ಮೂರನೆಯ ಸಹಸ್ರ ವರ್ಷವು ಯಾವಾಗ ಆರಂಭವಾಗುವುದು?
ಮೂರನೆಯ ಸಹಸ್ರ ವರ್ಷವು 2000ದ ಇಸವಿಯಂದು ಆರಂಭವಾಗುವುದಿಲ್ಲ, ಬದಲಾಗಿ 2001ನೆಯ ಇಸವಿಯಲ್ಲಿ ಆರಂಭವಾಗುವುದು ಎಂದು ಜನರು ವಾದಿಸುವುದನ್ನು ನೀವು ಕೇಳಿಸಿಕೊಂಡಿದ್ದೀರೊ? ಈ ವಾದವು ಸ್ವಲ್ಪಮಟ್ಟಿಗೆ ಸರಿಯಾಗಿದೆ. ಒಂದು ಕಾಲದಲ್ಲಿ ಕೆಲವರು ನೆನಸಿದ್ದಂತೆ, ಯಾವುದು ಸಾ.ಶ.ಪೂ. 1 ಎಂದು ಕರೆಯಲ್ಪಡುತ್ತದೋ ಆ ವರ್ಷದಲ್ಲಿ ಯೇಸು ಕ್ರಿಸ್ತನು ಜನಿಸಿದನೆಂದು ನಾವು ಊಹಿಸಿಕೊಳ್ಳುವಲ್ಲಿ, ಖಂಡಿತವಾಗಿಯೂ ಡಿಸೆಂಬರ್ 31, 2000 (1999ನೆಯ ಇಸವಿಯಲ್ಲ) ಇಸವಿಯು ಎರಡನೆಯ ಸಹಸ್ರ ವರ್ಷದ ಅಂತ್ಯವನ್ನು ಗುರುತಿಸುವುದು, ಮತ್ತು ಜನವರಿ 1, 2001ನೆಯ ಇಸವಿಯು ಮೂರನೆಯ ಸಹಸ್ರ ವರ್ಷದ ಆರಂಭವನ್ನು ಗುರುತಿಸುವುದು.a ಆದರೂ, ಯೇಸು ಕ್ರಿಸ್ತನು ಸಾ.ಶ.ಪೂ. 1ರಲ್ಲಿ ಜನಿಸಲಿಲ್ಲ ಎಂಬುದನ್ನು ಇಂದಿನ ಬಹುತೇಕ ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ. ಹಾಗಾದರೆ, ಅವನು ಯಾವಾಗ ಜನಿಸಿದನು?
ಯೇಸು ಯಾವಾಗ ಜನಿಸಿದನು?
ಯೇಸುವಿನ ಜನನದ ನಿರ್ದಿಷ್ಟ ತಾರೀಖನ್ನು ಬೈಬಲು ತಿಳಿಯಪಡಿಸುವುದಿಲ್ಲ. ಆದರೂ, ಅವನು “ಅರಸನಾದ ಹೆರೋದನ ದಿನಗಳಲ್ಲಿ” ಜನಿಸಿದನೆಂದು ಅದು ಹೇಳುತ್ತದೆ. (ಮತ್ತಾಯ 2:1) ಸಾ.ಶ.ಪೂ. 4ನೆಯ ವರ್ಷದಲ್ಲಿ ಹೆರೋದನು ಮರಣಪಟ್ಟನು ಮತ್ತು ಆ ಸಮಯಕ್ಕಿಂತಲೂ ಮುಂಚೆ, ಅಂದರೆ ಬಹುಶಃ ಸಾ.ಶ.ಪೂ. 5 ಅಥವಾ 6ನೆಯ ವರ್ಷದಲ್ಲಿ ಯೇಸು ಜನಿಸಿದನು ಎಂದು ಅನೇಕ ಬೈಬಲ್ ವಿದ್ವಾಂಸರು ನಂಬುತ್ತಾರೆ. ಹೆರೋದನ ಮರಣದ ಕುರಿತಾದ ತಮ್ಮ ತೀರ್ಮಾನಗಳಿಗೆ, ಪ್ರಥಮ ಶತಮಾನದ ಯೆಹೂದಿ ಇತಿಹಾಸಕಾರನಾಗಿದ್ದ ಫ್ಲೇವಿಯಸ್ ಜೋಸೀಫಸನ ಹೇಳಿಕೆಗಳನ್ನು ಅವರು ಆಧಾರವಾಗಿ ಉಪಯೋಗಿಸುತ್ತಾರೆ.b
