ಸಮವಯಸ್ಸಿನವರ ಒತ್ತಡ ಹಾಗೂ ಸಾರುವ ನಿಮ್ಮ ಸುಯೋಗ
1 ಸಮವಯಸ್ಸಿನವರ ಒತ್ತಡವು ಬಹಳ ಶಕ್ತಿಶಾಲಿಯಾದ ಪ್ರಭಾವವನ್ನು ಬೀರುತ್ತದೆ. ಇದು ಒಳ್ಳೆಯದನ್ನು ಮಾಡುವುದಕ್ಕಾಗಿಯಾದರೂ ಇರಬಹುದು ಇಲ್ಲವೆ ಕೆಟ್ಟದ್ದನ್ನು ಮಾಡುವುದಕ್ಕಾಗಿಯಾದರೂ ಇರಬಹುದು. ಆದರೆ ಯೆಹೋವನ ಜೊತೆ ಸೇವಕರು ಕ್ರೈಸ್ತ ಸತ್ಕಾರ್ಯಗಳಿಗೆ ನಮ್ಮನ್ನು ಪ್ರೇರೇಪಿಸುವಂತಹ ಒಂದು ಸಕಾರಾತ್ಮಕ ಪ್ರಭಾವವನ್ನು ಬೀರುತ್ತಾರೆ. (ಇಬ್ರಿ. 10:24) ಆದರೆ, ಸಾಕ್ಷಿಗಳಲ್ಲದ ಕುಟುಂಬ ಸದಸ್ಯರು, ಸಹೋದ್ಯೋಗಿಗಳು, ಶಾಲಾಸಹಪಾಠಿಗಳು, ನೆರೆಹೊರೆಯವರು ಅಥವಾ ಪರಿಚಯಸ್ಥರು, ಕ್ರೈಸ್ತ ತತ್ವಗಳಿಗೆ ವಿರುದ್ಧವಾಗಿರುವ ಮಾರ್ಗವನ್ನು ಬೆನ್ನಟ್ಟುವಂತೆ ನಮ್ಮ ಮೇಲೆ ಒತ್ತಡವನ್ನು ತರಸಾಧ್ಯವಿದೆ. ಅವರು ‘ಕ್ರಿಸ್ತನಲ್ಲಿರುವ [ನಮ್ಮ] ಒಳ್ಳೇ ನಡವಳಿಕೆಯನ್ನು ಕುರಿತು . . . ನಿಂದಿಸಬಹುದು.’ (1 ಪೇತ್ರ 3:16) ನಕಾರಾತ್ಮಕವಾದ ಸಮವಯಸ್ಸಿನ ಒತ್ತಡದ ಎದುರಿನಲ್ಲಿಯೂ ಸಾಕ್ಷಿಕಾರ್ಯವನ್ನು ಬಿಡದೇ ಮುಂದುವರಿಸುವ ನಮ್ಮ ದೃಢಸಂಕಲ್ಪವನ್ನು ನಾವು ಹೇಗೆ ಕಾಪಾಡಿಕೊಳ್ಳಸಾಧ್ಯವಿದೆ?
