ಗಿಲ್ಯಡ್ ಪದವೀಧರರು “ಅದ್ಭುತಕರ ವಿಷಯಗಳನ್ನು” ಮಾತಾಡುವಂತೆ ಪಡೆದ ಉತ್ತೇಜನ
ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನ 115ನೇ ತರಗತಿಯ ಪದವಿಪ್ರಾಪ್ತಿ ಸಮಾರಂಭವು 2003ರ ಸೆಪ್ಟೆಂಬರ್ 13ರಂದು ನಡೆಯಿತು. 52 ದೇಶಗಳಿಂದ ಬಂದ 6,635 ಮಂದಿಯಿಂದ ಕೂಡಿದ್ದ ದೊಡ್ಡ ಗುಂಪು ಈ ಕಾರ್ಯಕ್ರಮಕ್ಕೆ ಹಾಜರಿತ್ತು.
ಹದಿನೇಳು ದೇಶಗಳ ಜನರಿಗೆ “ದೇವರ ಅದ್ಭುತಕರ ವಿಷಯಗಳನ್ನು” ಕೊಂಡೊಯ್ಯುವಂತೆ, ತರಗತಿಯ 48 ವಿದ್ಯಾರ್ಥಿಗಳಿಗೆ ಕೊಡಲ್ಪಟ್ಟ ಬೈಬಲ್ ಆಧಾರಿತ ಉತ್ತೇಜನವನ್ನು ಅವರು ಕೇಳಿಸಿಕೊಂಡರು. (ಅ. ಕೃತ್ಯಗಳು 2:11, NW) ಈ ದೇಶಗಳಲ್ಲಿಯೇ ಆ ಪದವೀಧರರು ತಮ್ಮ ಮಿಷನೆರಿ ಕೆಲಸವನ್ನು ಮುಂದುವರಿಸಿಕೊಂಡು ಹೋಗಲಿಕ್ಕಿದ್ದರು.
ಯೆಹೋವನ ಸಾಕ್ಷಿಗಳ ಆಡಳಿತ ಮಂಡಳಿಯ ಸದಸ್ಯರೂ ಪದವಿ ನೀಡುವ ಸಮಾರಂಭದಲ್ಲಿ ಅಧ್ಯಕ್ಷರಾಗಿ ಜವಾಬ್ದಾರಿ ಹೊತ್ತವರೂ ಆಗಿದ್ದ ಸ್ಟೀಫನ್ ಲೆಟ್ ತಮ್ಮ ಆರಂಭದ ಮಾತುಗಳಲ್ಲಿ ವಿದ್ಯಾರ್ಥಿಗಳಿಗೆ ಹೀಗೆ ನೆನಪು ಹುಟ್ಟಿಸಿದರು: “ನೀವು ನಿಮ್ಮ ನೇಮಿತ ಸ್ಥಳಗಳಿಗೆ ಹೋಗುವಾಗ, ಯಾವುದೇ ಸ್ಥಳಕ್ಕೆ ಹೋದರೂ ಯಾವುದೇ ಸನ್ನಿವೇಶಗಳನ್ನು ಎದುರಿಸಿದರೂ, ನಿಮ್ಮ ವಿರೋಧಿಗಳಿಗಿಂತ ನಿಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ.” ಸಹೋದರ ಲೆಟ್ ಅವರು ಎರಡನೆಯ ಅರಸುಗಳು ಪುಸ್ತಕದ 6ನೆಯ ಅಧ್ಯಾಯವನ್ನು ಉಪಯೋಗಿಸುತ್ತಾ, ವಿದ್ಯಾರ್ಥಿಗಳು “ದೇವರ ಅದ್ಭುತಕರ ವಿಷಯಗಳನ್ನು” ತಿಳಿಯಪಡಿಸುವಾಗ ಯೆಹೋವ ದೇವರ ಮತ್ತು ಅಸಂಖ್ಯಾತ ದೇವದೂತರ ಬೆಂಬಲದ ಮೇಲೆ ಆತುಕೊಳ್ಳುವಂತೆ ಅವರಿಗೆ ಜ್ಞಾಪಕ ಹುಟ್ಟಿಸಿದರು. (2 ಅರಸುಗಳು 6:15, 16) ಪ್ರಥಮ ಶತಮಾನದ ಕ್ರೈಸ್ತರು ತಮ್ಮ ಸಾರುವ ಮತ್ತು ಕಲಿಸುವ ಕೆಲಸದಲ್ಲಿ ವಿರೋಧವನ್ನು ಮತ್ತು ಉದಾಸೀನಭಾವವನ್ನು ಎದುರಿಸಿದರು, ಮತ್ತು ಇಂದು ಕ್ರೈಸ್ತ ಮಿಷನೆರಿಗಳು ಸಹ ತದ್ರೀತಿಯ ಸನ್ನಿವೇಶಗಳನ್ನು ಎದುರಿಸುತ್ತಾರೆ. ಆದರೂ, ಸ್ವರ್ಗದಿಂದ ಮತ್ತು ಯೆಹೋವನ ಐಹಿಕ ಸಂಸ್ಥೆಯಿಂದ ಸಿಗುವ ಬೆಂಬಲದ ಮೇಲೆ ಅವರು ಆತುಕೊಳ್ಳಸಾಧ್ಯವಿದೆ.—ಕೀರ್ತನೆ 34:7; ಮತ್ತಾಯ 24:45.
