ಸಮಾನಸ್ಥರ ಒತ್ತಡ—ಅದು ನಿಮಗೆ ಪ್ರಯೋಜನಕರವೋ?
ಮೂಲತಃ ನಾವೆಲ್ಲರೂ ನಮ್ಮ ಸಮಾನಸ್ಥರಿಂದ ಅಂಗೀಕರಿಸಲ್ಪಡುವ ಅಪೇಕ್ಷೆಯೊಂದಿಗೆ ಜನಿಸಿದ್ದೇವೆ. ನಮ್ಮಲ್ಲಿ ಯಾರೂ ಅಪ್ರಿಯರು, ನಿರಾಕರಿಸಲ್ಪಡುವವರು ಆಗಿರಲು ಬಯಸುವುದಿಲ್ಲ. ಹೀಗೆ, ವಿಭಿನ್ನ ಪ್ರಮಾಣಗಳಲ್ಲಿ ನಮ್ಮ ಸಮಾನಸ್ಥರು ನಮ್ಮನ್ನು ಪ್ರಭಾವಿಸುತ್ತಾರೆ.
ಸಮಾನಸ್ಥನನ್ನು, “ಇನ್ನೊಬ್ಬನ ಸಮಾನ ಸ್ಥಾನದಲ್ಲಿರುವವನು . . . ವಿಶೇಷವಾಗಿ ವಯಸ್ಸು, ದರ್ಜೆ ಅಥವಾ ಸ್ಥಾನಮಾನದ ಮೇಲೆ ಆಧಾರಿಸಿ ಒಂದೇ ಸಮಾಜದ ಪಂಗಡಕ್ಕೆ ಸೇರಿದವನು” ಎಂದು ಅರ್ಥನಿರೂಪಿಸಲಾಗಿದೆ. ಇದಕ್ಕೆ ಸರಿಯಾಗಿ ಸಮಾನಸ್ಥರ ಒತ್ತಡವು, ನಮ್ಮ ಮೇಲೆ ಸಮವಯಸ್ಕರಿಂದ ಪ್ರಯೋಗಿಸಲ್ಪಡುವ ಬಲವಾಗಿದೆ. ಹೀಗೆ, ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ನಾವು ಅವರ ಆಲೋಚನಾರೀತಿಯನ್ನು ಅಥವಾ ನಡೆದುಕೊಳ್ಳುವ ರೀತಿಯನ್ನು ಅನುಸರಿಸತೊಡಗುತ್ತೇವೆ. ಸಮಾನಸ್ಥರ ಒತ್ತಡವನ್ನು ಸಾಮಾನ್ಯವಾಗಿ ನಕಾರಾತ್ಮಕ ಬೆಳಕಿನಲ್ಲಿ ನೋಡಲಾಗುತ್ತದೆ. ಆದರೂ, ನಾವು ಈಗ ನೋಡಲಿರುವಂತೆ, ನಾವದನ್ನು ನಮ್ಮ ಪ್ರಯೋಜನಕ್ಕಾಗಿ ಉಪಯೋಗಿಸಿಕೊಳ್ಳಸಾಧ್ಯವಿದೆ.
ಎಲ್ಲ ವಯೋಮಿತಿಯವರ ಮೇಲೆ ಪ್ರಭಾವ
ಸಮಾನಸ್ಥರ ಒತ್ತಡವು ಯುವಜನರಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಇದು ಎಲ್ಲ ವಯೋಮಿತಿಯ ಜನರನ್ನು ಪ್ರಭಾವಿಸುತ್ತದೆ. ನಾವು ನಮ್ಮನ್ನು ಈ ರೀತಿಯ ಪ್ರಶ್ನೆಗಳನ್ನು ಕೇಳಿಕೊಳ್ಳಲು ತೊಡಗುವಾಗ ಇದರ ಪ್ರಭಾವವು ವ್ಯಕ್ತವಾಗತೊಡಗುತ್ತದೆ: “ಇತರರು ಅದನ್ನು ಮಾಡುವಾಗ, ನಾನದನ್ನು ಯಾಕೆ ಮಾಡಬಾರದು?” “ನಾನು ಯಾವಾಗಲೂ ಯಾಕೆ ಭಿನ್ನನಾಗಿರಬೇಕು?” “ಇತರರು ಏನನ್ನು ಆಲೋಚಿಸುತ್ತಾರೆ ಅಥವಾ ಆಡಿಕೊಳ್ಳುತ್ತಾರೆ?” “ನನ್ನ ಎಲ್ಲಾ ಸ್ನೇಹಿತರು ಡೇಟಿಂಗ್ (ವಿಹಾರನಿಶ್ಚಯ) ಮಾಡುತ್ತಾರೆ ಮತ್ತು ಮದುವೆಮಾಡಿಕೊಳ್ಳುತ್ತಾರೆ, ಆದರೆ ನಾನು ಹಾಗಲ್ಲ.” “ನನ್ನಲ್ಲಿ ಏನಾದರೂ ಕೊರತೆಯಿದೆಯೇ?”
