ರಾಜ್ಯ ಘೋಷಕರು ವರದಿ ಮಾಡುತ್ತಾರೆ
ಭಾರತ—“ವೈವಿಧ್ಯತೆಯ ಮಧ್ಯದಲ್ಲೂ ಐಕ್ಯತೆ”
“ವೈವಿಧ್ಯತೆಯ ಮಧ್ಯದಲ್ಲೂ ಐಕ್ಯತೆ” ಎಂಬ ಈ ಜನಪ್ರಿಯ ಧ್ಯೇಯಮಂತ್ರವನ್ನು ಭಾರತದಲ್ಲಿರುವ ರಾಷ್ಟ್ರೀಯ ಸಮಗ್ರೀಕರಣವನ್ನು ವರ್ಣಿಸಲು ಉಪಯೋಗಿಸಲಾಗುತ್ತದೆ. ಸಂಸ್ಕೃತಿ, ಭಾಷೆ, ಧರ್ಮ, ಕುಲಸಂಬಂಧಿತ ಮೂಲಗಳು, ಉಡುಪು ಮತ್ತು ಆಹಾರ ಹೀಗೆ ಎಲ್ಲಾ ವಿಷಯಗಳಲ್ಲಿ ವೈವಿಧ್ಯತೆಯಿರುವ ಈ ವಿಸ್ತಾರವಾದ ದೇಶದಲ್ಲಿ ಐಕ್ಯದಿಂದಿರುವುದು ಸುಲಭವಲ್ಲ. ಆದರೂ, ಇಂತಹದ್ದೇ ಆದ ಐಕ್ಯತೆಯನ್ನು ಭಾರತ ದೇಶದಲ್ಲಿರುವ ಯೆಹೋವನ ಸಾಕ್ಷಿಗಳ ಕಾರ್ಯನಿರ್ವಹಣ ಕಚೇರಿಯಲ್ಲಿ ಕಾಣಬಹುದು. ಅಲ್ಲಿಯೇ ವಾಸವಾಗಿದ್ದು ಕೆಲಸಮಾಡುವ ಸ್ವಯಂಸೇವಕರು, ಅನೇಕ ರಾಜ್ಯಗಳಿಂದ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಬಂದವರಾಗಿದ್ದು, ಹಲವಾರು ಭಾಷೆಗಳನ್ನಾಡುವ ಇವರ ಮಧ್ಯೆ ಇಂತಹ ಐಕ್ಯತೆ ಇದೆ.
• ರಾಜ್ರಾಣಿಯ ಪರಿಚಯವನ್ನು ಮಾಡಿಕೊಳ್ಳೋಣ. ಭಾರತದ ವಾಯವ್ಯ ದಿಕ್ಕಿನ ತುದಿಯಲ್ಲಿರುವ ಪಂಜಾಬ್ನಿಂದ ಬಂದಿರುವ ಯುವತಿಯೇ ಈ ರಾಜ್ರಾಣಿ. ರಾಜ್ರಾಣಿ ಶಾಲೆಯಲ್ಲಿದ್ದಾಗ ಅವಳ ಸಹಪಾಠಿಯೊಬ್ಬಳು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲು ಪ್ರಾರಂಭಿಸಿದಳು. ಈ ಹುಡುಗಿ, ಬೈಬಲಿನಲ್ಲಿ ರಾಜ್ರಾಣಿಯ ಆಸಕ್ತಿಯನ್ನು ಕೆರಳಿಸಲು ಪ್ರಯತ್ನಿಸಿದಳು. ಆ ಸಮಯದಲ್ಲಿ ಕಾವಲಿನಬುರುಜು ಪತ್ರಿಕೆಯು ಪಂಜಾಬಿ ಭಾಷೆಯಲ್ಲಿ ಲಭ್ಯವಿರಲಿಲ್ಲ. ಈ ಹುಡುಗಿಗೆ ಅಷ್ಟೊಂದು ಇಂಗ್ಲಿಷ್ ಗೊತ್ತಿರದಿದ್ದರಿಂದ ಪತ್ರಿಕೆಯಲ್ಲಿರುವ ವಿಷಯಗಳನ್ನು ಭಾಷಾಂತರಿಸಲು ರಾಜ್ರಾಣಿಯ ಸಹಾಯವನ್ನು ಕೋರಿದಳು. ಕಾವಲಿನಬುರುಜು ಪತ್ರಿಕೆಯಲ್ಲಿ ಓದಿದಂತಹ ವಿಷಯಗಳು ರಾಜ್ರಾಣಿಯ ಮೇಲೆ ಎಷ್ಟು ಪ್ರಭಾವವನ್ನು ಬೀರಿದವೆಂದರೆ, ತನ್ನ ಹೆತ್ತವರ ವಿರೋಧದ ಮಧ್ಯದಲ್ಲೂ ಯೆಹೋವ ದೇವರಿಗೆ ತನ್ನ ಜೀವನವನ್ನು ಸಮರ್ಪಿಸಿಕೊಳ್ಳುವ ಹಂತದ ವರೆಗೆ ಅವಳು ಪ್ರಗತಿಯನ್ನು ಮಾಡಿದಳು. ಇಂದು, ಭಾರತದ ಬೆತೆಲಿನಲ್ಲಿ ಸೇವೆಸಲ್ಲಿಸುತ್ತಾ, ಸತ್ಯಕ್ಕೆ ತನ್ನ ಕಣ್ಣುಗಳನ್ನು ತೆರೆಯಿಸಿದ ಕೆಲಸವನ್ನೇ ಅವಳು ಮಾಡುತ್ತಿದ್ದಾಳೆ. ಅವಳು ಕ್ರೈಸ್ತ ಪ್ರಕಾಶನಗಳನ್ನು ಪಂಜಾಬಿ ಭಾಷೆಗೆ ಭಾಷಾಂತರಿಸುವ ಕೆಲಸವನ್ನು ಮಾಡುತ್ತಿದ್ದಾಳೆ!
