ಭಿನ್ನ ಮನೋಭಾವಗಳನ್ನು ಬೆಳೆಸಿಕೊಂಡಂಥ ಸಹೋದರರು
ಹೆತ್ತವರಿಂದ ಮಾಡಲ್ಪಟ್ಟ ನಿರ್ಣಯಗಳು ಅವರ ಮಕ್ಕಳ ಮೇಲೆ ಪರಿಣಾಮ ಬೀರುವುದು ಅನಿವಾರ್ಯ. ಹಿಂದೆ ಏದೆನ್ ತೋಟದಲ್ಲಿ ಅದು ಎಷ್ಟು ಸತ್ಯವಾಗಿತ್ತೋ ಇಂದು ಕೂಡ ಅಷ್ಟೇ ಸತ್ಯವಾಗಿದೆ. ಆದಾಮಹವ್ವರ ದಂಗೆಕೋರ ಮಾರ್ಗವು ಸರ್ವ ಮಾನವಕುಲದ ಮೇಲೆ ಗಾಢವಾದ ಪರಿಣಾಮವನ್ನು ಬೀರಿತು. (ಆದಿಕಾಂಡ 2:15, 16; 3:1-6; ರೋಮಾಪುರ 5:12) ಆದರೂ, ಒಂದುವೇಳೆ ನಮ್ಮಲ್ಲಿ ಪ್ರತಿಯೊಬ್ಬರೂ ನಮ್ಮ ಸೃಷ್ಟಿಕರ್ತನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಬೆಳೆಸಿಕೊಳ್ಳಲು ಬಯಸುವಲ್ಲಿ, ಆ ಸದವಕಾಶವು ನಮಗೆ ಲಭ್ಯವಿದೆ. ಮಾನವ ಇತಿಹಾಸದಲ್ಲೇ ಮೊದಲ ಸಹೋದರರಾಗಿದ್ದ ಕಾಯಿನ ಹಾಗೂ ಹೇಬೆಲರ ವೃತ್ತಾಂತದಿಂದ ಇದು ದೃಷ್ಟಾಂತಿಸಲ್ಪಟ್ಟಿದೆ.
ಆದಾಮಹವ್ವರು ಏದೆನಿನಿಂದ ಹೊರಹಾಕಲ್ಪಟ್ಟ ಬಳಿಕ ದೇವರು ಅವರೊಂದಿಗೆ ಮಾತಾಡಿದ್ದರ ಕುರಿತು ಯಾವುದೇ ಶಾಸ್ತ್ರೀಯ ದಾಖಲೆಯಿಲ್ಲ. ಆದರೂ, ಅವರ ಪುತ್ರರೊಂದಿಗೆ ಮಾತಾಡುವುದರಿಂದ ಯೆಹೋವನು ತನ್ನನ್ನು ತಡೆಹಿಡಿಯಲಿಲ್ಲ. ಈ ಮುಂಚೆ ಏನು ಸಂಭವಿಸಿತ್ತು ಎಂಬುದನ್ನು ಕಾಯಿನ ಹೇಬೆಲರು ತಮ್ಮ ಹೆತ್ತವರಿಂದ ತಿಳಿದುಕೊಂಡಿದ್ದರು ಎಂಬುದರಲ್ಲಿ ಸಂದೇಹವಿಲ್ಲ. ಅವರು “ಜೀವವೃಕ್ಷಕ್ಕೆ ಹೋಗುವ ದಾರಿಯನ್ನು ಕಾಯುವದಕ್ಕೆ [ಯೆಹೋವನು] ಏದೆನ್ ವನದ ಪೂರ್ವದಿಕ್ಕಿನಲ್ಲಿ ಕೆರೂಬಿಯರನ್ನೂ ಧಗಧಗನೆ ಪ್ರಜ್ವಲಿಸುತ್ತಾ ಸುತ್ತುವ ಕತ್ತಿಯನ್ನೂ” ಇಟ್ಟಿರುವುದನ್ನು ನೋಡಸಾಧ್ಯವಿತ್ತು. (ಆದಿಕಾಂಡ 3:24) ಬೆವರು ಮತ್ತು ದುಡಿಮೆಯು ಜೀವನದ ವಾಸ್ತವಿಕತೆಯಾಗುವುದು ಎಂಬ ದೇವರ ಘೋಷಣೆಯ ಸತ್ಯತೆಯನ್ನು ಇವರು ಕಣ್ಣಾರೆ ಕಂಡರು.—ಆದಿಕಾಂಡ 3:16, 19.
