ಯೆಹೋವನ ಕುರಿಗಳನ್ನು ಪರಾಮರಿಸಲು ‘ಪುರುಷರ ರೂಪದಲ್ಲಿ ದಾನಗಳು’
“ಅವನು ಉನ್ನತಕ್ಕೇರಿದಾಗ ಬಂದಿಗಳನ್ನು ಕೊಂಡೊಯ್ದನು; ಅವನು ಪುರುಷರ ರೂಪದಲ್ಲಿ ದಾನಗಳನ್ನು ಕೊಟ್ಟನು.”—ಎಫೆಸ 4:8, NW.
1. ಕ್ರೈಸ್ತ ಸಹೋದರಿಯೊಬ್ಬಳು ತನ್ನ ಸಭೆಯ ಹಿರಿಯರ ಕುರಿತು ಯಾವ ಹೇಳಿಕೆಯನ್ನು ನೀಡಿದಳು?
“ನಮ್ಮ ಕುರಿತು ಇಷ್ಟೊಂದು ಚಿಂತಿಸುವುದಕ್ಕಾಗಿ ನಿಮಗೆ ಉಪಕಾರ. ನಿಮ್ಮ ಮುಗುಳುನಗೆ, ಅಕ್ಕರೆ ಮತ್ತು ಚಿಂತೆ ಎಷ್ಟೊಂದು ನೈಜ. ಕಿವಿಗೊಟ್ಟು ಆಲಿಸಲು ಮತ್ತು ನಮ್ಮ ಉತ್ಸಾಹವನ್ನು ಕೆರಳಿಸುವಂತಹ ಮಾತುಗಳನ್ನು ಬೈಬಲಿನಿಂದ ತೋರಿಸಲು ನೀವು ಸದಾ ಸಿದ್ಧರಾಗಿರುತ್ತೀರಿ. ನಿಮ್ಮನ್ನು ನಾನೆಂದಿಗೂ ಲಘುವಾಗಿ ಎಣಿಸದಿರುವಂತೆ ಪ್ರಾರ್ಥಿಸುತ್ತೇನೆ.” ಹೀಗೆಂದು ಒಬ್ಬ ಕ್ರೈಸ್ತ ಸಹೋದರಿಯು ತನ್ನ ಸಭೆಯ ಹಿರಿಯರಿಗೆ ಪತ್ರ ಬರೆದಳು. ಚಿಂತಿಸುವ ಕ್ರೈಸ್ತ ಕುರುಬರು ತೋರಿಸಿದ ಪ್ರೀತಿಯು ಅವಳನ್ನು ಆಳವಾಗಿ ಪ್ರಭಾವಿಸಿತು.—1 ಪೇತ್ರ 5:2, 3.
2, 3. (ಎ) ಯೆಶಾಯ 32:1, 2ಕ್ಕನುಸಾರ, ಸಹಾನುಭೂತಿಯುಳ್ಳ ಹಿರಿಯರು ಯೆಹೋವನ ಕುರಿಗಳನ್ನು ಹೇಗೆ ಪರಾಮರಿಸುತ್ತಾರೆ? (ಬಿ) ಒಬ್ಬ ಹಿರಿಯನನ್ನು ಒಂದು ದಾನವಾಗಿ ಯಾವಾಗ ಪರಿಗಣಿಸಸಾಧ್ಯವಿದೆ?
2 ಯೆಹೋವನು ತನ್ನ ಕುರಿಗಳನ್ನು ಪರಾಮರಿಸಲಿಕ್ಕಾಗಿ ಹಿರಿಯರನ್ನು ಒದಗಿಸಿದ್ದಾನೆ. (ಲೂಕ 12:32; ಯೋಹಾನ 10:16) ಯೆಹೋವನು ತನ್ನ ಕುರಿಗಳನ್ನು ಎಷ್ಟೊಂದು ಪ್ರೀತಿಸುತ್ತಾನೆಂದರೆ, ಅವುಗಳನ್ನು ಯೇಸುವಿನ ಅಮೂಲ್ಯ ರಕ್ತದಿಂದ ಆತನು ಕೊಂಡುಕೊಂಡಿದ್ದಾನೆ. ಹೀಗಿರುವಲ್ಲಿ, ಹಿರಿಯರು ಯೆಹೋವನ ಮಂದೆಯನ್ನು ಕೋಮಲವಾಗಿ ಪರಾಮರಿಸುವಾಗ ಆತನು ಪ್ರಸನ್ನಗೊಳ್ಳುತ್ತಾನೆಂಬುದರಲ್ಲಿ ಸಂಶಯವೇ ಇಲ್ಲ. (ಅ. ಕೃತ್ಯಗಳು 20:28, 29) ಈ ಹಿರಿಯರು ಇಲ್ಲವೆ “ಅಧಿಪತಿಗಳ” ಪ್ರವಾದನಾತ್ಮಕ ವರ್ಣನೆಯನ್ನು ಗಮನಿಸಿರಿ: “ಒಬ್ಬ ಪುರುಷನು ಗಾಳಿಯಲ್ಲಿ ಮರೆಯಂತೆಯೂ ಅತಿವೃಷ್ಟಿಯಲ್ಲಿ ಆವರಣದ ಹಾಗೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ ಇರುವನು.” (ಯೆಶಾಯ 32:1, 2) ಹೌದು, ಅವರು ಆತನ ಕುರಿಗಳನ್ನು ಸಂರಕ್ಷಿಸಿ, ಸಂತೈಸಿ, ಚೇತರಿಸಬೇಕಾಗಿದೆ. ಹೀಗೆ, ಮಂದೆಯನ್ನು ಸಹಾನುಭೂತಿಯಿಂದ ಪರಿಪಾಲಿಸುವ ಹಿರಿಯರು, ದೇವರು ಅವರಿಂದ ಅಪೇಕ್ಷಿಸುವ ಮಟ್ಟಕ್ಕನುಸಾರ ಜೀವಿಸಲು ಪ್ರಯತ್ನಿಸುತ್ತಿದ್ದಾರೆ.
3 ಇಂತಹ ಹಿರಿಯರನ್ನು ಬೈಬಲಿನಲ್ಲಿ ‘ಪುರುಷರ ರೂಪದಲ್ಲಿ ದಾನಗಳು’ ಎಂಬುದಾಗಿ ಸೂಚಿಸಲಾಗಿದೆ. (ಎಫೆಸ 4:8) ದಾನದ ಕುರಿತು ಯೋಚಿಸುವಾಗ, ಒಂದು ಅಗತ್ಯವನ್ನು ಪೂರೈಸುವ ಇಲ್ಲವೆ ಅದನ್ನು ಪಡೆದುಕೊಳ್ಳುವವನಿಗೆ ಸಂತೋಷವನ್ನು ತರುವ ವಸ್ತುವಿನ ಕುರಿತು ನೀವು ಆಲೋಚಿಸುವಿರಿ. ಹಿರಿಯನೊಬ್ಬನು ಅಗತ್ಯವಾದ ನೆರವನ್ನು ನೀಡಲು ಮತ್ತು ಮಂದೆಯ ಸಂತೋಷಕ್ಕೆ ಹೆಚ್ಚನ್ನು ಕೂಡಿಸಲು ತನ್ನ ಸಾಮರ್ಥ್ಯಗಳನ್ನು ಬಳಸುವಾಗ, ಅವನನ್ನು ಒಂದು ದಾನವಾಗಿ ಪರಿಗಣಿಸಸಾಧ್ಯವಿದೆ. ಇದನ್ನು ಅವನು ಹೇಗೆ ಮಾಡಬಹುದು? ಎಫೆಸ 4:7-16 ರಲ್ಲಿರುವ ಪೌಲನ ಮಾತುಗಳಲ್ಲಿ ಕಂಡು ಬರುವ ಉತ್ತರವು, ತನ್ನ ಕುರಿಗಳಿಗಾಗಿ ಯೆಹೋವನು ತೋರಿಸುವ ಪ್ರೀತಿಪರ ಚಿಂತೆಯನ್ನು ಎತ್ತಿತೋರಿಸುತ್ತದೆ.
‘ಪುರುಷರ ರೂಪದಲ್ಲಿ ದಾನಗಳು’—ಎಲ್ಲಿಂದ?
4. ಕೀರ್ತನೆ 68:18ರ ನೆರವೇರಿಕೆಯಲ್ಲಿ, ಯೆಹೋವನು ‘ಉನ್ನತಸ್ಥಾನಕ್ಕೆ ಏರಿದ್ದು’ ಯಾವ ವಿಧದಲ್ಲಿ, ಮತ್ತು ‘ಪುರುಷರ ರೂಪದಲ್ಲಿರುವ ದಾನಗಳು’ ಯಾರಾಗಿದ್ದಾರೆ?
