ನಿಮ್ಮ ಆಲೋಚನಾಕ್ರಮವನ್ನು ಯಾರು ರೂಪಿಸುತ್ತಾರೆ?
“ನಾನು ಏನು ಯೋಚಿಸಬೇಕೆಂದು ನನಗೆ ಯಾರೂ ಹೇಳಬೇಕಾಗಿಲ್ಲ! ಮತ್ತು ನಾನು ಏನು ಮಾಡಬೇಕೆಂಬುದನ್ನೂ ಯಾರೂ ಹೇಳುವ ಅಗತ್ಯವಿಲ್ಲ!” ಇಂತಹ ಖಡಾಖಂಡಿತವಾದ ಹೇಳಿಕೆಗಳನ್ನು ನೀಡುವುದು, ಒಬ್ಬನಿಗೆ ತನ್ನ ಸ್ವಂತ ತೀರ್ಮಾನದಲ್ಲಿ ಸಾಕಷ್ಟು ವಿಶ್ವಾಸವಿದೆ ಎಂಬುದನ್ನು ಅರ್ಥೈಸುತ್ತದೆ. ನಿಮಗೂ ಹಾಗೆಯೇ ಅನಿಸುತ್ತದೋ? ನಿಮಗಾಗಿ ಬೇರೆ ಯಾರೊಬ್ಬರೂ ತೀರ್ಮಾನಗಳನ್ನು ಮಾಡಬಾರದೆಂಬುದು ನಿಜವಾದರೂ, ಒಳ್ಳೆಯ ಬುದ್ಧಿವಾದವಾಗಿರಬಹುದಾದ ವಿಷಯವನ್ನು ಕೂಡಲೇ ತಿರಸ್ಕರಿಸುವುದು ವಿವೇಕಯುತವೊ? ನೀವು ಬುದ್ಧಿವಂತ ತೀರ್ಮಾನಗಳನ್ನು ಮಾಡುವಂತೆ ಯಾರೂ ಸಹಾಯ ಮಾಡಸಾಧ್ಯವಿಲ್ಲವೊ? ಅದಿರಲಿ, ನಿಮ್ಮ ಅರಿವಿಲ್ಲದೆಯೇ ನಿಮ್ಮ ಆಲೋಚನಾಕ್ರಮವನ್ನು ಯಾರೂ ರೂಪಿಸುತ್ತಿಲ್ಲವೆಂದು ನೀವು ಖಚಿತವಾಗಿ ಹೇಳಬಲ್ಲಿರೊ?
ಉದಾಹರಣೆಗೆ, ಎರಡನೆಯ ಜಾಗತಿಕ ಯುದ್ಧವು ಆರಂಭವಾಗುವ ಮುಂಚೆ, ಹಿಟ್ಲರನ ಪ್ರಚಾರ ಸಚಿವನಾದ ಯೋಸೆಫ್ ಗಬಲ್ಸ್, ಜರ್ಮನಿಯ ಚಿತ್ರೋದ್ಯಮದ ಅಧಿಕಾರವನ್ನು ವಹಿಸಿಕೊಂಡನು. ಏಕೆಂದರೆ, ಚಲನ ಚಿತ್ರೋದ್ಯಮವು “ಜನರ ವಿಚಾರಗಳನ್ನು ಮತ್ತು ಹೀಗೆ ಅವರ ವರ್ತನೆಯನ್ನು ಪ್ರಭಾವಿಸ”ಸಾಧ್ಯವಿರುವ ಅತ್ಯಂತ ಶಕ್ತಿಶಾಲಿ ಅಸ್ತ್ರವೆಂಬುದನ್ನು ಅವನು ಮನಗಂಡನು. (ಪ್ರಚಾರ ಮತ್ತು ಜರ್ಮನ್ ಸಿನೆಮ 1933-1945, ಇಂಗ್ಲಿಷ್.) ಅವನು ಸಾಮಾನ್ಯ ಜನರನ್ನು, ಅಂದರೆ ಸಾಧಾರಣ, ವಿಚಾರಶೀಲ ಜನರನ್ನು ನವಿರಾಗಿ ವಂಚಿಸಿ, ನಾಸಿ ತತ್ವಜ್ಞಾನವನ್ನು ಅವರು ಕಣ್ಣುಮುಚ್ಚಿ ಅನುಸರಿಸುವಂತೆ ಚಲನ ಚಿತ್ರಗಳನ್ನು ಮತ್ತು ಇತರ ಮಾಧ್ಯಮಗಳನ್ನು ಬಹಳ ಪರಿಣಾಮಕಾರಿಯಾಗಿ ಉಪಯೋಗಿಸಿದನೆಂಬುದು ಬಹುಶಃ ನಿಮಗೆ ಗೊತ್ತಿದೆ.