ಸಮಾನಸ್ಥರನ್ನು ಅನುಸರಿಸುವ ಒತ್ತಡವು ಎಲ್ಲ ವಯೋಮಿತಿಯವರನ್ನು ಪ್ರಭಾವಿಸುತ್ತಿರುವಾಗ, ತರುಣಾವಸ್ಥೆಯಲ್ಲಿ ಇದು ಹೆಚ್ಚು ತೀವ್ರವಾಗಿರುವಂತೆ ತೋರುತ್ತದೆ. ದ ವರ್ಲ್ಡ್ ಬುಕ್ ಎನ್ಸೈಕ್ಲೊಪೀಡಿಯ ಹೇಳುವುದೇನಂದರೆ, “ಹೆಚ್ಚಿನ ಹದಿಹರೆಯದವರು ತಮ್ಮ ಸಮಾನಸ್ಥರ ಗುಂಪಿನೊಂದಿಗೆ ಅಂದರೆ, ತಮ್ಮ ಸ್ನೇಹಿತರ ಹಾಗೂ ಪರಿಚಯಸ್ಥರ ಬಳಗದೊಂದಿಗೆ ಹೆಚ್ಚು ಆಳವಾದ ಆಸಕ್ತಿಯನ್ನು ತೋರಿಸುತ್ತಾರೆ. ಈ ಹದಿಹರೆಯದವರು, ಮೆಚ್ಚಿಗೆಯನ್ನು ಪಡೆಯಲಿಕ್ಕಾಗಿ ಹೆತ್ತವರೆಡೆಗೆ ನೋಡುವ ಬದಲು ತಮ್ಮ ಸಮಾನಸ್ಥರ ಗುಂಪಿನೆಡೆಗೆ ನೋಡುತ್ತಾರೆ ಮತ್ತು ಇವರು ಆ ಮೆಚ್ಚಿಗೆಯನ್ನು ಗಳಿಸಲು ತಮ್ಮ ನಡವಳಿಕೆಯನ್ನು ಬದಲಾಯಿಸಬಹುದು.” ಅದು ಕೂಡಿಸುವುದು, ಹದಿಹರೆಯದವರು “ತಮ್ಮ ಸಹಪಾಠಿಗಳು ತಮ್ಮನ್ನು ಸ್ವೀಕರಿಸಿ, ಇಷ್ಟಪಡುವುದಾದರೆ ಆಗ ಅವರು ಇತರರಂತೆ ಸಾಮಾನ್ಯವಾಗಿ ಬೆಳೆಯುತ್ತಿದ್ದಾರೆಂದು ಊಹಿಸುತ್ತಾರೆ.” ಆ ಹಂತದ ವರೆಗೂ, ಅವರು “ತಮ್ಮ ಖ್ಯಾತಿಯನ್ನು ಪ್ರಭಾವಿಸುವುದೆಂದು ನೆನಸುವ ವಿಷಯಗಳಾದ ಉಡುಪಿನ ಶೈಲಿ, ನಾಯಕತ್ವದ ಸಾಮರ್ಥ್ಯ ಮತ್ತು ಡೇಟಿಂಗ್ನಲ್ಲಿ ಯಶಸ್ಸು, ಇವೇ ಮುಂತಾದ ವಿಷಯಗಳಲ್ಲಿ ತಲ್ಲೀನರಾಗುತ್ತಾರೆ.”
ವಿವಾಹಿತ ದಂಪತಿಗಳು ಎಂತಹ ಮನೆಯನ್ನು ಖರೀದಿಸಬೇಕು ಇಲ್ಲವೇ ಬಾಡಿಗೆಗೆ ತೆಗೆದುಕೊಳ್ಳಬೇಕು, ಯಾವ ರೀತಿಯ ಕಾರನ್ನು ಚಲಾಯಿಸಬೇಕು, ಮಕ್ಕಳು ಬೇಕೋ ಬೇಡವೋ ಮತ್ತಿತರ ಅನೇಕ ಸಂಗತಿಗಳ ಕುರಿತ ತಮ್ಮ ನಿರ್ಣಯವು ಸಮಾನಸ್ಥರ ಒತ್ತಡದಿಂದ ಅಂದರೆ ತಮ್ಮ ಸಮಾಜದಲ್ಲಿ, ತಮ್ಮ ಒಡನಾಡಿಗಳಲ್ಲಿ ಅಥವಾ ಕುಲದ ಗುಂಪಿನಲ್ಲಿ ಯಾವುದು ಸ್ವೀಕರಣೀಯವಾಗಿದೆ ಎಂಬ ಸಂಗತಿಗಳಿಂದ ಪ್ರಭಾವಿಸಲ್ಪಡುತ್ತದೆಂದು ಕಂಡುಕೊಳ್ಳಬಹುದು. ಕೆಲವು ಕುಟುಂಬಗಳು, ನೆರೆಹೊರೆಯವರ ಮತ್ತು ಸಮಾನಸ್ಥರೊಂದಿಗೆ ಭೌತಿಕವಾಗಿ ಸಮಾನರಾಗುವ ಪ್ರಯತ್ನದಲ್ಲಿ ಭಾರೀ ಸಾಲದ ಹೊರೆಯಲ್ಲಿ ಬೀಳುತ್ತವೆ. ಹೌದು, ನಮ್ಮ ಗುರಿಗಳು, ನಮ್ಮ ಆಲೋಚನೆಗಳು ಮತ್ತು ನಮ್ಮ ನಿರ್ಣಯಗಳು ಸಮಾನಸ್ಥರ ಒತ್ತಡವೆಂಬ ಕುತಂತ್ರವಾದ ಪ್ರಭಾವವನ್ನು ಹೊರಗೆಡಹುತ್ತದೆ. ಸಮಾನಸ್ಥರ ಒತ್ತಡಕ್ಕಿರುವ ಪ್ರಬಲತೆಯನ್ನು ನೋಡುವಾಗ, ನಾವು ಬಯಸುವ ಮಾರ್ಗದಲ್ಲಿ ನಡೆಯಲು ಪ್ರಯೋಜನಕರವಾದ ರೀತಿಯಲ್ಲಿ ಮಾತ್ರ ಸಹಾಯಮಾಡುವ ಪ್ರಭಾವವಾಗಿರುವಂತೆ ಅದರೊಂದಿಗೆ ವ್ಯವಹರಿಸಬಲ್ಲೆವೋ? ನಿಶ್ಚಯವಾಗಿಯೂ ನಾವು ವ್ಯವಹರಿಸಬಲ್ಲೆವು.
