ಯೆಹೋವನಲ್ಲಿ ಸಂತೋಷಿಸುತ್ತಾ ಉಲ್ಲಾಸವಾಗಿರ್ರಿ
ಯಾವುದೇ ಉಪಯುಕ್ತ ಯೋಜನೆಯು ಯಶಸ್ವಿಕರವಾಗಿ ಪೂರ್ಣಗೊಳ್ಳುವಾಗ, ಅದು ಸಂತೋಷದ ಸಮಯವಾಗಿರುತ್ತದೆ. ನ್ಯೂ ಯಾರ್ಕ್ನ ಪ್ಯಾಟರ್ಸನ್ನಲ್ಲಿರುವ ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನಲ್ಲಿ ಮಾರ್ಚ್ 13, 1999ರಂದು ನಡೆದ ಪದವಿಪ್ರಾಪ್ತಿಯು, ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನ 106ನೆಯ ತರಗತಿಯ 48 ವಿದ್ಯಾರ್ಥಿಗಳಿಗೆ ಖಂಡಿತವಾಗಿಯೂ ಇದೇ ರೀತಿಯ ಅನುಭವವಾಗಿತ್ತು.
ಆಡಳಿತ ಮಂಡಲಿಯ ಸದಸ್ಯರೂ, ಗಿಲ್ಯಡ್ನ ಏಳನೆಯ ತರಗತಿಯ ಸದಸ್ಯರೂ ಮತ್ತು ಪದವಿಪ್ರಾಪ್ತಿಯ ಕಾರ್ಯಕ್ರಮದ ಅಧ್ಯಕ್ಷರೂ ಆದ ಥಿಯೊಡರ್ ಜಾರಸ್ ಅವರ ಆರಂಭದ ಮಾತುಗಳು ಕೀರ್ತನೆ 32:11ರ ನುಡಿಗಳನ್ನು ಎತ್ತಿತೋರಿಸಿದವು: “ನೀತಿವಂತರೇ, ಯೆಹೋವನಲ್ಲಿ ಸಂತೋಷಿಸುತ್ತಾ ಉಲ್ಲಾಸವಾಗಿರ್ರಿ.” ಆ ಸಂದರ್ಭದಲ್ಲಿ ಎಲ್ಲರು ಸಂತೋಷಿಸುವುದು ಏಕೆ ಯೋಗ್ಯವಾಗಿದೆ ಎಂಬುದನ್ನು ಅವರು ವಿವರಿಸುತ್ತಾ ಹೇಳಿದ್ದು: “ನಮ್ಮ ಗಿಲ್ಯಡ್ ವಿದ್ಯಾರ್ಥಿಗಳನ್ನು ಸೇರಿಸಿ, ಯಾರೆಲ್ಲ ನೀತಿವಂತರಾಗಿದ್ದಾರೋ ಅಂತಹವರ ಮೂಲಕ ಯೆಹೋವನು ಸಾಧಿಸುತ್ತಿರುವ ವಿಷಯಗಳಿಗಾಗಿ ನಾವು ಈ ರೀತಿಯ ಸಂದರ್ಭಗಳಲ್ಲಿ ಸಂತೋಷಿಸುತ್ತೇವೆ.” ವಿದ್ಯಾರ್ಥಿಗಳು ಗಿಲ್ಯಡ್ ಶಾಲೆಗೆ ಬರಲು ಯೋಜನೆಗಳನ್ನು ಮಾಡಿದ್ದರೂ ಮತ್ತು ಮಿಷನೆರಿ ಸೇವೆಗೆ ಅರ್ಹರಾಗಲು ಬಹಳಷ್ಟು ಪ್ರಯಾಸಪಟ್ಟಿದ್ದರೂ, ಎಲ್ಲವೂ ಯಶಸ್ವಿಕರವಾಗಿ ಪೂರ್ಣಗೊಳ್ಳುವಂತೆ ಮಾಡಿದ್ದು ಯೆಹೋವನೇ. (ಜ್ಞಾನೋಕ್ತಿ 21:5; 27:1) ‘ಯೆಹೋವನಲ್ಲಿ ಸಂತೋಷಿಸಲು’ ಇದೇ ಮುಖ್ಯ ಕಾರಣವೆಂದು ಸಹೋದರ ಜಾರಸ್ ಒತ್ತಿಹೇಳಿದರು.
ಪ್ಯಾಟರ್ಸನ್ ಸಭಾಂಗಣದಲ್ಲಿ ನೆರದಿದ್ದವರಲ್ಲಿ, ಈ ಹರ್ಷದಾಯಕ ಘಟನೆಯನ್ನು ವೀಕ್ಷಿಸಲು 12 ದೇಶಗಳಿಂದ ಬಂದಿದ್ದ ವಿದ್ಯಾರ್ಥಿಗಳ ಕುಟುಂಬ ಸದಸ್ಯರು ಹಾಗೂ ಅತಿಥಿಗಳು ಸೇರಿದ್ದರು. ಆಡಿಯೊ ಮತ್ತು ವಿಡಿಯೊಗಳ ಮೂಲಕ ಜೊತೆಸೇರಿದ್ದ ಬ್ರೂಕ್ಲಿನ್, ಪ್ಯಾಟರ್ಸನ್, ಮತ್ತು ವಾಲ್ಕಿಲ್ ಬೆತೆಲ್ ಕುಟುಂಬದ ಸದಸ್ಯರೊಂದಿಗೆ ಹಾಜರಿಯಲ್ಲಿದ್ದ 5,198 ಸಭಿಕರು ಕಾರ್ಯಕ್ರಮವನ್ನು ಎದುರುನೋಡಿದಂತೆ ಅಲ್ಲಿ ಉಲ್ಲಾಸದ ಆತ್ಮವು ತುಂಬಿಕೊಂಡಿತ್ತೆಂಬುದು ಸ್ಪಷ್ಟವಾಗಿತ್ತು.
