ಯೆಹೋವನಿಗೆ ಸ್ವೀಕಾರಯೋಗ್ಯವಾಗಿರುವ ಯಜ್ಞಗಳನ್ನು ಅರ್ಪಿಸುವುದು
ಇತಿಹಾಸದ ಯಾವುದೋ ಒಂದು ಸಮಯದಲ್ಲಿ, ಏದೆನ್ ತೋಟದ ಪೂರ್ವ ದ್ವಾರದಲ್ಲಿ ಒಂದು ಅದ್ಭುತ ಘಟನೆಯು ಸಂಭವಿಸಿತ್ತು.a ಅಲ್ಲಿ ಮಹಾ ಪರಾಕ್ರಮಿಗಳಾದ ಕೆರೂಬಿಯರು ಕಾವಲುಕಾಯುತ್ತಾ ನಿಂತಿದ್ದರು. ಅವರ ಭಯಸೂಚಕ ದೃಶ್ಯವು, ಅದರ ಮೂಲಕ ಹಾದುಹೋಗಲು ಯಾರೂ ಧೈರ್ಯಮಾಡಬಾರದು ಎಂಬುದನ್ನು ಸ್ಪಷ್ಟಪಡಿಸುತ್ತಿತ್ತು. ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯು ಸಹ ಅಷ್ಟೇ ನಿಷೇಧಾತ್ಮಕವಾಗಿತ್ತು. ಅದು ರಾತ್ರಿಯಲ್ಲಿ ಇತರರು ಭಯಪಡುವಷ್ಟರ ಮಟ್ಟಿಗೆ ಸುತ್ತುಮುತ್ತಲಿದ್ದ ಮರಗಳ ಮೇಲೆ ಪ್ರಕಾಶವನ್ನು ಬೀರುತ್ತಿತು. (ಆದಿಕಾಂಡ 3:24) ಅದು ನೋಡಲು ತುಂಬ ಕುತೂಹಲಕರವಾಗಿತ್ತಾದರೂ, ಅದನ್ನು ನೋಡುವ ಯಾರೇ ಆಗಲಿ, ಅದರಿಂದ ಬಹಳ ದೂರವೇ ನಿಲ್ಲುತ್ತಿದ್ದರು.
ಕಾಯಿನ ಮತ್ತು ಹೇಬೆಲರು ಅನೇಕ ಬಾರಿ ಈ ಜಾಗಕ್ಕೆ ಹೋಗಿರಬಹುದು. ಏದೆನ್ ತೋಟದ ಹೊರಗೆ ಆದಾಮಹವ್ವರಿಗೆ ಹುಟ್ಟಿದ ಈ ಮಕ್ಕಳು, ಪ್ರಮೋದವನದಲ್ಲಿ ಜೀವಿಸುವುದು ಹೇಗಿರುತ್ತಿತ್ತು ಎಂಬುದನ್ನು ಕಲ್ಪಿಸಿಕೊಳ್ಳಸಾಧ್ಯವಿತ್ತು ಅಷ್ಟೇ. ಆದರೆ ಒಂದು ಕಾಲದಲ್ಲಿ, ಹುಲುಸಾಗಿಯೂ ಸಾರವತ್ತಾಗಿಯೂ ಇದ್ದ ಸಸ್ಯಸಂಪತ್ತು, ಹಣ್ಣುಗಳೂ ತರಕಾರಿಗಳೂ ಸಮೃದ್ಧವಾಗಿದ್ದ ಈ ಸ್ಥಳದಲ್ಲಿ, ಅವರ ಹೆತ್ತವರು ಜೀವಿಸಿದ್ದರು. ಆದರೆ ಈಗ ಏದೆನಿನಲ್ಲಿ ನೋಡಸಾಧ್ಯವಿದ್ದದ್ದು, ವ್ಯವಸಾಯಮಾಡದೆ ಬಿಡಲ್ಪಟ್ಟಿರುವ ಭೂಮಿ ಹಾಗೂ ವಿಪರೀತ ಬೆಳೆದಿರುವ ಗಿಡಗಂಟಿಗಳನ್ನೇ ಎಂಬುದರಲ್ಲಿ ಸಂದೇಹವಿರಲಿಲ್ಲ.
ಏದೆನ್ ತೋಟವು ಏಕೆ ಹಾಳುಬಿದ್ದಿದೆ ಮತ್ತು ಏಕೆ ತಮ್ಮನ್ನು ಅಲ್ಲಿಂದ ಹೊರಗಟ್ಟಲಾಯಿತು ಎಂಬುದನ್ನು ಆದಾಮಹವ್ವರು ತಮ್ಮ ಮಕ್ಕಳಿಗೆ ವಿವರಿಸಿದ್ದರು ಎಂಬುದು ಖಂಡಿತ. (ಆದಿಕಾಂಡ 2:17; 3:6, 23) ಕಾಯಿನ ಮತ್ತು ಹೇಬೆಲರು ಎಷ್ಟು ಆಶಾಭಂಗಗೊಂಡಿದ್ದಿರಬೇಕು! ಅವರು ತೋಟವನ್ನು ನೋಡಸಾಧ್ಯವಿತ್ತು, ಆದರೆ ಅದನ್ನು ಪ್ರವೇಶಿಸಲು ಸಾಧ್ಯವಿರಲಿಲ್ಲ. ಪ್ರಮೋದವನದ ಹತ್ತಿರವೇ ಇದ್ದರೂ, ಅದರಿಂದ ಅವರು ತುಂಬ ದೂರವಿದ್ದರು. ಅಪರಿಪೂರ್ಣತೆಯು ಅವರನ್ನು ಕಳಂಕಗೊಳಿಸಿತ್ತು, ಮತ್ತು ಇದರ ಕುರಿತು ಕಾಯಿನ ಮತ್ತು ಹೇಬೆಲರು ಅಸಹಾಯಕರಾಗಿದ್ದರು.
