ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w03 8/1 ಪು. 3-ಪು. 4
  • ಬಡವರು ಇನ್ನಷ್ಟು ಬಡವರಾಗುತ್ತಾರೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಡವರು ಇನ್ನಷ್ಟು ಬಡವರಾಗುತ್ತಾರೆ
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಬಡತನವು ಸದಾ ಇಲ್ಲಿರುವುದೇ?
  • ಬಡವರು ಇನ್ನೆಷ್ಟು ದೀರ್ಘ ಸಮಯ ಕಾಯಬೇಕಾದೀತು?
    ಕಾವಲಿನಬುರುಜು—1995
  • ಬಡತನ ನಿರ್ಮೂಲನಾ ಯತ್ನಗಳು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
  • ಬೇಗನೇ, ಯಾರೊಬ್ಬನೂ ಬಡವನಾಗಿರನು!
    ಕಾವಲಿನಬುರುಜು—1995
  • ಬಡತನ ಶಾಶ್ವತವಾದ ಪರಿಹಾರವನ್ನು ಕಂಡುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2003
w03 8/1 ಪು. 3-ಪು. 4

ಬಡವರು ಇನ್ನಷ್ಟು ಬಡವರಾಗುತ್ತಾರೆ

“ತನ್ನ ಸದಸ್ಯರಲ್ಲಿ ಅಧಿಕ ಪ್ರಮಾಣದಲ್ಲಿ ಬಡವರು ಮತ್ತು ನಿರ್ಗತಿಕರನ್ನು ಹೊಂದಿರುವ ಯಾವುದೇ ಸಮಾಜವು ನಿಜವಾಗಿ ಯಶಸ್ವಿದಾಯಕವಾಗಿಯೂ ಸಂತೋಷದಿಂದಿರಲೂ ಇರಸಾಧ್ಯವಿಲ್ಲ.”

ಅರ್ಥಶಾಸ್ತ್ರಜ್ಞರಾದ ಆ್ಯಡಮ್‌ ಸ್ಮಿತ್‌ 18ನೆಯ ಶತಮಾನದಲ್ಲಿ ಈ ಹೇಳಿಕೆಯನ್ನು ಮಾಡಿದರು. ಅವರ ಹೇಳಿಕೆಯ ನಿಜತ್ವವು ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು ಸುವ್ಯಕ್ತವಾಗಿದೆಯೆಂದು ಅನೇಕರು ಮನಗಂಡಿದ್ದಾರೆ. ಧನವಂತರ ಮತ್ತು ದರಿದ್ರರ ಮಧ್ಯೆ ಅಂತರವು ಇನ್ನಷ್ಟು ವಿಶಾಲವಾಗಿದೆ. ಫಿಲಿಪ್ಪೀನ್ಸ್‌ನಲ್ಲಿ ಮೂರನೇ ಒಂದು ಭಾಗದ ಜನತೆಯು ಪ್ರತಿ ದಿನ ಕೇವಲ 1 (U.S.) ಡಾಲರ್‌ಗಿಂತ ಕಡಿಮೆ ಹಣದಲ್ಲಿ ಜೀವಿಸುತ್ತದೆ​—ಆದರೆ ಶ್ರೀಮಂತ ದೇಶಗಳಲ್ಲಿ ಇದೇ ಮೊತ್ತವನ್ನು ಕೆಲವೇ ಕ್ಷಣಗಳಲ್ಲಿ ಸಂಪಾದಿಸಲಾಗತ್ತದೆ. “ಲೋಕದಲ್ಲಿರುವ 5 ಪ್ರತಿಶತ ಬಡವರ ಸಂಪಾದನೆಗಿಂತಲೂ 5 ಪ್ರತಿಶತ ಶ್ರೀಮಂತರ ವರಮಾನವು 114 ಪಟ್ಟು ಹೆಚ್ಚಾಗಿರುತ್ತದೆ,” ಎಂದು ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ವರದಿ 2002 ತಿಳಿಸುತ್ತದೆ.

