ಪಿಶಾಚನು ನಮಗೆ ರೋಗವನ್ನು ಬರಿಸುತ್ತಾನೋ?
ರೋಗವು ಅಸ್ತಿತ್ವದಲ್ಲಿ ಇರಲೇಬಾರದಿತ್ತು. ನಾವು ಪರಿಪೂರ್ಣ ಆರೋಗ್ಯದಲ್ಲಿ ಸದಾಕಾಲ ಜೀವಿಸುವಂತೆ ದೇವರು ನಮ್ಮನ್ನು ಸೃಷ್ಟಿಸಿದನು. ಒಬ್ಬ ಆತ್ಮ ಜೀವಿಯಾದ ಸೈತಾನನು ನಮ್ಮ ಪ್ರಥಮ ಹೆತ್ತವರಾದ ಆದಾಮ ಮತ್ತು ಹವ್ವರನ್ನು ಪಾಪದೊಳಗೆ ನಡಿಸಿದಾಗಲೇ, ಮಾನವಕುಲಕ್ಕೆ ರೋಗ, ವೇದನೆ ಮತ್ತು ಮರಣವು ಬಾಧಿಸತೊಡಗಿತು.—ಆದಿಕಾಂಡ 3:1-5, 17-19; ರೋಮಾಪುರ 5:12.
ಎಲ್ಲ ರೋಗಗಳು, ಆತ್ಮ ಲೋಕದವರ ಕೃತ್ಯಗಳ ನೇರವಾದ ಫಲಿತಾಂಶವಾಗಿದೆ ಎಂಬುದು ಇದರ ಅರ್ಥವೋ? ನಮ್ಮ ಹಿಂದಿನ ಲೇಖನವು ತೋರಿಸಿದಂತೆ, ಇಂದು ಅನೇಕರು ಹಾಗೆ ನೆನಸುತ್ತಾರೆ. ಪುಟ್ಟ ಓಮಾಜೀಯ ಅಜ್ಜಿಯು ಹಾಗೆಯೇ ನೆನಸಿದಳು. ಆದರೆ ಓಮಾಜೀಗೆ ಆದ ಭೇದಿಯು—ಕೆಲವೊಮ್ಮೆ ಉಷ್ಣವಲಯದ ಚಿಕ್ಕ ಮಕ್ಕಳಿಗೆ ಬರುವ ಮಾರಕ ಕಾಯಿಲೆಯು—ನಿಜವಾಗಿಯೂ ಅದೃಶ್ಯವಾಗಿರುವ ದುಷ್ಟಾತ್ಮಗಳಿಂದ ಉಂಟಾಗಿತ್ತೋ?
ಸೈತಾನನ ಪಾತ್ರ
ಬೈಬಲು ಈ ಪ್ರಶ್ನೆಯನ್ನು ಬಹಳ ಸ್ಪಷ್ಟವಾಗಿ ಉತ್ತರಿಸುತ್ತದೆ. ಮೊದಲನೆಯದಾಗಿ, ನಮ್ಮ ಪೂರ್ವಿಕರ ಆತ್ಮಗಳು ಜೀವಿತರನ್ನು ಬಾಧಿಸಲು ಸಾಧ್ಯವಿಲ್ಲವೆಂದು ಅದು ತೋರಿಸುತ್ತದೆ. ಜನರು ಸತ್ತಾಗ, ಅವರಿಗೆ ‘ಯಾವ ತಿಳುವಳಿಕೆಯು’ ಇರುವುದಿಲ್ಲ. ಅವರಿಗೆ ಮರಣದಲ್ಲಿ ಪಾರಾಗಿ ಉಳಿಯುವ ಆತ್ಮಗಳಿರುವುದಿಲ್ಲ. ಅವರು ಸಮಾಧಿಯಲ್ಲಿ ನಿದ್ರಿಸುತ್ತಾರೆ. ಅಲ್ಲಿ “ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.” (ಪ್ರಸಂಗಿ 9:5, 10) ಸತ್ತವರು ಜೀವಿತರನ್ನು ಯಾವ ವಿಧದಲ್ಲಿಯೂ ಅಸ್ವಸ್ಥಗೊಳಿಸಲು ಸಾಧ್ಯವಿಲ್ಲ!
ಆದಾಗ್ಯೂ, ದುಷ್ಟಾತ್ಮಗಳು ಅಸ್ತಿತ್ವದಲ್ಲಿ ಇವೆಯೆಂದು ಬೈಬಲು ಪ್ರಕಟಿಸುತ್ತದೆ. ಇಡೀ ವಿಶ್ವದಲ್ಲಿಯೇ ಪ್ರಥಮ ದಂಗೆಕೋರ ವ್ಯಕ್ತಿಯು, ಈಗ ಸೈತಾನನು ಎಂದು ಕರೆಯಲ್ಪಡುವ ಒಬ್ಬ ಆತ್ಮ ಜೀವಿಯೇ ಆಗಿದ್ದನು. ಇತರರು ಅವನನ್ನು ಹಿಂಬಾಲಿಸಿದರು ಮತ್ತು ದೆವ್ವಗಳೆಂದು ಕರೆಯಲ್ಪಟ್ಟರು. ಸೈತಾನನು ಮತ್ತು ದೆವ್ವಗಳು ರೋಗವನ್ನು ಉಂಟುಮಾಡಶಕ್ತರೋ? ಅದು ಸಂಭವಿಸಿರುತ್ತದೆ. ಯೇಸುವಿನ ಅದ್ಭುತಕರ ವಾಸಿಮಾಡುವಿಕೆಗಳಲ್ಲಿ ಕೆಲವೊಂದು, ದೆವ್ವಗಳನ್ನು ಬಿಡಿಸುವುದಾಗಿತ್ತು. (ಲೂಕ 9:37-43; 13:10-16) ಆದಾಗ್ಯೂ, ಯೇಸು ಮಾಡಿದ ಹೆಚ್ಚಿನ ಗುಣಪಡಿಸುವಿಕೆಯಲ್ಲಿ ದೆವ್ವಗಳಿಂದ ನೇರವಾಗಿ ಉಂಟಾಗದಂತಹ ರೋಗಗಳು ಸೇರಿದ್ದವು. (ಮತ್ತಾಯ 12:15; 14:14; 19:2) ತದ್ರೀತಿಯಲ್ಲಿ ಇಂದು, ಸಾಮಾನ್ಯವಾಗಿ ರೋಗವು ಸ್ವಾಭಾವಿಕ ಕಾರಣಗಳಿಂದಾಗಿಯೇ ಬರುತ್ತದೆ ಹೊರತು ಅತಿಮಾನುಷ ಕಾರಣಗಳಿಂದಲ್ಲ.
