ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 3/15 ಪು. 29-31
  • ‘ಸಮುದ್ರದಲ್ಲಿ ಅಪಾಯಗಳು’

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ‘ಸಮುದ್ರದಲ್ಲಿ ಅಪಾಯಗಳು’
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ರೋಮ್‌ ಪಟ್ಟಣವು ಸಮುದ್ರ ವ್ಯಾಪಾರದ ಮೇಲೆ ಅವಲಂಬಿಸಿದ ಕಾರಣಗಳು
  • ಸರಕುನೌಕೆಗಳಲ್ಲಿ ಪ್ರಯಾಣಿಕರೊ?
  • ಸಮುದ್ರ ಪ್ರಯಾಣ—ಎಷ್ಟು ಸುರಕ್ಷಿತ?
  • ಸಮುದ್ರದಾಚೆಗೆ ಒಯ್ಯಲ್ಪಟ್ಟ ಸುವಾರ್ತೆ
  • “ನಮ್ಮಲ್ಲಿ ಒಬ್ರೂ ಸಾಯಲ್ಲ”
    ದೇವರ ರಾಜ್ಯಕ್ಕೆ ‘ಕೂಲಂಕಷ ಸಾಕ್ಷಿ’
  • ನಿಮಗೆ ಗೊತ್ತಿತ್ತಾ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಪೌಲನು ಕೇಡಿನ ಮೇಲೆ ಜಯಸಾಧಿಸುತ್ತಾನೆ
    ಕಾವಲಿನಬುರುಜು—1999
  • ಪೌಲನನ್ನು ರೋಮಿಗೆ ಕಳುಹಿಸಲಾಯಿತು
    ಬೈಬಲ್‌ ನಮಗೆ ಕಲಿಸುವ ಪಾಠಗಳು
ಇನ್ನಷ್ಟು
ಕಾವಲಿನಬುರುಜು—1999
w99 3/15 ಪು. 29-31

‘ಸಮುದ್ರದಲ್ಲಿ ಅಪಾಯಗಳು’

ರಾತ್ರಿಯ ಗಾಢಾಂಧಕಾರದಲ್ಲಿ, 276 ಪ್ರಯಾಣಿಕರನ್ನು ಸಾಗಿಸುತ್ತಿದ್ದ ಹಾಯಿ ಹಡಗು ಭೂಮಧ್ಯ (ಮೆಡಿಟರೇನಿಯನ್‌) ಸಮುದ್ರದಲ್ಲಿರುವ ಒಂದು ದ್ವೀಪವನ್ನು ಸಮೀಪಿಸುತ್ತದೆ. 14 ದಿನಗಳ ವರೆಗೆ ಪ್ರಚಂಡ ಸಮುದ್ರದಲ್ಲಿ ಹೊಯ್ದಾಡಿದ ಕಾರಣ, ನಾವಿಕರ ತಂಡವು ಹಾಗೂ ಪ್ರಯಾಣಿಕರು ತೊಳಲಿ ಬಳಲಿ ಹೋಗಿದ್ದಾರೆ. ಹೊತ್ತಾರೆ ಅವರು ಭೂಭಾಗವನ್ನು ಕಂಡಾಗ, ಹಡಗನ್ನು ದಡಕ್ಕೆ ತಳ್ಳಲು ಪ್ರಯತ್ನಿಸುತ್ತಾರೆ. ಆದರೆ ಹಡಗಿನ ಮುಂಭಾಗವು ಚಲಿಸಲಾಗದೆ ಸಿಕ್ಕಿಕೊಂಡಾಗ, ಅಲೆಗಳು ಹಡಗಿನ ಹಿಂಭಾಗವನ್ನು ನುಚ್ಚುನೂರುಗೊಳಿಸುತ್ತವೆ. ಹಡಗಿನಲ್ಲಿದ್ದವರೆಲ್ಲ ಅದನ್ನು ತೊರೆದು, ಈಜಾಡುತ್ತಾ ಇಲ್ಲವೆ ಮರದ ಹಲಗೆಗಳು ಅಥವಾ ಇನ್ನಿತರ ವಸ್ತುಗಳನ್ನು ಉಪಯೋಗಿಸಿ ಮಾಲ್ಟದ ತೀರವನ್ನು ಹೇಗೊ ಬಂದು ತಲಪುತ್ತಾರೆ. ದಣಿದುಹೋಗಿದ್ದ ಪ್ರಯಾಣಿಕರು ಚಳಿಯಲ್ಲಿ ನಡುಗುತ್ತಾ, ಉಗ್ರವಾದ ಅಲೆಗಳಿಂದ ತಪ್ಪಿಸಿಕೊಳ್ಳುತ್ತಾರೆ. ಆ ಪ್ರಯಾಣಿಕರಲ್ಲಿ ಒಬ್ಬನು, ಕ್ರೈಸ್ತ ಅಪೊಸ್ತಲನಾದ ಪೌಲನಾಗಿದ್ದಾನೆ. ಅವನು ನ್ಯಾಯವಿಚಾರಣೆಗಾಗಿ ರೋಮ್‌ ಪಟ್ಟಣಕ್ಕೆ ವರ್ಗಾಯಿಸಲ್ಪಡುತ್ತಿದ್ದಾನೆ.—ಅ. ಕೃತ್ಯಗಳು 27:27-44.