“ನಿನಗೂ ಈ ಸ್ತ್ರೀಗೂ, ನಿನ್ನ ಸಂತಾನಕ್ಕೂ ಈ ಸ್ತ್ರೀಯ ಸಂತಾನಕ್ಕೂ ಹಗೆತನವಿರುವ ಹಾಗೆ ಮಾಡುವೆನು. ಈಕೆಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು, ನೀನು ಅದರ ಹಿಮ್ಮಡಿಯನ್ನು ಕಚ್ಚುವಿ,” ಎಂದು ಸರ್ಪಕ್ಕೆ ಯೆಹೋವನು ನುಡಿದ ಮಾತುಗಳು ಕಾಯಿನ ಹೇಬೆಲರಿಗೂ ಗೊತ್ತಿದ್ದಿರಬೇಕು. (ಆದಿಕಾಂಡ 3:15) ಯೆಹೋವನ ಕುರಿತು ಕಾಯಿನ ಹೇಬೆಲರಿಗೆ ಏನು ತಿಳಿದಿತ್ತೋ ಅದು, ಆತನೊಂದಿಗೆ ಒಂದು ಅಂಗೀಕೃತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ಅವರನ್ನು ಶಕ್ತರನ್ನಾಗಿ ಮಾಡಲಿತ್ತು.
ಯೆಹೋವನ ಪ್ರವಾದನೆ ಮತ್ತು ಒಬ್ಬ ಪ್ರೀತಿಯ ದಾತನೋಪಾದಿ ಆತನಿಗಿರುವ ಗುಣಗಳ ಕುರಿತು ಧ್ಯಾನಿಸುವುದು, ಕಾಯಿನ ಹೇಬೆಲರಲ್ಲಿ ದೇವರ ಅನುಗ್ರಹವನ್ನು ಪಡೆದುಕೊಳ್ಳುವ ಬಯಕೆಯನ್ನು ಉಂಟುಮಾಡಿದ್ದಿರಬೇಕು. ಆದರೆ ಎಷ್ಟರ ಮಟ್ಟಿಗೆ ಅವರು ಆ ಬಯಕೆಯನ್ನು ಬೆಳೆಸಿಕೊಳ್ಳಲಿದ್ದರು? ದೇವರನ್ನು ಆರಾಧಿಸಲಿಕ್ಕಾಗಿರುವ ತಮ್ಮ ಜನ್ಮಸಿದ್ಧ ಬಯಕೆಗೆ ಪ್ರತಿಕ್ರಿಯಿಸುತ್ತಾ, ಆತನಲ್ಲಿ ನಂಬಿಕೆಯನ್ನಿಡುವ ಹಂತದ ವರೆಗೆ ಅವರು ತಮ್ಮ ಆತ್ಮಿಕತೆಯನ್ನು ಬೆಳೆಸಿಕೊಳ್ಳಲಿದ್ದರೋ?—ಮತ್ತಾಯ 5:3.
ಸಹೋದರರು ಅರ್ಪಣೆಗಳನ್ನು ತರುತ್ತಾರೆ
ಸಮಯಾನಂತರ, ಕಾಯಿನ ಹೇಬೆಲರು ದೇವರಿಗೆ ಅರ್ಪಣೆಗಳನ್ನು ತಂದರು. ಕಾಯಿನನು ಹೊಲದ ಬೆಳೆಯನ್ನು ಅರ್ಪಿಸಿದನು, ಮತ್ತು ಹೇಬೆಲನು ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನು ಅರ್ಪಿಸಿದನು. (ಆದಿಕಾಂಡ 4:3, 4) ಇವರಿಬ್ಬರೂ ಆಗ ಸುಮಾರು 100 ವರ್ಷ ಪ್ರಾಯದವರಾಗಿದ್ದಿರಬಹುದು, ಏಕೆಂದರೆ ತನ್ನ ಮಗನಾದ ಸೇತನಿಗೆ ತಂದೆಯಾದಾಗ ಆದಾಮನು 130 ವರ್ಷದವನಾಗಿದ್ದನು.—ಆದಿಕಾಂಡ 4:25; 5:3.
