ವಾಚಕರಿಂದ ಪ್ರಶ್ನೆಗಳು
ಮತದಾನವನ್ನು ಯೆಹೋವನ ಸಾಕ್ಷಿಗಳು ಹೇಗೆ ವೀಕ್ಷಿಸುತ್ತಾರೆ?
ದೇವರ ಸೇವಕರು ಈ ವಿಷಯದಲ್ಲಿ ಯೋಗ್ಯವಾದ ದೃಷ್ಟಿಕೋನವನ್ನು ಹೊಂದಿರುವಂತೆ, ಬೈಬಲಿನಲ್ಲಿ ಸ್ಪಷ್ಟವಾದ ಸಿದ್ಧಾಂತಗಳು ನಿರೂಪಿಸಲ್ಪಟ್ಟಿವೆ. ಹಾಗಿದ್ದರೂ, ಮತದಾನವನ್ನು ಮಾಡುವುದರ ವಿರುದ್ಧ ಯಾವ ಸಿದ್ಧಾಂತವೂ ಇರುವಂತೆ ತೋರುವುದಿಲ್ಲ. ಉದಾಹರಣೆಗೆ, ನಿರ್ದೇಶಕರ ಮಂಡಲಿಯೊಂದು, ತಮ್ಮ ಸಂಸ್ಥೆಯ ಕಾರ್ಯಾಚರಣೆಯನ್ನು ಪ್ರಭಾವಿಸುವಂತಹ ತೀರ್ಮಾನಗಳನ್ನು ಕೈಗೊಳ್ಳಲು ಮತದಾನವನ್ನು ಮಾಡಬಹುದು. ಅನೇಕ ವೇಳೆ ಯೆಹೋವನ ಸಾಕ್ಷಿಗಳ ಸಭೆಗಳಲ್ಲೂ, ಕೂಟದ ಸಮಯ ಹಾಗೂ ಸಭೆಯ ನಿಧಿಗಳ ಉಪಯೋಗದ ಕುರಿತು ನಿರ್ಣಯಗಳನ್ನು ಮಾಡಬೇಕಾದಾಗ, ಸದಸ್ಯರು ಕೈಯನ್ನು ಮೇಲಕ್ಕೆತ್ತುವ ಮೂಲಕ ಮತದಾನ ಮಾಡುತ್ತಾರೆ.
ಆದರೆ, ರಾಜಕೀಯ ಚುನಾವಣೆಗಳಲ್ಲಿ ಮತದಾನ ಮಾಡುವುದರ ಕುರಿತೇನು? ಕೆಲವು ಪ್ರಜಾಪ್ರಭುತ್ವ ದೇಶಗಳಲ್ಲಿ, ಸುಮಾರು 50 ಪ್ರತಿಶತದಷ್ಟು ಜನರು, ಚುನಾವಣೆಯ ದಿನದಂದು ಮತದಾನಕ್ಕಾಗಿ ಹೋಗುವುದೇ ಇಲ್ಲ. ಆದರೆ ಯೆಹೋವನ ಸಾಕ್ಷಿಗಳಾದರೊ, ಇತರರ ಮತದಾನದ ಹಕ್ಕಿನಲ್ಲಿ ತಲೆಹಾಕುವುದೂ ಇಲ್ಲ, ರಾಜಕೀಯ ಚುನಾವಣೆಗಳ ವಿರುದ್ಧ ಯಾವ ರೀತಿಯ ಕಾರ್ಯಾಚರಣೆಯನ್ನು ಮಾಡುವುದೂ ಇಲ್ಲ. ಇಂತಹ ಚುನಾವಣೆಗಳಲ್ಲಿ ಯಥಾಯೋಗ್ಯವಾಗಿ ಚುನಾಯಿತರಾದ ಅಧಿಕಾರಿಗಳನ್ನು ಅವರು ಗೌರವಿಸುತ್ತಾರೆ ಮತ್ತು ಅವರೊಂದಿಗೆ ಸಹಕರಿಸುತ್ತಾರೆ. (ರೋಮಾಪುರ 13:1-7) ಒಬ್ಬ ಚುನಾವಣಾ ಅಭ್ಯರ್ಥಿಗೆ ತಾವು ವ್ಯಕ್ತಿಗತವಾಗಿ ಮತ ನೀಡುವೆವೋ ಇಲ್ಲವೊ ಎಂಬುದನ್ನು ಪ್ರತಿಯೊಬ್ಬ ಯೆಹೋವನ ಸಾಕ್ಷಿಯು ನಿರ್ಧರಿಸತಕ್ಕದ್ದು. ಈ ನಿರ್ಧಾರವು, ಅವನ ಬೈಬಲ್ ಶಿಕ್ಷಿತ ಮನಸ್ಸಾಕ್ಷಿಯ ಮೇಲೆ ಮತ್ತು ದೇವರು ಹಾಗೂ ರಾಜ್ಯದ ಕಡೆಗೆ ಅವನಿಗಿರುವ ಹೊಣೆಗಾರಿಕೆಯ ಪೂರ್ಣ ಜ್ಞಾನದ ಮೇಲೆ ಆಧಾರಿಸಿರಬೇಕು. (ಮತ್ತಾಯ 22:21; 1 ಪೇತ್ರ 3:16) ಈ ವೈಯಕ್ತಿಕ ನಿರ್ಣಯವನ್ನು ಮಾಡುವಾಗ, ಸಾಕ್ಷಿಗಳು ಹಲವಾರು ವಿಷಯಗಳನ್ನು ಪರಿಗಣಿಸುತ್ತಾರೆ.
ಮೊದಲನೆಯದಾಗಿ, ಯೇಸು ಕ್ರಿಸ್ತನು ತನ್ನ ಹಿಂಬಾಲಕರ ಕುರಿತು ಹೇಳಿದ್ದು: “ನಾನು ಲೋಕದವನಲ್ಲದೆ ಇರುವ ಪ್ರಕಾರ ಇವರೂ ಲೋಕದವರಲ್ಲ.” (ಯೋಹಾನ 17:14) ಯೆಹೋವನ ಸಾಕ್ಷಿಗಳು ಈ ಸಿದ್ಧಾಂತವನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಇವರು ‘ಲೋಕದವರಲ್ಲದ’ ಕಾರಣ, ಈ ಲೋಕದ ರಾಜಕೀಯ ವಿಷಯಗಳಲ್ಲಿ ತಟಸ್ಥರಾಗಿದ್ದಾರೆ.—ಯೋಹಾನ 18:36.
ಎರಡನೆಯದಾಗಿ, ಅಪೊಸ್ತಲ ಪೌಲನು ತನ್ನನ್ನು ಒಬ್ಬ “ರಾಯಭಾರಿ”ಯಾಗಿ ಸೂಚಿಸಿಕೊಂಡನು. ಅವನು ಕ್ರಿಸ್ತನ ಪ್ರತಿನಿಧಿಯಾಗಿದ್ದನೆಂದು ಅವನ ಸಮಕಾಲೀನರು ಗ್ರಹಿಸಿದರು. (ಎಫೆಸ 6:20; 2 ಕೊರಿಂಥ 5:20) ಈಗ ಯೇಸು ಕ್ರಿಸ್ತನು, ದೇವರ ಸ್ವರ್ಗೀಯ ರಾಜ್ಯದ ಸಿಂಹಾಸನಾರೂಢನಾದ ಅರಸನಾಗಿದ್ದಾನೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ, ಮತ್ತು ರಾಯಭಾರಿಗಳೋಪಾದಿ ಅವರು, ಈ ವಿಷಯವನ್ನು ರಾಷ್ಟ್ರಗಳಿಗೆ ಘೋಷಿಸಬೇಕು. (ಮತ್ತಾಯ 24:14; ಪ್ರಕಟನೆ 11:15) ರಾಯಭಾರಿಗಳು ತಟಸ್ಥರಾಗಿದ್ದು, ತಮ್ಮನ್ನು ಕಳುಹಿಸಲಾಗಿರುವ ದೇಶದ ಆಂತರಿಕ ವ್ಯವಹಾರಗಳಲ್ಲಿ ಅವರು ಹಸ್ತಕ್ಷೇಪಮಾಡಬಾರದು. ತದ್ರೀತಿಯಲ್ಲಿ, ದೇವರ ಸ್ವರ್ಗೀಯ ರಾಜ್ಯದ ಪ್ರತಿನಿಧಿಗಳೋಪಾದಿ, ತಾವು ವಾಸಿಸುವ ದೇಶಗಳ ರಾಜಕೀಯ ವಿಷಯಗಳಲ್ಲಿ ತಲೆಹಾಕುವುದರಿಂದ ದೂರವಿರಬೇಕೆಂದು ಯೆಹೋವನ ಸಾಕ್ಷಿಗಳಿಗೂ ಅನಿಸುತ್ತದೆ.
