ಯೆಹೋವನು ನಮ್ಮಿಂದ ತೀರ ಹೆಚ್ಚನ್ನು ಕೇಳಿಕೊಳ್ಳುತ್ತಾನೊ?
“ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”—ಮೀಕ 6:8.
1. ಯಾವ ಕಾರಣಕ್ಕಾಗಿ ಕೆಲವರು ಯೆಹೋವನಿಗೆ ಸೇವೆಸಲ್ಲಿಸದೆ ಇರಬಹುದು?
ಯೆಹೋವನು ತನ್ನ ಜನರಿಂದ ಯಾವುದೊ ವಿಷಯವನ್ನು ಕೇಳಿಕೊಳ್ಳುತ್ತಾನೆ. ಮೀಕನ ಪ್ರವಾದನೆಯಿಂದ ಉದ್ಧರಿಸಲ್ಪಟ್ಟ ಈ ಮೇಲಿನ ಮಾತುಗಳನ್ನು ಓದುವಾಗ, ದೇವರ ಆವಶ್ಯಕತೆಗಳು ನ್ಯಾಯೋಚಿತವಾದವುಗಳೆಂದು ನೀವು ತೀರ್ಮಾನಿಸಬಹುದು. ಹಾಗಿದ್ದರೂ, ಅನೇಕರು ನಮ್ಮ ಮಹಾನ್ ಸೃಷ್ಟಿಕರ್ತನಿಗೆ ಸೇವೆಸಲ್ಲಿಸುವುದಿಲ್ಲ. ಈ ಮೊದಲು ಆತನನ್ನು ಸೇವಿಸುತ್ತಿದ್ದ ಕೆಲವರು ಈಗ ಸೇವಿಸುತ್ತಿಲ್ಲ. ಏಕೆ? ಏಕೆಂದರೆ ದೇವರು ತಮ್ಮಿಂದ ತೀರ ಹೆಚ್ಚನ್ನು ಕೇಳಿಕೊಳ್ಳುತ್ತಾನೆಂದು ಅವರು ನೆನಸುತ್ತಾರೆ. ಆದರೆ, ದೇವರು ನಿಜವಾಗಿಯೂ ಹಾಗೆ ಕೇಳಿಕೊಳ್ಳುತ್ತಾನೊ? ಅಥವಾ ಯೆಹೋವನು ಕೇಳಿಕೊಳ್ಳುವಂತಹ ವಿಷಯದ ಕಡೆಗೆ ಒಬ್ಬ ವ್ಯಕ್ತಿಗಿರುವ ಮನೋಭಾವದಲ್ಲಿ ಯಾವ ಸಮಸ್ಯೆಯಾದರೂ ಇರಸಾಧ್ಯವೊ? ಈ ವಿಷಯದಲ್ಲಿ ಒಂದು ಐತಿಹಾಸಿಕ ಘಟನೆಯು ಸೂಕ್ಷ್ಮ ಪರಿಜ್ಞಾನವನ್ನು ನೀಡುವುದು.
2. ನಾಮಾನನು ಯಾರು, ಮತ್ತು ಅವನು ಏನು ಮಾಡುವಂತೆ ಯೆಹೋವನ ಪ್ರವಾದಿಯು ಕೇಳಿಕೊಂಡನು?
2 ಅರಾಮ್ಯರ ಸೇನಾಪತಿಯಾದ ನಾಮಾನನು ಕುಷ್ಠರೋಗ ಪೀಡಿತನಾಗಿದ್ದನು. ಅವನನ್ನು ಗುಣಪಡಿಸಸಾಧ್ಯವಿದ್ದ ಯೆಹೋವನ ಒಬ್ಬ ಪ್ರವಾದಿಯು ಇಸ್ರಾಯೇಲಿನಲ್ಲಿದ್ದಾನೆಂದು ಅವನಿಗೆ ಹೇಳಲಾಯಿತು. ಆದುದರಿಂದ, ನಾಮಾನನು ಮತ್ತು ಅವನ ಸಹಚರರು ಇಸ್ರಾಯೇಲ್ ದೇಶಕ್ಕೆ ಪ್ರಯಾಣಿಸಿ, ದೇವರ ಪ್ರವಾದಿಯಾದ ಎಲೀಷನ ಮನೆಯನ್ನು ತಲಪಿದರು. ತನ್ನನ್ನು ಭೇಟಿಯಾಗಲು ಬಂದ ಆ ಗಣ್ಯ ವ್ಯಕ್ತಿಯನ್ನು ವಂದಿಸಲು ಮನೆಯಿಂದ ಹೊರಗೆ ಬರುವ ಬದಲು, ಎಲೀಷನು ಒಬ್ಬ ದಾಸನ ಮೂಲಕ ನಾಮಾನನಿಗೆ ಹೇಳಿಕಳುಹಿಸಿದ್ದು: “ಹೋಗಿ ಯೊರ್ದನ್ ಹೊಳೆಯಲ್ಲಿ ಏಳು ಸಾರಿ ಸ್ನಾನಮಾಡು; ಆಗ ನಿನ್ನ ದೇಹವು ಮುಂಚಿನಂತಾಗುವದು; ನೀನು ಶುದ್ಧನಾಗುವಿ.”—2 ಅರಸು 5:10.
3. ಯೆಹೋವನು ಕೇಳಿಕೊಂಡದ್ದನ್ನು ಮಾಡಲು ನಾಮಾನನು ಮೊದಲು ನಿರಾಕರಿಸಿದ್ದೇಕೆ?
3 ದೇವರ ಪ್ರವಾದಿಯ ಆವಶ್ಯಕತೆಗನುಸಾರ ನಾಮಾನನು ನಡೆದುಕೊಂಡರೆ, ಈ ಅಸಹ್ಯಕರವಾದ ರೋಗದಿಂದ ಅವನು ಗುಣಮುಖನಾಗಲಿದ್ದನು. ಹಾಗಾದರೆ, ಯೆಹೋವನು ಅವನಿಂದ ತೀರ ಹೆಚ್ಚನ್ನು ಕೇಳಿಕೊಳ್ಳುತ್ತಿದ್ದನೊ? ಖಂಡಿತವಾಗಿಯೂ ಇಲ್ಲ. ಆದರೂ, ಯೆಹೋವನು ಕೇಳಿಕೊಂಡದ್ದನ್ನು ಮಾಡಲು ನಾಮಾನನು ಇಷ್ಟಪಡಲಿಲ್ಲ. ಅವನು ಪ್ರತಿಭಟಿಸಿ ಹೇಳಿದ್ದು: “ದಮಸ್ಕದ ಅಬಾನಾ, ಪರ್ಪರ್ ಎಂಬ ಹೊಳೆಗಳು ಇಸ್ರಾಯೇಲ್ಯರ ಎಲ್ಲಾ ಹೊಳೆಹಳ್ಳಗಳಿಗಿಂತ ಉತ್ತಮವಾಗಿವೆಯಲ್ಲವೋ? ಸ್ನಾನದಿಂದ ವಾಸಿಯಾಗುವ ಹಾಗಿದ್ದರೆ ನಾನು ಅವುಗಳಲ್ಲಿಯೇ ಸ್ನಾನಮಾಡಬಹುದಲ್ಲವೆ”? ಎಂದು ಹೇಳುತ್ತಾ, ಬಹಳ ಸಿಟ್ಟುಗೊಂಡು ಅವನು ಅಲ್ಲಿಂದ ಹೊರಟುಹೋದನು.—2 ಅರಸು 5:12.
4, 5. (ಎ) ನಾಮಾನನ ವಿಧೇಯತೆಗೆ ದೊರೆತ ಪ್ರತಿಫಲವೇನು, ಮತ್ತು ಅದನ್ನು ಪಡೆದ ತರುವಾಯ ಅವನು ಹೇಗೆ ಪ್ರತಿಕ್ರಿಯಿಸಿದನು? (ಬಿ) ಈಗ ನಾವು ಏನನ್ನು ಪರಿಗಣಿಸಲಿರುವೆವು?