ನೀವು ಹೇಗೆ ಆಲೋಚಿಸುತ್ತೀರಿ ಮತ್ತು ಆ ಕಾರಣ ಹೇಗೆ ವರ್ತಿಸುತ್ತೀರಿ ಎಂಬುದು, ನೀವು ಯಾರಿಗೆ ಕಿವಿಗೊಡುತ್ತೀರೊ ಅವರ ಅನಿಸಿಕೆಗಳು ಮತ್ತು ದೃಷ್ಟಿಕೋನಗಳಿಂದ ಯಾವುದಾದರೊಂದು ರೀತಿಯಲ್ಲಿ ಯಾವಾಗಲೂ ಪ್ರಭಾವಿಸಲ್ಪಡುತ್ತದೆ ಎಂಬುದು ಒಂದು ವಾಸ್ತವಿಕ ಸಂಗತಿಯಾಗಿದೆ. ಇದು ಅನಪೇಕ್ಷಣೀಯ ವಿಷಯವಾಗಿರಬೇಕೆಂದಲ್ಲ. ಆದರೆ ಇವರು, ನಿಮ್ಮ ಕುರಿತು ಯಥಾರ್ಥವಾಗಿ ಚಿಂತಿಸುವ ಶಿಕ್ಷಕರು, ಮಿತ್ರರು, ಇಲ್ಲವೆ ಹೆತ್ತವರಂತಹ ಜನರಾಗಿದ್ದರೆ, ನೀವು ಅವರ ಸಲಹೆ ಮತ್ತು ಬುದ್ಧಿವಾದದಿಂದ ಬಹಳವಾಗಿ ಪ್ರಯೋಜನ ಪಡೆದುಕೊಳ್ಳುವಿರಿ. ಆದರೆ, ಇವರು ಸ್ವಾರ್ಥಪರರು ಮತ್ತು ಸ್ವತಃ ದಾರಿತಪ್ಪಿದವರೂ ಇಲ್ಲವೆ ಭ್ರಷ್ಟ ಆಲೋಚನೆಯುಳ್ಳವರೂ ಆಗಿದ್ದು, ಅಪೊಸ್ತಲ ಪೌಲನು ವರ್ಣಿಸಿದಂತೆ “ಮನೋವಂಚಕರು” (NW) ಆಗಿದ್ದರೆ, ಎಚ್ಚರದಿಂದಿರಿ!—ತೀತ 1:10; ಧರ್ಮೋಪದೇಶಕಾಂಡ 13:6-8.
ಆದುದರಿಂದ, ಯಾರೂ ನಿಮ್ಮನ್ನು ಪ್ರಭಾವಿಸಸಾಧ್ಯವಿಲ್ಲವೆಂಬ ಉದಾಸೀನ ಮನೋಭಾವವನ್ನು ಎಂದಿಗೂ ಬೆಳೆಸಿಕೊಳ್ಳಬೇಡಿ. (ಹೋಲಿಸಿ 1 ಕೊರಿಂಥ 10:12.) ಅದನ್ನು ಒಪ್ಪಿಕೊಳ್ಳಲು ನಿಮಗೆ ಮನಸ್ಸಿರದಿದ್ದರೂ ಅದು ನಿಮ್ಮ ಅರಿವಿಲ್ಲದೆಯೇ ಈಗಾಗಲೇ ಸಂಭವಿಸುತ್ತಿರಬಹುದು. ಖರೀದಿಮಾಡಲು ಹೋಗುವಾಗ, ನೀವು ಖರೀದಿಸಲು ನಿರ್ಧರಿಸಿರುವ ಉತ್ಪನ್ನದ ಚಿಕ್ಕ ಉದಾಹರಣೆಯನ್ನು ಪರಿಗಣಿಸಿರಿ. ಅದು ಯಾವಾಗಲೂ ಒಂದು ವ್ಯಕ್ತಿಗತ ಹಾಗೂ ಯುಕ್ತವಾದ ತೀರ್ಮಾನವಾಗಿರುತ್ತದೋ? ಅಥವಾ, ನೀವೆಂದೂ ಭೇಟಿಯಾಗಿರದ ಜನರು ನಿಮ್ಮ ಆಯ್ಕೆಯನ್ನು ನವಿರಾಗಿ, ಆದರೆ ಅಷ್ಟೇ ಶಕ್ತಿಯುತವಾಗಿ ಪ್ರಭಾವಿಸುತ್ತಾರೊ? ಪರೀಕ್ಷಕ ಪತ್ರಕರ್ತರಾದ ಎರಿಕ್ ಕ್ಲಾರ್ಕ್ ಹೌದೆಂದು ನೆನಸುತ್ತಾರೆ. ಅವರು ಹೇಳುವುದು, “ನಾವು ಜಾಹೀರಾತಿಗೆ ಎಷ್ಟು ಹೆಚ್ಚು ಒಡ್ಡಲ್ಪಡುತ್ತೇವೊ ಅಷ್ಟೇ ಹೆಚ್ಚಾಗಿ ಅದರಿಂದ ಪ್ರಭಾವಿತರಾಗುತ್ತೇವೆಂಬುದು ಖಂಡಿತ. ಆದರೆ, ಆ ಪ್ರಭಾವವನ್ನು ನಾವು ಗಮನಿಸದೇ ಇರಬಹುದು.” ಜಾಹೀರಾತುಗಳು ಎಷ್ಟು ಪರಿಣಾಮಕಾರಿಯಾಗಿವೆ ಎಂದು ಜನರನ್ನು ಕೇಳಿದಾಗ, “ಅದು ಪ್ರಭಾವಕಾರಿಯಾಗಿದೆ ಎಂದು ಹೆಚ್ಚಿನ ಜನರು ಒಪ್ಪಿಕೊಳ್ಳುವುದಾದರೂ, ತಮ್ಮ ಮೇಲೆ ಅದರ ಆಟ ನಡೆಯುವುದಿಲ್ಲ” ಎಂದು ಅವರಿಗೆ ಅನಿಸುವುದಾಗಿ ಅವರು ವರದಿಸುತ್ತಾರೆ. ತಮ್ಮನ್ನು ಹೊರತು, ಬೇರೆ ಎಲ್ಲರೂ ಸುಲಭಭೇದ್ಯರೆಂದು ಜನರು ಭಾವಿಸಿಕೊಳ್ಳುತ್ತಾರೆ. “ತಾವು ಮಾತ್ರ ಅಬಾಧಿತರೆಂದು ತೋರುತ್ತದೆ.”—ದ ವಾಂಟ್ ಮೇಕರ್ಸ್.
