ಮಣ್ಣಿನ ಘಟಗಳಲ್ಲಿರುವ ನಿಕ್ಷೇಪ
“ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು.”—2 ಕೊರಿಂಥ 4:7.
1. ಯೇಸುವಿನ ಮಾದರಿಯು ನಮ್ಮನ್ನು ಹೇಗೆ ಉತ್ತೇಜಿಸಬೇಕು?
ಯೇಸು ಭೂಮಿಯ ಮೇಲಿದ್ದ ಸಮಯದಲ್ಲಿ ಯೆಹೋವನಿಂದ ರೂಪಿಸಲ್ಪಟ್ಟಾಗ, ಮಾನವರ ಬಲಹೀನತೆಗಳನ್ನು ಸ್ವತಃ ಅವನೇ ಅನುಭವಿಸಿದನು. ಸಮಗ್ರತೆಯನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಅವನ ಮಾದರಿಯು ನಮ್ಮನ್ನು ಎಷ್ಟೊಂದು ಉತ್ತೇಜಿಸಬೇಕು! ಅಪೊಸ್ತಲನು ನಮಗೆ ಹೇಳುವುದು: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಿಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ಮಾದರಿಯನ್ನು ತೋರಿಸಿ ಹೋದನು.” (1 ಪೇತ್ರ 2:21) ಇಂತಹ ರೂಪಿಸುವಿಕೆಗೆ ಅಧೀನನಾಗುವ ಮೂಲಕ, ಯೇಸು ಈ ಲೋಕದ ಮೇಲೆ ಜಯಸಾಧಿಸಿದನು. ತನ್ನ ಅಪೊಸ್ತಲರೂ ಜಯಶಾಲಿಗಳಾಗುವಂತೆ ಅವರಲ್ಲಿ ಧೈರ್ಯ ತುಂಬಿದನು. (ಅ. ಕೃತ್ಯಗಳು 4:13, 31; 9:27, 28; 14:3; 19:8) ಮತ್ತು ಅವರಿಗೆ ನೀಡಿದ ಕೊನೆಯ ಭಾಷಣದ ಸಮಾಪ್ತಿಯಲ್ಲಿ ಅವನು ಎಂತಹ ಉತ್ತೇಜನವನ್ನು ನೀಡಿದನು! ಅವನು ಘೋಷಿಸಿದ್ದು: “ನೀವು ನನ್ನಲ್ಲಿದ್ದು ಮನಶ್ಯಾಂತಿಯನ್ನು ಹೊಂದಿದವರಾಗಿರಬೇಕೆಂದು ಇದನ್ನೆಲ್ಲಾ ನಿಮಗೆ ಹೇಳಿದ್ದೇನೆ. ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.”—ಯೋಹಾನ 16:33.
2. ಲೋಕದ ಅಂಧಕಾರಕ್ಕೆ ವಿರುದ್ಧವಾಗಿ ನಮಗೆ ಯಾವ ಪ್ರಕಾಶವಿದೆ?
2 ‘ಈ ಪ್ರಪಂಚದ ದೇವರು’ ಉಂಟುಮಾಡಿರುವ ಅಂಧಕಾರವನ್ನು “ಸುವಾರ್ತೆಯ ಪ್ರಕಾಶ”ದೊಂದಿಗೆ ಭೇದಕಲ್ಪಿಸಿದ ಬಳಿಕ, ಅಪೊಸ್ತಲ ಪೌಲನು ನಮ್ಮ ಅಮೂಲ್ಯವಾದ ಶುಶ್ರೂಷೆಯ ಕುರಿತಾಗಿ ಹೇಳಿದ್ದು: “ಬಲಾಧಿಕ್ಯವು ದೇವರದೇ ಹೊರತು ನಮ್ಮೊಳಗಿಂದ ಬಂದದ್ದಲ್ಲವೆಂದು ತೋರುವದಕ್ಕಾಗಿ ಈ ನಿಕ್ಷೇಪವು ಮಣ್ಣಿನ ಘಟಗಳಲ್ಲಿ ನಮಗುಂಟು. ಸರ್ವವಿಧದಲ್ಲಿಯೂ ನಮಗೆ ಇಕ್ಕಟ್ಟು ಇದ್ದರೂ ನಾವು ಅತಿ ಸಂಕಟಪಡುವವರಲ್ಲ; ನಾವು ದಿಕ್ಕುಕಾಣದವರಾಗಿದ್ದರೂ ಕೇವಲ ದೆಸೆಗೆಟ್ಟವರಲ್ಲ; ಹಿಂಸೆಪಡುವವರಾಗಿದ್ದರೂ ಕೈಬಿಡಲ್ಪಟ್ಟವರಲ್ಲ; ಕೆಡವಲ್ಪಟ್ಟವರಾಗಿದ್ದರೂ ಪ್ರಾಣನಷ್ಟಪಡುವವರಲ್ಲ;” (2 ಕೊರಿಂಥ 4:4, 7-9) ನಾವು ದುರ್ಬಲ “ಮಣ್ಣಿನ ಪಾತ್ರೆ”ಗಳಾಗಿರುವುದಾದರೂ, ದೇವರು ತನ್ನ ಆತ್ಮದ ಮೂಲಕ ನಮ್ಮನ್ನು ಯಾವ ರೀತಿಯಲ್ಲಿ ರೂಪಿಸಿದ್ದಾನೆಂದರೆ, ನಾವು ಸೈತಾನನ ಲೋಕದ ಮೇಲೆ ಸಂಪೂರ್ಣವಾಗಿ ವಿಜಯಿಗಳಾಗಸಾಧ್ಯವಿದೆ.—ರೋಮಾಪುರ 8:35-39; 1 ಕೊರಿಂಥ 15:57.
ಪ್ರಾಚೀನ ಇಸ್ರಾಯೇಲ್‌ನಲ್ಲಿ ನಡೆದ ರೂಪಿಸುವಿಕೆ
3. ಯೆಹೂದಿ ಜನಾಂಗದ ರೂಪಿಸುವಿಕೆಯನ್ನು ಯೆಶಾಯನು ಹೇಗೆ ವರ್ಣಿಸಿದನು?
3 ಯೆಹೋವನು ವ್ಯಕ್ತಿಗಳನ್ನು ಮಾತ್ರವಲ್ಲ ಇಡೀ ಜನಾಂಗಗಳನ್ನು ರೂಪಿಸುತ್ತಾನೆ. ಉದಾಹರಣೆಗೆ, ಪುರಾತನ ಇಸ್ರಾಯೇಲ್ ಯೆಹೋವನ ರೂಪಿಸುವಿಕೆಗೆ ಅಧೀನವಾದಾಗ, ಅದು ಏಳಿಗೆ ಹೊಂದಿತು. ಆದರೆ ಕೊನೆಗೆ ಅದು ಅವಿಧೇಯತೆಯ ಮಾರ್ಗಕ್ರಮವನ್ನು ಅನುಸರಿಸತೊಡಗಿತು. ಫಲಸ್ವರೂಪವಾಗಿ, ಇಸ್ರಾಯೇಲಿನ ರಚಕನು ಅದರ ಮೇಲೆ ‘ಕೇಡನ್ನು’ ಬರಮಾಡಿದನು. (ಯೆಶಾಯ 45:9) ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ, ಇಸ್ರಾಯೇಲ್ ಗೈದ ಘೋರ ಪಾಪದ ಕುರಿತು ಯೆಶಾಯನು ಯೆಹೋವನಿಗೆ ತಿಳಿಸಿದನು. ಅವನು ಹೇಳಿದ್ದು: “ಯೆಹೋವನೇ, ನೀನು ನಮ್ಮ ತಂದೆಯಾಗಿದ್ದೀ; ನಾವು ಜೇಡಿಮಣ್ಣು, ನೀನು ಕುಂಬಾರ, ನಾವೆಲ್ಲರೂ ನಿನ್ನ ಕೈಕೆಲಸವೇ. . . . ನಮ್ಮ ಅಮೂಲ್ಯವಸ್ತುಗಳೆಲ್ಲಾ ನಾಶವಾಗಿವೆ.” (ಯೆಶಾಯ 64:8-11) ಇಸ್ರಾಯೇಲ್ ನಾಶನಕ್ಕೆ ಮಾತ್ರ ಯೋಗ್ಯವಾದ ಪಾತ್ರೆಯಾಗಿ ರೂಪಿಸಲ್ಪಟ್ಟಿತ್ತು.
4. ಯಾವ ದೃಷ್ಟಾಂತವನ್ನು ಯೆರೆಮೀಯನು ನಟಿಸಿ ತೋರಿಸಿದನು?
