“ಸ್ವರ್ಗಧಾನ್ಯ”ದಿಂದ ಪ್ರಯೋಜನ ಪಡೆದುಕೊಳ್ಳುವುದು
ಐಗುಪ್ತದಿಂದ ಅದ್ಭುತಕರವಾದ ರೀತಿಯಲ್ಲಿ ಬಿಡುಗಡೆಯಾದ ಸ್ವಲ್ಪ ಸಮಯದೊಳಗೆ, ಇಸ್ರಾಯೇಲ್ಯರು ತಮ್ಮ ವಿಮೋಚಕನಾದ ಯೆಹೋವನಲ್ಲಿ ನಂಬಿಕೆಯ ಕೊರತೆಯನ್ನು ತೋರಿಸಿದರು. ಫಲಿತಾಂಶವಾಗಿ, ಅವರು ಸೀನಾಯಿ ಅರಣ್ಯದಲ್ಲಿ 40 ವರ್ಷಗಳ ವರೆಗೆ ಅಲೆದಾಡುವಂತೆ ಯೆಹೋವನು ಮಾಡಿದನು. ಆ ಸಮಯದಲ್ಲೆಲ್ಲ, ಇಸ್ರಾಯೇಲ್ಯರು ಮತ್ತು ಅವರನ್ನು ಜೊತೆಗೂಡಿದ್ದ “ಬಹು ಮಂದಿ ಅನ್ಯರೂ” ‘ತೃಪ್ತಿ’ಯಾಗುವಷ್ಟರ ಮಟ್ಟಿಗೆ ತಿಂದುಕುಡಿದರು. (ವಿಮೋಚನಕಾಂಡ 12:37, 38) ಇದು ಹೇಗೆ ಸಾಧ್ಯವಾಯಿತೆಂದು ಕೀರ್ತನೆ 78:23-25 ನಮಗೆ ಹೇಳುತ್ತದೆ: “ಆತನು [ಯೆಹೋವನು] ಮೇಘಗಳಿಗೆ ಅಪ್ಪಣೆಕೊಟ್ಟು ಆಕಾಶದ್ವಾರಗಳನ್ನು ತೆರೆದು ಸ್ವರ್ಗಧಾನ್ಯವಾದ ಮನ್ನವನ್ನು ಅವರಿಗೋಸ್ಕರ ಸುರಿಸಿ ಉಣ್ಣಲಿಕ್ಕೆ ಕೊಟ್ಟನು. ಅವರಲ್ಲಿ ಪ್ರತಿಯೊಬ್ಬನು ದೇವದೂತರ ಆಹಾರವನ್ನು ಭುಜಿಸಿದನು. ಆತನು ಅವರಿಗೆ ತೃಪ್ತಿಭೋಜನವನ್ನು ಕೊಟ್ಟನು.”
ಮೋಶೆಯು ಆ ಮನ್ನವನ್ನು ಸೇವಿಸಿದ್ದರಿಂದ, ಈ ಅಪೂರ್ವವಾದ ಆಹಾರವನ್ನು ಅವನು ವರ್ಣಿಸಿ ಬರೆದನು. ಬೆಳಗ್ಗಿನ ಸಮಯದಲ್ಲಿ “ಮಂಜು ಆರಿಹೋದನಂತರ ಅರಣ್ಯದ ನೆಲದಲ್ಲಿ ಮಂಜಿನ ಹನಿಗಳಂತೆ ಏನೋ ಸಣ್ಣಸಣ್ಣ ರವೆಗಳು ಕಾಣಿಸಿದವು. ಇಸ್ರಾಯೇಲ್ಯರು ಅದನ್ನು ಕಂಡು ಇಂಥದೆಂದು ತಿಳಿಯದೆ ಒಬ್ಬರಿಗೊಬ್ಬರು ಇದೇನಿರಬಹುದು” ಅಥವಾ ಅಕ್ಷರಶಃವಾಗಿ ಹೀಬ್ರು ಭಾಷೆಯಲ್ಲಿ “ಮಾನ್ಹೂ?” “ಎಂದು ಹೇಳಿಕೊಂಡರು.” ಈ ಅಭಿವ್ಯಕ್ತಿಯೇ, ಇಸ್ರಾಯೇಲ್ಯರು ಆ ಆಹಾರಕ್ಕೆ ಕೊಟ್ಟ ಹೆಸರು “ಮನ್ನ” ಎಂಬ ಪದದ ಮೂಲವಾಗಿದ್ದಿರಬಹುದು. ಮೋಶೆ ಅಂದದ್ದು: “ಅದು ಬಿಳೀ ಕೊತ್ತುಂಬರಿ ಕಾಳಿನಂತಿದ್ದು ರುಚಿಯಲ್ಲಿ ಜೇನುತುಪ್ಪ ಕಲಸಿದ ದೋಸೆಗಳ ಹಾಗಿತ್ತು.”—ವಿಮೋಚನಕಾಂಡ 16:13-15, 31, ಪಾದಟಿಪ್ಪಣಿ.