ಪರಿಗಣಿಸಬೇಕಾದ ಮೂರನೆಯ ವಿಷಯವೇನೆಂದರೆ, ಒಬ್ಬ ವ್ಯಕ್ತಿಯನ್ನು ಅಧಿಕಾರದ ಸ್ಥಾನಕ್ಕೆ ಚುನಾಯಿಸುವುದರಲ್ಲಿ ಭಾಗವಹಿಸುವವರು, ಆ ವ್ಯಕ್ತಿಯ ಕ್ರಿಯೆಗಳಿಗೆ ಹೊಣೆಗಾರರಾಗಬಹುದು. (ಹೋಲಿಸಿ 1 ತಿಮೊಥೆಯ 5:22, ದ ನ್ಯೂ ಇಂಗ್ಲಿಷ್ ಬೈಬಲ್.) ತಾವು ಈ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಬಯಸುತ್ತೇವೊ ಇಲ್ಲವೊ ಎಂಬುದನ್ನು ಕ್ರೈಸ್ತರು ಜಾಗರೂಕವಾಗಿ ಪರಿಗಣಿಸತಕ್ಕದ್ದು.
ನಾಲ್ಕನೆಯದಾಗಿ, ಯೆಹೋವನ ಸಾಕ್ಷಿಗಳು ತಮ್ಮ ಕ್ರೈಸ್ತ ಐಕ್ಯವನ್ನು ಬಹಳವಾಗಿ ಮಾನ್ಯಮಾಡುತ್ತಾರೆ. (ಕೊಲೊಸ್ಸೆ 3:14) ಧರ್ಮವು ರಾಜಕೀಯದಲ್ಲಿ ಒಳಗೊಳ್ಳುವಾಗ, ಸಾಮಾನ್ಯವಾಗಿ ಅದರ ಸದಸ್ಯರ ಮಧ್ಯೆ ಒಡಕುಗಳುಂಟಾಗುತ್ತವೆ. ಯೇಸು ಕ್ರಿಸ್ತನನ್ನು ಅನುಕರಿಸುತ್ತಾ, ಯೆಹೋವನ ಸಾಕ್ಷಿಗಳು ರಾಜಕೀಯದಲ್ಲಿ ಒಳಗೊಳ್ಳುವುದಿಲ್ಲ, ಮತ್ತು ಹೀಗೆ ತಮ್ಮ ಕ್ರೈಸ್ತ ಐಕ್ಯವನ್ನು ಕಾಪಾಡಿಕೊಳ್ಳುತ್ತಾರೆ.—ಮತ್ತಾಯ 12:25; ಯೋಹಾನ 6:15; 18:36, 37.
ಐದನೆಯ ಮತ್ತು ಕೊನೆಯ ವಿಷಯವೇನೆಂದರೆ, ರಾಜಕೀಯದಲ್ಲಿ ಕೈಹಾಕದೇ ಇರುವುದರಿಂದ, ಯೆಹೋವನ ಸಾಕ್ಷಿಗಳು ಎಲ್ಲ ರಾಜಕೀಯ ಗುಂಪುಗಳವರಿಗೆ ರಾಜ್ಯದ ಪ್ರಮುಖ ಸಂದೇಶವನ್ನು ತಿಳಿಯಪಡಿಸಲು ವಾಕ್ ಸ್ವಾತಂತ್ರ್ಯವುಳ್ಳವರಾಗಿದ್ದಾರೆ.—ಇಬ್ರಿಯ 10:35.
