ವಾಚಕರಿಂದ ಪ್ರಶ್ನೆಗಳು
ಒಡಂಬಡಿಕೆಯ ಮಂಜೂಷದಲ್ಲಿ ಇದ್ದದ್ದು ಎರಡು ಕಲ್ಲಿನ ಹಲಿಗೆಗಳು ಮಾತ್ರವೊ ಅಥವಾ ಬೇರೆ ವಸ್ತುಗಳೂ ಅದರಲ್ಲಿದ್ದವೊ?
ಸಾ.ಶ.ಪೂ. 1026ರಲ್ಲಿ ಸೊಲೊಮೋನನ ದೇವಾಲಯದ ಪ್ರತಿಷ್ಠಾಪನೆಯ ಸಮಯದಲ್ಲಿ, “[ಒಡಂಬಡಿಕೆಯ ಮಂಜೂಷದಲ್ಲಿ] ಎರಡು ಕಲ್ಲಿನ ಹಲಿಗೆಗಳು ಹೊರತಾಗಿ ಬೇರೇನೂ ಇರಲಿಲ್ಲ; ಯೆಹೋವನು ಐಗುಪ್ತದೇಶದಿಂದ ಬಂದ ಇಸ್ರಾಯೇಲ್ಯರೊಡನೆ ಹೋರೇಬ್‌ಬೆಟ್ಟದ ಬಳಿಯಲ್ಲಿ ಒಡಂಬಡಿಕೆಮಾಡಿಕೊಂಡ ಮೇಲೆ ಮೋಶೆಯು ಅವುಗಳನ್ನು ಅದರಲ್ಲಿಟ್ಟಿದ್ದನು.” (2 ಪೂರ್ವಕಾಲವೃತ್ತಾಂತ 5:10) ಆದರೆ ಯಾವಾಗಲೂ ಹೀಗೆ ಇರಲಿಲ್ಲ.
‘ಇಸ್ರಾಯೇಲ್ಯರು ಐಗುಪ್ತದೇಶದಿಂದ ಹೊರಟ ಮೂರನೆಯ ತಿಂಗಳಿನಲ್ಲಿ’ ಸೀನಾಯಿ ಅರಣ್ಯಕ್ಕೆ ಬಂದರು. (ವಿಮೋಚನಕಾಂಡ 19:1, 2) ಆ ಬಳಿಕ, ಮೋಶೆ ಸೀನಾಯಿ ಬೆಟ್ಟಕ್ಕೆ ಹೋಗಿ ಧರ್ಮಶಾಸ್ತ್ರದ ಎರಡು ಕಲ್ಲಿನ ಹಲಿಗೆಗಳನ್ನು ಪಡೆದನು. ಅವನು ಹೇಳುವುದು: “ನಾನು ಬೆಟ್ಟದಿಂದ ಇಳಿದು ಬಂದು ನನ್ನಿಂದ ಸಿದ್ಧವಾಗಿದ್ದ ಮಂಜೂಷದಲ್ಲಿ ಆತನ ಅಪ್ಪಣೆಯ ಮೇರೆಗೆ ಅವುಗಳನ್ನು ಇಟ್ಟೆನು.” (ಧರ್ಮೋಪದೇಶಕಾಂಡ 10:5) ಧರ್ಮಶಾಸ್ತ್ರದ ಹಲಿಗೆಗಳನ್ನು ಇಡಲಿಕ್ಕಾಗಿ ಮೋಶೆಯು ರಚಿಸುವಂತೆ ಯೆಹೋವನು ಹೇಳಿದ ಈ ಮರದ ಮಂಜೂಷ ಅಥವಾ ಪೆಟ್ಟಿಗೆಯು ತತ್ಕಾಲಕ್ಕಾಗಿತ್ತು. (ಧರ್ಮೋಪದೇಶಕಾಂಡ 10:1) ಒಡಂಬಡಿಕೆಯ ಮಂಜೂಷವು ಸುಮಾರು ಸಾ.ಶ.ಪೂ. 1513ರ ಅಂತ್ಯದ ವರೆಗೆ ಉಪಯೋಗಕ್ಕೆ ಸಿದ್ಧವಾಗಿರಲಿಲ್ಲ.
ಐಗುಪ್ತದಿಂದ ಬಿಡುಗಡೆಯಾದ ಸ್ವಲ್ಪ ಸಮಯದೊಳಗೆ ಇಸ್ರಾಯೇಲ್ಯರು ಆಹಾರದ ವಿಷಯದಲ್ಲಿ ಗುಣುಗುಟ್ಟತೊಡಗಿದರು. ಆದುದರಿಂದ ಯೆಹೋವನು ಅವರಿಗೆ ಮನ್ನವನ್ನು ಒದಗಿಸಿದನು. (ವಿಮೋಚನಕಾಂಡ 12:17, 18; 16:1-5) ಆ ಹಂತದಲ್ಲಿ, ಮೋಶೆಯು ಆರೋನನಿಗೆ ಹೇಳಿದ್ದು: “ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಅದರಲ್ಲಿ ಒಂದು ಗೋಮೆರಿನಷ್ಟು ಮನ್ನವನ್ನು ಹಾಕಿ ನಿಮ್ಮ ಸಂತತಿಯವರು ನೋಡುವದಕ್ಕೋಸ್ಕರ ಅದನ್ನು ಯೆಹೋವನ ಸನ್ನಿಧಿಯಲ್ಲಿ ಇಡು.” ಆ ವೃತ್ತಾಂತವು ತಿಳಿಸುವುದು: “ಯೆಹೋವನು ಮೋಶೆಗೆ ಆಜ್ಞಾಪಿಸಿದಂತೆ ಆರೋನನು ಮಾಡಿ ಆಜ್ಞಾಶಾಸನಮಂಜೂಷದ [ಇದು ಪ್ರಮುಖವಾದ ದಾಖಲೆಗಳ ಸುರಕ್ಷೆಗಾಗಿದ್ದ ಒಂದು ಸ್ಥಳವಾಗಿತ್ತು] ಮುಂದೆ ಅದನ್ನು ಇಟ್ಟನು.” (ವಿಮೋಚನಕಾಂಡ 16:33, 34) ಆರೋನನು ಆಗ ಮನ್ನವನ್ನು ಒಂದು ಪಾತ್ರೆಯಲ್ಲಿ ಹಾಕಿದನೆಂಬುದು ಖಂಡಿತವಾದರೂ, ಅದನ್ನು ಆಜ್ಞಾಶಾಸನಮಂಜೂಷದ ಮುಂದಿಡಲು ಮೋಶೆಯು ಮಂಜೂಷವನ್ನು ರಚಿಸಿ ಅದರಲ್ಲಿ ಆ ಹಲಿಗೆಗಳನ್ನು ಇಡುವ ತನಕ ಕಾಯಬೇಕಾಗಿತ್ತು.