ಈ ಮನ್ನ ಕೆಲವರು ವಾದಿಸುವಂತೆ ಸಹಜವಾಗಿ ಉತ್ಪನ್ನವಾಗುತ್ತಿದ್ದ ಒಂದು ಆಹಾರವಾಗಿರಲಿಲ್ಲ. ಇದನ್ನು ಒದಗಿಸುವುದರಲ್ಲಿ ಒಂದು ಅದ್ಭುತಕರವಾದ ಶಕ್ತಿಯು ಒಳಗೂಡಿತ್ತು. ಉದಾಹರಣೆಗೆ, ಅದು ಯಾವುದೇ ಒಂದೇ ಸ್ಥಳ ಅಥವಾ ಋತುವಿನಲ್ಲಿ ಲಭ್ಯವಾಗುತ್ತಿರಲಿಲ್ಲ. ಅದನ್ನು ಇಡೀ ರಾತ್ರಿ ಇಡುತ್ತಿದ್ದಲ್ಲಿ, ಮರುದಿನ ಬೆಳಗಾಗುವಷ್ಟರಲ್ಲಿ ಅದರಲ್ಲಿ ಹುಳುಗಳು ಆಗಿ ದುರ್ವಾಸನೆಯು ಉಂಟಾಗುತ್ತಿತ್ತು. ಆದರೆ ಸಾಪ್ತಾಹಿಕ ಸಬ್ಬತ್ ದಿನದ ಹಿಂದಿನ ದಿನ ಪ್ರತಿಯೊಂದು ಕುಟುಂಬವು ಶೇಖರಿಸಿಡುತ್ತಿದ್ದ ಎರಡರಷ್ಟು ಭಾಗವನ್ನು ಇಡೀ ರಾತ್ರಿ ಇಟ್ಟರೂ ಅದು ಹಾಳಾಗುತ್ತಿರಲಿಲ್ಲ. ಹೀಗಿರುವುದರಿಂದ, ಸಬ್ಬತ್ ದಿನದಂದು, ಮನ್ನ ಬೀಳದೆ ಇರುತ್ತಿದ್ದ ದಿನದಂದು ಅದನ್ನು ತಿನ್ನಲು ಸಾಧ್ಯವಾಗುತ್ತಿತ್ತು. ನಿಶ್ಚಯವಾಗಿಯೂ, ಮನ್ನ ಒಂದು ಅದ್ಭುತಕರವಾದ ಒದಗಿಸುವಿಕೆಯಾಗಿತ್ತು.—ವಿಮೋಚನಕಾಂಡ 16:19-30.
ಕೀರ್ತನೆ 78ರಲ್ಲಿ “ದೇವದೂತರ” ಕುರಿತಾಗಿ ತಿಳಿಸಲ್ಪಟ್ಟಿದೆ. ಇದು, ಮನ್ನವನ್ನು ಒದಗಿಸಲಿಕ್ಕಾಗಿ ಯೆಹೋವನು ದೇವದೂತರನ್ನು ಉಪಯೋಗಿಸಿದ್ದಿರಬಹುದೆಂಬುದನ್ನು ಸೂಚಿಸುತ್ತದೆ. (ಕೀರ್ತನೆ 78:25) ಏನೇ ಆಗಲಿ, ದೇವರು ತೋರಿಸಿದಂತಹ ದಯೆಗೆ ಕೃತಜ್ಞರಾಗಿರಲು ಆ ಜನರಿಗೆ ಸಾಕಷ್ಟು ಕಾರಣವಿತ್ತು. ಆದರೆ ಅವರಲ್ಲಿ ಹೆಚ್ಚಿನವರು, ತಮ್ಮನ್ನು ಐಗುಪ್ತದ ಬಂಧಿವಾಸದಿಂದ ಬಿಡಿಸಿದಾತನ ಕಡೆಗೇ ಕೃತಘ್ನತೆಯನ್ನು ತೋರಿಸಿದರು. ಯೆಹೋವನ ಪ್ರೀತಿ ದಯೆಯ ಕೃತ್ಯಗಳ ಕುರಿತು ಮನನ ಮಾಡಲು ತಪ್ಪಿಹೋಗುವಲ್ಲಿ ನಾವು ಸಹ ಯೆಹೋವನ ಏರ್ಪಾಡುಗಳನ್ನು ಮಾಮೂಲಿಯಾಗಿ ಪರಿಗಣಿಸಿ, ಕೃತಘ್ನರೂ ಆಗಬಹುದು. ಆದುದರಿಂದ ಯೆಹೋವನು ‘ನಮ್ಮ ಉಪದೇಶಕ್ಕಾಗಿ’ ಇಸ್ರಾಯೇಲಿನ ಬಿಡುಗಡೆಯ ಕುರಿತಾದ ದಾಖಲೆ ಮತ್ತು ತದನಂತರ ಸಂಭವಿಸಿದ ಘಟನೆಗಳನ್ನು ತನ್ನ ವಾಕ್ಯದಲ್ಲಿ ಸೇರಿಸಿದುದಕ್ಕಾಗಿ ನಾವು ಕೃತಜ್ಞರಾಗಿರಬಲ್ಲೆವು.—ರೋಮಾಪುರ 15:4.
