ಅಪಾಕಲಿಪ್ಸ್—ಭಯಪಡಬೇಕೊ ಅಥವಾ ನಿರೀಕ್ಷಿಸಬೇಕೊ?
“ಇಂದು ಅಪಾಕಲಿಪ್ಸ್ ಕೇವಲ ಬೈಬಲಿನ ವರ್ಣನೆಯಾಗಿಯೇ ಉಳಿದಿರುವುದಿಲ್ಲ, ಬದಲಾಗಿ ಅದು ನೈಜ ಸಾಧ್ಯತೆಯಾಗಿ ಪರಿಣಮಿಸಿದೆ.”—ಹಾವೀಏರ್ ಪೇರಸ್ ಡೇ ಕ್ವೇಯಾರ್, ವಿಶ್ವಸಂಸ್ಥೆಯ ಮಾಜಿ ಸೆಕ್ರಿಟರಿ-ಜನರಲ್.
ಒಬ್ಬ ವಿಶ್ವವಿಖ್ಯಾತ ವ್ಯಕ್ತಿಯು “ಅಪಾಕಲಿಪ್ಸ್” ಎಂಬ ಶಬ್ದವನ್ನು ಉಪಯೋಗಿಸಿರುವ ವಿಧವು, ಅಧಿಕಾಂಶ ಜನರು ಅದನ್ನು ಯಾವ ರೀತಿಯಲ್ಲಿ ಅರ್ಥಮಾಡಿಕೊಳ್ಳುತ್ತಾರೆ ಮತ್ತು ಚಲನ ಚಿತ್ರಗಳಲ್ಲಿ, ಪುಸ್ತಕದ ಮೇಲ್ಬರಹಗಳಲ್ಲಿ, ಪ್ರತಿಕೆಯ ಲೇಖನಗಳಲ್ಲಿ, ಹಾಗೂ ವಾರ್ತಾಪತ್ರಿಕೆಯ ವರದಿಗಳಲ್ಲಿ ಇದು ಉಪಯೋಗಿಸಲ್ಪಟ್ಟಿರುವುದನ್ನು ನೋಡುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಇದು ವಿಶ್ವವಿನಾಶದ ದರ್ಶನಗಳನ್ನು ಮನಸ್ಸಿಗೆ ತರುತ್ತದೆ. ಆದರೆ “ಅಪಾಕಲಿಪ್ಸ್” ಎಂಬುದು ನಿಜವಾಗಿಯೂ ಏನನ್ನು ಅರ್ಥೈಸುತ್ತದೆ? ಇದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾಗಿ, ಬೈಬಲಿನ ಅಪಾಕಲಿಪ್ಸ್ ಅಥವಾ ಪ್ರಕಟನೆ ಪುಸ್ತಕದಲ್ಲಿ ಒಳಗೂಡಿರುವ ಸಂದೇಶವು ಏನಾಗಿದೆ?
“ಅಪಾಕಲಿಪ್ಸ್” ಎಂಬ ಪದವು ಗ್ರೀಕ್ ಶಬ್ದದಿಂದ ಬಂದದ್ದಾಗಿದ್ದು, ಅದಕ್ಕೆ “ಮುಸುಕು ತೆರೆಯುವುದು” ಅಥವಾ “ತೆರೆದು ತೋರಿಸುವುದು” ಎಂಬರ್ಥವಿದೆ. ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ಏನು ತೆರೆದು ತೋರಿಸಲ್ಪಟ್ಟಿದೆ ಅಥವಾ ಯಾವುದರ ಮುಸುಕು ತೆರೆಯಲ್ಪಟ್ಟಿದೆ? ಇದು ಕೇವಲ ಅಂತಿಮ ತೀರ್ಪಿನ, ಯಾರೂ ಬದುಕಿ ಉಳಿಯದಂತಹ ಸರ್ವನಾಶವನ್ನು ಮುನ್ಸೂಚಿಸುವ ಒಂದು ಸಂದೇಶವಾಗಿದೆಯೊ? ಎನ್ಸ್ಟೀಟೂ ಡ ಫ್ರಾನ್ಸ್ನ ಸದಸ್ಯರಾಗಿರುವ ಸಾನ್ ಡೆಲ್ಯೂಮೋ ಎಂಬ ಇತಿಹಾಸಕಾರರಿಗೆ, ಅಪಾಕಲಿಪ್ಸ್ನ ಕುರಿತು ಅವರ ಅಭಿಪ್ರಾಯವನ್ನು ಕೇಳಿದಾಗ, ಅವರು ಹೇಳಿದ್ದು: “ಇದು ಸಾಂತ್ವನ ಹಾಗೂ ನಿರೀಕ್ಷೆಯನ್ನು ನೀಡುವ ಒಂದು ಪುಸ್ತಕವಾಗಿದೆ. ಆದರೆ ಅದರ ವಿನಾಶಕರ ಘಟನಾವಳಿಗಳಿಗೆ ಹೆಚ್ಚು ಪ್ರಮುಖತೆಯನ್ನು ಕೊಡುವ ಮೂಲಕ ಜನರು ಅದರಲ್ಲಿರುವ ವಿಚಾರಗಳನ್ನು ನಾಟಕೀಯವಾಗಿ ಮಾಡಿಬಿಟ್ಟಿದ್ದಾರೆ.”
