ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 4/1 ಪು. 23-27
  • ಪ್ರಮೋದವನದ ಅನ್ವೇಷಣೆಯಲ್ಲಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಮೋದವನದ ಅನ್ವೇಷಣೆಯಲ್ಲಿ
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪುನಃ ವ್ಯವಸಾಯಕ್ಕೆ
  • ದೇವರಲ್ಲಿನ ನಂಬಿಕೆಯು ಚೇತರಿಸುತ್ತದೆ
  • ನನ್ನ ಪ್ರಾರ್ಥನೆಗಳಿಗೆ ಉತ್ತರ
  • ಆತ್ಮಿಕ ಪ್ರಗತಿಯನ್ನು ಮಾಡುವುದು
  • ಸಂಕಟದ ಸಮಯದಲ್ಲಿ ಸಹಾಯ
  • ಉತ್ತಮವಾದ ಯಾವುದೊ ವಿಷಯಕ್ಕಾಗಿ ಪ್ರಯತ್ನಿಸುವುದು
  • ಬೆತೆಲ್‌—ಒಂದು ಅಪೂರ್ವವಾದ ಆತ್ಮಿಕ ಪ್ರಮೋದವನ
  • ನೀವು ನಿಮ್ಮನ್ನೇ ನೀಡಿಕೊಳ್ಳಲು ಸಾಧ್ಯವಿದೆಯೋ?
    2003 ನಮ್ಮ ರಾಜ್ಯದ ಸೇವೆ
  • ಬೆತೆಲ್‌ ಸೇವೆ—ಹೆಚ್ಚು ಸ್ವಯಂಸೇವಕರ ಅಗತ್ಯವಿದೆ
    1995 ನಮ್ಮ ರಾಜ್ಯದ ಸೇವೆ
  • ಇದು ನಿಮ್ಮ ಜೀವನದ ಅತ್ಯುತ್ತಮ ವೃತ್ತಿಯಾಗಿರಸಾಧ್ಯವೋ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನೂರು ವರ್ಷ ಆಗ್ತಿದ್ರೂ ಕಲೀತಾ ಇದ್ದೀನಿ!
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2024
ಇನ್ನಷ್ಟು
ಕಾವಲಿನಬುರುಜು—1999
w99 4/1 ಪು. 23-27

ಪ್ರಮೋದವನದ ಅನ್ವೇಷಣೆಯಲ್ಲಿ

ಪಾಸ್ಕಲ್‌ ಸ್ಟೀಸಿ ಅವರಿಂದ ಹೇಳಲ್ಪಟ್ಟಂತೆ

ಕತ್ತಲಾವರಿಸಿ, ಹೆಚ್ಚು ಸಮಯವಾಗಿದ್ದರಿಂದ, ದಕ್ಷಿಣ ಫ್ರಾನ್ಸಿನ ಬೇಸ್ಯೇ ಪಟ್ಟಣದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಧಾರ್ಮಿಕ ಪುಸ್ತಕಗಳ ಒಂದು ಅಂಗಡಿಯ ಹೊಸದಾಗಿ ಬಣ್ಣಹಚ್ಚಿದ ಗೋಡೆಯನ್ನು ಕಂಡು, ನನ್ನ ಮಿತ್ರ ಹಾಗೂ ನಾನು ಜರ್ಮನ್‌ ತತ್ವಜ್ಞಾನಿಯಾದ ನೀಚೀ ಅವರ ನುಡಿಗಳನ್ನು ದೊಡ್ಡ ದೊಡ್ಡ ಕಪ್ಪು ಅಕ್ಷರಗಳಲ್ಲಿ ಗೀಚಿದೆವು: ‘ದೇವರುಗಳು ಸತ್ತುಹೋಗಿದ್ದಾರೆ. ಲೋಕಾತೀತ ಪುರುಷನು (ಸೂಪರ್‌ಮ್ಯಾನ್‌) ಎಂದೆಂದಿಗೂ ಬಾಳಲಿ!’ ನನ್ನನ್ನು ಈ ರೀತಿಯ ವರ್ತನೆಗೆ ನಡೆಸಿದ್ದು ಯಾವುದು?

ನಾನು ಫ್ರಾನ್ಸ್‌ನಲ್ಲಿದ್ದ ಇಟ್ಯಾಲಿಯನ್‌ ಮೂಲದ ಒಂದು ಕ್ಯಾತೊಲಿಕ್‌ ಕುಟುಂಬದಲ್ಲಿ 1951ರಲ್ಲಿ ಜನಿಸಿದೆ. ನಾನು ಚಿಕ್ಕವನಾಗಿದ್ದಾಗ, ಇಟಲಿಯ ದಕ್ಷಿಣ ಭಾಗಕ್ಕೆ ರಜಾದಿನಗಳಲ್ಲಿ ಹೋಗುತ್ತಿದ್ದೆವು. ಅಲ್ಲಿ ಪ್ರತಿಯೊಂದು ಹಳ್ಳಿಯಲ್ಲಿ ಕನ್ಯೆ ಮರಿಯಳ ಮೂರ್ತಿ ಇರುತ್ತಿತ್ತು. ನಾನು ಈ ದೊಡ್ಡ ದೊಡ್ಡ ಮೂರ್ತಿಗಳನ್ನು ಮೆರವಣಿಗೆಯಲ್ಲಿ ನನ್ನ ಅಜ್ಜನೊಂದಿಗೆ ಹಿಂಬಾಲಿಸುತ್ತಿದ್ದೆನಾದರೂ, ಅವುಗಳಲ್ಲಿ ನನಗೆ ಒಂದಿಷ್ಟೂ ನಂಬಿಕೆಯಿರಲಿಲ್ಲ. ಜೆಸ್ಯೂಯಿಟರಿಂದ ನಡೆಸಲ್ಪಟ್ಟ ಒಂದು ಧಾರ್ಮಿಕ ಶಾಲೆಯಲ್ಲಿ ನಾನು ನನ್ನ ಮೂಲ ಶಿಕ್ಷಣವನ್ನು ಮುಗಿಸಿದೆ. ಆದರೂ, ದೇವರಲ್ಲಿ ನನ್ನ ನಂಬಿಕೆಯನ್ನು ನಿಜವಾಗಿಯೂ ಬಲಪಡಿಸಿದ ವಿಷಯವನ್ನು ಅಲ್ಲಿ ಕಲಿಸಿಕೊಟ್ಟದ್ದರ ಜ್ಞಾಪಕ ನನಗಿಲ್ಲ.

ವೈದ್ಯಕೀಯ ಶಿಕ್ಷಣಕ್ಕಾಗಿ ನಾನು ಮಾಂಟ್‌ಪೀಲ್ಯ ವಿಶ್ವವಿದ್ಯಾನಿಲಯಕ್ಕೆ ಸೇರಿದಾಗಲೇ ಜೀವಿತದ ಉದ್ದೇಶದ ಕುರಿತು ಪರ್ಯಾಲೋಚಿಲು ಆರಂಭಿಸಿದೆ. ನನ್ನ ತಂದೆಯವರು ಯುದ್ಧದಲ್ಲಿ ಗಾಯಗೊಂಡಿದ್ದ ಕಾರಣ, ಅವರು ಯಾವಾಗಲೂ ವೈದ್ಯರಿಂದ ಸುತ್ತುವರಿಯಲ್ಪಟ್ಟಿದ್ದರು. ಯುದ್ಧದ ಪರಿಣಾಮಗಳಿಂದ ಜನರಿಗೆ ಉಪಶಮನ ನೀಡಲು ಇಷ್ಟೊಂದು ಸಮಯ ಮತ್ತು ಶಕ್ತಿಯನ್ನು ವ್ಯಯಿಸುವುದಕ್ಕಿಂತಲೂ, ಯುದ್ಧವನ್ನು ಕೊನೆಗೊಳಿಸುವುದೇ ಹೆಚ್ಚು ಉತ್ತಮವಾಗಿರಲಾರದೋ? ಹಾಗಿದ್ದರೂ, ವಿಯೆಟ್ನಾಮ್‌ ಯುದ್ಧವು ಪೂರ್ಣ ಭರದಿಂದ ಸಾಗುತ್ತಿತ್ತು. ನನ್ನ ದೃಷ್ಟಿಯಲ್ಲಿ, ಶ್ವಾಸಕೋಶದ ಕ್ಯಾನ್ಸರಿನ ಏಕೈಕ ಚಿಕಿತ್ಸಾ ವಿಧಾನವು, ಅದರ ಮೂಲ ಕಾರಣವಾದ ಹೊಗೆಸೊಪ್ಪನ್ನು ನಿರ್ಮೂಲ ಮಾಡವುದೇ ಆಗಿತ್ತು. ವಿಕಾಸಶೀಲ ದೇಶಗಳಲ್ಲಿ ನ್ಯೂನಪೋಷಣೆಯಿಂದ ಮತ್ತು ಶ್ರೀಮಂತ ರಾಷ್ಟ್ರಗಳಲ್ಲಿ ಮಿತಿಮೀರಿ ತಿನ್ನುವುದರಿಂದ ಉಂಟಾಗುವ ಕಾಯಿಲೆಗಳ ಕುರಿತೇನು? ಶೋಚನೀಯ ಪರಿಸ್ಥಿತಿಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಪ್ರಯತ್ನಿಸುವ ಬದಲು, ಅದರ ಕಾರಣಗಳನ್ನು ತೆಗೆದುಹಾಕುವುದು ಉತ್ತಮವಲ್ಲವೋ? ಭೂಮಿಯ ಮೇಲೆ ಇಷ್ಟೊಂದು ಕಷ್ಟಾನುಭವ ಏಕಿದೆ? ಈ ಅಪಾಯಕರ ಸಮಾಜದಲ್ಲಿ ಏನೋ ಗಂಭೀರವಾದ ಕುಂದುಕೊರತೆಯಿದೆಯೆಂದು ಮತ್ತು ಅದಕ್ಕೆ ಸರಕಾರಗಳೇ ಕಾರಣವೆಂದು ನಾನು ಎಣಿಸಿದೆ.