4 ‘ಪುರುಷರ ರೂಪದಲ್ಲಿ ದಾನಗಳು’ ಎಂಬ ಅಭಿವ್ಯಕ್ತಿಯನ್ನು ಪೌಲನು ಬಳಸಿದಾಗ, ಅವನು ಯೆಹೋವನ ಕುರಿತು ಹೀಗೆ ಹೇಳಿದ ರಾಜ ದಾವೀದನನ್ನು ಉದ್ಧರಿಸುತ್ತಿದ್ದನು: “ನೀನು ಉನ್ನತಸ್ಥಾನಕ್ಕೆ ಏರಿದ್ದೀ, ನೀನು ಜನರನ್ನು ಸೆರೆಹಿಡುಕೊಂಡು ಹೋಗಿದ್ದೀ, ನೀನು ಪುರುಷರ ರೂಪದಲ್ಲಿ ದಾನಗಳನ್ನು ತೆಗೆದುಕೊಂಡಿದ್ದೀ.” (ಕೀರ್ತನೆ 68:18, NW) ಇಸ್ರಾಯೇಲ್ಯರು ಸ್ವಲ್ಪ ಕಾಲ ವಾಗ್ದತ್ತ ದೇಶದಲ್ಲಿ ಜೀವಿಸಿದ ಬಳಿಕ, ಯೆಹೋವನು ಸಾಂಕೇತಿಕವಾಗಿ ಚಿಯೋನ್ ಪರ್ವತದ ಮೇಲೆ “ಏರಿ” ಯೆರೂಸಲೇಮನ್ನು ಇಸ್ರಾಯೇಲ್ ರಾಜ್ಯದ ರಾಜಧಾನಿಯಾಗಿ ಮಾಡಿ, ದಾವೀದನನ್ನು ಅದರ ರಾಜನನ್ನಾಗಿ ಪ್ರತಿಷ್ಠಾಪಿಸಿದನು. ಆದರೆ, “ಪುರುಷರ ರೂಪದಲ್ಲಿ ದಾನ” ಗಳಾಗಿದ್ದವರು ಯಾರು? ಅವರು, ಆ ದೇಶವನ್ನು ಜಯಿಸಿದಾಗ ಸೆರೆಹಿಡಿಯಲ್ಪಟ್ಟ ಬಂದಿಗಳಾಗಿದ್ದರು. ಈ ಬಂದಿಗಳಲ್ಲಿ ಕೆಲವರು, ಸಾಕ್ಷಿಗುಡಾರದಲ್ಲಿ ಲೇವಿಯರಿಗೆ ಸಹಾಯ ಮಾಡುವಂತೆ ತದನಂತರ ನೇಮಿಸಲ್ಪಟ್ಟರು.—ಎಜ್ರ 8:20.
5. (ಎ) ಕ್ರೈಸ್ತ ಸಭೆಯಲ್ಲಿ ಕೀರ್ತನೆ 68:18ಕ್ಕೆ ಒಂದು ನೆರವೇರಿಕೆ ಇದೆಯೆಂದು ಪೌಲನು ಹೇಗೆ ಸೂಚಿಸುತ್ತಾನೆ? (ಬಿ) ಯಾವ ವಿಧದಲ್ಲಿ ಯೇಸು ‘ಉನ್ನತಸ್ಥಾನಕ್ಕೆ ಏರಿದನು’?
5 ಕೀರ್ತನೆಗಾರನ ಮಾತುಗಳಿಗೆ ಕ್ರೈಸ್ತ ಸಭೆಯಲ್ಲಿ ಹೆಚ್ಚಿನ ನೆರವೇರಿಕೆಯು ಇರುವುದೆಂದು, ಪೌಲನು ಎಫೆಸದವರಿಗೆ ಬರೆದ ತನ್ನ ಪತ್ರದಲ್ಲಿ ಸೂಚಿಸುತ್ತಾನೆ. ಕೀರ್ತನೆ 68:18ಎಫೆಸಕ್ಕೆ ಅರ್ಥವಿವರಣೆ ನೀಡುತ್ತಾ, ಪೌಲನು ಬರೆಯುವುದು: “ಆದರೆ ಕ್ರಿಸ್ತನು ನಮ್ಮಲ್ಲಿ ಒಬ್ಬೊಬ್ಬನಿಗೆ ಅನುಗ್ರಹಿಸಿದ ಪ್ರಕಾರವೇ ಅವನವನಿಗೆ ಕೃಪಾವರವು ದೊರಕಿದೆ. ಆದುದರಿಂದ—ಅವನು ಉನ್ನತಕ್ಕೇರಿದಾಗ ಬಂದಿಗಳನ್ನು ಕೊಂಡೊಯ್ದನು; ಅವನು ಪುರುಷರ ರೂಪದಲ್ಲಿ ದಾನಗಳನ್ನು ಕೊಟ್ಟನು ಎಂಬುದಾಗಿ ಪ್ರವಾದಿಯು ಹೇಳುತ್ತಾನೆ.” (ಎಫೆಸ 4:7, 8, NW) ದೇವರ ಪ್ರತಿನಿಧಿಯಾಗಿರುವ ಯೇಸುವಿಗೆ ಪೌಲನು ಈ ಕೀರ್ತನೆಯನ್ನು ಅನ್ವಯಿಸುತ್ತಾನೆ. ಯೇಸು ತನ್ನ ನಂಬಿಗಸ್ತ ಜೀವನಕ್ರಮದ ಮೂಲಕ “ಲೋಕವನ್ನು ಜಯಿಸಿ”ದನು. (ಯೋಹಾನ 16:33) ದೇವರು ಅವನನ್ನು ಸತ್ತವರಿಂದ ಎಬ್ಬಿಸಿದ ಕಾರಣ, ಅವನು ಮರಣ ಹಾಗೂ ಸೈತಾನನ ಮೇಲೆಯೂ ಜಯಸಾಧಿಸಿದನು. (ಅ. ಕೃತ್ಯಗಳು 2:24; ಇಬ್ರಿಯ 2:14) ಸಾ.ಶ. 33ರಲ್ಲಿ, ಪುನರುತ್ಥಿತ ಯೇಸು “ಮೇಲಣ ಎಲ್ಲಾ ಲೋಕಗಳಿಗಿಂತ” ಅಂದರೆ, ಬೇರೆ ಎಲ್ಲ ಸ್ವರ್ಗೀಯ ಜೀವಿಗಳಿಗಿಂತ ಉನ್ನತಸ್ಥಾನಕ್ಕೆ ಏರಿದನು. (ಎಫೆಸ 4:9, 10; ಫಿಲಿಪ್ಪಿ 2:9-11) ಒಬ್ಬ ಜಯಶಾಲಿಯೋಪಾದಿ ಯೇಸು ವೈರಿಯಿಂದ “ಬಂದಿಗಳನ್ನು” ವಶಪಡಿಸಿಕೊಂಡನು. ಅದು ಹೇಗೆ?
6. ಉನ್ನತಸ್ಥಾನಕ್ಕೆ ಏರಿದ ಯೇಸು ಸೈತಾನನ ಮನೆಯನ್ನು ಸಾ.ಶ. 33ರಿಂದ ಲೂಟಿ ಮಾಡತೊಡಗಿದ್ದು ಹೇಗೆ, ಮತ್ತು ಅವನು ‘ಬಂದಿಗಳೊಂದಿಗೆ’ ಏನು ಮಾಡಿದನು?
