಅಧಿಕಾರಿಗಳು ದೇಶ ಬಿಟ್ಟು ಹೋಗೋಕೆ ನಮ್ಮನ್ನ ಒತ್ತಾಯಿಸಿದ್ರು.

ಇಥಿಯೋಪಿಯಾದಲ್ಲಿ ನೇತನ್‌ ಹೆಚ್‌ ನಾರ್‌ ನಮ್ಮ ಕುಟುಂಬನ ಭೇಟಿ ಮಾಡ್ತಿರೋದು, 1959

ನಾವು ಅಮೆರಿಕದ ಕ್ಯಾನ್‌ಸಸ್‌ಗೆ ಬಂದ್ವಿ. ನಮ್ಮ ಅಪ್ಪಅಮ್ಮ ದೇಶ ಬಿಟ್ಟು ಬಂದ್ರೂ ಅವ್ರ ಮಿಷನರಿ ಹುರುಪನ್ನ ಮಾತ್ರ ಬಿಡ್ಲಿಲ್ಲ. ನನಗೆ ಜೂಡಿ ಅನ್ನೋ ಅಕ್ಕ, ಲೆಸ್ಲಿ ಅನ್ನೋ ತಮ್ಮ ಇದ್ದಾರೆ. ಇವರೂ ಇಥಿಯೋಪಿಯಾದಲ್ಲೇ ಹುಟ್ಟಿದ್ರು. ನಮ್ಮ ಅಪ್ಪಅಮ್ಮನಿಗೆ ಸತ್ಯ ಅಂದ್ರೆ ಪಂಚಪ್ರಾಣ. ಅವರು ನಮಗೆ ಯೆಹೋವನನ್ನ ಪ್ರೀತಿಸೋಕೆ, ಆತನ ಸೇವೆ ಮಾಡೋಕೆ ಚೆನ್ನಾಗಿ ಕಲಿಸಿದ್ರು. ನನಗೆ 13 ವರ್ಷ ಇದ್ದಾಗ ದೀಕ್ಷಾಸ್ನಾನ ತಗೊಂಡೆ. ಮೂರು ವರ್ಷ ಆದ್ಮೇಲೆ ಅಗತ್ಯ ಇರೋ ಕಡೆ ಅಂದ್ರೆ ಪೆರುಗೆ ನಾವು ಬಂದ್ವಿ.

ನನಗೆ 18 ವರ್ಷ ಆದಾಗ 1974ರಲ್ಲಿ ಪೆರು ಬೆತೆಲ್‌ ನನ್ನನ್ನ ಮತ್ತು ನನ್ನ ಜೊತೆ ನಾಲ್ಕು ಸಹೋದರರನ್ನ ವಿಶೇಷ ಪಯನೀಯರಾಗಿ ನೇಮಿಸಿತು. ಆಗ ಯಾರೂ ಸೇವೆ ಮಾಡದೇ ಇದ್ದ ಆ್ಯಂಡೀಸ್‌ ಬೆಟ್ಟಗಳ ಮೇಲೆ ನಾವು ಸಿಹಿಸುದ್ದಿ ಸಾರಬೇಕಿತ್ತು. ಅಲ್ಲಿ ಕೆಚುವಾ ಮತ್ತು ಐಮಾರ ಅನ್ನೋ ಬುಡಕಟ್ಟು ಜನಾಂಗಗಳಿಗೆ ಸಿಹಿಸುದ್ದಿ ಸಾರಿದ್ವಿ. ನಾವು ಓಡಾಡೋಕೆ ಮತ್ತು ಇರೋಕೆ ಒಂದು ವ್ಯಾನ್‌ ಮಾಡ್ಕೊಂಡಿದ್ವಿ. ಅದು ನೋಡೋಕೆ ಬಾಕ್ಸ್‌ ತರ ಇತ್ತು, ಅದಕ್ಕೆ ನಾವು ಆರ್ಕ್‌ ಅಂತ ಹೆಸರಿಟ್ಟಿದ್ವಿ. ಅಲ್ಲಿನ ಜನ್ರಿಗೆ ಬೈಬಲಿಂದ ಇನ್ಮೇಲೆ ಬಡತನ, ಕಾಯಿಲೆ, ಸಾವಿರಲ್ಲ ಅಂತ ಕಲಿಸಿದ ದಿನಗಳನ್ನ ಮರೆಯೋಕೆ ಆಗಲ್ಲ. (ಪ್ರಕ. 21:3, 4) ಎಷ್ಟೋ ಜನ ಇದನ್ನ ಕೇಳಿ ಯೆಹೋವನ ಆರಾಧಕರಾದ್ರು.