4 ನಾಮಾನನ ಸಮಸ್ಯೆಯು ನಿಜವಾಗಿಯೂ ಏನಾಗಿತ್ತು? ಅವನಿಂದ ಕೇಳಿಕೊಳ್ಳಲ್ಪಟ್ಟ ವಿಷಯವು ತೀರ ಕಷ್ಟಕರವಾದದ್ದಾಗಿರಲಿಲ್ಲ. ನಾಮಾನನ ಸೇವಕರು ಜಾಣ್ಮೆಯಿಂದ ಅವನಿಗೆ ಹೇಳಿದ್ದು: “ಪ್ರವಾದಿಯು ಒಂದು ಕಠಿಣವಾದ ಕೆಲಸವನ್ನು ಹೇಳಿದ್ದರೆ ಅದನ್ನು ಮಾಡುತ್ತಿದ್ದಿರಲ್ಲಾ; ಹಾಗಾದರೆ ಸ್ನಾನಮಾಡಿ ಶುದ್ಧನಾಗು ಎಂದು ಹೇಳಿದರೆ ಯಾಕೆ ಅದರಂತೆ ಮಾಡಬಾರದು.” (2 ಅರಸು 5:13) ನಾಮಾನನ ಮನೋಭಾವವೇ ಅವನ ಸಮಸ್ಯೆಯಾಗಿತ್ತು. ತನಗೆ ಸಲ್ಲಬೇಕಾದ ಗೌರವವು ನೀಡಲ್ಪಡಲಿಲ್ಲವೆಂದು ಮತ್ತು ನಿರರ್ಥಕವೂ ಅವಮಾನಕರವೂ ಆದ ಕೆಲಸವನ್ನು ಮಾಡುವಂತೆ ತನ್ನಿಂದ ಕೇಳಿಕೊಳ್ಳಲಾಯಿತೆಂದು ಅವನು ಭಾವಿಸಿದನು. ಆದರೂ ನಾಮಾನನು ತನ್ನ ಸೇವಕರ ಜಾಣತನದ ಸಲಹೆಗೆ ಪ್ರತಿಕ್ರಿಯಿಸಿ, ಯೊರ್ದನ್ ನದಿಯಲ್ಲಿ ಏಳು ಬಾರಿ ಮುಳುಗಿ ಎದ್ದನು. “ಅವನ ದೇಹವು ಕೂಸಿನ ದೇಹದಂತೆ ಶುದ್ಧ”ವಾದುದನ್ನು ನೋಡಿ ಅವನಿಗಾದ ಆನಂದವನ್ನು ಊಹಿಸಿಕೊಳ್ಳಿರಿ! ಅವನು ಕೃತಜ್ಞತೆಯುಳ್ಳವನಾಗಿದ್ದನು. ಅಲ್ಲದೆ, ಆ ಸಮಯದಿಂದ ತಾನು ಯೆಹೋವನನ್ನಲ್ಲದೆ ಇನ್ನಾವ ದೇವರುಗಳನ್ನೂ ಆರಾಧಿಸಲಾರೆನೆಂದು ಪ್ರಕಟಿಸಿದನು.—2 ಅರಸು 5:14-17.
5 ಜನರು ವಿವಿಧ ನಿಯಮಗಳಿಗನುಸಾರ ನಡೆದುಕೊಳ್ಳುವಂತೆ ಯೆಹೋವನು ಮಾನವ ಇತಿಹಾಸದ ಆರಂಭದಿಂದ ಹಿಡಿದು ಈ ವರೆಗೂ ಕೇಳಿಕೊಂಡಿದ್ದಾನೆ. ಇವುಗಳಲ್ಲಿ ಕೆಲವನ್ನು ಪರಿಗಣಿಸುವಂತೆ ನಾವು ನಿಮ್ಮನ್ನು ವಿನಂತಿಸಿಕೊಳ್ಳುತ್ತೇವೆ. ಈ ಉದಾಹರಣೆಗಳನ್ನು ಪರಿಗಣಿಸುವಾಗ, ಯೆಹೋವನು ಅವರಿಂದ ಕೇಳಿಕೊಂಡದ್ದನ್ನು ನಿಮ್ಮಿಂದ ಕೇಳಿಕೊಂಡಿದ್ದಾದರೆ ನೀವು ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ ಎಂದು ಸ್ವತಃ ಪ್ರಶ್ನಿಸಿಕೊಳ್ಳಿರಿ. ಯೆಹೋವನು ಇಂದು ನಮ್ಮಿಂದ ಏನನ್ನು ಕೇಳಿಕೊಳ್ಳುತ್ತಾನೆಂಬುದನ್ನು ನಾವು ನಂತರ ಪರಿಶೀಲಿಸಿ ನೋಡೋಣ.
ಯೆಹೋವನು ಗತಕಾಲದಲ್ಲಿ ಕೇಳಿಕೊಂಡಂತಹ ವಿಷಯ
6. ಪ್ರಥಮ ಮಾನವ ಜೋಡಿಯಿಂದ ಏನು ಮಾಡುವಂತೆ ಕೇಳಿಕೊಳ್ಳಲಾಯಿತು, ಮತ್ತು ಇಂತಹ ಆವಶ್ಯಕತೆಗಳಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ?
6 ಪ್ರಥಮ ಮಾನವ ಜೋಡಿಯಾದ ಆದಾಮಹವ್ವರು, ಮಕ್ಕಳನ್ನು ಬೆಳೆಸುವಂತೆ, ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುವಂತೆ, ಮತ್ತು ಪ್ರಾಣಿಗಳ ಮೇಲೆ ಅಧಿಕಾರ ನಡೆಸುವಂತೆ ಯೆಹೋವನು ಅವರಿಗೆ ಆದೇಶವನ್ನಿತ್ತನು. ಈ ಪುರುಷನಿಗೂ ಅವನ ಹೆಂಡತಿಗೂ ವಿಸ್ತಾರವಾದ ಉದ್ಯಾನವನದಂತಹ ಮನೆಯನ್ನೂ ಕೊಡಲಾಗಿತ್ತು. (ಆದಿಕಾಂಡ 1:27, 28; 2:9-15) ಆದರೆ, ಒಂದೇ ಒಂದು ನಿರ್ಬಂಧವಿತ್ತು. ಅದೇನೆಂದರೆ, ಅವರು ಏದೆನ್ ತೋಟದಲ್ಲಿದ್ದ ಅನೇಕ ಹಣ್ಣಿನ ಮರಗಳಲ್ಲಿ ಒಂದರ ಹಣ್ಣನ್ನು ಮಾತ್ರ ತಿನ್ನಬಾರದಾಗಿತ್ತು. (ಆದಿಕಾಂಡ 2:16, 17) ಅದು ತೀರ ಹೆಚ್ಚನ್ನು ಕೇಳಿಕೊಳ್ಳುತ್ತಿರಲಿಲ್ಲ ಅಲ್ಲವೆ? ಪರಿಪೂರ್ಣ ಆರೋಗ್ಯದಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯೊಂದಿಗೆ, ಇಂತಹ ಒಂದು ನೇಮಕವನ್ನು ನೆರವೇರಿಸುವುದರಲ್ಲಿ ನೀವು ಆನಂದಿಸುತ್ತಿರಲಿಲ್ಲವೊ? ಆ ತೋಟದಲ್ಲಿ ಒಬ್ಬ ಪ್ರಲೋಭನಕಾರನು ಕಾಣಿಸಿಕೊಂಡಿದ್ದರೂ, ನೀವು ಅವನ ವಾದವನ್ನು ನಿರಾಕರಿಸುತ್ತಿರಲಿಲ್ಲವೊ? ಅಲ್ಲದೆ, ಈ ಸರಳವಾದೊಂದು ನಿರ್ಬಂಧವನ್ನು ಹೊರಿಸಲು ಯೆಹೋವನಿಗೆ ಅಧಿಕಾರವಿತ್ತೆಂದು ನೀವು ಒಪ್ಪಿಕೊಳ್ಳಲಾರಿರೊ?—ಆದಿಕಾಂಡ 3:1-5.
7. (ಎ) ನೋಹನಿಗೆ ಯಾವ ನೇಮಕವು ಕೊಡಲ್ಪಟ್ಟಿತು, ಮತ್ತು ಅವನು ಯಾವ ರೀತಿಯ ವಿರೋಧವನ್ನು ಎದುರಿಸಿದನು? (ಬಿ) ಯೆಹೋವನು ನೋಹನಿಂದ ಕೇಳಿಕೊಂಡ ವಿಷಯವನ್ನು ನೀವು ಹೇಗೆ ವೀಕ್ಷಿಸುತ್ತೀರಿ?