ಹಿತಕರವಾದ ಸಮಾನಸ್ಥರ ಒತ್ತಡದ ಸದುಪಯೋಗವನ್ನು ಮಾಡುವುದು
ಸಕಾರಾತ್ಮಕ ಜನರೊಂದಿಗೆ ಮತ್ತು ಇತರ ಆರೋಗ್ಯಕರವಾದ ಪ್ರಭಾವಗಳಿಂದ ತಮ್ಮ ರೋಗಿಗಳು ಸುತ್ತುವರಿಯಲ್ಪಡಬೇಕು ಎನ್ನುವ ಮೌಲ್ಯದ ಕುರಿತು ಡಾಕ್ಟರರಿಗೆ ಮತ್ತು ಇತರ ಆರೋಗ್ಯ ಪರಿಣತರಿಗೆ ಗೊತ್ತಿದೆ. ಇಂತಹ ಒಂದು ವಾತಾವರಣವು ಗುಣಮುಖವಾಗುವುದಕ್ಕೆ ಪ್ರೋತ್ಸಾಹಕವಾಗಿರುತ್ತದೆ. ಉದಾಹರಣೆಗೆ, ಅಂಗನಷ್ಟಪಟ್ಟಿರುವವರು ಅನೇಕವೇಳೆ ತಮ್ಮ ಶಾರೀರಿಕ ಮತ್ತು ಭಾವನಾತ್ಮಕ ಸ್ವಸ್ಥತೆಯನ್ನು ಪಡೆಯುತ್ತಿರುವ ದೀರ್ಘ ಪ್ರಕ್ರಿಯೆಯ ಸಮಯದಲ್ಲಿ ತದ್ರೀತಿಯ ಕಷ್ಟವನ್ನನುಭವಿಸಿದವರ ಉತ್ತಮ ಮಾದರಿ ಮತ್ತು ಉತ್ತೇಜನದ ಮೂಲಕ ಸಹಾಯಿಸಲ್ಪಡುತ್ತಾರೆ. ಸ್ಪಷ್ಟವಾಗಿ, ಆಶಾವಾದಿಗಳೂ ಸಕಾರಾತ್ಮಕ ಮನೋಭಾವವುಳ್ಳವರೂ ಆಗಿರುವ ಆದರ್ಶ ಮಾದರಿಗಳಿರುವ ಹಿತಕರವಾದ ಪರಿಸರದಲ್ಲಿ ಮಗ್ನರಾಗಿರುವುದು, ಸರಿಯಾದ ರೀತಿಯ ಸಮಾನಸ್ಥರ ಒತ್ತಡದಿಂದ ಪ್ರಯೋಜನಪಡೆಯುವ ಒಂದು ವಿಧವಾಗಿರುತ್ತದೆ.
ಈ ಮೂಲತತ್ವವು ಕ್ರೈಸ್ತ ಸಭೆಯ ಸಂಬಂಧದಲ್ಲೂ ಸತ್ಯವಾಗಿದೆ, ಯೆಹೋವನು ತನ್ನ ಜನರು ಕ್ರಮವಾಗಿ ಕೂಡಿಬರಬೇಕೆಂದು ಆದೇಶಿಸಿರುವುದಕ್ಕೆ ಒಂದು ಕಾರಣವು ಸಮಾನಸ್ಥರ ಒತ್ತಡದ ಸಕಾರಾತ್ಮಕ ಪ್ರಭಾವಕ್ಕಾಗಿರುತ್ತದೆ. “ನಾವು ಪರಸ್ಪರ ಹಿತಚಿಂತಕರಾಗಿದ್ದು ಪ್ರೀತಿಸುತ್ತಿರಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸ”ಬೇಕೆಂದು ದೇವರು ನಮ್ಮೆಲ್ಲರನ್ನು ಉತ್ತೇಜಿಸುತ್ತಾನೆ. (ಇಬ್ರಿಯ 10:24, 25) ಇಂದು ಲೋಕದಲ್ಲಿ ಅನೇಕ ನಿರುತ್ತೇಜನಕಾರಿ ಮತ್ತು ಆಘಾತಕಾರಿ ಒತ್ತಡಗಳು ಇರುವ ಕಾರಣದಿಂದಾಗಿ ಇಂತಹ ಉತ್ತೇಜನವು ಅಮೂಲ್ಯವಾಗಿದೆ. ಈ ಒತ್ತಡಗಳ ದೆಸೆಯಿಂದಾಗಿ, ಕ್ರೈಸ್ತರು ಆತ್ಮಿಕವಾಗಿ ಬಲವಾಗಿ ಉಳಿಯಲು ‘ಪರಿಶ್ರಮಪಟ್ಟು ಹೆಣಗಾಡಬೇಕು.’ (ಲೂಕ 13:24) ಹೀಗಾಗಿ, ನಮಗೆ ನಮ್ಮ ಜೊತೆ ವಿಶ್ವಾಸಿಗಳ ಪ್ರೀತಿಪೂರ್ವಕ ಬೆಂಬಲದ ಅಗತ್ಯವಿದೆ ಮತ್ತು ಇದನ್ನು ಗಣ್ಯಮಾಡಲಾಗುತ್ತದೆ. ಇದಕ್ಕೆ ಕೂಡಿಸಿ, ಕೆಲವರಿಗೆ ಪ್ರಾಯಶಃ ರೋಗಾವಸ್ಥೆ ಅಥವಾ ಅಂಗವಿಕಲತೆಯೇ ಮುಂತಾದ ‘ಶರೀರದಲ್ಲಿನ ಒಂದು ಶೂಲ’ವನ್ನು ತಾಳಿಕೊಳ್ಳಬೇಕಾಗಿರಬಹುದು. (2 ಕೊರಿಂಥ 12:7) ಇನ್ನಿತರರಿಗೆ ಕೆಟ್ಟ ಹವ್ಯಾಸಗಳನ್ನು ಅಥವಾ ಖಿನ್ನತೆಯನ್ನು ಜಯಿಸುವುದಕ್ಕೆ ತೀವ್ರ ಹೋರಾಟವನ್ನು ಮಾಡಬೇಕಾಗಬಹುದು. ಮಾತ್ರವಲ್ಲ, ಇವರಿಗೆ ಜೀವನದ ಬೇಡಿಕೆಗಳನ್ನು ಪೂರೈಸುವುದು ಕಷ್ಟಕರವಾಗಬಹುದು. ನಾವು ವಿವೇಕಿಗಳಾಗಿದ್ದೇವೆ, ಯಾಕೆಂದರೆ, ಯೆಹೋವನಿಗೆ ಸಮೀಪವಾಗಿರುವ ಮತ್ತು ಆತನನ್ನು ಸೇವಿಸುವುದರಲ್ಲಿ ಹರ್ಷಿಸುವ ಜನರಿಂದ ನಾವು ಸುತ್ತುವರಿಯಲ್ಪಟ್ಟಿದ್ದೇವೆ. ಇಂತಹ ಸಮಾನಸ್ಥರು ನಮ್ಮನ್ನು ಹುರಿದುಂಬಿಸುತ್ತಾರೆ ಮತ್ತು ‘ಕಡೇ ವರೆಗೂ ನಂಬಿಗಸ್ತಿಕೆಯಿಂದ ತಾಳಿಕೊಳ್ಳಲು’ ನಮಗೆ ಸಹಾಯಮಾಡುತ್ತಾರೆ.—ಮತ್ತಾಯ 24:13.