ಉಲ್ಲಾಸಭರಿತ ಆತ್ಮವನ್ನು ಕಾಪಾಡಿಕೊಳ್ಳುವಂತೆ ಪ್ರೇರಿಸಲ್ಪಟ್ಟದ್ದು
ಸಹೋದರ ಜಾರಸ್ ತಮ್ಮ ಆರಂಭದ ಹೇಳಿಕೆಗಳನ್ನು ಮುಗಿಸಿದಂತೆ, ಗಿಲ್ಯಡ್ ಪದವೀಧರರಿಗೆ ಮಾತ್ರವಲ್ಲ ಹಾಜರಿಯಲ್ಲಿದ್ದ ಎಲ್ಲರಿಗೂ ಉತ್ತೇಜನದಾಯಕ ಶಾಸ್ತ್ರೀಯ ಬುದ್ಧಿವಾದವನ್ನು ತಯಾರಿಸಿದ್ದ ಐವರು ಭಾಷಣಕರ್ತರಲ್ಲಿ ಪ್ರಥಮ ಭಾಷಣಕರ್ತರನ್ನು ಪರಿಚಯಿಸಿದರು.
ಪ್ರಥಮವಾಗಿ ಮಾತಾಡಿದವರು ವಿಲಿಯಮ್ ಮ್ಯಾಲನ್ಫಾಂಟ್ ಆಗಿದ್ದರು. ಇವರು ಗಿಲ್ಯಡ್ನ 34ನೆಯ ತರಗತಿಯ ಪದವೀಧರರಾಗಿದ್ದು, ಈಗ ಆಡಳಿತ ಮಂಡಲಿಯ ಟೀಚಿಂಗ್ (ಬೋಧನ) ಕಮಿಟಿಗೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸಂಗಿ 1:2ರ ಮೇಲಾಧಾರಿತವಾದ “‘ಸಮಸ್ತವೂ’ ವ್ಯರ್ಥವಲ್ಲ!” ಎಂಬ ಅವರ ಮುಖ್ಯ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಅವರು ಎಬ್ಬಿಸಿದರು: “ಸಮಸ್ತವೂ ಅಂದರೆ, ಆ ಪದದ ಅರ್ಥಕ್ಕನುಸಾರ, ಎಲ್ಲವೂ ವ್ಯರ್ಥವೆಂದು ಸೊಲೊಮೋನನು ಹೇಳುತ್ತಿದ್ದನೋ?” ಇದಕ್ಕೆ ಉತ್ತರ: “ಇಲ್ಲ. ದೈವಿಕ ಚಿತ್ತವನ್ನು ಅಲಕ್ಷಿಸುವ ಮಾನವ ಯೋಜನೆಗಳು ಮತ್ತು ದೈವಿಕ ಚಿತ್ತಕ್ಕೆ ವಿಮುಖವಾಗಿರುವ ಬೆನ್ನಟ್ಟುವಿಕೆಗಳು ವ್ಯರ್ಥವಾಗಿವೆ ಎಂದು ಅವರು ಸೂಚಿಸಿ ಹೇಳಿದರು.” ಇದಕ್ಕೆ ವಿರುದ್ಧವಾಗಿ, ಸತ್ಯ ದೇವರಾದ ಯೆಹೋವನನ್ನು ಆರಾಧಿಸುವುದು ವ್ಯರ್ಥವಲ್ಲ; ಹಾಗೆಯೇ ದೇವರ ವಾಕ್ಯವಾದ ಬೈಬಲನ್ನು ಅಭ್ಯಸಿಸಿ ಅದನ್ನು ಇತರರಿಗೆ ಕಲಿಸುವುದು ಸಹ ವ್ಯರ್ಥವಲ್ಲ. ತನ್ನ ಸೇವಕರು ಕೈಗೊಳ್ಳುವ ಇಂತಹ ಕಾರ್ಯಗಳನ್ನು ದೇವರು ಎಂದೂ ಮರೆಯುವುದಿಲ್ಲ. (ಇಬ್ರಿಯ 6:10) ದೇವರ ಅನುಗ್ರಹಕ್ಕೆ ಪಾತ್ರರಾದವರು ಕೇಡನ್ನು ಅನುಭವಿಸುವ ಸಂದರ್ಭ ಬಂದಾಗ, ಅವರು “ಯೆಹೋವನ ರಕ್ಷಣೆಯಲ್ಲಿರುವ ಜೀವ ನಿಕ್ಷೇಪದಲ್ಲಿ ಭದ್ರ”ವಾಗಿರುವರು. (1 ಸಮುವೇಲ 25:29) ಎಂತಹ ಮನಮುಟ್ಟುವ ವಿಚಾರ! ಈ ಅಂಶಗಳನ್ನು ಜ್ಞಾಪಕದಲ್ಲಿಟ್ಟುಕೊಳ್ಳುವ ಮೂಲಕ, ಯೆಹೋವನ ಆರಾಧಕರಲ್ಲಿ ಎಲ್ಲರೂ ಉಲ್ಲಾಸಭರಿತ ಆತ್ಮವನ್ನು ಕಾಪಾಡಿಕೊಳ್ಳಸಾಧ್ಯವಿದೆ.
