ಅವರು ಯೆಹೋವನ ಚಿತ್ತವನ್ನು ಮಾಡಿದರು
ಕ್ಷಮಾಪಣೆಯು ರಕ್ಷಣೆಗೆ ಮಾರ್ಗವನ್ನು ತೆರೆಯುತ್ತದೆ
ಐಗುಪ್ತದ ದೇಶಾಧಿಪತಿಯ ಮುಂದೆ ನಿಂತಿದ್ದ ಯಾಕೋಬನ ಹತ್ತು ಮಂದಿ ಪುತ್ರರು, ಅತಿ ಭಯಾನಕವಾದ ಒಂದು ರಹಸ್ಯದಲ್ಲಿ ಪಾಲಿಗರಾಗಿದ್ದರು. ಅನೇಕ ವರ್ಷಗಳ ಹಿಂದೆ ಅವರು ತಮ್ಮ ಮಲತಮ್ಮನಾಗಿದ್ದ ಯೋಸೇಫನನ್ನು ದಾಸ್ವತಕ್ಕೆ ಮಾರಿದ್ದರು, ಮತ್ತು ಅವನು ಒಂದು ಕಾಡುಮೃಗದಿಂದ ಕೊಲ್ಲಲ್ಪಟ್ಟನೆಂದು ತಮ್ಮ ತಂದೆಗೆ ಹೇಳುವ ಯೋಜನೆಯನ್ನು ಮಾಡಿದ್ದರು.—ಆದಿಕಾಂಡ 37:18-35.
ಈಗ, ಸುಮಾರು 20 ವರ್ಷಗಳ ಬಳಿಕ, ಈ ಜನರು ವಾಸಿಸುತ್ತಿದ್ದ ದೇಶಕ್ಕೆ ಬರ ಬಂದಿತ್ತು. ಆದುದರಿಂದ, ದವಸಧಾನ್ಯವನ್ನು ಕೊಂಡುಕೊಳ್ಳಲಿಕ್ಕಾಗಿ ಈ ಹತ್ತು ಮಂದಿಯು ಐಗುಪ್ತ ದೇಶಕ್ಕೆ ಬಂದಿದ್ದರು. ಆದರೆ ಅವರ ಕೆಲಸವು ಸುಲಭವಾಗಿ ಸಫಲವಾಗಲಿಲ್ಲ. ಧಾನ್ಯವನ್ನು ಮಾರಿಸುವವನಾಗಿದ್ದ ದೇಶಾಧಿಪತಿಯು, ಗೂಢಚಾರರೆಂದು ಅವರ ಮೇಲೆ ದೋಷಾರೋಪಹೊರಿಸಿದನು. ಆ ಹತ್ತು ಮಂದಿಯಲ್ಲಿ ಒಬ್ಬನನ್ನು ಸೆರೆಯಲ್ಲಿ ಬಂಧಿಸಿ, ಇನ್ನುಳಿದವರು ಮನೆಗೆ ಹೋಗಿ, ನಿಮ್ಮ ಕಿರಿಯ ತಮ್ಮನಾದ ಬೆನ್ಯಾಮೀನನನ್ನು ಕರೆದುಕೊಂಡು ಬನ್ನಿರಿ ಎಂದು ಒತ್ತಾಯಿಸಿದನು. ಅವರು ಬೆನ್ಯಾಮೀನನನ್ನು ಕರೆದುಕೊಂಡು ಬಂದಾಗ, ಅವನನ್ನು ಬಂಧನದಲ್ಲಿರಿಸಲಿಕ್ಕಾಗಿ ಈ ದೇಶಾಧಿಪತಿಯು ಒಂದು ಉಪಾಯವನ್ನು ಮಾಡಿದನು.—ಆದಿಕಾಂಡ 42:1–44:12.
ಯಾಕೋಬನ ಮಕ್ಕಳಲ್ಲಿ ಒಬ್ಬನಾದ ಯೆಹೂದನು ಇದನ್ನು ಪ್ರತಿಭಟಿಸಿದನು. ‘ಬೆನ್ಯಾಮೀನನಿಲ್ಲದೆ ನಾವು ಮನೆಗೆ ಹಿಂದಿರುಗುವಲ್ಲಿ, ನಮ್ಮ ತಂದೆಯು ಸಾಯುವನು’ ಎಂದು ಅವನು ಹೇಳಿದನು. ತದನಂತರ ಯಾವುದೋ ಒಂದು ಘಟನೆಯು ಸಂಭವಿಸಿತು; ಯೆಹೂದನಾಗಲಿ ಅವನ ಸಹಪ್ರಯಾಣಿಕರಾಗಲಿ ಈ ಘಟನೆಯನ್ನು ನಿರೀಕ್ಷಿಸಿರಲೇ ಇಲ್ಲ. ಯಾಕೋಬನ ಮಕ್ಕಳನ್ನು ಬಿಟ್ಟು ಉಳಿದವರೆಲ್ಲರೂ ಹೊರಗೆ ಹೋಗಿ ಎಂದು ಆಜ್ಞೆಯನ್ನಿತ್ತ ಬಳಿಕ, ಆ ದೇಶಾಧಿಪತಿಯು ಗಟ್ಟಿಯಾಗಿ ಅತ್ತನು. ತದನಂತರ, ಮನಸ್ಸಿಗೆ ಸಮಾಧಾನಮಾಡಿಕೊಂಡು, “ನಾನು ಯೋಸೇಫನು” ಎಂದು ಹೇಳಿದನು.—ಆದಿಕಾಂಡ 44:18–45:3.
ಕ್ಷಮಾಶೀಲತೆ ಹಾಗೂ ಬಿಡುಗಡೆ
“ನನ್ನ ತಂದೆ ಇನ್ನೂ ಇದ್ದಾನೋ”? ಎಂದು ಯೋಸೇಫನು ತನ್ನ ಮಲಅಣ್ಣಂದಿರನ್ನು ಕೇಳಿದನು. ಅವರಿಂದ ಉತ್ತರವೇ ಬರಲಿಲ್ಲ. ಏಕೆಂದರೆ ಯೋಸೇಫನ ಮಲಅಣ್ಣಂದಿರಿಗೆ ಏನು ಹೇಳಬೇಕೆಂಬುದೇ ತೋಚಲಿಲ್ಲ. ಅವರು ಭಾವೋದ್ರೇಕಗೊಳ್ಳಬೇಕೊ, ಅಥವಾ ಭಯಗೊಳ್ಳಬೇಕೊ? ಏನೇ ಆಗಲಿ, ಅವರು 20 ವರ್ಷ ಚಿಕ್ಕವರಾಗಿದ್ದಾಗ, ಅವರು ಈ ವ್ಯಕ್ತಿಯನ್ನು ದಾಸ್ವತಕ್ಕೆ ಮಾರಿದ್ದರು. ಈಗ ಯೋಸೇಫನಿಗೆ ಅವರನ್ನು ಬಂಧಿಸುವ, ಆಹಾರ ಕೊಡದೆ ಮನೆಗೆ ಕಳುಹಿಸಿಬಿಡುವ, ಅಥವಾ ಅವರನ್ನು ವಧಿಸುವ ಅಧಿಕಾರವೂ ಇತ್ತು! ಈ ಕಾರಣದಿಂದಲೇ ಯೋಸೇಫನ ಮಲಅಣ್ಣಂದಿರು “ಅವನ ಮುಂದೆ ತತ್ತರಗೊಂಡು ಉತ್ತರಕೊಡಲಾರದೆ ಹೋದರು.”—ಆದಿಕಾಂಡ 45:3.
ಆದರೆ ಯೋಸೇಫನು ಅವರ ಕಳವಳವನ್ನು ದೂರಮಾಡಿದನು. “ನನ್ನ ಹತ್ತರಕ್ಕೆ ಬನ್ನಿರಿ” ಎಂದು ಅವನು ಹೇಳಿದನು. ಅವರು ಅವನ ಹತ್ತಿರ ಬಂದಾಗ, ಅವನು ಹೇಳಿದ್ದು: “ಐಗುಪ್ತ ದೇಶಕ್ಕೆ ಸೇರುವಂತೆ ನೀವು ಮಾರಿಬಿಟ್ಟ ನಿಮ್ಮ ತಮ್ಮನಾದ ಯೋಸೇಫನೇ ನಾನು. ನೀವು ನನ್ನನ್ನು ಹಾಗೆ ಮಾರಿದ್ದಕ್ಕಾಗಿ ವ್ಯಸನಪಟ್ಟು ದುಃಖಿಸಬೇಡಿರಿ. ಪ್ರಾಣಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದನು.”—ಆದಿಕಾಂಡ 45:4, 5.
