ದೇವರಿಗೆ ಮೆಚ್ಚುಗೆಯಾಗುವಂತಹ ಸಂಗೀತ
“ಎಲ್ಲ ಲಲಿತಕಲೆಗಳಲ್ಲಿ ಅತಿ ಪ್ರಾಚೀನ ಹಾಗೂ ಅತ್ಯಂತ ಸ್ವಾಭಾವಿಕ ಕಲೆ” ಸಂಗೀತವಾಗಿದೆ ಎಂದು ಹೇಳಲಾಗಿದೆ. ಭಾಷೆಯಂತೆಯೇ, ಇದು ಸಹ ಮನುಷ್ಯರನ್ನು ಪ್ರಾಣಿಗಳಿಂದ ಭಿನ್ನವಾಗಿರಿಸುವ ಒಂದು ಅದ್ಭುತ ವರವಾಗಿದೆ. ಸಂಗೀತವು ಭಾವಗಳನ್ನು ಬಡಿದೆಬ್ಬಿಸುತ್ತದೆ. ಅದು ಕಿವಿಗಳಿಗೆ ಇಂಪಾಗಿರಬಲ್ಲದು, ಮನಸ್ಸಿನಲ್ಲೇ ಬಹುಕಾಲ ಸುಳಿದಾಡುತ್ತಿರಬಹುದು. ಎಲ್ಲದಕ್ಕಿಂತಲೂ ಹೆಚ್ಚಾಗಿ, ಸಂಗೀತವು ದೇವರನ್ನು ಸಂತೋಷಗೊಳಿಸಬಲ್ಲದು.
ಬೈಬಲ್ ತೋರಿಸುವಂತೆ, ಇಸ್ರಾಯೇಲ್ಯರು ಒಂದು ಸಂಗೀತಪ್ರಿಯ ಜನಾಂಗವಾಗಿದ್ದರು. ಸಂಗೀತವು, “ಪ್ರಾಚೀನ ಬೈಬಲ್ ಸಮಯಗಳಲ್ಲಿ ಒಂದು ಪ್ರಮುಖ ಕಲೆಯಾಗಿತ್ತು” ಎಂದು ಅಂಗರ್ಸ್ ಬೈಬಲ್ ಡಿಕ್ಷನೆರಿ ಹೇಳುತ್ತದೆ. ಸಂಗೀತವು ಅನುದಿನದ ಜೀವಿತದ ಭಾಗವಾಗಿದ್ದು, ಅವರ ಆರಾಧನೆಯಲ್ಲಿ ಗಾಯನ ಹಾಗೂ ವಾದ್ಯ ಸಂಗೀತವು ಉಪಯೋಗಿಸಲ್ಪಡುತ್ತಿತ್ತು. ಆದರೆ ಮನುಷ್ಯರ ಸ್ವರಕ್ಕೇ ಹೆಚ್ಚು ಪ್ರಮುಖತೆಯನ್ನು ಕೊಡಲಾಗುತ್ತಿತ್ತು.
ರಾಜ ದಾವೀದನು, ತನ್ನ ಮಗನಾದ ಸೊಲೊಮೋನನು ಕಟ್ಟಿಸಿದ ದೇವಾಲಯದ ಉದ್ಘಾಟನೆಗೆ ಮುಂಚೆಯೇ, ದೇವಗುಡಾರದಲ್ಲಿ ಲೇವಿಯರ ನಡುವೆ “ವಾದ್ಯಸೇವೆ”ಗಾಗಿ ಪ್ರತಿನಿಧಿಗಳನ್ನು ನೇಮಿಸಿದನು. (1 ಪೂರ್ವಕಾಲವೃತ್ತಾಂತ 6:31, 32) ಯೆಹೋವನ ಸಾನ್ನಿಧ್ಯವನ್ನು ಪ್ರತಿನಿಧಿಸುವ, ಒಡಂಬಡಿಕೆಯ ಮಂಜೂಷವು ಯೆರೂಸಲೇಮಿಗೆ ಬಂದು ತಲಪಿದಾಗ, ‘ಯೆಹೋವನನ್ನು ಸ್ತುತಿಸಲು ಮತ್ತು ಹಾಡಿಹರಸಲು’ ಕೆಲವು ಲೇವಿಯರನ್ನು ದಾವೀದನು ಏರ್ಪಾಡು ಮಾಡಿದನು. ಅವರು ತಮ್ಮ ಸ್ತುತಿಗಾನದೊಂದಿಗೆ, ‘ಸ್ವರಮಂಡಲ, ಕಿನ್ನರಿ, ಮೊದಲಾದ ವಾದ್ಯಗಳನ್ನು ಬಾರಿಸಿದರು, . . . ತಾಳಹೊಡೆದರು . . . ತುತೂರಿಗಳನ್ನು ಊದಿದರು.’ “ಆತನ ಶಾಶ್ವತವಾದ ಕೃಪೆಗೋಸ್ಕರ” ಈ ಪುರುಷರು ‘ಯೆಹೋವನನ್ನು ಸ್ತುತಿಸುವದಕ್ಕೆ ಹೆಸರು ಹೆಸರಾಗಿ ನೇಮಿಸಲ್ಪಟ್ಟರು.’—1 ಪೂರ್ವಕಾಲವೃತ್ತಾಂತ 16:4-6, 41; 25:1.
