ಯೆಹೋವನು ತನ್ನ ಮಾರ್ಗವನ್ನು ನಮಗೆ ತೋರಿಸಿರುವುದಕ್ಕಾಗಿ ಸಂತೋಷಿತರು
“ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಯೆಹೋವನ ವಚನವು ಶುದ್ಧವಾದದ್ದು.”—2 ಸಮುವೇಲ 22:31.
1, 2. (ಎ) ಎಲ್ಲ ಮನುಷ್ಯರಲ್ಲಿ ಯಾವ ಅಗತ್ಯವು ಮೂಲಭೂತವಾಗಿದೆ? (ಬಿ) ಯಾರ ಮಾದರಿಯನ್ನು ಅನುಕರಿಸುವುದು ಒಳ್ಳೆಯದಾಗಿರುವುದು?
ಎಲ್ಲ ಮಾನವರಲ್ಲಿ ಮಾರ್ಗದರ್ಶನಕ್ಕಾಗಿರುವ ಅಗತ್ಯವು ಮೂಲಭೂತವಾಗಿದೆ. ಜೀವನದಲ್ಲಿ ಮಾರ್ಗದರ್ಶನ ಪಡೆಯಲು ನಮಗೆ ಸಹಾಯದ ಅಗತ್ಯವಿದೆ. ಸರಿತಪ್ಪಿನ ಮಧ್ಯೆ ಭೇದ ಕಲ್ಪಿಸಲು ನಮಗೆ ಸಹಾಯ ಮಾಡುವಂತೆ ದೇವರು ನಮಗೆ ಒಂದಿಷ್ಟು ಬುದ್ಧಿಶಕ್ತಿ ಹಾಗೂ ಮನಸ್ಸಾಕ್ಷಿಯನ್ನು ಅನುಗ್ರಹಿಸಿದ್ದಾನೆ. ಆದರೆ ನಮ್ಮ ಮನಸ್ಸಾಕ್ಷಿಯು ಒಂದು ಭರವಸಯೋಗ್ಯ ಮಾರ್ಗದರ್ಶಿಯಾಗಿ ಇರಬೇಕಾದಲ್ಲಿ, ಅದನ್ನು ತರಬೇತುಗೊಳಿಸಬೇಕಾಗಿದೆ. (ಇಬ್ರಿಯ 5:14) ಮತ್ತು ನಾವು ಸರಿಯಾದ ನಿರ್ಣಯಗಳನ್ನು ಮಾಡಬೇಕಾದರೆ, ನಮ್ಮ ಮನಸ್ಸುಗಳಿಗೆ ಸರಿಯಾದ ಮಾಹಿತಿ ಮತ್ತು ಆ ಮಾಹಿತಿಯ ಯೋಗ್ಯತೆಯನ್ನು ನಿರ್ಧರಿಸಲು ಬೇಕಾದ ತರಬೇತಿಯು ಆವಶ್ಯಕವಾಗಿದೆ. (ಜ್ಞಾನೋಕ್ತಿ 2:1-5) ಆಗಲೂ, ಜೀವಿತದ ಅನಿಶ್ಚಯತೆಗಳ ಕಾರಣ, ನಮ್ಮ ನಿರ್ಣಯಗಳು ಆಶಿಸಿದ ಪ್ರತಿಫಲವನ್ನು ನೀಡಲು ತಪ್ಪಿಹೋಗಬಹುದು. (ಪ್ರಸಂಗಿ 9:11) ಭವಿಷ್ಯತ್ತು ಕಾದಿರಿಸಿರುವುದನ್ನು ತಿಳಿದುಕೊಳ್ಳುವ ಭರವಸಯೋಗ್ಯ ಮಾರ್ಗವು ನಮ್ಮಲ್ಲಿ ಇಲ್ಲವೇ ಇಲ್ಲ.
2 ಈ ಕಾರಣ ಮತ್ತು ಇನ್ನೂ ಅನೇಕ ಕಾರಣಗಳಿಗಾಗಿ, ಪ್ರವಾದಿಯಾದ ಯೆರೆಮೀಯನು ಬರೆದುದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಜೀವಿಸಿದವರಲ್ಲಿ ಅತ್ಯಂತ ಮಹಾನ್ ಪುರುಷನಾದ ಯೇಸು ಕ್ರಿಸ್ತನು ನಿರ್ದೇಶನಕ್ಕೆ ಕಿವಿಗೊಟ್ಟನು. ಅವನು ಹೇಳಿದ್ದು: “ತಂದೆಯು ಮಾಡುವದನ್ನು ಕಂಡು ಮಗನು ಮಾಡುತ್ತಾನೆ ಹೊರತು ತನ್ನಷ್ಟಕ್ಕೆ ತಾನೇ ಏನೂ ಮಾಡಲಾರನು; ಆತನು ಮಾಡುವದನ್ನೆಲ್ಲಾ ಹಾಗೆಯೇ ಮಗನೂ ಮಾಡುತ್ತಾನೆ.” (ಯೋಹಾನ 5:19) ಹಾಗಾದರೆ, ಯೇಸುವನ್ನು ಅನುಕರಿಸಿ, ನಮ್ಮ ಹೆಜ್ಜೆಗಳನ್ನು ಮಾರ್ಗದರ್ಶಿಸುವಂತೆ ಯೆಹೋವನ ಕಡೆಗೆ ಸಹಾಯಕ್ಕಾಗಿ ನೋಡುವುದು ಎಷ್ಟು ವಿವೇಕಯುತವಾಗಿದೆ! ರಾಜ ದಾವೀದನು ಹಾಡಿದ್ದು: “ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.” (2 ಸಮುವೇಲ 22:31) ನಾವು ನಮ್ಮ ಸ್ವಂತ ವಿವೇಕವನ್ನು ಅನುಸರಿಸದೆ, ಯೆಹೋವನ ಮಾರ್ಗದಲ್ಲಿ ನಡೆಯಲು ಕೋರುವುದಾದರೆ, ನಮಗೆ ಪರಿಪೂರ್ಣ ಮಾರ್ಗದರ್ಶನವು ಲಭ್ಯವಾಗುವುದು. ದೇವರ ಮಾರ್ಗವನ್ನು ತಿರಸ್ಕರಿಸುವುದು ಕೇಡಿಗೆ ನಡೆಸುತ್ತದೆ.
ಯೆಹೋವನು ಮಾರ್ಗವನ್ನು ತೋರಿಸುತ್ತಾನೆ
3. ಯೆಹೋವನು ಆದಾಮಹವ್ವರಿಗೆ ಮಾರ್ಗದರ್ಶನವನ್ನು ನೀಡಿದ್ದು ಹೇಗೆ, ಮತ್ತು ಯಾವ ಪ್ರತೀಕ್ಷೆಗಳೊಂದಿಗೆ?