“ದೇವರ ಅದ್ಭುತಕರ ವಿಷಯಗಳನ್ನು” ಮಾತಾಡಿರಿ
ಅಧ್ಯಕ್ಷರ ಆರಂಭದ ಹೇಳಿಕೆಗಳ ಬಳಿಕ, ಯುನೈಟೆಡ್ ಸ್ಟೇಟ್ಸ್ ಬ್ರಾಂಚ್ ಕಮಿಟಿಯ ಹ್ಯಾರಲ್ಡ್ ಕಾರ್ಕರ್ನ್ ಎಂಬವರು “ವಾಸ್ತವಿಕ ನಿರೀಕ್ಷಣೆಗಳು—ಹರ್ಷಭರಿತ ಮತ್ತು ಯಶಸ್ವಿಕರ ಸೇವೆಯ ಕೀಲಿ ಕೈ” ಎಂಬ ಮುಖ್ಯ ವಿಷಯದ ಕುರಿತು ಮಾತಾಡಿದರು. ಜ್ಞಾನೋಕ್ತಿ 13:12 ತೋರಿಸುವಂತೆ, ಪೂರೈಸಲ್ಪಡದಿರುವ ನಿರೀಕ್ಷೆಗಳು ಆಶಾಭಂಗಕ್ಕೆ ನಡೆಸಸಾಧ್ಯವಿದೆ ಎಂದು ಸಹೋದರ ಕಾರ್ಕರ್ನ್ ತಿಳಿಸಿದರು. ಆದರೂ, ಅನೇಕವೇಳೆ ಕೈಗೂಡದಂಥ ಅವಾಸ್ತವಿಕ ನಿರೀಕ್ಷಣೆಗಳನ್ನು ಇಟ್ಟುಕೊಳ್ಳುವುದರಿಂದಲೇ ಆಶಾಭಂಗವು ಉಂಟಾಗುತ್ತದೆ. ಪದವೀಧರರು ಸ್ವತಃ ತಮ್ಮ ಕುರಿತು ಹಾಗೂ ಇತರರ ಕುರಿತು ಸಮತೂಕವಾದ ಮತ್ತು ವಾಸ್ತವಿಕವಾದ ನೋಟವುಳ್ಳವರಾಗಿರಬೇಕು. ತಾವು ಸಹ ಕೆಲವು ತಪ್ಪುಗಳನ್ನು ಮಾಡಬಹುದು ಎಂಬ ಅರಿವು ಅವರಿಗಿರಬೇಕು, ಆದರೆ “ದೇವರ ಅದ್ಭುತಕರ ವಿಷಯಗಳನ್ನು” ಗಣ್ಯಮಾಡುವಂತೆ ಇತರರಿಗೆ ಸಹಾಯಮಾಡಲು ಅವರು ಹೆಣಗಾಡುತ್ತಿರುವಾಗ, ಈ ತಪ್ಪುಗಳು ಅವರನ್ನು ಅತಿಯಾಗಿ ದುಃಖಿತರನ್ನಾಗಿ ಮಾಡಬಾರದಾಗಿದೆ. ‘ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುವಾತನಾದ’ ಯೆಹೋವನ ಮೇಲೆ ಆತುಕೊಳ್ಳುವಂತೆ ಸಹೋದರ ಕಾರ್ಕರ್ನ್ ಅವರು ಹೊಸ ಮಿಷನೆರಿಗಳನ್ನು ಉತ್ತೇಜಿಸಿದರು.—ಇಬ್ರಿಯ 11:6.
