ಅವರು ಯೆಹೋವನ ಚಿತ್ತವನ್ನು ಮಾಡಿದರು
ಹೇರಳವಾಗಿ ಬಹುಮಾನಿಸಲ್ಪಟ್ಟ ಒಂದು ಭೇಟಿ
ಯೆರೂಸಲೇಮಿನಿಂದ ಶೆಬಕ್ಕೆ ಪ್ರಯಾಣಮಾಡಿದ್ದು ರಾಣಿಗೆ ಬಹಳ ಬಳಲಿಕೆಯಾಗಿದ್ದಿರಲೇಬೇಕು. ಅವಳು ಸುಖಭೋಗದ ಜೀವನಕ್ಕೆ ಒಗ್ಗಿಹೋಗಿದ್ದಳು. ಈಗಲಾದರೋ, ಅವಳು 2,400 ಕಿಲೊಮೀಟರುಗಳ ಪ್ರಯಾಣವೊಂದನ್ನು ಸುಡುವ ಮರಳುಗಾಡಿನಲ್ಲಿ ಒಂಟೆಯ ನಿಧಾನನಡಿಗೆಯಲ್ಲಿ ಪ್ರಯಾಣಿಸುತ್ತಿದ್ದಳು. ಒಂದು ಅಂದಾಜಿಗನುಸಾರ, ಅವಳು ಈ ಪ್ರಯಾಣವನ್ನು ಮುಗಿಸಲು ಒಟ್ಟಿಗೆ ಸುಮಾರು 75 ದಿನಗಳನ್ನು ತೆಗೆದುಕೊಂಡಿದ್ದಿರಬಹುದು ಮತ್ತು ಇದು ಕೇವಲ ಏಕಮುಖ ಪ್ರಯಾಣವಾಗಿತ್ತು!a
ಈ ಧನಿಕ ರಾಣಿಯು ಶೆಬದಲ್ಲಿರುವ ತನ್ನ ಐಷಾರಾಮದ ಅರಮನೆಯನ್ನು ಬಿಟ್ಟು ಇಂತಹ ಪ್ರಯಾಸಕರ ಪ್ರಯಾಣವನ್ನು ಏಕೆ ಕೈಕೊಂಡಳು?
ಆಸಕ್ತಿಯನ್ನು ಹುಟ್ಟಿಸುವ ವರದಿ
“ಯೆಹೋವನಾಮಮಹತ್ತಿನಿಂದ ಸೊಲೊಮೋನನಿಗುಂಟಾದ ಕೀರ್ತಿಯನ್ನು ಕುರಿತು” ಶೆಬದ ರಾಣಿಯು ಕೇಳಿಸಿಕೊಂಡ ನಂತರ ಯೆರೂಸಲೇಮಿಗೆ ಬಂದಳು. (1 ಅರಸು 10:1) ರಾಣಿಯು ನಿಖರವಾಗಿ ಏನನ್ನು ಕೇಳಿಸಿಕೊಂಡಿದ್ದಳೆಂಬುದು ನಮಗೆ ತಿಳಿಸಲ್ಪಟ್ಟಿಲ್ಲ. ಹೀಗಿದ್ದರೂ, ಯೆಹೋವನು ಸೊಲೊಮೋನನನ್ನು ಅಸಾಧಾರಣವಾದ ವಿವೇಕ, ಐಶ್ವರ್ಯ ಮತ್ತು ಘನತೆಯೊಂದಿಗೆ ಆಶೀರ್ವದಿಸಿದ್ದನು. (2 ಪೂರ್ವಕಾಲವೃತ್ತಾಂತ 1:11, 12) ಈ ವಿಷಯ ರಾಣಿಗೆ ಹೇಗೆ ಗೊತ್ತಾಯಿತು? ಶೆಬವು ಉದ್ದಿಮೆಯ ಕೇಂದ್ರವಾಗಿದ್ದರಿಂದ, ತನ್ನ ದೇಶವನ್ನು ಭೇಟಿಮಾಡಿದ ಉದ್ದಿಮೆಗಾರರ ಮೂಲಕ ಅವಳು ಸೊಲೊಮೋನನ ಖ್ಯಾತಿಯ ಕುರಿತು ಕೇಳಿಸಿಕೊಂಡಿದ್ದಿರಬೇಕು. ಇವರಲ್ಲಿ ಕೆಲವರು ಸೊಲೊಮೋನನೊಂದಿಗೆ ಗಣನೀಯವಾದ ವ್ಯಾಪಾರ-ವ್ಯವಹಾರವನ್ನಿಟ್ಟುಕೊಂಡಿದ್ದ ಓಫೀರ್ ದೇಶಕ್ಕೆ ಹೋಗಿ ಬಂದವರಾಗಿದ್ದಿರಬಹುದು.—1 ಅರಸು 9:26-28.
