ಗ್ರೀಕ್ ತತ್ವಜ್ಞಾನ—ಕ್ರೈಸ್ತತ್ವವನ್ನು ಉತ್ತಮಗೊಳಿಸಿತೋ?
“ಕ್ರೈಸ್ತತ್ವವು, ವಿಧರ್ಮಿ ಗ್ರೀಕ್ ಮತ್ತು ರೋಮನ್ ಸಂಸ್ಕೃತಿಗೆ ವಿರೋಧವನ್ನು ತೋರಿಸಿತಾದರೂ, ವಾಸ್ತವದಲ್ಲಿ, ಅದರ ಶಾಸ್ತ್ರೀಯ ತತ್ವಜ್ಞಾನವನ್ನು ಪೂರ್ಣವಾಗಿ ಸ್ವೀಕರಿಸಿತು.”—ದಿ ಎನ್ಸೈಕ್ಲೊಪೀಡಿಯ ಅಮೆರಿಕಾನಾ.
“ಕ್ರೈಸ್ತ” ಆಲೋಚನೆಯ ಮೇಲೆ ನಿರ್ಧಾರಕ ಪ್ರಭಾವವನ್ನು ಬೀರಿದವರಲ್ಲಿ “ಸಂತ” ಆಗಸ್ಟಿನ್ ಅವಿರೋಧ ಸ್ಥಾನವನ್ನು ಹೊಂದಿದ್ದಾನೆ. ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕದ ಪ್ರಕಾರ, “ಹೊಸ ಒಡಂಬಡಿಕೆಯ ಧರ್ಮವು ಗ್ರೀಕ್ ತತ್ವಜ್ಞಾನದ ಪ್ಲೇಟೋ ಸಂಬಂಧಿತ ಸಂಪ್ರದಾಯದೊಂದಿಗೆ ಹೆಚ್ಚು ಪೂರ್ತಿಯಾಗಿ ಬೆರೆಯುವಂತೆ ಮಾಡುವುದರಲ್ಲಿ” ಆಗಸ್ಟಿನನ “ಆಲೋಚನಾಸಾಮರ್ಥ್ಯವು ಅಗ್ನಿಪರೀಕ್ಷಾ ಪಾತ್ರೆಯಾಗಿತ್ತು; ಮತ್ತು ಈ ಕಲಬೆರಕೆಯ ಫಲಿತಾಂಶವು, ಮಧ್ಯಯುಗದಲ್ಲಿರುವ ಕ್ರೈಸ್ತಪ್ರಪಂಚದ ರೋಮನ್ ಕ್ಯಾಥೊಲಿಕ್ಮತ ಮತ್ತು ಪುನರುಜ್ಜೀವಿತ ಪ್ರಾಟೆಸ್ಟಂಟ್ ಧರ್ಮಗಳಿಗೆ ರವಾನಿಸಲು ಬಳಸಲಾದ ಮಾಧ್ಯಮವಾಗಿತ್ತು.”
ಆಗಸ್ಟಿನನ ಬಳುವಳಿಯು ನಿಜವಾಗಿಯೂ ಬಾಳುತ್ತಿದೆ. ಗ್ರೀಕ್ ತತ್ವಜ್ಞಾನವು ಕ್ರೈಸ್ತಪ್ರಪಂಚದ ಮೇಲೆ ಬೀರಿದ ಪ್ರಭಾವದ ವಿಸ್ತಾರತೆಯ ಕುರಿತು ಮಾತಾಡುತ್ತಾ ಡಗ್ಲಸ್ ಟಿ. ಹೋಲ್ಡನ್ ತಿಳಿಸಿದ್ದು: “ಕ್ರೈಸ್ತ ಸಿದ್ಧಾಂತವು ಗ್ರೀಕ್ ತತ್ವಜ್ಞಾನದೊಂದಿಗೆ ಎಷ್ಟು ಸಂಯೋಜನೆಗೊಂಡಿದೆ ಎಂದರೆ, ಅದು 90 ಪ್ರತಿಶತ ಗ್ರೀಕ್ ಆಲೋಚನೆಯನ್ನು ಮತ್ತು 10 ಪ್ರತಿಶತ ಕ್ರೈಸ್ತ ಆಲೋಚನೆಯನ್ನು ಹೊಂದಿರುವ ಜನರನ್ನು ಉತ್ಪಾದಿಸಿದೆ.”
ಇಂತಹ ತಾತ್ವಿಕ ಪ್ರಭಾವವು ಕ್ರೈಸ್ತತ್ವವನ್ನು ಶೈಶವದಿಂದಲೇ ಸುಧಾರಿಸಿತೆಂದು, ಅದರ ಬೋಧನೆಗಳನ್ನು ಉತ್ತಮಗೊಳಿಸಿತೆಂದು ಮತ್ತು ಅದನ್ನು ಹೆಚ್ಚು ದೃಢವಾದ ನಂಬಿಕೆಯಲ್ಲಿ ಬೆಳೆಸಿತೆಂದು ಕೆಲವು ವಿದ್ವಾಂಸರು ಬಲವಾಗಿ ನಂಬುತ್ತಾರೆ. ಇದು ನಿಜವಾಗಿತ್ತೊ? ಗ್ರೀಕ್ ತತ್ವಜ್ಞಾನದ ಪ್ರಭಾವವು ಹೇಗೆ ಮತ್ತು ಯಾವಾಗ ಉಂಟಾಯಿತು? ಇದು ವಾಸ್ತವದಲ್ಲಿ, ಕ್ರೈಸ್ತತ್ವವನ್ನು ಉತ್ತಮಗೊಳಿಸಿತೊ ಅಥವಾ ಕಲುಷಿತಗೊಳಿಸಿತೊ?