ದೊಡ್ಡ ನದಿಗಳನ್ನ ದಾಟಿ ಹೋಗೋಕೆ ಬಳಸ್ತಿದ್ದ ಮೋಟಾರು ವಾಹನ.

ನಮ್ಮ ಗಾಡಿ “ಆರ್ಕ್‌,” 1974

ಅಮೆರಿಕ ಬೆತೆಲ್‌ನಲ್ಲಿ ಸೇವೆ

1977ರಲ್ಲಿ ಆಡಳಿತ ಮಂಡಲಿಯ ಸದಸ್ಯರಾದ ಆಲ್ಬರ್ಟ್‌ ಶ್ರೋಡರ್‌ ಪೆರುಗೆ ಬಂದಿದ್ರು. ಆಗ ಅವರು ನನಗೆ ಅಮೆರಿಕದ ಬೆತೆಲಲ್ಲಿ ಸೇವೆ ಮಾಡೋಕೆ ಅರ್ಜಿ ಹಾಕು ಅಂತ ಪ್ರೋತ್ಸಾಹ ಕೊಟ್ರು. ನಾನು ಅರ್ಜಿ ಹಾಕಿದೆ. ಜೂನ್‌ 17, 1977ರಲ್ಲಿ ಬ್ರೂಕ್ಲಿನ್‌ ಬೆತೆಲಲ್ಲಿ ಸೇವೆ ಮಾಡೋಕೆ ಶುರು ಮಾಡಿದೆ. ಅಲ್ಲಿ ನಾಲ್ಕು ವರ್ಷ ಕ್ಲೀನಿಂಗ್‌ ಮತ್ತು ಮೆಂಟೆನೆನ್ಸ್‌ ಡಿಪಾರ್ಟ್ಮೆಂಟ್‌ನಲ್ಲಿ ಸೇವೆ ಮಾಡಿದೆ.

ನಮ್ಮ ಮದುವೆ ದಿನ, 1979

ಜೂನ್‌ 1978ರಲ್ಲಿ, ಲೂಸಿಯಾನದಲ್ಲಿ ನಡೆದ ಅಂತರಾಷ್ಟ್ರೀಯ ಅಧಿವೇಶನದಲ್ಲಿ ಎಲಿಸಬೆತ್‌ ಅವಲೋನ್‌ ಅನ್ನೋ ಒಬ್ಬ ಸಹೋದರಿನ ಭೇಟಿ ಮಾಡಿದೆ. ಅವ್ರ ಅಪ್ಪಅಮ್ಮನಿಗೂ ನಮ್ಮ ಅಪ್ಪಅಮ್ಮ ತರಾನೇ ಸತ್ಯ ಅಂದ್ರೆ ಪಂಚಪ್ರಾಣ. ಎಲಿಸಬೆತ್‌ ನಾಲ್ಕು ವರ್ಷಗಳಿಂದ ಪಯನಿಯರ್‌ ಸೇವೆ ಮಾಡ್ತಿದ್ದಳು. ಜೀವನಪೂರ್ತಿ ಪೂರ್ಣ ಸಮಯದ ಸೇವೆ ಮಾಡಬೇಕು ಅಂತ ಆಸೆಪಡ್ತಿದ್ದಳು. ನಾವಿಬ್ರೂ ಆಗಾಗ ಮಾತಾಡ್ತಾ ಇದ್ವಿ. ಅದಾದ ಸ್ವಲ್ಪದ್ರಲ್ಲೇ ನಾವು ಒಬ್ರನ್ನೊಬ್ರು ತುಂಬ ಪ್ರೀತಿಸಿದ್ವಿ. ಅದಕ್ಕೆ ಅಕ್ಟೋಬರ್‌ 20, 1979ರಲ್ಲಿ ನಾವಿಬ್ರು ಮದುವೆ ಆದ್ವಿ. ಅದಾದ್ಮೇಲೆ ಜೊತೆಯಾಗಿ ನಾವು ಬೆತೆಲ್‌ ಸೇವೆನ ಶುರು ಮಾಡಿದ್ವಿ.

