ಬದಲಾಗುತ್ತಿರುವ ಲೋಕದ ಆತ್ಮವನ್ನು ಪ್ರತಿರೋಧಿಸಿರಿ
“ನಾವು ಪ್ರಾಪಂಚಿಕ [“ಲೋಕದ,” Nw] ಆತ್ಮವನ್ನು ಹೊಂದದೆ . . . ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು.”—1 ಕೊರಿಂಥ 2:12.
1. ಹವ್ವಳು ಯಾವ ವಿಧಗಳಲ್ಲಿ ವಂಚಿಸಲ್ಪಟ್ಟಳು?
“ಸರ್ಪವು ನನ್ನನ್ನು ವಂಚಿಸಿತು.” (ಆದಿಕಾಂಡ 3:13) ಈ ಕೆಲವೇ ಮಾತುಗಳಿಂದ ಪ್ರಥಮ ಸ್ತ್ರೀಯಾದ ಹವ್ವಳು, ಯೆಹೋವ ದೇವರ ವಿರುದ್ಧವಾಗಿ ತಾನೇಕೆ ದಂಗೆಯೆದ್ದೇನೆಂಬುದನ್ನು ವಿವರಿಸಲು ಪ್ರಯತ್ನಿಸಿದಳು. ಆಕೆ ಹೇಳಿದ್ದೇನೊ ಸತ್ಯವಾಗಿತ್ತಾದರೂ ಅದು ಆಕೆಯ ತಪ್ಪನ್ನು ನ್ಯಾಯವೆಂದು ಸಮರ್ಥಿಸಲಿಲ್ಲ. ಅಪೊಸ್ತಲ ಪೌಲನು ತರುವಾಯ ಹೀಗೆ ಬರೆಯುವಂತೆ ಪ್ರೇರಿಸಲ್ಪಟ್ಟನು: ‘[ಹವ್ವಳು] ವಂಚನೆಗೆ ಒಳಬಿದ್ದಳು.’ (1 ತಿಮೊಥೆಯ 2:14) ನಿಷೇಧಿಸಲ್ಪಟ್ಟಿದ್ದ ಹಣ್ಣನ್ನು ತಿನ್ನುವ ಒಂದೇ ಅವಿಧೇಯ ಕೃತ್ಯವು ಅವಳನ್ನು ದೇವರಂತಾಗಿಸಿ ಪ್ರಯೋಜನವನ್ನು ತಂದೀತೆಂದು ನಂಬುವಂತೆ ಆಕೆ ವಂಚಿಸಲ್ಪಟ್ಟಳು. ಆಕೆಯನ್ನು ತಪ್ಪು ದಾರಿಗೆಳೆದವನ ಗುರುತಿನ ವಿಷಯದಲ್ಲಿಯೂ ಆಕೆ ವಂಚಿಸಲ್ಪಟ್ಟಳು. ಆ ಸರ್ಪದ ಮೂಲಕ ವಾಸ್ತವದಲ್ಲಿ ಪಿಶಾಚನಾದ ಸೈತಾನನು ಮಾತಾಡುತ್ತಿದ್ದಾನೆಂಬುದನ್ನು ಆಕೆ ತಿಳಿಯದೆ ಹೋದಳು.—ಆದಿಕಾಂಡ 3:1-6.
2. (ಎ) ಸೈತಾನನು ಇಂದು ಜನರನ್ನು ಹೇಗೆ ದಾರಿತಪ್ಪಿಸುತ್ತಾನೆ? (ಬಿ) “ಲೋಕದ ಆತ್ಮ” ಎಂದರೇನು, ಮತ್ತು ನಾವೀಗ ಯಾವ ಪ್ರಶ್ನೆಗಳನ್ನು ಪರಿಗಣಿಸುವೆವು?
2 ಆದಾಮಹವ್ವರ ಸಮಯದಿಂದ ಹಿಡಿದು ಸೈತಾನನು ಜನರನ್ನು ವಂಚಿಸುತ್ತಾ ಬಂದಿದ್ದಾನೆ. ವಾಸ್ತವದಲ್ಲಿ, ಅವನು “ಭೂಲೋಕದವರನ್ನೆಲ್ಲಾ ಮರುಳು” ಮಾಡುತ್ತಿದ್ದಾನೆ. (ಪ್ರಕಟನೆ 12:9) ಅವನ ಕುಯುಕ್ತಿಗಳು ಬದಲಾಗಿಲ್ಲ. ಅವನು ಇಂದು ಅಕ್ಷರಾರ್ಥವಾದ ಸರ್ಪವನ್ನು ಉಪಯೋಗಿಸುತ್ತಿಲ್ಲವಾದರೂ, ಅವನು ಈಗಲೂ ತನ್ನ ಗುರುತನ್ನು ಮರೆಮಾಚುತ್ತಾ ಇದ್ದಾನೆ. ಮನೋರಂಜನೆ, ವಾರ್ತಾಮಾಧ್ಯಮ ಮತ್ತು ಇತರ ಸಾಧನಗಳನ್ನು ಉಪಯೋಗಿಸುತ್ತಾ ಸೈತಾನನು, ಜನರಿಗೆ ದೇವರ ಪ್ರೀತಿಪರ ಮಾರ್ಗದರ್ಶನದ ಅಗತ್ಯವೂ ಇಲ್ಲ, ಅದರಿಂದ ಲಾಭವೂ ಇಲ್ಲವೆಂಬುದನ್ನು ನಂಬುವಂತೆ ಮಾಡಿ ಅವರನ್ನು ದಾರಿತಪ್ಪಿಸುತ್ತಾನೆ. ಪಿಶಾಚನ ಈ ವಂಚನೆಯ ಕಾರ್ಯಾಚರಣೆಯು ಬೈಬಲ್ ನಿಯಮಗಳು ಮತ್ತು ಮೂಲತತ್ತ್ವಗಳ ವಿರುದ್ಧ ಜನರಲ್ಲಿ ಎಲ್ಲೆಲ್ಲಿಯೂ ದಂಗೆಯ ಆತ್ಮವನ್ನು ಉತ್ಪಾದಿಸಿದೆ. ಇದನ್ನು ಬೈಬಲು, “ಲೋಕದ ಆತ್ಮ” ಎಂದು ಕರೆಯುತ್ತದೆ. (1 ಕೊರಿಂಥ 2:12, NW) ಈ ಆತ್ಮವು, ದೇವರನ್ನು ಅರಿಯದವರ ವಿಶ್ವಾಸಗಳನ್ನೂ ಮನೋಭಾವಗಳನ್ನೂ ನಡವಳಿಕೆಯನ್ನೂ ಬಲವಾಗಿ ಪ್ರಭಾವಿಸುತ್ತದೆ. ಈ ಆತ್ಮವು ಹೇಗೆ ಪ್ರದರ್ಶಿಸಲ್ಪಡುತ್ತದೆ, ಮತ್ತು ಅದರ ಭ್ರಷ್ಟಗೊಳಿಸುವ ಪ್ರಭಾವವನ್ನು ನಾವು ಹೇಗೆ ಪ್ರತಿರೋಧಿಸಬಲ್ಲೆವು ಎಂಬುದನ್ನು ನೋಡೋಣ.
ನೈತಿಕ ಮೌಲ್ಯಗಳ ಅವನತಿ
3. ಆಧುನಿಕ ದಿನಗಳಲ್ಲಿ ‘ಲೋಕದ ಆತ್ಮವು’ ಹೆಚ್ಚೆಚ್ಚು ಪ್ರಮಾಣದಲ್ಲಿ ವ್ಯಕ್ತವಾಗುತ್ತಿರುವುದೇಕೆ?