ಆರಂಭದ ಚರ್ಚು ಮತ್ತು ಅಪಾಕಲಿಪ್ಸ್
ಆದಿ “ಕ್ರೈಸ್ತರು” ಅಪಾಕಲಿಪ್ಸನ್ನು ಹಾಗೂ ಭೂಮಿಯಲ್ಲಿ ಕ್ರಿಸ್ತನ ಸಾವಿರ ವರ್ಷದಾಳಿಕೆ (ಸಹಸ್ರವರ್ಷ)ಯ ಕುರಿತು ಅದು ಒದಗಿಸುವ ನಿರೀಕ್ಷೆಯನ್ನು ಯಾವ ದೃಷ್ಟಿಕೋನದಿಂದ ನೋಡಿದರು? ಅದೇ ಇತಿಹಾಸಕಾರರು ಹೇಳಿದ್ದು: “ಸಾಮಾನ್ಯವಾಗಿ, ಮೊದಲ ಕೆಲವು ಶತಮಾನಗಳ ಕ್ರೈಸ್ತರು ಸಹಸ್ರವರ್ಷವಾದವನ್ನು ಅಂಗೀಕರಿಸುತ್ತಿದ್ದರು ಎಂದು ನನಗನಿಸುತ್ತದೆ. . . . ಸಹಸ್ರವರ್ಷದಲ್ಲಿ ನಂಬಿಕೆಯನ್ನಿಟ್ಟಿದ್ದ ಆರಂಭದ ಶತಮಾನಗಳ ಕ್ರೈಸ್ತರಲ್ಲಿ, ಏಷ್ಯಾ ಮೈನರ್ನಲ್ಲಿ ಹೈರಾಪಲಿಸ್ನ ಬಿಷಪನಾಗಿದ್ದ ಪೇಪೀಅಸ್, . . . ಪ್ಯಾಲೆಸ್ಟೀನ್ನಲ್ಲಿ ಜನಿಸಿ, ಸಾ.ಶ. 165ರ ಸುಮಾರಿಗೆ ರೋಮ್ನಲ್ಲಿ ಧರ್ಮಬಲಿಯಾದ ಸಂತ ಜಸ್ಟಿನ್, ಲೀಓನ್ಸ್ನ ಬಿಷಪನಾಗಿದ್ದು ಸಾ.ಶ. 202ರಲ್ಲಿ ಮೃತಪಟ್ಟ ಸಂತ ಐರೀನೀಯಸ್, ಸಾ.ಶ. 222ರಲ್ಲಿ ಮರಣಪಟ್ಟ ಟೆರ್ಟಲ್ಯನ್, ಹಾಗೂ . . . ಪ್ರಸಿದ್ಧ ಬರಹಗಾರನಾದ ಲ್ಯಾಕ್ಟ್ಯಾನ್ಶೀಅಸ್ ಎಂಬುವವರು ತುಂಬ ಪ್ರಖ್ಯಾತರಾಗಿದ್ದರು.”
ಸಾ.ಶ. 161 ಅಥವಾ 165ರಲ್ಲಿ ಪೆರ್ಗಮಮ್ನಲ್ಲಿ ಧರ್ಮಬಲಿಯಾಗಿ ಕೊಲ್ಲಲ್ಪಟ್ಟನೆಂದು ವರದಿಸಲಾಗಿರುವ ಪೇಪೀಅಸ್ನ ಕುರಿತು, ದ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಹೈರಾಪಲಿಸ್ನ ಬಿಷಪನೂ, ಸಂತ ಯೋಹಾನನ ಶಿಷ್ಯನೂ ಆಗಿದ್ದಂತಹ ಪೇಪೀಅಸ್, ಸಹಸ್ರವರ್ಷವಾದವನ್ನು ಪ್ರಚಾರಮಾಡುವವನಾಗಿ ಕಂಡುಬಂದನು. ತಾನು ಅಪೊಸ್ತಲರ ಸಮಕಾಲೀನರಿಂದ ಈ ಸಿದ್ಧಾಂತವನ್ನು ನೇರವಾಗಿ ಪಡೆದುಕೊಂಡೆನೆಂದು ಅವನು ಪ್ರತಿಪಾದಿಸಿದನು; ಮತ್ತು ಶಿಷ್ಯ ಯೋಹಾನನನ್ನು ಭೇಟಿಮಾಡಿದ್ದ ಹಾಗೂ ಅವನು ಹೇಳಿದ್ದನ್ನು ಕೇಳಿಸಿಕೊಂಡಿದ್ದ ಒಬ್ಬ ‘ಪ್ರೆಸ್ಬಿಟೇರಿ’ಯನು, ಕರ್ತನ ಸಿದ್ಧಾಂತದ ಒಂದು ಭಾಗದೋಪಾದಿ ಸಹಸ್ರವಾದದಲ್ಲಿ ನಂಬಿಕೆಯಿಡಲು ಶಿಷ್ಯ ಯೋಹಾನನಿಂದ ಕಲಿತುಕೊಂಡನು ಎಂದು ಐರೀನೀಯಸ್ ಹೇಳುತ್ತಾನೆ. ಯೂಸೀಬಿಯಸ್ನಿಗನುಸಾರ . . . ಮೃತರ ಪುನರುತ್ಥಾನದ ಬಳಿಕ, ಕ್ರಿಸ್ತನ ದೃಶ್ಯ, ವೈಭವದಿಂದ ಕೂಡಿದ ಭೂರಾಜ್ಯದ ಒಂದು ಸಾವಿರ ವರ್ಷಗಳು ಆರಂಭವಾಗುತ್ತವೆ ಎಂದು ಪೇಪೀಅಸ್ನು ತನ್ನ ಪುಸ್ತಕದಲ್ಲಿ ತಿಳಿಸಿದನು.”