ನಾವು ಮೊದ್ಲು ಬ್ರೂಕ್ಲಿನ್‌ ಸ್ಪ್ಯಾನಿಷ್‌ ಸಭೆಗೆ ಹೋದ್ವಿ. ಅಲ್ಲಿದ್ದ ಸಹೋದರರು ನಮ್ಮನ್ನ ತುಂಬ ಪ್ರೀತಿಸ್ತಿದ್ರು. ಅದಾದ್ಮೇಲೆ ಬೆತೆಲ್‌ ಸೇವೆ ಮಾಡ್ಕೊಂಡೇ ನಾವು ಮೂರು ಬೇರೆಬೇರೆ ಸಭೆಗಳಲ್ಲಿ ಸಹವಾಸ ಮಾಡಿದ್ವಿ. ಅಲ್ಲಿದ್ದ ಸ್ನೇಹಿತರು ಮತ್ತು ಕುಟುಂಬದವರು ನಮ್ಮನ್ನ ತುಂಬ ಚೆನ್ನಾಗಿ ನೋಡ್ಕೊಳ್ತಿದ್ರು. ಮುಖ್ಯವಾಗಿ ವಯಸ್ಸಾಗಿದ್ದ ನಮ್ಮ ಅಪ್ಪಅಮ್ಮನಿಗೆ ಚೆನ್ನಾಗಿ ಆರೈಕೆ ಮಾಡ್ತಿದ್ರು.

ಒಂದು ಸಭಾಕೂಟದಲ್ಲಿ ಬೆತೆಲ್‌ ಸಹೋದರರ ಜೊತೆ ಫಿಲಿಪ್‌ ಇದ್ದಾರೆ.

ಬ್ರೂಕ್ಲಿನ್‌ ಸ್ಪ್ಯಾನಿಷ್‌ ಸಭೇಲಿದ್ದ ಬೆತೆಲಿಗರು, 1986

ಕಾನೂನು ಹೋರಾಟಕ್ಕೆ ಕಾಲಿಟ್ಟಿದ್ದು

ಜನವರಿ 1982ರಲ್ಲಿ ನನಗೊಂದು ಆಶ್ಚರ್ಯ ಕಾದಿತ್ತು! ಬೆತೆಲಿನ ಲೀಗಲ್‌ ಡಿಪಾರ್ಟ್ಮೆಂಟ್‌ನಲ್ಲಿ ಸೇವೆ ಮಾಡೋಕೆ ನನ್ನನ್ನ ನೇಮಿಸಿದ್ರು. ಮೂರು ವರ್ಷ ಆದ್ಮೇಲೆ ಲಾಯರ್‌ ಆಗೋಕೆ ನನ್ನನ್ನ ಕಾಲೇಜಲ್ಲಿ ಓದೋಕೆ ಹೇಳಿದ್ರು. ಕಾಲೇಜಲ್ಲಿ ಯೆಹೋವನ ಸಾಕ್ಷಿಗಳ ಎಷ್ಟೋ ಕೇಸ್‌ಗಳ ಬಗ್ಗೆ ಚರ್ಚೆ ಆಗ್ತಿತ್ತು. ನಾವು ಗೆದ್ದ ಎಷ್ಟೋ ಕೇಸ್‌ಗಳನ್ನ ಇಟ್ಕೊಂಡೇ ಅಮೆರಿಕದಲ್ಲಿ ಮತ್ತು ಬೇರೆ ದೇಶಗಳಲ್ಲಿ ಎಷ್ಟೋ ಜನ ಇವತ್ತು ಆರಾಮಾಗಿದ್ದಾರೆ ಅಂತ ನಂಗೆ ಆಗ ಗೊತ್ತಾಯ್ತು. ಇದ್ರಿಂದ ತುಂಬ ಆಶ್ಚರ್ಯ ಆಯ್ತು.

ನಂಗೆ 30 ವರ್ಷ ಆದಾಗ, ಅಂದ್ರೆ 1986ರಲ್ಲಿ ಲೀಗಲ್‌ ಡಿಪಾರ್ಟ್ಮೆಂಟ್‌ನ ಮೇಲ್ವಿಚಾರಕನಾಗಿ ನನ್ನನ್ನ ನೇಮಿಸಿದ್ರು. ನಾನು ವಯಸ್ಸಿನಲ್ಲಿ ಚಿಕ್ಕವನಾಗಿದ್ರೂ ಬೆತೆಲ್‌ ನನ್ನ ಮೇಲಿಟ್ಟ ನಂಬಿಕೆನ ನೋಡಿ ಒಂದು ಕಡೆ ಖುಷಿ ಆಯ್ತು. ಆದ್ರೆ ಈ ನೇಮಕ ಅಷ್ಟು ಸುಲಭ ಅಲ್ಲ ಅಂತ ಚಿಂತೆನೂ ಆಯ್ತು.