4 ಒಂದು ಶತಮಾನದ ತರುವಾಯ, ಮುಯ್ಯಿ ತೀರಿಸುವ ದಿನವು ಹತ್ತಿರ ಬಂದಂತೆ, ಯೆರೆಮೀಯನು ಮಣ್ಣಿನ ಕೂಜವನ್ನು ತೆಗೆದುಕೊಂಡು ಯೆರೂಸಲೇಮಿನ ಕೆಲವು ಹಿರಿಯ ಪುರುಷರ ಜೊತೆಗೆ ಹಿನ್ನೋಮ್ ಕಣಿವೆಗೆ ಹೋಗುವಂತೆ ಯೆಹೋವನು ಹೇಳಿದನು. ಆತನು ಅವನಿಗೆ ಆದೇಶ ನೀಡಿದ್ದು: “ಆಗ ನೀನು ನಿನ್ನ ಸಂಗಡ ಬಂದವರ ಕಣ್ಣೆದುರಿಗೆ ಆ ಕೂಜವನ್ನು ಒಡೆದುಬಿಟ್ಟು ಅವರಿಗೆ ಹೀಗೆ ಹೇಳು—ಸೇನಾಧೀಶ್ವರನಾದ ಯೆಹೋವನು ಇಂತೆನ್ನುತ್ತಾನೆ—ಒಡೆದು ಸರಿಪಡಿಸಲಾಗದ ಮಣ್ಣಿನ ಪಾತ್ರೆಯಂತೆ ನಾನು ಈ ಜನವನ್ನೂ ಪಟ್ಟಣವನ್ನೂ ಒಡೆದುಬಿಡುವೆನು.”—ಯೆರೆಮೀಯ 19:10, 11.
5. ಇಸ್ರಾಯೇಲ್ ಜನಾಂಗದ ಮೇಲೆ ಯೆಹೋವನ ನ್ಯಾಯತೀರ್ಪು ಎಷ್ಟು ವ್ಯಾಪಕವಾಗಿತ್ತು?
5 ಸಾ.ಶ.ಪೂ. 607ರಲ್ಲಿ, ನೆಬೂಕದ್ನೆಚ್ಚರನು ಯೆರೂಸಲೇಮನ್ನೂ ಅದರ ದೇವಾಲಯವನ್ನೂ ಧ್ವಂಸಗೊಳಿಸಿ, ಬದುಕಿ ಉಳಿದಿದ್ದ ಯೆಹೂದ್ಯರನ್ನು ಬಾಬೆಲಿಗೆ ಬಂಧಿವಾಸಿಗಳಾಗಿ ಒಯ್ದನು. ಆದರೆ ದೇಶಭ್ರಷ್ಟರಾಗಿ 70 ವರ್ಷಗಳನ್ನು ಕಳೆದ ಬಳಿಕ, ಪಶ್ಚಾತ್ತಾಪಿ ಯೆಹೂದ್ಯರು ಹಿಂದಿರುಗಿ ಯೆರೂಸಲೇಮನ್ನು ಮತ್ತು ಅದರ ಆಲಯವನ್ನು ಪುನಃ ಕಟ್ಟಲು ಶಕ್ತರಾಗಿದ್ದರು. (ಯೆರೆಮೀಯ 25:11) ಆದರೆ, ಸಾ.ಶ. ಒಂದನೆಯ ಶತಮಾನದೊಳಗಾಗಿ, ಆ ಜನಾಂಗವು ಮತ್ತೊಮ್ಮೆ ಮಹಾ ಕುಂಬಾರನನ್ನು ತೊರೆದಿತ್ತು. ಕೊನೆಗೆ, ದೇವರ ಸ್ವಂತ ಪುತ್ರನನ್ನು ಕೊಲ್ಲುವಷ್ಟರ ಮಟ್ಟಿಗಿನ ಕೀಳಾದ ಪಾತಕಕ್ಕೆ ಅದು ಇಳಿಯಿತು. ಸಾ.ಶ. 70ರಲ್ಲಿ, ಯೆರೂಸಲೇಮ್ ಮತ್ತು ಅದರ ದೇವಾಲಯವನ್ನು ಧ್ವಂಸಮಾಡುತ್ತಾ, ಯೆಹೂದಿ ವಿಷಯಗಳ ವ್ಯವಸ್ಥೆಯನ್ನು ನಿರ್ಮೂಲಮಾಡಲು ದೇವರು ರೋಮನ್ ಲೋಕ ಶಕ್ತಿಯನ್ನು ತನ್ನ ವಧಕಾರನನ್ನಾಗಿ ಬಳಸಿದನು. ಇನ್ನೆಂದಿಗೂ ಇಸ್ರಾಯೇಲ್ ಜನಾಂಗವು, ‘ಪವಿತ್ರವೂ ಸುಂದರವೂ’ ಆದ ಜನಾಂಗದೋಪಾದಿ ಯೆಹೋವನ ಹಸ್ತಗಳಲ್ಲಿ ರೂಪಿಸಲ್ಪಡದು.a
ಒಂದು ಆತ್ಮಿಕ ಜನಾಂಗವನ್ನು ರೂಪಿಸುವುದು
6, 7. (ಎ) ಆತ್ಮಿಕ ಇಸ್ರಾಯೇಲಿನ ರೂಪಿಸುವಿಕೆಯನ್ನು ಪೌಲನು ಹೇಗೆ ವರ್ಣಿಸುತ್ತಾನೆ? (ಬಿ) “ಕರುಣಾಪಾತ್ರರ” ಪೂರ್ಣ ಸಂಖ್ಯೆಯು ಎಷ್ಟು, ಮತ್ತು ಅದರಲ್ಲಿ ಯಾರೆಲ್ಲ ಸೇರಿರುತ್ತಾರೆ?
6 ಯೇಸುವನ್ನು ಅಂಗೀಕರಿಸಿದ್ದ ಯೆಹೂದ್ಯರು ಒಂದು ಹೊಸ ಜನಾಂಗದ, ಅಂದರೆ ಆತ್ಮಿಕ “ದೇವರ ಇಸ್ರಾಯೇಲ್”ನ ಮೂಲ ಸದಸ್ಯರಾಗಿ ರೂಪಿಸಲ್ಪಟ್ಟರು. (ಗಲಾತ್ಯ 6:16) ಹಾಗಿರುವಲ್ಲಿ, ಪೌಲನ ಮಾತುಗಳು ಸೂಕ್ತವಾಗಿವೆ: “ಉತ್ತಮವಾದ ಬಳಕೆಗೆ ಒಂದು ಪಾತ್ರೆಯನ್ನೂ ಒಂದು ಮುದ್ದೆಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ? ಆದರೆ ದೇವರು ತನ್ನ ಕೋಪವನ್ನು ತೋರಿಸಿ ತನ್ನ ಶಕ್ತಿಯನ್ನು ಪ್ರಸಿದ್ಧಿಪಡಿಸಬೇಕೆಂದಿದ್ದರೂ ಹಾಗೆ ಮಾಡದೆ ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ಸೈರಣೆಯಿಂದ ಸೈರಿಸಿಕೊಂಡಿದ್ದಾನೆ. ಮತ್ತು ಪ್ರಭಾವಹೊಂದುವದಕ್ಕೆ ತಾನು ಮುಂದಾಗಿ ಸಿದ್ಧಮಾಡಿದ ಕರುಣಾಪಾತ್ರರಲ್ಲಿ ತನ್ನ ಮಹಿಮಾತಿಶಯವನ್ನು ತೋರ್ಪಡಿಸಿದ್ದಾನೆ.”—ರೋಮಾಪುರ 9:21-23.
7 ಈ “ಕರುಣಾಪಾತ್ರರ” ಸಂಖ್ಯೆಯು 1,44,000ದಷ್ಟು ಆಗಿರುವುದೆಂದು ಪುನರುತ್ಥಿತ ಯೇಸು ತದನಂತರ ತಿಳಿಯಪಡಿಸಿದನು. (ಪ್ರಕಟನೆ 7:4; 14:1) ಸ್ವಾಭಾವಿಕ ಇಸ್ರಾಯೇಲ್ಯರು ಆ ಸಂಖ್ಯೆಯನ್ನು ಪೂರ್ಣಗೊಳಿಸದಿದ್ದ ಕಾರಣ, ಯೆಹೋವನು ತನ್ನ ಕರುಣೆಯನ್ನು ಅನ್ಯಜನಾಂಗದವರಿಗೆ ತೋರ್ಪಡಿಸಿದನು. (ರೋಮಾಪುರ 11:25, 26) ಹೊಸದಾಗಿದ್ದ ಈ ಕ್ರೈಸ್ತ ಸಭೆಯು ತೀವ್ರಗತಿಯಲ್ಲಿ ವಿಸ್ತರಿಸಿತು. 30 ವರ್ಷಗಳೊಳಗೆ ಸುವಾರ್ತೆಯು “ಆಕಾಶದ ಕೆಳಗಿರುವ ಸರ್ವಸೃಷ್ಟಿಗೆ” ಸಾರಲ್ಪಟ್ಟಿತ್ತು. (ಕೊಲೊಸ್ಸೆ 1:23) ಇದು ಎಲ್ಲಿಡೆಯೂ ಹರಡಿಕೊಂಡಿದ್ದ ಹಲವಾರು ಸ್ಥಳೀಯ ಸಭೆಗಳನ್ನು ಯೋಗ್ಯವಾದ ಮೇಲ್ವಿಚಾರಣೆಯ ಕೆಳಗೆ ತರುವುದನ್ನು ಕೇಳಿಕೊಂಡಿತು.
8. ಪ್ರಥಮ ಆಡಳಿತ ಮಂಡಲಿಯಲ್ಲಿ ಯಾರು ಇದ್ದರು, ಮತ್ತು ಈ ಮಂಡಲಿಯು ಹೇಗೆ ಬೆಳವಣಿಗೆ ಹೊಂದಿತು?