ಆರಂಭದಲ್ಲಿದ್ದ ವಿಶ್ವಾಸಿಗಳ ಮೇಲೆ ಅಪಾಕಲಿಪ್ಸ್ ಅಥವಾ ಪ್ರಕಟನೆ ಪುಸ್ತಕವು ಯಾವ ಪರಿಣಾಮವನ್ನು ಬೀರಿತ್ತು ಎಂಬುದರ ಕುರಿತು ಇದು ನಮಗೆ ಏನು ಹೇಳುತ್ತದೆ? ಅದು ಭಯವನ್ನು ಅಥವಾ ನಿರೀಕ್ಷೆಯನ್ನು ಉಂಟುಮಾಡಿತೊ? ಇತಿಹಾಸಕಾರರು ಆದಿ ಕ್ರೈಸ್ತರನ್ನು, ಸುಯುಗವಾದಿಗಳು ಎಂದು ಕರೆಯುತ್ತಾರೆ ಎಂಬುದು ಆಸಕ್ತಿಕರವಾದ ವಿಷಯವಾಗಿದೆ. ಸುಯುಗವಾದಿಗಳು ಎಂಬುದು ಹೀಲ್ಯ ಎಟೀ (ಸಾವಿರ ವರ್ಷಗಳು) ಎಂಬ ಗ್ರೀಕ್ ಶಬ್ದಗಳಿಂದ ಬಂದದ್ದಾಗಿದೆ. ಹೌದು, ಅವರಲ್ಲಿ ಅನೇಕರು, ಭೂಮಿಯ ಮೇಲೆ ಪ್ರಮೋದವನೀಯ ಪರಿಸ್ಥಿತಿಗಳನ್ನು ತರಲಿರುವ ಕ್ರಿಸ್ತನ ಸಾವಿರ ವರ್ಷದಾಳಿಕೆಯಲ್ಲಿ ನಂಬಿಕೆಯಿಡುವವರಾಗಿ ಪ್ರಸಿದ್ಧರಾಗಿದ್ದರು. ಬೈಬಲಿನಲ್ಲಿ ಕೇವಲ ಅಪಾಕಲಿಪ್ಸ್ನಲ್ಲಿ ಅಥವಾ ಪ್ರಕಟನೆ ಪುಸ್ತಕದಲ್ಲಿ ಮಾತ್ರ ಸಹಸ್ರವರ್ಷದ ನಿರೀಕ್ಷೆಯ ಕುರಿತು ನಿರ್ದಿಷ್ಟವಾಗಿ ತಿಳಿಸಲ್ಪಟ್ಟಿದೆ. (20:1-7) ಆದುದರಿಂದ, ವಿಶ್ವಾಸಿಗಳಿಗೆ ಅಪಾಕಲಿಪ್ಸ್ ಪುಸ್ತಕವು ಭಯವನ್ನು ಉಂಟುಮಾಡುವುದಕ್ಕೆ ಬದಲಾಗಿ, ಒಂದು ಅದ್ಭುತಕರವಾದ ನಿರೀಕ್ಷೆಯನ್ನು ಕೊಟ್ಟಿತು. ಆರಂಭದ ಚರ್ಚು ಹಾಗೂ ಲೋಕ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ, ಚರ್ಚ್ ಇತಿಹಾಸದ ಆಕ್ಸ್ಫರ್ಡ್ ಪ್ರೊಫೆಸರರಾದ ಸೀಸಲ್ ಕಾಡೂ ಬರೆಯುವುದು: “ಸುಯುಗವಾದಿಗಳ ದೃಷ್ಟಿಕೋನಗಳು ಕಾಲಕ್ರಮೇಣ ತಿರಸ್ಕರಿಸಲ್ಪಟ್ಟರೂ, ಗಮನಾರ್ಹ ಕಾಲಾವಧಿಯ ತನಕ ಅವು ಚರ್ಚಿನಲ್ಲಿ ವ್ಯಾಪಕವಾಗಿ ನಂಬಲ್ಪಟ್ಟವು ಮತ್ತು ಚರ್ಚಿನ ತುಂಬ ಗೌರವಾನ್ವಿತ ವ್ಯಕ್ತಿಗಳಲ್ಲಿ ಕೆಲವರಿಂದ ಬೋಧಿಸಲ್ಪಟ್ಟವು.”
ಅಪಾಕಲಿಪ್ಸ್ ನಿರೀಕ್ಷೆಯು ಏಕೆ ಅಲ್ಲಗಳೆಯಲ್ಪಟ್ಟಿತು?