ಮಾಲ್ಟ ದ್ವೀಪದಲ್ಲಾದ ಹಡಗು ಒಡೆತವು, ಪೌಲನು ಸಮುದ್ರದಲ್ಲಿ ಅನುಭವಿಸಿದ ಪ್ರಪ್ರಥಮ ಗಂಡಾಂತರವಾಗಿರಲಿಲ್ಲ. ಕೆಲವೊಂದು ವರ್ಷಗಳ ಮುಂಚೆ, ಅವನು ಬರೆದುದು: “ಮೂರು ಸಾರಿ ನಾನಿದ್ದ ಹಡಗವು ಒಡೆದುಹೋಯಿತು; ಒಂದು ರಾತ್ರಿ ಒಂದು ಹಗಲು ಸಮುದ್ರದ ನೀರಿನಲ್ಲಿ ಕಳೆದೆನು.” ಅವನು “ಸಮುದ್ರಗಳ ಅಪಾಯಗಳ”ನ್ನೂ (NW) ಎದುರಿಸಿದ್ದನೆಂದು ಕೂಡಿಸಿ ಹೇಳಿದನು. (2 ಕೊರಿಂಥ 11:25-27) ಪೌಲನು “ಅನ್ಯಜನರಿಗೆ ಅಪೊಸ್ತಲನಾಗಿ” ಸೇವೆಸಲ್ಲಿಸುವ ತನ್ನ ದೇವದತ್ತ ನೇಮಕವನ್ನು ಪೂರೈಸುವಂತೆ ಸಮುದ್ರಯಾನವು ಅವನಿಗೆ ಸಹಾಯಮಾಡಿತು.—ರೋಮಾಪುರ 11:13.

ಪ್ರಥಮ ಶತಮಾನದಲ್ಲಿ ಸಮುದ್ರಯಾನವು ಎಷ್ಟು ವ್ಯಾಪಕವಾಗಿತ್ತು? ಅದು ಕ್ರೈಸ್ತ ಧರ್ಮದ ಹಬ್ಬುವಿಕೆಯಲ್ಲಿ ಯಾವ ಪಾತ್ರವನ್ನು ವಹಿಸಿತು? ಅದು ಎಷ್ಟು ಸುರಕ್ಷಿತವಾಗಿತ್ತು? ಯಾವ ರೀತಿಯ ಹಡಗುಗಳನ್ನು ಉಪಯೋಗಿಸಲಾಯಿತು? ಪ್ರಯಾಣಿಕರಿಗೆ ವಸತಿಯನ್ನು ಹೇಗೆ ಕಲ್ಪಿಸಲಾಗುತ್ತಿತ್ತು?

ರೋಮ್‌ ಪಟ್ಟಣವು ಸಮುದ್ರ ವ್ಯಾಪಾರದ ಮೇಲೆ ಅವಲಂಬಿಸಿದ ಕಾರಣಗಳು

ಭೂಮಧ್ಯ ಸಮುದ್ರವನ್ನು ರೋಮ್‌ನ ಜನರು ಮ್ಯಾರೆ ನಾಸ್ಟ್ರುಮ್‌, ಅಂದರೆ ನಮ್ಮ ಸಮುದ್ರವೆಂದು ಕರೆದರು. ಮಿಲಿಟರಿ ಕಾರಣಗಳಿಗಿಂತ ಹೆಚ್ಚಿನ ಕಾರಣಕ್ಕಾಗಿ ಸಮುದ್ರ ಮಾರ್ಗಗಳ ಹತೋಟಿಯು ರೋಮಿಗೆ ಅತ್ಯಾವಶ್ಯಕವಾಗಿತ್ತು. ರೋಮ್‌ ಸಾಮ್ರಾಜ್ಯದ ಅನೇಕ ನಗರಗಳು, ಬಂದರುಗಳಾಗಿದ್ದವು ಇಲ್ಲವೆ ಬಂದರುಗಳ ಮೂಲಕ ಎಲ್ಲವನ್ನು ಪಡೆದುಕೊಳ್ಳುತ್ತಿದ್ದವು. ಉದಾಹರಣೆಗೆ, ರೋಮ್‌ ಪಟ್ಟಣವು ಹತ್ತಿರದ ಆಸ್ಟೀಯದಲ್ಲಿದ್ದ ಬಂದರನ್ನು ಉಪಯೋಗಿಸಿಕೊಳ್ಳುತ್ತಿದ್ದಾಗ, ಕೊರಿಂಥ ಪಟ್ಟಣವು ಲೆಕೇಯಮ್‌ ಮತ್ತು ಕೆಂಕ್ರೆ ಬಂದರುಗಳನ್ನು ಉಪಯೋಗಿಸಿತು. ಮತ್ತು ಸಿರಿಯನ್‌ ಆ್ಯಂಟಿಯಾಕ್‌ ಪಟ್ಟಣವು ಸೆಲೂಷೀಯ ಬಂದರಿನ ಸಹಾಯವನ್ನು ಪಡೆದುಕೊಂಡಿತು. ಈ ಬಂದರುಗಳ ಮಧ್ಯೆ ಒಳ್ಳೆಯ ಸಂಬಂಧಗಳಿದ್ದ ಕಾರಣ, ಮುಖ್ಯ ಪಟ್ಟಣಗಳೊಂದಿಗೆ ತ್ವರಿತಗತಿಯ ಸಂಪರ್ಕವನ್ನು ಇದು ಖಚಿತಪಡಿಸಿ, ರೋಮನ್‌ ಪ್ರಾಂತಗಳ ಮೇಲೆ ಪ್ರಭಾವಕಾರಿ ಆಡಳಿತವನ್ನು ಸಾಧ್ಯಗೊಳಿಸಿತು.