8 ಯೇಸು 12 ಮಂದಿ ಅಪೊಸ್ತಲರನ್ನು ಪ್ರಥಮ ಆಡಳಿತ ಮಂಡಲಿಯಾಗಿ ಕಾರ್ಯಮಾಡಲು ಸಿದ್ಧಗೊಳಿಸಿ, ಅವರನ್ನು ಮತ್ತು ಇತರರನ್ನು ಶುಶ್ರೂಷೆಗಾಗಿ ತರಬೇತುಗೊಳಿಸಿದನು. (ಲೂಕ 8:1; 9:1, 2; 10:1, 2) ಸಾ.ಶ. 33ನೆಯ ಪಂಚಾಶತ್ತಮದಲ್ಲಿ ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟಿತು. ಸಕಾಲದಲ್ಲಿ ಅದರ ಆಡಳಿತ ಮಂಡಲಿಯು ವಿಸ್ತರಿಸಿದ ಕಾರಣ, ಅದರಲ್ಲಿ ‘ಯೆರೂಸಲೇಮಿನಲ್ಲಿದ್ದ ಅಪೊಸ್ತಲರು ಮತ್ತು ಸಭೆಯ ಹಿರಿಯರು’ ಸೇರಿಸಲ್ಪಟ್ಟರು. ಬಹಳಷ್ಟು ಸಮಯದ ವರೆಗೆ, ಯೇಸುವಿನ ಮಲತಮ್ಮನಾದ ಯಾಕೋಬನು, ಒಬ್ಬ ಅಪೊಸ್ತಲನಾಗಿರದಿದ್ದರೂ ಆಡಳಿತ ಮಂಡಲಿಯ ಅಧ್ಯಕ್ಷನಾಗಿ ಸೇವೆಸಲ್ಲಿಸಿದನೆಂದು ಕಂಡುಬರುತ್ತದೆ. (ಅ. ಕೃತ್ಯಗಳು 12:17; 15:2, 6, 13; 21:18) ಇತಿಹಾಸಕಾರ ಯುಸಿಬೀಯಸ್‌ಗನುಸಾರ, ಅಪೊಸ್ತಲರು ಹಿಂಸೆಯ ವಿಶೇಷ ಬಲಿಗಳಾದ ಕಾರಣ, ಅವರು ಇತರ ಕ್ಷೇತ್ರಗಳಿಗೆ ಚೆದರಿಹೋದರು. ಆಡಳಿತ ಮಂಡಲಿಯ ರಚನೆಯು ಅದಕ್ಕನುಗುಣವಾಗಿ ಸರಿಹೊಂದಿಸಲ್ಪಟ್ಟಿತು.
9. ಯಾವ ವಿಷಾದನೀಯ ಸ್ಥಿತಿಯು ನೆಲಸಿರುವುದೆಂದು ಯೇಸು ಮುಂತಿಳಿಸಿದನು?
9 ಪ್ರಥಮ ಶತಮಾನದ ಅಂತ್ಯದೊಳಗಾಗಿ ‘ವೈರಿಯಾದ ಸೈತಾನನು’ “ಪರಲೋಕರಾಜ್ಯ”ದ ಗೋದಿಸದೃಶ ವಾರಸುದಾರರ ನಡುವೆ ‘ಹಣಜಿಯನ್ನು ಬಿತ್ತ’ಲಾರಂಭಿಸಿದನು. ಇಂತಹ ವಿಷಾದನೀಯ ಸ್ಥಿತಿಯು “ಯುಗದ ಸಮಾಪ್ತಿ”ಯ ವರೆಗೆ, ಅಂದರೆ ಸುಗ್ಗೀಕಾಲದ ವರೆಗೆ ಅನುಮತಿಸಲ್ಪಡುವುದೆಂದು ಯೇಸು ಪ್ರವಾದಿಸಿದ್ದನು. ಆ ಸಮಯದಲ್ಲೂ ‘ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು.’ (ಮತ್ತಾಯ 13:24, 25, 37-43) ಅದು ಯಾವಾಗ ಸಂಭವಿಸುವುದು?
ಇಂದು ದೇವರ ಇಸ್ರಾಯೇಲನ್ನು ರೂಪಿಸುವುದು
10, 11. (ಎ) ದೇವರ ಇಸ್ರಾಯೇಲ್‌ನ ಆಧುನಿಕ ದಿನದ ರೂಪಿಸುವಿಕೆಯು ಹೇಗೆ ಆರಂಭಗೊಂಡಿತು? (ಬಿ) ಕ್ರೈಸ್ತಪ್ರಪಂಚ ಮತ್ತು ಶ್ರದ್ಧಾಶೀಲರಾದ ಬೈಬಲ್ ವಿದ್ಯಾರ್ಥಿಗಳ ನಡುವೆ ಯಾವ ಭಿನ್ನವಾದ ಬೋಧನೆಗಳು ಕಂಡುಕೊಳ್ಳಲ್ಪಟ್ಟವು?
10 ಇಸವಿ 1870ರಲ್ಲಿ ಚಾರ್ಲ್ಸ್ ಟೇಸ್ ರಸಲ್, ಅಮೆರಿಕದ ಪೆನ್ಸಿಲ್ವೇನಿಯದಲ್ಲಿರುವ ಪಿಟ್ಸ್‌ಬರ್ಗ್‌ನಲ್ಲಿ ಒಂದು ಬೈಬಲ್ ಅಧ್ಯಯನದ ಗುಂಪೊಂದನ್ನು ರಚಿಸಿದರು. 1879ರಲ್ಲಿ, ಕಾವಲಿನಬುರುಜು ಎಂಬುದಾಗಿ ಇಂದು ಜ್ಞಾತವಾಗಿರುವ ಪತ್ರಿಕೆಯನ್ನು ಅವರು ಪ್ರತಿ ತಿಂಗಳು ಪ್ರಕಟಿಸಲಾರಂಭಿಸಿದರು. ಬೈಬಲ್ ವಿದ್ಯಾರ್ಥಿಗಳೆಂದು ಕರೆಯಲ್ಪಟ್ಟ ಇವರು, ಆತ್ಮದ ಅಮರತ್ವ, ನರಕಾಗ್ನಿ, ಶುದ್ಧೀಲೋಕ, ತ್ರಯೈಕ್ಯ ದೇವರು, ಮತ್ತು ಶಿಶು ದೀಕ್ಷಾಸ್ನಾನಗಳಂತಹ ಅಶಾಸ್ತ್ರೀಯ ವಿಧರ್ಮಿ ಬೋಧನೆಗಳನ್ನು ಕ್ರೈಸ್ತಪ್ರಪಂಚವು ಸ್ವೀಕರಿಸಿಕೊಂಡಿದೆ ಎಂಬುದನ್ನು ಬೇಗನೆ ಗ್ರಹಿಸಿದರು.
11 ಇದಕ್ಕಿಂತಲೂ ಪ್ರಾಮುಖ್ಯವಾಗಿ ಬೈಬಲ್ ಸತ್ಯವನ್ನು ಪ್ರೀತಿಸಿದ ಈ ಜನರು, ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೂಲಕ ಆಗುವ ವಿಮೋಚನೆ ಮತ್ತು ದೇವರ ರಾಜ್ಯದಲ್ಲಿ ಶಾಂತಿಪೂರ್ಣ ಪ್ರಮೋದವನ ಭೂಮಿಯ ಮೇಲೆ ನಿತ್ಯಜೀವಕ್ಕೆ ಪುನರುತ್ಥಾನಗಳಂತಹ ಬೈಬಲಿನ ಮೂಲಭೂತ ಬೋಧನೆಗಳನ್ನು ಅವರು ಪುನಸ್ಥಾಪಿಸಿದರು. ಎಲ್ಲಕ್ಕಿಂತಲೂ ಮಿಗಿಲಾಗಿ, ವಿಶ್ವದ ಪರಮಾಧಿಕಾರಿಯೋಪಾದಿ ಯೆಹೋವ ದೇವರ ಸನ್ನಿಹಿತವಾದ ನಿರ್ದೋಷೀಕರಣದ ಮೇಲೆ ಹೆಚ್ಚಿನ ಒತ್ತನ್ನು ನೀಡಲಾಯಿತು. “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ” ಎಂಬ ಕರ್ತನ ಪ್ರಾರ್ಥನೆಯು ಬೇಗನೆ ಉತ್ತರಿಸಲ್ಪಡಲಿತ್ತೆಂದು ಈ ಬೈಬಲ್ ವಿದ್ಯಾರ್ಥಿಗಳು ನಂಬಿದರು. (ಮತ್ತಾಯ 6:9, 10) ಇವರು ದೇವರ ಪವಿತ್ರಾತ್ಮದ ಮೂಲಕ, ಶಾಂತಿಯನ್ನು ಪ್ರೀತಿಸುವ ಕ್ರೈಸ್ತರ ಲೋಕವ್ಯಾಪಕ ಸಂಸ್ಥೆಯಾಗಿ ರೂಪಿಸಲ್ಪಡುತ್ತಿದ್ದರು.
12. ಬೈಬಲ್ ವಿದ್ಯಾರ್ಥಿಗಳು ಒಂದು ಪ್ರಾಮುಖ್ಯ ತಾರೀಖನ್ನು ಹೇಗೆ ಪತ್ತೇಹಚ್ಚಿದರು?