ಇಸ್ರಾಯೇಲ್ಯರಿಗೆ ಕಲಿಸಲ್ಪಟ್ಟ ಪಾಠವು ಕ್ರೈಸ್ತರಿಗೆ ಲಾಭದಾಯಕವಾಗಿದೆ
ಯೆಹೋವನು ಮನ್ನವನ್ನು ಒದಗಿಸಿದಾಗ, ಸುಮಾರು ಮೂವತ್ತು ಲಕ್ಷ ಇಸ್ರಾಯೇಲ್ಯರ ಶಾರೀರಿಕ ಅಗತ್ಯಗಳನ್ನು ಪೂರೈಸುವುದಕ್ಕಿಂತಲೂ ಹೆಚ್ಚಿನದ್ದು ಯೆಹೋವನ ಮನಸ್ಸಿನಲ್ಲಿತ್ತು. ಅವರ ಸ್ವಂತ ಪ್ರಯೋಜನಕ್ಕಾಗಿ ಅವರನ್ನು ಪರಿಷ್ಕರಿಸಿ, ಶಿಸ್ತುಗೊಳಿಸಲಿಕ್ಕಾಗಿ ಆತನು ಅವರನ್ನು ‘ಕಷ್ಟಕ್ಕೆ ಒಳಪಡಿಸಿ ಪರೀಕ್ಷಿಸಲು’ ಬಯಸಿದನು. (ಧರ್ಮೋಪದೇಶಕಾಂಡ 8:16; ಯೆಶಾಯ 48:17) ಅವರು ಆ ಪರಿಷ್ಕರಿಸುವಿಕೆ ಮತ್ತು ಶಿಸ್ತಿಗೆ ಸ್ಪಂದಿಸುತ್ತಿದ್ದಲ್ಲಿ, ಯೆಹೋವನು ವಾಗ್ದತ್ತ ದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಂತೋಷವನ್ನು ದಯಪಾಲಿಸುವ ಮೂಲಕ ಅವರಿಗೆ ‘ಮೇಲನ್ನುಂಟುಮಾಡಲು’ ಹರ್ಷಿಸುತ್ತಿದ್ದನು.
“ಮನುಷ್ಯರು ಆಹಾರಮಾತ್ರದಿಂದಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾರೆಂಬ” ಒಂದು ಮುಖ್ಯ ವಿಷಯವನ್ನು ಅವರು ಕಲಿಯಬೇಕಾಗಿತ್ತು. (ಧರ್ಮೋಪದೇಶಕಾಂಡ 8:3) ದೇವರು ಅವರಿಗೆ ಮನ್ನವನ್ನು ಒದಗಿಸದಿರುತ್ತಿದ್ದಲ್ಲಿ, ಜನರು ಹೊಟ್ಟೆಗಿಲ್ಲದೆ ಸಾಯುತ್ತಿದ್ದರು. ಇದು ಅವರು ಮನಃಪೂರ್ವಕವಾಗಿ ಒಪ್ಪಿಕೊಂಡ ಒಂದು ವಾಸ್ತವಾಂಶವಾಗಿತ್ತು. (ವಿಮೋಚನಕಾಂಡ 16:3, 4) ಅವರು ಸಂಪೂರ್ಣವಾಗಿ ಯೆಹೋವನ ಮೇಲೆ ಅವಲಂಬಿಸಿದ್ದಾರೆ ಎಂಬುದನ್ನು ಗಣ್ಯತಾಭಾವವುಳ್ಳ ಇಸ್ರಾಯೇಲ್ಯರಿಗೆ ಪ್ರತಿದಿನವೂ ನೆನಪು ಹುಟ್ಟಿಸಲಾಗುತ್ತಿತ್ತು ಮತ್ತು ಹೀಗೆ ಅವರು ತಗ್ಗಿಸಲ್ಪಟ್ಟರು. ವಾಗ್ದತ್ತ ದೇಶವನ್ನು ಪ್ರವೇಶಿಸಿ, ಅಲ್ಲಿನ ಭೌತಿಕ ಸಮೃದ್ಧಿಯಲ್ಲಿ ಆನಂದಿಸುವಾಗ ಅವರು ಯೆಹೋವನನ್ನು ಮತ್ತು ಆತನ ಮೇಲೆ ತಾವು ಅವಲಂಬಿಸಿರುವ ವಿಷಯವನ್ನು ಮರೆತುಬಿಡುವ ಸಂಭಾವ್ಯತೆಯು ತೀರ ಕಡಿಮೆಯಾಗಿರುತ್ತಿತ್ತು.