ಮಾಟಮಂತ್ರಗಳ ಕುರಿತಾಗಿ ಏನು? ಜ್ಞಾನೋಕ್ತಿ 18:10 ನಮಗೆ ದೃಢವಾದ ಆಶ್ವಾಸನೆಯನ್ನು ನೀಡುವುದು: “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು.” ಯಾಕೋಬ 4:7 ಹೇಳುವುದು: “ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” ಹೌದು, ದೇವರು ತನ್ನ ನಂಬಿಗಸ್ತ ಜನರನ್ನು ಮಾಟಮಂತ್ರ ಮತ್ತು ಬೇರೆ ಯಾವುದೇ ಅಸ್ವಾಭಾವಿಕವಾದ ಶಕ್ತಿಯಿಂದ ಸಂರಕ್ಷಿಸಬಲ್ಲನು. “ಸತ್ಯವು ನಿಮ್ಮನ್ನು ಬಿಡುಗಡೆಮಾಡುವದು,” ಎಂಬ ಯೇಸುವಿನ ಮಾತುಗಳ ಒಂದು ಅರ್ಥವು ಇದಾಗಿದೆ.—ಯೋಹಾನ 8:32.
ಕೆಲವರು ಹೀಗೆ ಪ್ರಶ್ನಿಸಬಹುದು: ‘ಯೋಬನ ಕುರಿತಾಗಿ ಏನು?’ ‘ಒಂದು ದುಷ್ಟಾತ್ಮವು ಅವನನ್ನು ಅಸ್ವಸ್ಥಗೊಳಿಸಿತಲ್ಲವೋ?’ ಹೌದು, ಯೋಬನ ಅಸ್ವಸ್ಥತೆಗೆ ಸೈತಾನನು ಕಾರಣನಾಗಿದ್ದನೆಂದು ಬೈಬಲು ಹೇಳುತ್ತದೆ. ಆದರೆ ಯೋಬನದ್ದು ಒಂದು ಅಸಾಧಾರಣವಾದ ವಿಷಯವಾಗಿತ್ತು. ಯೋಬನು ದೀರ್ಘಕಾಲದಿಂದಲೂ ನೇರವಾದ ದೆವ್ವಾಕ್ರಮಣದಿಂದ ದೈವಿಕ ಸಂರಕ್ಷಣೆಯನ್ನು ಪಡೆದಿದ್ದನು. ಆಮೇಲೆ ಯೋಬನ ಮೇಲೆ ಕೇಡನ್ನು ಬರಮಾಡುವಂತೆ ಸೈತಾನನು ಯೆಹೋವನಿಗೆ ಪಂಥಾಹ್ವಾನವನ್ನು ಒಡ್ಡಿದನು, ಮತ್ತು ಮಹಾ ವಿವಾದಗಳು ಒಳಗೊಂಡಿದ್ದ ಕಾರಣ, ಈ ಒಂದು ವಿಷಯದಲ್ಲಿ ಯೆಹೋವನು ಸಂರಕ್ಷಣೆಯನ್ನು ತನ್ನ ಆರಾಧಕನಿಂದ ಆಂಶಿಕವಾಗಿ ಹಿಂತೆಗೆದನು.
ಹಾಗಿದ್ದರೂ, ದೇವರು ಮಿತಿಗಳನ್ನು ಇಟ್ಟಿದ್ದನು. ಯೋಬನನ್ನು ಬಾಧಿಸಲು ಯೆಹೋವನು ಅನುಮತಿಯನ್ನು ನೀಡಿದಾಗ, ಅವನನ್ನು ಸ್ವಲ್ಪ ಕಾಲ ಅಸ್ವಸ್ಥಪಡಿಸಲಿಕ್ಕಾಗಿ ಸೈತಾನನಿಗೆ ಅನುಮತಿಯು ನೀಡಲ್ಪಟ್ಟಿತೇ ಹೊರತು, ಕೊಲ್ಲಲು ಅನುಮತಿಯನ್ನು ನೀಡಲಾಗಲಿಲ್ಲ. (ಯೋಬ 2:5, 6) ಕ್ರಮೇಣ, ಯೋಬನ ಕಷ್ಟಾನುಭವವು ಕೊನೆಗೊಂಡಿತು, ಮತ್ತು ಅವನ ಯಥಾರ್ಥತೆಗಾಗಿ ಯೆಹೋವನು ಅವನಿಗೆ ಹೇರಳವಾದ ಬಹುಮಾನವನ್ನು ನೀಡಿದನು. (ಯೋಬ 42:10-17) ಯೋಬನ ಯಥಾರ್ಥತೆಯಿಂದ ರುಜುಪಡಿಸಲಾದ ಮೂಲತತ್ವಗಳು ಬಹಳ ಸಮಯದ ಹಿಂದೆಯೇ ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ ಮತ್ತು ಇವು ನಮಗೆಲ್ಲರಿಗೆ ಸ್ಪಷ್ಟವಾಗಿ ತಿಳಿದಿವೆ. ಇಂತಹ ರೀತಿಯ ಇನ್ನೊಂದು ಪರೀಕ್ಷಾ ತನಿಖೆಯ ಅಗತ್ಯವಿರುವುದಿಲ್ಲ.
ಸೈತಾನನು ಹೇಗೆ ಕಾರ್ಯನಡಿಸುತ್ತಾನೆ?