7 ತದನಂತರ, ಒಂದು ಭೌಗೋಲಿಕ ಜಲಪ್ರಳಯದಿಂದ ಪಾರಾಗಲಿಕ್ಕಾಗಿ ನೋಹನು ಒಂದು ನಾವೆಯನ್ನು ಕಟ್ಟುವಂತೆ ಯೆಹೋವನು ಕೇಳಿಕೊಂಡನು. ನಾವೆಯ ಬೃಹದಾಕಾರವನ್ನು ದೃಷ್ಟಿಯಲ್ಲಿಟ್ಟುಕೊಳ್ಳುವಾಗ, ಆ ಕೆಲಸವು ತುಂಬ ಕಷ್ಟಕರವಾಗಿತ್ತಲ್ಲದೆ, ಅದನ್ನು ಕಟ್ಟುವಾಗ ಪ್ರಾಯಶಃ ತುಂಬ ಕುಚೋದ್ಯ ಹಾಗೂ ವಿರೋಧಗಳು ಇದ್ದವು. ಆದರೂ, ನೋಹನು ತನ್ನ ಮನೆವಾರ್ತೆಯನ್ನು ಮತ್ತು ಅನೇಕಾನೇಕ ಪ್ರಾಣಿಗಳನ್ನು ಸಂರಕ್ಷಿಸಸಾಧ್ಯವಾದದ್ದು ಎಂತಹ ಒಂದು ಸುಯೋಗವಾಗಿತ್ತು! (ಆದಿಕಾಂಡ 6:1-8, 14-16; ಇಬ್ರಿಯ 11:7; 2 ಪೇತ್ರ 2:5) ಇಂತಹ ಒಂದು ನೇಮಕವು ನಿಮಗೆ ಕೊಡಲ್ಪಟ್ಟಿದ್ದರೆ, ಅದನ್ನು ನೆರವೇರಿಸಲು ನೀವು ಪ್ರಯಾಸಪಡುತ್ತಿದ್ದಿರೊ? ಅಥವಾ ಯೆಹೋವನು ನಿಮ್ಮಿಂದ ತೀರ ಹೆಚ್ಚನ್ನು ಕೇಳಿಕೊಳ್ಳುತ್ತಿದ್ದಾನೆಂದು ನೀವು ತೀರ್ಮಾನಿಸುತ್ತಿದ್ದಿರೊ?
8. ಅಬ್ರಹಾಮನಿಗೆ ಏನು ಮಾಡುವಂತೆ ಕೇಳಿಕೊಳ್ಳಲಾಯಿತು, ಮತ್ತು ಅವನು ಅದಕ್ಕೆ ವಿಧೇಯನಾದುದರ ಪರಿಣಾಮದಿಂದ ಯಾವ ವಿಷಯವು ದೃಷ್ಟಾಂತಿಸಲ್ಪಟ್ಟಿತು?
8 ತೀರ ಕಷ್ಟಕರವಾದ ಕೆಲಸವನ್ನು ಮಾಡುವಂತೆ ಯೆಹೋವನು ಅಬ್ರಹಾಮನಲ್ಲಿ ಕೇಳಿಕೊಂಡನು. ಆಗ ಆತನು ಹೇಳಿದ್ದು: “ನಿನಗೆ ಪ್ರಿಯನಾಗಿರುವ ಒಬ್ಬನೇ ಮಗನಾದ ಇಸಾಕನನ್ನು ತೆಗೆದುಕೊಂಡು ಮೊರೀಯ ದೇಶಕ್ಕೆ ಹೋಗಿ ಅಲ್ಲಿ ಅವನನ್ನು . . . ಸರ್ವಾಂಗಹೋಮವಾಗಿ ಅರ್ಪಿಸಬೇಕು.” (ಆದಿಕಾಂಡ 22:2) ಆ ಸಮಯದಲ್ಲಿ ಸಂತಾನರಹಿತನಾಗಿದ್ದ ಇಸಾಕನಿಗೆ ಮುಂದೆ ಮಕ್ಕಳಾಗುವವೆಂದು ಯೆಹೋವನು ವಾಗ್ದಾನಿಸಿದ್ದ ಕಾರಣ, ಇಸಾಕನನ್ನು ಪುನಃ ಜೀವಿಸುವಂತೆ ಮಾಡುವ ದೇವರ ಸಾಮರ್ಥ್ಯದಲ್ಲಿ ಅಬ್ರಹಾಮನಿಗಿದ್ದ ನಂಬಿಕೆಯು ಪರೀಕ್ಷಿಸಲ್ಪಟ್ಟಿತು. ಅಬ್ರಹಾಮನು ಇಸಾಕನನ್ನು ಬಲಿಯಾಗಿ ಅರ್ಪಿಸಲಿದ್ದಾಗ, ದೇವರು ಆ ಯುವಕನನ್ನು ಕಾಪಾಡಿದನು. ಮಾನವಕುಲಕ್ಕಾಗಿ ದೇವರು ತನ್ನ ಸ್ವಂತ ಮಗನನ್ನು ಅರ್ಪಿಸುವನೆಂಬುದನ್ನು ಮತ್ತು ತದನಂತರ ಅವನನ್ನು ಪುನರುತ್ಥಾನಗೊಳಿಸುವನೆಂಬುದನ್ನು ಈ ಘಟನೆಯು ದೃಷ್ಟಾಂತಿಸಿತು.—ಆದಿಕಾಂಡ 17:19; 22:9-18; ಯೋಹಾನ 3:16; ಅ. ಕೃತ್ಯಗಳು 2:23, 24, 29-32; ಇಬ್ರಿಯ 11:17-19.
9. ಯೆಹೋವನು ಅಬ್ರಹಾಮನಿಂದ ತೀರ ಹೆಚ್ಚನ್ನು ಕೇಳಿಕೊಳ್ಳಲಿಲ್ಲವೆಂದು ಏಕೆ ಹೇಳಸಾಧ್ಯವಿದೆ?
9 ಯೆಹೋವ ದೇವರು ಅಬ್ರಹಾಮನಿಂದ ತೀರ ಹೆಚ್ಚನ್ನು ಕೇಳಿಕೊಳ್ಳುತ್ತಿದ್ದನೆಂದು ಕೆಲವರು ಯೋಚಿಸಬಹುದು. ಆದರೆ, ಈ ಮಾತು ನಿಜವೊ? ಮೃತರನ್ನು ಪುನರುತ್ಥಾನಗೊಳಿಸಲು ಶಕ್ತನಾಗಿರುವ ನಮ್ಮ ಸೃಷ್ಟಿಕರ್ತನು, ತನಗೆ ವಿಧೇಯರಾಗಿರುವಂತೆ ನಮ್ಮಿಂದ ಕೇಳಿಕೊಳ್ಳುವುದು—ಇದು ಮರಣದಲ್ಲಿ ತಾತ್ಕಾಲಿಕವಾಗಿ ನಿದ್ರಿಸುವುದನ್ನು ಅವಶ್ಯಪಡಿಸುವುದಾದರೂ—ಕ್ರೂರತನವಾಗಿದೆಯೊ? ಯೇಸು ಕ್ರಿಸ್ತನು ಮತ್ತು ಅವನ ಆದಿ ಹಿಂಬಾಲಕರು ಹಾಗೆ ನೆನಸಲಿಲ್ಲ. ಅವರು ದೇವರ ಚಿತ್ತಕ್ಕಾಗಿ ಶಾರೀರಿಕ ಹಿಂಸೆಯನ್ನು, ಮತ್ತು ಮರಣವನ್ನು ಕೂಡ ಅನುಭವಿಸಲು ಸಿದ್ಧರಾಗಿದ್ದರು. (ಯೋಹಾನ 10:11, 17, 18; ಅ. ಕೃತ್ಯಗಳು 5:40-42; 21:13) ನಿಮ್ಮ ಪರಿಸ್ಥಿತಿಗಳು ಈ ಮೇಲಿನ ಕಷ್ಟಾನುಭವಗಳನ್ನು ತರುವಲ್ಲಿ, ನೀವು ಅದನ್ನು ಸಹಿಸಿಕೊಳ್ಳಲು ಸಿದ್ಧರಾಗಿರುವಿರೊ? ಯಾರು ತನ್ನ ನಾಮದ ಜನರಾಗಿರಲು ಒಪ್ಪಿಕೊಂಡರೊ, ಅವರಿಂದ ಯೆಹೋವನು ಕೇಳಿಕೊಂಡ ಕೆಲವೊಂದು ವಿಷಯಗಳನ್ನು ಈಗ ಪರಿಗಣಿಸಿರಿ.
ಯೆಹೋವನು ಇಸ್ರಾಯೇಲ್ ಜನಾಂಗಕ್ಕೆ ನೀಡಿದ ಧರ್ಮಶಾಸ್ತ್ರ
10. ಯೆಹೋವನು ಕೇಳಿಕೊಂಡದ್ದೆಲ್ಲವನ್ನು ಮಾಡಲು ಯಾರು ಸಿದ್ಧರಾಗಿದ್ದರು, ಮತ್ತು ಫಲಸ್ವರೂಪವಾಗಿ ಆತನು ಅವರಿಗೆ ಏನನ್ನು ಕೊಟ್ಟನು?