ಆಡಳಿತ ಮಂಡಲಿಯ ಸದಸ್ಯರಾದ ಜಾನ್ ಬಾರ್, “ನಿಮ್ಮ ಮಿಷನೆರಿ ನೇಮಕದಲ್ಲಿ ಸಂತೋಷವನ್ನು ಕಂಡುಕೊಳ್ಳಿರಿ” ಎಂಬ ತಮ್ಮ ಭಾಷಣದಿಂದ ಪದವಿಪ್ರಾಪ್ತಿ ಪಡೆಯುತ್ತಿರುವ ತರಗತಿಗೆ ಉತ್ತೇಜನವನ್ನು ನೀಡಿದರು. ಮಿಷನೆರಿ ಸೇವೆಯು ಯೆಹೋವ ದೇವರ ಹೃದಯಕ್ಕೆ ಬಹಳ ಅಚ್ಚುಮೆಚ್ಚಿನದ್ದೆಂದು ಅವರು ತೋರಿಸಿಕೊಟ್ಟರು. “ಅದು ಲೋಕಕ್ಕಾಗಿ ಯೆಹೋವನು ತೋರಿಸಿದ ಪ್ರೀತಿಯೊಂದಿಗೆ ನಿಕಟವಾಗಿ ಸಂಬಂಧಿಸಿರುವ ವಿಷಯವಾಗಿದೆ. ಆತನು ತನ್ನ ಏಕೈಕ ಪುತ್ರನನ್ನು ಭೂಮಿಗೆ ಕಳುಹಿಸಿದನು. ಯೇಸು ಅತ್ಯಂತ ಮಹಾನ್ ಮಿಷನೆರಿಯಾಗಿದ್ದು, ಪ್ರಪ್ರಥಮ ಮಿಷನೆರಿಯೂ ಆಗಿದ್ದನು.” ಭೂಮಿಯ ಮೇಲಿನ ತನ್ನ ನೇಮಕದಲ್ಲಿ ಸಫಲನಾಗಲು ಯೇಸು ಮಾಡಬೇಕಾಗಿದ್ದ ಹೊಂದಾಣಿಕೆಗಳ ಕುರಿತು ಪದವೀಧರರು ಯೋಚಿಸಿದಂತೆ, ಯೇಸುವಿನ ಮಿಷನೆರಿ ಸೇವೆಯ ಪ್ರಯೋಜನಗಳು ಈಗಲೂ ಅದನ್ನು ಬಳಸಿಕೊಳ್ಳುವವರಿಗೆ ಲಭ್ಯವಿವೆ. ಏಕೆಂದರೆ ಯೇಸು, ದೇವರ ಕೆಲಸವನ್ನು ಮಾಡುವುದರಲ್ಲಿ ಸಂತೋಷವನ್ನು ಕಂಡುಕೊಂಡನು ಮತ್ತು ಅವನು ಮಾನವಸಂತಾನವನ್ನೂ ಪ್ರೀತಿಸಿದನೆಂದು ಸಹೋದರ ಬಾರ್ ಸೂಚಿಸಿದರು. (ಜ್ಞಾನೋಕ್ತಿ 8:30, 31) ಪದವೀಧರರು ತಮ್ಮ ನೇಮಕಗಳಿಗೆ ಅಂಟಿಕೊಂಡಿರಬೇಕಾದದ್ದು ಕೇವಲ ತಾಳಿಕೊಳ್ಳಬೇಕೆಂಬ ವಿಷಯಕ್ಕಾಗಿ ಅಲ್ಲ, ಬದಲಿಗೆ ಹಾಗೆ ಮಾಡುವುದರಲ್ಲಿ ಅವರು ಸಂತೋಷಿಸುತ್ತಾರೆಂಬ ಕಾರಣಕ್ಕಾಗಿ ಎಂದು ಸಹೋದರ ಬಾರ್ ಅವರನ್ನು ಉತ್ತೇಜಿಸಿದರು. “ಯೆಹೋವನ ಮೇಲೆ ಆತುಕೊಳ್ಳಿರಿ; ಆತನೆಂದಿಗೂ ನಿಮ್ಮ ಕೈ ಬಿಡನು,” ಎಂದು ಅವರು ತರಗತಿಗೆ ಹೇಳಿದರು.—ಕೀರ್ತನೆ 55:22.