ಮೇಲೆ ತಿಳಿಸಲ್ಪಟ್ಟಿರುವ ಶಾಸ್ತ್ರೀಯ ಸಿದ್ಧಾಂತಗಳ ಆಧಾರದ ಮೇಲೆ, ಅನೇಕ ದೇಶಗಳಲ್ಲಿರುವ ಯೆಹೋವನ ಸಾಕ್ಷಿಗಳು, ರಾಜಕೀಯ ಚುನಾವಣೆಗಳಲ್ಲಿ ಮತದಾನ ಮಾಡದಿರಲು ವೈಯಕ್ತಿಕವಾಗಿ ನಿರ್ಣಯವನ್ನು ಮಾಡಬಹುದು. ಮತ್ತು ಅಂತಹ ನಿರ್ಣಯವನ್ನು ಮಾಡಲು, ಆ ದೇಶದ ಕಾನೂನು ಅವರಿಗೆ ಸ್ವಾತಂತ್ರ್ಯವನ್ನು ನೀಡುತ್ತದೆ. ಆದರೆ, ಪ್ರಜೆಗಳು ಮತದಾನವನ್ನು ಮಾಡಲೇಬೇಕೆಂದು ಒಂದು ನಿರ್ದಿಷ್ಟ ದೇಶದ ಕಾನೂನು ಕೇಳಿಕೊಳ್ಳುವುದಾದರೆ ಆಗೇನು? ಅಂತಹ ಸಂದರ್ಭದಲ್ಲಿ, ಆ ಸನ್ನಿವೇಶವನ್ನು ಹೇಗೆ ನಿಭಾಯಿಸುವುದು ಎಂಬುದರ ಕುರಿತು, ಆತ್ಮಸಾಕ್ಷಿಕವಾಗಿ ಬೈಬಲಾಧಾರಿತ ನಿರ್ಣಯವನ್ನು ಮಾಡುವ ಹೊಣೆಯು ಪ್ರತಿಯೊಬ್ಬ ಸಾಕ್ಷಿಗಿರುತ್ತದೆ. ಒಬ್ಬನು ಮತದಾನ ಕೇಂದ್ರಕ್ಕೆ ಹೋಗಲು ನಿರ್ಧರಿಸಿದರೆ, ಅದು ಅವನ ತೀರ್ಮಾನವಾಗಿದೆ. ಅವನು ಮತದಾನ ಕೇಂದ್ರದಲ್ಲಿ ಏನು ಮಾಡುತ್ತಾನೆಂಬುದು, ಅವನಿಗೂ ಅವನ ಸೃಷ್ಟಿಕರ್ತನಿಗೂ ಸಂಬಂಧಿಸಿದ ವಿಷಯವಾಗಿದೆ.
ನವೆಂಬರ್ 15, 1950ರ ದ ವಾಚ್‌ಟವರ್ ಪತ್ರಿಕೆಯು, 445 ಮತ್ತು 446ನೆಯ ಪುಟಗಳಲ್ಲಿ ಹೀಗೆ ಹೇಳಿತು: “ಪ್ರಜೆಗಳು ಮತದಾನವನ್ನು ಮಾಡಲೇಬೇಕೆಂದು ಕೈಸರನು ಕಡ್ಡಾಯಪಡಿಸಿದರೆ . . . [ಸಾಕ್ಷಿಗಳು] ಚುನಾವಣೆಯ ಸ್ಥಳಕ್ಕೆ ಹೋಗಿ ಮತದಾನ ಕೇಂದ್ರಗಳನ್ನು ಪ್ರವೇಶಿಸಬಹುದು. ಅಲ್ಲಿಯೇ, ಅವರು ಮತಪತ್ರದ ಮೇಲೆ ಗುರುತು ಹಾಕಬೇಕು ಇಲ್ಲವೆ ತಮ್ಮ ನಿಲುವು ಏನೆಂಬುದನ್ನು ಸ್ಪಷ್ಟಪಡಿಸಬೇಕಾಗಿರುವುದು. ಮತದಾರರು ತಮಗೆ ನೀಡಲ್ಪಟ್ಟ ಮತಪತ್ರದ ಮೇಲೆ ತಮ್ಮ ಇಚ್ಛಾನುಸಾರ ಗುರುತು ಹಾಕಬಹುದು. ಇಂತಹ ಸಂದರ್ಭದಲ್ಲಿ, ದೇವರ ಸಾಕ್ಷಿಗಳು ಆತನ ಸನ್ನಿಧಿಯಲ್ಲಿ ಆತನ ಆಜ್ಞೆಗಳಿಗನುಗುಣವಾಗಿ ಮತ್ತು ತಮ್ಮ ನಂಬಿಕೆಗನುಸಾರ ಕ್ರಿಯೆಗೈಯಬೇಕು. ಮತಪತ್ರದೊಂದಿಗೆ ಏನು ಮಾಡಬೇಕೆಂದು ಅವರಿಗೆ ಉಪದೇಶ ನೀಡುವುದು ನಮ್ಮ ಜವಾಬ್ದಾರಿಯಲ್ಲ.”