10 ಅಬ್ರಹಾಮನ ಮಗನಾದ ಇಸಾಕನು ಮತ್ತು ಮೊಮ್ಮಗನಾದ ಯಾಕೋಬ ಇಲ್ಲವೆ ಇಸ್ರಾಯೇಲ್ನ ಮೂಲಕ ಬಂದ ಅವನ ಸಂತತಿಯವರು, ಇಸ್ರಾಯೇಲ್ ಜನಾಂಗವನ್ನು ರಚಿಸಿದರು. ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದ ದಾಸತ್ವದಿಂದ ಬಿಡಿಸಿದನು. (ಆದಿಕಾಂಡ 32:28; 46:1-3; 2 ಸಮುವೇಲ 7:23, 24) ಅದಾದ ಸ್ವಲ್ಪದರಲ್ಲಿ, ದೇವರು ತಮ್ಮಿಂದ ಕೇಳಿಕೊಂಡ ಎಲ್ಲವನ್ನು ಮಾಡಲು ತಾವು ಸಿದ್ಧರೆಂದು ಅವರು ಒಪ್ಪಿಕೊಂಡರು. ಅವರು ಹೇಳಿದ್ದು: “ಯೆಹೋವನು ಹೇಳಿದಂತೆಯೇ ಮಾಡಲು ನಾವು ಸಿದ್ಧರಾಗಿದ್ದೇವೆ.” (ವಿಮೋಚನಕಾಂಡ 19:8, NW) ಆತನ ಆಳ್ವಿಕೆಗೆ ಅಧೀನರಾಗಲು ಇಚ್ಛಿಸಿದ ಇಸ್ರಾಯೇಲ್ಯರ ಬಯಕೆಗನುಗುಣವಾಗಿ, ದಶಾಜ್ಞೆಗಳನ್ನು ಸೇರಿಸಿ 600ಕ್ಕಿಂತಲೂ ಹೆಚ್ಚಿನ ನಿಯಮಗಳನ್ನು ಯೆಹೋವನು ಆ ಜನಾಂಗಕ್ಕೆ ನೀಡಿದನು. ತಕ್ಕ ಸಮಯದಲ್ಲಿ, ಮೋಶೆಯ ಮೂಲಕ ಕೊಡಲ್ಪಟ್ಟ ಈ ನಿಯಮಗಳು, ಒಟ್ಟಿನಲ್ಲಿ ಧರ್ಮಶಾಸ್ತ್ರವೆಂದು ಪ್ರಸಿದ್ಧವಾದವು.—ಎಜ್ರನು 7:6; ಲೂಕ 10:25-27; ಯೋಹಾನ 1:17.
11. ಧರ್ಮಶಾಸ್ತ್ರದ ಒಂದು ಉದ್ದೇಶವು ಏನಾಗಿತ್ತು, ಮತ್ತು ಅದನ್ನು ಪೂರೈಸಲು ನೆರವಾದ ಕೆಲವು ನಿಯಮಗಳಾವುವು?
11 ಧರ್ಮಶಾಸ್ತ್ರದ ಒಂದು ಉದ್ದೇಶವು, ಇಸ್ರಾಯೇಲ್ಯರಿಗೆ ಲೈಂಗಿಕ ನೈತಿಕತೆ, ವ್ಯಾಪಾರ ವ್ಯವಹಾರಗಳು, ಮತ್ತು ಮಕ್ಕಳ ಆರೈಕೆಯಂತಹ ವಿಷಯಗಳ ಬಗ್ಗೆ ಹಿತಕರವಾದ ನಿಯಮಗಳನ್ನು ನೀಡುವ ಮೂಲಕ ಅವರನ್ನು ಸಂರಕ್ಷಿಸುವುದೇ ಆಗಿತ್ತು. (ವಿಮೋಚನಕಾಕಂಡ 20:14; ಯಾಜಕಕಾಂಡ 18:6-8, 22-24; 19:35, 36; ಧರ್ಮೋಪದೇಶಕಾಂಡ 6:6-9) ಜೊತೆ ಮಾನವರನ್ನು ಹಾಗೂ ಒಬ್ಬನಲ್ಲಿರುವ ಪ್ರಾಣಿಗಳನ್ನು ಹೇಗೆ ಉಪಚರಿಸಬೇಕೆಂಬುದರ ಕುರಿತೂ ನಿಯಮಗಳಿದ್ದವು. (ಯಾಜಕಕಾಂಡ 19:18; ಧರ್ಮೋಪದೇಶಕಾಂಡ 22:4, 10) ವಾರ್ಷಿಕ ಉತ್ಸವಗಳು ಮತ್ತು ಆರಾಧನೆಗಾಗಿ ಒಟ್ಟುಗೂಡುವ ಏರ್ಪಾಡುಗಳಿಗೆ ಸಂಬಂಧಿಸಿದ ಆವಶ್ಯಕತೆಗಳು, ಜನರಿಗೆ ಆತ್ಮಿಕ ಸಂರಕ್ಷಣೆಯನ್ನು ನೀಡಲು ಸಹಾಯಮಾಡಿದವು.—ಯಾಜಕಕಾಂಡ 23:1-43; ಧರ್ಮೋಪದೇಶಕಾಂಡ 31:10-13.
12. ಧರ್ಮಶಾಸ್ತ್ರದ ಮುಖ್ಯ ಉದ್ದೇಶವು ಏನಾಗಿತ್ತು?
12 ಧರ್ಮಶಾಸ್ತ್ರದ ಮುಖ್ಯ ಉದ್ದೇಶವು ಏನಾಗಿತ್ತೆಂಬುದನ್ನು ಅಪೊಸ್ತಲ ಪೌಲನು ಸೂಚಿಸಿದನು. ಅವನು ಬರೆದುದು: “ವಾಗ್ದಾನದಲ್ಲಿ ಸೂಚಿತನಾದವನು [ಯೇಸು] ಹುಟ್ಟಿ ಬರುವ ತನಕ ದೇವರು ಇಂಥಿಂಥದು ಅಪರಾಧವೆಂದು ತೋರಿಸುವದಕ್ಕಾಗಿ ಅದನ್ನು ವಾಗ್ದಾನದ ತರುವಾಯ . . . ಕೊಟ್ಟನು.” (ಗಲಾತ್ಯ 3:19) ತಾವು ಅಪರಿಪೂರ್ಣರಾಗಿದ್ದೇವೆ ಎಂಬುದನ್ನು ಧರ್ಮಶಾಸ್ತ್ರವು ಇಸ್ರಾಯೇಲ್ಯರಿಗೆ ಜ್ಞಾಪಕ ಹುಟ್ಟಿಸಿತು. ಹಾಗಾದರೆ, ತಮ್ಮ ಪಾಪಗಳನ್ನು ಸಂಪೂರ್ಣವಾಗಿ ತೊಡೆದುಹಾಕಲು ಅವರಿಗೆ ಪರಿಪೂರ್ಣ ಯಜ್ಞದ ಅಗತ್ಯವಿತ್ತು. (ಇಬ್ರಿಯ 10:1-4) ಆದುದರಿಂದ, ಮೆಸ್ಸೀಯನು ಇಲ್ಲವೆ ಕ್ರಿಸ್ತನಾಗಿದ್ದ ಯೇಸುವನ್ನು ಅಂಗೀಕರಿಸುವಂತೆ ಧರ್ಮಶಾಸ್ತ್ರವು ಜನರನ್ನು ಸಿದ್ಧಗೊಳಿಸಿತು. ಪೌಲನು ಬರೆದುದು: “ಹೀಗಿರಲಾಗಿ ಧರ್ಮಶಾಸ್ತ್ರವು ನಮ್ಮನ್ನು ಕಾಯುವ ಆಳಿನಂತಾಗಿದೆ; ನಾವು ನಂಬಿಕೆಯಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವದಕ್ಕಾಗಿ ಕ್ರಿಸ್ತನಲ್ಲಿಗೆ ಸೇರುವ ತನಕ ಅದು ನಮ್ಮನ್ನು ಕಾಯುತ್ತದೆ.”—ಗಲಾತ್ಯ 3:24.
ಯೆಹೋವನ ಧರ್ಮಶಾಸ್ತ್ರವು ಒಂದು ಹೊರೆಯಾಗಿತ್ತೊ?