6 ಯೇಸು ಭೂಮಿಯಲ್ಲಿದ್ದಾಗ, ದೆವ್ವಗಳ ದಾಸತ್ವದಲ್ಲಿದ್ದ ಜನರನ್ನು ಬಿಡುಗಡೆಗೊಳಿಸುವ ಮೂಲಕ ಸೈತಾನನ ಮೇಲೆ ತನಗಿದ್ದ ಅಧಿಕಾರವನ್ನು ಪ್ರದರ್ಶಿಸಿದನು. ಯೇಸು ಸೈತಾನನ ಮನೆಯನ್ನು ಹೊಕ್ಕಿ, ಅವನನ್ನು ಕಟ್ಟಿಹಾಕಿ, ಅವನ ಸೊತ್ತನ್ನು ಸುಲುಕೊಂಡನೊ ಎಂಬಂತೆ ಇದಿತ್ತು. (ಮತ್ತಾಯ 12:22-29) ಹಾಗಿರುವಲ್ಲಿ ಪುನರುತ್ಥಿತನಾಗಿ, ‘ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲ ಅಧಿಕಾರವನ್ನು’ ಪಡೆದುಕೊಂಡಿರುವ ಯೇಸು, ಆಗ ಎಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕೊಳ್ಳೆ ಹೊಡೆಯಬಹುದಿತ್ತು! (ಮತ್ತಾಯ 28:18) ಸಾ.ಶ. 33ರ ಪಂಚಾಶತ್ತಮದಿಂದ ಆರಂಭಿಸುತ್ತಾ, ದೇವರ ಪ್ರತಿನಿಧಿಯೋಪಾದಿ ಉನ್ನತಸ್ಥಾನಕ್ಕೆ ಏರಿದ ಯೇಸು ‘ಬಂದಿಗಳನ್ನು ತೆಗೆದುಕೊಂಡು ಹೋಗುವ’ ಮೂಲಕ, ಅಂದರೆ ಬಹು ಕಾಲದಿಂದ ಪಾಪಮರಣಗಳಿಗೆ ದಾಸರಾಗಿದ್ದ ಮತ್ತು ಸೈತಾನನ ನಿಯಂತ್ರಣದಲ್ಲಿದ್ದ ಪುರುಷರನ್ನು ಬಿಡಿಸುವ ಮೂಲಕ ಸೈತಾನನ ಮನೆಯನ್ನು ಲೂಟಿ ಮಾಡಲಾರಂಭಿಸಿದನು. ಈ “ಬಂದಿಗಳು” ಸ್ವಇಚ್ಛೆಯಿಂದ “ಕ್ರಿಸ್ತನ ದಾಸರಿಗೆ ತಕ್ಕ ಹಾಗೆ ದೇವರ ಚಿತ್ತವನ್ನು ಮನಃಪೂರ್ವಕವಾಗಿ ನಡಿ”ಸುವವರಾದರು. (ಎಫೆಸ 6:6) ಯೇಸುವಾದರೊ ಅವರನ್ನು ಸೈತಾನನ ನಿಯಂತ್ರಣದಿಂದ ಬಿಡಿಸಿ, ಯೆಹೋವನ ಪರವಾಗಿ ಅವರನ್ನು ಸಭೆಗೆ “ಪುರುಷರ ರೂಪದಲ್ಲಿ ದಾನ”ಗಳೋಪಾದಿ ದಯಪಾಲಿಸಿದನು. ಇವರನ್ನು ಸೈತಾನನ ಕಣ್ಣೆದುರಿನಿಂದಲೇ ಕಸಿದುಕೊಂಡಾಗ ಅವನಿಗಾದ ನಿಸ್ಸಹಾಯಕ ಕ್ರೋಧವನ್ನು ಊಹಿಸಿಕೊಳ್ಳಿರಿ!
7. (ಎ) ‘ಪುರುಷರ ರೂಪದಲ್ಲಿ ದಾನಗಳು’ ಸಭೆಯಲ್ಲಿ ಯಾವ ಸಾಮರ್ಥ್ಯಗಳಲ್ಲಿ ಸೇವೆ ಸಲ್ಲಿಸುತ್ತವೆ? (ಬಿ) ಹಿರಿಯನೋಪಾದಿ ಸೇವೆ ಸಲ್ಲಿಸುವ ಪ್ರತಿಯೊಬ್ಬ ಪುರುಷನಿಗೆ ಯಾವ ಅವಕಾಶವನ್ನು ಯೆಹೋವನು ನೀಡಿದ್ದಾನೆ?
7 ಇಂದು, ಇಂತಹ ‘ಪುರುಷರ ರೂಪದಲ್ಲಿರುವ ದಾನಗಳನ್ನು’ ನಾವು ಸಭೆಯಲ್ಲಿ ಕಂಡುಕೊಳ್ಳುತ್ತೇವೊ? ಹೌದು, ನಿಶ್ಚಯವಾಗಿಯೂ! ಇವರು ಲೋಕವ್ಯಾಪಕವಾಗಿ ದೇವಜನರ 87,000ಕ್ಕಿಂತಲೂ ಹೆಚ್ಚಿನ ಸಭೆಗಳಲ್ಲಿ ಹಿರಿಯರಾಗಿ, ‘ಸೌವಾರ್ತಿಕರಾಗಿ, ಸಭಾಪಾಲಕರಾಗಿ, ಮತ್ತು ಬೋಧಕರಾಗಿ’ ಕಷ್ಟಪಟ್ಟು ದುಡಿಯುತ್ತಿದ್ದಾರೆ. (ಎಫೆಸ 4:11) ಈ ಪುರುಷರು ಮಂದೆಯನ್ನು ದುರುಪಚರಿಸಬೇಕೆಂದೇ ಸೈತಾನನು ಬಯಸುತ್ತಾನೆ. ಆದರೆ, ದೇವರು ಕ್ರಿಸ್ತನ ಮೂಲಕ ಅವರನ್ನು ಸಭೆಗೆ ದಯಪಾಲಿಸಿದ್ದು ಈ ಕಾರಣಕ್ಕಾಗಿ ಅಲ್ಲ. ಬದಲಿಗೆ, ಸಭೆಯ ಸುಕ್ಷೇಮವನ್ನು ನೋಡಿಕೊಳ್ಳಲಿಕ್ಕಾಗಿ ಯೆಹೋವನು ಈ ಪುರುಷರನ್ನು ಒದಗಿಸಿದ್ದಾನೆ. ಮತ್ತು ತಮಗೆ ವಹಿಸಿಕೊಟ್ಟ ಕುರಿಗಳ ಬಗ್ಗೆ ಅವರು ಆತನಿಗೆ ಲೆಕ್ಕ ಒಪ್ಪಿಸುವವರಾಗಿದ್ದಾರೆ. (ಇಬ್ರಿಯ 13:17) ನೀವು ಒಬ್ಬ ಹಿರಿಯನೋಪಾದಿ ಸೇವೆ ಸಲ್ಲಿಸುತ್ತಿರುವುದಾದರೆ, ನಿಮ್ಮ ಸಹೋದರರಿಗೆ ಒಂದು ದಾನವಾಗಿ ಇಲ್ಲವೆ ಆಶೀರ್ವಾದವಾಗಿ ಪರಿಣಮಿಸಲು ಯೆಹೋವನು ನಿಮಗೊಂದು ಸದವಕಾಶವನ್ನು ನೀಡಿದ್ದಾನೆ. ನಾಲ್ಕು ಮುಖ್ಯ ಜವಾಬ್ದಾರಿಗಳನ್ನು ನೆರವೇರಿಸುವ ಮೂಲಕ ನೀವು ಇದನ್ನು ಮಾಡಬಲ್ಲಿರಿ.
‘ಸರಿಪಡಿಸುವ’ ಅಗತ್ಯವಿರುವಾಗ
8. ನಾವೆಲ್ಲರೂ ಆಗಿಂದಾಗ್ಗೆ ಯಾವ ವಿಧಗಳಲ್ಲಿ ಸರಿಗೊಳಿಸಲ್ಪಡುವ ಅಗತ್ಯವಿದೆ?
8 “ಪುರುಷರ ರೂಪದಲ್ಲಿ ದಾನ”ಗಳಾಗಿರುವವರು ಪ್ರಥಮವಾಗಿ “ದೇವಜನರನ್ನು ಯೋಗ್ಯಸ್ಥಿತಿಗೆ ತರುವ [“ಸರಿಪಡಿಸುವ,” NW] ಕೆಲಸಕ್ಕೋಸ್ಕರ” ಒದಗಿಸಲ್ಪಟ್ಟಿದ್ದಾರೆಂದು ಪೌಲನು ಹೇಳುತ್ತಾನೆ. (ಎಫೆಸ 4:12) ‘ಸರಿಪಡಿಸುವುದು’ ಎಂಬುದಾಗಿ ತರ್ಜುಮೆ ಮಾಡಲ್ಪಟ್ಟ ಗ್ರೀಕ್ ನಾಮಪದವು, ಒಂದು ವಿಷಯವನ್ನು “ಸರಿಗೂಡಿಸು”ವುದನ್ನು ಅರ್ಥೈಸುತ್ತದೆ. ಅಪರಿಪೂರ್ಣ ಮಾನವರೋಪಾದಿ, ನಾವೆಲ್ಲರೂ ಆಗಿಂದಾಗ್ಗೆ ಸರಿಪಡಿಸಲ್ಪಡುವ, ಅಂದರೆ ದೇವರ ಆಲೋಚನೆ ಹಾಗೂ ಚಿತ್ತಕ್ಕನುಸಾರ ನಮ್ಮ ಆಲೋಚನೆ, ಮನೋಭಾವಗಳು, ಇಲ್ಲವೆ ನಡವಳಿಕೆಯನ್ನು “ಸರಿಗೂಡಿಸಿ”ಕೊಳ್ಳುವ ಅಗತ್ಯವಿದೆ. ನಾವು ಅಗತ್ಯವಾದ ಸರಿಪಡಿಸುವಿಕೆಗಳನ್ನು ಮಾಡಿಕೊಳ್ಳುವಂತೆ ನೆರವು ನೀಡಲು ಯೆಹೋವನು ಪ್ರೀತಿಯಿಂದ “ಪುರುಷರ ರೂಪದಲ್ಲಿ ದಾನಗಳನ್ನು” ಒದಗಿಸಿದ್ದಾನೆ. ಅವರು ಇದನ್ನು ಹೇಗೆ ಮಾಡುತ್ತಾರೆ?