2 ಕುಟುಂಬ ಸದಸ್ಯರು: ಕೆಲವೊಮ್ಮೆ, ಯೆಹೋವನ ಸಾಕ್ಷಿಯಾಗಿರದಂತಹ ಒಬ್ಬ ಪತಿ ಹಾಗೂ ತಂದೆಯು, ತನ್ನ ಪತ್ನಿ ಮತ್ತು ಮಕ್ಕಳು ಸಾರ್ವಜನಿಕವಾಗಿ ಸಾಕ್ಷಿ ನೀಡುವುದನ್ನು ಇಷ್ಟಪಡದೇ ಇರಬಹುದು. ಮೆಕ್ಸಿಕೊದಲ್ಲಿ ಇಂತಹದ್ದೇ ಒಂದು ಘಟನೆಯು ನಡೆಯಿತು. ವ್ಯಕ್ತಿಯೊಬ್ಬನ ಪತ್ನಿ ಹಾಗೂ ಅವನ ಏಳು ಮಕ್ಕಳು ಸತ್ಯಕ್ಕೆ ಬಂದರು. ಮೊದಮೊದಲು, ಅವರನ್ನು ಅವನು ವಿರೋಧಿಸಿದನು ಏಕೆಂದರೆ, ಅವನಿಗೆ ತನ್ನ ಕುಟುಂಬವು ಸಾರುವುದು ಹಾಗೂ ಮನೆಯಿಂದ ಮನೆಗೆ ಹೋಗಿ ಬೈಬಲ್ ಸಾಹಿತ್ಯವನ್ನು ಕೊಡುವುದು ಇಷ್ಟವಿರಲಿಲ್ಲ. ಇದು ಗೌರವಕ್ಕೆ ಕುಂದು ತರುವಂತಹದ್ದಾಗಿದೆ ಎಂಬುದು ಅವನ ಅನಿಸಿಕೆಯಾಗಿತ್ತು. ಆದರೆ, ಅವನ ಪತ್ನಿ ಮತ್ತು ಮಕ್ಕಳು ಮಾತ್ರ, ಯೆಹೋವನಿಗೆ ಸೇವೆಸಲ್ಲಿಸುವ ಹಾಗೂ ಶುಶ್ರೂಷೆಯಲ್ಲಿ ಕ್ರಮವಾಗಿ ಭಾಗವಹಿಸುವ ತಮ್ಮ ನಿರ್ಣಯದಲ್ಲಿ ಅಚಲರಾಗಿದ್ದರು. ಕಾಲವು ಕಳೆದಂತೆ, ಆ ವ್ಯಕ್ತಿ ಸಹ ಸಾಕ್ಷಿಕಾರ್ಯದ ದೇವರ ಏರ್ಪಾಡಿನ ಬೆಲೆಯನ್ನು ಅರಿತನು ಮಾತ್ರವಲ್ಲ, ಯೆಹೋವನಿಗೆ ತನ್ನನ್ನು ಸಮರ್ಪಿಸಿಕೊಂಡನು. ಸತ್ಯವನ್ನು ಸ್ವೀಕರಿಸಲು ಅವನಿಗೆ 15 ವರ್ಷಗಳು ಹಿಡಿದವು. ಅವನ ಕುಟುಂಬದವರೇನಾದರೂ ಸಾರುವ ಸುಯೋಗದಲ್ಲಿ ಪಟ್ಟುಹಿಡಿಯದೇ ಹೋಗಿದ್ದರೆ, ಅವನು ಸತ್ಯವನ್ನು ಸ್ವೀಕರಿಸುತ್ತಿದ್ದನೋ?—ಲೂಕ 1:74; 1 ಕೊರಿಂ. 7:16.
3 ಸಹೋದ್ಯೋಗಿಗಳು: ಸಹೋದ್ಯೋಗಿಗಳಿಗೆ ಸಾಕ್ಷಿನೀಡಲಿಕ್ಕಾಗಿ ನೀವು ಮಾಡುವ ಪ್ರಯತ್ನಗಳನ್ನು ಕೆಲವರು ತುಚ್ಛವಾಗಿ ಎಣಿಸಬಹುದು. ಈ ವಿಷಯದಲ್ಲಿ ಒಬ್ಬ ಸಹೋದರಿಯು ತನ್ನ ಅನುಭವವನ್ನು ತಿಳಿಸುತ್ತಾಳೆ. ಅವಳ ಆಫೀಸಿನಲ್ಲಿ ಲೋಕದ ಅಂತ್ಯದ ಬಗ್ಗೆ ಚರ್ಚೆಯು ನಡೆಯಿತು. ಆಗ ಆ ಸಹೋದರಿಯು ಮತ್ತಾಯ ಪುಸ್ತಕದ 24ನೇ ಅಧ್ಯಾಯವನ್ನು ಓದುವಂತೆ ಅವರಿಗೆ ಹೇಳಿದಾಗ, ಅವರೆಲ್ಲರೂ ಸೇರಿಕೊಂಡು ಸಹೋದರಿಯನ್ನು ಗೇಲಿಮಾಡಿದರು. ಅದಾಗಿ ಕೆಲವು ದಿನಗಳ ಅನಂತರ, ಸಹೋದ್ಯೋಗಿಗಳಲ್ಲಿ ಒಬ್ಬಳು ಆ ಅಧ್ಯಾಯವನ್ನು ಓದಿ, ಬಹಳ ಇಷ್ಟಪಟ್ಟೆನೆಂದು ಸಹೋದರಿಗೆ ಹೇಳಿದಳು. ಅವಳು ಸಾಹಿತ್ಯವನ್ನು ಪಡೆದುಕೊಂಡಳು ಮತ್ತು ಅವಳೊಂದಿಗೆ ಹಾಗೂ ಅವಳ ಪತಿಯೊಂದಿಗೆ ಬೈಬಲ್ ಅಭ್ಯಾಸವನ್ನು ಮಾಡುವ ಏರ್ಪಾಡನ್ನು ಸಹ ಮಾಡಲಾಯಿತು. ಮೊದಲ ಬಾರಿಗೆ ಅಭ್ಯಾಸವನ್ನು ಮಾಡಿದಾಗ, ಅದು ಮುಂಜಾನೆ ಸುಮಾರು ಎರಡು ಗಂಟೆಯ ವರೆಗೆ ನಡೆಯಿತು. ಮೂರನೇ ಬಾರಿ ಅಭ್ಯಾಸಮಾಡಿದ ನಂತರ, ಅವರು ಕೂಟಗಳಿಗೆ ಹಾಜರಾಗತೊಡಗಿದರು. ನಂತರ ಅವರು ಹೊಗೆಸೊಪ್ಪು ತಿನ್ನುವುದನ್ನು ಸಹ ನಿಲ್ಲಿಸಿಬಿಟ್ಟರು ಮತ್ತು ಕ್ಷೇತ್ರ ಸೇವೆಯಲ್ಲಿ ಭಾಗವಹಿಸಲಾರಂಭಿಸಿದರು. ನಮ್ಮ ಸಹೋದರಿಯು ತನ್ನ ನಿರೀಕ್ಷೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಪ್ರಯತ್ನವನ್ನು ಮಾಡದಿರುತ್ತಿದ್ದರೆ ಇದು ಸಂಭವಿಸುತ್ತಿತ್ತೋ?
4 ಶಾಲಾಸಹಪಾಠಿಗಳು: ಶಾಲೆಯಲ್ಲಿ ಸಮವಯಸ್ಸಿನವರ ಒತ್ತಡವನ್ನು ಎದುರಿಸುವುದು ಹಾಗೂ ಸಾರುವ ಕಾರ್ಯದಲ್ಲಿ ಭಾಗವಹಿಸುವಾಗ ಇತರ ಯುವಕಯುವತಿಯರು ತಮ್ಮನ್ನು ಕೀಳಾಗಿ ನೆನಸುತ್ತಾರೆ ಎಂಬ ಭಯ ಸಾಕ್ಷಿಗಳಾಗಿರುವ ಯುವಜನರಿಗೆ ಅನಿಸುವುದು ಸಹಜ. ಅಮೆರಿಕದ ಒಬ್ಬ ಹದಿವಯಸ್ಕಳು ಹೇಳಿದ್ದು: “ಇತರ ಯುವ ಜನರಿಗೆ ಸಾಕ್ಷಿಯನ್ನು ನೀಡಲು ನಾನು ತುಂಬ ಭಯಪಡುತ್ತಿದ್ದೆ. ಏಕೆಂದರೆ ನನ್ನನ್ನು ಹಾಸ್ಯಮಾಡುತ್ತಾರೆ ಎಂಬ ಹೆದರಿಕೆ ನನಗಿತ್ತು.” ಹೀಗೆ ಅವಳು ಶಾಲೆಯಲ್ಲಿ ಹಾಗೂ ಟೆರಿಟೊರಿಯಲ್ಲಿ ತನ್ನ ಸಮವಯಸ್ಸಿನವರೊಂದಿಗೆ ಸಾರುವುದರಿಂದ ದೂರ ಉಳಿದಳು. ಸಮವಯಸ್ಸಿನವರ ಒತ್ತಡಕ್ಕೆ ಮಣಿಯದೆ ಅದನ್ನು ಎದುರಿಸಿ ನಿಲ್ಲಲು ಬೇಕಾದ ಬಲವನ್ನು ನೀವು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ? ಯೆಹೋವನ ಅನುಗ್ರಹವನ್ನು ಬೇಡುತ್ತಾ, ಆತನಲ್ಲಿ ಭರವಸೆಯಿಡುವ ಮೂಲಕವೇ. (ಜ್ಞಾನೋ. 