ರೋಮ್‌ ತನ್ನ ಆಹಾರ ಸರಬರಾಯಿಗೂ ಹಡಗುಗಳನ್ನೇ ಅವಲಂಬಿಸಿತು. ಸುಮಾರು ಹತ್ತು ಲಕ್ಷ ಜನಸಂಖ್ಯೆಯಿದ್ದ ರೋಮ್‌ ಪಟ್ಟಣಕ್ಕೆ, ಪ್ರತಿ ವರ್ಷ 2,50,000 ಟನ್ನುಗಳಿಂದ 4,00,000 ಟನ್ನುಗಳಷ್ಟು ಭಾರಿ ಮೊತ್ತದ ದವಸಧಾನ್ಯವು ಬೇಕಾಗಿತ್ತು. ಇಷ್ಟೊಂದು ದವಸಧಾನ್ಯವು ಎಲ್ಲಿಂದ ಬಂತು? ಉತ್ತರ ಆಫ್ರಿಕ ದೇಶವು ರೋಮ್‌ ಪಟ್ಟಣಕ್ಕೆ ವರ್ಷದಲ್ಲಿ ಎಂಟು ತಿಂಗಳುಗಳ ಕಾಲ ಆಹಾರವನ್ನು ಒದಗಿಸಿತಾದರೂ, ಉಳಿದ ನಾಲ್ಕು ತಿಂಗಳುಗಳಿಗಾಗಿ ಐಗುಪ್ತವು ಸಾಕಷ್ಟು ದವಸಧಾನ್ಯಗಳನ್ನು ಕಳುಹಿಸಿತೆಂದು IIನೆಯ ಹೆರೋದ ಅಗ್ರಿಪ್ಪ ಹೇಳಿರುವುದಾಗಿ ಫ್ಲೇವೀಯಸ್‌ ಜೋಸೀಫಸ್‌ ಉಲ್ಲೇಖಿಸುತ್ತಾನೆ. ಆ ಪಟ್ಟಣಕ್ಕೆ ಆಹಾರವನ್ನು ಒದಗಿಸಲು ಸಾವಿರಾರು ಹಡಗುಗಳು ಬಳಸಲ್ಪಟ್ಟವು.

ಸುಖಭೋಗದ ವಸ್ತುಗಳಿಗಾಗಿ ರೋಮನರಲ್ಲಿದ್ದ ಅಭಿರುಚಿಗೆ ತಕ್ಕಂತೆ, ಅಭಿವೃದ್ಧಿ ಹೊಂದುತ್ತಿದ್ದ ಈ ಸಮುದ್ರ ವ್ಯಾಪಾರವು ಎಲ್ಲ ರೀತಿಯ ಸರಕುಗಳನ್ನು ಸರಬರಾಯಿ ಮಾಡಿತು. ಖನಿಜ, ಶಿಲೆ, ಮತ್ತು ಅಮೃತ ಶಿಲೆಗಳು, ಸೈಪ್ರಸ್‌, ಗ್ರೀಸ್‌ ಮತ್ತು ಐಗುಪ್ತದಿಂದ ಬಂದವು. ಲೆಬನೋನಿನಿಂದ ಮರದ ದಿಮ್ಮಿಗಳು ರವಾನಿಸಲ್ಪಟ್ಟವು. ಸ್ಮುರ್ನದಿಂದ ದ್ರಾಕ್ಷಾರಸ, ದಮಸ್ಕದಿಂದ ಒಣಗಿದ ಹಣ್ಣುಗಳು, ಮತ್ತು ಪ್ಯಾಲಸ್ಟೀನಿನಿಂದ ಖರ್ಜೂರವು ಕಳುಹಿಸಲ್ಪಟ್ಟಿತು. ಸಿಲಿಸಿಯದಿಂದ ಮುಲಾಮುಗಳು ಮತ್ತು ರಬ್ಬರ್‌, ಮಿಲಟೆಸ್‌ ಮತ್ತು ಲವೊದಿಕೀಯದಿಂದ ಉಣ್ಣೆ, ಸಿರಿಯ ಮತ್ತು ಲೆಬನೋನಿನಿಂದ ನೆಯ್ದ ಸರಕು, ತೂರ್‌ ಮತ್ತು ಚೀದೋನಿನಿಂದ ಊದಾಬಣ್ಣದ ಬಟ್ಟೆ ರವಾನಿಸಲ್ಪಟ್ಟವು. ಥುವತೈರದಿಂದ ವರ್ಣದ್ರವ್ಯಗಳು ಹಾಗೂ ಅಲೆಕ್ಸಾಂದ್ರಿಯ ಮತ್ತು ಚೀದೋನಿನಿಂದ ಗಾಜು ಕಳುಹಿಸಲ್ಪಟ್ಟಿತು. ರೇಷ್ಮೆ, ಹತ್ತಿ, ದಂತ, ಮತ್ತು ಸಾಂಬಾರ ಪದಾರ್ಥಗಳು ಚೈನಾ ಮತ್ತು ಭಾರತದಿಂದ ಆಮದುಮಾಡಲ್ಪಟ್ಟವು.