9. ತಪ್ಪುಗೈದಿರುವ ಒಂದು ಕುರಿಯನ್ನು ಸರಿಪಡಿಸಲು ಹಿರಿಯನೊಬ್ಬನು ಹೇಗೆ ಸಹಾಯ ಮಾಡಬಲ್ಲನು?
9 ಕೆಲವೊಮ್ಮೆ, ‘ತನ್ನರಿವಿಲ್ಲದೆ ತಪ್ಪು ಹೆಜ್ಜೆಯನ್ನಿಟ್ಟು’ ಪಾಪಗೈದಿರುವ ಕುರಿಗೆ ಸಹಾಯ ನೀಡುವಂತೆ ಹಿರಿಯನೊಬ್ಬನು ಕೇಳಿಕೊಳ್ಳಲ್ಪಡಬಹುದು. ಆಗ ಒಬ್ಬ ಹಿರಿಯನು ಹೇಗೆ ಸಹಾಯ ಮಾಡಬಲ್ಲನು? “ಅಂಥವನನ್ನು . . . ಶಾಂತಭಾವದಿಂದ ತಿದ್ದಿ ಸರಿಮಾಡಿರಿ,” ಎಂದು ಗಲಾತ್ಯ 6:1 ಹೇಳುತ್ತದೆ. ಆದಕಾರಣ ಹಿರಿಯನೊಬ್ಬನು ಸಲಹೆಯನ್ನು ನೀಡುವಾಗ, ಕಠೋರವಾದ ಪದಗಳನ್ನು ಬಳಸುತ್ತಾ ತಪ್ಪುಗೈದವನನ್ನು ಬೈಯಬಾರದು. ಸಲಹೆಯು, ಅದನ್ನು ಪಡೆದುಕೊಳ್ಳುತ್ತಿರುವ ವ್ಯಕ್ತಿಯನ್ನು ಉತ್ತೇಜಿಸಬೇಕೇ ಹೊರತು “ಹೆದರಿಸ”ಬಾರದು. (2 ಕೊರಿಂಥ 10:9; ಹೋಲಿಸಿ ಯೋಬ 33:7.) ವ್ಯಕ್ತಿಯು ಈಗಾಗಲೇ ಲಜ್ಜಿತನಾಗಿರಬಹುದು, ಆದುದರಿಂದ ಪ್ರೀತಿಪರನಾದ ಕುರುಬನು ಅವನ ಮನಸ್ಸನ್ನು ಮತ್ತಷ್ಟು ನೋಯಿಸಬಾರದು. ಪ್ರೀತಿಯಿಂದ ಪ್ರಚೋದಿಸಲ್ಪಡುವ ಹಾಗೂ ನೀಡಲ್ಪಡುವ ಸಲಹೆಯು ಮತ್ತು ಬಲವಾದ ಗದರಿಕೆಯು ಕೂಡ, ತಪ್ಪಿತಸ್ಥನ ಆಲೋಚನಾಕ್ರಮವನ್ನು ಇಲ್ಲವೆ ನಡವಳಿಕೆಯನ್ನು ಸರಿಗೂಡಿಸಿ, ಅವನನ್ನು ಪೂರ್ವಸ್ಥಿತಿಗೆ ತರುವುದು.—2 ತಿಮೊಥೆಯ 4:2.
10. ಇತರರನ್ನು ಸರಿಪಡಿಸುವುದರಲ್ಲಿ ಏನು ಒಳಗೂಡಿದೆ?
10 ಯೆಹೋವನು ನಮ್ಮ ಸರಿಪಡಿಸುವಿಕೆಗಾಗಿ “ಪುರುಷರ ರೂಪದಲ್ಲಿ ದಾನಗಳನ್ನು” ಒದಗಿಸಿದಾಗ, ಹಿರಿಯರು ಆತನ ಜನರಿಗೆ ಆತ್ಮಿಕ ಚೈತನ್ಯವನ್ನು ನೀಡುವವರೂ ಅನುಕರಣಯೋಗ್ಯರೂ ಆಗಿರಬೇಕೆಂದು ಬಯಸಿದನು. (1 ಕೊರಿಂಥ 16:17, 18; ಫಿಲಿಪ್ಪಿ 3:17) ಇತರರನ್ನು ಸರಿಪಡಿಸುವುದರಲ್ಲಿ, ತಪ್ಪುದಾರಿಯಲ್ಲಿರುವವರನ್ನು ಸರಿಪಡಿಸುವುದು ಮಾತ್ರವಲ್ಲ, ನಂಬಿಗಸ್ತರು ಸರಿಯಾದ ಮಾರ್ಗಕ್ರಮಕ್ಕೆ ಅಂಟಿಕೊಂಡಿರುವಂತೆ ಸಹಾಯ ಮಾಡುವುದೂ ಸೇರಿದೆ.a ಇಂದು, ಎದೆಗುಂದಿಸುವ ಅನೇಕ ಸಮಸ್ಯೆಗಳಿರುವಾಗ, ಆ ಮಾರ್ಗದಲ್ಲಿ ಮುಂದುವರಿಯಲು ಅನೇಕರಿಗೆ ಉತ್ತೇಜನದ ಅಗತ್ಯವಿದೆ. ದೇವರ ಆಲೋಚನೆಯೊಂದಿಗೆ ತಮ್ಮದ್ದನ್ನು ಸರಿಗೂಡಿಸಲು, ಕೆಲವರಿಗೆ ಕೋಮಲವಾದ ಸಹಾಯವು ಬೇಕಾಗಬಹುದು. ಉದಾಹರಣೆಗೆ, ಕೆಲವು ನಂಬಿಗಸ್ತ ಕ್ರೈಸ್ತರು ಕೊರತೆಯ ಇಲ್ಲವೆ ಅಯೋಗ್ಯತೆಯ ಆಳವಾದ ಅನಿಸಿಕೆಗಳೊಂದಿಗೆ ಹೋರಾಡುತ್ತಿರಬಹುದು. ಯೆಹೋವನು ತಮ್ಮನ್ನು ಎಂದಿಗೂ ಪ್ರೀತಿಸಲಾರನೆಂದು ಮತ್ತು ಆತನನ್ನು ಸೇವಿಸಲು ಅವರು ಮಾಡುವ ಅತ್ಯುತ್ತಮ ಪ್ರಯತ್ನಗಳು ಸ್ವೀಕಾರಯೋಗ್ಯವಾಗಿ ಇರಲಾರವೆಂದು ಇಂತಹ “ಮನಗುಂದಿ”ದವರಿಗೆ ಅನಿಸಬಹುದು. (1 ಥೆಸಲೊನೀಕ 5:14) ಆದರೆ ಇಂತಹ ಆಲೋಚನೆಯು, ದೇವರು ತನ್ನ ಆರಾಧಕರ ಕುರಿತು ನಿಜವಾಗಿಯೂ ಭಾವಿಸುವುದಕ್ಕೆ ವ್ಯತಿರಿಕ್ತವಾಗಿದೆ.
11. ಅಯೋಗ್ಯತೆಯ ಭಾವನೆಗಳೊಂದಿಗೆ ಹೋರಾಡುತ್ತಿರುವವರಿಗೆ ಯಾವ ರೀತಿಯ ಸಹಾಯವನ್ನು ಹಿರಿಯರು ನೀಡಬಲ್ಲರು?