3 ಆದಾಮಹವ್ವರ ವಿಷಯವನ್ನು ಪರಿಗಣಿಸಿರಿ. ಅವರು ಪಾಪರಹಿತರಾಗಿದ್ದರೂ, ಮಾರ್ಗದರ್ಶನದ ಅಗತ್ಯ ಅವರಿಗಿತ್ತು. ಸುಂದರವಾದ ಏದೆನ್ ತೋಟದಲ್ಲಿ ಎಲ್ಲವನ್ನು ಆದಾಮನೇ ಯೋಜಿಸುವಂತೆ ಯೆಹೋವನು ಬಿಡಲಿಲ್ಲ. ಬದಲಿಗೆ ಮಾಡಬೇಕಾಗಿರುವುದನ್ನು ದೇವರು ಅವನಿಗೆ ಹೇಳಿದನು. ಮೊದಲನೆಯದಾಗಿ, ಆದಾಮನು ಎಲ್ಲ ಪ್ರಾಣಿಗಳನ್ನು ಹೆಸರಿಸಬೇಕಿತ್ತು. ತರುವಾಯ, ಯೆಹೋವನು ಆದಾಮಹವ್ವರಿಗೆ ದೀರ್ಘಕಾಲಿಕ ಗುರಿಗಳನ್ನು ನೀಡಿದನು. ಅವರು ಭೂಮಿಯನ್ನು ವಶಪಡಿಸಿಕೊಂಡು, ಅದನ್ನು ತಮ್ಮ ಮಕ್ಕಳಿಂದ ತುಂಬಿಸಿ, ಅದರಲ್ಲಿದ್ದ ಪ್ರಾಣಿಗಳ ಜಾಗ್ರತೆವಹಿಸಬೇಕಾಗಿತ್ತು. (ಆದಿಕಾಂಡ 1:28) ಇದೊಂದು ದೊಡ್ಡ ಕೆಲಸವಾಗಿದ್ದರೂ ಅದರ ಅಂತಿಮ ಫಲಿತಾಂಶವು, ಪ್ರಾಣಿಗಳೊಂದಿಗೆ ಸುಸಂಗತವಾಗಿ ಜೀವಿಸುತ್ತಿರುವ ಪರಿಪೂರ್ಣ ಮಾನವ ಕುಲದಿಂದ ತುಂಬಿರುವ ಲೋಕವ್ಯಾಪಕ ಪ್ರಮೋದವನವಾಗಿರಲಿತ್ತು. ಎಂತಹ ಒಂದು ಅದ್ಭುತಕರ ಪ್ರತೀಕ್ಷೆ! ಅಲ್ಲದೆ, ಆದಾಮಹವ್ವರು ಯೆಹೋವನ ಮಾರ್ಗದಲ್ಲಿ ನಂಬಿಗಸ್ತರಾಗಿ ನಡೆಯುತ್ತಿರುವಾಗ, ಅವರು ದೇವರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬಹುದಿತ್ತು. (ಹೋಲಿಸಿ ಆದಿಕಾಂಡ 3:8.) ಸೃಷ್ಟಿಕರ್ತನೊಂದಿಗೆ ನಿರಂತರವಾದ ವೈಯಕ್ತಿಕ ಸಂಬಂಧವನ್ನು ಹೊಂದಿರುವುದು ಎಂತಹ ಒಂದು ಅದ್ಭುತಕರ ಸುಯೋಗವಾಗಿದೆ!
4. ಭರವಸೆ ಹಾಗೂ ನಿಷ್ಠೆಯ ಕೊರತೆಯನ್ನು ಆದಾಮಹವ್ವರು ಹೇಗೆ ಪ್ರದರ್ಶಿಸಿದರು, ಮತ್ತು ಯಾವ ವಿಪತ್ಕಾರಕ ಪರಿಣಾಮಗಳೊಂದಿಗೆ?
4 ಪ್ರಥಮ ಮಾನವ ಜೋಡಿಯು, ಏದೆನ್ ತೋಟದಲ್ಲಿದ್ದ ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನುವುದನ್ನು ಯೆಹೋವನು ನಿಷೇಧಿಸಿದಾಗ, ತಮ್ಮ ವಿಧೇಯತೆಯನ್ನು ಅಂದರೆ ಯೆಹೋವನ ಮಾರ್ಗದಲ್ಲಿ ನಡೆಯುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸುವ ಅವಕಾಶವು ಅವರಿಗೆ ಕೂಡಲೇ ದೊರಕಿತು. (ಆದಿಕಾಂಡ 2:17) ಬೇಗನೆ ಅವರ ವಿಧೇಯತೆಯು ಪರೀಕ್ಷಿಸಲ್ಪಟ್ಟಿತು. ಸೈತಾನನು ತನ್ನ ವಂಚನೆಯ ಮಾತುಗಳಿಂದ ಆದಾಮಹವ್ವರನ್ನು ಸಮೀಪಿಸಿದಾಗ, ಅವರು ವಿಧೇಯರಾಗಿ ಉಳಿಯಬೇಕಾಗಿದ್ದಲ್ಲಿ ಯೆಹೋವನಿಗೆ ನಿಷ್ಠೆಯನ್ನು ತೋರಿಸಬೇಕಿತ್ತು ಮತ್ತು ಆತನ ವಾಗ್ದಾನಗಳಲ್ಲಿ ಭರವಸೆಯನ್ನು ಇಡಬೇಕಾಗಿತ್ತು. ವಿಷಾದಕರವಾಗಿ, ಅವರಲ್ಲಿ ನಿಷ್ಠೆ ಹಾಗೂ ಭರವಸೆಯ ಕೊರತೆಯಿತ್ತು. ಸೈತಾನನು ಹವ್ವಳಿಗೆ ಸ್ವಾತಂತ್ರ್ಯವನ್ನು ನೀಡಿ, ಯೆಹೋವನ ಮೇಲೆ ಸುಳ್ಳಿನ ಅಪವಾದವನ್ನು ಹೊರಿಸಿದಾಗ ಅವಳು ವಂಚಿಸಲ್ಪಟ್ಟಳು ಮತ್ತು ದೇವರಿಗೆ ಅವಿಧೇಯಳಾದಳು. ಆದಾಮನು ಅವಳನ್ನು ಅನುಸರಿಸಿ ಪಾಪಗೈದನು. (ಆದಿಕಾಂಡ 3:1-6; 1 ತಿಮೊಥೆಯ 2:14) ಇದರಿಂದಾಗಿ ಭಾರಿ ಪ್ರಮಾಣದ ನಷ್ಟವು ಉಂಟಾಯಿತು. ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಅವರು ಪ್ರಗತಿಪರವಾಗಿ ಆತನ ಚಿತ್ತವನ್ನು ಮಾಡಿದಂತೆ, ಅದು ಸದಾ ಹೆಚ್ಚುವ ಆನಂದವನ್ನು ಅವರಿಗೆ ನೀಡಬಹುದಿತ್ತು. ಆದರೆ ಈಗ ಮರಣವು ಅವರ ಮೇಲೆ ಜಯಸಾಧಿಸುವ ವರೆಗೆ, ಅವರ ಜೀವಿತಗಳು ನಿರಾಶೆ ಮತ್ತು ವೇದನೆಯಿಂದ ತುಂಬಿದವು.—ಆದಿಕಾಂಡ 3:16-19; 5:1-5.
5. ಯೆಹೋವನ ದೂರವ್ಯಾಪ್ತಿಯ ಉದ್ದೇಶವೇನು, ಮತ್ತು ನಂಬಿಗಸ್ತ ಮಾನವರು ಅದರ ನೆರವೇರಿಕೆಯನ್ನು ನೋಡುವಂತೆ ಆತನು ಹೇಗೆ ಸಹಾಯಮಾಡುತ್ತಾನೆ?
5 ಆದರೂ, ಒಂದು ದಿನ ಭೂಮಿಯು ಪರಿಪೂರ್ಣ, ಪಾಪರಹಿತ ಮಾನವರಿಗೆ ಒಂದು ಪ್ರಮೋದವನ ಬೀಡಾಗಿರುವುದೆಂಬ ಯೆಹೋವನ ಉದ್ದೇಶವು ಬದಲಾಗಲಿಲ್ಲ. (ಕೀರ್ತನೆ 37:11, 29) ಮತ್ತು ತನ್ನ ಮಾರ್ಗದಲ್ಲಿ ನಡೆಯುವವರಿಗೆ ಹಾಗೂ ಆ ವಾಗ್ದಾನದ ನೆರವೇರಿಕೆಯನ್ನು ನೋಡಲು ನಿರೀಕ್ಷಿಸುವವರಿಗೆ ಪರಿಪೂರ್ಣ ಮಾರ್ಗದರ್ಶನವನ್ನು ನೀಡಲು ಆತನೆಂದೂ ತಪ್ಪಿಹೋಗಿಲ್ಲ. ನಮ್ಮಲ್ಲಿ ಯಾರಿಗೆ ಕೇಳಲು ಕಿವಿಗಳಿವೆಯೊ, ಅಂತಹವರಿಗೆ ಯೆಹೋವನ ಧ್ವನಿಯು ಹೀಗೆ ಹೇಳುತ್ತದೆ: “ಇದೇ ಮಾರ್ಗ, ಇದರಲ್ಲೇ ನಡೆಯಿರಿ.”—ಯೆಶಾಯ 30:21.
ಕೆಲವರು ಯೆಹೋವನ ಮಾರ್ಗದಲ್ಲಿ ನಡೆದರು
6. ಪುರಾತನ ಸಮಯಗಳ ಯಾವ ಇಬ್ಬರು ಪುರುಷರು ಯೆಹೋವನ ಮಾರ್ಗದಲ್ಲಿ ನಡೆದರು, ಮತ್ತು ಯಾವ ಫಲಿತಾಂಶಗಳೊಂದಿಗೆ?
