ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w01 8/1 ಪು. 3-4
  • ನಂಬಲು ನಿಮಗಿರುವ ಹಕ್ಕು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನಂಬಲು ನಿಮಗಿರುವ ಹಕ್ಕು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಸತ್ಯಕ್ಕೆ ವಿರುದ್ಧವಾದ ನಂಬಿಕೆ
  • ನೀವೇನನ್ನು ನಂಬುತ್ತೀರೊ ಅದಕ್ಕೆ ಆಧಾರವೇನು?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
  • ನೀವು ಏನು ನಂಬುತ್ತೀರೆಂಬುದು ಪ್ರಾಮುಖ್ಯವಾಗಿದೆಯೋ?
    ಎಚ್ಚರ!—1995
  • ಯೆಹೋವನ ಸಾಕ್ಷಿಗಳು ತಮಗೆ ಬೇಕಾದ ಹಾಗೆ ಬೈಬಲನ್ನು ಬದಲಾಯಿಸಿಕೊಂಡಿದ್ದಾರಾ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ನಾವು ಕೋಟೆಗಳನ್ನು ಕೆಡವಿಹಾಕುತ್ತಿದ್ದೇವೆ
    2008 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2001
w01 8/1 ಪು. 3-4

ನಂಬಲು ನಿಮಗಿರುವ ಹಕ್ಕು

ನಿಮಗೆ ಏನು ಇಷ್ಟವಿದೆಯೊ ಅದನ್ನು ನಂಬುವ ಹಕ್ಕಿಗೆ ನೀವು ತುಂಬ ಬೆಲೆಕೊಡುತ್ತಿರಬಹುದು. ಇತರರೂ ಹಾಗೆ ಮಾಡುತ್ತಾರೆ. ಈ ಹಕ್ಕಿನಿಂದಾಗಿಯೇ 600 ಕೋಟಿ ಭೂನಿವಾಸಿಗಳು, ಬೆರಗುಗೊಳಿಸುವಷ್ಟರ ಮಟ್ಟಿಗೆ ಬೇರೆ ಬೇರೆ ನಂಬಿಕೆಗಳನ್ನು ಹುಟ್ಟಿಸಿದ್ದಾರೆ. ಸೃಷ್ಟಿಯಲ್ಲಿ ನಾವು ಕಂಡುಕೊಳ್ಳಬಹುದಾದ ಬಣ್ಣ, ಆಕಾರ, ರಚನೆ, ರುಚಿ, ಪರಿಮಳ ಮತ್ತು ಧ್ವನಿಯಲ್ಲಿನ ವೈವಿಧ್ಯದಂತೆಯೇ, ಬೇರೆ ಬೇರೆ ರೀತಿಯ ನಂಬಿಕೆಗಳು ಜೀವಿತದಲ್ಲಿ ಆಸಕ್ತಿ, ರೋಮಾಂಚನ ಮತ್ತು ಆನಂದವನ್ನು ಕೂಡಿಸುತ್ತವೆ. ನಿಜವಾಗಿಯೂ ಅಂಥ ವೈವಿಧ್ಯತೆಯು ಜೀವನದ ಸ್ವಾರಸ್ಯವಾಗಿರಬಲ್ಲದು.​—ಕೀರ್ತನೆ 104:24.