11 ಇಂತಹವರಿಗೆ ಸಹಾಯ ನೀಡಲು ಹಿರಿಯರಾದ ನೀವು ಏನು ಮಾಡಬಲ್ಲಿರಿ? ಯೆಹೋವನು ತನ್ನ ಸೇವಕರಲ್ಲಿ ಪ್ರತಿಯೊಬ್ಬನಿಗಾಗಿ ಚಿಂತಿಸುತ್ತಾನೆಂಬುದಕ್ಕೆ ಶಾಸ್ತ್ರೀಯ ಪ್ರಮಾಣವನ್ನು ನೀಡಿ, ಆ ಬೈಬಲ್ ವಚನಗಳು ವೈಯಕ್ತಿಕವಾಗಿ ಅವರಿಗೇ ಅನ್ವಯಿಸುತ್ತವೆಂಬ ಆಶ್ವಾಸನೆಯನ್ನು ನೀಡಿರಿ. (ಲೂಕ 12:6, 7, 24) ಯೆಹೋವನು ಅವರನ್ನು ಅಮೂಲ್ಯರೆಂದೆಣಿಸುವುದು ಖಂಡಿತವಾಗಿರುವುದರಿಂದಲೇ, ಆತನನ್ನು ಸೇವಿಸುವಂತೆ ತನ್ನೆಡೆಗೆ ‘ಎಳೆ’ದಿದ್ದಾನೆಂಬುದನ್ನು ಅವರು ಮನಗಾಣುವಂತೆ ಸಹಾಯ ಮಾಡಿರಿ. (ಯೋಹಾನ 6:44) ಹೀಗೆ ಭಾವಿಸುವುದರಲ್ಲಿ ತಾವು ಒಬ್ಬಂಟಿಗರಲ್ಲವೆಂದು ಅವರಿಗೆ ಆಶ್ವಾಸನೆ ನೀಡಿರಿ. ಯೆಹೋವನ ಅನೇಕ ನಂಬಿಗಸ್ತ ಸೇವಕರಿಗೆ ತದ್ರೀತಿಯ ಭಾವನೆಗಳಿದ್ದವು. ಪ್ರವಾದಿಯಾದ ಎಲೀಯನು ಒಮ್ಮೆ ಎಷ್ಟು ಖಿನ್ನನಾದನೆಂದರೆ, ಅವನು ಸಾಯಲು ಇಚ್ಛಿಸಿದನು. (1 ಅರಸು 19:1-4) ಪ್ರಥಮ ಶತಮಾನದ ಕೆಲವು ಅಭಿಷಿಕ್ತ ಕ್ರೈಸ್ತರು ಸ್ವಂತ ಹೃದಯಗಳಿಂದಲೇ ‘ಖಂಡಿಸಲ್ಪಟ್ಟರು.’ (1 ಯೋಹಾನ 3:20) ಬೈಬಲ್ ಸಮಯಗಳಲ್ಲಿದ್ದ ನಂಬಿಗಸ್ತರಿಗೆ ‘ನಮ್ಮಂತಹ ಅನಿಸಿಕೆಗಳೇ’ ಇದ್ದವೆಂದು ಅರಿತುಕೊಳ್ಳುವುದರಲ್ಲಿ ಸಾಂತ್ವನವಿದೆ. (ಯಾಕೋಬ 5:17) ಎದೆಗುಂದಿದವರೊಂದಿಗೆ ನೀವು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಲ್ಲಿರುವ ಉತ್ತೇಜನದಾಯಕ ಲೇಖನಗಳನ್ನೂ ಪುನರ್ವಿಮರ್ಶಿಸಬಹುದು. ಇಂತಹ ಆತ್ಮವಿಶ್ವಾಸವನ್ನು ಪುನಸ್ಥಾಪಿಸಲು ನೀವು ಪಡುವ ಪ್ರಯಾಸವು, ನಿಮ್ಮನ್ನು “ಪುರುಷರ ರೂಪದಲ್ಲಿ ದಾನ”ಗಳೋಪಾದಿ ನೀಡಿರುವ ದೇವರ ಲಕ್ಷ್ಯಕ್ಕೆ ಬಾರದೆ ಹೋಗಲಾರವು.—ಇಬ್ರಿಯ 6:10.
ಮಂದೆಯನ್ನು “ಕಟ್ಟುವುದು”
12. ‘ಕ್ರಿಸ್ತನ ದೇಹದ ಕಟ್ಟೋಣ’ ಎಂಬ ಅಭಿವ್ಯಕ್ತಿಯು ಏನನ್ನು ಸೂಚಿಸುತ್ತದೆ, ಮತ್ತು ಮಂದೆಯನ್ನು ಕಟ್ಟುವುದಕ್ಕಿರುವ ಕೀಲಿ ಕೈ ಯಾವುದಾಗಿದೆ?
12 ಎರಡನೆಯದಾಗಿ, “ಕ್ರಿಸ್ತನ ದೇಹವನ್ನು ಕಟ್ಟುವ” (NW) ಉದ್ದೇಶದಿಂದ ‘ಪುರುಷರ ರೂಪದಲ್ಲಿ ದಾನಗಳು’ ಕೊಡಲ್ಪಟ್ಟಿವೆ. (ಎಫೆಸ 4:12) ಪೌಲನು ಇಲ್ಲಿ ಅಲಂಕಾರಿಕ ಭಾಷೆಯನ್ನು ಬಳಸುತ್ತಾನೆ: ‘ಕಟ್ಟುವುದು’ ನಿರ್ಮಾಣದ ಜ್ಞಾಪಕವನ್ನು ಹುಟ್ಟಿಸುತ್ತದೆ, ಮತ್ತು “ಕ್ರಿಸ್ತನ ದೇಹ”ವು ಜನರನ್ನು, ಅಂದರೆ ಅಭಿಷಿಕ್ತ ಕ್ರೈಸ್ತ ಸಭೆಯ ಸದಸ್ಯರನ್ನು ಸೂಚಿಸುತ್ತದೆ. (1 ಕೊರಿಂಥ 12:27; ಎಫೆಸ 5:23, 29, 30) ತಮ್ಮ ಸಹೋದರರು ಆತ್ಮಿಕವಾಗಿ ಬಲಿಷ್ಠರಾಗುವಂತೆ ಹಿರಿಯರು ಸಹಾಯ ಮಾಡಬೇಕು. ಅವರ ಉದ್ದೇಶವು ಮಂದೆಯನ್ನು ‘ಕೆಡವಿಹಾಕುವುದಲ್ಲ ಕಟ್ಟುವದೇ’ ಆಗಿದೆ. (2 ಕೊರಿಂಥ 10:8) ಮಂದೆಯನ್ನು ಕಟ್ಟುವ ಕೀಲಿ ಕೈ ಪ್ರೀತಿಯಾಗಿದೆ, ಏಕೆಂದರೆ ‘ಪ್ರೀತಿಯು ಭಕ್ತಿವೃದ್ಧಿಯನ್ನು ಉಂಟುಮಾಡುತ್ತದೆ.’—1 ಕೊರಿಂಥ 8:1.
13. ಸಹಾನುಭೂತಿಯುಳ್ಳವರಾಗಿ ಇರುವುದು ಎಂದರೇನು, ಮತ್ತು ಹಿರಿಯರು ಸಹಾನುಭೂತಿಯನ್ನು ತೋರಿಸುವುದು ಏಕೆ ಅಷ್ಟೊಂದು ಪ್ರಾಮುಖ್ಯವಾಗಿದೆ?
13 ಮಂದೆಯನ್ನು ಕಟ್ಟಲು ಹಿರಿಯರಿಗೆ ಸಹಾಯ ಮಾಡುವ ಪ್ರೀತಿಯ ಒಂದು ಅಂಶವು ಸಹಾನುಭೂತಿಯಾಗಿದೆ. ಸಹಾನುಭೂತಿಯುಳ್ಳವರಾಗಿ ಇರುವುದೆಂದರೆ, ಇತರರ ಇತಿಮಿತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಾ ಅವರ ವಿಚಾರಗಳನ್ನು ಮತ್ತು ಅನಿಸಿಕೆಗಳನ್ನು ಅರ್ಥಮಾಡಿಕೊಳ್ಳುವುದಾಗಿದೆ. (1 ಪೇತ್ರ 3:8) ಹಿರಿಯರು ಸಹಾನುಭೂತಿಯುಳ್ಳವರಾಗಿ ಇರುವುದು ಏಕೆ ಅಷ್ಟೊಂದು ಪ್ರಾಮುಖ್ಯ? ಏಕೆಂದರೆ, “ಪುರುಷರ ರೂಪದಲ್ಲಿ ದಾನಗಳನ್ನು” ಕೊಡುವಾತನಾದ ಯೆಹೋವನು, ಸಹಾನುಭೂತಿಯುಳ್ಳ ದೇವರಾಗಿದ್ದಾನೆ. ಆತನ ಸೇವಕರು ಕಷ್ಟದಲ್ಲಿರುವಾಗ ಇಲ್ಲವೆ ವೇದನೆಯನ್ನು ಅನುಭವಿಸುವಾಗ, ಆತನು ಅವರಿಗಾಗಿ ಮರುಕಪಡುತ್ತಾನೆ. (ವಿಮೋಚನಕಾಂಡ 3:7; ಯೆಶಾಯ 63:9) ಅವರ ಇತಿಮಿತಿಗಳನ್ನು ಆತನು ಪರಿಗಣನೆಗೆ ತೆಗೆದುಕೊಳ್ಳುತ್ತಾನೆ. (ಕೀರ್ತನೆ 103:14) ಹಾಗಾದರೆ, ಹಿರಿಯರು ಸಹಾನುಭೂತಿಯನ್ನು ಹೇಗೆ ತೋರಿಸಬಲ್ಲರು?