6 ಬೈಬಲ್ ದಾಖಲೆಗನುಸಾರ, ಆದಾಮಹವ್ವರ ಸಂತಾನದಲ್ಲಿ ಕೆಲವರು ಮಾತ್ರವೇ ಯೆಹೋವನ ಮಾರ್ಗದಲ್ಲಿ ನಡೆದರು. ಇವರಲ್ಲಿ ಪ್ರಥಮನು ಹೇಬೆಲನಾಗಿದ್ದನು. ಅವನು ಅಕಾಲ ಮರಣಕ್ಕೆ ತುತ್ತಾದರೂ, ಯೆಹೋವನ ಅನುಗ್ರಹ ಅವನಿಗಿರುವುದರಿಂದ, ದೇವರ ಕ್ಲುಪ್ತ ಕಾಲದಲ್ಲಿ ನಡೆಯಲಿರುವ ‘ನೀತಿವಂತರ . . . ಪುನರುತ್ಥಾನ’ದಲ್ಲಿ ಸೇರಿರುವ ನಿಶ್ಚಯವಾದ ಪ್ರತೀಕ್ಷೆ ಅವನಿಗಿದೆ. (ಅ. ಕೃತ್ಯಗಳು 24:15) ಭೂಮಿ ಮತ್ತು ಮಾನವ ಕುಲಕ್ಕಾಗಿದ್ದ ಯೆಹೋವನ ಮಹಾ ಉದ್ದೇಶದ ಭಾರೀ ನೆರವೇರಿಕೆಯನ್ನು ಅವನು ನೋಡುವನು. (ಇಬ್ರಿಯ 11:4) ಯೆಹೋವನ ಮಾರ್ಗದಲ್ಲಿ ನಡೆದ ಮತ್ತೊಬ್ಬ ವ್ಯಕ್ತಿಯು ಹನೋಕನಾಗಿದ್ದನು. ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತು ಅವನು ಮಾಡಿದ ಪ್ರವಾದನೆಯು ಯೂದನ ಪುಸ್ತಕದಲ್ಲಿ ಸಂರಕ್ಷಿಸಲ್ಪಟ್ಟಿದೆ. (ಯೂದ 14, 15) ಹನೋಕನು ಕೂಡ ತನ್ನ ಸಂಭಾವ್ಯ ಆಯುಷ್ಯದ ವರೆಗೆ ಜೀವಿಸಲಿಲ್ಲ. (ಆದಿಕಾಂಡ 5:21-24) ಆದರೂ, “ಅವನು . . . ದೇವರಿಗೆ ಮೆಚ್ಚಿಕೆಯಾದವನಾಗಿದ್ದನೆಂದು ಸಾಕ್ಷಿ ಉಂಟು.” (ಇಬ್ರಿಯ 11:5) ಅವನು ಮರಣಹೊಂದಿದಾಗ ಹೇಬೆಲನಂತೆ ಪುನರುತ್ಥಾನದ ನಿಶ್ಚಯವಾದ ಪ್ರತೀಕ್ಷೆಯನ್ನು ಪಡೆದಿದ್ದು, ಯೆಹೋವನ ಉದ್ದೇಶಗಳ ನೆರವೇರಿಕೆಯನ್ನು ನೋಡುವವರಲ್ಲಿ ಒಬ್ಬನಾಗಿರುವನು.
7. ನೋಹ ಮತ್ತು ಅವನ ಕುಟುಂಬದವರು ಯೆಹೋವನಿಗೆ ನಿಷ್ಠೆಯನ್ನು ತೋರಿಸಿ, ಆತನಲ್ಲಿ ಭರವಸೆಯಿಟ್ಟದ್ದು ಹೇಗೆ?
7 ಪ್ರಳಯಪೂರ್ವ ಲೋಕವು ದುಷ್ಟತನದಲ್ಲಿ ಇನ್ನೂ ಆಳವಾಗಿ ಮುಳುಗಿದಂತೆ, ಯೆಹೋವನಿಗೆ ವಿಧೇಯರಾಗಿರುವುದು ಎಲ್ಲಕ್ಕಿಂತಲೂ ಹೆಚ್ಚಾಗಿ ಒಂದು ನಿಷ್ಠೆಯ ಪರೀಕ್ಷೆಯಾಯಿತು. ಆ ಲೋಕದ ಅಂತ್ಯದೊಳಗಾಗಿ, ಕೇವಲ ಒಂದು ಚಿಕ್ಕ ಗುಂಪು ಯೆಹೋವನ ಮಾರ್ಗದಲ್ಲಿ ನಡೆಯುತ್ತಾ ಇತ್ತು. ನೋಹ ಮತ್ತು ಅವನ ಕುಟುಂಬದವರು ದೇವರಿಗೆ ಕಿವಿಗೊಟ್ಟು, ಆತನ ಮಾತಿನಲ್ಲಿ ಭರವಸೆಯಿಟ್ಟರು. ತಮ್ಮ ಮುಂದೆ ಇದ್ದ ಕೆಲಸಗಳನ್ನು ಅವರು ನಂಬಿಗಸ್ತಿಕೆಯಿಂದ ಪೂರ್ತಿಗೊಳಿಸಿ, ಆಗಿನ ಲೋಕದ ದುಷ್ಟ ಆಚರಣೆಗಳ ಪಾಶದಲ್ಲಿ ಸಿಕ್ಕಿಕೊಳ್ಳಲು ನಿರಾಕರಿಸಿದರು. (ಆದಿಕಾಂಡ 6:5-7, 13-16; ಇಬ್ರಿಯ 11:7; 2 ಪೇತ್ರ 2:5) ಅವರ ನಿಷ್ಠಾಪೂರ್ವಕ ಹಾಗೂ ಭರವಸಯೋಗ್ಯ ವಿಧೇಯತೆಗೆ ನಾವು ಆಭಾರಿಗಳಾಗಿರಸಾಧ್ಯವಿದೆ. ಅದರಿಂದಾಗಿ ಅವರು ಜಲಪ್ರಳಯದಿಂದ ಪಾರಾಗಿ ನಮ್ಮ ಪೂರ್ವಜರಾದರು.—ಆದಿಕಾಂಡ 6:22; 1 ಪೇತ್ರ 3:20.
8. ಇಸ್ರಾಯೇಲ್ ಜನಾಂಗಕ್ಕೆ ದೇವರ ಮಾರ್ಗದಲ್ಲಿ ನಡೆಯುವುದು ಏನನ್ನು ಒಳಗೊಂಡಿತು?
8 ಸಕಾಲದಲ್ಲಿ, ಯೆಹೋವನು ನಂಬಿಗಸ್ತ ಯಾಕೋಬನ ಸಂತತಿಯವರೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿದನು, ಮತ್ತು ಅವರು ಆತನ ವಿಶೇಷ ಜನಾಂಗವಾದರು. (ವಿಮೋಚನಕಾಂಡ 19:5, 6) ಒಂದು ಲಿಖಿತ ಧರ್ಮಶಾಸ್ತ್ರ, ಯಾಜಕತ್ವ, ಮತ್ತು ಸತತವಾದ ಪ್ರವಾದನಾತ್ಮಕ ಮಾರ್ಗದರ್ಶನದ ಮೂಲಕ ಯೆಹೋವನು ತನ್ನ ಒಡಂಬಡಿಕೆಯ ಜನರಿಗೆ ನಿರ್ದೇಶನವನ್ನು ನೀಡಿದನು. ಆದರೆ ಆ ನಿರ್ದೇಶನಕ್ಕನುಸಾರ ನಡೆಯುವುದು ಇಸ್ರಾಯೇಲ್ಯರಿಗೇ ಬಿಟ್ಟ ವಿಷಯವಾಗಿತ್ತು. ಯೆಹೋವನು ತನ್ನ ಪ್ರವಾದಿಯ ಮೂಲಕ ಇಸ್ರಾಯೇಲ್ಯರಿಗೆ ಹೇಳಿದ್ದು: “ನೋಡಿರಿ, ಈ ಹೊತ್ತು ನಾನು ಆಶೀರ್ವಾದವನ್ನೂ ಶಾಪವನ್ನೂ ನಿಮ್ಮ ಮುಂದೆ ಇಡುತ್ತಾ ಇದ್ದೇನೆ. ನಾನು ಈಗ ನಿಮಗೆ ಬೋಧಿಸುವ ನಿಮ್ಮ ದೇವರಾದ ಯೆಹೋವನ ಆಜ್ಞೆಗಳಿಗೆ ನೀವು ವಿಧೇಯರಾಗಿ ನಡೆದರೆ ಆಶೀರ್ವಾದವೂ ಈ ಆಜ್ಞೆಗಳಿಗೆ ವಿಧೇಯರಾಗದೆ ನಾನು ಈಗ ಬೋಧಿಸುವ ಮಾರ್ಗವನ್ನು ಬಿಟ್ಟು ನಿಮಗೆ ಗೊತ್ತಿಲ್ಲದ ಇತರ ದೇವರುಗಳನ್ನು ಅವಲಂಬಿಸಿದರೆ ಶಾಪವೂ ನಿಮಗುಂಟಾಗುವವು.”—ಧರ್ಮೋಪದೇಶಕಾಂಡ 11:26-28.