ನನ್ನ ಅಚ್ಚುಮೆಚ್ಚಿನ ಪುಸ್ತಕವು ಒಬ್ಬ ಅರಾಜಕತಾವಾದಿಯಿಂದ ಬರೆಯಲ್ಪಟ್ಟಿತ್ತು. ಮತ್ತು ಅದರಲ್ಲಿದ್ದ ವಾಕ್ಯಗಳನ್ನು ನಾನು ಗೋಡೆಗಳ ಮೇಲೆ ಬರೆಯುತ್ತಿದ್ದೆ. ಕ್ರಮೇಣ, ನಾನು ಸಹ ನಂಬಿಕೆ ಇಲ್ಲವೆ ನೈತಿಕ ಮಟ್ಟಗಳಿಲ್ಲದೆ, ದೇವರಿಗೆ ಇಲ್ಲವೆ ಒಬ್ಬ ಯಜಮಾನನಿಗೆ ಅಧೀನನಾಗಲು ಇಷ್ಟಪಡದ ಒಬ್ಬ ಅರಾಜಕತಾವಾದಿಯಾದೆ. ನನ್ನ ಅಭಿಪ್ರಾಯದಲ್ಲಿ, ಧನವಂತರು ಮತ್ತು ಅಧಿಕಾರಶಾಹಿಗಳು ದೇವರು ಮತ್ತು ಧರ್ಮವನ್ನು ಕಂಡುಹಿಡಿದು, ಅವುಗಳ ಮೂಲಕ ಉಳಿದ ಎಲ್ಲ ಜನರ ಮೇಲೆ ಅಧಿಕಾರ ಚಲಾಯಿಸುತ್ತಾರೆ ಮತ್ತು ಅವರನ್ನು ಶೋಷಣೆಗೆ ಗುರಿಮಾಡುತ್ತಾರೆ. ‘ನಮಗಾಗಿ ನೀವು ಭೂಮಿಯಲ್ಲಿ ಕಷ್ಟಪಟ್ಟು ದುಡಿದರೆ, ಪರಲೋಕದ ಪ್ರಮೋದವನದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿರುವುದು’ ಎಂದು ಮೇಲ್ವರ್ಗದವರು ಹೇಳುತ್ತಿರುವಂತೆ ಅದು ತೋರಿತು. ಆದರೆ, ಅವರ ದೇವರುಗಳ ಕಾಲ ಈಗ ಮುಗಿದುಹೋಗಿತ್ತೆಂದು ಜನರಿಗೆ ತಿಳಿಸುವ ಅಗತ್ಯವಿತ್ತು. ಜನರಿಗೆ ಸಂದೇಶ ನೀಡುವ ಒಂದು ಮಾರ್ಗವು ಗೋಡೆಗಳ ಮೇಲೆ ಗೀಚುವುದಾಗಿತ್ತು.

ಈ ಕಾರಣ, ನನ್ನ ವಿದ್ಯಾಭ್ಯಾಸವು ಎರಡನೆಯ ಸ್ಥಾನಕ್ಕಿಳಿಯಿತು. ಈ ಸಮಯದಲ್ಲಿ ಬಂಡಾಯದ ವಾತಾವರಣವು ನೆಲೆಸಿದ್ದ ಮತ್ತೊಂದು ಮಾಂಟ್‌ಪೀಲ್ಯ ವಿಶ್ವವಿದ್ಯಾನಿಲಯದಲ್ಲಿ, ನಾನು ಭೂಗೋಳಶಾಸ್ತ್ರ ಮತ್ತು ಪರಿಸರವಿಜ್ಞಾನವನ್ನು ಅಧ್ಯಯನಿಸಲು ಬಯಸಿದೆ. ನಾನು ಪರಿಸರವಿಜ್ಞಾನವನ್ನು ಹೆಚ್ಚಾಗಿ ಅಭ್ಯಸಿಸಿದಂತೆ, ನಮ್ಮ ಸುಂದರ ಗ್ರಹವು ಮಲಿನಗೊಳಿಸಲ್ಪಡುತ್ತಿರುವುದನ್ನು ಕಂಡು ಬಹಳಷ್ಟು ಜುಗುಪ್ಸೆಗೊಂಡೆ.

ಪ್ರತಿ ವರ್ಷ ಬೇಸಗೆಯ ರಜಾದಿನಗಳಲ್ಲಿ, ನಾನು ವಾಹನಗಳಲ್ಲಿ ಬಿಟ್ಟಿಸವಾರಿ ಮಾಡಿ, ಯೂರೋಪಿನಾದ್ಯಂತ ಸಾವಿರಾರು ಕಿಲೊಮೀಟರುಗಳು ಸಂಚರಿಸಿದೆ. ಪ್ರಯಾಣಿಸುತ್ತಾ ಮತ್ತು ನೂರಾರು ವಾಹನಚಾಲಕರೊಂದಿಗೆ ಸಂಭಾಷಿಸುತ್ತಾ, ನಾನು ಈ ಮಾನವ ಸಮಾಜವನ್ನು ಬಾಧಿಸುತ್ತಿರುವ ದುಷ್ಟತನ ಹಾಗೂ ಅಳಿವನ್ನು ಕಣ್ಣಾರೆ ಕಂಡೆ. ಒಮ್ಮೆ ನಾನು ಪ್ರಮೋದವನದ ಹುಡುಕಾಟದಲ್ಲಿ ತೊಡಗಿದ್ದಾಗ, ಮನೋಹರವಾದ ಕ್ರೀಟ್‌ ದ್ವೀಪದ ಕೆಲವೊಂದು ಸೊಗಸಾದ ತೀರಗಳು ತೈಲದಿಂದ ತುಂಬಿರುವುದನ್ನು ನೋಡಿ ಬಹಳ ವ್ಯಥೆಪಟ್ಟೆ. ಭೂಮಿಯ ಯಾವ ಭಾಗದಲ್ಲಾದರೂ ಪ್ರಮೋದವನದ ಒಂದು ತುಂಡಾದರೂ ಇದ್ದೀತೊ?

ಪುನಃ ವ್ಯವಸಾಯಕ್ಕೆ

ಜನರು ಭೂಮಿಯ ಸಾಗುವಳಿಗೆ ಹಿಂದಿರುಗಿದರೆ, ಸಮಾಜದ ಎಲ್ಲಾ ಸಂಕಷ್ಟಗಳಿಗೆ ಪರಿಹಾರವನ್ನು ಒದಗಿಸಬಹುದೆಂದು ಫ್ರಾನ್ಸಿನ ಪರಿಸರವಿಜ್ಞಾನಿಗಳು ವಾದಿಸಿದರು. ನಾನು ಕಷ್ಟಪಟ್ಟು ದುಡಿಯಲು ಇಷ್ಟಪಟ್ಟೆ. ಅದಕ್ಕಾಗಿ ನಾನು, ದಕ್ಷಿಣ ಫ್ರಾನ್ಸಿನ ಸೇವೆನ್‌ ಪರ್ವತಗಳ ಬುಡದಲ್ಲಿರುವ ಒಂದು ಪುಟ್ಟ ಹಳ್ಳಿಯಲ್ಲಿ, ಒಂದು ಕಲ್ಲಿನ ಮನೆಯನ್ನು ಖರೀದಿಸಿದೆ. ಅದರ ಬಾಗಿಲಿನ ಮೇಲೆ “ಪ್ರಮೋದವನ ಈಗ” ಎಂಬ ಅಮೆರಿಕನ್‌ ಹಿಪ್ಪಿಗಳ ಘೋಷಣೆಯನ್ನು ಬರೆದೆ. ನಮ್ಮ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದ ಒಬ್ಬ ಜರ್ಮನ್‌ ಯುವತಿಯು ನನ್ನ ಸಂಗಾತಿಯಾದಳು. ಅವಳನ್ನು ಈ ಸಮಾಜದ ಪ್ರತಿನಿಧಿಯಾಗಿದ್ದ ಮೇಯರ್‌ (ಪೌರ ಸಭಾಧ್ಯಕ್ಷ)ನ ಮುಂದೆ ಕಾನೂನುಬದ್ಧವಾಗಿ ವಿವಾಹವಾಗಲು ನಾನು ಖಂಡಿತ ಒಪ್ಪುತ್ತಿರಲಿಲ್ಲ. ಅದಿರಲಿ, ಚರ್ಚಿನಲ್ಲಿ ವಿವಾಹವಾಗುವುದಂತೂ ಕನಸಿನಲ್ಲೂ ಅಸಾಧ್ಯವಾಗಿತ್ತು!