ಆದಿ ಕ್ರೈಸ್ತರಲ್ಲಿ ಎಲ್ಲರೂ ಅಲ್ಲದಿದ್ದರೂ ಅಧಿಕಾಂಶ ಜನರು, ಭೂಪ್ರಮೋದವನದಲ್ಲಿನ ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ನಿರೀಕ್ಷೆಯನ್ನಿಟ್ಟಿದ್ದರು ಎಂಬುದು ನಿಸ್ಸಂದೇಹವಾದ ಐತಿಹಾಸಿಕ ಸಂಗತಿಯಾಗಿರುವುದರಿಂದ, “ಸುಯುಗವಾದಿಗಳ” ಇಂತಹ “ದೃಷ್ಟಿಕೋನಗಳು ಕಾಲಕ್ರಮೇಣ ಹೇಗೆ ಅಲ್ಲಗಳೆಯಲ್ಪಟ್ಟವು”? ವಿದ್ವಾಂಸ ರಾಬರ್ಟ್ ಮೌನ್ಸ್ ಸೂಚಿಸಿದಂತೆ, ಸಮರ್ಥನೀಯವಾಗಿ ಕಂಡುಬಂದ ಯಾವುದೋ ವಿಮರ್ಶೆಯು ಮುಂತರಲ್ಪಟ್ಟಿತು. “ಅಸಂತೋಷಕರವಾಗಿಯೇ, ಸುಯುಗವಾದಿಗಳಲ್ಲಿ ಅನೇಕರ ಕಲ್ಪನೆಗಳು ಹತೋಟಿ ಮೀರಿದ್ದವು ಮತ್ತು ಸಾವಿರ ವರ್ಷದ ಕಾಲಾವಧಿಯು ಎಲ್ಲ ರೀತಿಯ ಪ್ರಾಪಂಚಿಕ ಹಾಗೂ ಸುಖಾನುಭೋಗದಿಂದ ಕೂಡಿದ ಕಾಲಾವಧಿಯಾಗಿದೆ ಎಂದು ಅವರು ಅರ್ಥವಿವರಣೆ ಮಾಡಿದರು.” ಆದರೆ, ಸಹಸ್ರವರ್ಷದ ನಿರೀಕ್ಷೆಯನ್ನು ಅಲ್ಲಗಳೆಯದೆ ಈ ಉಗ್ರಗಾಮಿಗಳ ದೃಷ್ಟಿಕೋನಗಳನ್ನು ಸರಿಪಡಿಸಸಾಧ್ಯವಿತ್ತು.
ಸಹಸ್ರವರ್ಷವಾದವನ್ನು ದಮನಮಾಡಲಿಕ್ಕಾಗಿ ವಿರೋಧಿಗಳಿಂದ ಉಪಯೋಗಿಸಲ್ಪಟ್ಟ ಸಾಧನೋಪಾಯಗಳು ಖಂಡಿತವಾಗಿಯೂ ಆಶ್ಚರ್ಯಕರವಾಗಿದ್ದವು. ರೋಮನ್ ಚರ್ಚಿನ ಪಾದ್ರಿ ಗೇಅಸ್ (ಎರಡನೆಯ ಶತಮಾನದ ಕೊನೆ, ಮೂರನೆಯ ಶತಮಾನದ ಆರಂಭ)ನ ಕುರಿತು ಡೀಕ್ಸಾನ್ಯಾರ್ ಡ ಟೇಆಲಾಸೀ ಕಾಟಾಲೀಕ್ ಹೇಳುವುದೇನೆಂದರೆ, “ಸಹಸ್ರವರ್ಷವಾದವನ್ನು ನಿಗ್ರಹಿಸಲಿಕ್ಕಾಗಿ, ಗೇಅಸನು ಅಪಾಕಲಿಪ್ಸ್ [ಪ್ರಕಟನೆ] ಪುಸ್ತಕದ ಹಾಗೂ ಸಂತ ಯೋಹಾನನ ಸುವಾರ್ತೆಯ ವಿಶ್ವಾಸಾರ್ಹತೆಯನ್ನು ನೇರವಾಗಿ ಅಲ್ಲಗಳೆದನು.” ಈ ಡೀಕ್ಸಾನ್ಯಾರ್ ಇನ್ನೂ ಹೇಳಿದ್ದೇನೆಂದರೆ, ಆ್ಯಲೆಕ್ಸಾಂಡ್ರಿಯದ ಮೂರನೆಯ ಶತಮಾನದ ಬಿಷಪನಾಗಿದ್ದ ಡಯನಿಶೀಯಸನು ಸಹಸ್ರವರ್ಷವಾದದ ವಿರುದ್ಧ ಒಂದು ಪ್ರಬಂಧವನ್ನು ಬರೆದನು. ಈ ಪ್ರಬಂಧವು, “ಯಾರು ಸಹಸ್ರವರ್ಷವಾದದ ಅಭಿಪ್ರಾಯಕ್ಕೆ ಅಂಟಿಕೊಂಡಿದ್ದರೋ ಅವರು, ತಮ್ಮ ನಂಬಿಕೆಯನ್ನು ಸಂತ ಯೋಹಾನನ ಅಪಾಕಲಿಪ್ಸ್ ಪುಸ್ತಕದ ಮೇಲಾಧಾರಿಸದೆ ಇರಲಿಕ್ಕಾಗಿ ಅಪಾಕಲಿಪ್ಸ್ ಪುಸ್ತಕದ ವಿಶ್ವಾಸಾರ್ಹತೆಯನ್ನು ಅಲ್ಲಗಳೆಯಲು ಹಿಂಜರಿಯಲಿಲ್ಲ.” ಭೂಮಿಯಲ್ಲಿ ಸಹಸ್ರವರ್ಷದ ಆಶೀರ್ವಾದಗಳ ಕುರಿತಾದ ನಿರೀಕ್ಷೆಗೆ ತೋರಿಸಲ್ಪಟ್ಟ ಇಂತಹ ಕಟು ವಿರೋಧವು, ಆ ಸಮಯದಲ್ಲಿ ದೇವತಾಶಾಸ್ತ್ರಜ್ಞರ ನಡುವೆ ಅಸ್ತಿತ್ವದಲ್ಲಿದ್ದ ಕುಯುಕ್ತಿಯ ಪ್ರಭಾವವನ್ನು ವ್ಯಕ್ತಪಡಿಸುತ್ತದೆ.
