ನೀವು ನಿಜವಾಗಿಯೂ ಸಹಿಷ್ಣು ಸ್ವಭಾವದವರೊ?
ಯಾರಾದರೊಬ್ಬರ ಕೆಟ್ಟ ನಡತೆಯನ್ನು ನೋಡಿ ನಿಮ್ಮ ಸಿಟ್ಟು ಎಂದಾದರೂ ನೆತ್ತಿಗೇರಿದೆಯೊ? ನಿಮ್ಮ ಆಪ್ತ ಒಡನಾಡಿಗಳ ಮೇಲೆ ಭ್ರಷ್ಟವಾದ ಪ್ರಭಾವಗಳು ಗಂಭೀರವಾದ ಪರಿಣಾಮವನ್ನು ಬೀರುತ್ತಿರುವಾಗ, ನೀವು ಕೂಡಲೇ ಕ್ರಿಯೆಗೈಯುತ್ತೀರೊ?
ಗಂಭೀರವಾದ ಪಾಪವು ಹರಡದಂತೆ, ಕೆಲವೊಮ್ಮೆ ತಡವಿಲ್ಲದ ಮತ್ತು ದೃಢವಾದ ಕ್ರಮವನ್ನು ಕೈಗೊಳ್ಳಬೇಕಾಗುತ್ತದೆ. ಉದಾಹರಣೆಗಾಗಿ, ಕೆಲವರು ಭಂಡತನದಿಂದ ನಡೆಸುತ್ತಿದ್ದ ಪಾಪವು ಸಾ.ಶ.ಪೂ. 15ನೆಯ ಶತಮಾನದಲ್ಲಿದ್ದ ಇಸ್ರಾಯೇಲ್ಯರನ್ನು ಅಶುದ್ಧಗೊಳಿಸುವ ಅಪಾಯವಿದ್ದಾಗ, ಆರೋನನ ಮೊಮ್ಮಗನಾದ ಫೀನೆಹಾಸನು ಆ ಕೆಟ್ಟತನವನ್ನು ತೆಗೆದುಹಾಕಲಿಕ್ಕಾಗಿ ದೃಢವಾದ ಕ್ರಮವನ್ನು ಕೈಗೊಂಡನು. ಅವನೇನು ಮಾಡಿದನೋ ಅದನ್ನು ಸಮ್ಮತಿಸುತ್ತಾ ಯೆಹೋವ ದೇವರು ಹೇಳಿದ್ದು: “ಫೀನೆಹಾಸನು ನನ್ನ ಗೌರವವನ್ನು ಕಾಪಾಡಿದ್ದರಿಂದ ಇಸ್ರಾಯೇಲ್ಯರ ಮೇಲಿದ್ದ ನನ್ನ ಕೋಪವನ್ನು ತೊಲಗಿಸಿದ್ದಾನೆ.”—ಅರಣ್ಯಕಾಂಡ 25:1-11.
ಕಳಂಕವು ಹರಡುವುದನ್ನು ನಿಲ್ಲಿಸಲು ಫೀನೆಹಾಸನು ತೆಗೆದುಕೊಂಡ ಕ್ರಮವು ಯೋಗ್ಯವಾಗಿತ್ತು. ಆದರೆ ಬೇರೆಯವರ ಚಿಕ್ಕಪುಟ್ಟ ದೋಷಗಳ ಕುರಿತು ಅನಿಯಂತ್ರಿತ ರೋಷವನ್ನು ತೋರಿಸುವುದರ ಕುರಿತೇನು? ನಾವು ಆತುರದಿಂದ ಅಥವಾ ಸರಿಯಾದ ಕಾರಣವಿಲ್ಲದೆ ಕ್ರಿಯೆಗೈಯುವುದಾದರೆ, ನೀತಿಯ ಸಮರ್ಥಕರಾಗುವುದರ ಬದಲಿಗೆ ನಾವು ಅಸಹಿಷ್ಣು ವ್ಯಕ್ತಿಗಳು, ಅಂದರೆ ಬೇರೆಯವರ ಅಪರಿಪೂರ್ಣತೆಗಳನ್ನು ಕ್ಷಮಿಸದ ವ್ಯಕ್ತಿಗಳಾಗಿ ಪರಿಣಮಿಸುವೆವು. ಈ ಕುಳಿಯಲ್ಲಿ ಬೀಳದಿರಲು ನಮಗೆ ಯಾವುದು ಸಹಾಯಮಾಡುವುದು?