13. (ಎ) ಧರ್ಮಶಾಸ್ತ್ರದ ಬಗ್ಗೆ ಅಪರಿಪೂರ್ಣ ಮನುಷ್ಯರಿಗಿದ್ದ ಅಭಿಪ್ರಾಯವೇನು, ಮತ್ತು ಏಕೆ? (ಬಿ) ಧರ್ಮಶಾಸ್ತ್ರವು ನಿಜವಾಗಿಯೂ ಒಂದು ಹೊರೆಯಾಗಿತ್ತೊ?
13 ಧರ್ಮಶಾಸ್ತ್ರವು “ಪರಿಶುದ್ಧವೂ ನ್ಯಾಯವೂ ಹಿತ”ಕರವೂ ಆಗಿದ್ದರೂ, ಅನೇಕರು ಅದನ್ನೊಂದು ಹೊರೆಯೆಂದೆಣಿಸಿದರು. (ರೋಮಾಪುರ 7:12) ಧರ್ಮಶಾಸ್ತ್ರವು ಪರಿಪೂರ್ಣವಾಗಿದ್ದ ಕಾರಣ, ಅದರ ಉನ್ನತ ಮಟ್ಟವನ್ನು ಇಸ್ರಾಯೇಲ್ಯರಿಗೆ ಮುಟ್ಟಲು ಸಾಧ್ಯವಾಗಲಿಲ್ಲ. (ಕೀರ್ತನೆ 19:7) ಆದುದರಿಂದಲೇ ಅಪೊಸ್ತಲ ಪೇತ್ರನು ಅದನ್ನು “ನಮ್ಮ ಪಿತೃಗಳಾಗಲಿ ನಾವಾಗಲಿ ಹೊರಲಾರದ ನೊಗ”ವೆಂದು ಕರೆದನು. (ಅ. ಕೃತ್ಯಗಳು 15:10) ನಿಶ್ಚಯವಾಗಿಯೂ ಧರ್ಮಶಾಸ್ತ್ರವು ತಾನೇ ಹೊರೆಯಾಗಿರದಿದ್ದರೂ, ಅದನ್ನು ಪಾಲಿಸುವುದು ಜನರಿಗೆ ಪ್ರಯೋಜನವನ್ನು ತರುತ್ತಿತ್ತು.
14. ಇಸ್ರಾಯೇಲ್ಯರ ಸಂಬಂಧದಲ್ಲಿ ಧರ್ಮಶಾಸ್ತ್ರವು ಬಹಳಷ್ಟು ಪ್ರಯೋಜನಕರವಾಗಿತ್ತೆಂದು ಯಾವ ಕೆಲವು ಉದಾಹರಣೆಗಳು ತೋರಿಸುತ್ತವೆ?
14 ಉದಾಹರಣೆಗೆ ಧರ್ಮಶಾಸ್ತ್ರಕ್ಕನುಸಾರ, ಒಬ್ಬ ಕಳ್ಳನನ್ನು ಸೆರೆಯಲ್ಲಿಡುವ ವ್ಯವಸ್ಥೆ ಇರಲಿಲ್ಲ, ಬದಲಿಗೆ ಅವನು ಕದ್ದಂತಹ ವಸ್ತುಗಳಿಗೆ ಪ್ರತಿಯಾಗಿ ಎರಡರಷ್ಟು ಇಲ್ಲವೆ ಅದಕ್ಕಿಂತಲೂ ಹೆಚ್ಚಿನದ್ದನ್ನು ಹಿಂದಿರುಗಿಸಲಿಕ್ಕಾಗಿ ಅವನು ಕಷ್ಟಪಟ್ಟು ದುಡಿಯಬೇಕಿತ್ತು. ಹೀಗೆ, ವಸ್ತುಗಳನ್ನು ಕಳೆದುಕೊಂಡ ವ್ಯಕ್ತಿಗೆ ಯಾವ ನಷ್ಟವೂ ಆಗುತ್ತಿರಲಿಲ್ಲ, ಮತ್ತು ಸೆರೆಮನೆಯಂತಹ ವ್ಯವಸ್ಥೆಯನ್ನು ಬೆಂಬಲಿಸುವುದಕ್ಕಾಗಿ, ಕಷ್ಟಪಟ್ಟು ದುಡಿಯುವ ಜನರ ಮೇಲೆ ಯಾವ ಹೊರೆಯೂ ಬೀಳುತ್ತಿರಲಿಲ್ಲ. (ವಿಮೋಚನಕಾಂಡ 22:1, 3, 4, 7) ಆರೋಗ್ಯಕ್ಕೆ ಹಾನಿಕರವಾದ ಆಹಾರಪದಾರ್ಥಗಳು ನಿಷೇಧಿಸಲ್ಪಟ್ಟವು. ಸರಿಯಾಗಿ ಬೇಯಿಸಲ್ಪಡದ ಹಂದಿಮಾಂಸದಿಂದ ರೋಮಕ್ರಿಮಿ ರೋಗ (ಟ್ರಿಕಿನೋಸಿಸ್) ಮತ್ತು ಮೊಲಗಳ ಮಾಂಸದಿಂದ ಟೂಲರೀಮಿಯ ಎಂಬಂತಹ ಸೋಂಕು ರೋಗವು ಬರಸಾಧ್ಯವಿತ್ತು. (ಯಾಜಕಕಾಂಡ 11:4-12) ಶವಗಳ ಸ್ಪರ್ಶವನ್ನು ನಿಷೇಧಿಸುವ ಮೂಲಕ, ಧರ್ಮಶಾಸ್ತ್ರವು ಒಂದು ಸಂರಕ್ಷಣೆಯನ್ನು ಒದಗಿಸಿತು. ವ್ಯಕ್ತಿಯೊಬ್ಬನು ಒಂದು ಶವವನ್ನು ಮುಟ್ಟುವುದಾದರೆ, ಅವನು ತನ್ನನ್ನೂ ತನ್ನ ಬಟ್ಟೆಗಳನ್ನೂ ತೊಳೆದುಕೊಳ್ಳಬೇಕಾಗಿತ್ತು. (ಯಾಜಕಕಾಂಡ 11:31-36; ಅರಣ್ಯಕಾಂಡ 19:11-22) ಜನರನ್ನು ರೋಗಾಣುಗಳ ಸೋಂಕಿನಿಂದ ಸಂರಕ್ಷಿಸಲಿಕ್ಕಾಗಿ ಮಲವನ್ನು ಹೂತಿಡಬೇಕಾಗಿತ್ತು. ಇಂತಹ ರೋಗಾಣುಗಳ ಅಸ್ತಿತ್ವವನ್ನು ವಿಜ್ಞಾನಿಗಳು ಇತ್ತೀಚಿನ ಶತಮಾನಗಳಲ್ಲಷ್ಟೇ ಕಂಡುಹಿಡಿದಿದ್ದಾರೆ.—ಧರ್ಮೋಪದೇಶಕಾಂಡ 23:13.
15. ಇಸ್ರಾಯೇಲ್ಯರಿಗೆ ಯಾವುದು ಒಂದು ಹೊರೆಯಾಗಿ ಪರಿಣಮಿಸಿತು?
