ಹೆಚ್ಚು ದೀರ್ಘವಾದ ಜೀವನಕ್ಕಾಗಿ ಯಾವ ನಿರೀಕ್ಷೆಯಿದೆ?
“ಸ್ತ್ರೀಯಿಂದ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿದ್ದರೂ ದುಃಖದಿಂದ ತುಂಬಿದವನಾಗಿರುತ್ತಾನೆ.”—“ದ ಜೆರೂಸಲೇಮ್ ಬೈಬಲ್”ನ ಯೋಬ 14:1ರಲ್ಲಿ ದಾಖಲಿಸಲ್ಪಟ್ಟ ಯೋಬನ ಮಾತುಗಳು.
ಜೀವನದ ಅಲ್ಪಾಯುಷ್ಯವು ಕವಿತಾ ವಾಕ್ಸರಣಿಯಲ್ಲಿ ಎಷ್ಟೊಂದು ಬಾರಿ ವರ್ಣಿಸಲ್ಪಟ್ಟಿದೆ! ಯೋಬನಂತೆ, ಪ್ರಥಮ ಶತಮಾನದ ಬರಹಗಾರನೊಬ್ಬನು ಹೇಳಿದ್ದು: “ನೀವು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆ ಮೇಲೆ ಕಾಣದೆ ಹೋಗುವ ಹಬೆಯಂತಿರುತ್ತೀರಿ.”—ಯಾಕೋಬ 4:14.
ಜೀವನವು ಮರುಕ ಹುಟ್ಟಿಸುವಂತಹ ರೀತಿಯಲ್ಲಿ ಅಲ್ಪಕಾಲದ್ದಾಗಿದೆ ಎಂಬುದನ್ನು ನೀವೂ ಗಮನಿಸಿದ್ದೀರೊ? ಸುಮಾರು 400 ವರ್ಷಗಳ ಹಿಂದೆ, ವಿಲಿಯಮ್ ಶೇಕ್ಸ್ಪಿಯರ್ ಬರೆದುದು: “ಆರಿಹೋಗು, ಆರಿಹೋಗು, ಕಿರಿದಾದ ಮೋಂಬತ್ತಿ! ಜೀವನವೊಂದು ಅಡಾಡ್ಡುವ ನೆರಳು.” ಮತ್ತು ಕಳೆದ ಶತಮಾನದಲ್ಲಿ, ಅಮೆರಿಕನ್ ಮೂಲನಿವಾಸಿ ಮುಖ್ಯಸ್ಥನೊಬ್ಬನು ಕೇಳಿದ್ದು: “ಜೀವ ಎಂದರೇನು?” ತದನಂತರ ಅವನು ಉತ್ತರಿಸಿದ್ದು: “ಅದು, ರಾತ್ರಿಯಲ್ಲಿ ಒಂದು ಮಿಣುಕು ಹುಳುವಿನ ಕಣ್ಷಿಕ ಪ್ರಕಾಶದಷ್ಟು ಅಲ್ಪಕಾಲದ್ದಾಗಿದೆ.”
ತಮ್ಮ ಜೀವಮಾನವು ಎಷ್ಟು ದೀರ್ಘವಾಗಿರುವಂತೆ ಮಾನವರು ನಿರೀಕ್ಷಿಸಸಾಧ್ಯವಿದೆ? ಸುಮಾರು 3,500 ವರ್ಷಗಳ ಹಿಂದೆ, ಪ್ರವಾದಿಯಾದ ಮೋಶೆಯು ತನ್ನ ದಿನದ ಸನ್ನಿವೇಶವನ್ನು ಹೀಗೆ ವರ್ಣಿಸಿದನು: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿಹೋಗುತ್ತೇವೆ.”—ಕೀರ್ತನೆ 90:10.
