ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w99 12/1 ಪು. 3-5
  • ಅಪಾಕಲಿಪ್ಸ್‌ನ ಭಯವೇಕೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಅಪಾಕಲಿಪ್ಸ್‌ನ ಭಯವೇಕೆ?
  • ಕಾವಲಿನಬುರುಜು—1999
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಅಪಾಕಲಿಪ್ಸ್‌ ಭೀತಿಯ ಕುರಿತಾದ ಇತಿಹಾಸ
  • ಅಪಾಕಲಿಪ್ಸ್‌ನ ಭಯವು ನ್ಯಾಯವೋ?
  • ಅಪಾಕಲಿಪ್ಸ್‌—ಭಯಪಡಬೇಕೊ ಅಥವಾ ನಿರೀಕ್ಷಿಸಬೇಕೊ?
    ಕಾವಲಿನಬುರುಜು—1999
  • ಅಪಾಕಲಿಪ್ಸ್‌ನಿಂದ ಬರುವ “ಶುಭವರ್ತಮಾನಗಳು”
    ಕಾವಲಿನಬುರುಜು—1999
  • ಪ್ರಕಟನೆ—ಅದರ ಸಂತೋಷದ ಪರಮಾವಧಿ!
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
  • ಪ್ರಕಟನೆ ಪುಸ್ತಕದಲ್ಲಿರುವ ವಿಷಯಗಳು ಏನನ್ನ ಸೂಚಿಸುತ್ತೆ?
    ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ
ಇನ್ನಷ್ಟು
ಕಾವಲಿನಬುರುಜು—1999
w99 12/1 ಪು. 3-5

ಅಪಾಕಲಿಪ್ಸ್‌ನ ಭಯವೇಕೆ?

“ಅತಿ ಬೇಗನೆ ರಾಷ್ಟ್ರಾದ್ಯಂತ ಒಂದು [ರೀತಿಯ] ಕುಸಿತವು ಸಂಭವಿಸುವುದೆಂದು ಅನೇಕ ದಶಕಗಳಿಂದ ಕ್ರೈಸ್ತ ಮೂಲಭೂತವಾದಿಗಳು ಪ್ರವಾದಿಸುತ್ತಿದ್ದಾರೆ” ಎಂದು ಟೈಮ್‌ ಪತ್ರಿಕೆಯಲ್ಲಿನ ಧಾರ್ಮಿಕ ಲೇಖಕರಾದ ಡೇಮ್ಯನ್‌ ಥಾಮ್ಸನ್‌ ತಿಳಿಸುತ್ತಾರೆ. “ಈಗ, ಆ ಮೂಲಭೂತವಾದಿಗಳ ಆಶ್ಚರ್ಯಕ್ಕೆ, ಈ ಘಟನಾವಳಿಗಳು ಗಂಭೀರವಾಗಿ ಪರಿಗಣಿಸಲ್ಪಟ್ಟಿವೆ ಮಾತ್ರವಲ್ಲ, ಈ ಮುಂಚೆ ಇವುಗಳ ಬಗ್ಗೆ ಅಪಹಾಸ್ಯಮಾಡುತ್ತಿದ್ದ ಜನರಿಂದಲೇ—ಕಂಪ್ಯೂಟರ್‌ ಪ್ರೋಗ್ರ್ಯಾಮರ್ಸ್‌, ವಾಣಿಜ್ಯ ಮುಖಂಡರು ಮತ್ತು ರಾಜಕಾರಣಿಗಳಿಂದಲೇ—ಇವು ವ್ಯಾಪಕವಾಗಿ ಪ್ರಚಾರಮಾಡಲ್ಪಡುತ್ತಿವೆ.” ಅವರು ಒತ್ತಿ ಹೇಳಿದ್ದೇನೆಂದರೆ, ಇಸವಿ 2000ದಲ್ಲಿ ಲೋಕವ್ಯಾಪಕವಾಗಿ ಆಗಲಿರುವ ಕಂಪ್ಯೂಟರ್‌ ವೈಫಲ್ಯದ ಭೀತಿಯು, “ಅನೇಕ ಲೌಕಿಕ ವ್ಯಕ್ತಿಗಳನ್ನು ಸಾಮೂಹಿಕ ಭಯ, ಸರಕಾರದ ಕುಸಿತ, ಆಹಾರದ ಅವ್ಯವಸ್ಥೆ, ವಿಮಾನಗಳು ಗಗನಚುಂಬಿ ಭವನಗಳಿಗೆ ಅಪ್ಪಳಿಸುವಂತಹ” ವಿಪತ್ತುಗಳ ಸುರಿಮಳೆಯ ಕುರಿತು ಭಯಪಡುವ “ಅಸಂಭವನೀಯ ಸಹಸ್ರವರ್ಷವಾದಿಗಳನ್ನಾಗಿ ಮಾಡಿದೆ.”

ಇಂತಹ ಸರ್ವಸಾಮಾನ್ಯವಾಗಿರುವ ಚಿಂತೆಗಳ ಜೊತೆಗೆ, ಅನೇಕ ವೇಳೆ “ಪ್ರಳಯ ಸೂಚಕ” (ಅಪಾಕಲಿಪ್ಟಿಕ್‌) ಗುಂಪುಗಳೆಂದು ಕರೆಯಲಾಗುವ, ಚಿಕ್ಕಪುಟ್ಟ ಬೇರೆ ಬೇರೆ ಧಾರ್ಮಿಕ ಗುಂಪುಗಳ ನೆಮ್ಮದಿಗೆಡಿಸುವ ಚಟುವಟಿಕೆಗಳು ಸಹ ಸೇರಿಕೊಂಡಿವೆ. 1999ರ ಜನವರಿ ತಿಂಗಳಿನಲ್ಲಿ, “ಯೆರೂಸಲೇಮ್‌ ಮತ್ತು ಅಪಾಕಲಿಪ್ಸ್‌ನ ಸೈರನ್‌ಗಳು” ಎಂಬ ಶಿರೋನಾಮವಿದ್ದ ಒಂದು ಲೇಖನದಲ್ಲಿ, ಫ್ರೆಂಚ್‌ ದಿನಪತ್ರಿಕೆಯಾದ ಲ ಫೀಗಾರೊ ಹೇಳಿದ್ದು: “‘ಸಹಸ್ರವರ್ಷವಾದಿಗಳಲ್ಲಿ’ ಸುಮಾರು ನೂರಕ್ಕಿಂತಲೂ ಹೆಚ್ಚು ಜನರು, ಆಲಿವ್‌ ಬೆಟ್ಟದ ಮೇಲೆ ಅಥವಾ ಬೆಟ್ಟದ ಬಳಿ, ಪಾರೂಸೀಅ ಅಥವಾ ಅಪಾಕಲಿಪ್ಸ್‌ಗಾಗಿ ಕಾದುಕೊಂಡಿದ್ದಾರೆ ಎಂದು [ಇಸ್ರಾಯೇಲ್‌ನ] ಭದ್ರತಾ ಪಡೆಗಳು ಅಂದಾಜುಮಾಡುತ್ತವೆ.”

1998 ಬ್ರಿಟ್ಯಾನಿಕ ಬುಕ್‌ ಆಫ್‌ ದ ಯಿಯರ್‌ನಲ್ಲಿ “ಪ್ರಳಯದಿನದ ಕುಪಂಥಗಳು” ಎಂಬ ವಿಷಯದ ಕುರಿತು ಒಂದು ವಿಶೇಷವಾದ ವರದಿಯಿದೆ. ಹೆವನ್ಸ್‌ ಗೇಟ್‌, ಪೀಪಲ್ಸ್‌ ಟೆಂಪಲ್‌, ಮತ್ತು ಆರ್ಡರ್‌ ಆಫ್‌ ದ ಸೋಲರ್‌ ಟೆಂಪಲ್‌, ಹಾಗೂ 1995ರಲ್ಲಿ ಟೋಕಿಯೊ ರೈಲು ನಿಲ್ದಾಣದಲ್ಲಿ ಮಾರಕವಾದ ವಿಷಾನಿಲವನ್ನು ಹೊರಬಿಡುವ ಮೂಲಕ, 12 ಜನರನ್ನು ಕೊಂದು, ಸಾವಿರಾರು ಜನರನ್ನು ಗಾಯಗೊಳಿಸಿದ ಆಮ್‌ ಶಿನ್ರೀಕ್ಯೋ (ಸುಪ್ರೀಮ್‌ ಟ್ರೂತ್‌)ಗಳಂತಹ ಆತ್ಮಹತ್ಯೆಯ ಪಂಥಗಳ ಕುರಿತು ಅದು ತಿಳಿಸುತ್ತದೆ. ಈ ವರದಿಯ ಸಾರಾಂಶವನ್ನು ಸಂಕ್ಷಿಪ್ತವಾಗಿ ತಿಳಿಸುತ್ತಾ, ಶಿಕಾಗೊ ವಿಶ್ವವಿದ್ಯಾನಿಲಯದಲ್ಲಿ ಧರ್ಮದ (ರಿಲಿಜನ್‌) ಪ್ರೊಫೆಸರರಾಗಿರುವ ಮಾರ್ಟಿನ್‌ ಈ. ಮಾರ್ಟೀ ಬರೆದುದು: “ಕ್ಯಾಲೆಂಡರ್‌ನ ಹಾಳೆಯನ್ನು 2000ಕ್ಕೆ ತಿರುಗಿಸುವುದು ತುಂಬ ಭಾವಪ್ರೇರಕವಾಗಿದೆ—ಮತ್ತು ಇದು ಎಲ್ಲ ರೀತಿಯ ಪ್ರವಾದನೆಗಳು ಹಾಗೂ ಚಳವಳಿಗಳಿಗೆ ಪ್ರಚೋದನೆ ನೀಡುತ್ತದೆ ಎಂಬುದು ನಿಶ್ಚಯ. ಇವುಗಳಲ್ಲಿ ಕೆಲವು ಅಪಾಯಕರವಾಗಿ ಪರಿಣಮಿಸಬಹುದು. ಮತ್ತು ಇದು ಉದಾಸೀನಭಾವದಿಂದ ಎದುರಿಸತಕ್ಕ ಸಮಯವಾಗಿರುವುದಿಲ್ಲ.”