ಅವರ ಹೆತ್ತವರ ಸಂಬಂಧವು, ಖಂಡಿತವಾಗಿಯೂ ವಿಷಯಗಳನ್ನು ಬದಲಾಯಿಸಲು ಸಾಧ್ಯವಿರಲಿಲ್ಲ. ಹವ್ವಳಿಗೆ ಶಿಕ್ಷೆವಿಧಿಸುತ್ತಿರುವಾಗ ದೇವರು ಹೇಳಿದ್ದು: “ಗಂಡನ ಮೇಲೆ ನಿನಗೆ ಆಶೆಯಿರುವದು [“ಹಂಬಲಿಸುವಿ,” NW]; ಅವನು ನಿನಗೆ ಒಡೆಯನಾಗುವನು [“ಅವನು ನಿನ್ನ ಮೇಲೆ ದಬ್ಬಾಳಿಕೆ ನಡೆಸುವನು,” NW].” (ಆದಿಕಾಂಡ 3:16) ಆ ಪ್ರವಾದನೆಗೆ ಅನುಸಾರವಾಗಿ, ಈಗ ಆದಾಮನು ತನ್ನ ಪತ್ನಿಯನ್ನು ಒಬ್ಬ ಸಹಕಾರಿಣಿ ಹಾಗೂ ಸಹಾಯಕಿಯೋಪಾದಿ ಉಪಚರಿಸುವುದಕ್ಕೆ ಬದಲಾಗಿ, ಅವಳ ಮೇಲೆ ಅಧಿಕಾರ ನಡೆಸುತ್ತಿದ್ದಿರಬೇಕು. ಮತ್ತು ಹವ್ವಳು ಈ ವ್ಯಕ್ತಿಯ ಮೇಲೆ ವಿಪರೀತ ಅವಲಂಬನೆಯನ್ನು ತೋರಿಸುತ್ತಿದ್ದಿರಬೇಕು. ಅವಳ “ಹಂಬಲ”ವು “ರೋಗಕ್ಕೆ ಸಮಾನವಾದ ಒಂದು ಬಯಕೆ”ಯಾಗಿತ್ತೆಂದೂ ಒಬ್ಬ ಟೀಕಾಕಾರನು ವರ್ಣಿಸಿದನು.
ಈ ರೀತಿಯ ವೈವಾಹಿಕ ಸನ್ನಿವೇಶವು, ಈ ಹುಡುಗರು ಹೆತ್ತವರ ಕಡೆಗೆ ತೋರಿಸುತ್ತಿದ್ದ ಗೌರವದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಎಂಬುದನ್ನು ಬೈಬಲು ತಿಳಿಸುವುದಿಲ್ಲ. ಆದರೂ, ಆದಾಮಹವ್ವರು ತಮ್ಮ ಮಕ್ಕಳ ಮುಂದೆ ಒಂದು ಕೆಟ್ಟ ಮಾದರಿಯನ್ನಿಟ್ಟರೆಂಬುದು ಸುವ್ಯಕ್ತ.
ಭಿನ್ನ ಮಾರ್ಗಗಳನ್ನು ಆಯ್ಕೆಮಾಡುವುದು
ಕಾಲಕ್ರಮೇಣ ಹೇಬೆಲನು ಒಬ್ಬ ಕುರುಬನಾದನು ಮತ್ತು ಕಾಯಿನನು ವ್ಯವಸಾಯಮಾಡುವವನಾದನು. (ಆದಿಕಾಂಡ 4:2) ಹೇಬೆಲನು ತನ್ನ ಕುರಿಗಳನ್ನು ಕಾಯುತ್ತಿದ್ದಾಗ, ಅವನ ಹೆತ್ತವರು ಏದೆನ್ ತೋಟದಿಂದ ಹೊರಹಾಕಲ್ಪಡುವ ಮುಂಚೆ, “ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ” ಎಂದು ನುಡಿಯಲ್ಪಟ್ಟ ಒಂದು ವಿಶೇಷ ಪ್ರವಾದನೆಯ ಕುರಿತು ಆಲೋಚಿಸಲು ಅವನಿಗೆ ತುಂಬ ಸಮಯವು ದೊರಕುತ್ತಿತ್ತು ಎಂಬುದರಲ್ಲಿ ಸಂದೇಹವಿಲ್ಲ. (ಆದಿಕಾಂಡ 3:15) ‘ಸರ್ಪನ ತಲೆಯನ್ನು ಜಜ್ಜುವ ಒಂದು ಸಂತತಿಯ ಕುರಿತಾದ ದೇವರ ವಾಗ್ದಾನವು ಹೇಗೆ ನೆರವೇರಿಸಲ್ಪಡುವುದು, ಮತ್ತು ಈ ಸಂತತಿಯ ಹಿಮ್ಮಡಿಯು ಹೇಗೆ ಕಚ್ಚಲ್ಪಡುವುದು?’ ಎಂದು ಹೇಬೆಲನು ಕುತೂಹಲಪಟ್ಟಿದ್ದಿರಬೇಕು.
ಸ್ವಲ್ಪ ಕಾಲಾನಂತರ, ಕಾಯಿನ ಮತ್ತು ಹೇಬೆಲರು ಪ್ರೌಢರಾಗಿದ್ದಾಗ, ಇವರಿಬ್ಬರೂ ಯೆಹೋವ ದೇವರಿಗೆ ಕಾಣಿಕೆಯನ್ನು ಸಮರ್ಪಿಸಿದರು. ಹೇಬೆಲನು ಕುರುಬನಾಗಿದ್ದರಿಂದ, ಅವನು ‘ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಮತ್ತು ಅವುಗಳ ಕೊಬ್ಬನ್ನು’ ಅರ್ಪಿಸಿದನು ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಇದಕ್ಕೆ ವಿರುದ್ಧವಾಗಿ, ಕಾಯಿನನು “ಹೊಲದ ಬೆಳೆಯಲ್ಲಿ ಕೆಲವನ್ನು . . . ಸಮರ್ಪಿಸಿದನು.” ಯೆಹೋವನು ಹೇಬೆಲನ ಯಜ್ಞವನ್ನು ಮೆಚ್ಚಿದನು, ಆದರೆ “ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ.” (ಆದಿಕಾಂಡ 4:3-5) ಏಕೆ?