ಹೆಚ್ಚುಕಡಿಮೆ, ಪ್ರತಿಯೊಂದು ಸಂದರ್ಭದಲ್ಲಿ ಸೈತಾನನ ಮತ್ತು ಮಾನವನ ಅಸ್ವಸ್ಥತೆಯ ಮಧ್ಯೆಯಿರುವ ಒಂದೇ ಸಂಬಂಧವು ಯಾವುದೆಂದರೆ, ಸೈತಾನನು ಪ್ರಥಮ ಮಾನವ ಜೋಡಿಯನ್ನು ಪ್ರಲೋಭಿಸಿದನು, ಮತ್ತು ಅವರನ್ನು ಪಾಪದೊಳಗೆ ಸಿಕ್ಕಿಸಿದನು ಎಂಬುದೇ. ಪ್ರತಿಯೊಂದು ರೀತಿಯ ವ್ಯಾಧಿಯನ್ನು ಉಂಟುಮಾಡುವುದರಲ್ಲಿ ಅವನು ಮತ್ತು ಅವನ ದೆವ್ವಗಳು ನೇರವಾಗಿ ಕಾರಣರಾಗಿರುವುದಿಲ್ಲ. ಆದಾಗ್ಯೂ, ಸೈತಾನನು ನಮ್ಮ ಆರೋಗ್ಯಕ್ಕೆ ಹಾನಿಯನ್ನು ಉಂಟುಮಾಡುವಂತಹ ಅವಿವೇಕತನದ ನಿರ್ಣಯಗಳನ್ನು ಮಾಡುವಂತೆ ಮತ್ತು ನಮ್ಮ ನಂಬಿಕೆಯನ್ನು ರಾಜಿಮಾಡಿಕೊಳ್ಳುವಂತೆ ಸಹ ನಮ್ಮ ಮೇಲೆ ಕೆಲವೊಮ್ಮೆ ಪ್ರಭಾವವನ್ನು ಬೀರಸಾಧ್ಯವಿದೆ. ಅವನು ಆದಾಮ ಮತ್ತು ಹವ್ವರನ್ನು ಮಾಟಮಂತ್ರದಿಂದ ಮರಳುಗೊಳಿಸಲಿಲ್ಲ, ಕೊಲೆಮಾಡಲಿಲ್ಲ ಅಥವಾ ರೋಗದಿಂದ ತಾಕಲಿಲ್ಲ. ದೇವರಿಗೆ ಅವಿಧೇಯತೆಯನ್ನು ತೋರಿಸುವಂತೆ ಅವನು ಹವ್ವಳ ಮನವೊಲಿಸಿದನು ಮತ್ತು ಆದಾಮನು ಅವಿಧೇಯತೆಯ ಅವಳ ಹಾದಿಯನ್ನು ಅನುಸರಿಸಿದನು. ರೋಗ ಮತ್ತು ಮರಣವು ಆ ಫಲಿತಾಂಶದ ಭಾಗವಾಗಿದ್ದವು.—ರೋಮಾಪುರ 5:19.
ಇಸ್ರಾಯೇಲ್ಯ ಜನಾಂಗವು ಮೋವಾಬಿನ ಮೇರೆಗಳಲ್ಲಿ ದಿಟ್ಟತನದಿಂದ ಪಾಳೆಯಮಾಡಿಕೊಂಡಿದ್ದಾಗ, ಮೋವಾಬಿನ ಅರಸನು, ಬಿಳಾಮ ಎಂಬ ಹೆಸರಿನ ಅಪನಂಬಿಗಸ್ತ ಪ್ರವಾದಿಯನ್ನು ತನ್ನ ಸ್ವಂತ ಉದ್ದೇಶವನ್ನು ಪೂರೈಸಲಿಕ್ಕಾಗಿ ಉಪಯೋಗಿಸಿದನು. ಬಿಳಾಮನು ಇಸ್ರಾಯೇಲನ್ನು ಶಪಿಸಲು ಪ್ರಯತ್ನಿಸಿದನು, ಆದರೆ ಜನಾಂಗವು ಯೆಹೋವನ ಸಂರಕ್ಷಣೆಯ ಕೆಳಗೆ ಇದ್ದುದ್ದರಿಂದ ಅವನು ವಿಫಲನಾದನು. ಮೋವಾಬ್ಯರು ಆಮೇಲೆ ಇಸ್ರಾಯೇಲ್ಯರನ್ನು ವಿಗ್ರಹಾರಾಧನೆ ಹಾಗೂ ಲೈಂಗಿಕ ಅನೈತಿಕತೆಯೊಳಗೆ ಸೆಳೆಯುವುದಕ್ಕೆ ಪ್ರಯತ್ನಿಸಿದರು. ಈ ತಂತ್ರವು ಯಶಸ್ಸನ್ನು ಪಡೆಯಿತು ಮತ್ತು ಹೀಗೆ ಇಸ್ರಾಯೇಲ್ಯರು ಯೆಹೋವನ ಸಂರಕ್ಷಣೆಯನ್ನು ಕಳೆದುಕೊಂಡರು.—ಅರಣ್ಯಕಾಂಡ 22:5, 6, 12, 35; 24:10; 25:1-9; ಪ್ರಕಟನೆ 2:14.
ಆ ಪ್ರಾಚೀನ ಕಾಲದ ಘಟನೆಯಿಂದ ನಾವು ಒಂದು ಪ್ರಾಮುಖ್ಯವಾದ ಪಾಠವನ್ನು ಕಲಿತುಕೊಳ್ಳಬಲ್ಲೆವು. ದೈವಿಕ ಸಹಾಯವು, ದೇವರ ನಂಬಿಗಸ್ತ ಆರಾಧಕರಿಗೆ ದುಷ್ಟಾತ್ಮಗಳ ನೇರವಾದ ಆಕ್ರಮಣದಿಂದ ಸಂರಕ್ಷಣೆಯನ್ನು ಕೊಡುತ್ತದೆ. ಆದಾಗ್ಯೂ, ವ್ಯಕ್ತಿಗಳು ತಮ್ಮ ನಂಬಿಕೆಯನ್ನು ರಾಜಿಮಾಡಿಕೊಳ್ಳುವಂತೆ ಸೈತಾನನು ಪ್ರಯತ್ನಿಸಲೂಬಹುದು. ಅವನು ಅವರನ್ನು ಅನೈತಿಕತೆಯೊಳಗೆ ಸೆಳೆಯಲು ಸಹ ಪ್ರಯತ್ನಿಸಬಹುದು. ಅಥವಾ, ಒಂದು ಗರ್ಜಿಸುವ ಸಿಂಹದೋಪಾದಿ, ದೇವರ ಸಂರಕ್ಷಣೆಯಿಂದ ಅವರನ್ನು ತಪ್ಪಿಸುವ ಒಂದು ವಿಧದಲ್ಲಿ ಅವರು ಕ್ರಿಯೆಗೈಯುವಂತೆ ಹೆದರಿಸುವ ಪ್ರಯತ್ನವನ್ನು ಸಹ ಅವನು ಮಾಡಬಹುದು. (1 ಪೇತ್ರ 5:8) ಈ ಕಾರಣದಿಂದಲೇ, ಅಪೊಸ್ತಲ ಪೌಲನು ಸೈತಾನನನ್ನು “ಮರಣಾಧಿಕಾರಿ”ಯೆಂದು ಕರೆದನು.—ಇಬ್ರಿಯ 2:14.