ಯೋಗ್ಯ ಸಮಾನಸ್ಥರನ್ನು ಆರಿಸುವ ಮೂಲಕ, ಅವರು ನಮ್ಮ ಮೇಲೆ ಬೀರುವ ಪ್ರಭಾವವನ್ನು ನಾವು ನಿಯಂತ್ರಿಸಬಲ್ಲೆವು. ಇನ್ನೂ ಹೆಚ್ಚಾಗಿ, ಕ್ರೈಸ್ತ ಕೂಟಗಳಲ್ಲಿ ನೀಡಲಾಗುವ ಅತ್ಯುತ್ತಮವಾದ ಆತ್ಮಿಕ ಆಹಾರ ಮತ್ತು ಪ್ರಾಯೋಗಿಕ ಮಾರ್ಗದರ್ಶನೆಯು, ಸಮಾನಸ್ಥರಿಂದ ನಾವು ಪಡೆಯುವ ವೈಯಕ್ತಿಕ ಉತ್ತೇಜನವನ್ನು ದೃಢಪಡಿಸುತ್ತದೆ.
ನಿಜ, ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಯಾವಾಗಲೂ ಸುಲಭವಾಗಿರುವುದಿಲ್ಲ. ಕೆಲವರಿಗೆ ವಿವಾಹ ಸಂಗಾತಿಗಳಿಂದ ಸ್ವಲ್ಪವೇ ಬೆಂಬಲ ದೊರೆಯಬಹುದು ಅಥವಾ ಯಾವುದೇ ಬೆಂಬಲ ಸಿಕ್ಕದಿರಬಹುದು, ಇನ್ನಿತರರಿಗೆ ಕೂಟಗಳಿಗೆ ಹೋಗಲು ತಯಾರುಗೊಳಿಸಬೇಕಾದ ಮಕ್ಕಳಿರಬಹುದು ಮತ್ತು ಇನ್ನು ಕೆಲವರಿಗಾದರೋ ಸಾರಿಗೆ ವ್ಯವಸ್ಥೆಯು ಒಂದು ಸಮಸ್ಯೆಯಾಗಿರಬಹುದು. ಆದರೆ ಸ್ವಲ್ಪ ಯೋಚಿಸಿ: ಈ ರೀತಿಯ ತೊಡಕುಗಳು ಕೂಟಗಳಿಗೆ ತಡೆಯಾಗುವಂತೆ ನೀವು ಅನುಮತಿಸದಿದ್ದರೆ, ಆಗ ನಿಮ್ಮ ಮಾದರಿಯು, ತದ್ರೀತಿಯ ಸನ್ನಿವೇಶಗಳನ್ನು ನಿಭಾಯಿಸುತ್ತಿರಬಹುದಾದ ಇತರರನ್ನು ಉತ್ತೇಜಿಸಬಹುದು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ನೀವು ಮತ್ತು ನಿಮ್ಮಂತಿರುವ ಇತರರು ಅತ್ಯುತ್ತಮ ಮಾದರಿಯನ್ನು ಒದಗಿಸುವಿರಿ ಮಾತ್ರವಲ್ಲ, ಇತರರ ಮೇಲೆ ಯಾವುದೇ ರೀತಿಯ ಬಲವಂತವಾದ ಒತ್ತಡವನ್ನು ಹಾಕುತ್ತಿದ್ದಿರೆಂಬ ಸುಳಿವನ್ನು ಕೊಡದೆ ಸಮಾನಸ್ಥರ ಹಿತಕರವಾದ ಪ್ರಭಾವವನ್ನು ಬೀರುವಿರಿ.
ವಾಸ್ತವದಲ್ಲಿ, ಅನೇಕ ಸಂಕಷ್ಟಗಳನ್ನು ಹಾಗೂ ಅಡೆತಡೆಗಳನ್ನು ನಿಭಾಯಿಸಬೇಕಾಗಿದ್ದ ಅಪೊಸ್ತಲ ಪೌಲನು ತನ್ನ ಹಾಗೂ ಇತರ ಪ್ರೌಢ ಕ್ರೈಸ್ತರ ಅತ್ಯುತ್ತಮ ಮಾದರಿಯನ್ನು ಅನುಸರಿಸುವಂತೆ ಕ್ರೈಸ್ತರನ್ನು ಉತ್ತೇಜಿಸಿದನು. ಅವನು ಅಂದದ್ದು: “ಸಹೋದರರೇ, ನೀವೆಲ್ಲರು ನನ್ನನ್ನು ಅನುಸರಿಸುವವರಾಗಿರಿ; ಮತ್ತು ನಾವು ನಿಮಗೆ ತೋರಿಸಿದ ಮಾದರಿಯ ಪ್ರಕಾರ ನಡೆದುಕೊಳ್ಳುವವರನ್ನು ಲಕ್ಷ್ಯಕ್ಕೆ ತಂದುಕೊಳ್ಳಿರಿ.” (ಫಿಲಿಪ್ಪಿ 3:17; 4:9) ಥೆಸಲೊನೀಕದಲ್ಲಿದ್ದ ಆದಿ ಕ್ರೈಸ್ತರು ಪೌಲನ ಅತ್ಯುತ್ತಮ ಮಾದರಿಯನ್ನು ಗಮನಿಸುತ್ತಿದ್ದರು. ಇವರ ಕುರಿತು ಪೌಲನು ಬರೆದುದು: “ಇದಲ್ಲದೆ ನೀವು ಬಹಳ ಹಿಂಸೆಯನ್ನು ಅನುಭವಿಸಬೇಕಾಗಿದ್ದರೂ ಪವಿತ್ರಾತ್ಮನಿಂದುಂಟಾದ ಆನಂದದೊಡನೆ ದೇವರ ವಾಕ್ಯವನ್ನು ಅಂಗೀಕರಿಸಿ ನಮ್ಮನ್ನೂ ಕರ್ತನಾದ ಯೇಸುವನ್ನೂ ಅನುಸರಿಸುವವರಾದಿರಿ. ಹೀಗೆ ಮಕೆದೋನ್ಯದಲ್ಲಿಯೂ ಅಖಾಯದಲ್ಲಿಯೂ ಕ್ರಿಸ್ತನನ್ನು ನಂಬುವವರೆಲ್ಲರಿಗೆ ಮಾದರಿಯಾದಿರಿ.” (1 ಥೆಸಲೊನೀಕ 1:6, 7) ನಮ್ಮ ಸಕಾರಾತ್ಮಕ ಮನೋಭಾವ ಮತ್ತು ಮಾದರಿಯು ನಮ್ಮೊಂದಿಗೆ ಸಹವಾಸಿಸುತ್ತಿರುವವರ ಮೇಲೆ ತದ್ರೀತಿಯ ಪರಿಣಾಮವನ್ನು ಬೀರಬಲ್ಲದು.