ಜೋಸೀಫಸನಿಗನುಸಾರ, ಅರಸನಾದ ಹೆರೋದನು ಮೃತಪಡುವ ಸ್ವಲ್ಪ ಸಮಯಕ್ಕೆ ಮುಂಚೆ ಒಂದು ಚಂದ್ರ ಗ್ರಹಣವು ಸಂಭವಿಸಿತ್ತು. ಸಾ.ಶ.ಪೂ. 4ರ ಮಾರ್ಚ್ 11ರಂದು ಅರ್ಧ ಚಂದ್ರ ಗ್ರಹಣವು ಸಂಭವಿಸಿದ್ದು, ಹೆರೋದನು ಅದೇ ವರ್ಷದಲ್ಲಿ ಮರಣಪಟ್ಟಿದ್ದಿರಬೇಕು ಎಂಬುದಕ್ಕೆ ಇದು ರುಜುವಾತಾಗಿದೆ ಎಂದು ಬೈಬಲ್ ವಿದ್ವಾಂಸರು ಹೇಳುತ್ತಾರೆ. ಆದರೂ, ಸಾ.ಶ.ಪೂ. 1ರಲ್ಲಿ, ಜನವರಿ 8ರಂದು ಪೂರ್ಣ ಚಂದ್ರ ಗ್ರಹಣವು ಸಂಭವಿಸಿತ್ತು ಮತ್ತು ಡಿಸೆಂಬರ್ 27ರಂದು ಅರ್ಧ ಚಂದ್ರ ಗ್ರಹಣವು ಸಂಭವಿಸಿತ್ತು. ಜೋಸೀಫಸನು ಸಾ.ಶ.ಪೂ. 1ರಲ್ಲಿ ಸಂಭವಿಸಿದ್ದ ಚಂದ್ರ ಗ್ರಹಣದ ಬಗ್ಗೆ ಸೂಚಿಸಿ ಮಾತಾಡಿದನೋ ಅಥವಾ ಸಾ.ಶ.ಪೂ. 4ರಲ್ಲಿ ಸಂಭವಿಸಿದ್ದ ಚಂದ್ರ ಗ್ರಹಣದ ಬಗ್ಗೆ ಸೂಚಿಸಿ ಹೇಳಿದನೋ ಎಂಬುದನ್ನು ಯಾರೂ ಖಚಿತವಾಗಿ ಹೇಳಸಾಧ್ಯವಿಲ್ಲ. ಆದುದರಿಂದ, ಹೆರೋದನು ಮರಣಪಟ್ಟ ವರ್ಷವನ್ನು ನಿಖರವಾಗಿ ಗುರುತಿಸಲಿಕ್ಕಾಗಿ ನಾವು ಜೋಸೀಫಸನ ಮಾತುಗಳನ್ನು ಆಧಾರವಾಗಿ ಉಪಯೋಗಿಸಸಾಧ್ಯವಿಲ್ಲ. ಒಂದುವೇಳೆ ಆಧಾರವಾಗಿ ಉಪಯೋಗಿಸಸಾಧ್ಯವಿದ್ದರೂ, ಇನ್ನೂ ಹೆಚ್ಚಿನ ಮಾಹಿತಿಯಿಲ್ಲದೆ ನಾವು ಯೇಸು ಯಾವಾಗ ಜನಿಸಿದನು ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ.
ಯೇಸುವಿನ ಜನನದ ಸಮಯದ ಕುರಿತಾದ ಬಲವಾದ ಪುರಾವೆಯು ಬೈಬಲಿನಲ್ಲಿದೆ. ಯೇಸುವಿನ ಸೋದರ ಸಂಬಂಧಿಯಾದ ಸ್ನಾನಿಕನಾದ ಯೋಹಾನನು, ರೋಮನ್ ಚಕ್ರವರ್ತಿಯಾದ ತಿಬೇರಿಯನ ಆಳ್ವಿಕೆಯ 15ನೆಯ ವರ್ಷದಲ್ಲಿ ಒಬ್ಬ ಪ್ರವಾದಿಯೋಪಾದಿ ತನ್ನ ಜೀವನಕ್ರಮವನ್ನು ಆರಂಭಿಸಿದನು ಎಂದು ಪ್ರೇರಿತ ದಾಖಲೆಯು ತಿಳಿಸುತ್ತದೆ. (ಲೂಕ 3:1, 2) ತಿಬೇರಿಯನು ಸಾ.ಶ. 14ರ ಸೆಪ್ಟೆಂಬರ್ 15ರಂದು ಚಕ್ರವರ್ತಿಯಾದನು ಎಂಬುದನ್ನು ಐಹಿಕ ಇತಿಹಾಸವು ದೃಢಪಡಿಸುತ್ತದೆ. ಆದುದರಿಂದ, ಅವನ ಆಳ್ವಿಕೆಯ 15ನೆಯ ವರ್ಷವು, ಸಾ.