ಸೈತಾನನ ಅಚ್ಚಿನೊಳಗೆ ತುರುಕಿಸಲ್ಪಟ್ಟಿದ್ದೀರೋ?
ನೀವು ಅನುದಿನವೂ ಜಾಹೀರಾತುಗಳ ಪ್ರಭಾವಕ್ಕೆ ಒಡ್ಡಲ್ಪಡುವುದರಿಂದ ಅಷ್ಟೇನೂ ಗಂಭೀರವಾದ ಪರಿಣಾಮಗಳಾಗದೆ ಇರಬಹುದು. ಆದರೂ ಅದಕ್ಕಿಂತಲೂ ಹೆಚ್ಚು ಅಪಾಯಕರವಾದ ಇನ್ನೊಂದು ಪ್ರಭಾವವಿದೆ. ಸೈತಾನನು ಮಹಾ ಕುತಂತ್ರಿಯೆಂದು ಬೈಬಲು ಸ್ಪಷ್ಟವಾಗಿ ತಿಳಿಸುತ್ತದೆ. (ಪ್ರಕಟನೆ 12:9) ಅವನ ತತ್ವಜ್ಞಾನವು ಒಬ್ಬ ಜಾಹೀರಾತು ನಿಯೋಗಿಯ ವಿಚಾರದಂತೆಯೇ ಇದೆ. ಗಿರಾಕಿಗಳನ್ನು ಎರಡು ವಿಧಗಳಲ್ಲಿ, ಅಂದರೆ “ದುಷ್ಪ್ರೇರಣೆಯಿಂದ ಸೆಳೆಯುವ ಮೂಲಕ ಇಲ್ಲವೆ ಅವರನ್ನು ಒಗ್ಗಿಸುವ ಮೂಲಕ” ಪ್ರಭಾವಿಸಸಾಧ್ಯವೆಂದು ಆ ನಿಯೋಗಿಯು ಹೇಳಿದನು. ಇಂತಹ ನವಿರಾದ ತಂತ್ರಗಳನ್ನು ಬಳಸುವ ಪ್ರಚಾರಕರು ಮತ್ತು ಜಾಹೀರಾತುಗಾರರು, ನಿಮ್ಮ ಆಲೋಚನಾಕ್ರಮವನ್ನು ರೂಪಿಸಶಕ್ತರಾಗಿರುವುದಾದರೆ, ತದ್ರೀತಿಯ ಯುಕ್ತಿಗಳನ್ನು ಬಳಸುವುದರಲ್ಲಿ ಸೈತಾನನು ಇನ್ನೆಷ್ಟು ನಿಪುಣನಾಗಿರುವನು!—ಯೋಹಾನ 8:44.
ಅಪೊಸ್ತಲ ಪೌಲನಿಗೆ ಇದು ತಿಳಿದಿತ್ತು. ತನ್ನ ಜೊತೆ ಕ್ರೈಸ್ತರಲ್ಲಿ ಕೆಲವರು ಅಜಾಗರೂಕರಾಗಿ, ಸೈತಾನನ ವಂಚನೆಗೆ ಬಲಿಬೀಳುವರೆಂದು ಅವನು ಭಯಪಟ್ಟನು. ಅವನು ಬರೆದುದು: “ಆದರೆ ಹೇಗೆ ಹವ್ವಳು ಸರ್ಪದ ಕುಯುಕ್ತಿಗೆ ಒಳಬಿದ್ದು ಮೋಸಹೋದಳೋ ಹಾಗೆಯೇ ನಿಮ್ಮ ಮನಸ್ಸು ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟುಹೋದೀತೆಂದು ನನಗೆ ಭಯವುಂಟು.” (2 ಕೊರಿಂಥ 11:3) ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರಿ. ಇಲ್ಲದಿದ್ದರೆ, ಪ್ರಚಾರ ಮತ್ತು ಒಗ್ಗಿಸುವಿಕೆಯು ಪರಿಣಾಮಕಾರಿಯಾಗಿದ್ದರೂ, “ತಮ್ಮ ಮೇಲೆ ಅವುಗಳ ಆಟ ನಡೆಯುವುದಿಲ್ಲ” ಎಂದು ನೆನಸುವ ಜನರಂತೆ ನೀವೂ ಇರುವಿರಿ. ಕ್ರೂರತೆ, ನೀತಿಭ್ರಷ್ಟತೆ, ಮತ್ತು ಕಪಟತನದಿಂದ ಗುರುತಿಸಲ್ಪಡುವ ಈ ಸಂತತಿಯ ಮೇಲೆ ಪೈಶಾಚಿಕ ಪ್ರಚಾರವು ಪ್ರಭಾವಕಾರಿಯಾಗಿದೆ ಎಂಬುದು ಎಲ್ಲೆಡೆಯೂ ಸುಸ್ಪಷ್ಟವಾಗಿದೆ.