ಈಗಾಗಲೇ ಗಮನಿಸಲಾಗಿರುವಂತೆ, ಒಡಂಬಡಿಕೆಯ ಮಂಜೂಷವನ್ನು ಸಾ.ಶ.ಪೂ. 1513ರ ಅಂತ್ಯಭಾಗದಲ್ಲಿ ರಚಿಸಲಾಯಿತು. ತುಂಬ ಸಮಯದ ಬಳಿಕ, ಅಂದರೆ ಕೋರಹ ಮತ್ತು ಇತರರು ದಂಗೆಯೆದ್ದ ಬಳಿಕ ಆರೋನನ ಕೋಲು ಆ ಮಂಜೂಷದಲ್ಲಿ ಇಡಲ್ಪಟ್ಟಿತು. ಅಪೊಸ್ತಲ ಪೌಲನು, “[ಒಡಂಬಡಿಕೆಯ] ಮಂಜೂಷದೊಳಗೆ ಮನ್ನಾ ಇಟ್ಟಿದ್ದ ಚಿನ್ನದ ಪಾತ್ರೆಯೂ ಆರೋನನ ಚಿಗುರಿದ ಕೋಲೂ ಒಡಂಬಡಿಕೆ ಬರೆದಿದ್ದ ಕಲ್ಲಿನ ಹಲಿಗೆಗಳೂ” ಇದದ್ದನ್ನು ತಿಳಿಸುತ್ತಾನೆ.—ಇಬ್ರಿಯ 9:4.
ಮನ್ನವು ಇಸ್ರಾಯೇಲ್ಯರ 40 ವರುಷಗಳ ಅರಣ್ಯ ಪ್ರಯಾಣದ ಸಮಯದಲ್ಲಿ ದೇವರು ಮಾಡಿದ ಒಂದು ಒದಗಿಸುವಿಕೆಯಾಗಿತ್ತು. ವಾಗ್ದತ್ತ “ದೇಶದ ಹುಟ್ಟುವಳಿಯನ್ನು ಊಟಮಾಡಿದ” ಮೇಲೆ ಅವರಿಗೆ ಮನ್ನವು ಒದಗಿಸಲ್ಪಡಲಿಲ್ಲ. (ಯೆಹೋಶುವ 5:11, 12) ಆರೋನನ ಕೋಲು ಒಡಂಬಡಿಕೆಯ ಮಂಜೂಷದಲ್ಲಿ ಇಡಲ್ಪಟ್ಟ ಉದ್ದೇಶವು ದಂಗೆಯೆದ್ದ ಸಂತತಿಗೆ ಒಂದು ದೃಷ್ಟಾಂತಕ್ಕಾಗಿ, ಅಂದರೆ ಅವರನ್ನು ಖಂಡಿಸುವುದಕ್ಕಾಗಿ ಆಗಿತ್ತು. ಕಡಮೆಪಕ್ಷ ಅರಣ್ಯ ಪ್ರಯಾಣದ ಸಮಯದಲ್ಲಿಯಾದರೂ, ಆ ಕೋಲು ಅಲ್ಲಿತ್ತೆಂದು ಇದು ಸೂಚಿಸುತ್ತದೆ. ಆದುದರಿಂದ, ಇಸ್ರಾಯೇಲ್ಯರು ವಾಗ್ದತ್ತ ದೇಶವನ್ನು ಪ್ರವೇಶಿಸಿದ ಸ್ವಲ್ಪ ಸಮಯದ ಬಳಿಕ ಮತ್ತು ಸೊಲೊಮೋನನ ದೇವಾಲಯದ ಪ್ರತಿಷ್ಠಾಪನೆಗೆ ಮೊದಲು, ಆರೋನನ ಕೋಲು ಹಾಗೂ ಮನ್ನವಿದ್ದ ಚಿನ್ನದ ಪಾತ್ರೆಯನ್ನು ಒಡಂಬಡಿಕೆಯ ಮಂಜೂಷದಿಂದ ಹೊರಗೆ ತೆಗೆಯಲಾಗಿತ್ತೆಂದು ತೀರ್ಮಾನಿಸುವುದು ನ್ಯಾಯಸಮ್ಮತವೆಂದು ತೋರುತ್ತದೆ.