ಶ. 28ರ ಕೊನೆಯ ಭಾಗದಿಂದ ಸಾ.ಶ. 29ರ ಕೊನೆಯ ಭಾಗದ ತನಕ ಲೆಕ್ಕಿಸಲ್ಪಡುತ್ತದೆ. ಅದೇ ಸಮಯದಲ್ಲಿ ಯೋಹಾನನು ತನ್ನ ಶುಶ್ರೂಷೆಯನ್ನು ಆರಂಭಿಸಿದನು ಮತ್ತು ಆರು ತಿಂಗಳುಗಳ ಬಳಿಕ ಯೇಸು ಸಹ ತನ್ನ ಶುಶ್ರೂಷೆಯನ್ನು ಆರಂಭಿಸಿದನು ಎಂಬುದು ಸುವ್ಯಕ್ತ. (ಲೂಕ 1:24-31) ಈ ಪುರಾವೆ ಹಾಗೂ ಇನ್ನಿತರ ಪುರಾವೆಗಳು, ಸಾ.ಶ. 29ರ ಶರತ್ಕಾಲದಲ್ಲಿ ಯೇಸುವಿನ ಶುಶ್ರೂಷೆಯು ಆರಂಭವಾಯಿತೆಂದು ತೋರಿಸುತ್ತವೆ.c ಯೇಸು ತನ್ನ ಶುಶ್ರೂಷೆಯನ್ನು ಆರಂಭಿಸಿದಾಗ, “ಹೆಚ್ಚುಕಡಿಮೆ ಮೂವತ್ತು ವರುಷದವನಾಗಿದ್ದನು” ಎಂದು ಬೈಬಲು ಹೇಳುತ್ತದೆ. (ಲೂಕ 3:23) ಸಾ.ಶ. 29ರ ಶರತ್ಕಾಲದಲ್ಲಿ ಅವನು 30 ವರ್ಷ ಪ್ರಾಯದವನಾಗಿದ್ದಲ್ಲಿ, ಸಾ.ಶ.ಪೂ. 2ರ ಶರತ್ಕಾಲದಲ್ಲಿ ಅವನು ಜನಿಸಿದ್ದಿರಬೇಕು. ಈಗ, (ಸೊನ್ನೆ ವರ್ಷವು ಇರಲಿಲ್ಲ; ಆದುದರಿಂದ, ಸಾ.ಶ.ಪೂ. 2ರಿಂದ ಸಾ.ಶ. 1ರ ವರೆಗೆ ಎರಡು ವರ್ಷಗಳು ಎಂಬುದನ್ನು ಜ್ಞಾಪಕದಲ್ಲಿಟ್ಟುಕೊಂಡು) ಸಾ.ಶ.ಪೂ. 2ರ ಕೊನೆಯ ಭಾಗದಿಂದ ಎರಡು ಸಾವಿರ ವರ್ಷಗಳನ್ನು ನಾವು ಮುಂದಕ್ಕೆ ಎಣಿಸುತ್ತಾ ಹೋಗುವಲ್ಲಿ, 1999ರ ಕೊನೆಯ ಭಾಗದಲ್ಲೇ ಎರಡನೆಯ ಸಹಸ್ರ ವರ್ಷವು ಕೊನೆಗೊಂಡು, ಮೂರನೆಯ ಸಹಸ್ರ ವರ್ಷವು ಆರಂಭವಾಯಿತು ಎಂಬುದು ನಮಗೆ ಗೊತ್ತಾಗುತ್ತದೆ!
ಇದು ಪ್ರಾಮುಖ್ಯವಾದ ಸಂಗತಿಯಾಗಿದೆಯೋ? ಉದಾಹರಣೆಗೆ, ಮೂರನೆಯ ಸಹಸ್ರ ವರ್ಷದ ಆರಂಭವು, ಪ್ರಕಟನೆಯ ಪುಸ್ತಕದಲ್ಲಿ ತಿಳಿಸಲ್ಪಟ್ಟಿರುವ ಯೇಸು ಕ್ರಿಸ್ತನ ಸಾವಿರ ವರ್ಷದಾಳಿಕೆಯ ಆರಂಭವನ್ನು ಗುರುತಿಸುತ್ತದೋ? ಇಲ್ಲ. ಮೂರನೆಯ ಸಹಸ್ರ ವರ್ಷ ಹಾಗೂ ಕ್ರಿಸ್ತನ ಸಾವಿರ ವರ್ಷದಾಳಿಕೆಯ ಮಧ್ಯೆ ಸಂಬಂಧವಿದೆ ಎಂದು ಬೈಬಲು ಎಲ್ಲಿಯೂ ಸೂಚಿಸುವುದಿಲ್ಲ.