ನಕಾರಾತ್ಮಕ ಪ್ರಭಾವಗಳಿಂದ ದೂರವಿರಿ
ಅಹಿತಕರವಾದ ಸಮಾನಸ್ಥರ ಒತ್ತಡದಿಂದ ದೂರವಿರಲು ಬಯಸುವುದಾದರೆ, ನಾವು ‘ಶರೀರಭಾವಕ್ಕೆ ಅನುಸಾರವಾಗಿ ನಡೆಯುವುದನ್ನು’ ಪ್ರತಿಭಟಿಸಲೇಬೇಕು. (ರೋಮಾಪುರ 8:4, 5; 1 ಯೋಹಾನ 2:15-17) ಇಲ್ಲವಾದರೆ, ಹಾನಿಕರ ಸಮಾನಸ್ಥರ ಒತ್ತಡವು ಯೆಹೋವನಿಂದ ಹಾಗೂ ಆತನ ವಿವೇಕಯುತ ಸಲಹೆಯಿಂದ ನಮ್ಮನ್ನು ದೂರಸರಿಸಬಲ್ಲದು. ಜ್ಞಾನೋಕ್ತಿ 13:20 ಹೇಳುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” ಅಹಿತಕರವಾದ ಸಮಾನಸ್ಥರ ಒತ್ತಡದ ಕಾರಣದಿಂದಾಗಿ ಸಂಕಟಕ್ಕೊಳಗಾಗಿರುವ ಯಾರಾದರೊಬ್ಬರ ನೆನಪು ನಿಮಗೆ ಬರುತ್ತದೋ? ಉದಾಹರಣೆಗೆ, ಕೆಲವು ಕ್ರೈಸ್ತರು ತಮ್ಮ ಸಮಾನಸ್ಥರ ಪ್ರಭಾವದ ಕಾರಣದಿಂದಾಗಿ ಪ್ರಾಪಂಚಿಕತೆ, ಅನೈತಿಕತೆ ಅಥವಾ ಅಮಲೌಷಧ ಮತ್ತು ಮದ್ಯದ ದುರುಪಯೋಗಕ್ಕೆ ನಡಿಸಲ್ಪಟ್ಟಿದ್ದಾರೆ.
ಕ್ರೈಸ್ತ ಸಭೆಯ ಒಳಗೂ ಸಹ, ಆತ್ಮಿಕವಾಗಿ ದುರ್ಬಲರಾಗಿರುವ ವ್ಯಕ್ತಿಗಳನ್ನು ನಮ್ಮ ನಿಕಟ ಒಡನಾಡಿಗಳಾಗಿ ನಾವು ಆರಿಸುವುದಾದರೆ, ಆಗ ನಾವು ಅಹಿತಕರವಾದ ಸಮಾನಸ್ಥರ ಒತ್ತಡದ ಪ್ರಭಾವದ ಕೆಳಗೆ ಬರಬಲ್ಲೆವು. (1 ಕೊರಿಂಥ 15:33; 2 ಥೆಸಲೊನೀಕ 3:14) ಅನೇಕವೇಳೆ ಇಂತಹ ವ್ಯಕ್ತಿಗಳು ಆತ್ಮಿಕ ವಿಷಯಗಳನ್ನು ಚರ್ಚಿಸಲು ಒಲವುಳ್ಳವರಾಗಿರುವುದಿಲ್ಲ; ಇಂತಹ ಚರ್ಚೆಯಲ್ಲಿ ಭಾಗವಹಿಸುವವರನ್ನು ಸಹ ಇವರು ಗೇಲಿಮಾಡಬಹುದು. ಇಂತಹ ವ್ಯಕ್ತಿಗಳನ್ನು ನಮ್ಮ ಹತ್ತಿರದ ಒಡನಾಡಿಗಳಾಗಿ ನಾವು ಆರಿಸುವುದಾದರೆ, ಸಮಾನಸ್ಥರ ಒತ್ತಡವು ನಾವು ಅದೇ ಆಕಾರವನ್ನು ಪಡೆಯುವಂತೆ ನಮ್ಮನ್ನು ಒತ್ತಾಯಿಸಬಹುದು ಮತ್ತು ಬೇಗನೇ ಅವರ ಆಲೋಚನೆ ಮತ್ತು ಮನೋಭಾವಗಳು ನಮ್ಮಲ್ಲೂ ಪ್ರತಿಬಿಂಬಿತವಾಗುವುದನ್ನು ನಾವು ಕಾಣುವೆವು. ತಮ್ಮ ನಂಬಿಕೆಯಲ್ಲಿ ಯಥಾರ್ಥತೆಯನ್ನು ತೋರಿಸುವ ಮತ್ತು ಆತ್ಮಿಕ ಅಭಿವೃದ್ಧಿಯನ್ನು ಮಾಡಲು ಪ್ರಯತ್ನಿಸುವವರ ಕುರಿತು ನಕಾರಾತ್ಮಕ ಹೇಳಿಕೆಗಳನ್ನು ನೀಡುವುದನ್ನು ಕೂಡ ನಾವು ಪ್ರಾರಂಭಿಸಬಹುದು.—1 ತಿಮೊಥೆಯ 4:15.