ಆದುದರಿಂದಲೇ, “ಇಹಲೋಕದ ನಡವಳಿಕೆಯನ್ನು ಅನುಸರಿಸದೆ” ಇರುವಂತೆ ಪೌಲನು ತನ್ನ ಜೊತೆ ವಿಶ್ವಾಸಿಗಳನ್ನು ನಮ್ರವಾಗಿ ಕೇಳಿಕೊಂಡನು. (ರೋಮಾಪುರ 12:2) ಒಬ್ಬ ಬೈಬಲ್ ಭಾಷಾಂತರಕಾರನು, ಪೌಲನ ಮಾತುಗಳನ್ನು ಹೀಗೆ ವಿವರಿಸಿದನು: “ಲೋಕವು ನಿಮ್ಮನ್ನು ಅದರ ಅಚ್ಚಿನೊಳಗೆ ತುರುಕಿಸುವಂತೆ ಬಿಡಬೇಡಿರಿ.” (ರೋಮಾಪುರ 12:2, ಫಿಲಿಪ್ಸ್) ಹಿಂದಿನ ಕಾಲದ ಒಬ್ಬ ಕುಂಬಾರನು ತಾನು ಬಯಸುವ ಅಚ್ಚಿನೊಳಗೆ ಮಣ್ಣನ್ನು ತುರುಕಿಸಿ, ಹೇಗೆ ಅಲ್ಲಿರುವ ಗುರುತುಗಳು ಮತ್ತು ವೈಶಿಷ್ಟ್ಯಗಳು ಆ ಮಣ್ಣಿನ ಮೇಲೆ ಮೂಡುವಂತೆ ಮಾಡುತ್ತಿದ್ದನೋ, ಹಾಗೆಯೇ ನಿಮ್ಮನ್ನು ತನ್ನ ಅಚ್ಚಿನೊಳಗೆ ತುರುಕಿಸಲು ಸೈತಾನನು ಎಲ್ಲ ಮಾಧ್ಯಮಗಳನ್ನು ಪ್ರಯೋಗಿಸಿ ನೋಡುವನು. ಇದನ್ನು ಮಾಡಲು, ಸೈತಾನನು ಲೋಕದ ರಾಜನೀತಿ, ವಾಣಿಜ್ಯ, ಧರ್ಮ, ಹಾಗೂ ಮನೋರಂಜನೆಯನ್ನು ಸಜ್ಜುಗೊಳಿಸಿದ್ದಾನೆ. ಅವನ ಪ್ರಭಾವವು ಎಷ್ಟು ವ್ಯಾಪಕವಾಗಿದೆ? ಅದು ಅಪೊಸ್ತಲ ಯೋಹಾನನ ದಿನದಲ್ಲಿ ಎಷ್ಟು ವ್ಯಾಪಕವಾಗಿತ್ತೊ ಈಗಲೂ ಅಷ್ಟೇ ಇದೆ. ಯೋಹಾನನು ಹೇಳಿದ್ದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.” (1 ಯೋಹಾನ 5:19; 2 ಕೊರಿಂಥ 4:4ನ್ನೂ ನೋಡಿರಿ.) ಜನರನ್ನು ಸೆಳೆದು, ಅವರ ಆಲೋಚನಾಕ್ರಮವನ್ನು ಕೆಡಿಸುವ ಸೈತಾನನ ಸಾಮರ್ಥ್ಯದ ಕುರಿತು ನಿಮಗೆ ಒಂದಿಷ್ಟು ಸಂಶಯವಾದರೂ ಇರುವಲ್ಲಿ, ದೇವರಿಗೆ ಸಮರ್ಪಿತವಾದ ಇಸ್ರಾಯೇಲ್ ಜನಾಂಗವನ್ನು ಅವನೆಷ್ಟು ಪರಿಣಾಮಕಾರಿಯಾಗಿ ಸೆಳೆದನೆಂಬುದನ್ನು ಜ್ಞಾಪಿಸಿಕೊಳ್ಳಿರಿ. (1 ಕೊರಿಂಥ 10:6-12) ಇದು ನಿಮಗೂ ಸಂಭವಿಸಬಲ್ಲದೊ? ನಿಮ್ಮ ಮನಸ್ಸನ್ನು ಸೈತಾನನ ದುಷ್ಪ್ರೇರಕ ಪ್ರಭಾವಕ್ಕೆ ಒಳಗಾಗುವಂತೆ ಬಿಡುವುದಾದರೆ, ಅದು ಸಂಭವಿಸಬಹುದು.