3 ಆಧುನಿಕ ಕಾಲಗಳಲ್ಲಿ ಈ ‘ಲೋಕದ ಆತ್ಮವು’ ಹೆಚ್ಚೆಚ್ಚು ವ್ಯಕ್ತವಾಗುತ್ತಿದೆ. (2 ತಿಮೊಥೆಯ 3:1-5) ನೈತಿಕ ಮೌಲ್ಯಗಳು ಅವನತಿಗಿಳಿಯುತ್ತಿರುವುದನ್ನು ನೀವು ಪ್ರಾಯಶಃ ಗಮನಿಸಿದ್ದೀರಿ. ಹೀಗಾಗುತ್ತಿರುವುದೇಕೆ ಎಂಬುದನ್ನು ಶಾಸ್ತ್ರಗಳು ವಿವರಿಸುತ್ತವೆ. ದೇವರ ರಾಜ್ಯವು 1914ರಲ್ಲಿ ಸ್ಥಾಪಿಸಲ್ಪಟ್ಟದ್ದರ ಬೆನ್ನಿಗೆ ಸ್ವರ್ಗದಲ್ಲಿ ಯುದ್ಧವು ಆರಂಭವಾಯಿತು. ಅದರಲ್ಲಿ ಸೈತಾನನೂ ಅವನ ದೆವ್ವಗಳೂ ಸೋಲಿಸಲ್ಪಟ್ಟು ಭೂಮಿಯ ಕ್ಷೇತ್ರಕ್ಕೆ ದೊಬ್ಬಲ್ಪಟ್ಟರು. ಇದರಿಂದ ಕೋಪೋದ್ರಿಕ್ತನಾಗಿ ಸೈತಾನನು ತನ್ನ ಭೂವ್ಯಾಪಕವಾದ ವಂಚನೆಯ ಚಳುವಳಿಯನ್ನು ತೀವ್ರಗೊಳಿಸಿದ್ದಾನೆ. (ಪ್ರಕಟನೆ 12:1-9, 12, 17) ತನಗೆ ಸಾಧ್ಯವಿರುವ ವಿಧಗಳಲ್ಲೆಲ್ಲಾ ಅವನು “ದೇವರಾದುಕೊಂಡವರನ್ನು ಸಹ ಮೋಸ”ಗೊಳಿಸಲು ಪ್ರಯತ್ನಿಸುತ್ತಾನೆ. (ಮತ್ತಾಯ 24:24) ದೇವಜನರೋಪಾದಿ ನಾವೇ ಅವನ ಪ್ರಧಾನ ಗುರಿಹಲಗೆಗಳು. ನಾವು ಯೆಹೋವನ ಅನುಗ್ರಹವನ್ನು ಮತ್ತು ನಿತ್ಯಜೀವದ ಪ್ರತೀಕ್ಷೆಯನ್ನು ಕಳೆದುಕೊಳ್ಳುವಂತೆ ಮಾಡಲು ಅವನು ನಮ್ಮ ಆಧ್ಯಾತ್ಮಿಕತೆಯನ್ನು ನಾಶಗೊಳಿಸಲು ಪ್ರಯತ್ನಿಸುತ್ತಾನೆ.
4. ಬೈಬಲನ್ನು ಯೆಹೋವನ ಸೇವಕರು ಹೇಗೆ ವೀಕ್ಷಿಸುತ್ತಾರೆ, ಮತ್ತು ಲೋಕವು ಅದನ್ನು ಹೇಗೆ ವೀಕ್ಷಿಸುತ್ತದೆ?
4 ಸೈತಾನನು, ನಮ್ಮ ಪ್ರೀತಿಪೂರ್ಣ ಸೃಷ್ಟಿಕರ್ತನ ಕುರಿತು ನಮಗೆ ಬೋಧಿಸುವ ಅಮೂಲ್ಯ ಗ್ರಂಥವಾದ ಬೈಬಲಿನ ಹೆಸರನ್ನು ಕೆಡಿಸಲು ಪ್ರಯತ್ನಿಸುತ್ತಾನೆ. ಯೆಹೋವನ ಸೇವಕರು ಬೈಬಲನ್ನು ಪ್ರೀತಿಸುತ್ತಾರೆ ಮತ್ತು ಅದನ್ನು ಅಮೂಲ್ಯವೆಂದೆಣಿಸುತ್ತಾರೆ. ಅದು ದೇವರ ಪ್ರೇರಿತ ವಾಕ್ಯವಾಗಿದೆಯೇ ಹೊರತು ಮನುಷ್ಯನದ್ದಲ್ಲವೆಂದು ನಮಗೆ ತಿಳಿದದೆ. (1 ಥೆಸಲೊನೀಕ 2:13; 2 ತಿಮೊಥೆಯ 3:16) ಆದರೆ ಸೈತಾನನ ಲೋಕವು ನಾವು ಇದಕ್ಕೆ ವಿರುದ್ಧವಾದದ್ದನ್ನು ಯೋಚಿಸುವಂತೆ ಬಯಸುತ್ತದೆ. ಉದಾಹರಣೆಗೆ, ಬೈಬಲನ್ನು ಪ್ರತಿಭಟಿಸುವ ಒಂದು ಪುಸ್ತಕದ ಮುನ್ನುಡಿ ಹೇಳುವುದು: “ಬೈಬಲ್ ‘ಪವಿತ್ರ’ವೂ ಅಲ್ಲ, ‘ದೇವರ ವಾಕ್ಯ’ವೂ ಅಲ್ಲ. ಅದನ್ನು ದೇವಪ್ರೇರಿತ ಸಂತರಲ್ಲ ಬದಲಾಗಿ, ಅಧಿಕಾರದ ದಾಹವುಳ್ಳ ಪುರೋಹಿತರು ಬರೆದಿದ್ದಾರೆ.” ಇಂತಹ ವಾದಗಳನ್ನು ನಂಬುವಂತೆ ನಡೆಸಲ್ಪಡುವವರು, ತಮಗಿಷ್ಟವಾದ ರೀತಿಯಲ್ಲಿ ದೇವರನ್ನು ಆರಾಧಿಸಬಹುದು ಅಥವಾ ಆತನನ್ನು ಆರಾಧಿಸುವ ಆವಶ್ಯಕತೆಯೇ ಇಲ್ಲ ಎಂಬ ತಪ್ಪುಕಲ್ಪನೆಗೆ ಬಲಿಬೀಳಬಹುದು.—ಜ್ಞಾನೋಕ್ತಿ 14:12.
5. (ಎ) ಬೈಬಲಿಗೆ ಸಂಬಂಧಿಸಿದ ಧರ್ಮಗಳ ಕುರಿತು ಒಬ್ಬ ಗ್ರಂಥಕರ್ತನು ಏನೆಂದು ಪ್ರತಿಪಾದಿಸಿದನು? (ಬಿ) ಕೆಲವು ಸಾಮಾನ್ಯ ಲೌಕಿಕ ವಿಚಾರಗಳು, ಬೈಬಲ್ ಏನನ್ನುತ್ತದೊ ಅದರೊಂದಿಗೆ ಹೋಲಿಸುವಾಗ ಹೇಗೆ ಭಿನ್ನವಾಗಿವೆ? (ಮುಂದಿನ ಪುಟದಲ್ಲಿರುವ ಚೌಕವನ್ನು ಸೇರಿಸಿರಿ.)
5 ಬೈಬಲಿನ ಮೇಲೆ ಆಗುತ್ತಿರುವ ಪ್ರತ್ಯಕ್ಷ ಹಾಗೂ ಪರೋಕ್ಷ ಆಕ್ರಮಣಗಳು ಮತ್ತು ಬೈಬಲನ್ನು ಬೆಂಬಲಿಸುತ್ತೇವೆಂದು ಹೇಳಿಕೊಳ್ಳುವವರ ಧಾರ್ಮಿಕ ಕಾಪಟ್ಯದ ಫಲವಾಗಿ ಧರ್ಮದ ಕುರಿತು ಮತ್ತು ಬೈಬಲಿನೊಂದಿಗೆ ಜೊತೆಗೂಡಿರುವ ಧರ್ಮದ ಕುರಿತಾಗಿಯೂ ಪ್ರತಿಕೂಲ ಅಭಿಪ್ರಾಯವು ಹೆಚ್ಚುತ್ತಿದೆ. ವಾರ್ತಾಮಾಧ್ಯಮ ಮತ್ತು ಉಚ್ಚ ಶಿಕ್ಷಣವನ್ನು ಪಡೆದಿರುವವರ ಮಧ್ಯೆ ಧರ್ಮವು ಆಕ್ರಮಣಕ್ಕೊಳಗಾಗಿದೆ. ಒಬ್ಬ ಲೇಖಕನು ಗಮನಿಸಿದ್ದು: “ಯೆಹೂದಮತ ಮತ್ತು ಕ್ರೈಸ್ತಮತದ ಕುರಿತಾಗಿ ಜನಪ್ರಿಯ ಸಂಸ್ಕೃತಿಯಲ್ಲಿ ಹಬ್ಬಿರುವ ಅಭಿಪ್ರಾಯಗಳು ಪ್ರತಿಕೂಲವಾಗಿವೆ. ಹೆಚ್ಚೆಂದರೆ ಅವು ಹಳೆಯ ಶೈಲಿಯಲ್ಲಿ ಆಕರ್ಷಣೀಯವಾದದ್ದೆಂದು ಎಣಿಸಲ್ಪಡುತ್ತವೆ; ಅತಿ ಕನಿಷ್ಠ ನೋಟದಿಂದಲಾದರೊ ಅವುಗಳನ್ನು, ಬುದ್ಧಿಶಕ್ತಿಯ ಪ್ರೌಢತೆಯನ್ನು ತಡೆಯುವ ಹಾಗೂ ವೈಜ್ಞಾನಿಕ ಪ್ರಗತಿಗೆ ಅಡಚಣೆಯನ್ನುಂಟುಮಾಡುವ ಹಳೇಕಾಲದ ದೃಷ್ಟಿಕೋನಗಳಾಗಿ ಎಣಿಸಲ್ಪಡುತ್ತವೆ. ಮತ್ತು ಇತ್ತೀಚಿನ ವರುಷಗಳಲ್ಲಿ, ಈ ತಾತ್ಸಾರ ಭಾವವು ಕುಚೋದ್ಯವನ್ನೂ ಬಹಿರಂಗ ವೈರತ್ವವನ್ನೂ ವರ್ಧಿಸಿದೆ.” ಈ ಪ್ರತಿಕೂಲ ಭಾವವು ಅನೇಕವೇಳೆ ದೇವರ ಅಸ್ತಿತ್ವವನ್ನು ಅಲ್ಲಗಳೆಯುವವರಿಂದಲೂ ‘ವಿಚಾರ ಮಾಡಿಮಾಡಿ ಫಲಕಾಣದಿದ್ದವರಿಂದಲೂ’ ಬರುತ್ತದೆ.—ರೋಮಾಪುರ 1:20-22.