ಓಮಾಜೀಯ ಅಜ್ಜಿಯು, ರೋಗದ ವಿರುದ್ಧ ಸಂರಕ್ಷಣೆಯಾಗಿ ತಾಯಿತಗಳನ್ನು ಮತ್ತು ಅಂಧಶ್ರದ್ಧೆಯ ವಸ್ತುಗಳನ್ನು ಉಪಯೋಗಿಸುವಂತೆ ಹಾವಳ ಮನವೊಲಿಸಲು ಪ್ರಯತ್ನಿಸಿದಳು. ಹಾವಳು ಬಿಟ್ಟುಕೊಟ್ಟಿದ್ದರೆ ಏನಾಗುತ್ತಿತ್ತು? ಅವಳು ಯೆಹೋವ ದೇವರಲ್ಲಿ ಸಂಪೂರ್ಣ ಭರವಸೆಯ ಕೊರತೆಯ ಲಕ್ಷಣವನ್ನು ತೋರಿಸುತ್ತಿದ್ದಳು ಮತ್ತು ಅವಳು ಆತನ ಸಂರಕ್ಷಣೆಯ ದೃಢವಾದ ಆಧಾರವನ್ನು ಕಳೆದುಕೊಳ್ಳುತ್ತಿದ್ದಳು.—ವಿಮೋಚನಕಾಂಡ 20:5; ಮತ್ತಾಯ 4:10; 1 ಕೊರಿಂಥ 10:21.
ಸೈತಾನನು ಯೋಬನ ಮನವೊಲಿಸಲು ಪ್ರಯತ್ನಿಸಿದನು. ಅವನ ಕುಟುಂಬವನ್ನು, ಅವನ ಸಂಪತ್ತನ್ನು ಹಾಗೂ ಅವನ ಆರೋಗ್ಯವನ್ನು ಕಸಿದುಕೊಳ್ಳುವುದರಲ್ಲಿಯೇ ಅವನು ತೃಪ್ತನಾಗಲಿಲ್ಲ. ಯೋಬನ ಹೆಂಡತಿಯು, “ದೇವರನ್ನು ದೂಷಿಸಿ ಸಾಯಿ” ಎಂದು ಹೇಳಿದಾಗ ತುಂಬ ಕೆಟ್ಟದಾದ ಸಲಹೆಯನ್ನು ಸಹ ಅವನು ಪಡೆದುಕೊಂಡನು! (ಯೋಬ 2:9) ಅನಂತರ ಮೂವರು “ಸ್ನೇಹಿತರು” ಅವನನ್ನು ಭೇಟಿಮಾಡಿ ಅವನ ರೋಗಕ್ಕೆ ಅವನೇ ದೋಷಿಯಾಗಿದ್ದನೆಂದು ಮನವೊಲಿಸಲಿಕ್ಕಾಗಿ ಒಟ್ಟುಗೂಡಿ ಪ್ರಯತ್ನಿಸಿದರು. (ಯೋಬ 19:1-3) ಈ ವಿಧದಲ್ಲಿ ಸೈತಾನನು ಯೋಬನ ದುರ್ಬಲತೆಯ ಲಾಭವನ್ನು ಪಡೆದುಕೊಂಡು, ಅವನನ್ನು ನಿರುತ್ತೇಜಿಸಲು ಮತ್ತು ಯೆಹೋವನ ನೀತಿಯಲ್ಲಿ ಅವನಿಗಿದ್ದ ದೃಢವಾದ ವಿಶ್ವಾಸವನ್ನು ಅಲುಗಾಡಿಸಲು ಪ್ರಯತ್ನಿಸಿದನು. ಹೀಗಿದ್ದರೂ, ಯೋಬನು ತನ್ನ ಏಕೈಕ ನಿರೀಕ್ಷೆಯೋಪಾದಿ ಯೆಹೋವನ ಮೇಲೆ ಆತುಕೊಳ್ಳುವುದನ್ನು ಮುಂದುವರಿಸಿದನು.—ಕೀರ್ತನೆ 55:22ನ್ನು ಹೋಲಿಸಿರಿ.
ನಾವು ರೋಗಗ್ರಸ್ಥರಾಗಿರುವಾಗ, ನಾವು ಕೂಡ ಖಿನ್ನರಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ನಮ್ಮ ನಂಬಿಕೆಯನ್ನು ರಾಜಿಮಾಡಿಕೊಳ್ಳುವಂತಹ ವಿಧದಲ್ಲಿ ನಾವು ಕ್ರಿಯೆಗೈಯುವಂತೆ ಮಾಡುವುದಕ್ಕೆ ಸೈತಾನನು ಚುರುಕಾಗಿರುತ್ತಾನೆ. ಆದುದರಿಂದ, ನಾವು ಅಸ್ವಸ್ಥರಾಗುವಾಗ, ನಮ್ಮ ಕಷ್ಟಾನುಭವಕ್ಕೆ ಮೂಲ ಕಾರಣವು ಪ್ರಾಯಶಃ ಪಿತ್ರಾರ್ಜಿತವಾದ ಪಾಪವಾಗಿದೆಯೇ ಹೊರತು ಯಾವುದೇ ಅತಿಮಾನುಷ ಪ್ರಭಾವವಾಗಿರುವುದಿಲ್ಲ ಎಂಬುದನ್ನು ನಾವು ಮನಸ್ಸಿನಲ್ಲಿಡುವುದು ಪ್ರಾಮುಖ್ಯವಾಗಿದೆ. ನಂಬಿಗಸ್ತನಾದ ಇಸಾಕನು ತನ್ನ ಮರಣದ ಕೆಲವು ವರ್ಷಗಳ ಮುಂಚೆ ಕುರುಡನಾದನು. (ಆದಿಕಾಂಡ 27:1) ಇದಕ್ಕೆ ಕಾರಣವು ದುಷ್ಟಾತ್ಮವಾಗಿರಲಿಲ್ಲ ಬದಲಾಗಿ ವೃದ್ಧಾಪ್ಯವಾಗಿತ್ತು. ರಾಹೇಲಳು ಜನ್ಮನೀಡುತ್ತಿರುವಾಗ ಮೃತಳಾದದ್ದು ಸೈತಾನನಿಂದಲ್ಲ, ಬದಲಾಗಿ ಮಾನವ ದೌರ್ಬಲ್ಯದ ಕಾರಣದಿಂದಾಗಿತ್ತು. (ಆದಿಕಾಂಡ 35:17-19) ಕಾಲಕ್ರಮೇಣ, ಎಲ್ಲ ಪ್ರಾಚೀನ ನಂಬಿಗಸ್ತರು ಮೃತರಾದದ್ದು—ವಶೀಕರಣ ಮಂತ್ರದಿಂದ ಅಥವಾ ಶಾಪಗಳಿಂದಾಗಿ ಅಲ್ಲ—ಬದಲಾಗಿ ಪಿತ್ರಾರ್ಜಿತವಾಗಿ ಪಡೆದುಕೊಂಡ ಅಪರಿಪೂರ್ಣತೆಯಿಂದಾಗಿತ್ತು.