ಹೆಚ್ಚಿನ ಸಮಯ, ನಾವು ಪಾದರಕ್ಷೆಗಳನ್ನು ಬಳಸಲಿಲ್ಲ, ಮತ್ತು ನನಗೆ ಉದ್ದ ಕೂದಲೂ, ಕೆದರಿದ ಗಡ್ಡವೂ ಇತ್ತು. ಹಣ್ಣುಹಂಪಲು ಮತ್ತು ತರಕಾರಿಗಳ ವ್ಯವಸಾಯವು ನನ್ನನ್ನು ಆಕರ್ಷಿಸಿತು. ಬೇಸಗೆಯಲ್ಲಿ ಆಕಾಶವು ನೀಲಿಬಣ್ಣಕ್ಕೆ ತಿರುಗಿ, ಸಕೇಡ ಕೀಟಗಳ ಕೂಗು ಕೇಳಿಬಂತು. ಕುರುಚಲು ಪ್ರದೇಶದ ಹೂವುಗಳು ಸುವಾಸನೆಯನ್ನು ಹೊರಸೂಸಿದವು, ಮತ್ತು ನಾವು ಬೆಳೆಸುತ್ತಿದ್ದ ದ್ರಾಕ್ಷಿ ಹಾಗೂ ಅಂಜೂರದ ಹಣ್ಣುಗಳು ಎಷ್ಟೊಂದು ರಸಭರಿತವಾಗಿದ್ದವು! ನಾವು ಪ್ರಮೋದವನದಲ್ಲಿ ನಮ್ಮ ಗೂಡನ್ನು ಸ್ಥಾಪಿಸಿಕೊಂಡಿದ್ದೆವೋ ಎಂಬಂತೆ ತೋರಿತು.

ದೇವರಲ್ಲಿನ ನಂಬಿಕೆಯು ಚೇತರಿಸುತ್ತದೆ

ವಿಶ್ವವಿದ್ಯಾನಿಲಯದಲ್ಲಿ ನಾನು ಕೋಶೀಯ ಜೀವಶಾಸ್ತ್ರ, ಭ್ರೂಣಶಾಸ್ತ್ರ ಮತ್ತು ಅಂಗರಚನಾಶಾಸ್ತ್ರದ ಅಧ್ಯಯನ ನಡೆಸಿದ್ದ ಕಾರಣ, ಈ ಎಲ್ಲ ರಚನೆಗಳು ಮತ್ತು ಕಾರ್ಯವಿಧಾನಗಳ ಜಟಿಲತೆ ಹಾಗೂ ಸಾಮರಸ್ಯದಿಂದ ಬಹಳವಾಗಿ ಪ್ರಭಾವಿಸಲ್ಪಟ್ಟಿದ್ದೆ. ನಾನು ದಿನವೂ ಸೃಷ್ಟಿಯ ಕುರಿತು ಆಲೋಚಿಸಿ, ಅದನ್ನು ಕಣ್ಣಾರೆ ವೀಕ್ಷಿಸಸಾಧ್ಯವಿದ್ದ ಕಾರಣ, ಅದರ ಸೌಂದರ್ಯ ಮತ್ತು ಸಾಮರ್ಥ್ಯವು ನನ್ನನ್ನು ಬೆರಗುಗೊಳಿಸಿದವು. ದಿನೇ ದಿನೇ ಸೃಷ್ಟಿಯೆಂಬ ಪುಸ್ತಕವು ನನ್ನ ಮುಂದೆ ತೆರೆದುಕೊಳ್ಳುತ್ತಿತ್ತು. ಒಂದು ದಿನ, ನಾನು ಬೆಟ್ಟಗಳಲ್ಲಿ ಬಹಳ ಹೊತ್ತಿನವರೆಗೆ ಸುತ್ತಾಡುತ್ತಾ, ಜೀವಿತದ ಕುರಿತು ಆಳವಾಗಿ ಪರ್ಯಾಲೋಚಿಸಿದ ಬಳಿಕ, ಸೃಷ್ಟಿಕರ್ತನೊಬ್ಬನು ಇರಲೇಬೇಕೆಂಬ ತೀರ್ಮಾನಕ್ಕೆ ಬಂದೆ. ದೇವರಲ್ಲಿ ನಂಬಿಕೆಯಿಡುವ ತೀರ್ಮಾನವನ್ನು ನಾನು ಮಾಡಿದೆ. ಈ ಮೊದಲು ನನ್ನ ಮನಸ್ಸಿನಲ್ಲಿ ಒಂದು ಶೂನ್ಯಭಾವನೆ, ಅಥವಾ ಕೊರೆದುತಿನ್ನುವ ಒಂಟಿತನವನ್ನು ನಾನು ಅನುಭವಿಸಿದೆ. ನಾನು ದೇವರಲ್ಲಿ ನಂಬಲಾರಂಭಿಸಿದ ದಿನ, ‘ಪಾಸ್ಕಲ್‌, ನೀನು ಇನ್ನೆಂದಿಗೂ ಒಂಟಿಯಾಗಿರಲಾರೆ’ ಎಂದು ನನಗೆ ನಾನೆ ಹೇಳಿಕೊಂಡೆ. ಅದೊಂದು ಅದ್ಭುತಕರವಾದ ಭಾವನೆಯಾಗಿತ್ತು.

ಇದಾದ ಸ್ವಲ್ಪದರಲ್ಲಿ, ನನ್ನ ಸಂಗಾತಿ ಮತ್ತು ನನಗೆ, ಅಮಾನ್‌ಡೀನ್‌ ಎಂಬ ಪುಟ್ಟ ಹುಡುಗಿ ಜನಿಸಿದಳು. ಅವಳು ನನ್ನ ಕಣ್ಮಣಿಯಾಗಿದ್ದಳು. ಈಗ ನನಗೆ ದೇವರಲ್ಲಿ ನಂಬಿಕೆಯಿದ್ದ ಕಾರಣ, ನನಗೆ ತಿಳಿದಿದ್ದ ಕೆಲವೊಂದು ನೈತಿಕ ನಿಯಮಗಳನ್ನು ನಾನು ಗೌರವಿಸತೊಡಗಿದೆ. ಕದಿಯುವುದನ್ನು ಮತ್ತು ಸುಳ್ಳಾಡುವುದನ್ನು ನಾನು ನಿಲ್ಲಿಸಿದಾಗ, ನನ್ನ ಜೊತೆಗಾರರೊಂದಿಗೆ ಸಮಸ್ಯೆಗೊಳಗಾಗುವುದರಿಂದ ದೂರವಿರುವಂತೆ ಇದು ಸಹಾಯ ಮಾಡಿತೆಂದು ನಾನು ಬೇಗನೆ ಗ್ರಹಿಸಿದೆ. ಹೌದು, ನಮಗೆ ಸಮಸ್ಯೆಗಳಿದ್ದ ಕಾರಣ, ನಾನು ಕನಸುಕಂಡಿದ್ದ ಪೂರ್ತಿ ಪ್ರಮೋದವನ ಇದಾಗಿರಲಿಲ್ಲ ನಿಜ. ಸ್ಥಳೀಯ ದ್ರಾಕ್ಷಿ ತೋಟಗಾರರು ಕೀಟನಾಶಕಗಳು ಮತ್ತು ಸಸ್ಯನಾಶಕಗಳನ್ನು ಬಳಸಿದ ಕಾರಣ, ನನ್ನ ಬೆಳೆಗಳೂ ಹಾಳಾದವು. ದುಷ್ಟತನದ ಕಾರಣದ ಕುರಿತ ನನ್ನ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಕುಟುಂಬ ಜೀವಿತದ ಕುರಿತು ನಾನು ಬಹಳಷ್ಟು ಓದಿದ್ದರೂ, ನನ್ನ ಸಂಗಾತಿಯೊಂದಿಗೆ ಬಿರುಸಿನ ವಾಗ್ವಾದಗಳನ್ನು ಇದು ತಡೆಯಲಿಲ್ಲ. ನಮಗಿದ್ದದ್ದು ಕೆಲವೇ ಮಿತ್ರರಾದರೂ, ಅವರೆಲ್ಲರೂ ವಿಶ್ವಾಸಘಾತುಕರಾಗಿದ್ದರು. ನನ್ನ ಸಂಗಾತಿ ನನಗೆ ಅಪನಂಬಿಗಸ್ತಳಾಗಿರುವಂತೆಯೂ ಕೆಲವರು ಪ್ರಯತ್ನಿಸಿದರು. ಉತ್ತಮವಾದ ಬೇರೊಂದು ಉತ್ತಮ ಪ್ರಮೋದವನವು ಇರಲೇ ಬೇಕಿತ್ತು.