ಕಾಯಿನ ಹೇಬೆಲರ ಅರ್ಪಣೆಗಳು, ಅವರು ತಮ್ಮ ಪಾಪಭರಿತ ಸ್ಥಿತಿಯನ್ನು ಮನಗಂಡರು ಮತ್ತು ದೇವರ ಅನುಗ್ರಹವನ್ನು ಪಡೆದುಕೊಳ್ಳಲು ಬಯಸಿದರು ಎಂಬುದನ್ನು ಸೂಚಿಸಿದವು. ಸರ್ಪದ ಕುರಿತು ಹಾಗೂ ಸ್ತ್ರೀಯ ಸಂತಾನದ ಕುರಿತಾದ ಯೆಹೋವನ ವಾಗ್ದಾನದ ಬಗ್ಗೆ ಅವರು ಖಂಡಿತವಾಗಿಯೂ ಯೋಚಿಸಿದ್ದಿರಬೇಕು. ಯೆಹೋವನೊಂದಿಗೆ ಅಂಗೀಕೃತ ಸಂಬಂಧವನ್ನು ಬೆಳೆಸಿಕೊಳ್ಳಲಿಕ್ಕಾಗಿ ಕಾಯಿನ ಹೇಬೆಲರು ಎಷ್ಟು ಸಮಯ ಹಾಗೂ ಪ್ರಯತ್ನವನ್ನು ವಿನಿಯೋಗಿಸಿದ್ದರು ಎಂಬುದು ತಿಳಿಸಲ್ಪಟ್ಟಿಲ್ಲ. ಆದರೆ ಅವರ ಅರ್ಪಣೆಗಳಿಗೆ ದೇವರು ತೋರಿಸಿದ ಪ್ರತಿಕ್ರಿಯೆಯು, ಅವರಲ್ಲಿ ಪ್ರತಿಯೊಬ್ಬನ ಆಂತರಿಕ ಆಲೋಚನೆಗಳ ಒಳನೋಟವನ್ನು ಒದಗಿಸುತ್ತದೆ.
ಸರ್ಪವನ್ನು ನಾಶಮಾಡಲಿರುವ ‘ಸಂತಾನವು’ ಕಾಯಿನನೇ ಆಗಿದ್ದಾನೆ ಎಂದು ಹವ್ವಳು ನೆನಸಿದಳೆಂದು ಕೆಲವು ವಿದ್ವಾಂಸರು ಸೂಚಿಸುತ್ತಾರೆ. ಏಕೆಂದರೆ ಕಾಯಿನನ ಜನನದ ಸಮಯದಲ್ಲಿ ಅವಳು ಹೇಳಿದ್ದು: “ಯೆಹೋವನ ಅನುಗ್ರಹದಿಂದ ಗಂಡುಮಗುವನ್ನು ಪಡೆದಿದ್ದೇನೆ.” (ಆದಿಕಾಂಡ 4:1) ಕಾಯಿನನಿಗೂ ಇದೇ ನಂಬಿಕೆಯಿತ್ತಾದರೆ, ಅವನ ಎಣಿಕೆ ಸಂಪೂರ್ಣವಾಗಿ ತಪ್ಪಾಗಿತ್ತು. ಇನ್ನೊಂದು ಕಡೆಯಲ್ಲಿ, ಹೇಬೆಲನ ಯಜ್ಞವು ನಂಬಿಕೆಯೊಂದಿಗೆ ಅರ್ಪಿಸಲ್ಪಟ್ಟಿತ್ತು. ಹೀಗೆ, “ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮರ್ಪಿಸಿದನು.”—ಇಬ್ರಿಯ 11:4.
ಹೇಬೆಲನಲ್ಲಿ ಆತ್ಮಿಕ ಒಳನೋಟವಿದ್ದದ್ದು ಹಾಗೂ ಕಾಯಿನನಲ್ಲಿ ಅದು ಇಲ್ಲದಿದ್ದದ್ದು, ಈ ಸಹೋದರರ ನಡುವೆ ಇದ್ದ ಏಕಮಾತ್ರ ಭಿನ್ನತೆಯಾಗಿರಲಿಲ್ಲ. ಅವರ ಮನೋಭಾವಗಳಲ್ಲಿಯೂ ಭಿನ್ನತೆಯಿತ್ತು. ಆದುದರಿಂದ, “ಯೆಹೋವನು ಹೇಬೆಲನನ್ನೂ ಅವನ ಕಾಣಿಕೆಯನ್ನೂ [“ಅರ್ಪಣೆಯನ್ನೂ,” NW] ಮೆಚ್ಚಿ ಕಾಯಿನನನ್ನೂ ಅವನ ಕಾಣಿಕೆಯನ್ನೂ [“ಅರ್ಪಣೆಯನ್ನೂ,” NW] ಮೆಚ್ಚಲಿಲ್ಲ.” ಕಾಯಿನನು ತನ್ನ ಅರ್ಪಣೆಯ ವಿಷಯದಲ್ಲಿ ಹೆಚ್ಚು ಗಹನವಾಗಿ ಆಲೋಚಿಸದೆ, ಯಾಂತ್ರಿಕವಾಗಿ ಅದನ್ನು ಅರ್ಪಿಸಿದ್ದರಿಂದಲೇ ಹೀಗಾಗಿದ್ದಿರಬಹುದು. ಆದರೆ ದೇವರು, ಆ ಕೇವಲ ಔಪಚಾರಿಕ ಆರಾಧನೆಯನ್ನು ಮೆಚ್ಚದೆ ಹೋದನು. ಕಾಯಿನನು ಕೆಟ್ಟ ಹೃದಯವನ್ನು ಬೆಳೆಸಿಕೊಂಡಿದ್ದನು, ಮತ್ತು ಅವನಲ್ಲಿ ತಪ್ಪು ಹೇತುಗಳಿವೆ ಎಂಬುದು ಯೆಹೋವನಿಗೆ ತಿಳಿದುಬಂತು. ಕಾಯಿನನ ಯಜ್ಞವನ್ನು ದೇವರು ಮೆಚ್ಚದಿರುವಾಗ ಅವನು ತೋರಿಸಿದ ಪ್ರತಿಕ್ರಿಯೆಯು, ಅವನ ನಿಜ ಮನೋಭಾವವನ್ನು ಪ್ರತಿಬಿಂಬಿಸಿತು. ತನ್ನ ಮನೋಭಾವವನ್ನೂ ಹೇತುಗಳನ್ನೂ ಸರಿಪಡಿಸಿಕೊಳ್ಳುವುದಕ್ಕೆ ಬದಲಾಗಿ, “ಕಾಯಿನನು ಬಹು ಕೋಪಗೊಂಡನು; ಅವನ ಮುಖವು ಕಳೆಗುಂದಿತು.” (ಆದಿಕಾಂಡ 4:5) ಅವನ ವರ್ತನಾ ರೀತಿಯು, ಅವನ ದುಷ್ಟ ವಿಚಾರಗಳನ್ನೂ ಇಂಗಿತಗಳನ್ನೂ ಬಯಲುಪಡಿಸಿತು.
ಎಚ್ಚರಿಕೆ ಮತ್ತು ಪ್ರತಿಕ್ರಿಯೆ
ಕಾಯಿನನ ಮನೋಭಾವವನ್ನು ತಿಳಿದವನಾದ ದೇವರು ಅವನಿಗೆ ಹೀಗೆ ಸಲಹೆ ನೀಡಿದನು: “ಯಾಕೆ ಕೋಪಿಸಿಕೊಂಡಿ? ನಿನ್ನ ತಲೆ ಯಾಕೆ ಬೊಗ್ಗಿತು? ಒಳ್ಳೇ ಕೆಲಸ ಮಾಡಿದರೆ ನಿನ್ನ ತಲೆ ಎತ್ತಲ್ಪಡುವದಲ್ಲವೇ; ಅಲ್ಲದಿದ್ದರೆ ಪಾಪವು ನಿನ್ನನ್ನು ಹಿಡಿಯಬೇಕೆಂದು ಬಾಗಲಲ್ಲಿ ಹೊಂಚಿಕೊಂಡಿರುವದು; ಆದರೂ ನೀನು ಅದನ್ನು ವಶಮಾಡಿಕೊಳ್ಳಬೇಕು.”—ಆದಿಕಾಂಡ 4:6, 7.
ಇದರಿಂದ ನಾವು ಒಂದು ಪಾಠವನ್ನು ಕಲಿಯಸಾಧ್ಯವಿದೆ. ವಾಸ್ತವದಲ್ಲಿ, ನಮ್ಮನ್ನು ಕಬಳಿಸಲಿಕ್ಕಾಗಿ ಪಾಪವು ಬಾಗಲಲ್ಲೇ ಹೊಂಚಿಕೊಂಡಿದೆ. ಆದರೂ, ದೇವರು ನಮಗೆ ಇಚ್ಛಾ ಸ್ವಾತಂತ್ರ್ಯವನ್ನು ಕೊಟ್ಟಿದ್ದಾನೆ, ಮತ್ತು ಯಾವುದು ಸರಿಯಾಗಿದೆಯೋ ಅದನ್ನು ಮಾಡುವ ಆಯ್ಕೆಯನ್ನು ನಾವು ಮಾಡಸಾಧ್ಯವಿದೆ. ‘ಒಳ್ಳೇ ಕೆಲಸ ಮಾಡುವಂತೆ’ ಯೆಹೋವನು ಕಾಯಿನನಿಗೆ ಕರೆಕೊಟ್ಟನು, ಆದರೆ ಅವನು ಬದಲಾಗುವಂತೆ ಆತನು ಅವನನ್ನು ಬಲವಂತಪಡಿಸಲಿಲ್ಲ. ಕಾಯಿನನು ತನ್ನದೇ ಆದ ಮಾರ್ಗವನ್ನು ಆರಿಸಿಕೊಂಡನು.