1988ರಲ್ಲಿ ಕೊನೆಗೂ ನಾನು ಲಾಯರ್‌ ಆದೆ. ಆದ್ರೆ ಕಾಲೇಜ್‌ಗೆ ಹೋಗಿದ್ರಿಂದ ಯೆಹೋವನ ಜೊತೆ ನನಗಿದ್ದ ಸಂಬಂಧಕ್ಕೆ ಏಟು ಬಿತ್ತು. ನಾನು ಯೆಹೋವನಿಂದ ದೂರ ಹೋಗಿದ್ದೆ. ಇದು ನಂಗೆ ಗೊತ್ತೇ ಆಗ್ಲಿಲ್ಲ. ಉನ್ನತ ಶಿಕ್ಷಣ ಮಾಡ್ವಾಗ ‘ನಾನೇ ಎಲ್ರಿಗಿಂತ ಶ್ರೇಷ್ಠ, ಬೇರೆಯವ್ರಿಗಿಂತ ನಂಗೆ ತುಂಬಾ ಜ್ಞಾನ ಇದೆ’ ಅಂತ ಕೆಲವೊಮ್ಮೆ ನಮಗೆ ಅನಿಸಿಬಿಡಬಹುದು. ಈ ವಿಷ್ಯದಲ್ಲಿ ನನ್ನ ಹೆಂಡ್ತಿ ಎಲಿಸಬೆತ್‌ ನನಗೆ ಸಹಾಯ ಮಾಡಿದಳು. ಕಾಲೇಜ್‌ಗೆ ಹೋಗೋದಕ್ಕಿಂತ ಮುಂಚೆ ನಂಗೆ ಯೆಹೋವನ ಜೊತೆ ಇದ್ದ ಸಂಬಂಧನ, ಸೇವೆನ ಜಾಸ್ತಿ ಮಾಡೋಕೆ ಸಹಾಯ ಮಾಡಿದಳು. ಇದೆಲ್ಲ ಒಂದೇ ರಾತ್ರೀಲಿ ಆಗ್ಲಿಲ್ಲ, ಸಮಯ ಹಿಡಿತು. ನಾನು ಕೊನೆಗೂ ಯೆಹೋವನಿಗೆ ಮುಂಚಿನ ತರ ಹತ್ರ ಆದೆ. ತುಂಬ ಜ್ಞಾನ ಇದ್ರೆ ಏನೋ ದೊಡ್ಡ ಸಾಧನೆ ಮಾಡಿಬಿಡ್ತೀವಿ ಅಂತ ತುಂಬ ಜನ ಅಂದ್ಕೊಳ್ತಾರೆ. ಆದ್ರೆ ಅದೆಲ್ಲಾ ಸುಳ್ಳು! ಯಾಕಂದ್ರೆ ಒಬ್ಬ ವ್ಯಕ್ತಿಗೆ ನಿಜವಾಗ್ಲೂ ಬೆಲೆ ಸಿಗೋದು ಅವನಿಗೆ ಯೆಹೋವನ ಜೊತೆ ಇರೋ ಸ್ನೇಹದಿಂದ ಮತ್ತು ಅವನು ಯೆಹೋವನನ್ನ ಹಾಗೂ ಆತನ ಜನ್ರನ್ನ ಪ್ರೀತಿಸೋದ್ರಿಂದ ಮಾತ್ರ!