ಏನೇ ಆಗಲಿ, ರಾಣಿಯು “ಸುಗಂಧದ್ರವ್ಯ, ಅಪರಿಮಿತವಾದ ಬಂಗಾರ, ರತ್ನ ಇವುಗಳನ್ನು ಒಂಟೆಗಳ ಮೇಲೆ ಹೇರಿಸಿಕೊಂಡು ಮಹಾಪರಿವಾರದೊಡನೆ” ಯೆರೂಸಲೇಮಿಗೆ ಬಂದಳು. (1 ಅರಸು 10:2ಎ) “ಮಹಾಪರಿವಾರ”ದಲ್ಲಿ ಸಶಸ್ತ್ರ ರಕ್ಷಕ ಪಡೆಯು ಸೇರಿತ್ತೆಂದು ಕೆಲವರು ಹೇಳುತ್ತಾರೆ. ರಾಣಿಯು ಪ್ರಬಲ ಗೌರವಾನಿತ್ವಳಾಗಿದ್ದಳೆನ್ನುವುದನ್ನು ಪರಿಗಣಿಸುವಾಗ ಮತ್ತು ಕೋಟಿಗಟ್ಟಲೆ ರೂಪಾಯಿಗಳಷ್ಟು ಅಮೂಲ್ಯ ಸಂಪತ್ತಿನೊಂದಿಗೆ ಪ್ರಯಾಣಿಸುತ್ತಿದ್ದಳೆಂಬುದನ್ನು ಗಮನಿಸುವಾಗ ಇದನ್ನು ನಾವು ಅರ್ಥಮಾಡಿಕೊಳ್ಳಬಹುದು.b
ಆದಾಗ್ಯೂ, ರಾಣಿಯು ‘ಯೆಹೋವನಾಮಮಹತ್ತಿನ ಕುರಿತು’ ಸೊಲೊಮೋನನ ಕೀರ್ತಿಯನ್ನು ಕೇಳಿದ್ದಳೆಂಬುದನ್ನು ನಾವಿಲ್ಲಿ ಗಮನಿಸುತ್ತೇವೆ. ಹೀಗಾಗಿ, ಇದು ಕೇವಲ ಒಂದು ವ್ಯಾವಹಾರಿಕ ಸಂಚಾರವಾಗಿರಲಿಲ್ಲ. ಲಭ್ಯವಿರುವ ಸಾಕ್ಷ್ಯಗಳ ಆಧಾರದಲ್ಲಿ, ರಾಣಿಯ ಪ್ರಯಾಣದ ಮುಖ್ಯ ಕಾರಣವು ಸೊಲೊಮೋನನಿಂದ ವಿವೇಕವನ್ನು ಕೇಳಲು, ಪ್ರಾಯಶಃ ಅವನ ದೇವರಾದ ಯೆಹೋವನ ಕುರಿತು ಕಲಿಯುವ ಸಲುವಾಗಿ ಬಂದಿದ್ದಳು. ಅವಳು ಯೆಹೋವನ ಆರಾಧಕರಾಗಿದ್ದ ಶೇಮ್ ಅಥವಾ ಹಾಮ್ರಿಂದ ಬಂದವಳಾಗಿದ್ದಿರಬಹುದಾದ ಕಾರಣ, ತನ್ನ ಪೂರ್ವಿಕರ ಧರ್ಮದ ಕುರಿತು ತಿಳಿಯಲು ಕುತೂಹಲಿಯಾಗಿದ್ದಿರಬಹುದು.