ನನ್ನ ಪ್ರಾರ್ಥನೆಗಳಿಗೆ ಉತ್ತರ

ನನ್ನದೇ ಆದ ರೀತಿಯಲ್ಲಿ ನಾನು ದೇವರಿಗೆ ಅನೇಕ ಬಾರಿ ಪ್ರಾರ್ಥಿಸಿ, ನನಗೆ ಮಾರ್ಗದರ್ಶನವನ್ನು ನೀಡುವಂತೆ ಬೇಡಿಕೊಂಡೆ. ಒಂದು ಆದಿತ್ಯವಾರ ಬೆಳಗ್ಗೆ, ಈರೆನ್‌ ಲೋಪೇಸ್‌ ಎಂಬ ಒಬ್ಬ ಸ್ನೇಹಪರ ಸ್ತ್ರೀ ಮತ್ತು ಅವಳ ಪುಟ್ಟ ಮಗನು ನಮ್ಮ ಮನೆಗೆ ಭೇಟಿಯಿತ್ತರು. ಅವಳು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದಳು. ಅವಳು ಹೇಳಿದ ವಿಷಯಗಳಿಗೆ ನಾನು ಕಿವಿಗೊಟ್ಟು, ಪುನರ್ಭೇಟಿಗೆ ಒಪ್ಪಿಕೊಂಡೆ. ಇಬ್ಬರು ಪುರುಷರು ನನ್ನನ್ನು ಭೇಟಿಯಾಗಲು ಬಂದರು. ನಮ್ಮ ಸಂಭಾಷಣೆಯಿಂದ, ಪ್ರಮೋದವನ ಮತ್ತು ದೇವರ ರಾಜ್ಯ ಎಂಬ ಎರಡು ವಿಷಯಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದವು. ಆ ವಿಚಾರಗಳನ್ನು ನಾನು ನನ್ನ ಮನಸ್ಸಿನಲ್ಲಿ ಆಳವಾಗಿ ಬೇರೂರಿಸಿಕೊಂಡೆ. ಮತ್ತು ಶುದ್ಧವಾದ ಮನಸ್ಸಾಕ್ಷಿ ಹಾಗೂ ನಿಜವಾದ ಸಂತೋಷವನ್ನು ನಾನು ಕಂಡುಕೊಳ್ಳಬೇಕಾದರೆ, ದೇವರ ಮಟ್ಟಗಳಿಗೆ ನನ್ನ ಜೀವನವನ್ನು ಸರಿಹೊಂದಿಸಬೇಕೆಂದು ನಾನು ಕ್ರಮೇಣ ಗ್ರಹಿಸಿಕೊಂಡೆ.

ನಮ್ಮ ಜೀವಿತಗಳನ್ನು ದೇವರ ವಾಕ್ಯಕ್ಕೆ ತಕ್ಕಂತೆ ಸರಿಹೊಂದಿಸಲು, ನನ್ನ ಸಂಗಾತಿ ನನ್ನನ್ನು ವಿವಾಹವಾಗಲು ಮೊದಲು ಸಮ್ಮತಿಸಿದಳು. ತರುವಾಯ, ದೇವರನ್ನು ಮತ್ತು ಆತನ ನಿಯಮಗಳನ್ನು ಧಿಕ್ಕರಿಸುವ ಜನರೊಂದಿಗೆ ಬೆರೆಯತೊಡಗಿದಳು. ವಸಂತ ಕಾಲದ ಒಂದು ಸಂಜೆ ನಾನು ಮನೆಗೆ ಬಂದಾಗ, ಆಘಾತವೊಂದು ನನಗಾಗಿ ಕಾದಿತ್ತು. ನಮ್ಮ ಮನೆ ಖಾಲಿಯಾಗಿತ್ತು. ನನ್ನ ಸಂಗಾತಿ, ನಮ್ಮ ಮೂರು ವರ್ಷ ಪ್ರಾಯದ ಮಗಳನ್ನು ತನ್ನೊಂದಿಗೆ ಕರೆದುಕೊಂಡು, ಮನೆ ಬಿಟ್ಟು ಹೋಗಿದ್ದಳು. ಅನೇಕ ದಿನಗಳ ವರೆಗೆ ನಾನು ಅವರ ಹಿಂದಿರುಗುವಿಕೆಗಾಗಿ ಕಾದೆನಾದರೂ, ಅದು ವ್ಯರ್ಥವಾಗಿತ್ತು. ದೇವರನ್ನು ಆಪಾದಿಸುವ ಬದಲು, ನನಗೆ ಸಹಾಯಮಾಡುವಂತೆ ನಾನು ಬೇಡಿಕೊಂಡೆ.

ಇದಾದ ಸ್ವಲ್ಪದರಲ್ಲೇ, ನಾನು ಅಂಜೂರದ ಮರದ ಕೆಳಗೆ ಕುಳಿತು ನನ್ನ ಬೈಬಲನ್ನು ಓದಲಾರಂಭಿಸಿದೆ. ಅದರ ನುಡಿಗಳನ್ನು ತೀವ್ರಾಸಕ್ತಿಯಿಂದ ಓದಿದೆ. ಮನೋವಿಶ್ಲೇಷಕರು ಮತ್ತು ಮನಶಾಸ್ತ್ರಜ್ಞರು ಬರೆದ ಎಲ್ಲ ರೀತಿಯ ಪುಸ್ತಕಗಳನ್ನು ನಾನು ಓದಿದ್ದರೂ, ಇಂತಹ ವಿವೇಕವನ್ನು ನಾನು ಎಲ್ಲಿಯೂ ಕಂಡುಕೊಂಡಿರಲಿಲ್ಲ. ಈ ಪುಸ್ತಕವು ದೈವಿಕವಾಗಿ ಪ್ರೇರಿಸಲ್ಪಟ್ಟಿದ್ದಿರಬೇಕು. ಯೇಸುವಿನ ಬೋಧನೆ ಮತ್ತು ಅವನು ಮಾನವ ಸ್ವಭಾವವನ್ನು ಅರ್ಥಮಾಡಿಕೊಂಡ ವಿಧವನ್ನು ತಿಳಿದು ಬೆರಗಾದೆ. ಕೀರ್ತನೆಗಳಿಂದ ಸಾಂತ್ವನಗೊಂಡು, ಜ್ಞಾನೋಕ್ತಿಗಳ ವ್ಯಾವಹಾರಿಕ ವಿವೇಕದಿಂದ ವಿಸ್ಮಯಗೊಂಡೆ. ಸೃಷ್ಟಿಯ ಅಧ್ಯಯನವು ಒಬ್ಬನನ್ನು ದೇವರ ಕಡೆಗೆ ಆಕರ್ಷಿಸಸಾಧ್ಯವಿರುವ ಅತ್ಯುತ್ತಮ ಸಾಧನವಾಗಿದ್ದರೂ, ಅದು ‘ಆತನ ಮಾರ್ಗಗಳ ಅಂಚನ್ನು’ ಮಾತ್ರ ಪ್ರಕಟಿಸಬಲ್ಲದು ಎಂಬುದನ್ನು ನಾನು ಬೇಗನೆ ಗ್ರಹಿಸಿದೆ.—ಯೋಬ 26:14.