ಹೇಬೆಲನ ಯಜ್ಞವು ‘ಅವನ ಹಿಂಡಿನ ಚೊಚ್ಚಲ ಕುರಿಗಳನ್ನು’ ಒಳಗೊಂಡಿತ್ತು. ಆದರೆ ಕಾಯಿನನ ಯಜ್ಞವು “ಹೊಲದ ಬೆಳೆಯಲ್ಲಿ ಕೆಲವನ್ನು” ಒಳಗೊಂಡಿತ್ತು ಎಂಬ ಕಾರಣದಿಂದಲೇ ಎಂದು ಕೆಲವರು ಹೇಳುತ್ತಾರೆ. ಆದರೆ ಕಾಯಿನನು ಅರ್ಪಿಸಿದ ವಸ್ತುವಿನ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಯಿರಲಿಲ್ಲ, ಏಕೆಂದರೆ ಯೆಹೋವನು “ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿ”ದನು ಮತ್ತು “ಕಾಯಿನನನ್ನೂ ಅವನ ಕಾಣಿಕೆಯನ್ನೂ ಮೆಚ್ಚಲಿಲ್ಲ” ಎಂದು ವೃತ್ತಾಂತವು ಹೇಳುತ್ತದೆ. ಆದುದರಿಂದ, ಮುಖ್ಯವಾಗಿ ಯೆಹೋವನು ತನ್ನ ಆರಾಧಕನ ಮನಸ್ಥಿತಿಯನ್ನು ಪರೀಕ್ಷಿಸಿದನು. ಹಾಗೆ ಮಾಡುವ ಮೂಲಕ ಆತನು ಏನನ್ನು ಕಂಡುಕೊಂಡನು? “ನಂಬಿಕೆಯಿಂದಲೇ” ಹೇಬೆಲನು ತನ್ನ ಯಜ್ಞವನ್ನು ಅರ್ಪಿಸಿದನು ಎಂದು ಇಬ್ರಿಯ 11:4 ಹೇಳುತ್ತದೆ. ಹೀಗೆ, ಹೇಬೆಲನ ಯಜ್ಞವನ್ನು ಸ್ವೀಕಾರಯೋಗ್ಯವಾಗಿ ಮಾಡಿದಂತಹ ಆ ನಂಬಿಕೆಯು ಕಾಯಿನನಲ್ಲಿರಲಿಲ್ಲ.
ಈ ವಿಷಯದ ಸಂಬಂಧದಲ್ಲಿ, ಹೇಬೆಲನ ಯಜ್ಞಾರ್ಪಣೆಯಲ್ಲಿ ರಕ್ತವನ್ನು ಸುರಿಸುವುದು ಒಳಗೊಂಡಿತ್ತೆಂಬುದು ಗಮನಾರ್ಹವಾದದ್ದಾಗಿದೆ. ಯಾರ ಹಿಮ್ಮಡಿಯು ಕಚ್ಚಲ್ಪಡುತ್ತದೋ ಆ ಸಂತತಿಯ ಕುರಿತಾದ ದೇವರ ವಾಗ್ದಾನವು, ಒಂದು ಜೀವವನ್ನು ಬಲಿಕೊಡುವಂತೆ ಅಗತ್ಯಪಡಿಸುತ್ತದೆ ಎಂದು ಅವನು ಸರಿಯಾಗಿಯೇ ತೀರ್ಮಾನಿಸಿದ್ದಿರಬಹುದು. ಹೀಗೆ, ಹೇಬೆಲನ ಯಜ್ಞವು ದೋಷಪರಿಹಾರಕ್ಕಾಗಿರುವ ಒಂದು ಬೇಡಿಕೆಯಾಗಿತ್ತು, ಮತ್ತು ತಕ್ಕ ಸಮಯದಲ್ಲಿ ದೇವರು ಪಾಪಗಳಿಗಾಗಿ ಒಂದು ಪ್ರಾಯಶ್ಚಿತ್ತ ಯಜ್ಞವನ್ನು ಒದಗಿಸುವನು ಎಂಬ ನಂಬಿಕೆಯನ್ನು ಅದು ವ್ಯಕ್ತಪಡಿಸಿತು.
ಇದಕ್ಕೆ ಪ್ರತಿಯಾಗಿ, ತಾನು ನೀಡುವ ಯಜ್ಞದ ಕುರಿತು ಕಾಯಿನನು ಹೆಚ್ಚು ಚಿಂತಿಸಿಲ್ಲದಿರಬಹುದು. 19ನೆಯ ಶತಮಾನದ ಬೈಬಲ್ ವ್ಯಾಖ್ಯಾನಕಾರನೊಬ್ಬನು ಹೇಳಿದ್ದು: “ಅವನ ಯಜ್ಞವು, ದೇವರು ಒಬ್ಬ ದಾತನು ಎಂಬುದನ್ನು ಮಾತ್ರ ಒಪ್ಪಿಕೊಂಡಿದ್ದಂತೆ ತೋರುತ್ತಿತ್ತು. . . . ಅವನು ತನ್ನ ಹಾಗೂ ತನ್ನ ಸೃಷ್ಟಿಕರ್ತನ ನಡುವಿನ ಸಂಬಂಧವು ಭಂಗಗೊಳ್ಳುತ್ತದೆ ಎಂಬುದನ್ನು ಗ್ರಹಿಸಲಿಲ್ಲ, ಪಾಪನಿವೇದನೆಯ ಅಗತ್ಯವಿದೆ ಅಥವಾ ದೋಷಪರಿಹಾರಕ್ಕಾಗಿ ಆತನನ್ನೇ ಅವಲಂಬಿಸಬೇಕು ಎಂಬುದನ್ನು ಅರಿತುಕೊಳ್ಳಲಿಲ್ಲ ಎಂದು ಅದು ಸ್ಪಷ್ಟಪಡಿಸುತ್ತದೆ.”