ಪ್ರೇರಿತ ವೃತ್ತಾಂತವು ಹೀಗೆ ಮುಂದುವರಿಯುತ್ತದೆ: “ತರುವಾಯ ಕಾಯಿನನು ತನ್ನ ತಮ್ಮನಾದ ಹೇಬೆಲನಿಗೆ—ಅಡವಿಗೆ ಹೋಗೋಣ ಬಾ ಎಂದನು. ಅಡವಿಗೆ ಬಂದಾಗ ಕಾಯಿನನು ತನ್ನ ತಮ್ಮನ ಮೇಲೆ ಬಿದ್ದು ಅವನನ್ನು ಕೊಂದನು.” (ಆದಿಕಾಂಡ 4:8) ಹೀಗೆ ಕಾಯಿನನು ಒಬ್ಬ ಅವಿಧೇಯ, ದಯದಾಕ್ಷಿಣ್ಯವಿಲ್ಲದ ಕೊಲೆಗಾರನಾಗಿ ಪರಿಣಮಿಸಿದನು. “ನಿನ್ನ ತಮ್ಮನಾದ ಹೇಬೆಲನು ಎಲ್ಲಿ” ಎಂದು ಯೆಹೋವನು ಕಾಯಿನನನ್ನು ಕೇಳಿದಾಗ, ಅವನು ಸ್ವಲ್ಪವೂ ಪಶ್ಚಾತ್ತಾಪವನ್ನು ತೋರಿಸಲಿಲ್ಲವೆಂಬುದು, ಅವನ ನಿರ್ದಯ ಹಾಗೂ ಒರಟಾದ ಉತ್ತರದಿಂದ ಕಂಡುಬರುತ್ತದೆ. ಅವನು ಕೇಳಿದ್ದು: “ನಾನರಿಯೆ; ನನ್ನ ತಮ್ಮನನ್ನು ಕಾಯುವವನು ನಾನೋ”? (ಆದಿಕಾಂಡ 4:9) ಆ ನೇರವಾದ ಸುಳ್ಳು ಹಾಗೂ ಜವಾಬ್ದಾರಿಯ ನಿರಾಕರಣೆಯು, ಕಾಯಿನನ ನಿರ್ದಯತೆಯನ್ನು ಬಯಲುಪಡಿಸಿತು.
ಯೆಹೋವನು ಕಾಯಿನನಿಗೆ ಶಾಪ ನೀಡಿದನು ಮತ್ತು ಏದೆನ್ನ ಸುತ್ತುಮುತ್ತಲಿನ ಪರಿಸರದಿಂದ ಗಡೀಪಾರುಮಾಡಿದನು. ಈಗಾಗಲೇ ಭೂಮಿಗೆ ಶಾಪವು ನೀಡಲ್ಪಟ್ಟಿದ್ದು, ಕಾಯಿನನ ವಿದ್ಯಮಾನದಲ್ಲಿ ಅದು ಇನ್ನೂ ಹೆಚ್ಚು ಶಾಪಕ್ಕೊಳಗಾಗಲಿದ್ದು, ಅವನು ಭೂಮಿಯನ್ನು ವ್ಯವಸಾಯಮಾಡಿದರೂ ಅದು ಇನ್ನು ಮುಂದೆ ಅವನಿಗೆ ಫಲವನ್ನು ನೀಡಸಾಧ್ಯವಿರಲಿಲ್ಲ. ಅವನು ಭೂಲೋಕದಲ್ಲಿ ಅಲೆಯುವವನೂ ದೇಶಭ್ರಷ್ಟನೂ ಆಗಿರಲಿದ್ದನು. ತನಗೆ ವಿಧಿಸಲ್ಪಟ್ಟ ಶಿಕ್ಷೆಯ ತೀವ್ರತೆಯ ಬಗ್ಗೆ ಕಾಯಿನನು ಆಪಾದಿಸಿದ್ದು, ತನ್ನ ತಮ್ಮನ ಕೊಲೆಯ ಸೇಡು ತೀರಿಸಿಕೊಳ್ಳಲಿಕ್ಕಾಗಿ ಯಾರಾದರೂ ತನ್ನನ್ನು ಕೊಲ್ಲಬಹುದು ಎಂಬ ಚಿಂತೆಯನ್ನು ವ್ಯಕ್ತಪಡಿಸಿತಷ್ಟೇ; ಆದರೆ ಅವನು ನಿಜವಾದ ಪಶ್ಚಾತ್ತಾಪವನ್ನು ಮಾತ್ರ ತೋರಿಸಲೇ ಇಲ್ಲ. ಯೆಹೋವನು ಕಾಯಿನನ ಮೇಲೆ “ಒಂದು ಗುರುತಿಟ್ಟನು”—ಬಹುಶಃ ಇತರರಿಗೆ ತಿಳಿದಿದ್ದ ಹಾಗೂ ಇತರರು ತಪ್ಪದೆ ಪಾಲಿಸಿದಂಥ ಆಜ್ಞೆ ಇದಾಗಿದ್ದು, ಅವನು ಸೇಡಿನಿಂದ ಕೊಲ್ಲಲ್ಪಡದಂತೆ ತಡೆಯುವ ಉದ್ದೇಶದಿಂದ ಹೀಗೆ ಮಾಡಿದ್ದಿರಬಹುದು.—ಆದಿಕಾಂಡ 4:10-15.
