ನೀವು ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತೀರೊ?
“ಕೆಲಸದಲ್ಲೇ ಮುಳುಗಿದ್ದು, ತಮ್ಮ ಮಕ್ಕಳೊಂದಿಗೆ ಆಟವಾಡಲು ಸಹ ಸಮಯ ಇಲ್ಲದಿದ್ದರೂ ಜಪಾನೀ ತಂದೆಯರು ಪ್ರೀತಿಸಲ್ಪಡುತ್ತಾರೆ.” ಕೆಲವು ವರ್ಷಗಳ ಹಿಂದೆ ಮೈನೀಚಿ ಶೀಂಬೂನ್ ಪತ್ರಿಕೆಯಲ್ಲಿ ಈ ತಲೆಬರಹವು ಇತ್ತು. ಸರಕಾರವು ನಡೆಸಿದ ಒಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಜಪಾನೀ ಮಕ್ಕಳಲ್ಲಿ 87.8 ಪ್ರತಿಶತ ಮಕ್ಕಳು, ಭವಿಷ್ಯತ್ತಿನಲ್ಲಿ ತಮ್ಮ ತಂದೆಯರ ಆರೈಕೆಮಾಡುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದರೆಂದು ಆ ಲೇಖನವು ವರದಿಸಿತು. ಆದರೆ ಆ ವಾರ್ತಾಪತ್ರಿಕೆಯ ಇಂಗ್ಲಿಷ್ ಆವೃತ್ತಿಯಲ್ಲಿ, ಅದೇ ಸುದ್ದಿಯು ಭಿನ್ನವಾದ ಶೀರ್ಷಿಕೆಯ ಕೆಳಗೆ ಕಾಣಿಸಿಕೊಂಡಿತು. ಅದು ಹೀಗಿತ್ತು: “ತಂದೆಯಂದಿರು ಮತ್ತು ಪುತ್ರರು, ಅಲಕ್ಷ್ಯದ ಒಂದು ಪ್ರಕರಣ.” ಆದರೆ ಈ ಲೇಖನವು, ಆ ಸಮೀಕ್ಷೆಯ ಇನ್ನೊಂದು ಅಂಶವನ್ನೂ ಎತ್ತಿತೋರಿಸಿತು. ಅದು ಆ ವಾರ್ತಾಪತ್ರಿಕೆಯ ಜಪಾನೀ ಆವೃತ್ತಿಯಲ್ಲಿ ಕೊಡಲ್ಪಟ್ಟಿರಲಿಲ್ಲ. ಅದೇನೆಂದರೆ, ಪ್ರತಿ ಕೆಲಸದ ದಿನದಂದು, ಜಪಾನೀ ತಂದೆಯರು ತಮ್ಮ ಮಕ್ಕಳೊಂದಿಗೆ ಕೇವಲ 36 ನಿಮಿಷಗಳನ್ನು ಕಳೆಯುತ್ತಿದ್ದರು. ಅವರಿಗೆ ಹೋಲಿಸುವಾಗ, ಪಶ್ಚಿಮ ಜರ್ಮನಿಯಲ್ಲಿರುವ ತಂದೆಯಂದಿರು ವಾರದ ದಿನಗಳಲ್ಲಿ ತಮ್ಮ ಮಕ್ಕಳೊಂದಿಗೆ 44 ನಿಮಿಷಗಳನ್ನು ಕಳೆಯುತ್ತಿದ್ದರು, ಮತ್ತು ಅಮೆರಿಕದಲ್ಲಿ ಅದು 56 ನಿಮಿಷಗಳಾಗಿತ್ತು.