ಅಷ್ಟುಮಾತ್ರವಲ್ಲ, ತಾನು ಚೊಚ್ಚಲ ಮಗನಾಗಿರುವುದರಿಂದ, ಸರ್ಪನಾದ ಸೈತಾನನನ್ನು ನಾಶಪಡಿಸುವ ಸಂತತಿಯು ತಾನೇ ಆಗಿದ್ದೇನೆಂದು ಕಾಯಿನನು ಅತಿಯಾಗಿ ಕಲ್ಪಿಸಿಕೊಂಡಿದ್ದಿರಲೂಬಹುದು. ತನ್ನ ಚೊಚ್ಚಲ ಮಗನ ವಿಷಯದಲ್ಲಿ ಹವ್ವಳಿಗೆ ಸಹ ಮನಸ್ಸಿನಲ್ಲಿ ಇಂತಹದ್ದೇ ಹೆಬ್ಬಯಕೆ ಇದ್ದಿರಬಹುದು. (ಆದಿಕಾಂಡ 4:1) ಕಾಯಿನನು ಹಾಗೂ ಹವ್ವಳು ಇದನ್ನೇ ನಿರೀಕ್ಷಿಸುತ್ತಿದ್ದರಾದಲ್ಲಿ, ಅವರು ತುಂಬ ಅಪಾರ್ಥಮಾಡಿಕೊಂಡಿದ್ದರು ಎಂಬುದು ಖಂಡಿತ.
ಹೇಬೆಲನ ಯಜ್ಞವನ್ನು ತಾನು ಅಂಗೀಕರಿಸಿದ್ದೇನೆಂಬುದನ್ನು ಯೆಹೋವನು ಹೇಗೆ ಸೂಚಿಸಿದನು ಎಂಬುದನ್ನು ಬೈಬಲು ತಿಳಿಸುವುದಿಲ್ಲ. ಪರಲೋಕದಿಂದ ಬಂದ ಬೆಂಕಿಯು ಅದನ್ನು ದಹಿಸಿಬಿಟ್ಟಿತು ಎಂದು ಕೆಲವರು ಸೂಚಿಸುತ್ತಾರೆ. ಅದೇನೇ ಇರಲಿ, ತನ್ನ ಯಜ್ಞವು ತಿರಸ್ಕರಿಸಲ್ಪಟ್ಟಿತೆಂದು ಗೊತ್ತಾದ ಬಳಿಕ “ಕಾಯಿನನು ಬಹು ಕೋಪಗೊಂಡನು; ಅವನ ಮುಖವು ಕಳೆಗುಂದಿತು.” (ಆದಿಕಾಂಡ 4:5) ಕಾಯಿನನು ವಿನಾಶದ ಕಡೆಗೆ ಮುನ್ನುಗ್ಗುತ್ತಿದ್ದನು.
ಯೆಹೋವನ ಸಲಹೆ ಮತ್ತು ಕಾಯಿನನ ಪ್ರತಿಕ್ರಿಯೆ
ಯೆಹೋವನು ಕಾಯಿನನೊಂದಿಗೆ ತರ್ಕಿಸಿದನು. “ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು?” ಎಂದು ಆತನು ಕೇಳಿದನು. ತನ್ನ ಭಾವನೆಗಳನ್ನು ಹಾಗೂ ಉದ್ದೇಶಗಳನ್ನು ಪರೀಕ್ಷಿಸಿಕೊಳ್ಳಲು ಇದು ಕಾಯಿನನಿಗೆ ಸಾಕಷ್ಟು ಸಮಯವನ್ನು ಕೊಟ್ಟಿತು. ಇನ್ನೂ ಮುಂದುವರಿಸುತ್ತಾ ಯೆಹೋವನು ಕೇಳಿದ್ದು: “ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು.”—ಆದಿಕಾಂಡ 4:6, 7. (23ನೆಯ ಪುಟದಲ್ಲಿರುವ ರೇಖಾಚೌಕವನ್ನು ನೋಡಿರಿ.)
ಕಾಯಿನನು ಇದಕ್ಕೆ ಕಿವಿಗೊಡಲಿಲ್ಲ. ಬದಲಾಗಿ ಅವನು ಹೇಬೆಲನನ್ನು ಅಡವಿಗೆ ಕರೆದುಕೊಂಡು ಹೋಗಿ ಅಲ್ಲಿ ಅವನನ್ನು ಕೊಂದುಹಾಕಿದನು. ತದನಂತರ ಹೇಬೆಲನು ಎಲ್ಲಿ ಎಂದು ಯೆಹೋವನು ಕಾಯಿನನನ್ನು ಕೇಳಿದಾಗ, ಒಂದು ಸುಳ್ಳನ್ನು ಹೇಳುವ ಮೂಲಕ ಅವನು ತನ್ನ ಪಾಪದ ಹೊರೆಯನ್ನು ಇನ್ನೂ ಹೆಚ್ಚಿಸಿಕೊಂಡನು. “ನಾನರಿಯೆ; ನನ್ನ ತಮ್ಮನನ್ನು ಕಾಯುವವನು ನಾನೋ”? ಎಂದು ಅವನು ಕಟುವಾಗಿ ಉತ್ತರಿಸಿದನು.—ಆದಿಕಾಂಡ 4:8, 9.