ಇಸ್ರಾಯೇಲ್ಯರಂತೆ ಕ್ರೈಸ್ತರು ಸಹ ತಮ್ಮ ಜೀವಿತದ, ಅಂದರೆ ಶಾರೀರಿಕ ಮತ್ತು ಆತ್ಮಿಕ ಅಗತ್ಯಗಳಿಗಾಗಿ ದೇವರ ಮೇಲೆ ಅವಲಂಬಿಸುವ ವಿಷಯದಲ್ಲಿ ಪ್ರಜ್ಞೆಯುಳ್ಳವರಾಗಿರಬೇಕು. (ಮತ್ತಾಯ 5:3; 6:31-33) ಪಿಶಾಚನು ಒಡ್ಡಿದ ಒಂದು ಶೋಧನೆಗೆ ಉತ್ತರಕೊಡುತ್ತ ಯೇಸು ಕ್ರಿಸ್ತನು ಧರ್ಮೋಪದೇಶಕಾಂಡ 8:3ರಲ್ಲಿರುವ ಮೋಶೆಯ ಮಾತುಗಳನ್ನು ಉಲ್ಲೇಖಿಸುತ್ತಾ ಹೇಳಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.” (ಮತ್ತಾಯ 4:4) ಹೌದು, ದೇವರ ಸತ್ಯಾರಾಧಕರು, ಯೆಹೋವನ ವಾಕ್ಯದಲ್ಲಿರುವ ಆತನ ಹೇಳಿಕೆಗಳನ್ನು ಓದುವ ಮೂಲಕ ಪೋಷಿಸಲ್ಪಡುತ್ತಾರೆ. ಅಷ್ಟುಮಾತ್ರವಲ್ಲದೆ, ದೇವರೊಂದಿಗೆ ನಡೆಯುತ್ತಾ, ಆತನ ರಾಜ್ಯಾಭಿರುಚಿಗಳನ್ನು ಪ್ರಥಮ ಸ್ಥಾನದಲ್ಲಿ ಇಡುವಾಗ, ತಮ್ಮ ಜೀವಿತಗಳಲ್ಲಿ ಈ ಅಭಿವ್ಯಕ್ತಿಗಳ ಉಪಯುಕ್ತ ಪರಿಣಾಮಗಳನ್ನು ಅವರು ಅನುಭವಿಸುತ್ತಾರೆ. ಮತ್ತು ಇದು ಅವರ ನಂಬಿಕೆಯನ್ನು ಬಲಪಡಿಸುತ್ತದೆ.
ಯಾವುದೇ ವಿಷಯವು ದೈನಂದಿನ ಜೀವಿತದ ಭಾಗವಾಗುವಾಗ, ಅಪರಿಪೂರ್ಣ ಮಾನವರಿಗೆ ಅದರ ಕಡೆಗಿರುವ ಗಣ್ಯತೆಯು ಕಡಿಮೆಯಾಗುತ್ತದೆ. ಇವು ಯೆಹೋವನ ಪ್ರೀತಿಪರ ಚಿಂತೆಯನ್ನು ಪ್ರತಿಬಿಂಬಿಸುವ ವಿಷಯಗಳೇ ಆಗಿದ್ದರೂ ಗಣ್ಯತೆಯು ಕಡಿಮೆಯಾಗುತ್ತಾ ಹೋಗಬಹುದು. ಉದಾಹರಣೆಗೆ, ಆರಂಭದಲ್ಲಿ ಇಸ್ರಾಯೇಲ್ಯರು ಅದ್ಭುತಕರವಾದ ಮನ್ನದ ಒದಗಿಸುವಿಕೆಯಿಂದ ಆಶ್ಚರ್ಯಚಕಿತರಾದರು ಮತ್ತು ಅದಕ್ಕಾಗಿ ಕೃತಜ್ಞರೂ ಆಗಿದ್ದರು. ಆದರೆ ಸಮಯಾನಂತರ, ಅವರಲ್ಲಿ ಅನೇಕರು ಅದನ್ನು ದೂರಿ ಮಾತಾಡಿದರು. “ಈ ನಿಸ್ಸಾರವಾದ ಆಹಾರವನ್ನು ತಿಂದು ತಿಂದು ನಮಗೆ ಬೇಸರವಾಯಿತೆಂದು” ಅವರು ಅಗೌರವಪೂರ್ವಕವಾಗಿ ಪ್ರಲಾಪಿಸಿದರು. ಮತ್ತು ಇದು, ಅವರು ‘ಜೀವಸ್ವರೂಪನಾದ ದೇವರನ್ನು ಬಿಟ್ಟುಹೋಗಲು’ ಆರಂಭಿಸುತ್ತಿದ್ದರೆಂಬುದರ ಒಂದು ಮುನ್ಸೂಚನೆಯಾಗಿತ್ತು. (ಅರಣ್ಯಕಾಂಡ 11:6; 21:5; ಇಬ್ರಿಯ 3:12) ಆದುದರಿಂದ ಅವರ ಉದಾಹರಣೆಯು, “ಯುಗಾಂತ್ಯಕ್ಕೆ ಬಂದಿರುವವರಾದ ನಮಗೆ ಬುದ್ಧಿವಾದ [“ಎಚ್ಚರಿಕೆ,” NW]” ಆಗಿದೆ.—1 ಕೊರಿಂಥ 10:11.
ಈ ಎಚ್ಚರಿಕೆಯ ಉದಾಹರಣೆಗೆ ನಾವು ಹೇಗೆ ಕಿವಿಗೊಡಸಾಧ್ಯವಿದೆ? ಒಂದು ವಿಧವು, ಬೈಬಲ್ ಬೋಧನೆಗಳು ಅಥವಾ ನಂಬಿಗಸ್ತನೂ ವಿವೇಕಿಯೂ ಆದ ಆಳು ವರ್ಗದಿಂದ ನಾವು ಪಡೆಯುವ ಒದಗಿಸುವಿಕೆಗಳು ಎಂದಿಗೂ ಒಂದು ಸಾಮಾನ್ಯ ಅಥವಾ ಮಾಮೂಲಿ ವಿಷಯವಾಗುವಂತೆ ಬಿಡದಿರುವ ಮೂಲಕವೇ. (ಮತ್ತಾಯ 24:45) ನಾವು ಯೆಹೋವನ ಕೊಡುಗೆಗಳನ್ನು ಒಮ್ಮೆ ಉಪೇಕ್ಷಿಸಲು ಪ್ರಾರಂಭಿಸಿದೆವೆಂದರೆ ಅಥವಾ ಅವು ನಮಗೆ ಬೇಸರ ಹಿಡಿಸಿದವೆಂದರೆ, ಅಂದಿನಿಂದ ಆತನೊಂದಿಗಿನ ನಮ್ಮ ಸಂಬಂಧವು ತಣ್ಣಗಾಗಲು ಆರಂಭವಾಗುತ್ತದೆ.