ಸಂಭವಿಸುತ್ತಿರುವ ವಿಷಯಗಳ ಅರಿವು ನಿಮಗಿರಲಿ
ಸಾಮಾನ್ಯವಾಗಿ, ಇಂತಹ ಮೋಸಕರ ಶಕ್ತಿಗಳು ನಿಮ್ಮ ಆಲೋಚನಾಕ್ರಮವನ್ನು ಪ್ರಭಾವಿಸುವಂತೆ ನೀವು ಅನುಮತಿಸುವಲ್ಲಿ ಮಾತ್ರ ಅವು ಪರಿಣಾಮಕಾರಿಯಾಗಿರುತ್ತವೆ. ದ ಹಿಡನ್ ಪರ್ಸುವೇಡರ್ಸ್ ಎಂಬ ತನ್ನ ಪುಸ್ತಕದಲ್ಲಿ ವ್ಯಾನ್ಸ್ ಪ್ಯಾಕರ್ಡ್ ಈ ಅಂಶವನ್ನು ಹೀಗೆ ನಿರೂಪಿಸಿದರು: “ಇಂತಹ [ಅಗೋಚರರಾದ] ಮನವೊಪ್ಪಿಸುವವರ ವಿರುದ್ಧ ನಮ್ಮಲ್ಲಿ ಆತ್ಮರಕ್ಷಣೆಯ ಪ್ರಬಲವಾದ ಸಾಧನ ಇನ್ನೂ ಇದೆ: ಮನವೊಪ್ಪಿಸಲ್ಪಡುವಂತೆ ನಾವು ಅನುಮತಿಸದೇ ಇರಸಾಧ್ಯವಿದೆ. ಬಹುಮಟ್ಟಿಗೆ ಎಲ್ಲ ಸನ್ನಿವೇಶಗಳಲ್ಲಿ ನಮಗೆ ಆ ಆಯ್ಕೆಯಿದೆ. ನಮ್ಮ ಸುತ್ತಲೂ ಸಂಭವಿಸುತ್ತಿರುವ ವಿಷಯಗಳ ಅರಿವು ನಮಗಿರುವಲ್ಲಿ, ನಮ್ಮನ್ನು ಸುಲಭವಾಗಿ ವಂಚಿಸಲು ಸಾಧ್ಯವಾಗಲಾರದು.” ಇದು ಪ್ರಚಾರ ಮತ್ತು ವಂಚನೆಯ ವಿಷಯದಲ್ಲೂ ಸತ್ಯವಾಗಿದೆ.
“ಸಂಭವಿಸುತ್ತಿರುವ ವಿಷಯಗಳ ಅರಿವು” ಇರಬೇಕಾದರೆ, ನಿಮ್ಮ ಮನಸ್ಸು ಒಳ್ಳೆಯ ಪ್ರಭಾವಗಳಿಗೆ ಒಳಗಾಗುವಂತೆ ಅನುಮತಿಸಬೇಕು. ಸ್ವಸ್ಥವಾದ ದೇಹದಂತೆ ಒಂದು ಸ್ವಸ್ಥವಾದ ಮನಸ್ಸು ಚೆನ್ನಾಗಿ ಕೆಲಸಮಾಡಬೇಕಾದರೆ, ಅದಕ್ಕೆ ಉತ್ತಮ ಪೋಷಣೆಯ ಅಗತ್ಯವಿದೆ. (ಜ್ಞಾನೋಕ್ತಿ 5:1, 2) ಅಲ್ಪಜ್ಞಾನವು ತಪ್ಪುಮಾಹಿತಿಯಷ್ಟೇ ಮಾರಕವಾಗಿರಬಲ್ಲದು. ನಿಮ್ಮ ಮನಸ್ಸನ್ನು ತಪ್ಪಾದ ವಿಚಾರಗಳು ಮತ್ತು ತತ್ವಜ್ಞಾನಗಳಿಂದ ರಕ್ಷಿಸಬೇಕೆಂಬುದು ಸತ್ಯವಾಗಿದ್ದರೂ, ನಿಮಗೆ ನೀಡಲ್ಪಡುವ ಎಲ್ಲ ಬುದ್ಧಿವಾದ ಇಲ್ಲವೆ ಮಾಹಿತಿಯ ಬಗ್ಗೆ ಒಂದು ವಿಮರ್ಶಾತ್ಮಕ ಹಾಗೂ ಸಿನಿಕ ನೋಟವನ್ನು ಬೆಳೆಸಿಕೊಳ್ಳಬೇಡಿರಿ.—1 ಯೋಹಾನ 4:1.