ಹೇಬೆಲನ ಮರಣಕ್ಕೆ ಮುಂಚೆ ಹಾಗೂ ಬಳಿಕ ಕಾಯಿನನು “ಒಳ್ಳೇದನ್ನು ಮಾಡಲು” ನಿರಾಕರಿಸಿದನು. ಪಾಪವು ತನ್ನ ಮೇಲೆ ಅಧಿಕಾರ ಚಲಾಯಿಸುವಂತೆ ಬಿಟ್ಟುಕೊಟ್ಟನು, ಮತ್ತು ಈ ಕಾರಣದಿಂದಲೇ ಕಾಯಿನನು ಮಾನವ ಕುಟುಂಬವು ವಾಸಿಸುತ್ತಿದ್ದ ಸ್ಥಳದಿಂದ ಬಹಿಷ್ಕರಿಸಲ್ಪಟ್ಟನು. ಹೀಗೆ, ಕಾಯಿನನನ್ನು ಕೊಲ್ಲುವ ಮೂಲಕ ಯಾರೊಬ್ಬರೂ ಹೇಬೆಲನ ಮರಣಕ್ಕೆ ಪ್ರತಿಯಾಗಿ ಮುಯ್ಯಿತೀರಿಸದಂತೆ, ಒಂದು “ಗುರುತು,” ಬಹುಶಃ ಒಂದು ಕಟ್ಟುನಿಟ್ಟಾದ ಶಾಸನವು ಸ್ಥಾಪಿಸಲ್ಪಟ್ಟಿತು.—ಆದಿಕಾಂಡ 4:15.
ಆ ಬಳಿಕ ಕಾಯಿನನು ಒಂದು ಪಟ್ಟಣವನ್ನು ನಿರ್ಮಿಸಿ, ಅದಕ್ಕೆ ತನ್ನ ಮಗನ ಹೆಸರನ್ನೇ ಇಟ್ಟನು. ಅವನ ವಂಶಜರು ತಮ್ಮ ಹಿಂಸಾತ್ಮಕ ಕೃತ್ಯಗಳಿಗೆ ಪ್ರಸಿದ್ಧರಾದರು ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಕಾಲಕ್ರಮೇಣ, ನೋಹನ ದಿನದ ಜಲಪ್ರಳಯವು ಎಲ್ಲ ಅನೀತಿವಂತ ಮಾನವರನ್ನು ನಾಶಮಾಡಿದಾಗ, ಕಾಯಿನನ ವಂಶವು ಕೊನೆಗೊಂಡಿತು.—ಆದಿಕಾಂಡ 4:17-24; 7:21-24.
ಕಾಯಿನ ಮತ್ತು ಹೇಬೆಲರ ಕುರಿತಾದ ಬೈಬಲ್ ವೃತ್ತಾಂತವು, ಕೇವಲ ಬಿಡುವಿದ್ದಾಗ ಓದಿ ಮನೋರಂಜನೆ ಪಡೆಯಲಿಕ್ಕಾಗಿ ಸಂರಕ್ಷಿಸಿಡಲ್ಪಟ್ಟಿಲ್ಲ. ಬದಲಾಗಿ, ಇದು “ನಮ್ಮನ್ನು ಉಪದೇಶಿಸುವದಕ್ಕಾಗಿ ಬರೆಯಲ್ಪಟ್ಟಿತು” ಮತ್ತು ‘ಉಪದೇಶಕ್ಕೂ ತಿದ್ದುಪಾಟಿಗೂ ಉಪಯುಕ್ತವಾಗಿದೆ.’ (ರೋಮಾಪುರ 15:4; 2 ತಿಮೊಥೆಯ 3:16) ಈ ವೃತ್ತಾಂತದಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?
ನಮಗಾಗಿರುವ ಒಂದು ಪಾಠ
ಕಾಯಿನ ಮತ್ತು ಹೇಬೆಲರಂತೆ, ದೇವರಿಗೆ ಒಂದು ಯಜ್ಞವನ್ನು ಅರ್ಪಿಸುವಂತೆ ಇಂದು ಕ್ರೈಸ್ತರಿಗೆ ಕರೆಕೊಡಲ್ಪಟ್ಟಿದೆ. ಇದು ಒಂದು ಅಕ್ಷರಾರ್ಥ ಹೋಮ ಸಮರ್ಪಣೆಯಲ್ಲ, ಬದಲಾಗಿ “ಸ್ತುತಿಯ ಯಜ್ಞವನ್ನು, ಅಂದರೆ ಆತನ ಹೆಸರನ್ನು ಬಹಿರಂಗವಾಗಿ ಬಾಯಿಂದ ಅರಿಕೆಮಾಡುವುದೇ ನಾವು ಅರ್ಪಿಸುವ ಯಜ್ಞವಾಗಿದೆ.” (ಇಬ್ರಿಯ 13:15, NW) ಸದ್ಯದಲ್ಲಿ ಇದು ಲೋಕವ್ಯಾಪಕವಾಗಿ ನೆರವೇರಿಸಲ್ಪಡುತ್ತಿದೆ. ಅಂದರೆ 230ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಯೆಹೋವನ ಸಾಕ್ಷಿಗಳು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಇದ್ದಾರೆ. (ಮತ್ತಾಯ 24:14) ಈ ಕೆಲಸದಲ್ಲಿ ನೀವು ಸಹ ಭಾಗವಹಿಸುತ್ತಿದ್ದೀರೊ? ಹಾಗಾದರೆ “ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ” ಎಂಬ ವಿಷಯದಲ್ಲಿ ನೀವು ಖಾತ್ರಿಯಿಂದಿರಸಾಧ್ಯವಿದೆ.—ಇಬ್ರಿಯ 6:10.
