ಹೆಚ್ಚು ಕಾಲ ಬದುಕಲಿಕ್ಕಾಗಿ ನಾವು ಮಾಡುವ ಹುಡುಕಾಟ
“ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ ಇರುವನು. ಹೂವಿನ ಹಾಗೆ ಅರಳಿ ಬಾಡುವನು, ನೆರಳಿನಂತೆ ನಿಲ್ಲದೆ ಓಡಿಹೋಗುವನು.”—ಯೋಬ 14:1, 2.
ಆಯುಷ್ಯದ ಅಲ್ಪಾವಧಿಯ ಕುರಿತಾದ ಈ ವಿಚಾರವು ಸುಮಾರು 3,500 ವರ್ಷಗಳ ಹಿಂದೆ ಬರೆಯಲ್ಪಟ್ಟಿತಾದರೂ, ಇಂದು ಸಹ ಜನರು ಇದನ್ನು ಅಲ್ಲಗಳೆಯುವುದು ತುಂಬ ಕಡಿಮೆ. ಜೀವನದಲ್ಲಿ ಸ್ವಲ್ಪ ಕಾಲಾವಧಿಯ ವರೆಗೆ ಗಟ್ಟಿಮುಟ್ಟಾಗಿದ್ದು, ತದನಂತರ ವಯಸ್ಸಾಗಿ ಸಾಯುವುದನ್ನು ಜನರು ಯಾವಾಗಲೂ ಅತೃಪ್ತಿಕರವಾದದ್ದಾಗಿ ಕಂಡುಕೊಂಡಿದ್ದಾರೆ. ಆದುದರಿಂದ, ಆಯುಷ್ಯವನ್ನು ಹೆಚ್ಚಿಸುವ ವಿಧಾನಗಳು ಇತಿಹಾಸದಾದ್ಯಂತ ಅಧಿಕಾಧಿಕಗೊಂಡಿವೆ.
ಯೋಬನ ದಿನಗಳಲ್ಲಿ ಐಗುಪ್ತದವರು, ತಮ್ಮ ಯೌವನವನ್ನು ಮರಳಿಪಡೆಯುವ ವ್ಯರ್ಥ ಪ್ರಯತ್ನದಲ್ಲಿ ಪ್ರಾಣಿಗಳ ವೃಷಣಗಳನ್ನು ತಿಂದರು. ಮಧ್ಯಯುಗದ ರಸವಿದ್ಯೆಗಳ ಪ್ರಮುಖ ಉದ್ದೇಶಗಳಲ್ಲಿ ಒಂದು, ದೀರ್ಘಕಾಲ ಬದುಕುವಂತೆ ಮಾಡಸಾಧ್ಯವಿರುವ ದಿವ್ಯೌಷಧವನ್ನು ಉತ್ಪಾದಿಸುವುದೇ ಆಗಿತ್ತು. ಕೃತಕವಾಗಿ ತಯಾರಿಸಲ್ಪಟ್ಟ ಚಿನ್ನವು ಅಮರ ಜೀವನವನ್ನು ಕೊಡುತ್ತದೆ ಮತ್ತು ಚಿನ್ನದ ತಟ್ಟೆಗಳಲ್ಲಿ ಊಟಮಾಡುವುದು ಆಯುಷ್ಯವನ್ನು ಹೆಚ್ಚಿಸಸಾಧ್ಯವಿದೆ ಎಂದು ಅನೇಕ ರಸವಿದ್ಯಾತಜ್ಞರು ನಂಬಿದರು. ಧ್ಯಾನ, ಉಸಿರಾಟದ ವ್ಯಾಯಾಮಗಳು, ಮತ್ತು ಆಹಾರಪಥ್ಯಗಳಂತಹ ವಿಧಾನಗಳನ್ನು ಉಪಯೋಗಿಸುವ ಮೂಲಕ ತಾವು ದೇಹದ ರಾಸಾಯನಿಕ ಸಂಯೋಜನೆಯನ್ನೇ ಬದಲಾಯಿಸಿ, ಅಮರಜೀವನವನ್ನು ಪಡೆದುಕೊಳ್ಳಸಾಧ್ಯವಿದೆ ಎಂದು ಪುರಾತನ ಚೀನಾದ ಟಾವೊಮತದವರು ನೆನಸಿದರು.
ಸ್ಪೆಯ್ನ್ ದೇಶದ ವಾನ್ ಪಾಂಟ್ಸ ಡೇ ಲೀಯೋನ್ ಎಂಬ ಹೆಸರಿನ ಪರಿಶೋಧಕನು, ಯೌವನದ ಚಿಲುಮೆಯನ್ನು ಕಂಡುಕೊಳ್ಳಲಿಕ್ಕಾಗಿ ಅತ್ಯಾಸೆಯ ಹುಡುಕಾಟ ನಡೆಸಿದ್ದಕ್ಕಾಗಿ ಇಂದು ಜಗತ್ಪ್ರಸಿದ್ಧನಾಗಿದ್ದಾನೆ. 19ನೆಯ ಶತಮಾನದ ಒಬ್ಬ ವೈದ್ಯನು, ಹರ್ಮಿಪುಸ್ ರೆಡಿವೀವುಸ್ ಎಂಬ ತನ್ನ ಪುಸ್ತಕದಲ್ಲಿ, ವಸಂತಕಾಲದಲ್ಲಿ ಒಂದು ಚಿಕ್ಕ ಕೋಣೆಯಲ್ಲಿ ಯುವಪ್ರಾಯದ ಕನ್ಯೆಯರನ್ನು ಇರಿಸಿ, ಅವರ ನಿಶ್ವಾಸವನ್ನು ಬಾಟಲಿಗಳಲ್ಲಿ ಸಂಗ್ರಹಿಸಿ, ಆಯುಷ್ಯವನ್ನು ಹೆಚ್ಚಿಸುವ ಔಷಧವಾಗಿ ಉಪಯೋಗಿಸಬೇಕೆಂದು ಶಿಫಾರಸ್ಸು ಮಾಡಿದನು. ಈ ವಿಧಾನಗಳಲ್ಲಿ ಯಾವುದೂ ಯಶಸ್ವಿಯಾಗಲಿಲ್ಲ ಎಂಬುದನ್ನು ಹೇಳುವ ಪ್ರಮೇಯವೇ ಇಲ್ಲ.