ಸಿಹಿಸುದ್ದಿಗಾಗಿ ಕಾನೂನು ಹೋರಾಟ

ನಾನು ಲಾಯರ್‌ ಆದ್ಮೇಲೆ ಬೆತೆಲಿನ ಲೀಗಲ್‌ ಡಿಪಾರ್ಟ್ಮೆಂಟ್‌ಗೆ ಸಹಾಯ ಮಾಡೋದ್ರ ಕಡೆಗೆ ಪೂರ್ತಿ ಗಮನ ಕೊಟ್ಟೆ. ನಮ್ಮ ಸಂಘಟನೆನ ಮತ್ತು ಸಿಹಿಸುದ್ದಿ ಸಾರೋಕೆ ನಮಗಿರೋ ಹಕ್ಕನ್ನ ಕಾಪಾಡೋದು ನನ್ನ ಕೆಲಸ ಆಗಿತ್ತು. ನಮ್ಮ ಸಂಘಟನೆ ತುಂಬ ಬೇಗ ಬೆಳಿತಾ ಇತ್ತು. ಹಾಗಾಗಿ ಕಾನೂನಿಗೆ ಸಂಬಂಧಿಸಿದ ಕೆಲಸಗಳನ್ನ ಮಾಡೋದು ಒಂದು ಕಡೆ ಚೆನ್ನಾಗೂ ಇತ್ತು, ಇನ್ನೊಂದು ಕಡೆ ಸವಾಲಾಗೂ ಇತ್ತು. ಉದಾಹರಣೆಗೆ, 1990ರಲ್ಲಿ ಬೆತೆಲ್‌ನಲ್ಲಿದ್ದ ಲೀಗಲ್‌ ಡಿಪಾರ್ಟ್ಮೆಂಟ್‌, ‘ಸಾಹಿತ್ಯಗಳಿಗೆ ಕಾಣಿಕೆ ತಗೊಳ್ತಿದ್ದನ್ನ ಇನ್ನು ಮೇಲೆ ನಿಲ್ಲಿಸಬೇಕು’ ಅಂತ ಹೇಳಿತು. ಹಾಗಾಗಿ ಯೆಹೋವನ ಸಾಕ್ಷಿಗಳು ಸಾಹಿತ್ಯಗಳನ್ನ ಫ್ರೀ ಆಗಿ ಜನ್ರಿಗೆ ಕೊಡೋಕೆ ಶುರು ಮಾಡಿದ್ರು. ಇದ್ರಿಂದ ಬೆತೆಲ್‌ನಲ್ಲಿ ಮತ್ತು ಸೇವೆಲಿ ಎಷ್ಟೋ ಕೆಲಸಗಳು ಕಡಿಮೆ ಆಯ್ತು. ತೆರಿಗೆ ವಿಷ್ಯದಲ್ಲಿ ಬರ್ತಿದ್ದ ಅನಾವಶ್ಯಕ ಸಮಸ್ಯೆಗಳು ಇಲ್ಲದೆ ಹೋಯ್ತು. ಆದ್ರೆ, ‘ಸಾಹಿತ್ಯನ ಉಚಿತವಾಗಿ ಕೊಟ್ರೆ ಇನ್ನು ಮೇಲೆ ನಮಗೆ ಕಾಣಿಕೆ ಜಾಸ್ತಿ ಬರಲ್ಲ. ಸಿಹಿಸುದ್ದಿ ಸಾರೋ ಕೆಲಸಕ್ಕೆ ಮುಂದೆ ತೊಂದ್ರೆ ಆಗುತ್ತೆ’ ಅಂತ ಕೆಲವ್ರಿಗೆ ಅನಿಸ್ತು. ಆದ್ರೆ ಯೆಹೋವ ಆ ತರ ಆಗೋಕೆ ಬಿಡ್ಲಿಲ್ಲ. 1990ರಿಂದ ಇವತ್ತಿನವರೆಗೂ, ಸತ್ಯಕ್ಕೆ ಬಂದವ್ರ ಸಂಖ್ಯೆ ಎರಡು ಪಟ್ಟು ಜಾಸ್ತಿ ಆಗಿದೆ. ಇವತ್ತು ಜೀವ ಉಳಿಸೋ ಸಿಹಿಸುದ್ದಿ ಜನ್ರಿಗೆ ಫ್ರೀ ಆಗಿ ಸಿಕ್ತಿದೆ. ಇದನ್ನೆಲ್ಲಾ ನೋಡಿದ್ರೆ ಈ ಸಂಘಟನೆನ ನಡೆಸ್ತಿರೋದು, ಈ ಬದಲಾವಣೆಗಳನ್ನೆಲ್ಲ ಯಶಸ್ವಿ ಆಗೋ ತರ ಮಾಡ್ತಿರೋದು ಯೆಹೋವನೇ ಅಂತ ನನಗೆ ಸ್ಪಷ್ಟವಾಗಿ ಗೊತ್ತಾಗಿದೆ.—ವಿಮೋ. 15:2; ಮತ್ತಾ. 24:45.