ತಮ್ಮ ಮಕ್ಕಳೊಂದಿಗೆ ಕಡಿಮೆ ಸಮಯವನ್ನು ಕಳೆಯುತ್ತಿರುವವರು ಕೇವಲ ತಂದೆಗಳಷ್ಟೇ ಅಲ್ಲ. ಈಗ ಹೆಚ್ಚಿನ ತಾಯಂದಿರೂ ಉದ್ಯೋಗಸ್ಥೆಯರಾಗಿದ್ದಾರೆ. ಉದಾಹರಣೆಗಾಗಿ ಅನೇಕ ಒಂಟಿ ತಾಯಂದಿರು, ತಮ್ಮ ಕುಟುಂಬವನ್ನು ಪರಾಮರಿಸಲು ನೌಕರಿ ಮಾಡಬೇಕಾಗುತ್ತದೆ. ಇದರ ಫಲಿತಾಂಶವಾಗಿ, ಹೆತ್ತವರು—ತಂದೆಯರೂ ತಾಯಂದಿರೂ ಏಕಪ್ರಕಾರವಾಗಿ—ತಮ್ಮ ಮಕ್ಕಳೊಂದಿಗೆ ಕಳೆಯುವ ಸಮಯವು ತುಂಬ ಕಡಿಮೆಯಾಗಿದೆ.
1997ರಲ್ಲಿ ಅಮೆರಿಕದ 12,000ಕ್ಕಿಂತಲೂ ಹೆಚ್ಚು ಹದಿವಯಸ್ಕರ ಒಂದು ಅಧ್ಯಯನ ತೋರಿಸಿದ್ದೇನೆಂದರೆ, ತಮ್ಮ ಹೆತ್ತವರೊಂದಿಗೆ ನಿಕಟ ಸಂಬಂಧವಿರುವ ಯುವ ಜನರು ಭಾವನಾತ್ಮಕ ಒತ್ತಡದಿಂದ ನರಳುವ, ಆತ್ಮಹತ್ಯೆಯ ಯೋಚನೆಗಳಿರುವ, ಹಿಂಸಾಚಾರದಲ್ಲಿ ತೊಡಗುವ, ಅಥವಾ ಮಾದಕ ದ್ರವ್ಯಗಳನ್ನು ಉಪಯೋಗಿಸುವ ಸಂಭವವು ಕಡಿಮೆ. ಮತ್ತು ಆ ವಿಸ್ತೃತವಾದ ಅಧ್ಯಯನದಲ್ಲಿ ಒಳಗೂಡಿದ್ದ ಸಂಶೋಧಕರಲ್ಲಿ ಒಬ್ಬರು ಹೇಳಿದ್ದು: “ಹೆತ್ತವರು ಮಕ್ಕಳೊಂದಿಗೆ ಸಮಯವನ್ನು ಕಳೆಯದಿದ್ದಲ್ಲಿ ಮತ್ತು ಅಗತ್ಯವಿರುವಾಗ ಲಭ್ಯವಿರದಿರುವಲ್ಲಿ, ಅವರಿಗೆ ತಮ್ಮ ಮಕ್ಕಳೊಂದಿಗೆ ನಿಕಟವಾದ ಸಂಬಂಧವಿರಲಾರದು.” ನಿಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯುವುದು ಮತ್ತು ಅವರೊಂದಿಗೆ ಸಂವಾದ ನಡೆಸುವುದು ನಿಜವಾಗಿಯೂ ಪ್ರಾಮುಖ್ಯವಾಗಿದೆ.