ಕಾರ್ಯಕ್ರಮದ ಮುಂದಿನ ಭಾಗದಲ್ಲಿ, ಆಡಳಿತ ಮಂಡಳಿಯ ಸದಸ್ಯರಾಗಿರುವ ಡ್ಯಾನಿಯೆಲ್ ಸಿಡ್ಲಿಕ್ ಅವರು, “ಕ್ರೈಸ್ತ ನಿರೀಕ್ಷೆ—ಅದೇನು?” ಎಂಬ ವಿಷಯದ ಕುರಿತು ಮಾತಾಡಿದರು. ಅವರು ಹೇಳಿದ್ದು: “ನಿರೀಕ್ಷೆಯು ಕ್ರೈಸ್ತ ಸದ್ಗುಣವಾಗಿದೆ. ಇದು ಸರಿಯಾದದ್ದರ ಮಟ್ಟವಾಗಿದ್ದು, ಒಬ್ಬನನ್ನು ದೇವರೊಂದಿಗೆ ಒಂದು ಒಳ್ಳೇ ಸಂಬಂಧದೊಳಕ್ಕೆ ತರುತ್ತದೆ. ನಾವು ಹೇಗೆ ನಿರೀಕ್ಷೆಯಿಡುತ್ತೇವೋ ಹಾಗೆಯೇ ನಿರೀಕ್ಷೆಯಿಡುವುದು ಒಬ್ಬ ಅಕ್ರೈಸ್ತ ವ್ಯಕ್ತಿಗೆ ಅಸಂಭವನೀಯ ಸಂಗತಿಯಾಗಿದೆ.” ಸಹೋದರ ಸಿಡ್ಲಿಕ್ ಅವರು, ಜೀವನದ ತೊಂದರೆಗಳ ಎದುರಿನಲ್ಲೂ ಆಶಾವಾದಿಗಳಾಗಿ ಉಳಿಯುವಂತೆ ಸಹಾಯಮಾಡುವ ಕ್ರೈಸ್ತ ನಿರೀಕ್ಷೆಯ ಬೇರೆ ಬೇರೆ ಅಂಶಗಳನ್ನು ವರ್ಣಿಸುತ್ತಾ ಹೋದರು. “ನಿರೀಕ್ಷೆಯಿಂದಲೇ ನಾವು ದೈನಂದಿನ ಜೀವಿತವನ್ನು ನವೀಕೃತ ಶ್ರದ್ಧೆಯಿಂದ ಮತ್ತು ವಿಜಯೋತ್ಸಾಹದಿಂದ ಎದುರಿಸಬಲ್ಲೆವು.” ಕ್ರೈಸ್ತನೊಬ್ಬನ ನಿರೀಕ್ಷೆಯು, ಯೆಹೋವನನ್ನು ಉದ್ದೇಶಭರಿತ ದೇವರೋಪಾದಿ ಪರಿಗಣಿಸುವಂತೆ ಮತ್ತು ಆತನ ಸೇವೆಮಾಡುವುದರಲ್ಲಿ ಸಂತೋಷಿಸುವಂತೆ ಸಹಾಯಮಾಡುತ್ತದೆ.—ರೋಮಾಪುರ 12:12.
ಗಿಲ್ಯಡ್ ಶಾಲೆಯ ರೆಜಿಸ್ಟ್ರಾರ್ ಆಗಿರುವ ವಾಲಸ್ ಲಿವರನ್ಸ್ ಅವರು, “ಪವಿತ್ರಾತ್ಮನನ್ನು [“ಪವಿತ್ರಾತ್ಮವನ್ನು,” NW] ಅನುಸರಿಸಿ ನಡೆ”ಯುವಂತೆ ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. (ಗಲಾತ್ಯ 5:16) ಯೆರೆಮೀಯನ ಕಾರ್ಯದರ್ಶಿಯಾಗಿದ್ದ ಬಾರೂಕನು ಪವಿತ್ರಾತ್ಮವನ್ನು ಅನುಸರಿಸಿ ನಡೆಯುವುದನ್ನು ಕಾಲಕ್ರಮೇಣ ಹೇಗೆ ಬಹುಮಟ್ಟಿಗೆ ನಿಲ್ಲಿಸಿಬಿಟ್ಟನು ಎಂಬುದನ್ನು ಅವರು ವಿವರಿಸಿದರು. ಒಂದು ಹಂತದಲ್ಲಿ ಬಾರೂಕನು ಬೇಸರಗೊಂಡನು ಮತ್ತು ತನಗೋಸ್ಕರ ಮಹಾಪದವಿಯನ್ನು ನಿರೀಕ್ಷಿಸಿಕೊಳ್ಳಲು ಆರಂಭಿಸಿದನು. (ಯೆರೆಮೀಯ 45:3, 5) ತದನಂತರ ಸಹೋದರ ಲಿವರನ್ಸ್‌ರವರು, ಕೆಲವರು ಯೇಸುವನ್ನು ಹಿಂಬಾಲಿಸುವುದನ್ನು ನಿಲ್ಲಿಸಿಬಿಟ್ಟರು ಮತ್ತು ರಕ್ಷಣೆಗೆ ಅತ್ಯಾವಶ್ಯಕವಾಗಿದ್ದ ಆತ್ಮಿಕ ಸತ್ಯವನ್ನು ತಿರಸ್ಕರಿಸಿದರು ಎಂಬುದನ್ನು ಸೂಚಿಸಿ ಮಾತನಾಡಿದರು. ಇದಕ್ಕೆ ಕಾರಣವೇನೆಂದರೆ, ಯೇಸು ಕಲಿಸುತ್ತಿದ್ದ ವಿಷಯಗಳನ್ನು ಇವರು ಗ್ರಹಿಸಲಿಲ್ಲ, ಮತ್ತು ಆ ಸಮಯದಲ್ಲಿನ ತಮ್ಮ ಮಾನವ ನಿರೀಕ್ಷಣೆಗಳು ಪೂರೈಸಲ್ಪಡದೆ ಇದ್ದದ್ದಕ್ಕಾಗಿಯೂ ಅವರು ನಿರುತ್ಸಾಹಗೊಂಡಿದ್ದರು. (ಯೋಹಾನ 6:26, 27, 51, 66) ಯಾರ ಕೆಲಸವು ಸೃಷ್ಟಿಕರ್ತನ ಕಡೆಗೆ ಮತ್ತು ಅವನ ಉದ್ದೇಶದ ಕಡೆಗೆ ಗಮನವನ್ನು ಸೆಳೆಯುವುದಾಗಿದೆಯೋ ಆ ಮಿಷನೆರಿಗಳು ಈ ವೃತ್ತಾಂತಗಳಿಂದ ಯಾವ ಪಾಠವನ್ನು ಕಲಿಯಸಾಧ್ಯವಿದೆ? ಒಳ್ಳೇ ಸ್ಥಾನಮಾನವನ್ನು ಗಿಟ್ಟಿಸಿಕೊಳ್ಳುವ, ಜನರಿಂದ ಮನ್ನಣೆಯನ್ನು ಪಡೆದುಕೊಳ್ಳುವ, ಅಥವಾ ವೈಯಕ್ತಿಕ ಲಾಭಕ್ಕಾಗಿ ದೇವಪ್ರಭುತ್ವಾತ್ಮಕ ನೇಮಕವನ್ನು ಉಪಯೋಗಿಸುವುದರ ಕುರಿತು ಚಿಂತಿಸದಿರುವಂತೆ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲಾಯಿತು.