ಆದರೆ ಎಚ್ಚರಿಕೆಯೂ ಅತ್ಯಾವಶ್ಯಕ. ಏಕೆಂದರೆ ಕೆಲವೊಂದು ನಂಬಿಕೆಗಳು ಭಿನ್ನವಾಗಿರುತ್ತವೆ ಮಾತ್ರವಲ್ಲ, ಅವು ಅಪಾಯಕರವೂ ಆಗಿರಬಲ್ಲವು. ಉದಾಹರಣೆಗಾಗಿ, 20ನೆಯ ಶತಮಾನದಲ್ಲಿ, ಯೆಹೂದ್ಯರು ಮತ್ತು ಫ್ರೀಮೇಸನ್‌ ಸಂಸ್ಥೆಯವರು “ಕ್ರೈಸ್ತ ನಾಗರಿಕತೆಯನ್ನು ಭಂಗಗೊಳಿಸಿ, ತಮ್ಮ ಜಂಟಿ ಆಳ್ವಿಕೆಯ ಕೆಳಗೆ ಒಂದು ಲೋಕ ಸರಕಾರವನ್ನು ಕಟ್ಟುವ” ಯೋಜನೆಗಳನ್ನು ಮಾಡುತ್ತಿದ್ದಾರೆಂದು ಕೆಲವು ಜನರು ನಂಬಲಾರಂಭಿಸಿದರು. ಈ ನಂಬಿಕೆಯ ಒಂದು ಮೂಲವು, ಝಾಯನ್‌ನ ವಿದ್ಯಾವಂತ ಹಿರಿಯರ ರಾಜತಾಂತ್ರಿಕ ಪತ್ರಗಳು (ಇಂಗ್ಲಿಷ್‌) ಎಂಬ ಸೆಮೆಟಿಕ್‌ ಜನ-ವಿರೋಧಿ ಕಿರುಹೊತ್ತಗೆಯಾಗಿತ್ತು. ಈ ಕಿರುಹೊತ್ತಗೆಯ ಆರೋಪಕ್ಕನುಸಾರ ಆ ಯೋಜನೆಗಳಲ್ಲಿ, ವಿಪರೀತವಾದ ತೆರಿಗೆಯ ಸಮರ್ಥನೆ, ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಒತ್ತಾಸೆ, ‘ಅನ್ಯರ ಐಶ್ವರ್ಯವು ಒಂದೇ ಏಟಿಗೆ ನಾಶವಾಗುವಂತೆ’ ದೈತ್ಯ ಏಕಸ್ವಾಮ್ಯತೆಗಳಿಗೆ ಪ್ರೋತ್ಸಾಹ ನೀಡುವುದು ಸೇರಿತ್ತು. ‘ಅನ್ಯರನ್ನು ಯೋಚಿಸಲಸಾಧ್ಯವಾದ ಮೃಗಗಳಂತೆ ಮಾಡಲು’ ಶಿಕ್ಷಣ ವ್ಯವಸ್ಥೆಯನ್ನು ಸ್ವಾಧೀನದಲ್ಲಿಡುವುದು ಮತ್ತು ಯೆಹೂದಿ ಹಿರಿಯರು ‘ಎಲ್ಲ ವಿರೋಧಿಗಳನ್ನು ನಿರ್ಮೂಲಮಾಡುವ ಮೂಲಕ ಅವರನ್ನು ದಮನಮಾಡಲಿಕ್ಕಾಗಿ’ ರಾಜಧಾನಿ ನಗರಗಳನ್ನು ಪರಸ್ಪರ ಜೋಡಿಸಲು ಭೂಗತ ರೈಲ್ವೇ ವ್ಯವಸ್ಥೆಗಳನ್ನು ನಿರ್ಮಿಸುವುದು ಸಹ ಆ ಆರೋಪಗಳಲ್ಲಿ ಒಳಗೂಡಿತ್ತು.