ಆತ್ಮಿಕ ವಿಷಯಗಳಲ್ಲಿ ಆನಂದಿಸುತ್ತ, ಯೆಹೋವನನ್ನು ಮೆಚ್ಚಿಸಲು ಹೆಣಗಾಡುತ್ತಿರುವವರೊಂದಿಗೆ ಸ್ನೇಹವನ್ನು ಬೆಳೆಸುವುದು ಅದೆಷ್ಟು ವಿವೇಕವುಳ್ಳದ್ದಾಗಿರುತ್ತದೆ! ಇಂತಹ ಒಡನಾಡಿಗಳು ‘ಮೇಲಣಿಂದ ಬರುವ ಜ್ಞಾನ’ವನ್ನು ಪ್ರತಿಬಿಂಬಿಸಲು ನಮಗೆ ಸಹಾಯಮಾಡುತ್ತಾರೆ. ಅದು “ಮೊದಲು ಪರಿಶುದ್ಧವಾದದ್ದು, ಆ ಮೇಲೆ ಸಮಾಧಾನಕರವಾದದ್ದು, ವಿನಯವುಳ್ಳದ್ದು, ಸಂತೋಷವಾಗಿ ಒಪ್ಪಿಕೊಳ್ಳುವಂಥದು, ಕರುಣೆ ಮುಂತಾದ ಒಳ್ಳೇ ಫಲಗಳಿಂದ ತುಂಬಿರುವಂಥದು ಆಗಿದೆ; ಅದರಲ್ಲಿ . . . ಕಪಟವೂ ಇಲ್ಲ.” (ಯಾಕೋಬ 3:17) ಇದರ ಅರ್ಥ, ಆತ್ಮಿಕ ಮನೋಭಾವವುಳ್ಳ ವ್ಯಕ್ತಿಗಳು ಆತ್ಮಿಕ ವಿಷಯಗಳನ್ನು ಬಿಟ್ಟು ಬೇರೆ ಯಾವ ವಿಷಯಗಳ ಕುರಿತು ಮಾತಾಡಲು ಅಸಮರ್ಥರಾಗಿರುತ್ತಾರೆಂದಲ್ಲ. ಇದಕ್ಕೆ ತೀರ ವ್ಯತಿರಿಕ್ತವಾಗಿ, ವಾಚ್ಟವರ್ ಪ್ರಕಾಶನಗಳಾದ ಎಚ್ಚರ! ಪತ್ರಿಕೆಯಲ್ಲಿ ಪರಿಗಣಿಸಲಾಗುವ ವಿಧವಿಧವಾದ ಆಸಕ್ತಿಕರ ವಿಷಯಗಳ ಕುರಿತು ತುಸು ಯೋಚಿಸಿರಿ. ಚರ್ಚೆಗಾಗಿ ಹಿತಕರವಾದ ವಿಷಯಗಳಿಗೆ ನಿಜವಾಗಿಯೂ ಕೊನೆಯಿಲ್ಲ! ಮತ್ತು ಆವರಿಸಲಾಗುವ ವಿಭಿನ್ನ ರೀತಿಯ ವಿಷಯಗಳಲ್ಲಿ ಆಸಕ್ತಿಯನ್ನು ತೆಗೆದುಕೊಳ್ಳುವ ಮೂಲಕ, ನಾವು ಜೀವನದ ಕಡೆಗೆ ಹಾಗೂ ಯೆಹೋವನ ಕೈಕೆಲಸದ ಕಡೆಗೆ ಪ್ರೀತಿಯನ್ನು ಪ್ರತಿಬಿಂಬಿಸುತ್ತೇವೆ.
ಒಬ್ಬ ಒಳ್ಳೇ ಟೆನಿಸ್ ಆಟಗಾರನು ತನ್ನ ಕೌಶಲಗಳನ್ನು ಬೇರೆ ಉತ್ತಮ ಆಟಗಾರರೊಂದಿಗೆ ಆಡುವುದರ ಮೂಲಕ ಉತ್ತಮಗೊಳಿಸುವಂತೆಯೇ, ಯೋಗ್ಯ ಒಡನಾಡಿಗಳು ನಮ್ಮನ್ನು ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಆತ್ಮಿಕವಾಗಿ ಮೇಲಕ್ಕೆತ್ತುತ್ತಾರೆ. ಇನ್ನೊಂದು ಕಡೆಯಲ್ಲಿ, ತಪ್ಪಾದ ಒಡನಾಡಿಗಳು ನಮ್ಮನ್ನು ಕಪಟಾಚಾರದ ಮಾರ್ಗದೊಳಗೆ ನಡಿಸಿ, ಹೀಗೆ ಒಂದು ಇಬ್ಬಗೆಯ ಜೀವಿತವನ್ನು ನಡೆಸುವಂತೆ ನಮ್ಮನ್ನು ಉತ್ತೇಜಿಸುತ್ತಾರೆ. ಸ್ವ-ಗೌರವದಿಂದ ಕೂಡಿದ ನಿರ್ಮಲ ಮನಸ್ಸಾಕ್ಷಿಯನ್ನು ಅನುಭವಿಸುವುದು ಎಷ್ಟು ಉತ್ತಮ!
ಪ್ರಯೋಜನಪಡೆದ ಕೆಲವರು
ಬೈಬಲಿನ ಬೋಧನೆಗಳ ಮತ್ತು ಅದರ ನೈತಿಕ ಹಾಗೂ ಆತ್ಮಿಕ ಆವಶ್ಯಕತೆಗಳ ಕುರಿತು ಕಲಿಯುವುದು ಅನೇಕ ವ್ಯಕ್ತಿಗಳಿಗೆ ತೀರ ಕಷ್ಟಕರವಾಗಿರುವುದಿಲ್ಲ. ಆದಾಗ್ಯೂ, ಈ ವಿಷಯಗಳನ್ನು ಕಾರ್ಯರೂಪಕ್ಕೆ ಹಾಕುವುದು ಕಷ್ಟಕರವಾಗಿರುತ್ತದೆ. ಹಿಂಬಾಲಿಸುವ ಉದಾಹರಣೆಗಳು ತೋರಿಸುವಂತೆ, ಹಿತಕರವಾದ ಸಮಾನಸ್ಥರ ಒತ್ತಡವು ಯೆಹೋವನನ್ನು ಪೂರ್ಣಪ್ರಾಣದಿಂದ ಸೇವಿಸಲು ನಮಗೆ ಸಹಾಯಮಾಡಸಾಧ್ಯವಿದೆ.