ಪ್ರಾಮಾಣಿಕ ಮನವೊಪ್ಪಿಸುವಿಕೆಗೂ ಅಗೋಚರವಾದ ಪ್ರಭಾವಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಆದುದರಿಂದಲೇ ಅಪೊಸ್ತಲ ಪೌಲನು ಯೌವನಸ್ಥನಾದ ತಿಮೊಥೆಯನಿಗೆ, “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ ಹೋಗು”ವವರ ವಿಷಯದಲ್ಲಿ ಎಚ್ಚರದಿಂದಿರುವಂತೆ ಪ್ರೋತ್ಸಾಹಿಸಿದನು. ಆದರೆ ಪೌಲನು ಕೂಡಿಸಿ ಹೇಳಿದ್ದು: “ನೀನಾದರೋ ಕಲಿತು ದೃಢವಾಗಿ ನಂಬಿದ ಬೋಧನೆಗಳಲ್ಲಿ ನೆಲೆಯಾಗಿರು. ಕಲಿಸಿಕೊಟ್ಟವರು ಯಾರೆಂಬದನ್ನು ಆಲೋಚಿಸು.” (2 ತಿಮೊಥೆಯ 3:13, 14) ನಿಮ್ಮ ಮನಸ್ಸನ್ನು ಪ್ರವೇಶಿಸುವ ಪ್ರತಿಯೊಂದು ವಿಷಯವು ನಿಮ್ಮನ್ನು ಸ್ವಲ್ಪ ಮಟ್ಟಿಗಾದರೂ ಪ್ರಭಾವಿಸುವುದರಿಂದ, ‘ಕಲಿಸಿಕೊಡುವವರು ಯಾರೆಂಬದನ್ನು ತಿಳಿದುಕೊಳ್ಳುವುದೇ’ ಕೀಲಿ ಕೈಯಾಗಿದೆ. ಅಂದರೆ, ಅವರು ಸ್ವಹಿತವನ್ನಲ್ಲ ನಿಮ್ಮ ಹಿತವನ್ನು ಬಯಸುವ ಜನರೆಂಬ ವಿಷಯದಲ್ಲಿ ನೀವು ನಿಶ್ಚಿತರಾಗಿರಬೇಕು.
ಆಯ್ಕೆಯು ನಿಮ್ಮದಾಗಿದೆ. ಈ ಲೋಕದ ತತ್ವಜ್ಞಾನಗಳು ಮತ್ತು ಮೌಲ್ಯಗಳು ನಿಮ್ಮ ಆಲೋಚನಾಕ್ರಮವನ್ನು ಪ್ರಭಾವಿಸುವಂತೆ ಅನುಮತಿಸುವ ಮೂಲಕ, ನೀವು ‘ಇಹಲೋಕದ ನಡವಳಿಕೆಯನ್ನು ಅನುಸರಿಸಲು’ ಆಯ್ದುಕೊಳ್ಳಬಹುದು. (ರೋಮಾಪುರ 12:2) ಆದರೆ ಈ ಲೋಕಕ್ಕೆ ನಿಮ್ಮ ಕ್ಷೇಮದ ಬಗ್ಗೆ ಚಿಂತೆಯಿಲ್ಲ. ಆದುದರಿಂದಲೇ, ಅಪೊಸ್ತಲ ಪೌಲನು ಎಚ್ಚರಿಸುವುದು, “ಮನುಷ್ಯರ ಸಂಪ್ರದಾಯಗಳನ್ನೂ ಪ್ರಾಪಂಚಿಕಬಾಲಬೋಧೆಯನ್ನೂ ಅನುಸರಿಸುವವರು ನಿಮ್ಮಲ್ಲಿ ಬಂದು ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆಯಿಂದ ನಿಮ್ಮ ಮನಸ್ಸನ್ನು ಕೆಡಿಸಿ ನಿಮ್ಮನ್ನು ವಶಮಾಡಿಕೊಂಡಾರು, ಎಚ್ಚರಿಕೆಯಾಗಿರ್ರಿ.” (ಕೊಲೊಸ್ಸೆ 2:8) ಈ ವಿಧದಲ್ಲಿ ಸೈತಾನನ ಅಚ್ಚಿನೊಳಗೆ ತುರುಕಿಸಲ್ಪಡಲು, ಇಲ್ಲವೆ ‘ಮನಸ್ಸನ್ನು ಕೆಡಿಸಿ ವಶಮಾಡಲು’ ಪ್ರಯಾಸದ ಅವಶ್ಯವಿಲ್ಲ. ಅದು ಪರೋಕ್ಷವಾದ ಹೊಗೆಯಂತಿದೆ. ಅಂತಹ ಹೊಗೆಯಿಂದ ಮಲಿನಗೊಂಡ ಗಾಳಿಯನ್ನು ಸೇವಿಸುವುದರಿಂದಲೇ ನೀವು ಬಾಧಿಸಲ್ಪಡಸಾಧ್ಯವಿದೆ.