ಅಪಾಕಲಿಪ್ಸ್‌ ಭೀತಿಯ ಕುರಿತಾದ ಇತಿಹಾಸ

ಅಪಾಕಲಿಪ್ಸ್‌ ಅಥವಾ ಪ್ರಕಟನೆ ಎಂಬುದು ಬೈಬಲಿನ ಕೊನೆಯ ಪುಸ್ತಕದ ಹೆಸರಾಗಿದ್ದು, ಇದು ಸಾ.ಶ. ಮೊದಲನೆಯ ಶತಮಾನದ ಕೊನೆಯ ಭಾಗದಲ್ಲಿ ಬರೆಯಲ್ಪಟ್ಟಿತು. ಈ ಪುಸ್ತಕದ ಪ್ರವಾದನ ಸ್ವರೂಪ ಹಾಗೂ ಅತ್ಯಧಿಕ ಸಾಂಕೇತಿಕ ಭಾಷೆಯ ವೀಕ್ಷಣದಲ್ಲಿ, ಬೈಬಲಿನ ಪ್ರಕಟನೆ ಪುಸ್ತಕವು ಬರೆಯಲ್ಪಡುವುದಕ್ಕಿಂತಲೂ ಬಹಳ ಸಮಯದ ಹಿಂದೆ ಆರಂಭವಾದ ಸಾಹಿತ್ಯರೂಪಕ್ಕೆ “ಅಪಾಕಲಿಪ್ಟಿಕ್‌” ಎಂಬ ಗುಣವಾಚಕವು ಉಪಯೋಗಿಸಲ್ಪಟ್ಟಿತು. ಈ ಸಾಹಿತ್ಯದ ಕಾಲ್ಪನಿಕ ಸಂಕೇತಾರ್ಥವು, ಪುರಾತನ ಪಾರಸಿಯರ ಕಾಲಾವಧಿಗೆ ಮತ್ತು ಅದಕ್ಕೂ ಹಿಂದಿನ ಸಮಯಕ್ಕೆ ಹೋಗುತ್ತದೆ. ಆದುದರಿಂದ, “[ಯೆಹೂದಿ ಅಪಾಕಲಿಪ್ಟಿಕ್‌] ಸಾಹಿತ್ಯದಲ್ಲಿ ಒಳಗೊಂಡಿರುವ ಹೆಚ್ಚಿನ ಕಾಲ್ಪನಿಕ ಘಟಕಗಳಲ್ಲಿರುವ ವಿಶಿಷ್ಟವಾದ ಬಬಿಲೋನ್ಯ ಲಕ್ಷಣ”ದ ಕುರಿತು ದ ಜ್ಯೂಯಿಷ್‌ ಎನ್‌ಸೈಕ್ಲೊಪೀಡಿಯ ತಿಳಿಸುತ್ತದೆ.