ಕಾಯಿನ ಮತ್ತು ಹೇಬೆಲರ ಯಜ್ಞಾರ್ಪಣೆಯ ವಿಷಯದಲ್ಲಿ ಏನು ಸಂಭವಿಸಿತೋ ಅದು ನಮ್ಮ ವಿಷಯದಲ್ಲಿಯೂ ಸತ್ಯವಾಗಿದೆ. ಉದಾಹರಣೆಗಾಗಿ, ನಿಮ್ಮ ಯಜ್ಞದ ಹೊರತೋರಿಕೆಯಿಂದ, ಅಂದರೆ ನೀವು ಶುಶ್ರೂಷೆಯಲ್ಲಿ ಕಳೆಯುವ ತಾಸುಗಳ ಸಂಖ್ಯೆಯಿಂದ ನಿಮಗೆ ತೀರ್ಪುಮಾಡಲಾಗುವುದಿಲ್ಲ. ಯೆಹೋವನು ಇನ್ನೂ ಗಾಢವಾಗಿ ಅವಲೋಕಿಸುತ್ತಾನೆ. ಆತನು “ಹೃದಯವನ್ನು ಪರೀಕ್ಷಿಸುವವನು” ಮತ್ತು “ಅಂತರಿಂದ್ರಿಯವನ್ನು,” ಅಂದರೆ ಒಬ್ಬನ ಅಂತರಾಳದಲ್ಲಿರುವ ಆಲೋಚನೆಗಳು, ಭಾವನೆಗಳು, ಮತ್ತು ಒಬ್ಬನ ವ್ಯಕ್ತಿತ್ವದ ಪ್ರಚೋದನೆಗಳನ್ನು “ಶೋಧಿಸುವವನೂ” ಆಗಿದ್ದಾನೆ ಎಂದು ಯೆರೆಮೀಯ 17:10 ಹೇಳುತ್ತದೆ. ಆದುದರಿಂದ, ಶುಶ್ರೂಷೆಯ ತಾಸುಗಳ ಪ್ರಮಾಣವಲ್ಲ, ಬದಲಾಗಿ ಅದರಲ್ಲಿ ಅಡಕವಾಗಿರುವ ಉದ್ದೇಶವೇ ನಿಜವಾಗಿಯೂ ಪ್ರಾಮುಖ್ಯವಾದದ್ದಾಗಿದೆ. ನಮ್ಮ ಯಜ್ಞವು ದೊಡ್ಡದಿರಲಿ ಚಿಕ್ಕದಿರಲಿ, ಪ್ರೀತಿಯಿಂದ ಪ್ರಚೋದಿತವಾದ ಹೃದಯದಿಂದ ಅರ್ಪಿಸಲ್ಪಡುವಾಗ, ಆ ಯಜ್ಞವು ದೇವರ ದೃಷ್ಟಿಯಲ್ಲಿ ಅಮೂಲ್ಯವಾಗಿದೆ.—ಮಾರ್ಕ 12:41-44ನ್ನು 14:3-9ರೊಂದಿಗೆ ಹೋಲಿಸಿರಿ.
ಅದೇ ಸಮಯದಲ್ಲಿ, ಯೆಹೋವನು ಕಾಯಿನನು ಅರೆಮನಸ್ಸಿನಿಂದ ಸಮರ್ಪಿಸಿದ ಯಜ್ಞವನ್ನು ಹೇಗೆ ಸ್ವೀಕರಿಸಲಿಲ್ಲವೋ ಅದೇ ರೀತಿ ಊನವಾದ ಯಜ್ಞಗಳನ್ನೂ ಆತನು ಅಂಗೀಕರಿಸುವುದಿಲ್ಲ ಎಂಬುದು ನಮಗೆ ಗೊತ್ತಿರಬೇಕು. (ಮಲಾಕಿಯ 1:8, 13) ನಿಮ್ಮಿಂದಾದಷ್ಟು ಅತ್ಯುತ್ತಮವಾದುದನ್ನು ಕೊಡುವಂತೆ ಯೆಹೋವನು ಕೇಳಿಕೊಳ್ಳುತ್ತಾನೆ. ಅಂದರೆ ನಿಮ್ಮ ಪೂರ್ಣ ಹೃದಯ, ಪೂರ್ಣ ಪ್ರಾಣ, ಪೂರ್ಣ ಮನಸ್ಸು, ಮತ್ತು ಪೂರ್ಣ ಬಲದಿಂದ ತನ್ನನ್ನು ಆರಾಧಿಸುವಂತೆ ಬಯಸುತ್ತಾನೆ. (ಮಾರ್ಕ 12:30) ನೀವು ಹೀಗೆ ಮಾಡುತ್ತಿದ್ದೀರೊ? ಹಾಗಿರುವಲ್ಲಿ, ನಿಮ್ಮ ಯಜ್ಞವು ಸಂತೃಪ್ತಿಕರವಾಗಿದೆ ಎಂದು ಭಾವಿಸಲು ನಿಮಗೆ ಸಕಾರಣವಿದೆ. ಪೌಲನು ಬರೆದುದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ; ಆಗ ಅವನು ತನ್ನ ನಿಮಿತ್ತದಿಂದ ಹೆಚ್ಚಳಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬರ ನಿಮಿತ್ತದಿಂದಾಗುವದಿಲ್ಲ.”—ಗಲಾತ್ಯ 6:4.
ಕಾಯಿನ ಮತ್ತು ಹೇಬೆಲರನ್ನು ಒಂದೇ ರೀತಿ ಬೆಳೆಸಿ ದೊಡ್ಡವರನ್ನಾಗಿ ಮಾಡಲಾಗಿತ್ತು. ಆದರೆ ಕಾಲ ಹಾಗೂ ಸನ್ನಿವೇಶಗಳು ಅವರನ್ನು ಸ್ವತಃ ಬೇರೆ ಬೇರೆ ಗುಣಗಳನ್ನು ಬೆಳೆಸಿಕೊಳ್ಳುವಂತೆ ಮಾಡಿದವು. ಕಾಯಿನನ ಮನೋಭಾವವು, ಈರ್ಷ್ಯೆ, ಜಗಳ, ಮತ್ತು ಕೋಪೋದ್ರೇಕದ ಕಾರಣದಿಂದ ದಿನೇದಿನೇ ಹಾಳಾಗುತ್ತಾ ಹೋಯಿತು.