ಗಿಲ್ಯಡ್ ಶಾಲೆಯ ಶಿಕ್ಷಕರಾಗಿರುವ ಮಾರ್ಕ್ ನೂಮರ್ ಅವರು, “ನೀವು ಕೊಡುವವರಾಗಿರುವಿರೋ ಅಥವಾ ತೆಗೆದುಕೊಳ್ಳುವವರಾಗಿರುವಿರೊ?” ಎಂಬ ಪ್ರಶ್ನೆಯನ್ನು ಕೇಳಿದರು. ಅವರು ನ್ಯಾಯಸ್ಥಾಪಕರು 5:2ರ ಆಧಾರದಿಂದ ತಮ್ಮ ಹೇಳಿಕೆಗಳನ್ನು ನೀಡಿದರು. ಅಲ್ಲಿ ಬಾರಾಕನ ಸೈನ್ಯದಲ್ಲಿ ಸ್ವೇಚ್ಛೆಯಿಂದ ಸೇರಿಕೊಂಡದ್ದಕ್ಕಾಗಿ ಒಬ್ಬೊಬ್ಬ ಇಸ್ರಾಯೇಲ್ಯನನ್ನೂ ಕೊಂಡಾಡಲಾಗಿದೆ. ಆತ್ಮಿಕ ಯುದ್ಧದಲ್ಲಿ ಇನ್ನೂ ಹೆಚ್ಚಿನ ಮಟ್ಟಿಗೆ ಒಳಗೂಡುವಂತೆ ಮಹಾ ಬಾರಾಕನಾಗಿರುವ ಯೇಸು ಕ್ರಿಸ್ತನಿಂದ ಕೊಡಲ್ಪಟ್ಟ ಕರೆಗೆ ಪ್ರತಿಕ್ರಿಯಿಸುವುದರಲ್ಲಿ ಹುರುಪನ್ನು ತೋರಿಸಿದ್ದಕ್ಕಾಗಿ ಗಿಲ್ಯಡ್ ವಿದ್ಯಾರ್ಥಿಗಳನ್ನು ಪ್ರಶಂಸಿಸಲಾಯಿತು. ಕ್ರಿಸ್ತನ ಸೈನಿಕರಾದರೋ ತಮ್ಮನ್ನು ಸೈನ್ಯಕ್ಕೆ ಸೇರಿಸಿಕೊಂಡಿರುವಾತನ ಸಮ್ಮತಿಯನ್ನು ಪಡೆಯುವುದರಲ್ಲಿ ಆಸಕ್ತರಾಗಿರಬೇಕು. ಸಹೋದರ ನೂಮರ್ ವಿದ್ಯಾರ್ಥಿಗಳಿಗೆ ಹೀಗೆ ನೆನಪು ಹುಟ್ಟಿಸಿದರು: “ನಾವು ಸ್ವತಃ ನಮ್ಮ ಹಿತಚಿಂತನೆಯ ಮೇಲೆ ಗಮನವನ್ನು ಕೇಂದ್ರೀಕರಿಸಿಕೊಳ್ಳಲು ಆರಂಭಿಸುವಾಗ, ವೈರಿಯೊಂದಿಗೆ ಸೆಣಸಾಡುವುದನ್ನು ನಿಲ್ಲಿಸಿಬಿಡುತ್ತೇವೆ. . . . ಮಿಷನೆರಿ ಸೇವೆಯು ನಿಮ್ಮ ಕುರಿತಾದ ಸೇವೆಯಲ್ಲ. ಅದು ಯೆಹೋವನ, ಆತನ ಪರಮಾಧಿಕಾರದ ಮತ್ತು ಆತನ ಚಿತ್ತವು ಪೂರೈಸಲ್ಪಡುವುದರ ಕುರಿತಾಗಿದೆ. ಯೆಹೋವನು ನಮ್ಮನ್ನು ಸಂತೋಷಪಡಿಸಬೇಕೆಂದು ನಾವು ಬಯಸುವ ಕಾರಣದಿಂದ ಮಿಷನೆರಿಗಳಾಗಿ ಸೇವೆಮಾಡುವುದಿಲ್ಲ, ನಾವು ಆತನನ್ನು ಪ್ರೀತಿಸುವುದರಿಂದಲೇ ಆತನ ಸೇವೆಮಾಡುತ್ತೇವೆ.”—2 ತಿಮೊಥೆಯ 2:4.