ತದನಂತರ ಕಾಯಿನನು “ಯೆಹೋವನ ಸನ್ನಿಧಾನದಿಂದ ಹೊರಟು ನೋದು ಎಂಬ ದೇಶದಲ್ಲಿ ವಾಸಿಸಿದನು; ಅದು ಏದೆನ್ ಸೀಮೆಗೆ ಮೂಡಲಲ್ಲಿರುವದು.” (ಆದಿಕಾಂಡ 4:16) ತನ್ನ ಸಹೋದರಿಯರು ಅಥವಾ ಅವರ ಹೆಣ್ಣುಮಕ್ಕಳಿಂದ ಒಬ್ಬ ಹೆಂಡತಿಯನ್ನು ಪಡೆದ ಕಾಯಿನನು, ಒಂದು ಊರನ್ನು ಕಟ್ಟಿ, ಅದಕ್ಕೆ ತನ್ನ ಚೊಚ್ಚಲುಮಗನಾದ ಹನೋಕನ ಹೆಸರಿಟ್ಟನು. ಕಾಯಿನನ ವಂಶಜನಾದ ಲೆಮೆಕನು, ತನ್ನ ಪೂರ್ವಜನಂತೆಯೇ ಹಿಂಸಾತ್ಮಕ ಪ್ರವೃತ್ತಿಯುಳ್ಳವನಾಗಿ ಪರಿಣಮಿಸಿದನು. ಆದರೆ, ನೋಹನ ದಿನದ ಪ್ರಳಯದ ಸಮಯದಲ್ಲಿ ಕಾಯಿನನ ವಂಶವು ಸಂಪೂರ್ಣವಾಗಿ ನಿರ್ನಾಮವಾಯಿತು.—ಆದಿಕಾಂಡ 4:17-24.
ನಮಗಿರುವ ಪಾಠ
ಕಾಯಿನ ಹೇಬೆಲರ ವೃತ್ತಾಂತಗಳಿಂದ ನಾವು ಪಾಠವನ್ನು ಕಲಿಯಸಾಧ್ಯವಿದೆ. “ಕೆಡುಕನಿಂದ ಹುಟ್ಟಿ ತನ್ನ ತಮ್ಮನನ್ನು ಕೊಂದು ಹಾಕಿದ ಕಾಯಿನನಂತೆ ನಾವು ಇರಬಾರದು,” ಬದಲಾಗಿ ಕ್ರೈಸ್ತರು ಪರಸ್ಪರ ಪ್ರೀತಿಸಬೇಕು ಎಂದು ಅಪೊಸ್ತಲ ಪೌಲನು ಅವರಿಗೆ ಬುದ್ಧಿಹೇಳುತ್ತಾನೆ. ಕಾಯಿನನ ‘ಕೃತ್ಯಗಳು ಕೆಟ್ಟವುಗಳೂ ಅವನ ತಮ್ಮನ ಕೃತ್ಯಗಳು ನೀತಿಗೆ ಸರಿಯಾದವುಗಳೂ ಆಗಿದ್ದವು.’ ಯೋಹಾನನು ಮತ್ತೂ ಹೇಳುವುದು: “ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನಾಗಿದ್ದಾನೆ, ಮತ್ತು ಯಾವ ಕೊಲೆಗಾರನಲ್ಲಿಯೂ ನಿತ್ಯಜೀವವು ಇರುವದಿಲ್ಲ.” ನಾವು ನಮ್ಮ ಜೊತೆ ಕ್ರೈಸ್ತರನ್ನು ಉಪಚರಿಸುವ ವಿಧವು, ದೇವರೊಂದಿಗಿನ ನಮ್ಮ ಸಂಬಂಧದ ಮೇಲೆ ಹಾಗೂ ನಮ್ಮ ಭಾವೀ ಪ್ರತೀಕ್ಷೆಗಳ ಮೇಲೆ ಪ್ರಭಾವ ಬೀರುತ್ತದೆ. ನಾವು ನಮ್ಮ ಜೊತೆ ವಿಶ್ವಾಸಿಗಳಲ್ಲಿ ಯಾರನ್ನಾದರೂ ದ್ವೇಷಿಸುತ್ತಾ, ಅದೇ ಸಮಯದಲ್ಲಿ ದೇವರ ಸಮ್ಮತಿಯನ್ನು ಪಡೆಯುತ್ತಾ ಇರಲು ಸಾಧ್ಯವಿಲ್ಲ.—1 ಯೋಹಾನ 3:11-15; 4:20.