ಯೋಸೇಫನು ಅವರಿಗೆ ಕರುಣೆ ತೋರಿಸುವುದಕ್ಕೆ ಒಂದು ಆಧಾರವಿತ್ತು. ಅವರ ಪಶ್ಚಾತ್ತಾಪದ ಪುರಾವೆಯನ್ನು ಅವನು ಈಗಾಗಲೇ ನೋಡಿದ್ದನು. ಉದಾಹರಣೆಗಾಗಿ, ಯೋಸೇಫನು ತನ್ನ ಮಲಅಣ್ಣಂದಿರಿಗೆ, ನೀವು ಗೂಢಚಾರರೆಂದು ದೋಷಾರೋಪಹೊರಿಸಿದಾಗ, ಅವರು ತಮ್ಮ ಮಧ್ಯೆ ಹೀಗೆ ಮಾತಾಡಿಕೊಳ್ಳುತ್ತಿದ್ದದ್ದನ್ನು ಅವನು ಕೇಳಿಸಿಕೊಂಡಿದ್ದನು: ‘ನಾವು ನಮ್ಮ ತಮ್ಮನಿಗೆ ಮಾಡಿದ್ದು ದ್ರೋಹವೇ ಸರಿ; ಅವನು ನಮ್ಮನ್ನು ಬೇಡಿಕೊಂಡಾಗ ನಾವು ಅವನ ಪ್ರಾಣಸಂಕಟವನ್ನು ತಿಳಿದರೂ ಅವನ ಮೊರೆಗೆ ಕಿವಿಗೊಡಲಿಲ್ಲ; ಆ ಕಾರಣದಿಂದಲೇ ಈ ಸಂಕಟವು ನಮಗೆ ಪ್ರಾಪ್ತವಾಗಿದೆ.’ (ಆದಿಕಾಂಡ 42:21) ಇದಲ್ಲದೆ, ಬೆನ್ಯಾಮೀನನು ತನ್ನ ತಂದೆಯ ಬಳಿಗೆ ಹಿಂದಿರುಗಿ ಹೋಗಲು ಸಾಧ್ಯವಾಗುವಂತೆ, ಅವನಿಗೆ ಬದಲಾಗಿ ನಾನು ನಿನ್ನ ದಾಸನಾಗುತ್ತೇನೆ ಎಂದು ಯೆಹೂದನು ಕೇಳಿಕೊಂಡಿದ್ದನು.—ಆದಿಕಾಂಡ 44:33, 34.
ಆದುದರಿಂದ, ಯೋಸೇಫನು ಕರುಣೆಯನ್ನು ತೋರಿಸಿದ್ದು ನ್ಯಾಯೋಚಿತವಾಗಿತ್ತು. ಅಷ್ಟಲ್ಲದೆ, ಕರುಣೆಯನ್ನು ತೋರಿಸುವಲ್ಲಿ, ತನ್ನ ಇಡೀ ಕುಟುಂಬಕ್ಕೆ ರಕ್ಷಣೆಯು ದೊರಕುವುದು ಎಂಬುದನ್ನೂ ಅವನು ಅರ್ಥಮಾಡಿಕೊಂಡಿದ್ದನು. ಹೀಗಿರುವುದರಿಂದ, ಯೋಸೇಫನು ಅವರಿಗೆ, ನೀವು ನಿಮ್ಮ ತಂದೆಯಾದ ಯಾಕೋಬನ ಬಳಿಗೆ ಹಿಂದಿರುಗಿ, ಅವನಿಗೆ ಹೀಗೆ ಹೇಳಿರಿ ಎಂದು ತನ್ನ ಮಲಅಣ್ಣಂದಿರಿಗೆ ತಿಳಿಸಿದನು: “ನಿನ್ನ ಮಗನಾದ ಯೋಸೇಫನು ಹೀಗನ್ನುತ್ತಾನೆ—ದೇವರು ನನ್ನನ್ನು ಐಗುಪ್ತದೇಶಕ್ಕೆ ಸರ್ವಾಧಿಕಾರಿಯನ್ನಾಗಿ ನೇಮಿಸಿದ್ದಾನೆ; ನೀನೂ ತಡಮಾಡದೆ ನನ್ನ ಬಳಿಗೆ ಬಾ; ಗೋಷೆನ್ ಸೀಮೆಯಲ್ಲಿ ನೀನು ವಾಸಮಾಡಬಹುದು; ನೀನೂ ನಿನ್ನ ಮಕ್ಕಳೂ ಮೊಮ್ಮಕ್ಕಳೂ ಕುರಿ ದನ ಮೊದಲಾದ ಸ್ವಾಸ್ತ್ಯಸಹಿತರಾಗಿ ನನ್ನ ಬಳಿಯಲ್ಲೇ ಇರಬಹುದು; . . . ನಿನಗೂ ನಿನ್ನ ಮನೆಯವರಿಗೂ ನಿನಗಿರುವ ಎಲ್ಲವುಗಳಿಗೂ ಬಡತನವುಂಟಾಗದಂತೆ ಇಲ್ಲಿ ನಿನ್ನನ್ನು ಪೋಷಿಸುವೆನು.”—ಆದಿಕಾಂಡ 45:9-11.