ಗಿಲ್ಯಡ್ ಶಾಲೆಯ ಶಿಕ್ಷಕರಾದ ಲಾರೆನ್ಸ್ ಬೋವನ್ ಅವರು, “ಇವರನ್ನು ಸತ್ಯದಲ್ಲಿ ಸೇರಿಸಿ ಪ್ರತಿಷ್ಠೆ ಪಡಿಸು” ಎಂಬ ಭಾಗದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. (ಯೋಹಾನ 17:17) 115ನೇ ತರಗತಿಯ ವಿದ್ಯಾರ್ಥಿಗಳು ದೇವರ ಪ್ರತಿಷ್ಠಿತ ಶುಶ್ರೂಷಕರಾಗಿದ್ದಾರೆ ಎಂದು ಅವರು ತಿಳಿಸಿದರು. ಗಿಲ್ಯಡ್ ಶಾಲೆಯಲ್ಲಿದ್ದಾಗ ಇವರು ಸತ್ಯವನ್ನು ಪ್ರೀತಿಸುವಂಥ ಪ್ರಾಮಾಣಿಕ ಹೃದಯದ ಜನರನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಾ ಕ್ಷೇತ್ರ ಸೇವೆಯಲ್ಲಿಯೂ ಪಾಲ್ಗೊಂಡರು. ಯೇಸುವಿನಂತೆ ಮತ್ತು ಅವನ ಆರಂಭದ ಶಿಷ್ಯರಂತೆಯೇ ವಿದ್ಯಾರ್ಥಿಗಳು ತಮ್ಮ “ಸ್ವಂತ ಪ್ರೇರಣೆ”ಯಿಂದ (NW) ಮಾತಾಡಲಿಲ್ಲ. (ಯೋಹಾನ 12:49, 50) ಅವರು ದೈವಪ್ರೇರಿತ, ಜೀವದಾಯಕ ಸತ್ಯ ವಾಕ್ಯವನ್ನು ಹುರುಪಿನಿಂದ ತಿಳಿಯಪಡಿಸಿದರು. ವಿದ್ಯಾರ್ಥಿಗಳ ಪುನರಭಿನಯಗಳು ಮತ್ತು ಅನುಭವಗಳು, ಅವರು ಯಾರನ್ನು ಸಂಪರ್ಕಿಸಿದ್ದರೋ ಅವರ ಮೇಲೆ ಬೈಬಲ್ ಬೀರಿದ ಬಲವಾದ ಪ್ರಭಾವವನ್ನು ರುಜುಪಡಿಸಿದವು.
ಬುದ್ಧಿವಾದ ಮತ್ತು ಅನುಭವಗಳು ಉತ್ತೇಜನವನ್ನು ಒದಗಿಸುತ್ತವೆ
ಯುನೈಟೆಡ್ ಸ್ಟೇಟ್ಸ್ ಬ್ರಾಂಚ್‌ನ ಸರ್ವಿಸ್ ಡಿಪಾರ್ಟ್‌ಮೆಂಟಿನ ಸದಸ್ಯರಾಗಿರುವ ಆಂಟನಿ ಪೇರಸ್ ಮತ್ತು ಆಂಟನಿ ಗ್ರಿಫಿನ್ ಅವರು, ಲೋಕದ ಬೇರೆ ಬೇರೆ ಭಾಗಗಳಿಂದ ಬಂದಿದ್ದ ಬ್ರಾಂಚ್ ಕಮಿಟಿಯ ಸದಸ್ಯರೊಂದಿಗೆ ಇಂಟರ್‌ವ್ಯೂಗಳನ್ನು ನಡೆಸಿದರು. ಇವರು ಹೊಸ ಮಿಷನೆರಿಗಳು ಎದುರಿಸುವಂಥ ಪಂಥಾಹ್ವಾನಗಳನ್ನು