ಕಂಗೆಡಿಸುವ ಪ್ರಶ್ನೆಗಳು, ತೃಪ್ತಿದಾಯಕ ಉತ್ತರಗಳು
ಸೊಲೊಮೋನನನ್ನು ಭೇಟಿಯಾಗಿ, ರಾಣಿಯು ಅವನನ್ನು “ಕಂಗೆಡಿಸುವ ಪ್ರಶ್ನೆಗಳೊಂದಿಗೆ” (NW) ಪರೀಕ್ಷಿಸುವುದಕ್ಕೆ ಪ್ರಾರಂಭಿಸಿದಳು. (1 ಅರಸು 10:1) ಇಲ್ಲಿ ಉಪಯೋಗಿಸಲಾದ ಹೀಬ್ರು ಪದವನ್ನು “ಒಗಟು”ಗಳೆಂದು ಭಾಷಾಂತರಿಸಸಾಧ್ಯವಿದೆ. ಆದರೆ, ಇದರ ಅರ್ಥವು ರಾಣಿಯು ಸೊಲೊಮೋನನನ್ನು ಕ್ಷುಲ್ಲಕ ವಿನೋದದಲ್ಲಿ ಒಳಗೂಡಿಸಿದ್ದಳೆಂಬುದಾಗಿರಲಿಲ್ಲ. ಆಸಕ್ತಿಕರವಾಗಿ, ಕೀರ್ತನೆ 49:4ರಲ್ಲಿ, ಪಾಪ, ಮರಣ ಮತ್ತು ವಿಮೋಚನೆಯ ಕುರಿತಾಗಿರುವ ಗಂಭೀರ ಪ್ರಶ್ನೆಗಳನ್ನು ವಿವರಿಸುವಾಗ, ಇದೇ ಹೀಬ್ರು ಪದವನ್ನು ಉಪಯೋಗಿಸಲಾಗಿದೆ. ಹಾಗಾದರೆ, ಸಂಭವನೀಯವಾಗಿ ಶೆಬದ ರಾಣಿಯು ಸೊಲೊಮೋನನ ವಿವೇಕದ ಆಳವನ್ನು ಪರೀಕ್ಷಿಸಲು ಅಗಾಧ ವಿಷಯಗಳನ್ನು ಅವನೊಂದಿಗೆ ಚರ್ಚಿಸುತ್ತಿದ್ದಳು. ಅವಳು “ತನ್ನ ಮನಸ್ಸಿನಲ್ಲಿ ಗೊತ್ತುಮಾಡಿಕೊಂಡಿದ್ದ ಎಲ್ಲಾ ವಿಷಯಗಳನ್ನು ಕುರಿತು ಸಂಭಾಷಿಸಲು” ಆರಂಭಿಸಿದಳೆಂದು ಬೈಬಲು ತಿಳಿಸುತ್ತದೆ. ಸೊಲೊಮೋನನು, ಪ್ರತಿಯಾಗಿ “ಆಕೆಯ ಎಲ್ಲಾ ಪ್ರಶ್ನೆಗಳಿಗೆ ಉತ್ತರಕೊಟ್ಟನು; ಅರಸನಾದ ಅವನಿಗೆ ತಿಳಿಯದಂಥದು ಅವುಗಳಲ್ಲಿ ಒಂದೂ ಇರಲಿಲ್ಲವಾದದರಿಂದ ಎಲ್ಲವುಗಳಿಗೂ ಉತ್ತರಕೊಟ್ಟನು.”—1 ಅರಸು 10:2ಬಿ, 3.
ಶೆಬದ ರಾಣಿಯು ಸೊಲೊಮೋನನ ವಿವೇಕ ಮತ್ತು ಅವನ ರಾಜ್ಯದ ಅಭಿವೃದ್ಧಿಯಿಂದ ಎಷ್ಟೊಂದು ಪ್ರಭಾವಿತಳಾದಳೆಂದರೆ, ಅವಳು “ವಿಸ್ಮಿತಳಾಗಿ” ನಿಂತಳು. (1 ಅರಸು 10:4, 5) ಈ ವಾಕ್ಸರಣಿಯು, ರಾಣಿಯು ‘ಉಸಿರು ಕಟ್ಟಲ್ಪಟ್ಟ’ವಳಂತಾದಳು ಎಂಬುದನ್ನು ಹೇಳುತ್ತದೆಂದು ಕೆಲವರು ಅರ್ಥಮಾಡಿಕೊಳ್ಳುತ್ತಾರೆ. ಅವಳು ಮೂರ್ಛೆ ತಪ್ಪಿದಳೆಂದು ಸಹ ಒಬ್ಬ ವಿದ್ವಾಂಸನು ಸೂಚಿಸುತ್ತಾನೆ! ಅದು ಏನೇ ಆಗಿರಲಿ, ರಾಣಿಯು ನೋಡಿದ ಮತ್ತು ಕೇಳಿದ ವಿಷಯಗಳಿಂದ ಬೆರಗಾದಳು. ಈ ಅರಸನ ಜ್ಞಾನದ ವಾಕ್ಯಗಳನ್ನು ಕೇಳಲು ಶಕ್ತರಾಗಿರುವುದಕ್ಕೆ ಸೊಲೊಮೋನನ ಸೇವಕರನ್ನು ಧನ್ಯರೆಂದು ಅವಳು ಉಚ್ಚರಿಸಿದಳು ಮತ್ತು ಸೊಲೊಮೋನನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ್ದಕ್ಕಾಗಿ ಯೆಹೋವನನ್ನು ಆಕೆಯು ಸ್ತುತಿಸಿದಳು. ಅನಂತರ ಅವಳು ಅರಸನಿಗೆ ಬಹುಬೆಲೆಯುಳ್ಳ ಕೊಡುಗೆಗಳನ್ನು ನೀಡಿದಳು; ನೀಡಿದವುಗಳಲ್ಲಿ ಕೇವಲ ಬಂಗಾರವೇ ಆಧುನಿಕ ಕ್ರಯಕ್ಕನುಸಾರ ಸುಮಾರು 4,00,00,000 ಡಾಲರುಗಳಿಷ್ಟಿತ್ತು. ಸೊಲೊಮೋನನು ಕೂಡ ಕೊಡುಗೆಗಳನ್ನು ನೀಡಿದನು, ರಾಣಿಯು “ಕೇಳಿದವುಗಳನ್ನೆಲ್ಲಾ ಕೊಟ್ಟು ಬಿಟ್ಟನು.”c—1 ಅರಸು 10:6-13.