ಸಹಸ್ರವರ್ಷದ ಬೆನ್ನಟ್ಟುವಿಕೆ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ ಪ್ರೊಫೆಸರ್ ನಾರ್ಮನ್ ಕಾನ್ ಬರೆಯುವುದು: “ಮೂರನೆಯ ಶತಮಾನದಲ್ಲಿ, ಪ್ರಪ್ರಥಮ ಬಾರಿ ಸಹಸ್ರವರ್ಷವಾದವನ್ನು ಶಂಕಿಸುವ ಪ್ರಯತ್ನವು ನಡೆಯಿತು. ಆ ಸಮಯದಲ್ಲಿ, ಪುರಾತನ ಚರ್ಚಿನ ಎಲ್ಲ ದೇವತಾಶಾಸ್ತ್ರಜ್ಞರಲ್ಲೇ ತುಂಬ ಪ್ರಭಾವಶಾಲಿಯಾಗಿದ್ದ ಆರಿಜನ್ ಎಂಬಾತನು, ರಾಜ್ಯವು ಅಕ್ಷರಾರ್ಥವಾಗಿ ಸಂಭವಿಸುವ ಒಂದು ಘಟನೆಯಲ್ಲ, ಬದಲಾಗಿ ವಿಶ್ವಾಸಿಗಳ ಹೃದಯದಲ್ಲಿ ಮಾತ್ರ ಸಂಭವಿಸುವ ಒಂದು ಘಟನೆಯಾಗಿದೆ ಎಂದು ಹೇಳಲಾರಂಭಿಸಿದನು.” ಆರಿಜನ್ ಬೈಬಲಿಗೆ ಬದಲಾಗಿ ಗ್ರೀಕ್ ತತ್ವಜ್ಞಾನವನ್ನು ಆಧಾರವಾಗಿ ಉಪಯೋಗಿಸುತ್ತಾ, ಮೆಸ್ಸೀಯ ರಾಜ್ಯದ ಕೆಳಗೆ ದೊರಕಲಿರುವ ಐಹಿಕ ಆಶೀರ್ವಾದಗಳ ಕುರಿತಾದ ಅದ್ಭುತಕರವಾದ ನಿರೀಕ್ಷೆಯನ್ನು, “ವಿಶ್ವಾಸಿಗಳ ಹೃದಯದಲ್ಲಿ ಸಂಭವಿಸುವ” ರಹಸ್ಯವಾದ “ಒಂದು ಘಟನೆ” ಆಗಿದೆ ಎಂದು ಹೇಳುವ ಮೂಲಕ ರಾಜ್ಯದ ಮಹತ್ವವನ್ನು ಕಡಿಮೆಮಾಡಿದನು. ಕ್ಯಾತೊಲಿಕ್ ಲೇಖಕನಾಗಿದ್ದ ಲೇಓನ್ ಗ್ರೀ ಬರೆದುದು: “ಗ್ರೀಕ್ ತತ್ವಜ್ಞಾನದ ಪ್ರಭಾವವೇ ಮೇಲುಗೈ ಪಡೆದುದರಿಂದ . . . ಕಾಲಕ್ರಮೇಣ ಇದು ಸುಯುಗವಾದಿಗಳ ಕಲ್ಪನೆಗಳನ್ನು ಅಳಿಸಿಹಾಕಿತು.”
“ಚರ್ಚು ತನ್ನ ನಿರೀಕ್ಷೆಯ ಸಂದೇಶವನ್ನು ಕಳೆದುಕೊಂಡಿದೆ”
ತನ್ನ ಕಾಲದಲ್ಲಿ ಕ್ರೈಸ್ತತ್ವದ ಸೋಗನ್ನು ಹಾಕಿದ್ದ ಧರ್ಮದೊಂದಿಗೆ ಗ್ರೀಕ್ ತತ್ವಜ್ಞಾನವನ್ನು ಒಂದುಗೂಡಿಸಲು ಬಹಳಷ್ಟು ಶ್ರಮಿಸಿದವನು, ಚರ್ಚ್ ಗ್ರಂಥಕಾರನಾಗಿದ್ದ ಆಗಸ್ಟಿನನೇ ಎಂಬುದರಲ್ಲಿ ಸಂಶಯವಿಲ್ಲ. ಆರಂಭದಲ್ಲಿ ಸಹಸ್ರವರ್ಷವಾದದ ಒಬ್ಬ ಉತ್ಸುಕ ಪ್ರಚಾರಕನಾಗಿದ್ದ ಇವನು, ಕಾಲಕ್ರಮೇಣ ಭೂಮಿಯ ಮೇಲೆ ಭವಿಷ್ಯತ್ತಿನ ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಕುರಿತಾದ ಯಾವುದೇ ವಿಚಾರವನ್ನು ಅಲ್ಲಗಳೆದನು. ಪ್ರಕಟನೆ ಪುಸ್ತಕದ 20ನೆಯ ಅಧ್ಯಾಯಕ್ಕೆ ಗೂಢಾರ್ಥ ಬರುವಂತೆ ಅವನು ಅದರ ಅರ್ಥವನ್ನು ಬದಲಾಯಿಸಿಬಿಟ್ಟನು.