• ಬಿಜೋನ ಅನುಭವವನ್ನೂ ಪರಿಗಣಿಸಿರಿ. ಇವನು ಭಾರತದ ಇನ್ನೊಂದು ಭಾಗದವನು, ಅಂದರೆ ನೈರುತ್ಯ ದಿಕ್ಕಿನ ಕೇರಳ ರಾಜ್ಯದವನು. ರಾಷ್ಟ್ರೀಯ ಸಮಾರಂಭಗಳಲ್ಲಿ ತನ್ನ ತಟಸ್ಥ ನಿಲುವನ್ನು ಕಾಪಾಡಿಕೊಂಡದ್ದಕ್ಕಾಗಿ ಬಿಜೋ ಪ್ರೌಢ ಶಾಲೆಯಿಂದ ಹೊರಹಾಕಲ್ಪಟ್ಟನು. ಬಹುಕಾಲದ ವರೆಗೆ ನಡೆದ ಕೋರ್ಟ್ ಮೊಕದ್ದಮೆಯು, ಸತ್ಯಾರಾಧನೆಗೆ ಒಂದು ಗಮನಾರ್ಹವಾದ ವಿಜಯವನ್ನು ಕೊಡುವ ಮೂಲಕ ಕೊನೆಗೊಂಡಿತು. ಆದುದರಿಂದ ಬಿಜೋ ಪುನಃ ಶಾಲೆಗೆ ಹಿಂದಿರುಗಿದನು.a ತದನಂತರ ಅವನು ಕಾಲೇಜಿಗೂ ಹೋದನು. ಆದರೆ ಅಲ್ಲಿಯ ಅನೈತಿಕ ವಾತಾವರಣವು ಅವನ ಮನಸ್ಸಾಕ್ಷಿಯನ್ನು ಚಿಂತೆಗೊಳಪಡಿಸಿದ ಕಾರಣ, ಮೊದಲ ವರುಷದಲ್ಲೇ ಅವನು ತನ್ನ ಕಾಲೇಜ್ ಅಭ್ಯಾಸವನ್ನು ನಿಲ್ಲಿಸಿಬಿಟ್ಟನು. ಈಗ, ಕಳೆದ ಹತ್ತು ವರುಷಗಳಿಂದ ಬೆತೆಲಿನಲ್ಲಿ ಸೇವೆ ಸಲ್ಲಿಸುತ್ತಿರುವ ಇವನಿಗೆ, ಉಚ್ಚ ಶಿಕ್ಷಣವನ್ನು ಬೆನ್ನಟ್ಟುವ ಬದಲು, ವೈವಿಧ್ಯಮಯವಾದರೂ ಐಕ್ಯದಿಂದಿರುವ ಬೆತೆಲ್ ಕುಟುಂಬದ ಒಬ್ಬ ಸದಸ್ಯನಾಗಿರುವುದರಿಂದಲೇ ಹೆಚ್ಚಿನ ಪ್ರಯೋಜನಗಳು ಸಿಕ್ಕಿವೆಯೆಂದು ಅನಿಸುತ್ತದೆ.