ಸಾ.ಶ.ಪೂ. ಮೂರನೇ ಶತಮಾನದಿಂದ ಹಿಡಿದು ಸಾ.ಶ. ಐದನೇ ಶತಮಾನದ ವರೆಗಿನ ಅನೇಕ ಬೆಳವಣಿಗೆಗಳ ಕುರಿತು ನಾಲ್ಕು ಅಸಾಮಾನ್ಯ ಪದಗುಚ್ಛಗಳನ್ನು ಪರೀಕ್ಷಿಸುವುದರ ಮೂಲಕ ಪತ್ತೆಹಚ್ಚುವುದು ಜ್ಞಾನೋದಯವನ್ನು ಉಂಟುಮಾಡುತ್ತದೆ: (1) “ಗ್ರೀಕೀಕರಿಸಲಾದ ಯೆಹೂದಿ ಧರ್ಮ,” (2) “ಕ್ರೈಸ್ತೀಕರಿಸಲಾದ ಗ್ರೀಕೀಕರಣ” (3) “ಗ್ರೀಕೀಕರಿಸಲಾದ ಕ್ರೈಸ್ತತ್ವ,” ಮತ್ತು (4) “ಕ್ರೈಸ್ತ ತತ್ವಜ್ಞಾನ.”
“ಗ್ರೀಕೀಕರಿಸಲಾದ ಯೆಹೂದಿ ಧರ್ಮ”
ಮೊದಲನೆಯ ಪದಗುಚ್ಛವಾದ, “ಗ್ರೀಕೀಕರಿಸಲಾದ ಯೆಹೂದಿ ಧರ್ಮ” ಎಂಬುದು ನಿಜವಾಗಿಯೂ ಒಂದು ವಿರೋಧೋಕ್ತಿಯಾಗಿದೆ. ಸತ್ಯ ದೇವರಾದ ಯೆಹೋವನಿಂದ ಆರಂಭಿಸಲಾದ ಇಬ್ರಿಯರ ಮೂಲ ಧರ್ಮವು, ಸುಳ್ಳು ಧಾರ್ಮಿಕ ವಿಚಾರಗಳಿಂದ ಕಲುಷಿತವಾಗಬಾರದಿತ್ತು. (ಧರ್ಮೋಪದೇಶಕಾಂಡ 12:32; ಜ್ಞಾನೋಕ್ತಿ 30:5, 6) ಆದಾಗ್ಯೂ, ಆರಂಭದಿಂದಲೂ ಆರಾಧನೆಯ ಶುದ್ಧತೆಯು, ಅದನ್ನು ಸುತ್ತುಗಟ್ಟಿದ್ದ ಐಗುಪ್ತ, ಕಾನಾನ್ಯ ಹಾಗೂ ಬಬಿಲೋನ್ಯದ ಸುಳ್ಳು ಧಾರ್ಮಿಕ ಪದ್ಧತಿಗಳಿಂದ ಹಾಗೂ ವಿಚಾರಗಳಿಂದ ಬೆದರಿಕೆಗೆ ಒಳಗಾಯಿತು. ದುಃಖಕರವಾಗಿ, ಇಸ್ರಾಯೇಲು ತನ್ನ ಶುದ್ಧ ಆರಾಧನೆಯು ತೀರ ಭ್ರಷ್ಟಗೊಳ್ಳುವಂತೆ ಅನುಮತಿಸಿತು.—ನ್ಯಾಯಸ್ಥಾಪಕರು 2:11-13.
ಶತಮಾನಗಳ ನಂತರ, ಸಾ.ಶ.ಪೂ. ನಾಲ್ಕನೇ ಶತಮಾನದಲ್ಲಿ ಮಹಾ ಅಲೆಕ್ಸಾಂಡರಿನ ಸ್ವಾಧೀನತೆಯಲ್ಲಿದ್ದ ಪ್ರಾಚೀನ ಪ್ಯಾಲೇಸ್ಟಿನ್, ಗ್ರೀಕ್ ಸಾಮ್ರಾಜ್ಯದ ಭಾಗವಾದಾಗ ಈ ಭ್ರಷ್ಟತೆಯು ಹಿಂದೆಂದಿಗೂ ಇರದ ತೀರ ಕೆಳಮಟ್ಟದ ಸ್ಥಿತಿಗೆ ಇಳಿಯಿತು ಮತ್ತು ಇದು ಚಿರಸ್ಥಾಯಿ ಮಾತ್ರವಲ್ಲ ನಾಶಕಾರಿ ಸ್ವತ್ತನ್ನು ಸಹ ಬಿಟ್ಟುಹೋಯಿತು. ಅಲೆಕ್ಸಾಂಡರನು ಯೆಹೂದ್ಯರನ್ನು ತನ್ನ ಸೈನ್ಯದಲ್ಲಿ ಭರ್ತಿಮಾಡಿಸಿದನು. ಯೆಹೂದ್ಯರ ಮತ್ತು ಅವರ ಹೊಸ ವಿಜೇತನ ಮಧ್ಯೆಯಿರುವ ಸಂಪರ್ಕಗಳು ಯೆಹೂದಿ ಧಾರ್ಮಿಕ ಆಲೋಚನೆಯನ್ನು ಆಳವಾಗಿ ಪ್ರಭಾವಿಸಿದವು. ಯೆಹೂದ್ಯರ ಶಿಕ್ಷಣದಲ್ಲಿ ಗ್ರೀಕೀಕರಿಸಲಾದ ವಿಚಾರಗಳನ್ನು ಕಲಿಸಲಾಯಿತು. ಮಹಾ ಯಾಜಕನಾದ ಜೇಸನ್, ಸಾ.ಶ.ಪೂ. 175ರಲ್ಲಿ ಹೋಮರ್ನ ಅಧ್ಯಯನವನ್ನು ಪ್ರವರ್ಧಿಸಲಿಕ್ಕಾಗಿ ಗ್ರೀಕ್ ಶಿಕ್ಷಣ ಕೇಂದ್ರವೊಂದನ್ನು ಯೆರೂಸಲೇಮಿನಲ್ಲಿ ಸ್ಥಾಪಿಸಿದನೆಂಬ ಪ್ರತೀತಿಯಿದೆ.