ಮುಂದಿನ ಭಾಷಣಕರ್ತರು, ಆಡಳಿತ ಮಂಡಲಿಯ ಸದಸ್ಯರಾದ ಲಾಯಡ್ ಬ್ಯಾರಿ ಆಗಿದ್ದರು. ಅವರು ಆರಿಸಿಕೊಂಡ ಮುಖ್ಯ ವಿಷಯವು “ಯೆಹೋವನ ಹೆಸರಿನಲ್ಲಿ ಸದಾಕಾಲ ನಡೆಯುವುದು” ಎಂದಾಗಿತ್ತು. ಗಿಲ್ಯಡ್ನ 11ನೆಯ ತರಗತಿಯನ್ನು ಪೂರ್ಣಗೊಳಿಸಿ, ಜಪಾನಿನಲ್ಲಿ 25 ವರ್ಷಗಳ ಕಾಲ ಮಿಷನೆರಿಯಾಗಿ ಸೇವೆ ಸಲ್ಲಿಸಿದ ಬಳಿಕ, ಸಹೋದರ ಬ್ಯಾರಿ ಆರಂಭಕಾಲದ ಮಿಷನೆರಿಗಳ ಅನುಭವಗಳಲ್ಲಿ ಕೆಲವನ್ನು ಹೇಳಿ, ಅವರು ಎದುರಿಸಬೇಕಾಗಿದ್ದ ಸವಾಲುಗಳನ್ನು ವರ್ಣಿಸಿದರು. ಪದವಿಪ್ರಾಪ್ತಿ ಪಡೆಯುತ್ತಿದ್ದ ತರಗತಿಗೆ ಅವರ ವ್ಯಾವಹಾರಿಕ ಸಲಹೆಯು ಏನಾಗಿತ್ತು? “ಎಲ್ಲಕ್ಕಿಂತಲೂ ಹೆಚ್ಚಾಗಿ, ನಿಮ್ಮ ಆತ್ಮಿಕತೆಯನ್ನು ಕಾಪಾಡಿಕೊಳ್ಳಿರಿ. ಆ ದೇಶದ ಭಾಷೆ ಹಾಗೂ ಸಂಸ್ಕೃತಿಯನ್ನು ಕಲಿತುಕೊಳ್ಳಿರಿ. ನಿಮ್ಮ ಹಾಸ್ಯ ಪ್ರಜ್ಞೆಯನ್ನು ಕಾಪಾಡಿಕೊಳ್ಳಿರಿ. ಮತ್ತು ನೇಮಕಕ್ಕೆ ಅಂಟಿಕೊಳ್ಳಿರಿ, ದಣಿದುಹೋಗಬೇಡಿ.” ಪದವೀಧರರು ತಮ್ಮ ವಿದೇಶಿ ನೇಮಕದಲ್ಲಿ, ವಿವಿಧ ದೇವದೇವತೆಗಳ ಹೆಸರಿನಲ್ಲಿ ನಡೆಯುವ ಅನೇಕ ಜನರನ್ನು ಸಂಧಿಸುವರೆಂದು ಸಹೋದರ ಬ್ಯಾರಿ ಹೇಳಿದರು. ಅವರು ಮೀಕನ ಮಾತುಗಳನ್ನು ಪದವೀಧರರ ಜ್ಞಾಪಕಕ್ಕೆ ತಂದರು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರಿನ ಹೆಸರಿನಲ್ಲಿ ನಡೆಯುತ್ತವೆ; ನಾವಾದರೂ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” (ಮೀಕ 4:5) ಯೆಹೋವನ ಹೆಸರಿನಲ್ಲಿ ನಡೆಯುತ್ತಾ ಇರಲು ಮತ್ತು ಆತನನ್ನು ನಂಬಿಗಸ್ತರಾಗಿ ಸೇವಿಸುತ್ತಾ ಇರಲು, ಮಾಜಿ ಮಿಷನೆರಿಗಳ ಮಾದರಿಯು ದೇವರ ಎಲ್ಲ ಸೇವಕರಿಗೆ ಖಂಡಿತವಾಗಿಯೂ ಒಂದು ಶಕ್ತಿಶಾಲಿ ಪ್ರೇರಣೆಯಾಗಿದೆ.
ಇದರ ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರು, ಗಿಲ್ಯಡ್ ಉಪದೇಶಕರಾದ ಲಾರೆನ್ಸ್ ಬೋವನ್. “ನೀವು ಏನಾಗಿ ಪರಿಣಮಿಸುವಿರಿ?” ಎಂಬ ಪ್ರಶ್ನೆಯನ್ನು ಅವರ ನಿರೂಪಣೆಯು ಎಬ್ಬಿಸಿತು. ದೇವರ ಸೇವೆಯಲ್ಲಿ ಯಶಸ್ಸನ್ನು ಗಳಿಸಲು, ಯೆಹೋವನ ಮೇಲಿನ ನಂಬಿಕೆ ಹಾಗೂ ಭರವಸೆಯು ಪ್ರಾಮುಖ್ಯವೆಂದು ಅವರು ತೋರಿಸಿದರು. ಯೆಹೋವನ ಮೇಲೆ ಸಂಪೂರ್ಣ ಭರವಸೆಯನ್ನು ಇಟ್ಟದ್ದರಿಂದ, ಅರಸನಾದ ಆಸನು ವೈರಿಗಳ ಹತ್ತು ಲಕ್ಷ ಪುರುಷರುಳ್ಳ ಸೇನೆಯ ಮೇಲೆ ಭಾರಿ ವಿಜಯವನ್ನು ಸಾಧಿಸಿದನು. ಆದರೂ, ದೇವರ ಮೇಲೆ ಅವಲಂಬನೆಯನ್ನು ತೋರಿಸುತ್ತಾ ಇರುವ ಅಗತ್ಯದ ವಿಷಯದಲ್ಲಿ ಪ್ರವಾದಿಯಾದ ಅಜರ್ಯನು ಅವನಿಗೆ ಜ್ಞಾಪಕಹುಟ್ಟಿಸಿದನು: “ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು.” (2 ಪೂರ್ವಕಾಲವೃತ್ತಾಂತ 14:9-12; 15:1, 2) ಯೆಹೋವ ಎಂಬ ದೇವರ ಹೆಸರು, ತನ್ನ ಉದ್ದೇಶವನ್ನು ಪೂರೈಸಲು ಆತನು ಒಬ್ಬ ಒದಗಿಸುವಾತನಾಗಿ, ಸಂರಕ್ಷಕನಾಗಿ, ಇಲ್ಲವೆ ವಧಕಾರನಾಗಿ ಪರಿಣಮಿಸುವ ಅರ್ಥವನ್ನು ಕೊಡುವುದರಿಂದ, ಯೆಹೋವನ ಮೇಲೆ ಆತುಕೊಂಡು ಆತನ ಉದ್ದೇಶಕ್ಕನುಗುಣವಾಗಿ ಕಾರ್ಯಮಾಡುವ ಮಿಷನೆರಿಗಳು ತಮ್ಮ ನೇಮಕಗಳಲ್ಲಿ ಯಶಸ್ಸನ್ನು ಕಂಡುಕೊಳ್ಳುವರು. (ವಿಮೋಚನಕಾಂಡ 3:14) “ಯೆಹೋವನ ಉದ್ದೇಶವನ್ನು ನಿಮ್ಮ ಉದ್ದೇಶವನ್ನಾಗಿ ಮಾಡುವಾಗ, ನಿಮ್ಮ ನೇಮಕವನ್ನು ನೆರವೇರಿಸಲು ಏನು ಅಗತ್ಯವೋ ಅದಾಗಿ ಪರಿಣಮಿಸಲು ದೇವರು ಸಹಾಯ ಮಾಡುವನೆಂಬುದನ್ನು ಎಂದಿಗೂ ಮರೆಯಬೇಡಿ” ಎಂದು ಸಹೋದರ ಬೋವನ್ ಸಮಾಪ್ತಿಗೊಳಿಸಿದರು.