ನಮಗಿರುವ ಪಾಠವು
ಯೇಸು ಶಾಸ್ತ್ರಿಗಳಿಗೆ ಮತ್ತು ಫರಿಸಾಯರಿಗೆ ಪ್ರಾಯೋಗಿಕ ನಮೂನೆಯನ್ನು ನೀಡುವ ವಸ್ತು ಪಾಠವನ್ನು ಕಲಿಸಲು ಶೆಬದ ರಾಣಿಯನ್ನು ಉಪಯೋಗಿಸಿದನು. ಅವನು ಅವರಿಗೆ ಹೇಳಿದ್ದು: “ದಕ್ಷಿಣದೇಶದ ರಾಣಿಯು ನ್ಯಾಯವಿಚಾರಣೆಯಲ್ಲಿ ಈ ಸಂತತಿಯವರೊಂದಿಗೆ ಎದ್ದುನಿಂತು ಇವರನ್ನು ಅಪರಾಧಿಗಳೆಂದು ಹೇಳುವಳು; ಆಕೆಯು ಸೊಲೊಮೋನನ ಜ್ಞಾನವನ್ನು ತಿಳುಕೊಳ್ಳುವದಕ್ಕೆ ಭೂಮಿಯ ಕಟ್ಟಕಡೆಯಿಂದ ಬಂದಳು; ಆದರೆ ಇಲ್ಲಿ ಸೊಲೊಮೋನನಿಗಿಂತಲೂ ಹೆಚ್ಚಿನವನಿದ್ದಾನೆ.” (ಮತ್ತಾಯ 12:42) ಹೌದು, ಶೆಬದ ರಾಣಿಯು ದೇವದತ್ತ ವಿವೇಕಕ್ಕಾಗಿ ವಿಶೇಷ ಗಣ್ಯತೆಯನ್ನು ತೋರಿಸಿದಳು. ಅವಳು ಸೊಲೊಮೋನನ ವಿವೇಕವನ್ನು ಕೇಳಿಸಿಕೊಳ್ಳಲು 2,400 ಕಿಲೊಮೀಟರಿನಷ್ಟು ಪ್ರಯಾಣಿಸಿದರೆ, ನಿಶ್ಚಯವಾಗಿಯೂ ಶಾಸ್ತ್ರಿಗಳು ಮತ್ತು ಫರಿಸಾಯರು ತಮ್ಮ ಕಣ್ಣ ಮುಂದೆಯೇ ಇದ್ದ ಯೇಸುವಿಗೆ ಹೆಚ್ಚು ನಿಕಟವಾಗಿ ಕಿವಿಗೊಡಬೇಕಿತ್ತು.