ಆದರೆ, ಕ್ರೈಸ್ತ ಸ್ತ್ರೀಯೊಬ್ಬಳ ಅವಿಶ್ವಾಸಿ ಪತಿಯು, ಮತದಾನಮಾಡುವಂತೆ ಅವಳನ್ನು ಒತ್ತಾಯಪಡಿಸುವುದಾದರೆ ಆಗೇನು? ಕ್ರೈಸ್ತರು ಸರ್ವಾಧಿಕಾರಿಗಳಿಗೆ ಹೇಗೆ ಅಧೀನರಾಗಿದ್ದಾರೊ ಹಾಗೆಯೇ ಅವಳು ತನ್ನ ಪತಿಗೆ ಅಧೀನಳಾಗಿದ್ದಾಳೆ. (ಎಫೆಸ 5:22; 1 ಪೇತ್ರ 2:13-17) ಅವಳು ತನ್ನ ಪತಿಗೆ ವಿಧೇಯಳಾಗಿ ಮತದಾನ ಕೇಂದ್ರಕ್ಕೆ ಹೋಗುವುದಾದರೆ, ಅದು ಅವಳ ವೈಯಕ್ತಿಕ ನಿರ್ಣಯವಾಗಿದೆ. ಯಾರೂ ಅವಳನ್ನು ಟೀಕಿಸಬಾರದು.—ಹೋಲಿಸಿ ರೋಮಾಪುರ 14:4.
ಮತದಾನ ಮಾಡಲೇಬೇಕೆಂದು ಒಂದು ದೇಶದ ಕಾನೂನು ಕಡ್ಡಾಯಪಡಿಸದಿದ್ದರೂ, ಮತದಾನ ಕೇಂದ್ರಗಳಿಗೆ ಹೋಗದವರು ಜನಸಾಮಾನ್ಯರ ದ್ವೇಷಕ್ಕೆ ಮತ್ತು ಶಾರೀರಿಕ ಹಲ್ಲೆಗೊಳಗಾಗುವುದಾದರೆ ಆಗೇನು? ಕಾನೂನುಬದ್ಧವಾಗಿ ಮತದಾನ ಮಾಡುವ ಹಂಗು ಒಬ್ಬ ವ್ಯಕ್ತಿಗಿರದಿದ್ದರೂ, ಅವನು ಮತದಾನ ಕೇಂದ್ರಕ್ಕೆ ಹೋಗದಿದ್ದರೆ ಯಾವುದೊ ವಿಧದಲ್ಲಿ ತೀವ್ರವಾದ ದಂಡಗಳನ್ನು ತೆರಬೇಕಾದರೆ ಆಗೇನು? ಇಂತಹ ಮತ್ತು ತದ್ರೀತಿಯ ಸನ್ನಿವೇಶಗಳಲ್ಲಿ, ಕ್ರೈಸ್ತನೊಬ್ಬನು ತನ್ನ ಸ್ವಂತ ತೀರ್ಮಾನವನ್ನು ಮಾಡಬೇಕು. “ಪ್ರತಿಯೊಬ್ಬನು ಸ್ವಂತ ಹೊರೆಯನ್ನು ಹೊತ್ತುಕೊಳ್ಳಬೇಕು.”—ಗಲಾತ್ಯ 6:5.