ಕೀರ್ತನೆಗಳಲ್ಲಿ ‘[ಯೆಹೋವನ] ಕೃಪೆಯು ಶಾಶ್ವತವಾದದ್ದು’ ಎಂಬ ಪಲ್ಲವಿಯು ಅನೇಕ ಬಾರಿ ಕಂಡುಬರುತ್ತದೆ. ಬೈಬಲ್ನಲ್ಲಿರುವ ಈ ಪುಸ್ತಕವನ್ನು ಅತ್ಯಧಿಕವಾಗಿ ಸಂಗೀತದೊಂದಿಗೆ ಜೋಡಿಸಲಾಗಿದೆ. ಉದಾಹರಣೆಗಾಗಿ, ಕೀರ್ತನೆ 136ರಲ್ಲಿರುವ 26 ವಚನಗಳಲ್ಲಿ ಪ್ರತಿಯೊಂದರ ದ್ವಿತೀಯ ಭಾಗದಲ್ಲಿ ಈ ಪಲ್ಲವಿಯು ಇದೆ. “ಅದು ತುಂಬ ಸಂಕ್ಷಿಪ್ತವಾಗಿರುವುದರಿಂದ ಯಾವಾಗಲೂ ಜನರ ನಾಲಿಗೆಯ ತುದಿಯಲ್ಲಿಯೇ ಇರುತ್ತಿತ್ತು. ಅದನ್ನು ಕೇಳಿಸಿಕೊಂಡ ಪ್ರತಿಯೊಬ್ಬ ವ್ಯಕ್ತಿಯೂ ಅದನ್ನು ನೆನಪಿನಲ್ಲಿಟ್ಟುಕೊಳ್ಳಸಾಧ್ಯವಿತ್ತು” ಎಂದು ಒಬ್ಬ ಬೈಬಲ್ ವಿದ್ವಾಂಸ ಹೇಳುತ್ತಾನೆ.
ಸಂಗೀತ ವಾದ್ಯಗಳು ಎಷ್ಟು ವ್ಯಾಪಕವಾಗಿ ಉಪಯೋಗಿಸಲ್ಪಡುತ್ತಿದ್ದವು ಎಂಬುದನ್ನು ಕೀರ್ತನೆಗಳ ಮೇಲ್ಬರಹಗಳು ಸೂಚಿಸುತ್ತವೆ. ಕೀರ್ತನೆ 150ನೆಯ ಅಧ್ಯಾಯವು, ಕೊಂಬು, ಕಿನ್ನರಿ, ದಮ್ಮಡಿ, ಕೊಳಲು, ಝಲ್ಲರಿ ಹಾಗೂ ತಂತೀವಾದ್ಯಗಳ ಕುರಿತಾಗಿ ತಿಳಿಸುತ್ತದೆ. ಹಾಗಿದ್ದರೂ, ಮನುಷ್ಯರ ಸ್ವರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಲಾಗಿದೆ. 6ನೆಯ (NW) ವಚನವು ಉತ್ತೇಜಿಸುವುದು: “ಉಸಿರಾಡುವ ಪ್ರತಿಯೊಂದು ವಸ್ತುವೂ—ಯಾಹುವನ್ನು ಸ್ತುತಿಸಲಿ—ಜನರೇ, ಯಾಹುವನ್ನು ಸ್ತುತಿಸಿರಿ!”