ಸಕಾರಣದಿಂದಲೇ, ಯೆಹೋವನು ಸತತವಾಗಿ ರೋಮಾಂಚಕಾರಿಯಾದ ಹೊಸ ವಿಷಯಗಳ ಸುರಿಮಳೆಯಿಂದ ನಮ್ಮನ್ನು ಮುಳುಗಿಸಿಬಿಡುವುದಿಲ್ಲ. ಅದಕ್ಕೆ ಬದಲಾಗಿ, ತನ್ನ ವಾಕ್ಯದ ಮೇಲೆ ಆತನು ನಿಧಾನವಾಗಿ, ಪ್ರಗತಿಪರವಾಗಿ ಪ್ರಕಾಶವನ್ನು ಬೀರುತ್ತಾನೆ. (ಜ್ಞಾನೋಕ್ತಿ 4:18) ಇದರಿಂದಾಗಿ ಆತನ ಜನರು, ತಾವು ಕಲಿಯುವಂತಹ ವಿಷಯಗಳನ್ನು ಗ್ರಹಿಸಿ, ಅದನ್ನು ಕಾರ್ಯರೂಪಕ್ಕೆ ಹಾಕುವಂತೆ ಸಾಧ್ಯವಾಗುತ್ತದೆ. ಯೇಸು ತನ್ನ ಪ್ರಥಮ ಶಿಷ್ಯರಿಗೆ ಕಲಿಸುವಾಗ ತನ್ನ ತಂದೆಯ ಮಾದರಿಯನ್ನು ಅನುಕರಿಸಿದನು. ‘ಅವರ ಗ್ರಹಿಕೆಗೆ ತಕ್ಕ ಹಾಗೆ’ ಅವನು ಅವರಿಗೆ ದೇವರ ವಾಕ್ಯವನ್ನು ಕಲಿಸಿದನು.—ಮಾರ್ಕ 4:33; ಹೋಲಿಸಿರಿ ಯೋಹಾನ 16:12.
ದೇವರ ಒದಗಿಸುವಿಕೆಗಳಿಗಾಗಿರುವ ನಿಮ್ಮ ಗಣ್ಯತೆಯನ್ನು ಬಲಪಡಿಸಿರಿ
ಯೇಸು ಪುನರಾವರ್ತನೆಯನ್ನು ಸಹ ಬಳಸಿದನು. ಮನಸ್ಸು ಒಂದು ನಿರ್ದಿಷ್ಟ ವಿಷಯವನ್ನು, ಉದಾಹರಣೆಗಾಗಿ ಒಂದು ಬೈಬಲ್ ಮೂಲತತ್ವವನ್ನು ಬೇಗನೆ ಗ್ರಹಿಸಬಹುದು. ಆದರೆ ಅದನ್ನು ಹೃದಯಕ್ಕೆ ತೆಗೆದುಕೊಂಡು, ಕ್ರೈಸ್ತ “ಹೊಸ ವ್ಯಕ್ತಿತ್ವದ” ಭಾಗವನ್ನಾಗಿ ಮಾಡಿಕೊಳ್ಳಲು ಹೆಚ್ಚು ಸಮಯ ಹಿಡಿಯಬಹುದು. ಹಳೆಯ ಲೋಕದ ರೀತಿನೀತಿಗಳು ಮತ್ತು ಮನೋಭಾವಗಳು ಆಳವಾಗಿ ಬೇರೂರಿರುವಲ್ಲಿ, ಇದು ವಿಶೇಷವಾಗಿ ಸತ್ಯವಾಗಿರುತ್ತದೆ. (ಎಫೆಸ 4:22-24) ಅಹಂಕಾರವನ್ನು ಜಯಿಸಿ, ನಮ್ರಭಾವವನ್ನು ವಿಕಸಿಸುವ ವಿಷಯದಲ್ಲಿ ಇದು ಯೇಸುವಿನ ಶಿಷ್ಯರ ಸಂಬಂಧದಲ್ಲಿ ನಿಶ್ಚಯವಾಗಿಯೂ ಸತ್ಯವಾಗಿತ್ತು. ಅನೇಕ ಸಂದರ್ಭಗಳಲ್ಲಿ ಯೇಸು ಅವರಿಗೆ ನಮ್ರತೆಯ ಕುರಿತಾಗಿ ಕಲಿಸಬೇಕಾಗಿತ್ತು. ಅದು ಅವರ ಹೃದಯಕ್ಕೆ ನಾಟುವಂತೆ, ಪ್ರತಿ ಸಲ ಅದೇ ಮೂಲಭೂತ ವಿಷಯವನ್ನು ಅವನು ಒಂದು ಭಿನ್ನ ರೀತಿಯಲ್ಲಿ ಅವರ ಮುಂದಿರಿಸುತ್ತಿದ್ದನು. ಮತ್ತು ಕಟ್ಟಕಡೆಗೆ ಈ ವಿಷಯವು ಅವರ ಹೃದಯಕ್ಕೆ ನಾಟಿತು.—ಮತ್ತಾಯ 18:1-4; 23:11, 12; ಲೂಕ 14:7-11; ಯೋಹಾನ 13:5, 12-17.