ಯೆಹೂದಿ ಅಪಾಕಲಿಪ್ಟಿಕ್‌ ಸಾಹಿತ್ಯವು, ಸಾ.ಶ.ಪೂ. ಎರಡನೆಯ ಶತಮಾನದ ಆರಂಭದಿಂದ ಸಾ.ಶ. ಎರಡನೆಯ ಶತಮಾನದ ಕೊನೆಯ ತನಕ ತುಂಬ ಏಳಿಗೆಹೊಂದಿತು. ಈ ಬರಹಗಳಿಗೆ ಕಾರಣವನ್ನು ವಿವರಿಸುತ್ತಾ, ಒಬ್ಬ ಬೈಬಲ್‌ ವಿದ್ವಾಂಸನು ಬರೆದುದು: “ಯೆಹೂದ್ಯರು ಎಲ್ಲ ಕಾಲಾವಧಿಯನ್ನು ಎರಡು ಯುಗಗಳಾಗಿ ವಿಭಾಗಿಸಿದರು. ಅದರಲ್ಲಿ ತೀರ ಕೆಟ್ಟುಹೋಗಿರುವ ಈ ಪ್ರಸ್ತುತ ಯುಗವೂ ಒಂದಾಗಿತ್ತು . . . ಆದುದರಿಂದ, ಈ ವಿಷಯಗಳ ವ್ಯವಸ್ಥೆಯ ಅಂತ್ಯಕ್ಕಾಗಿ ಯೆಹೂದ್ಯರು ಕಾದರು. ಮುಂದೆ ಬರಲಿಕ್ಕಿರುವ ಯುಗವು, ಸಂಪೂರ್ಣವಾಗಿ ಒಳ್ಳೇದಾಗಿರಲಿಕ್ಕಿದ್ದ ದೇವರ ಸುವರ್ಣ ಯುಗವಾಗಿತ್ತು. ಅದರಲ್ಲಿ ಶಾಂತಿ, ಸಮೃದ್ಧಿ ಮತ್ತು ನೀತಿಯು ತುಂಬಿರಲಿತ್ತು . . . ಈ ಪ್ರಸ್ತುತ ಯುಗವು ಹೇಗೆ ಭಾವೀ ಯುಗವಾಗಿ ಪರಿಣಮಿಸಲಿತ್ತು? ಈ ಬದಲಾವಣೆಯನ್ನು ಮಾನವ ನಿಯೋಗವು ಎಂದಿಗೂ ತರಸಾಧ್ಯವಿಲ್ಲವೆಂದು ಯೆಹೂದ್ಯರು ನಂಬಿದ್ದ ಕಾರಣ, ನೇರವಾಗಿ ದೇವರ ಹಸ್ತಕ್ಷೇಪಕ್ಕಾಗಿ ಅವರು ಎದುರುನೋಡುತ್ತಿದ್ದರು. . . . ದೇವರ ಬರೋಣದ ದಿನವು ಕರ್ತನ ದಿನ ಎಂದು ಕರೆಯಲ್ಪಟ್ಟಿತು, ಮತ್ತು ಅದು ಭೀತಿ, ನಾಶನ ಹಾಗೂ ನ್ಯಾಯತೀರ್ಪಿನ ಭಯಾನಕ ಸಮಯವಾಗಿದ್ದು, ಹೊಸ ಯುಗದ ಪ್ರಸವವೇದನೆಯಾಗಿರಲಿತ್ತು. ಎಲ್ಲ ಅಪಾಕಲಿಪ್ಟಿಕ್‌ ಸಾಹಿತ್ಯವು ಈ ಘಟನೆಗಳ ಬಗ್ಗೆ ವಿವರಿಸುತ್ತದೆ.”

ಅಪಾಕಲಿಪ್ಸ್‌ನ ಭಯವು ನ್ಯಾಯವೋ?