ಸಾಕ್ಷಿಗಳು ನನ್ನಲ್ಲಿ, ನಿತ್ಯ ಜೀವಕ್ಕೆ ನಡೆಸುವ ಸತ್ಯ ಮತ್ತು ನಿಮ್ಮ ಕುಟುಂಬ ಜೀವಿತವನ್ನು ಸಂತೋಷಗೊಳಿಸುವುದು ಎಂಬ ಪುಸ್ತಕಗಳನ್ನು ಬಿಟ್ಟುಹೋಗಿದ್ದರು.a ಅವುಗಳ ವಾಚನ ನನ್ನ ಕಣ್ಣುಗಳನ್ನು ತೆರೆದವು. ಎಲ್ಲೆಡೆಯೂ ವ್ಯಾಪಿಸಿರುವ ಮಾಲಿನ್ಯವನ್ನು, ಯುದ್ಧಗಳನ್ನು, ಹೆಚ್ಚುತ್ತಿರುವ ಹಿಂಸಾಚಾರ, ಮತ್ತು ನ್ಯೂಕ್ಲಿಯರ್‌ ಸರ್ವನಾಶದ ಬೆದರಿಕೆಯನ್ನು ಮನುಷ್ಯನು ಎದುರಿಸುತ್ತಿರುವುದು ಏಕೆಂಬುದನ್ನು ನಾನು ಅರ್ಥಮಾಡಿಕೊಳ್ಳಲು ಆ ಸತ್ಯ ಪುಸ್ತಕವು ನನಗೆ ಸಹಾಯಮಾಡಿತು. ನನ್ನ ತೋಟದಿಂದ ನಾನು ನೋಡಿದ ಹೊಂಬಣ್ಣದ ಆಕಾಶವು ಮರುದಿನದ ಒಳ್ಳೆಯ ಹವಾಮಾನವನ್ನು ಸೂಚಿಸಿದಂತೆಯೇ, ದೇವರ ರಾಜ್ಯವು ಬಹಳ ಹತ್ತಿರವಿದೆ ಎಂದು ಈ ಘಟನೆಗಳು ಸೂಚಿಸಿದವು. ಕುಟುಂಬ ಜೀವನ ಪುಸ್ತಕವನ್ನು ನನ್ನ ಸಂಗಾತಿಗೆ ತೋರಿಸಿ, ಬೈಬಲಿನ ಸಲಹೆಯನ್ನು ಕಾರ್ಯರೂಪಕ್ಕೆ ಹಾಕುವ ಮೂಲಕ ನಾವು ಸಂತೋಷದಿಂದಿರಸಾಧ್ಯವೆಂದು ತಿಳಿಸುವ ಹಂಬಲ ನನ್ನಲ್ಲಿ ತೀವ್ರವಾಗಿತ್ತು. ಆದರೆ ಅದು ಇನ್ನು ಸಾಧ್ಯವಾಗಿರಲಿಲ್ಲ.

ಆತ್ಮಿಕ ಪ್ರಗತಿಯನ್ನು ಮಾಡುವುದು

ನಾನು ಹೆಚ್ಚಿನ ವಿಷಯಗಳನ್ನು ತಿಳಿದುಕೊಳ್ಳಲು ಬಯಸಿದ ಕಾರಣ, ನನ್ನನ್ನು ಸಂದರ್ಶಿಸುವಂತೆ ರಾಬರ್‌ ಎಂಬ ಸಾಕ್ಷಿಯನ್ನು ವಿನಂತಿಸಿಕೊಂಡೆ. ನಾನು ದೀಕ್ಷಾಸ್ನಾನ ಪಡೆದುಕೊಳ್ಳಲು ಬಯಸುತ್ತೇನೆಂದು ಹೇಳಿದಾಗ, ಅವನು ಆಶ್ಚರ್ಯಚಕಿತನಾದ. ಆದಕಾರಣ ಒಂದು ಬೈಬಲ್‌ ಅಧ್ಯಯನವು ಆರಂಭಿಸಲ್ಪಟ್ಟಿತು. ನಾನು ಕಲಿಯುತ್ತಿದ್ದ ವಿಷಯಗಳನ್ನು ಇತರರೊಂದಿಗೆ ಮಾತಾಡತೊಡಗಿದೆ ಮತ್ತು ರಾಜ್ಯ ಸಭಾಗೃಹದಲ್ಲಿ ಪಡೆದುಕೊಂಡ ಪ್ರಕಾಶನಗಳನ್ನು ವಿತರಿಸತೊಡಗಿದೆ.

ಜೀವನೋಪಾಯಕ್ಕಾಗಿ ನಾನು ಕಟ್ಟಡಗಳನ್ನು ಕಟ್ಟುವ ಮೇಸನ್‌ (ಮೇಸ್ತ್ರಿ) ಕೆಲಸವನ್ನು ಕಲಿಯತೊಡಗಿದೆ. ದೇವರ ವಾಕ್ಯವು ಒಬ್ಬ ವ್ಯಕ್ತಿಯ ಮೇಲೆ ಬೀರಬಹುದಾದ ಒಳ್ಳೆಯ ಪ್ರಭಾವದ ಕುರಿತು ನನಗೆ ತಿಳಿದಿದ್ದ ಕಾರಣ, ಜೊತೆ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಅನೌಪಚಾರಿಕವಾಗಿ ಸಾರಲು ಸಿಕ್ಕ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸಿಕೊಂಡೆ. ಒಂದು ಸಂಜೆ, ಹೊರದಾರಿಯಲ್ಲಿ ನಾನು ಸರ್ಷ್‌ ಎಂಬವನನ್ನು ಭೇಟಿಯಾದೆ. ಅವನ ಕೈಯಲ್ಲಿ ಕೆಲವು ಪತ್ರಿಕೆಗಳಿದ್ದವು. “ನಿನಗೆ ಓದುವುದೆಂದರೆ ಬಹು ಇಷ್ಟವೆಂದು ಕಾಣುತ್ತದೆ,” ಎಂದು ನಾನು ಅವನಿಗೆ ಹೇಳಿದೆ. “ಹೌದು, ಆದರೆ ಈ ಪುಸ್ತಕದಲ್ಲಿ ನನಗೆ ಆಸಕ್ತಿಯೇ ಇಲ್ಲ.” “ಹೆಚ್ಚು ಆಸಕ್ತಿಕರವಾದ ವಿಷಯವನ್ನು ಓದಲು ನೀನು ಬಯಸುವಿಯೊ?” ಎಂದು ನಾನು ಕೇಳಿದೆ. ದೇವರ ರಾಜ್ಯದ ಕುರಿತು ಸವಿಸ್ತಾರವಾಗಿ ಚರ್ಚಿಸಿದ ಬಳಿಕ, ಅವನು ಬೈಬಲ್‌ ಸಾಹಿತ್ಯವನ್ನು ಸ್ವೀಕರಿಸಿದ. ಮುಂದಿನ ವಾರ ಅವನು ನನ್ನೊಂದಿಗೆ ರಾಜ್ಯ ಸಭಾಗೃಹಕ್ಕೆ ಬಂದ ತರುವಾಯ, ಬೈಬಲ್‌ ಅಧ್ಯಯನವೊಂದು ಆರಂಭಿಸಲ್ಪಟ್ಟಿತು.

ನಾನು ಮನೆಯಿಂದ ಮನೆಯ ಸಾಕ್ಷಿಕಾರ್ಯದಲ್ಲಿ ಭಾಗವಹಿಸಸಾಧ್ಯವೊ ಎಂದು ರಾಬರ್‌ನನ್ನು ಕೇಳಿದೆ. ಅವನು ತನ್ನ ಕಪಾಟಿನಿಂದ ನನಗಾಗಿ ಉಡುಪನ್ನು ತಂದುಕೊಟ್ಟ. ಮುಂದಿನ ಆದಿತ್ಯವಾರ, ನಾನು ಅವನೊಂದಿಗೆ ಪ್ರಥಮ ಬಾರಿ ಕ್ಷೇತ್ರ ಸೇವೆಗೆ ಹೋದೆ. ಮಾರ್ಚ್‌ 7, 1981ರಂದು, ದೀಕ್ಷಾಸ್ನಾನದ ಮೂಲಕ ನಾನು ನನ್ನ ಸಮರ್ಪಣೆಯನ್ನು ಯೆಹೋವ ದೇವರಿಗೆ ಬಹಿರಂಗವಾಗಿ ಸಂಕೇತಿಸಿದೆ.