ಯೇಸು ಇಟ್ಟಿರುವ ಮಾದರಿಯನ್ನು ಅನುಕರಿಸುತ್ತಾ, ಆಧುನಿಕ ಸಮಯಗಳಲ್ಲಿ ಕ್ರೈಸ್ತ ಕೂಟಗಳು ಮತ್ತು ವಾಚ್ಟವರ್ ಸಂಸ್ಥೆಯ ಪ್ರಕಾಶನಗಳು ವಿಷಯಗಳನ್ನು ಚೆನ್ನಾಗಿ ಯೋಚಿಸಿ ಪುನರಾವರ್ತಿಸುತ್ತವೆ. ಆದುದರಿಂದ ಇದು ದೇವರಿಗೆ ನಮ್ಮ ಕಡೆಗಿರುವ ಪ್ರೀತಿಪರ ಚಿಂತೆಯ ಅಭಿವ್ಯಕ್ತಿಯಾಗಿದೆ ಎಂಬುದನ್ನು ಮನಸ್ಸಿನಲ್ಲಿಡುತ್ತಾ, ನಮಗೆ ಏನು ಸಿಗುತ್ತದೊ ಅದಕ್ಕಾಗಿ ಗಣ್ಯತೆಯನ್ನು ತೋರಿಸೋಣ. ಮತ್ತು ಇಸ್ರಾಯೇಲ್ಯರು ಮನ್ನದಿಂದ ಬೇಸತ್ತುಹೋದಂತೆ, ನಾವು ಏನನ್ನು ಪಡೆಯುತ್ತೇವೊ ಅದರ ಕುರಿತಾಗಿ ಎಂದೂ ಬೇಸತ್ತುಹೋಗದಿರೋಣ. ಯೆಹೋವನು ಕ್ರಮವಾಗಿ ಕೊಡುವ ಮರುಜ್ಞಾಪನಗಳನ್ನು ನಾವು ತಾಳ್ಮೆಯಿಂದ ಅನ್ವಯಿಸಿಕೊಳ್ಳುತ್ತಿರುವಾಗ, ಖಂಡಿತವಾಗಿಯೂ ನಮ್ಮ ಜೀವಿತಗಳಲ್ಲಿ ಉತ್ತಮ ಫಲವನ್ನು ನಾವು ಪಡೆಯುವೆವು. (2 ಪೇತ್ರ 3:1) ಇಂತಹ ಗಣ್ಯತಾಪೂರ್ವಕ ಮನೋಭಾವವು, ನಾವು ನಮ್ಮ ಹೃದಯಗಳಲ್ಲಿ ಮತ್ತು ಮನಸ್ಸುಗಳಲ್ಲಿ ದೇವರ ವಾಕ್ಯದ “ಅರ್ಥವನ್ನು ಗ್ರಹಿಸು”ತ್ತಿದ್ದೇವೆ ಎಂಬುದನ್ನು ಇದು ನಿಜವಾಗಿಯೂ ವ್ಯಕ್ತಪಡಿಸುತ್ತದೆ. (ಮತ್ತಾಯ 13:15, 19, 23, NW) ಈ ವಿಷಯದಲ್ಲಿ ನಮಗೆ ಕೀರ್ತನೆಗಾರನಾದ ದಾವೀದನ ಉತ್ತಮ ಮಾದರಿಯಿದೆ. ನಮಗೆ ಇಂದು ದೊರೆಯುತ್ತಿರುವಷ್ಟು ವೈವಿಧ್ಯಮಯ ಆತ್ಮಿಕ ಆಹಾರವು ಅವನಿಗೆ ಸಿಕ್ಕಿರಲಿಲ್ಲವಾದರೂ, ಯೆಹೋವನ ನಿಯಮಗಳು “ಜೇನಿಗಿಂತಲೂ ಶೋಧಿಸಿದ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ” ಎಂದು ಅವನು ವರ್ಣಿಸಿದನು.—ಕೀರ್ತನೆ 19:10.
ನಿತ್ಯಜೀವವನ್ನು ಕೊಡುವ “ಮನ್ನಾ”
ಯೇಸು ಯೆಹೂದ್ಯರಿಗೆ ಹೇಳಿದ್ದು: “ಜೀವಕೊಡುವ ರೊಟ್ಟಿ ನಾನೇ. ನಿಮ್ಮ ಹಿರಿಯರು ಅಡವಿಯಲ್ಲಿ ಮನ್ನಾ ತಿಂದರೂ ಸತ್ತುಹೋದರು; . . . ಪರಲೋಕದಿಂದ ಇಳಿದು ಬರುವ ಜೀವವುಳ್ಳ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಸದಾಕಾಲ ಬದುಕುವನು. ಮತ್ತು ನಾನು ಕೊಡುವ ರೊಟ್ಟಿ ನನ್ನ ಮಾಂಸವೇ; ಅದನ್ನು ಲೋಕದ ಜೀವಕ್ಕೋಸ್ಕರ ಕೊಡುವೆನು.” (ಯೋಹಾನ 6:48-51) ಅಕ್ಷರಶಃವಾದ ರೊಟ್ಟಿ ಅಥವಾ ಮನ್ನಾ ನಿತ್ಯಜೀವವನ್ನು ಕೊಡಲಿಲ್ಲ ಮತ್ತು ಕೊಡಲಾರದು. ಆದರೆ ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಂಬಿಕೆಯನ್ನಿಡುವವರು, ಕಟ್ಟಕಡೆಗೆ ನಿತ್ಯಜೀವದ ಆಶೀರ್ವಾದದಲ್ಲಿ ಆನಂದಿಸುವರು.—ಮತ್ತಾಯ 20:28.