14. ಯಾವ ವಿಧಗಳಲ್ಲಿ ಹಿರಿಯರು ಇತರರಿಗೆ ಸಹಾನುಭೂತಿಯನ್ನು ತೋರಿಸಬಲ್ಲರು?
14 ನಿರುತ್ತೇಜಿತನಾದ ಒಬ್ಬನು ತಮ್ಮಲ್ಲಿಗೆ ಬರುವಾಗ, ಆ ವ್ಯಕ್ತಿಯ ಅನಿಸಿಕೆಗಳನ್ನು ಅಂಗೀಕರಿಸುತ್ತಾ ಅವರು ಆತನಿಗೆ ಕಿವಿಗೊಡುತ್ತಾರೆ. ತಮ್ಮ ಸಹೋದರರ ಹಿನ್ನೆಲೆ, ವ್ಯಕ್ತಿತ್ವ, ಮತ್ತು ಸನ್ನಿವೇಶಗಳನ್ನು ಅರ್ಥಮಾಡಿಕೊಳ್ಳಲು ಅವರು ಪ್ರಯತ್ನಿಸುತ್ತಾರೆ. ತದನಂತರ ಹಿರಿಯರು ಆತ್ಮೋನ್ನತಿ ಮಾಡುವ ಶಾಸ್ತ್ರೀಯ ನೆರವನ್ನು ನೀಡುವಾಗ, ಅದನ್ನು ಸ್ವೀಕರಿಸುವುದು ಸುಲಭವೆಂದು ಕುರಿಗಳು ಕಂಡುಕೊಳ್ಳುತ್ತವೆ. ಏಕೆಂದರೆ ಅದು ತಮ್ಮನ್ನು ನಿಜವಾಗಿಯೂ ಅರ್ಥಮಾಡಿಕೊಳ್ಳುವ ಮತ್ತು ತಮ್ಮ ಬಗ್ಗೆ ಚಿಂತಿಸುವ ಕುರುಬರಿಂದ ಬರುತ್ತದೆಂದು ಅವು ಬಲ್ಲವು. (ಜ್ಞಾನೋಕ್ತಿ 16:23) ಇತರರ ಇತಿಮಿತಿಗಳನ್ನು ಮತ್ತು ಅದರಿಂದ ಫಲಿಸಬಹುದಾದ ಅನಿಸಿಕೆಗಳನ್ನು ಹಿರಿಯರು ಪರಿಗಣಿಸುವಂತೆಯೂ ಸಹಾನುಭೂತಿಯು ಪ್ರಚೋದಿಸುತ್ತದೆ. ಉದಾಹರಣೆಗೆ, ವೃದ್ಧಾಪ್ಯ ಇಲ್ಲವೆ ಅನಾರೋಗ್ಯದ ಕಾರಣ ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಲು ಅಶಕ್ತರಾಗಿರುವುದರಿಂದ, ಕೆಲವು ನಿಷ್ಠಾವಂತ ಕ್ರೈಸ್ತರಿಗೆ ದೋಷಿ ಭಾವನೆಗಳಿರಬಹುದು. ಮತ್ತೊಂದು ಕಡೆಯಲ್ಲಿ, ತಮ್ಮ ಶುಶ್ರೂಷೆಯಲ್ಲಿ ಸುಧಾರಣೆಯನ್ನು ಮಾಡಲು ಕೆಲವರಿಗೆ ಉತ್ತೇಜನದ ಅಗತ್ಯವಿರಬಹುದು. (ಇಬ್ರಿಯ 5:12; 6:1) ಇತರರಿಗೆ ಆತ್ಮೋನ್ನತಿಯನ್ನು ಉಂಟುಮಾಡುವಂತಹ “ಒಪ್ಪಿಗೆಯ ಮಾತುಗಳನ್ನು” ಹಿರಿಯರು ಆಡುವಂತೆಯೂ ಸಹಾನುಭೂತಿಯು ಪ್ರಚೋದಿಸುವುದು. (ಪ್ರಸಂಗಿ 12:10) ಯೆಹೋವನ ಕುರಿಗಳು ಆತ್ಮೋನ್ನತಿ ಪಡೆದು ಪ್ರಚೋದಿಸಲ್ಪಡುವಾಗ, ದೇವರನ್ನು ಸೇವಿಸಲು ತಮ್ಮಿಂದ ಸಾಧ್ಯವಾದುದೆಲ್ಲವನ್ನು ಮಾಡುವಂತೆ ದೇವರಿಗಾಗಿರುವ ಪ್ರೀತಿಯು ಅವರನ್ನು ಪ್ರಚೋದಿಸುವುದು!
ಐಕ್ಯವನ್ನು ಪ್ರವರ್ಧಿಸುವ ಪುರುಷರು
15. ‘ನಂಬಿಕೆಯಲ್ಲಿ ಐಕ್ಯ’ ಎಂಬ ಅಭಿವ್ಯಕ್ತಿಯ ಅರ್ಥವೇನು?
15 ಮೂರನೆಯದಾಗಿ, “ನಾವೆಲ್ಲರು ನಂಬಿಕೆಯಿಂದಲೂ ದೇವಕುಮಾರನ ವಿಷಯವಾದ ಜ್ಞಾನದಿಂದಲೂ ಉಂಟಾಗುವ ಐಕ್ಯವನ್ನು” ಹೊಂದುವುದಕ್ಕಾಗಿ ‘ಪುರುಷರ ರೂಪದಲ್ಲಿ ದಾನಗಳು’ ಒದಗಿಸಲ್ಪಟ್ಟಿವೆ. (ಎಫೆಸ 4:12) ‘ನಂಬಿಕೆಯಲ್ಲಿ ಐಕ್ಯರು’ ಎಂಬ ವಾಕ್ಸರಣಿಯು, ಕೇವಲ ನಂಬಿಕೆಗಳ ಐಕ್ಯವನ್ನಲ್ಲ ವಿಶ್ವಾಸಿಗಳ ಐಕ್ಯವನ್ನೂ ಸೂಚಿಸುತ್ತದೆ. ಹೀಗೆ, ದೇವರು “ಪುರುಷರ ರೂಪದಲ್ಲಿ ದಾನಗಳನ್ನು” ನೀಡಿರುವುದಕ್ಕೆ ಮತ್ತೊಂದು ಕಾರಣವು, ಆತನ ಜನರಲ್ಲಿ ಐಕ್ಯವನ್ನು ಪ್ರವರ್ಧಿಸುವುದಕ್ಕಾಗಿಯೇ. ಅವರು ಇದನ್ನು ಹೇಗೆ ಮಾಡುತ್ತಾರೆ?
16. ಹಿರಿಯರು ತಮ್ಮೊಳಗೇ ಐಕ್ಯವನ್ನು ಕಾಪಾಡಿಕೊಳ್ಳುವುದು ಏಕೆ ಪ್ರಾಮುಖ್ಯವಾಗಿದೆ?
16 ಪ್ರಥಮವಾಗಿ ಅವರು ತಮ್ಮೊಳಗೆಯೇ ಐಕ್ಯವನ್ನು ಕಾಪಾಡಿಕೊಳ್ಳಬೇಕು. ಕುರುಬರಲ್ಲಿಯೇ ವಿಭಜನೆಗಳು ಇರುವುದಾದರೆ, ಕುರಿಗಳು ಕಡೆಗಣಿಸಲ್ಪಡಬಹುದು. ಮಂದೆಯ ಕುರಿಪಾಲನೆಯಲ್ಲಿ ವ್ಯಯಿಸಬಹುದಾದ ಅಮೂಲ್ಯವಾದ ಸಮಯವು, ಪ್ರಾಮುಖ್ಯವಲ್ಲದ ವಿಷಯಗಳ ಕುರಿತಾದ ದೀರ್ಘ ಚರ್ಚೆಗಳು ಹಾಗೂ ವಾಗ್ವಾದಗಳಿಗಾಗಿ ಅನಾವಶ್ಯಕವಾಗಿ ಉಪಯೋಗಿಸಲ್ಪಡಬಹುದು. (1 ತಿಮೊಥೆಯ 2:8) ಅವರ ವ್ಯಕ್ತಿತ್ವಗಳು ಭಿನ್ನವಾಗಿರುವುದರಿಂದ, ಚರ್ಚಿಸುವ ಪ್ರತಿಯೊಂದು ವಿಷಯದ ಸಂಬಂಧದಲ್ಲಿ ಹಿರಿಯರು ಸಮ್ಮತಿಸದೆ ಇರಬಹುದು. ಅವರು ವ್ಯತ್ಯಾಸವಾದ ಅಭಿಪ್ರಾಯಗಳನ್ನು ಪಡೆದಿರುವಂತೆ ಇಲ್ಲವೆ ಅವುಗಳನ್ನು ಮುಕ್ತವಾದ ಚರ್ಚೆಯಲ್ಲಿ ಸಮತೂಕ ಭಾವನೆಯೊಂದಿಗೆ ವ್ಯಕ್ತಪಡಿಸುವಂತೆಯೂ ಐಕ್ಯವು ಅನುಮತಿಸುತ್ತದೆ. ಅವಸರವಾಗಿ ನಿರ್ಣಯಿಸದೆ ಗೌರವದಿಂದ ಒಬ್ಬರಿಗೊಬ್ಬರು ಕಿವಿಗೊಡುವ ಮೂಲಕ ಹಿರಿಯರು ತಮ್ಮ ಐಕ್ಯವನ್ನು ಕಾಪಾಡಿಕೊಳ್ಳುತ್ತಾರೆ. ಮತ್ತು ಯಾವುದೇ ಬೈಬಲ್ ತತ್ವವು ಉಲ್ಲಂಘಿಸಲ್ಪಡದಿರುವ ತನಕ, ಪ್ರತಿಯೊಬ್ಬರು ಮಣಿಯಲು ಮತ್ತು ಹಿರಿಯರ ಮಂಡಲಿಯ ಅಂತಿಮ ನಿರ್ಣಯವನ್ನು ಸಮರ್ಥಿಸಲು ಸಿದ್ಧರಾಗಿರಬೇಕು. ಮಣಿಯುವ ಪ್ರವೃತ್ತಿಯು, ಅವರು “ಮೇಲಣಿಂದ ಬರುವ ಜ್ಞಾನ”ದಿಂದ ಮಾರ್ಗದರ್ಶಿಸಲ್ಪಟ್ಟಿದ್ದಾರೆ ಎಂಬುದನ್ನು ತೋರಿಸುತ್ತದೆ. ಈ ಜ್ಞಾನವು “ಸಮಾಧಾನಕರವಾದದ್ದು . . . ಸಂತೋಷವಾಗಿ ಒಪ್ಪಿಕೊಳ್ಳುವಂಥದು” ಆಗಿದೆ.—ಯಾಕೋಬ 3:17, 18.