12 ದಾನಿಯೇಲ್ 4ನೆಯ ಅಧ್ಯಾಯ ಮತ್ತು ಇತರ ಪ್ರವಾದನೆಗಳ ಆಳವಾದ ಅಧ್ಯಯನದಿಂದ, ಮೆಸ್ಸೀಯ ರಾಜನೋಪಾದಿ ಯೇಸುವಿನ ಸಾನ್ನಿಧ್ಯವು ಹತ್ತಿರವಿರಬೇಕೆಂದು ಬೈಬಲ್ ವಿದ್ಯಾರ್ಥಿಗಳು ಮನಗಂಡರು. “ಅನ್ಯದೇಶದವರ ಸಮಯಗಳು” 1914ರಲ್ಲಿ ಕೊನೆಗೊಳ್ಳುವುದು ಎಂಬುದನ್ನು ಅವರು ಗ್ರಹಿಸಿಕೊಂಡರು. (ಲೂಕ 21:24; ಯೆಹೆಜ್ಕೇಲ 21:26, 27) ಬೈಬಲ್ ವಿದ್ಯಾರ್ಥಿಗಳು ಅಮೆರಿಕದಾದ್ಯಂತ ಬೈಬಲ್ ತರಗತಿಗಳನ್ನು (ತದನಂತರ ಸಭೆಗಳೆಂದು ಕರೆಯಲ್ಪಟ್ಟವು) ರಚಿಸುತ್ತಾ, ತಮ್ಮ ಚಟುವಟಿಕೆಯನ್ನು ತೀವ್ರಗತಿಯಲ್ಲಿ ವಿಸ್ತರಿಸಿದರು. ಈ ಶತಮಾನದ ಆರಂಭದೊಳಗಾಗಿ, ಅವರ ಬೈಬಲ್ ಶಿಕ್ಷಣದ ಕೆಲಸವು ಯೂರೋಪ್ ಮತ್ತು ಆಸ್ಟ್ರಲೇಷಿಯದ ಆದ್ಯಂತ ವಿಸ್ತರಿಸುತ್ತಾ ಇತ್ತು. ಈ ಕಾರಣ ಒಳ್ಳೆಯ ಸಂಘಟನೆಯು ಅನಿವಾರ್ಯವಾಯಿತು.
13. ಬೈಬಲ್ ವಿದ್ಯಾರ್ಥಿಗಳು ಯಾವ ಕಾನೂನುಬದ್ಧ ಸ್ಥಾನಮಾನವನ್ನು ಪಡೆದುಕೊಂಡರು, ಮತ್ತು ಸೊಸೈಟಿಯ ಪ್ರಥಮ ಅಧ್ಯಕ್ಷರು ಯಾವ ಎದ್ದುಕಾಣುವ ಸೇವೆಯನ್ನು ಸಲ್ಲಿಸಿದರು?
13 ಬೈಬಲ್ ವಿದ್ಯಾರ್ಥಿಗಳಿಗೆ ಕಾನೂನುಬದ್ಧ ಸ್ಥಾನಮಾನವನ್ನು ಕೊಡಲು, ಸೈಯನ್ಸ್ ವಾಚ್ ಟವರ್ ಟ್ರ್ಯಾಕ್ಟ್ ಸೊಸೈಟಿ 1884ರಲ್ಲಿ ಅಮೆರಿಕದಲ್ಲಿ ಸಂಘಟಿತಗೊಳಿಸಲ್ಪಟ್ಟಿತು. ಅದರ ಮುಖ್ಯಕಾರ್ಯಾಲಯವು ಪೆನ್ಸಿಲ್ವೇನಿಯದ ಪಿಟ್ಸ್‌ಬರ್ಗ್‌ನಲ್ಲಿತ್ತು. ಅದರ ಕಾರ್ಯ ನಿರ್ವಾಹಕರು ಕೇಂದ್ರೀಯ ಆಡಳಿತ ಮಂಡಲಿಯಾಗಿ ಕಾರ್ಯಮಾಡಿದರು. ಅವರು ದೇವರ ರಾಜ್ಯದ ಭೌಗೋಲಿಕ ಸಾರುವಿಕೆಯ ಮೇಲ್ವಿಚಾರಣೆಯನ್ನು ನೋಡಿಕೊಂಡರು. ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಚಾರ್ಲ್ಸ್ ಟಿ. ರಸಲ್, ಸ್ಟಡೀಸ್ ಇನ್ ದ ಸ್ಕ್ರಿಪ್‌ಚರ್ಸ್ ಎಂಬ ಪುಸ್ತಕದ ಆರು ಸಂಪುಟಗಳನ್ನು ಬರೆದು, ಸಾರುತ್ತಾ ವ್ಯಾಪಕವಾದ ಪ್ರಯಾಣಗಳನ್ನು ಕೈಗೊಂಡರು. ಅವರು ತಮ್ಮ ಬೈಬಲ್ ಅಧ್ಯಯನಗಳನ್ನು ಆರಂಭಿಸುವ ಮೊದಲು ಶೇಖರಿಸಿಟ್ಟಿದ್ದ ಸಂಪತ್ತನ್ನು ಲೋಕವ್ಯಾಪಕ ರಾಜ್ಯದ ಕಾರ್ಯಕ್ಕಾಗಿ ದಾನಮಾಡಿದರು. 1916ರಲ್ಲಿ ಮಹಾ ಯುದ್ಧವು ಯೂರೋಪಿನಲ್ಲಿ ತೀವ್ರವಾಗಿ ಹಬ್ಬುತ್ತಿದ್ದಂತೆ, ಬಳಲಿಹೋಗಿದ್ದ ಸಹೋದರ ರಸಲ್ ಸಾರುವ ಪ್ರಯಾಣದಲ್ಲಿ ತೀರಿಹೋದರು. ದೇವರ ರಾಜ್ಯದ ಸಾಕ್ಷಿಕಾರ್ಯದ ವಿಸ್ತರಣೆಗೆ ಅವರು ಸರ್ವಸ್ವವನ್ನೂ ನೀಡಿಕೊಂಡಿದ್ದರು.
14. ಜೆ.ಎಫ್. ರದರ್‌ಫರ್ಡ್ “ಶ್ರೇಷ್ಠ ಹೋರಾಟವನ್ನು” ಹೇಗೆ ನಡೆಸಿದರು? (2 ತಿಮೊಥೆಯ 4:7)
14 ಮಿಸೋರಿಯಲ್ಲಿ ತಾತ್ಕಾಲಿಕವಾಗಿ ನ್ಯಾಯಾಧೀಶರಾಗಿದ್ದ ಜೋಸೆಫ್ ಎಫ್. ರದರ್‌ಫರ್ಡ್ ಎರಡನೆಯ ಅಧ್ಯಕ್ಷರಾದರು. ಅವರು ಧೈರ್ಯದಿಂದ ಬೈಬಲ್ ಸತ್ಯವನ್ನು ಸಮರ್ಥಿಸಿದ ಕಾರಣ, ಕ್ರೈಸ್ತಪ್ರಪಂಚದ ವೈದಿಕರು ರಾಜಕಾರಣಿಗಳೊಂದಿಗೆ ಸೇರಿ ‘ಕಾನೂನಿನ ನೆವನದಿಂದ ಕೇಡುಕಲ್ಪಿಸಿ’ದರು. 1918, ಜೂನ್ 21ರಂದು, ಸಹೋದರ ರದರ್‌ಫರ್ಡ್ ಮತ್ತು ಇತರ ಏಳು ಮಂದಿ ಮುಖ್ಯ ಬೈಬಲ್ ವಿದ್ಯಾರ್ಥಿಗಳನ್ನು ಸೆರೆಯಲ್ಲಿ ಹಾಕಿ, ಅವರಿಗೆ 10 ಇಲ್ಲವೆ 20 ವರ್ಷಗಳ ಶಿಕ್ಷೆಯನ್ನು ವಿಧಿಸಿದರು. ಬೈಬಲ್ ವಿದ್ಯಾರ್ಥಿಗಳು ಅದರ ವಿರುದ್ಧ ಹೋರಾಡಿದರು. (ಕೀರ್ತನೆ 94:20; ಫಿಲಿಪ್ಪಿ 1:7) ಅಪೀಲ್‌ನ ಮೇರೆಗೆ ಅವರು 1919, ಮಾರ್ಚ್ 26ರಂದು ಬಿಡುಗಡೆಗೊಳಿಸಲ್ಪಟ್ಟರು, ಮತ್ತು ತರುವಾಯ ರಾಜದ್ರೋಹದ ಸುಳ್ಳು ಆಪಾದನೆಯಿಂದ ಸಂಪೂರ್ಣವಾಗಿ ಮುಕ್ತಗೊಳಿಸಲ್ಪಟ್ಟರು.b ಈ ಅನುಭವವು ಅವರನ್ನು ಸತ್ಯದ ಪ್ರಬಲ ಸಮರ್ಥಕರನ್ನಾಗಿ ರೂಪಿಸಿತು. ಯೆಹೋವನ ಸಹಾಯದೊಂದಿಗೆ, ಮಹಾ ಬಾಬೆಲಿನ ವಿರೋಧದ ಎದುರಿನಲ್ಲೂ ಸುವಾರ್ತೆಯನ್ನು ಘೋಷಿಸಲಿಕ್ಕಾಗಿರುವ ಆತ್ಮಿಕ ಹೋರಾಟದಲ್ಲಿ ಜಯಸಾಧಿಸಲು, ಸಕಲ ಪ್ರಯತ್ನವನ್ನು ಅವರು ಮಾಡಿದರು. ಈ ಹೋರಾಟವು 1999ರ ಇಸವಿಯ ವರೆಗೂ ಮುಂದುವರಿಯುತ್ತದೆ.—ಹೋಲಿಸಿ ಮತ್ತಾಯ, ಅಧ್ಯಾಯ 23; ಯೋಹಾನ 8:38-47.