6. ದೇವರು ಖಂಡಿಸಿರುವ ಲೈಂಗಿಕಾಚಾರಗಳನ್ನು ಲೋಕವು ಹೇಗೆ ವೀಕ್ಷಿಸುತ್ತದೆ?
6 ಆದಕಾರಣ, ಜನರು ನಡವಳಿಕೆಯ ಸಂಬಂಧದಲ್ಲಿನ ದೇವರ ಮಟ್ಟಗಳಿಂದ ದೂರ ಸರಿಯುತ್ತಿರುವುದು ಆಶ್ಚರ್ಯದ ಸಂಗತಿಯಲ್ಲ. ದೃಷ್ಟಾಂತಕ್ಕೆ, ಬೈಬಲು ಸಲಿಂಗೀಕಾಮ ಸಂಬಂಧಗಳನ್ನು “ಅವಲಕ್ಷಣವಾದ”ದ್ದೆಂದು ಕರೆಯುತ್ತದೆ. (ರೋಮಾಪುರ 1:26, 27) ಹಾದರ ಮತ್ತು ವ್ಯಭಿಚಾರವನ್ನು ನಡೆಸುತ್ತಿರುವವರು ದೇವರ ರಾಜ್ಯಕ್ಕೆ ಸೇರುವುದಿಲ್ಲವೆಂದೂ ಅದು ಹೇಳುತ್ತದೆ. (1 ಕೊರಿಂಥ 6:9) ಆದರೂ ಅನೇಕ ದೇಶಗಳಲ್ಲಿ, ಅಂತಹ ಲೈಂಗಿಕಾಚಾರಗಳು ಮನ್ನಣೆಯನ್ನು ಪಡೆದಿರುವುದು ಮಾತ್ರವಲ್ಲ, ಪುಸ್ತಕ, ಪತ್ರಿಕೆ, ಸಂಗೀತ, ಚಲನಚಿತ್ರ, ಮತ್ತು ಟಿವಿ ಕಾರ್ಯಕ್ರಮಗಳು ಅವನ್ನು ಅಪೇಕ್ಷಣೀಯವೆಂದೂ ಚಿತ್ರಿಸುತ್ತವೆ. ಅಂತಹ ಪದ್ಧತಿಗಳನ್ನು ಅಸಮ್ಮತಿಸುವವರನ್ನು ಸಂಕುಚಿತಮನಸ್ಸಿನವರೂ ತಪ್ಪುಹಿಡಿಯುವವರೂ ಆಧುನಿಕ ಆಲೋಚನೆಗಳ ಕುರಿತು ತಿಳಿವಳಿಕೆಯಿಲ್ಲದವರೆಂದೂ ವೀಕ್ಷಿಸಲಾಗುತ್ತದೆ. ದೇವರ ಮಟ್ಟಗಳನ್ನು ಆತನ ಪ್ರೀತಿಪರ ಚಿಂತೆಯ ಅಭಿವ್ಯಕ್ತಿಗಳೋಪಾದಿ ವೀಕ್ಷಿಸುವ ಬದಲಿಗೆ ಲೋಕವು ಅವುಗಳನ್ನು ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸಿದ್ಧಿಗೆ ತಡೆಗಳೋಪಾದಿ ದೃಷ್ಟಿಸುತ್ತದೆ.—ಜ್ಞಾನೋಕ್ತಿ 17:15; ಯೂದ 4.
7. ನಾವು ಯಾವ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳಬೇಕು?
7 ದೇವರನ್ನು ವಿರೋಧಿಸುವುದರಲ್ಲಿ ಹೆಚ್ಚೆಚ್ಚು ಪ್ರಬಲವಾಗುತ್ತಾ ಹೋಗುತ್ತಿರುವ ಲೋಕದ ಮಧ್ಯೆ ಇರುವ ನಮಗೆ, ನಮ್ಮ ಸ್ವಂತ ಮನೋಭಾವ ಮತ್ತು ಮೌಲ್ಯಗಳನ್ನು ಪರಿಶೀಲಿಸುವುದು ವಿವೇಕಯುತವಾಗಿದೆ. ಯೆಹೋವನ ಆಲೋಚನೆ ಮತ್ತು ಮಟ್ಟಗಳಿಂದ ನಾವು ನಿಧಾನವಾಗಿ ದೂರ ತೇಲಿಹೋಗುತ್ತಿಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲಿಕ್ಕಾಗಿ ನಾವು ಆಗಿಂದಾಗ್ಗೆ ನಮ್ಮನ್ನು ಪ್ರಾರ್ಥನಾಪೂರ್ವಕವಾಗಿಯೂ ಪ್ರಾಮಾಣಿಕವಾಗಿಯೂ ಪರೀಕ್ಷಿಸಿಕೊಳ್ಳಬೇಕು. ಉದಾಹರಣೆಗೆ, ನಾವು ಹೀಗೆ ಕೇಳಿಕೊಳ್ಳಬಹುದು: ‘ನಾನು ಕೆಲವು ವರುಷಗಳ ಹಿಂದೆ ದೂರವಿಡುತ್ತಿದ್ದಂಥ ವಿಷಯಗಳಿಂದಲೇ ಈಗ ನನ್ನನ್ನು ರಂಜಿಸಿಕೊಳ್ಳುತ್ತಿದ್ದೇನೊ? ದೇವರು ಖಂಡಿಸುವಂಥ ವಿಷಯಗಳ ಕಡೆಗೆ ನಾನು ಹಿಂದಿಗಿಂತ ಈಗ ಹೆಚ್ಚು ಸೈರಣೆಯನ್ನು ತೋರಿಸುತ್ತಿದ್ದೇನೊ? ನಾನು ಹಿಂದೆ ಆಧ್ಯಾತ್ಮಿಕ ವಿಷಯಗಳನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತಿದ್ದೇನೊ ಅದಕ್ಕೆ ಹೋಲಿಸುವಾಗ ಈಗ ನಾನು ಕಡಿಮೆ ಗಂಭೀರತೆಯಿಂದ ಪರಿಗಣಿಸುವ ಪ್ರವೃತ್ತಿಯುಳ್ಳವನಾಗಿದ್ದೇನೊ? ನನ್ನ ಜೀವನರೀತಿಯು ನಾನು ರಾಜ್ಯಾಭಿರುಚಿಗಳನ್ನು ಪ್ರಥಮವಾಗಿಡುತ್ತೇನೆಂದು ತೋರಿಸುತ್ತದೊ?’ (ಮತ್ತಾಯ 6:33) ಇಂತಹ ಪರ್ಯಾಲೋಚನೆಗಳು ಲೋಕದ ಆತ್ಮವನ್ನು ಪ್ರತಿರೋಧಿಸುವಂತೆ ನಮಗೆ ಸಹಾಯಮಾಡುವುವು.
‘ಎಂದಿಗೂ ತೇಲಿಹೋಗದಿರಿ’
8. ಒಬ್ಬನು ಹೇಗೆ ಯೆಹೋವನಿಂದ ದೂರವಾಗಿ ತೇಲಿಹೋಗಬಹುದು?