ತಮ್ಮ ದೇಶದಲ್ಲಿ ಚುನಾವಣೆಗಳು ನಡೆಯುವಾಗ, ಯೆಹೋವನ ಸಾಕ್ಷಿಗಳಲ್ಲಿ ಕೆಲವರು ಮತದಾನ ಕೇಂದ್ರಗಳಿಗೆ ಹೋಗುವುದನ್ನು ಮತ್ತು ಇನ್ನೂ ಕೆಲವರು ಹೋಗದಿರುವುದನ್ನು ಜನರು ನೋಡುವಾಗ, ಅದರಿಂದ ಕೆಲವರು ಎಡವಿಬೀಳಬಹುದು. ‘ಯೆಹೋವನ ಸಾಕ್ಷಿಗಳು ಸುಸಂಗತವಾಗಿ ನಡೆದುಕೊಳ್ಳುವುದಿಲ್ಲ’ ಎಂದು ಅವರು ಹೇಳಬಹುದು. ಆದರೂ ವ್ಯಕ್ತಿಗತ ನಿರ್ಣಯಗಳನ್ನು ಕೇಳಿಕೊಳ್ಳುವ ಇಂತಹ ವಿಷಯಗಳಲ್ಲಿ, ಪ್ರತಿಯೊಬ್ಬ ಕ್ರೈಸ್ತನು ಯೆಹೋವ ದೇವರ ಸಮ್ಮುಖದಲ್ಲಿ ಸ್ವಂತ ತೀರ್ಮಾನವನ್ನು ಮಾಡಬೇಕಾಗಿದೆ ಎಂಬುದನ್ನು ಜನರು ಗ್ರಹಿಸಬೇಕು.—ರೋಮಾಪುರ 14:12.
ಯೆಹೋವನ ಸಾಕ್ಷಿಗಳು ವಿಭಿನ್ನ ಸನ್ನಿವೇಶಗಳಲ್ಲಿ ಮಾಡುವಂತಹ ವೈಯಕ್ತಿಕ ನಿರ್ಣಯಗಳು ಏನೇ ಆಗಿರಲಿ, ತಮ್ಮ ಕ್ರೈಸ್ತ ತಾಟಸ್ಥ್ಯ ಮತ್ತು ವಾಕ್ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳುವ ವಿಷಯದಲ್ಲಿ ಅವರು ಜಾಗರೂಕರಾಗಿರುತ್ತಾರೆ. ಎಲ್ಲ ವಿಷಯಗಳನ್ನು ನಿಭಾಯಿಸಲು ತಮಗೆ ಬೇಕಾದ ಬಲವನ್ನು, ವಿವೇಕವನ್ನು, ಮತ್ತು ಯಾವುದೇ ವಿಧದಲ್ಲಿ ತಮ್ಮ ನಂಬಿಕೆಯನ್ನು ರಾಜಿಮಾಡಿಕೊಳ್ಳದಿರುವಂತೆ ಸಹಾಯಕ್ಕಾಗಿ ಅವರು ಯೆಹೋವ ದೇವರ ಮೇಲೆ ಆತುಕೊಳ್ಳುತ್ತಾರೆ. ಹೀಗೆ ಅವರು ಕೀರ್ತನೆಗಾರನ ಮಾತುಗಳಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ: “ನೀನೇ ನನ್ನ ಬಂಡೆಯೂ ಕೋಟೆಯೂ ಆಗಿದ್ದೀಯಲ್ಲಾ; ಆದದರಿಂದ ನಿನ್ನ ಹೆಸರಿನ ನಿಮಿತ್ತ ದಾರಿತೋರಿಸಿ ನನ್ನನ್ನು ನಡಿಸು.”—ಕೀರ್ತನೆ 31:3.