ಸಂಗೀತವು ನಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತದೆ. ಆದುದರಿಂದಲೇ ಬೈಬಲ್ ಸಮಯಗಳಲ್ಲಿ, ದುಃಖಕರ ವಿಷಯಗಳು ಶೋಕಗೀತೆಗಳನ್ನು ಅಥವಾ ಹಾಡುಗಳನ್ನು ಹೊರಹೊಮ್ಮುವಂತೆ ಮಾಡುತ್ತಿದ್ದವು. ಆದರೆ ಇಸ್ರಾಯೇಲ್ ಜನಾಂಗದ ಸಂಗೀತಕೃತಿಗಳಲ್ಲಿ ಕೇವಲ ಈ ರೀತಿಯ ಹಾಡುಗಾರಿಕೆ ಇರಲಿಲ್ಲ. “ಕೇವಲ ಒಂದು ಶೋಕಗೀತೆ ಅಥವಾ ಪ್ರಲಾಪಗೀತೆಯಲ್ಲಿ, ಸಂಗೀತದ ರಾಗ ಇಲ್ಲವೇ ಮಾತಾಡುವ ಶೈಲಿಯಲ್ಲಿರುವ ಸ್ವರ ಬದಲಾವಣೆ ಮತ್ತು ಸ್ವರಭಾರಕ್ಕಿಂತಲೂ ಹೆಚ್ಚಾಗಿ ತಾಳಬದ್ಧವಾದ ರಾಗ ಧಾಟಿಯನ್ನು ಉಪಯೋಗಿಸಲಾಗುತ್ತಿತ್ತು,” ಎಂದು ಶಾಸ್ತ್ರಗಳ ಕುರಿತು ಒಳನೋಟa (ಇಂಗ್ಲಿಷ್) ಎಂಬ ಬೈಬಲ್ ವಿಶ್ವಕೋಶವು ಹೇಳುತ್ತದೆ.
ಯೇಸು ಮತ್ತು ಅವನ ನಂಬಿಗಸ್ತ ಅಪೊಸ್ತಲರು, ಯೇಸುವಿನ ಮರಣದ ಹಿಂದಿನ ರಾತ್ರಿ ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡಿದರು. ಮತ್ತು ಆ ಗೀತೆಗಳಲ್ಲಿ ಅವರು ನಿಸ್ಸಂದೇಹವಾಗಿಯೂ ಹಾಲೆಲ್ ಕೀರ್ತನೆಗಳ ಪದಗಳನ್ನು ಉಪಯೋಗಿಸಿರಬೇಕು. (ಕೀರ್ತನೆ 113-118) ಯೇಸುವಿನ ಶಿಷ್ಯರು ತಮ್ಮ ಧಣಿಯನ್ನು ಕಳೆದುಕೊಳ್ಳುವಾಗ ಆಗುವ ನಷ್ಟವನ್ನು ಎದುರಿಸಲು ಇದು ಅವರಿಗೆ ಎಷ್ಟೊಂದು ಬಲವನ್ನು ಕೊಟ್ಟಿರಬಹುದು! ಅದಕ್ಕಿಂತಲೂ ಹೆಚ್ಚಾಗಿ, “ಆತನ ಕೃಪೆಯು ಶಾಶ್ವತ” ಎಂಬ ಪಲ್ಲವಿಯನ್ನು ಅವರು ಐದು ಸಲ ಹಾಡಿದಾಗ, ವಿಶ್ವದ ಸರ್ವೋಚ್ಚ ಪರಮಾಧಿಕಾರಿಯಾದ ಯೆಹೋವನ ನಂಬಿಗಸ್ತ ಸೇವಕರಾಗಿ ಉಳಿಯುವ ಅವರ ದೃಢನಿಶ್ಚಯವು ಹೆಚ್ಚು ಬಲಗೊಂಡಿದ್ದಿರಬೇಕು.—ಕೀರ್ತನೆ 118:1-4, 29.
ಎಫೆಸ ಮತ್ತು ಕೊಲೊಸ್ಸೆಯ ಆರಂಭದ ಕ್ರೈಸ್ತರು “ದೇವರಿಗೆ ಕೀರ್ತನೆಗಳು ಮತ್ತು ಸ್ತುತಿಗಳನ್ನು (ಅಕ್ಷರಶಃವಾಗಿ, “ಸ್ತೋತ್ರಗೀತೆಗಳನ್ನು”) ಹಾಡಿದರು.” ಇವುಗಳಿಗೆ ಅವರು ‘ಆತ್ಮಸಂಬಂಧವಾದ ಪದಗಳುಳ್ಳ ಗಾನಗಳನ್ನು’ [“ಆತ್ಮಿಕ ಹಾಡುಗಳನ್ನು,” NW] ಕೂಡಿಸಿದರು, ಮತ್ತು ಇವುಗಳನ್ನು ತಮ್ಮ ಹೃದಯಗಳಲ್ಲಿ ಹಾಡುವಂತೆ ಅವರಿಗೆ ಹೇಳಲಾಯಿತು. (ಎಫೆಸ 5:19; ಕೊಲೊಸ್ಸೆ 3:16) ಹಾಡುಗಳ ಮೂಲಕ ಮತ್ತು ಮಾತುಗಳ ಮೂಲಕ, ಅವರು ಸ್ತುತಿಯನ್ನು ವ್ಯಕ್ತಪಡಿಸಲು ತಮ್ಮ ಬಾಯಿಗಳನ್ನು ಯೋಗ್ಯವಾಗಿ ಉಪಯೋಗಿಸಿದರು. “ಹೃದಯದಲ್ಲಿ ತುಂಬಿರುವದೇ ಬಾಯಲ್ಲಿ ಹೊರಡುವದು” ಎಂದು ಯೇಸು ತಾನೇ ಹೇಳಿದ್ದಾನಲ್ಲವೋ?—ಮತ್ತಾಯ 12:34.