8 ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ ಬರೆದುದು: “ನಾವು ಎಂದಿಗೂ ತೇಲಿಹೋಗದಂತೆ, ಕೇಳಿಸಿಕೊಂಡಿರುವ ವಿಷಯಗಳಿಗೆ ಸಾಧಾರಣಕ್ಕಿಂತ ಹೆಚ್ಚು ಗಮನವನ್ನು ಕೊಡುವುದು ಆವಶ್ಯಕ.” (ಇಬ್ರಿಯ 2:1, NW) ನಿರ್ಧರಿತವಾದ ಪಥದಿಂದ ವಿಚಲಿತವಾಗಿ ಬೇರೆ ಕಡೆ ತೇಲಿಕೊಂಡು ಹೋಗುತ್ತಿರುವ ಒಂದು ಹಡಗು ಅದರ ಗಮ್ಯಸ್ಥಾನವನ್ನು ತಲಪದು. ಒಬ್ಬ ಕಪ್ತಾನನು ಗಾಳಿ ಮತ್ತು ನೀರಿನ ಹರಿವಿಗೆ ಗಮನಕೊಡದಿರುವಲ್ಲಿ ಅವನ ಹಡಗು ಸುರಕ್ಷಿತ ಹಡಗುದಾಣದಿಂದ ದೂರ ಸರಿದು ಬಂಡೆ ತುಂಬಿದ ತೀರದಲ್ಲಿ ಸುಲಭವಾಗಿ ನೆಲಕಚ್ಚಬಹುದು. ತದ್ರೀತಿಯಲ್ಲಿ ದೇವರ ವಾಕ್ಯದ ಅಮೂಲ್ಯ ಸತ್ಯಗಳಿಗೆ ನಾವು ಗಮನಕೊಡದಿರುವಲ್ಲಿ ನಾವೂ ಸುಲಭವಾಗಿ ಯೆಹೋವನಿಂದ ದೂರ ತೇಲಿಹೋಗಿ ಆಧ್ಯಾತ್ಮಿಕವಾಗಿ ಹಡಗುನಷ್ಟವನ್ನು ಅನುಭವಿಸಬಹುದು. ನಾವು ಸತ್ಯವನ್ನು ಪೂರ್ತಿಯಾಗಿ ತಳ್ಳಿಹಾಕಿದಾಗಲೇ ಈ ರೀತಿಯಲ್ಲಿ ನಷ್ಟಹೊಂದುತ್ತೇವೆಂದೇನಿಲ್ಲ. ವಾಸ್ತವದಲ್ಲಿ, ಥಟ್ಟನೆ ಮತ್ತು ಬೇಕುಬೇಕೆಂದು ಯೆಹೋವನನ್ನು ತ್ಯಜಿಸುವವರು ಕೇವಲ ಕೊಂಚ ಜನ. ಹೆಚ್ಚಾಗಿ ಸಂಭವಿಸುವ ಸಂಗತಿಯೇನೆಂದರೆ, ದೇವರ ವಾಕ್ಯಕ್ಕೆ ಗಮನಕೊಡುವುದರಿಂದ ಅವರನ್ನು ಅಪಕರ್ಷಿಸುವ ಯಾವುದೊ ವಿಷಯದಲ್ಲಿ ಅವರು ಕ್ರಮೇಣವಾಗಿ ಸಿಕ್ಕಿಕೊಳ್ಳುತ್ತಾರೆ. ಮತ್ತು ಹೆಚ್ಚುಕಡಿಮೆ ಗಮನಕ್ಕೆಬಾರದಷ್ಟು ನಿಧಾನವಾಗಿ ಅವರು ಪಾಪದೊಳಕ್ಕೆ ತೇಲಿಹೋಗುತ್ತಾರೆ. ನಿದ್ರೆಮಾಡುತ್ತಿರುವ ಕಪ್ತಾನನಂತೆ, ಇಂತಹ ವ್ಯಕ್ತಿಗಳು ಎಚ್ಚರಗೊಳ್ಳುವಷ್ಟರಲ್ಲಿ ಹೊತ್ತು ಮೀರಿ ಹೋಗಿರುತ್ತದೆ.
9. ಯೆಹೋವನು ಸೊಲೊಮೋನನನ್ನು ಯಾವ ವಿಧಗಳಲ್ಲಿ ಹರಸಿದನು?
9 ಸೊಲೊಮೋನನ ಜೀವನ ಪಥವನ್ನು ಪರಿಗಣಿಸಿರಿ. ಯೆಹೋವನು ಇಸ್ರಾಯೇಲಿನ ರಾಜತ್ವವನ್ನು ಅವನಿಗೆ ವಹಿಸಿಕೊಟ್ಟನು. ಸೊಲೊಮೋನನು ದೇವಾಲಯವನ್ನು ಕಟ್ಟುವಂತೆ ದೇವರು ಅನುಮತಿಸಿದನು ಮತ್ತು ಬೈಬಲಿನ ಕೆಲವು ಪುಸ್ತಕಗಳನ್ನು ಬರೆಯುವಂತೆಯೂ ನಿರ್ದೇಶಿಸಿದನು. ಯೆಹೋವನು ಎರಡು ಸಂದರ್ಭಗಳಲ್ಲಿ ಅವನೊಂದಿಗೆ ಮಾತಾಡಿದನು, ಹಾಗೂ ಅವನಿಗೆ ಐಶ್ವರ್ಯ, ಖ್ಯಾತಿ, ಮತ್ತು ಅವನ ಆಳ್ವಿಕೆಯ ಸಮಯದಲ್ಲಿ ಶಾಂತಿಯನ್ನು ದಯಪಾಲಿಸಿದನು. ಎಲ್ಲಕ್ಕೂ ಮಿಗಿಲಾಗಿ, ಯೆಹೋವನು ಮಹಾ ವಿವೇಕವನ್ನು ಕೊಡುತ್ತ ಸೊಲೊಮೋನನನ್ನು ಹರಸಿದನು. ಬೈಬಲ್ ಹೇಳುವುದು: “ದೇವರು ಸೊಲೊಮೋನನಿಗೆ ಸಮುದ್ರತೀರದ ಉಸುಬಿನಷ್ಟು ಅಪರಿಮಿತವಾದ ಜ್ಞಾನವಿವೇಕಗಳನ್ನೂ ಮನೋವಿಶಾಲತೆಯನ್ನೂ ಅನುಗ್ರಹಿಸಿದನು. ಅವನ ಜ್ಞಾನವು ಮೂಡಣದೇಶದವರೆಲ್ಲರ ಜ್ಞಾನಕ್ಕಿಂತಲೂ ಐಗುಪ್ತ್ಯರ ಜ್ಞಾನಕ್ಕಿಂತಲೂ ಮಿಗಿಲಾದದ್ದು.” (1 ಅರಸುಗಳು 4:21, 29, 30; 11:9) ಹೀಗಿದ್ದುದರಿಂದ ಸೊಲೊಮೋನನು ನಿಶ್ಚಯವಾಗಿಯೂ ದೇವರಿಗೆ ನಂಬಿಗಸ್ತನಾಗಿದ್ದಿರಬೇಕೆಂದು ಯಾರಾದರೂ ಯೋಚಿಸ್ಯಾರು. ಆದರೆ ಸೊಲೊಮೋನನು ಧರ್ಮಭ್ರಷ್ಟತೆಯೊಳಗೆ ತೇಲಿಕೊಂಡು ಹೋದನು. ಅದು ಹೇಗಾಯಿತು?
10. ಯಾವ ಆದೇಶಕ್ಕೆ ವಿಧೇಯನಾಗಲು ಸೊಲೊಮೋನನು ತಪ್ಪಿದನು, ಮತ್ತು ಪರಿಣಾಮವೇನಾಯಿತು?