ನೀವು ಆ ‘ಗಾಳಿ’ಯನ್ನು ಸೇವಿಸದೇ ಇರಸಾಧ್ಯವಿದೆ. (ಎಫೆಸ 2:2) ಪೌಲನ ಬುದ್ಧಿವಾದವನ್ನು ಅನುಸರಿಸಿರಿ: “ನೂತನಮನಸ್ಸನ್ನು ಹೊಂದಿಕೊಂಡು ಪರಲೋಕಭಾವದವರಾಗಿರಿ. ಹೀಗಾದರೆ ದೇವರ ಚಿತ್ತಕ್ಕನುಸಾರವಾದದ್ದು ಅಂದರೆ ಉತ್ತಮವಾದದ್ದೂ ಮೆಚ್ಚಿಕೆಯಾದದ್ದೂ ದೋಷವಿಲ್ಲದ್ದೂ ಯಾವ ಯಾವದೆಂದು ವಿವೇಚಿಸಿ ತಿಳುಕೊಳ್ಳುವಿರಿ.” (ರೋಮಾಪುರ 12:2) ಇದಕ್ಕೆ ಖಂಡಿತವಾಗಿಯೂ ಪ್ರಯಾಸಪಡಬೇಕು. (ಜ್ಞಾನೋಕ್ತಿ 2:1-5) ಯೆಹೋವನು ಕುತಂತ್ರಿಯಲ್ಲ. ಆತನು ಬೇಕಾದ ಎಲ್ಲ ಮಾಹಿತಿಯನ್ನು ಒದಗಿಸುತ್ತಾನಷ್ಟೆ, ಆದರೆ, ಅದರಿಂದ ಪ್ರಯೋಜನ ಪಡೆದುಕೊಳ್ಳಲು ನೀವು ಅದಕ್ಕೆ ಕಿವಿಗೊಡಬೇಕು ಮತ್ತು ಅದು ನಿಮ್ಮ ಆಲೋಚನಾಕ್ರಮವನ್ನು ಪ್ರಭಾವಿಸುವಂತೆ ಅನುಮತಿಸಬೇಕು. (ಯೆಶಾಯ 30:20, 21; 1 ಥೆಸಲೊನೀಕ 2:13) “ಪರಿಶುದ್ಧಗ್ರಂಥ”ಗಳಲ್ಲಿ, ಅಂದರೆ ದೇವರ ಪ್ರೇರಿತ ವಾಕ್ಯವಾದ ಬೈಬಲಿನಲ್ಲಿರುವ ಸತ್ಯದಿಂದ ಮನಸ್ಸನ್ನು ತುಂಬುವ ಇಚ್ಛೆ ನಿಮಗಿರಬೇಕು.—2 ತಿಮೊಥೆಯ 3:15-17.
ಯೆಹೋವನ ರೂಪಿಸುವಿಕೆಗೆ ಪ್ರತಿಕ್ರಿಯಿಸಿರಿ
ನೀವು ಯೆಹೋವನ ರೂಪಿಸುವಿಕೆಯಿಂದ ಪ್ರಯೋಜನ ಪಡೆಯಬೇಕಾದರೆ, ಮನಃಪೂರ್ವಕವಾದ ವಿಧೇಯ ಪ್ರತಿಕ್ರಿಯೆಯು ಅಗತ್ಯವಾಗಿದೆ. ಪ್ರವಾದಿಯಾದ ಯೆರೆಮೀಯನು ಒಬ್ಬ ಕುಂಬಾರನ ಮನೆಗೆ ಹೋಗುವಂತೆ ಹೇಳುವ ಮೂಲಕ ಯೆಹೋವನು ಇದನ್ನು ಶಕ್ತಿಯುತವಾಗಿ ದೃಷ್ಟಾಂತಿಸಿದನು. ಆ ಕುಂಬಾರನು ಜೇಡಿಮಣ್ಣಿನಿಂದ ಮಾಡುತ್ತಿದ್ದ ಪಾತ್ರೆಯು “ಅವನ ಕೈಯಲ್ಲಿ ಕೆಟ್ಟುಹೋಗಲು,” ಕುಂಬಾರನು ಅದರ ವಿಷಯದಲ್ಲಿ ತನ್ನ ಮನಸ್ಸನ್ನು ಬದಲಾಯಿಸುವುದನ್ನು ಯೆರೆಮೀಯನು ನೋಡಿದನು. ಆಗ ಯೆಹೋವನು ಹೇಳಿದ್ದು: “ಇಸ್ರಾಯೇಲ್ ವಂಶದವರೇ, ಈ ಕುಂಬಾರನು ಮಾಡಿದಂತೆ ನಾನು ನಿಮ್ಮನ್ನು ಮಾಡಕೂಡದೋ? . . . ಜೇಡಿಮಣ್ಣು ಕುಂಬಾರನ ಕೈಯಲ್ಲಿ ಹೇಗೋ, ಹಾಗೆಯೇ ನೀವು ನನ್ನ ಕೈಯಲ್ಲಿದ್ದೀರಿ.” (ಯೆರೆಮೀಯ 18:1-6) ಯೆಹೋವನು ತನ್ನ ಮನಬಂದಂತೆ ಇಸ್ರಾಯೇಲ್ಯರಿಗೆ ಆಕಾರವನ್ನು ಕೊಡಸಾಧ್ಯವಾಗುವಂತೆ, ಅವರು ಜೀವರಹಿತ ಮಣ್ಣಿನ ಮುದ್ದೆಗಳಾಗಿದ್ದರೆಂಬುದು ಇದರ ಅರ್ಥವೊ?