ಮಾಲ್ಟದಲ್ಲಿ ಒಡೆದುಹೋದ, ಪೌಲನಿದ್ದ ಆ ಹಡಗು ಯಾವ ರೀತಿಯ ಹಡಗಾಗಿತ್ತು? ಅದು “ಅಲೆಕ್ಸಾಂದ್ರಿಯದಿಂದ ಬಂದು ಇತಾಲ್ಯದೇಶಕ್ಕೆ ಹೋಗುತ್ತಿದ್ದ” ದವಸಧಾನ್ಯದ ಹಡಗಾಗಿತ್ತು. (ಅ. ಕೃತ್ಯಗಳು 27:6) ಈ ದೋಣಿಗಳನ್ನು ಗ್ರೀಕರು, ಫೋನಿಷೀಯದವರು ಮತ್ತು ಸಿರಿಯನರು ಖಾಸಗಿಯಾಗಿ ಪಡೆದುಕೊಂಡಿದ್ದು, ಅವುಗಳನ್ನು ತಮ್ಮ ವಶದಲ್ಲಿಟ್ಟುಕೊಂಡು ಸುಸಜ್ಜಿತಗೊಳಿಸುತ್ತಿದ್ದರು. ಆದರೆ ಹಡಗುಗಳನ್ನು ರೋಮನ್‌ ಸರಕಾರವು ಬಾಡಿಗೆಗೆ ತೆಗೆದುಕೊಳ್ಳುತ್ತಿತ್ತು. ಇತಿಹಾಸಕಾರ ವಿಲಿಯಮ್‌ ಎಮ್‌. ರಾಮ್‌ಸೇ ಹೇಳುವುದು, “ತೆರಿಗೆಗಳ ವಸೂಲಿಯಂತಹ ಬೃಹತ್ಕಾರ್ಯಕ್ಕಾಗಿ ಬೇಕಾದ ಜನರನ್ನು ಮತ್ತು ಸಲಕರಣೆಗಳನ್ನು ಸ್ವತಃ ಸರಕಾರವೇ ಸಂಘಟಿಸುವ ಬದಲು, ಅದನ್ನು ಗುತ್ತಿಗೆದಾರರಿಗೆ ವಹಿಸಿಕೊಡುವುದು ಸುಲಭವೆಂದು ಕಂಡುಕೊಂಡಿತು.”

“ಸ್ಯೂಸ್‌ನ ಪುತ್ರರ” ಆಕೃತಿಯಿದ್ದ ಹಡಗಿನಲ್ಲಿ ಪೌಲನು ರೋಮನ್ನು ತಲಪಿದನು. ಇದು ಕೂಡ ಆ್ಯಲೆಕ್ಸಾಂಡ್ರಿಯನ್‌ ಹಡಗಾಗಿತ್ತು. ಅದು ನೇಪಲ್ಸ್‌ನ ಕೊಲ್ಲಿಯಲ್ಲಿರುವ ಪೊತಿಯೋಲದ ಹಡಗುಕಟ್ಟೆಗೆ ಬಂದಿತು. ಈ ಬಂದರಿನಲ್ಲಿ ದವಸಧಾನ್ಯಗಳುಳ್ಳ ದೋಣಿಗಳು ಸಾಮಾನ್ಯವಾಗಿ ದಡಸೇರಿದವು. (ಅ. ಕೃತ್ಯಗಳು 28:11-13) ಪೊತಿಯೋಲ, ಅಂದರೆ ಆಧುನಿಕ ದಿನದ ಪೋಟ್ಸವೊಲಿಯಲ್ಲಿ ಸರಕನ್ನು ಇಳಿಸಿ, ಅದನ್ನು ಭೂಮಾರ್ಗದ ಮೂಲಕ ಇಲ್ಲವೆ ಚಿಕ್ಕ ಚಿಕ್ಕ ದೋಣಿಗಳಲ್ಲಿ ತುಂಬಿ, ಕಡಲತೀರದ ಉದ್ದಕ್ಕೂ ಮತ್ತು ಟೈಬರ್‌ ನದಿಯ ಮೂಲಕ ರೋಮ್‌ ಪಟ್ಟಣದ ಮುಖ್ಯಭಾಗಕ್ಕೆ ರವಾನಿಸಲಾಯಿತು.

ಸರಕುನೌಕೆಗಳಲ್ಲಿ ಪ್ರಯಾಣಿಕರೊ?

ಪೌಲನೂ ಅವನೊಂದಿಗಿದ್ದ ಸೈನಿಕರೂ ಸರಕುನೌಕೆಯಲ್ಲಿ ಏಕೆ ಪ್ರಯಾಣಿಸಿದರು? ಆ ಪ್ರಶ್ನೆಗೆ ಉತ್ತರನೀಡಲು, ಆ ದಿನಗಳಲ್ಲಿ ಒಬ್ಬ ಪ್ರಯಾಣಿಕನೋಪಾದಿ ನೌಕಾಯಾನ ಮಾಡುವುದರ ಅರ್ಥವೇನಾಗಿತ್ತು ಎಂಬುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಸಾ.ಶ. ಒಂದನೆಯ ಶತಮಾನದಲ್ಲಿ ಪ್ರಯಾಣಿಕ ಹಡಗೆಂಬ ಪ್ರತ್ಯೇಕವಾದ ಹಡಗಿರಲಿಲ್ಲ. ಪ್ರಯಾಣಿಕರು ಉಪಯೋಗಿಸುತ್ತಿದ್ದ ಹಡಗುಗಳು ವ್ಯಾಪಾರದ ಹಡಗುಗಳಾಗಿದ್ದವು. ಮತ್ತು ಅವುಗಳಲ್ಲಿ, ರಾಜ್ಯದ ನಾಯಕರುಗಳು, ವಿದ್ವಾಂಸರು, ಬೋಧಕರು, ಮಾಟಗಾರರು, ಕಲಾಕಾರರು, ಕ್ರೀಡಾಪಟುಗಳು, ವ್ಯಾಪಾರಿಗಳು, ಪ್ರವಾಸಿಗರು, ಮತ್ತು ಯಾತ್ರಿಗಳಂತಹ ಎಲ್ಲ ರೀತಿಯ ಜನರು ಪ್ರಯಾಣಿಸುತ್ತಿದ್ದಿರಬಹುದು.