ನಮ್ಮ ಹತ್ರ ಒಳ್ಳೆ ಲಾಯರ್‌ಗಳು ಇರೋದ್ರಿಂದ ನಾವು ಕೋರ್ಟ್‌ ಕೇಸ್‌ಗಳನ್ನ ಗೆಲ್ತಿದ್ದೀವಿ ಅನ್ನೋದು ನಿಜ ಅಲ್ಲ. ತುಂಬಾ ಸಲ ನಾವು ಗೆಲ್ಲೋಕೆ ಕಾರಣ ಯೆಹೋವನ ಜನ್ರ ಒಳ್ಳೆ ನಡತೆ. ಇದಕ್ಕೊಂದು ಉದಾಹರಣೆ ಹೇಳ್ತೀನಿ. 1998ರಲ್ಲಿ ಆಡಳಿತ ಮಂಡಲಿಯ ಮೂರು ಸದಸ್ಯರು ಮತ್ತು ಅವ್ರ ಹೆಂಡತಿಯರು ಕ್ಯೂಬಾದಲ್ಲಿ ನಡೆದ ಒಂದು ವಿಶೇಷ ಅಧಿವೇಶನಕ್ಕೆ ಬಂದ್ರು. ಆಗ ಅವರು ಎಲ್ರ ಜೊತೆ ದಯೆಯಿಂದ, ಗೌರವದಿಂದ ನಡ್ಕೊಳ್ತಿದ್ದನ್ನ ಅಧಿಕಾರಿಗಳು ನೋಡಿದ್ರು. ನಾವು ರಾಜಕೀಯ ವಿಷ್ಯಗಳಲ್ಲಿ ತಲೆ ಹಾಕಲ್ಲ ಅನ್ನೋದು ನಿಜ ಅಂತ ಅಧಿಕಾರಿಗಳಿಗೆ ಆಗ ಅರ್ಥ ಆಯ್ತು. ಇದನ್ನ ನಾವು ಈ ಮುಂಚೆ ಮೀಟಿಂಗ್‌ಗಳಲ್ಲಿ ಎಷ್ಟೇ ಸಲ ಹೇಳಿದ್ರು ಅವ್ರಿಗೆ ಅರ್ಥ ಆಗಿರಲಿಲ್ಲ.

ಕೋರ್ಟ್‌ನಲ್ಲಿ ಕೆಲವೊಮ್ಮೆ ನಮಗೆ ನ್ಯಾಯ ಸಿಗದಿದ್ದಾಗ ಕಾನೂನುಬದ್ಧ ಹಕ್ಕು ಪಡೆಯೋಕೆ ನಾವು ‘ಸಿಹಿಸುದ್ದಿ ಪರವಾಗಿ’ ಮಾತಾಡ್ತೀವಿ. (ಫಿಲಿ. 1:7) ಉದಾಹರಣೆಗೆ, ಯೆಹೋವನ ಆರಾಧಕರು ಸೈನ್ಯಕ್ಕೆ ಸೇರಲ್ಲ ಅನ್ನೋ ಕಾರಣಕ್ಕೆ ಹಲವಾರು ವರ್ಷಗಳಿಂದ ಯೂರೋಪ್‌ ಮತ್ತು ದಕ್ಷಿಣ ಕೊರಿಯಾದಲ್ಲಿ ಅವ್ರ ಮೇಲೆ ಎಷ್ಟೋ ಕೇಸ್‌ಗಳನ್ನ ಹಾಕಲಾಗಿತ್ತು. ನಾವು ಸೈನ್ಯಕ್ಕೆ ಸೇರಲ್ಲ ಅಂತ ಹೇಳೋ ಹಕ್ಕು ನಮಗಿತ್ತು. ಆದ್ರೆ ಅದನ್ನ ಹೇಳಿದಾಗ ಅವರು ಒಪ್ಕೊಳ್ಳಲೇ ಇಲ್ಲ. ಇದ್ರಿಂದ ಯುರೋಪ್‌ನಲ್ಲಿ ಸುಮಾರು 18,000 ಸಹೋದರರನ್ನ, ದಕ್ಷಿಣ ಕೊರಿಯಾದಲ್ಲಿ ಸುಮಾರು 19,000 ಸಹೋದರರನ್ನ ಎಷ್ಟೋ ವರ್ಷಗಳವರೆಗೂ ಜೈಲ್‌ಗೆ ಹಾಕಿದ್ರು.