15 ಧರ್ಮಶಾಸ್ತ್ರವು ಜನರಿಂದ ತೀರ ಹೆಚ್ಚನ್ನು ಕೇಳಿಕೊಳ್ಳಲಿಲ್ಲ. ಆದರೆ ಇದೇ ಮಾತನ್ನು ಧರ್ಮಶಾಸ್ತ್ರದ ಅರ್ಥನಿರೂಪಕರಾಗಿದ್ದ ಪುರುಷರ ವಿಷಯದಲ್ಲಿ ಹೇಳಸಾಧ್ಯವಿರಲಿಲ್ಲ. ಅವರು ವಿಧಿಸಿದ ನಿಯಮಗಳ ಕುರಿತು, ಸಂಪಾದಕ ಜೇಮ್ಸ್ ಹೇಸ್ಟಿಂಗ್ಸ್ ಅವರ ಬೈಬಲಿನ ಒಂದು ನಿಘಂಟು (ಇಂಗ್ಲಿಷ್) ಎಂಬ ಗ್ರಂಥವು ಹೇಳುವುದು: “ಬೈಬಲಿನ ಪ್ರತಿಯೊಂದು ಆಜ್ಞೆಯ ಸುತ್ತಲೂ ಚಿಕ್ಕಪುಟ್ಟ ನಿಯಮಗಳ ಜಾಲವೇ ಸೃಷ್ಟಿಸಲ್ಪಟ್ಟಿತು. . . . ಹೀಗೆ, ಊಹಿಸಸಾಧ್ಯವಿರುವ ಪ್ರತಿಯೊಂದು ವಿಷಯವನ್ನು ಧರ್ಮಶಾಸ್ತ್ರದ ವ್ಯಾಪ್ತಿಯೊಳಗೆ ತರುವ ಮತ್ತು ಕರುಣಾರಹಿತ ತರ್ಕದೊಂದಿಗೆ ಸಂಪೂರ್ಣ ಮಾನವ ನಡತೆಯನ್ನು ಕಟ್ಟುನಿಟ್ಟಾದ ಕಾರ್ಯವಿಧಾನಗಳ ಮೂಲಕ ನಿಯಂತ್ರಿಸುವ ಪ್ರಯತ್ನವನ್ನು ಮಾಡಲಾಯಿತು. . . . ಮನಸ್ಸಾಕ್ಷಿಯನ್ನು ನಿಗ್ರಹಿಸಲಾಯಿತು, ಮತ್ತು ಅನೇಕಾನೇಕ ನಿಯಮಗಳ ಕೆಳಗೆ ದೈವಿಕ ವಾಕ್ಯದ ಸಜೀವ ಶಕ್ತಿಯನ್ನು ನಿಷ್ಕ್ರಿಯಗೊಳಿಸುವುದರ ಜೊತೆಗೆ ಅದನ್ನು ಅದುಮಿಡಲಾಯಿತು.”
16. ಯೇಸು ಧಾರ್ಮಿಕ ಮುಖಂಡರ ಭಾರವಾದ ಕಟ್ಟಳೆ ಹಾಗೂ ಸಂಪ್ರದಾಯಗಳ ಕುರಿತು ಏನು ಹೇಳಿದನು?
16 ನಿಯಮಗಳ ದೊಡ್ಡ ಹೊರೆಯನ್ನೇ ಜನರ ಮೇಲೆ ಹೊರಿಸಿದ ಈ ಧಾರ್ಮಿಕ ಮುಖಂಡರನ್ನು ಯೇಸು ಕ್ರಿಸ್ತನು ಖಂಡಿಸಿದನು. ಅವನಂದದ್ದು: “ಅವರು ಭಾರವಾದ ಹೊರೆಗಳನ್ನು ಕಟ್ಟಿ ಜನರ ಹೆಗಲಿನ ಮೇಲೆ ಹೊರಿಸುತ್ತಾರೆ; ತಾವಾದರೋ ಬೆರಳಿನಿಂದಲಾದರೂ ಅವುಗಳನ್ನು ಮುಟ್ಟಲೊಲ್ಲರು.” (ಮತ್ತಾಯ 23:2, 4) ಸವಿಸ್ತಾರವಾಗಿ ಶುಚಿಮಾಡುವಂತಹ ಕಾರ್ಯವಿಧಾನಗಳನ್ನು ಸೇರಿಸಿ, ಭಾರವಾದ ಮಾನವ ನಿರ್ಮಿತ ಕಟ್ಟಳೆಗಳು ಮತ್ತು ಸಂಪ್ರದಾಯಗಳು, “ದೇವರ ವಾಕ್ಯವನ್ನು ನಿರರ್ಥಕ”ಮಾಡಿದವೆಂದು ಅವನು ಸೂಚಿಸಿದನು. (ಮಾರ್ಕ 7:1-13; ಮತ್ತಾಯ 23:13, 24-26) ಯೇಸು ಭೂಮಿಗೆ ಬರುವುದಕ್ಕೂ ಮೊದಲು, ಯೆಹೋವನು ತನ್ನ ಜನರಿಂದ ಕೇಳಿಕೊಂಡ ವಿಷಯಕ್ಕೆ ಇಸ್ರಾಯೇಲ್ನ ಧಾರ್ಮಿಕ ಮುಖಂಡರು ತಪ್ಪಾದ ಅರ್ಥನಿರೂಪಣೆಯನ್ನು ಕೊಟ್ಟರು.
ಯೆಹೋವನು ನಿಜವಾಗಿಯೂ ಕೇಳಿಕೊಳ್ಳುವ ವಿಷಯ
17. ಯೆಹೋವನು ಅಪನಂಬಿಗಸ್ತ ಇಸ್ರಾಯೇಲ್ಯರ ಸರ್ವಾಂಗಹೋಮಗಳಿಂದ ಏಕೆ ಪ್ರಸನ್ನನಾಗಲಿಲ್ಲ?
17 ಪ್ರವಾದಿಯಾದ ಯೆಶಾಯನ ಮೂಲಕ, ಯೆಹೋವನು ಹೇಳಿದ್ದು: “ಸೊದೋಮಿನ ಅಧಿಪತಿಗಳೇ, ಯೆಹೋವನ ಮಾತನ್ನು ಆಲಿಸಿರಿ; ಗೊಮೋರದ ಪ್ರಜೆಗಳೇ, ನಮ್ಮ ದೇವರ ಧರ್ಮೋಪದೇಶವನ್ನು ಕೇಳಿರಿ! ಯೆಹೋವನು ಹೀಗೆನ್ನುತ್ತಾನೆ—ಲೆಕ್ಕವಿಲ್ಲದ ನಿಮ್ಮ ಯಜ್ಞಗಳು ನನಗೇಕೆ? ಟಗರುಗಳ ಸರ್ವಾಂಗಹೋಮ, ಪುಷ್ಟಪಶುಗಳ ಕೊಬ್ಬು, ಇದೆಲ್ಲಾ ನನಗೆ ಸಾಕಾಯಿತು; ಹೋರಿಕುರಿಹೋತಗಳ ರಕ್ತಕ್ಕೆ ನಾನು ಒಲಿಯೆನು.” (ಯೆಶಾಯ 1:10, 11) ದೇವರು ತಾನೇ ಧರ್ಮಶಾಸ್ತ್ರದಲ್ಲಿ ವಿಧಿಸಿದ್ದ ಬಲಿಯರ್ಪಣೆಗಳಿಂದ ಏಕೆ ಅಪ್ರಸನ್ನನಾಗಿದ್ದನು? (ಯಾಜಕಕಾಂಡ 1:1–4:35) ಏಕೆಂದರೆ ಆತನಿಗೆ ಸಲ್ಲಬೇಕಾದ ಗೌರವವನ್ನು ಜನರು ಸಲ್ಲಿಸಲಿಲ್ಲ. ಆದುದರಿಂದಲೇ, “ನಿಮ್ಮನ್ನು ತೊಳೆದುಕೊಳ್ಳಿರಿ, ಶುದ್ಧಿಮಾಡಿಕೊಳ್ಳಿರಿ, ನನ್ನ ಕಣ್ಣೆದುರಿನ ನಿಮ್ಮ ದುಷ್ಕೃತ್ಯಗಳನ್ನು ತೊಲಗಿಸಿರಿ, ದುರಾಚಾರವನ್ನು ಬಿಡಿರಿ; ಸದಾಚಾರವನ್ನು ಅಭ್ಯಾಸಮಾಡಿರಿ; ನ್ಯಾಯನಿರತರಾಗಿರಿ, ಹಿಂಸಕನನ್ನು ತಿದ್ದಿ ಸರಿಪಡಿಸಿರಿ, ಅನಾಥನಿಗೆ ನ್ಯಾಯ ತೀರಿಸಿರಿ, ವಿಧವೆಯ ಪಕ್ಷವಾಗಿ ವಾದಿಸಿರಿ” ಎಂಬ ಬುದ್ಧಿವಾದವು ಅವರಿಗೆ ನೀಡಲಾಯಿತು. (ಯೆಶಾಯ 1:16, 17) ಯೆಹೋವನು ತನ್ನ ಸೇವಕರಿಂದ ಏನನ್ನು ಬಯಸುತ್ತಾನೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುವಂತೆ ಇದು ಸಹಾಯ ಮಾಡುವುದಿಲ್ಲವೊ?
18. ಯೆಹೋವನು ಇಸ್ರಾಯೇಲ್ಯರಿಂದ ನಿಜವಾಗಿಯೂ ಏನನ್ನು ಕೇಳಿಕೊಂಡನು?