ಹಾಗಿದ್ದರೂ, ಕರಾವಳಿಯಲ್ಲಿ ಪ್ರಯಾಣಿಕರನ್ನು ಮತ್ತು ಸರಕನ್ನು ರವಾನಿಸಲು ಚಿಕ್ಕ ದೋಣಿಗಳಿದ್ದವು. ತ್ರೋವದಿಂದ “ಮೆಕದೋನ್ಯಕ್ಕೆ” ಬರಲು ಪೌಲನು ಇಂತಹ ದೋಣಿಯನ್ನು ಉಪಯೋಗಿಸಿದ್ದಿರಬಹುದು. ಇಂತಹ ದೋಣಿಗಳೇ ಅವನನ್ನು ಹಲವಾರು ಬಾರಿ ಅಥೇನ್ಸ್‌ಗೆ ಮತ್ತು ಅಲ್ಲಿಂದ ಬೇರೆ ಸ್ಥಳಗಳಿಗೆ ಸಾಗಿಸಿದ್ದಿರಬಹುದು. ಏಷಿಯ ಮೈನರ್‌ನ ತೀರದ ಬಳಿಯಿರುವ ದ್ವೀಪಗಳ ಮುಖಾಂತರ ತ್ರೋವದಿಂದ ಪತರಕ್ಕೆ ಹೋಗಲು ಸಹ, ಪೌಲನು ಸಣ್ಣ ದೋಣಿಯನ್ನೇ ಉಪಯೋಗಿಸಿದ್ದಿರಬಹುದು. (ಅ. ಕೃತ್ಯಗಳು 16:8-11; 17:14, 15; 20:1-6, 13-15; 21:1) ಇಂತಹ ಚಿಕ್ಕ ದೋಣಿಗಳು ಸಮಯವನ್ನು ಉಳಿಸಿದವಾದರೂ, ಅವು ತೀರದಿಂದ ತುಂಬ ದೂರಕ್ಕೆ ಹೋಗುವಂತಿರಲಿಲ್ಲ. ಆದುದರಿಂದ ಪೌಲನನ್ನು ಕುಪ್ರದ್ವೀಪಕ್ಕೆ ಮತ್ತು ತರುವಾಯ ಪಂಫುಲ್ಯಕ್ಕೆ ಕೊಂಡೊಯ್ದ ಹಡಗುಗಳು ಮತ್ತು ಅವನು ಎಫೆಸದಿಂದ ಕೈಸರೈಯಕ್ಕೆ ಹಾಗೂ ಪತರದಿಂದ ತೂರ್‌ಪಟ್ಟಣಕ್ಕೆ ಪ್ರಯಾಣಿಸಿದ ಹಡಗುಗಳು ಸಾಕಷ್ಟು ದೊಡ್ಡ ಗಾತ್ರದ್ದಾಗಿದ್ದಿರಬೇಕು. (ಅ. ಕೃತ್ಯಗಳು 13:4, 13; 18:21, 22; 21:1-3) ಪೌಲನು ಮಾಲ್ಟದಲ್ಲಿ ಹಡಗು ಒಡೆತವನ್ನು ಅನುಭವಿಸಿದ್ದು ಸಹ ದೊಡ್ಡದೆಂದು ಪರಿಗಣಿಸಲ್ಪಡಬಹುದಾದ ಹಡಗಿನಲ್ಲೇ. ಅಂತಹ ಹಡಗುಗಳು ಎಷ್ಟು ದೊಡ್ಡದಾಗಿದ್ದಿರಬಹುದು?