ಕೆಲವರು ತುಲನಾತ್ಮಕವಾಗಿ ಐಷಾರಾಮದ ಜೀವನವನ್ನು ನಡೆಸುತ್ತಿರುವುದಾದರೆ, ಲಕ್ಷಾಂತರ ಜನರಾದರೋ ಸ್ಥಳ ಸಿಕ್ಕಿದ್ದಲ್ಲಿ ಜೋಪಡಿಗಳನ್ನು ಕಟ್ಟಿಕೊಂಡು ಜೀವಿಸುತ್ತಾರೆ. ಇತರರು ಅಷ್ಟು ಭಾಗ್ಯವಂತರೂ ಆಗಿರುವುದಿಲ್ಲ; ಇವರು ಪ್ರಾಯಶಃ, ಕೇವಲ ಒಂದು ರಟ್ಟು ಅಥವಾ ಪ್ಲಾಸ್ಟಿಕ್‌ ಅನ್ನು ಚಾಪೆಗಳಾಗಿ ಉಪಯೋಗಿಸುತ್ತಾ ಬೀದಿಗಳಲ್ಲಿ ಜೀವಿಸುತ್ತಾರೆ. ಅವರಲ್ಲಿ ಅನೇಕರು ಹೊಟ್ಟೆಪಾಡಿಗಾಗಿ ತಮ್ಮಿಂದ ಸಾಧ್ಯವಿರುವ ಯಾವುದೇ ಕೆಲಸವನ್ನು ಮಾಡಿಕೊಂಡು ಜೀವಿಸುತ್ತಾರೆ​—ಅದು ತಿಪ್ಪೆಯಲ್ಲಿ ತಿಂಡಿಯನ್ನು ಹುಡುಕಿ ತಿನ್ನುವುದು, ಭಾರವಾದ ಸರಕುಗಳನ್ನು ಸಾಗಿಸುವುದು, ಮಾರಬಹುದಾದ ಖಾಲಿ ಡಬ್ಬಗಳನ್ನು ಬಾಟಲಿಗಳನ್ನು ಅಥವಾ ಪೇಪರನ್ನು ತಳ್ಳುಬಂಡಿಗಳಲ್ಲಿ ಶೇಖರಿಸುವುದು ಮುಂತಾದ ಯಾವುದೇ ಕೆಲಸವಾಗಿರಬಹುದು.