ದೇವರಿಗೆ ಮೆಚ್ಚುಗೆಯಾಗದಂತಹ ಸಂಗೀತ
ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಎಲ್ಲ ರೀತಿಯ ಸಂಗೀತವು ದೇವರಿಗೆ ಮೆಚ್ಚುಗೆಯಾದದ್ದಾಗಿರಲಿಲ್ಲ. ಸೀನಾಯಿ ಪರ್ವತದಲ್ಲಿ ನಡೆದಂತಹ ಘಟನೆಯನ್ನೇ ತೆಗೆದುಕೊಳ್ಳಿರಿ. ಆ ಪರ್ವತದಲ್ಲಿ ಮೋಶೆ, ದಶಾಜ್ಞೆಗಳನ್ನು ಸೇರಿಸಿ ಧರ್ಮಶಾಸ್ತ್ರವನ್ನು ದೇವರಿಂದ ಪಡೆದುಕೊಂಡನು. ಮೋಶೆ ಪರ್ವತದಿಂದ ಇಳಿದುಬಂದಾಗ, ಅವನು ಏನನ್ನು ಕೇಳಿಸಿಕೊಂಡನು? “ಜಯಧ್ವನಿಯೂ ಅಲ್ಲ ಅಪಜಯ ಧ್ವನಿಯೂ ಅಲ್ಲ,” ಬದಲಾಗಿ “ಉತ್ಸವ ಧ್ವನಿಯೇ.” ಈ ಸಂಗೀತವು ವಿಗ್ರಹಾರಾಧನೆಯೊಂದಿಗೆ ಸಂಬಂಧಿಸಿತ್ತು. ಮತ್ತು ಇದು ದೇವರಿಗೆ ಕೋಪವನ್ನು ತಂದಿತು ಮತ್ತು ಇದರಿಂದಾಗಿ ಆ ಸಂಗೀತರಚನೆಗಾರರಲ್ಲಿ ಸುಮಾರು 3,000 ಜನರು ಮರಣವನ್ನಪ್ಪಿದರು.—ವಿಮೋಚನಕಾಂಡ 32:18, 25-28.
ಮನುಷ್ಯರು ಸಂಗೀತವನ್ನು ರಚಿಸಿ, ನುಡಿಸಿ, ಆನಂದಿಸಲು ಶಕ್ತರಾಗಿರುವ ಕಾರಣಕ್ಕಾಗಿ, ಅದೆಲ್ಲವೂ ದೇವರಿಗೆ ಮೆಚ್ಚುಗೆಯಾಗುತ್ತದೆಂದು ಇದರರ್ಥವಲ್ಲ. ಯಾಕೆ? ಕ್ರೈಸ್ತ ಅಪೊಸ್ತಲ ಪೌಲನು ವಿವರಿಸುವುದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ವಿಧರ್ಮಿ ಫಲವತ್ತತೆಯ ಸಂಸ್ಕಾರಗಳು, ಮಾನವಾತ್ಮವು ಅಮರವೆಂಬ ಬೋಧನೆ, ಮತ್ತು “ದೇವಮಾತೆ” ಎಂದು ಮರಿಯಳ ಪೂಜೆಯು ಅನೇಕವೇಳೆ ಸಂಗೀತಕೃತಿಗಳ ಮುಖ್ಯವಿಷಯವಾಗಿರುತ್ತದೆ. ಆದರೆ ಇಂತಹ ನಂಬಿಕೆಗಳು ಮತ್ತು ಆಚರಣೆಗಳು ಸತ್ಯದ ದೇವರಿಗೆ ಅಗೌರವವನ್ನು ತರುತ್ತವೆ, ಯಾಕೆಂದರೆ ಇವು ಪ್ರೇರಿತ ವಾಕ್ಯವಾದ ಬೈಬಲಿನಲ್ಲಿರುವ ವಿಷಯಕ್ಕೆ ತದ್ವಿರುದ್ಧವಾಗಿವೆ.—ಧರ್ಮೋಪದೇಶಕಾಂಡ 18:10-12; ಯೆಹೆಜ್ಕೇಲ 18:4; ಲೂಕ 1:35, 38.