10 ಸೊಲೊಮೋನನಿಗೆ ದೇವರ ಧರ್ಮಶಾಸ್ತ್ರದ ಪೂರ್ತಿ ಪರಿಚಯವೂ ತಿಳಿವಳಿಕೆಯೂ ಇತ್ತು. ಇಸ್ರಾಯೇಲಿನಲ್ಲಿ ಅರಸರಾಗುವವರಿಗೆ ಕೊಡಲ್ಪಟ್ಟ ಸಲಹೆಸೂಚನೆಗಳಲ್ಲಿ ಅವನು ವಿಶೇಷ ಆಸಕ್ತಿಯನ್ನು ವಹಿಸಿಕೊಂಡನೆಂಬುದರಲ್ಲಿ ಸಂದೇಹವಿಲ್ಲ. ಆ ಸಲಹೆಸೂಚನೆಗಳಲ್ಲಿ ಒಂದು ಹೀಗಿತ್ತು: “ಅವನು ಅನೇಕ ಸ್ತ್ರೀಯರನ್ನು ಮದುವೆಮಾಡಿಕೊಳ್ಳಬಾರದು; ಮಾಡಿಕೊಂಡರೆ ಅವನ ಮನಸ್ಸು ಯೆಹೋವನ ಕಡೆಯಿಂದ ತಿರುಗುವದಕ್ಕೆ ಅವಕಾಶವಾಗುವದು.” (ಧರ್ಮೋಪದೇಶಕಾಂಡ 17:14, 17) ಈ ಸ್ಪಷ್ಟ ನಿಯಮದ ಹೊರತಾಗಿಯೂ ಸೊಲೊಮೋನನು ಏಳ್ನೂರು ಹೆಂಡತಿಯರನ್ನೂ ಮುನ್ನೂರು ಉಪಪತ್ನಿಯರನ್ನೂ ಪಡೆದುಕೊಂಡನು. ಈ ಸ್ತ್ರೀಯರಲ್ಲಿ ಅನೇಕರು ಅನ್ಯದೇವರ ಆರಾಧಕರಾಗಿದ್ದರು. ಸೊಲೊಮೋನನು ಅಷ್ಟು ಮಂದಿ ಹೆಂಡತಿಯರನ್ನು ಪಡೆದುಕೊಂಡ ಕಾರಣವಾಗಲಿ ಹಾಗೆ ಮಾಡಿದ್ದನ್ನು ಸರಿ ಎಂದು ಅವನು ಹೇಗೆ ಸಮರ್ಥಿಸಿದನೆಂಬುದಾಗಲಿ ನಮಗೆ ತಿಳಿದಿಲ್ಲ. ಆದರೆ ಅವನು ದೇವರ ಸ್ಪಷ್ಟ ಆದೇಶಕ್ಕೆ ವಿಧೇಯನಾಗಲು ತಪ್ಪಿದನು ಎಂಬುದಷ್ಟೇ ನಮಗೆ ತಿಳಿದಿದೆ. ಇದರ ಪರಿಣಾಮವು ಸರಿಯಾಗಿ ಯೆಹೋವನ ಎಚ್ಚರಿಕೆಗನುಸಾರವಾಗಿತ್ತು. ನಾವು ಹೀಗೆ ಓದುತ್ತೇವೆ: “ಈ ಸ್ತ್ರೀಯರು . . . ಅವನ ಹೃದಯವನ್ನು ಅನ್ಯದೇವತೆಗಳ ಕಡೆಗೆ ತಿರುಗಿಸಿದರು.” (1 ಅರಸುಗಳು 11:3, 4) ಕ್ರಮೇಣ, ಆದರೆ ನಿಶ್ಚಯವಾಗಿ, ಅವನ ದೈವಿಕ ವಿವೇಕ ಕಳೆಗುಂದಿತು. ಅವನು ದೂರ ತೇಲಿಹೋದನು. ಕಾಲ ದಾಟಿದಂತೆ, ದೇವರಿಗೆ ವಿಧೇಯನಾಗಿ ಆತನನ್ನು ಮೆಚ್ಚಿಸುವ ಅವನ ಬಯಕೆಯ ಸ್ಥಾನವನ್ನು ತನ್ನ ವಿಧರ್ಮಿ ಹೆಂಡತಿಯರನ್ನು ಮೆಚ್ಚಿಸುವ ಬಯಕೆಯು ಆಕ್ರಮಿಸಿತು. ಎಷ್ಟು ವಿಷಾದಕರ. ಏಕೆಂದರೆ, “ಮಗನೇ, ಜ್ಞಾನವನ್ನು ಪಡೆದುಕೊಂಡು ನನ್ನ ಮನಸ್ಸನ್ನು ಸಂತೋಷಪಡಿಸು; ಹಾಗಾದರೆ, ನನ್ನನ್ನು ದೂರುವವನಿಗೆ ನಾನು ಉತ್ತರ ಕೊಡಲಾಗುವದು,” ಎಂಬ ಮಾತುಗಳನ್ನು ಈ ಮೊದಲು ಬರೆದವನು ಸೊಲೊಮೋನನೇ!—ಜ್ಞಾನೋಕ್ತಿ 27:11.
ಲೋಕದ ಆತ್ಮವು ಬಲಶಾಲಿಯಾಗಿದೆ
11. ನಮ್ಮ ಮನಸ್ಸಿನಲ್ಲಿ ಏನನ್ನು ತುಂಬಿಸುತ್ತೇವೊ ಅದು ನಮ್ಮ ಯೋಚನೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ?
11 ಸೊಲೊಮೋನನ ಈ ಮಾದರಿ ನಮಗೆ ಕಲಿಸುವುದೇನಂದರೆ, ನಮಗೆ ಸತ್ಯ ಗೊತ್ತಿದೆ ಎಂಬಮಾತ್ರಕ್ಕೆ ಲೌಕಿಕ ಪ್ರಭಾವಗಳು ನಮ್ಮ ಯೋಚನೆಗಳನ್ನು ಪ್ರಭಾವಿಸಲಾರವು ಎಂದು ತರ್ಕಿಸುವುದು ಅಪಾಯಕರ. ಶಾರೀರಿಕ ಆಹಾರ ನಮ್ಮ ದೇಹದ ಮೇಲೆ ಪರಿಣಾಮ ಬೀರುವಂತೆಯೇ, ನಾವು ಮನಸ್ಸಿನಲ್ಲಿ ಏನನ್ನು ತುಂಬಿಸುತ್ತೇವೊ ಅದು ಆಹಾರದಂತೆ ಇದೆ ಮತ್ತು ಇದು ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಮನಸ್ಸಿನಲ್ಲಿ ನಾವೇನನ್ನು ತುಂಬಿಸುತ್ತೇವೊ ಅದು ನಮ್ಮ ಯೋಚನೆ ಮತ್ತು ಮನೋಭಾವಗಳನ್ನು ಪ್ರಭಾವಿಸುತ್ತದೆ. ಇದನ್ನು ಅರಿತಿರುವ ಕಂಪೆನಿಗಳು ಪ್ರತಿ ವರುಷ ಕೋಟಿಗಟ್ಟಲೆ ಡಾಲರುಗಳನ್ನು ತಮ್ಮ ಉತ್ಪನ್ನಗಳ ಜಾಹೀರಾತಿಗಾಗಿ ವ್ಯಯಿಸುತ್ತವೆ. ಯಶಸ್ವೀ ಜಾಹೀರಾತುಗಳು ಗ್ರಾಹಕರ ಚಿತ್ರವಿಚಿತ್ರ ಹಂಬಲಗಳನ್ನು ರಂಜಿಸಲು ಆಕರ್ಷಕ ಪದಗಳನ್ನೂ ಚಿತ್ರಗಳನ್ನೂ ಉಪಯೋಗಿಸುತ್ತವೆ. ಸಾಮಾನ್ಯವಾಗಿ ಜನರು ಇಂತಹ ಜಾಹೀರಾತುಗಳನ್ನು ಒಮ್ಮೆಯೊ ಎರಡಾವರ್ತಿಯೊ ನೋಡಿದ ಕೂಡಲೇ ಹೋಗಿ ಆ ಉತ್ಪನ್ನಗಳನ್ನು ಕೊಳ್ಳಲು ಮನಸ್ಸುಮಾಡುವುದಿಲ್ಲವೆಂದು ಜಾಹೀರಾತುಗಾರರಿಗೆ ತಿಳಿದದೆ. ಆದರೆ ಅದೇ ಜಾಹೀರಾತನ್ನು ಪದೇಪದೇ ನೋಡುವಲ್ಲಿ, ಸಮಯಾನಂತರ ಗ್ರಾಹಕರು ಅದನ್ನು ಇಷ್ಟಪಡಲಾರಂಭಿಸುತ್ತಾರೆ. ಜಾಹೀರಾತು ಕಾರ್ಯಸಾಧಕ ಮಾಧ್ಯಮವೆಂಬುದು ನಿಜ—ಇಲ್ಲದಿದ್ದಲ್ಲಿ ಅದರಲ್ಲಿ ಯಾರೂ ಹಣವನ್ನು ವ್ಯಯಿಸುತ್ತಿರಲಿಲ್ಲ. ಅದು ಸಾರ್ವಜನಿಕರ ಯೋಚನೆ ಮತ್ತು ಮನೋಭಾವಗಳ ಮೇಲೆ ಬಲವಾದ ಪ್ರಭಾವವನ್ನು ಬೀರಬಲ್ಲದು.