18 ದೇವರು ನಿಜವಾಗಿಯೂ ಕೇಳಿಕೊಳ್ಳುವುದನ್ನು ಯೇಸು ತಿಳಿಯಪಡಿಸಿದನು. “ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆ ಮುಖ್ಯವಾದದ್ದು” ಎಂದು ಅವನನ್ನು ಪ್ರಶ್ನಿಸಲಾದಾಗ, ಯೇಸು ಉತ್ತರ ಕೊಟ್ಟದ್ದು: “ನಿನ್ನ ದೇವರಾಗಿರುವ ಕರ್ತ [“ಯೆಹೋವ,” NW]ನನ್ನು ನಿನ್ನ ಪೂರ್ಣಹೃದಯದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ. ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ.” (ಮತ್ತಾಯ 22:36-40; ಯಾಜಕಕಾಂಡ 19:18; ಧರ್ಮೋಪದೇಶಕಾಂಡ 6:4-6) ಪ್ರವಾದಿಯಾದ ಮೋಶೆಯು, “ನೀವು ನಿಮ್ಮ ದೇವರಾದ ಯೆಹೋವನಲ್ಲಿ ಭಯಭಕ್ತಿಯುಳ್ಳವರಾಗಿ ಎಲ್ಲಾ ವಿಷಯಗಳಲ್ಲಿಯೂ ಆತನು ಹೇಳುವ ಮಾರ್ಗದಲ್ಲೇ ನಡೆಯುತ್ತಾ ಆತನನ್ನು ಪ್ರೀತಿಸುತ್ತಾ ಸಂಪೂರ್ಣವಾದ ಹೃದಯದಿಂದಲೂ ಮನಸ್ಸಿನಿಂದಲೂ ಸೇವೆಮಾಡುತ್ತಾ ನಾನು ನಿಮ್ಮ ಮೇಲಿಗಾಗಿ ಈಗ ಬೋಧಿಸುವ ಆತನ ಆಜ್ಞಾವಿಧಿಗಳನ್ನು ಅನುಸರಿಸುತ್ತಾ ಇರುವದನ್ನೇ ಹೊರತು ನಿಮ್ಮ ದೇವರಾದ ಯೆಹೋವನು ನಿಮ್ಮಿಂದ ಬೇರೇನು ಕೇಳಿಕೊಳ್ಳುತ್ತಾನೆ?” ಎಂದು ಕೇಳಿದಾಗ, ಈ ವಿಷಯವನ್ನೇ ಒತ್ತಿಹೇಳಿದನು.—ಧರ್ಮೋಪದೇಶಕಾಂಡ 10:12, 13; 15:7, 8.
19. ಇಸ್ರಾಯೇಲ್ಯರು ತಮ್ಮನ್ನು ಪರಿಶುದ್ಧರೆಂದು ತೋರಿಸಿಕೊಳ್ಳಲು ಹೇಗೆ ಪ್ರಯತ್ನಿಸಿದರು, ಆದರೆ ಯೆಹೋವನು ಅವರಿಗೆ ಏನು ಹೇಳಿದನು?
19 ತಮ್ಮ ತಪ್ಪಾದ ವರ್ತನೆಯ ಎದುರಿನಲ್ಲೂ ತಾವು ಪರಿಶುದ್ಧರೆಂದು ತೋರ್ಪಡಿಸಿಕೊಳ್ಳಲು ಇಸ್ರಾಯೇಲ್ಯರು ಬಯಸಿದರು. ಧರ್ಮಶಾಸ್ತ್ರಕ್ಕನುಸಾರ ಅವರು ವರ್ಷಕ್ಕೆ ಒಂದಾವರ್ತಿ, ಅಂದರೆ ದೋಷಪರಿಹಾರದ ದಿನದಂದು ಮಾತ್ರ ಉಪವಾಸಮಾಡಬೇಕಾಗಿದ್ದರೂ, ಅವರು ಅನೇಕ ಬಾರಿ ಉಪವಾಸ ಮಾಡತೊಡಗಿದರು. (ಯಾಜಕಕಾಂಡ 16:30, 31) ಆದರೆ ಯೆಹೋವನು ಅವರನ್ನು ಖಂಡಿಸುತ್ತಾ ಹೇಳಿದ್ದು: “ನೋಡಿರಿ, ಕೇಡಿನ ಬಂಧಗಳನ್ನು ಬಿಚ್ಚುವದು, ನೊಗದ ಕಣ್ಣಿಗಳನ್ನು ಕಳಚುವದು, ಜಜ್ಜಿಹೋದವರನ್ನು ಬಿಡುಗಡೆಮಾಡುವದು, ನೊಗಗಳನ್ನೆಲ್ಲಾ ಮುರಿಯುವದು, ಹಸಿದವರಿಗೆ ಅನ್ನವನ್ನು ಹಂಚುವದು, ಅಲೆಯುತ್ತಿರುವ ಬಡವರನ್ನು ಮನೆಗೆ ಬರಮಾಡಿಕೊಳ್ಳುವದು, ಬೆತ್ತಲೆಯವರನ್ನು ಕಂಡಾಗೆಲ್ಲಾ ಅವರಿಗೆ ಹೊದಿಸುವದು, ನಿನ್ನಂತೆ ನರನಾಗಿರುವ ಯಾವನಿಗೇ ಆಗಲಿ ಮುಖತಪ್ಪಿಸಿಕೊಳ್ಳದಿರುವದು, ಇವುಗಳೇ ನನಗೆ ಇಷ್ಟವಾದ ಉಪವಾಸವ್ರತವಲ್ಲವೇ.”—ಯೆಶಾಯ 58:3-7.
20. ಯೇಸು ಯಾವ ಕಾರಣಕ್ಕಾಗಿ ಧಾರ್ಮಿಕ ಕಪಟಿಗಳ್ನು ಖಂಡಿಸಿದನು?
20 ಈ ಸ್ವನೀತಿವಂತ ಇಸ್ರಾಯೇಲ್ಯರಿಗೆ, ಯೇಸುವಿನ ದಿನದ ಧಾರ್ಮಿಕ ಕಪಟಿಗಳಿಗೆ ಇದ್ದಂತಹ ಸಮಸ್ಯೆಯೇ ಇತ್ತು. ಅವರ ಕುರಿತು ಯೇಸು ಹೇಳಿದ್ದು: “ನೀವು ಮರುಗ ಸೋಪು ಜೀರಿಗೆಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿರಿ. ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು.” (ಮತ್ತಾಯ 23:23; ಯಾಜಕಕಾಂಡ 27:30) ಯೆಹೋವನು ನಮ್ಮಿಂದ ನಿಜವಾಗಿಯೂ ಏನನ್ನು ಕೇಳಿಕೊಳ್ಳುತ್ತಾನೆಂಬುದನ್ನು ತಿಳಿದುಕೊಳ್ಳಲು ಯೇಸುವಿನ ಮಾತುಗಳು ನಮಗೆ ಸಹಾಯ ಮಾಡುವುದಿಲ್ಲವೊ?
21. ಯೆಹೋವನು ನಮ್ಮಿಂದ ಕೇಳಿಕೊಳ್ಳುವ ಮತ್ತು ಕೇಳಿಕೊಳ್ಳದಿರುವ ವಿಷಯಗಳನ್ನು ಪ್ರವಾದಿಯಾದ ಮೀಕನು ಹೇಗೆ ಸಾರಾಂಶಿಸಿದನು?
21 ಯೆಹೋವನು ನಮ್ಮಿಂದ ಕೇಳಿಕೊಳ್ಳುವ ಮತ್ತು ಕೇಳಿಕೊಳ್ಳದಿರುವ ವಿಷಯವನ್ನು ಸ್ಪಷ್ಟೀಕರಿಸುತ್ತಾ, ದೇವರ ಪ್ರವಾದಿಯಾದ ಮೀಕನು ಕೇಳಿದ್ದು: “ನಾನು ಯೆಹೋವನ ಸನ್ನಿಧಿಯಲ್ಲಿ ಯಾವ ಕಾಣಿಕೆಯೊಡನೆ ಕಾಣಿಸಿಕೊಳ್ಳಲಿ, ಯಾವದನ್ನರ್ಪಿಸಿ ಮಹೋನ್ನತದೇವರ ಸಮ್ಮುಖದಲ್ಲಿ ಅಡ್ಡಬೀಳಲಿ? ಹೋಮದ ಪಶುಗಳನ್ನೂ ಒಂದು ವರುಷದ ಕರುಗಳನ್ನೂ ತೆಗೆದುಕೊಂಡುಬಂದು ಆತನ ಮುಂದೆ ಕಾಣಿಸಿಕೊಳ್ಳಲೋ? ಸಾವಿರಾರು ಟಗರುಗಳನ್ನೂ ಲಕ್ಷೋಪಲಕ್ಷ ತೈಲ ಪ್ರವಾಹಗಳನ್ನೂ ನೋಡಿ ಯೆಹೋವನು ಮೆಚ್ಚಾನೇ? ನನ್ನ ದ್ರೋಹದ ನಿಮಿತ್ತ ನನ್ನ ಚೊಚ್ಚಲಮಗನನ್ನು ಅರ್ಪಿಸಲೋ, ನನ್ನ ಆತ್ಮದ ಪಾಪಕ್ಕಾಗಿ ನನ್ನ ಗರ್ಭದ ಫಲವನ್ನು ಸಲ್ಲಿಸಲೋ? ಮನುಷ್ಯನೇ, ಒಳ್ಳೆಯದು ಇಂಥದೇ ಎಂದು ಯೆಹೋವನು ನಿನಗೆ ತೋರಿಸಿದ್ದಾನಷ್ಟೆ; ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?”—ಮೀಕ 6:6-8.