• ನೋರ್ಮಾ ಮತ್ತು ಲಿಲ್ಲಿ ಇಬ್ಬರೂ 70 ವರ್ಷಗಳಿಗಿಂತಲೂ ಹೆಚ್ಚಿನ ಪ್ರಾಯದವರಾಗಿದ್ದಾರೆ. ಇವರಿಬ್ಬರೂ ಅನೇಕ ವರ್ಷಗಳಿಂದ ವಿಧವೆಯರಾಗಿದ್ದಾರೆ. ಇಬ್ಬರೂ 40ಕ್ಕಿಂತಲೂ ಹೆಚ್ಚು ವರ್ಷಗಳನ್ನು ಸ್ವಯಂಸೇವಕರಾಗಿ ಕಳೆದಿದ್ದಾರೆ. ಲಿಲ್ಲಿಯವರು ತಮಿಳು ಭಾಷೆಯ ಭಾಷಾಂತರಕಾರರಾಗಿ ಕಳೆದ 20 ವರ್ಷಗಳಿಂದ ಬ್ರಾಂಚ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ನೋರ್ಮಾ ಅವರು 13 ವರ್ಷಗಳ ಮುಂಚೆ ತಮ್ಮ ಗಂಡನನ್ನು ಕಳೆದುಕೊಂಡ ನಂತರ ಬೆತೆಲಿಗೆ ಬಂದರು. ಕಾರ್ಯನಿಷ್ಠ ಮತ್ತು ಶ್ರದ್ಧಾಪೂರ್ವಕ ಕೆಲಸಗಾರರೋಪಾದಿ ಇವರು ಅತ್ಯುತ್ತಮವಾದ ಮಾದರಿಯನ್ನಿಟ್ಟಿದ್ದಾರೆ. ಮಾತ್ರವಲ್ಲದೆ, ಇಡೀ ಬೆತೆಲ್ ಕುಟುಂಬದ ಮೇಲೆ ಐಕ್ಯಗೊಳಿಸುವ ಪ್ರಭಾವವನ್ನು ಬೀರುವವರಾಗಿ ಪರಿಣಮಿಸಿದ್ದಾರೆ. ಬೆತೆಲ್ಗೆ ಭೇಟಿ ನೀಡುವವರನ್ನು ಸತ್ಕರಿಸಲು ಇವರು ಇಷ್ಟಪಡುತ್ತಾರೆ ಮತ್ತು ಕ್ರೈಸ್ತ ಬಾಳ್ವೆಯ ದೀರ್ಘ ವರ್ಷಗಳ ಆನಂದಮಯ ವಿಷಯಗಳನ್ನು, ಕುಟುಂಬದ ಯುವ ಸದಸ್ಯರೊಂದಿಗೆ ಹಂಚಿಕೊಳ್ಳುತ್ತಾ, ಅವರ ಸಹವಾಸದಲ್ಲಿ ಆನಂದಿಸುತ್ತಾರೆ. ಇದಕ್ಕೆ ಪ್ರತಿಕ್ರಿಯಿಸುತ್ತಾ, ಯುವ ಸದಸ್ಯರು ಸಾಹಚರ್ಯಕ್ಕಾಗಿ ಇವರನ್ನು ತಮ್ಮ ರೂಮ್ಗಳಿಗೆ ಆಮಂತ್ರಿಸುತ್ತಾರೆ ಮತ್ತು ಬೇಕಾದಾಗ ಸಹಾಯಹಸ್ತವನ್ನು ನೀಡುತ್ತಾರೆ. ಇವರು ನಿಜವಾಗಿಯೂ ಆದರ್ಶಪ್ರಾಯರಾಗಿದ್ದಾರೆ!
ಅನೇಕ ಸ್ಥಳಗಳಲ್ಲಿ ಕಲಹ ಮತ್ತು ವೈಮನಸ್ಸನ್ನು ಉಂಟುಮಾಡುವ ವಿಷಯಗಳನ್ನು ಜಯಿಸಿರುವ ಈ ಸ್ವಯಂಸೇವಕರು, ಭಾರತದ ಐಕ್ಯ ಬೆತೆಲ್ ಕುಟುಂಬದ ಸದಸ್ಯರೋಪಾದಿ ಇತರರ ಸೇವೆಮಾಡಲು ಸಂತೋಷದಿಂದ ಒಟ್ಟಿಗೆ ಕೆಲಸಮಾಡುತ್ತಾರೆ.—ಕೀರ್ತನೆ 133:1.
[ಪಾದಟಿಪ್ಪಣಿ]
a 1988, ಆಗಸ್ಟ್ 1ರ ಕಾವಲಿನಬುರುಜು ಪತ್ರಿಕೆಯ ಪುಟ 23ನ್ನು ನೋಡಿ.
[ಪುಟ 8ರಲ್ಲಿರುವ ಚಿತ್ರ ಕೃಪೆ]
ಹಿನ್ನೆಲೆ: Mountain High Maps® Copyright © 1997 Digital Wisdom, Inc.