ಸಂವಾದ ಅಂತರ
ಯಾವ ಕುಟುಂಬಗಳಲ್ಲಿ ಹೆತ್ತವರಲ್ಲಿ ಒಬ್ಬನು, ಉದ್ಯೋಗದ ನಿಮಿತ್ತ ದೂರದ ಸ್ಥಳದಲ್ಲಿರಬೇಕಾಗುತ್ತದೊ, ವಿಶೇಷವಾಗಿ ಅಂತಹ ಕುಟುಂಬಗಳೇ ಸಂವಾದದ ಕುಸಿತಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು. ಆದರೆ ಸಂವಾದ ಅಂತರದ ಸಮಸ್ಯೆಯು ಯಾವ ಕುಟುಂಬಗಳಲ್ಲಿ ಹೆತ್ತವರಲ್ಲಿ ಒಬ್ಬನು ಮನೆಯಿಂದ ದೂರವಿರುತ್ತಾನೊ ಕೇವಲ ಆ ಕುಟುಂಬಗಳಿಗೆ ಸೀಮಿತವಾಗಿರುವುದಿಲ್ಲ. ಕೆಲವು ಹೆತ್ತವರು ತಮ್ಮ ಕುಟುಂಬದೊಂದಿಗೇ ವಾಸಿಸುತ್ತಾರಾದರೂ, ಅವರು ಮಕ್ಕಳು ಏಳುವ ಮುಂಚೆ ಕೆಲಸಕ್ಕೆ ಹೊರಡುತ್ತಾರೆ ಮತ್ತು ಮನೆಗೆ ಹಿಂದಿರುಗುವಷ್ಟರೊಳಗೆ ಮಕ್ಕಳು ನಿದ್ರಿಸಿರುತ್ತಾರೆ. ಇದರಿಂದಾಗಿ ಉಂಟಾಗುವ ಸಂಪರ್ಕದ ಕೊರತೆಯನ್ನು ಸರಿದೂಗಿಸಲಿಕ್ಕಾಗಿ ಕೆಲವರು ವಾರಾಂತ್ಯಗಳಲ್ಲಿ ಮತ್ತು ರಜಾದಿನಗಳಲ್ಲಿ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಾರೆ. ತಮ್ಮ ಮಕ್ಕಳೊಂದಿಗೆ ಅವರು “ಗುಣಮಟ್ಟದ” ಸಮಯವನ್ನು ಕಳೆಯುತ್ತಾರೆಂದು ಹೇಳುತ್ತಾರೆ.
ಆದರೆ ಮಕ್ಕಳೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು, ಅವರೊಂದಿಗೆ ಹೆಚ್ಚು ಸಮಯವನ್ನು ಕಳೆಯುವ ಅಗತ್ಯವನ್ನು ತೆಗೆದುಹಾಕುತ್ತದೊ? ಸಂಶೋಧಕ ಲಾರೆನ್ಸ್ ಸ್ಟೈನ್ಬರ್ಗ್ ಉತ್ತರಿಸುವುದು: “ಸಾಮಾನ್ಯವಾಗಿ ತಮ್ಮ ಹೆತ್ತವರೊಂದಿಗೆ ಹೆಚ್ಚು ಸಮಯವನ್ನು ಕಳೆಯುವ ಮಕ್ಕಳು, ಹೆತ್ತವರೊಂದಿಗೆ ಕಡಿಮೆ ಸಮಯವನ್ನು ಕಳೆಯುವ ಮಕ್ಕಳಿಗಿಂತ ಹೆಚ್ಚು ಉತ್ತಮರಾಗಿರುತ್ತಾರೆ. ಸಮಯವನ್ನು ಕೊಡದೇ ಇರುವ ಆ ಕೊರತೆಯನ್ನು ಭರ್ತಿಮಾಡುವುದು ತೀರ ಕಷ್ಟಕರವಾಗಿರುವಂತೆ ತೋರುತ್ತದೆ. ಗುಣಮಟ್ಟದ ಸಮಯ ಎಂಬ ವಿಚಾರಕ್ಕೆ ತೀರ ಹೆಚ್ಚು ಮಹತ್ವವನ್ನು ಕೊಡಲಾಗಿದೆ.” ಬರ್ಮದ ಒಬ್ಬ ಮಹಿಳೆಗೆ ಹಾಗೆಯೇ ಅನಿಸುತ್ತದೆ. ಒಬ್ಬ ಪ್ರಾತಿನಿಧಿಕ ಜಪಾನೀ ಪುರುಷನಂತಿರುವ ಅವಳ ಗಂಡನು ಕೆಲಸದಿಂದ ಹಿಂದಿರುಗುವಾಗ, ಬೆಳಗ್ಗೆ ಒಂದು ಅಥವಾ ಎರಡು ಘಂಟೆ ಆಗುತ್ತದೆ. ವಾರಾಂತ್ಯಗಳಲ್ಲಿ ಅವನು ತನ್ನ ಕುಟುಂಬದೊಂದಿಗೆ ಸಮಯವನ್ನು ಕಳೆಯುತ್ತಾನಾದರೂ ಅವನ ಹೆಂಡತಿ ಹೇಳುವುದು: “ವಾರದ ಉಳಿದ ದಿನಗಳಲ್ಲಿ ಕುಟುಂಬದೊಂದಿಗೆ ಸಮಯವನ್ನು ಕಳೆಯದೆ ಇರುವುದರಿಂದ ಉಂಟಾಗುವ ಅಂತರವನ್ನು, ಬರೀ ಶನಿವಾರ ಮತ್ತು ಭಾನುವಾರಗಳಂದು ಮನೆಯಲ್ಲಿರುವ ಮೂಲಕ ತುಂಬಿಸಲು ಸಾಧ್ಯವಿಲ್ಲ. . . . ವಾರದ ಎಲ್ಲ ದಿನಗಳ ಊಟಗಳನ್ನು ತಪ್ಪಿಸಿ, ಅವೆಲ್ಲವನ್ನೂ ನೀವು ಶನಿವಾರ ಮತ್ತು ಭಾನುವಾರದಂದು ತಿನ್ನುವುದು ಸಾಧ್ಯವೊ?”