ಕಾರ್ಯಕ್ರಮದ ಈ ಭಾಗದ ಕೊನೆಯ ಭಾಷಣಕರ್ತರು, ಮಾಜಿ ಮಿಷನೆರಿ ಹಾಗೂ ಈಗ ಶಾಲೆಯ ರೆಜಿಸ್ಟ್ರಾರ್ ಆಗಿರುವ ವಾಲಸ್ ಲಿವರೆನ್ಸ್ ಆಗಿದ್ದರು. “ದೇವರ ವಾಕ್ಯವು ನಿಮ್ಮಲ್ಲಿ ಸಜೀವವಾಗಿದ್ದು, ಕಾರ್ಯನಡೆಸುವಂತಹದ್ದಾಗಿರಲಿ” ಎಂಬ ಶೀರ್ಷಿಕೆಯ ಅವರ ಭಾಷಣವು, ಯಾವಾಗಲೂ ಸಂಪೂರ್ಣತೆಯ ಕಡೆಗೆ ಮುಂದೆ ಸಾಗುತ್ತಿರುವ ದೇವರ ನಿಶ್ಚಿತವಾದ ಸಂದೇಶ ಇಲ್ಲವೆ ವಾಗ್ದಾನದ ಕಡೆಗೆ ಗಮನವನ್ನು ಸೆಳೆಯಿತು. (ಇಬ್ರಿಯ 4:12) ಯಾರು ಅದಕ್ಕೆ ಅನುಮತಿ ನೀಡುತ್ತಾರೋ, ಅಂತಹವರ ಜೀವಿತಗಳನ್ನು ಅದು ಪ್ರಭಾವಿಸುತ್ತದೆ. (1 ಥೆಸಲೊನೀಕ 2:13) ನಮ್ಮ ಜೀವಿತಗಳಲ್ಲಿ ಆ ವಾಕ್ಯವನ್ನು ಸಜೀವವಾಗಿಟ್ಟುಕೊಂಡು, ಕಾರ್ಯನಡೆಸುವಂತಹದ್ದಾಗಿ ಹೇಗೆ ಮಾಡಬಲ್ಲೆವು? ಶ್ರದ್ಧಾಪೂರ್ವಕ ಬೈಬಲ್ ಅಧ್ಯಯನದ ಮೂಲಕವೇ. ಗಿಲ್ಯಡ್ನಲ್ಲಿ ಕಲಿಸಲ್ಪಟ್ಟ ಬೈಬಲ್ ಅಧ್ಯಯನದ ವಿಧಾನಗಳ ಕುರಿತು ಸಹೋದರ ಲಿವರನ್ಸ್ ಪದವೀಧರರಿಗೆ ಜ್ಞಾಪಕ ಹುಟ್ಟಿಸಿದರು. ಅದರಲ್ಲಿ ದೇವರ ವಾಕ್ಯದ ಓದುವಿಕೆ ಹಾಗೂ ಅದರ ಅರ್ಥ ಮತ್ತು ಅನ್ವಯದ ವಿವರಣೆಯು ಸೇರಿರುತ್ತದೆ. ಅವರು, ಆಡಳಿತ ಮಂಡಲಿಯ ಸದಸ್ಯರೂ, ಸುಮಾರು 50 ವರ್ಷಗಳ ಹಿಂದೆ ಗಿಲ್ಯಡ್ ಶಾಲೆಯನ್ನು ಸ್ಥಾಪಿಸಿದ ಕಮಿಟಿಯ ಅಧ್ಯಕ್ಷರೂ ಆಗಿದ್ದ ಆ್ಯಲ್ಬರ್ಟ್ ಶ್ರೋಡರ್ ಅವರ ಮಾತುಗಳನ್ನು ಉದ್ಧರಿಸಿದರು: “ಪೂರ್ವಾಪರವನ್ನು ಉಪಯೋಗಿಸುವ ಮೂಲಕ, ದೇವರು ತನ್ನ ವಾಕ್ಯದ ಮೂಲಕ ಲಭ್ಯಗೊಳಿಸಿರುವ ಆತ್ಮಿಕ ಬಲವನ್ನು ಒಬ್ಬನು ಸಂಪೂರ್ಣವಾಗಿಯೂ ನಿಷ್ಕೃಷ್ಟವಾಗಿಯೂ ಪಡೆದುಕೊಳ್ಳಸಾಧ್ಯವಿದೆ.” ಈ ರೀತಿಯ ಬೈಬಲ್ ಅಧ್ಯಯನವು ದೇವರ ವಾಕ್ಯವನ್ನು ಸಜೀವವಾಗಿಟ್ಟು, ಕಾರ್ಯನಡೆಸುವಂತಹದ್ದಾಗಿ ಮಾಡುತ್ತದೆ.