ಇದಕ್ಕೆ ವ್ಯತಿರಿಕ್ತವಾಗಿ, ಹೇಬೆಲನು ಒಬ್ಬ ನೀತಿವಂತ ಮನುಷ್ಯನೋಪಾದಿ ದೇವರಿಂದ ಜ್ಞಾಪಿಸಿಕೊಳ್ಳಲ್ಪಟ್ಟನು. (ಮತ್ತಾಯ 23:35) ಏನೇ ಆದರೂ ಸರಿ, ತಾನು ದೇವರನ್ನು ಮೆಚ್ಚಿಸಲೇಬೇಕೆಂಬ ಹೇಬೆಲನ ದೃಢನಿರ್ಧಾರವು, ಅವನ ಕುಟುಂಬದಲ್ಲಿ ಕೃತಘ್ನರಾಗಿದ್ದ ಆದಾಮ, ಹವ್ವ ಮತ್ತು ಕಾಯಿನರಿಗಿಂತ ಅವನನ್ನು ತುಂಬ ಭಿನ್ನವಾಗಿ ಮಾಡಿತು. ಹೇಬೆಲನು ಮೃತಪಟ್ಟರೂ, “ಅವನು ಇನ್ನೂ ಮಾತಾಡುತ್ತಾನೆ” ಎಂದು ಬೈಬಲ್ ನಮಗೆ ಹೇಳುತ್ತದೆ. ದೇವರಿಗೆ ಅವನು ಸಲ್ಲಿಸಿದ ನಂಬಿಗಸ್ತ ಸೇವೆಯು, ಬೈಬಲಿನಲ್ಲಿ ಒಳಗೂಡಿರುವ ಶಾಶ್ವತವಾದ ಐತಿಹಾಸಿಕ ದಾಖಲೆಯ ಒಂದು ಭಾಗವಾಗಿದೆ. ದೇವರಿಗೆ ಯಾವಾಗಲೂ ಸ್ವೀಕಾರಯೋಗ್ಯವಾಗಿರುವ ಯಜ್ಞಗಳನ್ನು ಅರ್ಪಿಸುವ ಮೂಲಕ, ನಾವು ಸಹ ಹೇಬೆಲನ ಮಾದರಿಯನ್ನು ಅನುಸರಿಸೋಣ.—ಇಬ್ರಿಯ 11:4.
[ಪಾದಟಿಪ್ಪಣಿ]
a ಏದೆನ್ ತೋಟವು, ಆಧುನಿಕ ದಿನದ ಟರ್ಕಿಯ ಪೂರ್ವ ಭಾಗದಲ್ಲಿರುವ ಪರ್ವತಮಯ ಪ್ರಾಂತದಲ್ಲಿತ್ತು ಎಂದು ಕೆಲವರು ಅಭಿಪ್ರಯಿಸುತ್ತಾರೆ.
[ಪುಟ 23 ರಲ್ಲಿರುವ ಚೌಕ/ಚಿತ್ರಗಳು]
ಕ್ರೈಸ್ತ ಸಲಹೆಗಾರರಿಗೆ ಒಂದು ಮಾದರಿ
“ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು?” ಈ ಪ್ರಶ್ನೆಯನ್ನು ಕೇಳುವ ಮೂಲಕ ಯೆಹೋವನು ಕಾಯಿನನೊಂದಿಗೆ ದಯಾಭಾವದಿಂದ ತರ್ಕಿಸಿದನು. ಕಾಯಿನನು ಬದಲಾಗುವಂತೆ ಆತನು ಅವನನ್ನು ಒತ್ತಾಯಿಸಲಿಲ್ಲ, ಏಕೆಂದರೆ ಕಾಯಿನನು ಸ್ವತಂತ್ರ ನೈತಿಕ ನಿಯೋಗಿಯಾಗಿದ್ದನು. (ಧರ್ಮೋಪದೇಶಕಾಂಡ 30:19ನ್ನು ಹೋಲಿಸಿರಿ.) ಆದರೂ, ಕಾಯಿನನ ಮೊಂಡುತನದ ಪರಿಣಾಮಗಳನ್ನು ಅವನಿಗೆ ತಿಳಿಯಪಡಿಸಲು ಯೆಹೋವನು ಹಿಂಜರಿಯಲಿಲ್ಲ. ಆತನು ಕಾಯಿನನಿಗೆ ಎಚ್ಚರಿಸಿದ್ದು: ಒಳ್ಳೇ ಕೆಲಸ ಮಾಡದಿದ್ದರೆ “ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು.”—ಆದಿಕಾಂಡ 4:6, 7.
ಈ ರೀತಿ ಖಡಾಖಂಡಿತವಾದ ತಿದ್ದುಪಾಟನ್ನು ಯೆಹೋವನು ನೀಡಿದನಾದರೂ, ಕಾಯಿನನು ದಾರಿತಪ್ಪಿಹೋದವನೋ ಎಂಬಂತೆ ದೇವರು ಅವನನ್ನು ಉಪಚರಿಸಲಿಲ್ಲ. ಬದಲಾಗಿ ಅವನು ತನ್ನ ಮಾರ್ಗಗಳನ್ನು ಬದಲಾಯಿಸುವುದಾದರೆ, ಅವನಿಗಾಗಿ ಇಡಲ್ಪಟ್ಟಿದ್ದ ಆಶೀರ್ವಾದಗಳ ಕುರಿತು ಆತನು ಕಾಯಿನನಿಗೆ ತಿಳಿಸಿದನು. ಮತ್ತು ಕಾಯಿನನು ತನ್ನ ಸಮಸ್ಯೆಯನ್ನು ಜಯಿಸಲು ಇಷ್ಟಪಡುವಲ್ಲಿ, ಅವನು ಜಯಿಸಸಾಧ್ಯವಿದೆ ಎಂಬ ಭರವಸೆಯನ್ನು ಸಹ ಆತನು ವ್ಯಕ್ತಪಡಿಸಿದನು. “ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ” ಎಂದು ಯೆಹೋವನು ಕೇಳಿದನು. ಕಾಯಿನನ ಕೊಲೆಪಾತಕ ಕೋಪೋದ್ರೇಕದ ಕುರಿತು ಆತನು ಅವನಿಗೆ ಹೇಳಿದ್ದು: “ನೀನು ಅದನ್ನು ವಶಮಾಡಿಕೊಳ್ಳಬೇಕು.”