ಎಪ್ಪತ್ತು ವರುಷಗಳು ಅಂದರೆ ಕೇವಲ 25,567 ದಿವಸಗಳು. ಮತ್ತು 80 ವರುಷಗಳು ಕೇವಲ 29,219 ದಿವಸಗಳನ್ನು ಒಳಗೊಂಡಿರುತ್ತವೆ. ವಾಸ್ತವವಾಗಿ, ತೀರ ಕೊಂಚವೇ! ಮಾನವ ಜೀವನವನ್ನು ವಿಸ್ತರಿಸಲು ಏನನ್ನಾದರೂ ಮಾಡಸಾಧ್ಯವಿದೆಯೆ?
ವೈದ್ಯಕೀಯ ವಿಜ್ಞಾನವು ಸಹಾಯ ಮಾಡಬಲ್ಲದೊ?
ಸೈಎನ್ಸ್ ಪತ್ರಿಕೆಯು ಗಮನಿಸಿದ್ದು: “[ಅಮೆರಿಕದಲ್ಲಿ] ಜನನದಲ್ಲಿ ಸರಾಸರಿ ಆಯುಷ್ಯವು, 1900ರಲ್ಲಿ 47 ವರ್ಷಗಳಿಂದ 1988ರಲ್ಲಿ ಸುಮಾರು 75 ವರ್ಷಗಳಿಗೆ ಏರಿದೆ.” ಹೆಚ್ಚು ಉತ್ತಮವಾದ ಆರೋಗ್ಯಾರೈಕೆ ಮತ್ತು ಪೋಷಣೆಯ ಮೂಲಕ ಶಿಶು ಮರಣ ಪ್ರಮಾಣವನ್ನು ಕಡಿಮೆಗೊಳಿಸಿದರ್ದ ಫಲಿತಾಂಶವಾಗಿ, ಅಮೆರಿಕದಲ್ಲಿನ ಜನರು ಈಗ ಮೋಶೆಯು ಹೇಳಿದಷ್ಟು ದೀರ್ಘಕಾಲದ ವರೆಗೆ ಜೀವಿಸಲು ನಿರೀಕ್ಷಿಸಸಾಧ್ಯವಿದೆ. ಆದರೂ, ಅಧಿಕಾಂಶ ಜನರು ಎಷ್ಟು ದೀರ್ಘಕಾಲ ಜೀವಿಸುತ್ತಾರೆ ಎಂಬುದರಲ್ಲಿ ಯಾವುದೇ ನಾಟಕೀಯ ವೃದ್ಧಿಗಳು ಮುಂಭಾವಿಸಲ್ಪಟ್ಟಿವೆಯೊ?
ಅರ್ಥಗರ್ಭಿತವಾಗಿ, ವೃದ್ಧಾಪ್ಯದ ಕುರಿತ ಪ್ರಧಾನ ಅಧಿಕಾರಿಯಾದ ಲೆನರ್ಡ್ ಹೇಫ್ಲಿಕ್, ನಾವು ವೃದ್ಧರಾಗುವ ವಿಧ ಮತ್ತು ಕಾರಣ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಹೇಳಿದ್ದು: “ಈ ಶತಮಾನದಲ್ಲಿ, ಜೀವವೈದ್ಯಕೀಯ ಸಂಶೋಧನೆಯಲ್ಲಿ ಅಭಿವೃದ್ಧಿಗಳು ಮತ್ತು ಉತ್ತಮಗೊಳಿಸಲ್ಪಟ್ಟ ವೈದ್ಯಕೀಯ ಆರೈಕೆಯ ಜಾರಿಗೊಳಿಸುವಿಕೆಯು, ಮಾನವ ದೀರ್ಘಾಯುಸ್ಸಿನ ಮೇಲೆ ನಿಶ್ಚಯವಾಗಿಯೂ ಪರಿಣಾಮವನ್ನು ಉಂಟುಮಾಡಿರುತ್ತದೆ, ಆದರೆ ಹೆಚ್ಚಿನ ಜನರು ಮಾನವ ಜೀವಮಾನದ ನಿಗದಿತ ಮೇಲ್ಮಿತಿಯನ್ನು ಸಮೀಪಿಸುವಂತೆ ಅನುಮತಿಸುವ ಮೂಲಕವೇ.” ಆದುದರಿಂದ ಅವರು ವಿವರಿಸಿದ್ದು: “ಸರಾಸರಿ ಆಯುಷ್ಯವು ಅಧಿಕಗೊಂಡಿರುವುದಾದರೂ ಜೀವಮಾನವು ಅಧಿಕಗೊಂಡಿಲ್ಲ; ತಾರತಮ್ಯವು ನಿರ್ಣಾಯಕವಾಗಿದೆ.”