‘ಯೆಹೋವನು ನಿನ್ನ ಎಲ್ಲ ಅಪರಾಧಗಳನ್ನು ಕ್ಷಮಿಸುತ್ತಾನೆ’
“ಯೆಹೋವನು ಈರ್ಷ್ಯೆಯುಳ್ಳ (ಹುರುಪುಳ್ಳ) ದೇವರು; ಪ್ರತಿಸ್ಪರ್ಧೆಯನ್ನು ಸಹಿಸಿಕೊಳ್ಳದ ದೇವರು” ಆಗಿದ್ದಾನೆ. (ವಿಮೋಚನಕಾಂಡ 20:5, NW ಪಾದಟಿಪ್ಪಣಿ) ಸೃಷ್ಟಿಕರ್ತನೋಪಾದಿ ಆತನಿಗೆ ನಮ್ಮ ಅನನ್ಯ ಭಕ್ತಿಯನ್ನು ಕೇಳಿಕೊಳ್ಳುವ ಪೂರ್ಣ ಹಕ್ಕಿದೆ. (ಪ್ರಕಟನೆ 4:11) ಆದರೂ ಯೆಹೋವನು ಮಾನವರ ಬಲಹೀನತೆಗಳ ಕುರಿತು ಸಹಿಷ್ಣುತೆಯನ್ನು ತೋರಿಸುತ್ತಾನೆ. ಆದುದರಿಂದಲೇ ಆತನ ಕುರಿತಾಗಿ ಕೀರ್ತನೆಗಾರನಾದ ದಾವೀದನು ಹಾಡಿದ್ದು: “ಯೆಹೋವನು ಕನಿಕರವೂ ದಯೆಯೂ ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು. ಆತನು ಯಾವಾಗಲೂ ತಪ್ಪುಹುಡುಕುವವನಲ್ಲ; . . . ಆತನು ನಮ್ಮ ಪಾಪಗಳಿಗೆ ಸರಿಯಾಗಿ ನಮ್ಮನ್ನು ಶಿಕ್ಷಿಸಲಿಲ್ಲ; ನಮ್ಮ ಅಪರಾಧಗಳಿಗೆ ತಕ್ಕಂತೆ ದಂಡಿಸಲಿಲ್ಲ.” ಹೌದು, ನಾವು ಪಶ್ಚಾತ್ತಾಪಪಡುವುದಾದರೆ, ದೇವರು ‘ನಮ್ಮ ಎಲ್ಲಾ ಅಪರಾಧಗಳನ್ನು ಕ್ಷಮಿಸುವವನಾಗಿದ್ದಾನೆ.’—ಕೀರ್ತನೆ 103:3, 8-10.
ಯೆಹೋವನು ಮನುಷ್ಯರ ಪಾಪಪೂರ್ಣ ಸ್ವಭಾವವನ್ನು ಅರ್ಥಮಾಡಿಕೊಳ್ಳಬಲ್ಲನು. ಆದುದರಿಂದಲೇ, ಯೆಹೋವನು ಪಶ್ಚಾತ್ತಾಪಿ ತಪ್ಪಿತಸ್ಥರ ‘ತಪ್ಪುಹುಡುಕುತ್ತಾ’ ಇರುವುದಿಲ್ಲ. (ಕೀರ್ತನೆ 51:5; ರೋಮಾಪುರ 5:12) ವಾಸ್ತವದಲ್ಲಿ ಪಾಪ ಮತ್ತು ಅಪರಿಪೂರ್ಣತೆಯನ್ನೇ ಕಿತ್ತೊಗೆಯುವುದು ಆತನ ಉದ್ದೇಶವಾಗಿದೆ. ಆ ಉದ್ದೇಶವನ್ನು ಪೂರ್ಣಮಟ್ಟಿಗೆ ಪೂರೈಸುವ ವರೆಗೆ, ದೇವರು ‘ನಮ್ಮ ಅಪರಾಧಗಳಿಗೆ ತಕ್ಕಂತೆ ನಮ್ಮನ್ನು ದಂಡಿಸುವ’ ಬದಲು, ಯೇಸು ಕ್ರಿಸ್ತನ ಪ್ರಾಯಶ್ಚಿತ್ತ ಯಜ್ಞದ ಆಧಾರದ ಮೇಲೆ ದಯಾಪೂರ್ವಕವಾಗಿ ಕ್ಷಮೆಯನ್ನು ಕೊಡುತ್ತಾನೆ. ಸೂಕ್ತವಾಗಿರುವಾಗಲೆಲ್ಲ ಯೆಹೋವನು ನಮಗೆ ಕರುಣೆಯನ್ನು ತೋರಿಸದಿರುತ್ತಿದ್ದಲ್ಲಿ, ನಮ್ಮಲ್ಲಿ ಒಬ್ಬ ವ್ಯಕ್ತಿಯೂ ಪಾರಾಗಲು ಯೋಗ್ಯರಾಗಿ ಎಣಿಸಲ್ಪಡುತ್ತಿರಲಿಲ್ಲ. (ಕೀರ್ತನೆ 130:3) ಯಥೋಚಿತವಾಗಿ ಅನನ್ಯ ಭಕ್ತಿಯನ್ನು ಕೇಳಿಕೊಳ್ಳುವ ನಮ್ಮ ಸ್ವರ್ಗೀಯ ತಂದೆಯು, ಒಬ್ಬ ಕರುಣಾಭರಿತ ದೇವರಾಗಿರುವುದರಿಂದ ನಾವೆಷ್ಟು ಆಭಾರಿಗಳಾಗಿರಬಲ್ಲೆವು!