12. (ಎ) ಸೈತಾನನು ಜನರ ಯೋಚನೆಗಳನ್ನು ಪ್ರಭಾವಿಸುವುದು ಹೇಗೆ? (ಬಿ) ಕ್ರೈಸ್ತರೂ ಪ್ರಭಾವಿತರಾಗಬಲ್ಲರೆಂಬುದನ್ನು ಯಾವುದು ತೋರಿಸುತ್ತದೆ?
12 ಒಬ್ಬ ಜಾಹೀರಾತುಗಾರನಂತೆಯೆ ಸೈತಾನನು ತನ್ನ ವಿಚಾರಗಳನ್ನು ಆಕರ್ಷಕ ಹೊದಿಕೆಗಳಿಂದ ಹೊದಿಸುತ್ತಾನೆ. ಏಕೆಂದರೆ ಸಮಯ ದಾಟಿದಂತೆ ಜನರನ್ನು ತನ್ನ ವಿಚಾರಧಾರೆಗೆ ಸೆಳೆಯಬಲ್ಲೆನೆಂಬುದು ಅವನಿಗೆ ತಿಳಿದಿದೆ. ಮನೋರಂಜನೆ ಮತ್ತು ಇತರ ಮಾಧ್ಯಮಗಳ ಮೂಲಕ ಕೆಟ್ಟದ್ದು ಒಳ್ಳೆಯದೆಂದೂ ಒಳ್ಳೆಯದು ಕೆಟ್ಟದ್ದೆಂದೂ ನಂಬುವಂತೆ ಮಾಡಿ ಅವನು ಅವರನ್ನು ವಂಚಿಸುತ್ತಾನೆ. (ಯೆಶಾಯ 5:20) ಸೈತಾನನ ತಪ್ಪು ಮಾಹಿತಿಯ ಈ ಚಳುವಳಿಗೆ ಸತ್ಯ ಕ್ರೈಸ್ತರು ಸಹ ಬಲಿಬಿದ್ದಿರುತ್ತಾರೆ. ಬೈಬಲು ಎಚ್ಚರಿಸುವುದು: “ಮುಂದಣ ದಿನಗಳಲ್ಲಿ ಕೆಲವರು ವಂಚಿಸುವ ಆತ್ಮಗಳ ನುಡಿಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ಕ್ರಿಸ್ತನಂಬಿಕೆಯಿಂದ ಭ್ರಷ್ಟರಾಗುವರೆಂದು ದೇವರಾತ್ಮನು ಸ್ಪಷ್ಟವಾಗಿ ಹೇಳುತ್ತಾನೆ. ಸುಳ್ಳುಬೋಧಕರು ಬಂದು ಸ್ವಂತ ಮನಸ್ಸಿನಲ್ಲಿ ಅಪರಾಧಿಗಳೆಂಬ ಬರೆಯುಳ್ಳವರಾದರೂ ತಾವು ನೀತಿವಂತರೆಂದು ತೋರ್ಪಡಿಸಿ”ಕೊಳ್ಳುವರು.—1 ತಿಮೊಥೆಯ 4:1, 2; ಯೆರೆಮೀಯ 6:15.
13. ದುಸ್ಸಹವಾಸವೆಂದರೇನು, ಮತ್ತು ನಮ್ಮ ಸಹವಾಸವು ನಮ್ಮ ಮೇಲೆ ಹೇಗೆ ಪರಿಣಾಮ ಬೀರುತ್ತವೆ?
13 ಲೋಕದ ಆತ್ಮದ ಸೋಂಕಿನಿಂದ ನಮ್ಮಲ್ಲಿ ಯಾವನೂ ರಕ್ಷಿತನಾಗಿರುವುದಿಲ್ಲ. ಸೈತಾನನ ವ್ಯವಸ್ಥೆಯ ಪ್ರಭಾವಗಳು ಮತ್ತು ನವಿರಾದ ಒತ್ತಡಗಳು ಪ್ರಬಲವಾಗಿವೆ. ಬೈಬಲು ವಿವೇಕಯುತವಾಗಿ ಸಲಹೆ ನೀಡುವುದು: “ಮೋಸಹೋಗಬೇಡಿರಿ; ದುಸ್ಸಹವಾಸವು ಸದಾಚಾರವನ್ನು ಕೆಡಿಸುತ್ತದೆ.” (1 ಕೊರಿಂಥ 15:33) ಈ ದುಸ್ಸಹವಾಸದಲ್ಲಿ, ಲೋಕದ ಆತ್ಮವನ್ನು ಪ್ರತಿಬಿಂಬಿಸುವ ಯಾವುದೂ ಇಲ್ಲವೆ ಯಾವನೂ—ಸಭೆಯೊಳಗಿಂದಲೂ—ಸೇರಿಕೊಂಡಿರಬಲ್ಲನು. ದುಸ್ಸಹವಾಸ ನಮಗೆ ಹಾನಿಯನ್ನು ತರಲಾರದು ಎಂದು ನಾವು ತರ್ಕಿಸುವುದಾದರೆ ಸುಸಹವಾಸವು ಸಹ ನಮಗೆ ಸಹಾಯಮಾಡಲಾರದು ಎಂದೂ ನಾವು ತೀರ್ಮಾನಿಸಬೇಕಾಗುವುದಲ್ಲವೆ? ಆದರೆ ಅದು ಎಷ್ಟು ತಪ್ಪು! ಬೈಬಲು ಸ್ಪಷ್ಟ ರೀತಿಯಲ್ಲಿ ಹೀಗೆ ತಿಳಿಸುತ್ತದೆ: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.”—ಜ್ಞಾನೋಕ್ತಿ 13:20.
14. ನಾವು ಲೋಕದ ಆತ್ಮವನ್ನು ಯಾವ ವಿಧಗಳಲ್ಲಿ ಎದುರಿಸಬಲ್ಲೆವು?
14 ಲೋಕದ ಆತ್ಮವನ್ನು ಪ್ರತಿರೋಧಿಸಬೇಕಾದರೆ ನಾವು ವಿವೇಕಿಗಳ ಅಂದರೆ ಯೆಹೋವನನ್ನು ಸೇವಿಸುವವರ ಒಡನಾಟ ಮಾಡಬೇಕು. ನಮ್ಮ ಮನಸ್ಸುಗಳನ್ನು ನಂಬಿಕೆವರ್ಧಕ ವಿಷಯಗಳಿಂದ ತುಂಬಿಸಬೇಕು. ಅಪೊಸ್ತಲ ಪೌಲನು ಬರೆದುದು: “ಯಾವಾವದು ಸತ್ಯವೂ ಮಾನ್ಯವೂ ನ್ಯಾಯವೂ ಶುದ್ಧವೂ ಪ್ರೀತಿಕರವೂ ಮನೋಹರವೂ ಆಗಿದೆಯೋ, ಯಾವದು ಸದ್ಗುಣವಾಗಿದೆಯೋ, ಯಾವದು ಕೀರ್ತಿಗೆ ಯೋಗ್ಯವೋ, ಅವೆಲ್ಲವುಗಳನ್ನೂ ಲಕ್ಷ್ಯಕ್ಕೆ ತಂದುಕೊಳ್ಳಿರಿ.” (ಫಿಲಿಪ್ಪಿ 4:8) ಸರಿ ಅಥವಾ ತಪ್ಪು ಯಾವುದೆಂದು ಆಯ್ದುಕೊಳ್ಳುವ ಸಾಮರ್ಥ್ಯವುಳ್ಳವರಾಗಿ ಸೃಷ್ಟಿಸಲ್ಪಟ್ಟವರಾದ ನಾವು, ಯಾವುದನ್ನು ಲಕ್ಷ್ಯಕ್ಕೆ ತಂದುಕೊಳ್ಳಬೇಕೆಂಬುದನ್ನು ಸ್ವತಃ ಆಯ್ಕೆಮಾಡಬಲ್ಲೆವು. ನಾವು ಯಾವಾಗಲೂ, ನಮ್ಮನ್ನು ಯೆಹೋವನ ಹೆಚ್ಚು ಸಮೀಪಕ್ಕೆ ಕೊಂಡೊಯ್ಯುವ ವಿಷಯಗಳನ್ನು ಲಕ್ಷ್ಯಕ್ಕೆ ತಂದುಕೊಳ್ಳುವುದನ್ನೇ ಆಯ್ಕೆಮಾಡೋಣ.