ತಾರೀಖುಗಳ ಕುರಿತು ಊಹಾಪೋಹಗಳನ್ನು ಮಾಡುವುದರ ವಿರುದ್ಧ ಯೇಸು ತನ್ನ ಹಿಂಬಾಲಕರಿಗೆ ಎಚ್ಚರಿಕೆ ನೀಡಿದನು. ಅವನು ತನ್ನ ಶಿಷ್ಯರಿಗೆ ಹೇಳಿದ್ದು: “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ.” (ಅ. ಕೃತ್ಯಗಳು 1:7) ಇದಕ್ಕೂ ಮುಂಚೆ, ಕ್ರಿಸ್ತನ ಸಹಸ್ರ ವರ್ಷದಾಳಿಕೆಗಾಗಿ ಮಾರ್ಗವನ್ನು ಸಿದ್ಧಪಡಿಸುತ್ತಾ, ಈ ದುಷ್ಟ ವ್ಯವಸ್ಥೆಯ ಮೇಲೆ ದೇವರು ಯಾವಾಗ ನ್ಯಾಯತೀರ್ಪನ್ನು ತರುವನು ಎಂಬುದು ತನಗೂ ಆಗ ಗೊತ್ತಿರಲಿಲ್ಲ ಎಂದು ಯೇಸು ಅವರಿಗೆ ಹೇಳಿದನು. ಅವನು ಹೇಳಿದ್ದು: “ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.”—ಮತ್ತಾಯ 24:36.
ಒಬ್ಬ ಮಾನವನೋಪಾದಿ ಕ್ರಿಸ್ತನು ಜನಿಸಿದ ಸಮಯದಿಂದ ನಿರ್ದಿಷ್ಟವಾಗಿ 2,000 ವರ್ಷಗಳು ಕಳೆದ ಬಳಿಕ ಅವನು ಹಿಂದಿರುಗಿ ಬರುವನು ಎಂದು ನಿರೀಕ್ಷಿಸುವುದು ವಿವೇಕಯುತವಾದದ್ದಾಗಿದೆಯೊ? ಖಂಡಿತವಾಗಿಯೂ ಇಲ್ಲ. ತನ್ನ ಸ್ವಂತ ಜನ್ಮ ದಿನಾಂಕದ ಬಗ್ಗೆ ಖಂಡಿತವಾಗಿಯೂ ಯೇಸುವಿಗೆ ಗೊತ್ತಿದ್ದಿರಬೇಕು. ಮತ್ತು ಆ ತಾರೀಖಿನಿಂದ 2,000 ವರ್ಷಗಳನ್ನು ಹೇಗೆ ಲೆಕ್ಕಿಸಬೇಕು ಎಂಬುದು ಸಹ ಅವನಿಗೆ ಗೊತ್ತಿತ್ತು. ಆದರೂ, ತನ್ನ ಬರೋಣದ ನಿರ್ದಿಷ್ಟ ದಿನ ಹಾಗೂ ತಾಸಿನ ಬಗ್ಗೆ ಅವನಿಗೆ ಗೊತ್ತಿರಲಿಲ್ಲ. ಅವನ ಹಿಂದಿರುಗುವಿಕೆಯ ತಾರೀಖನ್ನು ತಿಳಿಯಪಡಿಸುವುದು ಅಷ್ಟೊಂದು ಸರಳವಾದ ಸಂಗತಿಯಾಗಿರಲಿಲ್ಲ ಎಂಬುದು ಸುವ್ಯಕ್ತ! ‘ಕಾಲಗಳೂ ಸಮಯಗಳೂ’ ಅವನ ತಂದೆಯ ಅಧಿಕಾರದ ಕೆಳಗಿದ್ದವು—ಆ ಕಾಲತಖ್ತೆಯು ಆತನಿಗೆ ಮಾತ್ರ ಗೊತ್ತಿತ್ತು.
ಅಷ್ಟುಮಾತ್ರವಲ್ಲ, ಭೂಮಿಯ ಒಂದು ನಿರ್ದಿಷ್ಟ ಸ್ಥಳದಲ್ಲಿ ತನಗೋಸ್ಕರ ಕಾಯುತ್ತಾ ಇರಿ ಎಂದು ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಲಿಲ್ಲ. ನೀವೆಲ್ಲರೂ ಒಟ್ಟುಗೂಡಿ ಒಂದು ಸ್ಥಳದಲ್ಲಿ ಕಾಯುತ್ತಾ ಇರಿ ಎಂದು ಅವನು ಹೇಳಲಿಲ್ಲ, ಬದಲಾಗಿ “ಭೂಲೋಕದ ಕಟ್ಟಕಡೆಯ ವರೆಗೂ” ಚೆದರಿಹೋಗಿ, ಎಲ್ಲ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ ಎಂದು ಅವನು ಅವರಿಗೆ ಹೇಳಿದನು. ಅವನು ಎಂದೂ ಆ ಆಜ್ಞೆಯನ್ನು ರದ್ದುಮಾಡಿಲ್ಲ.—ಅ. ಕೃತ್ಯಗಳು 1:8; ಮತ್ತಾಯ 28:19, 20.
ಸಹಸ್ರ ವರ್ಷಗಳ ಕುರಿತಾದ ಅವರ ನಿರೀಕ್ಷೆಗಳು ನುಚ್ಚುನೂರಾಗಿ ಹೋಗುವವೊ?