ಶ್ರದ್ಧಾಪೂರ್ವಕ ಪ್ರಯತ್ನ ಅಗತ್ಯ
ಕುಟುಂಬದಲ್ಲಿ ಒಳ್ಳೆಯ ಸಂವಾದವನ್ನು ಕಾಪಾಡಿಕೊಳ್ಳಬೇಕೆಂದು ಹೇಳುವುದು ಸುಲಭ. ಆದರೆ ಕುಟುಂಬಕ್ಕಾಗಿ ದುಡಿದು, ಸಂಪಾದಿಸುವುದರಲ್ಲಿರುವ ಬೇಡಿಕೆಗಳಿಂದಾಗಿ, ಒಬ್ಬ ತಂದೆ ಅಥವಾ ಉದ್ಯೋಗಸ್ಥ ತಾಯಿಗೆ ಕುಟುಂಬದೊಂದಿಗೆ ಸಮಯ ಕಳೆಯುವುದು ಕಷ್ಟಕರವಾಗುತ್ತದೆ. ಪರಿಸ್ಥಿತಿಗಳ ಕಾರಣದಿಂದ ಮನೆಯಿಂದ ದೂರವಿರಬೇಕಾದ ಅನೇಕರು, ಫೋನ್ ಕರೆಗಳನ್ನು ಮಾಡುವ ಮೂಲಕ ಅಥವಾ ಪತ್ರಗಳನ್ನು ಬರೆಯುವ ಮೂಲಕ ಕ್ರಮವಾಗಿ ಸಂವಾದ ನಡೆಸುತ್ತಾರೆ. ಆದರೆ ಹೆತ್ತವರು ಮನೆಯಲ್ಲಿರಲಿ ಇಲ್ಲದಿರಲಿ, ಕುಟುಂಬದಲ್ಲಿ ಒಳ್ಳೆಯ ಸಂವಾದವನ್ನು ಕಾಪಾಡಿಕೊಳ್ಳಲಿಕ್ಕಾಗಿ ಶ್ರದ್ಧಾಪೂರ್ವಕ ಪ್ರಯತ್ನವು ಅಗತ್ಯ.