ಸಂಕಟದ ಸಮಯದಲ್ಲಿ ಸಹಾಯ

ಈ ಮಧ್ಯೆ, ಅಮಾನ್‌ಡೀನ್‌ ಮತ್ತು ಅವಳ ತಾಯಿ ವಿದೇಶದಲ್ಲಿ ಜೀವಿಸುತ್ತಿದ್ದಾರೆಂದು ನನಗೆ ತಿಳಿದುಬಂತು. ನನ್ನ ಮಗಳನ್ನು ಭೇಟಿಯಾಗದಂತೆ ಅವಳ ತಾಯಿಯು ನನ್ನನ್ನು ತಡೆದಳು. ಇದು ಅವರು ಜೀವಿಸುತ್ತಿದ್ದ ದೇಶದ ನಿಯಮಗಳಿಗೆ ಹೊಂದಿಕೆಯಲ್ಲಿತ್ತು. ನಾನು ಹತಾಶನಾದೆ. ಅಮಾನ್‌ಡೀನಳ ತಾಯಿ ವಿವಾಹವಾಗಿ, ಅವಳ ಗಂಡನು ನನ್ನ ಒಪ್ಪಿಗೆ ಇಲ್ಲದೆ ನನ್ನ ಮಗಳನ್ನು ದತ್ತುಪಡೆದುಕೊಂಡಿದ್ದಾನೆಂಬ ಅಧಿಕೃತ ನೋಟಿಸ್‌ ನನಗೆ ಸಿಕ್ಕಿದಾಗ, ಹತಾಶೆಯು ನನ್ನನ್ನು ಸಂಪೂರ್ಣವಾಗಿ ಮುಳುಗಿಸಿಬಿಟ್ಟಿತು. ನನ್ನ ಮಗಳ ಮೇಲೆ ನನಗೆ ಇನ್ನು ಮುಂದೆ ಯಾವ ಹಕ್ಕೂ ಇರಲಿಲ್ಲ. ಕಾನೂನಿನ ಹಸ್ತಕ್ಷೇಪವಿದ್ದರೂ, ಭೇಟಿಯಾಗುವ ಹಕ್ಕು ನನಗೆ ಸಿಗಲಿಲ್ಲ. ನನ್ನ ಹೆಗಲ ಮೇಲೆ ಸಹಿಸಲಾರದಷ್ಟು ಭಾರವಾದ ದುಃಖದ ಹೊರೆಯನ್ನೇ ಇಟ್ಟಂತಾಯಿತು.

ಆದರೆ ಯೆಹೋವನ ವಾಕ್ಯವು ನನ್ನನ್ನು ಹಲವಾರು ವಿಧಗಳಲ್ಲಿ ಸಂತೈಸಿತು. ಒಂದು ದಿನ ನಾನು ಬಹಳ ಕುಗ್ಗಿಹೋಗಿದ್ದಾಗ, ಜ್ಞಾನೋಕ್ತಿ 24:10ರ ಮಾತುಗಳನ್ನು ಮತ್ತೆ ಮತ್ತೆ ಪುನರುಚ್ಚರಿಸಿದೆ: “ಇಕ್ಕಟ್ಟಿನ ದಿನದಲ್ಲಿ ನೀನು ಬಳಲಿಹೋದರೆ ನಿನ್ನ ಬಲವೂ ಇಕ್ಕಟ್ಟೇ.” ನನ್ನ ಮನಸ್ಥಿತಿಯು ಕುಗ್ಗಿಹೋಗದಂತೆ ಈ ವಚನವು ನನ್ನನ್ನು ಬಲಪಡಿಸಿತು. ಮತ್ತೊಂದು ಸಂದರ್ಭದಲ್ಲಿ ನನ್ನ ಮಗಳನ್ನು ನೋಡಲು ನನಗೆ ಸಾಧ್ಯವಾಗದೆ ಹೋದಾಗ, ನಾನು ಶುಶ್ರೂಷೆಯಲ್ಲಿ ಹೋಗಿ, ಸಂಕಟಪಡುತ್ತ ನನ್ನ ಬ್ಯಾಗನ್ನು ನನಗೆ ಸಾಧ್ಯವಿರುವಷ್ಟು ಬಿಗಿಯಾಗಿ ಹಿಡಿದುಕೊಂಡೆ. ಇಂತಹ ಕಷ್ಟಕರ ಸಮಯಗಳಲ್ಲಿ, ನಾನು ಕೀರ್ತನೆ 126:6ರಲ್ಲಿರುವ ಹೇಳಿಕೆಯ ಸತ್ಯತೆಯನ್ನು ಅನುಭವಿಸಿದ್ದೇನೆ. ಅದು ಹೇಳುವುದು: “ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.” ನಿಮಗೆ ಗಂಭೀರವಾದ ಸಮಸ್ಯೆಗಳು ಉದ್ಭವಿಸುವಾಗ, ಅವುಗಳನ್ನು ಬಗೆಹರಿಸಲು ನಿಮ್ಮಿಂದ ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ನೀವು ಮಾಡಿದ ಮೇಲೆ, ಅವುಗಳ ಕುರಿತು ಹೆಚ್ಚು ಚಿಂತಿಸದೆ ದೃಢಸಂಕಲ್ಪದಿಂದ ಯೆಹೋವನ ಸೇವೆಯಲ್ಲಿ ಮುಂದುವರಿಯಬೇಕೆಂಬ ಪ್ರಾಮುಖ್ಯವಾದ ಪಾಠವನ್ನು ನಾನು ಕಲಿತುಕೊಂಡೆ. ನಿಮ್ಮ ಆನಂದವನ್ನು ಕಾಪಾಡಿಕೊಳ್ಳುವ ಏಕೈಕ ಮಾರ್ಗವು ಇದೇ ಆಗಿದೆ.

ಉತ್ತಮವಾದ ಯಾವುದೊ ವಿಷಯಕ್ಕಾಗಿ ಪ್ರಯತ್ನಿಸುವುದು

ನನ್ನಲ್ಲಾದ ಬದಲಾವಣೆಗಳನ್ನು ನೋಡಿ, ನನ್ನ ಪ್ರಿಯ ಹೆತ್ತವರು ನನ್ನ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡಲು ಮುಂದಾದರು. ನಾನು ಅದಕ್ಕಾಗಿ ಆಭಾರಿಯಾಗಿದ್ದೆನಾದರೂ, ಈಗ ನನಗೆ ಬೇರೊಂದು ಲಕ್ಷ್ಯವಿತ್ತು. ಸತ್ಯವು ನನ್ನನ್ನು ಮಾನವ ತತ್ವಜ್ಞಾನ, ರಹಸ್ಯವಾದ, ಮತ್ತು ಜ್ಯೋತಿಶ್ಶಾಸ್ತ್ರದಿಂದ ಮುಕ್ತಗೊಳಿಸಿತ್ತು. ಯುದ್ಧದಲ್ಲಿ ಒಬ್ಬರನ್ನೊಬ್ಬರು ಕೊಲ್ಲದ ನಿಜ ಮಿತ್ರರು ನನಗಿದ್ದರು. ಭೂಮಿಯ ಮೇಲೆ ಇಷ್ಟೊಂದು ಕಷ್ಟಾನುಭವ ಏಕಿದೆ ಎಂಬ ನನ್ನ ಪ್ರಶ್ನೆಗೆ ಈಗ ಉತ್ತರವಿತ್ತು. ಕೃತಜ್ಞತೆಯನ್ನು ವ್ಯಕ್ತಪಡಿಸುವ ಭಾವದಿಂದ, ನನ್ನ ಸಂಪೂರ್ಣ ಬಲದಿಂದ ದೇವರಿಗೆ ಸೇವೆಸಲ್ಲಿಸಲು ನಾನು ಬಯಸಿದೆ. ಶುಶ್ರೂಷೆಗಾಗಿ ಯೇಸು ತನ್ನನ್ನು ಪೂರ್ಣವಾಗಿ ಅರ್ಪಿಸಿಕೊಂಡಿದ್ದನು, ಮತ್ತು ನಾನು ಅವನ ಮಾದರಿಯನ್ನು ಅನುಸರಿಸಲು ಬಯಸಿದೆ.