ಇಂದು, ಕ್ರೈಸ್ತ ಸಭೆಯಲ್ಲಿರುವ ಹಿರಿಯರು ಯೆಹೋವನ ಮಾದರಿಯನ್ನು ಅನುಸರಿಸಬೇಕು. 2 ತಿಮೊಥೆಯ 4:2ರಲ್ಲಿ ತಿಳಿಸಲ್ಪಟ್ಟಿರುವಂತೆ, ತಪ್ಪಿತಸ್ಥನ ಕೆಟ್ಟ ವರ್ತನೆಯ ಪರಿಣಾಮಗಳನ್ನು ನೇರವಾಗಿ ವಿವರಿಸುತ್ತಾ, ಕೆಲವೊಮ್ಮೆ ಅವರು “ಗದರಿಸ”ಬೇಕು ಮತ್ತು “ಖಂಡಿಸ”ಬೇಕು. ಅದೇ ಸಮಯದಲ್ಲಿ ಹಿರಿಯರು “ಎಚ್ಚರಿಸ”ಬೇಕು. ಪಾರಾಕಾಲೀಯೋ ಎಂಬ ಗ್ರೀಕ್ ಶಬ್ದದ ಅರ್ಥ “ಉತ್ತೇಜಿಸು” ಎಂದಾಗಿದೆ. “ಬುದ್ಧಿವಾದವು ಚುಚ್ಚುನುಡಿಯಿಂದ ಕೂಡಿರುವುದಿಲ್ಲ, ವಿವಾದಾತ್ಮಕವಾಗಿರುವುದಿಲ್ಲ, ಅಥವಾ ಟೀಕಾತ್ಮಕವಾಗಿರುವುದಿಲ್ಲ” ಎಂದು ಥಿಯೊಲಾಜಿಕಲ್ ಡಿಕ್ಷನೆರಿ ಆಫ್ ದ ನ್ಯೂ ಟೆಸ್ಟಮೆಂಟ್ ತಿಳಿಸುತ್ತದೆ. “ಸಾಂತ್ವನ ಎಂಬ ಇನ್ನೊಂದು ಅರ್ಥವೂ ಆ ಗ್ರೀಕ್ ಶಬ್ದಕ್ಕಿರಸಾಧ್ಯವಿದೆ ಎಂಬ ವಾಸ್ತವಾಂಶವು, ಇದೇ ಅಂಶವನ್ನು ಸೂಚಿಸುತ್ತದೆ.”
ಅರ್ಥಗರ್ಭಿತವಾಗಿಯೇ, ಪಾರಾಕ್ಲಿಟೋಸ್ ಎಂಬ ಇನ್ನೊಂದು ಗ್ರೀಕ್ ಶಬ್ದವು, ಕಾನೂನಿನ ವಿಷಯಗಳಲ್ಲಿ ಒಬ್ಬ ಸಹಾಯಕ ಅಥವಾ ಒಬ್ಬ ವಕೀಲನಿಗೆ ಸೂಚಿತವಾಗಿರಸಾಧ್ಯವಿದೆ. ಆದುದರಿಂದ, ಹಿರಿಯರು ನೇರವಾದ ತಿದ್ದುಪಾಟನ್ನು ಕೊಡುವಾಗ, ಯಾವ ವ್ಯಕ್ತಿಗೆ ಸಲಹೆಯ ಅಗತ್ಯವಿದೆಯೋ ಆ ವ್ಯಕ್ತಿಗೆ ತಾವು ವೈರಿಗಳಲ್ಲ, ಬದಲಾಗಿ ಸಹಾಯಕರಾಗಿದ್ದೇವೆ ಎಂಬುದನ್ನು ಅವರು ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ಯೆಹೋವನಂತೆ, ಹಿರಿಯರು ಸಹ ಸಕಾರಾತ್ಮಕರಾಗಿರಬೇಕು; ಯಾರಿಗೆ ಸಲಹೆಯು ಕೊಡಲ್ಪಡುತ್ತಿದೆಯೋ ಅವನು ಆ ಸಮಸ್ಯೆಯನ್ನು ಜಯಿಸಲು ಸಾಧ್ಯವಿದೆ ಎಂಬ ಭರವಸೆಯನ್ನು ತೋರಿಸಬೇಕು.—ಹೋಲಿಸಿರಿ ಗಲಾತ್ಯ 6:1.
ಕೊನೆಯದಾಗಿ, ಕೊಡಲ್ಪಟ್ಟ ಬುದ್ಧಿವಾದವನ್ನು ಅನ್ವಯಿಸುವುದು ಅಥವಾ ಬಿಡುವುದು ವ್ಯಕ್ತಿಯೊಬ್ಬನ ಆಯ್ಕೆಯಾಗಿದೆ ಎಂಬುದು ಖಂಡಿತ. (ಗಲಾತ್ಯ 6:5; ಫಿಲಿಪ್ಪಿ 2:12) ಕಾಯಿನನು ಸ್ವತಃ ಸೃಷ್ಟಿಕರ್ತನಿಂದ ಕೊಡಲ್ಪಟ್ಟ ತಿದ್ದುಪಾಟನ್ನು ಅಲಕ್ಷಿಸಿದಂತೆಯೇ, ಕೆಲವರು ನೀಡಲ್ಪಟ್ಟ ಎಚ್ಚರಿಕೆಗಳಿಗೆ ಕಿವಿಗೊಡುವುದಿಲ್ಲ ಎಂದು ಸಲಹೆಗಾರರು ಕಂಡುಕೊಳ್ಳಬಹುದು. ಆದರೂ, ಕ್ರೈಸ್ತ ಸಲಹೆಗಾರರಿಗೆ ಪರಿಪೂರ್ಣ ಮಾದರಿಯಾಗಿರುವ ಯೆಹೋವನನ್ನು ಹಿರಿಯರು ಅನುಕರಿಸುವಾಗ, ನಾವು ಏನು ಮಾಡಬೇಕಾಗಿದೆಯೋ ಅದನ್ನು ಮಾಡಿಮುಗಿಸಿದ್ದೇವೆ ಎಂಬ ಆತ್ಮವಿಶ್ವಾಸವು ಅವರಿಗಿರಸಾಧ್ಯವಿದೆ.