ಆದರೂ, ಇಸವಿ 2000ದ ಬಗ್ಗೆ ಕೆಲವು ಧಾರ್ಮಿಕ ಪ್ರಾಮಾಣ್ಯವಾದಿಗಳು ಮಹತ್ತರವಾದ ನಿರೀಕ್ಷೆಗಳನ್ನಿಟ್ಟುಕೊಂಡಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ, ಪ್ರಕಟನೆಯ ಪುಸ್ತಕದ ಕೆಲವು ಭಾಗಗಳು ಅಕ್ಷರಾರ್ಥವಾಗಿ ನೆರವೇರುವವು ಎಂದು ಅವರು ನಂಬುತ್ತಾರೆ. ಅಷ್ಟುಮಾತ್ರವಲ್ಲ, ಆ ನೆರವೇರಿಕೆಯಲ್ಲಿ ತಾವು ವೈಯಕ್ತಿಕವಾಗಿ ಪಾಲ್ಗೊಳ್ಳುವೆವು ಎಂದು ಅವರು ನೆನಸುತ್ತಾರೆ. ಉದಾಹರಣೆಗೆ, ಪ್ರಕಟನೆ 11:3, 7, 8ರಲ್ಲಿ ದಾಖಲಿಸಲ್ಪಟ್ಟಿರುವ ಪ್ರವಾದನೆಗೆ ಅವರು ಕೈತೋರಿಸುತ್ತಾರೆ. ಈ ಪ್ರವಾದನೆಯು, ‘ತಮ್ಮ ಒಡೆಯನು ಶಿಲುಬೆಗೆ ಹಾಕಲ್ಪಟ್ಟ ಸೊದೋಮ್ ಎಂತಲೂ ಐಗುಪ್ತ ಎಂತಲೂ ಹೆಸರುಳ್ಳ ಮಹಾ ಪಟ್ಟಣ’ವೊಂದರಲ್ಲಿ ಪ್ರವಾದಿಸುವಂತಹ ಇಬ್ಬರು ಸಾಕ್ಷಿಗಳ ಕುರಿತು ತಿಳಿಸುತ್ತದೆ. ಈ ಸಾಕ್ಷಿಗಳು ತಮ್ಮ ಸಾಕ್ಷಿಕಾರ್ಯವನ್ನು ಮುಗಿಸಿದಾಗ, ಅಧೋಲೋಕದಿಂದ ಬರುವ ಒಂದು ಕ್ರೂರ ಕಾಡುಮೃಗದಿಂದ ಕೊಲ್ಲಲ್ಪಡುತ್ತಾರೆ.
ಡಿಸೆಂಬರ್ 27, 1998ರ ದ ನ್ಯೂ ಯಾರ್ಕ್ ಟೈಮ್ಸ್ ಮ್ಯಾಗಸಿನ್ನಲ್ಲಿ ಕಂಡುಬಂದ ಒಂದು ವರದಿಗನುಸಾರ, ಒಂದು ಧಾರ್ಮಿಕ ಗುಂಪಿನ ನಾಯಕನು, “ಭೂಮಿಯ ವಿನಾಶ ಹಾಗೂ ಕರ್ತನ ಬರೋಣದ ಕುರಿತು ಸಾರಲು ಮತ್ತು ತದನಂತರ ಯೆರೂಸಲೇಮಿನ ಬೀದಿಗಳಲ್ಲಿ ಸೈತಾನನಿಂದ ಸಂಹರಿಸಲ್ಪಡಲು ನೇಮಿಸಲ್ಪಟ್ಟಿರುವ ಇಬ್ಬರು ಸಾಕ್ಷಿಗಳಲ್ಲಿ ತಾನು ಒಬ್ಬನಾಗಿದ್ದೇನೆ ಎಂದು ತನ್ನ ಹಿಂಬಾಲಕರಿಗೆ ಹೇಳಿದ್ದಾನೆ.” ಈ ಕಾರಣದಿಂದಲೇ ಇಸ್ರೇಲ್ನ ಅಧಿಕಾರಿಗಳು ತುಂಬ ಚಿಂತಿತರಾಗಿದ್ದಾರೆ. ಏಕೆಂದರೆ ಕೆಲವು ಉಗ್ರವಾದಿಗಳು ತಮ್ಮಷ್ಟಕ್ಕೇ, ಅಂದರೆ ತಾವಾಗಿಯೇ ಒಂದು ಶಸ್ತ್ರಸಜ್ಜಿತ ಹೋರಾಟವನ್ನು ಆರಂಭಿಸುವ ಮೂಲಕ ಈ ಪ್ರವಾದನೆಯನ್ನು “ನೆರವೇರಿಸಲು” ಪ್ರಯತ್ನಿಸಬಹುದು ಎಂಬ ಭಯ ಅವರನ್ನು ಕಾಡುತ್ತಿದೆ! ಆದರೂ, ತನ್ನ ಉದ್ದೇಶವನ್ನು ಪೂರೈಸಲು ದೇವರಿಗೆ ಮನುಷ್ಯನ “ಸಹಾಯ”ದ ಅಗತ್ಯವಿಲ್ಲ. ಬೈಬಲಿನ ಎಲ್ಲ ಪ್ರವಾದನೆಗಳು, ದೇವರು ನಿಷ್ಕರ್ಷಿಸಿರುವ ಸಮಯದಲ್ಲಿ ಮತ್ತು ಆತನು ಯೋಜಿಸಿರುವಂತಹ ರೀತಿಯಲ್ಲಿ ನೆರವೇರಿಸಲ್ಪಡುವವು.