ಕೆಲವರು ಯೆಹೋವನ ಮಾರ್ಗವನ್ನು ತ್ಯಜಿಸಿಬಿಟ್ಟ ಕಾರಣ
9, 10. ಯಾವ ಸನ್ನಿವೇಶದ ಕಾರಣ ಇಸ್ರಾಯೇಲ್ಯರು ಯೆಹೋವನಲ್ಲಿ ಭರವಸೆಯಿಟ್ಟು, ಆತನ ಕಡೆಗೆ ನಿಷ್ಠೆಯನ್ನು ಬೆಳೆಸಿಕೊಳ್ಳಬೇಕಿತ್ತು?
9 ಆದಾಮಹವ್ವರ ವಿಷಯದಲ್ಲಿ ಸತ್ಯವಾಗಿದ್ದಂತೆಯೇ, ಇಸ್ರಾಯೇಲ್ಯರು ವಿಧೇಯರಾಗಿ ಉಳಿಯಬೇಕಾಗಿದ್ದಲ್ಲಿ, ಅವರು ಯೆಹೋವನಲ್ಲಿ ಭರವಸೆಯಿಡಬೇಕಾಗಿತ್ತು ಮತ್ತು ಆತನಿಗೆ ನಿಷ್ಠಾವಂತರಾಗಿರಬೇಕಿತ್ತು. ಏಕೆಂದರೆ ಇಸ್ರಾಯೇಲ್ ದೇಶವು ವೈರಿಗಳಿಂದ ಸುತ್ತುವರಿಯಲ್ಪಟ್ಟಿದ್ದ ಚಿಕ್ಕ ಜನಾಂಗವಾಗಿತ್ತು. ನೈರುತ್ಯಕ್ಕೆ ಐಗುಪ್ತ ಹಾಗೂ ಇಥಿಯೋಪಿಯ ದೇಶವಿತ್ತು. ಈಶಾನ್ಯಕ್ಕೆ ಸಿರಿಯ ಮತ್ತು ಅಶ್ಶೂರ್ಯ ರಾಷ್ಟ್ರಗಳಿದ್ದವು. ಅದರ ಸುತ್ತಮುತ್ತಲು ಫಿಲಿಷ್ಟಿಯ, ಅಮ್ಮೋನ್, ಮೋವಾಬ್, ಮತ್ತು ಎದೋಮ್ ರಾಷ್ಟ್ರಗಳಿದ್ದವು. ಒಂದಲ್ಲ ಒಂದು ಸಮಯದಲ್ಲಿ ಇವೆಲ್ಲವೂ ಇಸ್ರಾಯೇಲಿನ ವೈರಿಗಳಾಗಿದ್ದವು. ಅಲ್ಲದೆ ಅವೆಲ್ಲವೂ ಸುಳ್ಳು ಧರ್ಮವನ್ನು ಅನುಸರಿಸಿದವು. ಮೂರ್ತಿಪೂಜೆ, ಜ್ಯೋತಿಶ್ಶಾಸ್ತ್ರ, ಕೆಲವು ವಿದ್ಯಮಾನಗಳಲ್ಲಿ ಘೋರವಾದ ಲೈಂಗಿಕ ಸಂಸ್ಕಾರಗಳು ಮತ್ತು ಮಕ್ಕಳ ಕ್ರೂರ ಯಜ್ಞಾರ್ಪಣೆ, ಈ ಧರ್ಮಗಳ ವಿಶಿಷ್ಟ ಗುಣಗಳಾಗಿದ್ದವು. ದೊಡ್ಡ ಕುಟುಂಬಗಳು, ಫಲವತ್ತಾದ ಕ್ಲೊಯುಗಳು, ಮತ್ತು ಯುದ್ಧದಲ್ಲಿ ವಿಜಯಕ್ಕಾಗಿ ಇಸ್ರಾಯೇಲಿನ ನೆರೆಯವರು ತಮ್ಮ ದೇವರುಗಳನ್ನು ಅವಲಂಬಿಸಿದರು.
10 ಇಸ್ರಾಯೇಲ್ ಜನಾಂಗವು ಮಾತ್ರ ಒಬ್ಬನೇ ದೇವರಾದ ಯೆಹೋವನನ್ನು ಆರಾಧಿಸಿತು. ಅವರು ಆತನ ನಿಯಮಗಳಿಗೆ ವಿಧೇಯರಾದಲ್ಲಿ, ದೊಡ್ಡ ಕುಟುಂಬಗಳು, ಸಮೃದ್ಧವಾದ ಕ್ಲೊಯುಗಳು ಮತ್ತು ತಮ್ಮ ವೈರಿಗಳ ವಿರುದ್ಧ ಭದ್ರತೆಯ ಆಶೀರ್ವಾದಗಳನ್ನು ವಾಗ್ದಾನಿಸಿದನು. (ಧರ್ಮೋಪದೇಶಕಾಂಡ 28:1-14) ದುಃಖಕರವಾಗಿ, ಇಸ್ರಾಯೇಲ್ ಜನರಲ್ಲಿ ಅನೇಕರು ಇದನ್ನು ಮಾಡಲು ತಪ್ಪಿದರು. ಯಾರು ಯೆಹೋವನ ಮಾರ್ಗದಲ್ಲಿ ನಡೆದರೊ, ಅವರಲ್ಲಿ ಅನೇಕರು ತಮ್ಮ ನಿಷ್ಠೆಗಾಗಿ ಕಷ್ಟಾನುಭವಿಸಿದರು. ಕೆಲವರಿಗೆ ಜೊತೆ ಇಸ್ರಾಯೇಲ್ಯರು ಹಿಂಸೆಕೊಟ್ಟರು, ಗೇಲಿಮಾಡಿದರು, ಚಾವಟಿಯಿಂದ ಹೊಡೆದರು, ಬಂಧಿಸಿದರು, ಕಲ್ಲೆಸೆದರು, ಮತ್ತು ಕೊಂದರು. (ಅ. ಕೃತ್ಯಗಳು 7:51, 52; ಇಬ್ರಿಯ 11:35-38) ನಂಬಿಗಸ್ತರಿಗೆ ಅದು ಎಂತಹ ಒಂದು ಪರೀಕ್ಷೆಯಾಗಿದ್ದಿರಬೇಕು! ಆದರೆ ಯೆಹೋವನ ಮಾರ್ಗದಿಂದ ಅಷ್ಟೊಂದು ಜನರು ದಾರಿತಪ್ಪಿದ್ದೇಕೆ? ಅವರ ತಪ್ಪಾದ ಆಲೋಚನೆಯನ್ನು ಅರ್ಥಮಾಡಿಕೊಳ್ಳಲು, ಇಸ್ರಾಯೇಲಿನ ಇತಿಹಾಸದ ಎರಡು ಉದಾಹರಣೆಗಳು ನಮಗೆ ಸಹಾಯ ಮಾಡುವವು.
ಆಹಾಜನ ಕೆಟ್ಟ ಮಾದರಿ
11, 12. (ಎ) ಅರಾಮ್ಯರಿಂದ ಬೆದರಿಸಲ್ಪಟ್ಟಾಗ ಆಹಾಜನು ಏನನ್ನು ಮಾಡಲು ನಿರಾಕರಿಸಿದನು? (ಬಿ) ಭದ್ರತೆಗಾಗಿ ಆಹಾಜನು ಯಾವ ಎರಡು ಮೂಲಗಳ ಕಡೆಗೆ ನೋಡಿದನು?