ದೇವರ ಆತ್ಮವು ಹೆಚ್ಚು ಬಲಶಾಲಿಯಾಗಿದೆ
15. ಪುರಾತನ ಕಾಲದ ಕೊರಿಂಥದಲ್ಲಿದ್ದ ಕ್ರೈಸ್ತರು ಆ ನಗರದ ಇತರ ನಿವಾಸಿಗಳಿಗಿಂತ ಭಿನ್ನವಾಗಿದ್ದುದು ಹೇಗೆ?
15 ಲೋಕದ ಆತ್ಮದಿಂದ ತಪ್ಪುದಾರಿಗೆ ಎಳೆಯಲ್ಪಟ್ಟವರಿಗೆ ಅಸದೃಶವಾಗಿ, ಸತ್ಕ್ರೈಸ್ತರಾದರೊ ದೇವರ ಪವಿತ್ರಾತ್ಮದಿಂದ ಮಾರ್ಗದರ್ಶಿಸಲ್ಪಡುತ್ತಾರೆ. ಪೌಲನು ಕೊರಿಂಥದಲ್ಲಿದ್ದ ಸಭೆಗೆ ಬರೆದುದು: “ನಾವು ಲೋಕದ ಆತ್ಮವನ್ನು ಹೊಂದದೆ ದೇವರು ನಮಗೆ ದಯಪಾಲಿಸಿರುವ ಕೃಪಾವರಗಳನ್ನು ತಿಳುಕೊಳ್ಳುವದಕ್ಕಾಗಿ ದೇವರಿಂದ ಬಂದ ಆತ್ಮವನ್ನೇ ಹೊಂದಿದೆವು.” (1 ಕೊರಿಂಥ 2:12) ಪುರಾತನಕಾಲದ ಕೊರಿಂಥವು ಲೋಕದ ಆತ್ಮದಿಂದ ಪೂರ್ತಿಯಾಗಿ ಸುತ್ತುವರಿಯಲ್ಪಟ್ಟಿದ್ದ ಒಂದು ನಗರವಾಗಿತ್ತು. ಅದರ ನಿವಾಸಿಗಳಲ್ಲಿ ಹೆಚ್ಚಿನವರು ಎಷ್ಟು ಕಾಮುಕರಾಗಿದ್ದರೆಂದರೆ, “ಕೊರಿಂಥೀಕರಿಸು” ಎಂಬ ಪದವು “ಲೈಂಗಿಕ ಅನೈತಿಕತೆಯನ್ನು ಮಾಡುತ್ತಿರು” ಎಂಬ ಅರ್ಥವನ್ನು ಪಡೆಯಿತು. ಸೈತಾನನು ಜನರ ಮನಸ್ಸುಗಳನ್ನು ಮಂಕುಮಾಡಿದನು. ಇದರ ಪರಿಣಾಮವಾಗಿ, ಅವರಿಗೆ ಸತ್ಯ ದೇವರ ಕುರಿತು ಇದ್ದ ತಿಳಿವಳಿಕೆ ಲೇಶವೇ ಆಗಿತ್ತು ಇಲ್ಲವೆ ಅದೂ ಇರಲಿಲ್ಲ. (2 ಕೊರಿಂಥ 4:4) ಆದರೂ, ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಕೊರಿಂಥದಲ್ಲಿ ಕೆಲವರ ಮನೋನೇತ್ರಗಳನ್ನು ತೆರೆದು ಅವರು ಸತ್ಯಜ್ಞಾನವನ್ನು ಪಡೆಯುವಂತೆ ಸಾಧ್ಯಮಾಡಿದನು. ಅವರು ದೇವರ ಒಪ್ಪಿಗೆ ಮತ್ತು ಆಶೀರ್ವಾದವನ್ನು ಪಡೆಯಸಾಧ್ಯವಾಗುವ ಸಲುವಾಗಿ, ತಮ್ಮ ಜೀವಿತಗಳಲ್ಲಿ ದೊಡ್ಡ ಬದಲಾವಣೆಗಳನ್ನು ಮಾಡುವಂತೆ ಆತನ ಆತ್ಮವು ಅವರನ್ನು ಪ್ರಚೋದಿಸಿ, ಮಾಗದರ್ಶಿಸಿತು. (1 ಕೊರಿಂಥ 6:9-11) ಲೋಕದ ಆತ್ಮವು ಬಲಾಢ್ಯವಾಗಿದ್ದರೂ, ಯೆಹೋವನ ಆತ್ಮವು ಅದಕ್ಕಿಂತಲೂ ಹೆಚ್ಚು ಬಲಾಢ್ಯವಾಗಿತ್ತು.
16. ನಾವು ದೇವರಾತ್ಮವನ್ನು ಹೇಗೆ ಪಡೆದುಕೊಂಡು ಇಟ್ಟುಕೊಳ್ಳಬಲ್ಲೆವು?
16 ಇದು ಇಂದು ಸಹ ನಿಜವಾಗಿದೆ. ಯೆಹೋವನ ಪವಿತ್ರಾತ್ಮವು ವಿಶ್ವದಲ್ಲೇ ಅತಿ ಬಲಶಾಲಿಯಾದ ಶಕ್ತಿಯಾಗಿದೆ ಮತ್ತು ಆತನದನ್ನು ಯಾರು ನಂಬಿಕೆಯಿಂದ ಅದಕ್ಕಾಗಿ ಬೇಡಿಕೊಳ್ಳುತ್ತಾರೊ ಅವರೆಲ್ಲರಿಗೆ ಬಿಚ್ಚುಗೈಯಿಂದ ಮತ್ತು ಉದಾರವಾಗಿ ಕೊಡುತ್ತಾನೆ. (ಲೂಕ 11:13) ಆದರೆ ದೇವರಾತ್ಮ ದೊರೆಯಬೇಕಾದರೆ, ನಾವು ಲೋಕದ ಆತ್ಮವನ್ನು ಪ್ರತಿರೋಧಿಸುವುದಕ್ಕಿಂತಲೂ ಹೆಚ್ಚನ್ನು ಮಾಡಬೇಕಾಗಿದೆ. ನಮ್ಮ ಆತ್ಮ ಅಂದರೆ ಮನೋಭಾವ ಆತನ ಆಲೋಚನೆಯೊಂದಿಗೆ ಹೊಂದಿಕೊಳ್ಳುವಂತೆ ಮಾಡಲು ನಾವು ದೇವರ ವಾಕ್ಯವನ್ನು ಕ್ರಮವಾಗಿ ಅಧ್ಯಯನ ಮಾಡಿ, ನಮ್ಮ ಜೀವಿತದಲ್ಲಿ ಅದನ್ನು ಅನ್ವಯಿಸಿಕೊಳ್ಳಬೇಕು. ನಾವು ಹಾಗೆ ಮಾಡುವಲ್ಲಿ, ಸೈತಾನನು ನಮ್ಮನ್ನು ಆಧ್ಯಾತ್ಮಿಕವಾಗಿ ನಾಶಗೊಳಿಸಲು ಉಪಯೋಗಿಸುವ ಯಾವುದೇ ತಂತ್ರವನ್ನು ಎದುರಿಸುವಂತೆ ಯೆಹೋವನು ನಮ್ಮನ್ನು ಬಲಪಡಿಸುವನು.
17. ಲೋಟನ ಅನುಭವ ನಮಗೆ ಯಾವ ವಿಧಗಳಲ್ಲಿ ಸಾಂತ್ವನ ನೀಡಬಲ್ಲದು?
17 ಕ್ರೈಸ್ತರು ಲೋಕದ ಭಾಗವಾಗಿಲ್ಲದಿದ್ದರೂ ಅವರು ಲೋಕದಲ್ಲಿ ಇದ್ದಾರೆ. (ಯೋಹಾನ 17:11, 16) ದೇವರಿಗಾಗಿಯೂ ಆತನ ಮಾರ್ಗಗಳಿಗಾಗಿಯೂ ಪ್ರೀತಿಯೇ ಇಲ್ಲದಿರುವ ಜನರೊಂದಿಗೆ ನಾವು ಕೆಲಸಮಾಡುವ ಕಾರಣ ಅಥವಾ ಜೀವಿಸುವ ಕಾರಣ ಲೋಕದ ಆತ್ಮದಿಂದ ನಾವು ಸಂಪೂರ್ಣವಾಗಿ ದೂರವಿರಲಾರೆವು. ಆದರೆ ನಮ್ಮ ಅನಿಸಿಕೆಗಳು, ತಾನು ಯಾರ ಮಧ್ಯೆ ಜೀವಿಸುತ್ತಿದ್ದನೊ ಆ ಸೋದೋಮಿನ ಜನರ ಅನ್ಯಾಯಕೃತ್ಯಗಳಿಂದ “ವೇದನೆ”ಗೊಂಡು ಕರಕರೆಗೊಂಡಿದ್ದ ಲೋಟನಂತೆ ಇದೆಯೋ? (2 ಪೇತ್ರ 2:7, 8) ಹಾಗಿರುವಲ್ಲಿ, ನಾವು ಸಾಂತ್ವನವನ್ನು ಪಡೆದುಕೊಳ್ಳಬಲ್ಲೆವು. ಯೆಹೋವನು ಲೋಟನನ್ನು ಕಾಪಾಡಿ, ಅಲ್ಲಿಂದ ಅವನನ್ನು ವಿಮೋಚಿಸಿದನು, ಮತ್ತು ನಮಗೂ ಹಾಗೆ ಮಾಡಬಲ್ಲನು. ನಮ್ಮ ಪ್ರಿಯ ಪಿತನು ನಮ್ಮ ಸ್ಥಿತಿಗತಿಗಳನ್ನು ನೋಡುವವನೂ ಬಲ್ಲವನೂ ಆಗಿದ್ದು, ನಮ್ಮ ಆಧ್ಯಾತ್ಮಿಕತೆಯನ್ನು ಕಾಪಾಡಿಕೊಳ್ಳಲು ನಮಗೆ ಬೇಕಾಗುವ ಸಹಾಯವನ್ನೂ ಬಲವನ್ನೂ ಕೊಡಶಕ್ತನಾಗಿದ್ದಾನೆ. (ಕೀರ್ತನೆ 33:18, 19) ನಾವು ಆತನ ಮೇಲೆ ಆತುಕೊಂಡು, ಭರವಸೆಯಿಟ್ಟು, ಆತನಿಗೆ ಮೊರೆಯಿಡುವಲ್ಲಿ, ನಮ್ಮ ಸನ್ನಿವೇಶಗಳು ಎಷ್ಟೇ ಕಠಿನವಾಗಿರಲಿ ನಾವು ಲೋಕದ ಆತ್ಮವನ್ನು ಪ್ರತಿರೋಧಿಸುವಂತೆ ಆತನು ನಮಗೆ ಸಹಾಯಮಾಡುವನು.—ಯೆಶಾಯ 41:10.
18. ಯೆಹೋವನೊಂದಿಗೆ ನಮಗಿರುವ ಸಂಬಂಧವನ್ನು ನಾವೇಕೆ ಅತ್ಯಮೂಲ್ಯವೆಂದೆಣಿಸಬೇಕು?
18 ದೇವರಿಗೆ ವಿಮುಖವಾಗಿದ್ದು ಸೈತಾನನಿಂದ ವಂಚಿಸಲ್ಪಟ್ಟಿರುವ ಒಂದು ಲೋಕದಲ್ಲಿ ಯೆಹೋವನ ಜನರೋಪಾದಿ ನಾವಾದರೊ ಸತ್ಯಜ್ಞಾನದಿಂದ ಹರಸಲ್ಪಟ್ಟವರಾಗಿದ್ದೇವೆ. ಆದಕಾರಣ, ಲೋಕದಲ್ಲಿರದಂತಹ ಸಂತೋಷ ಮತ್ತು ಶಾಂತಿಯನ್ನು ನಾವು ಪಡೆದವರಾಗಿದ್ದೇವೆ. (ಯೆಶಾಯ 57:20, 21; ಗಲಾತ್ಯ 5:22) ಎಲ್ಲಿ ಕೊನೆಯುಸಿರೆಳೆಯುತ್ತಿರುವ ಈ ಲೋಕದ ಆತ್ಮವು ಇಲ್ಲದಿರುವುದೊ ಆ ಪರದೈಸಿನಲ್ಲಿನ ನಿತ್ಯಜೀವದ ಆಶ್ಚರ್ಯಕರವಾದ ನಿರೀಕ್ಷೆಯು ನಮಗೆ ಅತಿಪ್ರಿಯವಾದದ್ದಾಗಿದೆ. ಹೀಗಿರುವುದರಿಂದ, ದೇವರೊಂದಿಗೆ ನಮಗಿರುವ ಅಮೂಲ್ಯ ಸಂಬಂಧವನ್ನು ನಾವು ನಿಧಿಯಂತೆ ಕಾದಿರಿಸಿ, ಆಧ್ಯಾತ್ಮಿಕವಾಗಿ ದೂರ ತೇಲಿಕೊಂಡು ಹೋಗುವ ಯಾವುದೇ ಪ್ರವೃತ್ತಿಯನ್ನು ಸರಿಪಡಿಸುವ ವಿಷಯದಲ್ಲಿ ಎಚ್ಚರಿಕೆಯಿಂದಿರೋಣ. ನಾವು ಸದಾ ಯೆಹೋವನಿಗೆ ಇನ್ನೂ ಸಮೀಪಕ್ಕೆ ಬರೋಣ, ಮತ್ತು ಆಗ ಆತನು ನಾವು ಲೋಕದ ಆತ್ಮವನ್ನು ಪ್ರತಿರೋಧಿಸುವಂತೆ ನಮಗೆ ಸಹಾಯಮಾಡುವನು.—ಯಾಕೋಬ 4:7, 8.
ವಿವರಿಸಬಲ್ಲಿರೊ?
• ಸೈತಾನನು ಜನರನ್ನು ಯಾವ ವಿಧಗಳಲ್ಲಿ ವಂಚಿಸಿ, ದಾರಿತಪ್ಪಿಸಿದ್ದಾನೆ?
• ಯೆಹೋವನಿಂದ ದೂರ ತೇಲಿಹೋಗುವುದನ್ನು ನಾವು ಹೇಗೆ ತಪ್ಪಿಸಬಲ್ಲೆವು?
• ಲೋಕದ ಆತ್ಮವು ಬಲಶಾಲಿಯಾಗಿದೆಯೆಂಬುದನ್ನು ಯಾವುದು ತೋರಿಸುತ್ತದೆ?
• ದೇವರಿಂದ ಬರುವ ಆತ್ಮವನ್ನು ನಾವು ಹೇಗೆ ಪಡೆದು ಇಟ್ಟುಕೊಳ್ಳಬಲ್ಲೆವು?
[ಪುಟ 11ರಲ್ಲಿರುವ ಚಾರ್ಟು]
ಲೌಕಿಕ ವಿವೇಕಕ್ಕೆ ವಿರುದ್ಧವಾಗಿ ದೈವಿಕ ವಿವೇಕ
ಸತ್ಯವು ಸಾಪೇಕ್ಷವೇ ಹೊರತು ಸಂಪೂರ್ಣವಲ್ಲ—ಜನರು ತಮ್ಮದೇ ಆದ ಸತ್ಯವನ್ನು ರಚಿಸುತ್ತಾರೆ.
“[ದೇವರ] ವಾಕ್ಯವೇ ಸತ್ಯವು.”—ಯೋಹಾನ 17:17.
ಸರಿ ಯಾವುದು, ತಪ್ಪು ಯಾವುದು ಎಂದು ನಿರ್ಣಯಿಸಲು ನಿಮ್ಮ ಅನಿಸಿಕೆಗಳನ್ನು ನಂಬಿರಿ.
“ಹೃದಯವು ಎಲ್ಲಕ್ಕಿಂತಲೂ ವಂಚಕ.”—ಯೆರೆಮೀಯ 17:9.
ನಿಮ್ಮ ಇಷ್ಟದಂತೆ ಮಾಡಿರಿ.
“ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”—ಯೆರೆಮೀಯ 10:23.
ಐಶ್ವರ್ಯವೇ ಸಂತೋಷದ ಕೀಲಿ ಕೈ.
“ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ.”—1 ತಿಮೊಥೆಯ 6:10.
[ಪುಟ 10ರಲ್ಲಿರುವ ಚಿತ್ರ]
ಸೊಲೊಮೋನನು ಸತ್ಯಾರಾಧನೆಯಿಂದ ತೇಲುತ್ತ ದೂರ ಸರಿದು ಸುಳ್ಳು ದೇವತೆಗಳ ಕಡೆಗೆ ತಿರುಗಿದನು
[ಪುಟ 12ರಲ್ಲಿರುವ ಚಿತ್ರ]
ಒಬ್ಬ ಜಾಹೀರಾತುಗಾರನಂತೆ ಸೈತಾನನು ಲೋಕದ ಆತ್ಮವನ್ನು ಪ್ರವರ್ಧಿಸುತ್ತಾನೆ. ನೀವು ಅದನ್ನು ಪ್ರತಿರೋಧಿಸುತ್ತೀರೊ?