ಕೊನೆಗೆ ಜುಲೈ 7, 2011ರಲ್ಲಿ ಮಾನವ ಹಕ್ಕುಗಳ ಯುರೋಪಿಯನ್‌ ನ್ಯಾಯಾಲಯ ಒಂದು ಒಳ್ಳೆ ತೀರ್ಪು ಕೊಡ್ತು. ಬಯಟ್ಯಾನ್‌ ಮತ್ತು ಅರ್ಮೇನಿಯದ ಬಗ್ಗೆ ಕೊಟ್ಟ ಆ ತೀರ್ಪಿನಲ್ಲಿ ‘ಯುರೋಪಿನಲ್ಲಿ ಸೈನ್ಯಕ್ಕೆ ಯಾರು ಸೇರಲ್ವೋ ಅವ್ರಿಗೆ ಸರ್ಕಾರದ ಬೇರೆ ಕೆಲಸ ಮಾಡೋಕೆ ಅವಕಾಶ ಮಾಡ್ಕೊಡಬೇಕು’ ಅಂತ ಇತ್ತು. ಇದೇ ತರದ ಒಂದು ತೀರ್ಪುನ್ನ ಜೂನ್‌ 28, 2018ರಲ್ಲಿ ದಕ್ಷಿಣ ಕೊರಿಯಾದ ಸಂವಿಧಾನದ ಕೋರ್ಟ್‌ ಕೂಡ ಕೊಡ್ತು. ಒಂದುವೇಳೆ ಈ ಯುವ ಸಹೋದರರಲ್ಲಿ ಯಾರಾದ್ರೂ ತಮ್ಮ ನಂಬಿಕೆನ ಬಿಟ್ಟು ಕೊಟ್ಟಿದ್ರೆ ಇಂಥ ತೀರ್ಪು ಸಿಗ್ತಿರಲಿಲ್ಲ, ನಾವು ಗೆಲ್ಲೋಕೂ ಆಗ್ತಿರಲಿಲ್ಲ.

ಸಿಹಿಸುದ್ದಿಯ ಪರವಾಗಿ ಮಾತಾಡೋಕೆ ಲೋಕದ ಎಲ್ಲ ಕಡೆ ಇರೋ ಲೀಗಲ್‌ ಡಿಪಾರ್ಟ್ಮೆಂಟ್‌ಗಳು ಮತ್ತು ಮೇಲ್ವಿಚಾರಕರು ಕಷ್ಟಪಟ್ಟು ಕೆಲಸ ಮಾಡ್ತಾರೆ. ಸರ್ಕಾರ ನಮ್ಮ ಸಹೋದರರ ವಿರುದ್ಧ ಕೇಸ್‌ ಹಾಕಿದಾಗ ಅವ್ರ ಪರವಾಗಿ ಮಾತಾಡೋದು ನಮಗೆ ಸಿಕ್ಕಿರೋ ಒಂದು ಸುಯೋಗ ಅಂತ ನಾವು ನೆನೆಸ್ತೀವಿ. ನಮ್ಮ ಕೇಸ್‌ ಕೋರ್ಟ್‌ನಲ್ಲಿ ಗೆಲ್ಲಿಲ್ಲ ಅಂದ್ರೂ ಆ ಅಧಿಕಾರಿಗಳಿಗೆ, ರಾಜರಿಗೆ ಮತ್ತು ಜನ್ರಿಗೆ ಒಳ್ಳೆ ಸಾಕ್ಷಿ ಕೊಡೋಕೆ ಇದು ಅವಕಾಶ ಕೊಟ್ಟಿದೆ. ನಾವು ಕೋರ್ಟ್‌ಗೆ ಕೊಡೋ ಲೀಗಲ್‌ ಡಾಕ್ಯುಮೆಂಟ್‌ಗಳಲ್ಲಿ ಮತ್ತು ನಮ್ಮ ವಾದಗಳಲ್ಲಿ ಬೈಬಲ್‌ ವಚನಗಳನ್ನ ಬಳಸ್ತೀವಿ. (ಮತ್ತಾ. 10:18) ಇದ್ರಿಂದ ನ್ಯಾಯಾಧೀಶರು, ಸರ್ಕಾರದ ಪ್ರತಿನಿಧಿಗಳು, ಮಾಧ್ಯಮದವರು ಮತ್ತು ಬೇರೆ ಜನರು ಸಿಹಿಸುದ್ದಿ ಬಗ್ಗೆ ತಿಳ್ಕೊಳ್ಳೋ ತರ ಆಗುತ್ತೆ. ಆಗ ಒಳ್ಳೆ ಮನಸ್ಸಿನ ಎಷ್ಟೋ ಜನ ‘ಯೆಹೋವನ ಸಾಕ್ಷಿಗಳು ಯಾರು, ಅವ್ರ ನಂಬಿಕೆಗೆ ಆಧಾರ ಏನು?’ ಅಂತೆಲ್ಲಾ ತಿಳ್ಕೊಂಡಿದ್ದಾರೆ. ಈ ತರ ತಿಳ್ಕೊಂಡವ್ರಲ್ಲಿ ಕೆಲವರು ಸತ್ಯಕ್ಕೂ ಬಂದಿದ್ದಾರೆ.