ಮಹಾ ಯೋಸೇಫನು
ಯೇಸು ಕ್ರಿಸ್ತನನ್ನು ಮಹಾ ಯೋಸೇಫನೆಂದೂ ಕರೆಯಸಾಧ್ಯವಿದೆ. ಏಕೆಂದರೆ ಈ ಇಬ್ಬರು ವ್ಯಕ್ತಿಗಳಲ್ಲಿ ಬಹಳಷ್ಟು ಹೋಲಿಕೆಗಳಿವೆ. ಯೋಸೇಫನಂತೆ, ಯೇಸು ಸಹ ತನ್ನ ಅಣ್ಣತಮ್ಮಂದಿರಿಂದ, ಅಂದರೆ ಅಬ್ರಹಾಮನ ಸಂತತಿಯವರಿಂದ ದುರುಪಚಾರಕ್ಕೆ ಒಳಗಾದನು. (ಅ. ಕೃತ್ಯಗಳು 2:14, 29, 37ನ್ನು ಹೋಲಿಸಿರಿ.) ಆದರೂ, ಈ ಎರಡೂ ವ್ಯಕ್ತಿಗಳ ವಿಷಯದಲ್ಲಿ ನೆನಸಿದ್ದೇ ಒಂದು ಸಂಭವಿಸಿದ್ದೇ ಇನ್ನೊಂದು. ಸಕಾಲದಲ್ಲಿ ಒಬ್ಬ ದಾಸನಂತಿದ್ದ ಯೋಸೇಫನು, ಈಗ ದೇಶಾಧಿಪತಿಯ ಸ್ಥಾನದಲ್ಲಿದ್ದನು. ಫರೋಹನಿಗೆ ಎರಡನೆಯದಾದ ಸ್ಥಾನವು ಅವನಿಗೆ ಕೊಡಲ್ಪಟ್ಟಿತ್ತು. ತದ್ರೀತಿಯಲ್ಲಿ, ಯೆಹೋವನು ಯೇಸುವನ್ನು ಮೃತಸ್ಥಿತಿಯಿಂದ ಪುನರುತ್ಥಾನಗೊಳಿಸಿ, ಅತಿ ಶ್ರೇಷ್ಠವಾದ ಸ್ಥಾನಕ್ಕೆ, ಅಂದರೆ “ದೇವರ ಬಲಗೈಯ ಉನ್ನತಸ್ಥಾನಕ್ಕೆ” ಏರಿಸಿದನು.—ಅ. ಕೃತ್ಯಗಳು 2:33; ಫಿಲಿಪ್ಪಿ 2:9-11.
ಒಬ್ಬ ದೇಶಾಧಿಪತಿಯಾಗಿದ್ದರಿಂದ, ದವಸಧಾನ್ಯವನ್ನು ಕೊಂಡುಕೊಳ್ಳಲಿಕ್ಕಾಗಿ ಐಗುಪ್ತಕ್ಕೆ ಬಂದ ಎಲ್ಲರಿಗೆ ಯೋಸೇಫನು ಆಹಾರವನ್ನು ಒದಗಿಸಸಾಧ್ಯವಿತ್ತು. ಇಂದು, ಮಹಾ ಯೋಸೇಫನಾದ ಯೇಸುವಿಗೆ, ಭೂಮಿಯ ಮೇಲೆ ನಂಬಿಗಸ್ತನೂ ವಿವೇಕಿಯೂ ಆದ ಆಳುವರ್ಗವಿದೆ; ಅದರ ಮೂಲಕ ಅವನು “ಹೊತ್ತುಹೊತ್ತಿಗೆ” ಬೇಕಾದ ಆತ್ಮಿಕ ಆಹಾರವನ್ನು ಒದಗಿಸುತ್ತಿದ್ದಾನೆ. (ಮತ್ತಾಯ 24:45-47; ಲೂಕ 12:42-44) ಯಾರು ಯೇಸುವಿನ ಬಳಿಗೆ ಬರುತ್ತಾರೋ ಅವರಿಗೆ “ಇನ್ನು ಮೇಲೆ . . . ಹಸಿವೆ ಇಲ್ಲ, ಬಾಯಾರಿಕೆ ಇಲ್ಲ; . . . ಸಿಂಹಾಸನದ ಮಧ್ಯದಲ್ಲಿರುವ ಯಜ್ಞದ ಕುರಿಯಾದಾತನು ಅವರಿಗೆ ಕುರುಬನಂತಿದ್ದು ಜೀವಜಲದ ಒರತೆಗಳ ಬಳಿಗೆ ನಡಿಸುತ್ತಾನೆ.”—ಪ್ರಕಟನೆ 7:16, 17.
ನಾವು ಕಲಿಯುವ ಪಾಠ
ಯೋಸೇಫನು ನಮಗೆ ಕರುಣೆಯ ಒಂದು ಅತ್ಯುತ್ತಮ ಮಾದರಿಯಾಗಿದ್ದಾನೆ. ಕಟ್ಟುನಿಟ್ಟಾಗಿ ವರ್ತಿಸುತ್ತಿದ್ದಲ್ಲಿ, ತನ್ನನ್ನು ದಾಸ್ವತಕ್ಕೆ ಮಾರಿದ್ದವರನ್ನು ಅವನು ಕಠಿನವಾಗಿ ಶಿಕ್ಷಿಸಸಾಧ್ಯವಿತ್ತು. ಇನ್ನೊಂದು ಕಡೆಯಲ್ಲಿ, ಕೇವಲ ಭಾವಾವೇಶದಿಂದ ಅವನು ತನ್ನ ಮಲಅಣ್ಣಂದಿರ ತಪ್ಪನ್ನು ಮನ್ನಿಸುವಂತೆ ಅವನ ಮನಸ್ಸು ಪ್ರಚೋದಿಸಸಾಧ್ಯವಿತ್ತು. ಯೋಸೇಫನು ಹಾಗೆ ಮಾಡಲಿಲ್ಲ. ಅದಕ್ಕೆ ಬದಲಾಗಿ, ಅವನು ತನ್ನ ಮಲಅಣ್ಣಂದಿರ ಪಶ್ಚಾತ್ತಾಪವನ್ನು ಪರೀಕ್ಷಿಸಿದನು. ಅವರು ನಿಜವಾಗಿಯೂ ಪಶ್ಚಾತ್ತಾಪಪಟ್ಟರು ಎಂಬುದನ್ನು ಕಣ್ಣಾರೆ ಕಂಡ ಬಳಿಕ, ಅವನು ಅವರನ್ನು ಕ್ಷಮಿಸಿದನು.
ನಾವು ಸಹ ಯೋಸೇಫನನ್ನು ಅನುಕರಿಸಸಾಧ್ಯವಿದೆ. ಒಬ್ಬರು ನಮ್ಮ ವಿರುದ್ಧ ಪಾಪಮಾಡಿ, ತದನಂತರ ಅವರು ತಮ್ಮ ಮನಸ್ಸಿನಾಳದಿಂದ ತಪ್ಪನ್ನು ಒಪ್ಪಿಕೊಳ್ಳುವಲ್ಲಿ, ನಾವು ಅವರನ್ನು ಕ್ಷಮಿಸಬೇಕು. ದೊಡ್ಡ ತಪ್ಪನ್ನು ಮಾಡಿರುವಾಗ, ನಾವು ಕೇವಲ ಭಾವಾವೇಶದಿಂದ ಅದನ್ನು ಕ್ಷಮಿಸಲು ಮುಂದಾಗಬಾರದು. ಅದೇ ಸಮಯದಲ್ಲಿ, ಯಾರಾದರೂ ನಿಜವಾದ ಪಶ್ಚಾತ್ತಾಪವನ್ನು ತೋರಿಸುವಾಗ, ನಮ್ಮ ಅಸಮಾಧಾನದ ಅನಿಸಿಕೆಗಳು ನಮ್ಮನ್ನು ಕುರುಡುಗೊಳಿಸುವಂತೆ ಬಿಡಬಾರದು. ಆದುದರಿಂದ, ನಾವು ‘ಒಬ್ಬರಿಗೊಬ್ಬರು ಸೈರಿಸಿಕೊಂಡು ತಪ್ಪುಗಳನ್ನು ಕ್ಷಮಿಸುತ್ತಾ’ ಇರೋಣ. (ಕೊಲೊಸ್ಸೆ 3:13) ಹಾಗೆ ಮಾಡುವಾಗ, “ಕ್ಷಮಿಸಲು ಸಿದ್ಧನಾಗಿರುವ” (NW) ಯೆಹೋವ ದೇವರನ್ನು ನಾವು ಅನುಕರಿಸುತ್ತಾ ಇರುವೆವು.—ಕೀರ್ತನೆ 86:5; ಮೀಕ 7:18, 19.