ಸಮತೋಲನವು ಅಗತ್ಯ
ಅಪರಿಪೂರ್ಣ ಮಾನವರೊಂದಿಗೆ ವ್ಯವಹರಿಸುವಾಗ ಸ್ವತಃ ವಿಶ್ವದ ಪರಮಾಧಿಕಾರಿ ಪ್ರಭುವೇ ಸಹಿಷ್ಣುತೆಯನ್ನು ತೋರಿಸುವಾಗ, ನಾವು ಸಹ ಅದನ್ನೇ ಮಾಡಬೇಕಲ್ಲವೇ? ಸಹಿಷ್ಣುತೆಯನ್ನು, “ಬೇರೆಯವರ ಅಭಿಪ್ರಾಯಗಳು ಮತ್ತು ಆಚಾರಗಳನ್ನು ತಾಳ್ಮೆಯಿಂದ ಸಹಿಸಿಕೊಳ್ಳುವ ಪ್ರವೃತ್ತಿ” ಎಂದು ಅರ್ಥನಿರೂಪಿಸಲಾಗಿದೆ. ವೈಯಕ್ತಿಕವಾಗಿ ನಮ್ಮಲ್ಲಿ ಈ ಮನೋವೃತ್ತಿಯಿದೆಯೊ? ಅಂದರೆ ಬೇರೆಯವರು, ಗಂಭೀರವಾದ ಪಾಪವಾಗಿರದೇ ಬಹುಶಃ ಕೇವಲ ಅನುಚಿತವಾದ ಮಾತನ್ನಾಡುವಾಗ ಅಥವಾ ಏನನ್ನೋ ಮಾಡುವಾಗ ತಾಳ್ಮೆ ಮತ್ತು ಸಹನೆಯನ್ನು ತೋರಿಸುವ ಪ್ರವೃತ್ತಿ ನಮಗಿದೆಯೊ?
ಆದರೆ ನಾವು ವಿಪರೀತವಾಗಿ ಸಹಿಷ್ಣುತೆಯುಳ್ಳವರೂ ಆಗಿರಬಾರದು. ದೃಷ್ಟಾಂತಕ್ಕಾಗಿ, ಚಿಕ್ಕ ಹುಡುಗ ಹುಡುಗಿಯರ ಮೇಲೆ ಸತತವಾಗಿ ಲೈಂಗಿಕ ಅತ್ಯಾಚಾರವೆಸಗುವ ದುರಾಚಾರಿ ಪಾದ್ರಿಗಳನ್ನು, ಧಾರ್ಮಿಕ ಅಧಿಕಾರಿಗಳು ಸಹಿಸಿಕೊಳ್ಳುವುದರಿಂದ ಭಯಂಕರವಾದ ಹಾನಿಯಾಗುತ್ತದೆ. “ಮಕ್ಕಳೊಂದಿಗೆ ಏನಾಗಿದೆಯೊ ಅದು ಬರಿಯ ಪಾಪದ ಸಂದರ್ಭಗಳು ಎಂದು ಪರಿಗಣಿಸುತ್ತಾ, ಚರ್ಚ್ ಅಧಿಕಾರಿಗಳು ಆ ತಪ್ಪಿತಸ್ಥ ಪಾದ್ರಿಯನ್ನು ಬೇರೊಂದು ಸ್ಥಳಕ್ಕೆ ವರ್ಗಾಯಿಸುತ್ತಾರೆ ಅಷ್ಟೆ” ಎಂದು ಐರ್ಲೆಂಡ್ನ ಒಬ್ಬ ವರದಿಗಾರನು ಹೇಳಿದನು.