ತಮ್ಮ ಕುಟುಂಬದೊಂದಿಗೆ ಸಂವಾದ ನಡೆಸುವುದನ್ನು ಅಲಕ್ಷಿಸುವ ಹೆತ್ತವರು, ಇದಕ್ಕಾಗಿ ಬೆಲೆ ತೆರಬೇಕಾಗುತ್ತದೆ. ತನ್ನ ಕುಟುಂಬದೊಂದಿಗೆ ತೀರ ಕಡಿಮೆ ಸಮಯವನ್ನು ಕಳೆಯುತ್ತಿದ್ದು, ಅವರೊಂದಿಗೆ ಒಂದು ಊಟವನ್ನೂ ಮಾಡದಿದ್ದ ಒಬ್ಬ ತಂದೆಯು ಗಂಭೀರವಾದ ಫಲಿತಾಂಶಗಳನ್ನು ಎದುರಿಸಬೇಕಾಯಿತು. ಅವನ ಮಗ ಹಿಂಸಾತ್ಮಕನಾದನು, ಮತ್ತು ಅವನ ಮಗಳು ಅಂಗಡಿಯಲ್ಲಿ ಕಳ್ಳತನ ಮಾಡುತ್ತಿದ್ದಾಗ ಹಿಡಿಯಲ್ಪಟ್ಟಳು. ಒಂದು ಭಾನುವಾರ ಬೆಳಗ್ಗೆ ತಂದೆಯು ಗಾಲ್ಫ್ ಆಟವಾಡಲಿಕ್ಕಾಗಿ ಹೊರಡಲು ಸಿದ್ಧರಾಗುತ್ತಿದ್ದಾಗ, ಮಗನು ಸಿಡಿದುಬೀಳುತ್ತಾ ಪ್ರತಿಕ್ರಿಯಿಸಿದನು. ಅವನು ಹೀಗೆ ಕೂಗಿಕೊಂಡನು: “ಅಮ್ಮ ಮಾತ್ರ ಈ ಮನೆಯ ಹೆತ್ತವರೊ?” ಅವನು ಪ್ರಲಾಪಿಸಿದ್ದು: “ಈ ಕುಟುಂಬದಲ್ಲಿ ಎಲ್ಲವನ್ನೂ ಅಮ್ಮ ತಾನೇ ನಿರ್ಣಯಿಸುತ್ತಾರೆ. ಅಪ್ಪ ನೀವು ಎಂದೂ . . . ”
ತಂದೆಯನ್ನು ಈ ಮಾತುಗಳು ಯೋಚಿಸುವಂತೆ ಮಾಡಿದವು. ಕೊನೆಗೆ ಅವನು ಆರಂಭದ ಹೆಜ್ಜೆಯಾಗಿ ತಾನು ಕುಟುಂಬದೊಂದಿಗೆ ಬೆಳಗ್ಗಿನ ಉಪಾಹಾರವನ್ನು ಸೇವಿಸಬೇಕು ಎಂಬ ನಿರ್ಣಯವನ್ನು ಮಾಡಿದನು. ಶುರುಶುರುವಿಗೆ, ಕೇವಲ ಅವನು ಮತ್ತು ಅವನ ಹೆಂಡತಿ ಇರುತ್ತಿದ್ದರು. ನಿಧಾನವಾಗಿ, ಮಕ್ಕಳು ಜೊತೆಗೂಡಿದರು ಮತ್ತು ಬೆಳಗ್ಗಿನ ಉಪಾಹಾರದ ಸಮಯವು, ಸಂವಾದದ ಉಗಮಸ್ಥಾನವಾಯಿತು. ಇದು, ಕುಟುಂಬವು ಜೊತೆಯಾಗಿ ರಾತ್ರಿಯೂಟ ಮಾಡುವುದಕ್ಕೆ ನಡಿಸಿತು. ಹೀಗೆ, ಆ ವ್ಯಕ್ತಿಯು ತನ್ನ ಕುಟುಂಬವು ಸಂಪೂರ್ಣವಾಗಿ ಕುಸಿದುಬೀಳುವುದರಿಂದ ತಪ್ಪಿಸುವ ಪ್ರಯತ್ನವನ್ನು ಮಾಡಿದನು.
ದೇವರ ವಾಕ್ಯದಿಂದ ಸಹಾಯ
ಹೆತ್ತವರು ತಮ್ಮ ಮಕ್ಕಳೊಂದಿಗೆ ಸಂವಾದ ನಡಿಸಲು ಸಮಯವನ್ನು ಬದಿಗಿರಿಸುವಂತೆ ಬೈಬಲ್ ಉತ್ತೇಜಿಸುತ್ತದೆ. ಪ್ರವಾದಿಯಾದ ಮೋಶೆಯ ಮೂಲಕ ಇಸ್ರಾಯೇಲ್ಯರಿಗೆ ಹೀಗೆ ಉಪದೇಶಿಸಲಾಯಿತು: “ಇಸ್ರಾಯೇಲ್ಯರೇ, ಕೇಳಿರಿ; ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು; ನೀವು ನಿಮ್ಮ ದೇವರಾದ ಯೆಹೋವನನ್ನು ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಶಕ್ತಿಯಿಂದಲೂ ಪ್ರೀತಿಸಬೇಕು. ನಾನು ಈಗ ನಿಮಗೆ ತಿಳಿಸುವ ಮಾತುಗಳು ನಿಮ್ಮ ಹೃದಯದಲ್ಲಿರಬೇಕು. ಇವುಗಳನ್ನು ನಿಮ್ಮ ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು.” (ಧರ್ಮೋಪದೇಶಕಾಂಡ 6:4-7) ಹೌದು, ನಮ್ಮಲ್ಲಿ ಹೆತ್ತವರಾಗಿರುವವರು, ಮಕ್ಕಳ ಹೃದಮನಗಳಲ್ಲಿ ದೇವರ ಮಾತುಗಳನ್ನು ಬೇರೂರಿಸಬೇಕಾದಲ್ಲಿ ತಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುವುದಕ್ಕಾಗಿ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಬೇಕು.