ನಾನು ನನ್ನ ಮೇಸನ್‌ ಕೆಲಸವನ್ನು ಬಿಟ್ಟು, 1983ರಲ್ಲಿ ಪೂರ್ಣ ಸಮಯದ ಶುಶ್ರೂಷಕನಾದೆ. ನನ್ನ ಪ್ರಾರ್ಥನೆಗಳಿಗೆ ಉತ್ತರವಾಗಿ, ನಾನು ಅಂಶಕಾಲಿಕ ಕೆಲಸವನ್ನು ಕಂಡುಕೊಂಡೆ. ಇದು ನನಗೆ ಆರ್ಥಿಕ ಬೆಂಬಲವನ್ನು ನೀಡಿತು. ಮೇಸನ್‌ ತರಬೇತಿ ಶಾಲೆಯಲ್ಲಿ ನಾನು ಸಾಕ್ಷಿನೀಡಿದ್ದ ಸರ್ಷ್‌ನೊಂದಿಗೆ ಪಯನೀಯರ್‌ ಶಾಲೆಗೆ ಹಾಜರಾಗುವುದು ಎಂತಹ ಆನಂದವಾಗಿತ್ತು! ಮೂರು ವರ್ಷಗಳ ಕಾಲ ಕ್ರಮದ ಪಯನೀಯರನಂತೆ ಸೇವೆಸಲ್ಲಿಸಿದ ಬಳಿಕ, ಯೆಹೋವನ ಸೇವೆಯಲ್ಲಿ ಇನ್ನೂ ಹೆಚ್ಚನ್ನು ಮಾಡಲು ನಾನು ಬಯಸಿದೆ. ಹೀಗೆ 1986ರಲ್ಲಿ, ಪ್ಯಾರಿಸ್‌ ನಗರದ ಸಮೀಪವಿದ್ದ ಪ್ರವಾನ್ಸ್‌ ಎಂಬ ಸುಂದರವಾದ ಪಟ್ಟಣದಲ್ಲಿ ನಾನು ವಿಶೇಷ ಪಯನೀಯರನಾಗಿ ನೇಮಿಸಲ್ಪಟ್ಟೆ. ನಾನು ಸಂಜೆ ಮನೆಗೆ ಹಿಂದಿರುಗಿದ ಮೇಲೆ, ಯೆಹೋವನ ಕುರಿತು ಇತರರೊಂದಿಗೆ ಮಾತಾಡುತ್ತಾ ವ್ಯಯಿಸಿದ ಅದ್ಭುತವಾದ ದಿನಕ್ಕಾಗಿ ಮೊಣಕಾಲೂರಿ ಆತನಿಗೆ ಉಪಕಾರ ಸಲ್ಲಿಸಿದೆ. ದೇವರೊಂದಿಗೆ ಮಾತಾಡುವುದು ಮತ್ತು ದೇವರ ಕುರಿತು ಮಾತಾಡುವುದು, ಜೀವಿತದಲ್ಲಿ ನನಗೆ ಉಲ್ಲಾಸವನ್ನು ನೀಡುವ ಎರಡು ಪ್ರಾಮುಖ್ಯವಾದ ಸಂಗತಿಗಳಾಗಿವೆ.

ನನ್ನ ಮಹದಾನಂದಕ್ಕೆ ಮತ್ತೊಂದು ಕಾರಣವು, ದಕ್ಷಿಣ ಫ್ರಾನ್ಸಿನ ಒಂದು ಚಿಕ್ಕ ಹಳ್ಳಿಯಾದ ಸೇಬಸಾನ್‌ನಲ್ಲಿ ಜೀವಿಸುತ್ತಿರುವ 68 ವರ್ಷ ಪ್ರಾಯದ ನನ್ನ ತಾಯಿಯ ದೀಕ್ಷಾಸ್ನಾನವಾಗಿತ್ತು. ನನ್ನ ತಾಯಿ ಬೈಬಲನ್ನು ಓದಲು ತೊಡಗಿದಾಗ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಚಂದಾಗಳನ್ನು ಅವರಿಗೆ ಕಳುಹಿಸಿದೆ. ಅವರು ಯೋಚನಾ ಸಾಮರ್ಥ್ಯವುಳ್ಳ ವ್ಯಕ್ತಿಯಾಗಿದ್ದ ಕಾರಣ, ಓದಿದ ವಿಷಯದಲ್ಲಿ ಕಂಡುಕೊಂಡ ಸತ್ಯವನ್ನು ಬೇಗನೆ ಗ್ರಹಿಸಿಕೊಂಡರು.

ಬೆತೆಲ್‌—ಒಂದು ಅಪೂರ್ವವಾದ ಆತ್ಮಿಕ ಪ್ರಮೋದವನ

ವಾಚ್‌ ಟವರ್‌ ಸೊಸೈಟಿಯು ವಿಶೇಷ ಪಯನೀಯರರ ಸಂಖ್ಯೆಯನ್ನು ಕಡಿಮೆಮಾಡಲು ನಿರ್ಧರಿಸಿದಾಗ, ನಾನು ಶುಶ್ರೂಷಾ ಸೇವಕರ ತರಬೇತಿ ಶಾಲೆ ಮತ್ತು ಬೆತೆಲ್‌ಗಾಗಿ, ಅಂದರೆ ಫ್ರಾನ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಅರ್ಜಿಹಾಕಿದೆ. ನಾನು ಎಲ್ಲಿ ಅತ್ಯುತ್ತಮವಾಗಿ ಸೇವೆಮಾಡಲು ಸಾಧ್ಯವಿತ್ತೆಂಬುದನ್ನು ಯೆಹೋವನೇ ನಿರ್ಧರಿಸಲಿ ಎಂದುಕೊಂಡೆ. ಕೆಲವು ತಿಂಗಳುಗಳ ನಂತರ, ಡಿಸೆಂಬರ್‌ 1989ರಲ್ಲಿ, ನಾನು ವಾಯವ್ಯ ಫ್ರಾನ್ಸಿನ ಲೂವಿಯಾ ಪ್ರದೇಶದಲ್ಲಿರುವ ಬೆತೆಲಿಗೆ ಆಮಂತ್ರಿಸಲ್ಪಟ್ಟೆ. ಇದರ ಪರಿಣಾಮವು ಅತ್ಯುತ್ತಮವಾಗಿತ್ತು, ಏಕೆಂದರೆ ನನ್ನ ಹೆತ್ತವರು ಅಸ್ವಸ್ಥರಾದಾಗ ಅವರನ್ನು ನೋಡಿಕೊಳ್ಳುವಂತೆ ನಾನು ನನ್ನ ತಮ್ಮ ಮತ್ತು ಅವನ ಪತ್ನಿಗೆ ನೆರವು ನೀಡಲು ಈ ಸ್ಥಳವು ಸಾಧ್ಯಗೊಳಿಸಿತು. ನಾನು ಸಾವಿರಾರು ಕಿಲೊಮೀಟರುಗಳಷ್ಟು ದೂರದ ಮಿಷನೆರಿ ಸೇವೆಯಲ್ಲಿ ಇರುತ್ತಿದ್ದರೆ, ಇದನ್ನು ಮಾಡಲು ನನಗೆ ಸಾಧ್ಯವಾಗುತ್ತಿರಲಿಲ್ಲ.

ನನ್ನ ತಾಯಿ ಹಲವಾರು ಬಾರಿ ಬೆತೆಲಿಗೆ ಬಂದು ನನ್ನನ್ನು ಸಂದರ್ಶಿಸಿದರು. ನನ್ನಿಂದ ದೂರವಿರುವುದು ಅವರು ಮಾಡಿದ ಒಂದು ತ್ಯಾಗವಾಗಿದ್ದರೂ, ಅವರು ಅನೇಕ ವೇಳೆ ನನಗೆ ಹೇಳಿದ್ದು: “ಮಗನೇ, ಬೆತೆಲ್‌ನಲ್ಲಿಯೇ ಇರು. ಈ ವಿಧದಲ್ಲಿ ನೀನು ಯೆಹೋವನನ್ನು ಸೇವಿಸುತ್ತಿರುವುದರಿಂದ ನಾನು ಬಹಳ ಸಂತೋಷಿಸುತ್ತೇನೆ.” ಈಗ ನನ್ನ ಹೆತ್ತವರಿಬ್ಬರೂ ಇಲ್ಲವೆಂಬುದು ದುಃಖಕರವಾದ ಸಂಗತಿಯೇ. ಅಕ್ಷರಾರ್ಥ ಪ್ರಮೋದವನವಾಗಿ ರೂಪಾಂತರಿಸಲ್ಪಟ್ಟ ಭೂಮಿಯಲ್ಲಿ ಅವರನ್ನು ನೋಡಲು ನಾನೆಷ್ಟು ಕಾತುರನಾಗಿದ್ದೇನೆ!