ಉಲ್ಲಾಸಭರಿತ ಅನುಭವಗಳು ಮತ್ತು ಇಂಟರ್ವ್ಯೂಗಳು
ಭಾಷಣಗಳ ತರುವಾಯ, ವಿದ್ಯಾರ್ಥಿಗಳ ಕೆಲವು ಉಲ್ಲಾಸಭರಿತ ಅನುಭವಗಳನ್ನು ಸಭಿಕರು ಆಲಿಸಿದರು. ಮಾಜಿ ಮಿಷನೆರಿ ಮತ್ತು ಈಗ ಗಿಲ್ಯಡ್ ಉಪದೇಶಕರಾಗಿರುವ ಮಾರ್ಕ್ ನೂಮರ್ ಅವರ ನಿರ್ದೇಶನದ ಕೆಳಗೆ, ವಿದ್ಯಾರ್ಥಿಗಳು ವಿಭಿನ್ನ ಸನ್ನಿವೇಶಗಳಲ್ಲಿ ಸಾಕ್ಷಿಯನ್ನೀಡಲು ಹೇಗೆ ಪ್ರಯತ್ನಿಸಿದರೆಂಬುದನ್ನು ಅವರ ಒಂದು ಗುಂಪು ಅನುಭವವನ್ನು ಹೇಳಿತಲ್ಲದೆ ಅದನ್ನು ಪ್ರತ್ಯಕ್ಷಾಭಿನಯಿಸಿತು. ಆ ಕ್ಷೇತ್ರದಲ್ಲಿರುವ ಜನರ ಪರಿಸ್ಥಿತಿಗಳು ಹಾಗೂ ಪ್ರತಿಕ್ರಿಯೆಗಳನ್ನು ಗಮನಿಸಿ, ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮೂಲಕ, ಕೆಲವರು ಬೈಬಲ್ ಅಧ್ಯಯನಗಳನ್ನು ಆರಂಭಿಸಿ, ಮುಂದುವರಿಸಲು ಶಕ್ತರಾಗಿದ್ದರು. ಹೀಗೆ, ವಿದ್ಯಾರ್ಥಿಗಳು ‘ತಮ್ಮ ವಿಷಯದಲ್ಲೂ ತಮ್ಮ ಬೋಧನೆಯ ವಿಷಯದಲ್ಲೂ ಸತತವಾದ ಗಮನವನ್ನು ಸಲ್ಲಿಸುತ್ತಿದ್ದರು’ ಮತ್ತು ಇತರರು ರಕ್ಷಣೆಯನ್ನು ಪಡೆಯಬೇಕೆಂಬ ವಿಷಯದಲ್ಲಿ ನಿಜವಾಗಿಯೂ ಆಸಕ್ತರಾಗಿದ್ದರು.—1 ತಿಮೊಥೆಯ 4:16.
ಅನೇಕ ಪ್ರಾಯೋಗಿಕ ಸಲಹೆಗಳು ನೀಡಲ್ಪಟ್ಟವು, ಮತ್ತು ವಾಚ್ಟವರ್ ಎಡ್ಯುಕೇಷನಲ್ ಸೆಂಟರ್ನಲ್ಲಿ ಬ್ರಾಂಚ್ ಕಮಿಟಿ ಸದಸ್ಯರಿಗಾಗಿ ನಡೆಸಲ್ಪಡುತ್ತಿರುವ ಶಾಲೆಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದ ಹಲವಾರು ಅನುಭವಸ್ಥ ಸಹೋದರರಿಂದಲೂ ಮಿಷನೆರಿ ಸೇವೆಯ ಆನಂದವು ವ್ಯಕ್ತಪಡಿಸಲ್ಪಟ್ಟಿತು. ಮುಖ್ಯಕಾರ್ಯಾಲಯದ ಸಿಬ್ಬಂದಿ ವರ್ಗದವರಾದ ಸಹೋದರ ಸ್ಯಾಮುವೆಲ್ ಹರ್ಡ್ ಮತ್ತು ರಾಬರ್ಟ್ ಜಾನ್ಸನ್, ಬೊಲಿವಿಯ, ಸಿಂಬಾಬ್ವೆ, ನಿಕರಾಗುವ, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್, ಡೊಮಿನಿಕನ್ ರಿಪಬ್ಲಿಕ್, ಪ್ಯಾಪುವ ನ್ಯೂ ಗಿನೀ, ಮತ್ತು ಕ್ಯಾಮರೂನ್ನಲ್ಲಿರುವ ಸೊಸೈಟಿಯ ಬ್ರಾಂಚ್ ಆಫೀಸುಗಳಿಂದ ಬಂದಿದ್ದ ಪ್ರತಿನಿಧಿಗಳ ಸ್ವಾರಸ್ಯಕರವಾದ ಇಂಟರ್ವ್ಯೂಗಳನ್ನು ಮಾಡಿದರು.