15. ಇಸವಿ 1931 ಏಕೆ ಐತಿಹಾಸಿಕವಾಗಿ ಪ್ರಾಮುಖ್ಯವಾಗಿತ್ತು?
15 1920ಗಳ ಮತ್ತು 1930ಗಳ ಸಮಯದಲ್ಲಿ, ದೇವರ ಅಭಿಷಿಕ್ತ ಇಸ್ರಾಯೇಲ್ ಮಹಾ ಕುಂಬಾರನ ನಿರ್ದೇಶನದಲ್ಲಿ ರೂಪಿಸಲ್ಪಡುತ್ತಾ ಮುಂದುವರಿಯಿತು. ಶಾಸ್ತ್ರವಚನಗಳಿಂದ ಪ್ರವಾದನಾತ್ಮಕ ಬೆಳಕು ಪ್ರಕಾಶಿಸಿ, ಯೆಹೋವನಿಗೆ ಘನತೆಯನ್ನು ನೀಡಿತು ಮತ್ತು ಯೇಸುವಿನ ಮೆಸ್ಸೀಯ ಸಂಬಂಧಿತ ರಾಜ್ಯದ ಮೇಲೆ ಕೇಂದ್ರೀಕರಿಸಿತು. 1931ರಲ್ಲಿ ಬೈಬಲ್ ವಿದ್ಯಾರ್ಥಿಗಳು ಯೆಹೋವನ ಸಾಕ್ಷಿಗಳೆಂಬ ತಮ್ಮ ಹೊಸ ಹೆಸರನ್ನು ಸ್ವೀಕರಿಸಿಕೊಳ್ಳಲು ಹರ್ಷಿಸಿದರು.—ಯೆಶಾಯ 43:10-12; ಮತ್ತಾಯ 6:9, 10; 24:14.
16. 16, ಮತ್ತು 19ನೆಯ ಪುಟದಲ್ಲಿರುವ ರೇಖಾಚೌಕ. 1,44,000 ಮಂದಿಯ ಪೂರ್ಣ ಸಂಖ್ಯೆಯು ಯಾವಾಗ ಪೂರ್ಣಗೊಂಡಿತು, ಮತ್ತು ಇದಕ್ಕೆ ಯಾವ ಪ್ರಮಾಣವಿದೆ?
16 1930ಗಳಲ್ಲಿ, “ಕರೆದವರೂ ದೇವರಾದುಕೊಂಡವರೂ ನಂಬಿಗಸ್ತರೂ” ಆಗಿದ್ದವರ ಸಂಖ್ಯೆ, ಅಂದರೆ 1,44,000ವು ಪೂರ್ಣಗೊಂಡಿರುವುದಾಗಿ ಕಂಡುಬಂದಿತು. (ಪ್ರಕಟನೆ 17:14; 19ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.) ಪ್ರಥಮ ಶತಮಾನದಲ್ಲಿ ಮತ್ತು ಕ್ರೈಸ್ತಪ್ರಪಂಚದ ಮಹಾ ಧರ್ಮಭ್ರಷ್ಟತೆಯ ಕರಾಳ ಶತಮಾನಗಳಲ್ಲಿ “ಹಣಜಿ”ಗಳೊಳಗಿಂದ ಎಷ್ಟು ಜನ ಅಭಿಷಿಕ್ತರು ಕೂಡಿಸಲ್ಪಟ್ಟರೆಂಬುದು ನಮಗೆ ತಿಳಿದಿರುವುದಿಲ್ಲ. ಆದರೆ 1935ರಲ್ಲಿ 56,153 ಪ್ರಚಾರಕರ ಉಚ್ಚ ಸಂಖ್ಯೆಯಲ್ಲಿ ಲೋಕವ್ಯಾಪಕವಾಗಿ 52,465 ಮಂದಿ ಜ್ಞಾಪಕಾಚರಣೆಯ ಕುರುಹುಗಳಲ್ಲಿ ಪಾಲ್ಗೊಳ್ಳುವ ಮೂಲಕ ತಮಗೆ ಸ್ವರ್ಗೀಯ ನಿರೀಕ್ಷೆಯಿದೆ ಎಂಬುದನ್ನು ಸೂಚಿಸಿದರು. ಇನ್ನೂ ಒಟ್ಟುಗೂಡಿಸಲ್ಪಡಲಿದ್ದ ಅನೇಕರ ಗಮ್ಯಸ್ಥಾನವು ಏನಾಗಿರಲಿತ್ತು?
“ಇಗೋ! ಒಂದು ಮಹಾ ಸಮೂಹ”
17. ಯಾವ ಐತಿಹಾಸಿಕ ಬದಲಾವಣೆಯು 1935ರಲ್ಲಿ ಸಂಭವಿಸಿತು?
17 ಅಮೆರಿಕದ ವಾಷಿಂಗ್‌ಟನ್ ಡಿ.ಸಿ.ಯಲ್ಲಿ ಮೇ 30ರಿಂದ ಜೂನ್ 3, 1935ರ ಕಾಲಾವಧಿಯಲ್ಲಿ ನಡೆದ ಅಧಿವೇಶನದಲ್ಲಿ, “ಮಹಾ ಜನಸ್ತೋಮ” ಎಂಬ ಶೀರ್ಷಿಕೆಯ ಪ್ರಮುಖ ಭಾಷಣವನ್ನು ಸಹೋದರ ರದರ್‌ಫರ್ಡ್ ನೀಡಿದರು.c “ಯಾರಿಂದಲೂ ಎಣಿಸಲಾಗದಂಥ” ಈ ಗುಂಪು, ಆತ್ಮಿಕ ಇಸ್ರಾಯೇಲಿನ 1,44,000 ಮಂದಿಯ ಮುದ್ರೆ ಒತ್ತುವಿಕೆಯು ಪೂರ್ಣಗೊಳ್ಳುವ ಸಮಯದಲ್ಲಿ ಕಾಣಿಸಿಕೊಳ್ಳಲಿತ್ತು. ಇವರು ಸಹ ಯೇಸುವಿನ, ಅಂದರೆ “ಕುರಿಯಾದಾತನ ರಕ್ತ”ದಲ್ಲಿರುವ ವಿಮೋಚಿಸುವ ಸಾಮರ್ಥ್ಯದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿ, ಯೆಹೋವನ ಆಲಯದ ಆರಾಧನಾ ಏರ್ಪಾಡಿನಲ್ಲಿ ಪವಿತ್ರ ಸೇವೆಯನ್ನು ಸಲ್ಲಿಸುತ್ತಾರೆ. ಒಂದು ಗುಂಪಿನೋಪಾದಿ ಅವರು ಜೀವಂತರಾಗಿ ‘ಮಹಾ ಸಂಕಟದಿಂದ ಹೊರಬಂದು’ ‘ಇನ್ನು ಮರಣವಿರದ’ ಭೂಪ್ರಮೋದವನವನ್ನು ಸ್ವಾಧೀನಪಡಿಸಿಕೊಳ್ಳುವರು. ಆ ಅಧಿವೇಶನವು ಜರಗುವ ಮುಂಚೆ, ಈ ಗುಂಪನ್ನು ಯೋನಾದಾಬರೆಂದು ಸೂಚಿಸಿ ಮಾತನಾಡುತ್ತಿದ್ದರು.—ಪ್ರಕಟನೆ 7:9-17; 21:4; ಯೆರೆಮೀಯ 35:10.
18. ಯಾವ ವಿಧಗಳಲ್ಲಿ 1938ನೆಯ ಇಸವಿಯು ನಿರ್ಧಾರಕ ವರ್ಷವಾಗಿತ್ತು?
18 ಆ ಎರಡೂ ವರ್ಗಗಳನ್ನು ಸ್ಪಷ್ಟವಾಗಿ ಗುರುತಿಸುವುದರಲ್ಲಿ 1938 ನಿರ್ಧಾರಕ ವರ್ಷವಾಗಿತ್ತು. ಕಾವಲಿನಬುರುಜು ಪತ್ರಿಕೆಯ ಮಾರ್ಚ್ 15 ಮತ್ತು ಏಪ್ರಿಲ್ 1, 1938ರ ಸಂಚಿಕೆಗಳು “ಅವನ ಹಿಂಡು” ಎಂಬ ಎರಡು ಭಾಗದ ಅಧ್ಯಯನ ಲೇಖನಗಳನ್ನು ಪ್ರಸ್ತುತಪಡಿಸಿ, ಅಭಿಷಿಕ್ತ ಉಳಿಕೆಯವರು ಮತ್ತು ಅವರ ಸಂಗಾತಿಗಳಾದ ಮಹಾ ಸಮೂಹದವರ ಸಂಬಂಧಿತ ಸ್ಥಾನಗಳ ಕುರಿತು ಸ್ಪಷ್ಟನೆಯನ್ನು ನೀಡಿದವು. ತರುವಾಯ, ಜೂನ್ 1 ಮತ್ತು ಜೂನ್ 15ರ ಸಂಚಿಕೆಗಳು, ಯೆಶಾಯ 60:17ರ ಆಧಾರದ ಮೇಲೆ “ಸಂಸ್ಥೆ” ಎಂಬ ವಿಷಯದ ಮೇಲೆ ಅಧ್ಯಯನ ಲೇಖನಗಳನ್ನು ಪ್ರಸ್ತುತಪಡಿಸಿದವು. ದೇವರು ನೇಮಿಸಿದ, ಉತ್ತಮವಾದ ದೇವಪ್ರಭುತ್ವ ಏರ್ಪಾಡನ್ನು ಜಾರಿಗೊಳಿಸಲು ಸಾಧ್ಯವಾಗುವಂತೆ, ಸ್ಥಳಿಕ ಸೇವಕರನ್ನು ನೇಮಿಸಬೇಕೆಂದು ಆಡಳಿತ ಮಂಡಲಿಗೆ ವಿನಂತಿಸಿಕೊಳ್ಳುವಂತೆ ಎಲ್ಲ ಸಭೆಗಳಿಗೆ ಹೇಳಲಾಯಿತು. ಸಭೆಗಳು ಅದರಂತೆಯೇ ಮಾಡಿದವು.