ನಾವಿಂದು ಮಹಾ ಸೊಲೊಮೋನನಾದ ಯೇಸು ಕ್ರಿಸ್ತನಿಗಾಗಿ ಆಳವಾದ ಗಣ್ಯತೆಯನ್ನು ತೋರಿಸಸಾಧ್ಯವಿದೆ. ಹೇಗೆ? ಒಂದು ವಿಧಾನವು, “ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ” ಎನ್ನುವ ಆತನ ನಿರ್ದೇಶನವನ್ನು ಪಾಲಿಸುವ ಮೂಲಕವೇ. (ಮತ್ತಾಯ 28:19) ಮತ್ತೊಂದು ವಿಧಾನವು, ಯೇಸುವಿನ ಮಾದರಿ ಮತ್ತು ಅವನ ಮಾನಸಿಕ ಮನೋಭಾವವನ್ನು ನಿಕಟವಾಗಿ ಪರಿಗಣಿಸುವ ಮತ್ತು ಅನಂತರ ಅವುಗಳನ್ನು ಅನುಸರಿಸುವ ಮೂಲಕವೇ.—ಫಿಲಿಪ್ಪಿ 2:5; ಇಬ್ರಿಯ 12:2, 3.
ನಿಜ, ಮಹಾ ಸೊಲೊಮೋನನ ಮಾದರಿಯನ್ನು ಅನುಸರಿಸುವುದು ನಮ್ಮ ಕಡೆಯಿಂದ ಪ್ರಯತ್ನವನ್ನು ಕೇಳಿಕೊಳ್ಳುತ್ತದೆ. ಆದರೂ, ನಾವು ಹೇರಳವಾಗಿ ಬಹುಮಾನಿಸಲ್ಪಡುತ್ತೇವೆ. ವಾಸ್ತವದಲ್ಲಿ, ತನ್ನ ಜನರು ಆತ್ಮ-ತ್ಯಾಗದ ಮನೋಭಾವವನ್ನು ತೋರಿಸುವುದಾದರೆ, ಆಗ ಯೆಹೋವನು “ಪರಲೋಕದ ದ್ವಾರಗಳನ್ನು ತೆರೆದು ನಿಮ್ಮಲ್ಲಿ ಸ್ಥಳಹಿಡಿಯಲಾಗದಷ್ಟು ಸುವರವನ್ನು ಸುರಿಸುವನು” ಎಂಬ ಭರವಸೆಯನ್ನು ನೀಡುತ್ತಾನೆ.—ಮಲಾಕಿಯ 3:10.
[ಅಧ್ಯಯನ ಪ್ರಶ್ನೆಗಳು]
a ಶೆಬವು ಈಗ ರಿಪಬ್ಲಿಕ್ ಆಫ್ ಯೆಮೆನ್ ಎಂದು ಕರೆಯಲ್ಪಡುವ ನೈರುತ್ಯ ಅರೇಬಿಯಾದಲ್ಲಿ ನೆಲೆಗೊಂಡಿದೆಯೆಂದು ಅನೇಕ ವಿದ್ವಾಂಸರು ನಂಬುತ್ತಾರೆ.
b ಪುರಾತನ ಗ್ರೀಕ್ ಭೂಗೋಳಶಾಸ್ತ್ರಜ್ಞನಾದ ಸ್ಟ್ರೆಬೋವಿಗನುಸಾರ, ಶೆಬದ ಜನರು ಬಹಳ ಶ್ರೀಮಂತರಾಗಿದ್ದರು. ಇವರು ತಮ್ಮ ಪೀಠೋಪಕರಣದಲ್ಲಿ, ತಮ್ಮ ಪಾತ್ರೆಗಳಲ್ಲಿ ಮಾತ್ರವಲ್ಲ ಗೋಡೆಗಳ, ಬಾಗಿಲುಗಳ, ಮತ್ತು ತಮ್ಮ ಮನೆಯ ಛಾವಣಿಗಳ ಮೇಲೂ ಬಂಗಾರವನ್ನು ಧಾರಾಳವಾಗಿ ಉಪಯೋಗಿಸುತ್ತಿದ್ದರೆಂದು ಅವನು ಹೇಳುತ್ತಾನೆ.
c ಈ ವಾಕ್ಸರಣಿಯಿಂದ ಕೆಲವರು, ರಾಣಿಯು ಸೊಲೊಮೋನನೊಂದಿಗೆ ಲೈಂಗಿಕ ಸಂಬಂಧವನ್ನು ಇಟ್ಟುಕೊಂಡಿದ್ದಳೆಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ. ಇವರಿಗೆ ಮಕ್ಕಳಿದ್ದರೆಂಬುದನ್ನು ಸಹ ಕೆಲವು ಪುರಾಣಕಥೆಗಳು ತಿಳಿಸುತ್ತವೆ. ಹೀಗಿದ್ದರೂ, ಇದನ್ನು ಬೆಂಬಲಿಸಲು ಯಾವುದೇ ಸಾಕ್ಷ್ಯವಿಲ್ಲ.