ನಮ್ಮ ಮೇಲೆ ಬರುವ ಪ್ರತಿಯೊಂದು ತರಹದ ರೋಗಗಳು ಅದೃಶ್ಯವಾದ ಆತ್ಮಗಳಿಂದ ಬರುತ್ತವೆಂದು ಭಾವಿಸುವುದು ಒಂದು ಪಾಶವಾಗಿದೆ. ಇದು ಆತ್ಮಗಳ ಬಗ್ಗೆ ಅಹಿತಕರವಾದ ಭಯವನ್ನು ತುಂಬಿಸುತ್ತದೆ. ಅನಂತರ, ನಾವು ಅಸ್ವಸ್ಥರಾಗುವಾಗ, ದೆವ್ವಗಳಿಂದ ದೂರವಿರುವ ಬದಲಿಗೆ ಅವುಗಳನ್ನು ಒಲಿಸಿಕೊಳ್ಳಲು ಪ್ರಯತ್ನಿಸುವ ಶೋಧನೆಗೆ ಒಳಗಾಗುತ್ತೇವೆ. ಸೈತಾನನು ನಮ್ಮನ್ನು ಪ್ರೇತಾರಾಧನೆಯ ಆಚಾರಗಳಿಗೆ ಬಲಿಬೀಳುವುದಕ್ಕೆ ಬೆದರಿಕೆಯನ್ನು ಹಾಕಲು ಶಕ್ತನಾದನೆಂದರೆ ಇದರ ಅರ್ಥ ನಾವು ಸತ್ಯ ದೇವರಾದ ಯೆಹೋವನಿಗೆ ವಿಶ್ವಾಸಘಾತುಕರಾಗಿದ್ದೇವೆ. (2 ಕೊರಿಂಥ 6:15) ನಾವು ದೇವರ ಗೌರವಯುತ ಭಯದಿಂದ ಮಾರ್ಗದರ್ಶಿಸಲ್ಪಡಬೇಕೇ ಹೊರತು ಆತನ ವಿರೋಧಿಯ ಮೂಢನಂಬಿಕೆಯ ಭಯದಿಂದಲ್ಲ.—ಪ್ರಕಟನೆ 14:7.
ಪುಟ್ಟ ಓಮಾಜೀಯು ದುಷ್ಟಾತ್ಮಗಳ ವಿರುದ್ಧ ಲಭ್ಯವಿರುವ ಅತ್ಯುತ್ತಮವಾದ ಸಂರಕ್ಷಣೆಯ ಕೆಳಗೆ ಇದ್ದಾಳೆ. ಅಪೊಸ್ತಲ ಪೌಲನಿಗನುಸಾರ, ಅವಳಿಗೆ ವಿಶ್ವಾಸಿ ತಾಯಿಯಿರುವುದರಿಂದ ಮತ್ತು ದೇವರು ಪವಿತ್ರಾತ್ಮದ ಮೂಲಕ ತನ್ನ ಮಗಳೊಂದಿಗೆ ಇರುವಂತೆ ಆಕೆಯ ತಾಯಿಯು ಪ್ರಾರ್ಥಿಸುವುದಕ್ಕೆ ಶಕ್ತಳಾಗಿರುವುದರಿಂದ ದೇವರು ಅವಳನ್ನು ‘ಪವಿತ್ರ’ಳೆಂದು ಪರಿಗಣಿಸುತ್ತಾನೆ. (1 ಕೊರಿಂಥ 7:14) ನಿಷ್ಕೃಷ್ಟವಾದ ಜ್ಞಾನದೊಂದಿಗೆ ಆಶೀರ್ವದಿಸಲ್ಪಟ್ಟ ಹಾವಳು, ತಾಯಿತಗಳ ಮೇಲೆ ಆತುಕೊಳ್ಳುವುದರ ಬದಲು ಓಮಾಜೀಗೆ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸುವುದಕ್ಕೆ ಶಕ್ತಳಾದಳು.
ರೋಗಗಳ ವಿಭಿನ್ನ ಕಾರಣಗಳು
ಅನೇಕ ವ್ಯಕ್ತಿಗಳಿಗೆ ದುಷ್ಟಾತ್ಮಗಳಲ್ಲಿ ನಂಬಿಕೆಯಿರುವುದಿಲ್ಲ. ಅವರು ಅಸ್ವಸ್ಥರಾದಾಗ, ತಮ್ಮಿಂದ ಸಾಧ್ಯವಿರುವುದಾದರೆ ವೈದ್ಯರಲ್ಲಿಗೆ ಹೋಗುತ್ತಾರೆ. ನಿಜ, ಒಬ್ಬ ಅಸ್ವಸ್ಥ ವ್ಯಕ್ತಿಯು ವೈದ್ಯನ ಬಳಿ ಹೋಗಬಹುದಾದರೂ ಗುಣವಾಗದೆ ಇರಬಹುದು. ವೈದ್ಯರು ಅದ್ಭುತಗಳನ್ನು ನಡಿಸಸಾಧ್ಯವಿಲ್ಲ. ಆದರೆ ಗುಣಹೊಂದಲು ಸಾಧ್ಯವಿರುವ, ಮೂಢನಂಬಿಕೆಯುಳ್ಳ ಅನೇಕ ವ್ಯಕ್ತಿಗಳು, ತೀರ ತಡವಾಗುವಾಗ ಮಾತ್ರ ವೈದ್ಯರ ಬಳಿ ಹೋಗುತ್ತಾರೆ. ಅವರು ಮೊದಲು ಮೂಢನಂಬಿಕೆಯ ವಾಸಿಮಾಡುವ ವಿಧಾನಗಳನ್ನು ಪ್ರಯತ್ನಿಸುತ್ತಾರೆ, ಆಮೇಲೆ ಇವು ವಿಫಲವಾದಾಗ ಕೊನೆಯ ಸಹಾಯದ ಮೂಲವೋ ಎಂಬಂತೆ, ವೈದ್ಯರಲ್ಲಿಗೆ ಹೋಗುತ್ತಾರೆ. ಅನೇಕರು ಅನಗತ್ಯವಾಗಿ ಸಾಯುತ್ತಾರೆ.