11 ಆಹಾಜನು ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ, ಯೆಹೂದದ ದಕ್ಷಿಣ ರಾಜ್ಯವನ್ನು ಆಳಿದನು. ಅವನ ಆಳ್ವಿಕೆಯು ಶಾಂತಿಪೂರ್ಣವಾಗಿರಲಿಲ್ಲ. ಒಂದು ಸಂದರ್ಭದಲ್ಲಿ ಅರಾಮ್ಯರ ಮತ್ತು ಇಸ್ರಾಯೇಲಿನ ಉತ್ತರ ರಾಜ್ಯವು ಅವನ ವಿರುದ್ಧ ಯುದ್ಧಕ್ಕೆ ಒಟ್ಟುಸೇರಿದಾಗ, “ಅರಸನ ಮನವೂ ಪ್ರಜೆಯ ಮನವೂ . . . ನಡುಗಿದವು.” (ಯೆಶಾಯ 7:1, 2) ಆದರೆ, ಯೆಹೋವನು ಬೆಂಬಲವನ್ನು ನೀಡಿ, ಆತನನ್ನು ಪರೀಕ್ಷಿಸುವಂತೆ ಆಹಾಜನಲ್ಲಿ ಕೇಳಿಕೊಂಡಾಗ, ಆಹಾಜನು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟನು! (ಯೆಶಾಯ 7:10-12) ಫಲಸ್ವರೂಪವಾಗಿ, ಯೆಹೂದವು ಯುದ್ಧದಲ್ಲಿ ಸೋತು, ಭಾರಿ ನಷ್ಟವನ್ನು ಅನುಭವಿಸಿತು.—2 ಪೂರ್ವಕಾಲವೃತ್ತಾಂತ 28:1-8.
12 ಆಹಾಜನು ಯೆಹೋವನನ್ನು ಪರೀಕ್ಷಿಸಲು ನಿರಾಕರಿಸಿದರೂ, ಅಶ್ಶೂರದ ರಾಜನಿಂದ ಸಹಾಯವನ್ನು ಕೇಳಲು ಅವನು ಹಿಂಜರಿಯಲಿಲ್ಲ. ಆದರೂ, ಯೆಹೂದವು ತನ್ನ ನೆರೆಯವರಿಂದ ಸತತವಾಗಿ ಕಷ್ಟಾನುಭವಿಸುತ್ತಾ ಇತ್ತು. ಅಶ್ಶೂರವು ಆಹಾಜನ ವಿರುದ್ಧ ತಿರುಗಿ “ಅವನನ್ನು ಕುಗ್ಗಿಸಿ”ದಾಗ, ರಾಜನು “ತನ್ನ ಅಪಜಯಕ್ಕೆ ಕಾರಣವಾಗಿದ್ದ ದಮಸ್ಕದ ದೇವತೆಗಳಿಗೆ ಯಜ್ಞಸಮರ್ಪಿಸುವವನಾದನು.” ಅವನು ತನ್ನಲ್ಲಿಯೇ ಅಂದುಕೊಂಡದ್ದು: “ಅರಾಮ್ರಾಜರ ದೇವತೆಗಳು ಅವರಿಗೆ ಜಯವನ್ನನುಗ್ರಹಿಸಿದವಲ್ಲಾ; ನಾನೂ ಅವುಗಳಿಗೆ ಯಜ್ಞಸಮರ್ಪಿಸುವೆನು, ಆಗ ನನಗೂ ಜಯವಾಗುವದು.”—2 ಪೂರ್ವಕಾಲವೃತ್ತಾಂತ 28:20, 23.
13. ಅರಾಮ್ಯರ ದೇವರುಗಳ ಕಡೆಗೆ ತಿರುಗುವ ಮೂಲಕ ಆಹಾಜನು ಏನನ್ನು ತೋರಿಸಿದನು?
13 ತರುವಾಯ ಯೆಹೋವನು ಇಸ್ರಾಯೇಲ್ ಜನಾಂಗಕ್ಕೆ ಹೇಳಿದ್ದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ. ನೀನು ನನ್ನ ಆಜ್ಞೆಗಳನ್ನು ಕೇಳಿದ್ದರೆ ಎಷ್ಟೋ ಚೆನ್ನಾಗಿತ್ತು! ನಿನ್ನ ಸುಖವು ದೊಡ್ಡ ನದಿಯಂತೆಯೂ ನಿನ್ನ ಕ್ಷೇಮವು ಸಮುದ್ರದ ಅಲೆಗಳ ಹಾಗೂ ಇರುತ್ತಿದ್ದವು.” (ಯೆಶಾಯ 48:17, 18) ಅರಾಮ್ಯರ ದೇವರುಗಳ ಕಡೆಗೆ ತಿರುಗುವ ಮೂಲಕ, ‘ತಾನು ನಡೆಯಬೇಕಾದ ದಾರಿಯಿಂದ’ ಬಹಳಷ್ಟು ದೂರ ಸರಿದಿದ್ದಾನೆ ಎಂಬುದನ್ನು ಆಹಾಜನು ರುಜುಪಡಿಸಿದನು. ಅವನು ಅನ್ಯಜನಾಂಗಗಳ ಆಲೋಚನೆಯಿಂದ ಪೂರ್ಣವಾಗಿ ತಪ್ಪುದಾರಿಗೆ ಎಳೆಯಲ್ಪಟ್ಟು, ಭದ್ರತೆಗಾಗಿ ಯೆಹೋವನ ಕಡೆಗೆ ನೋಡದೆ ಅವರ ಸುಳ್ಳು ಮೂಲಗಳ ಕಡೆಗೆ ನೋಡಿದನು.
14. ಸುಳ್ಳು ದೇವರುಗಳ ಕಡೆಗೆ ತಿರುಗಲು ಆಹಾಜನಿಗೆ ಯಾವ ಕಾರಣವೂ ಇರಲಿಲ್ಲವೇಕೆ?
14 ಅರಾಮ್ಯರ ದೇವರುಗಳನ್ನು ಸೇರಿಸಿ, ಅನ್ಯಜನಾಂಗಗಳ ದೇವರುಗಳು “ಬೆಲೆಯಿಲ್ಲದ ದೇವರುಗಳು” ಎಂದು ಬಹಳ ಹಿಂದೆಯೇ ರುಜುವಾಗಿತ್ತು. (ಯೆಶಾಯ 2:8, NW) ಈ ಮೊದಲು ರಾಜ ದಾವೀದನ ಆಳ್ವಿಕೆಯ ಸಮಯದಲ್ಲಿ, ಅರಾಮ್ಯರು ದಾವೀದನ ಸೇವಕರಾದಾಗ, ಯೆಹೋವನೇ ಅವರೆಲ್ಲ ದೇವರುಗಳಿಗಿಂತ ಸರ್ವಶ್ರೇಷ್ಠನೆಂಬುದು ಸ್ಪಷ್ಟವಾಗಿ ಗೋಚರವಾಯಿತು. (1 ಪೂರ್ವಕಾಲವೃತ್ತಾಂತ 18:5, 6) “ದೇವಾಧಿದೇವನಾಗಿಯೂ ಕರ್ತರ ಕರ್ತನಾಗಿಯೂ . . . ಪರಮದೇವರೂ ಪರಾಕ್ರಮಿಯೂ ಭಯಂಕರನೂ” ಆಗಿರುವ ಯೆಹೋವನು ಮಾತ್ರ ನಿಜವಾದ ಭದ್ರತೆಯನ್ನು ಒದಗಿಸಬಲ್ಲನು. (ಧರ್ಮೋಪದೇಶಕಾಂಡ 10:17) ಆಹಾಜನಾದರೊ ಯೆಹೋವನ ಬೆಂಬಲವನ್ನು ತಿರಸ್ಕರಿಸಿ, ಭದ್ರತೆಗಾಗಿ ಅನ್ಯಜನಾಂಗಗಳ ದೇವರುಗಳನ್ನು ಆತುಕೊಂಡನು. ಇದರ ಪರಿಣಾಮವು ಯೆಹೂದಕ್ಕೆ ವಿಪತ್ಕಾರಕವಾಗಿತ್ತು.—2 ಪೂರ್ವಕಾಲವೃತ್ತಾಂತ 28:24, 25.
ಐಗುಪ್ತದಲ್ಲಿ ಯೆರೆಮೀಯನೊಂದಿಗಿದ್ದ ಯೆಹೂದ್ಯರು
15. ಐಗುಪ್ತದಲ್ಲಿ ಯೆರೆಮೀಯನ ದಿನದ ಯೆಹೂದ್ಯರು ಯಾವ ವಿಧದಲ್ಲಿ ಪಾಪಗೈದರು?
15 ತನ್ನ ಜನರ ಭಾರಿ ಅಪನಂಬಿಗಸ್ತಿಕೆಯ ಕಾರಣ, ಸಾ.ಶ.ಪೂ. 607ರಲ್ಲಿ ಬಬಿಲೋನ್ಯರು ಯೆರೂಸಲೇಮ್ ಮತ್ತು ಅದರ ದೇವಾಲಯವನ್ನು ನಾಶಪಡಿಸುವಂತೆ ಯೆಹೋವನು ಅನುಮತಿಸಿದನು. ಆ ಜನಾಂಗದವರಲ್ಲಿ ಹೆಚ್ಚಿನವರು ಬಾಬೆಲಿಗೆ ಗಡೀಪಾರು ಮಾಡಲ್ಪಟ್ಟರು. ಆದರೆ ಕೆಲವರು ಯೆರೂಸಲೇಮಿನಲ್ಲೇ ಉಳಿದರು, ಅವರಲ್ಲಿ ಪ್ರವಾದಿಯಾದ ಯೆರೆಮೀಯನು ಒಬ್ಬನಾಗಿದ್ದನು. ಅಧಿಪತಿಯಾದ ಗೆದಲ್ಯನ ಹತ್ಯೆಯಾದಾಗ, ಈ ಗುಂಪಿನವರು ಯೆರೆಮೀಯನನ್ನು ತಮ್ಮೊಂದಿಗೆ ಕರೆದುಕೊಂಡು ಐಗುಪ್ತಕ್ಕೆ ಓಡಿಹೋದರು. (2 ಅರಸು 25:22-26; ಯೆರೆಮೀಯ 43:5-7) ಅಲ್ಲಿ ಅವರು ಸುಳ್ಳು ದೇವತೆಗಳಿಗೆ ಬಲಿಗಳನ್ನು ಅರ್ಪಿಸಲಾರಂಭಿಸಿದರು. ಯೆರೆಮೀಯನು ಆ ಅಪನಂಬಿಗಸ್ತ ಯೆಹೂದ್ಯರೊಂದಿಗೆ ಅತ್ಯಾಸಕ್ತಿಯಿಂದ ತರ್ಕಿಸಿದರೂ, ಅವರು ಹಟಮಾರಿಗಳಾಗಿದ್ದರು. ಅವರು ಯೆಹೋವನ ಕಡೆಗೆ ತಿರುಗಲು ನಿರಾಕರಿಸಿ, “ಗಗನದ ಒಡತಿಗೆ” ಧೂಪಹಾಕುತ್ತಾ ಇರುವೆವೆಂದು ಪಟ್ಟುಹಿಡಿದರು. ಏಕೆ? ಏಕೆಂದರೆ ಅವರು ಮತ್ತು ಅವರ ಪೂರ್ವಜರು, “ಯೆಹೂದದ ಊರುಗಳಲ್ಲಿ ಮತ್ತು ಯೆರೂಸಲೇಮಿನ ಬೀದಿಗಳಲ್ಲಿ . . . ಯಾವ ಕೇಡನ್ನೂ ಕಾಣದೆ ಹೊಟ್ಟೆತುಂಬಾ ಉಂಡು ಸುಖಪಡುತ್ತಿದ್ದ” ಸಮಯದಲ್ಲಿ ಇದನ್ನೇ ಮಾಡಿದ್ದರು. (ಯೆರೆಮೀಯ 44:16, 17) ಯೆಹೂದ್ಯರು ಹೀಗೂ ವಾದಿಸಿದರು: “ಆದರೆ ನಾವು ಗಗನದ ಒಡತಿಗೆ ಧೂಪಹಾಕುವದನ್ನೂ ಪಾನವನ್ನು ನೈವೇದ್ಯವಾಗಿ ಸುರಿಯುವದನ್ನೂ ನಿಲ್ಲಿಸಿಬಿಟ್ಟಂದಿನಿಂದ ಎಲ್ಲಾ ಕೊರತೆಗೂ ಗುರಿಯಾಗಿ ಖಡ್ಗಕ್ಷಾಮಗಳಿಂದ ನಾಶವಾಗುತ್ತಿದ್ದೇವೆ.”—ಯೆರೆಮೀಯ 44:18.
16. ಐಗುಪ್ತದಲ್ಲಿದ್ದ ಯೆಹೂದ್ಯರು ತಮ್ಮ ಆಲೋಚನಾಕ್ರಮದಲ್ಲಿ ತಪ್ಪಿಹೋಗಿದ್ದರೇಕೆ?
16 ನಾವು ಇಷ್ಟಪಡುವ ವಿಷಯಗಳೇ ಸ್ಮರಣೆಯಲ್ಲಿರುತ್ತವೆಂಬುದು ಎಷ್ಟು ಸತ್ಯ! ಆದರೆ ನಿಜಾಂಶಗಳು ಏನಾಗಿದ್ದವು? ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ದೇಶದಲ್ಲಿ ಯೆಹೂದ್ಯರು ಸುಳ್ಳು ದೇವರುಗಳಿಗೆ ಬಲಿ ಅರ್ಪಿಸಿದ್ದರೆಂಬುದು ಖಂಡಿತ. ಕೆಲವೊಮ್ಮೆ, ಆಹಾಜನ ಸಮಯದಲ್ಲಾದಂತೆ ಅವರು ಧರ್ಮಭ್ರಷ್ಟತೆಯ ಕಾರಣ ಕಷ್ಟಾನುಭವಿಸಿದರು. ಹಾಗಿದ್ದರೂ ತನ್ನ ಒಡಂಬಡಿಕೆಯ ಜನರೊಂದಿಗೆ ಯೆಹೋವನು “ದೀರ್ಘಶಾಂತ”ನಾಗಿದ್ದನು. (ವಿಮೋಚನಕಾಂಡ 34:6; ಕೀರ್ತನೆ 86:15) ಅವರು ಪಶ್ಚಾತ್ತಾಪ ಪಡುವಂತೆ ಅವರನ್ನು ಪ್ರೇರಿಸಲು, ಆತನು ತನ್ನ ಪ್ರವಾದಿಗಳನ್ನು ಕಳುಹಿಸಿದನು. ಕೆಲವೊಂದು ಸಲ ರಾಜನು ನಂಬಿಗಸ್ತನಾಗಿದ್ದಾಗ ಯೆಹೋವನು ಅವನನ್ನು ಆಶೀರ್ವದಿಸಿದನು, ಮತ್ತು ಜನರಲ್ಲಿ ಹೆಚ್ಚಿನವರು ಅಪನಂಬಿಗಸ್ತರಾಗಿದ್ದರೂ ಆ ಆಶೀರ್ವಾದದಿಂದ ಪ್ರಯೋಜನಪಡೆದರು. (2 ಪೂರ್ವಕಾಲವೃತ್ತಾಂತ 20:29-33; 27:1-6) ಈಗ ಐಗುಪ್ತದಲ್ಲಿದ್ದ ಯೆಹೂದ್ಯರು, ಈ ಮೊದಲು ತಾವು ಸ್ವದೇಶದಲ್ಲಿ ಅನುಭವಿಸಿದ್ದ ಯಾವುದೇ ಏಳಿಗೆಗೆ ಸುಳ್ಳು ದೇವರುಗಳೇ ಕಾರಣರೆಂದು ಪ್ರತಿಪಾದಿಸಿದ್ದು ಎಷ್ಟು ತಪ್ಪಾಗಿತ್ತು!
17. ಯೆಹೂದವು ತನ್ನ ದೇಶ ಹಾಗೂ ದೇವಾಲಯವನ್ನು ಏಕೆ ಕಳೆದುಕೊಂಡಿತು?
17 ಸಾ.ಶ.ಪೂ. 607ರ ಮುಂಚೆ, ಯೆಹೋವನು ಯೆಹೂದದ ಜನರನ್ನು ಹೀಗೆ ಪ್ರೇರಿಸಿದ್ದನು: “ನನ್ನ ಧ್ವನಿಗೆ ಕಿವಿಗೊಡಿರಿ, ನಾನು ನಿಮ್ಮ ದೇವರಾಗಿರುವೆನು, ನೀವು ನನ್ನ ಪ್ರಜೆಯಾಗಿರುವಿರಿ; ನಿಮಗೆ ಹಿತವಾಗುವಂತೆ ನಾನು ವಿಧಿಸುವ ಮಾರ್ಗದಲ್ಲೇ ನಡೆಯಿರಿ.” (ಯೆರೆಮೀಯ 7:23) ‘ಯೆಹೋವನು ವಿಧಿಸಿದ ಮಾರ್ಗದಲ್ಲಿ ನಡೆಯಲು’ ಯೆಹೂದ್ಯರು ನಿರಾಕರಿಸಿದ್ದ ಕಾರಣ, ಅವರು ತಮ್ಮ ದೇವಾಲಯವನ್ನು ಮತ್ತು ದೇಶವನ್ನು ಕಳೆದುಕೊಂಡರು. ಅಂತಹ ಭಯಂಕರ ತಪ್ಪನ್ನು ಮಾಡದಿರಲು ನಾವು ನಿಶ್ಚಯಿಸಿಕೊಳ್ಳೋಣ.
ತನ್ನ ಮಾರ್ಗದಲ್ಲಿ ನಡೆಯುವವರನ್ನು ಯೆಹೋವನು ಆಶೀರ್ವದಿಸುತ್ತಾನೆ
18. ಯೆಹೋವನ ಮಾರ್ಗದಲ್ಲಿ ನಡೆಯುವವರು ಏನನ್ನು ಮಾಡತಕ್ಕದ್ದು?
18 ಗತಕಾಲದಲ್ಲಿದ್ದಂತೆಯೇ ಈಗಲೂ ಯೆಹೋವನ ಮಾರ್ಗದಲ್ಲಿ ನಡೆಯುವುದು ನಿಷ್ಠೆಯನ್ನು, ಅಂದರೆ ಆತನನ್ನು ಮಾತ್ರ ಸೇವಿಸುವ ದೃಢನಿರ್ಧಾರವನ್ನು ಕೇಳಿಕೊಳ್ಳುತ್ತದೆ. ಅದು ಭರವಸೆಯನ್ನು, ಅಂದರೆ ಯೆಹೋವನ ವಾಗ್ದಾನಗಳು ಭರವಸಯೋಗ್ಯವು ಮತ್ತು ಖಂಡಿತವಾಗಿಯೂ ನಿಜವಾಗುವವೆಂಬ ಸಂಪೂರ್ಣ ನಂಬಿಕೆಯನ್ನು ಕೇಳಿಕೊಳ್ಳುತ್ತದೆ. ಯೆಹೋವನ ಮಾರ್ಗದಲ್ಲಿ ನಡೆಯುವುದು ವಿಧೇಯತೆಯನ್ನು, ಅಂದರೆ ದಾರಿತಪ್ಪದೆ ಆತನ ನಿಯಮಗಳನ್ನು ಅನುಸರಿಸುವುದು ಮತ್ತು ಆತನ ಉಚ್ಚ ಮಟ್ಟಗಳನ್ನು ಪಾಲಿಸುವುದನ್ನು ಕೇಳಿಕೊಳ್ಳುತ್ತದೆ. “ನೀತಿಸ್ವರೂಪನಾದ ಯೆಹೋವನು ನೀತಿಯನ್ನು ಮೆಚ್ಚುವವನಾಗಿದ್ದಾನೆ.”—ಕೀರ್ತನೆ 11:7.
19. ಇಂದು ಯಾವ ದೇವರುಗಳನ್ನು ಅನೇಕರು ಆರಾಧಿಸುತ್ತಾರೆ, ಮತ್ತು ಯಾವ ಪರಿಣಾಮಗಳೊಂದಿಗೆ?
19 ಭದ್ರತೆಗಾಗಿ ಆಹಾಜನು ಅರಾಮ್ಯರ ದೇವರುಗಳನ್ನು ಆತುಕೊಂಡನು. ಐಗುಪ್ತದಲ್ಲಿದ್ದ ಇಸ್ರಾಯೇಲ್ಯರು ಪ್ರಾಚೀನ ಮಧ್ಯಪೂರ್ವದಲ್ಲಿ ವ್ಯಾಪಕವಾಗಿ ಆರಾಧಿಸಲ್ಪಟ್ಟ ದೇವತೆಯಾದ “ಗಗನದ ಒಡತಿ”ಯು, ತಮಗೆ ಭೌತಿಕ ಅಭಿವೃದ್ಧಿಯನ್ನು ತರುವಳೆಂದು ನಿರೀಕ್ಷಿಸಿದರು. ಇಂದು, ಅನೇಕ ದೇವರುಗಳು ಅಕ್ಷರಾರ್ಥ ಮೂರ್ತಿಗಳಾಗಿರುವುದಿಲ್ಲ. ಯೆಹೋವನ ಬದಲು “ಧನವನ್ನು” ಸೇವಿಸುವುದರ ವಿರುದ್ಧ ಯೇಸು ಎಚ್ಚರಿಸಿದನು. (ಮತ್ತಾಯ 6:24) ಅಪೊಸ್ತಲ ಪೌಲನು, “ವಿಗ್ರಹಾರಾಧನೆಗೆ ಸಮವಾಗಿರುವ ಲೋಭ”ದ ಕುರಿತು ಮಾತಾಡಿದನು. (ಕೊಲೊಸ್ಸೆ 3:5) ಯಾರ “ಹೊಟ್ಟೆಯೇ ಅವರ ದೇವ”ರಾಗಿತ್ತೋ, ಅವರ ಕುರಿತಾಗಿಯೂ ಅವನು ಮಾತಾಡಿದನು. (ಫಿಲಿಪ್ಪಿ 3:19) ಹೌದು, ಇಂದು ಆರಾಧಿಸಲ್ಪಡುವ ಪ್ರಧಾನ ದೇವರುಗಳಲ್ಲಿ ಹಣ ಮತ್ತು ಭೌತಿಕ ವಸ್ತುಗಳು ಸೇರಿವೆ. ವಾಸ್ತವದಲ್ಲಿ, ಧರ್ಮದೊಂದಿಗೆ ಸಂಬಂಧವಿಟ್ಟುಕೊಂಡಿರುವ ಅನೇಕರನ್ನು ಸೇರಿಸಿ, ಹೆಚ್ಚಿನ ಜನರು ‘ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆ’ಯಿಟ್ಟಿರುತ್ತಾರೆ. (1 ತಿಮೊಥೆಯ 6:17) ಈ ದೇವರುಗಳಿಗಾಗಿ ಅನೇಕರು ಬಹಳ ಪ್ರಯಾಸಪಟ್ಟು ಕೆಲಸಮಾಡುತ್ತಾರೆ. ಮತ್ತು ಆ ಕಾರಣ, ಅತ್ಯುತ್ತಮ ಮನೆಗಳಲ್ಲಿ ವಾಸ, ದುಬಾರಿ ವಸ್ತುಗಳ ಅನುಭೋಗ, ಮತ್ತು ಯಥೇಚ್ಛವಾದ ಊಟಗಳಂತಹ ಸುವಿಷಯಗಳನ್ನು ಕೆಲವರು ಅನುಭವಿಸುತ್ತಾರೆ. ಆದರೆ ಎಲ್ಲರೂ ಇಂತಹ ಸಮೃದ್ಧಿಯನ್ನು ಅನುಭವಿಸುವುದಿಲ್ಲ. ಮತ್ತು ಇದನ್ನು ಅನುಭವಿಸುವವರು ಕೂಡ, ಅದರಲ್ಲಿ ಕಟ್ಟಕಡೆಗೆ ಅತೃಪ್ತಿಯನ್ನು ಕಂಡುಕೊಳ್ಳುತ್ತಾರೆ. ಅವು ಅನಿಶ್ಚಿತವೂ, ತಾತ್ಕಾಲಿಕವೂ, ಮತ್ತು ಆತ್ಮಿಕ ಅಗತ್ಯಗಳನ್ನು ಪೂರೈಸದಿರುವವುಗಳೂ ಆಗಿವೆ.—ಮತ್ತಾಯ 5:3.
20. ಯಾವ ಸಮತೂಕ ಭಾವವನ್ನು ನಾವು ತೋರಿಸಬೇಕು?
20 ಈ ವಿಷಯಗಳ ವ್ಯವಸ್ಥೆಯ ಕಡೇ ದಿವಸಗಳಲ್ಲಿ ನಾವು ಜೀವಿಸುತ್ತಿರುವಾಗ ವ್ಯಾವಹಾರಿಕ ಪ್ರವೃತ್ತಿಯುಳ್ಳವರಾಗಿರಬೇಕು ಎಂಬುದು ನಿಜ. ನಮ್ಮ ಕುಟುಂಬಗಳಿಗೆ ಭೌತಿಕ ವಿಧದಲ್ಲಿ ಒದಗಿಸಲು ನಾವು ನ್ಯಾಯಸಮ್ಮತವಾದ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕು. ಆದರೆ ದೇವರನ್ನು ಸೇವಿಸುವುದಕ್ಕಿಂತಲೂ ಹೆಚ್ಚಿನ ಮಹತ್ವವನ್ನು ಜೀವಿತದ ಉನ್ನತ ಮಟ್ಟ, ಹಣದ ಬೆನ್ನಟ್ಟುವಿಕೆ, ಇಲ್ಲವೆ ತದ್ರೀತಿಯ ವಿಷಯಗಳಿಗೆ ನೀಡುವುದಾದರೆ, ನಾವು ಒಂದು ಬಗೆಯ ಮೂರ್ತಿಪೂಜೆಯಲ್ಲಿ ಸಿಲುಕಿಕೊಂಡು, ಇನ್ನು ಮುಂದೆ ಯೆಹೋವನ ಮಾರ್ಗದಲ್ಲಿ ನಡೆಯುವವರಾಗಿರುವದಿಲ್ಲ. (1 ತಿಮೊಥೆಯ 6:9, 10) ಅನಾರೋಗ್ಯ, ಆರ್ಥಿಕ ಇಲ್ಲವೆ ಇತರ ಸಮಸ್ಯೆಗಳನ್ನು ನಾವು ಎದುರುಗೊಳ್ಳುವುದಾದರೆ ಆಗೇನು? ತಮ್ಮ ಸಮಸ್ಯೆಗಳಿಗೆ ದೇವರನ್ನು ದೂಷಿಸಿದ ಐಗುಪ್ತದಲ್ಲಿನ ಆ ಯೆಹೂದ್ಯರಂತೆ ನಾವು ಇರದಿರೋಣ. ಬದಲಿಗೆ ಯೆಹೋವನನ್ನು ಪರೀಕ್ಷಿಸಿ ನೋಡೋಣ. ಇದನ್ನು ಮಾಡಲು ಆಹಾಜನು ತಪ್ಪಿಹೋದನು. ಮಾರ್ಗದರ್ಶನೆಗಾಗಿ ನಿಷ್ಠೆಯಿಂದ ಯೆಹೋವ ದೇವರ ಕಡೆಗೆ ತಿರುಗಿರಿ. ಭರವಸೆಯಿಂದ ಆತನ ಮಾರ್ಗದರ್ಶನವನ್ನು ಅನ್ವಯಿಸಿ, ಪ್ರತಿಯೊಂದು ಸನ್ನಿವೇಶವನ್ನು ನಿರ್ವಹಿಸಲು ಬೇಕಾದ ಬಲ ಹಾಗೂ ವಿವೇಕಕ್ಕಾಗಿ ಪ್ರಾರ್ಥಿಸಿರಿ. ತದನಂತರ, ಯೆಹೋವನ ಆಶೀರ್ವಾದಕ್ಕಾಗಿ ಭರವಸೆಯಿಂದ ಕಾಯಿರಿ.
21. ಯೆಹೋವನ ಮಾರ್ಗದಲ್ಲಿ ನಡೆಯುವವರಿಗೆ ಯಾವ ಆಶೀರ್ವಾದಗಳು ಸಿಗುತ್ತವೆ?
21 ಇಸ್ರಾಯೇಲಿನ ಇತಿಹಾಸದುದ್ದಕ್ಕೂ, ಯಾರು ಯೆಹೋವನ ಮಾರ್ಗದಲ್ಲಿ ನಡೆದರೊ ಅವರು ಹೇರಳವಾಗಿ ಆಶೀರ್ವದಿಸಲ್ಪಟ್ಟರು. ರಾಜ ದಾವೀದನು ಹಾಡಿದ್ದು: “ಯೆಹೋವನೇ, ವಿರೋಧಿಗಳು ನನ್ನ ಕೇಡನ್ನೇ ಹಾರೈಸುತ್ತಿರುವದರಿಂದ ನಿನ್ನ ನೀತಿಗೆ ಸರಿಯಾಗಿ ನನ್ನನ್ನು ನಡಿಸು.” (ಕೀರ್ತನೆ 5:8) ಯಾವ ನೆರಹೊರೆಯ ರಾಷ್ಟ್ರಗಳು ಆಹಾಜನನ್ನು ತದನಂತರ ಪೀಡಿಸಿದವೊ, ಅವುಗಳ ಮೇಲೆಯೇ ಯೆಹೋವನು ದಾವೀದನಿಗೆ ಮಿಲಿಟರಿ ವಿಜಯಗಳನ್ನು ನೀಡಿದನು. ಯಾವ ಶಾಂತಿ ಮತ್ತು ಏಳಿಗೆಗಾಗಿ ಐಗುಪ್ತದಲ್ಲಿದ್ದ ಯೆಹೂದ್ಯರು ಹಾತೊರೆದರೊ, ಅದನ್ನೇ ದೇವರು ಸೊಲೊಮೋನನ ಆಳ್ವಿಕೆಯಲ್ಲಿ ದಯಪಾಲಿಸಿದನು. ಆಹಾಜನ ಮಗನಾದ ಹಿಜ್ಕೀಯನಿಗೆ ಯೆಹೋವನು ಬಲಿಷ್ಠ ಅಶ್ಶೂರದ ಮೇಲೆ ಜಯ ನೀಡಿದನು. (ಯೆಶಾಯ 59:1) ಹೌದು, ಯಾರು “ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ” ದೇವರ ಧರ್ಮಶಾಸ್ತ್ರದಲ್ಲಿ ಆನಂದಪಡುತ್ತಾರೊ ಅಂತಹ ನಿಷ್ಠಾವಂತರ ಕಡೆಗೆ ಯೆಹೋವನ ಕೈ ಮೋಟುಗೈಯಾಗಿರಲಿಲ್ಲ. (ಕೀರ್ತನೆ 1:1, 2) ಇಂದಿಗೂ ಆ ವಿಷಯವು ಸತ್ಯವಾಗಿದೆ. ಆದರೆ, ಇಂದು ನಾವು ಯೆಹೋವನ ಮಾರ್ಗದಲ್ಲಿ ನಡೆಯುತ್ತಿದ್ದೇವೆಂಬ ವಿಷಯದಲ್ಲಿ ಹೇಗೆ ಖಚಿತರಾಗಿರಬಲ್ಲೆವು? ಇದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.
ನಿಮಗೆ ಜ್ಞಾಪಕವಿದೆಯೆ?
◻ ಯೆಹೋವನ ಮಾರ್ಗದಲ್ಲಿ ನಾವು ನಡೆಯಬೇಕಾದರೆ ಯಾವ ಗುಣಗಳು ಅತ್ಯಾವಶ್ಯಕವಾಗಿವೆ?
◻ ಆಹಾಜನ ಆಲೋಚನಾಕ್ರಮವು ಏಕೆ ತಪ್ಪಾಗಿತ್ತು?
◻ ಐಗುಪ್ತದಲ್ಲಿದ್ದ ಯೆಹೂದ್ಯರ ತರ್ಕದಲ್ಲಿ ಯಾವುದು ತಪ್ಪಾಗಿತ್ತು?
◻ ಯೆಹೋವನ ಮಾರ್ಗದಲ್ಲಿ ನಡೆಯುವ ನಮ್ಮ ನಿರ್ಧಾರವನ್ನು ನಾವು ಹೇಗೆ ಬಲಪಡಿಸಿಕೊಳ್ಳಸಾಧ್ಯವಿದೆ?
[ಪುಟ 13 ರಲ್ಲಿರುವ ಚಿತ್ರ]
ಆಹಾಜನು ಯೆಹೋವನ ಬದಲು ಅರಾಮ್ಯರ ದೇವರುಗಳ ಕಡೆಗೆ ನೋಡಿದನು