ಆಸಕ್ತಿಕರವಾಗಿ, ಈ ಹಿಂದೆ ತಿಳಿಸಲ್ಪಟ್ಟಿರುವ ಅಮೆರಿಕದ 12,000ಕ್ಕಿಂತಲೂ ಹೆಚ್ಚಿನ ಹದಿವಯಸ್ಕರ 1997ರ ಸಮೀಕ್ಷೆಯು ಪ್ರಕಟಪಡಿಸಿದ್ದೇನೆಂದರೆ, “ಜನಸಂಖ್ಯೆಯಲ್ಲಿ, ಒಂದು ಧರ್ಮದಲ್ಲಿದ್ದೇವೆಂದು ಹೇಳುವ . . . ಬಹುಮಟ್ಟಿಗೆ 88% ಮಂದಿ, ಧರ್ಮ ಮತ್ತು ಪ್ರಾರ್ಥನೆಗೆ ಸಂರಕ್ಷಕ ಶಕ್ತಿಯಿದೆಯೆಂದು ಹೇಳಿದರು.” ಮನೆಯಲ್ಲಿ ಸರಿಯಾದ ಧಾರ್ಮಿಕ ಶಿಕ್ಷಣವು, ಯುವ ಜನರನ್ನು ಮಾದಕ ದ್ರವ್ಯಗಳ ದುರುಪಯೋಗ, ಭಾವನಾತ್ಮಕ ಸಂಕಟ, ಆತ್ಮಹತ್ಯೆ, ಹಿಂಸಾಚಾರ ಮುಂತಾದವುಗಳಿಂದ ಸಂರಕ್ಷಿಸುತ್ತದೆಂದು ನಿಜ ಕ್ರೈಸ್ತರಿಗೆ ತಿಳಿದಿದೆ.
ತಮ್ಮ ಕುಟುಂಬದೊಂದಿಗೆ ಕಳೆಯಲಿಕ್ಕಾಗಿ ಸಮಯವೇ ಸಿಗುವುದಿಲ್ಲವೆಂದು ಕೆಲವು ಹೆತ್ತವರಿಗನಿಸುತ್ತದೆ. ಇದು ವಿಶೇಷವಾಗಿ ಒಂಟಿ ತಾಯಂದಿರ ವಿಷಯದಲ್ಲಿ ಸತ್ಯವಾಗಿರುತ್ತದೆ. ಅವರು ತಮ್ಮ ಮಕ್ಕಳೊಂದಿಗೆ ಸಮಯವನ್ನು ಕಳೆಯಲು ಸಂತೋಷಿಸುವರು, ಆದರೆ ಅವರು ಉದ್ಯೋಗಕ್ಕೆ ಹೋಗಲೇಬೇಕಾಗುತ್ತದೆ. ತಮ್ಮ ಕುಟುಂಬದೊಂದಿಗಿರಲು ಅವರು ಅಮೂಲ್ಯವಾದ ಸಮಯವನ್ನು ಹೇಗೆ ಬದಿಗಿರಿಸಬಹುದು? “ಸುಜ್ಞಾನವನ್ನೂ ಬುದ್ಧಿಯನ್ನೂ [“ವ್ಯಾವಹಾರಿಕ ವಿವೇಕವನ್ನು,” NW] ಭದ್ರವಾಗಿಟ್ಟುಕೋ” ಎಂದು ಬೈಬಲ್ ಉತ್ತೇಜಿಸುತ್ತದೆ. (ಜ್ಞಾನೋಕ್ತಿ 3:21) ಕುಟುಂಬಕ್ಕಾಗಿ ಸಮಯವನ್ನು ಬದಿಗಿರಿಸಲಿಕ್ಕಾಗಿ ಹೆತ್ತವರು “ವ್ಯಾವಹಾರಿಕ ವಿವೇಕವನ್ನು” ಉಪಯೋಗಿಸಬಹುದು. ಹೇಗೆ?