29:25) ದೇವರ ವಾಕ್ಯವನ್ನು ಶುಶ್ರೂಷೆಯಲ್ಲಿ ಉಪಯೋಗಿಸುವ ನಿಮ್ಮ ಸಾಮರ್ಥ್ಯದಲ್ಲಿ ಹೆಮ್ಮೆಯುಳ್ಳವರಾಗಿರಿ. (2 ತಿಮೊ. 2:15) ಈ ಪ್ಯಾರದಲ್ಲಿ ತಿಳಿಸಲ್ಪಟ್ಟಿರುವ ಯುವತಿಯು ತನ್ನ ಸಹಪಾಠಿಗಳೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವ ಅಭಿಲಾಷೆಯನ್ನು ಬೆಳೆಸಿಕೊಳ್ಳುವುದಕ್ಕಾಗಿ ಯೆಹೋವನಲ್ಲಿ ಸಹಾಯವನ್ನು ಕೋರುತ್ತಾ, ಪ್ರಾರ್ಥನೆಮಾಡಲು ಶುರುಮಾಡಿದಳು. ಅವಳು ಶಾಲೆಯಲ್ಲಿ ಅನೌಪಚಾರಿಕ ಸಾಕ್ಷಿಯನ್ನು ನೀಡಲು ಪ್ರಾರಂಭಿಸಿದಳು ಹಾಗೂ ಅದರಿಂದ ಒಳ್ಳೆಯ ಫಲಿತಾಂಶಗಳು ಸಿಕ್ಕಿದವು. ಮಾತ್ರವಲ್ಲ, ಅವಳು ತನಗೆ ಗೊತ್ತಿರುವ ಎಲ್ಲರೊಂದಿಗೆ ಸಂದೇಶವನ್ನು ಹಂಚಿಕೊಳ್ಳುತ್ತಿದ್ದಳು. ಅವಳು ಮುಕ್ತಾಯಗೊಳಿಸುವುದು: “ಆ ಯುವಜನರಿಗೆ ಭವಿಷ್ಯತ್ತಿನ ಬಗ್ಗೆ ಒಂದು ನಿರೀಕ್ಷೆ ಖಂಡಿತವಾಗಿಯೂ ಅಗತ್ಯವಿದೆ. ಮತ್ತು ಅದಕ್ಕಾಗಿ ಯೆಹೋವನು ನಮ್ಮನ್ನು ಉಪಯೋಗಿಸುತ್ತಿದ್ದಾನೆ.”
5 ನೆರೆಹೊರೆಯವರು: ನಾವು ಯಾರಾಗಿದ್ದೇವೆ ಹಾಗೂ ನಮ್ಮ ನಂಬಿಕೆಗಳು ಏನಾಗಿವೆ ಎಂಬ ವಿಷಯದಲ್ಲಿ ಸ್ವಲ್ಪ ಕಿರಿಕಿರಿಯನ್ನು ತೋರಿಸುವ ನೆರೆಹೊರೆಯವರು ಇಲ್ಲವೆ ಪರಿಚಯಸ್ಥರು ನಮ್ಮ ಸುತ್ತುಮುತ್ತಲಿರಬಹುದು. ಅವರು ಏನು ನೆನಸುತ್ತಾರೋ ಎಂಬ ಭಯ ನಿಮಗಿರುವುದಾದರೆ, ನಿಮ್ಮನ್ನೇ ಹೀಗೆ ಕೇಳಿಕೊಳ್ಳಿರಿ: ‘ನಿತ್ಯ ಜೀವಕ್ಕೆ ನಡೆಸುವ ಸತ್ಯವನ್ನು ಅವರು ತಿಳಿದಿದ್ದಾರೋ? ಈ ಸಂದೇಶವನ್ನು ಅವರು ಹೃದಯಕ್ಕೆ ತೆಗೆದುಕೊಳ್ಳುವಂತೆ ನಾನು ಹೇಗೆ ಸಹಾಯಮಾಡಬಲ್ಲೆ?’ ಸ್ವಲ್ಪಸ್ವಲ್ಪವಾಗಿ ಆದರೆ ಕ್ರಮವಾಗಿ ನೆರೆಹೊರೆಯವರಿಗೆ ಸಾಕ್ಷಿಯನ್ನು ನೀಡುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆದುಕೊಳ್ಳಬಹುದು ಎಂಬುದನ್ನು ಒಬ್ಬ ಸರ್ಕಿಟ್ ಮೇಲ್ವಿಚಾರಕರು ಕಂಡುಕೊಂಡರು. ಸಹೃದಯಿಗಳನ್ನು ಕಂಡುಹಿಡಿಯಲು ಬೇಕಾಗಿರುವ ಬಲ ಹಾಗೂ ವಿವೇಕಕ್ಕಾಗಿ ಯೆಹೋವನಲ್ಲಿ ಬೇಡಿಕೊಳ್ಳಿರಿ.—ಫಿಲಿ. 4:13.