ಪ್ರಕಟನೆ ಪುಸ್ತಕವು “ಸಂಕೇತಗಳಲ್ಲಿ” ಬರೆಯಲ್ಪಟ್ಟಿದೆ. ಪ್ರಕಟನೆ 1:1ಕ್ಕನುಸಾರ, ಅತಿ ಬೇಗನೆ ಏನು ಸಂಭವಿಸಲಿದೆ ಎಂಬುದನ್ನು ಯೇಸು “ತನ್ನ ದಾಸರಿಗೆ” (ಇಡೀ ಲೋಕಕ್ಕಲ್ಲ) ಪ್ರಕಟಪಡಿಸಲು ಬಯಸಿದನು. ಪ್ರಕಟನೆ ಪುಸ್ತಕವನ್ನು ಅರ್ಥಮಾಡಿಕೊಳ್ಳಲು, ಕ್ರಿಸ್ತನ ದಾಸರಿಗೆ ಅಥವಾ ಹಿಂಬಾಲಕರಿಗೆ ದೇವರ ಪವಿತ್ರಾತ್ಮದ ಅಗತ್ಯವಿತ್ತು, ಮತ್ತು ತನ್ನ ಇಷ್ಟಾನುಸಾರ ನಡೆಯುವವರಿಗೆ ಮಾತ್ರ ಯೆಹೋವನು ಪವಿತ್ರಾತ್ಮವನ್ನು ದಯಪಾಲಿಸುತ್ತಾನೆ. ಪ್ರಕಟನೆ ಪುಸ್ತಕವನ್ನು ಅಕ್ಷರಾರ್ಥವಾಗಿ ತಿಳಿದುಕೊಳ್ಳಸಾಧ್ಯವಿರುತ್ತಿದ್ದಲ್ಲಿ, ಅಪನಂಬಿಗಸ್ತ ಜನರು ಕೂಡ ಅದನ್ನು ಓದಿ ತಿಳಿದುಕೊಳ್ಳಸಾಧ್ಯವಿತ್ತು. ಹಾಗಿದ್ದರೆ, ಇದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಪವಿತ್ರಾತ್ಮವನ್ನು ಒದಗಿಸುವಂತೆ ಪ್ರಾರ್ಥಿಸುವ ಅಗತ್ಯ ಕ್ರೈಸ್ತರಿಗೆ ಇರುತ್ತಿರಲಿಲ್ಲ.—ಮತ್ತಾಯ 13:10-15.
ಬೈಬಲ್ ಸಂಬಂಧಿತ ಪುರಾವೆಗನುಸಾರ, ಯೇಸುವಿನ ಜನನದ ಸಮಯದಿಂದ ಮೂರನೆಯ ಸಹಸ್ರ ವರ್ಷವು 1999ರ ಶರತ್ಕಾಲದಲ್ಲಿ ಆರಂಭವಾಯಿತು ಮತ್ತು ಆ ದಿನಾಂಕವಾಗಲಿ ಅಥವಾ ಜನವರಿ 1, 2000ವಾಗಲಿ ಇಲ್ಲವೆ ಜನವರಿ 1, 2001ನೆಯ ಇಸವಿಯಾಗಲಿ ಯಾವುದೇ ವಿಶೇಷಾರ್ಥವನ್ನು ಹೊಂದಿಲ್ಲ ಎಂಬುದು ನಮಗೆ ಗೊತ್ತಾಗಿದೆ. ಆದರೆ, ಕ್ರೈಸ್ತರಿಗೆ ಹೆಚ್ಚೆಚ್ಚು ಆಸಕ್ತಿದಾಯಕವಾಗಿರುವ ಸಹಸ್ರ ವರ್ಷವಿದೆ. ಒಂದುವೇಳೆ ಇದು ಮೂರನೆಯ ಸಹಸ್ರ ವರ್ಷವಲ್ಲವಾದರೆ, ಇನ್ನಾವುದರ ಬಗ್ಗೆ ಮಾತಾಡುತ್ತಿದೆ? ಈ ಲೇಖನಮಾಲೆಯಲ್ಲಿರುವ ಕೊನೆಯ ಲೇಖನವು ಈ ಪ್ರಶ್ನೆಗೆ ಉತ್ತರ ನೀಡುವುದು.