ಸಾಹಿತ್ಯದ ಪ್ರಭಾವದಿಂದಾಗಿ ಒಬ್ಬ ಪಂಡಿತನು ಹೀಗೆ ಹೇಳಿದನು: “ಗತಕಾಲದವರು ಸಾಮಾನ್ಯವಾಗಿ ಬಳಸಿದ ಅತ್ಯಂತ ಚಿಕ್ಕ ಗಾತ್ರದ [ಹಡಗು] ಸುಮಾರು 70ರಿಂದ 80 ಟನ್ನುಗಳಷ್ಟು ಭಾರವಾಗಿತ್ತು. ಗ್ರೀಕರ ಸಮಯದಲ್ಲಾದರೊ ಅತಿಪ್ರಿಯವಾದ ಗಾತ್ರವು 130 ಟನ್ನುಗಳಾಗಿತ್ತು. 250 ಟನ್ನುಗಳಷ್ಟು ಭಾರವಾದ ಹಡಗು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದರೂ ಸರಾಸರಿ ಗಾತ್ರಕ್ಕಿಂತ ಖಂಡಿತವಾಗಿಯೂ ದೊಡ್ಡದಾಗಿತ್ತು. ರೋಮನ್‌ ಸಮಯಗಳಲ್ಲಿ, ಸರಕಾರೀ ಸಾಗಣೆಯಲ್ಲಿ ಉಪಯೋಗಿಸಲ್ಪಡುತ್ತಿದ್ದ ಹಡಗುಗಳು ಇನ್ನೂ ದೊಡ್ಡದಾಗಿದ್ದವು. ಅವುಗಳ ಭಾರ 340 ಟನ್ನುಗಳಾಗಿರುತ್ತಿತ್ತು. ಸಂಚರಿಸುತ್ತಿದ್ದ ಅತ್ಯಂತ ದೊಡ್ಡ ಹಡಗುಗಳ ಭಾರ ಸುಮಾರು 1300 ಟನ್ನುಗಳಾಗಿತ್ತು. ಅಥವಾ ಇದಕ್ಕಿಂತಲೂ ಸ್ವಲ್ಪ ಹೆಚ್ಚಾಗಿರುತ್ತಿತ್ತು.” ಸಾ.ಶ. ಎರಡನೆಯ ಶತಮಾನದಲ್ಲಿ ಬರೆಯಲ್ಪಟ್ಟ ಒಂದು ವಿವರಣೆಗನುಸಾರ, ಆ್ಯಲೆಕ್ಸಾಂಡ್ರಿಯದ ದವಸಧಾನ್ಯಗಳ ಹಡಗಾದ ಐಸಿಸ್‌ 55 ಮೀಟರುಗಳಿಗಿಂತಲೂ ಉದ್ದವೂ, 14 ಮೀಟರುಗಳಷ್ಟು ಅಗಲವೂ, 13 ಮೀಟರುಗಳಷ್ಟು ಆಳವೂ ಆಗಿದ್ದು, ಸಾವಿರ ಟನ್ನುಗಳಷ್ಟು ದವಸಧಾನ್ಯಗಳನ್ನು ಮತ್ತು ನೂರಾರು ಪ್ರಯಾಣಿಕರನ್ನು ಕೊಂಡೊಯ್ಯಬಹುದಿತ್ತು.

ಸರಕುನೌಕೆಯಲ್ಲಿ ಪ್ರಯಾಣಿಸುತ್ತಿದ್ದವರನ್ನು ಹೇಗೆ ಉಪಚರಿಸಲಾಗುತ್ತಿತ್ತು? ಆ ಹಡಗುಗಳು ಮುಖ್ಯವಾಗಿ ಸರಕುಗಳಿಗಾಗಿದ್ದ ಕಾರಣ, ಪ್ರಯಾಣಿಕರಿಗೆ ಎರಡನೆಯ ಸ್ಥಾನವನ್ನು ಕೊಡಲಾಯಿತು. ನೀರಲ್ಲದೆ ಬೇರೆ ಯಾವ ಆಹಾರವೂ ಅವರಿಗೆ ಕೊಡಲಾಗುತ್ತಿರಲಿಲ್ಲ. ಹಡಗಿನ ಮೇಲಟ್ಟದ ಮೇಲೆ ಪ್ರತಿ ರಾತ್ರಿ ಎತ್ತಿಕಟ್ಟಿ, ಬೆಳಗ್ಗೆ ತೆಗೆಯಲಾಗುತ್ತಿದ್ದ ಗುಡಾರದಂತಹ ಆಶ್ರಯಗಳಲ್ಲಿ ಅವರು ಮಲಗುತ್ತಿದ್ದರು. ಪ್ರಯಾಣಿಕರು ಹಡಗಿನ ಅಡಿಗೆಮನೆಯನ್ನು ಅಡಿಗೆಗಾಗಿ ಉಪಯೋಗಿಸಬಹುದಿದ್ದರೂ, ಅಡಿಗೆಗೆ, ಊಟಕ್ಕೆ, ಸ್ನಾನಕ್ಕೆ, ಮತ್ತು ಮಲಗಲು ಬೇಕಾದ ಎಲ್ಲವನ್ನು, ಅಂದರೆ ಪಾತ್ರೆಯಿಂದ ಹಿಡಿದು ಹಾಸಿಗೆಯ ವರೆಗೆ ಎಲ್ಲವನ್ನೂ ತಮ್ಮೊಂದಿಗೆ ತರಬೇಕಿತ್ತು.

ಸಮುದ್ರ ಪ್ರಯಾಣ—ಎಷ್ಟು ಸುರಕ್ಷಿತ?