ತನ್ನ ಪತ್ನಿಯೊಂದಿಗೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ತೊಡಗಿರುವ ಒಬ್ಬ ಸಾಕ್ಷಿಯು ಹೇಳಿದ್ದೇನೆಂದರೆ, ಅವನ ಒಡನಾಡಿಗಳ ಮಾದರಿಗಳು ಜೀವಿತದ ಅವನ ಧ್ಯೇಯಗಳನ್ನು ಪ್ರಭಾವಿಸಿದವು. ಅವನು ಬೆಳೆಯುತ್ತಿದ್ದ ಹಾಗೆ ಅನೇಕ ಅಹಿತಕರವಾದ ಪ್ರಭಾವಗಳನ್ನು ನಿಭಾಯಿಸಬೇಕಾಗಿ ಬಂತು. ಆದರೆ, ಶುಶ್ರೂಷೆಯಲ್ಲಿ ಕ್ರಮವಾಗಿರಲು ಹಾಗೂ ಕ್ರೈಸ್ತ ಕೂಟಗಳಿಗೆ ಕ್ರಮವಾಗಿ ಹಾಜರಾಗಲು ತನ್ನನ್ನು ಉತ್ತೇಜಿಸುತ್ತಿದ್ದವರನ್ನು ಅವನು ತನ್ನ ಸ್ನೇಹಿತರನ್ನಾಗಿ ಆರಿಸಿಕೊಂಡನು. ಈ ಒಡನಾಡಿಗಳಿಗೆ ಅಂಟಿಕೊಳ್ಳುವುದು ಆತ್ಮಿಕ ಪ್ರೌಢತೆಯ ಹಾದಿಯಲ್ಲಿ ಮುಂದೆ ಸಾಗಲು ಅವನಿಗೆ ಸಹಾಯಮಾಡಿತು.
ಇನ್ನೊಬ್ಬ ಸಾಕ್ಷಿಯು ಬರೆಯುವುದು: “ನನ್ನ ಹೆಂಡತಿ ಮತ್ತು ನಾನು ಮದುವೆಯಾದ ನಂತರ, ಸುಮಾರು ನಮ್ಮ ಪ್ರಾಯದವರೇ ಆಗಿದ್ದು, ರೆಗ್ಯುಲರ್ ಪಯನೀಯರರಾಗಿ ಸೇವೆಸಲ್ಲಿಸುತ್ತಿದ್ದ ದಂಪತಿಗಳಿದ್ದ ಒಂದು ಸಭೆಗೆ ನಾವು ಸ್ಥಳಾಂತರಿಸಿದೆವು. ಅವರ ಮಾದರಿಯು ಪೂರ್ಣಸಮಯದ ಶುಶ್ರೂಷೆಯನ್ನು ಪ್ರವೇಶಿಸುವಂತೆ ನಮಗೆ ಸಹಾಯಮಾಡಿತು. ಆಮೇಲೆ ನಾವು ಕೂಡ ಸಭೆಯಲ್ಲಿ ಪಯನೀಯರ್ ಆತ್ಮವನ್ನು ಬೆಳೆಸಲು ಇತರರಿಗೆ ಸಹಾಯಮಾಡಿದೆವು. ಇದರ ಪರಿಣಾಮವಾಗಿ, ಅನೇಕರು ಪಯನೀಯರರಾಗಿ ನಮ್ಮೊಂದಿಗೆ ಸೇರಿದರು.”
ದೇವಪ್ರಭುತ್ವ ಗುರಿಗಳಿರುವವರೊಂದಿಗೆ ಸಹವಾಸಮಾಡುವುದು ಯೆಹೋವನಿಗೆ ವಿಧೇಯರಾಗುವುದನ್ನು ಸುಲಭವಾಗಿ ಮಾಡಸಾಧ್ಯವಿದೆ. ಇದು, ಹಿತಕರವಾದ ಸಮಾನಸ್ಥರ ಪ್ರಭಾವದ ಪ್ರಯೋಜನಕರ ಪರಿಣಾಮಗಳಲ್ಲಿ ಮತ್ತೊಂದಾಗಿದೆ. ಒಬ್ಬ ಯುವಕನಾಗಿದ್ದಾಗ ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿ ಅನಂತರ ಸಂಚಾರ ಮೇಲ್ವಿಚಾರಕನಾಗಿ ಸೇವೆ ಸಲ್ಲಿಸಿದ ಒಬ್ಬ ಸಾಕ್ಷಿಯು, ಈಗ ವಾಚ್ಟವರ್ ಸೊಸೈಟಿಯ ಬ್ರಾಂಚ್ ಆಫೀಸುಗಳಲ್ಲೊಂದರಲ್ಲಿ ಸೇವೆಸಲ್ಲಿಸುತ್ತಿದ್ದಾನೆ. ಅವನು ಬರೆಯುವುದು: “ನನ್ನ ಬಾಲ್ಯದ ನೆಚ್ಚಿನ ಸ್ಮರಣೆಗಳಲ್ಲಿ ಕೆಲವು, ನಮ್ಮ ಮನೆಗೆ ಭೇಟಿಮಾಡುತ್ತಿದ್ದ ಪೂರ್ಣ ಸಮಯದ ಶುಶ್ರೂಷಕರು ಆಗಿದ್ದರು. ನಮ್ಮೊಂದಿಗೆ ಊಟದಲ್ಲಿ ಪಾಲುತೆಗೆದುಕೊಳ್ಳಲು ಅತಿಥಿಗಳಿಗೆ ಸ್ಥಳವು ಯಾವಾಗಲೂ ಸಿದ್ಧವಾಗಿರುತ್ತಿತ್ತು. ನಾನು ಹತ್ತು ವರ್ಷ ಪ್ರಾಯದವನಾದಾಗ ಸರ್ಕಿಟ್ ಮೇಲ್ವಿಚಾರಕರೊಬ್ಬರು ನನಗೆ ಸೇವೆಗೆ ಹೋಗುವ ಬ್ಯಾಗನ್ನು ಕೊಟ್ಟರು. ನಾನು ಆ ಬ್ಯಾಗನ್ನು ಈ ದಿನದ ವರೆಗೂ ಕಾಪಾಡಿದ್ದೇನೆ.”