19. 19 ಮತ್ತು ಪಾದಟಿಪ್ಪಣಿ. “ಬೇರೆ ಕುರಿ”ಗಳಿಗಾಗಿರುವ ಸಾಮಾನ್ಯ ಕರೆಯು ಈಗ 60ಕ್ಕಿಂತಲೂ ಹೆಚ್ಚಿನ ವರ್ಷಗಳಿಂದ ಮುಂದುವರಿಯುತ್ತಿದೆ ಎಂಬುದನ್ನು ಯಾವ ನಿಜತ್ವಗಳು ದೃಢಪಡಿಸುತ್ತವೆ?
19 1939 ಯಿಯರ್‌ಬುಕ್ ಆಫ್ ಜೆಹೋವಾಸ್ ವಿಟ್ನಸೆಸ್‌ನಲ್ಲಿರುವ ವರದಿಯು ಹೇಳುವುದು: “ಈಗ ಭೂಮಿಯಲ್ಲಿರುವ ಕ್ರಿಸ್ತ ಯೇಸುವಿನ ಅಭಿಷಿಕ್ತ ಹಿಂಬಾಲಕರ ಸಂಖ್ಯೆಯು ಕಡಿಮೆಯಾಗಿದೆ, ಮತ್ತು ಈ ಸಂಖ್ಯೆಯು ಎಂದಿಗೂ ಹೆಚ್ಚಾಗದು. ಇವರು ಚೀಯೋನಿನ, ಅಂದರೆ ದೇವರ ಸಂಸ್ಥೆಯ ಸಂತಾನದಲ್ಲಿ “ಉಳಿಕೆಯವರು” ಎಂಬುದಾಗಿ ಶಾಸ್ತ್ರಗಳಲ್ಲಿ ಸೂಚಿಸಲ್ಪಟ್ಟಿದ್ದಾರೆ. (ಪ್ರಕ. 12:17) ‘ಮಹಾ ಜನಸ್ತೋಮ’ವನ್ನು ರಚಿಸಲಿರುವ ತನ್ನ ‘ಬೇರೆ ಕುರಿಗಳನ್ನು’ ಕರ್ತನು ಈಗ ಒಟ್ಟುಗೂಡಿಸುತ್ತಿದ್ದಾನೆ. (ಯೋಹಾ. 10:16) ಈಗ ಒಟ್ಟುಗೂಡಿಸಲ್ಪಡುತ್ತಿರುವವರು, ಉಳಿಕೆಯವರೊಂದಿಗೆ ಸೇರಿ ಕೆಲಸಮಾಡುವ ಅವರ ಸಂಗಾತಿಗಳಾಗಿದ್ದಾರೆ. ಈ ಸಮಯದಿಂದ ‘ಬೇರೆ ಕುರಿಗಳ’ವರ ಸಂಖ್ಯೆಯು ಹೆಚ್ಚುತ್ತಾ ಹೋಗಿ, ಕೊನೆಗೆ ‘ಮಹಾ ಜನಸ್ತೋಮವು’ ಸೇರಿಸಲ್ಪಡುವುದು. ಅಭಿಷಿಕ್ತ ಉಳಿಕೆಯವರು ಮಹಾ ಸಮೂಹದ ಒಟ್ಟುಗೂಡಿಸುವಿಕೆಯನ್ನು ನೋಡಿಕೊಳ್ಳುವಂತೆ ರೂಪಿಸಲ್ಪಟ್ಟಿದ್ದರು. ಇವರು ಸಹ ಈಗ ರೂಪಿಸಲ್ಪಡಬೇಕು.d
20. 1942ರಂದಿನಿಂದ ಯಾವ ಸಂಘಟನಾತ್ಮಕ ಬದಲಾವಣೆಗಳು ಸಂಭವಿಸಿವೆ?
20 ಎರಡನೆಯ ಜಾಗತಿಕ ಯುದ್ಧವು ತನ್ನ ಪರಮಾವಧಿಯಲ್ಲಿದ್ದಾಗ, ಜೋಸೆಫ್ ರದರ್‌ಫರ್ಡ್ ಜನವರಿ 1942ರಲ್ಲಿ ತೀರಿಹೋದರು. ಅವರ ತರುವಾಯ ನೇತನ್ ನಾರ್ ಅಧ್ಯಕ್ಷರಾದರು. ಸೊಸೈಟಿಯ ಮೂರನೆಯ ಅಧ್ಯಕ್ಷರು, ಸಭೆಗಳಲ್ಲಿ ದೇವಪ್ರಭುತ್ವ ಶಾಲೆಗಳನ್ನು ಮತ್ತು ಮಿಷನೆರಿಗಳನ್ನು ತರಬೇತುಗೊಳಿಸಲಿಕ್ಕಾಗಿ ಗಿಲ್ಯಡ್ ಶಾಲೆಯನ್ನು ಸ್ಥಾಪಿಸಿದ ಸಂಗತಿಗಾಗಿ ಅಕ್ಕರೆಯಿಂದ ಸ್ಮರಿಸಲ್ಪಡುತ್ತಾರೆ. 1944ರಲ್ಲಾದ ಸೊಸೈಟಿಯ ವಾರ್ಷಿಕ ಕೂಟದಲ್ಲಿ, ಸೊಸೈಟಿಯ ಸನ್ನದು ಬದಲಾಯಿಸಲ್ಪಟ್ಟಿದೆ ಎಂದು ಅವರು ಪ್ರಕಟಿಸಿದರು. ಇನ್ನು ಮುಂದೆ ಸದಸ್ಯತ್ವವು ಭೌತಿಕ ದೇಣಿಗೆಗಳ ಮೇಲಲ್ಲ ಬದಲಿಗೆ ಆತ್ಮಿಕತೆಯ ಮೇಲೆ ಅವಲಂಬಿಸಿರುವುದೆಂದು ಅವರು ಹೇಳಿದರು. ಮುಂದಿನ 30 ವರ್ಷಗಳ ಅವಧಿಯಲ್ಲಿ, ಕ್ಷೇತ್ರದಲ್ಲಿ ಕೆಲಸಮಾಡುವವರ ಸಂಖ್ಯೆ ಲೋಕವ್ಯಾಪಕವಾಗಿ 1,56,299ರಿಂದ 21,79,256ಕ್ಕೆ ಏರಿತು. 1971-75ರ ಅವಧಿಯಲ್ಲಿ ಹೆಚ್ಚಿನ ಸಂಘಟನಾತ್ಮಕ ಬದಲಾವಣೆಗಳು ಅಗತ್ಯವಾಗಿದ್ದವು. ಅಧ್ಯಕ್ಷನೋಪಾದಿ ಕಾರ್ಯಮಾಡುತ್ತಿದ್ದ ಒಬ್ಬ ವ್ಯಕ್ತಿಯು ಇನ್ನು ಮುಂದೆ ಭೂವ್ಯಾಪಕವಾಗಿರುವ ರಾಜ್ಯ ಕೆಲಸದ ಮೇಲ್ವಿಚಾರಣೆಯನ್ನು ಸರಿಯಾಗಿ ಮಾಡಸಾಧ್ಯವಿರಲಿಲ್ಲ. ಆಡಳಿತ ಮಂಡಲಿಯು, ಪ್ರತಿ ವರ್ಷ ಬದಲಾಗುವ ಅಧ್ಯಕ್ಷನೊಂದಿಗೆ, 18 ಅಭಿಷಿಕ್ತ ಸದಸ್ಯರನ್ನೊಳಗೊಂಡದ್ದಾಗಿ ವಿಸ್ತರಿಸಲ್ಪಟ್ಟಿತು. ಅವರಲ್ಲಿ ಬಹುಮಟ್ಟಿಗೆ ಅರ್ಧದಷ್ಟು ಜನರು ತಮ್ಮ ಭೂಜೀವನವನ್ನು ಮುಗಿಸಿದ್ದಾರೆ.
21. ರಾಜ್ಯದಲ್ಲಿ ಪಾಲ್ಗೊಳ್ಳಲು ಚಿಕ್ಕ ಹಿಂಡಿನ ಸದಸ್ಯರು ಹೇಗೆ ಅರ್ಹರಾಗಿರುತ್ತಾರೆ?