ದಿಕ್ಸೂಚಿಯು ಕೂಡ ಇಲ್ಲದೆ, ಪ್ರಥಮ ಶತಮಾನದ ನಾವಿಕರು ಹಡಗನ್ನು ಕಣ್ಣುದೃಷ್ಟಿಯಿಂದಲೇ ಚಲಾಯಿಸಿದರು. ದೃಗ್ಗೋಚರತ್ವವು ಸುಸ್ಪಷ್ಟವಾಗಿದ್ದಾಗ, ಅಂದರೆ ಮೇ ತಿಂಗಳಿನ ಕೊನೆಯಭಾಗದಿಂದ ಸೆಪ್ಟೆಂಬರ್‌ನ ಮಧ್ಯಭಾಗದ ವರೆಗೆ ಮಾತ್ರ ಪ್ರಯಾಣವು ಸುರಕ್ಷಿತವಾಗಿರುತ್ತಿತ್ತು. ಆ ಸಮಯದ ಎರಡು ತಿಂಗಳು ಮೊದಲು ಮತ್ತು ಅನಂತರ, ವ್ಯಾಪಾರಿಗಳು ಪ್ರಯಾಣ ಬೆಳೆಸುವ ಸಾಹಸಮಾಡಬಹುದಿತ್ತು. ಆದರೆ ಚಳಿಗಾಲದಲ್ಲಿ ಇಬ್ಬನಿ ಮತ್ತು ಮೋಡಗಳು ಹೆಗ್ಗುರುತುಗಳನ್ನು ಅಸ್ಪಷ್ಟಗೊಳಿಸಿ, ಹಗಲಿನಲ್ಲಿ ಸೂರ್ಯನನ್ನು ಇರುಳಿನಲ್ಲಿ ನಕ್ಷತ್ರಗಳನ್ನು ಮಂಕುಗೊಳಿಸುತ್ತಿದ್ದವು. ನೌಕಾಯಾನವು ನವೆಂಬರ್‌ 11ರಿಂದ ಮಾರ್ಚ್‌ 10ರ ವರೆಗೆ ಸ್ಥಗಿತಗೊಳಿಸಲಾಗುತ್ತಿತ್ತು (ಲ್ಯಾಟಿನ್‌ನಲ್ಲಿ, ಮ್ಯಾರೆ ಕ್ಲಾಸಮ್‌). ತುರ್ತಿನ ಅಥವಾ ಅನಿವಾರ್ಯ ಸನ್ನಿವೇಶಗಳಲ್ಲಿ ಮಾತ್ರ ಪ್ರಯಾಣವು ತೆರೆದಿರುತ್ತಿತ್ತು. ತಡವಾಗಿ ಪ್ರಯಾಣಿಸುತ್ತಿದ್ದವರು ಚಳಿಗಾಲವನ್ನು ಬೇರೊಂದು ರೇವುಪಟ್ಟಣದಲ್ಲಿ ಕಳೆಯಬೇಕಿತ್ತು.—ಅ. ಕೃತ್ಯಗಳು 27:12; 28:11.

ಸಮುದ್ರ ಪ್ರಯಾಣವು ಅಪಾಯಕರವೂ ಋತುಗನುಗುಣವಾಗಿದ್ದರೂ, ಅದು ಭೂಪ್ರಯಾಣಕ್ಕಿಂತಲೂ ಉತ್ತಮವಾಗಿತ್ತೊ? ನಿಶ್ಚಯವಾಗಿಯೂ ಹೌದು! ಸಮುದ್ರ ಪ್ರಯಾಣದಲ್ಲಿ ಬಳಲಿಕೆ ಕಡಿಮೆಯಾಗಿತ್ತು, ಖರ್ಚು ಕಡಿಮೆಯಾಗಿತ್ತು, ಮತ್ತು ವೇಗವು ಕ್ಷಿಪ್ರವಾಗಿತ್ತು. ಗಾಳಿಯು ಅನುಕೂಲಕರವಾಗಿದ್ದಲ್ಲಿ, ಹಡಗೊಂದು ದಿನಕ್ಕೆ 150 ಕಿಲೊಮೀಟರುಗಳಷ್ಟು ದೂರವನ್ನು ಆವರಿಸಬಹುದಿತ್ತು. ಕಾಲ್ನಡಿಗೆಯಲ್ಲಿ ದಿನಕ್ಕೆ ಸುಮಾರು 25ರಿಂದ 30 ಕಿಲೊಮೀಟರುಗಳ ದೂರವನ್ನು ಮಾತ್ರವೇ ಆವರಿಸಬಹುದು.

ಪ್ರಯಾಣದ ವೇಗವು ಸಂಪೂರ್ಣವಾಗಿ ಗಾಳಿಯ ಮೇಲೆ ಅವಲಂಬಿಸಿತ್ತು. ಐಗುಪ್ತದಿಂದ ಇಟಲಿಯ ವರೆಗೆ ಪ್ರಯಾಣಿಸುವಾಗ, ಒಳ್ಳೆಯ ಹವಾಮಾನವಿದ್ದಾಗ್ಯೂ ಎದುರುಗಾಳಿಯ ವಿರುದ್ಧ ಸತತವಾಗಿ ಹೋರಾಡಬೇಕಿತ್ತು. ಅತ್ಯಂತ ಹತ್ತಿರದ ದಾರಿಯು, ರೋದ ಇಲ್ಲವೆ ಮುರದ ಮೂಲಕ ಅಥವಾ ಏಷಿಯ ಮೈನರ್‌ನಲ್ಲಿರುವ ಲುಕೀಯ ತೀರದ ಬೇರೆ ಯಾವುದಾದರೊಂದು ಬಂದರಿನ ಮೂಲಕ ಹಾದು ಹೋಗುವುದೇ ಆಗಿತ್ತು. ಒಮ್ಮೆ ದವಸಧಾನ್ಯಗಳ ಹಡಗಾದ ಐಸಿಸ್‌, ಬಿರುಗಾಳಿಯ ಕಾರಣ ಹಾದಿತಪ್ಪಿ, ಆ್ಯಲೆಕ್ಸಾಂಡ್ರಿಯದಿಂದ ಹೊರಟು 70 ದಿನಗಳ ತರುವಾಯ ಪೈರೀಅಸ್‌ ಬಂದರನ್ನು ತಲಪಿತು. ವಾಯವ್ಯ ಮಾರುತಗಳ ಸಹಾಯದಿಂದ ಇಟಲಿಯಿಂದ ಹಿಂದಿರುಗುವ ಪ್ರಯಾಣವನ್ನು ಈ ಹಡಗು ಬಹುಶಃ 20ರಿಂದ 25 ದಿನಗಳಲ್ಲಿ ಮುಗಿಸಸಾಧ್ಯವಿದೆ. ಇದೇ ಪ್ರಯಾಣವನ್ನು ಭೂಮಾರ್ಗದಲ್ಲಿ ಯಾವುದೇ ದಿಕ್ಕಿನಿಂದ ಮಾಡಿದರೂ, ಒಳ್ಳೆಯ ಹವಾಮಾನವಿದ್ದರೂ 150ಕ್ಕಿಂತಲೂ ಹೆಚ್ಚಿನ ದಿನಗಳು ಬೇಕಾಗುವವು.