[ಅಧ್ಯಯನ ಪ್ರಶ್ನೆಗಳು]
a 5ನೆಯ ಪುಟದಲ್ಲಿರುವ “2000 ಅಥವಾ 2001?” ಎಂಬ ಮೇಲ್ಬರಹವಿರುವ ರೇಖಾಚೌಕವನ್ನು ನೋಡಿ.
b ಈ ವಿದ್ವಾಂಸರ ಕಾಲಗಣನಶಾಸ್ತ್ರಕ್ಕನುಸಾರ, ಮೂರನೆಯ ಸಹಸ್ರ ವರ್ಷವು 1995 ಅಥವಾ 1996ನೆಯ ಇಸವಿಯಲ್ಲೇ ಆರಂಭವಾಗಿದ್ದಿರಸಾಧ್ಯವಿದೆ.
c ಇನ್ನೂ ಹೆಚ್ಚಿನ ವಿವರಗಳಿಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ, ಶಾಸ್ತ್ರಗಳ ಒಳನೋಟ (ಇಂಗ್ಲಿಷ್) ಪುಸ್ತಕದ ಸಂಪುಟ 1ರ 1094-5ನೆಯ ಪುಟಗಳನ್ನು ನೋಡಿರಿ.
[ಪುಟ 5 ರಲ್ಲಿರುವ ಚೌಕ]
2000 ಅಥವಾ 2001?
ಯೇಸುವಿನ ಜನನದ ಸಮಯದಿಂದ ಮೂರನೆಯ ಸಹಸ್ರ ವರ್ಷವು ಜನವರಿ 1, 2001ರಂದು ಆರಂಭವಾಗುವುದು ಎಂದು ಕೆಲವರು ಏಕೆ ವಾದಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ ಈ ದೃಷ್ಟಾಂತವನ್ನು ಪರಿಗಣಿಸಿರಿ. ಸುಮಾರು 200 ಪುಟಗಳಷ್ಟು ದೊಡ್ಡದಾದ ಒಂದು ಪುಸ್ತಕವನ್ನು ನೀವು ಓದುತ್ತಿದ್ದೀರಿ ಎಂದು ಊಹಿಸಿಕೊಳ್ಳಿ. 200ನೆಯ ಪುಟದ ಮೊದಲ ಸಾಲಿಗೆ ನೀವು ಬಂದಾಗ, 199 ಪುಟಗಳನ್ನು ನೀವು ಓದಿಮುಗಿಸಿದ್ದೀರಿ, ಮತ್ತು ಇನ್ನೂ ಒಂದು ಪುಟವನ್ನು ಓದಲಿಕ್ಕಿದೆ. 200ನೆಯ ಪುಟದ ಕೊನೆಯ ಸಾಲನ್ನು ಓದುವ ತನಕ ನೀವು ಆ ಪುಸ್ತಕವನ್ನು ಪೂರ್ತಿಯಾಗಿ ಓದಿಮುಗಿಸುವುದಿಲ್ಲ. ತದ್ರೀತಿಯಲ್ಲಿ, 1999ರ ಡಿಸೆಂಬರ್ 31ರಂದು, ಅಧಿಕಾಂಶ ಜನರು ಯಾವುದನ್ನು ಸದ್ಯದ ಯುಗವೆಂದು ಕರೆಯುತ್ತಾರೋ ಅದರ 999 ವರ್ಷಗಳು ಗತಿಸಿಹೋಗಿರುತ್ತವೆ, ಮತ್ತು ಈ ಸಹಸ್ರ ವರ್ಷವು ಕಳೆಯಲು ಇನ್ನೂ ಒಂದು ವರ್ಷ ಬಾಕಿಯಿದೆ. ಆದರೂ, ಈ ಲೆಕ್ಕಾಚಾರಕ್ಕನುಸಾರ, 2001ರ ಜನವರಿ 1ರಂದು ಮೂರನೆಯ ಸಹಸ್ರ ವರ್ಷವು ಆರಂಭವಾಗುವುದು. ಹಾಗಿದ್ದರೂ, ಈ ಲೇಖನವು ತೋರಿಸುವಂತೆ, ಯೇಸುವಿನ ಜನನದ ಸಮಯದಿಂದ ಇದೇ ತಾರೀಖಿನಂದು ನಿಖರವಾಗಿ 2,000 ವರ್ಷಗಳು ಕಳೆಯುತ್ತವೆ ಎಂಬುದನ್ನು ಇದು ಅರ್ಥೈಸುವುದಿಲ್ಲ.