ಖಂಡಿತವಾಗಿಯೂ ಇದೆಲ್ಲವೂ ಸುಳ್ಳಾಗಿತ್ತು. ಜನರಲ್ಲಿ ಸೆಮೆಟಿಕ್‌ ಜನ-ವಿರೋಧಿ ಭಾವನೆಗಳನ್ನು ಕೆರಳಿಸಲಿಕ್ಕಾಗಿಯೇ ಇವು ವಿನ್ಯಾಸಿಸಲ್ಪಟ್ಟಿದ್ದವು. ಬ್ರಿಟಿಷ್‌ ಮ್ಯೂಸಿಯಮ್‌ನ ಮಾರ್ಕ್‌ ಜೋನ್ಸ್‌ ಹೇಳುವುದು: ‘ಈ ಅಸಂಬದ್ಧ ಕಟ್ಟುಕಥೆಯು, ರಷ್ಯದಿಂದ ವಿದೇಶಕ್ಕೆ ಹಬ್ಬಿತು.’ ಅಲ್ಲಿ ಅದು ಮೊತ್ತಮೊದಲ ಬಾರಿ 1903ರಲ್ಲಿ ಒಂದು ವಾರ್ತಾಪತ್ರಿಕೆಯಲ್ಲಿ ಕಂಡುಬಂತು. ಅದು 1920ರ ಮೇ 8ರಂದು, ಲಂಡನ್‌ನ ದ ಟೈಮ್ಸ್‌ ವಾರ್ತಾಪತ್ರಿಕೆಯನ್ನು ತಲಪಿತು. ಆದರೆ ಇದಾದ ಒಂದು ವರ್ಷಕ್ಕಿಂತಲೂ ಹೆಚ್ಚು ಸಮಯದ ನಂತರ, ದ ಟೈಮ್ಸ್‌ ವಾರ್ತಾಪತ್ರಿಕೆಯು, ಆ ಡಾಕ್ಯುಮೆಂಟ್‌ ಒಂದು ಮೋಸವಾಗಿತ್ತೆಂದು ಬಯಲುಪಡಿಸಿತು. ಆದರೆ ಅಷ್ಟರೊಳಗೆ ಹಾನಿಯಾಗಿಬಿಟ್ಟಿತ್ತು. ‘ಇಂಥ ಸುಳ್ಳುಗಳನ್ನು ದಮನಮಾಡುವುದು ತುಂಬ ಕಷ್ಟ,’ ಎಂದು ಜೋನ್ಸ್‌ ಹೇಳುತ್ತಾರೆ. ಜನರು ಅವುಗಳನ್ನು ನಂಬಿಬಿಟ್ಟರೆ, ಅವು ತುಂಬ ದ್ವೇಷಭರಿತ, ವಿಷಕಾರಿ ಹಾಗೂ ಅಪಾಯಕಾರಿ ನಂಬಿಕೆಗಳನ್ನು ಉತ್ಪಾದಿಸಬಲ್ಲವು. ಮತ್ತು 20ನೆಯ ಶತಮಾನದ ಇತಿಹಾಸವು ತೋರಿಸಿರುವಂತೆ, ಅನೇಕವೇಳೆ ಅವುಗಳಿಂದ ವಿಪತ್ಕಾರಕ ಫಲಿತಾಂಶಗಳು ಹೊರಬರುತ್ತವೆ.​—ಜ್ಞಾನೋಕ್ತಿ 6:​16-19.

ಸತ್ಯಕ್ಕೆ ವಿರುದ್ಧವಾದ ನಂಬಿಕೆ

ಯಾರಾದರೂ ಆ ರೀತಿಯಲ್ಲಿ ಬೇಕುಬೇಕೆಂದೇ ಸುಳ್ಳುಗಳನ್ನು ಹೇಳದಿದ್ದರೂ ತಪ್ಪಾದ ನಂಬಿಕೆಗಳು ಹುಟ್ಟಿಕೊಳ್ಳಬಲ್ಲವೆಂಬುದು ನಿಜ. ಕೆಲವೊಮ್ಮೆ, ನಾವೇ ಕೆಲವೊಂದು ವಿಷಯಗಳನ್ನು ತಪ್ಪರ್ಥಮಾಡಿಕೊಳ್ಳುತ್ತೇವೆ. ಎಷ್ಟೋ ಜನರು, ಅವರು ಸರಿಯೆಂದು ನಂಬಿದಂಥ ವಿಷಯವನ್ನು ಮಾಡುತ್ತಾ, ಅಕಾಲಿಕವಾಗಿ ಸಾವನ್ನಪ್ಪಿದ್ದಾರಲ್ಲವೇ? ಇನ್ನೊಂದು ಕಡೆ, ಕೆಲವೊಮ್ಮೆ ಸ್ವತಃ ನಾವು ಒಂದು ವಿಚಾರವನ್ನು ನಂಬಲು ಬಯಸುವುದರಿಂದಲೇ ಅದನ್ನು ನಂಬುತ್ತೇವೆ. ವಿಜ್ಞಾನಿಗಳು ಸಹ “ತಮ್ಮ ಸ್ವಂತ ವಾದಗಳನ್ನೇ ಮೆಚ್ಚಲಾರಂಭಿಸುತ್ತಾರೆಂದು” ಒಬ್ಬ ಪ್ರೊಫೆಸರರು ಹೇಳುತ್ತಾರೆ. ಅವರ ಈ ನಂಬಿಕೆಯು, ಪೂರ್ವಾಗ್ರಹವಿಲ್ಲದೆ ವಿಷಯಗಳನ್ನು ಪರಿಶೀಲಿಸುವುದಕ್ಕೆ ಒಂದು ಅಡ್ಡಗೋಡೆಯಾಗಿಬಿಡುತ್ತದೆ. ಅನಂತರ ಅವರು ಜೀವನಪೂರ್ತಿ ಆ ತಪ್ಪು ನಂಬಿಕೆಗಳನ್ನು ಬೆಂಬಲಿಸಲಿಕ್ಕಾಗಿ ಆಧಾರಗಳನ್ನು ಹುಡುಕುತ್ತಾ ಇರುತ್ತಾರೆ.​—ಯೆರೆಮೀಯ 17:9.