21 ಚಿಕ್ಕ ಹಿಂಡಿನಲ್ಲಿ ಉಳಿದಿರುವ ಸದಸ್ಯರು ಅನೇಕ ವರ್ಷಗಳ ಪರೀಕ್ಷೆಗಳಿಂದ ರೂಪಿಸಲ್ಪಟ್ಟಿದ್ದಾರೆ. ಅವರು ‘ಆತ್ಮದ ಸಾಕ್ಷಿಯನ್ನು’ ಪಡೆದಿರುವ ಕಾರಣ, ಹುರಿದುಂಬಿಸಲ್ಪಟ್ಟಿದ್ದಾರೆ. ಯೇಸು ಅವರಿಗೆ ಹೇಳಿರುವುದು: “ನೀವು ನನ್ನ ಕಷ್ಟಗಳಲ್ಲಿ ನನ್ನ ಸಂಗಡ ಎಡೆಬಿಡದೆ ಇದ್ದವರು. ಆದದರಿಂದ ನನ್ನ ತಂದೆಯು ನನಗೆ ರಾಜ್ಯವನ್ನು ನೇಮಿಸಿದ್ದ ಪ್ರಕಾರ ನಾನು ನಿಮಗೂ ನೇಮಿಸುತ್ತೇನೆ; ನನ್ನ ರಾಜ್ಯದಲ್ಲಿ ನೀವು ನನ್ನ ಮೇಜಿನ ಮೇಲೆ ಊಟಮಾಡುವಿರಿ, ಕುಡಿಯುವಿರಿ; ಮತ್ತು ಸಿಂಹಾಸನಗಳ ಮೇಲೆ ಕೂತುಕೊಂಡು ಇಸ್ರಾಯೇಲಿನ ಹನ್ನೆರಡು ಕುಲಗಳಿಗೆ ನ್ಯಾಯತೀರಿಸುವಿರಿ.”—ರೋಮಾಪುರ 8:16, 17; ಲೂಕ 12:32; 22:28-30.
22, 23. ಚಿಕ್ಕ ಹಿಂಡು ಮತ್ತು ಬೇರೆ ಕುರಿಗಳು ಹೇಗೆ ರೂಪಿಸಲ್ಪಡುತ್ತಿದ್ದಾರೆ?
22 ಭೂಮಿಯಲ್ಲಿರುವ ಆತ್ಮಾಭಿಷಿಕ್ತ ಉಳಿಕೆಯವರ ಸಂಖ್ಯೆಯು ಕಡಿಮೆಯಾದಂತೆ, ಮಹಾ ಸಮೂಹದಲ್ಲಿರುವ ಪ್ರೌಢ ಸಹೋದರರಿಗೆ ಲೋಕವ್ಯಾಪಕವಾಗಿರುವ ಬಹುಮಟ್ಟಿಗೆ ಎಲ್ಲ ಸಭೆಗಳ ಆತ್ಮಿಕ ಮೇಲ್ವಿಚಾರಣೆ ವಹಿಸಲ್ಪಟ್ಟಿದೆ. ಮತ್ತು ಕೊನೆಯ ವೃದ್ಧ ಅಭಿಷಿಕ್ತ ಸಾಕ್ಷಿಯು ತನ್ನ ಭೂಜೀವನವನ್ನು ಮುಗಿಸಿದಂತೆ, ಬೇರೆ ಕುರಿಗಳಲ್ಲಿರುವ ಪ್ರಭುಸದೃಶ ಸಾರೀಮ್‌ರು, ಈ ಭೂಮಿಯ ಅಧಿಪತಿ ವರ್ಗದಂತೆ ಆಡಳಿತ ಕೆಲಸಗಳನ್ನು ನಿರ್ವಹಿಸಲು ಸಾಕಷ್ಟು ತರಬೇತಿಯನ್ನು ಪಡೆದುಕೊಂಡಿರುವರು.—ಯೆಹೆಜ್ಕೇಲ 44:3; ಯೆಶಾಯ 32:1.
23 ಚಿಕ್ಕ ಹಿಂಡಿನವರೂ ಬೇರೆ ಕುರಿಗಳವರೂ ಗೌರವಾರ್ಹ ಬಳಕೆಗಾಗಿರುವ ಪಾತ್ರೆಗಳಾಗಿ ರೂಪಿಸಲ್ಪಡುತ್ತಾ ಇದ್ದಾರೆ. (ಯೋಹಾನ 10:14-16) ನಮ್ಮ ನಿರೀಕ್ಷೆಯು “ನೂತನ ಆಕಾಶ”ದಲ್ಲಿರಲಿ “ನೂತನ ಭೂಮಿ”ಯಲ್ಲಿರಲಿ, ನಾವು ಪೂರ್ಣಹೃದಯದಿಂದ ಯೆಹೋವನ ಆಮಂತ್ರಣಕ್ಕೆ ಪ್ರತಿಕ್ರಿಯಿಸೋಣ: “ನಾನು ಮಾಡುವ ಸೃಷ್ಟಿಕಾರ್ಯದಲ್ಲಿಯೇ ಹರ್ಷಗೊಂಡು ಸದಾ ಉಲ್ಲಾಸಿಸಿರಿ; ಆಹಾ, ನಾನು ಯೆರೂಸಲೇಮನ್ನು ಉಲ್ಲಾಸದ ನಿವಾಸವನ್ನಾಗಿಯೂ ಅದರ ಜನರನ್ನು ಹರ್ಷಭರಿತರನ್ನಾಗಿಯೂ ಮಾಡುವೆನು.” (ಯೆಶಾಯ 65:17, 18) ದುರ್ಬಲ ಮನುಷ್ಯರಾದ ನಾವು, ‘ಸಾಮಾನ್ಯವಾದುದಕ್ಕಿಂತಲೂ ಮಿಗಿಲಾಗಿರುವ ಶಕ್ತಿ’ಯಿಂದ, ಅಂದರೆ ದೇವರ ಪವಿತ್ರಾತ್ಮದ ಶಕ್ತಿಯಿಂದ ರೂಪಿಸಲ್ಪಟ್ಟು, ಸದಾ ದೀನಭಾವದಿಂದ ಸೇವೆ ಸಲ್ಲಿಸುತ್ತಿರೋಣ!—2 ಕೊರಿಂಥ 4:7; ಯೋಹಾನ 16:13.
[ಅಧ್ಯಯನ ಪ್ರಶ್ನೆಗಳು]
a ಪ್ರಾಚೀನ ಇಸ್ರಾಯೇಲನ್ನು ಮುನ್ಸೂಚಿಸುವ ಮತದ್ರೋಹಿ ಕ್ರೈಸ್ತಪ್ರಪಂಚವು, ಯೆಹೋವನಿಂದ ಬರಲಿರುವ ತದ್ರೀತಿಯ ನ್ಯಾಯತೀರ್ಪಿನ ಕುರಿತು ಎಚ್ಚರಿಸಲ್ಪಡಲಿ.—1 ಪೇತ್ರ 4:17, 18.
b ಬೈಬಲ್ ವಿದ್ಯಾರ್ಥಿಗಳನ್ನು ಜಾಮೀನಿನ ಮೇಲೆ ಬಿಡುಗಡೆಮಾಡಲು ನಿರಾಕರಿಸಿದ್ದ ನ್ಯಾಯಾಧೀಶರಾದ ಮ್ಯಾನ್ಟನ್ ಒಬ್ಬ ರೋಮನ್ ಕ್ಯಾತೊಲಿಕರಾಗಿದ್ದು, ಲಂಚ ಸ್ವೀಕರಿಸಿದ ಕಾರಣ ತರುವಾಯ ಸ್ವತಃ ಸೆರೆಮನೆಯಲ್ಲಿ ಹಾಕಲ್ಪಟ್ಟರು.
c 1950ರಲ್ಲಿ ಬಿಡುಗಡೆಗೊಳಿಸಲ್ಪಟ್ಟ, ನ್ಯೂ ವರ್ಲ್ಡ್ ಟ್ರಾನ್ಸ್‌ಲೇಶನ್ ಆಫ್ ದ ಕ್ರಿಸ್ಟಿಯನ್ ಗ್ರೀಕ್ ಸ್ಕ್ರಿಪ್‌ಚರ್ಸ್, “ಮಹಾ ಸಮೂಹ” ಎಂಬ ಪದವನ್ನು, ಪ್ರೇರಿತ ಗ್ರೀಕ್ ಪದದ ಸೂಕ್ತವಾದ ಭಾಷಾಂತರವಾಗಿ ಬಳಸುತ್ತದೆ.
d 1938ರಲ್ಲಿ ಲೋಕವ್ಯಾಪಕವಾಗಿ ಜ್ಞಾಪಕದ ಹಾಜರಿಯು 73,420 ಆಗಿತ್ತು. ಇವರಲ್ಲಿ 53 ಪ್ರತಿಶತದಷ್ಟು ಜನ, ಅಂದರೆ 39,225 ಮಂದಿ ಕುರುಹುಗಳಲ್ಲಿ ಪಾಲ್ಗೊಂಡರು. 1998ರೊಳಗಾಗಿ ಹಾಜರಿಯು 1,38,96,312 ಸಂಖ್ಯೆಯಷ್ಟಿತ್ತು. ಇವರಲ್ಲಿ ಕೇವಲ 8,756 ಮಂದಿ ಪಾಲ್ಗೊಂಡರು. ಇದು ಪ್ರತಿ 10 ಸಭೆಗಳಿಗೆ ಒಬ್ಬರಿಗಿಂತಲೂ ಕಡಿಮೆ ಜನರು ಭಾಗವಹಿಸುವ ಸರಾಸರಿಯನ್ನು ಸೂಚಿಸುತ್ತದೆ.