ಸಂಗೀತವನ್ನು ಬುದ್ಧಿವಂತಿಕೆಯಿಂದ ಆಯ್ಕೆಮಾಡುವುದು
ಈಗ ಲಭ್ಯವಿರುವ ಸಂಗೀತದ ವೈವಿಧ್ಯತೆಯು ದಂಗುಬಂಡಿಸುವಂಥದ್ದಾಗಿದೆ. ಕಾಂಪ್ಯಾಕ್ಟ್ ಡಿಸ್ಕ್ ಕವರ್ಗಳು, ಗಿರಾಕಿಗಳು ಎಲ್ಲಾ ರೀತಿಯ ಸಂಗೀತ ರೆಕಾರ್ಡಿಂಗ್ಗಳನ್ನು ಖರೀದಿಸುವಂತೆ ಮಾಡಲು ವಿನ್ಯಾಸಿಸಲ್ಪಟ್ಟಿವೆ. ಆದರೆ ದೇವರ ಆರಾಧಕನೊಬ್ಬನು ದೇವರನ್ನು ಮೆಚ್ಚಿಸಲು ಬಯಸುವಲ್ಲಿ, ಅವನು ಸುಳ್ಳು ಧಾರ್ಮಿಕ ಬೋಧನೆಗಳಿಂದ ಪ್ರೇರಿಸಲ್ಪಟ್ಟಿರುವ ಅಥವಾ ಅಮರತ್ವ ಹಾಗೂ ದೆವ್ವಾರಾಧನೆಯ ಮೇಲೆ ಕೇಂದ್ರೀಕರಿಸುವ ಗಾಯನ ಹಾಗೂ ವಾದ್ಯ ಸಂಗೀತದಿಂದ ದೂರವಿರಲು ಎಚ್ಚರದಿಂದಿರುವನು ಮತ್ತು ಬುದ್ಧಿವಂತಿಕೆಯಿಂದ ಆಯ್ಕೆಮಾಡುವನು.
ಒಂದು ಕಾಲದಲ್ಲಿ ಒಬ್ಬ ಕ್ರೈಸ್ತ ಮಿಷನೆರಿಯೋಪಾದಿ ಆಫ್ರಿಕದಲ್ಲಿ ಸೇವೆ ಮಾಡಿದ ಆ್ಯಲ್ಬರ್ಟ್ ಎಂಬುವನಿಗೆ, ಅಲ್ಲಿ ಪಿಯಾನೋ ನುಡಿಸಲು ಅವಕಾಶವೇ ಇರಲಿಲ್ಲ. ಆದರೆ ಅವನು ತನ್ನೊಂದಿಗೆ ಕೊಂಡುಹೋಗಿದ್ದ ಲಾಂಗ್ ಪ್ಲೇಯಿಂಗ್ ರೆಕಾರ್ಡಿಂಗ್ಗಳನ್ನು ಪದೇ ಪದೇ ಕೇಳಿಸಿಕೊಳ್ಳುತ್ತಾ ಇದ್ದನು. ಈಗ ಆ್ಯಲ್ಬರ್ಟ್ ತನ್ನ ಸ್ವದೇಶದಲ್ಲಿದ್ದುಕೊಂಡು, ಒಬ್ಬ ಸಂಚರಣ ಮೇಲ್ವಿಚಾರಕನೋಪಾದಿ ಕ್ರೈಸ್ತ ಸಭೆಗಳನ್ನು ಸಂದರ್ಶಿಸುತ್ತಿದ್ದಾನೆ. ಸಂಗೀತವನ್ನು ಆಲಿಸಲು ಈಗ ಅವನಿಗೆ ತುಂಬ ಕಡಿಮೆ ಸಮಯ ಸಿಗುತ್ತದೆ. “ನನ್ನ ಅಚ್ಚುಮೆಚ್ಚಿನ ಸಂಗೀತ ರಚನೆಕಾರನು ಬೀತೊವೆನ್ ಆಗಿದ್ದಾನೆ. ಈ ಎಲ್ಲ ವರ್ಷಗಳಲ್ಲಿ ನಾನು ಅವನ ಸಂಗೀತಕೃತಿಗಳ ರೆಕಾರ್ಡಿಂಗ್ಗಳನ್ನು ಸಂಗ್ರಹಿಸಿದ್ದೇನೆ.” ಇವುಗಳನ್ನು ಕೇಳಿಸಿಕೊಳ್ಳುವುದರಿಂದ ಅವನಿಗೆ ತುಂಬ ಆನಂದ ಸಿಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ತನ್ನದೇ ಆದ ಸಂಗೀತ ಅಭಿರುಚಿಯಿರುತ್ತದಾದರೂ, ಕ್ರೈಸ್ತರೋಪಾದಿ ನಾವು ಪೌಲನ ಈ ಸಲಹೆಯನ್ನು ಮನಸ್ಸಿನಲ್ಲಿಡಬೇಕು: “ನೀವು ಉಂಡರೂ ಕುಡಿದರೂ ಇನ್ನೇನೂ ಮಾಡಿದರೂ ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ.”—1 ಕೊರಿಂಥ 10:31.