ಇನ್ನಿತರರು ಅಜ್ಞಾನದ ಕಾರಣದಿಂದಾಗಿ ಅಕಾಲಿಕ ಮರಣವನ್ನು ಹೊಂದುತ್ತಾರೆ. ಇವರು ರೋಗದ ಲಕ್ಷಣಗಳನ್ನು ಗುರುತಿಸುವುದಿಲ್ಲ ಮತ್ತು ರೋಗವನ್ನು ತಡೆಗಟ್ಟಲು ಯಾವ ಪ್ರಾಯೋಗಿಕ ಹೆಜ್ಜೆಗಳನ್ನು ತೆಗೆದುಕೊಳ್ಳಬೇಕೆಂಬುದು ಇವರಿಗೆ ಗೊತ್ತಿರುವುದಿಲ್ಲ. ತಿಳಿವಳಿಕೆಯು ಅನಾವಶ್ಯಕ ಕಷ್ಟಾನುಭವವನ್ನು ತಡೆಯುವಂತೆ ಸಹಾಯಮಾಡುತ್ತದೆ. ಅಕ್ಷರಸ್ಥ ತಾಯಂದಿರು ಅನಕ್ಷರಸ್ಥ ತಾಯಂದಿರಿಗಿಂತಲೂ ಕಡಿಮೆ ಮಕ್ಕಳನ್ನು ರೋಗದಿಂದ ಕಳೆದುಕೊಳ್ಳುತ್ತಾರೆಂಬ ವಿಷಯವು ಗಮನಾರ್ಹವಾಗಿದೆ. ಹೌದು, ಅಜ್ಞಾನವು ಮಾರಕವಾಗಿರಬಲ್ಲದು.
ರೋಗಕ್ಕೆ ಮತ್ತೊಂದು ಕಾರಣವು ನಿರ್ಲಕ್ಷ್ಯವಾಗಿದೆ. ಉದಾಹರಣೆಗೆ, ಆಹಾರವನ್ನು ತಿನ್ನುವ ಮೊದಲು ಕ್ರಿಮಿಕೀಟಗಳು ಅದರ ಮೇಲೆ ಹರಿದಾಡುವಂತೆ ಬಿಡುವುದರ ಕಾರಣದಿಂದಾಗಿ ಅಥವಾ ಆಹಾರವನ್ನು ತಯಾರಿಸುವವರು ಮುಂಚಿತವಾಗಿ ತಮ್ಮ ಕೈಗಳನ್ನು ತೊಳೆದುಕೊಳ್ಳದೆ ಇರುವುದರಿಂದಾಗಿ ಅನೇಕರು ಅಸ್ವಸ್ಥರಾಗುತ್ತಾರೆ. ಮಲೇರಿಯಾದಿಂದ ಸೋಂಕಿಗೊಳಗಾದ ಪ್ರದೇಶಗಳಲ್ಲಿ ಸೊಳ್ಳೆ ಪರದೆಯಿಲ್ಲದೆ ನಿದ್ರಿಸುವುದು ಕೂಡ ಅಪಾಯಕರವಾಗಿರಸಾಧ್ಯವಿದೆ.a ಆರೋಗ್ಯದ ವಿಷಯದಲ್ಲಿ, “ರೋಗವಾಸಿಗಿಂತ ರೋಗ ತಡೆಗಟ್ಟುವಿಕೆಯೇ ಮೇಲು” ಎಂಬ ಮಾತು ಯಾವಾಗಲೂ ಸತ್ಯವಾಗಿರುತ್ತದೆ.
ಒಂದು ಅವಿವೇಕಿ ಜೀವನಶೈಲಿಯು, ಲಕ್ಷಾಂತರ ಮಂದಿ ಅಸ್ವಸ್ಥರಾಗುವುದಕ್ಕೆ ಮತ್ತು ಅಕಾಲಿಕ ಮರಣಕ್ಕೆ ಕಾರಣವಾಗಿದೆ. ಕುಡುಕತನ, ಲೈಂಗಿಕ ಅನೈತಿಕತೆ, ಅಮಲೌಷಧಗಳ ದುರುಪಯೋಗ ಮತ್ತು ತಂಬಾಕಿನ ಉಪಯೋಗವು ಅನೇಕರ ಆರೋಗ್ಯವನ್ನು ಕೆಡಿಸಿದೆ. ಒಬ್ಬ ವ್ಯಕ್ತಿಯು ಈ ದುರ್ಗುಣಗಳಲ್ಲಿ ಒಳಗೂಡುವುದಾದರೆ ಮತ್ತು ನಂತರ ಅಸ್ವಸ್ಥನಾಗುವುದಾದರೆ, ಯಾರಾದರೊಬ್ಬರೂ ಇವನ ಮೇಲೆ ವಶೀಕರಣ ಮಂತ್ರವನ್ನು ಹಾಕಿದರು ಅಥವಾ ದುಷ್ಟಾತ್ಮವೊಂದು ಇವನ ಮೇಲೆ ಆಕ್ರಮಣಮಾಡಿದ್ದರಿಂದ ಇವೆಲ್ಲವೂ ಸಂಭವಿಸಿತೆಂದು ಹೇಳಬಲ್ಲೆವೋ? ಇಲ್ಲ. ಅವನ ರೋಗಕ್ಕೆ ಅವನೇ ಕಾರಣನಾಗಿದ್ದಾನೆ. ದುಷ್ಟಾತ್ಮಗಳ ಮೇಲೆ ದೋಷಹೊರಿಸುವುದರ ಅರ್ಥವು, ಒಂದು ಅವಿವೇಕಿ ಜೀವನಶೈಲಿಗಾಗಿ ಜವಾಬ್ದಾರಿಯನ್ನು ಸ್ವೀಕರಿಸಲು ನಿರಾಕರಿಸುವುದೆಂದಾಗಿರುತ್ತದೆ.