ದಿನವೆಲ್ಲ ಕೆಲಸಮಾಡಿ ದಣಿದುಹೋಗಿರುವ ಒಬ್ಬ ಉದ್ಯೋಗಸ್ಥ ತಾಯಿ ನೀವಾಗಿರುವಲ್ಲಿ, ಊಟವನ್ನು ತಯಾರಿಸಲು ನಿಮ್ಮ ಮಕ್ಕಳು ನಿಮ್ಮೊಂದಿಗೆ ಜೊತೆಗೂಡುವಂತೆ ಕೇಳಿದರೆ ಹೇಗೆ? ಈ ರೀತಿಯಲ್ಲಿ ಜೊತೆಯಾಗಿ ಕಳೆಯುವ ಸಮಯವು, ನೀವು ಪರಸ್ಪರ ಆಪ್ತರಾಗುವಂತೆ ಅವಕಾಶವನ್ನು ನೀಡುವುದು. ಆರಂಭದಲ್ಲಿ, ಮಕ್ಕಳನ್ನು ಆ ಕೆಲಸದಲ್ಲಿ ಒಳಗೂಡಿಸುವುದರಿಂದ ಹೆಚ್ಚು ಸಮಯ ತಗಲಬಹುದು. ಆದರೆ ಸ್ವಲ್ಪ ಸಮಯದ ನಂತರ ಅದು ಆನಂದಕರ ಮಾತ್ರವಲ್ಲ ಸಮಯವನ್ನೂ ಉಳಿಸುತ್ತದೆಂಬುದನ್ನು ನೀವು ಕಂಡುಕೊಳ್ಳುವಿರಿ.
ವಾರಾಂತ್ಯಗಳಲ್ಲಿ ಮಾಡಬೇಕಾದ ಕೆಲಸಗಳ ಒಂದು ದೊಡ್ಡ ಪಟ್ಟಿಯೇ ಇರುವ ಒಬ್ಬ ತಂದೆ ನೀವಾಗಿರಬಹುದು. ಈ ಕೆಲಸಗಳಲ್ಲಿ ಕೆಲವೊಂದನ್ನು ನಿಮ್ಮ ಮಕ್ಕಳೊಂದಿಗೆ ಏಕೆ ಮಾಡಬಾರದು? ನೀವು ಜೊತೆಯಾಗಿ ಕೆಲಸಮಾಡುವಾಗ ಅವರೊಂದಿಗೆ ಮಾತಾಡಬಹುದು ಮತ್ತು ಅದೇ ಸಮಯದಲ್ಲಿ ಅಮೂಲ್ಯವಾದ ತರಬೇತಿಯನ್ನೂ ಕೊಡಬಹುದು. ನಿಮ್ಮ ಮಕ್ಕಳಲ್ಲಿ ದೇವರ ಮಾತುಗಳನ್ನು ಬೇರೂರಿಸುವ ಬೈಬಲಿನ ಬುದ್ಧಿವಾದವು, ನೀವು ಅವರೊಂದಿಗೆ “ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ,” ಹೌದು, ಪ್ರತಿಯೊಂದು ಸಂದರ್ಭದಲ್ಲಿಯೂ ಮಾತಾಡುವಂತೆ ಉತ್ತೇಜಿಸುತ್ತದೆ. ನೀವು ಜೊತೆಯಾಗಿ ಕೆಲಸ ಮಾಡುವಾಗ ನಿಮ್ಮ ಮಕ್ಕಳೊಂದಿಗೆ ಮಾತಾಡುವುದು, “ವ್ಯಾವಹಾರಿಕ ವಿವೇಕವನ್ನು” ತೋರಿಸುತ್ತದೆ.