ಸಂಗೀತ ಮತ್ತು ಸಮರ್ಪಣೆ
ಸೂಸಿ ಎಂಬವಳಿಗೆ ಚಿಕ್ಕಂದಿನಿಂದಲೂ ಸಂಗೀತವೆಂದರೆ ಪ್ರಾಣ. “ನಾನು 6 ವರ್ಷದವಳಾಗಿದ್ದಾಗ ಪಿಯಾನೋ ನುಡಿಸಲು ಆರಂಭಿಸಿದೆ, 10ನೆಯ ವಯಸ್ಸಿನಲ್ಲಿ ಪಿಟೀಲು ಬಾರಿಸಲು ಮತ್ತು ಕೊನೆಗೆ 12ನೇ ವಯಸ್ಸಿನಲ್ಲಿ ಕಿನ್ನರಿ ನುಡಿಸಲು ಆರಂಭಿಸಿದೆ” ಎಂದು ಅವಳು ವಿವರಿಸುತ್ತಾಳೆ. ಅನಂತರ ಸೂಸಿ ಕಿನ್ನರಿಯ ಕುರಿತು ಹೆಚ್ಚನ್ನು ಕಲಿಯಲು ಇಂಗ್ಲೆಂಡಿನ ಲಂಡನ್ನಲ್ಲಿರುವ ರಾಯಲ್ ಕಾಲೇಜ್ ಆಫ್ ಮ್ಯೂಸಿಕ್ಗೆ ಹೋದಳು. ನಾಲ್ಕು ವರ್ಷಗಳ ವರೆಗೆ ಅವಳು ಒಬ್ಬ ಸುಪ್ರಸಿದ್ಧ ಸ್ಪ್ಯಾನಿಷ್ ಕಿನ್ನರಿ ವಾದಕನಿಂದ ತರಬೇತಿಪಡೆದಳು. ಮತ್ತು ಇನ್ನೊಂದು ವರ್ಷ ಪ್ಯಾರಿಸ್ ಲಲಿತಾಕಲಾಶಾಲೆಗೆ ಹೋಗಿ, ಸಂಗೀತದಲ್ಲಿ ಗೌರವ ಪದವಿಯನ್ನೂ, ಕಿನ್ನರಿ ನುಡಿಸುವುದರಲ್ಲಿ ಹಾಗೂ ಪಿಯಾನೋ ಕಲಿಸುವುದರಲ್ಲಿ ಡಿಪ್ಲೋಮಾಗಳನ್ನು ಗಿಟ್ಟಿಸಿಕೊಂಡಳು.
ಲಂಡನಿನಲ್ಲಿರುವ ಯೆಹೋವನ ಸಾಕ್ಷಿಗಳ ಸಭೆಯೊಂದಿಗೆ ಸೂಸಿ ಸಹವಾಸಿಸಲಾರಂಭಿಸಿದಳು. ಅಲ್ಲಿ ಅವಳು ಜೊತೆ ಸಾಕ್ಷಿಗಳು ತೋರಿಸುವ ನಿಜವಾದ ಕಾಳಜಿ ಮತ್ತು ಪ್ರೀತಿಯನ್ನು ನೋಡಿದಳು. ಕ್ರಮೇಣವಾಗಿ, ಯೆಹೋವನಿಗಾಗಿ ಅವಳ ಪ್ರೀತಿಯು ಮೊಳಕೆಯೊಡೆಯಲಾರಂಭಿಸಿತು ಮತ್ತು ಆತನ ಸೇವೆಗಾಗಿ ಅವಳ ಹುರುಪು, ಆತನ ಸೇವೆಮಾಡಲು ಮಾರ್ಗಗಳನ್ನು ಹುಡುಕುವಂತೆ ಮಾಡಿತು. ಇದು ಸಮರ್ಪಣೆ ಮತ್ತು ದೀಕ್ಷಾಸ್ನಾನಕ್ಕೆ ನಡಿಸಿತು. “ಸಂಗೀತವು ಒಂದು ಜೀವನೋದ್ಯೋಗವಾಗಿರುವಾಗ, ನೀವು ನಿಮ್ಮನ್ನು ಅದಕ್ಕೆ ಸಮರ್ಪಿಸಿಕೊಳ್ಳಬೇಕು, ಆದುದರಿಂದ ಸಮರ್ಪಣೆಯ ಜೀವಿತವು ನನಗೆ ಅಪರಿಚಿತವಾದುದಾಗಿರಲಿಲ್ಲ” ಎಂದು ಸೂಸಿ ಹೇಳುತ್ತಾಳೆ. ಯೇಸುವಿನ ಉಪದೇಶಗಳಿಗೆ ವಿಧೇಯಳಾಗುತ್ತಾ ಅವಳು ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಂಡಂತೆ, ಅವಳ ಸಂಗೀತ ಕಚೇರಿಗಳು ಕಡಿಮೆಯಾದವು.—ಮತ್ತಾಯ 24:14; ಮಾರ್ಕ 13:10.