ಆಸಕ್ತಿಕರವಾದ ವಿಷಯವೇನಂದರೆ, ಸಾ.ಶ.ಪೂ. ಎರಡನೇ ಶತಮಾನದ ದ್ವಿತೀಯ ಭಾಗದಲ್ಲಿ ಸಮಾರ್ಯ ವ್ಯಕ್ತಿಯೊಬ್ಬನು ಬೈಬಲ್ ಇತಿಹಾಸವನ್ನು, ಗ್ರೀಕೀಕರಿಸಲಾದ ಇತಿಹಾಸವನ್ನಾಗಿ ಬರೆಯುವುದಕ್ಕೆ ಪ್ರಯತ್ನಿಸಿದನು. ಅವಿಶ್ವಾಸನೀಯ ಯೆಹೂದಿ ಪುಸ್ತಕಗಳಾದ ಜೂಡಿತ್ ಮತ್ತು ಟೋಬಿಟ್ ಎಂಬವುಗಳು ವಾಸ್ತವದಲ್ಲಿ ಗ್ರೀಕರ ಕಾಮಪ್ರಚೋದಕ ದಂತಕಥೆಗಳನ್ನು ಪರೋಕ್ಷವಾಗಿ ಸೂಚಿಸುತ್ತವೆ. ಗ್ರೀಕ್ ವಿಚಾರವನ್ನು, ಯೆಹೂದಿ ಧರ್ಮ ಮತ್ತು ಬೈಬಲಿನೊಂದಿಗೆ ಸರಿಹೊಂದಿಸಲು ಪ್ರಯತ್ನಿಸಿದ ಅನೇಕ ಯೆಹೂದಿ ತತ್ವಜ್ಞಾನಿಗಳು ಕಂಡುಬಂದರು.
ಇದಕ್ಕೆ ಹೆಚ್ಚಿನ ಪ್ರಶಸ್ತಿಯನ್ನು ಪಡೆದವನು, ಸಾ.ಶ. ಪ್ರಥಮ ಶತಮಾನದ ಯೆಹೂದಿಯಾಗಿದ್ದ ಫೈಲೋ ಎಂಬ ಒಬ್ಬ ತತ್ವಜ್ಞಾನಿಯೇ. ಇವನು ಪ್ಲೇಟೋವಿನ (ಸಾ.ಶ.ಪೂ. ನಾಲ್ಕನೇ ಶತಮಾನ), ಪೈಥಾಗೊರೀಯನರ ಮತ್ತು ಸ್ಟೋಯಿಕರ ಸಿದ್ಧಾಂತಗಳನ್ನು ಯಾವುದೇ ಅಧಿಕಾರವಿಲ್ಲದೆ ಉಪಯೋಗಿಸಿಕೊಂಡನು. ಯೆಹೂದ್ಯರು ಫೈಲೋವಿನ ವಿಚಾರಗಳಿಂದ ಆಳವಾಗಿ ಪ್ರಭಾವಿತರಾದರು. ಗ್ರೀಕ್ ವಿಚಾರವನ್ನು ಯೆಹೂದಿ ಸಂಸ್ಕೃತಿಯೊಂದಿಗೆ ಸಂಯೋಜಿಸುವ ಈ ಬೌದ್ಧಿಕ ರಹಸ್ಯಾಕ್ರಮಣವನ್ನು ಸಾರಾಂಶಿಸುತ್ತಾ, ಯೆಹೂದಿ ಲೇಖಕನಾದ ಮ್ಯಾಕ್ಸ್ಡಿಮಂಟ್ ಹೇಳುವುದು: “ಪ್ಲೇಟೋವಿನ ವಿಚಾರದಿಂದ, ಅರಿಸ್ಟಾಟಲಿನ ತರ್ಕವಿಚಾರದಿಂದ ಮತ್ತು ಯೂಕ್ಲಿಡಿನ ವಿಜ್ಞಾನದಿಂದ ಉತ್ತಮಗೊಳಿಸಲಾದ ಟೋರಾವನ್ನು ಯೆಹೂದಿ ವಿದ್ವಾಂಸರು ಹೊಸ ವಿಚಾರಧಾರೆಯಿಂದ ಸಮೀಪಿಸಿದರು. . . . ಇವರು ಯೆಹೂದಿ ದಿವ್ಯಜ್ಞಾನಗಳಿಗೆ ಗ್ರೀಕ್ ತರ್ಕದ ಅರ್ಥವನ್ನು ಕೂಡಿಸತೊಡಗಿದರು.”
ಸಮಯಾನಂತರ, ರೋಮನರು ಗ್ರೀಕ್ ಸಾಮ್ರಾಜ್ಯವನ್ನು ಕಬಳಿಸಿ ಯೆರೂಸಲೇಮನ್ನು ಸ್ವಾಧೀನಪಡಿಸಿಕೊಂಡರು. ಇದು ಇನ್ನೂ ಅನೇಕ ಮಹತ್ವದ ಬದಲಾವಣೆಗಳಿಗೆ ದಾರಿಮಾಡಿಕೊಟ್ಟಿತು. ಸಾ.ಶ. ಮೂರನೇ ಶತಮಾನದೊಳಗೆ, ಪ್ಲೇಟೋವಿನ ವಿಚಾರಗಳನ್ನು ಬೆಳೆಸಲು ಮತ್ತು ಏಕೀಕರಿಸಲು ಪ್ರಯತ್ನಿಸಿದ ಚಿಂತಕರ ತಾತ್ವಿಕ ಮತ್ತು ಧಾರ್ಮಿಕ ಬೋಧನೆಗಳು ನಿಯೋಪ್ಲೇಟೋನಿಸಮ್ ಎಂದು ಈಗ ಕರೆಯಲ್ಪಡುವ ನಿರ್ಣಯಾತ್ಮಕ ಸ್ವರೂಪವನ್ನು ಪಡೆದವು. ಈ ವಿಚಾರಧಾರೆಯು ಧರ್ಮಭ್ರಷ್ಟ ಕ್ರೈಸ್ತತ್ವದ ಮೇಲೆ ಆಳವಾದ ಪ್ರಭಾವವನ್ನು ಬೀರುವುದು ನಿಶ್ಚಯವಾಗಿತ್ತು.