ಅಂಥ ವ್ಯಕ್ತಿಯನ್ನು ಕೇವಲ ಇನ್ನೊಂದು ಸ್ಥಳಕ್ಕೆ ವರ್ಗಾಯಿಸುವುದು, ಯೋಗ್ಯವಾದ ಸಹಿಷ್ಣುತೆಯ ಉದಾಹರಣೆಯಾಗಿದೆಯೊ? ಖಂಡಿತವಾಗಿಯೂ ಇಲ್ಲ! ಇದನ್ನು ಊಹಿಸಿಕೊಳ್ಳಿ: ಒಬ್ಬ ಬೇಜವಾಬ್ದಾರಿ ಶಸ್ತ್ರಚಿಕಿತ್ಸಕನು ತನ್ನ ರೋಗಿಗಳ ಜೀವವನ್ನು ತೆಗೆಯುತ್ತಿರುವುದಾದರೆ ಅಥವಾ ಅವರನ್ನು ಅಂಗವಿಕಲಗೊಳಿಸುತ್ತಿದ್ದರೆ, ಅವನನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ವರ್ಗಾಯಿಸುತ್ತಾ, ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾ ಇರುವಂತೆ ಮೆಡಿಕಲ್ ಬೋರ್ಡ್ನ ಅಧಿಕಾರಿಗಳು ಅನುಮತಿಸುತ್ತಾರೆ. ಇದು ಒಂದು ರೀತಿಯ “ಸಹಿಷ್ಣುತೆ” ಆಗಿದ್ದರೂ, ಅದು ತಪ್ಪಾದ ರೀತಿಯ, ವೃತ್ತಿಸಂಬಂಧಿತ ನಿಷ್ಠೆಯಿಂದಾಗಿ ಫಲಿಸುತ್ತದೆ. ಆದರೆ ಆ ನಿರ್ಲಕ್ಷ್ಯ ಅಥವಾ ದಂಡನಾರ್ಹ ಆಚರಣೆಗಳಿಂದಾಗಿ ತಮ್ಮ ಜೀವಗಳನ್ನು ಕಳೆದುಕೊಂಡ ಇಲ್ಲವೇ ಪ್ರತಿಕೂಲವಾಗಿ ಬಾಧಿಸಲ್ಪಟ್ಟವರ ಕುರಿತಾಗಿ ಏನು?
ತೀರ ಕಡಿಮೆ ಸಹಿಷ್ಣುತೆಯನ್ನು ತೋರಿಸುವ ಅಪಾಯವೂ ಇದೆ. ಯೇಸು ಭೂಮಿಯಲ್ಲಿದ್ದಾಗ, ಹಠೋತ್ಸಾಹಿಗಳು (ಸೆಲಟ್ಸ್) ಎಂದು ಪ್ರಸಿದ್ಧರಾಗಿದ್ದ ಕೆಲವು ಯೆಹೂದ್ಯರಿದ್ದರು. ಇವರು ತಮ್ಮ ಸ್ವಂತ ಚಟುವಟಿಕೆಗಳನ್ನು ಸಮರ್ಥಿಸುವ ಪ್ರಯತ್ನದಲ್ಲಿ ಫೀನೆಹಾಸನ ಮಾದರಿಯನ್ನು ತಪ್ಪಾದ ರೀತಿಯಲ್ಲಿ ಉಪಯೋಗಿಸಲು ಪ್ರಯತ್ನಿಸಿದರು. “ಉತ್ಸವಗಳು ಮತ್ತು ತದ್ರೀತಿಯ ಸಂದರ್ಭಗಳಲ್ಲಿ ಯೆರೂಸಲೇಮಿನಲ್ಲಿದ್ದ ಜನಸಮೂಹಗಳಲ್ಲಿ ಬೆರೆತು, ತಮ್ಮ ಶತ್ರುಗಳನ್ನು ಹಠಾತ್ತಾಗಿ ಕತ್ತಿಗಳಿಂದ ತಿವಿಯುವುದು,” ಈ ಹಠೋತ್ಸಾಹಿಗಳಲ್ಲಿ ಕೆಲವರು ಗೈಯುತ್ತಿದ್ದ ವಿಪರೀತ ಕೃತ್ಯಗಳಲ್ಲಿ ಒಂದಾಗಿತ್ತು.
ನಾವು ಕ್ರೈಸ್ತರಾಗಿರುವುದರಿಂದ, ಆ ಹಠೋತ್ಸಾಹಿಗಳಂತೆ, ನಮ್ಮನ್ನು ಅಸಂತೋಷಪಡಿಸುವ ಜನರ ಮೇಲೆ ಶಾರೀರಿಕ ಆಕ್ರಮಣವನ್ನು ಮಾಡುವಷ್ಟರ ಮಟ್ಟಿಗೆ ನಾವು ಮುಂದುವರಿಯಲಿಕ್ಕಿಲ್ಲ. ಆದರೆ ನಿರ್ದಿಷ್ಟ ಮಟ್ಟದ ಅಸಹಿಷ್ಣುತೆಯು, ನಾವು ಮೆಚ್ಚದಂಥ ವ್ಯಕ್ತಿಗಳ ಮೇಲೆ ಬೇರೆ ವಿಧಗಳಲ್ಲಿ ಆಕ್ರಮಣ ಮಾಡುವಂತೆ, ಅಂದರೆ ಬಹುಶಃ ಅವರನ್ನು ನಿಂದಿಸುತ್ತಾ ಅವರ ಬಗ್ಗೆ ಎಲ್ಲರೊಂದಿಗೆ ದೂಷಣೀಯವಾಗಿ ಮಾತಾಡುವಂತೆ ನಡೆಸುತ್ತದೊ? ನಾವು ನಿಜವಾಗಿಯೂ ಸಹಿಷ್ಣುತೆಯುಳ್ಳವರಾಗಿರುವಲ್ಲಿ, ಕೆಡುಕನ್ನುಂಟುಮಾಡುವ ಅಂತಹ ಮಾತುಕತೆಯನ್ನು ಮಾಡದಿರುವೆವು.
ಅಸಹಿಷ್ಣು ಸ್ವಭಾವವನ್ನು ತೋರಿಸಿದ ಇನ್ನೊಂದು ಗುಂಪು, ಪ್ರಥಮ ಶತಮಾನದ ಫರಿಸಾಯರಾಗಿದ್ದರು. ಅವರು ಯಾವಾಗಲೂ ಬೇರೆಯವರನ್ನು ಖಂಡಿಸುತ್ತಿದ್ದರು, ಮತ್ತು ಮನುಷ್ಯರ ಅಪರಿಪೂರ್ಣತೆಗಳನ್ನೂ ಕ್ಷಮಿಸುತ್ತಿರಲಿಲ್ಲ. ಆ ಅಹಂಕಾರಿ ಫರಿಸಾಯರು, ಸಾಮಾನ್ಯ ಜನರನ್ನು ತುಂಬ ಕೀಳಾಗಿ ನೋಡುತ್ತಿದ್ದರು. ಅವರನ್ನು ‘ಶಾಪಗ್ರಸ್ತ’ ಜನರೆಂದು ಹೀಯಾಳಿಸುತ್ತಿದ್ದರು. (ಯೋಹಾನ 7:49) ಆದುದರಿಂದ ಯೇಸು ಅಂಥ ಸ್ವನೀತಿವಂತ ಪುರುಷರನ್ನು ಹೀಗೆ ಟೀಕಿಸಿದ್ದು ಸರಿಯಾಗಿತ್ತು: “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಮರುಗ ಸೋಪು ಜೀರಿಗೆಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ, ಆದರೆ ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿರಿ. ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು.”—ಮತ್ತಾಯ 23:23.
ಈ ಹೇಳಿಕೆಯ ಮೂಲಕ, ಮೋಶೆಯ ಧರ್ಮಶಾಸ್ತ್ರವನ್ನು ಪಾಲಿಸುವುದು ಅಷ್ಟೊಂದು ಮಹತ್ವಪೂರ್ಣವಲ್ಲವೆಂದು ಯೇಸು ಹೇಳುತ್ತಿರಲಿಲ್ಲ. ಅದರ ಬದಲು, ಧರ್ಮಶಾಸ್ತ್ರದಲ್ಲಿರುವ ‘ಗೌರವವಾದ’ ಅಥವಾ ಹೆಚ್ಚು ಪ್ರಾಮುಖ್ಯ ಅಂಶಗಳು, ಅದನ್ನು ವಿವೇಚನೆ ಮತ್ತು ಕರುಣೆಯಿಂದ ಅನ್ವಯಿಸುವುದನ್ನು ಕೇಳಿಕೊಳ್ಳುತ್ತಿದ್ದವೆಂಬುದನ್ನು ಅವನು ತೋರಿಸುತ್ತಿದ್ದನು ಅಷ್ಟೇ. ಯೇಸು ಮತ್ತು ಅವನ ಶಿಷ್ಯರು, ಆ ಅಸಹಿಷ್ಣು ಸ್ವಭಾವದ ಫರಿಸಾಯರು ಮತ್ತು ಹಠೋತ್ಸಾಹಿಗಳಿಂದ ಎಷ್ಟು ಭಿನ್ನರಾಗಿ ಎದ್ದುಕಾಣುತ್ತಿದ್ದರು!
ಯೆಹೋವ ದೇವರಾಗಲಿ, ಯೇಸು ಕ್ರಿಸ್ತನಾಗಲಿ ಕೆಟ್ಟತನವನ್ನು ಮನ್ನಿಸುವುದಿಲ್ಲ. ಬೇಗನೆ, ‘ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸಲಾಗುವುದು.’ (2 ಥೆಸಲೊನೀಕ 1:6-10) ಆದರೆ ಯೇಸು, ನೀತಿಗಾಗಿ ಹುರುಪನ್ನು ತೋರಿಸುತ್ತಿರುವಾಗ, ಸರಿಯಾದದ್ದನ್ನು ಮಾಡಲು ಬಯಸುವವರೆಲ್ಲರ ಕಡೆಗೆ ತನ್ನ ಸ್ವರ್ಗೀಯ ತಂದೆಗಿರುವಂಥ ರೀತಿಯ ತಾಳ್ಮೆಭರಿತ, ಕರುಣಾಭರಿತ ಮತ್ತು ಪ್ರೀತಿಪರ ಚಿಂತೆಯನ್ನು ಪ್ರತಿಬಿಂಬಿಸಲು ಎಂದೂ ತಪ್ಪಿಬೀಳುವುದಿಲ್ಲ. (ಯೆಶಾಯ 42:1-3; ಮತ್ತಾಯ 11:28-30; 12:18-21) ಯೇಸು ನಮಗಾಗಿ ಎಷ್ಟೊಂದು ಒಳ್ಳೆಯ ಮಾದರಿಯನ್ನಿಟ್ಟನು!
ತಾಳ್ಮೆಯಿಂದ ಒಬ್ಬರನ್ನೊಬ್ಬರು ಸೈರಿಸಿಕೊಂಡು ಹೋಗಿರಿ
ಸರಿಯಾದದ್ದನ್ನು ಮಾಡುವುದರ ಕುರಿತು ನಮಗೆ ತುಂಬ ಹುರುಪಿರುವುದಾದರೂ, ಅಪೊಸ್ತಲ ಪೌಲನ ಸಲಹೆಯನ್ನು ನಾವು ಅನ್ವಯಿಸೋಣ: “ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” (ಕೊಲೊಸ್ಸೆ 3:13; ಮತ್ತಾಯ 6:14, 15) ಸಹಿಷ್ಣುತೆಯು, ನಾವು ಈ ಅಪರಿಪೂರ್ಣ ಲೋಕದಲ್ಲಿ ಇನ್ನೊಬ್ಬ ವ್ಯಕ್ತಿಯ ಕೊರತೆಗಳು ಮತ್ತು ತಪ್ಪುಗಳನ್ನು ಸೈರಿಸಿಕೊಂಡು ಹೋಗುವುದನ್ನು ಅಪೇಕ್ಷಿಸುತ್ತದೆ. ಬೇರೆಯವರ ಕುರಿತು ನಾವು ಇಡುವ ನಿರೀಕ್ಷೆಗಳು ಸಮಂಜಸವಾಗಿರಬೇಕು.—ಫಿಲಿಪ್ಪಿ 4:5.
ಸಹಿಷ್ಣುತೆಯುಳ್ಳವರಾಗಿರುವುದರ ಅರ್ಥ, ತಪ್ಪನ್ನು ಸಮ್ಮತಿಸುವುದು ಅಥವಾ ತಪ್ಪುಗಳನ್ನು ನೋಡಿಯೂ ನೋಡದಂತೆ ಇರುವುದು ಆಗಿರುವುದಿಲ್ಲ. ಒಬ್ಬ ಜೊತೆ ವಿಶ್ವಾಸಿಯ ಯೋಚನೆಯಲ್ಲಿ ಅಥವಾ ನಡವಳಿಕೆಯಲ್ಲಿ ಯಾವುದೋ ಅಂಶವು, ಸ್ವಲ್ಪ ಮಟ್ಟಿಗೆ ಯೆಹೋವನ ಮಟ್ಟಗಳಿಗೆ ಹೊಂದಿಕೆಯಲ್ಲಿರದೇ ಇರಬಹುದು. ಅವನ ದಾರಿತಪ್ಪಿಹೋಗುವಿಕೆಯು ಅವನು ದೇವರಿಂದ ತಿರಸ್ಕರಿಸಲ್ಪಡಲು ನಡೆಸುವಷ್ಟು ಗಂಭೀರವಾದ ಹಂತಕ್ಕೆ ಇನ್ನೂ ತಲಪದೇ ಇರಬಹುದು. ಆದರೂ ಸ್ವಲ್ಪ ಹೊಂದಾಣಿಕೆಯು ಆವಶ್ಯಕವಾಗಿದೆಯೆಂದು ಸೂಚಿಸುವ ಒಂದು ಎಚ್ಚರಿಕೆಯ ಸಂಕೇತವನ್ನು ಅದು ಕೊಡುತ್ತಿರಬಹುದು. (ಆದಿಕಾಂಡ 4:6, 7) ಆಗ, ಆತ್ಮಿಕ ಅರ್ಹತೆಗಳುಳ್ಳ ವ್ಯಕ್ತಿಗಳು ಆ ತಪ್ಪಿತಸ್ಥನನ್ನು ಶಾಂತಭಾವದಿಂದ ತಿದ್ದಲು ಪ್ರಯತ್ನಿಸುವುದು ಎಷ್ಟೊಂದು ಪ್ರೀತಿಪರವಾಗಿರುವುದು! (ಗಲಾತ್ಯ 6:1) ಈ ಪ್ರಯತ್ನದಲ್ಲಿ ಯಶಸ್ವಿಯಾಗಲಿಕ್ಕಾದರೊ, ಟೀಕಾತ್ಮಕ ಮನೋಭಾವದಿಂದಲ್ಲ ಬದಲಾಗಿ ನಿಜವಾದ ಚಿಂತೆಯಿಂದಾಗಿ ಕ್ರಿಯೆಗೈಯುವುದು ಅತ್ಯಾವಶ್ಯಕ.
‘ಸಾತ್ವಿಕತ್ವದಿಂದ ಮತ್ತು ಮನೋಭೀತಿಯಿಂದ’
ಆದರೆ ನಮಗಿಂತಲೂ ಭಿನ್ನವಾದ ಧಾರ್ಮಿಕ ನಂಬಿಕೆಗಳುಳ್ಳ ಜನರ ಕಡೆಗೆ ತಾಳ್ಮೆಯನ್ನು ತೋರಿಸುವುದರ ಕುರಿತಾಗಿ ಏನು ಹೇಳಬಹುದು? 1831ರಲ್ಲಿ ಐರ್ಲೆಂಡಿನಲ್ಲಿ ಸ್ಥಾಪಿಸಲ್ಪಟ್ಟ ಎಲ್ಲ ರಾಷ್ಟ್ರೀಯ ಶಾಲೆಗಳಲ್ಲಿ “ಸಾಮಾನ್ಯ ಪಾಠ” ಎಂಬ ಪ್ರಕಟನೆಯನ್ನು ಅಂಟಿಸಲಾಗಿತ್ತು. ಅದರಲ್ಲಿ ಹೀಗೆ ತಿಳಿಸಲಾಗಿತ್ತು: “ಹಿಂಸಾತ್ಮಕ ರೀತಿಯಲ್ಲಿ ಜನರ ಮೇಲೆ ತನ್ನ ಧರ್ಮವನ್ನು ಹೊರಿಸುವುದು ಯೇಸು ಕ್ರಿಸ್ತನ ಉದ್ದೇಶವಾಗಿರಲಿಲ್ಲ. . . . ನಮ್ಮ ನೆರೆಹೊರೆಯವರೊಂದಿಗೆ ಜಗಳವಾಡುವುದು ಮತ್ತು ದೂಷಿಸುವುದು, ನಾವು ಸರಿಯಾದದ್ದನ್ನು ಮಾಡುತ್ತಿದ್ದೇವೆ ಮತ್ತು ಅವರು ತಪ್ಪು ಮಾಡುತ್ತಿದ್ದಾರೆಂಬುದನ್ನು ಅವರಿಗೆ ಮನಗಾಣಿಸುವ ರೀತಿಯಾಗಿರುವುದಿಲ್ಲ. ಬದಲಿಗೆ, ನಮ್ಮಲ್ಲಿ ಕ್ರೈಸ್ತ ಮನೋಭಾವವಿಲ್ಲವೆಂಬುದು ಅವರಿಗೆ ಇದರಿಂದ ಮನದಟ್ಟಾಗುವುದು ಹೆಚ್ಚು ಸಂಭವನೀಯ.”
ಜನರನ್ನು ದೇವರ ವಾಕ್ಯದ ಕಡೆಗೆ ಆಕರ್ಷಿಸುವಂಥ ರೀತಿಯಲ್ಲಿ ಯೇಸು ಕಲಿಸಿದನು ಮತ್ತು ವರ್ತಿಸಿದನು. ನಾವೂ ಹಾಗೆಯೇ ಮಾಡಬೇಕು. (ಮಾರ್ಕ 6:34; ಲೂಕ 4:22, 32; 1 ಪೇತ್ರ 2:21) ಅವನು ದೇವದತ್ತವಾದ ವಿಶೇಷ ಒಳನೋಟವಿದ್ದ ಪರಿಪೂರ್ಣ ವ್ಯಕ್ತಿಯಾಗಿದ್ದುದರಿಂದ, ಅವನಿಗೆ ಹೃದಯಗಳನ್ನು ಓದಸಾಧ್ಯವಿತ್ತು. ಆದುದರಿಂದ ಅಗತ್ಯವಿದ್ದಾಗಲೆಲ್ಲಾ, ಯೆಹೋವನ ಶತ್ರುಗಳನ್ನು ಯೇಸು ಕಟುವಾಗಿ ಖಂಡಿಸಲು ಶಕ್ತನಾಗಿದ್ದನು. (ಮತ್ತಾಯ 23:13-33) ಅವನು ಇದನ್ನು ಅಸಹಿಷ್ಣುತೆಯಿಂದಾಗಿ ಮಾಡಲಿಲ್ಲ.
ಆದರೆ ನಾವು ಯೇಸುವಂತಿಲ್ಲ. ನಮಗೆ ಹೃದಯಗಳನ್ನು ಓದುವ ಸಾಮರ್ಥ್ಯವಿಲ್ಲ. ಹೀಗಿರುವುದರಿಂದ ನಾವು ಅಪೊಸ್ತಲ ಪೇತ್ರನ ಈ ಸಲಹೆಯನ್ನು ಪಾಲಿಸಬೇಕು: “ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯಗಳಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತ್ವದಿಂದಲೂ ಮನೋಭೀತಿಯಿಂದಲೂ ಹೇಳಿರಿ.” (1 ಪೇತ್ರ 3:15) ಯೆಹೋವನ ಸೇವಕರೋಪಾದಿ ನಾವೇನನ್ನು ನಂಬುತ್ತೇವೊ ಅದನ್ನು ನಾವು ಸಮರ್ಥಿಸಬೇಕು, ಯಾಕೆಂದರೆ ಅದು ದೇವರ ವಾಕ್ಯದ ಮೇಲೆ ಬಲವಾಗಿ ಆಧಾರಿತವಾಗಿದೆ. ಆದರೆ ಇದನ್ನು ಮಾಡುವಾಗ, ಇತರರಿಗಾಗಿ ಮತ್ತು ಅವರು ಪ್ರಾಮಾಣಿಕವಾಗಿ ನಂಬುವ ನಂಬಿಕೆಗಳಿಗಾಗಿ ಗೌರವವನ್ನು ತೋರಿಸುವ ರೀತಿಯಲ್ಲಿ ಮಾಡಬೇಕು. ಪೌಲನು ಬರೆದುದು: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.”—ಕೊಲೊಸ್ಸೆ 4:6.
ತನ್ನ ಪ್ರಸಿದ್ಧವಾದ ಪರ್ವತ ಪ್ರಸಂಗದಲ್ಲಿ ಯೇಸು ಹೇಳಿದ್ದು: “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಆದುದರಿಂದ ನಾವು ತಾಳ್ಮೆಯಿಂದ ಒಬ್ಬರನ್ನೊಬ್ಬರು ಸೈರಿಸಿಕೊಂಡು, ನಾವು ಯಾರಿಗೆ ಸುವಾರ್ತೆಯನ್ನು ಸಾರುತ್ತೇವೊ ಅವರಿಗೆ ಗೌರವವನ್ನು ತೋರಿಸೋಣ. ನೀತಿಗಾಗಿ ನಮಗಿರುವ ಹುರುಪನ್ನು ಬೈಬಲ್ ಆಧಾರಿತ ಸಹಿಷ್ಣುತೆಯೊಂದಿಗೆ ಸಮತೋಲನಗೊಳಿಸುವ ಮೂಲಕ, ನಾವು ಯೆಹೋವನನ್ನು ಸಂತೋಷಪಡಿಸುವೆವು ಮತ್ತು ನಿಜವಾಗಿಯೂ ಸಹಿಷ್ಣು ಸ್ವಭಾವದವರಾಗಿರುವೆವು.
[ಪುಟ 23ರಲ್ಲಿರುವ ಚಿತ್ರ]
ಫರಿಸಾಯರ ಅಸಹಿಷ್ಣು ಸ್ವಭಾವದಿಂದ ದೂರವಿರಿ
[ಪುಟ 23ರಲ್ಲಿರುವ ಚಿತ್ರ]
ಯೇಸು ತನ್ನ ತಂದೆಯ ಸಹಿಷ್ಣು ಮನೋಭಾವವನ್ನು ಪ್ರತಿಬಿಂಬಿಸಿದನು. ನೀವೂ ಹೀಗೆ ಮಾಡುತ್ತೀರೊ?