17. ಸಭೆಯ ಐಕ್ಯವನ್ನು ಕಾಪಾಡಲು ಹಿರಿಯರು ಹೇಗೆ ಸಹಾಯ ಮಾಡಬಲ್ಲರು?
17 ಸಭೆಯ ಐಕ್ಯವನ್ನು ಪ್ರವರ್ಧಿಸುವ ವಿಷಯದಲ್ಲಿಯೂ ಹಿರಿಯರು ಜಾಗರೂಕರಾಗಿದ್ದಾರೆ. ಹಾನಿಕಾರಕ ಹರಟೆ, ತಪ್ಪು ಹೊರಿಸುವ ಪ್ರವೃತ್ತಿ, ಇಲ್ಲವೆ ಜಗಳವಾಡುವ ಮನೋವೃತ್ತಿಯಂತಹ ವಿಭಾಜಕ ಪ್ರಭಾವಗಳು ಸಭೆಯ ಶಾಂತಿಯನ್ನು ಭಂಗಪಡಿಸುವ ಬೆದರಿಕೆಯನ್ನು ಒಡ್ಡುವಾಗ, ಅವರು ಸಹಾಯಕರ ಸಲಹೆಯನ್ನು ಮನಃಪೂರ್ವಕವಾಗಿ ನೀಡುತ್ತಾರೆ. (ಫಿಲಿಪ್ಪಿ 2:2, 3) ಉದಾಹರಣೆಗೆ, ಟೀಕಾತ್ಮಕರೂ ಇತರರ ವಿಷಯಗಳಲ್ಲಿ ತಲೆಹಾಕುವವರೂ ಆಗಿರುವ ಕೆಲವು ವ್ಯಕ್ತಿಗಳ ಬಗ್ಗೆ ಹಿರಿಯರಿಗೆ ಗೊತ್ತಿರಬಹುದು. (1 ತಿಮೊಥೆಯ 5:13; 1 ಪೇತ್ರ 4:15) ಇಂತಹ ಮಾರ್ಗವು, ನಮಗೆ ದೇವರಿಂದ ಕಲಿಸಲ್ಪಟ್ಟಿರುವ ಮಾರ್ಗಕ್ಕೆ ವ್ಯತಿರಿಕ್ತವಾಗಿದೆಯೆಂದು ಮತ್ತು ಪ್ರತಿಯೊಬ್ಬನು “ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು” ಎಂಬುದಾಗಿಯೂ ಅಂತಹವರು ಗ್ರಹಿಸುವಂತೆ ಹಿರಿಯರು ಸಹಾಯಮಾಡುವರು. (ಗಲಾತ್ಯ 6:5, 7; 1 ಥೆಸಲೊನೀಕ 4:9-12) ಯೆಹೋವನು ಅನೇಕ ವಿಷಯಗಳನ್ನು ನಮ್ಮ ವ್ಯಕ್ತಿಗತ ಮನಸ್ಸಾಕ್ಷಿಗಳಿಗೆ ಬಿಟ್ಟಿರುವುದರಿಂದ, ನಮ್ಮಲ್ಲಿ ಯಾರೂ ಇಂತಹ ವಿಷಯಗಳ ಬಗ್ಗೆ ಇತರರನ್ನು ಟೀಕಿಸಬಾರದು ಎಂಬುದನ್ನು ಶಾಸ್ತ್ರಗಳಿಂದ ಅವರು ವಿವರಿಸಿ ಹೇಳುವರು. (ಮತ್ತಾಯ 7:1, 2; ಯಾಕೋಬ 4:10-12) ಐಕ್ಯರಾಗಿ ಸೇವೆ ಸಲ್ಲಿಸಲು, ಸಭೆಯಲ್ಲಿ ನಂಬಿಕೆ ಹಾಗೂ ಗೌರವದ ವಾತಾವರಣವಿರಬೇಕು. ಅಗತ್ಯವಿರುವಾಗ ಶಾಸ್ತ್ರೀಯ ಸಲಹೆಯನ್ನು ನೀಡುವ ಮೂಲಕ, ನಮ್ಮ ಶಾಂತಿ ಮತ್ತು ಐಕ್ಯವನ್ನು ಕಾಪಾಡಲು ‘ಪುರುಷರ ರೂಪದಲ್ಲಿ ದಾನಗಳು’ ಸಹಾಯ ಮಾಡುತ್ತವೆ.—ರೋಮಾಪುರ 14:19.
ಮಂದೆಯನ್ನು ಸಂರಕ್ಷಿಸುವುದು
18, 19. (ಎ) ‘ಪುರುಷರ ರೂಪದಲ್ಲಿ ದಾನಗಳು’ ನಮ್ಮನ್ನು ಯಾರಿಂದ ರಕ್ಷಿಸುತ್ತವೆ? (ಬಿ) ಬೇರೆ ಯಾವ ಅಪಾಯಗಳಿಂದ ಕುರಿಗಳು ರಕ್ಷಿಸಲ್ಪಡಬೇಕು, ಮತ್ತು ಕುರಿಗಳನ್ನು ರಕ್ಷಿಸಲು ಹಿರಿಯರು ಹೇಗೆ ಕ್ರಿಯೆಗೈಯುತ್ತಾರೆ?
18 ನಾಲ್ಕನೆಯದಾಗಿ, “ನಾವು . . . ದುರ್ಜನರ ವಂಚನೆಗೂ ದುರ್ಬೋಧಕರ ಕುಯುಕ್ತಿಗೂ ಒಳಬಿದ್ದು ನಾನಾ ಉಪದೇಶಗಳಿಂದ ಕಂಗೆಟ್ಟು” ಹೋಗುವುದರಿಂದ ನಮ್ಮನ್ನು ರಕ್ಷಿಸಲು ಯೆಹೋವನು “ಪುರುಷರ ರೂಪದಲ್ಲಿ ದಾನಗಳನ್ನು” ಒದಗಿಸಿದ್ದಾನೆ. (ಎಫೆಸ 4:14) “ಕುಯುಕ್ತಿ”ಗಾಗಿರುವ ಮೂಲ ಪದದ ಅರ್ಥವು “ಪಗಡೆಯಾಟದಲ್ಲಿ ವಂಚಿಸುವುದು,” ಇಲ್ಲವೆ “ಪಗಡೆಯಾಟದಲ್ಲಿ ಕೌಶಲದಿಂದ ವಂಚಿಸುವುದು” ಆಗಿದೆ. ಇದು, ಜಾಣ ಧರ್ಮಭ್ರಷ್ಟರು ಕಾರ್ಯವೆಸಗುವುದನ್ನು ನಮ್ಮ ಜ್ಞಾಪಕಕ್ಕೆ ತರುವುದಿಲ್ಲವೊ? ಚತುರ ವಾಗ್ವಾದಗಳನ್ನು ಉಪಯೋಗಿಸುತ್ತಾ ಅವರು ಸತ್ಯ ಕ್ರೈಸ್ತರನ್ನು ನಂಬಿಕೆಯಿಂದ ವಿಮುಖಗೊಳಿಸಲು ಶಾಸ್ತ್ರವಚನಗಳನ್ನು ಕೌಶಲದಿಂದ ತಿರುಚುತ್ತಾರೆ. ಇಂತಹ “ಕ್ರೂರವಾದ ತೋಳಗಳ” ವಿಷಯದಲ್ಲಿ ಹಿರಿಯರು ಜಾಗರೂಕರಾಗಿರಬೇಕು.—ಅ. ಕೃತ್ಯಗಳು 20:29, 30.