“ಕ್ರೈಸ್ತೀಕರಿಸಲಾದ ಗ್ರೀಕೀಕರಣ”
ನಮ್ಮ ಸಾಮಾನ್ಯ ಶಕದ ಮೊದಲ ಐದು ಶತಮಾನಗಳ ಸಮಯಾವಧಿಯಲ್ಲಿ, ಕೆಲವು ಬುದ್ಧಿಜೀವಿಗಳು ಗ್ರೀಕ್ ತತ್ವಜ್ಞಾನ ಮತ್ತು ಬೈಬಲಿನ ಪ್ರಕಟಿತ ಸತ್ಯದ ಮಧ್ಯೆ ಸಂಬಂಧವೊಂದನ್ನು ಕಲ್ಪಿಸುವ ಪ್ರಯತ್ನವನ್ನು ಮಾಡಿದರು. ಎ ಹಿಸ್ಟರಿ ಆಫ್ ಕ್ರಿಶ್ಚಿಯಾನಿಟಿ ಪುಸ್ತಕವು ತಿಳಿಸುವುದು: “ಕ್ರೈಸ್ತ ಭೌತಾತೀತ ಶಾಸ್ತ್ರಜ್ಞರು ಕ್ರಿಸ್ತನಿಗಿಂತ ಪೂರ್ವದ ದಶಕಗಳಲ್ಲಿ ಗ್ರೀಕರನ್ನು, ಅವರು ದೇವರ ಜ್ಞಾನವನ್ನು ಪಡೆಯಲು ಪೌರುಷದಿಂದ, ಆದರೆ ಕುರುಡಾಗಿ ಹೋರಾಡಿದವರಂತೆಯೂ ಕ್ರೈಸ್ತತ್ವವನ್ನು ತಮ್ಮ ಶೂನ್ಯ ಯೋಚನೆಗಳಿಂದ ಕಂಡುಹಿಡಿಯಲಿಕ್ಕಾಗಿ, ಸಾಂಕೇತಿಕವಾಗಿ ಹೇಳುವುದಾದರೆ, ಒಬ್ಬ ಮಂತ್ರವಾದಿಯು ಅಥೇನ್ಯ ತಾತ್ವಿಕಗಾಳಿಯಿಂದ ಯೇಸುವನ್ನು ಹೊರದೆಗೆಯಲು ಪ್ರಯತ್ನಿಸುತ್ತಿರುವಂತೆಯೂ ಚಿತ್ರಿಸಿದರು.”
ಇಂತಹ ವಿಚಾರವಂತರಲ್ಲಿ ಪೂರ್ವಗಾಮಿಯಾಗಿದ್ದ ಪ್ಲೋಟೈನಸನು (ಸಾ.ಶ. 205—270), ಮುಖ್ಯವಾಗಿ ಪ್ಲೇಟೋವಿನ ವಿಚಾರಧಾರೆಯನ್ನು ಆಧಾರಿಸಿದ ಒಂದು ಪದ್ಧತಿಯನ್ನು ವಿಕಾಸಗೊಳಿಸಿದನು. ಪ್ಲೋಟೈನಸನು ದೇಹದಿಂದ ಪ್ರತ್ಯೇಕವಾಗಿರುವ ಅಮರ ಆತ್ಮದ ಕಲ್ಪನೆಯನ್ನು ಪ್ರಾರಂಭಿಸಿದನು. ಪ್ರೊಫೆಸರ್ ಈ. ಡಬ್ಲ್ಯೂ. ಹಾಪ್ಕಿನ್ಸ್ ಪ್ಲೋಟೈನಸನ ಬಗ್ಗೆ ಹೇಳಿದ್ದು: “ಅವನ ದೇವತಾಶಾಸ್ತ್ರವು . . . ಕ್ರೈಸ್ತ ವಿಚಾರಧಾರೆಯುಳ್ಳ ಮುಖಂಡರ ಮೇಲೆ ಗಣನೀಯ ಪ್ರಭಾವವನ್ನು ಬೀರಿತು.”
“ಗ್ರೀಕೀಕರಿಸಲಾದ ಕ್ರೈಸ್ತತ್ವ” ಮತ್ತು “ಕ್ರೈಸ್ತ ತತ್ವಜ್ಞಾನ”
ಸಾ.ಶ. ಎರಡನೇ ಶತಮಾನದ ಪ್ರಾರಂಭದಿಂದ, “ಕ್ರೈಸ್ತ” ಚಿಂತಕರು ವಿಧರ್ಮಿ ಬುದ್ಧಿಜೀವಿಗಳ ಮೇಲೆ ಪ್ರಭಾವವನ್ನು ಬೀರಲು ದೃಢಸಂಕಲ್ಪದಿಂದ ಪ್ರಯತ್ನಿಸಿದರು. ‘ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಹರಟೆಮಾತುಗಳಿಗೂ ವಿವಾದಗಳಿಗೂ’ ದೂರವಿರಬೇಕೆನ್ನುವ ಅಪೊಸ್ತಲ ಪೌಲನ ಸ್ಪಷ್ಟ ಎಚ್ಚರಿಕೆಯ ನಡುವೆಯೂ, ಇಂತಹ ಬೋಧಕರು ಸುತ್ತುಮುತ್ತಲಿದ್ದ ಗ್ರೀಕೀಕರಿಸಲಾದ ಸಂಸ್ಕೃತಿಯ ತಾತ್ವಿಕ ಅಂಶಗಳೊಂದಿಗೆ ತಮ್ಮ ಬೋಧನೆಗಳನ್ನು ಬೆರೆಸಿದರು. (1 ತಿಮೊಥೆಯ 6:20) ಫೈಲೋವಿನ ಉದಾಹರಣೆಯು, ಬೈಬಲನ್ನು ಪ್ಲೇಟೋವಿನ ವಿಚಾರಗಳೊಂದಿಗೆ ಸ್ಥಿರಗೊಳಿಸುವ ಸಾಧ್ಯತೆಯನ್ನು ಸೂಚಿಸುವಂತಿತ್ತು.—2 ಪೇತ್ರ 1:16ನ್ನು ಹೋಲಿಸಿರಿ.