ಇಂದು, ಅಂದರೆ ಮೋಶೆಯು ಯೋಬನ ಹೇಳಿಕೆಯನ್ನು ದಾಖಲಿಸಿ ಸುಮಾರು 3,500 ವರ್ಷಗಳು ಗತಿಸಿದ ಬಳಿಕ, ಮನುಷ್ಯನು ಚಂದ್ರನ ಮೇಲೆ ನಡೆದಾಡಿದ್ದಾನೆ, ಕಾರ್ಗಳು ಮತ್ತು ಕಂಪ್ಯೂಟರ್ಗಳನ್ನು ಕಂಡುಹಿಡಿದಿದ್ದಾನೆ, ಹಾಗೂ ಪರಮಾಣುಗಳನ್ನೂ ಜೀವಕೋಶಗಳನ್ನೂ ಪರಿಶೋಧಿಸಿದ್ದಾನೆ. ಇಂತಹ ಎಲ್ಲ ತಾಂತ್ರಿಕ ಅಭಿವೃದ್ಧಿಗಳು ಮಾಡಲ್ಪಟ್ಟಿರುವುದಾದರೂ, ನಾವು ‘ಅಲ್ಪಾಯುಷ್ಯವುಳ್ಳವರಾಗಿಯೂ ಕಳವಳದಿಂದ ತುಂಬಿದವರಾಗಿಯೂ’ ಇದ್ದೇವೆ. ಕಳೆದ ಶತಮಾನದಲ್ಲಿ, ಅಭಿವೃದ್ಧಿಹೊಂದಿರುವ ದೇಶಗಳಲ್ಲಿ ಜೀವನ ನಿರೀಕ್ಷಣೆಯು ಇದ್ದಕ್ಕಿದ್ದಂತೆ ಅಧಿಕಗೊಂಡಿದೆ ಎಂಬುದು ನಿಜ. ಆದರೆ, ಇದು ಮುಖ್ಯವಾಗಿ ಉತ್ತಮಗೊಂಡಿರುವ ಆರೋಗ್ಯಾರೈಕೆ, ಹೆಚ್ಚು ಉತ್ತಮವಾದ ಆರೋಗ್ಯಕ್ರಮಗಳು, ಮತ್ತು ಅತ್ಯುತ್ತಮ ಪೋಷಣೆಯ ಫಲಿತಾಂಶವಾಗಿದೆ. ಉದಾಹರಣೆಗೆ, 18ನೆಯ ಶತಮಾನದ ಮಧ್ಯಭಾಗದಿಂದ 1990ಗಳ ಆರಂಭದ ವರೆಗೆ, ಸ್ವೀಡನ್ನ ಜನರ ಸರಾಸರಿ ಜೀವನಾಯುಷ್ಯವು, ಪುರುಷರಲ್ಲಿ 40ರಿಂದ 75 ವರ್ಷಗಳಿಗೆ ಏರಿದೆ ಮತ್ತು ಸ್ತ್ರೀಯರಲ್ಲಿ 44ರಿಂದ 80 ವರ್ಷಗಳಿಗೆ ಏರಿದೆ. ಆದರೆ ಹೆಚ್ಚು ಕಾಲ ಬದುಕಬೇಕೆಂಬ ಮನುಷ್ಯನ ಈ ಕಡುಬಯಕೆಯು ಪೂರೈಸಲ್ಪಟ್ಟಿದೆ ಎಂಬುದು ಇದರ ಅರ್ಥವೊ?
ಖಂಡಿತವಾಗಿಯೂ ಇಲ್ಲ. ಏಕೆಂದರೆ ಕೆಲವು ದೇಶಗಳಲ್ಲಿ ಹೆಚ್ಚೆಚ್ಚು ಜನರು ವೃದ್ಧಾಪ್ಯವನ್ನು ಅನುಭವಿಸುವಷ್ಟು ಕಾಲ ಜೀವಿಸುತ್ತಾರಾದರೂ, ಸಾವಿರಾರು ವರ್ಷಗಳ ಹಿಂದೆ ಮೋಶೆಯು ಬರೆದ ಮಾತುಗಳು ಈಗಲೂ ಅನ್ವಯವಾಗುತ್ತವೆ: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. . . . ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.” (ಕೀರ್ತನೆ 90:10) ಸಮೀಪ ಭವಿಷ್ಯತ್ತಿನಲ್ಲಿ ಒಂದು ಬದಲಾವಣೆಯನ್ನು ನಾವು ನೋಡುವೆವೊ? ಮನುಷ್ಯನು ದೀರ್ಘಕಾಲದ ವರೆಗೆ ಜೀವಿಸಲು ಶಕ್ತನಾಗುವನೊ? ಮುಂದಿನ ಲೇಖನವು ಈ ಪ್ರಶ್ನೆಗಳ ಬಗ್ಗೆ ಚರ್ಚಿಸುವುದು.