ಜನರು ತಮ್ಮ ಇಚ್ಛೆಗೆ ವಿರುದ್ಧವಾಗಿ ಕೆಲಸಗಳನ್ನು ಮಾಡುವಂತೆ ಯೆಹೋವನು ತನ್ನ ಸರ್ವಾಧಿಕಾರವನ್ನು ಎಂದಿಗೂ ಉಪಯೋಗಿಸುವುದಿಲ್ಲ. ಇಲ್ಲವೆ ಮಾನವ ಕುಂಬಾರರ ವಿಷಯದಲ್ಲಿ ಸತ್ಯವಾಗಿರುವಂತೆ, ಆತನು ಕುಂದುಕೊರತೆಗಳುಳ್ಳ ಉತ್ಪನ್ನಗಳಿಗೆ ಜವಾಬ್ದಾರನಾಗಿರುವುದಿಲ್ಲ. (ಧರ್ಮೋಪದೇಶಕಾಂಡ 32:4) ಯಾರನ್ನು ರೂಪಿಸಲು ಯೆಹೋವನು ಪ್ರಯತ್ನಿಸುತ್ತಾನೊ ಅವರು ಆತನ ಮಾರ್ಗದರ್ಶನಕ್ಕೆ ಪ್ರತಿರೋಧವನ್ನು ತೋರಿಸುವಾಗ ಕುಂದುಕೊರತೆಗಳು ಕಾಣಿಸಿಕೊಳ್ಳುತ್ತವೆ. ನಿಮ್ಮ ಮತ್ತು ಜೀವರಹಿತ ಮಣ್ಣಿನ ಮುದ್ದೆಯ ನಡುವೆ ಇರುವ ಒಂದು ದೊಡ್ಡ ವ್ಯತ್ಯಾಸವು ಇದೇ ಆಗಿದೆ. ನಿಮಗೆ ಇಚ್ಛಾ ಸ್ವಾತಂತ್ರ್ಯವಿದೆ. ಅದರ ಪ್ರಯೋಗದಿಂದ ನೀವು ಯೆಹೋವನ ರೂಪಿಸುವಿಕೆಗೆ ಪ್ರತಿಕ್ರಿಯಿಸಲು ಇಲ್ಲವೆ ಉದ್ದೇಶಪೂರ್ವಕವಾಗಿ ತಿರಸ್ಕರಿಸಿಬಿಡಲು ಆಯ್ದುಕೊಳ್ಳಬಹುದು.
ಎಂತಹ ಗಂಭೀರವಾದ ಪಾಠ! ನಾವು ಅಹಂಕಾರದಿಂದ, “ನಾನು ಏನು ಮಾಡಬೇಕೆಂಬುದನ್ನು ನನಗೆ ಯಾರೂ ಹೇಳಬೇಕಾಗಿಲ್ಲ!” ಎಂದು ಪ್ರತಿಪಾದಿಸುವುದಕ್ಕಿಂತಲೂ ಯೆಹೋವನ ಮಾತಿಗೆ ಕಿವಿಗೊಡುವುದು ಎಷ್ಟೋ ಉತ್ತಮ. ನಮಗೆಲ್ಲರಿಗೂ ಯೆಹೋವನ ಮಾರ್ಗದರ್ಶನದ ಅಗತ್ಯವಿದೆ. (ಯೋಹಾನ 17:3) “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು” ಎಂದು ಪ್ರಾರ್ಥಿಸಿದ ಕೀರ್ತನೆಗಾರನಾದ ದಾವೀದನಂತಿರಿ. (ಕೀರ್ತನೆ 25:4) ರಾಜ ಸೊಲೊಮೋನನು ಹೇಳಿದ ವಿಷಯವನ್ನು ಜ್ಞಾಪಿಸಿಕೊಳ್ಳಿರಿ: “ಜ್ಞಾನಿಯು ಇವುಗಳನ್ನು ಕೇಳಿ ಹೆಚ್ಚಾದ ಪಾಂಡಿತ್ಯವನ್ನು ಹೊಂದುವನು.” (ಜ್ಞಾನೋಕ್ತಿ 1:5) ನೀವು ಕಿವಿಗೊಡುವಿರೊ? ನೀವು ಹಾಗೆ ಮಾಡುವಲ್ಲಿ, ‘ಬುದ್ಧಿಯು ನಿಮಗೆ ಕಾವಲಾಗಿರುವದು, ವಿವೇಕವು ನಿಮ್ಮನ್ನು ಕಾಪಾಡುವದು.’—ಜ್ಞಾನೋಕ್ತಿ 2:11.