ವಾಸ್ತವದಲ್ಲಿ, ಬೈಬಲಿನ ಸತ್ಯವು ಇದರ ನಿಜಬಲಿಯಾಯಿತು. ಕ್ರೈಸ್ತತ್ವವು ಗ್ರೀಕ್ ಮತ್ತು ರೋಮನ್ ಮಾನವಧರ್ಮಕ್ಕೆ ಹೊಂದಿಕೆಯಲ್ಲಿದೆಯೆಂದು “ಕ್ರೈಸ್ತ” ಬೋಧಕರು ತೋರಿಸಲು ಪ್ರಯತ್ನಿಸಿದರು. ಅಲೆಕ್ಸಾಂಡ್ರಿಯದ ಕ್ಲೆಮೆಂಟ್ ಮತ್ತು ಆರಿಜೆನ್ (ಸಾ.ಶ. ಎರಡನೇ ಮತ್ತು ಮೂರನೇ ಶತಮಾನಗಳಲ್ಲಿ), ನವೀನ ಪ್ಲೇಟೋತತ್ವವನ್ನು “ಕ್ರೈಸ್ತ ತತ್ವಜ್ಞಾನ”ವೆಂದು ಕರೆಯಲ್ಪಟ್ಟ ವಿಷಯದ ತಳಪಾಯವನ್ನಾಗಿ ಮಾಡಿದರು. ಮಿಲನಿನ ಬಿಷಪನಾಗಿದ್ದ ಆ್ಯಂಬ್ರೋಸ್ (ಸಾ.ಶ. 339—397), “ಕ್ರೈಸ್ತ ಧರ್ಮ ಮತ್ತು ವಿಧರ್ಮದ ಕುರಿತ ಅತಿ ನವೀನ ಗ್ರೀಕ್ ಪಾಂಡಿತ್ಯವನ್ನು—ವಿಶೇಷವಾಗಿ, ವಿಧರ್ಮಿಯಾಗಿದ್ದ ನವೀನ ಪ್ಲೇಟೋ ತಾತ್ವಿಕಜ್ಞಾನದ ಪ್ಲೋಟೈನಸನ ಕೃತಿಗಳನ್ನು . . . ತನ್ನದಾಗಿ ಮಾಡಿಕೊಂಡನು.” ಅವನು ಶಿಕ್ಷಿತ ರೋಮನರಿಗೆ ಕ್ರೈಸ್ತತ್ವದ ಸಾಂಪ್ರದಾಯಿಕ ಭಾಷಾಂತರವನ್ನು ಒದಗಿಸಲು ಪ್ರಯತ್ನಿಸಿದನು. ಆಗಸ್ಟಿನನು ಅವನ ಉದಾಹರಣೆಯನ್ನು ಅನುಕರಿಸಿದನು.
ಒಂದು ಶತಮಾನದ ನಂತರ, ಪ್ರಾಯಶಃ ಸಿರಿಯದ ಒಬ್ಬ ಸನ್ಯಾಸಿಯಾಗಿದ್ದ ಅರಿಯೋಪಾಗದ ಡಯನಿಶೀಯಸನು [ಕಪಟ ವ್ಯಕ್ತಿಯಾದ ಡಯನಿಶೀಯಸನು ಎಂದು ಸಹ ಕರೆಯಲ್ಪಟ್ಟಿದ್ದನು] ನವೀನ ಪ್ಲೇಟೋ ತತ್ವಜ್ಞಾನವನ್ನು “ಕ್ರೈಸ್ತ” ದೇವತಾಶಾಸ್ತ್ರದೊಂದಿಗೆ ಐಕ್ಯಗೊಳಿಸಲು ಪ್ರಯತ್ನಿಸಿದನು. ಒಂದು ಎನ್ಸೈಕ್ಲೊಪೀಡಿಯದ ಪ್ರಕಾರ, ಅವನ “ಬರವಣಿಗೆಗಳು ಮಧ್ಯಯುಗದ ಕ್ರೈಸ್ತ ಸಿದ್ಧಾಂತ ಹಾಗೂ ಆತ್ಮಿಕತೆಯ ದೊಡ್ಡ ಭಾಗದ ಮೇಲೆ ನಿಶ್ಚಿತವಾದ ಪ್ರಭಾವವನ್ನು ಬೀರಿ, ನವೀನ ಪ್ಲೇಟೋ ತತ್ವಜ್ಞಾನದ ಕಡೆಗೆ ಒಲವನ್ನು ಸ್ಥಾಪಿಸಿತು . . . ಮತ್ತು ಅವರ ಧಾರ್ಮಿಕ ಹಾಗೂ ಪೂಜಾ ವಿಧಾನಗಳು ಈ ದಿನಗಳ ವರೆಗೂ ಇವೆ.” ‘ಮನುಷ್ಯರ ಸಂಪ್ರದಾಯಗಳ ಅನುಸಾರವಾಗಿರುವ . . . ಮೋಸವಾದ ನಿರರ್ಥಕ ತತ್ವಜ್ಞಾನಬೋಧನೆ’ಯ ವಿರುದ್ಧ ಅಪೊಸ್ತಲ ಪೌಲನು ನೀಡಿದ ಎಚ್ಚರಿಕೆಗೆ ಇದು ಎಂತಹ ಅಪಮಾನಕರವಾದ ತಿರಸ್ಕಾರ!—ಕೊಲೊಸ್ಸೆ 2:8.
ಭ್ರಷ್ಟಗೊಳಿಸುವ ಮಲಿನ ವಸ್ತುಗಳು
“ಕ್ರೈಸ್ತ ಪ್ಲೇಟೊ ಅನುಯಾಯಿಗಳು ದೇವರಿಂದ ಮಾನವನಿಗೆ ನೀಡಲಾದ ಪ್ರಕಟನೆಗಳಿಗೆ ಅಗ್ರಸ್ಥಾನವನ್ನು ಕೊಟ್ಟರು. ಅಷ್ಟುಮಾತ್ರವಲ್ಲದೆ, ಪ್ಲೇಟೋತತ್ವಜ್ಞಾನವು, ಶಾಸ್ತ್ರವಚನಗಳನ್ನು ಮತ್ತು ಚರ್ಚಿನ ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಹಾಗೂ ಸಮರ್ಥಿಸುವುದರಲ್ಲಿ ಲಭ್ಯವಿರುವುದರಲ್ಲೇ ಅತ್ಯಂತ ಉತ್ತಮವಾದ ಸಾಧನವಾಗಿ ಪರಿಗಣಿಸಲಾಗಿ”ತ್ತೆಂದು ಹೇಳಲಾಗಿದೆ.