ಬೈಬಲಿನ ಪ್ರಕಟನೆ ಪುಸ್ತಕವು “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧ” ಅಥವಾ ಅರ್ಮಗೆದೋನಿನ ಕುರಿತು ಮಾತಾಡುತ್ತದೆ. ಈ ಯುದ್ಧದಲ್ಲಿ ದುಷ್ಟರು ಸಂಪೂರ್ಣವಾಗಿ ನಾಶಮಾಡಲ್ಪಡುವರು, ತದನಂತರ ಸಾವಿರ ವರ್ಷದ ಕಾಲಾವಧಿ (ಕೆಲವೊಮ್ಮೆ ಸಹಸ್ರವರ್ಷವೆಂದು ಕರೆಯಲ್ಪಡುತ್ತದೆ)ಯು ಆರಂಭವಾಗುವುದು; ಈ ಸಮಯದಲ್ಲಿ ಸೈತಾನನು ಅಧೋಲೋಕದಲ್ಲಿ ಬಂಧಿಸಲ್ಪಡುವನು ಮತ್ತು ಕ್ರಿಸ್ತನು ಮಾನವಕುಲಕ್ಕೆ ನ್ಯಾಯತೀರಿಸುವನು. (ಪ್ರಕಟನೆ 16:14, 16; 20:1-4) ಮಧ್ಯ ಯುಗದಲ್ಲಿ, ಕೆಲವರು ಈ ಪ್ರವಾದನೆಯನ್ನು ಅಪಾರ್ಥಮಾಡಿಕೊಂಡಿದ್ದರು. ಏಕೆಂದರೆ ಕ್ರಿಸ್ತನು ಜನಿಸಿದಾಗ ಸಹಸ್ರವರ್ಷವು ಆರಂಭವಾಯಿತು ಮತ್ತು ಅಂತಿಮ ನ್ಯಾಯತೀರ್ಪಿನ ತನಕ ಈ ಕಾಲಾವಧಿಯು ಇರುತ್ತದೆ ಎಂದು ಕ್ಯಾತೊಲಿಕ್‌ “ಸಂತ”ನಾಗಿದ್ದ ಆಗಸ್ಟಿನನು (ಸಾ.ಶ. 354-430) ಹೇಳಿದ್ದನು. ಆಗಸ್ಟಿನನು ಸಮಯಾವಧಿಗೆ ಗಮನಕೊಡಲಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದಾದರೂ, 1000 ವರ್ಷಗಳು ಸಮೀಪಿಸಿದಂತೆ ಭಯವು ಹೆಚ್ಚಾಗತೊಡಗಿತು. ಮಧ್ಯ ಯುಗದ ಈ ಅಪಾಕಲಿಪ್ಸ್‌ನ ಭಯದ ವ್ಯಾಪ್ತಿಯ ಕುರಿತು ಇತಿಹಾಸಕಾರರಲ್ಲಿ ಏಕಾಭಿಪ್ರಾಯವಿಲ್ಲ. ಈ ಭಯವು ಎಷ್ಟೇ ವ್ಯಾಪಕವಾಗಿದ್ದಿರಲಿ, ಅದು ನ್ಯಾಯಸಮ್ಮತವಲ್ಲದ್ದಾಗಿ ಪರಿಣಮಿಸಿತು ಎಂಬುದಂತೂ ಖಂಡಿತ.

ತದ್ರೀತಿಯಲ್ಲಿ ಇಂದು, 2000 ಅಥವಾ 2001ನೆಯ ಇಸವಿಯು ಭಯಾನಕ ಅಪಾಕಲಿಪ್ಸ್‌ ಅನ್ನು ಉಂಟುಮಾಡುತ್ತದೆ ಎಂಬ ಧಾರ್ಮಿಕ ಹಾಗೂ ಲೌಕಿಕ ಭಯವು ಅಸ್ತಿತ್ವದಲ್ಲಿದೆ. ಆದರೆ ಈ ಭಯವು ನ್ಯಾಯವಾದದ್ದಾಗಿದೆಯೊ? ಮತ್ತು ಬೈಬಲಿನ ಪ್ರಕಟನೆ ಅಥವಾ ಅಪಾಕಲಿಪ್ಸ್‌ ಪುಸ್ತಕದಲ್ಲಿರುವ ಸಂದೇಶಗಳ ಬಗ್ಗೆ ಭಯಪಡಬೇಕೊ ಅಥವಾ ಅವು ನಿರೀಕ್ಷೆಗೆ ಅರ್ಹವಾದವುಗಳಾಗಿವೆಯೊ? ದಯವಿಟ್ಟು ಇದರ ಬಗ್ಗೆ ಮುಂದೆ ಓದಿ.

[ಪುಟ 4 ರಲ್ಲಿರುವ ಚಿತ್ರ]

ಮಧ್ಯ ಯುಗದ ಅಪಾಕಲಿಪ್ಸ್‌ನ ಭಯವು ನ್ಯಾಯಸಮ್ಮತವಲ್ಲದ್ದಾಗಿ ಪರಿಣಮಿಸಿತು

[ಕೃಪೆ]

© Cliché Bibliothèque Nationale de France, Paris

[ಪುಟ 3 ರಲ್ಲಿರುವ ಚಿತ್ರ ಕೃಪೆ]

Maya/Sipa Press

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