ಈಗ ಸಂಗೀತ ಕಚೇರಿಗಳನ್ನು ನಡೆಸಲು ಸ್ವಲ್ಪವೇ ಸಮಯವಿರುವುದರಿಂದ ಅವಳಿಗೆ ಹೇಗನಿಸುತ್ತದೆ? “ಸಂಗೀತವನ್ನು ಪ್ರ್ಯಾಕ್ಟೀಸ್ ಮಾಡಲು ಸಹ ನನಗೆ ಸಮಯವಿಲ್ಲವಲ್ಲ ಎಂದು ಕೆಲವೊಮ್ಮೆ ಸ್ವಲ್ಪ ಬೇಸರವಾಗುತ್ತದಾದರೂ ನಾನು ಈಗಲೂ ನನ್ನ ವಾದ್ಯಗಳನ್ನು ನುಡಿಸುತ್ತೇನೆ ಮತ್ತು ಸಂಗೀತವನ್ನು ಆನಂದಿಸುತ್ತೇನೆ. ಸಂಗೀತವು ಯೆಹೋವನಿಂದ ಬಂದ ಒಂದು ಕೊಡುಗೆಯಾಗಿದೆ. ನಾನು ಆತನ ಸೇವೆಯನ್ನು ನನ್ನ ಜೀವಿತದಲ್ಲಿ ಪ್ರಥಮವಾಗಿಟ್ಟಿರುವುದರಿಂದ ಸಂಗೀತವನ್ನು ಈಗ ಇನ್ನೂ ಹೆಚ್ಚು ಆನಂದಿಸುತ್ತೇನೆ.”—ಮತ್ತಾಯ 6:33.
ದೇವರನ್ನು ಸ್ತುತಿಸುವ ಸಂಗೀತ
ಯೆಹೋವನ ಸುಮಾರು 60 ಲಕ್ಷ ಸಾಕ್ಷಿಗಳೊಂದಿಗೆ ಆ್ಯಲ್ಬರ್ಟ್ ಮತ್ತು ಸೂಸಿ ಯೆಹೋವ ದೇವರನ್ನು ಕ್ರಮವಾಗಿ ಸಂಗೀತದೊಂದಿಗೆ ಸ್ತುತಿಸುತ್ತಾರೆ. 234 ದೇಶಗಳಲ್ಲಿರುವ ರಾಜ್ಯ ಸಭಾಗೃಹಗಳಲ್ಲಿ ನಡೆಯುವ ಕ್ರೈಸ್ತ ಕೂಟಗಳಲ್ಲಿ, ಅವರು ಸಾಧ್ಯವಿರುವಲ್ಲೆಲ್ಲಾ ತಮ್ಮ ಕೂಟಗಳನ್ನು ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುವ ಮೂಲಕ ಆರಂಭಿಸುತ್ತಾರೆ ಮತ್ತು ಮುಕ್ತಾಯಗೊಳಿಸುತ್ತಾರೆ. ಈ ಸುಮಧುರ ಗೀತೆಗಳಲ್ಲಿ, ಯೆಹೋವ ದೇವರನ್ನು ಸ್ತುತಿಸುವ ಶಾಸ್ತ್ರೀಯ ಆಧಾರವುಳ್ಳ ಪದಗಳಿರುತ್ತವೆ.