ಅಮರ ಆತ್ಮವೊಂದಿದೆ ಎಂಬುದು ಪ್ಲೇಟೋವಿಗೆ ಸ್ವತಃ ಮನದಟ್ಟಾಗಿತ್ತು. ಪ್ರಾಮುಖ್ಯವಾಗಿ, “ಕ್ರೈಸ್ತ” ದೇವತಾಶಾಸ್ತ್ರದೊಳಗೆ ನುಸುಳಿದ ಅತಿ ಹೆಚ್ಚು ಪ್ರಖ್ಯಾತವಾದ ಸುಳ್ಳು ಬೋಧನೆಗಳಲ್ಲೊಂದು ಆತ್ಮದ ಅಮರತ್ವವಾಗಿದೆ. ಈ ಬೋಧನೆಯನ್ನು ಸ್ವೀಕರಿಸುವುದರಿಂದ ಕ್ರೈಸ್ತತ್ವವು ಜನತೆಗೆ ಹೆಚ್ಚು ಚಿತ್ತಾಕರ್ಷಕವಾಗಿ ಅನೇಕ ಅನುಯಾಯಿಗಳನ್ನು ಪಡೆಯಿತು ಎಂಬ ವಾದಸರಣಿಯನ್ನು ಸಮರ್ಥಿಸಲು ಆಗುವುದಿಲ್ಲ. ಗ್ರೀಕ್ ಸಂಸ್ಕೃತಿಯ ಕೇಂದ್ರವಾಗಿದ್ದ ಅಥೇನೆಯಲ್ಲಿ ಸಾರುತ್ತಿದ್ದಾಗ, ಆತ್ಮದ ಕುರಿತ ಪ್ಲೇಟೋವಿನ ಸಿದ್ಧಾಂತವನ್ನು ಅಪೊಸ್ತಲ ಪೌಲನು ಕಲಿಸಲಿಲ್ಲ. ಅದರ ಬದಲು, ಯಾವುದು ಅನೇಕ ಗ್ರೀಕ್ ಕೇಳುಗರಿಗೆ ಸ್ವೀಕರಿಸಲು ಕಷ್ಟಕರವಾಗಿತ್ತೋ ಆ ಪುನರುತ್ಥಾನದ ಕ್ರೈಸ್ತ ಬೋಧನೆಯನ್ನು ಅವನು ಸಾರಿದನು.—ಅ. ಕೃತ್ಯಗಳು 17:22-32.
ಗ್ರೀಕ್ ತತ್ವಜ್ಞಾನಕ್ಕೆ ತದ್ವಿರುದ್ಧವಾಗಿ, ಒಬ್ಬ ವ್ಯಕ್ತಿಯ ದೇಹದ ಒಳಗೆ ಒಂದು ಆತ್ಮವು ಇರುವುದಿಲ್ಲ, ಬದಲಾಗಿ ಸ್ವತಃ ಅವನೇ ಆತ್ಮವಾಗಿದ್ದಾನೆಂದು ಶಾಸ್ತ್ರವಚನಗಳು ಸ್ಪಷ್ಟವಾಗಿ ತೋರಿಸುತ್ತವೆ. (ಆದಿಕಾಂಡ 2:7) ಮರಣದಲ್ಲಿ ಆತ್ಮವು [ಸ್ವತಃ ವ್ಯಕ್ತಿಯು] ಅಸ್ತಿತ್ವದಲ್ಲಿಲ್ಲದೆ ಹೋಗುತ್ತದೆ. (ಯೆಹೆಜ್ಕೇಲ 18:4) ಪ್ರಸಂಗಿ 9:5 ನಮಗೆ ಹೇಳುವುದು: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ.” ಬೈಬಲು ಅಮರ ಆತ್ಮದ ಸಿದ್ಧಾಂತವನ್ನು ಕಲಿಸುವುದಿಲ್ಲ.
ಇನ್ನೊಂದು ಮೋಸಕರವಾದ ಬೋಧನೆಯು ಯೇಸುವಿನ ಮಾನವಪೂರ್ವ ಸ್ಥಾನದ ಅಂದರೆ, ಅವನು ತನ್ನ ತಂದೆಗೆ ಸಮಾನನಾಗಿದ್ದನೆಂಬ ಅಭಿಪ್ರಾಯದ ಕುರಿತಾಗಿದೆ. ದ ಚರ್ಚ್ ಆಫ್ ದ ಫರ್ಸ್ಟ್ ತ್ರೀ ಸೆಂಚುರಿಸ್ ಎಂಬ ಪುಸ್ತಕವು ವಿವರಿಸುವುದು: “ತ್ರಯೈಕ್ಯ ಸಿದ್ಧಾಂತವು, . . . ಯೆಹೂದಿ ಮತ್ತು ಕ್ರೈಸ್ತ ಶಾಸ್ತ್ರವಚನಗಳಿಂದ ಪೂರ್ಣವಾಗಿ ಭಿನ್ನವಾಗಿರುವ ಮೂಲದಿಂದ ತನ್ನ ಆರಂಭವನ್ನು ಪಡೆಯಿತು.” ಆ ಮೂಲವು ಯಾವುದಾಗಿತ್ತು? ಆ ಸಿದ್ಧಾಂತವು “ವಿಕಾಸಗೊಂಡಿತು, ಮತ್ತು ಪ್ಲೇಟೋವಿನ ವಿಚಾರಗಳನ್ನು ಒಳತರುತ್ತಿದ್ದ ಚರ್ಚ್ ಪ್ರಮುಖರ ಕೈಯಿಂದ ಕ್ರೈಸ್ತತ್ವದೊಳಗೆ ಸಂಯೋಜಿಸಲ್ಪಟ್ಟಿತ್ತು.”
ನಿಜ, ಸಮಯವು ಗತಿಸಿದಂತೆ ಮತ್ತು ಚರ್ಚ್ ಮುಖಂಡರು ನವೀನ ಪ್ಲೇಟೋ ತತ್ವಗಳಿಂದ ಹೆಚ್ಚೆಚ್ಚು ಪ್ರಭಾವಿಸಲ್ಪಟ್ಟಂತೆ, ತ್ರಯೈಕ್ಯವಾದಿಗಳು ಅದರ ಪ್ರಯೋಜನವನ್ನು ಪಡೆದುಕೊಂಡರು. ಮೂರನೇ ಶತಮಾನದ ನವೀನ ಪ್ಲೇಟೋ ತತ್ವಜ್ಞಾನವು, ಅವರು ಹೊಂದಿಸಿಕೊಳ್ಳಸಾಧ್ಯವಿಲ್ಲದ್ದನ್ನು ಹೊಂದಿಸಿಕೊಳ್ಳುವಂತೆ ತೋರಿಸಿಕೊಡಲಿಕ್ಕಾಗಿ, ಮುಮ್ಮಡಿಯಾದ ದೇವರನ್ನು ಒಬ್ಬ ದೇವರಾಗಿ ಮಾಡಿತು. ಇವರು ತಾತ್ವಿಕ ತರ್ಕದ ಮೂಲಕ, ಮೂವರು ವ್ಯಕ್ತಿಗಳು ಪ್ರತ್ಯೇಕ ವ್ಯಕ್ತಿತ್ವವನ್ನು ಹೊಂದಿರುತ್ತಿರುವಾಗಲೂ ಒಬ್ಬ ದೇವರಾಗಸಾಧ್ಯವಿದೆಯೆಂದು ವಾದಿಸಿದರು!
ಆದಾಗ್ಯೂ, ಯೆಹೋವನು ಒಬ್ಬನೇ ಸರ್ವಶಕ್ತ ದೇವರೆಂದು, ಯೇಸು ಕ್ರಿಸ್ತನು ದೇವರಿಗಿಂತಲೂ ಕೆಳಸ್ಥಾನದಲ್ಲಿರುವ ಸೃಷ್ಟಿಸಲ್ಪಟ್ಟ ಪುತ್ರನೆಂದು ಮತ್ತು ಪವಿತ್ರಾತ್ಮವು ಆತನ ಕ್ರಿಯಾಶೀಲ ಶಕ್ತಿಯಾಗಿದೆಯೆಂದು ಬೈಬಲಿನ ಸತ್ಯವು ಸ್ಪಷ್ಟವಾಗಿ ತೋರಿಸುತ್ತದೆ. (ಧರ್ಮೋಪದೇಶಕಾಂಡ 6:4; ಯೆಶಾಯ 45:5; ಅ. ಕೃತ್ಯಗಳು 2:4; ಕೊಲೊಸ್ಸೆ 1:15; ಪ್ರಕಟನೆ 3:14) ತ್ರಯೈಕ್ಯ ಸಿದ್ಧಾಂತವು, ಒಬ್ಬನೇ ಸತ್ಯ ದೇವರನ್ನು ಅಗೌರವಿಸುತ್ತದೆ ಮತ್ತು ಜನರನ್ನು ಗಲಿಬಿಲಿಗೊಳಿಸುತ್ತದೆ. ಹೀಗೆ, ತಮ್ಮ ಗ್ರಹಿಕೆಗೆ ನಿಲುಕದ ಒಬ್ಬ ದೇವರಿಂದ ಅವರನ್ನು ದೂರಸರಿಸುತ್ತದೆ.
ಕ್ರೈಸ್ತ ವಿಚಾರಗಳ ಮೇಲೆ ನವೀನ ಪ್ಲೇಟೋ ತಾತ್ವಿಕ ಪ್ರಭಾವಕ್ಕೆ ಬಲಿಬಿದ್ದ ಇನ್ನೊಂದು ಅಂಶವು, ಶಾಸ್ತ್ರಾಧಾರಿತವಾದ ಸಹಸ್ರವರ್ಷದಾಳ್ವಿಕೆಯ ನಿರೀಕ್ಷೆಯಾಗಿದೆ. (ಪ್ರಕಟನೆ 20:4-6) ಆರಿಜೆನ್ ಸಹಸ್ರವರ್ಷವಾದಿಗಳ ಕುರಿತು ಮಾಡಿದ ಖಂಡನೆಗಾಗಿ ಪ್ರಸಿದ್ಧನಾಗಿದ್ದನು. ಕ್ರಿಸ್ತನ ಒಂದು ಸಾವಿರ ವರ್ಷದಾಳ್ವಿಕೆಯ ಕುರಿತಾದ ಈ ಸುಪ್ರಸಿದ್ಧ ಬೈಬಲಿನ ಬೋಧನೆಯನ್ನು ಅವನು ಯಾಕೆ ಅಷ್ಟು ವಿರೋಧಿಸಿದನು? ದ ಕ್ಯಾಥೋಲಿಕ್ ಎನ್ಸೈಕ್ಲೊಪೀಡಿಯ ಉತ್ತರಿಸುವುದು: “ಅವನು ತನ್ನ ಬೋಧನೆಗಳನ್ನು ನವೀನ ಪ್ಲೇಟೋ ತತ್ವದ ಮೇಲೆ ಆಧಾರಿಸಿದ್ದ ಕಾರಣ . . . [ಆರಿಜೆನ್] ಸಹಸ್ರವರ್ಷವಾದಿಗಳ ಪಕ್ಷವನ್ನು ವಹಿಸುತ್ತಿರಲಿಲ್ಲ.”
ಸತ್ಯ
ಈ ಮೇಲೆ ತಿಳಿಸಲಾದ ಯಾವುದೇ ವಿಕಸನಗಳಿಗೆ ಸತ್ಯದೊಂದಿಗೆ ಸಂಬಂಧವಿರಲಿಲ್ಲ. ಬೈಬಲಿನಲ್ಲಿ ಕಂಡುಬರುವ ಕ್ರೈಸ್ತ ಬೋಧನೆಗಳ ಸಂಪೂರ್ಣ ಸಂಗ್ರಹವು ಸತ್ಯವಾಗಿರುತ್ತದೆ. (2 ಕೊರಿಂಥ 4:2; ತೀತ 1:1, 14; 2 ಯೋಹಾನ 1-4) ಬೈಬಲು ಮಾತ್ರವೇ ಸತ್ಯದ ಏಕೈಕ ಮೂಲವಾಗಿರುತ್ತದೆ.—ಯೋಹಾನ 17:17; 2 ತಿಮೊಥೆಯ 3:16.