19 ಯೆಹೋವನ ಕುರಿಗಳು ಇನ್ನಿತರ ಅಪಾಯಗಳಿಂದಲೂ ರಕ್ಷಿಸಲ್ಪಡಬೇಕು. ಪುರಾತನಕಾಲದಲ್ಲಿ ಕುರುಬನಾಗಿದ್ದ ದಾವೀದನು, ತನ್ನ ತಂದೆಯ ಮಂದೆಯನ್ನು ಮಾಂಸಾಹಾರಿ ಪ್ರಾಣಿಗಳಿಂದ ಧೈರ್ಯದಿಂದ ರಕ್ಷಿಸಿದನು. (1 ಸಮುವೇಲ 17:34-36) ಇಂದು ಕೂಡ, ಯೆಹೋವನ ಕುರಿಗಳಲ್ಲಿ ವಿಶೇಷವಾಗಿ ಸುಲಭಭೇದ್ಯರನ್ನು ದುರುಪಚರಿಸುವ ಇಲ್ಲವೆ ಪೀಡಿಸುವ ಯಾವುದೇ ವ್ಯಕ್ತಿಯಿಂದ ಮಂದೆಯನ್ನು ರಕ್ಷಿಸಲು, ಅಕ್ಕರೆಯ ಕ್ರೈಸ್ತ ಕುರುಬರು ಧೈರ್ಯವನ್ನು ತೋರಿಸಬೇಕಾದ ಸಂದರ್ಭಗಳು ಏಳಬಹುದು. ದುಷ್ಟತನವನ್ನು ಹಬ್ಬಿಸಲು ಉದ್ದೇಶಪೂರ್ವಕವಾಗಿ ಕುಯುಕ್ತಿ ಹಾಗೂ ವಂಚನೆಯನ್ನು ಉಪಯೋಗಿಸುವ ಮತ್ತು ಸಂಚುಹೂಡುವ ಪಾಪಿಗಳನ್ನು ಹಿರಿಯರು ಸಭೆಯಿಂದ ಆದಷ್ಟು ಬೇಗನೆ ತೆಗೆದುಬಿಡುವರು.b—1 ಕೊರಿಂಥ 5:9-13; ಹೋಲಿಸಿ ಕೀರ್ತನೆ 101:7.
20. ‘ಪುರುಷರ ರೂಪದಲ್ಲಿ ದಾನಗಳ’ ಆರೈಕೆಯಲ್ಲಿ ನಾವು ಏಕೆ ಸುರಕ್ಷಿತರಾಗಿರಬಲ್ಲೆವು?
20 “ಪುರುಷರ ರೂಪದಲ್ಲಿ ದಾನ”ಗಳಿಗಾಗಿ ನಾವೆಷ್ಟು ಆಭಾರಿಗಳಾಗಿದ್ದೇವೆ! ಅವರ ಪ್ರೀತಿಪರ ಆರೈಕೆಯಲ್ಲಿ ನಾವು ಸುರಕ್ಷಿತರಾಗಿರಬಲ್ಲೆವು, ಏಕೆಂದರೆ, ಅವರು ಕೋಮಲತೆಯಿಂದ ನಮ್ಮನ್ನು ಸರಿಪಡಿಸುತ್ತಾರೆ, ಪ್ರೀತಿಯಿಂದ ನಮ್ಮ ಆತ್ಮೋನ್ನತಿ ಮಾಡುತ್ತಾರೆ, ಮನಃಪೂರ್ವಕವಾಗಿ ನಮ್ಮ ಐಕ್ಯವನ್ನು ಕಾಪಾಡುತ್ತಾರೆ, ಮತ್ತು ಧೈರ್ಯದಿಂದ ನಮ್ಮನ್ನು ಸಂರಕ್ಷಿಸುತ್ತಾರೆ. ಆದರೆ, ಸಭೆಯಲ್ಲಿ ತಮ್ಮ ಪಾತ್ರವನ್ನು ಈ ‘ಪುರುಷರ ರೂಪದಲ್ಲಿ ದಾನಗಳು’ ಹೇಗೆ ವೀಕ್ಷಿಸಬೇಕು? ಅವರನ್ನು ನಾವು ಗಣ್ಯಮಾಡುತ್ತೇವೆಂಬುದನ್ನು ಹೇಗೆ ತೋರಿಸಬಲ್ಲೆವು? ಈ ಪ್ರಶ್ನೆಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.
[ಅಧ್ಯಯನ ಪ್ರಶ್ನೆಗಳು]
a ಗ್ರೀಕ್ ಸೆಪ್ಟುಅಜಿಂಟ್ ತರ್ಜುಮೆಯಲ್ಲಿ, “ಸರಿಪಡಿಸು” ಎಂಬ ಇದೇ ಕ್ರಿಯಾಪದವು ಕೀರ್ತನೆ 17[16]:5ರಲ್ಲಿ ಬಳಸಲ್ಪಟ್ಟಿತು. ಅಲ್ಲಿ ನಂಬಿಗಸ್ತ ದಾವೀದನು, ತನ್ನ ಹೆಜ್ಜೆಗಳು ಯೆಹೋವನ ಮಾರ್ಗಕ್ಕೆ ಅಂಟಿಕೊಂಡಿರಲೆಂದು ಪ್ರಾರ್ಥಿಸಿದನು.
b ಉದಾಹರಣೆಗೆ, ವಾಚ್ಟವರ್ ಪತ್ರಿಕೆಯ 1979, ನವೆಂಬರ್ 15ರ ಸಂಚಿಕೆಯಲ್ಲಿ, 31-2ನೆಯ ಪುಟಗಳಲ್ಲಿರುವ “ವಾಚಕರಿಂದ ಪ್ರಶ್ನೆಗಳು” ಮತ್ತು 1997, ಜನವರಿ 1ರ ಸಂಚಿಕೆಯಲ್ಲಿ, 26-9ನೆಯ ಪುಟಗಳಲ್ಲಿರುವ “ಕೆಟ್ಟದ್ದನ್ನು ನಾವು ಹೇಸೋಣ” ಎಂಬ ಲೇಖನವನ್ನು ನೋಡಿರಿ.
ನಿಮಗೆ ಜ್ಞಾಪಕವಿದೆಯೊ?
◻ ‘ಪುರುಷರ ರೂಪದಲ್ಲಿರುವ ದಾನಗಳು’ ಯಾರು, ಮತ್ತು ಕ್ರಿಸ್ತನ ಮೂಲಕ ದೇವರು ಅವರನ್ನು ಸಭೆಗೆ ಏಕೆ ನೀಡಿದ್ದಾನೆ?
◻ ಮಂದೆಯನ್ನು ಸರಿಪಡಿಸುವ ತಮ್ಮ ಜವಾಬ್ದಾರಿಯನ್ನು ಹಿರಿಯರು ಹೇಗೆ ನೆರವೇರಿಸುತ್ತಾರೆ?
◻ ತಮ್ಮ ಜೊತೆ ವಿಶ್ವಾಸಿಗಳ ಆತ್ಮೋನ್ನತಿ ಮಾಡಲು ಹಿರಿಯರು ಏನು ಮಾಡಸಾಧ್ಯವಿದೆ?
◻ ಸಭೆಯ ಐಕ್ಯವನ್ನು ಹಿರಿಯರು ಹೇಗೆ ಕಾಪಾಡಬಲ್ಲರು?
[ಪುಟ 10 ರಲ್ಲಿರುವ ಚಿತ್ರ]
ಹಿರಿಯರು ಎದೆಗುಂದಿದವರಿಗೆ ಉತ್ತೇಜನ ನೀಡುವಂತೆ ಸಹಾನುಭೂತಿಯು ಸಹಾಯ ಮಾಡುತ್ತದೆ
[ಪುಟ 10 ರಲ್ಲಿರುವ ಚಿತ್ರ]
ಹಿರಿಯರ ಮಧ್ಯದಲ್ಲಿರುವ ಐಕ್ಯವು ಸಭೆಯಲ್ಲಿ ಐಕ್ಯವನ್ನು ಪ್ರವರ್ಧಿಸುತ್ತದೆ