ನಿಮ್ಮ ಕುಟುಂಬದೊಂದಿಗೆ ಸಮಯವನ್ನು ಕಳೆಯುವುದು ದೀರ್ಘ ಬಾಳಿಕೆಯ ಬಹುಮಾನಗಳನ್ನು ತರುವುದು. “ಬುದ್ಧಿವಾದಕ್ಕೆ ಕಿವಿಗೊಡುವವರಲ್ಲಿ ಜ್ಞಾನ” ಎಂದು ಬೈಬಲಿನ ಒಂದು ಜ್ಞಾನೋಕ್ತಿಯು ಹೇಳುತ್ತದೆ. (ಜ್ಞಾನೋಕ್ತಿ 13:10) ನಿಮ್ಮ ಕುಟುಂಬದೊಂದಿಗೆ ಸಂವಾದಿಸಲು ಸಮಯವನ್ನು ಬದಿಗಿರಿಸುವ ಮೂಲಕ, ದಿನನಿತ್ಯದ ಜೀವಿತದ ಹೋರಾಟಗಳಲ್ಲಿ ಅವರಿಗೆ ವಿವೇಕಯುತವಾದ ಮಾರ್ಗದರ್ಶನವನ್ನು ನೀವು ಕೊಡಲು ಶಕ್ತರಾಗುವಿರಿ. ಅಂತಹ ಮಾರ್ಗದರ್ಶನವನ್ನು ಈಗ ಕೊಡುವುದು, ತುಂಬ ಸಮಯವನ್ನು ಉಳಿಸುವುದು ಮತ್ತು ಭವಿಷ್ಯತ್ತಿನಲ್ಲಿ ವ್ಯಥೆಯನ್ನು ತಪ್ಪಿಸುವುದು. ಇನ್ನೂ ಹೆಚ್ಚಾಗಿ ಅದು ನಿಮಗೆ ಮಾತ್ರವಲ್ಲ, ಅವರಿಗೂ ಸಂತೋಷವನ್ನು ತರುವುದು. ಅಂತಹ ಮಾರ್ಗದರ್ಶನವನ್ನು ಕೊಡಲಿಕ್ಕಾಗಿ ನೀವು ದೇವರ ವಾಕ್ಯವಾದ ಬೈಬಲಿನಲ್ಲಿರುವ ವಿವೇಕದ ಸಮೃದ್ಧ ಭಂಡಾರವನ್ನು ಉಪಯೋಗಕ್ಕೆ ತರುವ ಅಗತ್ಯವಿದೆ.—ಕೀರ್ತನೆ 119:105.
[ಪುಟ 4 ರಲ್ಲಿರುವ ಚಿತ್ರ]
ತಮ್ಮ ಹೆತ್ತವರೊಂದಿಗೆ ಆಪ್ತ ಸಂಬಂಧವಿರುವ ಯುವ ಜನರು ಭಾವನಾತ್ಮಕ ಒತ್ತಡದಿಂದ ನರಳುವ ಸಂಭವವು ಕಡಿಮೆ
[ಪುಟ 5 ರಲ್ಲಿರುವ ಚಿತ್ರ]
ಒಳ್ಳೆಯ ಸಂವಾದವು ಕುಟುಂಬ ಜೀವಿತದಲ್ಲಿ ಹೇರಳವಾದ ಬಹುಮಾನಗಳನ್ನು ತರುತ್ತದೆ
[ಪುಟ 6 ರಲ್ಲಿರುವ ಚಿತ್ರ]
ನಿಮ್ಮ ಮಕ್ಕಳೊಂದಿಗೆ ನೀವು ಜೊತೆಯಾಗಿ ಕೆಲಸಮಾಡುವಾಗ, ಅವರೊಂದಿಗೆ ಸಂವಾದ ನಡೆಸಿ, ಅಮೂಲ್ಯವಾದ ತರಬೇತಿಯನ್ನೂ ನೀಡಬಹುದು