[ಪುಟ 6 ರಲ್ಲಿರುವ ಚೌಕ]
ಕ್ರಿ.ಪೂ.-ಕ್ರಿ.ಶ. ಎಂಬ ಕಾಲಗಣನೆಮಾಡುವ ಪದ್ಧತಿಯು ಆರಂಭವಾದ ವಿಧ
ಸಾ.ಶ. ಆರನೆಯ ಶತಮಾನದ ಆರಂಭದಲ್ಲಿ, Iನೆಯ ಪೋಪ್ ಜಾನ್ ಅವರು, ಡಯೊನಿಸಿಯಸ್ ಎಕ್ಸಿಗ್ಯೂಅಸ್ ಎಂಬ ಹೆಸರಿನ ಸಂನ್ಯಾಸಿಗೆ, ಈಸ್ಟರ್ ಹಬ್ಬವನ್ನು ಆಚರಿಸಲಿಕ್ಕಾಗಿ ಚರ್ಚುಗಳು ಒಂದು ಅಧಿಕೃತ ತಾರೀಖನ್ನು ನಿಷ್ಕರ್ಷಿಸುವಂತೆ ಅನುಮತಿಸುವಂತಹ ಒಂದು ಲೆಕ್ಕಪದ್ಧತಿಯನ್ನು ಕಂಡುಹಿಡಿಯುವಂತೆ ಆಜ್ಞೆಯನ್ನಿತ್ತರು.
ಡಯೊನಿಸಿಯಸ್ ತನ್ನ ಕೆಲಸವನ್ನು ಆರಂಭಿಸಿದನು. ಯೇಸುವಿನ ಮರಣದಿಂದ ಯೇಸುವಿನ ಜನನದ ವರ್ಷವೆಂದು ಯಾವುದನ್ನು ಪರಿಗಣಿಸಲಾಗಿತ್ತೋ ಆ ವರ್ಷದ ವರೆಗೆ ಹಿಂದಕ್ಕೆ ಎಣಿಸುತ್ತಾಹೋದನು; ಮತ್ತು ಯೇಸುವಿನ ಜನನದ ವರ್ಷದಿಂದ ಪ್ರತಿಯೊಂದು ವರ್ಷಕ್ಕೆ ಒಂದೊಂದು ಸಂಖ್ಯೆಯನ್ನು ನಿಗದಿಪಡಿಸುತ್ತಾ ಹೋದನು. ಯೇಸುವಿನ ಜನನದ ನಂತರದ ಕಾಲಾವಧಿಗೆ “ಕ್ರಿ.ಶ.” (ಕ್ರಿಸ್ತ ಶಕ—“ನಮ್ಮ ಸ್ವಾಮಿಯ ವರ್ಷ.”) ಎಂದು ಡಯೊನಿಸಿಯಸ್ ಹೆಸರುಕೊಟ್ಟನು. ಪ್ರತಿ ವರ್ಷ ಈಸ್ಟರ್ ಹಬ್ಬ ಯಾವಾಗ ಬರುವುದೆಂಬುದನ್ನು ಲೆಕ್ಕಿಸಲು ಸಹಾಯ ಮಾಡುವ ವಿಧವನ್ನು ಕಂಡುಹಿಡಿಯಲಿಕ್ಕಾಗಿ, ಡಯೊನಿಸಿಯಸನು ಕ್ರಿಸ್ತನ ಜನನದ ಸಮಯದಿಂದ ಮುಂದಕ್ಕೆ ವರ್ಷಗಳನ್ನು ಲೆಕ್ಕಿಸುವ ವಿಧವನ್ನು ಹೆಚ್ಚು ಜಾಗ್ರತೆ ವಹಿಸದೆ ಪರಿಚಯಿಸಿದನು.
ಡಯೊನಿಸಿಯಸನು ತನ್ನ ಲೆಕ್ಕಾಚಾರಕ್ಕಾಗಿ ಆಧಾರವಾಗಿ ಉಪಯೋಗಿಸಿರುವ ವರ್ಷದಲ್ಲಿ ಯೇಸು ಜನಿಸಲಿಲ್ಲ ಎಂದು ಬಹುತೇಕ ವಿದ್ವಾಂಸರು ಒಪ್ಪಿಕೊಳ್ಳುತ್ತಾರಾದರೂ, ಕಾಲಪ್ರವಾಹದಲ್ಲಿ ಸಂಭವಿಸಿರುವ ಘಟನೆಗಳನ್ನು ಗುರುತಿಸಲು ಮತ್ತು ಅವು ಒಂದಕ್ಕೊಂದು ಹೇಗೆ ಸಂಬಂಧಿಸಿವೆ ಎಂಬುದನ್ನು ಅವಲೋಕಿಸಲು ಅವನು ಕಂಡುಹಿಡಿದಿರುವ ಕಾಲಗಣನೆಯ ಪದ್ಧತಿಯು ನಮಗೆ ನಿಜವಾಗಿಯೂ ಸಹಾಯ ಮಾಡುತ್ತದೆ.