ದ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಹೇಳುವುದು: “ಕೊನೆಗೂ ಆಗಸ್ಟಿನನು ಸಹಸ್ರವರ್ಷವು ಇಲ್ಲ ಎಂಬ ನಿಶ್ಚಿತಾಭಿಪ್ರಾಯಕ್ಕೆ ದೃಢವಾಗಿ ಅಂಟಿಕೊಂಡನು. . . . ಈ ಅಧ್ಯಾಯದಲ್ಲಿ ತಿಳಿಸಲ್ಪಟ್ಟಿರುವ ಪ್ರಥಮ ಪುನರುತ್ಥಾನವು, ದೀಕ್ಷಾಸ್ನಾನದ ಸಮಯದಲ್ಲಿ ಸಂಭವಿಸುವ ಆತ್ಮಿಕ ಪುನರ್ಜನ್ಮಕ್ಕೆ ಸೂಚಿತವಾಗಿದೆ ಎಂದು ಅವನು ನಮಗೆ ಹೇಳುತ್ತಾನೆ; ಇತಿಹಾಸದ ಆರು ಸಾವಿರ ವರ್ಷಗಳ ಬಳಿಕ ಬರುವ ಒಂದು ಸಾವಿರ ವರ್ಷಗಳ ಸಬ್ಬತ್ತು, ನಿತ್ಯ ಜೀವದ ಮೊತ್ತವಾಗಿದೆ.” ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಆಗಸ್ಟಿನನ ಗೂಢಾರ್ಥವುಳ್ಳ ಸಹಸ್ರವರ್ಷವಾದವು ಚರ್ಚಿನ ಅಧಿಕೃತ ಸಿದ್ಧಾಂತವಾಗಿ ಪರಿಣಮಿಸಿತು . . . ಲೂತರನ್, ಕ್ಯಾಲ್ವಿನಿಸ್ಟ್, ಮತ್ತು ಆ್ಯಂಗ್ಲಿಕನ್ ಸಂಪ್ರದಾಯಗಳ ಪ್ರಾಟೆಸ್ಟಂಟ್ ಸುಧಾರಕರು . . . ಆಗಸ್ಟಿನನ ದೃಷ್ಟಿಕೋನಗಳಿಗೆ ದೃಢವಾಗಿ ಅಂಟಿಕೊಂಡರು.” ಹೀಗೆ, ಕ್ರೈಸ್ತಪ್ರಪಂಚದ ಚರ್ಚುಗಳ ಸದಸ್ಯರು, ಸಹಸ್ರವರ್ಷದ ನಿರೀಕ್ಷೆಯಿಂದ ವಂಚಿತರಾದರು.
ಅಷ್ಟುಮಾತ್ರವಲ್ಲ, ಸ್ವಿಸ್ ದೇವತಾಶಾಸ್ತ್ರಜ್ಞರಾದ ಫ್ರೇಡೇರೀಕ್ ಡ ರೂಸ್ಮಾನ್ರಿಗನುಸಾರ, “ಆರಂಭದಲ್ಲಿ ಸಾವಿರ ವರ್ಷದಾಳಿಕೆಯಲ್ಲಿ ಇಟ್ಟಿದ್ದಂತಹ ನಂಬಿಕೆಯನ್ನು ಪರಿತ್ಯಜಿಸುವ ಮೂಲಕ [ಆಗಸ್ಟಿನನು] ಚರ್ಚಿಗೆ ಅಪಾರ ಹಾನಿಯನ್ನು ಉಂಟುಮಾಡಿದನು. ತನ್ನ ಹೆಸರಿನ ಪ್ರಬಲವಾದ ಅಧಿಕಾರವನ್ನು ಉಪಯೋಗಿಸಿ, [ಚರ್ಚಿನ] ಐಹಿಕ ಆದರ್ಶದಿಂದ ಅದನ್ನು ವಂಚಿಸುವ ಒಂದು ತಪ್ಪಿಗೆ ಅನುಮೋದನೆಯನ್ನು ನೀಡಿದನು.” ಜರ್ಮನ್ ದೇವತಾಶಾಸ್ತ್ರಜ್ಞನಾದ ಆ್ಯಡೊಲ್ಫ್ ಹಾರ್ನಾಕ್ ಒಪ್ಪಿಕೊಂಡಿದ್ದೇನೆಂದರೆ, ಸಹಸ್ರವರ್ಷದಲ್ಲಿನ ನಂಬಿಕೆಯ ಅಲ್ಲಗಳೆಯುವಿಕೆಯ ಕಾರಣ, ಜನಸಾಮಾನ್ಯರಿಗೆ “ಗೊತ್ತಿದ್ದ ಧರ್ಮ”ವು ಇಲ್ಲವಾಯಿತು. ಮತ್ತು ಇದು ಅವರ “ಹಳೆಯ ಧರ್ಮ ಹಾಗೂ ಹಳೆಯ ನಿರೀಕ್ಷೆಗಳಿಗೆ” ಬದಲಾಗಿ, ಅವರಿಗೆ “ಅರ್ಥವಾಗದಿದ್ದಂತಹ ಒಂದು ಧರ್ಮ”ವನ್ನು ಜಾರಿಗೆ ತಂದಿತು. ಅನೇಕ ದೇಶಗಳಲ್ಲಿ ಇಂದು ಚರ್ಚುಗಳು ಖಾಲಿಯಾಗುತ್ತಿರುವುದು, ತಾವು ಅರ್ಥಮಾಡಿಕೊಳ್ಳಲು ಸಾಧ್ಯವಿರುವಂತಹ ನಂಬಿಕೆ ಹಾಗೂ ನಿರೀಕ್ಷೆಯ ಅಗತ್ಯ ಜನರಿಗಿದೆ ಎಂಬುದಕ್ಕೆ ಸ್ಪಷ್ಟವಾದ ಒಂದು ಪುರಾವೆಯನ್ನು ನೀಡುತ್ತದೆ.