ನಿಜ, ಕೆಲವು ವಿಷಯಗಳ ಮೇಲೆ ನಮಗೆ ಹತೋಟಿಯಿರುವುದಿಲ್ಲ. ಉದಾಹರಣೆಗೆ, ನಾವು ರೋಗವನ್ನು ಉಂಟುಮಾಡುವ ಜೀವಾಣುಗಳಿಗೆ ಒಡ್ಡಲ್ಪಟ್ಟಿರಬಹುದು ಅಥವಾ ಮಾಲಿನ್ಯತೆಗೆ ಒಡ್ಡಲ್ಪಟ್ಟಿರಬಹುದು. ಓಮಾಜೀಗೆ ಸಂಭವಿಸಿದ್ದು ಇದೇ ಆಗಿತ್ತು. ಭೇದಿಯನ್ನು ಉಂಟುಮಾಡಿದ ಕಾರಣವು ಏನೆಂಬುದು ಅವಳ ತಾಯಿಗೆ ಗೊತ್ತಿರಲಿಲ್ಲ. ಇವಳ ಮಕ್ಕಳು ಬೇರೆ ಮಕ್ಕಳಂತೆ ಪದೇ ಪದೇ ಅಸ್ವಸ್ಥರಾಗುತ್ತಿರಲಿಲ್ಲ ಯಾಕೆಂದರೆ ಅವಳು ತನ್ನ ಮನೆಯನ್ನು ಮತ್ತು ಅಂಗಳವನ್ನು ಸ್ವಚ್ಛವಾಗಿರಿಸುತ್ತಿದ್ದಳು ಮಾತ್ರವಲ್ಲ ಆಹಾರವನ್ನು ತಯಾರಿಸುವ ಮುಂಚೆ ತನ್ನ ಕೈಗಳನ್ನು ಯಾವಾಗಲೂ ತೊಳೆದುಕೊಳ್ಳುತ್ತಿದ್ದಳು. ಆದರೆ ಎಲ್ಲ ಮಕ್ಕಳೂ ಯಾವಾಗಲಾದರೊಮ್ಮೆ ಅಸ್ವಸ್ಥರಾಗುತ್ತಿದ್ದರು. ಕೆಲವು 25 ಬೇರೆ ಬೇರೆ ಅವಯವಗಳ ಸೋಂಕುಗಳಿಂದ ಭೇದಿಯು ಉಂಟಾಗುತ್ತದೆ. ಪ್ರಾಯಶಃ, ಓಮಾಜೀಯ ಸಮಸ್ಯೆಗೆ ಯಾವುದು ಕಾರಣವಾಗಿತ್ತೆಂದು ಯಾರಿಗೂ ಎಂದೂ ನಿಖರವಾಗಿ ಕಂಡುಹಿಡಿಯಲಾಗುವುದಿಲ್ಲ.
ದೀರ್ಘ ಕಾಲದ ಪರಿಹಾರ
ರೋಗಗಳು ದೇವರ ದೋಷವಲ್ಲ. “ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” (ಯಾಕೋಬ 1:13) ಆತನ ಆರಾಧಕರಲ್ಲಿ ಒಬ್ಬನು ಅಸ್ವಸ್ಥನಾಗುವುದಾದರೆ, ಯೆಹೋವನು ಅವನನ್ನು ಆತ್ಮಿಕವಾಗಿ ಪೋಷಿಸುತ್ತಾನೆ. “ಅವನು ಅಸ್ವಸ್ಥನಾಗಿ ಬಿದ್ದುಕೊಂಡಿರುವಾಗ ಯೆಹೋವನು ಅವನನ್ನು ಉದ್ಧರಿಸುವನು; ಅವನ ರೋಗವನ್ನೆಲ್ಲಾ ಪರಿಹರಿಸಿ ಆರೋಗ್ಯವನ್ನುಂಟುಮಾಡಿದಿಯಲ್ಲಾ.” (ಕೀರ್ತನೆ 41:3) ಹೌದು, ದೇವರು ಕರುಣೆಯನ್ನು ತೋರಿಸುತ್ತಾನೆ. ಆತನು ನಮಗೆ ಸಹಾಯ ಮಾಡಲು ಬಯಸುತ್ತಾನೆಯೇ ಹೊರತು ನಮ್ಮನ್ನು ನೋಯಿಸುವುದಿಲ್ಲ.
ನಿಜ, ಯೆಹೋವನಲ್ಲಿ ರೋಗಕ್ಕೆ ದೀರ್ಘ ಕಾಲದ ಪರಿಹಾರವೊಂದಿದೆ—ಅದು ಯೇಸುವಿನ ಮರಣ ಮತ್ತು ಪುನರುತ್ಥಾನವೇ ಆಗಿದೆ. ಯೇಸುವಿನ ಪ್ರಾಯಶ್ಚಿತ್ತ ಯಜ್ಞದ ಮೂಲಕ, ಸಹೃದಯದ ಜನರು ತಮ್ಮ ಪಾಪಪೂರ್ಣ ಅವಸ್ಥೆಯಿಂದ ವಿಮೋಚಿಸಲ್ಪಟ್ಟು, ಕ್ರಮೇಣವಾಗಿ ಪ್ರಮೋದವನ ಭೂಮಿಯಲ್ಲಿ ಪರಿಪೂರ್ಣ ಆರೋಗ್ಯ ಮತ್ತು ನಿತ್ಯಜೀವದ ಮಾರ್ಗದಲ್ಲಿ ತಮ್ಮನ್ನು ಕಂಡುಕೊಳ್ಳುವರು. (ಮತ್ತಾಯ 5:5; ಯೋಹಾನ 3:16) ಯೇಸುವಿನ ಅದ್ಭುತಗಳು ದೇವರ ರಾಜ್ಯವು ತರಲಿರುವ ನಿಜ ವಾಸಿಮಾಡುವಿಕೆಯ ಪೂರ್ವವೀಕ್ಷಣೆಯಾಗಿರುತ್ತವೆ. ದೇವರು ಸೈತಾನ ಮತ್ತು ಅವನ ದೆವ್ವಗಳನ್ನು ಕೂಡ ನಿರ್ಮೂಲಮಾಡುವನು. (ರೋಮಾಪುರ 16:20) ನಿಜ, ತನ್ನಲ್ಲಿ ನಂಬಿಕೆಯನ್ನಿಡುವವರಿಗೆ ಯೆಹೋವನು ಅದ್ಭುತಕರವಾದ ಸಂಗತಿಗಳನ್ನು ಕಾದಿರಿಸಿದ್ದಾನೆ. ನಾವು ತಾಳ್ಮೆತೋರಿಸುತ್ತಾ ಸಹಿಸುವವರಾಗಿರುವ ಅಗತ್ಯವಿದೆಯಷ್ಟೇ.