ನೀವು ಜ್ಞಾಪಿಸಿಕೊಳ್ಳುತ್ತೀರೊ?
◻ ತನ್ನ ತಂದೆಯ ರೂಪಿಸುವಿಕೆಗೆ ಅಧೀನನಾಗುವ ವಿಷಯದಲ್ಲಿ, ಯೇಸು ಹೇಗೆ ನಮ್ಮ ಮಾದರಿಯಾಗಿದ್ದಾನೆ?
◻ ಯಾವ ರೂಪಿಸುವಿಕೆಯು ಪ್ರಾಚೀನ ಇಸ್ರಾಯೇಲಿನಲ್ಲಿ ಸಂಭವಿಸಿತು?
◻ “ದೇವರ ಇಸ್ರಾಯೇಲ್” ಇಲ್ಲಿಯ ತನಕ ಹೇಗೆ ರೂಪಿಸಲ್ಪಟ್ಟಿದೆ?
◻ ಯಾವ ಉದ್ದೇಶಕ್ಕಾಗಿ “ಬೇರೆ ಕುರಿ”ಗಳವರು ರೂಪಿಸಲ್ಪಟ್ಟಿದ್ದಾರೆ?
[ಪುಟ 29 ರಲ್ಲಿರುವ ಚೌಕ]
ಕ್ರೈಸ್ತಪ್ರಪಂಚದಲ್ಲಿ ಹೆಚ್ಚಿನ ರೂಪಿಸುವಿಕೆ
ಗ್ರೀಸ್‌ನ ಅಥೇನ್ಸ್‌ನಿಂದ ಬಂದ ಅಸೋಷಿಯೆಟೆಡ್ ಪ್ರೆಸ್‌ನ ಪತ್ರವು, ಇತ್ತೀಚೆಗೆ ನೇಮಿಸಲ್ಪಟ್ಟ ಗ್ರೀಕ್ ಅರ್ತೋಡಾಕ್ಸ್ ಚರ್ಚಿನ ಮುಖ್ಯಸ್ಥನ ಕುರಿತು ಹೀಗೆ ವರದಿಸಿತು: “ಅವನು ಶಾಂತಿಯ ದೂತನಾಗಿರತಕ್ಕದ್ದು. ಆದರೆ ಗ್ರೀಕ್ ಅರ್ತೋಡಾಕ್ಸ್ ಚರ್ಚಿನ ನಾಯಕನು, ಯುದ್ಧಕ್ಕಾಗಿ ತಯಾರಿ ನಡೆಸುತ್ತಿರುವ ಸೇನಾಪತಿಯಂತೆ ಮಾತನಾಡುತ್ತಾನೆ.
“ಅಗತ್ಯವಿರುವಲ್ಲಿ ನಾವು ರಕ್ತವನ್ನು ಸುರಿಸಲು ಮತ್ತು ತ್ಯಾಗಗಳನ್ನು ಮಾಡಲು ಸಿದ್ಧರಾಗಿದ್ದೇವೆ. ಒಂದು ಚರ್ಚಿನೋಪಾದಿ ನಾವು ಶಾಂತಿಗಾಗಿ ಪ್ರಾರ್ಥಿಸುತ್ತೇವೆ . . . ಆದರೂ ಸನ್ನಿವೇಶವು ಅಗತ್ಯಪಡಿಸುವಾಗ ನಾವು ಪವಿತ್ರ ಶಸ್ತ್ರಾಸ್ತ್ರಗಳನ್ನೂ ಆಶೀರ್ವದಿಸುತ್ತೇವೆ.’ ಹೀಗೆಂದು, ಮೇರಿ ಕನ್ಯೆಯ ಸ್ವರ್ಗಾರೋಹಣದ ದಿನದಂದು ಆರ್ಚ್‌ಬಿಷಪ್ ಕ್ರಿಸ್ಟೊಡೂಲಸ್ ಇತ್ತೀಚೆಗೆ ಹೇಳಿದರು. ಆ ಉತ್ಸವವು ಗ್ರೀಸಿನ ಸಶಸ್ತ್ರಾ ಸೇನೆಗಳ ದಿನವೂ ಆಗಿದೆ.”
[ಪುಟ 19 ರಲ್ಲಿರುವ ಚೌಕ]
“ಇನ್ನೂ ಹೆಚ್ಚಿನ ಸೇರ್ಪಡೆಗಳಿಲ್ಲ”
1970ರಲ್ಲಿ ನಡೆದ ಗಿಲ್ಯಡ್ ಪದವಿಪ್ರಾಪ್ತಿಯ ದಿನದಂದು, ವಾಚ್ ಟವರ್ ಸೊಸೈಟಿಯ ಆಗಿನ ಉಪಾಧ್ಯಕ್ಷರಾಗಿದ್ದ ಫ್ರೆಡ್ರಿಕ್ ಫ್ರಾನ್ಸ್, ಅಲ್ಲಿದ್ದ ವಿದ್ಯಾರ್ಥಿಗಳಿಗೆ ಒಂದು ಸಾಧ್ಯತೆಯ ಕುರಿತು ತಿಳಿಸಿದರು. ಅದೇನೆಂದರೆ, ಆ ತರಗತಿಯ ಎಲ್ಲ ವಿದ್ಯಾರ್ಥಿಗಳು ಭೂನಿರೀಕ್ಷೆಯುಳ್ಳ ಬೇರೆ ಕುರಿಗಳಾಗಿದ್ದರೂ, ಅಭಿಷಿಕ್ತ ಉಳಿಕೆಯವರಲ್ಲಿ ಒಬ್ಬರೆಂದು ಹೇಳಿಕೊಳ್ಳುವ ವ್ಯಕ್ತಿಗೆ ಅವರು ದೀಕ್ಷಾಸ್ನಾನ ನೀಡುವ ಸಂದರ್ಭ ಬರಬಹುದು. ಇದು ಸಂಭವಿಸುವ ಸಾಧ್ಯತೆ ಇತ್ತೊ? ಸ್ನಾನಿಕ ಯೋಹಾನನು ಬೇರೆ ಕುರಿಗಳಲ್ಲಿ ಒಬ್ಬನಾಗಿದ್ದರೂ ಅವನು ಯೇಸುವಿಗೆ ಮತ್ತು ಅಪೊಸ್ತಲರಲ್ಲಿ ಕೆಲವರಿಗೆ ದೀಕ್ಷಾಸ್ನಾನ ಮಾಡಿಸಿದನೆಂದು ಅವನು ವಿವರಿಸಿದರು. ಉಳಿಕೆಯವರಲ್ಲಿ ಇನ್ನೂ ಹೆಚ್ಚಿನ ಜನರನ್ನು ಸೇರಿಸಿಕೊಳ್ಳುವ ಕರೆಯು ಈಗಲೂ ಜಾರಿಯಲ್ಲಿದೆಯೊ ಎಂದು ಅವರು ತದನಂತರ ಕೇಳಿದರು. “ಇಲ್ಲ, ಇನ್ನೂ ಹೆಚ್ಚಿನ ಸೇರ್ಪಡೆಗಳಿಲ್ಲ!” ಎಂದು ಅವರಂದರು. “ಆ ಕರೆಯು 1931-35ರ ಅವಧಿಯಲ್ಲಿ ಕೊನೆಗೊಂಡಿತು! ಇನ್ನೂ ಹೆಚ್ಚಿನ ಸೇರ್ಪಡೆಗಳಿರುವುದಿಲ್ಲ. ಹಾಗಾದರೆ, ಜ್ಞಾಪಕದ ಕುರುಹುಗಳಲ್ಲಿ ಪಾಲ್ಗೊಳ್ಳುತ್ತಿರುವ ಈ ಹೊಸಬರು ಯಾರಾಗಿದ್ದಾರೆ? ಅವರು ಉಳಿಕೆಯವರಲ್ಲಿ ಒಬ್ಬರಾಗಿದ್ದರೆ, ಅವರು ಭರ್ತಿಮಾಡಲ್ಪಟ್ಟವರಾಗಿದ್ದಾರೆ! ಅವರು ಅಭಿಷಿಕ್ತರ ವರ್ಗಕ್ಕೆ ಸೇರಿಸಲ್ಪಟ್ಟವರಲ್ಲ, ಬದಲಿಗೆ ಬಿದ್ದುಹೋಗಿರಬಹುದಾದ ಜನರ ಸ್ಥಾನದಲ್ಲಿ ಭರ್ತಿಮಾಡಲ್ಪಟ್ಟವರಾಗಿದ್ದಾರೆ.”
[ಪುಟ 15 ರಲ್ಲಿರುವ ಚಿತ್ರ]
ನಮ್ಮ ಸೇವಾನಿಕ್ಷೇಪವು ನಮಗೆಷ್ಟು ಅಮೂಲ್ಯವು!
[ಪುಟ 16 ರಲ್ಲಿರುವ ಚಿತ್ರ]
ಪುರಾತನ ಇಸ್ರಾಯೇಲ್ ನಾಶನಕ್ಕೆ ಮಾತ್ರ ಯೋಗ್ಯವಾದ ಪಾತ್ರೆಯಾಗಿ ಪರಿಣಮಿಸಿತು