ಪ್ರಕಟನೆ ಪುಸ್ತಕದ ಮುಖ್ಯಾಂಶಗಳು (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ, ಬೈಬಲ್ ವಿದ್ವಾಂಸ ಜಾರ್ಜ್ ಬೀಸ್ಲೀ ಮರೀ ಬರೆದುದು: “ಒಂದು ಕಡೆಯಲ್ಲಿ ಆಗಸ್ಟಿನನ ಅತ್ಯಧಿಕ ಪ್ರಭಾವದ ಕಾರಣದಿಂದ ಮತ್ತು ಇನ್ನೊಂದು ಕಡೆಯಲ್ಲಿ ಬೇರೆ ಬೇರೆ ಪಂಥಗಳು ಸಹಸ್ರವಾದವನ್ನು ಅಂಗೀಕರಿಸಿದ್ದರಿಂದ, ಕ್ಯಾತೊಲಿಕರು ಮತ್ತು ಪ್ರಾಟೆಸ್ಟಂಟರು ಇಬ್ಬರೂ ಸೇರಿಕೊಂಡು ಸಹಸ್ರವರ್ಷವಾದವನ್ನು ಅಲ್ಲಗಳೆದಿದ್ದಾರೆ. ಈ ಲೋಕದಲ್ಲಿ ಮನುಷ್ಯನಿಗೆ ಯಾವ ಬದಲಿ ನಿರೀಕ್ಷೆಯಿದೆ ಎಂದು ಅವರನ್ನು ಕೇಳಿದಾಗ, ಅವರ ಅಧಿಕೃತ ಉತ್ತರವು ಹೀಗಿದೆ: ಯಾವ ನಿರೀಕ್ಷೆಯೂ ಇಲ್ಲ. ಇತಿಹಾಸವನ್ನು ಮರೆತುಬಿಡುವಂತೆ ಮಾಡುವಂತಹ ಶಾಶ್ವತವಾದ ಸ್ವರ್ಗ ಹಾಗೂ ನರಕಕ್ಕೆ ಸ್ಥಳಾವಕಾಶವನ್ನು ಮಾಡಿಕೊಡಲಿಕ್ಕಾಗಿ, ಕ್ರಿಸ್ತನ ಆಗಮನದ ಸಮಯದಲ್ಲಿ ಈ ಲೋಕವು ನಾಶಮಾಡಲ್ಪಡುವುದು. . . . ಖಂಡಿತವಾಗಿಯೂ ಚರ್ಚು ತನ್ನ ನಿರೀಕ್ಷೆಯ ಸಂದೇಶವನ್ನು ಕಳೆದುಕೊಂಡಿದೆ.”
ಅದ್ಭುತಕರವಾದ ಅಪಾಕಲಿಪ್ಸ್ ನಿರೀಕ್ಷೆಯು ಇನ್ನೂ ಜೀವಂತವಾಗಿದೆ!