22. ಧರ್ಮಶಾಸ್ತ್ರಕ್ಕೆ ಅಧೀನರಾಗಿದ್ದ ಜನರಿಂದ ಯೆಹೋವನು ವಿಶೇಷವಾಗಿ ಏನನ್ನು ಬಯಸಿದನು?
22 ಹಾಗಾದರೆ, ಧರ್ಮಶಾಸ್ತ್ರಕ್ಕೆ ಅಧೀನರಾಗಿದ್ದ ಜನರಿಂದ ಯೆಹೋವನು ವಿಶೇಷವಾಗಿ ಏನನ್ನು ಕೇಳಿಕೊಂಡನು? ಅವರು ಯೆಹೋವ ದೇವರನ್ನು ಪ್ರೀತಿಸಬೇಕಾಗಿತ್ತೆಂಬುದು ನಿಶ್ಚಿತ. ಅಷ್ಟುಮಾತ್ರವಲ್ಲ, ಅಪೊಸ್ತಲ ಪೌಲನು ಹೇಳಿದ್ದು: “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬ ಒಂದೇ ಮಾತಿನಲ್ಲಿ ಧರ್ಮಶಾಸ್ತ್ರವೆಲ್ಲಾ ಅಡಕವಾಗಿದೆ.” (ಗಲಾತ್ಯ 5:14) ತದ್ರೀತಿಯಲ್ಲಿ, ರೋಮಿನಲ್ಲಿದ್ದ ಕ್ರೈಸ್ತರಿಗೆ ಪೌಲನು ಹೇಳಿದ್ದು: “ಮತ್ತೊಬ್ಬರನ್ನು ಪ್ರೀತಿಸುವವನು ಧರ್ಮಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ. . . . ಪ್ರೀತಿಯಿಂದಲೇ ಧರ್ಮಪ್ರಮಾಣವು ನೆರವೇರುತ್ತದೆ.”—ರೋಮಾಪುರ 13:8-10.
ಅದು ತೀರ ಹೆಚ್ಚಾಗಿಲ್ಲ
23, 24. (ಎ) ಯೆಹೋವನು ನಮ್ಮಿಂದ ಕೇಳಿಕೊಳ್ಳುವುದನ್ನು ಮಾಡುವುದು ತೀರ ಹೆಚ್ಚಾದ ವಿಷಯವಾಗಿರಬಾರದು ಏಕೆ? (ಬಿ) ನಾವು ಮುಂದೆ ಏನನ್ನು ಚರ್ಚಿಸಲಿರುವೆವು?
23 ಯೆಹೋವನು ಎಷ್ಟೊಂದು ಪ್ರೀತಿಪರನೂ, ಹಿತಚಿಂತಕನೂ, ಕರುಣಾಮಯಿಯೂ ಆದ ದೇವರೂ ಆಗಿದ್ದಾನೆಂಬ ಸಂಗತಿಯಿಂದ ನಾವು ಪ್ರಭಾವಿತರಾಗುವುದಿಲ್ಲವೊ? ಆತನ ಏಕಜಾತ ಪುತ್ರನಾದ ಯೇಸು ಕ್ರಿಸ್ತನು, ದೇವರ ಪ್ರೀತಿಯನ್ನು ಉತ್ಪ್ರೇಕ್ಷಿಸಲು, ಮತ್ತು ಜನರು ದೇವರ ದೃಷ್ಟಿಯಲ್ಲಿ ಎಷ್ಟು ಅಮೂಲ್ಯರೆಂಬುದನ್ನು ಪ್ರಚುರಪಡಿಸಲು ಈ ಭೂಮಿಗೆ ಬಂದನು. ದೇವರ ಪ್ರೀತಿಯನ್ನು ದೃಷ್ಟಾಂತಿಸುತ್ತಾ, ಯೇಸು ಅಲ್ಪವಾದ ಗುಬ್ಬಿಗಳ ಕುರಿತು ಹೇಳಿದ್ದು: “ನಿಮ್ಮ ತಂದೆಯ ಚಿತ್ತವಿಲ್ಲದೆ ಒಂದಾದರೂ ನೆಲಕ್ಕೆ ಬೀಳದು.” ಆದುದರಿಂದಲೇ ಅವನು ತೀರ್ಮಾನಿಸಿದ್ದು: “ಆದದರಿಂದ ಹೆದರಬೇಡಿರಿ; ಬಹಳ ಗುಬ್ಬಿಗಳಿಗಿಂತ ನೀವು ಹೆಚ್ಚಿನವರು.” (ಮತ್ತಾಯ 10:29-31) ಇಂತಹ ಒಬ್ಬ ಪ್ರೀತಿಪೂರ್ಣ ದೇವರು ನಮ್ಮಿಂದ ಕೇಳಿಕೊಳ್ಳುವ ಯಾವುದೇ ಕೆಲಸವು ತೀರ ಹೆಚ್ಚೆಂದು ನಮಗೆ ಎಂದಿಗೂ ಅನಿಸಬಾರದು!
24 ಆದರೂ, ಯೆಹೋವನು ನಮ್ಮಿಂದ ಇಂದು ಏನನ್ನು ಕೇಳಿಕೊಳ್ಳುತ್ತಾನೆ? ಮತ್ತು ದೇವರು ತೀರ ಹೆಚ್ಚನ್ನು ಕೇಳಿಕೊಳ್ಳುತ್ತಾನೆಂದು ಕೆಲವರಿಗೆ ಅನಿಸುವುದು ಏಕೆ? ಈ ಪ್ರಶ್ನೆಗಳನ್ನು ಪರಿಶೀಲಿಸುವ ಮೂಲಕ, ಯೆಹೋವನು ನಮ್ಮಿಂದ ಕೇಳಿಕೊಳ್ಳುವ ಪ್ರತಿಯೊಂದು ವಿಷಯವನ್ನು ಮಾಡುವುದು ಏಕೆ ಒಂದು ಅದ್ಭುತಕರವಾದ ಸುಯೋಗವಾಗಿದೆ ಎಂಬುದನ್ನು ನಾವು ನೋಡಶಕ್ತರಾಗುತ್ತೇವೆ.
ನೀವು ಉತ್ತರಿಸಬಲ್ಲಿರೊ?
◻ ಕೆಲವರು ಯೆಹೋವನಿಗೆ ಸೇವೆಸಲ್ಲಿಸಲು ಏಕೆ ಒಪ್ಪದಿರಬಹುದು?
◻ ಬೇರೆ ಬೇರೆ ಕಾಲಾವಧಿಗಳಲ್ಲಿ ಯೆಹೋವನ ಆವಶ್ಯಕತೆಗಳು ಹೇಗೆ ಬದಲಾಗಿವೆ?
◻ ಧರ್ಮಶಾಸ್ತ್ರವು ಯಾವ ಉದ್ದೇಶಗಳನ್ನು ನೆರವೇರಿಸಿತು?
◻ ಯೆಹೋವನು ನಮ್ಮಿಂದ ಕೇಳಿಕೊಳ್ಳುವುದು ತೀರ ಹೆಚ್ಚಾದದ್ದಾಗಿರುವುದಿಲ್ಲ ಏಕೆ?
[ಪುಟ 18 ರಲ್ಲಿರುವ ಚಿತ್ರ]
ಸವಿಸ್ತಾರವಾಗಿ ಶುಚಿಮಾಡುವಂತಹ ಮಾನವ ನಿರ್ಮಿತ ನಿಯಮಗಳು, ಆರಾಧನೆಯನ್ನು ಒಂದು ಹೊರೆಯನ್ನಾಗಿ ಮಾಡಿವೆ