ಮನುಷ್ಯನ ಜೀವಮಾನದ “ನಿಗದಿತ ಮೇಲ್ಮಿತಿ”ಯು ಎಷ್ಟಾಗಿದೆ? ಇತ್ತೀಚೆಗಿನ ಸಮಯಗಳಲ್ಲಿ ಯಾರಾದರೊಬ್ಬರು 115 ವರ್ಷ ಪ್ರಾಯಕ್ಕಿಂತ ಹೆಚ್ಚಾಗಿ ಜೀವಿಸಿರುವುದು ಅನಿಶ್ಚಿತವಾದದ್ದಾಗಿದೆ ಎಂದು ಕೆಲವರು ಹೇಳುತ್ತಾರೆ. ಆದರೂ, ಸೈಎನ್ಸ್ ಪತ್ರಿಕೆ ಹೇಳಿದ್ದು: “1990ರ ವರೆಗೆ, ವ್ಯಕ್ತಿಯೊಬ್ಬನು ಬದುಕಿ ಉಳಿದಿರುವ ಅತ್ಯಂತ ಹೆಚ್ಚು ಪ್ರಮಾಣೀಕೃತ ವರ್ಷಪ್ರಾಯವು 120ಕ್ಕಿಂತ ತುಸು ಹೆಚ್ಚಾಗಿದೆ.” ಮತ್ತು ಈ ವರ್ಷದ ಆರಂಭದಲ್ಲಿ, ವರದಿಗಾರರು ಮತ್ತು ಛಾಯಾಚಿತ್ರಕಾರರ ಸಮೂಹದೊಂದಿಗೆ, ಫ್ರೆಂಚ್ ಆರೋಗ್ಯ ಮಂತ್ರಿಯು, ಸಾನ್ಹ್ ಕಲ್ಮಾಳ 120ನೆಯ ಜನ್ಮದಿನವನ್ನು ಗುರುತಿಸಲಿಕ್ಕಾಗಿ ಫ್ರಾನ್ಸ್ನ ಆರ್ಲ್ನಲ್ಲಿರುವ ಅವಳನ್ನು ಸಂದರ್ಶಿಸಿದರು. ಮೋಶೆಯೂ 120 ವರ್ಷಪ್ರಾಯದ ವರೆಗೆ ಜೀವಿಸಿದನು, ಇದು ಸರಾಸರಿ ಜೀವಮಾನಕ್ಕಿಂತ ತೀರ ಹೆಚ್ಚಾಗಿದೆ.—ಧರ್ಮೋಪದೇಶಕಾಂಡ 34:7.