ಬಹು ದೊಡ್ಡ ವಿರೋಧೋಕ್ತಿಗಳಿರುವ ಧಾರ್ಮಿಕ ನಂಬಿಕೆಗಳ ವಿಷಯದಲ್ಲೂ ಹೀಗೆಯೇ ಸಂಭವಿಸಿದೆ. (1 ತಿಮೊಥೆಯ 4:1; 2 ತಿಮೊಥೆಯ 4:​3, 4) ಒಬ್ಬ ಮನುಷ್ಯನಿಗೆ ದೇವರಲ್ಲಿ ಬಲವಾದ ನಂಬಿಕೆಯಿರುತ್ತದೆ. ಆದರೆ ಇನ್ನೊಬ್ಬನು, ಮನುಷ್ಯನು “ಹುಚ್ಚು ಕಲ್ಪನೆಯಿಂದ ಧಾರ್ಮಿಕ ನಂಬಿಕೆಯನ್ನು ಹುಟ್ಟಿಸುತ್ತಾನೆ” ಎಂದು ಹೇಳುತ್ತಾನೆ. ಮರಣದ ನಂತರವೂ ಬದುಕಿ ಉಳಿಯುವ ಒಂದು ಅಮರ ಆತ್ಮವಿದೆ ಎಂದು ಒಬ್ಬನು ಹೇಳುತ್ತಿರುವಾಗ, ಮನುಷ್ಯನು ಸತ್ತಾಗ ವ್ಯಕ್ತಿಯ ಅಸ್ತಿತ್ವವೇ ಪೂರ್ತಿಯಾಗಿ ಮತ್ತು ಸಂಪೂರ್ಣವಾಗಿ ಕೊನೆಗೊಳ್ಳುತ್ತದೆಂದು ಇನ್ನೊಬ್ಬನು ನಂಬುತ್ತಾನೆ. ಪರಸ್ಪರ ವಿರುದ್ಧವಾಗಿರುವ ಇಂಥ ನಂಬಿಕೆಗಳೆಲ್ಲವೂ ಖಂಡಿತವಾಗಿಯೂ ಸತ್ಯವಾಗಿರಲಾರವು. ಆದುದರಿಂದ ನೀವೇನನ್ನು ನಂಬುತ್ತೀರೊ ಅದು ಕೇವಲ ನೀವು ಅದನ್ನು ನಂಬಲು ಬಯಸುವುದರಿಂದಲ್ಲ, ಬದಲಾಗಿ ವಾಸ್ತವದಲ್ಲಿ ಅದು ಸತ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದೇ ಬುದ್ಧಿವಂತಿಕೆಯಲ್ಲವೊ? (ಜ್ಞಾನೋಕ್ತಿ 1:5) ನೀವಿದನ್ನು ಹೇಗೆ ಮಾಡಬಲ್ಲಿರಿ? ಮುಂದಿನ ಲೇಖನವು ಈ ವಿಷಯವನ್ನು ಪರಿಶೀಲಿಸುವುದು.

[ಪುಟ 3ರಲ್ಲಿರುವ ಚಿತ್ರ]

“ಝಾಯನ್‌ನ ವಿದ್ಯಾವಂತ ಹಿರಿಯರ ರಾಜತಾಂತ್ರಿಕ ಪತ್ರಗಳನ್ನು” ಬಯಲುಪಡಿಸುವ 1921ರ ಲೇಖನ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