ತನ್ನ ಹದಿಹರೆಯದ ವರುಷಗಳನ್ನು ನೆನಸುವಾಗ, ಈ ಸಾಕ್ಷಿಯು ಕೂಡಿಸುವುದು: “ಸಭೆಯಲ್ಲಿರುವ ಅನೇಕ ಯುವ ವ್ಯಕ್ತಿಗಳು ಸಭೆಯ ಚಟುವಟಿಕೆಯಲ್ಲಿ ಒಳಗೂಡಲು ಬಯಸಿದರು ಮತ್ತು ಅವರ ಮಾದರಿಯು ನಾವು ಕೂಡ ಅದನ್ನೇ ಮಾಡುವಂತೆ ನಮ್ಮಲ್ಲಿ ಬಯಕೆಯನ್ನು ಮೂಡಿಸಿತು.” ಹಿತಕರವಾದ ಸಮಾನಸ್ಥರು, ಒಂದು ಮೊಳಕೆಯಂತೆ ಈ ಯುವಕನಿಗೆ ಉತ್ತಮ ಮರಕ್ಕೆ ಸಮಾನವಾದ ಕ್ರೈಸ್ತ ಪುರುಷನಾಗಿ ಬೆಳೆಯಲು ಸಹಾಯಮಾಡಿದರು. ಹೆತ್ತವರೇ, ನಿಮ್ಮ ಮಕ್ಕಳ ಮೇಲೆ ಸಕಾರಾತ್ಮಕ, ಭಕ್ತಿವೃದ್ಧಿಯನ್ನುಂಟುಮಾಡುವ ಪ್ರಭಾವವನ್ನು ಬೀರಸಾಧ್ಯವಿರುವವರನ್ನು ನಿಮ್ಮ ಮನೆಗೆ ಆಮಂತ್ರಿಸುತ್ತೀರೋ?—ಮಲಾಕಿಯ 3:16.
ನಿಜ, ಮೇಲೆ ತಿಳಿಸಲಾದ ವ್ಯಕ್ತಿಗಳಂತೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಭಾಗವಹಿಸಲು ನಮ್ಮಲ್ಲಿ ಎಲ್ಲರಿಗೂ ಆಗುವುದಿಲ್ಲ. ಆದರೆ, ನಮ್ಮಲ್ಲಿ ಎಲ್ಲರೂ ಯೆಹೋವನನ್ನು ‘ತಮ್ಮ ಪೂರ್ಣಹೃದಯದಿಂದಲೂ ತಮ್ಮ ಪೂರ್ಣಪ್ರಾಣದಿಂದಲೂ ತಮ್ಮ ಪೂರ್ಣಬುದ್ಧಿಯಿಂದಲೂ’ ಪ್ರೀತಿಸಲು ಕಲಿಯಬಹುದು. (ಮತ್ತಾಯ 22:37) ನಾವು ಆಯ್ಕೆಮಾಡುವ ಸಮಾನಸ್ಥರು ಆ ಪ್ರೀತಿಯನ್ನು ಬೆಳೆಸುವುದರಲ್ಲಿ ಮತ್ತು ಹೀಗೆ, ನಿತ್ಯಜೀವದ ಪ್ರತೀಕ್ಷೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.
ಕೀರ್ತನೆಗಾರನು ಜೀವಿತದ ನಿಜ ಯಶಸ್ಸಿಗೆ ಸರಳವಾದರೂ ಪ್ರಭಾವಶಾಲಿ ಸೂತ್ರವೊಂದನ್ನು ಕೊಟ್ಟಿದ್ದಾನೆ: “ಯಾವನು ದುಷ್ಟರ ಆಲೋಚನೆಯಂತೆ ನಡೆಯದೆ ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ ಧರ್ಮನಿಂದಕರೊಡನೆ ಕೂತುಕೊಳ್ಳದೆ ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.”—ಕೀರ್ತನೆ 1:1-3.
ಎಂತಹ ಒಂದು ಅದ್ಭುತಕರವಾದ ಖಾತರಿಯಿದಾಗಿರುತ್ತದೆ! ನಾವು ಅಪರಿಪೂರ್ಣರಾಗಿದ್ದು ತಪ್ಪುಗಳನ್ನು ಮಾಡುವವರಾಗಿದ್ದರೂ ಸಹ, ದೇವರು ಒದಗಿಸಿರುವ ‘ಲೋಕದಲ್ಲಿರುವ [ನಮ್ಮ] ಸಹೋದರರ ಇಡೀ ಬಳಗ’ವೆನ್ನುವ ಹಿತಕರ ಸಮಾನಸ್ಥರ ಪ್ರಭಾವವೆಂಬ ಜಲಾಶಯದಿಂದ ವಿಪುಲವಾಗಿ ಪ್ರಯೋಜನವನ್ನು ಪಡೆದುಕೊಳ್ಳುವುದಾದರೆ ಮತ್ತು ಯೆಹೋವನು ನಮ್ಮನ್ನು ಮಾರ್ಗದರ್ಶಿಸುವಂತೆ ಬಿಡುವುದಾದರೆ, ಆಗ ನಮ್ಮ ಜೀವನವು ಸಫಲವಾಗುವುದು.—1 ಪೇತ್ರ 5:9.
[ಪುಟ 24 ರಲ್ಲಿರುವ ಚಿತ್ರ]
ಸಭೆಯು ಸಮಾನಸ್ಥರ ಪ್ರಭಾವದ ಹಿತಕರವಾದ ಮಾದರಿಯನ್ನು ನೀಡುತ್ತದೆ
[ಪುಟ 25 ರಲ್ಲಿರುವ ಚಿತ್ರ]
ಹೆತ್ತವರೇ, ನಿಮ್ಮ ಮಕ್ಕಳು ಭಕ್ತಿವೃದ್ಧಿಯನ್ನುಂಟುಮಾಡುವ ಸಮಾನಸ್ಥರೊಂದಿಗೆ ಬೆರೆಯಲು ಉತ್ತೇಜನವನ್ನು ನೀಡಿರಿ