ಜನರು ಸಾಮಾನ್ಯವಾಗಿ ಅಷ್ಟು ದೀರ್ಘಕಾಲ ಅಥವಾ ಅದಕ್ಕಿಂತಲೂ ಹೆಚ್ಚು ದೀರ್ಘಕಾಲ ಜೀವಿಸಬಹುದೆಂಬುದಕ್ಕೆ ವಿಜ್ಞಾನಿಗಳು ಭರವಸೆಯನ್ನು ಕೊಡುತ್ತಾರೊ? ಇಲ್ಲ, ಅಧಿಕಾಂಶ ಮಂದಿ ಭರವಸೆಯನ್ನು ಕೊಡುವುದಿಲ್ಲ. ಡಿಟ್ರಾಯ್ಟ್ ನ್ಯೂಸ್ನಲ್ಲಿನ ಒಂದು ಶಿರೋನಾಮವು ಓದುವುದು: “ಸರಾಸರಿ ಜೀವಮಾನದ ಮೇಲ್ಮಿತಿಯು 85 ಆಗಿರಬಹುದೆಂದು ಸಂಶೋಧಕರು ಹೇಳುತ್ತಾರೆ.” ವೃದ್ಧಾಪ್ಯದ ಕುರಿತ ಒಬ್ಬ ಅಂಗೀಕೃತ ಅಧಿಕಾರಿಯಾದ ಎಸ್. ಜೆ ಆಲ್ಶನ್ಸ್ಕಿ, ಆ ಲೇಖನದಲ್ಲಿ ಹೇಳಿದ್ದು: “ಒಮ್ಮೆ ನೀವು 85 ವರ್ಷಪ್ರಾಯವನ್ನು ಮೀರಿದ ಬಳಿಕ, ವಿವಿಧ ಅಂಗಗಳ ಕಾರ್ಯಸ್ತಂಭನದಿಂದ ಜನರು ಸಾಯುತ್ತಾರೆ. ಅವರು ಉಸಿರಾಡುವುದನ್ನು ನಿಲ್ಲಿಸುತಾರ್ತೆ. ಮೂಲತಃ, ಅವರು ವೃದ್ಧಾಪ್ಯದಿಂದ ಸಾಯುತ್ತಾರೆ. ಮತ್ತು ಅದಕ್ಕೆ ಗುಣಪಡಿಸುವಿಕೆ ಇಲ್ಲ.” ಅವರು ಕೂಡಿಸಿದ್ದು: “ಮಾನವ ಜೀವಕೋಶಗಳ ಮುಪ್ಪಾಗುವಿಕೆಯು ವಿಪರ್ಯಸ್ತಗೊಳಿಸಲ್ಪಡುವ ಹೊರತು, ಸರಾಸರಿ ಆಯುಷ್ಯದಲ್ಲಿ ಇನ್ನೆಂದಿಗೂ ನಾಟಕೀಯ ಹೆಚ್ಚಳಗಳು ಇರುವುದಿಲ್ಲ.”
ಬಹುಶಃ “ದೀರ್ಘಾಯುಸ್ಸಿನ ಮೇಲ್ಮಿತಿಯನ್ನು ಈಗಾಗಲೇ ಸಮೀಪಿಸಲಾಗಿದೆ ಮತ್ತು ಸಾವಿನಲ್ಲಿ ಇನ್ನೂ ಹೆಚ್ಚಿನ ಅರ್ಥಗರ್ಭಿತ ಅವನತಿಗಳು ಅಸಂಭವವಾಗಿವೆ” ಎಂದು ಸೈಎನ್ಸ್ ಪತ್ರಿಕೆಯು ಗಮನಿಸಿತು. ಮರಣ ಪ್ರಮಾಣಪತ್ರಗಳಲ್ಲಿ ವರದಿಸಲ್ಪಟ್ಟಿರುವ ಮರಣದ ಎಲ್ಲ ಕಾರಣಗಳನ್ನು ತೆಗೆದುಹಾಕಸಾಧ್ಯವಿರುವಲ್ಲಿ, ಸರಾಸರಿ ಆಯುಷ್ಯವು 20ಕ್ಕಿಂತಲೂ ಕಡಿಮೆ ವರ್ಷಗಳಿಗೆ ಏರಸಾಧ್ಯವಿದೆಯೆಂದು ಹೇಳಲಾಗುತ್ತದೆ.
ಹೀಗೆ, ಅನೇಕ ವಿಜ್ಞಾನಿಗಳು ಮನುಷ್ಯನ ಜೀವಮಾನದ ಕಾಲವ್ಯಾಪ್ತಿಯನ್ನು ವಿಚಿತ್ರವಾದದ್ದಾಗಿ ಕಾಣುವುದೂ ಇಲ್ಲ, ಬದಲಾಗುತ್ತದೆಂದು ಕಾಣುವುದೂ ಇಲ್ಲ. ಆದರೂ, ಕಟ್ಟಕಡೆಗೆ ಮಾನವರು ಹೆಚ್ಚು ದೀರ್ಘಕಾಲ ಜೀವಿಸುವರೆಂಬುದನ್ನು ನಂಬುವುದು ವಿವೇಕಯುತವಾಗಿದೆ ಏಕೆ?