ಬಡವರ ಮತ್ತು ಶ್ರೀಮಂತರ ಮಧ್ಯೆ ಅಸಮಾನತೆಗಳು ಕೇವಲ ಅಭಿವೃದ್ಧಿಶೀಲ ದೇಶಗಳಲ್ಲಿ ಮಾತ್ರವಲ್ಲ, ಬದಲಾಗಿ ವರ್ಲ್ಡ್‌ ಬ್ಯಾಂಕ್‌ ತಿಳಿಸುವಂತೆ, “‘ಬಡವರ ವಿವಿಕ್ತ ಪ್ರದೇಶಗಳು’ ಎಲ್ಲಾ ದೇಶಗಳಲ್ಲೂ ಸಾಮಾನ್ಯವಾಗಿವೆ.” ಬಾಂಗ್ಲಾದೇಶ್‌ನಿಂದ ಅಮೆರಿಕದ ವರೆಗಿರುವ ದೇಶಗಳಲ್ಲಿ, ಕೆಲವರು ಬಹಳ ಶ್ರೀಮಂತರಾಗಿದ್ದರೂ, ಸಾಕಷ್ಟು ಆಹಾರ ಮತ್ತು ಒಂದು ಮನೆಗಾಗಿ ಹೆಣಗಾಡುವವರು ಸಹ ಇದ್ದೇ ಇರುತ್ತಾರೆ. ಅಮೆರಿಕದಲ್ಲಿ ಬಡವರ ಮತ್ತು ಶ್ರೀಮಂತರ ಮಧ್ಯೆ ಬಿರುಕು ದೊಡ್ಡದಾಗುತ್ತಿದೆ ಎಂಬುದನ್ನು ಸೂಚಿಸಲಿಕ್ಕಾಗಿ ದ ನ್ಯೂ ಯಾರ್ಕ್‌ ಟೈಮ್ಸ್‌ ಪತ್ರಿಕೆಯು ಯು.ಎಸ್‌. ಸೆನ್ಸಸ್‌ ಇಲಾಖೆಯ 2001ರ ವರದಿಯನ್ನು ಉದ್ಧರಿಸಿತು. ಅದು ಹೇಳಿದ್ದು: “ಅಮೆರಿಕದ ಜನಸಂಖ್ಯೆಯಲ್ಲಿ ಅತಿ ಶ್ರೀಮಂತರಾಗಿರುವ 20 ಪ್ರತಿಶತ ಜನರು ಕಳೆದ ವರ್ಷ ಎಲ್ಲಾ ಮನೆವಾರ್ತೆಯ ವರಮಾನದಲ್ಲಿ 50 ಪ್ರತಿಶತವನ್ನು ಪಡೆದುಕೊಂಡಾಗ . . . ಅತಿ ಬಡವರಲ್ಲಿ 20 ಪ್ರತಿಶತ ಜನರು ಕೇವಲ 3.5 ಪ್ರತಿಶತ ವರಮಾನವನ್ನು ಪಡೆದುಕೊಂಡರು.” ಇತರ ಅನೇಕ ದೇಶಗಳಲ್ಲೂ ತದ್ರೀತಿಯ ಅಥವಾ ಇದಕ್ಕಿಂತಲೂ ಘೋರವಾದ ಪರಿಸ್ಥಿತಿಗಳಿರುತ್ತವೆ. ಲೋಕ ಜನಸಂಖ್ಯೆಯಲ್ಲಿ ಸುಮಾರು 57 ಪ್ರತಿಶತದಷ್ಟು ಜನರು ದಿನಕ್ಕೆ ಕೇವಲ 2 (U.S.) ಡಾಲರ್‌ಗಿಂತಲೂ ಕಡಿಮೆ ಹಣದಲ್ಲಿ ಜೀವಿಸುತ್ತಾರೆಂದು ವರ್ಲ್ಡ್‌ ಬ್ಯಾಂಕ್‌ನ ಒಂದು ವರದಿಯು ತಿಳಿಸಿತು.

ಇಸವಿ 2002ರಲ್ಲಿ, ಪರಿಸ್ಥಿತಿಯನ್ನು ಇನ್ನಷ್ಟು ಅವನತಿಗಿಳಿಸುವಂತೆ, ವ್ಯಾಪಾರ-ವಹಿವಾಟು ನಿರ್ವಾಹಕರು ಸಂದೇಹಾಸ್ಪದ ಪರಿಸ್ಥಿತಿಗಳ ಕೆಳಗೆ ಶ್ರೀಮಂತರಾದ ವರದಿಗಳ ಕುರಿತು ಕೇಳಿಸಿಕೊಂಡ ಕೋಟ್ಯಂತರ ಮಂದಿ ಕಳವಳಗೊಂಡರು. ಈ ಕಂಪೆನಿ ಅಧಿಕಾರಿಗಳು ನೇರವಾದ ಯಾವುದೇ ಅನ್ಯಾಯವನ್ನು ಮಾಡದಿದ್ದರೂ, ಫಾರ್ಚೂನ್‌ ಪತ್ರಿಕೆಯು ತಿಳಿಸಿದಂತೆ “ಮಹತ್ತಾದ ರೀತಿಯಲ್ಲಿ, ಅಸಾಮಾನ್ಯವಾಗಿ, ಅಸಭ್ಯವಾಗಿ ಶ್ರೀಮಂತರಾಗುತ್ತಿದ್ದಾರೆ” ಎಂದು ಅನೇಕರಿಗೆ ಅನಿಸಿತು. ಲೋಕದಲ್ಲಿ ಸಂಭವಿಸುತ್ತಿರುವ ಘಟನೆಗಳ ಬೆಳಕಿನಲ್ಲಿ ಇದನ್ನು ಯೋಚಿಸುವಾಗ, ಅನೇಕ ಮಂದಿ ಬಡತನದಲ್ಲಿ ಜೀವಿಸುತ್ತಿರುವಾಗ ಕೆಲವರು ಮಾತ್ರ ದೊಡ್ಡ ಮೊತ್ತದ ಅನಿರೀಕ್ಷಿತ ಐಶ್ವರ್ಯದಿಂದಿರುವುದು ನ್ಯಾಯಸಮ್ಮತವಾಗಿರಸಾಧ್ಯವಿದೆ ಎಂದು ಕೆಲವರು ಆಲೋಚಿಸುತ್ತಾರೆ; ಮತ್ತು ಕೆಲವರ ವಿಷಯದಲ್ಲಿ ಈ ಅನಿರೀಕ್ಷಿತ ಐಶ್ವರ್ಯವು ಕೋಟಿಗಟ್ಟಲೆ ಡಾಲರ್‌ಗಳಲ್ಲಿದೆ.