ಕಾಯಿನ ಹಾಗೂ ಹೇಬೆಲರೂ ಅದೇ ರೀತಿಯಲ್ಲಿ ಬೆಳೆದಿದ್ದಿರಬಹುದು; ಆದರೆ ಕಾಯಿನನು ದೇವರಲ್ಲಿ ನಂಬಿಕೆಯನ್ನು ಕಳೆದುಕೊಂಡನು. ವಾಸ್ತವದಲ್ಲಿ, ಅವನು ‘ಕೊಲೆಗಾರನೂ ಸುಳ್ಳಿಗೆ ಮೂಲಪುರುಷನೂ’ ಆಗಿರುವ ಪಿಶಾಚನ ಮನೋಭಾವವನ್ನು ತೋರ್ಪಡಿಸಿದನು. (ಯೋಹಾನ 8:44) ನಮಗೆಲ್ಲರಿಗೂ ಒಂದು ಆಯ್ಕೆಯಿದೆ; ಪಾಪವನ್ನು ಮಾಡುವ ಆಯ್ಕೆಮಾಡುವವರು ದೇವರಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳುತ್ತಾರೆ, ಮತ್ತು ಯಾರು ಪಶ್ಚಾತ್ತಾಪಪಡುವುದಿಲ್ಲವೋ ಅವರ ಮೇಲೆ ಯೆಹೋವನು ನ್ಯಾಯತೀರ್ಪನ್ನು ಬರಮಾಡುತ್ತಾನೆ. ಇದನ್ನು ಕಾಯಿನನ ಜೀವನಮಾರ್ಗವು ತೋರಿಸುತ್ತದೆ.
ಇನ್ನೊಂದು ಕಡೆಯಲ್ಲಿ, ಹೇಬೆಲನು ಯೆಹೋವನಲ್ಲಿ ನಂಬಿಕೆಯಿಟ್ಟನು. ವಾಸ್ತವದಲ್ಲಿ, “ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞಕ್ಕಿಂತ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮರ್ಪಿಸಿದನು. ಅದರ ಮೂಲಕ ತಾನು ನೀತಿವಂತನೆಂದು ಸಾಕ್ಷಿಹೊಂದಿದನು; ದೇವರು ಅವನ ಕಾಣಿಕೆಗಳನ್ನು [“ಅರ್ಪಣೆಗಳನ್ನು,” NW] ಅಂಗೀಕಾರಮಾಡಿದ್ದೇ ಆ ಸಾಕ್ಷಿ.” ಹೇಬೆಲನಿಂದ ನುಡಿಯಲ್ಪಟ್ಟ ಒಂದು ಮಾತೂ ಶಾಸ್ತ್ರವಚನಗಳಲ್ಲಿ ದಾಖಲಿಸಲ್ಪಟ್ಟಿಲ್ಲವಾದರೂ, ತನ್ನ ಆದರ್ಶಪ್ರಾಯ ನಂಬಿಕೆಯ ಮೂಲಕ ಅವನು “ಇನ್ನೂ ಮಾತಾಡುತ್ತಾನೆ.”—ಇಬ್ರಿಯ 11:4.
ಯಥಾರ್ಥತೆಯನ್ನು ಕಾಪಾಡಿಕೊಂಡವರ ದೊಡ್ಡ ಸಾಲಿನಲ್ಲಿ ಹೇಬೆಲನು ಮೊದಲಿಗನಾಗಿದ್ದನು. ‘ಭೂಮಿಯ ಕಡೆಯಿಂದ ಯೆಹೋವನನ್ನು ಕೂಗಿದಂಥ’ ಅವನ ರಕ್ತವು ಇದುವರೆಗೂ ಜ್ಞಾಪಿಸಿಕೊಳ್ಳಲ್ಪಡುತ್ತದೆ. (ಆದಿಕಾಂಡ 4:10; ಲೂಕ 11:48-51) ಹೇಬೆಲನಂತೆ ನಾವು ನಂಬಿಕೆಯಿಡುವಲ್ಲಿ, ನಾವು ಸಹ ಯೆಹೋವನೊಂದಿಗೆ ಒಂದು ಅಮೂಲ್ಯವಾದ ಹಾಗೂ ನಿತ್ಯವಾದ ಸಂಬಂಧದಲ್ಲಿ ಆನಂದಿಸಬಲ್ಲೆವು.