ಯೆಹೋವನಿಗೆ ಋಣಿ!

ಕಳೆದ 40 ವರ್ಷಗಳಿಂದ ನಾನು ಬೇರೆಬೇರೆ ಬ್ರಾಂಚ್‌ ಆಫೀಸ್‌ಗಳ ಲೀಗಲ್‌ ಡಿಪಾರ್ಟ್ಮೆಂಟ್‌ ಜೊತೆ ಕೆಲಸ ಮಾಡಿದ್ದೀನಿ. ಜೊತೆಗೆ ಹೈ ಕೋರ್ಟ್‌ಗಳಲ್ಲಿ ಮತ್ತು ದೊಡ್ಡದೊಡ್ಡ ಅಧಿಕಾರಿಗಳ ಮುಂದೆ ಸಿಹಿಸುದ್ದಿಯ ಪರವಾಗಿ ಮಾತಾಡಿದ್ದೀನಿ. ಅಮೆರಿಕದಲ್ಲಿ ಮತ್ತು ಬೇರೆ ಬ್ರಾಂಚ್‌ಗಳಲ್ಲಿರೋ ಲೀಗಲ್‌ ಡಿಪಾರ್ಟ್ಮೆಂಟ್‌ಗಳಲ್ಲಿ ಕೆಲಸ ಮಾಡ್ತಿರೋ ನಮ್ಮ ಸಹೋದರರನ್ನ ನಾನು ತುಂಬ ಪ್ರೀತಿಸ್ತೀನಿ. ಯೆಹೋವ ದೇವರು ನನ್ನನ್ನ ತುಂಬಾ ಆಶೀರ್ವದಿಸಿದ್ದಾನೆ. ನಾನು ಜೀವನದಲ್ಲಿ ಸಂತೃಪ್ತಿಯಿಂದ ಇದ್ದೀನಿ.

ಫಿಲಿಪ್‌ ಮತ್ತು ಎಲಿಸಬೆತ್‌ ಬ್ರಮ್ಲಿ.

ಕಳೆದ 45 ವರ್ಷಗಳಿಂದ ನನ್ನ ಪ್ರೀತಿಯ ಹೆಂಡತಿ ಎಲಿಸಬೆತ್‌ ನನ್ನ ಸುಖ ದುಃಖದಲ್ಲಿ ನನ್ನ ಜೊತೆನೇ ಇದ್ದು ತುಂಬ ಪ್ರೋತ್ಸಾಹ ಮತ್ತು ಬೆಂಬಲ ಕೊಟ್ಟಿದ್ದಾಳೆ. ಅವಳಿಗೊಂದು ಕಾಯಿಲೆ ಇರೋದ್ರಿಂದ ದಿನದಿಂದ ದಿನಕ್ಕೆ ಅವಳ ದೇಹದಲ್ಲಿರೋ ಶಕ್ತಿ ಕುಗ್ಗಿಹೋಗ್ತಾ ಇದೆ. ಹಾಗಿದ್ರೂ ಅವಳ ಕೈಲಾಗೋದನ್ನೆಲ್ಲ ಮಾಡಿ ನನಗೆ ಬೆಂಬಲ ಕೊಡ್ತಿದ್ದಾಳೆ. ಅದಕ್ಕೆ ನಾನು ಅವಳನ್ನ ತುಂಬಾ ಪ್ರೀತಿಸ್ತೀನಿ!

ನಮ್ಮ ಸ್ವಂತ ಸಾಮರ್ಥ್ಯದಿಂದ ನಮಗೆ ಬಲ ಆಗ್ಲಿ, ಜಯ ಆಗ್ಲಿ ಸಿಗಲ್ಲ ಅನ್ನೋದನ್ನ ನಾನು ಕಣ್ಣಾರೆ ನೋಡಿದ್ದೀನಿ. ದಾವೀದ ಹೇಳಿದಂತೆ ‘ತನ್ನ ಜನ್ರಿಗೆ ಯೆಹೋವ ಬಲ.’ (ಕೀರ್ತ. 28:8) ನಿಜ ಹೇಳಬೇಕಂದ್ರೆ, ‘ಯುದ್ಧ ಯೆಹೋವನದ್ದು!’

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