ಚರ್ಚಿಸಿದರು ಮತ್ತು ವೈಯಕ್ತಿಕ ಅನುಭವದ ಮೇಲಾಧಾರಿತವಾದ ಪ್ರಾಯೋಗಿಕ ಸಲಹೆಯನ್ನು ಕೊಟ್ಟರು. ಈ ಪಂಥಾಹ್ವಾನಗಳಲ್ಲಿ ಕೆಲವು ಯಾವುವೆಂದರೆ, ಸಾಂಸ್ಕೃತಿಕ ಭಿನ್ನತೆಗಳು, ವರ್ಷವಿಡೀ ಇರುವಂಥ ಉಷ್ಣವಲಯದ ಹವಾಮಾನ, ಅಥವಾ ಈ ವಿದ್ಯಾರ್ಥಿಗಳು ಸಾಮಾನ್ಯವಾಗಿ ಒಗ್ಗಿಹೋಗಿದ್ದಂಥ ಪರಿಸರಕ್ಕಿಂತ ತೀರ ಭಿನ್ನವಾಗಿರುವ ಧಾರ್ಮಿಕ ಹಾಗೂ ರಾಜಕೀಯ ಪರಿಸರಗಳೇ. ಈ ಹೊಸ ಪರಿಸರಗಳಿಗೆ ಹೊಂದಿಕೊಂಡು ಹೋಗುವಂತೆ ಹೊಸ ಮಿಷನೆರಿಗಳಿಗೆ ಯಾವುದು ಸಹಾಯಮಾಡಬಲ್ಲದು? ಯೆಹೋವನಿಗಾಗಿರುವ ಪ್ರೀತಿ, ಜನರಿಗಾಗಿರುವ ಪ್ರೀತಿ, ಗತಿಸಿರುವುದರ ಕುರಿತು ಚಿಂತಿಸದಿರುವುದು, ಮತ್ತು ದುಡುಕಿನಿಂದ ಕ್ರಿಯೆಗೈಯದಿರುವುದೇ. ಬ್ರಾಂಚ್ ಕಮಿಟಿಯ ಸದಸ್ಯರೊಬ್ಬರು ಹೇಳಿದ್ದು: “ನಮ್ಮ ನೇಮಕ ಸ್ಥಳದಲ್ಲಿರುವ ಜನರು ನಮಗಿಂತಲೂ ಮುಂಚೆ ಅನೇಕ ಶತಮಾನಗಳಿಂದ ಅಲ್ಲಿ ಜೀವಿಸುತ್ತಿದ್ದಾರೆ. ಹೀಗಿರುವುದರಿಂದ ಖಂಡಿತವಾಗಿಯೂ ನಾವು ಅಲ್ಲಿ ವಾಸಿಸಿ, ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಸಾಧ್ಯವಿದೆ. ಪ್ರತಿ ಬಾರಿ ನಾವು ಕಷ್ಟಗಳನ್ನು ಎದುರಿಸಿದಾಗ, ನಾವು ಅವುಗಳನ್ನು ನಮ್ಮ ವ್ಯಕ್ತಿತ್ವವನ್ನು ಉತ್ತಮಗೊಳಿಸಿಕೊಳ್ಳಲಿಕ್ಕಾಗಿರುವ ಸದವಕಾಶಗಳಾಗಿ ಪರಿಗಣಿಸಿದೆವು. ನೀವು ಪ್ರಾರ್ಥನೆಯ ಮೇಲೆ ಮತ್ತು ಯೆಹೋವನ ಪವಿತ್ರಾತ್ಮದ ಮೇಲೆ ಆತುಕೊಳ್ಳಿರಿ, ಆಗ ಖಂಡಿತವಾಗಿಯೂ ‘ನಾನು ನಿಮ್ಮ ಸಂಗಡ ಇರುತ್ತೇನೆ’ ಎಂಬ ಯೇಸುವಿನ ಮಾತುಗಳ ಸತ್ಯತೆಯ ಅನುಭವ ನಿಮಗಾಗುವುದು.”—ಮತ್ತಾಯ 28:20.