ಹಾಜರಿರುವವರೆಲ್ಲರೂ, ಯೆಹೋವನು ಕಾಳಜಿವಹಿಸುವ ಒಬ್ಬ ದೇವರಾಗಿದ್ದಾನೆ (ಗೀತ 44) ಎಂಬುದನ್ನು ಹೃದಯೋಲ್ಲಾಸದಿಂದ ಹಾಡಲು ತಮ್ಮ ದನಿಗಳನ್ನೆತ್ತುತ್ತಾರೆ. ಅವರು ಯೆಹೋವನಿಗೆ ಒಂದು ಸ್ತುತಿಯ ಹಾಡನ್ನು (ಗೀತ 190) ಹಾಡುತ್ತಾರೆ. ಕ್ರೈಸ್ತ ಸಹೋದರತ್ವ, ಕ್ರೈಸ್ತ ಜೀವನ, ಮತ್ತು ಕ್ರೈಸ್ತ ಗುಣಗಳಿಂದ ಸಿಗುವ ಆನಂದವನ್ನು ಹಾಗೂ ಅವುಗಳ ಜವಾಬ್ದಾರಿಗಳನ್ನು ಅವರ ಹಾಡುಗಳಲ್ಲಿ ತಿಳಿಸಲಾಗುತ್ತದೆ. ಈ ಸುಮಧುರ ಸಂಗೀತದ ರಚನೆಯಲ್ಲಿ ಉಪಯೋಗಿಸಲ್ಪಟ್ಟಿರುವ ಏಷಿಯಾ, ಆಸ್ಟ್ರೇಲಿಯ, ಯೂರೋಪ್ ಹಾಗೂ ಉತ್ತರ ಮತ್ತು ದಕ್ಷಿಣ ಅಮೆರಿಕದ ಸಂಗೀತ ಶೈಲಿಗಳ ವೈವಿಧ್ಯವು ಅವರಿಗೆ ಇನ್ನೂ ಹೆಚ್ಚಿನ ಸಂತೋಷವನ್ನು ತರುತ್ತದೆ.b
ಕೀರ್ತನೆಗಾರನ ದಿನದಲ್ಲಿ ಬರೆಯಲ್ಪಟ್ಟಿದ್ದ ಭವ್ಯವಾದ ರಾಜ ಗೀತೆಯ ಆರಂಭದ ಪದಗಳು ಹೀಗಿವೆ: “ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಎಲ್ಲಾ ಭೂನಿವಾಸಿಗಳೇ, ಯೆಹೋವನಿಗೆ ಹಾಡಿರಿ. ಯೆಹೋವನಿಗೆ ಹಾಡಿರಿ; ಆತನ ನಾಮವನ್ನು ಕೊಂಡಾಡಿರಿ. ಆತನ ರಕ್ಷಣೆಯನ್ನು ಪ್ರತಿನಿತ್ಯವೂ ಸಾರಿಹೇಳಿರಿ. ಜನಾಂಗಗಳಲ್ಲಿ ಆತನ ಘನತೆಯನ್ನೂ ಎಲ್ಲಾ ಜನರಲ್ಲಿ ಆತನ ಅದ್ಭುತಕೃತ್ಯಗಳನ್ನೂ ಪ್ರಸಿದ್ಧಪಡಿಸಿರಿ.” (ಕೀರ್ತನೆ 96:1-3) ನಿಮ್ಮ ಕ್ಷೇತ್ರದಲ್ಲಿ ಯೆಹೋವನ ಸಾಕ್ಷಿಗಳು ಇದನ್ನೇ ಮಾಡುತ್ತಿದ್ದಾರೆ, ಮತ್ತು ಈ ಸ್ತುತಿಗೀತೆಯನ್ನು ಹಾಡುವುದರಲ್ಲಿ ಜೊತೆಗೂಡುವಂತೆ ಅವರು ನಿಮ್ಮನ್ನು ಆಮಂತ್ರಿಸುತ್ತಾರೆ. ಅವರ ರಾಜ್ಯ ಸಭಾಗೃಹಗಳಲ್ಲಿ ನಿಮಗೆ ಸ್ವಾಗತವಿದೆ. ಮತ್ತು ಅಲ್ಲಿ ಯೆಹೋವನಿಗೆ ಮೆಚ್ಚುಗೆಯಾಗುವಂತಹ ಸಂಗೀತದೊಂದಿಗೆ ಆತನನ್ನು ಹೇಗೆ ಸ್ತುತಿಸಬಹುದು ಎಂಬುದನ್ನು ನೀವು ಕಲಿತುಕೊಳ್ಳಸಾಧ್ಯವಿದೆ.
[ಪಾದಟಿಪ್ಪಣಿ]
a ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಪ್ರಕಾಶಿತ, ಯೆಹೋವನಿಗೆ ಸ್ತುತಿಗಳನ್ನು ಹಾಡಿರಿ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಈ ಹಾಡುಗಳಿವೆ.
[ಪುಟ 28ರಲ್ಲಿರುವ ಚಿತ್ರ]
ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುವುದು