ಹೊಂದಿಕೊಳ್ಳುವ, ಆದರೂ ದೈವಿಕ ಮಟ್ಟಗಳಿಗೆ ಬದ್ಧ
“ಸಹ್ಯ ಪುರುಷರು ಎಂದೂ ಮೂರ್ಖರಲ್ಲ, ಮತ್ತು ಮೂರ್ಖ ಪುರುಷರು ಎಂದೂ ಸಹ್ಯರಲ್ಲ” ಎಂದು ಒಂದು ಚೈನೀಸ್ ಗಾದೆ ಹೇಳುತ್ತದೆ. ಯೋಗ್ಯ ವರ್ತನಾ ಮಟ್ಟಗಳಿಗೆ ಒಂದು ಬದ್ಧತೆಯನ್ನು ಕೇಳಿಕೊಳ್ಳುತ್ತಾ, ಸಹನೆಯುಳ್ಳವರಾಗಿರುವುದು ಒಂದು ಪಂಥಾಹ್ವಾನವಾಗಿರುವುದರಿಂದ, ಈ ಗಾದೆಯಲ್ಲಿ ಸತ್ಯದ ಸುಳಿವಿಗಿಂತ ಹೆಚ್ಚಿನ ವಿಷಯವಿದೆ. ಆದರೆ ನಾವು ಯಾವ ಮಟ್ಟಗಳಿಗೆ ನಮ್ಮನ್ನು ಬದ್ಧರಾಗಿಸಿಕೊಳ್ಳಬೇಕು? ಆತನ ವಾಕ್ಯವಾದ ಪವಿತ್ರ ಬೈಬಲಿನಲ್ಲಿ ವಿವರಿಸಲ್ಪಟ್ಟಿರುವಂತೆ, ಮಾನವಕುಲದ ರಚಕನಿಂದ ಇಡಲ್ಪಟ್ಟಿರುವ ಮಟ್ಟಗಳನ್ನು ಅನುಸರಿಸುವುದು ತರ್ಕಬದ್ಧವಾಗಿರುವುದಿಲ್ಲವೋ? ದೇವರು ಸ್ವತಃ ತನ್ನ ಮಟ್ಟಗಳಿಗನುಸಾರವಾಗಿ ನಡೆಯುವುದರ ಬಗ್ಗೆ ಅತ್ಯುತ್ತಮವಾದ ಮಾದರಿಯನ್ನಿಡುತ್ತಾನೆ.
ಸೃಷ್ಟಿಕರ್ತನು—ನಮ್ಮ ಅತ್ಯಂತ ಮಹಾನ್ ಆದರ್ಶ
ಸರ್ವಶಕ್ತ ದೇವರಾದ ಯೆಹೋವನು, ಸಹನೆಯಲ್ಲಿ ಪರಿಪೂರ್ಣ ಸಮತೋಲನವುಳ್ಳವನಾಗಿದ್ದಾನೆ; ತೀರ ಹೆಚ್ಚು ಸಹನೆಯನ್ನು ಇಲ್ಲವೇ ತೀರ ಕಡಿಮೆ ಸಹನೆಯನ್ನು ತೋರಿಸುವುದಿಲ್ಲ. ಸಾವಿರಾರು ವರ್ಷಗಳಿಂದ, ಆತನು ತನ್ನ ನಾಮಕ್ಕೆ ಕಳಂಕ ತರುವ, ಮಾನವಕುಲವನ್ನು ಭ್ರಷ್ಟಗೊಳಿಸುವ, ಹಾಗೂ ಭೂಮಿಯನ್ನು ದುರುಪಯೋಗಿಸುವವರನ್ನು ಸಹಿಸಿಕೊಂಡಿದ್ದಾನೆ. ರೋಮಾಪುರ 9:22ರಲ್ಲಿ ದಾಖಲಿಸಲ್ಪಟ್ಟಿರುವಂತೆ, ಅಪೊಸ್ತಲ ಪೌಲನು ಬರೆದುದು, ದೇವರು “ತನ್ನ ಕೋಪಕ್ಕೆ ಗುರಿಯಾದ ನಾಶನಪಾತ್ರರನ್ನು ಬಹು ಸೈರಣೆಯಿಂದ [“ದೀರ್ಘಶಾಂತಿಯಿಂದ,” NW] ಸೈರಿಸಿಕೊಂಡಿದ್ದಾನೆ.” ದೇವರು ಏಕೆ ಅಷ್ಟು ದೀರ್ಘಕಾಲದ ವರೆಗೆ ಸಹನೆಯುಳ್ಳವನಾಗಿದ್ದಾನೆ? ಏಕೆಂದರೆ ಆತನ ಸಹನೆಗೆ ಒಂದು ಉದ್ದೇಶವಿದೆ.
ದೇವರು ಮಾನವಕುಲದೊಂದಿಗೆ ತಾಳ್ಮೆಯುಳ್ಳವನಾಗಿದ್ದಾನೆ, ಏಕೆಂದರೆ “ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿ”ದ್ದಾನೆ. (2 ಪೇತ್ರ 3:9) ಸೃಷ್ಟಿಕರ್ತನು ಮಾನವಕುಲಕ್ಕೆ ಬೈಬಲನ್ನು ನೀಡಿದ್ದಾನೆ ಮತ್ತು ತನ್ನ ವರ್ತನಾ ಮಟ್ಟಗಳನ್ನು ಎಲ್ಲೆಡೆಯೂ ತಿಳಿಯಪಡಿಸುವಂತೆ ತನ್ನ ಸೇವಕರಿಗೆ ಆಜ್ಞೆಯನ್ನಿತ್ತಿದ್ದಾನೆ. ಸತ್ಯ ಕ್ರೈಸ್ತರು ಈ ಮಟ್ಟಗಳಿಗೆ ಬದ್ಧರಾಗಿದ್ದಾರೆ. ಆದರೆ ಇದರ ಅರ್ಥ ದೇವರ ಸೇವಕರು ಎಲ್ಲ ಪರಿಸ್ಥಿತಿಗಳಲ್ಲಿ ಕಟ್ಟುನಿಟ್ಟಿನವರಾಗಿರಬೇಕೆಂದೋ?
ಅಚಲ, ಆದರೂ ಹೊಂದಿಕೊಳ್ಳುವ
ಅನಂತಕಾಲದ ಜೀವವನ್ನು ಹುಡುಕುತ್ತಿರುವವರನ್ನು ಯೇಸು ಕ್ರಿಸ್ತನು “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ” ಹೋಗುವಂತೆ ಉತ್ತೇಜಿಸಿದನು. ಆದರೆ ಇಕ್ಕಟ್ಟಾದ ಬಾಗಿಲಿನಿಂದ ಒಳಕ್ಕೆ ಹೋಗುವುದು, ಸಂಕುಚಿತ ಸ್ವಭಾವದ ವ್ಯಕ್ತಿಗಳಾಗಿರುವುದನ್ನು ಅರ್ಥೈಸುವುದಿಲ್ಲ. ನಾವು ಇತರರೊಂದಿಗಿರುವಾಗ, ದರ್ಪದವರಾಗಿರುವ ಅಥವಾ ಉದ್ಧಟತನದವರಾಗಿರುವ ಪ್ರವೃತ್ತಿಯುಳ್ಳವರಾಗಿರುವಲ್ಲಿ, ಈ ಪ್ರವೃತ್ತಿಯನ್ನು ನಾವು ನಿಗ್ರಹಿಸುವುದಾದರೆ, ಖಂಡಿತವಾಗಿಯೂ ಇದು ಪ್ರತಿಯೊಬ್ಬರ ಜೀವಿತವನ್ನು ಹೆಚ್ಚು ಆಹ್ಲಾದಕರವನ್ನಾಗಿ ಮಾಡುವುದು. ಆದರೆ ಹೇಗೆ?—ಮತ್ತಾಯ 7:13; 1 ಪೇತ್ರ 4:15.
ವಿಭಿನ್ನ ಹಿನ್ನೆಲೆಗಳ ಜನರೊಂದಿಗೆ ಕಳೆದ ಸಮಯವು, ಅವರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವುದಕ್ಕೆ ನಡೆಸಿತೆಂಬುದನ್ನು ವಿವರಿಸಿದ ಒಬ್ಬ ಗ್ರೀಕ್ ವಿದ್ಯಾರ್ಥಿನಿಯಾದ ಥಿಯೊಫೆನೊ ಹೇಳಿದ್ದು: “ನಮ್ಮ ಆಲೋಚನಾ ರೀತಿಯನ್ನು ಸ್ವೀಕರಿಸುವಂತೆ ಅವರನ್ನು ಬಲವಂತಮಾಡುವ ಬದಲು, ನಾವು ಅವರ ಆಲೋಚನಾ ರೀತಿಯನ್ನು ಸಮೀಪಿಸಲು ಪ್ರಯತ್ನಿಸುವುದು ಪ್ರಾಮುಖ್ಯವಾಗಿದೆ.” ಆದುದರಿಂದ, ಯಾರೋ ಒಬ್ಬರನ್ನು ಹೆಚ್ಚು ಉತ್ತಮವಾಗಿ ತಿಳಿದುಕೊಳ್ಳುವುದರಿಂದ ಅವನ ಆಹಾರದಲ್ಲಿನ ರುಚಿ ಹಾಗೂ ಅವನ ಪದೋಚ್ಛಾರಣೆಯು ಸಹ ನಾವೆಣಿಸಿದಷ್ಟು ಅಪರಿಚಿತವಾಗಿಲ್ಲವೆಂಬುದನ್ನು ನಾವು ಕಂಡುಹಿಡಿಯಬಹುದು. ಯಾವಾಗಲೂ ಹೆಚ್ಚಿನ ವಿಷಯವನ್ನು ಹೇಳುವ ಅಥವಾ ಅಂತಿಮ ಅಭಿಪ್ರಾಯವನ್ನು ಹೇಳುವುದಕ್ಕಾಗಿ ಹಠಹಿಡಿಯುವ ಬದಲು, ಅವನ ದೃಷ್ಟಿಕೋನಕ್ಕೆ ಕಿವಿಗೊಡುವ ಮೂಲಕ ನಾವು ಅನೇಕ ಪ್ರಯೋಜನಕರ ವಿಷಯಗಳನ್ನು ಕಲಿಯುತ್ತೇವೆ. ನಿಶ್ಚಯವಾಗಿಯೂ, ವಿಶಾಲ ಮನೋಭಾವದ ಜನರು ಜೀವಿತವನ್ನು ಹೆಚ್ಚು ಪ್ರತಿಫಲದಾಯಕವಾಗಿ ಕಂಡುಕೊಳ್ಳುತ್ತಾರೆ.
ವೈಯಕ್ತಿಕ ಅಭಿರುಚಿಯು ಒಳಗೂಡಿರುವಾಗಲೆಲ್ಲಾ, ನಾವು ಹೊಂದಿಕೊಂಡು, ಇತರರು ತಮ್ಮ ಸ್ವಂತ ಆಯ್ಕೆಯಲ್ಲಿ ಆನಂದಿಸುವಂತೆ ಅನುಮತಿಸಬೇಕು. ಆದರೆ ವರ್ತನೆಯು ನಮ್ಮ ಸೃಷ್ಟಿಕರ್ತನಿಗೆ ವಿಧೇಯತೆ ತೋರಿಸುವ ಒಂದು ವಿಷಯವಾಗಿರುವಾಗ, ನಾವು ಅಚಲರಾಗಿರಲೇಬೇಕು. ಸರ್ವಶಕ್ತನಾದ ದೇವರು ಎಲ್ಲ ರೀತಿಯ ವರ್ತನೆಯನ್ನು ಮನ್ನಿಸುವುದಿಲ್ಲ. ಇದನ್ನು ಆತನು ಗತಕಾಲದಲ್ಲಿ ತನ್ನ ಸೇವಕರೊಂದಿಗೆ ನಡೆಸಿದ ತನ್ನ ವ್ಯವಹಾರಗಳಲ್ಲಿ ತೋರಿಸಿದನು.
ತೀರ ಸಹನೆಯುಳ್ಳವರಾಗಿರುವುದರ ಪಾಶ
ಪುರಾತನ ಇಸ್ರಾಯೇಲ್ ರಾಷ್ಟ್ರದ ಮಹಾಯಾಜಕನಾದ ಏಲಿಯು, ವಿಪರೀತ ಸಹನೆಯುಳ್ಳವನಾಗಿರುವುದರ ಪಾಶದಲ್ಲಿ ಸಿಕ್ಕಿಬಿದ್ದ ಒಬ್ಬ ದೇವರ ಸೇವಕನಾಗಿದ್ದನು. ಇಸ್ರಾಯೇಲ್ಯರು ದೇವರ ನಿಯಮಗಳಿಗೆ ವಿಧೇಯತೆ ತೋರಿಸಲು ಒಪ್ಪಿಕೊಳ್ಳುತ್ತಾ, ಆತನೊಂದಿಗೆ ಒಂದು ಒಡಂಬಡಿಕೆಯ ಸಂಬಂಧದೊಳಕ್ಕೆ ಪ್ರವೇಶಿಸಿದ್ದರು. ಆದರೆ ಏಲಿಯ ಇಬ್ಬರು ಪುತ್ರರಾದ ಹೊಫ್ನಿ ಹಾಗೂ ಫೀನೆಹಾಸರು, ಲೋಭಿಗಳೂ ಅನೈತಿಕರೂ ಆಗಿದ್ದು, ಸರ್ವಶಕ್ತನೆಡೆಗೆ ಸಂಪೂರ್ಣ ಅಗೌರವವುಳ್ಳವರಾಗಿದ್ದರು. ಏಲಿಯು ದೇವರ ನಿಯಮವನ್ನು ಚೆನ್ನಾಗಿ ತಿಳಿದಿದ್ದನಾದರೂ, ಕೇವಲ ಸೌಮ್ಯ ಗದರಿಕೆಗಳನ್ನು ನೀಡಿದನು ಹಾಗೂ ತನ್ನ ಶಿಸ್ತುಪಡಿಸುವಿಕೆಯಲ್ಲಿ ಸಡಿಲು ವ್ಯಕ್ತಿಯಾಗಿದ್ದನು. ದೇವರು ದುಷ್ಟತನವನ್ನು ಸಹಿಸಿಕೊಳ್ಳುವನೆಂದು ಆಲೋಚಿಸುವ ತಪ್ಪನ್ನು ಅವನು ಮಾಡಿದನು. ಸೃಷ್ಟಿಕರ್ತನು ಬಲಹೀನತೆ ಹಾಗೂ ದುಷ್ಟತನದ ನಡುವೆ ಭೇದಮಾಡುತ್ತಾನೆ. ದೇವರ ನಿಯಮದ ಅವರ ಉದ್ದೇಶಪೂರ್ವಕ ಉಲ್ಲಂಘನೆಗಾಗಿ, ಏಲಿಯ ದುಷ್ಟ ಪುತ್ರರು ವಿಪರೀತವಾಗಿ ಶಿಕ್ಷಿಸಲ್ಪಟ್ಟರು—ಹಾಗೂ ಅದು ಯೋಗ್ಯವಾಗಿತ್ತು.—1 ಸಮುವೇಲ 2:12-17, 22-25; 3:11-14; 4:17.
ನಮ್ಮ ಕುಟುಂಬದಲ್ಲಿ ನಮ್ಮ ಮಕ್ಕಳ ವತಿಯಿಂದ ಪದೇ ಪದೇ ಮಾಡಲ್ಪಡುವ ತಪ್ಪಿಗೆ ಕಣ್ಣುಮುಚ್ಚಿಕೊಳ್ಳುವುದರ ಮೂಲಕ ವಿಪರೀತ ಸಹನೆಯುಳ್ಳವರಾಗಿರುವುದು ನಮಗೆ ಎಂಥ ಒಂದು ದುರಂತವಾಗಿರುವುದು! ಅವರನ್ನು “ಯೆಹೋವನ ಶಿಸ್ತು ಹಾಗೂ ಮಾನಸಿಕ ಕ್ರಮಪಡಿಸುವಿಕೆಯಲ್ಲಿ” (NW) ಬೆಳೆಸುವುದು ಎಷ್ಟೊಂದು ಉತ್ತಮ! ಅಂದರೆ, ನಾವು ಸ್ವತಃ ದೈವಿಕ ವರ್ತನಾ ಮಟ್ಟಗಳಿಗೆ ಅಂಟಿಕೊಳ್ಳಬೇಕು ಹಾಗೂ ಅವುಗಳನ್ನು ನಮ್ಮ ಮಕ್ಕಳಲ್ಲಿ ಅಚ್ಚೊತ್ತಬೇಕು.—ಎಫೆಸ 6:4.
ತದ್ರೀತಿಯಲ್ಲಿ, ಕ್ರೈಸ್ತ ಸಭೆಯೂ ದುಷ್ಟತನವನ್ನು ಸಹಿಸಿಕೊಳ್ಳದು. ಸದಸ್ಯನೊಬ್ಬನು ಘೋರ ತಪ್ಪನ್ನು ನಡೆಸಿ, ಪಶ್ಚಾತ್ತಾಪ ತೋರಿಸಲು ನಿರಾಕರಿಸುವಲ್ಲಿ, ಅವನು ಸಭೆಯಿಂದ ತೆಗೆದುಹಾಕಲ್ಪಡಬೇಕು. (1 ಕೊರಿಂಥ 5:9-13) ಆದರೂ, ಒಟ್ಟಿನಲ್ಲಿ ಸತ್ಯ ಕ್ರೈಸ್ತರು, ಕುಟುಂಬ ವೃತ್ತದ ಹಾಗೂ ಸಭೆಯ ಹೊರಗಿರುವ ಸಮಾಜವನ್ನು ಬದಲಾಯಿಸಲು ಪ್ರಯತ್ನಿಸುವುದಿಲ್ಲ.
ಯೆಹೋವನೊಂದಿಗೆ ಒಂದು ಬಲವಾದ ಸಂಬಂಧ
ಅಸಹನೆಯು ವ್ಯಾಕುಲತೆಯ ಒಂದು ವಾತಾವರಣದಲ್ಲಿ ಬೆಳೆಯುತ್ತದೆ. ಆದರೂ ನಮಗೆ ದೇವರೊಂದಿಗೆ ಒಂದು ಆಪ್ತ ಸಂಬಂಧವಿರುವಲ್ಲಿ, ಯೋಗ್ಯ ಸಮತೋಲನವನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯಮಾಡುವ ಭದ್ರತೆಯ ಒಂದು ಭಾವವನ್ನು ನಾವು ಅನುಭವಿಸುತ್ತೇವೆ. “ಯೆಹೋವನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವನು” ಎಂದು ನಾವು ಜ್ಞಾನೋಕ್ತಿ 18:10ರಲ್ಲಿ ಓದುತ್ತೇವೆ. ನಮ್ಮ ಮೇಲೆ ಅಥವಾ ನಮ್ಮ ಪ್ರೀತಿಪಾತ್ರರ ಮೇಲೆ ಬರಬಹುದಾದ ಯಾವುದೇ ಹಾನಿಯನ್ನು, ನಮ್ಮ ಸೃಷ್ಟಿಕರ್ತನು ತನ್ನ ತಕ್ಕ ಕಾಲದಲ್ಲಿ ನಿಶ್ಚಯವಾಗಿಯೂ ಪರಿಹರಿಸುವನು.
ದೇವರೊಂದಿಗಿನ ಒಂದು ಆಪ್ತ ಸಂಬಂಧದಿಂದ ಅತ್ಯಂತ ಮಹತ್ತಾದ ಪ್ರಯೋಜನವನ್ನು ಪಡೆದುಕೊಂಡಿದ್ದ ವ್ಯಕ್ತಿಯು ಅಪೊಸ್ತಲ ಪೌಲನಾಗಿದ್ದನು. ಸೌಲನೆಂದು ಜ್ಞಾತನಾಗಿದ್ದ ಒಬ್ಬ ಯೆಹೂದ್ಯನೋಪಾದಿ, ಅವನು ಯೇಸು ಕ್ರಿಸ್ತನ ಹಿಂಬಾಲಕರನ್ನು ಹಿಂಸಿಸಿದನು ಹಾಗೂ ರಕ್ತಪಾತದ ದೋಷಿಯಾಗಿದ್ದನು. ಆದರೆ ಸೌಲನು ತಾನೇ ಒಬ್ಬ ಕ್ರೈಸ್ತನಾಗಿ—ಅಪೊಸ್ತಲ ಪೌಲನಾಗಿ—ಅನಂತರ ಪೂರ್ಣ ಸಮಯದ ಸೌವಾರ್ತಿಕ ಕೆಲಸದಲ್ಲಿ ಒಳಗೂಡಿದನು. ಪೌಲನು “ಗ್ರೀಕರಿಗೂ ಇತರ ಜನಗಳಿಗೂ ಜ್ಞಾನಿಗಳಿಗೂ ಮೂಢರಿಗೂ”—ಎಲ್ಲ ಜನರಿಗೆ ಸಾರುವುದರಲ್ಲಿ ವಿಶಾಲ ಮನೋಭಾವವನ್ನು ಪ್ರದರ್ಶಿಸಿದನು.—ರೋಮಾಪುರ 1:14, 15; ಅ. ಕೃತ್ಯಗಳು 8:1-3.
ಅವನು ಹೇಗೆ ಬದಲಾಗಶಕ್ತನಾದನು? ಶಾಸ್ತ್ರಗಳ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವ ಮೂಲಕವಾಗಿ ಹಾಗೂ ನಿಷ್ಪಕ್ಷಪಾತಿಯಾದ ಸೃಷ್ಟಿಕರ್ತನಿಗಾಗಿ ಪ್ರೀತಿಯಲ್ಲಿ ಬೆಳೆಯುವ ಮೂಲಕವೇ. ದೇವರು ಪ್ರತಿಯೊಬ್ಬ ವ್ಯಕ್ತಿಯನ್ನು ಅವನ ಸಾಂಸ್ಕೃತಿಕ ಅಥವಾ ಕುಲಕ್ಕನುಸಾರವಾಗಿ ಅಲ್ಲ, ಬದಲಾಗಿ ಅವನು ಅಥವಾ ಅವಳು ಯಾವ ರೀತಿಯ ವ್ಯಕ್ತಿಗಳಾಗಿದ್ದಾರೆ ಹಾಗೂ ಅವರು ಮಾಡುವ ವಿಷಯಕ್ಕನುಸಾರ ತೀರ್ಪುಮಾಡುತ್ತಾನೆ ಎಂಬುದರ ವಿಷಯದಲ್ಲಿ ಆತನು ನ್ಯಾಯವುಳ್ಳವನೆಂಬುದನ್ನು ಪೌಲನು ತಿಳಿದುಕೊಂಡನು. ಹೌದು ದೇವರಿಗೆ ಕಾರ್ಯಗಳು ಪ್ರಾಮುಖ್ಯವಾಗಿವೆ. “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ” ಎಂಬುದನ್ನು ಪೇತ್ರನು ಗಮನಿಸಿದನು. (ಅ. ಕೃತ್ಯಗಳು 10:34, 35) ಸರ್ವಶಕ್ತನಾದ ದೇವರು ಪೂರ್ವಕಲ್ಪಿತ ಅಭಿಪ್ರಾಯವುಳ್ಳವನಾಗಿರುವುದಿಲ್ಲ. ಇದು, ತಮ್ಮ ಸ್ವಂತ ಉದ್ದೇಶಗಳಿಗಾಗಿ ಅಸಹನೆಯನ್ನು ಬುದ್ಧಿಪೂರ್ವಕವಾಗಿ ಬಳಸಿಕೊಳ್ಳಬಹುದಾದ ಲೋಕ ಮುಖಂಡರಲ್ಲಿ ಕೆಲವರಿಗಿಂತ ಭಿನ್ನವಾಗಿದೆ.
ಕಾಲಗಳು ಬದಲಾಗುತ್ತಿವೆ
ಇಂಗ್ಲೆಂಡಿನಲ್ಲಿರುವ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಜಾನ್ ಗ್ರೇ ಅವರಿಗನುಸಾರ, ಸಹನೆಯು “ದುರ್ಲಭವಾಗಿರುವ ಸದ್ಗುಣವಾಗಿದೆ.” ಆದರೆ ಇದು ಬದಲಾಗುವುದು. ದೈವಿಕ ವಿವೇಕದಿಂದ ಸಮತೋಲನಗೊಳಿಸಲ್ಪಟ್ಟ ಸಹನೆಯು ನೆಲೆಸುವುದು.
ದೇವರ ಸನ್ನಿಹಿತ ಹೊಸ ಲೋಕದಲ್ಲಿ, ಅಸಹನೆಯು ಇಲ್ಲವಾಗುವುದು. ಪೂರ್ವಕಲ್ಪಿತ ಅಭಿಪ್ರಾಯ ಹಾಗೂ ಅಂಧಾಭಿಮಾನದಂಥ ಅಸಹನೆಯ ವಿಪರೀತ ರೂಪಗಳು ಇಲ್ಲವಾಗುವವು. ಸಂಕುಚಿತ ಸ್ವಭಾವವು ಜೀವಿತದಿಂದ ಸಿಗುವ ಆನಂದವನ್ನು ಇನ್ನುಮುಂದೆ ಹೊಸಕಿಹಾಕದು. ಆಗ, ಕಾಶ್ಮೀರದ ಕಣಿವೆಯಲ್ಲಿ ಇರಸಾಧ್ಯವಿದ್ದುದಕ್ಕಿಂತಲೂ ಹೆಚ್ಚು ಶೋಭಾಯಮಾನವಾದ ಒಂದು ಪ್ರಮೋದವನವಿರುವುದು.—ಯೆಶಾಯ 65:17, 21-25.
ಆ ಹೊಸ ಲೋಕದಲ್ಲಿ ಜೀವಿಸಲಿಕ್ಕಾಗಿ ನೀವು ಮುನ್ನೋಡುತ್ತಿದ್ದೀರೋ? ಅದು ಎಂಥ ಒಂದು ಸುಯೋಗವೂ ಎಷ್ಟು ರೋಮಾಂಚಕವೂ ಆದ ವಿಷಯವಾಗಿರುವುದು!
[ಪುಟ 9 ರಲ್ಲಿರುವ ಚಿತ್ರ]
ಅಪೊಸ್ತಲ ಪೌಲನು ಯೋಗ್ಯವಾದ ಸಮತೋಲನವನ್ನು ತೋರಿಸಿದನು, ಏಕೆಂದರೆ ಅವನಿಗೆ ದೇವರೊಂದಿಗೆ ಒಂದು ಸಂಬಂಧವಿತ್ತು