ಆಡಳಿತ ಮಂಡಳಿಯ ಸದಸ್ಯರಾಗಿರುವ ಸ್ಯಾಮ್ವೆಲ್ ಹರ್ಡ್ ಅವರು, “ದೇವರ ಅದ್ಭುತಕರ ವಿಷಯಗಳ ಕುರಿತು ಮಾತಾಡುತ್ತಾ ಇರಿ” ಎಂಬ ತಮ್ಮ ಭಾಷಣದಿಂದ ಈ ಕಾರ್ಯಕ್ರಮವನ್ನು ಪರಮಾವಧಿಗೆ ತಂದರು. ಸಾ.ಶ. 33ರ ಪಂಚಾಶತ್ತಮ ದಿನದಂದು ಪವಿತ್ರಾತ್ಮದ ಸುರಿಸುವಿಕೆಯು, “ದೇವರ ಅದ್ಭುತಕರ ವಿಷಯಗಳ” ಕುರಿತು ಮಾತಾಡುವಂತೆ ಯೇಸುವಿನ ಶಿಷ್ಯರನ್ನು ಬಲಪಡಿಸಿತು. ಇಂದು ಸಹ ದೇವರ ರಾಜ್ಯದ ಕುರಿತು ತದ್ರೀತಿಯ ಹುರುಪಿನಿಂದ ಮಾತಾಡುವಂತೆ ಹೊಸ ಮಿಷನೆರಿಗಳಿಗೆ ಯಾವುದು ಸಹಾಯಮಾಡಬಲ್ಲದು? ಆ ಪವಿತ್ರಾತ್ಮವೇ. ಸಹೋದರ ಹರ್ಡ್ ಅವರು ಪದವಿಯನ್ನು ಪಡೆದುಕೊಳ್ಳುತ್ತಿರುವ ವಿದ್ಯಾರ್ಥಿಗಳಿಗೆ, ‘ಆಸಕ್ತಚಿತ್ತರಾಗಿರಿ,’ ನಿಮ್ಮ ನೇಮಕಗಳ ಬಗ್ಗೆ ಪುಳಕಿತಗೊಳ್ಳಿರಿ, ನಿಮಗೆ ಕೊಡಲ್ಪಟ್ಟಿರುವ ತರಬೇತಿಯನ್ನು ಎಂದಿಗೂ ಮರೆಯದಿರಿ ಎಂದು ಉತ್ತೇಜಿಸಿದರು. (ರೋಮಾಪುರ 12:11) ಸಹೋದರ ಹರ್ಡ್ ಹೇಳಿದ್ದು: “ಬೈಬಲು ದೇವರ ಅದ್ಭುತಕರ ವಿಷಯವಾಗಿದೆ. ಅದರ ಮೌಲ್ಯವನ್ನು ಎಂದಿಗೂ ಕಡೆಗಣಿಸದಿರಿ. ಅದರಲ್ಲಿರುವ ಸಂದೇಶವು ಸಜೀವವಾದದ್ದಾಗಿದೆ. ಇದು ವಿಷಯಗಳ ತಿರುಳನ್ನು ತೂರಿಹೋಗುವಂಥದ್ದಾಗಿದೆ. ನಿಮ್ಮ ಜೀವಿತಗಳಲ್ಲಿ ವಿಷಯಗಳನ್ನು ಸರಿಪಡಿಸಲಿಕ್ಕಾಗಿ ಇದನ್ನು ಉಪಯೋಗಿಸಿರಿ. ಇದು ನಿಮ್ಮ ಆಲೋಚನಾ ಧಾಟಿಯನ್ನು ಬದಲಾಯಿಸುವಂತೆ ಬಿಡಿರಿ. ಶಾಸ್ತ್ರವಚನಗಳ ಅಧ್ಯಯನ, ವಾಚನ ಮತ್ತು ಮನನದ ಮೂಲಕ ನಿಮ್ಮ ಯೋಚನಾ ಸಾಮರ್ಥ್ಯವನ್ನು ಕಾಪಾಡಿಕೊಳ್ಳಿರಿ . . . ನಿಮ್ಮ ಗಿಲ್ಯಡ್ ತರಬೇತಿಯನ್ನು, ‘ದೇವರ ಅದ್ಭುತಕರ ವಿಷಯಗಳನ್ನು’ ಮಾತಾಡುತ್ತಾ ಇರಲಿಕ್ಕಾಗಿ ಉಪಯೋಗಿಸುವುದನ್ನು ನಿಮ್ಮ ಗುರಿಯನ್ನಾಗಿಯೂ ದೃಢನಿರ್ಧಾರವನ್ನಾಗಿಯೂ ಮಾಡಿಕೊಳ್ಳಿರಿ.”
ಲೋಕದ ಬೇರೆ ಬೇರೆ ಭಾಗಗಳಿಂದ ಕಳುಹಿಸಲ್ಪಟ್ಟಂಥ ಅಭಿನಂದನೆಗಳನ್ನು ಓದಿ ತಿಳಿಸಿದ ಬಳಿಕ ಮತ್ತು ಡಿಪ್ಲೊಮಗಳು ಕೊಡಲ್ಪಟ್ಟ ನಂತರ, ಪಡೆದುಕೊಂಡ ತರಬೇತಿಗಾಗಿ ವಿದ್ಯಾರ್ಥಿಗಳು ಗಣ್ಯತೆಯನ್ನು ವ್ಯಕ್ತಪಡಿಸುವಂಥ ಒಂದು ಪತ್ರವನ್ನು ವಿದ್ಯಾರ್ಥಿಯೊಬ್ಬನು ಓದಿದನು. ತದನಂತರ ಸಹೋದರ ಲೆಟ್‌ರು 2 ಪೂರ್ವಕಾಲವೃತ್ತಾಂತ 32:7 ಮತ್ತು ಧರ್ಮೋಪದೇಶಕಾಂಡ 20:1, 4ನ್ನು ಉಲ್ಲೇಖಿಸಿ ಮಾತಾಡುವ ಮೂಲಕ ಈ ಹರ್ಷಭರಿತ ಸಮಾರಂಭವನ್ನು ಮುಕ್ತಾಯಗೊಳಿಸಿದರು. ತಮ್ಮ ಅಂತಿಮ ಹೇಳಿಕೆಗಳನ್ನು ತಮ್ಮ ಆರಂಭದ ಮಾತುಗಳಿಗೆ ಜೋಡಿಸುತ್ತಾ ಅವರು ಸಮಾಪ್ತಿಗೊಳಿಸಿದ್ದು: “ಆದುದರಿಂದ ಪ್ರಿಯ ಪದವೀಧರರೇ, ನಿಮ್ಮ ಹೊಸ ನೇಮಕಗಳಲ್ಲಿ ನೀವು ಮುಂದೆ ಸಾಗುವಾಗ, ನಿಮ್ಮ ಆತ್ಮಿಕ ಕದನದಲ್ಲಿ ನೀವು ಮುನ್ನಡೆಯುವಾಗ, ಯೆಹೋವನು ಸಹ ನಿಮ್ಮೊಂದಿಗೆ ಹೆಜ್ಜೆಯಿಡುತ್ತಿರುತ್ತಾನೆ ಎಂಬುದು ನೆನಪಿರಲಿ. ನಿಮ್ಮ ವಿರುದ್ಧ ಇರುವವರಿಗಿಂತಲೂ ನಿಮ್ಮ ಕಡೆಯಲ್ಲಿರುವವರು ಹೆಚ್ಚಾಗಿದ್ದಾರೆ ಎಂಬ ವಿಷಯವನ್ನು ಎಂದಿಗೂ ಮರೆಯದಿರಿ.”