ಈ ಮಧ್ಯೆ, ಬೈಬಲಿನ ಮತ್ತು ನಂಬಿಗಸ್ತ ಆರಾಧಕರ ಲೋಕವ್ಯಾಪಕ ಸಹೋದರತ್ವದ ಮೂಲಕ ಪ್ರಾಯೋಗಿಕ ವಿವೇಕ ಮತ್ತು ಆತ್ಮಿಕ ಮಾರ್ಗದರ್ಶನವನ್ನು ದೇವರು ವಿತರಿಸುತ್ತಾನೆ. ಆತನು ನಮಗೆ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡುವ ದುರ್ಗುಣಗಳನ್ನು ಹೇಗೆ ತ್ಯಜಿಸಬೇಕೆಂಬುದನ್ನು ತೋರಿಸಿಕೊಡುತ್ತಾನೆ. ಮತ್ತು ಸಮಸ್ಯೆಗಳು ಏಳುವಾಗ ನಮಗೆ ಸಹಾಯಮಾಡುವ ನಿಜ ಸ್ನೇಹಿತರನ್ನು ಸಹ ಆತನು ಒದಗಿಸುತ್ತಾನೆ.
ಯೋಬನ ಕುರಿತು ಪುನಃ ಯೋಚಿಸಿರಿ. ಮಾಟಮಂತ್ರಮಾಡುವ ವೈದ್ಯನ ಬಳಿ ಹೋಗಿರುತ್ತಿದ್ದರೆ, ಅದು ಅವನು ಮಾಡಿರಬಹುದಾದ ಅತಿ ಕೆಟ್ಟದಾದ ಸಂಗತಿಯಾಗಿರಸಾಧ್ಯವಿತ್ತು! ಹಾಗೆ ಮಾಡಿದ್ದರೆ ಅದು ದೇವರ ಸಂರಕ್ಷಣೆಯಿಂದ ಅವನನ್ನು ದೂರಸರಿಸುತ್ತಿತ್ತು ಮತ್ತು ಉಗ್ರ ಪರೀಕ್ಷೆಯ ನಂತರ ಅವನ ಮುಂದೆ ಇಡಲ್ಪಟ್ಟಿದ್ದ ಎಲ್ಲ ಆಶೀರ್ವಾದಗಳನ್ನು ಅವನು ಕಳೆದುಕೊಳ್ಳುತ್ತಿದ್ದನು. ದೇವರು ಯೋಬನನ್ನು ಮರೆಯಲಿಲ್ಲ ಮತ್ತು ಅದೇ ರೀತಿಯಲ್ಲಿ ಆತನು ನಮ್ಮನ್ನು ಸಹ ಮರೆಯುವುದಿಲ್ಲ. “ನೀವು ಯೋಬನಲ್ಲಿದ್ದ ತಾಳ್ಮೆಯ ವಿಷಯವಾಗಿ ಕೇಳಿ ಕರ್ತನು ಅವನಿಗೆ ಅಂತ್ಯದಲ್ಲಿ ಮಾಡಿದ್ದನ್ನು ನೋಡಿ ಕರ್ತನು [“ಯೆಹೋವನು,” NW] ಕರುಣಾಸಾಗರನೂ ದಯಾಳುವೂ ಆಗಿದ್ದಾನೆಂದು ತಿಳಿದಿದ್ದೀರಷ್ಟೆ.” (ಯಾಕೋಬ 5:11) ನಾವು ಎಂದಿಗೂ ಬಿಟ್ಟುಕೊಡದಿದ್ದರೆ, ದೇವರ ನೇಮಿತ ಸಮಯದಲ್ಲಿ ಅದ್ಭುತಕರವಾದ ಆಶೀರ್ವಾದಗಳನ್ನು ನಾವು ಸಹ ಪಡೆದುಕೊಳ್ಳುವೆವು.
ಪುಟ್ಟ ಓಮಾಜೀಗೆ ಏನು ಸಂಭವಿಸಿತು? ಕಾವಲಿನಬುರುಜು ಪತ್ರಿಕೆಯ ಸಂಗಾತಿಯಾಗಿರುವ ಎಚ್ಚರ! (ಇಂಗ್ಲಿಷ್) ಪತ್ರಿಕೆಯಲ್ಲಿ ಬಾಯಿಯ ಮೂಲಕ ಪುನಃದ್ರವೀಕರಿಸುವ ಚಿಕಿತ್ಸೆಯ (ಓಆರ್ಟಿ) ಬಗ್ಗೆ ತೋರಿಬಂದ ಲೇಖನವನ್ನು ಅವಳ ತಾಯಿಯು ನೆನಪಿಸಿಕೊಂಡಳು.b ಅವಳು ಅದರ ಸೂಚನೆಗಳನ್ನು ಅನುಸರಿಸಿದಳು ಮತ್ತು ಓಮಾಜೀಗೆ ಕುಡಿಯುವುದಕ್ಕಾಗಿ ದ್ರಾವಣವನ್ನು ತಯಾರಿಸಿದಳು. ಈಗ ಪುಟ್ಟ ಹುಡುಗಿಯು ಉತ್ತಮ ಆರೋಗ್ಯದಲ್ಲಿದ್ದಾಳೆ.
[ಅಧ್ಯಯನ ಪ್ರಶ್ನೆಗಳು]
a ಸುಮಾರು 50 ಕೋಟಿ ಜನರು ಮಲೇರಿಯಾದಿಂದ ಬಾಧಿತರಾಗಿದ್ದಾರೆ. ಪ್ರತಿ ವರ್ಷ, ಸುಮಾರು 20 ಲಕ್ಷದಷ್ಟು ಜನರು ಆಫ್ರಿಕದಲ್ಲಿ ಈ ರೋಗದಿಂದ ಸಾಯುತ್ತಾರೆ.
b ಸೆಪ್ಟೆಂಬರ್ 22, 1985ರ ಎಚ್ಚರ! (ಇಂಗ್ಲಿಷ್) ಪುಟ 24-5ರಲ್ಲಿರುವ “ಜೀವಗಳನ್ನು ರಕ್ಷಿಸುವ ಉಪ್ಪಿನ ಪಾನೀಯ” ಎಂಬ ಲೇಖನವನ್ನು ನೋಡಿರಿ.
[ಪುಟ 7 ರಲ್ಲಿರುವ ಚಿತ್ರಗಳು]
ರೋಗದ ಸಮಸ್ಯೆಗೆ ಶಾಶ್ವತವಾದ ಪರಿಹಾರವನ್ನು ಯೆಹೋವನು ಏರ್ಪಡಿಸಿದ್ದಾನೆ