ಯೇಸುವಿನ ಪ್ರಾಯಶ್ಚಿತ್ತದಿಂದ ಪ್ರಯೋಜನ ಪಡೆದುಕೊಳ್ಳುವ ಅಧಿಕಾಂಶ ಜನರು, ಪ್ರಮೋದವನ ಭೂಮಿಯ ಮೇಲೆ ನಿತ್ಯಜೀವವನ್ನು ಪಡೆಯುವರು. ಐಗುಪ್ತದಿಂದ ಹೊರಬರುವಾಗ ಇಸ್ರಾಯೇಲ್ಯರೊಂದಿಗೆ ಜೊತೆಗೂಡಿದ “ಬಹು ಮಂದಿ ಅನ್ಯ”ರಿಂದ ಮುಂಚಿತ್ರಿಸಲ್ಪಟ್ಟಿರುವ “ಮಹಾ ಸಮೂಹದವರು,” ಬೇಗನೆ ಬರಲಿರುವ ಮತ್ತು ಭೂಮಿಯಿಂದ ಎಲ್ಲ ದುಷ್ಟತನವನ್ನು ತೆಗೆದುಹಾಕಲಿರುವ “ಮಹಾ ಸಂಕಟ”ವನ್ನು ಪಾರಾಗುವರು. (ಪ್ರಕಟನೆ 7:9, 10, 14; ವಿಮೋಚನಕಾಂಡ 12:38) ಸ್ವತಃ ಇಸ್ರಾಯೇಲ್ಯರಿಂದ ಮುಂಚಿತ್ರಿಸಲ್ಪಟ್ಟಿರುವವರು ಹೆಚ್ಚು ಶ್ರೇಷ್ಠವಾದ ಬಹುಮಾನದಲ್ಲಿ ಆನಂದಿಸುವರು. 1,44,000 ಸಂಖ್ಯೆಯ ಈ ಜನರು, ದೇವರ ಆತ್ಮಿಕ ಇಸ್ರಾಯೇಲ್ಯರೆಂದು ಅಪೊಸ್ತಲ ಪೌಲನು ವರ್ಣಿಸುತ್ತಾನೆ. ಅವರು ಮೃತರಾದಾಗ, ಸ್ವರ್ಗೀಯ ಜೀವಿತಕ್ಕೆ ಪುನರುತ್ಥಾನವೇ ಅವರ ಬಹುಮಾನವಾಗಿದೆ. (ಗಲಾತ್ಯ 6:16; ಇಬ್ರಿಯ 3:1; ಪ್ರಕಟನೆ 14:1) ಅಲ್ಲಿ ಯೇಸು ಅವರಿಗೆ ಒಂದು ವಿಶೇಷ ರೀತಿಯ ಮನ್ನವನ್ನು ಕೊಡುವನು.
“ಬಚ್ಚಿಟ್ಟಿರುವ ಮನ್ನ”ದ ಅರ್ಥ
“ಯಾವನು ಜಯಹೊಂದುತ್ತಾನೋ ಅವನಿಗೆ ಬಚ್ಚಿಟ್ಟಿರುವ ಮನ್ನವೆಂಬ ಆಹಾರವನ್ನು ಕೊಡುವೆನು” ಎಂದು ಪುನರುತ್ಥಿತ ಯೇಸುವು ಆತ್ಮಿಕ ಇಸ್ರಾಯೇಲಿಗೆ ಹೇಳಿದನು. (ಪ್ರಕಟನೆ 2:17) ಪವಿತ್ರವಾದ ಒಡಂಬಡಿಕೆಯ ಮಂಜೂಷದೊಳಗೆ ಒಂದು ಚಿನ್ನದ ಪಾತ್ರೆಯಲ್ಲಿ ಇಡುವಂತೆ ದೇವರು ಮೋಶೆಗೆ ಆಜ್ಞಾಪಿಸಿದ ಮನ್ನವನ್ನು, ಈ ಸಾಂಕೇತಿಕವಾಗಿ ಬಚ್ಚಿಟ್ಟಿರುವ ಮನ್ನವು ನೆನಪಿಗೆ ತರುತ್ತದೆ. ಆ ಮಂಜೂಷವನ್ನು ದೇವಗುಡಾರದ ಅತಿ ಪರಿಶುದ್ಧವಾದ ಸ್ಥಾನದಲ್ಲಿರಿಸಲಾಗಿತ್ತು. ಅದು ಅಲ್ಲಿ ಬಚ್ಚಿಡಲ್ಪಟ್ಟಿದೆಯೋ ಎಂಬಂತೆ, ದೃಷ್ಟಿಯಿಂದ ಮರೆಯಾಗಿರಿಸಲ್ಪಟ್ಟಿತ್ತು. ಒಂದು ಸ್ಮಾರಕವಾಗಿ ಇಡಲಾಗಿದ್ದ ಈ ಮನ್ನವು ಮಂಜೂಷದೊಳಗಿದ್ದ ಸಮಯದಲ್ಲೆಲ್ಲ ಕೆಟ್ಟುಹೋಗದೇ ಇದ್ದುದ್ದರಿಂದ, ಅದು ಮುಗಿದುಹೋಗದಂತಹ ಆಹಾರ ಸರಬರಾಯಿಯನ್ನು ಸೂಚಿಸಲು ಒಂದು ಸೂಕ್ತ ಸಂಕೇತವಾಗಿತ್ತು. (ವಿಮೋಚನಕಾಂಡ 16:32; ಇಬ್ರಿಯ 9:3, 4, 23, 24) 1,44,000 ಮಂದಿಗೆ ಬಚ್ಚಿಟ್ಟಿರುವ ಮನ್ನವನ್ನು ಕೊಡುವ ಮೂಲಕ, ಅವರು ದೇವರ ಆತ್ಮಿಕ ಪುತ್ರರೋಪಾದಿ ಅಮರತ್ವ ಮತ್ತು ನಿರ್ಲಯತ್ವವನ್ನು ಪಡೆಯುವರೆಂಬ ಖಾತ್ರಿಯನ್ನು ಯೇಸು ಕೊಡುತ್ತಾನೆ.—ಯೋಹಾನ 6:51; 1 ಕೊರಿಂಥ 15:54.
“ನಿನ್ನ [ಯೆಹೋವನ] ಬಳಿಯಲ್ಲಿ ಜೀವದ ಬುಗ್ಗೆ ಉಂಟಲ್ಲಾ” ಎಂದು ಕೀರ್ತನೆಗಾರನು ಹೇಳುತ್ತಾನೆ. (ಕೀರ್ತನೆ 36:9) ಅಕ್ಷರಶಃ ಹಾಗೂ ಸಾಂಕೇತಿಕವಾದ ಮನ್ನ ಒದಗಿಸುವಿಕೆಯು, ಆ ಮೂಲಭೂತ ಸತ್ಯವನ್ನು ಎಷ್ಟು ಚೆನ್ನಾಗಿ ದೃಢೀಕರಿಸುತ್ತದೆ! ಪುರಾತನ ಇಸ್ರಾಯೇಲ್ಯರಿಗೆ ದೇವರು ಕೊಟ್ಟ ಮನ್ನ, ನಮ್ಮ ಪರವಾಗಿ ಆತನು ಯೇಸುವಿನ ಶರೀರದ ರೂಪದಲ್ಲಿ ಒದಗಿಸಿದ ಸಾಂಕೇತಿಕ ಮನ್ನ, ಮತ್ತು ಯೇಸುವಿನ ಮೂಲಕ ಆತನು 1,44,000 ಮಂದಿಗೆ ಕೊಡುವಂತಹ ಸಾಂಕೇತಿಕವಾಗಿ ಬಚ್ಚಿಟ್ಟಿರುವಂತಹ ಮನ್ನ—ಇದೆಲ್ಲವೂ ಜೀವಕ್ಕಾಗಿ ನಾವು ದೇವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದೇವೆಂಬುದನ್ನು ನೆನಪು ಹುಟ್ಟಿಸುತ್ತದೆ. (ಕೀರ್ತನೆ 39:5, 7) ನಾವು ದೇವರ ಮೇಲೆ ಅವಲಂಬಿಸುತ್ತೇವೆಂಬುದನ್ನು ನಮ್ರಭಾವದಿಂದ, ವಿನಯಶೀಲರಾಗಿ ಮತ್ತು ಸದಾ ಅಂಗೀಕರಿಸುತ್ತಿರೋಣ. ಆಗ ಯೆಹೋವನು ‘ನಮಗೆ ಮೇಲನ್ನುಂಟುಮಾಡುವನು.’—ಧರ್ಮೋಪದೇಶಕಾಂಡ 8:16.
[ಪುಟ 26 ರಲ್ಲಿರುವ ಚಿತ್ರಗಳು]
ನಿತ್ಯಜೀವವನ್ನು ಪಡೆಯಲಿಕ್ಕಾಗಿ, ಎಲ್ಲ ಮಾನವರು ‘ಪರಲೋಕದಿಂದ ಇಳಿದು ಬಂದ ಜೀವವುಳ್ಳ ರೊಟ್ಟಿಯ’ ಮೇಲೆ ಅವಲಂಬಿತರಾಗಿದ್ದಾರೆ
[ಪುಟ 28 ರಲ್ಲಿರುವ ಚಿತ್ರ]
ಎಲ್ಲ ಕ್ರೈಸ್ತ ಕೂಟಗಳಲ್ಲಿ ಹಾಜರಿರುವುದು, ಯೆಹೋವನ ಮರುಜ್ಞಾಪನಗಳಿಗಾಗಿರುವ ನಮ್ಮ ಗಣ್ಯತೆಯನ್ನು ಪ್ರತಿಬಿಂಬಿಸುತ್ತದೆ