ಸಮುದ್ರದಾಚೆಗೆ ಒಯ್ಯಲ್ಪಟ್ಟ ಸುವಾರ್ತೆ

ಪೌಲನಿಗೆ ಸಮಯೋಚಿತವಲ್ಲದ ಸಮುದ್ರಯಾನದ ಅಪಾಯಗಳ ಅರಿವಿತ್ತು. ಸೆಪ್ಟೆಂಬರ್‌ನ ಕೊನೆಯ ಭಾಗದಲ್ಲಿ ಇಲ್ಲವೆ ಅಕ್ಟೋಬರ್‌ ತಿಂಗಳಿನ ಆದಿಭಾಗದಲ್ಲಿ ಪ್ರಯಾಣ ಮಾಡುವುದು ಬೇಡವೆಂದೂ ಅವನು ಸಲಹೆನೀಡಿದನು. ಅವನು ಹೇಳಿದ್ದು: “ಜನರೇ, ಈ ಪ್ರಯಾಣದಿಂದ ಸರಕಿಗೂ ಹಡಗಿಗೂ ಮಾತ್ರವಲ್ಲದೆ ನಮ್ಮ ಪ್ರಾಣಗಳಿಗೂ ಕಷ್ಟವೂ ಬಹು ನಷ್ಟವೂ ಸಂಭವಿಸುವದೆಂದು ನನಗೆ ತೋರುತ್ತದೆ.” (ಅ. ಕೃತ್ಯಗಳು 27:9, 10) ಆದರೆ ಹಡಗಿನ ಅಧಿಕಾರಿಯು ಆ ಮಾತುಗಳನ್ನು ಕಡೆಗಣಿಸಿದ್ದರಿಂದ, ಅದು ಮಾಲ್ಟದಲ್ಲಾದ ಹಡಗೊಡೆತದಲ್ಲಿ ಪರಿಣಮಿಸಿತು.

ಪೌಲನು ತನ್ನ ಮಿಷನೆರಿ ಸೇವೆಯನ್ನು ಅಂತ್ಯಗೊಳಿಸುವುದರೊಳಗೆ, ಕಡಿಮೆಪಕ್ಷ ನಾಲ್ಕು ಬಾರಿಯಾದರೂ ಹಡಗೊಡೆತವನ್ನು ಅನುಭವಿಸಿದ್ದನು. (ಅ. ಕೃತ್ಯಗಳು 27:41-44; 2 ಕೊರಿಂಥ 11:25) ಆದರೂ, ಇಂತಹ ಘಟನೆಗಳ ಕುರಿತಾದ ಅನುಚಿತವಾದ ಕಳವಳವು, ಸುವಾರ್ತೆಯ ಆದಿ ಪ್ರಚಾರಕರನ್ನು ಸಮುದ್ರಯಾನ ಮಾಡುವುದರಿಂದ ತಡೆಯಲಿಲ್ಲ. ಲಭ್ಯವಿದ್ದ ಸಂಚಾರದ ಎಲ್ಲ ಮಾಧ್ಯಮಗಳನ್ನು ಅವರು ರಾಜ್ಯದ ಸಂದೇಶವನ್ನು ಹಬ್ಬಿಸಲಿಕ್ಕಾಗಿ ಉಪಯೋಗಿಸಿಕೊಂಡರು. ಹೀಗೆ ಯೇಸುವಿನ ಆಜ್ಞೆಗೆ ವಿಧೇಯತೆ ತೋರಿಸುತ್ತಾ, ಭೂವ್ಯಾಪಕವಾಗಿ ಸಾಕ್ಷಿಯು ನೀಡಲ್ಪಟ್ಟಿತು. (ಮತ್ತಾಯ 28:19, 20; ಅ. ಕೃತ್ಯಗಳು 1:8) ಅವರ ಹುರುಪಿನ ಕಾರಣ, ಅವರ ಮಾದರಿಯನ್ನು ಅನುಸರಿಸಿರುವವರ ನಂಬಿಕೆಯ ಕಾರಣ, ಮತ್ತು ಯೆಹೋವನ ಪವಿತ್ರಾತ್ಮದ ಮಾರ್ಗದರ್ಶನದ ಕಾರಣ, ಸುವಾರ್ತೆಯು ಈ ಭೂನಿವಾಸದ ಮೂಲೆ ಮೂಲೆಯನ್ನೂ ತಲಪಿದೆ.

[ಪುಟ 42 ರಲ್ಲಿರುವ ಚಿತ್ರ ಕೃಪೆ]

Pictorial Archive (Near Eastern History) Est.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