ಆದಾಗ್ಯೂ ಯೆಹೋವನ, ಸತ್ಯದ, ಮಾನವಕುಲದ ಮತ್ತು ನಿತ್ಯಜೀವದ ಶತ್ರುವಾದ, “ಕೊಲೆಗಾರನು” ಮತ್ತು “ಸುಳ್ಳಿಗೆ ಮೂಲಪುರುಷನು” ಆಗಿರುವ ಪಿಶಾಚನಾದ ಸೈತಾನನು, ಆ ಸತ್ಯವನ್ನು ಕಲಬೆರಕೆಮಾಡಲು ವಿಧ ವಿಧವಾದ ಕಪಟ ಮಾರ್ಗಗಳನ್ನು ಉಪಯೋಗಿಸಿದ್ದಾನೆ. (ಯೋಹಾನ 8:44; 2 ಕೊರಿಂಥ 11:3ನ್ನು ಹೋಲಿಸಿರಿ.) ಅವನು ಉಪಯೋಗಿಸಿರುವ ಅತಿ ಪ್ರಬಲವಾದ ಸಾಧನಗಳೆಂದರೆ ವಿಧರ್ಮಿ ಗ್ರೀಕ್ ತತ್ವಜ್ಞಾನಿಗಳ ಬೋಧನೆಗಳಾಗಿವೆ. ಕ್ರೈಸ್ತ ಬೋಧನೆಗಳ ಸ್ವರೂಪವನ್ನು ಮತ್ತು ತಾತ್ಪರ್ಯವನ್ನು ಬದಲಾಯಿಸುವ ಪ್ರಯತ್ನದಲ್ಲಿ ಇವು ಅವನ ಸ್ವಂತ ಆಲೋಚನೆಯನ್ನು ಪ್ರತಿಬಿಂಬಿಸುತ್ತವೆ.
ಕ್ರೈಸ್ತ ಬೋಧನೆಗಳನ್ನು ಗ್ರೀಕ್ ತತ್ವಜ್ಞಾನದೊಂದಿಗೆ ಅಸ್ವಾಭಾವಿಕವಾಗಿ ಮಿಶ್ರಣಗೊಳಿಸುವುದು, ಬೈಬಲ್ ಸತ್ಯವನ್ನು ಕೆಡಿಸುವ ಹಾಗೂ ದೀನರು, ಯಥಾರ್ಥರು ಮತ್ತು ಕಲಿಯಲು ಇಚ್ಛಿಸುವ ಸತ್ಯಾನ್ವೇಷಕರಿಗೆ ಆಕರ್ಷಣೀಯವನ್ನಾಗಿ ಮಾಡುವ ಸತ್ಯದ ಶಕ್ತಿಯನ್ನು ಕುಂದಿಸುವ ಪ್ರಯತ್ನವಾಗಿದೆ. (1 ಕೊರಿಂಥ 3:1, 2, 19, 20) ಇದು ಸ್ಫಟಿಕದಂತೆ ನಿರ್ಮಲವಾಗಿರುವ ಬೈಬಲಿನ ಬೋಧನೆಯ ಶುದ್ಧತೆಯನ್ನು ಕಲುಷಿತಗೊಳಿಸಿ, ಸತ್ಯ ಮತ್ತು ಸುಳ್ಳಿನ ನಡುವಿನ ರೇಖೆಯನ್ನು ಸಹ ಮಬ್ಬಾಗಿಸುತ್ತದೆ.
ಇಂದು, ಕ್ರೈಸ್ತ ಸಭೆಯ ತಲೆಯಾಗಿರುವ ಯೇಸು ಕ್ರಿಸ್ತನ ಮಾರ್ಗದರ್ಶನೆಯ ಕೆಳಗೆ ನಿಜ ಕ್ರೈಸ್ತ ಬೋಧನೆಯು ಪುನಸ್ಥಾಪಿಸಲ್ಪಟ್ಟಿದೆ. ಅಲ್ಲದೆ, ಸತ್ಯದ ಯಥಾರ್ಥ ಅನ್ವೇಷಕರು ನಿಜ ಕ್ರೈಸ್ತ ಸಭೆಯನ್ನು ಅದರ ಫಲಗಳಿಂದ ಬಹಳ ಸುಲಭವಾಗಿ ಗುರುತಿಸಸಾಧ್ಯವಿದೆ. (ಮತ್ತಾಯ 7:16, 20) ಇಂಥವರಿಗೆ ಸತ್ಯದ ಶುದ್ಧ ನೀರನ್ನು ಕಂಡುಕೊಳ್ಳಲು ಮತ್ತು ನಮ್ಮ ತಂದೆಯಾದ ಯೆಹೋವನು ನೀಡಿರುವ ನಿತ್ಯಜೀವದ ಸ್ವಾಸ್ಥ್ಯದ ಮೇಲೆ ದೃಢ ಹಿಡಿತವನ್ನು ಸಾಧಿಸುವಂತೆ ಸಹಾಯಮಾಡಲು, ಯೆಹೋವನ ಸಾಕ್ಷಿಗಳು ಸಿದ್ಧಮನಸ್ಕರು ಮತ್ತು ಉತ್ಸುಕರು ಆಗಿದ್ದಾರೆ.—ಯೋಹಾನ 4:14; 1 ತಿಮೊಥೆಯ 6:19.
[ಪುಟ 11 ರಲ್ಲಿರುವ ಚಿತ್ರ]
ಆಗಸ್ಟಿನ್
[ಪುಟ 10 ರಲ್ಲಿರುವ ಚಿತ್ರ ಕೃಪೆ]
ಗ್ರೀಕ್ ಮೂಲಪಾಠ: From the book Ancient Greek Writers: Plato’s Phaedo, 1957, Ioannis N. Zacharopoulos, Athens; ಪ್ಲೇಟೋ: Musei Capitolini, Roma