[ಪುಟ 22ರಲ್ಲಿರುವ ಚೌಕ]
ರೈತ ಮತ್ತು ಕುರುಬ
ಭೂಮಿಯನ್ನು ವ್ಯವಸಾಯಮಾಡುವುದು ಮತ್ತು ಪ್ರಾಣಿಗಳನ್ನು ನೋಡಿಕೊಳ್ಳುವುದು, ದೇವರು ಆದಾಮನಿಗೆ ನೀಡಿದ್ದ ಮೊದಲ ಜವಾಬ್ದಾರಿಗಳಲ್ಲಿ ಕೆಲವಾಗಿದ್ದವು. (ಆದಿಕಾಂಡ 1:28; 2:15; 3:23) ಅವನ ಮಗನಾದ ಕಾಯಿನನು ವ್ಯವಸಾಯಮಾಡುವ ಕೆಲಸವನ್ನು ವಹಿಸಿಕೊಂಡನು, ಮತ್ತು ಹೇಬೆಲನು ಕುರಿಕಾಯುವವನಾದನು. (ಆದಿಕಾಂಡ 4:2) ಆದರೂ, ಜಲಪ್ರಳಯದ ತನಕ ಮಾನವಕುಲದ ಪೂರಾ ಆಹಾರವು ಹಣ್ಣುಗಳು ಹಾಗೂ ತರಕಾರಿಗಳನ್ನು ಒಳಗೊಂಡಿದ್ದರಿಂದ, ಕುರಿಗಳನ್ನು ಏಕೆ ಬೆಳೆಸಬೇಕಾಗಿತ್ತು?—ಆದಿಕಾಂಡ 1:29; 9:3, 4.
ಕುರಿಗಳು ದಷ್ಟಪುಷ್ಟವಾಗಿ ಬೆಳೆಯಬೇಕಾದರೆ, ಅವುಗಳಿಗೆ ಮಾನವ ಆರೈಕೆಯ ಅಗತ್ಯವಿದೆ. ಮಾನವಕುಲದ ಇತಿಹಾಸದ ಆರಂಭದಿಂದಲೂ ಮನುಷ್ಯನು ಈ ಸಾಕುಪ್ರಾಣಿಗಳನ್ನು ಬೆಳೆಸಿದನು ಎಂಬುದಕ್ಕೆ ಹೇಬೆಲನ ವೃತ್ತಿಯು ಪುರಾವೆ ನೀಡುತ್ತದೆ. ಪ್ರಳಯಕ್ಕೆ ಮುಂಚೆ ಇದ್ದ ಮಾನವರು, ಪ್ರಾಣಿಗಳ ಹಾಲನ್ನು ಆಹಾರದ ಮೂಲವಾಗಿ ಬಳಸಿದರೋ ಇಲ್ಲವೋ ಎಂಬುದನ್ನು ಶಾಸ್ತ್ರವಚನಗಳು ಹೇಳುವುದಿಲ್ಲವಾದರೂ, ತರಕಾರಿಗಳನ್ನೇ ಆಹಾರವಾಗಿ ಉಪಯೋಗಿಸುವವರು ಸಹ ಕುರಿಗಳ ಉಣ್ಣೆಯನ್ನು ಉಪಯೋಗಿಸಸಾಧ್ಯವಿತ್ತು. ಮತ್ತು ಕುರಿಗಳು ಸತ್ತಾಗ, ಅವುಗಳ ಚರ್ಮವು ಪ್ರಯೋಜನಾರ್ಹ ಉದ್ದೇಶಗಳನ್ನು ಪೂರೈಸುತ್ತದೆ. ದೃಷ್ಟಾಂತಕ್ಕಾಗಿ, ಆದಾಮಹವ್ವರಿಗೆ ಉಡುಗೆಯಾಗಿ ಯೆಹೋವನು “ಚರ್ಮದ ಅಂಗಿಗಳನ್ನು ಮಾಡಿ ತೊಡಿಸಿದನು.”—ಆದಿಕಾಂಡ 3:21.
ಏನೇ ಆಗಲಿ, ಆರಂಭದಲ್ಲಿ ಕಾಯಿನ ಹೇಬೆಲರು ಪರಸ್ಪರ ಸಹಕಾರದಿಂದಿದ್ದರು ಎಂದು ಊಹಿಸಿಕೊಳ್ಳುವುದು ತರ್ಕಬದ್ಧವಾಗಿ ತೋರುತ್ತದೆ. ಕುಟುಂಬದಲ್ಲಿದ್ದ ಇತರರು ತೊಡಲಿಕ್ಕಾಗಿ ಹಾಗೂ ಚೆನ್ನಾಗಿ ಉಣ್ಣಲಿಕ್ಕಾಗಿ ಅಗತ್ಯವಿರುವ ವಸ್ತುಗಳನ್ನು ಅವರು ಉತ್ಪಾದಿಸುತ್ತಿದ್ದರು.
[ಪುಟ 23ರಲ್ಲಿರುವ ಚಿತ್ರ]
ಕಾಯಿನನ ‘ಕೃತ್ಯಗಳು ದುಷ್ಟವಾಗಿದ್ದವು, ಆದರೆ ಅವನ ತಮ್ಮನ ಕೃತ್ಯಗಳು ನೀತಿಭರಿತವಾಗಿದ್ದವು’