[ಪುಟ 25ರಲ್ಲಿರುವ ಚೌಕ]
ತರಗತಿಯ ಅಂಕಿಅಂಶಗಳು
ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 7
ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 17
ವಿದ್ಯಾರ್ಥಿಗಳ ಸಂಖ್ಯೆ: 48
ಸರಾಸರಿ ಪ್ರಾಯ: 33.7
ಸತ್ಯದಲ್ಲಿ ಸರಾಸರಿ ವರ್ಷಗಳು: 17.8
ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13.5
[ಪುಟ 26ರಲ್ಲಿರುವ ಚಿತ್ರ]
ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನಿಂದ ಪದವಿಯನ್ನು ಪಡೆದ 115ನೆಯ ತರಗತಿ
ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.
(1) ಬ್ರೌನ್, ಟಿ.; ಗೋಲರ್, ಸಿ.; ಹಾಫ್‌ಮನ್, ಎ.; ಬ್ರೂಸೀಸೀ, ಜೆ.; ಟ್ರೇಹ್ಯಾನ್, ಎಸ್. (2) ಸ್ಮಾರ್ಟ್, ಎನ್.; ಕ್ಯಾಶ್ಮನ್, ಎಫ್.; ಗಾರ್ಸಿಯ, ಕೆ.; ಲೋಹನ್, ಎಮ್.; ಸೀಫರ್ಟ್, ಎಸ್.; ಗ್ರೇ, ಕೆ. (3) ಬೆಕೆಟ್, ಎಮ್.; ನಿಕಲ್ಸ್, ಎಸ್.; ಸ್ಮಿತ್, ಕೆ.; ಗೂಲ್ಯಾರಾ, ಎ.; ರ್ಯಾಪನೆಕರ್, ಎ. (4) ಗ್ರೇ, ಎಸ್.; ವಾಸೆಕ್, ಕೆ.; ಫ್ಲೆಮಿಂಗ್, ಎಮ್.; ಬೆತೆಲ್, ಎಲ್.; ಹರ್ಮನ್ಸನ್, ಟಿ.; ಹರ್ಮನ್ಸನ್, ಪಿ. (5) ರ್ಯಾಪನೆಕರ್, ಜಿ.; ಲೋಹನ್, ಡಿ.; ಡಿಕೀ, ಎಸ್.; ಕಿಮ್, ಕೆ.; ಟ್ರೇಹ್ಯಾನ್, ಎ.; ವಾಷಿಂಗ್ಟನ್, ಎ.; ಸ್ಮಾರ್ಟ್, ಎಸ್. (6) ಗೋಲರ್, ಎಲ್.; ಬರ್ಗ್‌ಹಾಫರ್, ಟಿ.; ಗೂಲ್ಯಾರಾ, ಡಿ.; ನಿಕಲ್ಸ್, ಆರ್.; ವಾಷಿಂಗ್ಟನ್, ಎಸ್.; ಕಿಮ್, ಜೆ. (7) ಬೆಕೆಟ್, ಎಮ್.; ಡಿಕೀ, ಜೆ.; ಸ್ಮಿತ್, ಆರ್.; ಗಾರ್ಸಿಯ, ಆರ್.; ಹಾಫ್‌ಮನ್, ಎ.; ಸೀಫರ್ಟ್, ಆರ್.; ಬ್ರೌನ್, ಏಚ್. (8) ಫ್ಲೆಮಿಂಗ್, ಎಸ್.; ಬ್ರೂಸೀಸೀ, ಪಿ.; ಬರ್ಗ್‌ಹಾಫರ್, ಡಬ್ಲ್ಯೂ.; ಬೆತೆಲ್, ಟಿ.; ಕ್ಯಾಶ್ಮನ್, ಜೆ.; ವಾಸೆಕ್, ಕೆ.