ಯೆಹೋವನ ಸಾಕ್ಷಿಗಳಾದರೋ, ಸಹಸ್ರವರ್ಷಕ್ಕೆ ಸಂಬಂಧಪಟ್ಟ ಅದ್ಭುತಕರವಾದ ವಾಗ್ದಾನಗಳು ಖಂಡಿತವಾಗಿಯೂ ನೆರವೇರಿಸಲ್ಪಡುವವು ಎಂಬ ಖಾತ್ರಿಯಿಂದಿದ್ದಾರೆ. “ಇಸವಿ 2000: ಅಪಾಕಲಿಪ್ಸ್ನ ಭಯ” (ಇಂಗ್ಲಿಷ್) ಎಂಬ ವಿಷಯವಿದ್ದ ಒಂದು ಫ್ರೆಂಚ್ ಟೆಲಿವಿಷನ್ ಕಾರ್ಯಕ್ರಮದಲ್ಲಿ, ಫ್ರೆಂಚ್ ಇತಿಹಾಸಕಾರನಾದ ಸಾನ್ ಡೆಲೂಮ್ಯೂ ಹೇಳಿದ್ದು: “ಯೆಹೋವನ ಸಾಕ್ಷಿಗಳು ಸಹಸ್ರವರ್ಷವಾದಿಗಳ ಹೆಜ್ಜೆಜಾಡನ್ನೇ ತಪ್ಪದೆ ಹಿಂಬಾಲಿಸುತ್ತಿದ್ದಾರೆ, ಏಕೆಂದರೆ ಅತಿ ಬೇಗನೆ . . . ನಾವು ಸಂತೋಷಭರಿತವಾದ 1,000 ವರ್ಷಗಳ ಕಾಲಾವಧಿಯನ್ನು—ಅವರಿಗನುಸಾರ, ಪ್ರಳಯಗಳ ಮೂಲಕ—ಪ್ರವೇಶಿಸುವೆವು ಎಂದು ಅವರು ಹೇಳುತ್ತಾರೆ.”
ಅಪೊಸ್ತಲ ಯೋಹಾನನು ಒಂದು ದರ್ಶನದಲ್ಲಿ ಇದನ್ನೇ ನೋಡಿದನು ಮತ್ತು ಅಪಾಕಲಿಪ್ಸ್ ಅಥವಾ ಪ್ರಕಟನೆ ಪುಸ್ತಕದಲ್ಲಿ ಇದನ್ನು ವರ್ಣಿಸಿದನು. ಅವನು ಬರೆದುದು: “ತರುವಾಯ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು . . . ಇದಲ್ಲದೆ ಸಿಂಹಾಸನದೊಳಗಿಂದ ಬಂದ ಮಹಾ ಶಬ್ದವು ನನಗೆ ಕೇಳಿಸಿತು. ಅದು—ಇಗೋ, ದೇವರ ನಿವಾಸವು ಮನುಷ್ಯರಲ್ಲಿ ಅದೆ; ಆತನು ಅವರೊಡನೆ ವಾಸಮಾಡುವನು, ಅವರು ಆತನಿಗೆ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:1, 3, 4.
ಸಾಧ್ಯವಿರುವಷ್ಟು ಹೆಚ್ಚು ಜನರು ಈ ನಿರೀಕ್ಷೆಯನ್ನು ತಮ್ಮದಾಗಿ ಮಾಡಿಕೊಳ್ಳುವಂತೆ ಸಹಾಯ ಮಾಡಲಿಕ್ಕಾಗಿ, ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾದ ಬೈಬಲ್ ಶಿಕ್ಷಣದ ಕೆಲಸದಲ್ಲಿ ಭಾಗವಹಿಸುತ್ತಿದ್ದಾರೆ. ಇದರ ಕುರಿತು ಹೆಚ್ಚನ್ನು ಕಲಿತುಕೊಳ್ಳುವಂತೆ ನಿಮಗೆ ನೆರವನ್ನು ನೀಡಲು ಅವರು ಸಂತೋಷಿಸುತ್ತಾರೆ.
[ಪುಟ 6 ರಲ್ಲಿರುವ ಚಿತ್ರ]
ಅಪೊಸ್ತಲರ ಸಮಕಾಲೀನರಿಂದ ತಾನು ಸಹಸ್ರವರ್ಷದ ಸಿದ್ಧಾಂತವನ್ನು ನೇರವಾಗಿ ಪಡೆದುಕೊಂಡೆನೆಂದು ಪೇಪೀಅಸ್ ಪ್ರತಿಪಾದಿಸಿದನು
[ಪುಟ 7 ರಲ್ಲಿರುವ ಚಿತ್ರ]
ಟೆರ್ಟಲ್ಯನ್ ಕ್ರಿಸ್ತನ ಸಹಸ್ರ ವರ್ಷದಾಳಿಕೆಯಲ್ಲಿ ನಂಬಿಕೆಯನ್ನಿಟ್ಟಿದ್ದನು
[ಕೃಪೆ]
© Cliché Bibliothèque Nationale de France, Paris
[ಪುಟ 7 ರಲ್ಲಿರುವ ಚಿತ್ರ]
“ಆರಂಭದಲ್ಲಿ ಸಾವಿರ ವರ್ಷದಾಳಿಕೆಯಲ್ಲಿ ಇಟ್ಟಿದ್ದಂತಹ ನಂಬಿಕೆಯನ್ನು ಪರಿತ್ಯಜಿಸುವ ಮೂಲಕ [ಆಗಸ್ಟಿನನು] ಚರ್ಚಿಗೆ ಅಪಾರ ಹಾನಿಯನ್ನು ಉಂಟುಮಾಡಿದನು”
[ಪುಟ 8 ರಲ್ಲಿರುವ ಚಿತ್ರ]
ಅಪಾಕಲಿಪ್ಸ್ ಪುಸ್ತಕದಲ್ಲಿ ವಾಗ್ದಾನಿಸಲ್ಪಟ್ಟಿರುವ ಭೂಪ್ರಮೋದವನವು, ಕಾತುರದಿಂದ ನಿರೀಕ್ಷಿಸಸಾಧ್ಯವಿರುವ ಒಂದು ಸಂಗತಿಯಾಗಿದೆ