“ಪ್ರಮೋದವನ ಈಗ” ಎಂಬ ಹೆಸರು, ಬೇರೆ ಯಾವುದೇ ಮನೆಗಿಂತ ಬೆತೆಲಿಗೆ ಯೋಗ್ಯವಾಗಿದೆ ಎಂದು ನಾನು ನಂಬುತ್ತೇನೆ. ಅದು ನಿಜವಾಗಿಯೂ “ದೇವರ ಮನೆ”ಯೇ ಆಗಿದೆ. ನಿಜವಾದ ಪ್ರಮೋದವನವು, ಬೇರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಆತ್ಮಿಕ ಪ್ರಮೋದವನವಾಗಿದೆ, ಮತ್ತು ಬೆತೆಲ್‌ನಲ್ಲಿ ಆತ್ಮಿಕತೆಯು ಪ್ರಭುತ್ವ ನಡೆಸುತ್ತದೆ. ಅಲ್ಲಿ ಆತ್ಮದ ಫಲಗಳನ್ನು ಬೆಳಸಿಕೊಳ್ಳುವ ಅವಕಾಶ ನಮಗಿದೆ. (ಗಲಾತ್ಯ 5:22, 23) ದೈನಿಕ ಬೈಬಲ್‌ ವಚನದ ಚರ್ಚೆ ಮತ್ತು ಕಾವಲಿನಬುರುಜುವಿನ ಕುಟುಂಬ ಅಧ್ಯಯನದ ಮೂಲಕ ನಮಗೆ ಸಿಗುವ ಸಮೃದ್ಧವಾದ ಆತ್ಮಿಕ ಆಹಾರವು, ಬೆತೆಲ್‌ ಸೇವೆಗಾಗಿ ನನ್ನನ್ನು ಬಲಪಡಿಸುತ್ತದೆ. ಅಲ್ಲದೆ, ಅನೇಕ ದಶಕಗಳಿಂದ ಯೆಹೋವನನ್ನು ನಂಬಿಗಸ್ತರಾಗಿ ಸೇವಿಸುತ್ತಿರುವ ಆತ್ಮಿಕ ಮನೋಭಾವದ ಸಹೋದರ ಸಹೋದರಿಯರೊಂದಿಗೆ ಸಹವಾಸಿಸಲು ಶಕ್ತರಾಗಿರುವುದು, ಆತ್ಮಿಕವಾಗಿ ಬೆಳೆಯಲು ಬೆತೆಲನ್ನು ಒಂದು ಅಪೂರ್ವವಾದ ಸ್ಥಳವನ್ನಾಗಿ ಮಾಡುತ್ತದೆ. ನಾನು ನನ್ನ ಮಗಳಿಂದ 17 ವರ್ಷಗಳ ಕಾಲ ಬೇರ್ಪಟ್ಟಿದ್ದರೂ, ಬೆತೆಲ್‌ನಲ್ಲಿ ನಾನು ಹುರುಪುಳ್ಳ ಅನೇಕಾನೇಕ ಯುವ ಜನರನ್ನು ಕಂಡಿದ್ದೇನೆ. ಅವರನ್ನು ನನ್ನ ಮಕ್ಕಳೆಂದು ಎಣಿಸಿ, ಅವರ ಆತ್ಮಿಕ ಪ್ರಗತಿಯಲ್ಲಿ ನಾನು ಹರ್ಷಿಸುತ್ತೇನೆ. ಕಳೆದ ಎಂಟು ವರ್ಷಗಳಲ್ಲಿ ನಾನು ಏಳು ವಿಭಿನ್ನ ನೇಮಕಗಳಲ್ಲಿ ಕೆಲಸಮಾಡಿದ್ದೇನೆ. ಈ ಬದಲಾವಣೆಗಳು ಕೆಲವೊಮ್ಮೆ ಸುಲಭವಾಗಿರದಿದ್ದರೂ, ಅಂತಹ ತರಬೇತಿಯು ಭವಿಷ್ಯತ್ತಿಗೆ ಖಂಡಿತವಾಗಿಯೂ ಪ್ರಯೋಜನಕರವಾಗಿದೆ.

ನಾನು ಬೆಳೆಸುತ್ತಿದ್ದ ಒಂದು ಪ್ರಕಾರದ ಅವರೆಕಾಯಿಯು, ನೂರು ಪಟ್ಟು ಹೆಚ್ಚಿನ ಪ್ರತಿಫಲವನ್ನು ನೀಡುತ್ತಿತ್ತು. ತದ್ರೀತಿಯಲ್ಲಿ, ನೀವು ಕೆಟ್ಟದ್ದನ್ನು ಬಿತ್ತುವುದಾದರೆ, ಅದಕ್ಕಿಂತಲೂ ನೂರು ಪಟ್ಟು ಹೆಚ್ಚು ಕೆಟ್ಟದಾದ ಪ್ರತಿಫಲವನ್ನು ಅನೇಕ ಬಾರಿ ಕೊಯ್ಯುವಿರೆಂಬುದನ್ನು ನಾನು ಅನುಭವದಿಂದ ತಿಳಿದುಕೊಂಡಿದ್ದೇನೆ. ಯಾರ ಮಾರ್ಗದರ್ಶನವೂ ಇಲ್ಲದೆ ಅನುಭವದಿಂದಲೇ ಕಲಿತುಕೊಳ್ಳುವುದು ಒಂದು ಶಾಲೆಯಂತಿದ್ದರೆ, ಅಲ್ಲಿ ಕಲಿಯುವ ಪಾಠಗಳಿಗೆ ತೆರಬೇಕಾದ ಬೆಲೆ ತುಂಬ ದುಬಾರಿಯಾದದ್ದು. ಅನುಭವದಿಂದ ಕಲಿತುಕೊಳ್ಳುವುದಕ್ಕಿಂತಲೂ ಯೆಹೋವನ ಮಾರ್ಗಗಳಲ್ಲಿ ಬೆಳೆಸಲ್ಪಡುವುದು ಎಷ್ಟೋ ಉತ್ತಮವಾದದ್ದು. ಕ್ರೈಸ್ತ ಹೆತ್ತವರಿಂದ ಬೆಳೆಸಲ್ಪಡುವ ಯುವ ಜನರಿಗೆ ಅದು ಎಂತಹ ಒಂದು ಸುಯೋಗವಾಗಿದೆ! ಯೆಹೋವನ ಸೇವೆಯಲ್ಲಿ ಒಳ್ಳೆಯದನ್ನು ಬಿತ್ತಿ, ಅದಕ್ಕಿಂತಲೂ ನೂರು ಪಟ್ಟು ಹೆಚ್ಚಿನ ಶಾಂತಿ ಮತ್ತು ಸಂತೃಪ್ತಿಯನ್ನು ಕೊಯ್ಯುವುದು ಎಷ್ಟೋ ಉತ್ತಮವೆಂಬುದರಲ್ಲಿ ಸಂದೇಹವೇ ಇಲ್ಲ.—ಗಲಾತ್ಯ 6:7, 8.

ನಾನು ಪಯನೀಯರನಾಗಿದ್ದಾಗ, ಯಾವ ಗೋಡೆಯ ಮೇಲೆ ನಾವು ಆ ಅರಾಜಕತಾವಾದಿಯ ನುಡಿಗಳನ್ನು ಬರೆದೆವೊ, ಅದೇ ಪುಸ್ತಕದ ಅಂಗಡಿಯ ಮುಂದೆ ನಾನು ಕೆಲವೊಮ್ಮೆ ಹಾದುಹೋಗುತ್ತಿದ್ದೆ. ನಾನು ಒಳಗೆ ಹೋಗಿ, ಸಜೀವ ದೇವರು ಮತ್ತು ಆತನ ಉದ್ದೇಶದ ಕುರಿತು ಆ ಅಂಗಡಿಯ ಯಜಮಾನನೊಂದಿಗೆ ಮಾತಾಡಿದ್ದೇನೆ. ಹೌದು, ದೇವರು ಜೀವಂತನಾಗಿದ್ದಾನೆ! ಅಲ್ಲದೆ, ಏಕೈಕ ಸತ್ಯ ದೇವರಾಗಿರುವ ಯೆಹೋವನು ನಂಬಿಗಸ್ತ ತಂದೆಯಾಗಿದ್ದು ತನ್ನ ಮಕ್ಕಳನ್ನು ಎಂದಿಗೂ ತೊರೆಯಲಾರನು. (ಯೆಶಾಯ 49:15) ಎಲ್ಲ ದೇಶಗಳಲ್ಲಿರುವ ಸಕಲ ಜನರೂ, ಜೀವಂತ ದೇವರಾಗಿರುವ ಯೆಹೋವನನ್ನು ಸೇವಿಸುವ ಮೂಲಕ ಮತ್ತು ಸ್ತುತಿಸುವ ಮೂಲಕ, ಈಗಿನ ಆತ್ಮಿಕ ಪ್ರಮೋದವನವನ್ನು ಮತ್ತು ಬರಲಿರುವ ಪುನಸ್ಸ್ಥಾಪಿತ ಪ್ರಮೋದವನವನ್ನು ಕಂಡುಕೊಳ್ಳುವಂತಾಗಲಿ!

[ಅಧ್ಯಯನ ಪ್ರಶ್ನೆಗಳು]

a ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿದ್ದು.

[ಪುಟ 26 ರಲ್ಲಿರುವ ಚಿತ್ರ]

ಸೃಷ್ಟಿಯ ಅದ್ಭುತಗಳಿಂದ ಪ್ರಚೋದಿಸಲ್ಪಟ್ಟ ನಾನು, ದೇವರಲ್ಲಿ ನಂಬಿಕೆಯಿಡುವ ತೀರ್ಮಾನವನ್ನು ಮಾಡಿದೆ (ಬಲಕ್ಕೆ) ಇಂದು ಬೆತೆಲ್‌ ಸೇವೆಯಲ್ಲಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