ಬಡತನವು ಸದಾ ಇಲ್ಲಿರುವುದೇ?

ಬಡವರ ದುಸ್ಥಿತಿಯ ಕುರಿತು ಯಾರೂ ಏನನ್ನೂ ಮಾಡಲು ಪ್ರಯತ್ನಿಸುತ್ತಿಲ್ಲ ಎಂದು ಹೇಳಲಾಗುವುದಿಲ್ಲ. ನಿಶ್ಚಯವಾಗಿಯೂ, ವಿಷಯಗಳ ಸುಧಾರಣೆಗಾಗಿ ಸದುದ್ದೇಶಗಳುಳ್ಳ ಸರ್ಕಾರೀ ಅಧಿಕಾರಿಗಳು ಮತ್ತು ಸಹಾಯಕ ಸಂಸ್ಥೆಗಳು ತಮ್ಮ ಯೋಜನೆಗಳನ್ನು ಮಂಡಿಸಿದ್ದಾರೆ. ಹಾಗಿದ್ದರೂ, ನಿಜಾಂಶಗಳು ನಿರುತ್ಸಾಹಕರವಾಗಿಯೇ ಉಳಿದಿವೆ. ಉದ್ಧಾರಕ ಕ್ರಮಗಳನ್ನು ತರಬಯಸುತ್ತಾ ಮಾಡಲ್ಪಟ್ಟ ಅನೇಕ ಉದಾತ್ತ ಪ್ರಯತ್ನಗಳ ಹೊರತೂ, “10, 20 ಮತ್ತು ಕೆಲವು ವಿದ್ಯಮಾನಗಳಲ್ಲಿ 30 ವರ್ಷಗಳಿಗೆ ಮುಂಚೆ ಇದ್ದ ಪರಿಸ್ಥಿತಿಗೆ ಹೋಲಿಸುವಾಗ ಅನೇಕ ದೇಶಗಳು ಈಗ ಹೆಚ್ಚು ಬಡತನಕ್ಕಿಳಿದಿವೆ,” ಎಂದು ಮಾನವ ಅಭಿವೃದ್ಧಿ ವರದಿ 2002 ಹೇಳುತ್ತದೆ.

ಇದು ಬಡವರನ್ನು ನಿರೀಕ್ಷಾಹೀನರನ್ನಾಗಿ ಮಾಡುತ್ತದೋ? ಸದ್ಯಕ್ಕೆ ನಿಮಗೆ ಸಹಾಯಮಾಡಸಾಧ್ಯವಿರುವ ಪ್ರಾಯೋಗಿಕ ವಿವೇಕವನ್ನು ಹಾಗೂ ನೀವು ನೆನಸದಿರಬಹುದಾದಂಥ ಪರಿಹಾರಗಳನ್ನು ಸಹ ಪರಿಗಣಿಸಲಿಕ್ಕಾಗಿ ಮುಂದಿನ ಲೇಖನವನ್ನು ಓದುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