ಅನುಭವಗಳು ಮತ್ತು ಇಂಟರ್ವ್ಯೂಗಳ ನಂತರ, ಗಿಲ್ಯಡ್ನ 41ನೆಯ ತರಗತಿಯ ಪದವೀಧರರೂ, ಈಗ ಆಡಳಿತ ಮಂಡಲಿಯ ಸದಸ್ಯರೂ ಆಗಿರುವ ಗೆರಿಟ್ ಲಾಷ್, “ನೀವು ಒಬ್ಬ ‘ಅಪೇಕ್ಷಣೀಯ ವ್ಯಕ್ತಿ’ ಆಗಿದ್ದೀರೊ?” ಎಂಬ ವಿಚಾರಪ್ರೇರಕ ಶೀರ್ಷಿಕೆಯುಳ್ಳ ಅಂತಿಮ ಭಾಷಣವನ್ನು ನೀಡಿದರು. ದೇವರ ಪರಿಪೂರ್ಣ ಮಗನಾದ ಯೇಸು, ಜನರ ದೃಷ್ಟಿಯಲ್ಲಿ ಅಪೇಕ್ಷಣೀಯ ವ್ಯಕ್ತಿಯಾಗಿರಲಿಲ್ಲ, ಬದಲಿಗೆ “ಅವನು ಧಿಕ್ಕರಿಸಲ್ಪಟ್ಟವನು, ಮನುಷ್ಯರು ಸೇರಿಸಿಕೊಳ್ಳದವನು” ಆಗಿದ್ದನೆಂದು ಸಹೋದರ ಲಾಷ್ ಪದವೀಧರರಿಗೆ ಜ್ಞಾಪಕ ಹುಟ್ಟಿಸಿದರು. (ಯೆಶಾಯ 53:3) ಆದುದರಿಂದ, ಇಂದು ಲೋಕದ ಅನೇಕ ಭಾಗಗಳಲ್ಲಿ, ಮಿಷನೆರಿಗಳನ್ನು ವೈಯಕ್ತಿಕವಾಗಿ ಸ್ವೀಕರಿಸಲಾಗುವುದಿಲ್ಲ ಇಲ್ಲವೆ ಸ್ವಾಗತಿಸಲಾಗುವುದಿಲ್ಲ. ಮತ್ತೊಂದು ಕಡೆಯಲ್ಲಿ, ದಾನಿಯೇಲನು ಬಾಬೆಲಿನಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದಾಗ, ಒಬ್ಬ ದೇವದೂತನ ಮೂಲಕ ಸೃಷ್ಟಿಕರ್ತನಿಂದ “ಅತಿಪ್ರಿಯ”ನೆಂದು ಮೂರು ಬಾರಿ ಕರೆಯಲ್ಪಟ್ಟನು. (ದಾನಿಯೇಲ 9:23; 10:11, 19) ದಾನಿಯೇಲನು ಏಕೆ ಹಾಗೆ ಕರೆಯಲ್ಪಟ್ಟನು? ಬಾಬೆಲಿನ ಸಂಸ್ಕೃತಿಗೆ ಹೊಂದಿಕೊಳ್ಳುತ್ತಿರುವಾಗ ಅವನೆಂದೂ ಬೈಬಲ್ ತತ್ವಗಳ ವಿಷಯಗಳಲ್ಲಿ ರಾಜಿಮಾಡಿಕೊಳ್ಳಲಿಲ್ಲ; ತನ್ನ ಸ್ಥಾನವನ್ನು ವೈಯಕ್ತಿಕ ಲಾಭಕ್ಕಾಗಿ ಎಂದೂ ಉಪಯೋಗಿಸಿಕೊಳ್ಳದೆ ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕನಾಗಿದ್ದನು; ಮತ್ತು ಅವನು ದೇವರ ವಾಕ್ಯದ ಹುರುಪುಳ್ಳ ವಿದ್ಯಾರ್ಥಿಯಾಗಿದ್ದನು. (ದಾನಿಯೇಲ 1:8, 9; 6:4; 9:2) ಅವನು ಕ್ರಮವಾಗಿ ಯೆಹೋವನಿಗೆ ಪ್ರಾರ್ಥಿಸಿದನು ಮತ್ತು ತನ್ನ ಸಾಧನೆಗಳಿಗಾಗಿ ದೇವರಿಗೆ ಮಹಿಮೆಯನ್ನು ಸಲ್ಲಿಸಲು ಸದಾ ಸಿದ್ಧನಾಗಿದ್ದನು. (ದಾನಿಯೇಲ 2:20) ದಾನಿಯೇಲನ ಮಾದರಿಯನ್ನು ಅನುಸರಿಸುವ ಮೂಲಕ, ದೇವರ ಸೇವಕರು ಲೋಕಕ್ಕಲ್ಲ, ಯೆಹೋವ ದೇವರಿಗೆ ಅಪೇಕ್ಷಣೀಯರಾಗಿ ಪರಿಣಮಿಸಬಲ್ಲರು.