6 ಸಮವಯಸ್ಸಿನವರ ಒತ್ತಡಕ್ಕೆ ಮಣಿಯುವುದು ವಿರೋಧಿಗಳನ್ನು ಖುಷಿಪಡಿಸಬಹುದು. ಆದರೆ, ಹಾಗೆ ಮಣಿಯುವುದರಿಂದ ಅವರಿಗಾಗಲಿ ನಮಗಾಗಲಿ ಯಾವುದೇ ರೀತಿಯಲ್ಲಿ ಒಳಿತಾಗಬಹುದೇ? ಖಂಡಿತವಾಗಿಯೂ ಇಲ್ಲ! ಯೇಸುವನ್ನು ಅವನ ಸ್ವಂತ ಜನರೇ ವಿರೋಧಿಸಿದರು. ತನ್ನ ಮಲಸಹೋದರರಿಂದ ಕಟುವಾದ ಮಾತುಗಳನ್ನು ಅವನು ಕೇಳಿಸಿಕೊಳ್ಳಬೇಕಾಗಿತ್ತು ಆದರೂ ಅವನು ಅದನ್ನು ಸಹಿಸಿಕೊಂಡನು. ಏಕೆಂದರೆ ತನಗಾಗಿ ದೇವರು ಉದ್ದೇಶಿಸ[ಸಿದ್ದ]ಲ್ಪಟ್ಟಿರುವ ಮಾರ್ಗದಲ್ಲಿಯೇ ಉಳಿಯುವುದರ ಮೂಲಕ ಅವರಿಗೆ ಸಹಾಯಮಾಡಸಾಧ್ಯವಿದೆ ಎಂಬುದನ್ನು ಅವನು ತಿಳಿದಿದ್ದನು. ಹೀಗೆ, ಯೇಸು “ವಿರೋಧಿಗಳ ಒಳಿತಿಗಾಗಿಯೇ ಅವರು ಮಾಡಿದ ವಿರೋಧೋಕ್ತಿಗಳನ್ನು ಸಹಿಸಿಕೊಂಡನು.” (NW) (ಇಬ್ರಿ. 12:2, 3) ನಾವು ಸಹ ಅದನ್ನೇ ಮಾಡಬೇಕು. ರಾಜ್ಯದ ಸಂದೇಶವನ್ನು ಸಾರುವುದಕ್ಕಿರುವ ನಿಮ್ಮ ಸುಯೋಗವನ್ನು ಸದುಪಯೋಗಪಡಿಸಿಕೊಳ್ಳಲು ದೃಢನಿಶ್ಚಯಮಾಡಿರಿ. ಹೀಗೆ ಮಾಡುವ ಮೂಲಕ, ‘ನಿಮ್ಮನ್ನೂ ನಿಮ್ಮ ಉಪದೇಶ ಕೇಳುವವರನ್ನೂ ರಕ್ಷಿಸುವಿರಿ.’—1 ತಿಮೊ. 4:16.