ಆತ್ಮಿಕವಾಗಿ ಬಲಪಡಿಸುವ ಈ ಕಾರ್ಯಕ್ರಮವನ್ನು ಮುಕ್ತಾಯಗೊಳಿಸುತ್ತಾ, ಲೋಕದ ಎಲ್ಲೆಡೆಯಿಂದಲೂ ಬಂದ ಕೆಲವು ಟೆಲಿಗ್ರಾಮ್ಗಳನ್ನು ಮತ್ತು ಸಂದೇಶಗಳನ್ನು ಅಧ್ಯಕ್ಷರು ಓದಿದರು. ತರುವಾಯ, 24 ದಂಪತಿಗಳಲ್ಲಿ ಪ್ರತಿಯೊಬ್ಬರೂ ಪ್ರಶಸ್ತಿಪತ್ರಗಳನ್ನು ಪಡೆದುಕೊಂಡರು. ಅದರೊಂದಿಗೆ ಅವರಿಗೆ ನೇಮಿಸಲಾಗಿರುವ ದೇಶವನ್ನೂ ಪ್ರಕಟಿಸಲಾಯಿತು. ಕೊನೆಯದಾಗಿ, ತರಗತಿಯ ಒಬ್ಬ ಪ್ರತಿನಿಧಿಯು, ಕಳೆದ ಐದು ತಿಂಗಳುಗಳ ಕಾಲ ಅವರು ಪಡೆದುಕೊಂಡಿದ್ದ ತರಬೇತಿ ಹಾಗೂ ತಯಾರಿಗಾಗಿ ಗಣ್ಯತೆಯನ್ನು ವ್ಯಕ್ತಪಡಿಸುತ್ತಾ, ಆಡಳಿತ ಮಂಡಲಿ ಹಾಗೂ ಬೆತೆಲ್ ಕುಟುಂಬಕ್ಕೆ ಒಂದು ಪತ್ರವನ್ನು ಓದಿದನು.
ಕಾರ್ಯಕ್ರಮವು ಮುಕ್ತಾಯವಾದಂತೆ, ನಿರ್ಗಮಿಸುತ್ತಿದ್ದ ಸಮೂಹದೊಳಗೆ ‘ಉಪಕಾರಸ್ತುತಿಗಳೊಂದಿಗೆ ಹರ್ಷಿಸುವ’ ಧ್ವನಿಯು ಕೇಳಿಬಂತು.—ನೆಹೆಮೀಯ 12:27.
[ಪುಟ 27 ರಲ್ಲಿರುವ ಚಿತ್ರ]
ತರಗತಿಯ ಸಂಖ್ಯಾಸಂಗ್ರಹಣಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 10
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 19
ವಿದ್ಯಾರ್ಥಿಗಳ ಸಂಖ್ಯೆ: 48
ವಿವಾಹಿತ ದಂಪತಿಗಳ ಸಂಖ್ಯೆ: 24
ಸರಾಸರಿ ಪ್ರಾಯ: 33
ಸತ್ಯದಲ್ಲಿ ಸರಾಸರಿ ವರ್ಷಗಳು: 16
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13
[ಪುಟ 25 ರಲ್ಲಿರುವ ಚಿತ್ರ]
ವಾಚ್ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ನಿಂದ ಪದವಿಪ್ರಾಪ್ತಿ ಪಡೆದ 106ನೆಯ ತರಗತಿ
ಕೆಳಗಿನ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು ಪ್ರತಿ ಸಾಲಿನಲ್ಲಿ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಡೀಕನ್, ಡಿ.; ಪೂಆಪೋಲೊ, ಎಮ್.; ಲಗೂನ, ಎಮ್.; ಡವೋಲ್ಟ್, ಎಸ್.; ಡೋಮಿಂಗೆಸ್, ಈ.; ಬರ್ಕ್, ಜೆ. (2) ಗೌಟ, ಎಸ್.; ವಾಸ್ಕೆಸ್, ಡಬ್ಲ್ಯೂ.; ಸೀಬ್ರೂಕ್, ಎ.; ಮಾಸ್ಕಾ, ಎ.; ಹೆಲೀ, ಎಲ್.; ಬ್ರೂಅರ್ಡ್, ಎಲ್. (3) ಬ್ರ್ಯಾನ್ಡನ್, ಟಿ.; ಓಲಿವಾರಸ್, ಎನ್.; ಕೋಲ್ಮನ್, ಡಿ.; ಸ್ಕಾಟ್, ವಿ.; ಪೀಟರ್ಸನ್, ಎಲ್.; ಮಕ್ಲಾವ್ಡ್, ಕೆ. (4) ಮಕ್ಲಾವ್ಡ್, ಜೆ.; ಥಾಮ್ಸನ್, ಜೆ.; ಲೂಬರಿಸ್, ಎಫ್.; ಸ್ಪೇಟ, ಬಿ.; ಲೇಟಮಾಕೀ, ಎಮ್.; ಲಗೂನ, ಜೆ. (5) ಗೌಟ, ಯು.; ಡೋಮಿಂಗೆಸ್, ಆರ್.; ಹೆಲೀ, ಎಫ್.; ಸ್ಮಿತ್, ಎಮ್.; ಬೈಯರ್, ಡಿ.; ಮಾಸ್ಕಾ, ಎ. (6) ಸ್ಕಾಟ್, ಕೆ.; ಸೀಬ್ರೂಕ್, ವಿ.; ಸ್ಪೇಟ, ಆರ್.; ಕೋಲ್ಮನ್, ಆರ್.; ಬ್ರೂಅರ್ಡ್, ಎಲ್.; ಡವೋಲ್ಟ್, ಡಬ್ಲ್ಯೂ. (7) ಸ್ಮಿತ್, ಡಿ.; ಲೇಟಮಾಕೀ, ಟಿ.; ಪೀಟರ್ಸನ್, ಪಿ.; ಥಾಮ್ಸನ್, ಜಿ.; ವಾಸ್ಕೆಸ್, ಆರ್.; ಬೈಯರ್, ಎ. (8) ಲೂಬರಿಸ್, ಎಮ್.; ಡೀಕನ್, ಸಿ.; ಬ್ರ್ಯಾನ್ಡನ್, ಡಿ.; ಪೂಆಪೋಲೊ, ಡಿ.; ಓಲಿವಾರಸ್, ಓ.; ಬರ್ಕ್, ಎಸ್.